ಕೊರೋನಾ ವೈರಾಣು ಒಂದು ಬಿಕ್ಕಟ್ಟು ನಿಜ, ಆದರೆ ದುರಂತವಾಗಬೇಕಾಗಿಲ್ಲ

ಪೂರ್ವ ಏಷ್ಯಾ ಹಾಗೂ ಐರೋಪ್ಯ ದೇಶಗಳು ತಮ್ಮ ಆರ್ಥಿಕತೆಯನ್ನು ನಿಧಾನವಾಗಿ ಮತ್ತೆ ಪ್ರಾರಂಭಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಬರುವ ದಿನಗಳಲ್ಲಿ ಈ ಪಿಡುಗು ಇನ್ನಷ್ಟು ಭೀಕರವಾಗಬಹುದೇನೋ ಎಂಬ ಆತಂಕದಲ್ಲಿ ಜಗತ್ತಿನ ದಕ್ಷಿಣದ ಭಾಗಗಳು ಇವೆ. ಅರ್ಥಶಾಸ್ತ್ರಜ್ಞರಾಗಿ ನಾವು ಅಭಿವೃದ್ಧಶೀಲ ರಾಷ್ಟ್ರಗಳಲ್ಲಿ ಬಡತನ ನಿರ್ಮೂಲನದ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ದಕ್ಷಿಣ ಏಷ್ಯಾ ಹಾಗೂ ಆಫ್ರಿಕಾದ ಮೇಲೆ ಕೊರೋನಾ ವೈರಾಣುವಿನ ಪರಿಣಾಮ ಹೇಗಿರಬಹುದು ಅಂತ ಜನ ನಮ್ಮನ್ನು ಕೇಳುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ನಮಗೆ ಗೊತ್ತಿಲ್ಲ. ನಿಜವಾಗಿ ಸೋಂಕು ಎಷ್ಟು ಜನರಿಗೆ ತಗುಲಿದೆ, ಅದು ಎಷ್ಟು ವ್ಯಾಪಕವಾಗಿ ಹರಡಿದೆ ಅನ್ನುವುದು ಗೊತ್ತಾಗಬೇಕು. ಅದಕ್ಕೆ ವ್ಯಾಪಕವಾಗಿ ಪರೀಕ್ಷೆ ನಡೆಯಬೇಕು. ಕೋವಿಡ್-೧೯ ವಿಭಿನ್ನ ಪರಿಸ್ಥಿತಿಯಲ್ಲಿ ಅಂದರೆ ಸೂರ್ಯನ ಬೆಳಕಿನಲ್ಲಿ, ಬಿಸಿಲಿನಲ್ಲಿ, ತೇವಾಂಶ ಹೆಚ್ಚಿದ್ದಾಗ ಹೇಗೆ ವರ್ತಿಸುತ್ತದೆ ಎಂಬುದು ನಮಗಿನ್ನು ಸ್ಪಷ್ಟವಾಗಿ ಗೊತ್ತಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳ ಯುವಕರನ್ನು ಕೊರೋನಾ ಅಷ್ಟು ಗಂಭೀರವಾಗಿ ಕಾಡದೇ ಇರಬಹುದು. ಆದರೆ ಜಗತ್ತಿನ ದಕ್ಷಿಣ ಭಾಗದಲ್ಲಿ ಇರುವ ಆರೋಗ್ಯ ವ್ಯವಸ್ಥೆ ಈ ಪಿಡುಗನ್ನು ನಿರ್ವಹಿಸುವುದಕ್ಕೆ ಸಾಲುವುದಿಲ್ಲ. ಅದು ತುಂಬಾ ದುರ್ಬಲವಾಗಿದೆ. ಜೊತೆಗೆ ಅಲ್ಲಿ ಬಡತನವೂ ವ್ಯಾಪಕವಾಗಿದೆ. ಅದು ಖಾಯಿಲೆಯನ್ನು ಮತ್ತಷ್ಟು ಗಂಭೀರವಾಗಿಸುತ್ತದೆ.

ಬಡದೇಶಗಳಲ್ಲಿ ಸೋಂಕಿತರ ಪರೀಕ್ಷೆ ಅಷ್ಟು ವ್ಯಾಪಾಕವಾಗಿ ನಡೆದಿಲ್ಲ. ಹಾಗಾಗಿ ಸ್ಪಷ್ಟ ಕ್ರಮ ತೆಗೆದುಕೊಳ್ಳುವುದಕ್ಕೆ ಬೇಕಾದ ಮಾಹಿತಿ ಇಲ್ಲ. ಅದರಿಂದಾಗಿ ಬಡದೇಶಗಳು ತೀರಾ ಎಚ್ಚರಿಕೆಯ ಹಾದಿಯನ್ನು ಹಿಡಿದಿವೆ. ಮಾರ್ಚ್ ೨೪ರಂದು ಭಾರತದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬಂತು. ಆಗ ದೇಶದಲ್ಲಿ ಸುಮಾರು ೫೦೦ ಜನ ಸೋಂಕಿತರಿದ್ದರು. ರುವಾಂಡ, ದಕ್ಷಿಣ ಆಫ್ರಿಕ ಮತ್ತು ನೈಜೀರಿಯಾದಂತಹ ದೇಶಗಳು ಮಾರ್ಚ್ ಕೊನೆಯಲ್ಲಿ ಲಾಕ್‌ಡೌನ್ ಜಾರಿಗೆ ತಂದವು. ಆಗಿನ್ನೂ ವೈರಾಣು ಸೋಂಕು ಪೀಕ್ ತಲುಪಿರಲಿಲ್ಲ. ಆದರೆ ಈ ಲಾಕ್‌ಡೌನ್ ತುಂಬಾ ದಿನ ಮುಂದುವರಿಯಲು ಸಾಧ್ಯವಿಲ್ಲ. ಆದರೆ ಹೀಗೆ ಪ್ರತ್ಯೇಕತೆಯನ್ನು ಜಾರಿಯಲ್ಲಿಡುವುದರಿಂದ, ಬಡರಾಷ್ಟ್ರಗಳಿಗೆ ಒಂದಿಷ್ಟು ಸಮಯ ಸಿಗುತ್ತದೆ. ಅಷ್ಟರಲ್ಲಿ ಈ ಸೋಂಕು ಹೇಗೆ ವರ್ತಿಸುತ್ತದೆ ಎಂಬುದನ್ನು ಕುರಿತಂತೆ ಒಂದಿಷ್ಟು ಮಾಹಿತಿ ಸಂಗ್ರಹಿಸುವುದಕ್ಕೆ ಸಾಧ್ಯವಾಗುತ್ತದೆ. ಅದನ್ನು ಆಧರಿಸಿ ಪರೀಕ್ಷಿಸುವುದಕ್ಕೆ ಹಾಗೂ ಸೋಂಕಿತರನ್ನು ಗುರುತಿಸುವುದಕ್ಕೆ ಸೂಕ್ತವಾದ ಮಾರ್ಗವನ್ನು ರೂಪಿಸಿಕೊಳ್ಳಬಹುದು. ಆದರೆ ಈ ನಿಟ್ಟಿನಲ್ಲಿ ಮಹತ್ವದ ಕೆಲಸ ಆಗಿಲ್ಲ. ಶ್ರೀಮಂತ ರಾಷ್ಟ್ರಗಳು ಇವರ ನೆರವಿಗೆ ಬರುವ ಬದಲು ಪಿಪಿಇ, ಆಮ್ಲಜನಕ, ವೆಂಟಿಲೇಟರ‍್ಸ್ ಇವುಗಳನ್ನು ಪಡೆದುಕೊಳ್ಳುವ ರೇಸಿನಲ್ಲಿ ಬಡರಾಷ್ಟ್ರಗಳನ್ನು ಬುಡಮೇಲು ಮಾಡುತ್ತಿವೆ.

ಲಾಕ್‌ಡೌನಿನಿಂದ ಅಪಾರ ಸಾವುನೋವು ಸಂಭವಿಸುತ್ತವೆ. ಇದು ಹಲವು ದೇಶಗಳ ಅನುಭವದಿಂದ ಈಗಾಗಲೇ ಸ್ಪಷ್ಟವಾಗಿದೆ. ಮಕ್ಕಳಿಗೆ ಲಸಿಕೆಗಳು ಸಿಗುತ್ತಿಲ್ಲ. ಬೆಳೆಗಳ ಕುಯ್ಲು ನಡೆಯುತ್ತಿಲ್ಲ. ನಿರ್ಮಾಣದ ಯೋಜನೆಗಳು ನಿಂತಿವೆ. ಮಾರುಕಟ್ಟೆಗಳು ಛಿದವಾಗಿವೆ, ಉದ್ಯೋಗ ಹಾಗೂ ವರಮಾನ ಮಾಯವಾಗಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ದೀರ್ಘಕಾಲದ ಕ್ವಾರಂಟೈನ್, ವೈರಾಣುವಿನಷ್ಟೇ ಹಾನಿಕಾರಕ. ಕೋವಿಡ್-೧೯ ಜಗತ್ತನ್ನು ಆಕ್ರಮಿಸುವ ಮೊದಲು ಜಗತ್ತಿನ ದಕ್ಷಿಣ ಭಾಗದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು ೧೫೦೦೦ ಮಕ್ಕಳು ಬಡತನಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ಪ್ರತಿದಿನ ಸಾಯುತ್ತಿದ್ದರು. ಇನ್ನಷ್ಟು ಕುಟುಂಬಗಳು ಬಡತನದ ಅಂಚಿಗೆ ಸರಿದರೆ ಹಾಗೆ ಸಾಯುವವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು.
ಬಡರಾಷ್ಟ್ರಗಳು ಈ ಪಿಡುಗಿನ ಸಮಯದಲ್ಲಿ ಏನು ಮಾಡಬಹುದು? ಶ್ರೀಮಂತ ರಾಷ್ಟ್ರಗಳು ಅವುಗಳಿಗೆ ಹೇಗೆ ನೆರವಾಗಬಹುದು? ಮೊದಲಿಗೆ ಈ ಪಿಡುಗನ್ನು ತಹಬಂದಿಗೆ ತರುವುದಕ್ಕೆ ಮತ್ತು ಲಾಕಡೌನ್ ಕ್ರಮಗಳನ್ನು ಸಡಿಲಗೊಳಿಸುವುದಕ್ಕೆ ಪರೀಕ್ಷೆ ಹೆಚ್ಚು ವ್ಯವಸ್ಥಿತವಾಗಿ ನಡೆಯಬೇಕು. ಅದಕ್ಕಾಗಿ ಒಂದು ಪರಿಣಾಮಕಾರಿಯಾದ ಯೋಜನೆಯನ್ನು ರೂಪಿಸುವುದು ತಂಬಾ ಮುಖ್ಯ. ಯೂರೋಪಿನಲ್ಲಿ ಈ ಕ್ರಮದಿಂದ ಅನುಕೂಲವಾಗಿದೆ. ಸೋಂಕು ಹರಡುವುದನ್ನು ಕುರಿತಂತೆ ನಮಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದಾಗ ಹಾಗೂ ಸಾಕಷ್ಟು ಸಂಪನ್ಮೂಲಗಳು ಇಲ್ಲದಿದ್ದಾಗ ಸಕ್ರಿಯವಾಗಿರುವ ಹಾಟ್ ಸ್ಪಾಟ್‌ಗಳ ಕಡೆ ಗಮನಕೊಡುವುದು ಸೂಕ್ತ. ಹೀಗೆ ಮಾಡುವುದರಿಂದ ಸಾರ್ವತ್ರಿಕವಾಗಿ ಲಾಕ್‌ಡೌನ್ ಹೇರಬೇಕಾಗುವುದಿಲ್ಲ. ಕೇವಲ ಕ್ವಾರಂಟೈನ್ ಅವಶ್ಯಕವಾಗಿರುವ ತಾಣಗಳನ್ನು ಗುರುತಿಸಿ, ಕ್ರಮ ತೆಗೆದುಕೊಳ್ಳಬಹುದು.

ಎರಡನೆಯದಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಮ್ಮಲ್ಲಿರುವ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದಕ್ಕೆ ಸಾಧ್ಯವಾಗಬೇಕು. ಸೋಂಕಿತರ ಒಳಹರಿವು ದಿಢೀರನೆ ಹೆಚ್ಚಾದಾಗ ಅದನ್ನು ನಿರ್ವಹಿಸುವುದಕ್ಕೆ ಬೇಕಾದ ವ್ಯವಸ್ಥೆ ನಮ್ಮಲ್ಲಿರಬೇಕು.

ಮೂರನೆಯದಾಗಿ, ಬಡರಾಷ್ಟ್ರಗಳ ಜನರಿಗೆ ಜೀವನ ಭದ್ರತೆಯ ಖಾತ್ರಿ ಇರಬೇಕು. ಸರ್ಕಾರ ಮುಂಬರುವ ತಿಂಗಳುಗಳಲ್ಲಿ ಅದನ್ನು ಒದಗಿಸುವ ಭರವಸೆಯನ್ನು ಜನರಿಗೆ ಕೊಡಬೇಕು. ಅಂತಹ ಖಾತ್ರಿಯನ್ನು ಕೊಡುವುದಕ್ಕೆ ಸಾಧ್ಯವಾಗದೇ ಹೋದರೆ ಜನ ಕ್ವಾರಂಟೈನ್‌ನಿಂದ ಬಳಲಿಹೋಗುತ್ತಾರೆ. ಲಾಕ್‌ಡೌನನ್ನು ಜಾರಿಯಲ್ಲಿಡುವುದು ಕಷ್ಟವಾಗುತ್ತದೆ. ಜೊತೆಗೆ ಆ ದೇಶಗಳ ಆರ್ಥಿಕತೆಯ ಬೇಡಿಕೆಯು ಕುಸಿಯಬಾರದು. ಆ ದೃಷ್ಟಿಯಿಂದಲೂ ಅಲ್ಲಿಯ ಸರ್ಕಾರಗಳು ಜನರಿಗೆ ಅವಶ್ಯಕತೆಯಿರುವಷ್ಟೂ ಕಾಲ ಹಣಕಾಸು ಬೆಂಬಲದ ಭರವಸೆ ಕೊಡಬೇಕು.

ಕೊರೋನಾ ಬಿಕ್ಕಟ್ಟಿಗೆ ಮೊದಲು ಬರೆದಿದ್ದ, ನಮ್ಮ ಇತ್ತೀಚಿನ ’ಗುಡ್ ಎಕಾನಾಮಿಕ್ಸ್ ಫಾರ್ ಹಾರ್ಡ್ ಟೈಮ್ಸ್’ ಪುಸ್ತಕದಲ್ಲಿ ಬಡ ರಾಷ್ಟ್ರಗಳಿಗೆ ಅತಿ ಸಾರ್ವತ್ರಿಕ ಮೂಲಭೂತ ಅದಾಯ (ಅಲ್ಟ್ರಾ ಯುನಿವರ್ಸಲ್ ಬೇಸಿಕ್ ಇನ್‌ಕಮ್) ಎಂಬ ಯೋಜನೆಯೊಂದನ್ನು ಜಾರಿಗೊಳಿಸಬೇಕೆಂದು ನಾವು ಪ್ರತಿಪಾದಿಸಿದ್ದೇವೆ. ಜನರ ಮೂಲಭೂತ ಬದುಕಿಗೆ ಬೇಕಾದ ಹಣವನ್ನು ಅವರ ಖಾತೆಗೆ ವರ್ಗಾಯಿಸಬೇಕೆಂಬುದು ನಮ್ಮ ಸಲಹೆ. ಯುಯುಬಿಐ ಯೋಜನೆಯ ದೊಡ್ಡ ಅನುಕೂಲವೆಂದರೆ, ಅದು ತುಂಬಾ ಸರಳ, ಪಾರದರ್ಶಕ ಯೋಜನೆ. ಅದನ್ನು ಜಾರಿಗೊಳಿಸುವುದರಿಂದ ಜನರು ಹಸಿವಿನಿಂದ ನರಳುವುದು ತಪ್ಪುತ್ತದೆ. ಹೆಚ್ಚಿನ ಕಲ್ಯಾಣ ಯೋಜನೆಗಳಲ್ಲಿ ಅವಶ್ಯಕತೆ ಇಲ್ಲದವರಿಗೆ ಸಿಗಬಾರದು ಅನ್ನುವುದನ್ನು ಕುರಿತಂತೆ ಹೆಚ್ಚು ಎಚ್ಚರ ವಹಿಸಲಾಗುತ್ತದೆ. ಆದರೆ ಹೀಗೆ ಮಾಡುವಾಗ ಅವಶ್ಯಕತೆಯಿರುವವರಿಗೆ ತಪ್ಪಿಹೋಗುವ ಸಾಧ್ಯತೆಗಳೇ ಹೆಚ್ಚು. ಪಿಡುಗಿನ ಸಂದರ್ಭದಲ್ಲಿ ಸಾಧ್ಯವಾದಷ್ಟು ಜನರಿಗೆ, ಕಡಿಮೆ ಸಮಯದಲ್ಲಿ ನೆರವು ಸಿಗಬೇಕು. ಅಂತಹ ಸಂದರ್ಭದಲ್ಲಿ ಯುಯುಬಿಐ ಯೋಜನೆಯ ಸರಳತೆ ಸರ್ಕಾರದ ನೆರವಿಗೆ ಬರುತ್ತದೆ. ಬಡರಾಷ್ಟ್ರಗಳಲ್ಲಿ ಇಂದು ಬಹುಪಾಲು ಜನ ಮುಂದಿನ ವಿಪತ್ತಿನ್ನು ಕುರಿತ ಆತಂಕದಲ್ಲಿದ್ದಾರೆ. ಇಂತಹ ಸಮಯದಲ್ಲಿ ಬದುಕಿಗೆ ಅವಶ್ಯಕವಾದದ್ದು ಎಲ್ಲರಿಗೂ ಸಿಗುತ್ತದೆ ಎಂಬ ಭರವಸೆ ಅವರ ಆತಂಕವನ್ನು ಎಷ್ಟೋ ಕಡಿಮೆ ಮಾಡುತ್ತದೆ.
ಈ ಯೋಚನೆಗಳು ಬರಿಯ ಕನಸಲ್ಲ. ಪಶ್ಚಿಮ ಆಫ್ರಿಕದ ಅತಿಸಣ್ಣ ರಾಷ್ಟ್ರವಾದ ಟೋಗೊದಲ್ಲಿ ಈ ಎಲ್ಲಾ ಯೋಜನೆಗಳು ಚಾಲ್ತಿಯಲ್ಲಿವೆ. ಅಲ್ಲಿ ೮೦ ಲಕ್ಷ ಜನ ಇದ್ದಾರೆ. ಅಲ್ಲಿ ಜಿಡಿಪಿ ೧೫೩೮ ಡಾಲರ್. ಅಲ್ಲಿ ಸೋಂಕು ಇರಬಹುದು ಎಂಬ ಅನುಮಾನವಿರುವ ೭೯೦೦ ಜನರನ್ನು ಪರೀಕ್ಷಿಸಲಾಗಿದೆ. ಜೊತೆಗೆ ಸೋಂಕಿನ ಪ್ರಮಾಣವನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ೫೦೦೦ ಜನರನ್ನು ಯಾದೃಚ್ಛಿಕವಾಗಿ ಪರೀಕ್ಷಿಸಲಾಗಿದೆ. ಆರೋಗ್ಯ ಇಲಾಖೆ ಜನರ ಚಲನೆಯನ್ನು ಎಲ್ಲಿ ಮತ್ತು ಯಾವಾಗ ನಿಯಂತ್ರಿಸಬೇಕು ಅನ್ನುವುದನ್ನು ನಿರ್ಧರಿಸಲು ಈ ಮಾಹಿತಿಯನ್ನು ಬಳಸಿಕೊಳ್ಳುತ್ತಿದೆ. ಅಲ್ಲಿ ಸರ್ಕಾರ ಎಲಾಕ್ಟ್ರಾನಿಕ್ ವ್ಯಾಲೆಟ್ಟನ್ನು ಜನರ ಸೆಲ್ ಫೋನ್‌ಗೆ ಲಿಂಕ್ ಮಾಡುವ ಮೂಲಕ ಹಣವನ್ನು ವರ್ಗಾಯಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಈಗಾಗಲೇ ೧೩ ಲಕ್ಷ ಜನ ನೋಂದಾಯಿಸಿಕೊಂಡಿದ್ದಾರೆ. ಅಲ್ಲಿಯ ರಾಜಧಾನಿಯಾದ ಗ್ರೇಟರ್ ಲೋಮ್ ಪ್ರಾಂತ್ಯವೊಂದರಲ್ಲೇ ೫,೦೦,೦೦೦ ಜನಕ್ಕೆ ಹಣವನ್ನು ವರ್ಗಾಯಿಸಲಾಗಿದೆ.

ಒಳ್ಳೆಯ ಸುದ್ದಿ ಅಂದರೆ ಹಲವು ದೇಶಗಳು ಅದರಲ್ಲೂ ಆಫ್ರಿಕದಲ್ಲಿನ ಹೆಚ್ಚಿನ ರಾಷ್ಟ್ರಗಳಲ್ಲಿ ಜನರಿಗೆ ಹಣ ವರ್ಗಾಯಿಸಲು ಬೇಕಾದ ಮೂಲಭೂತ ಸೌಕರ್ಯವಿದೆ. ಸೆಲ್ ಫೋನ್ ಮುಖಾಂತರ ಜನರಿಗೆ ತಕ್ಷಣ ಹಣವನ್ನು ವರ್ಗಾಯಿಸುವುದಕ್ಕೆ ಸಾಧ್ಯವಿದೆ. ಈಗ ಹಲವರು ಈ ಕ್ರಮವನ್ನು ಬಳಿಸಿಕೊಂಡು ಖಾಸಗಿಯಾಗಿ ಹಣವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರಿ ಯೋಜನೆಗಳನ್ನು ಕೆಲವೇ ದಿನಗಳಲ್ಲಿ ಜಾರಿಗೆ ತರಬಹುದು. ಯಾವುದಾದರೂ ಪ್ರಾಂತ್ಯಗಳು ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿವೆ ಎಂಬ ಮಾಹಿತಿ ಫೋನಿನಲ್ಲಿ ಸಿಕ್ಕರೆ, ಅಂತಹ ಸ್ಥಳಗಳಿಗೆ ಹೆಚ್ಚು ಧಾರಾಳವಾಗಿ ನೆರವನ್ನು ನೀಡಬಹುದು.

ಆ ಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಅಂತ ಅಲ್ಲ. ನಿಜವಾದ ಸಮಸ್ಯೆ ಇಚ್ಛಾಶಕ್ತಿಯದು. ನಮಗೆ ಅದಕ್ಕೆ ಹಣ ಹೂಡುವ ಮನಸ್ಸಿಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶ್ರೀಮಂತ ರಾಷ್ಟ್ರಗಳು ದೊಡ್ಡ ಪ್ರಮಾಣದಲ್ಲಿ ನೆರವಾಗಬೇಕು. ಆಗ ಅಲ್ಲಿಯ ಸರ್ಕಾರಗಳು ಯುಯುಬಿಐ ನೆರವು ನೀಡಬಹುದು. ಈ ಕ್ರಮಗಳನ್ನು ತೀರಾ ತೀವ್ರವಾಗಿ ಜಾರಿಗೆ ತಂದರೆ ತಮ್ಮಲ್ಲಿರುವ ಹಣ ಖಾಲಿಯಾಗಿ ಹೋಗುತ್ತದೆ. ಸಾಲದ ಬಿಕ್ಕಟ್ಟಿಗೆ ಸಿಕ್ಕಿಬೀಳುತ್ತೇವೆ ಎಂಬ ಆತಂಕದಲ್ಲಿ ಕೆಲವರಿದ್ದಾರೆ. ಶ್ರೀಮಂತ ರಾಷ್ಟ್ರಗಳು ಜಾಗತಿಕ ಹಣಕಾಸು ಸಂಸ್ಥೆಗಳೊಂದಿಗೆ ಸೇರಿಕೊಂಡು ಬಡರಾಷ್ಟ್ರಗಳಿಗೆ ಸಾಲ ಪರಿಹಾರ ಮತ್ತು ಇತರ ಹೆಚ್ಚುವರಿ ಸಂಪನ್ಮೂಲವನ್ನು ಒದಗಿಸಬೇಕು. ಹೆಚ್ಚಿನ ಅಭಿವೃದ್ಧಿಶೀಲ ರಾಷ್ಟ್ರಗಳು ಆಹಾರವನ್ನು ಮತ್ತು ಔಷಧಿಗಳನ್ನು ಹಣಕೊಟ್ಟು ಕೊಳ್ಳಬೇಕು. ಅವರ ರಫ್ತು ಆದಾಯ ಮತ್ತು ಸಂದಾಯ ಆಗುತ್ತಿರುವ ಹಣ ಕುಸಿಯುತ್ತಿರುವ ಈ ಸಂದರ್ಭದಲ್ಲಿ ಇದು ತುಂಬಾ ಕಷ್ಟವಾಗುತ್ತದೆ.

ಹಲವಾರು ಜನರ ಆದಾಯ ತೀವ್ರವಾಗಿ ಕುಸಿಯುತ್ತಿದೆ. ಈ ಮಟ್ಟದ ಕುಸಿತ ಹಿಂದೆಂದೂ ಆಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿತ್ತೀಯ ನೀತಿಯನ್ನು ಕುರಿತಂತೆ ಹಿಂದಿನ ಎಚ್ಚರ ಈಗ ಬೇಕಾಗಿಲ್ಲ. ಇಂದು ಸರ್ಕಾರಗಳು ಜನರಿಗೆ ಹಾಗೂ ಆರ್ಥಿಕತೆಗೆ ನೆರವಾಗಬೇಕಾಗಿದೆ. ಅದಕ್ಕಾಗಿ ಗಣನೀಯವಾಗಿ ಹಣ ಖರ್ಚು ಮಾಡಬೇಕಾದ ಸಮಯ ಇದು. ಅಭಿವೃದ್ಧಿಶೀಲ ರಾಷ್ಟ್ರಗಳ ಸರ್ಕಾರಗಳು ಯುಯುಬಿಐಗೆ ಹಣ ಒದಗಿಸಬೇಕಾಗಿದೆ. ಅದರಿಂದಾಗಿ ಬಜೆಟ್ ಕೊರತೆ ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ. ಸಧ್ಯಕ್ಕಂತು ಅದು ಅನಿವಾರ್ಯ. ಈ ದೇಶಗಳು ತಮ್ಮ ಲಾಕ್‌ಡೌನ್ ಸಡಿಲಿಸಿ, ಉತ್ಪಾದನೆಯನ್ನು ಪ್ರಾರಂಭಿಸಿದಾಗ, ಬೇಡಿಕೆ ತುಂಬಾ ಕಡಿಮೆ ಇರುತ್ತದೆ. ಜನರ ಕೈಯಲ್ಲಿ ಹಣ ಇರಬೇಕು. ಮುಂದೆಯೂ ಕೆಲ ಕಾಲ ನಗದು ಅವರ ಖಾತೆಗೆ ವರ್ಗಾವಣೆಯಾಗುತ್ತದೆ ಎಂಬ ಭರವಸೆ ಅವರಿಗೆ ಇರಬೇಕು. ಹೀಗೆ ಪರಿಸ್ಥಿತಿ ಸುರಕ್ಷಿತವಾದಾಗ ಅವರು ಹೊರಗೆ ಬಂದು, ಹಣ ಖರ್ಚುಮಾಡುತ್ತಾರೆ. ಆರ್ಥಿಕತೆಯ ಪುನಚ್ಛೇತನ ಸಾಧ್ಯವಾಗುತ್ತದೆ.

ಇದೆಲ್ಲದರ ಅರ್ಥ ಸರ್ಕಾರಗಳು ಮೇಕ್ರೋ ಆರ್ಥಿಕ ಸ್ಥಿರತೆಯನ್ನು ನಿರ್ಲಕ್ಷಿಸಬೇಕು ಅಂತ ಅಲ್ಲ. ತಕ್ಷಣದ ಕೊರೊನಾ ಬಿಕ್ಕಟ್ಟಿಗೆ ಪ್ರತಿಕ್ರಿಯೆಯಾಗಿ ತಂದಿರುವ ಲಾಕ್‌ಡೌನ್ ಕೊನೆಗೊಳಿಸಬೇಕು. ಅದಕ್ಕೆ ಕ್ರಮತೆಗೆದುಕೊಳ್ಳಬೇಕು. ಆ ಕ್ರಮಕ್ಕೆ ಪೂರಕವಾಗಿ ಒಂದು ಸ್ಪಷ್ಟವಾದ ಹೂಡಿಕೆಯ ಯೋಜನೆಯನ್ನೂ ರೂಪಿಸಬೇಕು. ಹಾಗೆ ಮಾಡುವುದರಿಂದ ಇಂದಿನ ಬಿಕ್ಕಟ್ಟು ಮುಂದೆ ದೊಡ್ಡ ದುರಂತವಾಗುವುದು ತಪ್ಪಬಹುದು. ಅದೊಂದೇ ನಮಗಿರುವ ಆಸೆ.

ಕೃಪೆ : theguardian

ಅನುವಾದ:  ವೇಣುಗೋಪಾಲ್

ಪ್ರತಿಕ್ರಿಯಿಸಿ