ಕೋವಿಡ್ ಸೋಂಕಿತರು ನಿಜವಾಗಿ ಎಷ್ಟು ಜನ?

ಸೋಂಕು ಪತ್ತೆಹೆಚ್ಚುವ ದರ ಬದಲಾಗುತ್ತಿರುತ್ತದೆ. ಅದು ಸೋಂಕಿಗೆ ಪ್ರತಿ ದೇಶವೂ ಪ್ರತಿಕ್ರಿಯಿಸುವ ಕ್ರಮವನ್ನು ಆಧರಿಸಿರುತ್ತದೆ. ಸೋಂಕು ಹೆಚ್ಚುವ ದರಕ್ಕೆ ಅನುಗುಣವಾಗಿ ಪರೀಕ್ಷಿಸುವ ವ್ಯವಸ್ಥೆ ಬೆಳೆಯದೇ ಹೋದರೆ ಪತ್ತೆಹಚ್ಚುವ ದರ ಕಡಿಮೆಯಾಗುತ್ತದೆ. ಪರೀಕ್ಷೆಯ ವ್ಯವಸ್ಥೆ ಸುಧಾರಿಸಿದರೆ ಅದು ಕಡಿಮೆಯಾಗಬಹುದು. ಅಷ್ಟೇ ಅಲ್ಲ ಸೋಂಕು ಉತ್ತುಂಗವನ್ನು ಮುಟ್ಟಿ ಇಳಿಯುವುದಕ್ಕೆ ಪ್ರಾರಂಭಿಸಿದಾಗಲೂ ಪತ್ತೆ ದರ ಕಮ್ಮಿಯಾಗುತ್ತದೆ. ಏಪ್ರಿಲಿನಲ್ಲಿ ಶೇಕಡ ೧.೬೮ ಇದ್ದದ್ದು ಈಗ ೨.೯ಕ್ಕೆ ಹೆಚ್ಚಿದೆ ಅಂದರೆ ಟೆಸ್ಟಿಂಗ್ ಹೆಚ್ಚಾಗಿದೆ, ಆದರೆ ಅದು ತುಂಬಾ ಕಡಿಮೆ, ಅದು ಇನ್ನೂ ಹೆಚ್ಚಾಗಬೇಕು.

ಯಾವುದೇ ದೇಶದಲ್ಲಿ ಅಥವಾ ಪ್ರಾಂತ್ಯದಲ್ಲಿ ಎಷ್ಟು ಜನ ಕೋವಿಡ್-೧೯ ಸೋಂಕಿತರು ಇದ್ದಾರೆ, ಅದು ಎಷ್ಟು ತೀವ್ರವಾಗಿದೆ ಎನ್ನುವುದು ಆತಂಕದ ವಿಷಯ. ಈ ಸೋಂಕಿನ ತೀವ್ರತೆಯನ್ನು ಲೆಕ್ಕ ಹಾಕುವಾಗ ಎರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದು ಈ ಸೋಂಕು ಎಷ್ಟು ತೀವ್ರವಾಗಿ ಹರಡುತ್ತದೆ ಎನ್ನುವುದು. ಮತ್ತೊಂದು ಇದು ಎಷ್ಟು ಅಪಾಯಕಾರಿ ಅನ್ನುವುದು. ಅಂದರೆ ಸೋಂಕಿತರಲ್ಲಿ ಎಷ್ಟು ಜನ ಸಾಯುತ್ತಾರೆ ಅಥವಾ ಸಾಯುವ ಸಾಧ್ಯತೆ ಎಷ್ಟು ಅನ್ನುವುದು.

ಮೊದಲನೆಯದನ್ನು ಅಂದರೆ ಸೋಂಕು ಎಷ್ಟು ವೇಗವಾಗಿ ಹರಡುತ್ತದೆ ಅನ್ನುವುದನ್ನು ಸೂಚಿಸುವುದಕ್ಕೆ ಮೂಲಭೂತ ಪುನರುತ್ಪಾದಕ ಸಂಖೈ ಆರ್೦ (ಆರ್ ನಾಟ್) ಅನ್ನು ಮಾಪಕವಾಗಿ ಬಳಸುತ್ತಾರೆ. ಅಂದರೆ ಒಬ್ಬ ಸೋಂಕಿತ ವ್ಯಕ್ತಿ ಎಷ್ಟು ಜನರಿಗೆ ಸೋಂಕು ಹರಡುತ್ತಾನೆ ಅನ್ನುವುದನ್ನು ಆರ್‌ನಾಟ್ ಸೂಚಿಸುತ್ತದೆ. ಯಾವುದೇ ಹೊಸ ಸೋಂಕು ಕಾಣಿಸಿಕೊಂಡಾಗ ಆರ್-೦ ಒಂದಕ್ಕಿಂತ ಹೆಚ್ಚಿರುತ್ತದೆ. ಸೋಂಕು ವೇಗವಾಗಿ ಹರಡುತ್ತಿರುವ ಅವಧಿಯಲ್ಲೂ ಇದು ಒಂದಕ್ಕಿಂತ ಹೆಚ್ಚಿರುತ್ತದೆ. ಅಂದರೆ ಒಬ್ಬ ಸೋಂಕಿತ ವ್ಯಕ್ತಿ ಒಬ್ಬರಿಗಿಂತ ಹೆಚ್ಚು ಜನರಿಗೆ ಸೋಂಕು ಹರಡುತ್ತಾನೆ. ಹಾಗೆ ಸೋಂಕಿತರಾದವರೂ ಹೆಚ್ಚು ಜನರಿಗೆ ಹರಡುತ್ತಿರುತ್ತಾರೆ. ಹೀಗೆ ಸೋಂಕು ಹೆಚ್ಚೆಚ್ಚು ತ್ವರಿತವಾಗಿ ಹರಡುತ್ತಿರುತ್ತದೆ.

ಆರ್-೦ ಅನ್ನುವುದು ಒಂದು ನಿಶ್ಚಿತ ಸಂಖ್ಯೆಯಲ್ಲ. ಅದು ಬದಲಾಗುತ್ತಿರುತ್ತದೆ. ಸೋಂಕು ಹರಡುತ್ತಿರುವ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕೈತೊಳೆದುಕೊಳ್ಳುವುದೇ ಮೊದಲಾದ ಶುಚಿತ್ವದ ಕ್ರಮಗಳನ್ನು ತೆಗೆದುಕೊಳ್ಳುವುದು, ಸೋಂಕಿತರನ್ನು ಪ್ರತ್ಯೇಕವಾಗಿಡುವುದು ಇತ್ಯಾದಿ ಕ್ರಮಗಳನ್ನು ತೆಗೆದುಕೊಂಡಾಗ ಆರ್‌ನಾಟ್ ದರ ಇಳಿಯುತ್ತದೆ. ಕ್ರಮೇಣ ಅದು ಒಂದಕ್ಕಿಂತ ಕಮ್ಮಿಯಾಗುತ್ತದೆ. ಅಂದರೆ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಾ ಅಂತಿಮವಾಗಿ ಅದು ನಿಲ್ಲುತ್ತದೆ. ವಿಜ್ಞಾನಿಗಳು ಆಯಾ ನಿರ್ದಿಷ್ಟ ಸಾಮಾಜಿಕ ವ್ಯವಸ್ಥೆಯಲ್ಲಿ ಸೋಂಕು ಹರಡುವುದಕ್ಕೆ ಸಂಬಂಧಿಸಿದಂತೆ ಮಾಡೆಲ್ಲುಗಳನ್ನು ರಚಿಸಿರುತ್ತಾರೆ. ಆ ಮಾಡೆಲ್ಲುಗಳನ್ನು ಆಧರಿಸಿ ಆರ್‌ನಾಟ್ ದರವನ್ನು ಲೆಕ್ಕ ಹಾಕಲಾಗುತ್ತದೆ.

ಎರಡನೆಯ ಅಂಶ ವೈರಾಣುವಿನ ಆಂತರಿಕ ಗುಣಕ್ಕೆ ಸಂಬಂಧಿಸಿದ್ದು. ನಿರ್ದಿಷ್ಟ ವೈರಾಣು ಎಷ್ಟು ಅಪಾಯಕಾರಿ ಅನ್ನುವುದು. ಅಂದರೆ ಯಾವುದೇ ನಿಯಂತ್ರಣ ಕ್ರಮವನ್ನು ತೆಗೆದುಕೊಳ್ಳದೇ ಹೋದ ಸಂದರ್ಭದಲ್ಲಿ, ಅಥವಾ ಜನರಲ್ಲಿ ಯಾವುದೇ ರೋಗ ನಿರೋಧಕ ಶಕ್ತಿ ಇಲ್ಲದೇ ಇದ್ದ ಸಂದರ್ಭದಲ್ಲಿ ಒಟ್ಟಾರೆ ಸೋಂಕಿತರಲ್ಲಿ ಎಷ್ಟು ಜನ ಸಾಯುತ್ತಾರೆ ಅನ್ನುವುದು. ಇದನ್ನು ಸೂಚಿಸಲು ಮರಣಸಂಖ್ಯೆಯ ಅನುಪಾತ (ಕೇಸ್ ಫೆಟಾಲಿಟಿ ರೇಷಿಯೋ -ಸಿಎಫ್‌ಆರ್) ಲೆಕ್ಕ ಹಾಕುತ್ತಾರೆ. ಮರಣ ಸಂಖ್ಯೆಯ ಅನುಪಾತವನ್ನು ಒಟ್ಟಾರೆ ಸೋಂಕಿನಿಂದ ಸತ್ತವರ ಸಂಖ್ಯೆಯನ್ನು ಒಟ್ಟು ಸೋಂಕಿತರ ಸಂಖೈಯಿಂದ ಭಾಗಿಸಿ ಲೆಕ್ಕ ಹಾಕಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಶೇಕಡವಾರು ಲೆಕ್ಕ ಹಾಕಲಾಗುತ್ತದೆ. ಆದರೆ ಸೋಂಕಿನ ತೀವ್ರತೆ ಸೋಂಕಿತರ ವಯಸ್ಸನ್ನು ಅವಲಂಬಿಸಿರುತ್ತದೆ. ವಯಸ್ಸಾದ ಹಿರಿಯರು ಸೋಂಕಿಗೆ ಬಲಿಯಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ವಯಸ್ಸನ್ನು ಆಧರಿಸಿ ಮರಣ ಸಂಖ್ಯೆಯ ಅನುಪಾತವನ್ನು ಲೆಕ್ಕ ಹಾಕುವುದು sಸಾಂಕ್ರಮಿಕರೋಗಶಾಸ್ತ್ರದ ದೃಷ್ಟಿಯಿಂದ ಹೆಚ್ಚು ಮಹತ್ವಪೂರ್ಣ. ಜೊತೆಗೆ ಎಲ್ಲಿ ಆರೋಗ್ಯ ರಕ್ಷಣೆ ಅಷ್ಟು ಚೆನ್ನಾಗಿಲ್ಲವೋ ಅಲ್ಲಿ ಮರಣ ಸಂಖ್ಯೆಯ ಅನುಪಾತ ಹೆಚ್ಚಿರುತ್ತದೆ. ಆರೋಗ್ಯ ವ್ಯವಸ್ಥೆ ಚೆನ್ನಾಗಿರುವ ಕಡೆ ಕಡಿಮೆ ಇರುತ್ತದೆ.

ಸೋಂಕು ಹರಡುವುದಕ್ಕೆ ಆರಂಭದ ಸಮಯದಲ್ಲಿ ಸೋಂಕಿತರ ಸಂಖ್ಯೆ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಅದು ನಿಜವಾದ ಸಮಸ್ಯೆ. ಪ್ರಾರಂಭದಲ್ಲಿ ತೀರಾ ಗಂಭೀರವಾದ ಪ್ರಕರಣಗಳಷ್ಟೇ ಪತ್ತೆಯಾಗುವುದು. ಆಗ ಮರಣ ಸಂಖ್ಯೆಯ ಅನುಪಾತ ಹೆಚ್ಚಿರುತ್ತದೆ. ಕ್ರಮೇಣ ಅಷ್ಟೊಂದು ಗಂಭೀರವಲ್ಲದ ಪ್ರಕರಣಗಳೂ ಪತ್ತೆಯಾಗುತ್ತಾ ಹೋಗುತ್ತವೆ. ಆಗ ಈ ಮರಣದ ದರ ಕಡಿಮೆಯಾಗುತ್ತಾ ಹೋಗುತ್ತದೆ. ಕ್ರಮೇಣ ತೀವ್ರವಲ್ಲದ ಹಾಗೂ ರೋಗ ಲಕ್ಷಣಗಳು ಕಾಣಿಸಿಕೊಂಡಿರದ ಪ್ರಕರಣಗಳೂ ಪರೀಕ್ಷೆಯ ಸಮಯದಲ್ಲಿ ತಿಳಿಯುತ್ತಾ ಹೋಗುತ್ತವೆ. ಅದು ಮುಖ್ಯ ಯಾಕೆಂದರೆ, ರೋಗಲಕ್ಷಣ ಕಾಣಿಸಿಕೊಂಡಿರದ ಸೋಂಕಿತರು ಕೂಡ ಸೋಂಕನ್ನು ಹರಡುತ್ತಿರುತ್ತಾರೆ. ಅದು ಕೊರೋನಾ ಪ್ರಕರಣದಲ್ಲಿ ಸ್ಪಷ್ಟವಾಗಿ ಗೊತ್ತಾಗಿದೆ. ಪ್ರಾರಂಭದಲ್ಲಿ ಇದು ಅಷ್ಟು ಸ್ಪಷ್ಟವಾಗಿರಲಿಲ್ಲ. ಈಗ ರೋಗಲಕ್ಷಣ ಇಲ್ಲದವರಲ್ಲೂ ಸೋಂಕು ಇರುವುದು ಹಾಗೂ ಅವರಿಂದಲೂ ಸೋಂಕು ಹರಡುತ್ತಿರುವುದು ಗೊತ್ತಾಗುತ್ತಿದೆ. ಇದಕ್ಕೆ ಸ್ಪಷ್ಟವಾದ ಪುರಾವೆಗಳು ನಮ್ಮ ಮುಂದಿವೆ. ಉದಾಹರಣೆಗೆ ಡೈಮಂಡ್ ಪ್ರಿನ್ಸಸ್ ಹಡಗಿನ ಪ್ರಕರಣ ಇರಬಹುದು. ಅಥವಾ ಯುಎಸ್‌ಎಸ್ ಥಿಯೋಡರ್ ರೂಸ್‌ವೆಲ್ಟ್ ಏರ್ ಕ್ರಾಫ್ಟ್ ಕ್ಯಾರಿಯರ್ ಇರಬಹುದು. ಅಲ್ಲಿದ್ದ ಪ್ರತಿಯೊಬ್ಬರನ್ನು ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿಲ್ಲದ ಹಲವರಿಗೆ ಸೋಂಕು ಇದ್ದುದು ಪತ್ತೆಯಾಯಿತು. ಇದನ್ನು ಸ್ವಾಭಾವಿಕ ನಿಯಂತ್ರಿತ ಗುಂಪು ಎಂದು ಭಾವಿಸಲಾಗುತ್ತದೆ.

ಹಾಗಾಗಿ ತೀರಾ ಸ್ಥೂಲವಾದ ಮರಣ ಪ್ರಮಾಣ ದರದಿಂದ ವಾಸ್ತವ ಪರಿಸ್ಥಿತಿಯ ಸ್ಪಷ್ಟ ಚಿತ್ರ ಸಿಗದೇ ಹೋಗಬಹುದು. ವಾಸ್ತವ ಪರಿಸ್ಥಿತಿ ಕರಾರುವಾಕ್ಕಾಗಿ ತಿಳಿಯಬೇಕಾದರೆ ಸೋಂಕಿತರ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕು. ಆಗ ನಿಜವಾದ ಸೋಂಕಿತರ ಸಂಖ್ಯೆ ಮತ್ತು ಸೋಂಕು ಪತ್ತೆಯಾದವರ ಸಂಖ್ಯೆ ಸುಮಾರಾಗಿ ಒಂದೇ ಆಗಿರುತ್ತದೆ. ಅಂದರೆ ನಮಗೆ ಪತ್ತೆಯಾಗಿರದ ಹಾಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದ ಸೋಂಕಿತರನ್ನೂ ಕರಾರುವಾಕ್ಕಾಗಿ ಗುರುತಿಸುವುದಕ್ಕೆ ಸಾಧ್ಯವಾಗಬೇಕು. ಈಗಿನ ಪರಿಸ್ಥಿತಿಯನ್ನು ನೋಡಿದರೆ, ಹೆಚ್ಚಿನ ದೇಶಗಳಲ್ಲಿ ಇನ್ನೂ ವ್ಯಾಪಕವಾಗಿ ಪರೀಕ್ಷೆ ನಡೆಯಬೇಕು ಅನ್ನುವುದು ಸ್ಪಷ್ಟ. ಭಾರತದಲ್ಲೂ ಅದು ಇನ್ನೂ ಹೆಚ್ಚು ವ್ಯಾಪಕವಾಗಿ ಆಗಬೇಕು. ಪರೀಕ್ಷೆಯ ಪ್ರಮಾಣ ಕಡಿಮೆಯಾದಷ್ಟೂ ಸೋಂಕು ಪತ್ತೆಯ ದರ ಕಡಿಮೆಯಾಗುತ್ತದೆ. ಸ್ಥೂಲ ಮರಣದ ಪ್ರಮಾಣ ದರ (ಅಂದರೆ ನಿಜವಾದ ಸೋಂಕಿತರ ಸಂಖ್ಯೆಗೆ ಬದಲಾಗಿ ಪತ್ತೆಯಾದ ಸೋಂಕಿತರ ಸಂಖ್ಯೆಯನ್ನು ತೆಗೆದುಕೊಂಡಾಗ) ಹೆಚ್ಚಾಗುತ್ತದೆ.

ಸೋಂಕು ಮರಣ ಪ್ರಮಾಣ

ನಿಜ ಈ ಎರಡೂ ಸ್ವಾಭಾವಿಕ ನಿಯಂತ್ರಿತ ಗುಂಪಿನಲ್ಲೂ ಸ್ಯಾಂಪಲ್ಲಿನ ಸಂಖ್ಯೆ ಕಡಿಮೆ. ಆದರೆ ಒಟ್ಟಾರೆ ಸೋಂಕಿತರ ಸಂಖ್ಯೆ ನಿಖರವಾಗಿ ಗೊತ್ತಿದೆ. ಅಷ್ಟೇ ಅಲ್ಲ ಅವರನ್ನು ಸೂಕ್ಷ್ಮವಾಗಿ ಗಮನಿಸಬಹುದು. ಆದ್ದರಿಂದ ಅದು ವಾಸ್ತವ ಮರಣ ಪ್ರಮಾಣದ ಹೆಚ್ಚು ಕರಾರುವಾಕ್ಕಾದ ಅಂದಾಜನ್ನು ನೀಡಬಹುದು. ಅದನ್ನು ಸೋಂಕು ಮರಣ ಪ್ರಮಾಣ (ಐಎಂಆರ್) ಎಂದು ಕರೆಯುತ್ತಾರೆ. ಅದು ವೈರಾಣುವಿನ ಸೋಂಕಿನ ಆಂತರಿಕ ತೀವ್ರತೆಯ ಹೆಚ್ಚು ನಿಖರವಾದ ಮಾಪನವಾಗಬಲ್ಲದು. ನಮಗೆ ಸೋಂಕಿನಿಂದ ಸತ್ತವರ ಕರಾರುವಾಕ್ಕಾದ ಸಂಖ್ಯೆ ಗೊತ್ತಾದರೆ ಐಎಫ್‌ಆರ್ ಬಳಸಿ ವಾಸ್ತವ ಜಗತ್ತಿನ ಪರಿಸ್ಥಿತಿಯಲ್ಲಿ ನಿಜವಾದ ಸೋಂಕಿತರ ಸಂಖ್ಯೆಯನ್ನು ಅಂದಾಜು ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಆದರೆ ಹೀಗೆ ಸಾವಿನ ಸಂಖ್ಯೆಯನ್ನು ಆಧರಿಸಿ ಅಂದಾಜು ಮಾಡಿದ ಸೋಂಕಿತರ ಸಂಖ್ಯೆ ವಾಸ್ತವದಲ್ಲಿ ಅಂದಿನ ಸೋಂಕಿತರ ಸಂಖ್ಯೆಯಾಗಿರುವುದಿಲ್ಲ. ಯಾಕೆಂದರೆ ಈಗ ಸತ್ತವರಿಗೆ ಸೋಂಕು ತಗಲಿ ಹಲವು ದಿನಗಳಾಗಿರುತ್ತದೆ. ಹಾಗಾಗಿ ಅದು ಆ ಸಮಯದ ಸೋಂಕಿನ ಸಂಖ್ಯೆಯಾಗಿರುತ್ತದೆ. ಅಂದರೆ ಸೋಂಕು ತಗಲಿ ಸಾಯುವ ವೇಳೆಗೆ ಹಲವು ದಿನಗಳು ಕಳೆದುಹೋಗಿರುತ್ತದೆ. ಆ ಅವಧಿಯನ್ನು ಸುಮಾರು ಎರಡು ವಾರಕ್ಕಿಂತ ಸ್ವಲ್ಪ ಜಾಸ್ತಿ ಎಂದು ನಿರ್ಧರಿಸಲಾಗಿದೆ. ಇಲ್ಲಿ ಪ್ರಶ್ನೆ ಅಂದರೆ ಇಂದಿನ ಸಾವಿನ ಸಂಖ್ಯೆಯನ್ನು ಆಧರಿಸಿ ಎರಡು ವಾರಗಳ ಹಿಂದಿನ ಸೋಂಕಿತರ ಸಂಖ್ಯೆಯನ್ನು ಲೆಕ್ಕಹಾಕುವುದಕ್ಕೆ ಐಎಫ್‌ಆರ್ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಮಾಪಕ ಅನ್ನುವುದು. ನಾವು ಮೇಲೆ ಉಲ್ಲೇಖಿಸಿದ ಡೈಮಂಡ್ ಪ್ರಿನ್ಸೆಸ್ ಪ್ರಕರಣವಾಗಲಿ, ಯುಎಸ್‌ಎಸ್ ಥಿಯೋಡೋರ್ ರೂಸ್‌ವೆಲ್ಟ್ ಘಟನೆಯಾಗಲಿ ವಾಸ್ತವ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಯಾಕೆಂದರೆ ನಿಜಜೀವನದಲ್ಲಿ ಸಿಗುವುದಕ್ಕಿಂತ ಹೆಚ್ಚು ಉತ್ತಮ ಆರೋಗ್ಯ ಸೌಲಭ್ಯ ಅವರಿಗೆ ಹಡಗಿನಲ್ಲಿರುವಾಗ ಮತ್ತು ಅನಂತರ ಸಿಕ್ಕಿರುವ ಸಾಧ್ಯತೆಯಿದೆ.

ಆದರೆ ಇತ್ತೀಚೆಗೆ ನಡೆದಿರುವ ಮತ್ತೊಂದು ಸಂಶೋಧನೆ ಈ ಬಗ್ಗೆ ಮತ್ತಷ್ಟು ಸ್ಪಷ್ಟತೆ ನೀಡಬಹುದು. ರಾಬರ್ಟ್ ವೆರಿಟಿ ನಾಯಕತ್ವದಲ್ಲಿ ಬ್ರಿಟಿಷ್ ವಿಜ್ಞಾನಿಗಳ ತಂಡವೊಂದು ಸಂಶೋಧನೆ ನಡೆಸಿ ಅದರ ಫಲಿತವನ್ನು ಲಾಂಸೆಟ್ ಇನ್‌ಫಿಕ್ಷಿಯಸ್ ಡಿಸೀಸ್ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಅದರಲ್ಲಿ ಅವರು ಇದೇ ರೀತಿಯ ನಿಯಂತ್ರಿಸಿದ ಗುಂಪೊಂದನ್ನು ಅಧ್ಯಯನ ಮಾಡಿದ್ದಾರೆ. ಅಲ್ಲಿಯೂ ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಅವರೆಲ್ಲಾ ವುಹಾನ್ ಪ್ರಾಂತ್ಯಕ್ಕೆ ಮರಳಿ ಬರುತ್ತಿದ್ದರು. ಅವರನ್ನೆಲ್ಲಾ ವಿಮಾನ ನಿಲ್ದಾಣದಲ್ಲೇ ಪರೀಕ್ಷಿಸಿ ಸೋಂಕಿತರೆಂದು ಕಂಡುಬಂದವರನ್ನು ಕ್ವಾರಂಟೈನ್ ಮಾಡಲಾಯಿತು ಮತ್ತು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು.ಅಂತಹ ಆರು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಜನರು ವುಹಾನಿಗೆ ಮರಳಿದ್ದರು. ಚೀನಾದಲ್ಲಿ ಲಭ್ಯವಿದ್ದ ವಯಸ್ಸನ್ನು ಆಧರಿಸಿ ವರ್ಗೀಕರಿಸಿದ್ದ ಸೋಂಕು ಮತ್ತು ಖಾಯಿಲೆಯ ಅಂಕಿಅಂಶವನ್ನು ಹಾಗೂ ವಿಮಾನದಲ್ಲಿ ಮರಳಿ ಬಂದ ಪ್ರಯಾಣಿಕರನ್ನು ಆಧರಿಸಿದ ಅಂಕಿಅಂಶವನ್ನು ಕ್ರೋಢೀಕರಿಸಿ ಮೊತ್ತಮೊದಲ ಬಾರಿಗೆ ಸಂಶೋಧಕರ ತಂಡವು ಐಎಫ್‌ಆರ್ ಲೆಕ್ಕವನ್ನು ಪ್ರಕಟಿಸಿತು. ಹಾಗೆಯೇ ಒಬ್ಬ ಸೋಂಕಿತ ಸಾಯುವುದಕ್ಕೆ ತಗುಲುವ ಸರಾಸರಿ ಸಮಯವನ್ನು ಕೂಡ ಲೆಕ್ಕ ಹಾಕಲಾಯಿತು. ಚೀನಾದ ಅಂಕಿಅಂಶವನ್ನು ಮತ್ತು ಉಳಿದ ದೇಶಗಳ ಅಂಕಿಅಂಶವನ್ನು ಒಟ್ಟುಮಾಡಿ ಇದನ್ನು ಲೆಕ್ಕ ಹಾಕಲಾಯಿತು. ಆ ಅವಧಿಯನ್ನು ಸುಮಾರು ೧೮ ದಿನಗಳು ಎಂದು ಅಂದಾಜು ಮಾಡಲಾಗಿದೆ. ಗೊಟಿಂಜನ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಸೆಬಾಸ್ಟಿಯನ್ ವಾಲ್‌ಮರ್ ಮತ್ತು ಕ್ರಿಶ್ಚಿಯನ್ ಬೋಮರ್ ಅವರು ರಾಬರ್ಟ್ ವೆರಿಟಿ ಮತ್ತು ಅವರು ತಂಡ ರೂಪಿಸಿದ ವಯಸ್ಸು ಆಧಾರಿತ ಐಎಫ್‌ಆರ್ ಲೆಕ್ಕಾಚಾರ ಹೆಚ್ಚು ವಿಶ್ವಾಸಾರ್ಹ ಎಂದು ಪ್ರತಿಪಾದಿಸಿದೆ. ಅದನ್ನು ಬಳಸಿಕೊಂಡು ವಿಭಿನ್ನ ಪರಿಸ್ಥಿತಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆಯನ್ನು ಅಂದಾಜು ಮಾಡಬಹುದೆಂದು ತಿಳಿಸಿದೆ. ಆದರೆ ಒಂದು ನಿರ್ದಿಷ್ಟ ದೇಶದ ಜನಸಂಖ್ಯೆಗೆ ತಕ್ಕಂತೆ ಒಂದಿಷ್ಟು ಮಾರ್ಪಾಡುಮಾಡಿಕೊಳ್ಳಬೇಕಾಗಬಹುದು ಎಂದು ತಿಳಿಸಿದೆ. ಅಷ್ಟೇ ಅಲ್ಲ ಹಾಗೆ ಲೆಕ್ಕ ಹಾಕುವುದಕ್ಕೆ ಒಂದು ಟೆಂಪ್ಲೆಂಟನ್ನು ಅವರು ತಯಾರಿಸಿದ್ದಾರೆ. ಈ ಅಧ್ಯಯನದಲ್ಲಿ ಸೋಂಕು ತಗುಲುವುದಕ್ಕೂ ಅನಂತರ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೂ ನಡುವೆ ಸರಾಸರಿ ನಾಲ್ಕು ದಿನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಗೊಟಿಂಜನ್ ವಿಶ್ವವಿದ್ವಾನಿಲಯದ ಸಂಶೋಧಕರು ವಿವಿಧ ದೇಶಗಳ ಐಎಫ್‌ಆರ್ ಲೆಕ್ಕ ಹಾಕುವುದಕ್ಕೆ ಸಂಯುಕ್ತ ರಾಷ್ಟ್ರಗಳ ಜನಸಂಖ್ಯೆಯ ಅಂಕಿ ಅಂಶವನ್ನು ಬಳಸಿಕೊಂಡಿದ್ದಾರೆ. ಹೀಗೆ ಲೆಕ್ಕ ಹಾಕಿದ ಐಎಫ್‌ಆರ್‌ನ್ನು ಬ್ರಿಟಿಷ್ ತಂಡದ ಅಧ್ಯಯನದಿಂದ ತಿಳಿಸಿರುವ ಐಎಫ್‌ಆರ್ ಜೊತೆಗೆ ಪ್ರತಿ ದೇಶದ ಜನಸಂಖ್ಯೆಯಲ್ಲಿ ಪ್ರತಿ ವಯೋಮಾನದವರ ಸಂಖ್ಯೆಯನ್ನು ವೈಟ್(ಅದರ ಪ್ರಾಮುಖ್ಯ) ಎಂದು ಪರಿಗಣಿಸಿ ದೇಶಗಳ ಒಟ್ಟು ಮರಣದರವನ್ನು ಲೆಕ್ಕ ಹಾಕಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಭಾರತವೂ ಸೇರಿದಂತೆ ೪೦ ತೀವ್ರವಾಗಿ ಸೋಂಕಿಗೆ ಒಳಗಾದ ದೇಶಗಳ ಐಎಫ್‌ಆರ್ ಅನ್ನು ಲೆಕ್ಕ ಮಾಡಲಾಗಿದೆ. ಅವರ ಅಧ್ಯಯನದ ಪ್ರಕಾರ ಹೆಚ್ಚಿನ ದೇಶಗಳಲ್ಲಿ ಬಹುಪಾಲು ಸೋಂಕುಗಳು ಪತ್ತೆಯಾಗದೇ ಹೋಗುತ್ತದೆ. ಒಟ್ಟಾರೆ ವರದಿಯಾಗಿರುವ ಸೋಂಕಿನ ದರ ವಾಸ್ತವದಲ್ಲಿ ಆಗಿರುವ ಸೋಂಕಿಗಿಂತ ಶೇಕಡ ಹತ್ತಕ್ಕಿಂತ ಕಡಿಮೆ ಇರುತ್ತದೆ.

ಒಟ್ಟಾರೆಯಾಗಿ ಚೀನಾದಲ್ಲಿ ಬ್ರಿಟಿಷ್ ತಂಡದ ಪ್ರಕಾರ ಐಎಫ್‌ಆರ್ ಶೇಕಡ ೦.೬೬. ಚೀನಾದ ವಯಸ್ತು ಆಧಾರಿತ ಅಂಕಿಅಂಶವನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಗಿದರೆ ಭಾರತದ ಒಟ್ಟಾರೆ ಐಎಫ್‌ಆರ್ ಅಂದಾಜು ಶೇಕಡ ೦.೪೧. ಅದಕ್ಕೆ ಅನುಗುಣವಾಗಿ ಜರ್ಮನಿಯಲ್ಲಿ ಅದು ಶೇಕಡ ೧.೩, ಇರಾನಿನಲ್ಲಿ ಶೇಕಡ ೦.೪೩, ಇಟಲಿಯಲ್ಲಿ ೧.೩೮, ಜಪಾನಿನಲ್ಲಿ ೧.೬, ಪಾಕಿಸ್ತಾನದಲ್ಲಿ ೦.೨೯, ಸ್ಪೈನಿನಲ್ಲಿ ೧.೨೧, ಸೌತ್ ಕೊರಿಯಾದಲ್ಲಿನ ದರ ೦.೯೬, ಇಂಗ್ಲೆಂಡ್ ೧.೦೯, ಅಮೇರಿಕಾಕ್ಕೆ ೦.೯೬ ಹೀಗೆ ಮುಂದುವರಿಯುತ್ತದೆ. ದೇಶಗಳ ನಡುವೆ ಇರುವ ಈ ವ್ಯತ್ಯಾಸಕ್ಕೆ ದೇಶಗಳ ಜನಸಂಖ್ಯಾ ರಚನೆಯಲ್ಲಿರುವ ಭಿನ್ನತೆಯೇ ಬಹುಮಟ್ಟಿಗೆ ಕಾರಣ.

ಇದನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕುವುದಾದರೆ ಏಪ್ರಿಲ್ ೧೯ರಂದು ಭಾರತದಲ್ಲಿ ಸತ್ತವರ ಸಂಖ್ಯೆ ೫೦೭. ಎರಡು ವಾರ ಮೊದಲು ಅಂದರೆ ಏಪ್ರಿಲ್ ೫ರಂದು ಸೋಂಕಿತರ ಸಂಖ್ಯೆ ೧,೨೩,೬೫೯ ಆಗಬೇಕು. ಆದರೆ ಅಂದಿನ ಅಧಿಕೃತ ಸಂಖ್ಯೆ ೩.೫೭೭. ಅಂದರೆ ವಾಸ್ತವ ಸೋಂಕಿನ ಸಂಖ್ಯೆಯ ಶೇಕಡ ೨.೯ರಷ್ಟು ಮಾತ್ರ ವರದಿಯಾಗಿದೆ. ಸೋಂಕು ಪತ್ತೆಹಚ್ಚುವ ದರ ಭಾರತದಲ್ಲಿ ಕೇವಲ ಶೇಕಡ ೨.೯ ಮಾತ್ರ. ಅಂದರೆ ಇನ್ನೂ ವ್ಯಾಪಕವಾಗಿ ಪರೀಕ್ಷೆ ನಡೆಯಬೇಕು. ಸೋಂಕು ಪತ್ತೆಹೆಚ್ಚುವ ದರ ಬದಲಾಗುತ್ತಿರುತ್ತದೆ. ಅದು ಸೋಂಕಿಗೆ ಪ್ರತಿ ದೇಶವೂ ಪ್ರತಿಕ್ರಿಯಿಸುವ ಕ್ರಮವನ್ನು ಆಧರಿಸಿರುತ್ತದೆ. ಸೋಂಕು ಹೆಚ್ಚುವ ದರಕ್ಕೆ ಅನುಗುಣವಾಗಿ ಪರೀಕ್ಷಿಸುವ ವ್ಯವಸ್ಥೆ ಬೆಳೆಯದೇ ಹೋದರೆ ಪತ್ತೆಹಚ್ಚುವ ದರ ಕಡಿಮೆಯಾಗುತ್ತದೆ. ಪರೀಕ್ಷೆಯ ವ್ಯವಸ್ಥೆ ಸುಧಾರಿಸಿದರೆ ಅದು ಕಡಿಮೆಯಾಗಬಹುದು. ಅಷ್ಟೇ ಅಲ್ಲ ಸೋಂಕು ಉತ್ತುಂಗವನ್ನು ಮುಟ್ಟಿ ಇಳಿಯುವುದಕ್ಕೆ ಪ್ರಾರಂಭಿಸಿದಾಗಲೂ ಪತ್ತೆ ದರ ಕಮ್ಮಿಯಾಗುತ್ತದೆ. ಏಪ್ರಿಲಿನಲ್ಲಿ ಶೇಕಡ ೧.೬೮ ಇದ್ದದ್ದು ಈಗ ೨.೯ಕ್ಕೆ ಹೆಚ್ಚಿದೆ ಅಂದರೆ ಟೆಸ್ಟಿಂಗ್ ಹೆಚ್ಚಾಗಿದೆ, ಆದರೆ ಅದು ತುಂಬಾ ಕಡಿಮೆ, ಅದು ಇನ್ನೂ ಹೆಚ್ಚಾಗಬೇಕು.

ಕೃಪೆ: ಫ್ಂಟ್ ಲೈನ್, ಮೇ ೮, ೨೦೨೯

ಅನುವಾದ: ಟಿ. ಎಸ್. ವೇಣುಗೋಪಾಲ್

ಪ್ರತಿಕ್ರಿಯಿಸಿ