ದಾಸಸಾಹಿತ್ಯವು ಸಂಗೀತಕಛೇರಿಯ ಚೌಕಟ್ಟ (performative music) ನ್ನು ಪ್ರವೇಶಿಸಿದ ಸಂದರ್ಭ ಒಂದು ಮಹತ್ವದ ಸಾಂಸ್ಕೃತಿಕೋ-ರಾಜಕೀಯದ ಸಂದರ್ಭ. ಕರ್ನಾಟಕದ ಉಚ್ಚ ಸಮುದಾಯಗಳು ಈ ರಾಜ್ಯದ ಭಾಗದ ಸಂಸ್ಕೃತಿಗಳ ಒಡೆತನ ತಮ್ಮದ್ದಾಗಬೇಕು ಎಂದು ಜಿದ್ದಿಗೆ ಬಿದ್ದ ಸಮಯ ಅದು. ಅರುವತ್ತರ ದಶಕದಲ್ಲಿ ಕ್ರೋಢೀಕೃತಗೊಂಡ ಪುರಂದರದಾಸರ ಮೂರ್ತೀಕರಣ (iconisation) ಈ ಮುಖಾಮುಖಿಯ ಭಾಗವಾಗಿತ್ತು.
ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ – https://ruthumana.com/2020/05/02/carnatic-music-kannada-and-kannadigas-part-1
ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ – https://ruthumana.com/2020/05/02/carnatic-music-kannada-and-kannadigas-part-2/
ಭಾಗ ೩ : ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ – https://ruthumana.com/2020/05/03/carnatic-music-kannada-and-kannadigas-part-3/
ಭಾಗ ೪ : ಶಾಸ್ತ್ರೀಯತೆ, ಕನ್ನಡತನ ಮತ್ತು ಪೋಷಕರು – https://ruthumana.com/2020/05/09/carnatic-music-kannada-and-kannadigas-part-4/
ಭಾಗ ೫: ‘ಕರ್ನಾಟಿಕ್’ ಸಂಗೀತ ಪರಂಪರೆ ಮತ್ತು ಮೈಸೂರಿನ ಸಂಗೀತ – https://ruthumana.com/2020/05/26/carnatic-music-kannada-and-kannadigas-part-5/
ಭಾಗ ೬: ಶಾಸ್ತ್ರೀಯತೆ, ಕನ್ನಡ ಮತ್ತು ದಾಸರ ಪದಗಳು: https://ruthumana.com/2020/06/12/carnatic-music-kannada-and-kannadigas-part-6/
ಸಂಗೀತ, ಸಾಹಿತ್ಯ, ಇತ್ಯಾದಿಗಳು ತಟಸ್ಥವಾದ ಮುಗ್ಧ ಕಲಾಪ್ರಕಾರಗಳಲ್ಲ. ಈವರೆಗಿನ ಸಂಚಿಕೆಗಳಲ್ಲಿ ಮೈಸೂರು ಮತ್ತು (ತಮಿಳುನಾಡಿನ) ಕರ್ನಾಟಿಕ್ ನಲ್ಲಿ ಸಂಗೀತವು ಹೇಗೆ ಭಾಷೆ, ವಸಾಹತುಶಾಹಿ, ಪರಂಪರೆ, ಇವುಗಳಿಂದೆಲ್ಲ ಪ್ರಭಾವಗೊಂಡು ರೂಪುಗೊಂಡಿತ್ತು ಎಂದು ನೋಡಿದೆವು. ಮೈಸೂರಿನ ಸಂಗೀತ ಸಂದರ್ಭದಲ್ಲಿ ಕನ್ನಡದ ಪ್ರಸ್ತಾಪ ಬಂದಾಗ ಮಧ್ಯಮ ಮಾರ್ಗವೆಂಬಂತೆ ದಾಸಸಾಹಿತ್ಯದಂಥ ಸಾಹಿತ್ಯ ಪ್ರಕಾರಗಳು ಶಾಸ್ತ್ರೀಯ ಚೌಕಟ್ಟಿಗೆ ಪ್ರವೇಶಿಸಿದ್ದನ್ನು ನೋಡಿದೆವು. ಹೀಗೇ ಮುಂದುವರೆದು ದಾಸಸಾಹಿತ್ಯ ಉದ್ಧೃತವಾದ ಸಂದರ್ಭ, ಅದು ಸಂಗೀತದ ಭಾಗವಾದ ರೀತಿ, ಇವೆಲ್ಲವುಗಳನ್ನು ಗಮನಿಸಿದಾಗ ಆ ಪ್ರಕಾರವು ಕೆಲವೊಂದು ಸಾಮುದಾಯಿಕ ಹಿತಾಸಕ್ತಿಗಳ ತಿಕ್ಕಾಟದ ಭೂಮಿಕೆಯಾಗಿ ಮೂಡಿಬರುವುದನ್ನು ಕಾಣಬಹುದು: ಮೊದಲನೆಯದಾಗಿ ಬ್ರಾಹ್ಮಣ ಮತ್ತು ಲಿಂಗಾಯತರ ನಡುವೆ ಮತ್ತು ಎರಡನೆಯದಾಗಿ, ಬೆಂಗಳೂರಿನ „ಕನ್ನಡಾಭಿಮಾನಿಗಳು‟ ಮತ್ತು ತಮಿಳರ ನಡುವೆ. ಇವನ್ನು ಚರ್ಚೆ ಮಾಡುತ್ತಾ ಈ ವಿಷಯಗಳಿಗೂ ಕರ್ನಾಟಕ ಸಂಗೀತದ ಸಂಕಥನಕ್ಕೂ ಹೇಗೆ ಸಂಬಂಧವಿದೆ ಎಂಬುದನ್ನು ಗಮನಿಸೋಣ.
ಮೊದಲನೇದನ್ನು ಮೊದಲು ನೋಡೋಣ. ದಾಸಸಾಹಿತ್ಯ ಮತ್ತು ವಚನಸಾಹಿತ್ಯಗಳ ಹೆಸರು ಜೊತೆ ಜೊತೆಯಾಗಿ ಹೋಗುವುದನ್ನು ನಾವೆಲ್ಲ ಗಮನಿಸಿದ್ದೇವೆ. ಇದಕ್ಕೆ ಕಾರಣ ಇವೆರಡೂ ಭಕ್ತಿ ಸಾಹಿತ್ಯ ಪ್ರಕಾರಗಳೆಂಬುದು ಮಾತ್ರವಲ್ಲ; ಮೇಲೆ ನಮೂದಿಸಿದ ದಕ್ಷಿಣ ಕರ್ನಾಟಕದ ಬ್ರಾಹ್ಮಣ-ಲಿಂಗಾಯತ ತಿಕ್ಕಾಟ ಕೂಡಾ ಹೌದು. ದಾಸಸಾಹಿತ್ಯವು ಬ್ರಾಹ್ಮಣ ಸಾಹಿತ್ಯ ಹಾಗೂ ವಚನ ಸಾಹಿತ್ಯವು ಲಿಂಗಾಯತ ಅಥವಾ ವೀರಶೈವ ಸಾಹಿತ್ಯ ಎಂಬ ತೀರ್ಮಾನವನ್ನು ಹತ್ತೊಂಬತ್ತನೇ ಶತಮಾನದಲ್ಲೇ ಆರ್. ನರಸಿಂಹಾಚಾರ್ಯರು ಮಾಡಿದ್ದರು. ಕರ್ನಾಟಕದ ಏಕೀಕರಣದ ನಂತರ ಕರ್ನಾಟಕದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬಹುದಾಗಿದ್ದವರು ಹಾಗೂ ತೊಡಗಿಸಿಕೊಂಡವರು ಬ್ರಾಹ್ಮಣರು ಹಾಗೂ ಲಿಂಗಾಯತರು. ಸಾಂಸ್ಕೃತಿಕ ಬದುಕಿನಲ್ಲಿ ರಾಜ್ಯದ ಸಂಪನ್ಮೂಲಗಳನ್ನು ಉಪಯೋಗಿಸಿಕೊಳ್ಳುವಾಗ ಆಗುವ ಸ್ಪರ್ಧೆ ಈ ಸಮುದಾಯಗಳ ನಡುವೆ ನಡೆಯಿತು. ಇದು 1960ರ ದಶಕದಲ್ಲಿ ಒಂದು ಶೀತಲಸಮರದ ರೂಪ ಪಡೆಯಿತು. ಉದಾಹರಣೆಗೆ ಅಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಬಗೆಯ ಕಾರ್ಯಕ್ರಮಗಳು, ಸ್ಪರ್ಧೆಗಳನ್ನೇರ್ಪಡಿಸುತ್ತಿತ್ತು. ದಾಸಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವಿಶೇಷ ಭಾಷಣವಿದ್ದರೆ ಮತ್ತೆರಡು ದಿನಗಳಲ್ಲಿ ವಚನಕ್ಕೆ ಸಂಬಂಧ ಪಟ್ಟಂತೆ ಭಾಷಣವಿರುತ್ತಿತ್ತು. ಅಥವಾ ವಚನಗಳನ್ನು ಹಾಡುವ ಸ್ಪರ್ಧೆಯೇನಾದರೂ ಇದ್ದರೆ ಕೂಡಲೇ ದಾಸರಪದಗಳನ್ನು ಹಾಡುವ ಸ್ಪರ್ಧೆಯಿರುತ್ತಿತ್ತು (ಅರುವತ್ತರ ದಶಕದ ಪರಿಷತ್ತಿನ ಪ್ರಕಟಣೆ ಕನ್ನಡನುಡಿಯನ್ನು ನೋಡಬಹುದು). ಈ ಸಂದರ್ಭದಲ್ಲೇ ಅತೀ ಪ್ರಮುಖ ದಾಸರೆಂದು ಪರಿಗಣಿಸಲ್ಪಟ್ಟ ಪುರಂದರದಾಸರ ನಾಲ್ಕನೇ ಶತಮಾನೋತ್ಸವವನ್ನಾಚರಿಸುವ ಸಂದರ್ಭ ಬಂದಿತ್ತು. ಪುರಂದರ ದಾಸರು „ಕರ್ನಾಟಕ ಸಂಗೀತ ಪಿತಾಮಹ‟ರೆನ್ನುವ ಘೋಷಣೆ ಹೆಚ್ಚು ಹೆಚ್ಚಾಗಿ ಕೇಳಿ ಬಂದದ್ದು ಇದೇ ಸಮಯದಲ್ಲಿ. ಆಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಬಿ. ಶಿವಮೂರ್ತಿ ಶಾಸ್ತ್ರಿ (ವೀರಶೈವರು) ಅವರು ನಿಜಗುಣ ಶಿವಯೋಗಿಗಳು ಪುರಂದರದಾಸರಿಗಿಂತಲೂ ಹಿಂದಿನ ಹದಿನಾಲ್ಕನೇ ಶತಮಾನದವರು ಆದ್ದರಿಂದ ಕರ್ನಾಟಕ ಸಂಗೀತದ ಆದಿಪುರುಷರು ಅವರೇ ಸರಿ ಎಂದು ಪ್ರತಿಪಾದಿಸಿದರು. ಇದೇ ಸಮಯಕ್ಕೆ ಡಾ. ಎಸ್. ಶ್ರೀಕಂಠ ಶಾಸ್ತ್ರಿ ಎಂಬುವ ಮೈಸೂರು ವಿ.ವಿ.ಯ ಇತಿಹಾಸ ಪ್ರಾಧ್ಯಾಪಕ ಪುರಂದರದಾಸರ ಅಸ್ತಿತ್ವವನ್ನೇ ಪ್ರಶ್ನಿಸುವಂಥ ಪ್ರಶ್ನೆಗಳನ್ನು ಕೇಳಿದರು. ಅವರ ಪ್ರಕಾರ ಬಸವಣ್ಣನ ಅಸ್ತಿತ್ವವನ್ನು ಐತಿಹಾಸಿಕ ದಾಖಲೆಗಳ ಮೂಲಕ ತೋರಿಸಿಕೊಡಬಹುದಾಗಿತ್ತು ಆದರೆ ಪುರಂದರದಾಸರ ಅಸ್ತಿತ್ವವನ್ನು ತೋರಿಸಿಕೊಡುವುದು ಐತಿಹಾಸಿಕವಾಗಿ ಸಾಧ್ಯವಿರಲಿಲ್ಲ. ಹಾಗೆಂದು ಅವರು ವಿಸ್ತೃತ ಲೇಖನವೊಂದನ್ನು ಬರೆದು ಆಗ ಪ್ರಕಟವಾಗುತ್ತಿದ್ದ ತಾಯಿನಾಡು ಎಂಬ ಪತ್ರಿಕೆಯಲ್ಲಿ ಪ್ರಕಟಿಸಿದರು. ಇದಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬಹಳ ತೀಕ್ಷ್ಣವಾದ ಪ್ರತಿಕ್ರಿಯೆಯೊಂದನ್ನು „ಐತಿಹಾಸಿಕ ಸತ್ಯಕ್ಕಿಂತ ಜನರ ನಂಬಿಕೆ ಮುಖ್ಯ‟ ಎನ್ನುವ ಆಶಯದಲ್ಲಿ ಬರೆದು ಶ್ರೀಕಂಠ ಶಾಸ್ತ್ರಿಗಳನ್ನು ಸಿಕ್ಕಾಪಟ್ಟೆ ಜರೆದರು. ಶ್ರೀಕಂಠ ಶಾಸ್ತ್ರಿಯವರು ಲಿಂಗಾಯತರೇ ಅಲ್ಲದಿದ್ದರೂ ಬಸವಣ್ಣನ ಐತಿಹಾಸಿಕತೆಯನ್ನು ಕುರಿತು ಧನಾತ್ಮಕವಾಗಿ ಮಾತಾಡಿ ಪುರಂದರದಾಸರ ಬಗ್ಗೆ ಋಣಾತ್ಮಕವಾಗಿ ಮಾತಾಡಿದ್ದು ಹಲವರಿಗೆ ಸಮಸ್ಯೆಯಾಗಿತ್ತು. ಈ ರೀತಿಯ ಹಲ-ಕೆಲವು ಘಟನೆಗಳು ಐವತ್ತರ ಹಾಗೂ ಅರವತ್ತರ ದಶಕದಲ್ಲಿ ನಡೆಯಿತು. ಕಾಲಕ್ರಮೇಣ ಒಂದು ರೀತಿಯ ಸಮನ್ವಯ ನಡೆದು ಕನ್ನಡ ಸಾಹಿತ್ಯ ಪರಂಪರೆಯನ್ನು ಕುರಿತು ಸಮಕಾಲೀನರು ಮಾತಾಡುವಾಗ ದಾಸಸಾಹಿತ್ಯ ಮತ್ತು ವಚನಸಾಹಿತ್ಯಗಳ ಹೆಸರುಗಳು ಜೊತೆಯಾಗಿಯೇ ಹೋಗುತ್ತದೆ: ಒಂದನ್ನು ಬಿಟ್ಟು ಇನ್ನೊಂದನ್ನು ಉಲ್ಲೇಖಿಸಿದರೆ ಎಲ್ಲಿ ಆ ಸಮುದಾಯ ನೊಂದುಕೊಳ್ಳುತ್ತದೋ ಎಂಬಂಥ ಒಂದು ಪ್ರಾಯೋಗಿಕ ಜಾತ್ಯತೀತತೆಯೊಂದಿಗೆ.
ಮೈಸೂರು ಸಂಸ್ಥಾನದ ಕಾಲಾನಂತರ ದಾಸಸಾಹಿತ್ಯ ಮತ್ತು ಸಂಗೀತದ ಸಂಬಂಧದ ಕಡೆಗೆ ಗಮನ ಹರಿಸೋಣ. ದಾಸಸಾಹಿತ್ಯವನ್ನು ಶಾಸ್ತ್ರೀಯ ಚೌಕಟ್ಟಿನೊಳಗೆ ಬಿಡಾರಂ ಕೃಷ್ಣಪ್ಪನವರು ತಂದಿದ್ದರೆಂದು ಈ ಹಿಂದೆ ನೋಡಿದ್ದೇವೆ. ಆದರೆ ಪರಂಪರೆಯ ಪ್ರಭಾವದಿಂದಾಗಿ ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಯ ಭಾಗವಾಗಲು ಅದಕ್ಕೆ ಸಾಧ್ಯವಾಗಲಿಲ್ಲ. ಕಾಲಕಳೆದಂತೆ ಅದು ಕಛೇರಿಯ ಕೊನೆಯಲ್ಲಿ ಹಾಡಲ್ಪಡುವ ಲಘುಸಂಗೀತದ ಭಾಗವಾಗಿಯೇ ಕೇಳಿಬಂತು. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ದಾಸರ ಪದಗಳನ್ನು ಭಾವಗೀತೆಗಳು ಎಂದು ಉಲ್ಲೇಖಿಸಿದಂಥಾ ಸಂದರ್ಭಗಳಿವೆ. ಭಾವಗೀತೆ ಅಥವಾ ಸುಗಮ ಸಂಗೀತಕ್ಕೆ ಸಂಬಂಧಿಸಿದಂತೆ 40, 50, ಹಾಗೂ 60ರ ದಶಕದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗಣನೀಯ ಪಾತ್ರ ವಹಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಕೆಲವು ಗಣ್ಯರು ತಮಿಳ್ನಾಡಿನ ತಮಿಳ್ ಇಸೈ ಅಂದರೆ „ತಮಿಳು ಸಂಗೀತ‟ ಚಳುವಳಿಯಿಂದ ಪ್ರಭಾವಿತರಾಗಿದ್ದರು. ತಮಿಳ್ ಇಸೈ ಅಂದರೆ ತಮಿಳಿನಲ್ಲೇ ಸಂಗೀತವನ್ನು ಹಾಡಬೇಕೆಂದೂ, ತ್ಯಾಗರಾಜರ ಹಾಗೂ ಇತರರ ತೆಲುಗು ಕೃತಿಗಳಿಗೆ ತಮಿಳ್ನಾಡಿನಲ್ಲಿ ಪೆÇ್ರೀತ್ಸಾಹ ಕೊಡಬೇಕಾಗಿಲ್ಲವೆಂದೂ ವಾದಿಸುವ ಚಳುವಳಿಯಾಗಿತ್ತು. ತಮಿಳಿನಲ್ಲಿ ನಾಯನಾರರು ರಚಿಸಿದ „ತೇವರಂ‟ ಎಂಬ ಪ್ರಕಾರವು ತಮಿಳ್ ಇಸೈಯ ಪ್ರಧಾನ ವಸ್ತುವಾಗಿತ್ತು (ತಮಿಳ್ ಇಸೈ ಎಂಬುದು ಹುರುಳಿಲ್ಲದ್ದೆಂದೂ, ಅದು ತಮಿಳು ರಾಷ್ಟ್ರೀಯತೆಯ ಮೊಂಡುವಾದದ ಒಂದು ನಿದರ್ಶನವೆಂದೂ ಬಿ.ಜಿ.ಎಲ್.
ಸ್ವಾಮಿಯವರು ಅದನ್ನು ಗೇಲಿಮಾಡಿರುವುದನ್ನು ಅವರ ತಮಿಳು ತಲೆಗಳ ನಡುವೆ ಎಂಬ ಪುಸ್ತಕದಲ್ಲಿ ಕಾಣಬಹುದು, ಅದು ಬೇರೆ ವಿಷಯ). ಇಂಥಾ ವಾದದ ಪ್ರಭಾವದಿಂದಾಗಿ ಕನ್ನಡದಲ್ಲೂ ಕೂಡಾ ಕೆಲವು ಗಣ್ಯರು ಹಾಗೂ ಲೇಖಕರು ಕನ್ನಡದಲ್ಲೇ ಹೆಚ್ಚು ಹೆಚ್ಚು ಸಂಗೀತವನ್ನು ಕೇಳುವಂಥಾಗಬೇಕು ಎಂಬ ವಾದವನ್ನು ಮಂಡಿಸತೊಡಗಿದರು. 1942ರಲ್ಲಿ ಹೈದರಾಬಾದ್ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಎ.ಆರ್. ಕೃಷ್ಣಶಾಸ್ತ್ರಿಯವರು ಕೂಡಾ ಇದೇ ಅಭಿಪ್ರಾಯ ಹೊಂದಿದ್ದರು. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ತ್ಯಾಗರಾಜರ ಕೃತಿಗಳಷ್ಟೇ ಉತ್ತಮವಾಗಿ ಪುರಂದರದಾಸರ ಕೃತಿಗಳನ್ನೂ ಹಾಡುವುದೂ ಸಾಧ್ಯವಿದೆ ಮತ್ತು ಅದನ್ನು ಬಿಡಾರಂ ಕೃಷ್ಣಪ್ಪನವರು ಮಾಡಿತೋರಿಸಿದಂತೆ ಉಳಿದ ಕನ್ನಡ ಸಂಗೀತಗಾರರೂ ಮಾಡಬೇಕೆಂದೂ ಪ್ರಸ್ತಾಪಿಸಿದರು. ಅದೇ ವರ್ಷ ಮಾಸ್ತಿ ಶ್ರೀನಿವಾಸ ಅಯ್ಯಂಗಾರರು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರ ಸ್ಥಾನವನ್ನು ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ಸ್ವಲ್ಪ ದಿನಗಳಲ್ಲೇ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಹರಿದಾಸರ ಕೃತಿಗಳು ಎಂಬ ಪುಸ್ತಕವೊಂದರ ಬಿಡುಗಡೆಯಾಯಿತು. ಇದು ಸ್ವರಪ್ರಸ್ತಾರದೊಂದಿಗೆ ಕನ್ನಡದಲ್ಲಿ ಪ್ರಕಟವಾದ ದಾಸರಪದಗಳ ಪ್ರಥಮ ಪುಸ್ತಕವಾಗಿತ್ತು. ಇದಕ್ಕಾಗಿ ಸ್ವರಸಂಯೋಜನೆ ಮಾಡಿದ್ದವರು ಮೈಸೂರು ಸಂಸ್ಥಾನದ ವೀಣಾವಿದ್ವಾಂಸ ಲಕ್ಷ್ಮೀನಾರಣಪ್ಪನವರ ಮಗನಾದ ಎಲ್. ರಾಜಾರಾವ್ ಅವರು. ಇದಾದ ಹತ್ತು ವರ್ಷಗಳ ಅಂತರದಲ್ಲಿ, ಅಂದರೆ 1952ರಲ್ಲಿ ರಾಜಾರಾವ್ ಅವರೇ ಸಂಗೀತ ಸಂಯೋಜನೆ ಮಾಡಿದ ವಚನಗಳ ಸಂಕಲನ ಶ್ರೀ ಶಿವಶರಣರ ವಚನಗಳು ಪ್ರಕಟವಾದವು. 1956ರಲ್ಲಿ ಅಂದರೆ ಕನ್ನಡನಾಡಿನ ಏಕೀಕರಣದ ವೇಳೆ ಬಿ. ಶಿವವiೂರ್ತಿ ಶಾಸ್ತ್ರಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಅವರು ಕನ್ನಡದಲ್ಲಿ ಸಂಗೀತಕ್ಕೆ ಹೆಚ್ಚು ಪ್ರೋತ್ಸಾಹ ಕೊಡುವ ಉದ್ದೇಶದಿಂದ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ಸಂಗೀತದಲ್ಲಿ ತರಬೇತಿ ಕೊಡಿಸುವ ಯೋಜನೆಯೊಂದನ್ನು ಹಾಕಿಕೊಂಡರು. ಇದರ ಪ್ರಕಾರ ವಿದ್ಯಾರ್ಥಿಗಳಿಗೆ ದಾಸರಪದಗಳು ಮತ್ತು ವಚನಸಂಗೀತವನ್ನು ಕಲಿಸಿಕೊಡುವುದಾಗಿಯೂ ಅದಕ್ಕಾಗಿ ಶ್ರೀ ರಾಜಾರಾವ್ ಅವರನ್ನೇ ಗುರುಗಳನ್ನಾಗಿ ನೇಮಿಸುವುದಾಗಿಯೂ ತೀರ್ಮಾನಿಸಲಾಯಿತು. ಈ ಯೋಜನೆಯನ್ನು ಅಂದಿನ ಮುಖ್ಯಮಂತ್ರಿ ಶ್ರೀ ಹನುಮಂತಯ್ಯ ಅವರೇ ಉದ್ಘಾಟಿಸಿದರು (ಹನುಮಂತಯ್ಯನವರು ಬೇರೆ ಬೇರೆ ಸಮುದಾಯ/ಬಣಗಳ ನಡುವಿನ ಸಮನ್ವಯಕ್ಕೆ ಒತ್ತು ಕೊಟ್ಟಿದ್ದರು ಹಾಗೂ ಅದಕ್ಕೆ ಬೇಕಾದಂಥ ನೀತಿಗಳನ್ನು ಅಳವಡಿಸಿಕೊಂಡಿದ್ದರೆಂದು ರಾಜಕೀಯ ತಜ್ಞ ಜೇಮ್ಸ್ ಮೇನರ್ ತಮ್ಮ Political Change in an Indian State: Mysore 1917-1955 ಎಂಬ ಪುಸ್ತಕದಲ್ಲಿ ಹೇಳುತ್ತಾರೆ). ಈ ತರಗತಿಗಳಿಗೆ ಕೂಡಲೇ ನಲುವತ್ತ ಮೂರು ಜನ ವಿದ್ಯಾರ್ಥಿಗಳಾದರು. ದೂರದ ಚಿಕ್ಕಮಗಳೂರಿನಂಥಾ ಊರಿನಿಂದ ಅಲ್ಲಿಯೂ ಇದೇ ಥರದ ತರಗತಿಗಳನ್ನು ಪರಿಷತ್ತು ಪ್ರಾರಂಭಿಸಬೇಕೆಂಬ ಬೇಡಿಕೆ ಬಂದಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನಂಥಾ ಸಂಸ್ಥೆಗೆ ದೂರದೂರುಗಳಲ್ಲಿ ಅಂಥಾ ತರಗತಿಗಳನ್ನು ನಡೆಸುವುದು ಅಸಾಧ್ಯವಾಗಿತ್ತು. ಅದು ತನ್ನ ಕಾರ್ಯಗಳನ್ನು ಬೆಂಗಳೂರಿನ ಮಟ್ಟಿಗಷ್ಟೇ ಸೀಮಿತಗೊಳಿಸಿತ್ತು. ಈ ತರಗತಿಗಳಲ್ಲದೇ ಮುಂಚೆ ಹೇಳಿದಂತೆ ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಹಾಡುಗಾರಿಕೆಯ ಸ್ಪರ್ಧೆಗಳನ್ನೇರ್ಪಡಿಸುವುದು, ಬಹುಮಾನ ವಿತರಿಸುವುದು, ಇತ್ಯಾದಿಗಳನ್ನು ಸಾಹಿತ್ಯ ಪರಿಷತ್ತು ಆಗಿಂದಾಗ್ಯೆ ಮಾಡುತ್ತಿತ್ತು.
ಸುಗಮ ಸಂಗೀತವೆಂಬ ಪ್ರಕಾರವು ನಿಜವಾಗಿಯೂ ಶಾಸ್ತ್ರೀಯ ಸಂಗೀತವು ಹೆಚ್ಚು ಜನರನ್ನು ಸೇರಬೇಕೆಂಬ ತುಡಿತದ ಫಲವೋ ಎಂಬಂತೆ ತೋರುತ್ತದೆ. ಈ ತುಡಿತ ತೀವ್ರವಾಗಿ ಕಂಡುಬಂದದ್ದು ಪ್ರಸಿದ್ಧ ಕನ್ನಡ ಲೇಖಕ ಅ.ನ. ಕೃಷ್ಣರಾಯರಲ್ಲಿ. ಆಧುನಿಕ
ಪ್ರಪಂಚಕ್ಕೆ ಒಗ್ಗುವಂತೆ ನಮ್ಮ ಸಂಗೀತಗಾರರು ಕೆಲವೆಲ್ಲ ಮಾರ್ಪಾಡುಗಳನ್ನು ಕಛೇರಿಗಳಲ್ಲಿ ಮಾಡಿಕೊಳ್ಳಬೇಕೆಂದು ಅವರು ಸಲಹೆಗಳನ್ನು ಕೊಟ್ಟರು. ಶೇಷಾದ್ರಿ ಗವಾಯಿಯವರು ಬೆಂಗಳೂರಿಂದ ಹೊರತರುತ್ತಿದ್ದ ಗಾಯನ ಗಂಗಾ ಎಂಬ ಪತ್ರಿಕೆಯಲ್ಲಿ “ಕರ್ನಾಟಕ ಸಂಗೀತದ ಭವಿಷ್ಯ” ಎಂಬ ಲೇಖನವನ್ನು 1960ರಲ್ಲಿ ಬರೆದರು. ಅದರಲ್ಲಿ ಮೂರು ಪ್ರಮುಖ ಸೂಚನೆಗಳನ್ನು ಸಂಗೀತಗಾರರಿಗೆ ಅವರು ಕೊಡುತ್ತಾರೆ: ಮೊದಲನೆಯದಾಗಿ ಸಂಗೀತಗಾರರು ದೇವರನಾಮ, ವಚನ ಹಾಗೂ ಆಧುನಿಕ ಕವನಗಳನ್ನು ಸಂಗೀತಕ್ಕೆ ಅಳವಡಿಸಿ ಹಾಡಬೇಕು; ಎರಡನೆಯದಾಗಿ ಯಾವ ಕಛೇರಿಯೂ ಕೂಡಾ ಮೂರು ಗಂಟೆಗಳಿಗಿಂತ ಹೆಚ್ಚಾಗಿರಬಾರದು ಹಾಗೂ ಮೂರನೆಯದು, ಪಿಟೀಲಿನ ಬದಲಿಗೆ ವೀಣೆಯನ್ನು ಬಳಸಬೇಕು ಎಂದು. ಸಂಗೀತವನ್ನು ಆಧುನಿಕಗೊಳಿಸಿ ಜನಪ್ರಿಯಗೊಳಿಸಲು ಈ ಬದಲಾವಣೆಗಳು ಮುಖ್ಯ ಎಂದು ಅವರು ಭಾವಿಸಿದ್ದರು. ಈ ಮೂರು ಸಲಹೆಗಳಲ್ಲಿ ಮೊದಲನೇದನ್ನು ತುಂಬಾ ಬಲವತ್ತಾಗಿ ವಾಚಾ ಮತ್ತು ಮನಸಾ ಪದೇ ಪದೇ ಪ್ರತಿಪಾದಿಸಿದರು. ಮೈಸೂರಿನ ಪ್ರಸಿದ್ಧ ಸಂಗೀತಗಾರರಾಗಿದ್ದ ದೇವೇಂದ್ರಪ್ಪ ಅವರು ಅ.ನ.ಕೃ ಅವರ ವಾಗ್ಸರಣಿಗೆ ಒಪ್ಪಿ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಕಛೇರಿಗಳಲ್ಲಿ (ಅವರ ಶಿಷ್ಯ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳೊಂದಿಗೆ) ಹಾಡಲಾರಂಭಿಸಿದರು. ಮಲ್ಲಿಕಾರ್ಜುನ ಮನ್ಸೂರರೂ ಕೂಡಾ ಅ.ನ.ಕೃ. ಅವರೊಂದಿಗೆ ಸಹಮತ ವ್ಯಕ್ತಪಡಿಸಿದ್ದರು ಹಾಗೂ ವಚನಗಳನ್ನು ಹಿಂದುಸ್ತಾನೀ ಸಂಗೀತದಲ್ಲೂ ಪ್ರಸಿದ್ಧಿ ಪಡಿಸಿದ್ದರು. ಇದೇ ವೇಳೆ ಕನ್ನಡದ ಕೆಲವು ಅಭಿಮಾನಿಗಳು ತಮಿಳು ಸಂಗೀತಗಾರರು ದಾಸರಪದಗಳನ್ನು ಹಾಡುವುದನ್ನೂ ವಿರೋಧಿಸುತ್ತಿದ್ದರು. ಅವರ ಪ್ರಕಾರ ತಮಿಳರ ಬಾಯಲ್ಲಿ ದೇವರನಾಮಗಳು ಗುರುತಿಸಲಾಗದಂಥ ಹಾಸ್ಯಾಸ್ಪದ ರೂಪ ಹೊಂದುತ್ತಿದ್ದವು. ಅವರು ಕೊಡುತ್ತಿದ್ದ ಒಂದು ಉದಾಹರಣೆ: „ಚಿಂತೆ ಯಾತಕೋ ಮನುಜಾ ಭ್ರಾಂತಿ ಯಾತಕೋ‟ ಎಂಬ ದಾಸರ ಹಾಡು „ಜಿಂದೆಯಾ ತಕೋ ಮನುಜಾ ಬ್ರಾಂದಿ ಯಾತಕೋ‟ ಎಂದು ವಿರೂಪತಾಳಿ ಉಚ್ಚಾರವಾಗುತ್ತಿತ್ತು! ಆದರೂ ತಥ್ಯ ಏನೆಂದರೆ ಕರ್ನಾಟಕ ಸಂಗೀತಕ್ಕೆ ಅಳವಡಿಸಿದ್ದ ದಾಸರಪದಗಳ ಮೊದಲ ಪುಸ್ತಕವು ತಮಿಳಿನಲ್ಲಿ ಮತ್ತು ತಮಿಳುನಾಡಿನ ಮದ್ರಾಸಿನಲ್ಲೇ ಪ್ರಕಟಗೊಂಡದ್ದು (1941ರಲ್ಲಿ), ಹಾಗೂ ಇದನ್ನು ಬೆಳಕಿಗೆ ತಂದದ್ದು ಶ್ರೀಮತಿ ಎಂ.ಎಲ್. ವಸಂತಕುಮಾರಿಯವರ ತಾಯಿಯಾದ ಶ್ರೀಮತಿ ಲಲಿತಾಂಗಿ (ಲಲಿತಾಂಗಿಯವರು ಈ ದಾಸರ ಪದಗಳನ್ನು ಕಲಿತದ್ದು ಕರ್ನಾಟಕದ ದಾಸರೊಬ್ಬರಿಂದ. ಈ ದಾಸರ ಪರಿಚಯ ಅವರಿಗಾದದ್ದು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸ್ಥಾಪಕಾಧ್ಯಕ್ಷರಾಗಿದ್ದ ಹಾಗೂ ಮದ್ರಾಸ್ ಅಸೆಂಬ್ಲಿಯಲ್ಲಿ ಉಡುಪಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಯು. ರಾಮರಾಯರಿಂದ). ಎಂ.ಎಲ್. ವಸಂತಕುಮಾರಿಯವರು ತಮ್ಮ ಕಛೇರಿಗಳಲ್ಲಿ ದಾಸರಪದಗಳನ್ನು ಆಗಾಗ್ಯೆ ಹಾಡುತ್ತಿದ್ದರು.
ಕನ್ನಡ ಚಳುವಳಿಗಾರರು ಸಂಗೀತ ಕಛೇರಿಗಳಲ್ಲಿ ಕನ್ನಡಿಗರಿಗೆ ಮತ್ತು ಕನ್ನಡ ಹಾಡುಗಳಿಗೆ ಮುಂಚೂಣಿಯ ಸ್ಥಾನ ಬಯಸಿದರೆ, ಸಂಗೀತ ಪರಂಪರೆಯಲ್ಲಿ ಕರ್ನಾಟಕದ ಪುರಂದರದಾಸರನ್ನು ತಮಿಳುನಾಡಿನ ತ್ಯಾಗರಾಜರಿಗಿಂತ ದೊಡ್ಡ (ಮತ್ತು ಹೆಚ್ಚು ಪ್ರಾಚೀನ) ಐಕಾನ್ ಆಗಿ ಮುಂದಿಡುವ ಮೂರ್ತೀಕರಣ ಪ್ರಕ್ರಿಯೆ 1960ರ ದಶಕದಲ್ಲಾಯಿತು. 1965ರಲ್ಲಿ ಪುರಂದರದಾಸರ ನಾಲ್ಕುನೂರನೇ ಪುಣ್ಯತಿಥಿಯ ಸಂದರ್ಭದಲ್ಲಿ ದಾಸರ ನೆನಪಿನಲ್ಲಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು, ಪ್ರಕಟಣೆಗಳು, ಉತ್ಸವಗಳು ಸರಕಾರದ ಖರ್ಚಿನಲ್ಲಿ ನಡೆದವು (ಆ ವರ್ಷದ ಪ್ರಕಟಣೆಗಳು, ನಿಯತಕಾಲಿಕಗಳನ್ನು ನೋಡಿದರೆ ಇಂಥ ಕಾರ್ಯಕ್ರಮಗಳ ವ್ಯಾಪಕತೆ ತಿಳಿಯುತ್ತದೆ). ಪುರಂದರದಾಸರ ಸ್ಮರಣೆ ಬರೇ ದಾಸರ ಸ್ಮರಣೆ ಆಗಿರದೇ ಅದು ಗತ ವಿಜಯನಗರ ಸಾಮ್ರಾಜ್ಯದ ಪ್ರಾತಿನಿಧಿಕ ಸ್ಮರಣೆಯಂತಿತ್ತು. ಮೈಸೂರು ರಾಜ್ಯವನ್ನು „ಕರ್ನಾಟಕ‟ ಎಂದು ಹೆಸರಿಸಲು ಬೆರಳೆಣಿಕೆಯಷ್ಟು ವರ್ಷಗಳಿದ್ದುವು (1973ರಲ್ಲಿ). ಮೈಸೂರಿನಾಚೆ ಬೆಳೆದುನಿಂತ ವಿಶಾಲ ಕರ್ನಾಟಕವನ್ನು ಪ್ರತಿನಿಧಿಸಲು ವಿಜಯನಗರ ಸಾಮ್ರಾಜ್ಯಕ್ಕಿಂತ ಉತ್ತಮ ಪ್ರತಿಮೆ ಸಿಗಲು ಸಾಧ್ಯವಿರಲಿಲ್ಲ. ಹೀಗಾಗಿ ಈ ನಾಲ್ಕುನೂರರ ಸಂಭ್ರಮದಲ್ಲಿ ಉತ್ತರ ಕರ್ನಾಟಕದ ಗಣ್ಯರ, ರಾಜಕೀಯ ಪುಢಾರಿಗಳ, ಮಾಧ್ವ ವಿದ್ವಾಂಸರ ಲಾಬಿಯೂ ಬಹಳಷ್ಟಿತ್ತು. 1965ರ ಈಚೆಯೂ ಮತ್ತು ಆಚೆಯೂ ಈ ಆಚರಣೆಗಳ ಪರಿಣಾಮ ಚೆಲ್ಲಿತ್ತು. ಮೈಸೂರು ಮಹಾರಾಜರ ಸಮಯದಲ್ಲಿ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಕೇಳಿಬರುತ್ತಿದ್ದ ಪುರಂದರದಾಸರ ಕುರಿತ ಸಂಕಥನ ಈ ಆಚರಣೆಗಳ ಮೂಲಕ ಗಟ್ಟಿಗೊಂಡವು. ಈ ಹಬ್ಬಗಳ ಪ್ರಕ್ರಿಯೆಯ ಮೂಲಕ ಪುರಂದರದಾಸರನ್ನು „ಕರ್ನಾಟಕ ಸಂಗೀತ ಪಿತಾಮಹ‟ ಎಂದು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಪ್ರತಿಷ್ಟಾಪಿಸುವಾಗ ಅದರ ಒಂದು ಗುರಿ ತಮಿಳುನಾಡಿನ ತ್ಯಾಗರಾಜ ಪರಂಪರೆಯಾಗಿದ್ದರೆ ಇನ್ನೊಂದು ಗುರಿ ಕರ್ನಾಟಕದ ಲಿಂಗಾಯತ/ವಚನ ಪರಂಪರೆಯೇ ಆಗಿದ್ದಿತು. ಪುರಂದರ ದಾಸರ ಪ್ರತಿಮೆಯನ್ನು ಬಳಸಿಕೊಳ್ಳುವ (appropriate) ಮೂಲಕ ತಮಿಳುನಾಡಿನ ಸಾಂಸ್ಕೃತಿಕ ಸಂಬಂಧವನ್ನು ಕಡಿದುಕೊಳ್ಳುತ್ತಲೆ ಕರ್ನಾಟಕದ ಒಳಗೆ ಶಾಸ್ತ್ರೀಯ ಸಂಸ್ಕೃತಿಗಳ „ಒಡೆತನ‟ ಯಾರದ್ದಾಗಬೇಕು ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಯಿತು. ಮುಂಬರುವ ದಿನಗಳಲ್ಲಿ ಕರ್ನಾಟಕದ ಲಿಂಗಾಯತರು ಕರ್ನಾಟಕ ಸಂಗೀತದೊಂದಿಗೆ ಅಷ್ಟೊಂದು ಆತ್ಮೀಯವಾಗಿ ಗುರುತಿಸಿಕೊಳ್ಳದಿರಲೂ ಇದು ಕಾರಣವಾಯಿತು. ಆದರೆ ಸುಗಮ ಸಂಗೀತ ಕ್ಷೇತ್ರದಲ್ಲಿ ಆಧುನಿಕ ಅಂದರೆ ಇಪ್ಪತ್ತನೇ ಶತಮಾನದ ಕವಿಗಳ ಭಾವಗೀತೆಗಳ ಪ್ರಯೋಗ ಹೆಚ್ಚಾಗಿ ಶುರುವಾದದ್ದರಿಂದ ಆ ಕಲಾಪ್ರಕಾರಕ್ಕೆ ಬ್ರಾಹ್ಮಣ-ಲಿಂಗಾಯತ ಎನ್ನುವ ಸಾಮುದಾಯಿಕ ನೆಲೆ ತಗ್ಗಿತಾದರೂ ತಮಿಳುನಾಡು ಮತ್ತು ತಮಿಳರು ಸತತವಾಗಿ ಒಂದು ನಿರ್ದೇಶಸೂಚಕ (reference point) ವಾಗಿಯೇ ಕಂಡುಬಂದರು. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲೂ ಸ್ವಲ್ಪ ಸಮಯ ಇದು ಹೀಗೇ ಮುಂದುವರೆಯಿತು. ಇದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಮುಂದುವರೆಯುವುದು ..
ಡಾ. ಶಶಿಕಾಂತ ಕೌಡೂರು ಸುರತ್ಕಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕ (NITK) ಇಲ್ಲಿನ ಮಾನವಿಕ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಹೈದರಾಬಾದ್ ನ ಕೇಂದ್ರೀಯ ವಿಶ್ವವಿದ್ಯಾಲಯ ದಲ್ಲಿ ತುಲನಾತ್ಮಕ ಸಾಹಿತ್ಯದಲ್ಲಿ ಪಿ.ಎಚ್.ಡಿ ಪಡೆದ ಇವರು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಗೂ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹಲವಾರು ಜನಪ್ರಿಯ ಲೇಖನ ಗಳನ್ನೂ ಬರೆದಿರುತ್ತಾರೆ. ಕರ್ನಾಟಕ ಹಾಗೂ ಹಿಂದುಸ್ತಾನೀ ಸಂಗೀತಗಳೆರಡರಲ್ಲೂ ತಕ್ಕಮಟ್ಟಿಗೆ ಪರಿಶ್ರಮ ಇರುವ ಇವರು ನಾಲ್ಕೈದು ನಾಟಕಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸಾಂಸ್ಕೃತಿಕ ರಾಜಕಾರಣವನ್ನು ತುಂಬಾ ಚನ್ನಾಗಿ ದಾಸರಪದ ಮತ್ತು ವಚನಗಳು ಹಾಗೂ ಸಂಗಿತದ ನಂಟಿನಲ್ಲಿ ಬಿಡಿಸಿ ತೋರಿಸಿರುವ ಬರೆಹ ಇದಯ.
Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೮: ಬೆಂಗಳೂರಿನ ಕನ್ನಡ ಸಾರ್ವಜನಿಕ ಮತ್ತು ಸುಗಮ ಸಂಗೀತದ ಉಗಮ – ಋತುಮಾನ