ಬಸವಣ್ಣನ ಹೂಕೋಸಿನ ದುರಂತದ ಕತೆ: ವಿಜಪುರ ಜಿಲ್ಲೆ 

ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ.

 

ಫೆಬ್ರುವರಿ ಮೊದಲ ವಾರದಲ್ಲಿ ಬಸವಣ್ಣ ಮತ್ತು ಅವರ ಮಗ ರವಿ, ತಮ್ಮ ಎರಡೂವರೆ ಎಕರೆಯ ಹೂಕೋಸು ಬೆಳೆ ನೋಡಿ ನೆಮ್ಮೆದಿಯ ನಿಟ್ಟುಸಿರು ಬಿಟ್ಟಿದ್ದರು.ಕಳೆದ ವರ್ಷದ ಮಳೆಯಿಂದಾಗಿ ಕೊಳವೆ ಬಾವಿಯಲ್ಲಿ ನೀರು ಜಾಸ್ತಿ ಆಗಿತ್ತು. ಆ ಕಾರಣಕ್ಕಾಗಿಯೇ ಹೂಕೋಸು ಮತ್ತು ಇತರ ತರಕಾರಿ ಹಾಕಿ ಬಂಪರ್ ಬೆಳೆ,  ಉತ್ತಮ ಬೆಲೆ ಎರಡೂ ನಿರೀಕ್ಸಿಸಿದ್ದರು. ತಮ್ಮದೇ ಕೂಲಿ ಮತ್ತು ಅಂದಾಜು 25 ಸಾವಿರದ ಬಂಡವಾಳಹಾಕಿದ  ಈ ಬೆಳೆ ವರ್ಷದ ಅವಶ್ಯಕತೆಗೆ ಬೇಕಷ್ಟು ಆದಾಯ ತಂದೀತು ಎಂಬ ಆಸೆಯಲ್ಲಿದ್ದರು.

ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಈ ಲಾಕ್ ಡೌನ್ ಘೋಷಣೆಯಾಯಿತು. ಬೆಳಿಗ್ಗೆ ವಿಜಯಪುರದಲ್ಲಿ ಮಾರಲು ಅವರಿಗೆ ಪರವಾನಗಿ ನೀಡಲಾಗಿತ್ತು.ಆದರೆ ಕೃಷಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ತೀರಾ ಅಗ್ಗ ಬೆಲೆಗೆ ಚೌಕಾಸಿ ಮಾಡಿದರು.ಹೊರಗೆ ಚಿಲ್ಲರೆಮಾರುಕಟ್ಟೆಯಲ್ಲಿ  ಮಾರಾಟವಾಗುವ ಬೆಲೆಯ 1/5 ಬೆಲೆಗೆ ಕೊಳ್ಳಲು ನೋಡಿದ್ದರು. ಆತಂಕ ತುಂಬಿದ ರೈತರು ಕೃಷಿ ಮಾರುಕಟ್ಟೆ ತುಂಬ ಸೇರಿದ್ದರು. ಯಾರೊಬ್ಬರೂ ಸಾಮಾಜಿಕ ದೂರ ಅನುಸರಿಸಿರಲಿಲ್ಲ!! ವ್ಯಾಪಾರಿಗಳೂ ಬೆರಳೆಣಿಕೆಯಲ್ಲಿದ್ದರು.

ಈ ಒಂದು ದಿನದ ಕರಾಳ ಅನುಭವದ ಬಳಿಕ ತರಕಾರಿ ಮಾರುವುದೇ ಬೇಡ ಎಂಬ ನಿರ್ಧಾರಕ್ಕೆ ಈ ಅಪ್ಪ-ಮಗ ಬಂದರು.ಸುಮ್ಮನೆ ಹೋಗಿ ಕೊರೋನಾ ಅಂಟಿಸಿಕೊಂಡು ಮನೆ ಮಂದಿಗೆಲ್ಲಾ ಹಬ್ಬಿಸೋದು ಯಾಕೆ?” ಎಂಬುದು ರವಿಯ ಅಭಿಪ್ರಾಯ. ರವಿ ನಿಸ್ಪೃಹ ಯುವಕ; ಗ್ರಾಮದ ಉಳಿದವರಂತಲ್ಲದೇ, ತಾನು ಕೃಷಿಕ ಎಂದು ಗುರುತಿಸಿಕೊಳ್ಳಲು ರವಿಗೆ ಇಷ್ಟ. ಕಳೆದ ಕೆಲವು ವರ್ಷಗಳು ಮುಂಗಾರಿನ ಏರಿಳಿತಗಳನ್ನು ತೋರಿದ್ದವು. ಒಂದೋ ಅತಿವೃಷ್ಟಿ,ಇಲ್ಲಾ ಅನಾವೃಷ್ಟಿ; ಎರಡೂ ರೈತರಿಗೆ ಶಾಪವಾಗಿ ಪರಿಣಮಿಸಿದ್ದವು. ಈ ಕಾರಣಕ್ಕೇ  ವಲಸೆ  ಹೊಗುವವರ ಸಂಖ್ಯೆ  ಹೆಚ್ಚುತ್ತಿದೆ. ನಗರಗಳಲ್ಲಿ ಕಟ್ಟಡ  ಕಾರ್ಮಿಕರಾಗಿ, ಮನೆ ಕೆಲಸದವರಾಗಿ, ಇನ್ನಿತರ  ಅಲ್ಪ  ವೇತನದ ಕೆಲಸಮಾಡಿಕೊಂಡು , ಇವರು ಕಳಿಸುವ ಹಣದಿಂದಲೇ ಹತ್ತಾರು ಮನೆಗಳು ಸಂಭಾಳಿಸಿದ್ದಿದೆ.

ಈ ಕೊರೋನಾ ವೈರಸ್ ರವಿ ಮತ್ತು ಬಸವಣ್ಣನ ಕನಸುಗಳಿನ್ನು ಛಿದ್ರ ಮಾಡಿದೆ. ನಿರಾಶೆ ಮತ್ತು ದಿಕ್ಕೆಟ್ಟ ಸ್ಥಿತಿಯಲ್ಲಿ ಅಪ್ಪ-ಮಗ ಇಬ್ಬರೂ ಮನೆಗಿಷ್ಟು, ನೆರೆಕರೆಯವರಿಗಿಷ್ಟು ಇಟ್ಟುಕೊಂಡು ಈ ಬೆಳೆಯನ್ನು ದನಗಳಿಗೆ ಮೇಯಲು ಬಿಡುವ ನಿರ್ಧಾರ ಮಾಡಿದ್ದಾರೆ. ಈಗ ಅವರಿಗಿರೋದು ಒಂದೇ ಹಸು;ಮುಖ್ಯತಃ ಹಾಲಿಗಾಗಿ. ಎತ್ತುಗಳನ್ನುಮಾರಿದ್ದಾರೆ.ಅವರ ದೊಡ್ಡ ಹಸುವಿನ ಕೊಟ್ಟಿಗೆ ಈಗ ಖಾಲಿಯಾಗಿದೆ. ಎತ್ತುಗಳು  ಮಾಡುತ್ತಿದ್ದ ಕೆಲಸ ಈಗ ಟ್ರಾಕ್ಟರುಗಳು ಮಾಡುತ್ತಿವೆ. ಹಸುವಿನ ಸೆಗಣಿ ಇಲ್ಲ ಅಂದರೆ,ಇನ್ನಷ್ಟು ರಾಸಾಯನಿಕ ಗೊಬ್ಬರ ಎಂದರ್ಥ. ಆದ್ದರಿಂದಲೇ ಜಮೀನಿಗೆ ಇನ್ನಷ್ಟು ಪೀಡೆ ನಾಶಕ ಸುರಿಯಬೇಕು.

ರಾಸಾಯನಿಕ ಗೊಬ್ಬರ, ಕೀಟನಾಶಕ, ಹೈಬ್ರಿಡ್ ಬೀಜ ಮತ್ತು ಬಾಹ್ಯ ಮಾರುಕಟ್ಟೆಗಳ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಿರುವ ಈ ಕುಟುಂಬ ಸತತ ನಷ್ಟವನ್ನಷ್ಟೇ ಕಾಣುತ್ತಾ ಬಂದಿದೆ.ಎಳ್ಳಷ್ಟೂ ಲಾಭ ಕಂಡಿಲ್ಲ. ಈ ನಷ್ಟದ ಗಾಣದಿಂದ ಬಿಡುಗಡೆ ಪಡೆಯುವ ಒಂದು ಅವಕಾಶಕ್ಕೆ ಈಗ ಕಣ್ಣಿಗೆ ಕಾಣದ ವೈರಸ್   ಮತ್ತು ರೈತರನ್ನು ಪರಿಗಣಿಸದೇ ಅಪ್ರಬುದ್ಧವಾಗಿ ಹಾಕಿದ   ಲಾಕ್ ಡೌನ್ ಅಡ್ಡ ಗಾಲು ಹಾಕಿದೆ. ಉಳಿದ ಕೃಷಿಕರಂತೆ ಇವರೂ ಈ ದಮನಕಾರೀ ಪ್ರಭುತ್ವಕ್ಕೆ ಶರಣಾಗಿದ್ದಾರೆ. ದೇಶಕ್ಕೆ ಅನ್ನ ನೀಡಿದ ಈ ಅಪ್ಪ-ಮಕ್ಕಳಿಗೆ ಸರ್ಕಾರ ಏನು ಮಾಡುತ್ತೆ?ನೋಡಬೇಕು.

  • ಎ.ಆರ್.ವಾಸವಿ

ಪ್ರತಿಕ್ರಿಯಿಸಿ