ಬೇಕಾಗಿಯೋ ಬೇಡವಾಗಿಯೋ ಸಮಾಜದ ಓರೆಕೋರೆಗಳು ಪತ್ರಕರ್ತ ಕಣ್ಣಿಗೆ ಬಿದ್ದೇಬೀಳುತ್ತವೆ. ಆದರೆ, ಹಾಗೆ ಕಂಡದ್ದೆಲ್ಲವನ್ನೂ ಪ್ರಕಟಿಸುವುದು ಸಾಧ್ಯವಾಗುವುದಿಲ್ಲ. ಹಲವು ಚೌಕಟ್ಟುಗಳ ನಡುವೆ ಕಾರ್ಯ ನಿರ್ವಹಿಸಬೇಕಾದ ಪತ್ರಕರ್ತ, ಕೆಲವೊಮ್ಮೆ ತನ್ನ ಮನಸ್ಸಿಗೆ ಅಹಿತವಾದುದನ್ನೂ ಮಾಡಬೇಕಾಗುತ್ತದೆ. ಪತ್ರಕರ್ತ ಆ್ಯಕ್ಟಿವಿಸ್ಟ್ ನಡುವಣ ಗೆರೆ ಅತ್ಯಂತ ತೆಳು.
ದಿನಪತ್ರಿಕೆಯೊಂದರ ಬ್ಯೂರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಲ್ಯಾಂಡ್‍ಲೈನ್ ಫೋನ್ ರಿಂಗಣಿಸಿತು. ಸಹೋದ್ಯೋಗಿ ರಿಸೀವರ್ ಎತ್ತಿಕೊಂಡಿದ್ದೇ, ಅತ್ತಲಿಂದ ಓದುಗರೊಬ್ಬರು ಆಕ್ಷೇಪದ ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದರು. ತಾವು ನಿರೀಕ್ಷಿಸಿದ ಸುದ್ದಿ ಬಂದಿಲ್ಲವೆಂದೋ, ನಮ್ಮ ವಿರುದ್ಧ ಯಾಕ್ರೀ ವರದಿ ಬರೆದಿದ್ದೀರಿ ಎಂದೋ, ಫೋಟೊ ಕ್ಯಾಪ್ಷನ್ ತಪ್ಪಾಗಿದೆ ಎಂದೋ, ನನ್ನ ಫೋಟೋಗೇ ಯಾಕೆ ಕತ್ತರಿ ಹಾಕಿದ್ದೀರಿ ಎಂದೋ – ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಆಕ್ಷೇಪಗಳು ಸದಾ ವ್ಯಕ್ತವಾಗುತ್ತಲೇ ಇರುತ್ತವೆ. ಪತ್ರಿಕೆಯ ಕಚೇರಿಯೊಂದರಲ್ಲಿ ಇಂತಹ ವಿಷಯಗಳಿಗಾಗಿಯೇ ಒಬ್ಬರಲ್ಲ ಒಬ್ಬರು ವರದಿಗಾರರೋ ಉಪಸಂಪಾದಕರೋ ಓದುಗರ ಮುನಿಸಿಗೆ ಸಾವಧಾನದಿಂದ ಎದೆಗೊಡುತ್ತಿರಲೇಬೇಕು. ನನ್ನ ಸಹೋದ್ಯೋಗಿಯೂ ಅದೇ ಧೋರಣೆಯೊಂದಿಗೆ ಕರೆ ಸ್ವೀಕರಿಸಿ, ‘ಕ್ಷಮಿಸಿ, ನಾಳೆಯಿಂದ ಸರಿಯಾಗಿ ಪ್ರಕಟಿಸುತ್ತೇವೆ’ ಎಂದೆಲ್ಲ ಹೇಳಿ ಫೋನಿಟ್ಟು ಉಸ್ಸಪ್ಪಾ ಎಂದರು. ಆ ಕಡೆಯಿಂದ ಫೋನ್ ಮಾಡಿದ್ದ ವ್ಯಕ್ತಿಯ ತಕರಾರು ಸರಳವಾಗಿತ್ತು. ಪತ್ರಿಕೆಯಲ್ಲಿ ದೈನಂದಿನ ಕಾರ್ಯಕ್ರಮಗಳ ಪಟ್ಟಿಯಲ್ಲಿ ಪಕ್ಕದ ಹಳ್ಳಿಯಲ್ಲಿ ನಡೆಯುವ ‘ಜಾತ್ರಾರಂಭ, ಧ್ವಜಾರೋಹಣ’ದ ಮಾಹಿತಿ ಕೊಟ್ಟಿರಲಿಲ್ಲ. ‘ನಿಮ್ಮ ಪತ್ರಿಕೆ ನೋಡಿಯೇ ಜಾತ್ರೆಗಳೆಲ್ಲಿವೆ ಎಂದು ಗಮನಿಸಿ ಅಲ್ಲಿಗೆ ತೆರಳಿ ಐಸ್‍ಕ್ಯಾಂಡಿ ಮಾರುತ್ತಿದ್ದೆ. ಆದರೆ ನಿಮ್ಮ ಪೇಪರ್‍ನಲ್ಲಿ ಆ ಮಾಹಿತಿ ಇಲ್ಲದೇ ಇದ್ದುದರಿಂದ ಒಂದು ದಿನದ ವ್ಯಾಪಾರ ತಪ್ಪಿಹೋಯಿತು’ ಎಂದು ದೈನಂದಿನ ದುಡಿಮೆ ಕಳಕೊಂಡ ನೋವಿನಿಂದ ಅವರು ಫೋನ್ ಮಾಡಿದ್ದರು.
ಪತ್ರಿಕಾ ಕಚೇರಿಗೆ ಬರುವ ಅತ್ಯಂತ ಸುಂದರ ಫೋನ್ ಕಾಲ್ ಇದು ಎಂದು ನಾನು ಹಲವು ಬಾರಿ ಅಂದುಕೊಂಡಿದ್ದೇನೆ. ಪತ್ರಿಕೆಯ ಮೇಲೆ ಜನಸಾಮಾನ್ಯರೊಬ್ಬರು ಇಟ್ಟಿರುವ ನಂಬಿಕೆ ಎಷ್ಟು ದೊಡ್ಡದು! ಆ ನಂಬಿಕೆಗೆ ಪೆಟ್ಟುಬಿದ್ದಾಗ ಅವರು ಕಳವಳಗೊಂಡು ಫೋನ್ ಮಾಡುವ ಈ ಪ್ರಕ್ರಿಯೆ ಪತ್ರಿಕೆಯ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
ಡೆಸ್ಕ್ ಆಗಲಿ, ವರದಿಗಾರಿಕೆ ಇರಲಿ, ಪ್ರಸರಣ ವಿಭಾಗವೇ ಇರಲಿ – ಪತ್ರಿಕಾಲಯದೊಳಗಿನ ಎಲ್ಲ ಕೆಲಸಗಳು ಜನಸಾಮಾನ್ಯರನ್ನು ಅವಲಂಬಿಸಿಯೇ ಮುಂದೆ ಸಾಗುತ್ತದೆ. ಅಪಾರ ಸಾಧ್ಯತೆ ಹಾಗೂ ವೈವಿಧ್ಯವನ್ನು ಒಳಗೊಂಡ ವೃತ್ತಿಯಿದು. ಜೀವನದಲ್ಲಿ ನಮಗಿಷ್ಟವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಓದು ಮುಂದುವರೆಸಬಹುದು. ಅದೇ ಕ್ಷೇತ್ರದಲ್ಲಿ ವೃತ್ತಿಯನ್ನು ಹುಡುಕಿಕೊಂಡು ಸುರಕ್ಷಿತ ಭಾವದೊಂದಿಗೆ ಇರಬಹುದು. ಆದರೆ ಪತ್ರಕರ್ತರಾದರೆ ತಮ್ಮ ಇಷ್ಟವನ್ನು ಪಕ್ಕಕ್ಕಿಟ್ಟು ಎಲ್ಲವನ್ನೂ ಸಮಾನ ಅಂತರದಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಲೇಬೇಕು. ಬೆಳೆಸಿಕೊಳ್ಳಲೇಬೇಕು ಎನ್ನುವಂತಿಲ್ಲ, ಈ ಕ್ಷೇತ್ರವೇ ಅಂತಹ ಮನೋಭಾವವನ್ನು ರೂಪಿಸಿಕೊಡುತ್ತದೆ. ತಾನು ಬೆಂಬಲಿಸುವ ಪಕ್ಷದ ವರದಿಯನ್ನಾಗಲೀ, ವಿರೋಧಿಸುವ ಪಕ್ಷದ ವರದಿಯನ್ನಾಗಲೀ ಪತ್ರಕರ್ತ ಬೇಕಾದ ಹಾಗೆ ಮಾಡುವಂತಿಲ್ಲವಲ್ಲ! ಪಕ್ಷವೋ ಪಂಥವೋ ಮತವೋ ಧರ್ಮವೋ ನಮಗಿಷ್ಟವಾದ ಒಂದು ನಿಲುವಿಗೆ ಅಂಟಿಕೊಂಡರೆ ಸಾಮಾನ್ಯವಾಗಿ ಅದರ ಇನ್ನೊಂದು ಆಯಾಮವನ್ನು ನೋಡುವ ಗೋಜಿಗೆ ಯಾರೂ ಹೋಗುವುದೂ ಇಲ್ಲ, ಅಂತಹ ಅವಕಾಶಗಳೂ ಅವರಿಗೆ ಸಿಗುವುದಿಲ್ಲ. ಆದರೆ ಪತ್ರಕರ್ತ ವೃತ್ತಿಯಲ್ಲಿ ಅಂತಹ ಅವಕಾಶ ಅನಿವಾರ್ಯ.
ವಿವಾದಾಸ್ಪದ ಸಂಗತಿಗಳ ಸಂದರ್ಭದಲ್ಲಿ ಯಾವುದಾದರೂ ಒಂದು ವಿಚಾರದತ್ತ ಮನಸ್ಸಿನಲ್ಲಿ ಒಲವು ಮೂಡುವುದು ಸಹಜ. ಆದರೆ ಆ ವಿವಾದದ ಇನ್ನೊಂದು ಮುಖವನ್ನು ನೋಡುವ ಅವಕಾಶವನ್ನು ಈ ವೃತ್ತಿಯು ನನಗೆ ಕಲ್ಪಿಸಿದೆ. ಹಲವು ಸಂದರ್ಭಗಳಲ್ಲಿ ಮನಸ್ಸು ತಪ್ಪುಕಲ್ಪನೆಗಳಿಂದ ಮುಕ್ತವಾಗಿದೆ. ಮತ್ತೆ ಕೆಲವೊಮ್ಮ ಭದ್ರವಾದ ನಂಬಿಕೆಗಳ ಬುಡ ಅಲ್ಲಾಡಿದಂತಾಗಿ ಬೇಸರವಾಗಿದೆ. ಈ ಎರಡೂ ಪ್ರಕ್ರಿಯೆಗಳು ನಿರಂತರವಾಗಿ ನನ್ನ ಮನಸ್ಸು ವಿನೀತವಾಗಿ ಇರುವಂತೆ ಮಾಡಿವೆ.
ದಕ್ಷಿಣ ಕನ್ನಡದವಳಾಗಿ ನನ್ನನ್ನು ಕರಾವಳಿ ಬಹುವಾಗಿ ಕಾಡುತ್ತದೆ. ಮಂಗಳೂರು ಬಂದರಿಗೆ ಕಚ್ಚಾ ತೈಲ ಹೊತ್ತು ತರುವ ಅಥವಾ ಬಂದರಿನಿಂದ ಹೊರಡುವ ಹಡಗುಗಳ ಭರಾಟೆಯ ನಡುವೆ ಸಮುದ್ರದ ಕಿನಾರೆ ಮಾಲಿನ್ಯಗೊಂಡಿದೆ ಎಂದು ಜನರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ನಾನು ವಿಶೇಷ ವರದಿಗಳಿಗಾಗಿ ಜನರನ್ನು ಮಾತನಾಡಿಸಿದ್ದೇನೆ. ಮೀನುಗಳನ್ನು ತೋರಿಸುತ್ತಲೋ ಅಥವಾ ಕರಿಗಟ್ಟಿದ ಕಸದ ರಾಶಿಯಲ್ಲಿ ಕಾಣುವ ಎಣ್ಣೆಯ ಪಸೆಯನ್ನು ತೋರಿಸುತ್ತಲೋ ಜನರು ವ್ಯವಸ್ಥೆಯ ವಿರುದ್ಧ, ಹಡಗುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದನ್ನು ರಪರಪನೆ ನೋಟ್ ಪುಸ್ತಕದಲ್ಲಿ ಗೀಚಿಕೊಂಡು ವರದಿ ಮಾಡಿದ್ದೇನೆ. ಆ ವರದಿಯನ್ನು ಫೈಲ್‍ಮಾಡಿದ ಕೆಲವು ದಿನಗಳಲ್ಲೇ ಬಂದರು ಮಂಡಳಿಯ ನಿರ್ದೇಶಕರ ವಾರ್ಷಿಕ ಲೆಕ್ಕಪತ್ರ ಮಂಡನೆಗೆ ಸಂಬಂಧಿಸಿದ ಪತ್ರಿಕಾಗೋಷ್ಠಿಗೆ ಹೋಗಬೇಕಾಯಿತು. ಅಲ್ಲಿ ನೋಡಿದರೆ ನಿರ್ದೇಶಕರು ತಮ್ಮ ಮುಂದಿರುವ ಟಾರ್ಗೆಟ್‍ಗಳನ್ನು ವಿವರಿಸುತ್ತಿದ್ದರು. ಕಳೆದೊಂದು ವರ್ಷದಲ್ಲಿ ಹಡಗುಗಳ ಟ್ರಾಫಿಕ್ ಹೆಚ್ಚಾಗಿರುವ ಬಗ್ಗೆ, ಸಮುದ್ರದಲ್ಲಿ ಸಂಚಾರ ದಟ್ಟಣೆಯ ಬಗ್ಗೆ, ಭಾರತದ ಇತರ ಬಂದರುಗಳೊಡನೆ ಸ್ಪರ್ಧಿಸಬೇಕಾದ ಅನಿವಾರ್ಯತೆಯ ಬಗ್ಗೆ ಅವರು ಹೇಳುತ್ತಿದ್ದರು. ಈ ಎಲ್ಲ ಸವಾಲುಗಳನ್ನು ದಾಟಿ ಮುನ್ನುಗ್ಗದೇ ಇದ್ದರೆ, ಚೀನಾ ಹೇಗೆ ಮುನ್ನುಗ್ಗಿ ಕಾರ್ಯ ನಿರ್ವಹಿಸುತ್ತ ಜಗತ್ತಿನ ನಕಾಶೆಯಲ್ಲಿ ನಂಬರ್ ವನ್ ಆಗಲು ಪ್ರಯತ್ನಿಸುತ್ತಿದೆ ಎಂಬುದನ್ನೂ ಅವರು ಅಂಕಿಅಂಶಗಳ ಸಮೇತ ವಿವರಿಸುತ್ತಿದ್ದರು.
ಕಚೇರಿಗೆ ಬಂದು ಎಡತಾಕಿದ ವೆಬ್‍ಸೈಟ್‍ಗಳನ್ನೆಲ್ಲ ಜಾಲಾಡಿ ಚೀನಾದ ನಿಲುವುಗಳನ್ನು, ಕರಾವಳಿ ಪ್ರದೇಶ ಹೊಂದಿದ ಇತರ ರಾಷ್ಟ್ರಗಳ ಆತಂಕವನ್ನು ಜಾಲಾಡಿ ಜಾಲಾಡಿ ಮತ್ತಷ್ಟು ಆತಂಕಪಟ್ಟುಕೊಂಡಿದ್ದೇನೆ. ನಿರ್ದೇಶಕರು ಕೊಟ್ಟ ಅಂಕಿಅಂಶಗಳನ್ನು ಹತ್ತಾರು ಬಾರಿ ಪರಿಶೀಲಿಸುತ್ತ ಬರೆಯುತ್ತಿರುವಾಗ ನನ್ನ ಮನಸ್ಸಿನಲ್ಲಿ ಮೀನುಗಾರರ ಹೋರಾಟ, ಸತ್ತು ತೇಲುತ್ತಿರುವ ಮೀನುಗಳ ರಾಶಿ, ನೀರಿನ ಅಲೆಗಳಲ್ಲಿ ಹೊಳೆಯುವ ಎಣ್ಣೆಯ ಪಸೆಯ ಚಿತ್ರಗಳಯ ಕಣ್ಣಮುಂದೆ ಬರುತ್ತಿದ್ದವು.
ಈ ಓಟದಲ್ಲಿ ಸಂವಾದಗಳು ಸಾಧ್ಯವಾಗಿ ಸಮಸ್ಯೆಗಳು ಪರಿಹಾರ ಆಗುವುದು ಸಾಧ್ಯವೇ… ಎಲ್ಲರೂ ತಮ್ಮ ಮುಂದೆ ಒಂದೊಂದು ಟಾರ್ಗೆಟ್‍ಗಳನ್ನು ಇರಿಸಿಕೊಂಡು ಓಡುತ್ತಿದ್ದಾರೆ. ರವೀಂದ್ರನಾಥ್ ಟ್ಯಾಗೋರ್ ಹೇಳಿದಂತೆ, ಅಭಿವೃದ್ಧಿಯ ಈ ಓಟವು ಹುಚ್ಚನೊಬ್ಬ ಇಳಿಜಾರಿನಲ್ಲಿ ವೇಗವಾಗಿ ಓಡುತ್ತಿರುವಂತಿದೆ.
ಬಗೆಹರಿಸಬೇಕಾದ ಸಮಸ್ಯೆಗಳು ಮುಂದೆ ನಿಂತಿರುವುದಿಲ್ಲ; ಅವು ಪಕ್ಕದಲ್ಲಿ ನಿಂತಿರುತ್ತವೆ. ಈ ವೇಗದ ಓಟದಲ್ಲಿ ಅಕ್ಕಪಕ್ಕ ನೋಡಲು ಯಾರಿಗಾದರೂ ಎಲ್ಲಿ ಸಮಯವಿದೆ ಹೇಳಿ. ಇವೆಲ್ಲ ಸುರಳೀತವಾಗುವುದು ಯಾವಾಗ ಎಂಬ ಖಿನ್ನತೆಯು ಮನಸ್ಸಿನಲ್ಲಿ ಆವರಿಸುತ್ತಲೇ ಬೆಳಗೊಂದು ಮೂಡಿಬಿಡುತ್ತದೆ. ಅಷ್ಟರಲ್ಲಿ ಫೋನ್ ಹಾಡುತ್ತದೆ. ನಿರಾಶ್ರಿತರ ಗುಂಪೊಂದು ಯಾವುದೇ ಗುರುತುಪತ್ರ, ಪಾಸ್‍ಪೋರ್ಟ್, ವೀಸಾ ಇಲ್ಲದೇ ಸಮುದ್ರಮಾರ್ಗದಲ್ಲಿ ಉದ್ಯೋಗ ಅರಸಿ ತೆರಳುತ್ತಿರುವಾಗ ಗಸ್ತುಪಡೆಯ ಪೊಲೀಸರ ಕೈಗೆ ಸಿಕ್ಕಿಬಿದ್ದ ಸುದ್ದಿ. ಠಾಣೆಗೆ ದೌಡಾಯಿಸಿ ನೋಡಿದರೆ ನೆಲದ ಮೇಲೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಕುಳಿತಿದ್ದಾರೆ. ಹಸುಳೆಗಳನ್ನೆತ್ತಿಕೊಂಡ ಬಾಣಂತಿಯರು, ಪುಟ್ಟ ಮಕ್ಕಳು, ಯುವತಿಯರೂ ಅಲ್ಲಿದ್ದರು. ದಾಖಲೆ ಪತ್ರಗಳಿಲ್ಲದೆ, ಯಾರೋ ಏಜೆಂಟರನ್ನು ನಂಬಿ ತಮ್ಮ ಬಳಿ ಇದ್ದಬದ್ದ ದುಡ್ಡನ್ನೆಲ್ಲ ಕೊಟ್ಟು ಜೀವದ ಹಂಗು ತೊರೆದು ಸಮುದ್ರ ಮಾರ್ಗದಲ್ಲಿ ಪ್ರಯಾಣಿಸಲು ಇವರೆಲ್ಲ ಸಿದ್ಧರಿದ್ದಾರೆ ಎಂದಾದರೆ ಸಾವು-ಬದುಕು ಎಂದರೆ ಒಂದು ಲಾಟರಿಯಷ್ಟೇ ಸರಳವೇ? ವ್ಯವಸ್ಥೆ ಅಷ್ಟು ಕ್ರೂರಿಯೇ? ಇರುವ ಜಾಗದಲ್ಲಿ ಆಸರೆ ಕಾಣದೆ, ದೂರದ ಯಾವ ಭರವಸೆಯನ್ನು ನಂಬಿ ಆ ತಾಯಿ ಹಸುಳೆಯನ್ನೆತ್ತಿಕೊಂಡು ಹೊರಟಿದ್ದು? ತರ್ಕ ಸೋಲುವುದೇ ಇಂತಹ ಸಂದರ್ಭಗಳಲ್ಲಿ.
ಮರುದಿನ ಎಡಿಟಿಂಗ್ ಡೆಸ್ಕ್‍ನಲ್ಲಿರುವಾಗ ಪ್ರಶಸ್ತಿ ಪಡೆದ ಬಾಲಕಿ, ಆನೆದಾಳಿಗೆ ತುತ್ತಾದ ತೋಟದ ರೈತ, ಪೊಳ್ಳು ಭರವಸೆಯ ಭಾಷಣ, ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಪ್ರಕಟವಾದ ತೀರ್ಪು, ಬ್ರಹ್ಮಕಲಶಕ್ಕೆ ಚಪ್ಪರ ಮುಹೂರ್ತ – ನಿನ್ನೆಯಷ್ಟೆ ಮನಸ್ಸನ್ನು ಮುಸುಕಿದ್ದ ಖಿನ್ನತೆಗೆ ಜಾಗವೇ ಇಲ್ಲ ಎಂಬಂತೆ ಎಲ್ಲವನ್ನೂ ಆದ್ಯತೆಯ ಮೇರೆಗೆ ಪುಟಕ್ಕೆ ಕಳುಹಿಸುತ್ತ ಮುಳುಗಿಹೋಗುತ್ತೇನೆ. ಎಡಿಟಿಂಗ್ ಹೇಗಿರಬೇಕು ಅಂತ ವೈಎನ್‍ಕೆ ಹೇಳುತ್ತಿದ್ದ ಮಾತುಗಳು ನೆನಪಾಗುವುದುಂಟು: ‘ಎಷ್ಟು ಬೇಕೋ ಅಷ್ಟೇ ಪದಗಳಲ್ಲಿ ಸುದ್ದಿ ತಲುಪಬೇಕು, ‘If you cut, it should bleed’. ಆದರೆ ಎಷ್ಟು ಬೇಕೋ ಅಷ್ಟು ಸುದ್ದಿ ಎಂಬ ಸಾಲುಗಳು ಗೊಂದಲವನ್ನು ಮೂಡಿಸುತ್ತವೆ. ನಿಜವಾಗಿಯೂ ಪತ್ರಿಕೆ ಓದುವ ಜನರಿಗೆ, ಅಥವಾ ಟೀವಿ ವೀಕ್ಷಿಸುವವರಿಗೆ ಸುದ್ದಿ ಎಷ್ಟು ಬೇಕು? ನಮ್ಮಲ್ಲಿ ಆ ಯೋಚನೆಯನ್ನು ಓದುಗರು ಅಥವಾ ಜನರು ಸದಾ ತಿದ್ದುತ್ತಲೇ ಇರುತ್ತಾರೆ. ಪತ್ರಿಕೆಗಳ ನಡುವೆ ಗುಣಮಟ್ಟದ ಸ್ಪರ್ಧೆ, ಪ್ರಸರಣಕ್ಕೆ ಸಂಬಂಧಿಸಿದ ಸ್ಪರ್ಧೆ, ಸುದ್ದಿ ವಾಹಿನಿಗಳ ಜೊತೆ ಸ್ಪರ್ಧೆ, ಜಾಹೀರಾತುಗಳನ್ನು ಸೆಳೆಯುವ ನಿಟ್ಟಿನಲ್ಲಿ ಸ್ಪರ್ಧೆ, ಹೆಚ್ಚೆಚ್ಚು ಸುದ್ದಿ ಕೊಡಬೇಕೆಂಬ ಸ್ಪರ್ಧೆ – ಈ ಸ್ಪರ್ಧೆಯ ಗೊಂದಲ, ಬಂದರು ಮಂಡಳಿ ನಿರ್ದೇಶಕರ ಸುದ್ದಿಗೋಷ್ಠಿಯಲ್ಲಿ ನನ್ನಲ್ಲಿ ಮೂಡಿಸಿದ ಭಾವನೆಯನ್ನೇ ಮೂಡಿಸುತ್ತದೆ. ಇವೆಲ್ಲವುಗಳ ನಡುವೆ ಸುದ್ದಿಗೆ ಎಷ್ಟುಬೇಕೋ ಅಷ್ಟು ಮಾತ್ರ ಬರೆದು ಉಳಿದ ಮಾಹಿತಿಗಳು ಜೇಬಿನಲ್ಲಿಯೇ ಉಳಿದುಬಿಡುತ್ತವೆ. ಆದರೂ ಪ್ರತಿ ಅಸೈನ್‍ಮೆಂಟ್‍ನಲ್ಲಿಯೂ ಸ್ವಾಗತ ಭಾಷಣದಿಂದ ಹಿಡಿದು ಮುಖ್ಯಭಾಷಣಗಳನ್ನೆಲ್ಲವನ್ನೂ ಗಮನವಿಟ್ಟು ಕೇಳಿ ಹೊಸದೊಂದು ಸುದ್ದಿಯ ಎಳೆ ಸಿಗುತ್ತದೋ ಎಂದು ಸದಾ ನಿರೀಕ್ಷೆಯ ಬಾಗಿಲು ತೆರೆದೇ ಇರುತ್ತದೆ. ಭಾಷಣಗಳಲ್ಲಿ ಸಿಗುವ ಎಳೆಗಳನ್ನು ಹಿಡಿದು ವೇದಿಕೆಯ ಹಿಂಭಾಗ ಮತ್ತೆ ಭಾಷಣಕಾರರಿಂದ ಹೆಚ್ಚು ಮಾಹಿತಿ ಪಡೆದು, ಸಿಕ್ಕ ಎಳೆಗಳನ್ನು ಹುಡುಕಿಕೊಂಡು ಹೋಗಿ ವಿಶೇಷ ವರದಿಯ ಬೈಲೈನ್ ಅಂಟಿಸಿಕೊಂಡು, ಕೆಲವೊಮ್ಮೆ ಹೊಗಳಿಸಿಕೊಂಡು, ಕೆಲವೊಮ್ಮೆ ಬೈಸಿಕೊಂಡು, ಮತ್ತೆ ಕೆಲವೊಮ್ಮೆ ಬೆದರಿಕೆಯ ಕರೆಗಳನ್ನು ತಣ್ಣಗೆ ಕೇಳುತ್ತ ಗಡಗಡ ನಡುಗುತ್ತ ಪ್ರತಿಕ್ಷಣವೂ ಅನಿರೀಕ್ಷಿತಗಳ ಸರಮಾಲೆ.
ಪತ್ರಿಕೆ ಎಂದರೆ ಪುಟದ ತುಂಬ ಜನರಿರಬೇಕು. ಬದುಕು, ಬವಣೆ, ಖುಷಿ, ಸಾಂತ್ವನ, ಆತಂಕ ಮತ್ತೆ ಈ ಬದುಕಿನಲ್ಲಿ ಇರುವ ಏನೆಲ್ಲವೂ ಅಲ್ಲಿರಬೇಕು. ಅದಕ್ಕಾಗಿ ಸದಾ ಜನರ ನಡುವೆಯೇ ಇರುವ ಕಾಯಕ ಪತ್ರಿಕೋದ್ಯಮ. ಪತ್ರಕರ್ತರು ಆಕ್ಟಿವಿಸ್ಟ್‍ಗಳಾಗಬಾರದು ಎಂದು ಹಲವರು ಮೆಲುದನಿಯಲ್ಲಿಯೂ, ಕೆಲವರು ಜೋರುದನಿಯಲ್ಲಿಯೂ ಹೇಳುವುದನ್ನು ಕೇಳಿಸಿಕೊಂಡಿದ್ದೇನೆ. ಆಕ್ಟಿವಿಸ್ಟ್‍ಗಳು ಒಂದು ಸಮುದಾಯ ಅಥವಾ ಜನಸಮೂಹದ ಬೇಡಿಕೆಗಳ ಪರವಾಗಿ ನಿರ್ದಿಷ್ಟ ಬೇಡಿಕೆ, ಗುರಿಗಳನ್ನು ಇರಿಸಿಕೊಂಡು ಹೋರಾಡುತ್ತಿರುತ್ತಾರೆ. ಪತ್ರಕರ್ತರು ಅಂತಹ ಹತ್ತಾರು ಹೋರಾಟಗಳ ಬಗ್ಗೆ ಬರೆಯುತ್ತಿರುತ್ತಾರೆ. ಇಬ್ಬರ ಧ್ವನಿಯೂ ಜನರ ಪರವೇ ಇರುವುದಾದರೂ ಪತ್ರಕರ್ತರು ಮತ್ತು ಆಕ್ಟಿವಿಸ್ಟ್‍ಗಳ ನಡುವಿನ ಗೆರೆ ಬಹಳವೇ ತೆಳುವಾದುದು. ಹಾಗಂತ ಎಲ್ಲ ಹೋರಾಟಗಳೂ ಜನರ ಪರವಾಗಿಯೇ ಮುಂದುವರೆಯುತ್ತವೆ ಎನ್ನುವಂತಿಲ್ಲ. ನಾವು ಯಾವ ಹೋರಾಟಗಳ ಬಗ್ಗೆ ಅದಮ್ಯ ಆಸಕ್ತಿಯಿಂದ ಮುಗಿಬಿದ್ದು ವರದಿ ಮಾಡುತ್ತೇವೋ, ಆ ಹೋರಾಟವು ಮೂರು ಕಾರಣಗಳಿಗಾಗಿ ಮುರಿದು ಬೀಳುವ ಎಲ್ಲ ಸಾಧ್ಯತೆಗಳಿರುತ್ತವೆ. ಹೋರಾಟಗಾರರೇ ವೈಯಕ್ತಿಕ ಆಮಿಷಕ್ಕೆ ಬಲಿಯಾಗಿಬಿಡುವುದು ಮೊದಲನೇ ಕಾರಣ. ಸಮಸ್ಯೆ ಮುಕ್ತಾಯವಾಗಿದ್ದರೂ ತಮ್ಮ ಅಸ್ತಿತ್ವಕ್ಕಾಗಿ ಮುಖಂಡರು ಹೋರಾಟವನ್ನು ಜೀವಂತ ಇಡುವುದು ಹಾಗೂ ಆಡಳಿತವೇ ಹೋರಾಟವನ್ನು ಹೊಸಕಿ ಹಾಕುವುದು ಉಳಿದೆರಡು ಕಾರಣಗಳು. ದುರದೃಷ್ಟವಶಾತ್ ಪತ್ರಕರ್ತರು ಇವೆಲ್ಲಕ್ಕೂ ಸಾಕ್ಷಿಯಾಗಬೇಕಾಗುತ್ತದೆ.
ಈ ಹೋರಾಟ, ಪ್ರತಿಭಟನೆ ಎಲ್ಲವೂ ವ್ಯರ್ಥ, ಕಣ್ಣಾಮುಚ್ಚಾಲೆಯಾಟ. ಬರಬೇಕಾದ ಯೋಜನೆ ಬಂದೇ ಬರುತ್ತದೆ. ನೀವೇಕೆ ಇದಕ್ಕೆಲ್ಲ ಮಹತ್ವ ಕೊಟ್ಟು ಬರೀತೀರಿ? ಪತ್ರಕರ್ತರು ಇತ್ತೀಚೆಗೆ ಪದೇ ಪದೇ ಎದುರಿಸಬೇಕಾಗಿರುವ ಪ್ರಶ್ನೆಯಿದು. ಯೋಜನೆಗಳು ಬಂದೇ ಬರುತ್ತವೆ ಎಂದಾದರೆ ಸಂತ್ರಸ್ತರಾಗುವವರು ಆಗಿಯೇ ಆಗುತ್ತಾರೆ ಎಂಬ ಸಾಲೂ ಅದರ ಹಿಂದೆ ಅಡಗಿರುತ್ತದಲ್ಲವೇ? ಆ ಅನಿವಾರ್ಯತೆಯೇ ಬರವಣಿಗೆಯ ಅಗತ್ಯವನ್ನು ಒತ್ತಿ ಹೇಳುತ್ತದೆ ಅಲ್ಲವೇ.
ಒಳ್ಳೆಯ ವರದಿಯೊಂದು ಸಿದ್ಧವಾಗಿ ಪ್ರಕಟವಾದಾಗ ಖುಷಿಯಾಗುತ್ತದೆ. ಆದರೆ ಇದೇ ಬೈಲೈನ್‍ಗಳು, ಆಲ್ ಎಡಿಷನ್‍ನ ಕ್ರೆಡಿಟ್‍ಗಳು, ಪ್ರಶಂಸೆಯ ಸಾಲುಗಳೆಲ್ಲವೂ ವರದಿಗೆ ಕಾರಣವಾದ ಸಂತ್ರಸ್ತರು ಎದುರಿಸುತ್ತಿರುವ ಅದೇ ಅನಿವಾರ್ಯತೆಯ ಮುಂದೆ ಎಷ್ಟೊಂದು ಚಿಕ್ಕದಾಗಿ ಕಾಣುತ್ತವೆ. ‘ಅವತ್ತೊಂದು ನೀವು ವರದಿ ಬರೆದಿದ್ರಲ್ಲ! ಡಿಸಿಯವರೂ ಆ ಬಗ್ಗೆ ಮಾತಾಡಿದ್ರಲ್ಲ! ಆದ್ರೆ ನಮ್ ಸಮಸ್ಯೆ ಹಾಗೆಯೇ ಇದೆ… ಏನು ಮಾಡುವುದು?’ ಅಂತೊಂದು ಫೋನ್ ಬರುತ್ತದೆ. ಎಲ್ಲ ಅಹಂ ಮುರಿದು ಬೀಳಲು ಅದೊಂದು ಫೋನ್ ಕಾಲ್ ಸಾಕು. ಪ್ರತೀ ಬೈಲೈನ್ ಬಳಿಕವೂ ಇಂತಹ ಉಳಿಪೆಟ್ಟುಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೀಳುತ್ತಲೇ ಇರುತ್ತವೆ.
ಒಮ್ಮೆ ಪ್ರಾಂಶುಪಾಲರೊಬ್ಬರೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆ. ಎರಡು ಕೋಮಿನ ವಿದ್ಯಾರ್ಥಿಗಳು ಒಂದಾಗಿ ಕೈಗೆತ್ತಿಕೊಂಡ ಸಮಾಜಮುಖಿ ಯೋಜನೆಯೊಂದರ ಬಗ್ಗೆ ಹೇಳುತ್ತಿದ್ದರು. ‘ಅರೆ…ಕರಾವಳಿ ಮಟ್ಟಿಗೆ ಇದೊಂದು ಪಾಸಿಟಿವ್ ವಿಷಯ’ ಅನಿಸಿತು. ‘ಬರಿಯುದಾ ಸರ್, ಚೆನ್ನಾಗಿದೆ ನಿಮ್ ಕಾಲೇಜಿನ ವಿದ್ಯಾರ್ಥಿಗಳ ನಿಲುವು’ ಎಂದು ಹೇಳಿದ್ದೇ ಪ್ರಾಂಶುಪಾಲರು ಕೈಮುಗಿದರು. ‘ದಯವಿಟ್ಟು ಬೇಡ ಮೇಡಂ. ಸೌಹಾರ್ದ ಅಂತೆಲ್ಲ ನೀವು ಬರೆಯುವುದು, ಮತ್ಯಾರೋ ನಮ್ ಕಾಲೇಜಿನ ವಿದ್ಯಾರ್ಥಿಗಳನ್ನು ಬೆದರಿಸುವುದು, ಮತ್ತೇನೋ ಸಮಸ್ಯೆ ಸೃಷ್ಟಿ ಆಗುವುದು ಬೇಡವೇ ಬೇಡ. ಮಕ್ಕಳು ಮಕ್ಕಳ ಪಾಡಿಗೆ ಇರಲಿ, ಅವರಿಗೆ ಈ ಮಾಧ್ಯಮದ ಪ್ರಚಾರದ ಗೀಳೂ ಬೇಡ’ ಅಂತ ಹೇಳಿದರು.
ಬೈಲೈನ್ ಹಾಳಾಗಿ ಹೋಗಲಿ. ಪತ್ರಕರ್ತರು ದೂರವೇ ಇರಲಿ. ಎಷ್ಟೋ ಬಾರಿ ಜನಸಾಮಾನ್ಯರಿಗೆ ತಮ್ಮ ಪಾಡಿಗೆ ತಾವು ಬಾಳುವ ಅವಕಾಶ ಸಿಕ್ಕರೂ ಸಾಕು… ಜೀವನ ಸರಿಯಾಗಿಬಿಡುತ್ತದೆ. ಸಂತ್ರಸ್ತರ ಪರವಾದ ವರದಿಗಳಿಗೆ ಆದ್ಯತೆ ನೀಡುವ ವರದಿಗಾರ ಅಥವಾ, ಉಪಸಂಪಾದಕ ಕೆಲವೊಮ್ಮೆ ಜಾಹೀರಾತು ವಿಭಾಗದವರ ಕೆಂಗಣ್ಣಿಗೆ ತುತ್ತಾಗುವುದಿದೆ. ಪ್ರಸರಣ, ಜಾಹೀರಾತು, ಸಂಪಾದಕೀಯ ವಿಭಾಗದವರು ಸೇರಿ ನಡೆಸುವ ಸಭೆಗಳಲ್ಲಿ ಇಂತಹ ವರದಿಗಳು ಪ್ರಸ್ತಾಪವಾಗಿ ಪತ್ರಿಕೆಯ ಯಾವುದೇ ಸೋಲಿಗೂ ಇಂತಹ ವರದಿಗಳೇ ಕಾರಣ ಎಂಬಂತೆ ಬಿಂಬಿಸಲಾಗುತ್ತದೆ.
ಒಮ್ಮೆ ಭೂತಾನ್‍ಗೆ ತೆರಳಿದಾಗ ಅಲ್ಲಿನ ಪತ್ರಕರ್ತರೊಬ್ಬರೊಡನೆ ಚಹಾ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದೆ. ವರದಿಗಾರಿಕೆಯ ಗಮ್ಮತ್ತು, ಡೆಸ್ಕಿನ ಸವಾಲು, ಮನೆಯ ಜಂಜಾಟ… ಹೀಗೆ. ನಮ್ಮಲ್ಲಿ ಅಣುಶಕ್ತಿ ವಿರುದ್ಧದ ಹೋರಾಟದ ಕತೆಗಳು, ಎಸ್‍ಇಝಡ್, ಗಣಿಗಾರಿಕೆ, ನಕ್ಸಲಿಸಂ ಮತ್ತು ಪರಿಹಾರ ಪ್ಯಾಕೇಜ್‍ಗಳ ಬಗ್ಗೆ ನಾನು ಕಿವಿಗೆ ಗಾಳಿಹೊಕ್ಕಿದವರ ಹಾಗೆ ಮಾತನಾಡುತ್ತಿದ್ದರೆ ಅವರು ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಹೊರಡುವಾಗ ಅವರು ಸಣ್ಣ ದನಿಯಲ್ಲಿ ಹೇಳಿದರು – ‘ನಮ್ಮ ದೇಶದಲ್ಲಿ ಆಡಳಿತದ ಸೂತ್ರ ರಾಜರ ಕೈಲಿದೆ. ನಿಮ್ಮಷ್ಟು ಮುಕ್ತವಾಗಿ ನಾನು ಮಾತನಾಡುವುದು ಸಾಧ್ಯವಾಗಲಿಲ್ಲ. Hope you understand. I am so happy to see your openness while talking.’ ಹೋರಾಟಗಳು ಸೋಲುತ್ತಿವೆ, ಚಳವಳಿಗಳು ನಾಶ ಆಗಿವೆ. ಪ್ರಜಾಪ್ರಭುತ್ವಕ್ಕೆ ಪೆಟ್ಟುಬಿದ್ದಿದೆ. ಬರವಣಿಗೆ ಕಷ್ಟವಾಗಿದೆ ಎಂದೆಲ್ಲ ಓದುವಾಗ ನನಗೆ ಅವರ ಮಾತುಗಳು ನೆನಪಾಗುತ್ತವೆ. ಚಳವಳಿ, ಹೋರಾಟ, ಜನಪರ ನಿಲುವುಗಳ ಹಲವು ವೇದಿಕೆಗಳು ಖಾಲಿ ಆಗಿರಬಹುದು. ಆದರೆ ವೇದಿಕೆಗಳಿನ್ನೂ ಇವೆ.
ಮನಸ್ಸಿನಲ್ಲಿ ತುಂಬ ಗೊಂದಲವಾದಾಗ ಹಿರಿಯರು ಅನುಸರಿಸಿದ ದಾರಿ ಅನುಸರಿಸಬೇಕಂತೆ. ಇದ್ದಾರಲ್ಲ ನಮ್ಮ ಮುಂದೆ ನಾಗೇಶ ಹೆಗಡೆ, ಪಿ. ಸಾಯಿನಾಥ್ ಅವರಂತಹ ಮಾರ್ಗದರ್ಶಕರು.
ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ
ಏಷ್ಯನ್ ಕಾಲೆಜ್ ಆಫ಼್ ಜರ್ನಲಿಸಂ ನಲ್ಲಿ ಪತ್ರಿಕೋದ್ಯಮ ಪದವಿ. ಪ್ರಜಾವಾಣಿ, ವಿಜಯ ಕರ್ನಾಟಕ, ದಟ್ಸ್ಕನ್ನಡ ಪತ್ರಿಕೆಗಳಲ್ಲಿ ಕೆಲಸ. ಪ್ರಸ್ತುತ ಉದಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆಗಾರ್ತಿಯಾಗಿಯೂ ಇವರು ಪರಿಚಿತರು. ಪ್ರಕಟಿತ ಸಂಕಲನಗಳು: ’ಒಂದು ಮುಷ್ಟಿ ನಕ್ಷತ್ರ’, ಹಾಗೂ ’ಅಮ್ಮನ ಜೋಳೀಗೆ’. ಕನ್ನಡ ಅಂತರ್ಜಾಲದ ಮೊದಲ ತಲೆಮಾರಿನ ಪತ್ರಕರ್ತರಲ್ಲಿ ಒಬ್ಬರು.