ಸಂಜಯ್ ಕಕ್ ಸಂಪಾದಿಸಿರುವ ‘Until My Freedom Has Come’ (2013) ಎಂಬ ಪುಸ್ತಕದಿಂದ ಆಯ್ದ ಲೇಖನ. ಕಾಶ್ಮೀರದ ಬಗ್ಗೆ, ಅಲ್ಲಿಯ ಹೋರಾಟ, ಹಿಂಸೆ, ಪ್ರೀತಿ, ಭರವಸೆಯ ಕುರಿತಾದ ಹಲವು ಲೇಖನಗಳು ಈ ಪುಸ್ತಕದಲ್ಲಿವೆ. 2010ರ ಸುಮಾರಿಗೆ ನಡೆದ ಹಲವು ಸಂಘರ್ಷಗಳು ಈ ಪುಸ್ತಕದ ಕೇಂದ್ರಬಿಂದು.
ನೋವು ಮಾತಿನ ಲಯ ತಪ್ಪಿಸುವಾಗ ಮೌನವಾಗಿ ನೆನಪಿಸಿಕೊಳ್ಳುವದು ಅನಿವಾರ್ಯ. ಹಲವಾರು ಕಾಶ್ಮೀರಿಗಳಂತೆ ನಾನೂ ಮೌನದ ಮೊರೆ ಹೋಗಿದ್ದೇನೆ. ನೆನಪುಗಳಿಗೆ ಬದ್ಧನಾಗಿದ್ದೇನೆ.
ನೆನಪು. . . ದಿನಾಂಕ . . . ಕ್ರಿಯೆ . . . ಕೊಲ್ಲಲ್ಪಟ್ಟ ಬಾಲಕರು, ಅವರ ಶರ್ಟಿನ ಬಣ್ಣ, ಅಳುತ್ತಿರುವ ಅವರ ತಂದೆಯರು – ಇವೆಲ್ಲ ನಿಮ್ಮ ಹೆಡ್ ಲೈನಿನಿಂದ ಮರೆಯಾಗಬಹುದು. ಆದರೆ ಅವು ನಮ್ಮ ಸಮೂಹದ ನೆನಪುಗಳಲ್ಲಿ ಭದ್ರವಾಗಿವೆ. ನಿನ್ನ ಪ್ರಜಾಪ್ರಭುತ್ವದ ಹೆಸರಿನಲ್ಲಿ ಏನೇನು ಮಾಡಲಾಗುತ್ತಿದೆಯೋ ಅವೆಲ್ಲವನ್ನೂ ಕಾಶ್ಮೀರಿಗಳು ನೆನಪಲ್ಲಿ ಇಟ್ಟುಕೊಳ್ಳುತ್ತಾರೆ. ಅವು ನಿಮ್ಮ ಮನೆಯ ಪಡಸಾಲೆ, ನಿನ್ನ ಆಫೀಸು ಕೋಣೆಯನ್ನು ಮುಟ್ಟದಿದ್ದಾಗಲೂ, “ಪ್ರೆಸ್” ಎಂಬ ಫಲಕ ಹಾಕಿಕೊಂಡ ನಿನ್ನ ಕೆಲ ಸೈನಿಕರು ನೀನು ನಮ್ಮನ್ನು ನೋಡದಿರುವಂತೆ ತಡೆವಾಗಲೂ ನಿನ್ನ ಆರಾಮ ಸಮಾಧಾನವನ್ನು ಅವರ ವಿವಿಧ ವ್ಯಾಖ್ಯಾನಗಳಿಂದ ಕಾಪಿಡುವಾಗಲೂ, ಬಹಳ ಎಚ್ಚರಿಕೆಯಿಂದ ಸಂಪಾದಿಸಿದ ಕೆಲವೇ ಚಿತ್ರಗಳನ್ನು ನಿನ್ನ ಪರದೆಯ ಮೆಲೆ ಬಿಡುವಾಗಲೂ, ನಾವು ಕಾಶ್ಮೀರಿಗಳು ನೋಡುವದು ‘ಅನ್ ಎಡಿಟೆಡ್’ ಪರಿಷ್ಕರಿಸದ ಕಾಶ್ಮೀರವನ್ನು ಮಾತ್ರ.
ಚಿತ್ರಹಿಂಸೆಗೊಳಪಟ್ಟ ಮನುಷ್ಯ ಕೊನೆಗೂ ಮನೆ ಸೇರಿದಾಗ ತನ್ನ ಕತೆ ಹೇಳುತ್ತಾನೆ. ಹೆಣ ಹೂಳುವವನಿಗೂ ಹೂಳುತ್ತಿರುವ ಬಾಲಕರ ದೇಹ ಬೀದಿಯಲ್ಲಿ ಹೇಗೆ ಬಿತ್ತು ಎಂದು ನೆನಪಿರುತ್ತದೆ. ಮುರಿದ ದೇಹಗಳ ಭಾಗವನ್ನು ಕೂಡಿಸಲು ಹೆಣಗಾಡುವ ವೈದ್ಯನಿಗೆ ಆ ದೇಹಗಳ ಪರಿಚಯ ಇರುತ್ತವೆ. ನಾವು ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಅಷ್ಟು ಸುಲಭವಾಗಿ ಮರೆಯಲು ನೀನಾದರೂ ಎಲ್ಲಿ ಬಿಡುತ್ತೀ? ಪ್ರತಿ ದೌರ್ಜನ್ಯವೂ ಹಿಂದಿನ ದೌರ್ಜನ್ಯದ ನೆನಪು ತರುತ್ತದೆ.
1990ರಲ್ಲಿ ಮೊದಲಬಾರಿಗೆ ನನಗೆ ‘ಕಾಶ್ಮೀರಿ’ಎಂಬ ಗುರುತಿನ ಚಿಹ್ನೆ ಬಿದ್ದದ್ದು ಇನ್ನೂ ನೆನಪಿದೆ. ಆ ಮುಂಜಾವು ಎಲ್ಲರನ್ನೂ ಆಸ್ಪತ್ರೆಯ ಮೈದಾನಕ್ಕೆ ಕರೆದೊಯ್ಯಲಾಯ್ತು. ನಿನ್ನ ಸೈನಿಕರು ಪ್ರತಿ ಮನೆಯನ್ನೂ ಶೋಧಿಸುತ್ತಿದ್ದರು. ಯಾರ್ಯಾರನ್ನು ಹಿಂಸೆ ನೀಡುವ ಕೋಣೆಗೆ ಕರೆದುಕೊಂಡು ಹೋಗಲಾಗುತ್ತದೆ ಎಂಬುದನ್ನು ಬಾರ್ಡರ್ ಸೆಕ್ಯುರಿಟಿ ಫೋರ್ಸನ ಮುಖಗವಚ ಧರಿಸಿರುವ ಸೈನಿಕನೊಬ್ಬ ಬೆರಳು ಮಾಡಿ ತೋರಿಸುತ್ತಿದ್ದ. ಆತನ ಕಣ್ಣುಗಳು ನನಗೆ ಇನ್ನೂ ನೆನಪಿದೆ. ಆ ಹಿಂಸೆಯ ಕೋಣೆಯ ಹೊರಗೆ ಬಂದ ಮೊದಲ ಬಾಲಕನ ಸುಟ್ಟ ಕೈಗಳು, ಗಾಯಗೊಂಡ ಬೆನ್ನೂ ಕೂಡ ನನಗೆ ಚೆನ್ನಾಗಿ ನೆನಪಿದೆ. ಆ ಕೋಣೆಯಲ್ಲಿ ನಮ್ಮಿಂದ ಮಾಹಿತಿ ಪಡೆಯಲಾಗುತ್ತದೆ ಎಂದು ಹೇಳಿದರು. ಆವತ್ತು ನನ್ನ ಎರಡೂ ಕೈಗಳನ್ನೂ ಮೇಲೆ ಮಾಡಿ ಚೆಕ್ ಪೋಸ್ಟ್ ಗಳ ಮಧ್ಯೆ ನಡೆದಿದ್ದು ನನಗಿನ್ನೂ ನೆನಪಿದೆ.
ನಾವು ದೂರದೂರುಗಳಲ್ಲಿ, ದೂರದೇಶಗಳಲ್ಲಿ ಡಿಗ್ರಿ ಪಡೆದರೂ ಕೆಲಸ ಗಿಟ್ಟಿಸಿದರೂ, ಇತರರಂತೆ ಜೀವನ ನಡೆಸಿದರೂ ನಮಗೆ ನೆನಪಾಗುತ್ತಲೇ ಇರುತ್ತದೆ. ನಾವು ನೆನಪಿಸಿಕೊಳ್ಳುತ್ತಿದ್ದೇವೆ ಎಂದು ನಮಗೆ ಅರಿವಿಲ್ಲದಾಗಲೂ ನಮಗೆ ನೆನಪಾಗುತ್ತದೆ. ಇತ್ತೀಚೆಗೆ ನ್ಯೂಯಾರ್ಕನ ಪುಟ್ಟ ಕೋಣೆಯಲ್ಲಿ ಗೆಳೆಯನೊಬ್ಬ ತನ್ನನ್ನು ಕಾಡುವ ಕನಸೊಂದನ್ನು ನನ್ನ ಬಳಿ ಹಂಚಿಕೊಂಡ. ಸಣ್ಣ ಬಾಲಕನೊಬ್ಬ ಅವನ ಮನೆ ಎದುರಿನ ಬೀದಿಯಲ್ಲಿ ಓಡುತ್ತಿದ್ದ. ಅವನ ಬೆನ್ನಟ್ಟಿದ ಸೈನಿಕರು ಅವನತ್ತ ಗುಂಡು ಹಾರಿಸುತ್ತಿದ್ದರು. ಗುಂಡು ತಾಗಿತ್ತು. ಆ ಬಾಲಕ ನನ್ನ ಗೆಳೆಯನ ಕನಸಿನಲ್ಲಿ 18 ವರ್ಷಗಳಿಂದಲೂ ಓಡುತ್ತಲೇ ಇದ್ದ.
ನೀನು ಚಿತ್ರಗಳಲ್ಲಿ ನೋಡುವ ಕೈಯಲ್ಲಿ ಕಲ್ಲು ಹಿಡಿದುಕೊಂಡಿರುವ ಕಾಶ್ಮೀರಿ ಬಾಲಕರೂ ನೆನಪಿಸಿಕೊಳ್ಳುತ್ತಾರೆ. ಅವರಲೊಬ್ಬನಿಗೆ ಇನ್ನೂ ನೆನಪಿದೆ. ಶ್ರೀನಗರದ ಬ್ರಿಡ್ಜ್ ಬಳಿ ಇರುವ ಬಂಕರ್‍ಗಳೂ, ಅವನ ಕೈಮೇಲೆ ಇಟ್ಟಿದ್ದ ಆ ಕಾದ ಕಬ್ಬಿಣ. ತನ್ನ ಮುಂಗೈ ಮೇಲಿರುವ ಕಲೆಗಳನ್ನು ಮುಚ್ಚಿಕೊಳ್ಳಲು ಅವನೀಗ ತುಂಬು ತೋಳಿನ ಶರ್ಟಗಳನ್ನು ಮಾತ್ರ ಆತ ಧರಿಸುತ್ತಾನೆ. ಅವರಲ್ಲಿ ಇನ್ನೊಬ್ಬನಿಗೆ ನೆನಪಿದೆ; ಅವನ ಅಜ್ಜನ ಕೊರಳಲ್ಲಿ ಇಟ್ಟಿದ್ದ ತಣ್ಣನೆ ಚೂರಿ, “ಎಲ್ಲಿದ್ದಾರೆ ಅವರು?” ಎಂದ ಕೂಗಿನ ಧ್ವನಿಗಳು.
13 ಅಗಸ್ಟ್ 2008ರಂದು ಸೋಫೋ ಬಳಿಯ ಸಣ್ಣ ಹಳ್ಳಿಯೊಂದರಲ್ಲಿ ಮನೆಗಳಿಗೆ ಪೇಂಟ್ ಮಾಡಿಕೊಂಡು ಜೀವನ ನಡೆಸುವ ಯುವಕನೊಬ್ಬ ಕಂಡಿದ್ದು ಇದು; ಕಂಟ್ರೋಲ್ ಲೈನಿನ ಬಳಿ ನಿಶ್ಯಸ್ತ್ರವಾಗಿದ್ದ ಜನರನ್ನು ಗುಂಡು ಹಾರಿಸಿ ಕೊಲ್ಲಲಾಗುತಿತ್ತು. ಅದೇ ಪೇಂಟರ್‍ನ ಅದೇ ನೆನಪು 7 ಜನವರಿ 2010ರಂದು ಶ್ರೀನಗರಕ್ಕೆ ಕರೆತಂದಿತ್ತು. ಆವತ್ತು ಅವನು ಗನ್ ಹಿಡಿದಿದ್ದ. 27 ತಾಸು ಎನ್ ಕೌಂಟರ್ ನಂತರ ಸೈನಿಕರು ಅವನನ್ನು ಕೊಂದರು. ನಿನಗದು ನೆನಪಿರಬಹುದು. ಆ ಪೇಂಟರನ ಅಮ್ಮ ಗೋಡೆಗೆ ತೂಗು ಹಾಕಿದ ಮಗನ ಫೋಟೋ ನೋಡುತ್ತ ಅವನನ್ನೀಗ ನೆನಪಿಸಿಕೊಳ್ಳುತ್ತಾಳೆ.
ಇನ್ನು ಹಲವಷ್ಟನ್ನು ಮರೆಯಲೇ ಬೇಕೆಂದುಕೊಂಡರೂ ಮರೆಯಲಾಗದು. ಶ್ರೀ ನಗರದ ಆ ಫೋಟೊ ನೆನಪಿದೆಯಾ ನಿನಗೆ? ಶವಯಾತ್ರೆ ಅದು. ಯುವಕನೊಬ್ಬನ ಗಾಯಗೊಂಡ ದೇಹ ಸ್ಟ್ರೆಚರ್ ಮೇಲೆ ಮಲಗಿದೆ. ನಿನ್ನ ಸೈನಿಕರು ಶವಯಾತ್ರೆಗೆ ಬಂದ ದುಃಖಿತರ ಮೇಲೆ ಧಾಳಿ ಮಾಡುತ್ತಾರೆ. ಗಾಭರಿಗೊಂಡ ಜನ ಓಡುತ್ತಿದ್ದಾರೆ. ಆದರೆ ಆ ಶವವಾದ ಹುಡುಗನ ತಂದೆ ಓಡುತ್ತಿಲ್ಲ. ಅವನ ಮಗನ ಶವ ಅಪವಿತ್ರವಾಗುವದನ್ನು ತಡೆಯಲು ಆತ ಮಗನನ್ನು ಎರಡೂ ಕೈಗಳಿಂದ ತಬ್ಬಿದ್ದಾನೆ. ಅವನ ದೇಹವನ್ನು ಶವದ ಮೇಲೇ ಚಾಚಿದ್ದಾನೆ. ಮತ್ತೆ ಆ ವೀಡಿಯೋ ನೆನಪಿದೆಯಾ ನಿನಗೆ? ಹೆಂಗಸೊಬ್ಬಳು ತನ್ನ ಮನೆಯಂಗಳದಲ್ಲಿ ಕೊಲೆಯಾದ ಬಾಲಕರ ರಕ್ತವನ್ನು ತೊಳೆಯುತ್ತಿದ್ದಾಳೆ.
ನಿನಗೆ ನಿಮ್ಮ ಮೃದು ಮಾತಿನ ಪ್ರಧಾನ ಮಂತ್ರಿ ಶ್ರೀನಗರದಲ್ಲಿ “ಹ್ಯೂಮನ್ ರೈಟ್ಸ್ ಉಲ್ಲಂಘನೆಯನ್ನು ಸಹಿಸಲಾಗದು” ಎಂದು ಭಾಷಣ ಮಾಡಿದ್ದು ನೆನಪಿರಬಹುದು. ನಾಗರಿಕರನ್ನು ಕೊಲ್ಲಲು ಪರವಾನಗಿ ನೀಡುವ Armed Special Force ನ್ನು ನಿರ್ಮೂಲನೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದೂ, ಅದರ ಕುರಿತು ತನಿಖಾ ಸಮಿತಿ ನೇಮಿಸಿದ್ದು ನಮಗೆ ನೆನಪಿದೆ.
ಡಾಲ್ ಲೇಕ್ ನ ನಾಗರಿಕನೊಬ್ಬನಿಗೆ ನೆನಪಿದೆ. ಅವನ 16 ವರ್ಷದ ಮಗನನ್ನು ಬಿ.ಎಸ್.ಎಫ್. ಆಫೀಸರನ ಜತೆಗೆ ವಾದಮಾಡಿದನೆಂದು ಕೊಲ್ಲಲಾಗಿತ್ತು. ಆ ದಿನ ಅವನ ಮಗ ತನ್ನ ಶೂ ಹಾಕಿಕೊಳ್ಳುತ್ತಾ ಹೊರ ನಡೆದದ್ದು ಅವನಿಗೆ ನೆನಪಿದೆ. ಆ ಹುಡುಗನನ್ನು ಕೆಲವೇ ಗಂಟೆಗಳ ನಂತರ ಗೋರಿಯ ಗುಂಡಿಯೊಳಗೆ ಇಳಿಸಿದ್ದೂ ಆ ತಂದೆಗೆ ನೆನಪಿದೆ. ಅವನ 70 ವರ್ಷದ ಮುದಿ ತಂದೆಯನ್ನೂ ‘ಕ್ರಾಂತಿಕಾರಿ’ ಎಂದು ಕರೆದು ಕೊಲ್ಲಲಾಗಿತ್ತು.
ಅವರಿಗೆಲ್ಲ ಈಗ ತುಂಬ ವಿರಳವಾಗಿರೋ ನ್ಯಾಯದ ಬಗ್ಗೆಯೂ ನೆನಪಿದೆ. ನೀನು ಈಗ ಅದರ ಬಗ್ಗೆ ಹೆಚ್ಚು ಮಾತನಾಡೋದಿಲ್ಲ ಎಂದು ಕಾಣಿಸುತ್ತದೆ. ನಿನ್ನ ಸರ್ಕಾರ ಸೈನ್ಯದತುಕಡಿಗಳನ್ನು ಬಂದೂಕು ಸರಪಣಿಗಳ ಜತೆಗೆ ಕಾಶ್ಮೀರಕ್ಕೆ ಕಳಿಸುತ್ತದೆ. ಮತ್ತಷ್ಟು ಕಫ್ರ್ಯೂಗಳನ್ನು ವಿಧಿಸುತ್ತದೆ. ಅದು ಕೆಲಕಾಲದ ಮಟ್ಟಿಗೆ ಕಾಶ್ಮೀರವನ್ನು ತಣ್ಣಗಾಗಿಸಲೂ ಬಹುದು. ಆರ್ಥರ್ ಕೋಸ್ಟ್ಲರ್ ಅವರು “ದೌರ್ಜನ್ಯವನ್ನು ನಂಬದಿರುವದು” ಎಂಬ ಲೇಖನದಲ್ಲಿ ಹೇಳುತ್ತಾರೆ. : “ದೌರ್ಜನ್ಯ ಯಾರನ್ನು ಇನ್ನೂ ಮುಟ್ಟಿಲ್ಲವೋ ಅವರು ಅವರ ಪಕ್ಕದಲ್ಲಿಯೇ ನಗುತ್ತ ನಡೆಯಬಲ್ಲರು. ನೀವು ದೌರ್ಜನ್ಯದ ಪಕ್ಕದಲ್ಲೇ ನಗುತ್ತಾ ನಡೆಯದೇ ಇದ್ದಿದ್ದರೆ ಈ ಯುದ್ಧವನ್ನು ನಿಲ್ಲಿಸಬಹುದಾಗಿತ್ತು. ಹಗಲುಗನಸು ಕಾಣುತ್ತಿರುವ ನಿಮ್ಮ ಕಣ್ಣುಗಳ ಎದುರೇ ಕೊಲೆಯಾದವರನ್ನು ಜೀವಂತ ಉಳಿಸಿಕೊಳ್ಳಬಹುದಾಗಿತ್ತು.”
ನಿನ್ನನ್ನೂ ನಾವು ಹೀಗೆ, ಈ ರೀತಿಯಲ್ಲಿ ನೆನಪಿಸಿಕೊಳ್ಳಲಿ ಎಂದು ನೀನು ಬಯಸುವೆಯಾ?
ಅನುವಾದ: ಶೀತಲಾ ಭಟ್
ಬಶ್ರತ್ ಪೀರ್ ಒಬ್ಬ ಕಾಶ್ಮೀರೀ ಮೂಲದ ಭಾರತೀಯ ಪತ್ರಕರ್ತ, ಚಿತ್ರಕತೆಗಾರ, ಲೇಖಕ. ಅವರು ಈಗ ದ ನ್ಯೂಯಾರ್ಕ್ ಟೈಮ್ಸ್ ನ ಒಪಿನಿಯನ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ನ್ಯೂಯಾರ್ಕ್ ನ ಓಪನ್ ಸೊಸೈಟಿ ಇನಿಸ್ಟಿಟ್ಯೂಟ್ ನ ಫೆಲೋ ಕೂಡಾ ಆಗಿದ್ದರು.
ha ha,
full of self pity & one side judgement,
Mr,basrith I’m thinking your also came from yellow journalism.
I’m asking what about kashmiri pandits? they also human no? you people raped,murdered, occupied there properties.
your are a reporter stop sudo journalism & think both side pain is same.