ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ

ಮೈಸೂರು ಸಂಸ್ಥಾನದಲ್ಲಿ ಸಂಗೀತಕ್ಕಿದ್ದ ಪೋಷಣೆ ಎಂಥಾದ್ದು, ಶ್ರೋತೃಗಳ ಪ್ರಮಾಣ ಹೇಗಿತ್ತು ಎಂಬುದನ್ನು ತಿಳಿಸುತ್ತಲೇ ತಮ್ಮ ಲೇಖನ ಸರಣಿಯ ಎರಡನೇ ಭಾಗದಲ್ಲಿ ಡಾ.ಶಶಿಕಾಂತ್‌ ಅವರು ಇಲ್ಲಿನ ಸಂಗೀತದ ಬೆಳವಣಿಗೆಯ ಕುರಿತ ಹಲವು ಸ್ವಾರಸ್ಯಕರ ಆಯಾಮಗಳನ್ನು ಈ ಭಾಗದಲ್ಲಿ ತೆರೆದಿಡುತ್ತಾರೆ.

ಭಾಗ ೧ : https://ruthumana.com/2020/05/02/carnatic-music-kannada-and-kannadigas-part-1

ಈ ಹಿಂದಿನ ಸಂಚಿಕೆಯಲ್ಲಿ ಮೈಸೂರಿನ ಸಂಗೀತಗಾರರು ಸರಕಾರದ ಇತರ ನೌಕರರಿಗಿಂತ ಭಿನ್ನರೆಂಬ ಬಿಂಬಿಸುವಿಕೆ ಹೇಗೆ ಮತ್ತು ಏಕೆ ನಡೆಯಿತೆಂದು ನೋಡಿದೆವು. ಹಾಗೇ ಸ್ವಲ್ಪ ಮುಂದುವರೆಯೋಣ.

ಡಿವಿಜಿಯವರಲ್ಲಿ ಹರಿಚಂದ್ರ ವಿಶನ್‌ ರಾಯ್‌ ಅವರು ಮಾಡಿದ ಮನವಿ

ಸಂಗೀತಗಾರರು ರಾಜ್ಯದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದರೆಂಬುದು ಖ್ಯಾತ ಕನ್ನಡ ಸಾಹಿತಿಗಳಾದ ಡಿ.ವಿ.ಗುಂಡಪ್ಪನವರ ನೆನಪಿನ ಮಾತುಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಒಮ್ಮೆ ಡಿ.ವಿ.ಜಿ. ದೆಹಲಿಗೆ ಹೋಗಿದ್ದಾಗ ಹರಿಚಂದ್ರ ವಿಶನ್‍ರಾಯ್ ಎಂಬ ಶ್ರೀಮಂತ ಕೈಗಾರಿಕೋದ್ಯಮಿಯನ್ನು ಭೇಟಿಯಾದರು. ರಾಯ್ ಅವರು ಶೇಷಣ್ಣರ ವೀಣಾವಾದನವನ್ನು ಈ ಮೊದಲು ಕೇಳಿ ಆನಂದಿಸಿದ್ದರು. ಈಗ ಅವರು ತಮ್ಮ ಇಳಿ ವಯಸ್ಸಿನಲ್ಲಿ ವೀಣೆ ಶೇಷಣ್ಣನವರ ಸಂಗೀತ ಕಛೇರಿಯನ್ನು ಮತ್ತೊಮ್ಮೆ ಕೇಳಬೇಕೆಂದು ಹಂಬಲಿಸಿದ್ದರು. ಡಿ.ವಿ.ಜಿ. ಮೈಸೂರಿನಿಂದ ಬಂದವರು ಎಂದು ಗೊತ್ತಾದ ಕೂಡಲೇ ರಾಯ್ ಅವರು ತಮ್ಮ ಈ ಇಳಿವಯಸ್ಸಿನಲ್ಲಿ ಮೈಸೂರಿಗೆ ಪ್ರಯಾಣಿಸುವುದು ಅಸಾಧ್ಯವೆಂದೂ, ಶೇಷಣ್ಣನವರ ಸಂಗೀತ ಕಛೇರಿಯನ್ನು ಬೊಂಬಾಯಿಯಲ್ಲಿ ಏರ್ಪಾಡು ಮಾಡಿಕೊಡುವಂತೆಯೂ ವಿನಂತಿಸಿಕೊಂಡರು. ಇದಕ್ಕೆ ತಗುಲುವ ಖರ್ಚು-ವೆಚ್ಚವನ್ನು ತಾನು ಪೂರ್ಣವಾಗಿ ಭರಿಸುವುದಾಗಿಯೂ ಹೇಳಿದರು.

ಡಿವಿಜಿ, ಡಾ.ಡಿ.ವಿ.ಗುಂಡಪ್ಪ

ಡಿ.ವಿ.ಜಿ.ಯವರ ಪ್ರಕಾರ ಭಾರತವನ್ನು ಹೊರಗೆ ‘ಗಾಂಧಿಯ ಭೂಮಿ’ ಎಂದು ಹೇಗೆ ಗುರುತಿಸುತ್ತಿದ್ದರೋ ಹಾಗೆಯೇ ಮೈಸೂರನ್ನು ಹೊರಗಿನವರು (ಉತ್ತರ ಭಾರತದಲ್ಲಿ) ‘ಶೇಷಣ್ಣನ ಭೂಮಿ’ ಎಂದೇ ಗುರುತಿಸುತ್ತಿದ್ದರಂತೆ. ಮೈಸೂರು ರಾಜ್ಯಕ್ಕೆ ಮತ್ತು ರಾಜಮನೆತನಕ್ಕೆ ಶೇಷಣ್ಣನಂಥ ಸಂಗೀತಗಾರರು ತಂದುಕೊಡುತ್ತಿದ್ದ ಸಮ್ಮತಿ (legitimacy) ಯನ್ನು ಇಲ್ಲಿ ಗಮನಿಸಬೇಕು ಮತ್ತು ಅದರಿಂದಾಗಿ ಈ ಸಂಗೀತಗಾರರ ಪ್ರಭಾವದ ಮಟ್ಟವನ್ನೂ ಗಮನಿಸಬಹುದು.

ಮೈಸೂರಿನಲ್ಲಿ ಸಂಗೀತ
ವೀಣೆ ಶೇಷಣ್ಣ
ಆಸ್ಥಾನ ಕಲಾವಿದರಿಗಿದ್ದ ಸ್ವಾತಂತ್ರ್ಯ ಮತ್ತು ಅದರಿಂದ ಸಂಸ್ಥಾನಕ್ಕೂ ದೊರೆಯುತ್ತಿದ್ದ ಮನ್ನಣೆ

ಮೈಸೂರಿನ ವಿದ್ವಾಂಸರು ಮೈಸೂರಿನ ಆಸ್ಥಾನಿಕರಾಗಿ ಮುಂದುವರೆಯುತ್ತಲೂ, ಬೇರೆ ಕಡೆ/ಊರುಗಳಲ್ಲಿ ಕೆಲಸವನ್ನು ಮಾಡಬಹುದಾಗಿತ್ತು. ಅಂತಹ ಸೌಲಭ್ಯ ಮತ್ತು ಸ್ವಾತಂತ್ರ್ಯವನ್ನು ಮೈಸೂರು ಆಡಳಿತ ಸಂಗೀತಗಾರರಿಗೆ ನೀಡಿತ್ತು. ಇಂತಹ ಸಂದರ್ಭಗಳಲ್ಲಿ ಅರಮನೆಯ ನೇಮಕಾತಿ ಎಂಬುದು ಹೆಸರು ಮಾತ್ರಕ್ಕೆ (formality) ಆಗಿತ್ತು. ಮಹಾರಾಜರು ಅಥವಾ ಅರಮನೆಯು ತಾಂತ್ರಿಕ ಅರ್ಥದಲ್ಲಿ ಒಬ್ಬ ಸಂಗೀತಗಾರನ ಶ್ರಮದ ಮಾಲಿಕತ್ವ ಹೊಂದಿದ್ದರೂ ಅದರಿಂದ ಅವರಿಬ್ಬರಿಗೂ ಆಗುವ ನೇರ ಪ್ರಯೋಜನಕ್ಕಿಂತ ಅಪ್ರತ್ಯಕ್ಷ ಪ್ರಯೋಜನ ದೊಡ್ಡದಾಗಿತ್ತು. ಕಲಾವಿದನ ಸೇವೆಯನ್ನು ಬೇರೆಯವರಿಗಾಗಿ ಬಿಟ್ಟುಕೊಟ್ಟಿದ್ದಕ್ಕೆ ಮಹಾರಾಜರಿಗೆ ಗೌರವ ಹಾಗೂ ಪ್ರಶಂಸೆ ದೊರೆಯುತ್ತಿತ್ತು. ಈ ತರಹದ ಪ್ರಶಂಸೆಯನ್ನು ರಾಜರು ಬಯಸುತ್ತಿದ್ದದ್ದು ನಿಜ. ಹೀಗೆ ಆಸ್ಥಾನ ವಿದ್ವಾನ್ ಆಗಿದ್ದ ಪ್ರಭಾವಶಾಲಿಯಾದ ಮುತ್ತಯ್ಯ ಭಾಗವತರು 1932ರಲ್ಲಿ ಮದರಾಸ್ ಮ್ಯೂಸಿಕ್ ಅಕಾಡೆಮಿ ನಡೆಸುತ್ತಿದ್ದ ‘ಟೀಚರ್ಸ್ ಕಾಲೇಜ್ ಆಫ್ ಮ್ಯೂಸಿಕ್’ಗೆ ಮುಖ್ಯಸ್ಥರಾಗಿ ನೇಮಕಗೊಂಡಾಗ ಅಕಾಡೆಮಿಯ ಪತ್ರಿಕೆಯಲ್ಲಿ ಮಹಾರಾಜರನ್ನು ಮೆಚ್ಚಿ “ಅಕಾಡೆಮಿಯು ಮೈಸೂರ ಮಹಾರಾಜರಿಗೆ ಅಭಾರಿಯಾಗಿದ್ದು ಮುತ್ತಯ್ಯ ಭಾಗವತರನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ಕಳುಹಿಸಿಕೊಟ್ಟು, ಅಕಾಡೆಮಿಯ ಪ್ರಾಂಶುಪಾಲರಾಗಿ ಕೆಲಸ ಮಾಡಲು ಅನುವು ಮಾಡಿ ಕೊಟ್ಟಿದ್ದಕ್ಕೆ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ” ಎಂದು ಪ್ರಕಟಣೆ ಕೂಡ ಮಾಡಿತ್ತು. ಸಂಗೀತ ವಿದ್ಯಾಲಯದ ಮುಖ್ಯಸ್ಥರಾಗಿ ಮದರಾಸಿನಲ್ಲಿ ಕೆಲಸ ಮಾಡುತ್ತಿದ್ದರೂ ಭಾಗವತರು ತಮ್ಮ ಕನ್ನಡ ರಚನೆಗಳನ್ನು ಪ್ರಕಟಣೆ ಮಾಡಲು ಸಹಾಯ ಮಾಡುವಂತೆ ಅರಮನೆ ಅಧಿಕಾರಿಗಳನ್ನು ಕೇಳಿಕೊಂಡ ಉದಾಹರಣೆಗಳು ಅನೇಕ.

1902 ರಲ್ಲಿ ಮೈಸೂರು ಅರಮನೆಯಲ್ಲಿ ಶೇಷಣ್ಣನಿಗೆ `ವೈಣಿಕ ಶಿಖಾಮಣಿ ‘ ಎಂಬ ಬಿರುದನ್ನು ನೀಡಿದಾಗ ತೆಗೆದ ಫೋಟೋದಲ್ಲಿ ವೀಣೆ ಸುಬ್ಬಣ್ಣ (ಎಡ) ಮತ್ತು ವೀಣೆ ಶೇಷಣ್ಣ (ಬಲ).

ಮತ್ತೊಂದು ಸಂದರ್ಭದಲ್ಲಿ ವೀಣೆ ಸುಬ್ಬಣ್ಣನವರು ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ ಈ ರೀತಿ ಹೇಳಿದ್ದಾರೆ: “ನಮ್ಮ ಮಹಾರಾಜರು ಸಂಗೀತವನ್ನು ಪ್ರಕಾಶಗೊಳಿಸಿ ಅದನ್ನು ಮುಂಚೂಣಿಯಲ್ಲಿ ನಿಲ್ಲಿಸಿದ್ದಾರೆ. ಬೇರೆ ಯಾವ ರಾಜರೂ ನಮ್ಮ ಮಹಾರಾಜರಷ್ಟು ಪ್ರವೀಣರಲ್ಲ. ಬೇರೆ ಯಾರೂ ನಮ್ಮ ಮಹಾರಾಜರು ಸಂಗೀತಕ್ಕೆ ನೀಡುವಷ್ಟು ಪ್ರೋತ್ಸಾಹ ನೀಡಿಲ್ಲ. ಅವರಿಗೆ ಸಂಗೀತದ ಬಗ್ಗೆ ಎಲ್ಲವೂ ಗೊತ್ತು. ಸರಸ್ವತಿ ದೇವಿ ತನ್ನ ಕೃಪಾಕಟಾಕ್ಷವನ್ನು ಪೂರ್ಣವಾಗಿ ಅವರಿಗೆ ನೀಡಿದ್ದಾಳೆ.” ಮೈಸೂರಿನಲ್ಲಿ ಸಂಗೀತ ವು ಸಾಂಸ್ಕೃತಿಕ ವಲಯದಲ್ಲಿ ಹೆಮ್ಮೆಪಡುವಂತಹ ಅಂಶವಾಗಿರುವುದನ್ನು ಮಹಾರಾಜರೇ ಒಮ್ಮೆ ಪೂನಾ ಗಾಯನ ಸಮಾಜದ ತಮ್ಮ ಭಾಷಣದಲ್ಲಿ (ಡಿಸೆಂಬರ್ 02, 1902ರಂದು) ಹೀಗೆ ಹೇಳಿದ್ದಾರೆ: “ನಿಮಗೆ ಗೊತ್ತಿರುವ ಹಾಗೆ ಸಂಗೀತದ ಅಧ್ಯಯನವು ಮೈಸೂರು ರಾಜ್ಯದಲ್ಲಿ ವಿಶೇಷವಾದ ಪ್ರೋತ್ಸಾಹವನ್ನು ಪಡೆದಿದ್ದು, ಅದರ ಬೆಳವಣಿಗೆಗೆ ನಮ್ಮ ತಂದೆ ಮತ್ತು ತಾಯಿಯವರು ಕೊಟ್ಟ ಆಶ್ರಯದಲ್ಲಿ ಮುಂದುವರೆದಿರುವುದು ಮೈಸೂರಿನವರಾದ ನಮಗೆ ಹೆಮ್ಮೆಯ ವಿಷಯವಾಗಿದೆ.” ಮತ್ತೊಂದು ಸಂದರ್ಭದಲ್ಲಿ ಪುದುಕೋಟೆಯಲ್ಲಿ ನೆಲೆಸಿದ್ದ ಎಂ.ಸಿ. ನಂಜುಂಡರಾವ್ ಎಂಬ ಕನ್ನಡಿಗ ಮೈಸೂರು ಮಹಾರಾಜರ ಕಾರ್ಯದರ್ಶಿಯವರಿಗೆ ಬಿಡಾರಂ ಕೃಷ್ಣಪ್ಪ ಮತ್ತು ಅವರ ತಮಿಳುನಾಡು ಪ್ರವಾಸದ ಬಗ್ಗೆ ಹೀಗೆ ಪತ್ರ ಬರೆದಿದ್ದಾರೆ: “ಕೃಷ್ಣಪ್ಪನವರು ಇಲ್ಲಿ ಕೆಲವು ದಿನಗಳ ಹಿಂದೆ ಬಂದಿದ್ದಾಗ ಮದರಾಸಿನ ಸಾರ್ವಜನಿಕರನ್ನು ತಮ್ಮ ಮಧುರ ಕಂಠದಿಂದ ಹಾಗೂ ಆತ್ಮೋನ್ನತಿಯನ್ನು ಹೆಚ್ಚಿಸುವ ಸಂಗೀತದಿಂದ ರೋಮಾಂಚನಗೊಳಿಸಿ ಕರ್ನಾಟಕ ಸಂಗೀತದ ಕ್ಷೇತ್ರದಲ್ಲಿ ಅಗ್ರಗಣ್ಯರು ಎಂಬುದನ್ನು ನಿರೂಪಿಸಿಬಿಟ್ಟರು. ಡಿಸೆಂಬರ್ 06, ಮತ್ತು 12ನೇ ತಾರೀಕಿನ ‘ಹಿಂದು’ ದಿನಪತ್ರಿಕೆಯಲ್ಲಿ ಅವರ ಬಗ್ಗೆ ಬರೆಯಲ್ಪಟ್ಟಿರುವ ಎರಡು ಪತ್ರಗಳನ್ನು ನೀವು ನೋಡಿರಬಹುದು. ಮೈಸೂರಿಗೆ ಹೆಮ್ಮೆ ತಂದಿರುವ ಕೃಷ್ಣಪ್ಪನವರ ಸಾಧನೆಯನ್ನು ಕಂಡು ನಾವೆಲ್ಲರೂ ಸಂತೋಷಗೊಂಡಂತೆ ಮಹಾರಾಜರಿಗೂ ಈ ವಿಷಯವನ್ನು ತಿಳಿಸಿದರೆ ಅವರಿಗೂ ಸಂತೋಷವಾಗುತ್ತದೆ.” ವೀಣೆ ಶೇಷಣ್ಣನವರ ನಂತರ ಕೃಷ್ಣಪ್ಪನವರು ಮೈಸೂರು ಸಂಗೀತದ ಪ್ರತೀಕವೆನಿಸಿಕೊಂಡರು.

ಮತ್ತೊಂದು ಘಟನೆ ಬಗ್ಗೆ ಹೇಳುವುದಾದರೆ ವೀಣೆ ಶಿವರಾಮಯ್ಯನವರು ಮದರಾಸ್ ಬಾನುಲಿಯಲ್ಲಿ ಒಂದು ಕಛೇರಿಯನ್ನು ನೀಡಿದರು. ತಾನೇ ಕಂಡುಹಿಡಿದ ಸ್ವಯಂಭೂಸ್ವರ ರಾಗವೆಂಬುದನ್ನು ಅಲ್ಲಿ ನುಡಿಸಿದರು. ‘ತಾಯಿನಾಡು’ ಕನ್ನಡ ದಿನಪತ್ರಿಕೆಯಲ್ಲಿ ಈ ಕಛೇರಿಯ ಬಗ್ಗೆ ಹೀಗೆ ವರದಿ ಬಂದಿತು: “ಇವತ್ತಿನ ಕಾರ್ಯಕ್ರಮವು ವೀಣೆ ಶೇಷಣ್ಣನವರ ಕಛೇರಿಯನ್ನು ನೆನಪಿಸಿತು. ಇವತ್ತಿನ ಕಲಾವಿದರು ಅವರ ಶಿಷ್ಯರೇ ಆಗಿದ್ದರು. ಇವರು ಸಂಶೋಧನೆ ನಡೆಸಿ ಒಳ್ಳೆಯ ಮಧುರವಾದ ಕೃತಿಗಳನ್ನು ರಚಿಸಿ ದಕ್ಷಿಣದ ಸಂಗೀತಕ್ಕೆ ಉಪಕಾರ ಮಾಡಿದ್ದಾರೆ. ಇದು ಮೈಸೂರಿನವರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ”. ಮೈಸೂರು ಸಂಸ್ಥಾನವು ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ಹುಮ್ಮಸ್ಸಿನಲ್ಲಿದ್ದರೂ ಮತ್ತೊಂದು ಹಂತದಲ್ಲಿ ಮೈಸೂರಿನ ಸೊಗಡನ್ನು ಹೊಂದಿದ ಸಂಗೀತ ಪರಂಪರೆಯನ್ನು ಸೃಷ್ಟಿಸುವ ಸಾಂಘಿಕ ಪ್ರಯತ್ನವನ್ನು ಅಲ್ಲಿನ ಕಲಾವಿದರು ಮತ್ತು ಪೋಷಕರು (ಮಹಾರಾಜರು ಮತ್ತು ಪ್ರೇಕ್ಷಕರಾಗಿದ್ದ ಗಣ್ಯವರ್ಗ) ಮಾಡಿ ಮೈಸೂರಿಗೆ ಒಂದು ವಿಶೇಷ ಸ್ಥಾನವನ್ನು ಸ್ಥಾಪಿಸುವಲ್ಲಿ ಪ್ರಯತ್ನ ಮಾಡಿದರು. ಸಾಂಸ್ಕೃತಿಕ ವಲಯದ ಮೇಲಿನ ಪ್ರಭುತ್ವದ ಹಿಡಿತ ಹೆಚ್ಚು ಕಡಿಮೆ ಸಂಪೂರ್ಣವಾಗಿತ್ತು. ಕನ್ನಡದಲ್ಲಿ ಕೃತಿಗಳನ್ನು ರಚಿಸುವಂತೆ ಮಹಾರಾಜರು ಒತ್ತಾಯಿಸಿದ್ದು ಮೈಸೂರಿನ ಸಂಗೀತಕ್ಕೆ ವಿಶಿಷ್ಟ ಸ್ಥಾನವನ್ನು ಉಂಟುಮಾಡುವ ಮತ್ತು ಸಾಂಸ್ಕೃತಿಕ ಉತ್ಪಾದನೆಯಲ್ಲಿ ಹತೋಟಿಯನ್ನು ಹೊಂದುವ ಪ್ರಯತ್ನವಾಗಿತ್ತು.

ಮೈಸೂರಿನ ಪೋಷಕ/ಸಾರ್ವಜನಿಕ:

ಚಿತ್ರಕಲಾವಿದ ವೆಂಕಟಪ್ಪ

ಪ್ರಭುತ್ವದ ಸಂಪೂರ್ಣ ಹಿಡಿತವಿದ್ದರೂ ನಿಯಮಿತ ಸಂಖ್ಯೆಯ ಕಲಾವಿದರಿಗೆ ನಿಯಮಿತ ಮಟ್ಟದ ಶೋತೃಗಳು – ಸ್ಥಳೀಯರು ಮತ್ತು ದೂರಪ್ರದೇಶದವರಿಬ್ಬರೂ ಇದ್ದರು. ಬೊಂಬಾಯಿ ಮತ್ತು ಮದರಾಸಿನಂತಹ ಊರುಗಳಲ್ಲಿ ವೀಣೆ ಶೇಷಣ್ಣರಂತಹ ಕಲಾವಿದರ ಸಂಗೀತವನ್ನು ಕೇಳುವ ಶೋತೃಗಳಿದ್ದರೆ, ಸ್ಥಳೀಯ ಶೋತೃಗಳ ಪೈಕಿ ಯುವಕರು, ಕಾಲೇಜು ವಿದ್ಯಾರ್ಥಿಗಳು, ಪರಿಚಿತರು, ಗೆಳೆಯರು, ಸಂಬಂಧಿಕರು, ಸಾಹಿತಿಗಳು, ಅಧಿಕಾರಿಗಳು, ವ್ಯಾಪಾರಿಗಳು, ಇತ್ಯಾದಿ ಜನರು ಸಂಗೀತ ಕೇಳಲು ಉತ್ಸಾಹ ತೋರುತ್ತಿದ್ದರು. ಇದಕ್ಕೆ ಭಿನ್ನವಾಗಿ ಚಿತ್ರಕಲೆಯ ಬಗ್ಗೆ ಹೇಳುವುದಾದರೆ ವೆಂಕಟಪ್ಪರಂತಹ ಚಿತ್ರಕಾರರು ಕಲ್ಕತ್ತ ನಗರಕ್ಕೆ ಹೋಗಿ ಅಬನೀಂದ್ರನಾಥರವರು ನಡೆಸುತ್ತಿದ್ದ ಚಿತ್ರಕಲಾ ಶಾಲೆಯಲ್ಲಿ ತರಬೇತಿ ಪಡೆದು ಬಂದಾಗ್ಯೂ ಅವರ ಚಿತ್ರಗಳನ್ನು ಪ್ರಶಂಸಿಸಲು ಸಾಕಷ್ಟು ಸ್ಥಳೀಯ ಪೋಷಕರ ಕೊರತೆಯಿತ್ತು. ಮೈಸೂರಿನಲ್ಲಿ ತಮ್ಮ ಕಲೆಯನ್ನು ಪ್ರಶಂಸಿಸುವ ಪೋಷಕರ ಕೊರತೆಯಿದ್ದಾಗ, ಅವರು ದೇಶದಾದ್ಯಂತ ಪೋಷಕರನ್ನು ಹುಡುಕಿಕೊಂಡು ಹೋಗಿರುವ ಉದಾಹರಣೆಗಳು ಇವೆ. ತಾವು ರಚಿಸಿದ ವರ್ಣಚಿತ್ರಗಳನ್ನು ಕೊಳ್ಳುವವರ ಬಳಿ ಅವರೇ ಕೊಂಡುಹೋಗುತ್ತಿದ್ದರು. ಎಸ್.ವಿ.ರಾಮಸ್ವಾಮಿ ಮೊದಲಿಯಾರ್‍ರಂತಹ ವ್ಯಾಪಾರಿಗಳು ಹಾಗೂ ಸಂಗ್ರಹಕಾರರು ಅವರ ಪೋಷಕರಾಗಿದ್ದು, ಹೆಚ್ಚಿನ ಚಿತ್ರಗಳನ್ನು ಅವರೇ ಕೊಂಡುಕೊಳ್ಳುತ್ತಿದ್ದರು.

ವೆಂಕಟಪ್ಪನವರ ವಿಮರ್ಶಕರು ಮತ್ತು ಪೋಷಕರು ವಿಶ್ವಾತ್ಮಕರಾಗಿದ್ದು (cosmopolitan) ಚಿತ್ರಕಲಾ ಬೋಧಕರು, ಛಾಯಾಚಿತ್ರಕಾರರು, ಪೋಸ್ಟರ್ ತಯಾರಿಸುವವರು, ದೊಡ್ಡ ಸೆಣಬು ವ್ಯಾಪಾರಿಗಳು, ಐ.ಸಿ.ಎಸ್. ಅಧಿಕಾರಿಗಳು ಮತ್ತು ಇಂಗ್ಲೆಂಡಿಗೆ ಹೋಗಿ ಬಂದ ಮೇಲ್ವರ್ಗದ ಜನಗಳಾಗಿದ್ದರು. ಆದರೆ ಸಂಗೀತದ ಶೋತೃಗಳು ಬೇರೆ ರೀತಿಯಲ್ಲಿ ರೂಪಿತವಾಗಿದ್ದರು. ಅವರು ಅರಮನೆಯ ಕಲಾವಿದರಾಗಿದ್ದರೆ ಮಹಾರಾಜರೇ ಪ್ರಥಮ ಪೋಷಕರೂ ಹಾಗು ಶೋತೃಗಳೂ ಆಗಿದ್ದರು. ಸ್ಥಳೀಯ ಮಟ್ಟದಲ್ಲಿ ಖಾಸಗಿ ಅಥವಾ ಅರೆ-ಖಾಸಗಿ ಕಾರ್ಯಕ್ರಮಗಳಿಗೆ ಪರಿಚಿತರು, ಗೆಳೆಯರು ಮತ್ತು ನೆಂಟರು ಮತ್ತಿತರರನ್ನು ಒಳಗೊಂಡು 30ರಿಂದ 40 ಮಂದಿ ಇರುತ್ತಿದ್ದರು. ಡಿ.ವಿ.ಜಿ.ಯವರ ಪ್ರಕಾರ ಪ್ರಸಿದ್ಧ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಕಂಠ 30-40ಕ್ಕಿಂತ ಹೆಚ್ಚಿನ ಜನರಿಗೆ ತಲುಪುತ್ತಿರಲಿಲ್ಲ. ಇದರಿಂದ ಅವರಿಗಿದ್ದ ಪ್ರೇಕ್ಷಕರ ಸಂಖ್ಯೆಯನ್ನು ನಾವು ಊಹಿಸಬಹುದು. ಕೆಲವು ಕಾರ್ಯಕ್ರಮಗಳು ಯಾಕೆ ಅರೆ-ಖಾಸಗಿಯಾಗಿದ್ದವೆಂದರೆ ಅಲ್ಲಿ ಆಹ್ವಾನಿತರಲ್ಲದ ಕೆಲವರಿಗೂ ಕಾರ್ಯಕ್ರಮ ವೀಕ್ಷಿಸಲು (ಅಥವಾ ಕೇಳಲು) ಅನುಮತಿ ಕೊಡಲಾಗುತ್ತಿತ್ತು. ಕನ್ನಡದ ಇನ್ನೊಬ್ಬ ಪ್ರಸಿದ್ಧ ಲೇಖಕ ಎ.ಎನ್.ಮೂರ್ತಿರಾಯರು ತಾವು ಗೆಳೆಯರೊಡನೆ ರಾಮನವಮಿಯಂದು ರಾಮೋತ್ಸವಕ್ಕೂ, ಕೃಷ್ಣಾಷ್ಟಮಿಯಂದು ಕೃಷ್ಣೋತ್ಸವಕ್ಕೂ ವೀಣೆ ಶೇಷಣ್ಣನವರ ಮನೆಗೆ ಹೋಗುತ್ತಿದ್ದೆನೆಂದು ಹೇಳಿದ್ದಾರೆ. ಕಾಲೇಜು ಹುಡುಗರು ದೊಡ್ಡ ಸಂಖ್ಯೆಯಲ್ಲಿ ಬಂದರೂ ಶೇಷಣ್ಣನವರು ಬೇಡವೆನ್ನುತ್ತಿರಲಿಲ್ಲವಂತೆ. ಮೂರ್ತಿರಾಯರ ಪ್ರಕಾರ ಒಮ್ಮೆ ಹೀಗೆ ಬಂದ ಪ್ರೇಕ್ಷಕರ ಸಂಖ್ಯೆ ವಿಪರೀತವಾಗಿ ಗಾಜಿನ ಕಿಟಕಿಯೊಂದು ಒಡೆದುಹೋಯಿತು. ಶೇಷಣ್ಣನವರಿಗೆ ಇದು ಗೊತ್ತಾದರೂ ಅವರು ಅದರ ಬಗ್ಗೆ ಅಲಕ್ಷ್ಯ ತೋರಿದರಂತೆ. ಈ ತರಹದ ಹಲ-ಕೆಲ ಉದಾಹರಣೆಗಳು ಹಿರಿಯ ಲೇಖಕರ ಬರಹಗಳಲ್ಲಿ ಸಿಗುತ್ತವೆ. ಇದಲ್ಲದೆ ಅನೇಕ ಕಾರ್ಯಕ್ರಮಗಳು ರಾಮೋತ್ಸವ, ಕೃಷ್ಣೋತ್ಸವ, ಗಣೇಶೋತ್ಸವ ಮುಂತಾದ ಸಂದರ್ಭಗಳಲ್ಲಿ ದೇವಸ್ಥಾನಗಳಲ್ಲಿ ನಡೆಯುತ್ತಿದ್ದವು. ಇನ್ನು ಕೆಲವು ಸಂಗೀತ ಪೋಷಕರು ಮತ್ತು ಆಸಕ್ತರು ಸಂಗೀತ ಕಾರ್ಯಕ್ರಮಗಳನ್ನು ನಡೆಸುವುದಕ್ಕೋಸ್ಕರ ವಿಶೇಷ ಸಂದರ್ಭಗಳನ್ನು ಹುಡುಕುತ್ತಿದ್ದುದುಂಟು. ಉದಾಹರಣೆಗೆ ಬೆಂಗಳೂರಿನ ವೆಂಕೋಬರಾವ್ ಎಂಬುವವರನ್ನು ವಾಮನ ಜಯಂತಿ ವೆಂಕೋಬರಾವ್ ಎಂದೇ ಕರೆಯುತ್ತಿದ್ದರಂತೆ. ಕಾರಣವೆಂದರೆ ಬೇರೆ ವಿಶೇಷ ದಿನಗಳಂದು ತಮ್ಮ ಇಷ್ಟದ ಕಲಾವಿದರು ಸಿಗದೇ ಇರುವುದು ಅಥವಾ ಆಯೋಜಿಸಲು ಸ್ಥಳ ಸಿಗದೇ ಇರುವುದು, ಇಂಥ ಸಮಸ್ಯೆಗಳನ್ನು ತಪ್ಪಿಸಲು ಅವರು ವಾಮನ ಜಯಂತಿಯ ದಿನದಂದು ಸಂಗೀತ ಕಛೇರಿ ಏರ್ಪಾಟು ಮಾಡುತ್ತಿದುದು.

ಬೆಂಗಳೂರು ಗಾಯನ ಸಮಾಜದ ಹಳೆಯ ಕಟ್ಟಡ

ಮುಖ್ಯವಾಗಿ ಮೈಸೂರು ಮತ್ತು ಬೆಂಗಳೂರಿನ ಗಾಯನ ಸಮಾಜಗಳು ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿರುತ್ತಿತ್ತು. ದಕ್ಷಿಣ ಕರ್ನಾಟಕದಲ್ಲಿ ಬಹುಶಃ ಇಪ್ಪತ್ತನೇ ಶತಮಾನದ ಪ್ರಾರಂಭ ಕಾಲದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಲು ಇದ್ದ ಏಕೈಕ ಸಾರ್ವಜನಿಕ ಸಂಸ್ಥೆಯೆಂದರೆ ಇದೊಂದೇ ಆಗಿತ್ತು. ಬೆಂಗಳೂರಿನ ಗಾಯನ ಸಮಾಜವು 1905ರಲ್ಲಿ ಲಂಡನ್ ಮಿಷನರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಕೆ.ರಾಮಚಂದ್ರರಾವ್‍ರವರಿಂದ ಸ್ಥಾಪಿಸಲ್ಪಟ್ಟಿತ್ತು. ಒಂದು ನೂರು ಜನ ಸದಸ್ಯರೊಂದಿಗೆ ಈ ಸಂಸ್ಥೆ ಪ್ರಾರಂಭವಾಯಿತು. ಸದಸ್ಯತ್ವಕ್ಕೆ ಮಾಸಿಕ ಚಂದಾ 4 ಆಣೆಯಾಗಿತ್ತು. 1940ರಲ್ಲಿ ಸದಸ್ಯತ್ವದಲ್ಲಿಯೂ ಕೂಡಾ ಶ್ರೇಣೀಕರಣ ಮಾಡಲಾಯಿತು. ಮೊದಲನೆ ದರ್ಜೆಯ ಸದಸ್ಯತ್ವಕ್ಕೆ ಒಂದು ರೂಪಾಯಿ ಹಾಗೂ ಎರಡನೇ ದರ್ಜೆಗೆ ಐವತ್ತು ಪೈಸೆ ಚಂದಾ ವಸೂಲು ಮಾಡಲಾಗುತಿತ್ತು. ಇದನ್ನು ಒಂದು ಮುಖ್ಯವಾದ ಬೆಳವಣಿಗೆ ಏಕೆಂದರೆ ಕರ್ನಾಟಕ ಸಂಗೀತಕ್ಕೆ ಒಂದು ಸಂಯೋಜಿತ ‘ಸಾರ್ವಜನಿಕ’ ಶೋತೃವರ್ಗ ರೂಪುಗೊಳ್ಳುತ್ತಿರುವ ಸೂಚನೆಯನ್ನು ಇದು ಕೊಡುತ್ತದೆ. ಕುತೂಹಲದ ಸಂಗತಿಯೆಂದರೆ ಗಾಯನ ಸಮಾಜದ ಸಂಗೀತ ಸಭೆಗಳಲ್ಲಿ ಹೆಣ್ಣು ಮತ್ತು ಗಂಡು ಪ್ರೇಕ್ಷಕರ ಮಧ್ಯೆ ಪರದೆಯನ್ನು ಹಾಕಲಾಗುತ್ತಿತ್ತು. ಮಧ್ಯಮ ವರ್ಗದ ಮಡಿವಂತಿಕೆಯ ಭಯ, ಜನರ ಸಹಜ ಬೆರೆಯುವಿಕೆಯ ಆತಂಕವನ್ನು ಇದು ಸೂಚಿಸುತ್ತಿತ್ತು.

ಕನ್ನಡದ ಪ್ರಶ್ನೆ

ಮೈಸೂರಿನ ಸಾಂಸ್ಕೃತಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಎಷ್ಟೇ ಚಿಕ್ಕದಿದ್ದು, ಗಮನಾರ್ಹವಲ್ಲ ಎಂದೆನಿಸಿದರೂ ಇವುಗಳ ಮಧ್ಯಸ್ಥಿಕೆಯ ಸ್ವರೂಪ ಮತ್ತು ಪ್ರಮಾಣವನ್ನು ಆಲಕ್ಷಿಸುವ ಹಾಗಿಲ್ಲ. ಗಾಯನ ಸಮಾಜದ ಒಬ್ಬ ಸದಸ್ಯರು ಎತ್ತಿಕೊಂಡ ವಿಷಯವನ್ನು ಪ್ರಾತಿನಿಧಿಕವಾಗಿ ಇಲ್ಲಿ ನೋಡೋಣ. 1915ರಲ್ಲಿ ಗಾಯನ ಸಮಾಜದ ಪ್ರತಿನಿಧಿಯೊಬ್ಬರು ಮೈಸೂರು ಮಹಾರಾಜರಿಗೆ ಒಂದು ಪತ್ರವನ್ನು ಬರೆದರು. ಪತ್ರದ ಪ್ರಾರಂಭದಲ್ಲಿ ಸಂಸ್ಥಾನದ ಉತ್ತಮ ಗಾಯಕರನೇಕರ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದರೂ ‘ಪರಕೀಯ’ (ರಾಜ್ಯದ ಹೊರಗಿನ) ವಿದ್ವಾನ್ ಆಗಿದ್ದ ಅನಂತರಾಮ ಭಾಗವತರ್ (ಇವರು ಹಾಡುಗಾರರಲ್ಲದೇ ತಮಿಳುನಾಡಿನ ಜನಪ್ರಿಯ ಹರಿಕಥ ವಿದ್ವಾಂಸರೂ ಹೌದು) ಎಂಬುವವರಿಗೆ “60 ರೂಪಾಯಿಗಳ ಸಂಬಳ ಮತ್ತು ವಿಶೇಷ ರಿವಾಜುಗಳನ್ನು ನೀಡಿರುವುದರ” ಬಗ್ಗೆ ಈ ವ್ಯಕ್ತಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ವೀಣೆ ಶೇಷಣ್ಣ ಮತ್ತು ಬಿಡಾರಂ ಕೃಷ್ಣಪ್ಪನವರಿಗಿಂತ ಭಿನ್ನವಾಗಿ ಒಬ್ಬ ಪರಕೀಯನನ್ನು ಹೀಗೆ ವಿಶಿಷ್ಟವಾಗಿ ಗೌರವದಿಂದ ಕಾಣುವುದು ಸರಿಯೇ, ಇದೊಂದು ಪಕ್ಷಪಾತದ ಅಂಶವಲ್ಲವೇ ಎಂದು ಕೇಳಲಾಗಿತ್ತು. ಪತ್ರದ ಕೆಲವು ಮುಖ್ಯಸಾಲುಗಳು ಹೀಗಿದ್ದುವು:

ಬಿಡಾರಂ ಕೃಷ್ಣಪ್ಪ

ಮಹಾರಾಜರಿಗೆ ಗೊತ್ತಿರುವ ಹಾಗೆ ವಿದ್ವಾನ್ ಮೈಸೂರಿನ ಬಿ. ಕೃಷ್ಣಪ್ಪನವರು ಹಾಗೂ ವೈಣಿಕ ಶಿಖಾಮಣಿ ಶೇಷಣ್ಣನವರು ರಾಜ್ಯದಲ್ಲಿ ಪ್ರಮುಖ ವ್ಯಕ್ತಿಗಳಾಗಿದ್ದಾರೆ. ಭಾರತದಾದ್ಯಂತ ಅವರಿಗೆ ಒಳ್ಳೆಯ ಹೆಸರು, ಖಿಲ್ಲತ್ತುಗಳು, ಪದಕಗಳು, ಹಣ, ಬಹುಮಾನ ಸಂದಿವೆ. ಹೀಗಿರುವಾಗ ಒಬ್ಬ ಪರಕೀಯನಿಗೆ 60 ರೂಪಾಯಿ ಪ್ರಾರಂಭಿಕ ಸಂಭಾವನೆಯಾಗಿ ನೀಡಿದರೆ ನಮ್ಮವರು ಎಲ್ಲಿ ಹೋಗಬೇಕು? ಯಾರು ಇದನ್ನು ಗಮನಿಸುವರು? ನಮ್ಮವರು ಮೈಸೂರಿನಲ್ಲೆ ಹುಟ್ಟಿ, ಇಲ್ಲೇ ವಾಸವಾಗಿರುವವರು. ಬೇರೆ ಮಹಾರಾಜರುಗಳು ಅವರಿಗೆ ಆಹ್ವಾನವಿತ್ತರೂ ಹೋಗದೇ ಇಲ್ಲಿಯೇ ಇದ್ದಾರೆ. ಅನಂತರಾಮ ಭಾಗವತರು ನಗರದ ಸಭಾಂಗಣದಲ್ಲಿ ಕೊಟ್ಟ ಕಾರ್ಯಕ್ರಮಕ್ಕೆ ವಸೂಲಾದ ಹಣ ಕೇವಲ 90 ರೂಪಾಯಿಗಳು. ಒಂದು ಪಕ್ಷ ವಿದ್ವಾನ್ ಬಿಡಾರಂ ಕೃಷ್ಣಪ್ಪನವರು ತಮ್ಮ ಪ್ರತಿಭೆಯನ್ನು ಇದೇ ಸಭಾಂಗಣದಲ್ಲಿ ತೋರಿಸಿದರೆ ಇನ್ನೂ ಹೆಚ್ಚು ಹಣ ಸಂಗ್ರಹವಾಗುತ್ತಿತ್ತು. ಇದನ್ನು ಯುದ್ಧ ನಿಧಿಗೆ ವಿನಿಯೋಗಿಸಬಹುದಾಗಿತ್ತು. ಮಹಾರಾಜರು ಕೃಷ್ಣಪ್ಪನವರಿಗೆ ಅಪ್ಪಣೆ ಕೊಟ್ಟರೆ ಅವರು ತಮ್ಮ ಕಾರ್ಯಕ್ರಮದ ಮೂಲಕ ಎಷ್ಟು ಸಂಗ್ರಹ ಮಾಡಿಸಿಕೊಡುತ್ತಾರೆಂಬುದನ್ನು ತಿಳಿದುಕೊಳ್ಳಬಹುದು. ಹೀಗಾಗಿ ಶ್ರೀಮನ್ಮಹರಾಜರು ನಾನು ಚರ್ಚಿಸಿದ ಇಬ್ಬರೂ ವಿದ್ವಾನರ ಬಗ್ಗೆ ಕಳಕಳಿಯ ಧೋರಣೆಯನ್ನು ಪ್ರದರ್ಶಿಸಲು ತಮ್ಮಲ್ಲಿ ಕೋರುತ್ತೇನೆ.

ಈ ಪತ್ರವನ್ನು ಒಂದು ಬಿಡಿ ಘಟನೆಯಾಗಿ ನೋಡಿ ಇದಕ್ಕೆ ಅಷ್ಟೊಂದು ಮಹತ್ವವಿಲ್ಲವೆಂದು ಹೇಳಬಹುದು. ಪತ್ರಕ್ಕೆ ವಿಶೇಷ ಪ್ರತಿಕ್ರಿಯೆಯೂ ಇರಲಿಲ್ಲ. ಈ ಪತ್ರದ ಇಂಗ್ಲಿಷ್ ಮೂಲದ ರಚನೆಯಲ್ಲಿರುವ ದೋಷಗಳು, ತಪ್ಪು ವಾಖ್ಯೆಗಳು, ತಪ್ಪು ತಪ್ಪಾದ ಅಕ್ಷರಗಳು, ಮರೆಯಾದ ಪದಗಳು, ಒಟ್ಟಾರೆ ಕಂಡು ಬರುವ ಸಂಸ್ಕರಣದ ಕೊರತೆ ಇವೆಲ್ಲ ಪ್ರೌಢತೆಯಿಲ್ಲದೇ ಬರೆಯಲ್ಪಟ್ಟ ಪತ್ರವೆಂದು ಮೇಲ್ನೋಟಕ್ಕೆ ತಿಳಿಸುತ್ತವೆ. ಈ ಪತ್ರ ಬರೆದವರು ಗಾಯನ ಸಮಾಜದ ವಿಶೇಷ ವರ್ಗ (elite) ಕ್ಕೆ ಸೇರಿದವರಂತೆ ತೋರುವುದಿಲ್ಲ. ಕನ್ನಡ ಬರಹಗಾರರಾದ ವಿ.ಸೀತಾರಾಮಯ್ಯನವರ ಪ್ರಕಾರ ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದು ಗಾಯನ ಸಮಾಜದ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದಾಗ ಮೈಸೂರಿನ ಸಂಗೀತ ವಿದ್ವಾನರುಗಳಿಗೆ ಅಷ್ಟೇನು ಪ್ರೋತ್ಸಾಹವಿರಲಿಲ್ಲವಂತೆ. ಅವಕಾಶಗಳು ಇದ್ದಾಗ್ಯೂ ಕೂಡ ಹೊರಗಿನ ಸಂಗೀತಗಾರರಿಗೆ ಹೋಲಿಸಿದಾಗ ಮೈಸೂರಿನವರಿಗೆ ಸಿಗುತ್ತಿದ್ದ ಸಂಭಾವನೆ ಕಡಿಮೆಯಿರುತ್ತಿತ್ತು. ಅರಮನೆಯ ದಾಖಲೆಗಳ ಪ್ರಕಾರ 1908ರವರೆಗೂ ಶೇಷಣ್ಣನವರಿಗೆ ತಿಂಗಳಿಗೆ ರೂ. 50 ಸಂಬಳ ಇತ್ತು. ಬಿಡಾರಂ ಕೃಷ್ಣಪ್ಪನವರ ಸಂಬಳ 1908ರಲ್ಲಿ ರೂ. 20 ಮಾತ್ರ. ಆದರೆ ಅದೇ ವರ್ಷ ಶೇಷಣ್ಣನವರ ಸಂಬಳ ರೂ. 60ಕ್ಕೂ, ಕೃಷ್ಣಪ್ಪನವರ ಸಂಬಳ ರೂ. 25ಕ್ಕೂ ಹೆಚ್ಚಿಸಲಾಗಿತ್ತು. ಈ ಲೆಕ್ಕಾಚಾರದ ಪ್ರಕಾರ 1915ರಲ್ಲಿ ಶೇಷಣ್ಣನವರ ಸಂಬಳ 60 ರೂಪಾಯಿಗಿಂತ ತುಂಬಾ ಹೆಚ್ಚೇನೂ ಇರಲಿಕ್ಕಿಲ್ಲವೆಂದು ತಿಳಿಯುತ್ತದೆ. ಇಷ್ಟಕ್ಕೂ ಅವರು ಅ ವೇಳೆಗೆ 32 ವರ್ಷಗಳ ದೀರ್ಘ ಸೇವೆಯನ್ನು ಸಲ್ಲಿಸಿದ್ದರು. ಆದರೆ ಭಾಗವತರ ಸಂಬಳಕ್ಕೂ ಕೃಷ್ಣಪ್ಪನವರ ಸಂಬಳಕ್ಕೂ ಅಜಗಜಾಂತರವಿತ್ತು. ಸೀತಾರಾಮಯ್ಯನವರು ಮುಂದುವರಿದು ‘ಯುದ್ಧನಿಧಿ’ (ಮೊದಲನೇ ಮಹಾಯುದ್ಧ) ಗಾಗಿ ಪೌರ ಸಭಾಂಗಣ (ಪತ್ರದಲ್ಲಿ ತಿಳಿಸಿರುವಂಥದ್ದೇ) ದಲ್ಲಿ ಅರಮನೆಯ ಎಲ್ಲಾ ಸಂಗೀತಗಾರರಿಂದ ಒಂದು ಆರ್ಕೆಷ್ಟ್ರಾವನ್ನು ಏರ್ಪಡಿಸಲಾಗಿತ್ತು ಎನ್ನುತ್ತಾರೆ. ಆದರೆ ಸೀತಾರಾಮಯ್ಯನವರು ಹೇಳುವ ಆರ್ಕೆಸ್ಟ್ರಾಕ್ಕೂ ಮೇಲಿನ ಪತ್ರದ ಒಕ್ಕಣೆಗೂ ಸಂಬಂಧವಿದೆಯೆ ಎಂಬುದು ಖಚಿತವಾಗಿ ಗೊತ್ತಿಲ್ಲ. ಪತ್ರದಲ್ಲಿದ್ದಂತೆ ಶುಲ್ಕ ಅಥವಾ ಗೇಟ್ ಸ್ವೀಕರಣದ ಬಗ್ಗೆ ವಿವರಗಳು ದೊರಕಿಲ್ಲ.

ಕನ್ನಡದಲ್ಲಿ ಸಂಗೀತಕ್ಕೆ ಶ್ರೋತೃಗಳಿಂದ ಇದ್ದ ಬೇಡಿಕೆಯ ಬಗ್ಗೆಯೂ ಸೀತಾರಾಮಯ್ಯನವರು ತಿಳಿಸುತ್ತಾರೆ. ಅರಮನೆಯ ಸಂಗೀತಗಾರರಾದ ಚಿಕ್ಕರಾಮರಾಯರು (ಪ್ರಸಿದ್ಧ ಗಾಯಕರಾಗಿದ್ದ ಮೈಸೂರು ಅನಂತಸ್ವಾಮಿಯವರ ತಾತಂದಿರು) ಗಾಯನ ಸಮಾಜದಲ್ಲಿ ಹಾಡಿದಾಗಲೆಲ್ಲ ಪ್ರೇಕ್ಷಕರು ಅವರನ್ನು ‘ಕಂದ’ಗಳನ್ನು ಹಾಡುವಂತೆ ಕೇಳಿಕೊಳ್ಳುತ್ತಿದ್ದುದನ್ನು ಹೇಳಿದ್ದಾರೆ. ಈ ‘ಕಂದ’ಗಳು ಕನ್ನಡ ಹಾಡುಗಳಾಗಿದ್ದು ರಂಗಭೂಮಿಯ ನಾಟಕಗಳಲ್ಲಿ ಕೇಳಿಬರುತ್ತಿದ್ದವು. ಚಿಕ್ಕರಾಮರಾಯರು ಯಶಸ್ವಿ ನಟರೂ ಆಗಿದ್ದರಿಂದ ಮೈಸೂರಿನ ಗಾಯನ ಸಮಾಜದ ಶೋತೃಗಳು ಅವರನ್ನು ‘ಕಂದ’ಗಳನ್ನು ಹಾಡುವಂತೆ ಒತ್ತಾಯಿಸುತ್ತಿದ್ದರಂತೆ. ವಾಸ್ತವವಾಗಿ ಶಾಸ್ತ್ರೀಯ ಸಂಗೀತದಲ್ಲಿ ಅವಕಾಶ ಸಿಗದ ಆಕಾಂಕ್ಷೀ ಸಂಗೀತಗಾರರಿಗೆ ಪರ್ಯಾಯ ಅವಕಾಶವನ್ನು ನಾಟಕ ಕಂಪನಿಗಳು ಒದಗಿಸಿಕೊಟ್ಟಿರುವುದು ಇಪ್ಪತ್ತನೇ ಶತಮಾನದ ಎರಡು ಹಾಗು ಮೂರನೇ ದಶಕಗಳಲ್ಲಿ ಕಂಡುಬರುತ್ತದೆ. ಆದರೆ ಇಂತಹ ಸಂಗೀತಗಾರರಿಗೆ ಭಿನ್ನ ರೀತಿಯ ಭವಿಷ್ಯವಿತ್ತು. ಕಳೆದ ಶತಮಾನದ ಪ್ರಖ್ಯಾತ ನಾಟಕಕಾರ ಬಿ.ವಿ.ಕಾರಂತರು ಒಮ್ಮೆ ತಾವು ಮಹಾರಾಜರ ಕಾಲಿಗೆ ನಾಟಕೀಯವಾಗಿ ಬಿದ್ದು ತನಗೆ ಸಂಗೀತ ಕಲಿಯಲು ಏರ್ಪಾಟು ಮಾಡಿಕೊಡಿಯೆಂದು ಕೇಳಿಕೊಳ್ಳಲು ಯೋಜನೆ ಹಾಕಿದ್ದರಂತೆ.

ಬಿ.ವಿ.ಕಾರಂತ

(ಕಾರಂತರು ಹುಟ್ಟಿದ್ದು 1929ರಲ್ಲಿ; ಆದ್ದರಿಂದ ಈ ಘಟನೆಯು ನಲ್ವತ್ತರ ದಶಕದ್ದಿರಬೇಕು). ಆದರೆ ಯಾವಾಗಲೂ ಆ ದಾರಿಯಾಗಿ ವಾಕಿಂಗ್ ಬರುತ್ತಿದ್ದ ಮಹಾರಾಜರು ಆ ದಿನ ಅಲ್ಲಿಗೆ ಬರದೇ ಹೋದುದರಿಂದ ಈ ಯೋಜನೆ ಕಾರ್ಯರೂಪಕ್ಕೆ ತರಲಾಗಲಿಲ್ಲವಂತೆ. ಆದರೂ ತಾವು ಗುಬ್ಬಿ ಕಂಪನಿಯ ಮ್ಯಾನೇಜರ್ ಕಾಲಿಗೆ ಬಿದ್ದು ಸಂಗೀತಾಭ್ಯಾಸವನ್ನು ಪ್ರಾರಂಭಿಸಿದ್ದು ನಿಜವೆಂದು ಅವರೇ ಹೇಳಿದ್ದಾರೆ. ಶತಮಾನದ ಪ್ರಾರಂಭದಲ್ಲಿ ಸಂಗೀತಾಭಿರುಚಿಯ ಮಾನದಂಡಗಳು ಅಸ್ಪಷ್ಟವಾಗಿದ್ದ ಕಾರಣ ಸಂಗೀತಾಸಕ್ತರಿಗೆ ಹಲವಾರು ಹಾಡುಗಳನ್ನು ಒಳಗೊಂಡ ಒಂದು ನಾಟಕವನ್ನು ನೋಡುವ ಆಯ್ಕೆಯೂ ಇತ್ತು. ಸಂಗೀತದ ಸಾರ್ವಜನಿಕ ಪ್ರಸ್ತುತಿಗಳು ಕಡಿಮೆ ಇದ್ದುದರಿಂದ ಸಂಗೀತ ಕೇಳಲೆಂದೇ ನಾಟಕಕ್ಕೆ ಹೋಗುತ್ತಿದ್ದ ದೊಡ್ಡ ವರ್ಗವೊಂದಿತ್ತು. ಅದಿರಲಿ. ಒಟ್ಟಾರೆ ಹೇಳುವುದಾದರೆ ಬೆಂಗಳೂರು ಗಾಯನ ಸಮಾಜದ ಸದಸ್ಯರು ಹಾಗೂ ಶೋತೃಗಳ ಪೈಕಿ ಹೆಚ್ಚಿನ ಪ್ರಮಾಣದ ‘ಪರಕೀಯರು’ ಇದ್ದು, ಮೈಸೂರಿನಲ್ಲಿ ಅಧಿಕವಾಗಿ ಸ್ಥಳೀಯರು ಇದ್ದು, ಕನ್ನಡ ಕೃತಿಗಳನ್ನು ಹಾಡಬೇಕೆಂಬ ಮತ್ತು ಮೈಸೂರಿನ ಸಂಗೀತಗಾರರನ್ನು ಸರಿಸಮನಾಗಿ ನಡೆಸಿಕೊಳ್ಳಬೇಕೆಂಬ ಬಯಕೆ ವ್ಯಕ್ತವಾಗುತ್ತಿದ್ದುದು ಮೈಸೂರು ಗಾಯನ ಸಮಾಜದಲ್ಲೆಂದು ಊಹಿಸಬಹುದು. ಮಹಾರಾಜರಿಗೆ ಕನ್ನಡ ಕೃತಿಗಳ ರಚನೆಯ ಬಗ್ಗೆ ಹೆಚ್ಚಿನ ಒಲವಿದ್ದರೂ ಮೇಲ್ಕಂಡ ಪತ್ರದಲ್ಲಿದ್ದ ಕೋರಿಕೆಗಳಿಗೆ ಸ್ಥಳೀಯ-ಪರಕೀಯ ಎನ್ನುವ ಅಧಾರದ ಮೇಲೆ ಪ್ರತಿಕ್ರಿಯಿಸಿ ಸಂಗೀತ ಕ್ಷೇತ್ರದಲ್ಲಿ ಆ ತರಹದ ವಾದಕ್ಕೆ ಆಸ್ಪದ ಕೊಡುವುದು ಇಷ್ಟವಿರಲಿಲ್ಲ. ಏಕೆಂದರೆ ಇದಕ್ಕೆ ಸಂವಾದಿಯಾಗಿ ಈಗಾಗಲೇ ಮೈಸೂರಿನಲ್ಲಿ ಸ್ಥಳೀಯ-ಪರಕೀಯ ಎಂಬ ವಾಗ್ವಾದಗಳು ಆಡಳಿತವಲಯದಲ್ಲಿ ತಾರಕಕ್ಕೇರಿದ್ದವು. ಇದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಮುಂದುವರೆಯುವುದು ..

ಅನುವಾದ: ಪ್ರೊ. ಎಸ್. ನಾರಾಯಣನ್

One comment to “ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ”
  1. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೮: ಬೆಂಗಳೂರಿನ ಕನ್ನಡ ಸಾರ್ವಜನಿಕ ಮತ್ತು ಸುಗಮ ಸಂಗೀತದ ಉಗಮ – ಋತುಮಾನ

ಪ್ರತಿಕ್ರಿಯಿಸಿ