ಇಂದಿಗೂ ಕರೆಂಟು : ಪಂಜೆ ಮಂಗೇಶರಾಯರು ಬರೆದ ಲೇಖನ “ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು”

ಭಾಷೆಯೊಂದರ ಬೌದ್ಧಿಕ ಮತ್ತು ಸಾಮಾಜಿಕ ವಿಕಾಸವನ್ನು ಅರಿಯಲು ನಮ್ಮ ಪೂರ್ವಸೂರಿಗಳ ಕೃತಿಗಳನ್ನು ಅಧ್ಯಯನ ಮಾಡುವುದು ಅತ್ಯಂತ ಪರಿಣಾಮಕಾರಿಯಾದ ವಿಧಾನ. ಗತದ, ತಾವು ಬದುಕಿರುವ ವರ್ತಮಾನ ಕಾಲದ ಹಾಗೂ ಭಾಷೆ-ನಾಡಿನ ಭವಿಷ್ಯದ ಕುರಿತು ಈ ಲೇಖಕರು ಹೇಗೆ ಯೋಚಿಸಿದರೆಂದು ಇದರಿಂದ ನಮಗೆ ತಿಳಿಯಬಲ್ಲುದು. ಅವರ ಚಿಂತನಾಕ್ರಮದ ಹಿಂದೆ ಯಾವ ಸಂಗತಿಗಳು ಪ್ರಭಾವ ಬೀರಿದವು ಮತ್ತು ವೈಚಾರಿಕ ಪರಂಪರೆಯನ್ನು ಕಟ್ಟುವಲ್ಲಿ ಅವು ಎಂತಹ ಪಾತ್ರವನ್ನು ವಹಿಸಿದವು ಎಂಬುದನ್ನು ಸಹ ಇವು ನಮಗೆ ತಿಳಿಸಿಕೊಡುತ್ತವೆ.

ಇಂಥ ಓದು ಮತ್ತು ಅಧ್ಯಯನಗಳು ಇತ್ಯರ್ಥಗೊಳ್ಳದ ವಿಷಯಗಳನ್ನು ಮತ್ತೆ ಚರ್ಚೆಯ ಮುನ್ನೆಲೆಗೆ ತರಲು, ಪೂರ್ಣಗೊಂಡಿವೆ ಎಂಬ ಸಂಗತಿಗಳನ್ನು ಹೊಸದೊಂದು ಆಯಾಮದಲ್ಲಿ ನೋಡಲು ಹೊಸ ಅವಕಾಶವನ್ನು ಒದಗಿಸಬಲ್ಲವು. ಇಂತಹ ಪ್ರಕ್ರಿಯೆಗಳ ಮೂಲಕವೇ ನಾವು ಪೂರ್ವಗ್ರಹಗಳಿಂದ ಮುಕ್ತರಾಗಿ, ನಿಜವಾದ ಅರ್ಥದಲ್ಲಿ ಒಂದು ಉನ್ನತ ಬೌದ್ಧಿಕ ಪರಂಪರೆಯ ವಾರಸುದಾರರಾಗಲು ಸಾಧ್ಯ. ’ಗುಣಿ’ ಅರ್ಥದಲ್ಲಿ ಓದು ಮನುಷ್ಯರನ್ನು ಪ್ರಜಾಸತ್ತಾತ್ಮಕಗೊಳಿಸುವ ಕ್ರಿಯೆ. ಸಂಸ್ಕೃತಿಗೆ ಸಂಬಂಧಿಸಿದಂತೆ ಉಂಟಾಗುವ ಮಾನಸಿಕ ದೂರ, ಸಾಮಾಜಿಕ ಕಂದರ, ಬೌದ್ಧಿಕ ಕೀಳರಿಮೆಗಳು ಕರಗಿ ಒಂದು ಸಮಾಜದಲ್ಲಿ ಎಲ್ಲರೂ ಮುಖ್ಯ ಎಂಬ ಅರಿವು ಪ್ರಜಾಸತ್ತೆಯ ನಿಜವಾದ ಗುಣಗಳಾದರೆ ಪರಂಪರೆಯ ಓದು ಆ ಬಗೆಯ ಅವಕಾಶವನ್ನು ಒದಗಿಸಬಲ್ಲದು.

ಇಂತಹ ಓದಿನ ಸರಣಿಯೊಂದನ್ನು ಋತುಮಾನ ಆರಂಭಿಸುತ್ತಿದೆ. ಹಳೆಯ ಮರೆತುಹೋದ ಆದರೆ ಇಂದಿನ ತಲೆಮಾರು ಅಗತ್ಯವಾಗಿ ಓದಬೇಕಾದ ಬರಹಗಳು ಈ ಸರಣಿಯಲ್ಲಿ ಪ್ರಕಟವಾಗುತ್ತವೆ . ಪ್ರತಿ ಬರಹವನ್ನು ಸೂಚಿಸಲು ನಾವು ವಿವಿಧ ಸಮಕಾಲೀನ ಲೇಖಕರನ್ನು ಕೇಳಿಕೊಳ್ಳಲಿದ್ದೇವೆ . ಈ ಸರಣಿಯ ಮೊದಲ ಬರಹವನ್ನು ಸೂಚಿಸಿದ್ದು ಕೇಶವ ಮಳಗಿಯವರು.

ಕಬ್ಬಿಣದ ಕಡಲೆಯಂಥ ವಿಷಯಗಳನ್ನು ತಮ್ಮ ವಿನೋದಿಂದ ಲೇಪಿತವಾದ ವಿದ್ವತ್ತಿನ ಮೂಲಕ ಪಸರಿಸಿದ, ಸಮಾಜ ಮತ್ತು ವ್ಯಕ್ತಿಗಳ ಬಗ್ಗೆ ಸದಾ ತುಡಿವ ಅಂತಃಕರಣಗಳನ್ನು ಹೊಂದಿದ್ದ ಪಂಜೆ ಮಂಗೇಶರಾಯರಿಗಿಂತ ಸೂಕ್ತ ಲೇಖಕ ಇನ್ನೊಬ್ಬರಿರಲಾರರು. ಆಧುನಿಕ ಕನ್ನಡ ಗದ್ಯಕ್ಕೆ ಚಿನ್ನದ ಮೆರಗನ್ನು ತಂದ ಪಂಜೆಯವರು ಕವಿ ಮುದ್ದಣ್ಣನ ಕುರಿತಾಗಿ ಬರೆದ ಲೇಖನವೊಂದರಿಂದ ಈ ಸರಣಿ ಆರಂಭಗೊಳ್ಳುತ್ತಿರುವುದು ಚೇತೋಹಾರಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೧೮೯೨ನೆಯ ಇಸವಿಯ ತನಕ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ ಹೆಸರು ಮೇಲಕ್ಕೆ ಬಂದಿರಲಿಲ್ಲ. ಅಂದಿನವರ ಅಭಿಪ್ರಾಯದಲ್ಲಿ ಕನ್ನಡ ವಾಙ್ಮಯವು ಸೋಮೇಶ್ವರ ಶತಕ, ಕನ್ನಡ ಭಾರತ, ತೊರವೆಯ ರಾಮಾಯಣ, ಜೈಮಿನಿ ಭಾರತ, ಚನ್ನಬಸವ ಪುರಾಣ ಎಂಬೀ ಪಂಚಕಾವ್ಯಗಳಲ್ಲಿ ಕೊನೆಗೊಂಡು ಸಾಮಾನ್ಯರ ಕೈಗೆ ಸಿಲುಕದ “ಗೂಡಾದ್ಗೂಢರಹಸ್ಯ” ಎಂಬುದಾಗಿ ಭಾವಿಸಲ್ಪಟ್ಟಿತ್ತು. ಬಿ.ಎ. ವರೆಗೆ ಕನ್ನಡ ಓದಿದ ಕೆಲವರ ಹೊರತು ಉಳಿದವರು ಪಂಪರಾಮಾಯಣ ಎಂದರೆ, ಪಂಪಾಕ್ಷೇತ್ರದ ರಾಮ ಕಥೆಯಾಗಿರಬೇಕೆ೦ದು ಊಹಿಸಿದ್ದರು. ನಮ್ಮ ಜಿಲ್ಲೆಯೊಳಗಣ ಕನ್ನಡ ಪಾಂಡಿತ್ಯವು ಗೆರೆಸೊಪ್ಪೆ ಶಾಂತಯ್ಯ, ಪಾರ್ತಿ ಸುಬ್ಬಯ್ಯ ಎಂಬುವರ ಯಕ್ಷಗಾನ ಪ್ರಸಂಗಗಳ ಅರ್ಥಾನುವಾದಗಳಲ್ಲಿಯೂ ವಿಸ್ತರ ವಿವರಣೆಗಳಲ್ಲಿಯೂ ವಿಜೃಂಭಿಸುತ್ತಿತ್ತು. ಕವಿತಾ ಪ್ರೌಢಿಮೆಯು “ಮಧುರರಸ ಝರಿಯ” ತರಂಗದಲ್ಲಿ ತೇಲಾಡದೆ ಪ್ರಾಸ ವೈಚಿತ್ರ್ಯದ ರಾಟೆಯಲ್ಲಿ ತಲೆತಿರುಗುವಂತೆ ಉರುಳಿಸುತ್ತಿತ್ತು. ಮೈಸೂರಿನ ಬಿ. ವೆಂಕಟಾಚಾರ್ಯರ ಒಂದೆರಡು ಕಾದಂಬರಿಗಳು ಉಡುಪಿಯಲ್ಲಿ ನುಸುಳಿಕೊ೦ಡಿದ್ದರೂ, ಅವು “ಅತಿ ಭಕ್ತಿಯಿ೦ ಬಿಡದೋದಿ ಕೇಳ್ವ ಸಜ್ಜನರಿಷ್ಟಾರ್ಥಮ೦ ಕುಡುವ ಪುಣ್ಯಕಥೆಗಳಂತೆ” ಜನಪ್ರೀತವಾಗಿರಲಿಲ್ಲ. “ಕರ್ನಾಟಕದ ರಾಗರಾಗಿಣಿಗಳ ಅವಸ್ಥೆಯಂ ಪೇಳ್ವದೇಂ?” “ಭಿನ್ನಸಂಧಿಯಿಂ ಪಾಡಲೆಂತು ಅ೦ಗಮಿಂತು ಭಿನ್ನ ಭಿನ್ನಮಾದುದು”. ಹೀಗಾದುದರಿ೦ದ ನಮ್ಮ ಜಿಲ್ಲೆಯೊಳಗಿನ ನಾಟ್ಯರಂಗವು ಬಸವಪ್ಪ ಶಾಸ್ತ್ರಿ ಕೃತ ಕನ್ನಡ ಶಾಕು೦ತಳ ನಾಟಕಕ್ಕೆ ಎಡೆಗೊಡದೆ, ಅಣ್ಣಾಜಿ ಕಿರ್ಲೋಸ್ಕರರ ಮರಾಟಿ ನಾಟಕಗಳಿಂದ ಆಕ್ರಮಿಸಲ್ಪಟ್ಟಿತ್ತು. ಕನ್ನಡದ ಮೇಲಿನ ಮಮತೆಯಿ೦ದ ಮರಾಟಿ ನಾಟಕಗಳನ್ನು ಪರಿವರ್ತಿಸಿ ಕರ್ನಾಟಕ ಭಾಷಾ ಸೇವೆಯನ್ನು ಕೈಲಾದಷ್ಟು ಮಾಡುತ್ತಿದ್ದ ಶ್ರೀಯುತ ಕುಬೇರ ಪಾಂಡುರಂಗರಾಯರ ಉದ್ಯಮದ ಬೆಳಕೊಂದು ಶ್ರೀಯುತ ಮಳಲಿ ಸುಬ್ಬರಾಯರ ಸಂಗೀತ ಕೃಷ್ಣಜನ್ಮಾದಿ ಮರಾಟಿ ನಾಟಕಗಳ ಸು೦ಟುರುಗಾಳಿಯಲ್ಲಿ ಫುರುಫುರಿಸುತ್ತಿತ್ತು. ಕನ್ನಡ ವಾರ್ತಾ ಪತ್ರಗಳಲ್ಲಿ “ಸುದರ್ಶನ”ವೆಂಬ ಹೆಸರುಳ್ಳ ಉಡುಪಿಯ ಒ೦ದು ಮಾಸಪತ್ರಿಕೆಯು ಮೂರು ತಿಂಗಳುಗಳಿಗೆ ಒಂದು ಸಲ ಅರೆಜೀವದಿಂದ ಹೊರಡುತ್ತಿತ್ತು.

ನಮ್ಮ ಜಿಲ್ಲೆಯಲ್ಲಿ  ಕನ್ನಡದ ಪರಿಸಿತಿಯು ಹೀಗಿರಲು, ೧೮೯೩ ನೆಯ ಇಸವಿಯಲ್ಲಿ ನಾನು ಬ೦ಟವಾಳದಲ್ಲಿದ್ದಾಗ ನನ್ನ ಸ್ನೇಹಿತನ  ಕೈಯಲ್ಲಿದ್ದ ಒಂದು ಪುಸ್ತಕವು ನನ್ನ ಕಣ್ಣಿಗೆ ಬಿತ್ತು. ನಾನು ಅದನ್ನು ಕೈಯಲ್ಲಿ ಹಿಡಿದು ನೋಡಿದೆನು. ಅದು ಅಚ್ಚಾದದ್ದು-ಸುದರ್ಶನ ಮಾಸಪತ್ರಿಕೆಯು ಹೊರಡುವ ಪ್ರಭಾಕರ ಮುದ್ರಾ ಯಂತ್ರದಲ್ಲಿ. ಅದರ ಮುದ್ರಣ ಕಾರ್ಯವು ಆ ಕಾಲಕ್ಕೆ ಪರಿಷ್ಕಾರವಾಗಿಯೇ ಇತ್ತು. ಪುಸ್ತಕದ ಹೆಸರು ಕುಮಾರ ವಿಜಯ ಪ್ರಸಂಗ; ರಚಿತವಾದದ್ದು- ನಂದಳಿಕೆ ಲಕ್ಷ್ಮೀನಾರಾಯಣಪ್ಪನವರಿಂದ. ನಾನು ಪುಸ್ತಕವನ್ನು ತೆರೆದು ನೋಡಲು,

“ಆಳಿಯಲರಂ ಗಿಳಿ ಪಣ್ಣಂ
ತಳಿರಂ ಪಿಕನೊಲ್ವತೆರದಿ ಕುಜದೊಳ್‌ ಕೃತಿಯೊಳ್‌!
ವಿಳಸಿತ….. “

ಎ೦ಬೀ ಪದ್ಯವಿತ್ತು . ಪುಸ್ತಕದ ಪ್ರಥಮ ಪುಟದಲ್ಲಿ ಒಂದು ಕ೦ದ ಪದ್ಯವನ್ನು  ಹೀಗೆ ಪ್ರತ್ಯೇಕವಾಗಿ ಎತ್ತಿಟ್ಟಿದ್ದು ನನಗೆ ನೂತನವಾಗಿ ತೋರಿತು. ಅದರಲ್ಲಿಯೂ ಆ ವರ್ಷದ ನನ್ನ ಪಠ್ಯಪುಸ್ತಕದಲ್ಲಿದ್ದ ಆ ಕಂದ ಪದ್ಯವೇ ಈ ಮುಖಪತ್ರದಲ್ಲಿ ಎದ್ದುನಿಂತದ್ದರಿಂದ, ನಾನು ಪುಸ್ತಕದ ಮುಖಪತ್ರವನ್ನು ಮತ್ತೂ ಮತ್ತೂ ಓದಿದೆನು. ಯಾವಾಗ ಷಡಕ್ಷರಿ ಮಹಾಕವಿಯ ಶಬರಶ೦ಕರ ವಿಳಾಸದೊಳಗಿನ ಆ ಕಂದ ಪದ್ಯದ ಜತೆಯಲ್ಲಿ ನನ್ನ ನಾಲಗೆಯಿಂದ ಕುಮಾರ ವಿಜಯ ಪ್ರಸಂಗಕಾರರಾದ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ ದೊಡ್ಡ ಹೆಸರು ಹೊರಹೊಮ್ಮಿತೋ ಆಗಲೇ ನಮ್ಮ ಜಿಲ್ಲೆಯಲ್ಲಿ ಇರತಕ್ಕ ಕನ್ನಡ  ಕವಿಗಳ ವಿಷಯವಾಗಿ ನನ್ನಲ್ಲಿದ್ದ ಕಣ್ಣಿನ ಮಸುಕು ಕಳಚಿಹೋಯಿತು; ಕರ್ನಾಟಕ ವಿಚೂತನವನ್ನು ದಾಟಿ ಷಡಕ್ಷರಿಯ ಗಿರಿದುರ್ಗವನ್ನು ಮುಟ್ಟಿದ ಮಹನೀಯರು ನಮ್ಮ ಜಿಲ್ಲೆಯಲ್ಲಿ ಇದಾರೆಂಬ ಬೆಳಕು ತೋರಿತು; ಅದರೊಂದಿಗೆ ಕುಮಾರ ವಿಜಯವನ್ನು ಓದಿ ಮುಗಿಸಬೇಕೊಬ ಲವಲವಿಕೆಯು ಒತ್ತೊತ್ತಿ ಬಂದಿತು. ನಾನು ಆ ಪುಸ್ತಕವನ್ನು ಓದಿ ಓದಿ ಮರುಳಾದೆನು; ಅದರೊಳಗಿನ ಹಾಡುಗಳನ್ನು ಹಾಡಿ ಹಾಡಿ ಉರುಹಾಕಿದೆನು; ಅದರೂಳಗಿನ ನಿರರ್ಗಳವಾದ ಯಮಕಗಳನ್ನೂ, ಪ್ರಾಸಗಳನ್ನು ಹೆಕ್ಕಿ ಹೆಕ್ಕಿ ತಲೆಯಲ್ಲಿ ತೂರಿಕೊಂಡೆನು; ಕಳವೆಂದು ತಿಳಿಯದೆ ಪರಪದಾರ್ಥದ ಬಲದಿಂದ ತುಂಡು ಪದಗಳನ್ನು ಕಟ್ಟಿ ಅವನ್ನು ನಾನೇ ಹಾಡಿ, ಅವಕ್ಕೆ ನಾನೇ ಹಿಗ್ಗಿಕೊಂಡೆನು. ನಂದಳಿಕೆ ಲಕ್ಷ್ಮೀನಾರಣಪ್ಪನವರು ಕನ್ನಡ ದೇವಿಯ ದೇವಸ್ಥಾನದ ಹೊರಸುತ್ತಿನಲ್ಲಿಯೇ ನಿಂತುಕೊಂಡು ಯಕ್ಷಗಾನ ಸೇವೆಯನ್ನು ಮಾಡುವ ಭಾಗವತರಂತೆ ಇರದೆ, ಆ ಸರಸ್ವತಿಯ ಸಾನ್ನಿಧ್ಯವನ್ನು ಸದ್ಯದಲ್ಲಿಯೇ ಸೇರತಕ್ಕ ಶುದ್ಧೋಪಾಸಕರೆ೦ದು ನಾನು ಭಾವಿಸುತ್ತ ಬಂದೆನು. ಕುಮಾರ ವಿಜಯ ಬಿಟ್ಟರೆ ಪ್ರಸ೦ಗವಿಲ್ಲ. ನಂದಳಿಕೆಯವರನ್ನು ಬಿಟ್ಟರೆ ಕವಿಯಿಲ್ಲ- ಹೀಗೆ ಬಹುಕಾಲದ ವರೆಗೆ ನನ್ನ ಅಭಿಪ್ರಾಯವಾಯಿತು. ಸಾಲದುದಕ್ಕೆ ಈ ಅಭಿಪ್ರಾಯವನ್ನೇ ನಾನು ೧೮೯೫ರಲ್ಲಿ ಮೆ||ಸಿ.ಡಿ.ಕೆ. ಪಿ೦ತೋ, ಬಿ.ಎ. ಬಿ.ಎಲ್‌ ಎಂಬವರ ಅಧ್ಯಕ್ಷತೆಯಲ್ಲಿ ಜರುಗಿದ ಒಂದು ಸಭೆಯಲ್ಲಿ ಓದಿದ ಉಪನ್ಯಾಸದಲ್ಲಿ ತಂದು ಹಾಕಿ, ನಂದಳಿಕೆಯವರ ಸಭೆಯಲ್ಲಿ ಬೆಳೆಯ ಸಿರಿಯನ್ನು ಮೊಳೆಯಲ್ಲಿಯೇ ತೋರಿಸತಕ್ಕ ಕುಮಾರ ವಿಜಯ ಗ್ರಂಥವನ್ನು ಪ್ರಶಂಸಿಸಿದೆನು.

“ಕುಮಾರ ವಿಜಯವು” ಯಕ್ಷಗಾನ ಪ್ರಸಂಗವಾಗಿದ್ದರೂ ನನ್ನ ದೃಷ್ಟಿಯಲ್ಲಿ ಅದಕ್ಕೆ ಇರುವಷ್ಟು ಮಹತ್ವವು ನಂದಳಿಕೆಯವರ ಇತರ ಗ್ರಂಥಗಳಿಗೆ ಇರುವುದಿಲ್ಲ. ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ, ರಾಮಾಶ್ಚಮೇಧಗಳು ಏಕ ಕವಿಕೃತವೊ ಅಲ್ಲವೊ ಎಂಬುದು ವಾದಗ್ರಸ್ತ ಸಂಗತಿಯಾಗಿದೆ. ಆದರೆ ಕುಮಾರ ವಿಜಯದ ಮೇಲೆ ಈ ಅನುಮಾನದ ನೆರಳೂ ಇಲ್ಲ. ಕವಿಯು ತನ್ನ ಹೆಸರನ್ನು ಮರೆಸಿಕೊ೦ಡು ರಚಿಸಿದ ಆ ಗ್ರಂಥಗಳು “ಶಿವನ ಜಟಾಜೂಟದಿಂ ಕೆಳಗೆ ಜಗುಳ್ದು” ಗುಪ್ತಗಾಮಿನಿಯಾಗಿ ಹರಿಯುವ “ಗಂಗಾ ಸಲಿಲ ಬಿ೦ದುಗಳಂತೆ ಗುಪ್ತಚಾರಿತ್ರ ಗಂಧಮ೦ ತಾಳ್ದಿದುವು”.  ಈ ಗುಪ್ತಚಾರಿತ್ರ ಗ್ರಂಥವನ್ನು ಹೊರತ೦ದು ಗಮಗಮಿಸುವಂತೆ ಚೆಲ್ಲುವುದಕ್ಕೆ ಕುಮಾರ ವಿಜಯವೇ ಅವರ ಗ್ರಂಥಗಳಲ್ಲಿ ಒತ್ತಾಸೆ ಮಾಡುತ್ತದೆ. ಆ ಗ್ರಂಥಾದಿಯಲ್ಲಿಯ ಶ್ರೀ ಕೃಷ್ಣ ಪರವಾದ ನಾಂದೀ ಶ್ಲೋಕವೂ ಅದರ ಅಂತ್ಯದಲ್ಲಿಯ ಉಡುಪಿ ಚ೦ದ್ರ ಮೌಳೀಶ್ವರ ಮಂಗಲ ಸ್ತೋತ್ರವೂ ಲಕ್ಷ್ಮೀನಾರಾಯಣಪ್ಪನವರು ಉಡುಪಿಯ ಸ್ಮಾರ್ತಕವಿ ಎ೦ಬುದಕ್ಕೆ ಸಾಕ್ಷಿಗಳಾಗಿವೆ. ಅವರು ತಮ್ಮ ಹುಟ್ಟೂರಾದ ನಂದಳಿಕೆಯನ್ನು ಬಿಟ್ಟು ಯಾವಾಗ ಉಡುಪಿಗೆ ಒಕ್ಕಲು ಹೋದರೆಂಬುದು ಅಲ್ಲಿಯ ಜನರಿಗೆ ಗೊತ್ತಿಲ್ಲ. ದಕ್ಷಿಣ ಕನ್ನಡದ ಇತರ ಗ್ರಾಮಗಳಂತೆ ನಂದಳಿಕೆಯು ಬಹು ಸುಂದರವಾದ ಹಳ್ಳಿಯಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಏರುತಗ್ಗುಗಳು, ಇವುಗಳ ನಡುವೆ ಹೊಲಗದ್ದೆಗಳು, ಅವುಗಳ ಪಕ್ಕದಲ್ಲಿ ಮಳೆಗಾಲದಲ್ಲಿ ನೀರುತುಂಬಿ ಹರಿಯುವ ತೋಡುಗಳು, ಗದ್ದೆಗಳ ತೆವರಿಗಳಲ್ಲಿ ತಲೆತೂಗುವ ತೆಂಗುಗಳು, ತೆಂಗಿನ ಗರಿಯ ಮಾಡುಗಳ ಹುಲ್ಲುಚಾವಣಿಯಿ೦ದ ಹೊಳೆಯುವ ಗುಡಿಕಟ್ಟುಗಳು – ಇವುಗಳಿಂದ ನಂದಳಿಕೆಯು ಅತ್ಯಂತ ರಮಣೀಯವಾಗಿದೆ. ೧೯೧೫ ನೆಯ ಇಸವಿಯಲ್ಲಿ ನಾನು ನಂದಳಿಕೆಗೆ ಹೋಗಿದ್ದಾಗ ಅಲ್ಲಿಯ ಗ್ರಾಮ ದೇವಸ್ಥಾನದ ಪಡುಗಡೆಯಲ್ಲಿ ಈಗ ಪಾಳು ಬಿದ್ದಿರುವ ಒ೦ದು ಮನೆಯಲ್ಲಿ ಅವರು ಜನಿಸಿದರೆ೦ತಲೂ, ರಾಮ ಹೆಗ್ಗಡೆಯೆಂಬುವರು ನಡೆಸುತ್ತಿದ್ದ ಹಳ್ಳಿಯ ಶಾಲೆಯಲ್ಲಿ ಅವರಿಗೆ ಓನಾಮವಾಯಿತೆ೦ತಲೂ ನನಗೆ ತಿಳಿದು ಬಂದಿತು. ನಂದಳಿಕೆಯವರು ಯಾವ ಜಾತಿಯವರೆಂದು ನಾನು ಹೇಳುವ ಹಾಗಿಲ್ಲ. ಖುಷಿಯ ಕುಲವನ್ನೂ, ನದಿಯ ಮೂಲವನ್ನೂ ಹುಡುಕುವುದು ಸರಿಯಲ್ಲವೆನ್ನುತ್ತಾರೆ; ಖುಷಿಯ ಕುಲದಂತೆ ಕವಿಯ ಜಾತಿಯನ್ನು- ಇಂದಿನ ಬ್ರಾಹ್ಮಣ, ಬ್ರಾಹ್ಮಣೇತರ ಎಂಬ ತರ್ಕ ತಿಕ್ಕಾಟಗಳ ಕಾಲದಲ್ಲಿ – ಚರ್ಚಾಸ್ಪದವಾಗಿ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ನಂದಳಿಕೆಯ ಲಕ್ಷ್ಮೀನಾರಾಯಣಪ್ಪನವರು ದಕ್ಷಿಣ ಕನ್ನಡ ಜಿಲ್ಲೆಯವರು; ಮೂಗುತಿಯ ಮುತ್ತು ಎಲ್ಲಿ ಹುಟ್ಟಿದರೇನು? ಎಲ್ಲಿ ಬೆಳೆದರೇನು? ಅದು ಕನ್ನಡದ ಮೈಕಾಂತಿಯನ್ನೇ ಏರಿಸಿಬಿಟ್ಟಿತೆ೦ದು ಹೇಳಿದರೆ ಸಾಲದೆ?

ನಾರಾಯಣಪ್ಪನವರು ನಂದಳಿಕೆಯ ಹಳ್ಳಿಯ ಶಾಲೆಯಲ್ಲಿ ಐದಾರು ವರ್ಷಗಳವರೆಗೆ ಓದಿರಬಹುದಾದರೂ, ಅವರ ಪಾಂಡಿತ್ಯಕ್ಕೆ ಆ ವಿದ್ಯಾಭ್ಯಾಸವು ಕಾರಣವಾಗಿರಲಿಕ್ಕಿಲ್ಲ. ಹಳ್ಳಿಯ ಶಾಲೆಯು ಅವರಿಗೆ ಅಕ್ಷರಾಭ್ಯಾಸವನ್ನು ಮಾಡಿಸಿರಬಹುದು. ಆದರೆ ಅಂಗೈ ಅಗಲದಷ್ಟು ಇರುವ ಕೊಠಡಿಯೊಳಗೆ ಮಕ್ಕಳ ಚಟುವಟಿಕೆಯನ್ನು ಸೆರೆಹಾಕಿ, ಹೆಸರು ಹೇಳಿದರೆ ಓಕರಿಕೆಯಾಗುವ ತುಂಡು ಪಾಠಗಳ ಗುಟುಕುಗಳನ್ನು ಅವರ ಬಾಯಿಗೆ ಕೊಟ್ಟು, ಅವರನ್ನು ಹಾರಬಿಡದೆ ಪರಾವಲಂಬನದಿಂದ ಜೀವಿಸುವ ಹಾಗೆ ಮಾಡುವಂಥ ಹಳ್ಳಿ ಶಾಲೆಗಳ ಆ ಏರ್ಪಾಡು ಜನ್ಮದ ಧ್ಯೇಯವನ್ನು ಬೇರೊಂದಾಗಿ ಮಾಡಿ, ಜ್ಞಾನಾರ್ಜನೆಯನ್ನು ಸ್ಪರ್ಧೆಯಿಂದ ಕಲಂಕಿಸಿ, ನಮ್ಮ ಮನೋಭಾವನೆಗಳನ್ನು ಅಸ್ವಾಭಾವಿಕವಾದ ಕಾಲುವೆಗಳಲ್ಲಿ ಹರಿಯುವಂತೆ ಮಾಡಿ, ಜನ ಜೀವನದಿಂದ ಫಲವತ್ತಾಗತಕ್ಕ ವಾಙ್ಮಯ ಪ್ರದೇಶವನ್ನು ಪಾಳುಬೀಳುವಂತೆ ಮಾಡುವುದರಿಂದ, ಈ ಹಳ್ಳಿಯ ಶಾಲೆಯ ವಿದ್ಯಾಭ್ಯಾಸದಿಂದ ನಾರಾಯಣಪ್ಪನವರು ದೊಡ್ಡ ಕವಿಯಾದರೆಂದು ಯಾರಾದರೂ ಹೇಳಿದರೆ ನಾನು ಒಪ್ಪಲಾರೆನು. ಅವರ ಶಿಕ್ಷಣವು ಈಗಲೂ ನಮ್ಮ ಹಳ್ಳಿಗಳಲ್ಲಿ ವಾಡಿಕೆಯಾಗಿರುವ ಹಳೆಯ ‘ಕಿಂಡರ್‌ ಗಾರ್ಟನ್‌’ ಕ್ರಮವನ್ನು ಅನುಸರಿಸಿತ್ತು. ಈ ಕ್ರಮದಲ್ಲಿ ಇಡೀ ಗ್ರಾಮವೇ ಪಾಠಶಾಲೆ, ಹಳ್ಳಿಯವರೆಲ್ಲರೂ ವಿದ್ಯಾರ್ಥಿಗಳು, ಭಗವ೦ತನ ಸಾನ್ನಿಧ್ಯ ಪ್ರಾಪ್ತಿಯೇ ಧ್ಯೇಯವು. ಆ ಧ್ಯೇಯಕ್ಕೆ ಹೊಂದಿಕೊಂಡು ದೇವಸ್ಥಾನದಲ್ಲಿ ಪುರಾಣಶ್ರವಣ; ಆ ಪುರಾಣ ಪುರುಷರ ಪರವಾಗಿ ಕಟ್ಟಿದ್ದ ಯಕ್ಷಗಾನ ಪ್ರಸಂಗ; ಪ್ರಸಂಗದ ಹಾಡುಗಳನ್ನು ಅಭಿನಯಿಸಿ ತೋರಿಸುವ ದಶಾವತಾರದ ಬೈಲಾಟಗಳು; ಶಿವರಾತ್ರಿ ಕೃಷ್ಣ ಜಯಂತಿ ಇತ್ಯಾದಿಯಾದ ಹಬ್ಬ ಹುಣ್ಣಿಮೆಗಳ ನೆವದಿಂದ ಪ್ರಾಚೀನ ವೀರರ ಪೂಜೆ; ಪೂಜಿಸಲಿಕ್ಕೆ ಬೇಕಾದ ಗೌರಿ, ಗಣೇಶ, ಅನಂತ, ದುರ್ಗಾದಿ ಬಿಂಬಗಳ ನಿರ್ಮಾಣ; ದೀಪಾವಳಿ ರಥೋತ್ಸವಾದಿ ಕಾಲದಲ್ಲಿ ಕಲಶ ಕುರುಜುಗಳ ಮತ್ತು ಮಕುಟಮಂಟಪಗಳ ಶೃ೦ಗಾರರಚನೆ; ಹಳ್ಳಿಯ ಅಯನ ಆರಾಟಗಳ ಮೂಲಕ ವ್ಯಾಯಾಮಯುಕ್ತವಾಗಿ ದೊರೆಯವ ಸೃಷ್ಟಿ ನಿರೀಕ್ಷಣ- ಹೀಗೆ ಸರ್ವತೋಮುಖವಾಗಿರುವ ಆರ್ಯ ವಿದ್ಯಾಭ್ಯಾಸದಲ್ಲಿ ನಾರಾಯಣಪ್ಪನವರ ಭಾವಿ ಪಾಂಡಿತ್ಯದ ಮೂಲವನ್ನು ಕಂಡುಹಿಡಿಯಬೇಕು.

ನಾರಾಯಣಪ್ಪನವರು ಇಂಗ್ಲೀಷ್‌ ಕಲಿಯುವುದಕ್ಕಾಗಿ ನಂದಳಿಕೆಯನ್ನು ಬಿಟ್ಟು ಉಡುಪಿಗೆ ಹೋದರೆಂಬುದಕ್ಕೂ, ಇಂಗ್ಲಿಷ್‌ ಶಾಲೆಯನ್ನು ಸೇರಿದ ಎರಡು ವರ್ಷಗಳಲ್ಲಿಯೇ ಹಣದ ಆಡಚಣೆಯಿಂದ ಶಾಲೆಯನ್ನು ಬಿಟ್ಟರೆಂಬುದಕ್ಕೂ ಸಾಕಾದಷ್ಟು ಆಧಾರವಿದೆ. ೧೮೮೭ ರವರೆಗೆ ಅವರು ಉಡುಪಿಯಲ್ಲಿ ಏನು ಮಾಡುತ್ತಿದ್ದರೆಂಬುದು ಊಹಾಸ್ಪದವಾಗಿದೆ. ಬಹುಶಃ ಈ ಅವಧಿಯಲ್ಲಿ ಕೃಷ್ಣಾಪುರ ಮಠದ ಆಚಾರ್ಯರಿಂದ ಸಂಸ್ಕೃತದ ಪರಿಚಯವನ್ನೂ, ಶ್ರೀಯುತ ಮಳಲಿ ಸುಬ್ಬರಾಯರಿಂದ ಇಂಗ್ಲಿಷ್‌ ಭಾಷಾಜ್ಞಾನವನ್ನೂ ಸಂಪಾದಿಸಿರಬಹುದು. ಆದರೆ ಅವರ ಮನಸ್ಸು ಕನ್ನಡಕ್ಕೆ ಒಲಿದಷ್ಟು ಸಂಸ್ಕೃತಕ್ಕೆ ಒಲಿಯಲಿಲ್ಲ. “ಏಂ ಭೋಜ ಪ್ರಬಂಧಂ? ವಿಕ್ರಮ ವಿಜಯಂ? ಮಹಾವೀರಚರಿತಂ?” “ಇಸ್ಸಿ! ಇವಱೊಳೆ ನಗೞ್ಕಱುಲ್ಲ೦” ಈ ಅವಧಿಯಲ್ಲಿ ಅವರು ತುಳು ಭಾಷೆಯ ಪದಗಳನ್ನು ಕಟ್ಟಿ ಅವುಗಳನ್ನು ತಮ್ಮ ಗೆಳೆಯರ ಕೂಟದಲ್ಲಿ ರಸಿಕನಂತೆ ಹಾಡುವುದನ್ನೊ, ಉಡುಪಿಯ ನಾಟಕಮಂಡಳಿಯವರ ನಾಟಕಗಳಲ್ಲಿ ಒಂದೊಂದು ಸಲ ವಿದೂಷಕನ ವೇಷದಿ೦ದ ಸಭಿಕರನ್ನು ವಿನೋದಗೊಳಿಸುವುದನ್ನೋ, ‘ತಾಳಮದ್ದಳೆ’ ಇರುವ ರಾತ್ರಿಯಲ್ಲಿ ನೆರೆಮನೆಯನ್ನು ಸೇರಿಕೊಂಡು ಅರ್ಥ ಹೇಳುವುದನ್ನೋ, ಉಡುಪಿಯ ಪರ್ಯಾಯ ಎಂಬ ಉತ್ಸವ ಕಾಲದಲ್ಲಿ “ನೆಲದ ಕೆಲಬಲದಿ ಘಟ್ಟಿಸೆ ನಿಂದ ರನ್ನಗಂಬಂಗಳ ಮೇಲೆ ಬಿಗಿದಿಹ ಸಮುನ್ನತ ಮಹಾ ಮಂಡಪಗಳಂ ಚೆಲ್ವಾದ ಬೀದಿಗಳಲ್ಲಿ” ತಿರುಗಾಡುತಿರುವುದನ್ನೋ ನಾವು ಊಹಿಸಬೇಕಾಗುತ್ತದೆ. ಸುಮಾರು ಈ ಕಾಲದಲ್ಲಿಯೇ ಅವರು ಉಡುಪಿಯ ಬೋರ್ಡು ಸ್ಕೂಲಿನ ಲೈಬ್ರರಿಯಲ್ಲಿದ್ದ ‘ಶಬ್ದಮಣಿ  ದರ್ಪಣ’  ‘ಛಂದೋಂಬುದಿ’ ‘ಅನುಭವಾಮೃತ’ ‘ಪ್ರಾಕ್ಕಾವ್ಯಮಾಲಿಕೆ’ ಎಂಬೀ ಪುಸಕಗಳನ್ನು ಓದಿ; ಅವುಗಳನ್ನು ಕರತಲಾಮಲಕವಾಗಿ ಮಾಡಿರಬೇಕು. ಹೀಗೆ ನೆಲದಡಿಯಲ್ಲಿಯ ಸಸ್ಯಾಹಾರವನ್ನು ಸಂಗ್ರಹಿಸಿ ಬೆಳೆಯುತ್ತಲಿದ್ದ ಪಾಂಡಿತ್ಯದ ಬೀಜಾಂಕುರವು ಬಡತನದ ಕಲ್ಲೆಡೆಯಲ್ಲಿ ಸಿಕ್ಕಿಕೊಂಡು ಮೇಲಕ್ಕೆ ಏಳಲಾರದೆ ಬಿಸಿಲ ಮೊರೆಯನ್ನು ಕಾಣಲಾರದೆ ಅಲ್ಲಲ್ಲೇ ಸುಳಿದಾಡುತ್ತಿತ್ತು. ದೈವವಶಾತ್‌ ಹಿಂದೂ ಮುದ್ರಣಾಲಯದ ಚಾಲಕರು ಕೈಕೊಟ್ಟು ‌ಕಲ್ಲನ್ನು ಈಚೆಗೆ ಉರುಳಿಸಿಬಿಟ್ಟರು! ನಾರಾಯಣಪ್ಪನವರ ‘ರೇವತಿ ಕಲ್ಯಾಣ’ ‘ಕುಮಾರ ವಿಜಯ’ ಎಂಬೀ ಎರಡು ಯಕ್ಷಗಾನ ಪ್ರಸಂಗಗಳು ಪ್ರಕಾಶಕ್ಕೆ ಬಂದುವು.

ನಂದಳಿಕೆಯವರ ಇತರ ಗ್ರಂಥಗಳಿಗಿ೦ತ ಕುಮಾರ ವಿಜಯಕ್ಕೆ ಹೆಚ್ಚಿನ ಮಹತ್ವವನ್ನು ನಾನು ಕೊಡುತ್ತೇನೆಂದುದಾಗಿ ನಾನು ಹಿಂದೆ ಹೇಳಿರುವೆನಷ್ಟೆ. ನಂದಳಿಕೆಯವರಿಗೆ ಇಂಗ್ಲಿಷ್‌ ಮತ್ತು ಕನ್ನಡ ಭಾಷೆಯ ಪರಿಚಯವನ್ನು ತಕ್ಕಷ್ಟು ಮಾಡಿಕೊಟ್ಟ ಪೂರ್ವೋಕ್ತ ಶ್ರೀಯುತ ಮಳಲಿ ಸುಬ್ಬರಾಯರನ್ನು ಕುರಿತು ಹೀಗೆಂದು ಉಲ್ಲೇಖವಿದೆ.

“ಸರ್ಪಭೂಷನ ಭಕ್ತ ಕವಿತಾ
ದರ್ಪಣಾಬ್ಧಿಗಭೀರ ಗುರುವೆನಿ
ಸಿರ್ಪ ಮಳಲಿ ಸುಬ್ಬರಾಯರಿಗರ್ಪಿಸುವೆನು”

ಈ ಮಳಲಿ ಸುಬ್ಬರಾಯರೇ ಉಡುಪಿಯ ಬೋರ್ಡ್‌ ಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದು, ಅನಂತರ ನಂದಳಿಕೆಯವರು ಕುಂದಾಪುರದ ಹೈಸ್ಕೂಲಿನಲ್ಲಿ ಅಂಗಸಾಧನೆಯ ಉಪಾಧ್ಯಾಯ ಕೆಲಸದಲ್ಲಿ ಇದ್ದಾಗ ಇವರ ಜೊತೆಯ ಉಪಾಧ್ಯಾಯರಾದರು. ಈ ಸುಬ್ಬರಾಯರ ಅನುಮೋದನದಿಂದ ನಂದಳಿಕೆಯವರು ಸುಮಾರು ೧೮೯೮ ರಲ್ಲಿ “ತಾಂಡವ ಮುನಿಯ ಕಥೆ” ಎಂಬ ತೊರವೆಯ ರಾಮಾಯಣದೊಳಗಿನ ಕೆಲವು ಪದ್ಯಗಳಿಗೆ ಟಿಪ್ಪಣಿಯನ್ನು ಬರೆದರೆಂದು ನಾನು ಕೇಳಿರುತ್ತೇನೆ. ನಂದಳಿಕೆಯವರು ಉಡುಪಿಯಲ್ಲಿ ಉಳಿದುಕೊಂಡ ನಂತರ ೧೮೯೩ ರವರೆಗೆ ಕನ್ನಡ ಸಾಹಿತ್ಯ ಸಂಪಾದನೆಯಲ್ಲಿ ಎಲ್ಲಿಯತನಕ ಹೋಗಿದ್ದರೆಂಬುದನ್ನು ಶೋಧಿಸುವುದಕ್ಕೆ ಕುಮಾರ ವಿಜಯವು ತಕ್ಕಷ್ಟು ಬೆಳಕನ್ನು ಚೆಲ್ಲುತ್ತದೆ. ಪ್ರಸಂಗದ ಅನೇಕ ಹಾಡುಗಳ ಧಾಟಿಯನ್ನು ತೋರಿಸುವುದಕ್ಕೆ ಇಟ್ಟ ಸೊಲ್ಲುಗಳು, ಉಡುಪಿಯ ಮಾನಪತ್ರವಾದ ಸುದರ್ಶನದಲ್ಲಿ ಪ್ರಕಟವಾಗುತ್ತಿದ್ದ ತುಂಡು ಪದಗಳ ಚರಣಗಳು, ಇಲ್ಲವೆ ನಂದಳಿಕೆಯವರೇ ಕಟ್ಟಿದ ತುಳು ಹಾಡುಗಳ ಭಾಗಗಳು, ಇಲ್ಲವೆ ಉಡುಪಿಯಲ್ಲಿ ಅಂದು ಆಡಿಸಿ ತೋರಿಸುತ್ತಿದ್ದ ಮರಾಟಿ ಪದಗಳ ಪಲ್ಲವಿಗಳು, ಇಲ್ಲವೆ ಪ್ರಚಾರದಲ್ಲಿದ್ದ ಇತರ ಪ್ರಸಂಗಗಳೊಳಗಿನ ಹಾಡುಗಳು ಇದರಿಂದ ಯಕ್ಷಗಾನ ಪ್ರಸಂಗಕ್ಕೆ ಬೇಕಾದ ಹಾಡುಗಳನ್ನು ಯಾವ ಧಾಟಿಯಲ್ಲಾದರೂ ಕಟ್ಟುವುದಕ್ಕೂ ಹಾಡುವುದಕ್ಕೂ ಅವರು ತಮ್ಮ ೨೦ನೆಯ ವಯಸ್ಸಿನೊಳಗೆ ಶಕ್ತರಾಗಿದ್ದರೆ೦ದು ಹೇಳಬೇಕಾಗುತ್ತದೆ. ಕುಮಾರ ವಿಜಯದೊಳಗಿನ ಯಮಕಗಳನ್ನೂ, ಶಾಂತಪ್ರಾಸಗಳನ್ನೂ ಲಕ್ಷಿಸಿದರೆ, ಲಕ್ಷ್ಮೀಶನ ಜೈಮಿನಿ ಭಾರತವು ಅವರಿಗೆ ಮುಖೋದ್ಗೀತವಾಗಿರಬಹುದೆಂಬ ಹಾಗೆ ತೋರುತ್ತದೆ. ಈ ಅಭಿಪ್ರಾಯವು ರಾಮಪಟ್ಟಾಭಿಷೇಕವನ್ನೂ ರಾಮಾಶ್ವಮೇಧವನ್ನೂ ಓದುತ್ತಲೇ ಇನ್ನೂ ಬಲಗೊಳ್ಳುತ್ತದೆ. ಹಳೆಯ ಯಕ್ಷಗಾನ ಪ್ರಸಂಗಗಳಲ್ಲಿ ಹುಡುಕಿದರೆ ದೊರೆಯದ ‘ಮಾಳ್ಕೆ, ಕಾಗೆ, ಇರಲೊಡಂ, ಪೊಡಮಟ್ಟು’ ಮೊದಲಾದ ಹಳೆಗನ್ನಡ ವ್ಯಾಕರಣ ಮರ್ಯಾದೆಗಳೂ, ‘ಪೊಸದೇಸೆ’ ‘ಕುಂಬಿಡು’ ‘ಬೆಸನ’ ಮೊದಲಾದ ಶಬ್ಧ ಪ್ರಯೋಗಗಳೂ ಅವರು ಅ೦ದು ಮಾಡಿದ್ದ ಪ್ರಾಚೀನ ಗ್ರಂಥ ಪರಿಚಯವನ್ನು ಸೂಚಿಸುತ್ತದೆ. ಕುಮಾರ ವಿಜಯದಲ್ಲಿ ಹೇರಳವಾಗಿ ಕಂಡುಬರುವ ಇಂತಹ ಹಳೆಗನ್ನಡ ವ್ಯಾಕರಣ ಪ್ರಯೋಗಗಳು ಶಬ್ದಮಣಿ ದರ್ಪಣ ಭಾಷಾ ಭೂಷಣಗಳ ಪುರಶ್ಚರಣೆಯಿಂದ ಅವರ ಬಾಯಿ ಮೀರಿ ಸಿಡಿದು ಬಿದ್ದ ಹಾಗೆ ತೋರುತ್ತವೆಯೇ ಹೊರತು ವ್ಯಾಕರಣ ಪಾಂಡಿತ್ಯದ ಗರ್ವೋದ್ರೇಕದಿಂದ ಇಟ್ಟ ಹಾಗೆ ಕಾಣುವುದಿಲ್ಲ. “ಪಾಲಿಸುಗೆ ಪಾರ್ವತೀಪರಮೇಶರುಂ” “ಅತ್ರಿಭ್ರುಗು ದುರ್ವಾಸ ವಿಶ್ವಾಮಿತ್ರರೆನೆ…” ಇತ್ಯಾದಿ ಮಾತುಗಳು ಸಂಸ್ಕತದಲ್ಲಿ ಕಾವ್ಯದವರೆಗಾದರೂ ಹೋಗಿರಬೇಕೆಂಬ ಅನುಮಾನವನ್ನು ಹೊರಡಿಸುತ್ತದೆ. ಇದರೊಳಗಿನ. ಕಂದ ಪದ್ಯಗಳಲ್ಲಿ ನಗಣ, ಸಗಣಗಳು ಬರಬೇಕಾದಲ್ಲಿ ಬರುವುದಿಲ್ಲವೆಂಬುದು ನಿಜ. ಆದರೆ ಈ ಛಂದೋಲೋಪವು ನಮ್ಮ ಜಿಲ್ಲೆಯ ಕಂದ ಪದ್ಯ ಗಳಲ್ಲಿ ಬಹುಕಾಲದವರೆಗೆ ಸಾಮಾನ್ಯವಾಗಿತ್ತು.

ಕುಮಾರ ವಿಜಯದ ದೆಸೆಯಿಂದ ಲಕ್ಷ್ಮೀನಾರಾಯಣಪ್ಪನವರ ಹೆಸರು ನನ್ನ ಕಿವಿಯಲ್ಲಿ ಆಗಾಗ ಜಿನುಗುತ್ತಾ ಇದ್ದರೂ, ೧೮೯೫ರವರೆಗೆ ನನಗೂ ಅವರಿಗೂ ಯಾವ ತರದ ಪತ್ರ ವ್ಯವಹಾರವೂ ನಡೆದಿರಲಿಲ್ಲ. ಹೀಗಿರಲು ೧೮೯೫ನೆಯ ಜುಲೈ ಮಾಸದಲ್ಲಿ ಮಂಗಳೂರ ಗವರ್ನಮೆಂಟ್‌ ಕಾಲೇಜಿನಲ್ಲಿ ಕನ್ನಡಕ್ಕಾಗಿ ತಿಂಗಳಿಗೆ ೨೦ ರೂಪಾಯಿ ಸಂಬಳದ ಕನ್ನಡ ಪಂಡಿತನ ಕೆಲಸಕ್ಕೆ ಒಂದು ಏರ್ಪಾಡಾಯಿತು. ಯಾರಿಗೂ ಬೇಡವಾದ ಈ ಉದ್ಯೋಗಕ್ಕೆ ನಾವಿಬ್ಬರೇ ಅರ್ಜಿದಾರರಾಗಿದ್ದೆವು. ಕನ್ನಡ ಅರಿಯದ ಇಂಗ್ಲಿಷ್‌ ಹೆಡ್‌ ಮಾಸ್ತರನೊಬ್ಬನು ಕನ್ನಡ ಬಲ್ಲ ನಾರಾಯಣಪ್ಪನವರನ್ನು ಬಿಟ್ಟು, ಇಂಗ್ಲಿಷ್‌ ಬರುತ್ತದೆಂಬ ಕಾರಣದ ಮೇಲೆ ಆ  ಜಾಗವನ್ನು ನನಗೆ ಕೊಟ್ಟರು. ಇದರ ಮರ್ಮವನ್ನು ತಿಳಿಯದ ನಾರಾಯಣಪ್ಪನವರು ನಾನೇನೋ ಕನ್ನಡ ವಾಚಸ್ಪತಿಯಾಗಿರಬಹುದೆಂದು ನೆನಸಿ, ನನ್ನನ್ನು ಅಭಿನಂದಿಸಿ ಒಂದು ಪತ್ರವನ್ನು ಬರೆದರು. ನಾನು ಪ್ರತ್ಯುತ್ತರವನ್ನು ಬರೆಯುವಾಗ, ‘ಬತ್ತದ ಸಿಪ್ಪೆಯನ್ನು ಕುಟ್ಟತಕ್ಕ ಒನಕೆಯನ್ನು ಕನ್ನಡ ಬರಹವನ್ನು ಬರೆಸುವುದಕ್ಕೆ ತಂದರು; ಚಿತ್ರ ಬಿಡಿಸುವ ಬಣ್ಣದ ಗರಿಯನ್ನು ಕಿವಿಯ ತುರಿಕೆಗೆ ಕುಗ್ಗೆ ಕಡ್ಡಿಯನ್ನಾಗಿ ಮಾಡಿದರು’ ಎಂದು ಹೇಳಿ, ನಮ್ಮಿಬ್ಬರೊಳಗಿನ ಅಂತರವನ್ನು ಸ್ಪಷ್ಟಪಡಿಸಿದರು.

ಸುಮಾರು ಇದೇ ಕಾಲದಲ್ಲಿ ಶ್ರೀಯುತ ಎಂ.ಎ. ರಾಮಾನುಜ ಅಯ್ಯ೦ಗಾರ್ಯರೂ, ಎಸ್‌. ಜಿ. ನರಸಿಂಹಾಚಾರ್ಯರೂ ಕನ್ನಡ ವಾಙ್ಮಯದ ಬೀಗಮುದ್ರೆಯನ್ನು ಒಡೆದು, ಅಮೂಲ್ಯವಾದ ಕರ್ನಾಟಕ ಕೃತಿರತ್ನಗಳನ್ನು ಕಾವ್ಯಮಂಜರಿ ಎಂಬ ಮಾಸಪತ್ರದ ಮೂಲಕವಾಗಿ ಕನ್ನಡಿಗರಿಗೆ ದಾನಮಾಡುವ ಪ್ರಚಾರಕ ಕಾರ್ಯವನ್ನು ಕೈಗೊಳ್ಳುವಂಥವರಾದರು. ಅವರು ಬೆಳಕಿಗೆ ತಂದ ಉತ್ಕೃಷ್ಟ ಗಂಥಗಳನ್ನು ಮದ್ರಾಸ್‌ ಯೂನಿವರ್ಸಿಟಿಯವರು ಪಠ್ಯಪುಸ್ತಕಗಳನ್ನಾಗಿ ನಿಯಮಿಸಿ, ಅವರ ಸತ್ಕಾರ್ಯಕ್ಕೆ ತಕ್ಕಷ್ಟು ಆಶ್ರಯ ಕೊಡುವಂಥವರಾದರು. ಎಫ್‌.ಎ. ಪರೀಕ್ಷೆಗೆ ೧೮೯೬ ರಲ್ಲಿ ರತ್ನಕರಾಧೀಶ್ವರ. ಶತಕವೂ, ಚಿಕ್ಕದೇವರಾಜ ವಂಶಾವಳಿಯೂ, ೧೮೯೮ ರಲ್ಲಿ ಶ್ರೀ ರಾಮ ಪಟ್ಟಾಭಿಷೇಕವೂ, ಅದ್ಭುತ ರಾಮಾಯಣವೂ ಪಠ್ಯಪುಸ್ತಕಗಳಾಗಿದ್ದು, ಅದನ್ನು ಕಲಿಸುವ(ಕಲಸುವ?) ಕೆಲಸವು ನನ್ನ ಮೇಲೆ ಬಿದ್ದಿತ್ತು. ಪಟ್ಟಾಭಿಷೇಕದ ಒಂದೆರಡು ಚರಣಗಳ ಅರ್ಥಾನುವಾದವು ನನ್ನನ್ನು ಸೋಲಿಸಿಬಿಟ್ಟದ್ದರಿಂದ, ನನಗೆ ಬಗೆಹರಿಯದ ಕೆಳಗೆ ಕಾಣಿಸಿದ ಭಾಗಗಳಲ್ಲಿ ಒಂದರ ಅರ್ಥವನ್ನೂ, ಮತ್ತೊಂದರಲ್ಲಿ ಬಿಟ್ಟು ಹೋದ ಪದಗಳನ್ನೂ ಹೇಳಿಕೊಡಬೇಕಾಗಿ ನಾನು ನಂದಳಿಕೆಯವರಿಗೆ ಕಾಗದ ಬರೆದನು. ಆಗ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು ಅದರ ಗಂಥಕರ್ತರೆಂದು ನನಗೆ ಕನಸಿನಲ್ಲಿ ಕೂಡ ಸಂಶಯವು ಹುಟ್ಟಿರಲಿಲ್ಲ.

೧. ತಂಬೆಲರ್ಸೋಂಕೆ ಬಳ್ಕುವ ಲತಾಂಗಮದಿಱುಸಿ
ಲಂ ಬೇರೆ ತೆಡೆದುಂಟೆ                                ೩.೫೩

೨. ಪೊಸ ಸೊಗವ ನೀನುಂಡುದೇ
ಕೊಡೆಯ ನಿನ್ನನುಭವಕೆ . . . ಮೇದಿನಿಯ . . . ರಾಘವ ೪.೨೯

ಮರುಟಪ್ಪಾಲಿಗೆ ಅವರ ಉತ್ತರವು ಬಂದಿತು. “ಇಱುಸಿಲ್” ಎಂಬ ಶಬ್ದಕ್ಕೆ ಅರ್ಥವನ್ನು ಕೊಟ್ಟು, ಅದರ ಸಮರ್ಥನಕ್ಕಾಗಿ ಶಬ್ದಮಣಿ ದರ್ಪಣದ ಪುಟಸಂಖ್ಯೆಗೆ ನನ್ನ ಲಕ್ಷ್ಯವನ್ನು ಎಳೆದಿದ್ದ ಒಂದು ಟಿಪ್ಪಣಿಯು ಪತ್ರದಲ್ಲಿ ಇತ್ತು. ಗ್ರಂಥಪಾತವೆಂದು ಮೂಲದಲ್ಲಿ ಬಿಟ್ಟುಹೋದ ಪದಗಳು ಬಹುಶಃ ಇಂಥವುಗಳಾಗಿರಬಹುದೆಂದು ಅವರು ಪತ್ರದಲ್ಲಿ ನಿರ್ದೇಶಿಸಿದ್ದರು. ಆ ಪದಗಳನ್ನು ನಾನು ಮರೆತುಬಿಟ್ಟದ್ದೂ ಪತ್ರದ ವಿಷಯದಲ್ಲಿ ಅಜಾಗರೂಕನಾದದ್ದೂ ಎಷ್ಟೋ ಶೋಚನೀಯವಾಗಿದೆ ಎಂದು ನಾನು ಹೇಳಬೇಕಾಗಿಲ್ಲ.

ನನಗೆ ಮೊದಲಿನಿಂದಲೇ ನಂದಳಿಕೆಯವರ ಮೇಲಿದ್ದ ಗೌರವವು ದ್ವಿಗುಣವಾಯಿತು. ನನಗಿದ್ದ ಗೌರವವನ್ನು ಶ್ರುತಪಡಿಸಿ, ಕುಮಾರ ವಿಜಯವನ್ನು ಶ್ಲಾಘಿಸಿ ನಾನು ಮತ್ತೊಂದು ಕಾಗದವನ್ನು ಬರೆದೆನು. ಅವರು ಆ ಪ್ರಶಂಸನೆಯನ್ನು ಕಿವಿಯ ಮೇಲೆ ಹಾಕಿಕೊಳ್ಳದೆ, ಪ್ರತ್ಯುತ್ತರದಲ್ಲಿ ಅದರ ಪ್ರಸ್ತಾವನೆಯನ್ನೇ ಬಿಟ್ಟುಬಿಟ್ಟು ನನ್ನ ಅವಗಾಹನೆಗಾಗಿ ‘ಮತ್ತೊಂದು ಪುಸ್ತಕವನ್ನು ಕಳುಹಿಸಿರುತ್ತೇನೆ; ಗ್ರಂಥವು ಯೋಗ್ಯವೆಂದಿದ್ದರೆ ಅದನ್ನು ಮುದ್ರಿಸುವುದಕ್ಕೆ ಸಾಧ್ಯವಿದೆಯೇ’ ಎಂಬುದಾಗಿ ಬರೆದು ಆ ಪತ್ರದೊಂದಿಗೆ ೧೮೯೮ನೆಯ ಸೆಪ್ಟೆಂಬರ್ ತಿಂಗಳಲ್ಲಿ ಒಂದು ಹಸ್ತಪ್ರತಿಯನ್ನು ನನಗೆ ಕಳುಹಿಸಿಕೊಟ್ಟರು. ಇದೇ- ರಾಮಾಶ್ವಮೇಧದ ಅವರ ಹಸ್ತಪ್ರತಿ; ಮುಂದೆ ಕಾವ್ಯ ಕಲಾನಿಧಿಯಲ್ಲಿ ಪ್ರಕಟವಾದ ರಾಮಾಶ್ವಮೇಧದ ಮಾತೃಕೆಯು ಕೂಡ ಇದೇ ಹಸ್ತಪ್ರತಿಯೆಂದು ನಾನು ನೆನಸುತ್ತೇನೆ.

ನನ್ನಲ್ಲಿಗೆ ಕಳುಹಿಸಲಾದ ಪ್ರತಿಯಲ್ಲಿ ಸುಮಾರು ೫೦೦ ಪುಟಗಳು ಇದ್ದಿರಬಹುದು. ಮುತ್ತಿನಂತೆ ದುಂಡಗಾದ ಬರಹ, ಮೋಡಿ ಇಲ್ಲ, ತಪ್ಪು ತಿದ್ದುಪಾಟುಗಳು ಕಡಿಮೆ. ಹೀಗಾದುದರಿಂದ ಕೈಬರಹವಾದರೂ ಅದನ್ನು ಓದುವುದಕ್ಕೆ ನನಗೆ ತೊಡಕಾಗಲಿಲ್ಲ. ನಾನು ಓದತೊಡಗಿದ್ದೇ ಸರಿ, ಹಸಿವು ನಿದ್ದೆ ಬಿಟ್ಟು, ಅದನ್ನು ಆದ್ಯಂತವಾಗಿ ಎರಡು  ದಿವಸದೊಳಗೆ ಮುಗಿಸಿ, ಪುನಃ ಓದುವುದಕ್ಕೆ ಹತ್ತಿದೆನು. ಓದಿದಷ್ಟಕ್ಕೆ ಇನ್ನೂ ಓದಬೇಕೆಂಬ ಆಸೆಯಾಗಿ, ಕಂಡಕ೦ಡವರನ್ನು ಕರೆದು ಅವರ ಮುಂದೆ ‘ವಾಚಕಮಾಡಿದೆನು’. ಆದರೂ ಅದನ್ನು ರಚಿಸಿದವರು ನಂದಳಿಕೆ ಲಕ್ಷ್ಮೀನಾರಾಯಣಪ್ಪನವರಾಗಿರಬಹುದೆಂಬ ಶಂಕೆಯು ನನ್ನ ಮೂಢ ಮನಸ್ಸಿಗೆ ಮೂರು ತಿಂಗಳ ತನಕ ಹೊಳೆಯದೆ ಹೋಯಿತು. ನಾನು ಪತ್ರ ಸಮೇತವಾಗಿ ಆ ಹಸ್ತಪ್ರತಿಯನ್ನು ಅವರಿಗೆ ಹಿಂದಕ್ಕೆ ಕಳುಹಿಸಿದೆನು. ಪತ್ರದಲ್ಲಿ ನನ್ನ ಅಭಿಪ್ರಾಯವು ಇತ್ತು. ಮನೋರಮೆಯು ಗ್ರಂಥದ ವಿಷಯವಾಗಿ ಮುದ್ದಣ್ಣನೊಡನೆ ಯಾವ ಮಾತುಗಳನ್ನು ಆಡಿದಳೋ ಆ ಮಾತುಗಳನ್ನೇ ಇಟ್ಟು, “ಮುದ್ದಣ್ಣನ ಹೆಸರಿನಂತೆ ಮುದ್ದುಮುದ್ದಾಯಿತು,  ಹಿಂದಿಲ್ಲ ಮುಂದಿಲ್ಲ” ಎಂಬುದಾಗಿ ಕೊಂಡಾಡಿ, “ಗಾಜನ್ನು ಮೆಚ್ಚುವ ಕಾಲದಲ್ಲಿ ವಜ್ರವು ಬಿಕರಿಯಾಗುವುದು ದುರ್ಲಭವಾದ್ದರಿಂದ, ಅಚ್ಚು ಹಾಕಿಸಿದಲ್ಲಿ ‘ಕೈಟಿತ್ತಿನ ಕಾಸಲಾ ಪೋ೦ಂಡ- ಮೈಟಿತ್ತಿನ ಮಾಸಲಾ ಪೋಂಡ’ ಎಂಬ ತುಳು ಗಾದೆಯಂತೆ ಆಗುವ ಸಂಭವವಿದೆ. ಎಂಬಿತ್ಯಾದಿಯಾಗಿ ನನ್ನ ಅಭಿಪ್ರಾಯವನ್ನು ವೇದ್ಯವರಿಸಿದೆನು. ಇದೇ ಪತ್ರದಲ್ಲಿ ರಾಮಾಶ್ವಮೇಧದಿಂದ ಅನೇಕ ವಾಕ್ಯಗಳನ್ನು ಉದ್ದರಿಸಿಟ್ಟು ಅವುಗಳ ಅರ್ಥಾನ್ವಯಗಳನ್ನು ನನಗೆ ಹೇಳಿಕೊಡಬೇಕೆಂಬುದಾಗಿಯೂ ಅಪೇಕ್ಷಿಸಿದೆನು. ಈ ಪತ್ರಕ್ಕೆ ಉತ್ತರವು ಬರಲೇ ಇಲ್ಲ. ಉತ್ಸಾಹ ಭಂಗದಿ೦ದಲೋ, ಅನಾದರಣೆಯಿಂದಲೋ, ಇನ್ನು ಯಾವ ಕಾರಣದಿಂದಲೊ ಅವರು ಬಹುಕಾಲದವರೆಗೆ ನನಗೆ ಪತ್ರ ಬರೆಯುವುದನ್ನು ನಿಲ್ಲಿಸಿಬಿಟ್ಟರು. ಕ್ರಮೇಣ ರಾಮಾಶ್ವಮೇಧವು ಕಾವ್ಯ ಕಲಾನಿಧಿಯಲ್ಲಿ ಪ್ರಕಟವಾಯಿತು.

ಅಚ್ಚುಹಾಕಿದ ಸಂಪೂರ್ಣ ಪುಸ್ತಕವು ನನ್ನ ಕೈಗೆ ಬೀಳುತ್ತಲೆ ನಾನು ಗ್ರಂಥಕರ್ತೃವಿನ ವಿಚಾರ ಮಾಡತೊಡಗಿದೆನು. ರಾಮಾಶ್ಚಮೇಧದ ಕವಿಯು ತುಳು ನಾಡಿನವನು ಎಂದು ಊಹಿಸುವುದಕ್ಕೆ ನನಗೆ ಕಷ್ಟವಿರಲಿಲ್ಲ. ಗ್ರಂಥದಲ್ಲಿ ಎಲ್ಲೆಲ್ಲಿಯೂ ಕಣ್ಣಿಗೆ ಹೊಳೆಯುವ ‘ಪೊಲಿ’ ‘ಕುರು೦ಬಿಲ್‌’ ‘ಆರಾಟ’ ‘ಬಸದಿ’ ‘ಇ೦ದ್ರ’ ಮೊದಲಾದ ತುಳು ಶಬ್ದಗಳು ಸಾಕಷ್ಟು ಹೇರಳವಾಗಿದ್ದವು. ಕುಮಾರ ವಿಜಯದಲ್ಲಿರುವ ಒಂದೆರಡು ಮಾತುಗಳೇ ಈ ಗಂಥದಲ್ಲಿ ಇದ್ದುದರಿಂದ, ನಂದಳಿಕೆಯವರೇ ರಾಮಾಶ್ವಮೇಧದ ಕವಿಯಾಗಿರಬಹುದೆಂಬ ಸಂಶಯವು ಹುಟ್ಟಿತು. ಗ್ರಂಥವನ್ನು ಅಗೆದಷ್ಟಕ್ಕೆ ಈ ಶಂಕೆಯು ಬಲವಾಗುತ್ತ ಬಂದಿತು. ಗ್ರಂಥದ ಸರಣಿ, ವಿಸ್ತರಣ ಕ್ರಮ, ಸಂವಿಧಾನ, ಅಷ್ಟೇಕೆ- ಗ್ರಂಥವು ಆಧುನಿಕವಾಗಿ ತೋರುವಷ್ಟು ಅಪೂರ್ವತೆಯಿಂದ ಬರೆಯಲ್ಪಡುವುದಕ್ಕೆ ಕಾರಣವಾದ ಆ ಕಾಲದ ಪರಿಸ್ಥಿತಿಯ ಸ್ಫುಟವಾದ ಚಿತ್ರವೇ ನನ್ನ ಮನಸ್ಸಿನಲ್ಲಿ ಎದ್ದು ನಿಂತಿತು.

ಕುಮಾರ ವಿಜಯವನ್ನು ಬರೆದ ಲಕ್ಷ್ಮೀನಾರಾಯಣಪ್ಪನವರೇ ಅದ್ಭುತ ರಾಮಾಯಣ, ಶ್ರೀ ರಾಮ ಪಟ್ಟಾಭಿಷೇಕ, ಶ್ರೀ ರಾಮಾಶ್ವಮೇಧ ಎ೦ಬ ಗ್ರಂಥತ್ರಯವನ್ನು ಬೇರೆ  ಬೇರೆ ಹೆಸರಿನಿಂದ ರಚಿಸುವುದಕ್ಕೆ ಕಾರಣಗಳು ಇಲ್ಲದೆ ಇರಲಿಲ್ಲ. ಕುಮಾರ ವಿಜಯವು ಪ್ರಸಿದ್ಧ ಯಕ್ಷಗಾನ ಪ್ರಸಂಗವಾಗಿದ್ದರೂ ಅದು ಅವರು ಬದುಕಿದ್ದಾಗ ಜನಪ್ರೀತವಾಗದೆ ಹೋಯಿತು. ಅದು ನವೀನ ಕಥೆಯಾಗಿದ್ದುದರಿ೦ಂದಲೊ, ಅಥವಾ ಅದರೊಳಗಿನ ಹಾಡುಗಳ ಧಾಟಿಗಳು ಆಗ ವಾಡಿಕೆಯಲ್ಲಿಲ್ಲದ್ದುದರಿ೦ದಲೊ, ಅಥವಾ ಗ್ರಂಥದಲ್ಲಿಯ ಹಳೆಗನ್ನಡ ಪದಗಳೂ ಪ್ರಯೋಗಗಳೂ ಹಳ್ಳಿಯವರ ತಲೆಗೆ ಹತ್ತಲಾರದಷ್ಟು ಕ್ಲಿಷ್ಟವಾದುದರಿ೦ದಲೋ, ಅಥವಾ ಈಗಿನ ಕವಿಗಳೆಲ್ಲಾ ನರಕವಿಗಳೆಂಬುದಾಗಿ ರೂಢಿಯಲ್ಲಿರುವ ತಪ್ಪು ಅಭಿಪ್ರಾಯದಿ೦ಂದಲೋ ಕುಮಾರ ವಿಜಯದ ೨,೦೦೦ ಪ್ರತಿಗಳಲ್ಲಿ ಹೆಚ್ಚಿನವು ಹಾಗೆಯೇ ರಾಶಿಯಾಗಿ ಬಿದ್ದಿದ್ದವು. ಗ್ರಂಥವನ್ನು ಬರೆದರೆ ಅದನ್ನು ‘ನೂತನ ಕವಿತೆಯೆಂದು ಕುಂದಿಟ್ಟು’ ಜರೆಯುವವರೇ ಹೊರತು ‘ಮತ್ಸರವನುಳಿದು ಅದನ್ನು ಆಲಿಸುವವರು’ ಇರಲಿಲ್ಲ. ನಿಂತ ಸ್ಥಳದಿ೦ದ ದೂರವಿರುವ ಬೆಟ್ಟವು ಬಹು ರಮ್ಯವೆಂದು ಹೇಗೆ ನೆನಸುತ್ತಾರೋ ಹಾಗೆಯೇ ತಮ್ಮ ಕಾಲಕ್ಕಿಂತ ಹಿ೦ದೆ ಬಹುದೂರ ಆಗಿಹೋದ ಕವಿಗಳೆಲ್ಲಾ ವರಕವಿಗಳೆಂದು ಭಾವಿಸುವುದು ಎಲ್ಲೆಲ್ಲಿಯೂ ವಾಡಿಕೆಯಾಗಿದೆ. ಹೊಸಕವಿ ಎ೦ಬ ಅವಹೇಳನಕ್ಕೆ ಆಸ್ಪದ ಕೊಡದೆ ಹೊಸ ಗ್ರಂಥವನ್ನು ಬರೆದು ಪ್ರಕಟಿಸುವ ಉಪಾಯವು ಯಾವುದು? ಈ ವಿಚಾರವು ನಂದಳಿಕೆಯವರಲ್ಲಿ ಯಾವಾಗ ಎದ್ದಿತೋ ಆ ಸಮಯಕ್ಕೆ ಸರಿಯಾಗಿ ಶ್ರೀಯುತ ಎಂ.ಎ. ರಾಮಾನುಜಯ್ಯಂಗಾರ್ಯರು ಪ್ರಚಾರ ಪಡಿಸಿದ ರತ್ನಾಕರಾಧೀಶ್ವರ ಶತಕವು ನಂದಳಿಕೆಯವರ ಕೈಗೆ ಬಿದ್ದಿತು. ನಮ್ಮ ಜಿಲ್ಲೆಯ ಮೂಡಬಿದರೆಯ ಪ್ರಾಂತದವನಾದ ಆ ಕವಿಯ ನಿಜವಾದ ಹೆಸರು ತಿಳಿಯಬರುವುದಿಲ್ಲವೆ೦ಬುದಾಗಿಯೂ, ಶೃಂಗಾರ ಕವಿ, ರಾಜಹ೦ಸ ಎಂಬಿವು ಆತನು ಇಟ್ಟುಕೊಂಡ ಹೆಸರುಗಳೆಂಬುದಾಗಿಯೂ ಶತಕದ ಪೀಠಿಕೆಯಲ್ಲಿದ್ದ ಅಭಿಪ್ರಾಯವು ನಂದಳಿಕೆಯವರಿಗೆ ಹೆಸರು ಬದಲಾಯಿಸಿಕೊಳ್ಳುವುದಕ್ಕೆ ಕಲಿಸಿಕೊಟ್ಟಿದ್ದರೂ ಇರಬಹುದು.

ಗ್ರಂಥವನ್ನು “ಆವ ಧಾಟಿಯೊಳ್‌ ಪೇಱ್ವುದು? ಪದ್ಯದೊಳ್‌ ಪೇಱ್ವುದೋ ಗದ್ಯದೊಳ್‌ ಪೇಱ್ವುದೋ ಪದ್ಯ೦ ವದ್ಯಂ, ಗದ್ಯ೦ ಹೃದ್ಯಂ, ಹೃದ್ಯಮಪ್ಪಗದ್ಯದೊಳೆ ಪೇಱ್ವುದು” ಪದ್ಯದಲ್ಲಿ ಹೇಳಿದರೆ ಕನ್ನಡದ ಸೊಗಸನಱುಯಲಾರ್ತೆ ನಿಲ್ಲೆನಗೆ… ಸಕ್ಕದ ಚೆಲ್ವಿಂದ ನೀರಿಳಿಯದ ಗಂಟಲೊಳ್‌ ಕಡಬು ತುರುಕಿದಂತಾಗುವುದು. ಅಂದಿನ ‘ಪಾಳ್‌ ಬಣ್ಣನೆಯನ್ನು’  ತರಬೇಕಾಗುವುದು. ಇಂಥ ಕೃತಿಯನ್ನು ಯಾರು ಮೆಚ್ಚುವರು? ಯಾರು ಉಡುಗೊರೆ ಕೊಡುವರು? ಆ ರಗಳೆಯ ದಿನಗಳು ಎಷ್ಟೋ ಹಿ೦ದಕ್ಕೆ ಕಳೆದುಹೋದುವು. ಈ ಕಾಲವು ವೆಂಕಟಾಚಾರ್ಯರ ಕಾದಂಬರಿಗಳ ಕಾಲ. ಅವರ ವಿಷವೃಕ್ಷವು ಗ್ರಂಥಮಾಲೆಯಲ್ಲಿ ಪ್ರಕಟವಾಗಿ ನಮ್ಮ ನಂದಳಿಕೆಯವರನ್ನು ಮುಗ್ಧರನ್ನಾಗಿ ಮಾಡಿದೆ. ಕಮಲಮುಖಿಗೂ ಅವಳ ಗಂಡನಿಗೂ ನಡೆದ ಸಂಭಾಷಣೆಯು ಅವರ ಮನಸಿನಲ್ಲಿ ರೂಪುಗೊಂಡಿದೆ. ಈ ರೇಖೆಗಳಿಂದ ಮೇಲಕ್ಕೆ ಎದ್ದ ಚಿತ್ರವೇ ಮುದ್ದಣ ಮನೋರಮೆ ಎಂಬ ದಂಪತಿಗಳು. ಹಳೆಯ ಗ್ರಂಥಗಳ ಹೊಗಳುಭಟ್ಟರನ್ನು ಮೆಚ್ಚಿಸುವುದಕ್ಕೆ ಇಂದಿನ ಕಾದಂಬರೀ ನಿರೂಪಣ ಪದ್ಧತಿಯೇ ತಕ್ಕದಾದ ಉಪಾಯವೆಂಬುದನ್ನು ಅವರು ವಿಷವೃಕ್ಷ, ಶೂರಸೇನೆ ಚರಿತ್ರೆ, ಜಯರಾಜ ಸಿ೦ಹ ಚರಿತ್ರೆಗಳನ್ನು ಓದಿದ ಕೂಡಲೇ ಗೊತ್ತು ಮಾಡಿಕೊ೦ಡು ಆ ನೂತನ ಮಾರ್ಗದಲ್ಲಿ ಹರಿಯತಕ್ಕ ಭಾಷೆಯನ್ನು ಪೋಷಿಸುವುದಕ್ಕೆ ಯೋಚಿಸಿರಬೇಕು. ಪುರಾಣ ಕಥೆಯನ್ನು ಮುದ್ರಾಮ೦ಜೂಷದ ಹೊಸಗನ್ನಡದಲ್ಲಿ ಹೇಳಿದರೆ, ಮೈಸೂರು ವಿದ್ವಾಂಸರಿಗೆ ಆದರಣೀಯವಾಗುವುದೋ ಎ೦ಬ ಅನುಮಾನ; ದುರ್ಗೇಶ ನಂದಿನಿಯಂತಹ ನವೀನ ಕಥೆಯನ್ನು ಹಳೆಗನ್ನಡದಲ್ಲಿ ಬರೆದು ಮಂಗಳೂರಿನವರನ್ನು ಮೆಚ್ಚಿಸುವ ಎಂದರೆ, ನೂತನ ಕಥಾ ಸೃಷ್ಟಿಯನ್ನು ಮಾಡುವಷ್ಟು ಪ್ರತಿಭೆಯು ತನ್ನಲ್ಲಿ ಉಂಟೋ, ಇಲ್ಲವೋ ಎ೦ಬ ಅಪನಂಬಿಕೆ; ಇವೆರಡನ್ನೂ ತಪ್ಪಿಸಿಕೊಳ್ಳುವುದಕ್ಕೆ ದಾರಿ ಯಾವುದು? ಹಳೆಯ ಕತೆಯನ್ನು ಹೊಸ ಆಯದಲ್ಲಿ ಕಟ್ಟಿ, ಇತ್ತ ಹೊಸ ಶೈಲಿಯೂ ಅಲ್ಲ, ಅತ್ತ ಹಳೆ ಶೈಲಿಯೂ ಅಲ್ಲ, ಇವೆರಡರ ನಡುವಣ ಸರಣಿಯನ್ನು ಒದಗಿಸಿಕೊಳ್ಳಬೇಕಾಯಿತು. ಈ ಸರಣಿಯನ್ನು ಕಲ್ಪಿಸಿಕೊಳ್ಳುವುದಕ್ಕೆ ಚಿಕ್ಕದೇವರಾಜ ವಂಶಾವಳಿಯನ್ನು ತೆರೆದದ್ದಾಯಿತು. ಅದರ ಹಳೆಗನ್ನಡವು ತಲೆ ಒಡೆಯುವಷ್ಟು ಗಟ್ಟಿ: ವಾಣೀ ವಿಲಾಸ ಗ್ರಂಥಗಳನ್ನು ಬಿಚ್ಚಿದ್ದಾಯಿತು. ಇದರ ಕನ್ನಡವು ಬೆರಳು ಬಿಗಿಯದಷ್ಟು ಪೆಡಸು. ಏನು ಮಾಡಬೇಕಾಯಿತು? ಒಂದರ ಕಾಠಿನ್ಯವನ್ನೂ ಮತ್ತೊಂದರೆ ಶೈಥಿಲ್ಯವನ್ನೂ ತೆಗೆದುಹಾಕಿ, ಅವೆರಡನ್ನೂ ಹೊಸೆದು, ತುಳು ನುಡಿಗಳನ್ನೂ ಕನ್ನಡ ಮಾತುಗಳನ್ನೂ ಸಂದರ್ಭಕ್ಕನುಸಾರವಾಗಿ ಹಳಗನ್ನಡದಿ೦ದ ತಿರುಪಿ, ಎಷ್ಟು ಅರ್ಥಭಾರವನ್ನು ಹಾಕಿದರೂ ಕಡಿದುಹೋಗದಂತೆ ಹಳೆಯ ವ್ಯಾಕರಣ ಸೂತ್ರಗಳಿಂದ ಗಂಟಿಕ್ಕಿ, ತನ್ನದೇ ಆದ ಒ೦ದು ಅಪೂರ್ವ ಭಾಷಾ ಸರಣಿಯನ್ನು ನಿರ್ಮಿಸಿದರು. ಕಿವಿಯಲ್ಲಿ ಮ೦ಜುಳವಾಗಿ ಧ್ವನಿಸಿ ಎದೆಯನ್ನು ತಣ್ಣಗೆ ತೋಯಿಸಿ, ಮನಸ್ಸನ್ನು ತಣಿಸುವ ಎಣೆಯಿಲ್ಲದ ಈ ಭಾಷಾಸರಣಿಯು ಇವರನ್ನೇ ಒಲಿದು, ಇವರನ್ನೇ ವರಿಸಿ, ವಿಧೇಯಳಾದ ದಾಸಿಯಂತೆ ಇವರ ವಶವಾಗಿ ಹೋಯಿತು.

ನಾನು ರಾಮಾಶ್ವಮೇಧದ ವಿಷಯವಾಗಿ ಮೇಲೆ ನಿರೂಪಿಸಿದ್ದ ಆಧಾರಗಳನ್ನು ಸಂಕೋಚವಾಗಿ ಹೇಳಿ, ೧೯೦೦ನೆಯ ಫೆಬ್ರವರಿ ಸುಮಾರಕ್ಕೆ ಮತ್ತೊಂದು ಪತ್ರವನ್ನು ಅವರಿಗೆ ಬರೆದೆನು. ಅದಕ್ಕೆ ಅವರು “ನಾನು ತ್ವರೆಯಲ್ಲಿ ಮ೦ಗಳೂರಿಗೆ ಬರುವವನಿದ್ದೇನೆ, ಆಗ ಮುಖತಃ ಮಾತನಾಡೋಣ” ಎಂಬುದಾಗಿ ತಿಳಿಸಿದರು. ಅವರ ಆಗಮನವನ್ನೇ ಎದುರ್ನೋಡುತ್ತಿದ್ದ ನನಗೆ ಏಪ್ರಿಲ್‌ ತಿಂಗಳಿನ ಒ೦ದು ದಿನ ಸಾಯಂಕಾಲ ಮಂಗಳೂರು ಇಂಗ್ಲಿಷ್‌ ‘ಇಗರ್ಜಿಯ” ಬಲಗಡೆಯ ಮೈದಾನಿನಲ್ಲಿ ಅವರ ಭೇಟಿಯಾಯಿತು. ಸುಮಾರು ೫ ಅಡಿ ಎತ್ತರದ, ಎಣ್ಣೆ ಕಪ್ಪು ಬಣ್ಣದ, ತಕ್ಕಷ್ಟು ಅಗಲದ ಹಣೆಯ, ಕಳೆಗುಂದಿದ ಮೋರೆಯ, ಹರೆಯದ ಕುರುಹುಗಳಿಲ್ಲದೆ ಶಾಂತವಾಗಿರುವ ಮುಖಮುದ್ರೆಯ ಲಕ್ಷ್ಮೀನಾರಾಯಣಪ್ಪನವರನ್ನು ನಾನು ಕಣ್ಣಾರೆ ಕಂಡೆನು. ಕನ್ನಡದ ಪ್ರಸ್ತಾಪವು ಬರುವುದಕ್ಕೆ ಹೊತ್ತು ಹೋಗಲಿಲ್ಲ. ನಾನು ಗದಾಯುದ್ಧದ ಮಾತು ಎತ್ತಿದೆನು; ಕೂಡಲೇ ಒಳಗಿದ್ದ ಉತ್ಸಾಹವು ಚಿವುಟಿದಂತಾಯಿತು; “ಜತುಗೇಹಾನಲದಿ೦ . . .” ಎಂಬ ಚರಣವನ್ನು ಪ್ರಾರ೦ಭಿಸಿ, ಸುಮಾರು ೨೫ ಪದ್ಯಗಳನ್ನು ಹಾಡುವವರೆಗೆ ಅವರ ಉತ್ಸಾಹವು ನಿಲ್ಲಲಿಲ್ಲ. ತರುವಾಯ ನಾನು ಗ್ರಂಥತ್ರಯಗಳ ವಿಚಾರವನ್ನು ತಂದುಹಾಕಿ, “ಇದಕ್ಕೆ ಏನು ಹೇಳುವಿರಿ? ನಾನು ಬರೆದುದು ಸರಿಯಲ್ಲವೇ?” ಎಂದು ಕೇಳಿದೆನು. ಅವರು. ನಗುತ್ತ ಎರಡು ನಿಮಿಷಗಳ ಮೇಲೆ “ಯದ್ಭಾವ೦ ತದ್ಭವತಿ” ಎಂದು ನುಡಿದು ತಮ್ಮ ಸಂಭಾಷಣೆಯನ್ನು ಸ್ಕೂಲುಗಳಲ್ಲಿ ಕನ್ನಡ ಕಲಿಸುವ ಕ್ರಮದ ಕಡೆಗೆ ತಿರುಗಿಸಿ, ನನ್ನ ಪ್ರಶ್ನೆಯನ್ನು ತಮ್ಮ ನಗುವಿನಲ್ಲಿ ತೇಲಿಸಿಬಿಟ್ಟರು.

ಮೈಯ ಜಾಡ್ಯದ ನಿಮಿತ್ತವಾಗಿ ಅವರು ಮಂಗಳೂರಿಗೆ ಬ೦ದಿದ್ದರೆಂದು ನನಗೆ ಗೊತ್ತಾಯಿತು. ನಾನು ಅವರನ್ನು ಕಂಡದ್ದು ಇದೇ ಮೊದಲು, ಈ ಮೊದಲಿನ ದರ್ಶನವೇ ಕೊನೆಯ ದರ್ಶನವಾಯಿತು. ಅನಂತರ ಅವರು ಬಹಳ ವರ್ಷ ಬದುಕಲಿಲ್ಲ. ಅವರ ಅಕಾಲ ಮರಣದ ದುಃಖಕರವಾದ ಸಮಾಚಾರವು ಸುವಾಸಿನೀ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಪತ್ರಿಕೆಯ ಸಂಪಾದಕರಾಗಿದ್ದ ಶ್ರೀಯುತ ಬೆನಗಲ ರಾಮರಾಯರು ತಮ್ಮ ಅಗ್ರ ಲೇಖನದಲ್ಲಿ ಅವರ ಗುಣ ಕಥನವನ್ನು ಮಾಡಿ, ಅವರ ನಿಧನದಿಂದ ಕನ್ನಡಕ್ಕೆ ತಗಲಿದ ಹಾನಿಯನ್ನು ವಿಸ್ತರಿಸಿ ಬರೆದರು. ಆ ಸಂದರ್ಭದಲ್ಲಿಯೇ ಉಡುಪಿಯ ‘ಚಕ್ರಧಾರಿ’ ಎಂಬ ಹೆಸರಿನಿಂದ ‘ಜೋಜೋ’ ಮಾತಿನ ಮೇಲೆ ಟಿಪ್ಪಣವನ್ನು ಒಮ್ಮೆ ಸುವಾಸಿನಿಯಲ್ಲಿ ಬರೆದವರು ಲಕ್ಷ್ಮೀನಾರಾಯಣಪ್ಪನವರೇ ಎ೦ಬುದಾಗಿ ಶ್ರೀ ರಾಮರಾಯರು ಬಿಚ್ಚಿ ಹೇಳಿ, ನಂದಳಿಕೆಯವರೇ ಆ ಗ್ರಂಥತ್ರಯಗಳ ಕವಿಗಳೆಂಬುದನ್ನು ಸೂಚಿಸಿದರು. ಈ ವಿಚಾರವನ್ನು ಸುವಾಸಿನಿಯ ಅಗ್ರ ಲೇಖನವು ಕನ್ನಡಿಗರ ಲಕ್ಷ್ಯಕ್ಕೆ ತಂದೊಡ್ಡಿದುದರಲ್ಲಿ ಒಂದು ಪಾಲು ನನಗೂ ಇತ್ತು. ಈ ಸಂದಿಗ್ಧ ವಿಷಯವನ್ನು ಕುರಿತು ಆ ಮಾಸಪತ್ರಿಕೆಯ ಆನಂತರ ಸಂಚಿಕೆಗಳಲ್ಲಿ ಲೇಖಗಳು ಕಾಣುವುದಿಲ್ಲವಾದರೂ, ರಾಮಾಶ್ಚಮೇಧದ ಮೇಲೆ ಯಾರೋ ಇಬ್ಬರಿಂದ ಪ್ರಕಟವಾದ ಒಂದು ವಿಮರ್ಷೆಯು ರಾಮಾಶ್ವಮೇಧವನ್ನು ಮೈಸೂರಲ್ಲಿ ಓದತೊಡಗಿದ್ದರೆಂಬುದಕ್ಕೆ ಸಾಕ್ಷಿಯಾಗಿತ್ತು. ಆ ರಾಮಾಶ್ವಮೇಧವು ನಾರಾಯಣಕೃತ ಗ್ರಂಥವೆಂದರೆ ಕಿಡಿಕಿಡಿಯಾಗುತ್ತಿದ್ದ ಮಂಗಳೂರು ಸೆಂಟ್ ಎಲೋಶಿಯಸ್ ಕಾಲೇಜು ಪಂಡಿತರು ಸುವಾಸಿನಿಯ ಅಭಿಪ್ರಾಯವನ್ನು ಒಪ್ಪಿಕೊಂಡು, ಆ ಶಾಲೆಯ ಅಧಿಕಾರಿಗಳ ಮೂಲಕ ಕಾವ್ಯ ಕಲಾನಿಧಿಯ ಸಂಪಾದಕರಿಗೆ ತಿಳಿಸಲು ಶ್ರೀಯುತ ಎಂ.ಎ. ರಾಮಾನುಜಯ್ಯಂಗಾರ್ಯರು ‘ಈ ಚರ್ಚಾಸ್ಪದವಾದ ವಿಷಯವನ್ನು ನಾರಾಯಣಪ್ಪನವರ ಮಿತ್ರರಿಗೆ ಬಿಟ್ಟಿರುತ್ತೇವೆ’ ಎಂಬುದಾಗಿ ಮೊದಲು ಇಟ್ಟುಕೊಂಡ ಅಭಿಪ್ರಾಯವನ್ನು ಬಿಟ್ಟು, ಅದ್ಭುತ ರಾಮಾಯಣದ ದ್ವಿತೀಯ ಮುದ್ರಣದಲ್ಲಿ ‘ಇವರೇ ಗ್ರಂಥಕರ್ತರಾಗಿದ್ದರೂ ಇರಬಹುದು.  ಇವರಷ್ಟು ಸಮರ್ಥರಾದ ಕವಿಗಳು ಈಗ ಇಲ್ಲವೇ ಇಲ್ಲವೆಂದು ಹೇಳಬಹುದು. ಇವರ ಪದಶಕ್ತಿಯು ಅದ್ಭುತವಾದುದು. ಗದ್ಯ ಗ್ರಂಥಗಳೇ ವಿರಳವಾಗಿದ್ದ ಕಾಲದಲ್ಲಿ ಇಂತಹ ಉತ್ಕೃಷ್ಟ ಗ್ರಂಥಗಳನ್ನು ಬರೆದು ಮಾಡಿದ ಇವರ ಉಪಕಾರವು ಕನ್ನಡ ದೇಶದಲ್ಲಿ ಮರೆಯತಕ್ಕುದಾಗಿಲ್ಲ’  ಎಂಬುದಾಗಿ ಹೊಗಳಿದರು. ರಾಮಾಶ್ವಮೇಧದ. ವಿಷಯವಾಗಿ ಇಂಡಿಯನ್‌ ರಿವ್ಯೂ ಎಂಬ ಮಾಸಪತ್ರಿಕೆಯಲ್ಲಿ ಪ್ರಕಟವಾದ ಒಂದು ಮನೋರಂಜಕವಾದ ಇಂಗ್ಲಿಷ್‌ ಲೇಖವು ಆ ಗ್ರಂಥದ ಪರಿಚಯವನ್ನು ಇಂಗ್ಲಿಷ್‌ ವಾಚಕರ ಲಕ್ಷ್ಮಕ್ಕೆ ತ೦ದುದನ್ನು ಆಲೋಚಿಸಿದರೆ, ರಾಮಾಶ್ಚಮೇಧವು ಆಗಲೇ ಸಕಲರಿಗೂ ಆದರಣೀಯವಾಗುತ್ತ ಬರಹತ್ತಿತೆಂಬುದು ವ್ಯಕ್ತವಾಗುತ್ತದೆ.

ಕವಿಗಳೂ, ಚಿತ್ರಕರೂ, ಶಿಲ್ಪಿಗಳೂ ಇಹಲೊಕದಿಂದ ಹೊರಟು ಹೋಗುವುದಕ್ಕೆ ಮುಂಚಿತವಾಗಿಯೇ ಪ್ರಸಿದ್ಧಿಗೆ ಏರಿದ ಅವರ ಕೃತಿಗಳ ಸಂಗತಿಯನ್ನು ಇತಿಹಾಸವು ಹೇಳುತ್ತದೆ. ಈ ಕೃತಿಗಳಲ್ಲಿ ಹೆಚ್ಚಿನವುಗಳು ಅರಸರ ಆಶ್ರಯ, ಹಣವಂತರ ಸಹಾಯ, ಸ್ಫಮತಸ್ಥರ ಪಕ್ಷಪಾತಗಳ ಬಲದಿಂದ ಬಿರುಸುಗಳಂತೆ ಬೆಳಬೆಳಗಿ ಬಾನಿಗೆ ಏರಿ, ಏರಿದ ಹಾಗೆ ಕೆಳಕ್ಕೆ ಬಿದ್ದು, ಕತ್ತಲಲ್ಲಿ ಕಾಣದೆ ಹೋಗುತ್ತವೆ. ಒ೦ದೆರಡು ಮಾತ್ರವೇ (ಅಂಬಿಗನ ಪಳಿವಾತು, ಬಿಯದಂ ಬರೆದ ಕಬ್ಬ, ಕುಱುಂಬನ ಬಯಲ್ನುಡಿ) ಚಿರ ಜೀವಿಗಳಾಗಿ ಬದುಕಿ ಲೋಕಯಾತ್ರೆಯಲ್ಲಿ ನಮಗೆ ಬೆಳಕನ್ನು ಕೊಡುತ್ತವೆ. ಇಂಥ ಮಹಾ ವರಕವಿಗಳ ತಾರಾಮಂಡಲವನ್ನು ಮುಟ್ಟುವಷ್ಟು ಉನ್ನತವಾದ ಪ್ರತಿಭೆ, ಉದಾತ್ತವಾದ ವಿಚಾರಗಳು, ಉತ್ತಮವಾದ ವಿಷಯಜ್ಞಾನ ಇವು ಲಕ್ಷ್ಮೀನಾರಾಯಣಪ್ಪನವರ ಗಂಥಗಳಲ್ಲಿ ಕಡಮೆ. ಅವರು ಕನ್ನಡ ಗ್ರಂಥಗಳ ಗ೦ಧಗಾಳಿ ಸೋಂಕದ, ಕನ್ನಡ ವಿದ್ವಾಂಸರ ಸುಳಿವು ಕಾಣದ, ಕನ್ನಡ ಪ್ರಾಂತದಿಂದ ಬಹು ದೂರವಾದ ತುಳು ನಾಡಿನ ಬಂಜರು ನೆಲದಲ್ಲಿ ತನ್ನಷ್ಟಕ್ಕೆ ಚಿಗುರಿದ ಗ೦ಧದ ಸಸಿಯಂತೆ ಇದ್ದು, ಬಲಿತು ಬೆಳೆಯುವ ಮೊದಲೇ ಬಿದ್ದುಹೋದರು. ಹೀಗಾದುದರಿ೦ಂದ ಅವರ ಅದ್ಭುತವಾದ ಪದಶಕ್ತಿ, ಅನ್ಯಾದೃಶವಾದ ವಾಕ್ಸರಣಿ, ಹೊಸತನ್ನು ಹಳೆಯದಾಗಿಯೂ, ಹಳೆಯದನ್ನು ಹೊಸದಾಗಿಯೂ ಮಾಡುವ ಮಾಟಗಾರಿಕೆ ಮನಸ್ಸಿಗೆ ಅಸಹ್ಯವಾಗದ ಶೃಂಗಾರ, ಕಲ್ಲೆದೆಯನ್ನು ಕರಗಿಸತಕ್ಕ ಕರುಣೆ, ಇವುಗಳ ನರುಗಂಪೇ ಮೂಗಿಗೆ ಬರುತ್ತದೆ. ರನ್ನ ಜನ್ನಾದಿಗಳ ಕವಿತಾ ಸೌಗ೦ಧವೂ, ಶ್ರೀಯುತ ರವೀ೦ದ್ರನಾಥರ ಪುಷ್ಪಗಂಧವೂ ಈ ಕೃತಿಗಳಲ್ಲಿ ಇಲ್ಲವೆ೦ದು ತೋರಿದರೂ, ೨೦೦ ವರ್ಷಗಳ ಈಚೆಯಿಂದ ಮುಳ್ಳುಪೊದೆಯಾಗಿ ಬಿದ್ದಿದ್ದ ಕನ್ನಡ ತೋಟವು ರಾಮಾಶ್ವಮೇಧದಂತಹ ಒಂದು ಹೂವನ್ನಾದರೂ ಲೋಕಕ್ಕೆ ಕೊಟ್ಟಿತೆಂಬುದಕ್ಕೆ ನಾವು ಹೆಚ್ಚಳಪಡಬೇಕು.

ಗ್ರಂಥಕಾರರ ಆಯುಷ್ಕಾಲದಲ್ಲಿ ಅವರನ್ನು ಕಣ್ಣೆತ್ತಿ ನೋಡದ ಜನರು ಅವರ ಅವಸಾನಾನ೦ಂತರ ಪ್ರಸಿದ್ಧಿಗೆ ಬರುವ ಅವರ ಕೃತಿಗಳನ್ನು, ಮೆಲ್ಲಮೆಲ್ಲನೆ ಓದತೊಡಗುವ ಕಾರಣದಿಂದ ವಾಙ್ಮಯವು ಕ್ರಮೇಣ ಕಣ್ಣಿಗೆ ಕಾಣದಂತೆ ಮಾರ್ಪಡುವುದೆಂಬ ಹೇಳಿಕೆಗೆ ರಾಮಾಶ್ವಮೇಧವು ಒಂದು ದೃಷ್ಟಾಂತವಾಗಿದೆ. ಶ್ರೀಯುತ ಮುಳಿಯದ ತಿಮ್ಮಪ್ಪಯ್ಯನವರ “ಚಂದ್ರಾವಳಿ”ಯು ರಾಮಾಶ್ವಮೇಧದ ಅಚ್ಚಿನಲ್ಲಿ ಎರಕಹೊಯ್ದ ಗಂಥ. ಆರ್. ವೆ೦ಕಟಸುಬ್ಬರಾಯರ ಎಂಬುದರ ಕನ್ನಡ ಅನುವಾದದಲ್ಲಿ ಗಂಡ ಹೆಂಡಿರು ತಮ್ಮೊಳಗೆ ಪರಸ್ಪರ ಸಂಬೋಧಿಸಿಕೊಳ್ಳುವ ಮೆಚ್ಚಿನ ಮಾತುಗಳು ಬಹುಶಃ ಮುದ್ದಣ ಮನೋರಮೆಯರ “ಒಲ್ಮೆಯ ನುಡಿಗಳೇ” . ರಾಮಾಶ್ಚಮೇಧವು ಕೈಗೆ ಸಿಕ್ಕದೆ ಹೋಗಿದ್ದರೆ, “ಶ್ರೀನಿವಾಸನ”  ನವಿಲ್ಗರಿಯ ಚಿತ್ರದ ಕಡ್ಡಿಯು ವೆಂಕಟಾಚಾರ್ಯರ ಕಾದಂಬರೀ ಭಾಷಾ ಮಾರ್ಗಕ್ಕೆ ತಿರುಗುತ್ತಿತ್ತೋ ಏನೋ, ಯಾರಿಗೆ ಗೊತ್ತು? ಇನ್ನೂ ಶ್ರೀಯುತ ಡಿ.ವಿ.ಗುಂಡಪ್ಪನವರ ಮುತ್ತುಗಳಂತಿರುವ ಮಾತುಗಳಲ್ಲಿಯೂ, ರತ್ನಗಳ೦ತಿರುವ ಪದ್ಯಗಳಲ್ಲಿಯೂ ಮಿನುಗುವ ಬಣ್ಣ ಬಣ್ಣದ ಛಾಯೆಗಳು ರಾಮಾಶ್ವಮೇಧವು ಬೆಳಕಿಗೆ ಬಂದುದರ ‘ಪ್ರತಿಫಲವೊ’ ಎಂಬ ಅನುಮಾನವಾಗುತ್ತದೆ. ಇಂಗ್ಲಿಷ್‌ ವಿದ್ಯೆಯ ಹುಳಿಯಿ೦ಂದ ನಮ್ಮ ನಾಲಗೆಯು ಕನ್ನಡವನ್ನು ‘ಸವಿದು ನೋಡದೆ’ ಅದು ಹಾಳು, ಹೊಲಸು ಎ೦ದು ಹಳಿಯುತ್ತ ಬರುತ್ತಿದ್ದ ಕಾಲದಲ್ಲಿ, ಸಾಹಿತ್ಯ ಪರಿಷತ್ತು, ಕನ್ನಡ ಏಕೀಕರಣ ಮಂಡಳವೂ ಕನ್ನಡ ವಿಜಯದ್ವಜವನ್ನು ಎತ್ತಿಹಿಡಿದು ಶಂಖನಾದವನ್ನು ಮಾಡುವ ಮೊದಲೇ ‘ತಿರುಳ್ಗನ್ನಡದಲ್ಲಿ ಬಿಗುಪು ಇದೆ, ಇಂಪು ಇದೆ; ಧನಿ ಇದೆ, ಧಾಟಿ ಇದೆ; ಜೀವಾಳ ಇದೆ, ಜೀವಕಳೆ ಇದೆ; ನಾನು ಕೇಳಿದ್ದೇನೆ, ಕಂಡಿದ್ದೇನೆ- ಬೇಕಾದರೆ ಕೊಡುತ್ತೇನೆ’ ಎಂದು ತಾಯಿಯನ್ನು ಕಾಣದ ಗುಡ್ಡದ ಮರೆಯ ಕರುವಿನ ಕೂಗಿನಿಂದ ಕೂಗಿ, ನಮ್ಮ ಕಿವಿಗಳನ್ನು ನಿಮಿರಿಸುವ ಹಾಗೆ ಮಾಡಿದ ಪುಣ್ಯವು ಅದ್ಭುತ ರಾಮಾಯಣ, ರಾಮಾಶ್ಚಮೇಧಗಳನ್ನು ವಿರಚಿಸಿದ‌ ಕೈಲಾಸವಾಸಿ ನಂದಳಿಕೆ ಲಕ್ಷ್ಮೀನಾರಾಯಣಪ್ಪನವರ ಸೆರಗಿಗೆ ಬೀಳಲಿ!

ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು ಯಶಶ್ಶೇಷರಾದರು. ಯಾವ ವಿದ್ವಾಂಸರ ಪುರಸ್ಕಾರವನ್ನು ಪಡೆಯುವುದಕ್ಕಾಗಿ ಅವರು ತಮ್ಮ ಹೆಸರನ್ನು ಆಗಾಗ ಬೇರ್ಪಡಿಸಿದರೋ, “ತಿರುಳ್ಳನ್ನಡಿನಡಿದಾವರೆಯ ಬಂಡುಣಿಗಳಪ್ಪ” ಯಾವ ‘ಕನ್ನಡ ಕಬ್ಬಿಗರ ಮನೆಯೂಳಿಗದವನೆಂದು’ ತೋರಿಸಿಕೊಂಡರೋ, “ಜಗದಿ ಪುಟ್ಟಿದವರಿಗೆ ಮನದ ಬಯಕೆ ಪಿರಿದು” ಆದುದರಿಂದ “ಕನ್ನಡತಿಯೊರೆದ ನುಡಿಯೆಂದಿದಂ ಭಾವಿಸದೆ ಕನ್ನಡಿಗನೊರೆದ ನುಡಿಯೆಂದು ಸಂಭಾವಿಪುದೆಂದು” ಯಥಾರ್ಥವಾಗಿ ಯಾವ ವಿದ್ವಜ್ಜನರೊಂದಿಗೆ ಬೇಡಿಕೊ೦ಂಡರೋ, ಆ ಮೈಸೂರು ಕರ್ನಾಟಕಾಭಿಮಾನಿಗಳೇ ಲಕ್ಷ್ಮೀನಾರಾಯಣಪ್ಪನವರ ಯಶಸ್ಸಿನ ಸಮಾರಾಧನೆಯನ್ನು ಕೈಕೊಂಡು, ಅವರ ವಿಷಯವಾದ ಉಪನ್ಯಾಸಗಳನ್ನೂ, ಅವರ ಚಿತ್ರ ಸ್ಥಾಪನೆಯನ್ನೂ, ಅವರ ಹೆಸರಿನಲ್ಲಿ ಪದಕಗಳನ್ನೂ ಉಚಿತಗಳನ್ನೂ ಅಟ್ಟು ಅಳವಡಿಸುತ್ತಿದ್ದಾಗ- ಅವರು ಜನಿಸಿದ ಜಿಲ್ಲೆಯಲ್ಲಿಯೇ ಜನಿಸಿ, ಅವರು ಇದ್ದ ಕಾಲದಲ್ಲಿಯೇ ಇದ್ದು ಅವರು ಬರೆದ ಗ್ರಂಥಗಳಿಂದ ಉತ್ಕರ್ಷಗೊಂಡ ನನ್ನ೦ಥವನು ಆ ಯಶಸ್ಸಿನ ಸಮಾರಾಧನೆಗಾಗಿ ಅವರ ಹೊರಗಿನ ಜೀವನ ಕ್ರಮವನ್ನೂ ಒಳಗಿನ ಆಂತರ್ಯ ಸ್ಥಿತಿಯನ್ನೂ, ತೆರೆದು ತೋರಿಸಲಿಕ್ಕೆ ಸಹಾಯಕವಾದ ಅವರ ಚರ್ಯೆ‌ ಚೇಷ್ಟೆಗಳನ್ನೂ, ಸುಖದುಃಖದ ಸಂದರ್ಭಗಳನ್ನೂ, ನಡೆನುಡಿಗಳನ್ನೂ ಕಾಗದ ಪತ್ರಗಳ ಅಧಾರದಿಂದ ಬರೆದಿದ್ದರೆ ಈ ಲೇಖವು ಎಷ್ಟು ರುಚಿಯಾಗುತ್ತಿತ್ತು! ಆದರೆ ಮಾಡುವುದೇನು? ನನ್ನಲ್ಲಿ ಬೇಕಾದ ಸಂಗ್ರಹವೂ ಇಲ್ಲದೆ ಬರೆಯುವ ಶಕ್ತಿಯೂ ಸಾಲದೆ ಕೈ||ಲಕ್ಷ್ಮೀನಾರಾಯಣಪ್ಪನವರ ವಿಷಯವಾಗಿ ನನಗೆ ಗೊತ್ತಿದ್ದಷ್ಟನ್ನೂ ಕಲಸಿ, ಈ ಗೊಡ್ಡು ಸಾರನ್ನು ಮಾಡಬೇಕಾಗಿ ಬಂದಿತು.

ಸತ್ತವರ ಆತ್ಮವು ಸ್ಮರಿಸಿದ ಮಾತ್ರಕ್ಕೆ ಕೆಳಕ್ಕೆಇಳಿಯುತ್ತದೆಂಬ ಒಂದು ಹಿರಿಯರ ಹೇಳಿಕೆ ಇದೆ. ಸತ್ತವನ ಆತ್ಮವು ತಿರುಗಿ ಜನ್ಮಕ್ಕೆ ಬೀಳಬಾರದೆಂಬ ಅಭಿಪ್ರಾಯದಿಂದ ಸತ್ತವನನ್ನು ಸ್ಮರಿಸುವುದೇ ಕಡಿಮೆ, ಆತನು ಉಂಡಿದ್ದ ತಟ್ಟೆ, ಉಟ್ಟಿದ್ದ ಬಟ್ಟೆ, ಹಿಡಿದಿದ್ದ ಕಡ್ಡಿ, ಬರೆದಿದ್ದ ಕಾಗದ ಮುಂತಾದುವುಗಳನ್ನು ಅವನ ಹಿಂದೆಯೇ ದಾನಮಾಡಿ ಬಿಡುವುದು ರೂಢಿಯಾಗಿದೆ. ಮೃತನ ವಿಷಯವಾಗಿ ಮಾತುಕಥೆಯನ್ನು ಆಡರು; ಆತನ ಹೆಸರನ್ನು ಉಚ್ಚರಿಸಲೊಲ್ಲರು; ಮೃತನ ಹೆಸರುಳಿಯದಂತೆ ಮಾಡುವ ಈ ಪದ್ಧತಿಯ ಕೆಲಸವನ್ನು ನಮ್ಮಲ್ಲಿ ಸಹಜವಾಗಿರುವ ಆಲಸ್ಯವೂ, ಬಡತನವೂ ಸ೦ಪೂರ್ಣ ಮಾಡುತ್ತದೆ. ಇದರ ದೆಸೆಯಿಂದ ಮಹನೀಯರ ಚರಿತೆಗೆ ಬೇಕಾದ ಲೇಖನ ಸಾಮಾಗ್ರಿಗಳಿಗೆ ನಮ್ಮಲ್ಲಿ ದೊಡ್ಡ ಅಭಾವವೆಂದು ವಿಷಾದಿಸಬೇಕಾಗಿದೆ. ಆದರೆ ಇನ್ನೊಂದು ದೃಷ್ಟಿಯಿಂದ ನೋಡಿದರೆ, ಈ ಪದ್ಧತಿಯು ಅಷ್ಟೊಂದು ಹಾಳೆಂದು ತಿಳಿಯಲಾಗದು. ಅದು ಅಸೂಯೆಯ ಬಾಯನ್ನು ಮುಚ್ಚುತ್ತದೆ; ಹಗೆಯ ಕೈಯ್ಯನ್ನು ಕಟ್ಟುತ್ತದೆ. ಸದ್ಗತಿಯನ್ನು ಪಡೆದವರು ಈ ಜನ್ಮದಲ್ಲಿದ್ದಾಗ ಮಾಡಿದ ಕಾರ್ಯಾಕಾರ್ಯಗಳ ವಿಮರ್ಶೆಯನ್ನೂ, ಅವರ ವಿವಿಧ ಆಲೋಚನೆಗಳ ಪರಿಶೀಲನವನ್ನೂ, ಅವರ ಉದ್ದೇಶ ಧ್ಯೇಯಗಳ ವಿಚಾರವನ್ನೂ ಮಾಡುವುದಕ್ಕೆ ನಮಗೇನು ಅಧಿಕಾರ? ಅಧಿಕಾರವಿದ್ದರೂ ಆ ಅಧಿಕಾರವನ್ನು ನಡಿಸುವಾಗ ಅಧಿಕಾರಿಯ ರಾಗದ್ವೇಷಗಳಿ೦ದ ಮೃತನ ಹೆಸರಿನ ಮೇಲೆ ಸಲ್ಲದ ಭೂಷಣೆಯೊ ಇಲ್ಲದ ದೂಷಣೆಯೊ ಬೀಳಲಿಕ್ಕಿಲ್ಲವೆಂದು ಹೇಗೆ ಹೇಳಬಹುದು? ಹೀಗಾದುದರಿಂದ ಕೈ||ನಂದಳಿಕೆ ಲಕ್ಷ್ಮೀನಾರಾಯಣಪ್ಪನವರಲ್ಲಿ ನನಗಿದ್ದ ಅಭಿಮಾನದಿಂದ ಬರೆಯಲ್ಪಟ್ಟ ಈ ಲೇಖದಲ್ಲಿ ಅವರ ಹೆಸರಿನ ಮೇಲೆ ನನ್ನ ಕೈಯಿಂದ ಪ್ರಮಾದವಶಾತ್‌ ಮಸಿಯ ಬೊಟ್ಟು ಬಿದ್ದಿದ್ದರೆ, ಅದನ್ನು ತೊಡೆದು ಬಿಡಬೇಕಾಗಿ ವಾಚಕರೊಡನೆ ಬಿನ್ನಯಿಸುತ್ತೇನೆ.

(ಪ್ರಬುದ್ಧ ಕರ್ನಾಟಕ: ೧೯೨೯)

2 comments to “ಇಂದಿಗೂ ಕರೆಂಟು : ಪಂಜೆ ಮಂಗೇಶರಾಯರು ಬರೆದ ಲೇಖನ “ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು””
 1. ಹಳಬರ, ದೊಡ್ಡವರ ಬರಹಗಳನ್ನು ಹತ್ತು ಜನರ ಓದಿಗೆ ಒದಗಿಸಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಋತುಮಾನದ ಬಳಗಕ್ಕೆ ತುಂಬ ಥ್ಯಾಂಕ್ಸ್.

  ಪಂಜೆಯವರ ಈ ಬರಹದಲ್ಲಿ ಎಂಥ ಓಘವಿದೆ, ಓಜಸ್ಸಿದೆ, ವಿನಯವಿದೆ! ಈ ಬರಹವನ್ನು ಸಂಪಾದಕರ ಗಮನಕ್ಕೆ ತಂದ ಮಳಗಿಯವರಿಗೂ ತುಂಬ ಥ್ಯಾಂಕ್ಸ್.

  ಬರಹದ ಉದ್ದಕ್ಕೂ ಚಂದದ ಹಲವು ಮಾತಿದೆ. ಅಂಥ ಮಾತಿನ ಪೈಕಿ ಒಂದು ಮಾತು:

  ಅಂಬಿಗನ ಪೞವಾತು, ಬಿಯದಂ ಬರೆದ ಕಬ್ಬ, ಕುಱುಂಬನ ಬಯಲ್ನುಡಿ

  ಒಗಟಿನಂತಿದೆಯಲ್ಲವೆ ಆ ಮಾತು? ಅದರ ಮರ್ಮ ಕೆಲವರಿಗೆ ಗೊತ್ತಾಗದೇ ಇರಬಹುದು. ಹಾಗಾಗಿ ವಿವರಿಸುತ್ತಿದ್ದೇನೆ. ಆ ಮಾತಿನ ಅರ್ಥ:

  ಅಂಬಿಗನ ಪೞವಾತು = ಅಂಬಿಗನ ಜ್ಞಾನಪೂರಿತವಾದ, ಪ್ರಾಚೀನವಾದ, ಗುಣಮಟ್ಟದಲ್ಲಿ ಹಿರಿದಾದ ಮಾತು. ಅರ್ಥಾತ್, ಇಲ್ಲಿ, ಪೞವಾತು ಅಂದರೆ ವೇದ.

  ಬಿಯದಂ ಬರೆದ ಕಬ್ಬ = ವ್ಯಾಧನು ಬರೆದ ಕಾವ್ಯ

  ಕುಱುಂಬನ ಬಯಲ್ನುಡಿ = ಕುರುಬನ ಬಯಲು ನುಡಿ. ವಿಸ್ತಾರವಾದ ಧ್ವನಿಶಕ್ತಿಯುಳ್ಳ, ಅನಂತವಾದ ನುಡಿ. ಅರ್ಥಾತ್, ಸಾವಿಲ್ಲದ, ಅಜರಾಮರವಾದ ನುಡಿ.

  ಅಂಬಿಗನೆಂದರೆ ವೇದವ್ಯಾಸ , ಅಂಬಿಗಳಾದ ಯೋಜನಗಂಧಿಯಲ್ಲಿ ಹುಟ್ಟಿದವನು. ವ್ಯಾಧನೆಂದರೆ ವಾಲ್ಮೀಕಿ. ಕುರುಬನೆಂದರೆ…? ಇನ್ನು ಯಾರು? ಕಾಳಿದಾಸ.

  ಒಂದು ಸಂದೇಹ. ಬೆಳ್ನುಡಿ ಎಂದಿರಬೇಕಾದ್ದು ಬಯಲ್ನುಡಿ ಎಂದು ಮೂಡಿಬಿಟ್ಟಿದೆಯೋ? ಓರಿಯಂಟ್ ಲಾಂಗ್‍ಮನ್ ಅವರು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿರುವ ಪಂಜೆಯವರ ಬರಹಗಳ ಪೈಕಿ ನಾಲ್ಕನೆಯ ಸಂಪುಟದಲ್ಲಿ ಈ ಪ್ರಬಂಧವಿದೆ. ಅಲ್ಲಿಯೂ ಕುರುಬನ ನುಡಿಯನ್ನು ಕುರಿತ ಈ ಮಾತು ಬಯಲ್ನುಡಿ ಎಂದೇ ಅಚ್ಚಾಗಿದೆ. ಆದರೂ ಅದು ಪಂಜೆಯವರ ಮೂಲಲೇಖನದಲ್ಲಿ ಬೆಳ್ನುಡಿ ಎಂದೇ ಆಗಿದ್ದು, ಪ್ರಕಟಗೊಳ್ಳುವಾಗ ಬಯಲ್ನುಡಿ ಎಂದು ಅಚ್ಚಾಗಿಬಿಟ್ಟಿತೇ ಎಂಬ ಅನುಮಾನವಿದೆ ನನಗೆ. ಯಾಕೆಂದರೆ, ಓರಿಯಂಟ್ ಲಾಂಗ್‍ಮನ್ ಅವರು ಹೊರತಂದಿರುವ ಆ ಸಂಪುಟಗಳಲ್ಲಿ ಅಲ್ಲಲ್ಲಿ ಇಂಥ ಅಚ್ಚಿನ ತಪ್ಪುಗಳಿವೆ.

  ಬೆಳ್ನುಡಿ ಅಂದರೆ ಸವಿಯಾದ ನುಡಿ, ಪ್ರಕಾಶಮಾನವಾದ ನುಡಿ. ಕಾಳಿದಾಸನ ಕಾವ್ಯಕ್ಕೆ ಬೆಳ್ನುಡಿ ಅನ್ನುವ ಮೆಚ್ಚಿಗೆಯ ಮಾತು ಒಪ್ಪುತ್ತದೆ. ಅಲ್ಲದೆ, ಮುದ್ದಣನ ರಾಮಾಶ್ವಮೇಧಂ ಕಾವ್ಯದಲ್ಲಿ ಮುದ್ದಣ, ಮನೋರಮೆಯರ ಸಂವಾದದ ಕಡೆಕಡೆಯಲ್ಲಿ ಈ ಮಾತು ಬರುತ್ತದೆ:

  ಮನೋರಮೆ: ತಿರುಳ್ಗನ್ನಡದ ಬೆಳ್ನುಡಿಯೊಳೆ ಪುರುಳೊಂದೆ ಪೇೞ್ವುದು. ಕನ್ನಡಂ ಕತ್ತುರಿಯಲ್ತೆ.

 2. ಕಷ್ಟಪಟ್ಟು ಹುಡುಕಬೇಕಾಗಿದ್ದ ಬರಹವೊಂದು ಬಲು ಸುಲಭವಾಗಿ ಋತುಮಾನದ ಓದುಗರಿಗೆ ಸಿಗುವಂತೆ ಮಾಡಿದ್ದೀರಿ.ಧನ್ಯವಾದಗಳು🙏

ಪ್ರತಿಕ್ರಿಯಿಸಿ