“…ಜವಾಬ್ದಾರಿಯುತ ನಾಗರಿಕರೆಲ್ಲರೂ, ಸರಕಾರ ಈಗಿರುವ ಕಾಯ್ದೆಯನ್ನು ಮತ್ತೂ ದುರ್ಬಲಗೊಳಿಸದಂತೆ, ಹಾಗೂ ಮಾರಕ ಸಾಂಕ್ರಾಮಿಕ ರೋಗಗಳ ಹಾವಳಿಯ ಹಿನ್ನೆಲೆಯಲ್ಲಿ ಆರೋಗ್ಯವಂತ ಪರಿಸರಕ್ಕಾಗಿ ಇನ್ನೂ ಕಠಿಣ ನಿಯಮಗಳನ್ನು ರೂಪಿಸುವಂತೆ ಸರಕಾರವನ್ನು ಒತ್ತಾಯಿಸಿ [email protected] ಗೆ ಪ್ರತಿಕ್ರಿಯೆ/ಆಕ್ಷೇಪಗಳನ್ನು ಕಳುಹಿಸುವುದು ಈ ಹೊತ್ತಿನ ಅಗತ್ಯ.”
ಕಳ್ಳ ಬೇಟೆ, ಕಳ್ಳ ನಾಟಾ ಮಾಡಿ ಅರಣ್ಯ ಸಂಪತ್ತು, ಜೀವವೈವಿಧ್ಯದ ನಾಶ ಮಾಡುವುದು ಅಪರಾಧ. ಹಾಗಾದರೆ ಪರಿಸರ ಅನುಮತಿ ನೀಡುವ ಪ್ರಕ್ರಿಯೆಯನ್ನೇ ತಿರುಚಿ ಜೀವವೈವಿಧ್ಯವನ್ನು ನಾಶಮಾಡಲು ಅವಕಾಶ ಮಾಡಿಕೊಡುವುದನ್ನು ಏನೆಂದು ಕರೆಯಬೇಕು?
ಕೋವಿಡ್-19ರಿಂದಾಗಿ ಸರ್ಕಾರಕ್ಕೆ ಮಾಲಿನ್ಯಕಾರಕ ಉದ್ಯಮಗಳು/ ವ್ಯವಹಾರಗಳ ಮೇಲೆ ಪರಿಸರ ಸಂರಕ್ಷಣಗೆ ಅಗತ್ಯವಿರುವ ಸುಧಾರಣೆಗಳನ್ನು ಹೇರಲು ಅನುಕೂಲವಾದ ಒಂದು ಅಪೂರ್ವ ಅವಕಾಶ ದೊರೆತಿದೆ. ಇಂಗ್ಲೆಂಡಿನ ಪರಿಸರ ಪತ್ರಕರ್ತೆಯಾದ ಗಯಾ ವಿನ್ಸ್ ಸೂಚಿಸುವಂತೆ ಉದ್ಯಮ ಮತ್ತು ವ್ಯವಹಾರಗಳು ಸಹಾಯಕ್ಕಾಗಿ ಸರ್ಕಾರದತ್ತ ಕೈಚಾಚುತ್ತಿರುವ ಈ ಕಾಲಘಟ್ಟ ಸುಸ್ಥಿರ ಕಾರ್ಯಸೂಚಿಯನ್ನು ಮಂಡಿಸಲು ಸಾಧ್ಯವಾಗುವ ಪ್ರಬಲ ಸ್ಥಾನದಲ್ಲಿ ಸರಕಾರವನ್ನು ತಂದು ನಿಲ್ಲಿಸಿದೆ. ದೇಶದ ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಆರೋಗ್ಯವಂತ ಪರಿಸರವನ್ನು ಬಿಟ್ಟು ಹೋಗುವ ಕಾಳಜಿ ಇರುವ ಯಾರೂ ಕೂಡಾ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಜೀವಪರ ಆಭಿವೃದ್ಧಿಗೆ ಮುನ್ನುಡಿ ಬರೆಯಲು ಸಿಕ್ಕಿದ ಅಪೂರ್ವ ಅವಕಾಶವನ್ನು ಬಳಸುವ ಬದಲು ಭಾರತ ಸರ್ಕಾರವು ಈ ದೇಶದ ಭವಿಷ್ಯದ ಮೇಲೆ ಭೀಕರ ಪರಿಣಾಮ ಬೀರಬಲ್ಲ ಹಲವು ವಿವಾದಾತ್ಮಕ ಯೋಜನಗಳಿಗೆ ಹಸಿರು ನಿಶಾನೆ ತೋರಿಸಿದೆ. ಉದಾಹರಣೆಗೆ:
1. ನಮ್ಮ ಪಶ್ಚಿಮಘಟ್ಟದಲ್ಲಿ ಮಾತ್ರ ಕಾಣಸಿಗುವ (ಅಳಿವಿನಂಚಿನಲ್ಲಿರುವ) ಸಿಂಹ-ಬಾಲದ ಸಿಂಗಳೀಕಗಳ ನೆಲೆಯಾದ ಶರಾವತಿ ಕಣಿವೆಯ ವನ್ಯಜೀವಿ ಅಭಯಾರಣ್ಯದೊಳಗೆ ಜಲವಿದ್ಯುತ್ಯೋಜನೆಗಾಗಿ ಪರಿಶೋಧನಾ ಕೊರೆತದ ಕಾರ್ಯಾಚರಣೆಗಳಿಗೆ ಚಾಲನೆ ನೀಡಿದೆ.
2. ದಟ್ಟ ಅರಣ್ಯದೊಳಗಿರುವ 50ಕ್ಕೂ ಮಿಕ್ಕಿ ಕಲ್ಲಿದ್ದಲ ನಿಕ್ಷೇಪಗಳನ್ನು ವಾಣಿಜ್ಯೋದ್ದೇಶದ ಗಣಿಗಾರಿಕೆಗಾಗಿ ವಿದೇಶೀ ಕಂಪೆನಿಗಳೂ ಸೇರಿದಂತೆ ಖಾಸಗಿ ಉದ್ಯಮಿಗಳಿಗೆ ನೀಡ ಹೊರಟಿದೆ. ಪರಿಸರ ನಾಶಗೈವ ಬೃಹತ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸುವ ಕ್ರಿಯೆಯ ಭಾಗವಾಗಿ, ಈಗಿರುವ ಪರಿಸರ ರಕ್ಷಣಾ ನಿಯಮಗಳನ್ನು ಇನ್ನೂ ದುರ್ಬಲಗೊಳಿಸಲು ಸರ್ಕಾರ ಹೆಜ್ಜೆ ಮುಂದಿಟ್ಟಿದೆ. ಈ ಹೆಜ್ಜೆಗಳಲ್ಲೊಂದು ಪ್ರಸಕ್ತ ಜಾರಿಯಲ್ಲಿರುವ ಪರಿಸರ ಪರಿಣಾಮಗಳ ಮೌಲ್ಯಮಾಪನ ಅಧಿಸೂಚನೆ 2006ರಲ್ಲಿ ತರಲು ಉದ್ದೇಶಿಸಿರುವ ಬದಲಾವಣೆಗಳು.
ಯೋಜನೆಗಳಿಗೆ ಹಸಿರು ಅಥವಾ ಕೆಂಪು ನಿಶಾನೆ ತೋರಿಸುವ ಪ್ರಕ್ರಿಯೆಯಲ್ಲಿ ಪರಿಸರ ಪರಿಣಾಮಗಳ ಮೌಲ್ಯ ಮಾಪನ (Envronmental Impact Assessment, EIA) ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರ ಪರಿಣಾಮಗಳ ಮೌಲ್ಯ ಮಾಪನ ಕೈಗೊಳ್ಳುವ ಮೂಲಕ ಯಾವುದೇ ಒಂದು ಪ್ರಸ್ತಾವಿತ ಯೋಜನೆಯಿಂದ ಪರಿಸರ ಮತ್ತು ಸಮಾಜದ ಮೇಲೆ ಆಗಬಹುದಾದ ಪರಿಣಾಮಗಳನ್ನು ಅಂದಾಜಿಸಲು ಸಾಧ್ಯವಾಗುತ್ತದೆ. ಅಂತರ್ರಾಷ್ಟ್ರೀಯ ಪರಿಸರ ಸಮಸ್ಯೆಗಳ ಬಗ್ಗೆ ವಿಶ್ವಸಂಸ್ಥೆ ಪ್ರಥಮ ಬಾರಿಗೆ ಆಯೋಜಿಸಿದ್ದ 1972ರ ಸ್ಟಾಕ್ಹೋಮ್ ಸಮ್ಮೇಳನದಲ್ಲಿ ಭಾರತವೂ ಭಾಗಿಯಾಗಿ ಸ್ಟಾಕ್ಹೋಮ್ ಘೋಷಣೆಗೆ ಸಹಿ ಹಾಕುವ ಮೂಲಕ ಮಾನವ ಪರಿಸರ ರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿತ್ತು. ಆ ನಂತರ ಕಂಬಳಿ ಹೊದೆದು ಮಲಗಿದ್ದ ನಮ್ಮ ಪರಿಸರ ಪ್ರಜ್ಞೆ ಎಚ್ಚೆತ್ತದ್ದು 1984ರ ಡಿಸೆಂಬರ್ನಲ್ಲಿ ಭೋಪಾಲ್ನ ಯೂನಿಯನ್ ಕಾರ್ಬೈಡ್ ಘಟಕ ವಿಷಾನಿಲ ಸೋರಿಸಿ ಸುಮಾರು 3787 ಮಂದಿಯನ್ನು ಕೊಂದು ೫,೫9,835 ಮಂದಿಯ (ಸರ್ಕಾರಿ ಅಂಕಿ ಅಂಶಗಳು) ಆರೋಗ್ಯದ ಮೇಲೆ ಶಾಶ್ವತ ಪರಿಣಾಮ ಬೀರಿದ ಮೇಲೆ! ಆ ನಂತರ ಹೊರ ಬಂತು 1986ರ ಪರಿಸರ ಸಂರಕ್ಷಣಾ ಕಾಯ್ದೆ. ಆ ಕಾಯ್ದೆಯ ಅಡಿಯಲ್ಲಿ 1994ರ ಪರಿಸರ ಪರಿಣಾಮಗಳ ಮೌಲ್ಯಮಾಪನ ಅಧಿಸೂಚನೆಯನ್ನು ಹೊರತಂದ ಕೇಂದ್ರ ಸರ್ಕಾರ ಉದ್ಯಮ/ಯೋಜನೆಗಳ ಸ್ಥಾಪನೆ, ವಿಸ್ತರಣೆಗೆ ಪರಿಸರ ಅನುಮತಿಯನ್ನು ಕಡ್ಡಾಯಗೊಳಿಸಿತು. 2006ರಲ್ಲಿ ಹಳೆಯ ಅಧಿಸೂಚನೆಯನ್ನು ಹಿಂಜಿ ಹೊಸ ಪರಿಸರ ಪರಿಣಾಮಗಳ ಮೌಲ್ಯಮಾಪನ ಅಧಿಸೂಚನೆ ಹೊರಡಿಸಿದ ಸರ್ಕಾರ, ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಲ್ಲ ಯಾವುದೇ ಉದ್ಯಮ/ಯೋಜನೆಗಳ ಸ್ಥಾಪನೆ, ವಿಸ್ತರಣೆಗೆ ಪರಿಸರ ಅನುಮತಿಯನ್ನು ಕಡ್ಡಾಯಗೊಳಿಸಿತು.
ಈಗ ತೀವ್ರತರ ಬದಲಾವಣೆಯನ್ನು ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ 2020 (Draft Environmental Impact Assessment (EIA) Notification 2020) ಕರಡಿನ ಮೂಲಕ ಪ್ರಸ್ತಾಪಿಸಲಾಗಿದೆ. ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ 2020 ಅಥವಾ ಇಐಎ 2020 ಕುರಿತು ಸಾರ್ವಜನಿಕರಿಗೆ ಆಕ್ಷೇಪ ವ್ಯಕ್ತಪಡಿಸುವ ಮತ್ತು ಅಭಿಪ್ರಾಯವನ್ನು ಸಲ್ಲಿಸಲು ಕಾಲಮಿತಿಯು ಮೊದಲಿಗೆ ಜೂನ್ 30ರ ತನಕ ಇತ್ತು. ಇತ್ತೀಚಿಗೆ ದಿಲ್ಲಿ ಹೈಕೋರ್ಟಿನ ಆದೇಶದಂತೆ ಕಾಲಮಿತಿಯನ್ನು ಆಗಸ್ಟ್ 11 ರ ವರೆಗೆ ವಿಸ್ತರಿಸಲಾಗಿದೆ.
ಬೆಂಗಳೂರಿನ ಸಂಯುಕ್ತ ಸಂರಕ್ಷಣಾ ಚಳುವಳಿ ಸಲ್ಲಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಸರ್ವನಾಗರಿಕರಿಗೂ ವಿಷಯ ತಿಳಿಯುವಂತೆ ಮತ್ತು ಪ್ರತಿಕ್ರಿಯೆ ನೀಡುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಪ್ರಾಂತೀಯ ಭಾಷೆಗಳಲ್ಲಿ ಕರಡನ್ನು ಪ್ರಕಟಿಸದಿದ್ದುದಕ್ಕೆ ಸರಕಾರವನ್ನು ತರಾಟೆಗೆ ತೆಗೆದುಕೊಂಡು ಸೆಪ್ಟೆಂಬರ್ 7ರ ವರೆಗೆ ಇಐಎ2020 ಅಧಿಸೂಚನೆಯನ್ನು ಪ್ರಕಟಿಸದಂತೆ ತಡೆ ಆಜ್ಞೆ ನೀಡಿದೆ.
ದೇಶದೊಳಗಿನ ಹಲವು ಸಂಘಟನೆಗಳು ಈ ಕಾಯ್ದೆಯಲ್ಲಿ ತರುತ್ತಿರುವ ಬದಲಾವಣೆ ಮತ್ತು ಸಡಿಲಗೊಳಿಸುವಿಕೆಯ ವಿರುದ್ಧ ಆಕ್ಷೇಪ ಸಲ್ಲಿಸಿವೆ. ಲಾಕ್ಢೌನ್ನಿಂದಾಗಿ ಬದುಕೇ ಸ್ಥಗಿತಗೊಂಡಿದ್ದ ಸನ್ನಿವೇಶದಲ್ಲಿ ಅಧಿಸೂಚನೆಯನ್ನು ಪ್ರಕಟಿಸಿದ ಔಚಿತ್ಯವನ್ನು ಪ್ರಶ್ನಿಸಿದ ಹಲವು ಸಂಘಟನೆಗಳು ಪರಿಸರ ರಕ್ಷಣೆಗಾಗಿ ಸಮಗ್ರ ಕಾಯಿದೆಯೊಂದನ್ನು ಕೋರಿ ಇಐಎ 2020 ಕರಡನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿವೆ. ಅಧಿಸೂಚನೆಯ ಕರಡಿಗೆ ಆಕ್ಷೇಪ ವ್ಯಕ್ತಪಡಿಸುವ ಜಾಲತಾಣಗಳನ್ನು ಪ್ರತಿಬಂಧಿಸುವ, ಪರಿಸರ ಮಂತ್ರಿಗಳಿಗೆ ಪತ್ರಗಳನ್ನು ಬರೆದ ಮಕ್ಕಳ ಚಳವಳಿಯ ಸಂಘಟನೆಯ ಮೇಲೆ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ಕ್ರಮ ತೆಗೆದುಕೊಳ್ಳುವ ಬೆದರಿಕೆ ಒಡ್ಡುವಂತ ಚಿಲ್ಲರೆ ಕೆಲಸಗಳನ್ನು ಮಾಡುವ ಮುಖಾಂತರ ಘನತೆವೆತ್ತ ಆಡಳಿತಗಾರರು ತಮ್ಮ ಪರಿಸರ ಕಾಳಜಿಯನ್ನು ಮೆರೆದಿದ್ದಾರೆ.
ವಿವಿಧ ಸಂಘಟನೆಗಳು ಇಐಎ 2020 ಅಧಿಸೂಚನೆಯ ಕುರಿತು ಮಾಡಿದ ವಿಮರ್ಶೆಗಳಲ್ಲಿ ಪುನರಾವರ್ತಿಸುವ ಮೂರು ಮುಖ್ಯ ವಿಚಾರಗಳು ಹೀಗಿವೆ :
1) ಪರಿಸರ ಅನುಮತಿ ಪಡೆಯದೆ ಈಗ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳನ್ನು ಕ್ರಮಬದ್ಧಗೊಳಿಸಲು ಇಐಎ 2020 ಕಾಯ್ದೆಯಲ್ಲಿ “ಸ್ಥಾಪನಾನಂತರದ” ಸಮ್ಮತಿ ನೀಡುವ ಪ್ರಸ್ತಾಪ ಮಾಡಲಾಗಿದೆ. ಅಂದರೆ ಪರಿಸರ ಹಾನಿ ತಡೆಗಟ್ಟುವ ಕ್ರಮಗಳನ್ನು ಅನುಸರಿಸದೆ, ಶಾಸನವನ್ನು ಧಿಕ್ಕರಿಸಿ, ಪರಿಸರ ಅನುಮತಿ ಪಡೆಯದೆ ಕೈಗಾರಿಕೆ ಸ್ಥಾಪಿಸಿ, ಉತ್ಪಾದನೆ ಆರಂಭಿಸಿರುವ ಕೈಗಾರಿಕೆಗಳ ಮೇಲೆ ಕಾನೂನುಕ್ರಮ ಕೈಗೊಳ್ಳುವ ಬದಲು ಸಕ್ರಮೀಕರಿಸುವ ಭರವಸೆ ನೀಡಲಾಗಿದೆ.
2) ಇಐಎ 2020 ಅಧಿಸೂಚನೆಯು ಒಂದಷ್ಟು ಯೋಜನೆಗಳನ್ನು ಸಾರ್ವಜನಿಕ ಸಮಾಲೋಚನೆಯ ಪ್ರಕ್ರಿಯೆಯಿಂದ ಹೊರಗಿಟ್ಟಿದೆ.
3) ಯೋಜನಾ ಪ್ರವರ್ತಕರಿಗೆ ಆರು ತಿಂಗಳಿಗೊಮ್ಮೆ ಪರಿಸರ ಅನುಸರಣಾ ವರದಿಯನ್ನು ಒಪ್ಪಿಸುವ ಅಗತ್ಯವನ್ನು ಇಐಎ2006 ಅಧಿಸೂಚನೆಯಲ್ಲಿ ವಿಧಿಸಲಾಗಿತ್ತು. ಆದರೆ ಇಐಎ 2020 ಅಧಿಸೂಚನೆಯಲ್ಲಿ ಈ ಅಗತ್ಯವನ್ನು ವರ್ಷಕ್ಕೊಂದು ಬಾರಿಗೆ ಇಳಿಸಲಾಗಿದೆ!
ಇಂತಹ ಹಲವು ಲೋಪಗಳನ್ನು ಇಐಎ 2020 ಅಧಿಸೂಚನೆಯೊಳಗೆ ಶ್ರಮವಿಲ್ಲದೆ ಗುರುತಿಸಬಹುದಾಗಿದೆ.
ಇವತ್ತಿನ ಹದಗೆಟ್ಟ ಪರಿಸರಾಡಳಿತದ ಸನ್ನಿವೇಶದಲ್ಲಿ ನಮ್ಮ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳದೆ ನಮ್ಮ ಟೀಕೆಯ ಭಾಷೆ ಹಾಗೂ ಶೈಲಿಯನ್ನು ಬದಲಾಯಿಸಿ ಪರಿಸರನಕ್ಷರಸ್ಥರಿಗೆ ತಲುಪುವ ಧ್ವನಿಯಲ್ಲಿ ಮಾತನಾಡಬೇಕಾಗುತ್ತದೆ. ಪರಿಸರ ಅನಕ್ಷರತೆಯನ್ನು ಹೋಗಲಾಡಿಸುವ ಕಾರ್ಯತಂತ್ರದ ಭಾಗವಾಗಿ ಈ ಅಧಿಸೂಚನೆಯ ದೋಷಗಳನ್ನು ಆಢಳಿತಗಾರರ ಮತ್ತು ಸಾರ್ವಜನಿಕರ ಮುಂದಿಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಪರಿಸರದ ದೃಷ್ಟಿಯಿಂದ ಇಐಎ 2020 ಅಧಿಸೂಚನೆಯಲ್ಲಿ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸರಕಾರದ ಗಮನ ಸೆಳೆವ ಅಗತ್ಯ ಇದೆ.
1. ಯಾವುದೇ ಪ್ರಸ್ತಾಪಿತ ಅಪಾಯಕಾರಿ ವರ್ಗದ ಕೈಗಾರಿಕೆಯ (ಅಥವಾ ಅದರ ವಿಸ್ತರಣೆಯ) ಪರಿಸರ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಜಿಲ್ಲಾ ಮತ್ತು ರಾಜ್ಯ ವಾರ್ಷಿಕ ವಿಪತ್ತು ನಿರ್ವಹಣಾ ಯೋಜನಾ ವರದಿಗಳನ್ನು ಮೂಲ ದಾಖಲೆಯಾಗಿ ಪರಿಗಣಿಸುವುದು ಬಹಳ ಮುಖ್ಯ. ಯಾಕೆಂದರೆ ಸಾಮಾನ್ಯವಾಗಿ ಈ ವಿಪತ್ತು ನಿರ್ವಹಣಾ ವರದಿಗಳು ಅಸ್ತಿತ್ವದಲ್ಲಿರುವ ಅಪಾಯಕಾರಿ ಕೈಗಾರಿಕೆಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ಹಲವಾರು ಸುರಕ್ಷತಾ ಕ್ರಮಗಳನ್ನು ಶಿಫಾರಸು ಮಾಡುತ್ತವೆ. ಈ ಶಿಫಾರಸುಗಳನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗಿದೆ ಎಂದು ಪರಿಸರ ಪರಿಣಾಮ ಮೌಲ್ಯ ಮಾಪನದ ಸಂದರ್ಭಗಳಲ್ಲಿ ತಜ್ಞರ ಸಮಿತಿಯು ಸಂಪೂರ್ಣವಾಗಿ ಪರಶೀಲಿಸಿದರೆ ಯೋಜನೆಗೆ ಪರಿಸರ ಬದ್ದತೆ ಇದೆಯೋ ಇಲ್ಲವೋ ಎಂದು ತಿಳಿಯುತ್ತದೆ. ಹಾಗಾಗಿ:
– ಪರಿಸರ ಮೌಲ್ಯಮಾಪನ ಪ್ರಕ್ರಿಯೆಯ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿದಂತಹ ತಜ್ಞರ ಸಮತಿಯ ವರದಿಯನ್ನು ಮತ್ತು ವಿಪತ್ತು ನಿರ್ವಹಣಾ ಯೋಜನಾ ವರದಿಯ ಶಿಫಾರಸುಗಳನ್ನು ಆಧಾರವಾಗಿ ಬಳಸಬೇಕೆಂಬ ನಿಯಮವನ್ನು ಇಐಎ 2020 ಅಧಿಸೂಚನೆ ಒಳಗೊಂಡಿರಬೇಕು.
2. ದೇಶದ ಹಲವು ಭಾಗಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇಐಎ 2020 ಅಧಿಸೂಚನೆಯ ಪ್ರಕಾರ ಪ್ರಸ್ತಾಪಿತ ಯೋಜನೆಯಡಿಯಲ್ಲಿ ನಿರ್ಮಾಣ ಕಾರ್ಯ ಅಥವಾ ಸ್ಥಾಪನೆ ಅಥವಾ ಆಧುನೀಕರಣದ ಪ್ರಾರಂಭದ ಮೊದಲು ಸಂಬಂಧಪಟ್ಟ ನಿಯಂತ್ರಣ ಪ್ರಾಧಿಕಾರದಿಂದ ಪೂರ್ವ ಪರಿಸರ ಅನುಮತಿ ಪಡೆಯುವ ಅಗತ್ಯವಿದೆ, ಆದರೆ ಬೇಲಿ ಹಾಕುವುದು ಅಥವಾ ಸುರಕ್ಷತೆಗಾಗಿ ಆವರಣ ಗೋಡೆ ನಿರ್ಮಿಸುವುದು ಮತ್ತು ಮರಗಳನ್ನು ಕಡಿಯದೆ ಭೂಮಿಯನ್ನು ಸಮತಟ್ಟು ಮಾಡುವುದು ಇತ್ಯಾದಿ ಕ್ರಿಯೆಗಳಿಗೆ ಈ ಅನುಮತಿಯ ಅಗತ್ಯವಿಲ್ಲ! ಇದರಿಂದಾಗಿ ಬೇಕಾಬಿಟ್ಟಿಯಾಗಿ ಒಂದು ಸೈಟ್ನ್ನು ಆಯ್ಕೆ ಮಾಡಿ, ಪರಿಸರ ಅನುಮತಿಗಾಗಿ ಅರ್ಜಿ ಸಲ್ಲಿಸಿ, ಅನುಮತಿಗಾಗಿ ಕಾಯದೆ ಮೇಲೆ ಉಲ್ಲೇಖಿಸಿದ ಕಾರ್ಯಗಳಿಗಾಗಿ ಹೂಡಿಕೆ ಮಾಡಿದ ನಂತರ ಯೋಜನೆಯನ್ನು ಸಕ್ರಮಗೊಳಿಸುವ ಪ್ರವೃತ್ತಿಗೆ ಉತ್ತೇಜನೆ ದೊರೆಯುತ್ತದೆ. ಪರಿಸರದ ಮೇಲೆ ಜಾಸ್ತಿ ಹಾನಿ ಆಗದಂತೆ ಅಭಿವೃದ್ಧಿ ಪಡಿಸಬಹುದಾದ ಯೋಜನಾ ಯೋಗ್ಯ ಸೈಟುಗಳನ್ನು ಹುಡುಕುವ ಪ್ರಯತ್ನ ನಡೆಯುವುದೇ ಇಲ್ಲ. ಹಾಗಾಗಿ:
– ಹೊಸ ಕಾಯ್ದೆಯಲ್ಲಿ ಸ್ಮಾರ್ಟ್ ಸಿಟೀಸ್ ಮಿಷನ್ಗಾಗಿ ವಿಶೇಷ ನಿಬಂಧನೆಗಳಿರಬೇಕು. (ಸ್ಮಾರ್ಟ್ ಸಿಟಿಗಳನ್ನು ಯೋಜಿಸಿರುವ ಪ್ರದೇಶಗಳಲ್ಲಿ ನಗರದ ಹಸಿರು ಪ್ರದೇಶಗಳು ಮತ್ತು ಪರಿಸರ ವ್ಯವಸ್ಥೆಯ ಸೇವೆಗಳನ್ನು (ecosystem services) ಪುನರ್ಸ್ಥಾಪಿಸುವ ಯೋಜನಾ ಸಾಧನವಾಗಿ ಇಐಎಯನ್ನು ಬಳಸುವುದು ಇವುಗಳಲ್ಲಿ ಸೇರಿರಬೇಕು.)
-ಪರಿಸರ ಸಹ್ಯ ಸ್ಮಾರ್ಟ್ ಸಿಟಿ ಯೋಜನೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಐಎ2020 ಅಧಿಸೂಚನೆಯಲ್ಲಿ ಪರ್ಯಾಯ ಸೈಟ್ಗಳನ್ನೂ ಗುರುತಿಸುವುದನ್ನು ಕಡ್ಡಾಯ ಮಾಡಿ, ಪರಿಸರಪರ ದೃಷ್ಟಿಯಿಂದ ಉತ್ತಮವೆನಿಸುವ ಸೈಟ್ ಆಯ್ಕೆಯ ಪ್ರಕ್ರಿಯೆಗೆ ಅವಕಾಶ ಮಾಡಿಕೊಡಬೇಕು. ಈ ಪ್ರಕ್ರಿಯೆಗೆ ವಿರುದ್ಧವಾಗಿರುವ ಮೇಲೆ ಉಲ್ಲೇಖಸಿದಂತಹ ‘ನಿರ್ಮಾಣ ಕಾರ್ಯದೊಳಗಿನ ಅನುಮತಿ ವಿನಾಯತಿಗಳನ್ನು ಇಐಎ 2020 ಅಧಿಸೂಚನೆಯಿಂದ ಕೈಬಿಡಬೇಕು.
3. ಜೀವವೈವಿಧ್ಯತೆಯ ನಷ್ಟ ಮತ್ತು ಸಾಂಕ್ರಾಮಿಕ ರೋಗಗಳ ಸಂಭವನೀಯತೆಯ ನಡುವೆ ಸಂಬಂಧವಿದೆ ಎಂದು ವೈಜ್ಞಾನಿಕ ಸಮುದಾಯದಲ್ಲಿ ಬಲವಾದ ನಂಬಿಕೆ ಇದೆ. ಉದಾಹರಣಗೆ ಇತ್ತೀಚೆಗೆ ಜೆಎನ್ಯುವಿನ ಪ್ರೊ. ಸೇನ್ಗುಪ್ತ ಮತ್ತು ಚೌಧರಿ ಅವರು ನಡೆಸಿದ ಅಧ್ಯಯನವು ಈ ಸಂಬಂಧತ್ತ ಬೆಳಕು ಹರಿಸುತ್ತದೆ. ಹಾಗಾಗಿ;
– ಇಐಎ 2020 ಅಧಿಸೂಚನೆಯು ಜೀವ ಮತ್ತು ಆಸ್ತಿಗಳ ನಷ್ಟ ಹಾಗೂ ಹಾನಿಯನ್ನು ತಡೆಗಟ್ಟಲು ಜೀವವೈವಿಧ್ಯತೆಯ ಸಂರಕ್ಷಣೆಯನ್ನು ಬಲಪಡಿಸುವ ಸೂತ್ರಗಳನ್ನು ಹೊಂದಿರಬೇಕು..
– ಇದಲ್ಲದೆ, ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಸಂಸ್ಕೃತಿಯ ಮೇಲೆ ಆಗುವ ಪರಿಣಾಮಗಳ ಮೌಲ್ಯಮಾಪನಗಳಿಗೆ ಒತ್ತು ನೀಡಬೇಕು.
– ಪ್ರಸ್ತಾಪಿತ ಯೋಜನೆಗಳ ಮೇಲೆ ನಡೆಸುವ ಇಐಎಗಳು ವಿವರವಾದ ಆರೋಗ್ಯ ಪರಿಣಾಮ ಮೌಲ್ಯಮಾಪನಗಳನ್ನು ಒಳಗೊಂಡಿರಬೇಕು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (Sಆಉ) ಅನುಸರಿಸಿ ಆರೋಗ್ಯ ಅಸಮಾನತೆಗಳನ್ನು ಕಡಿಮೆ ಮಾಡಲು ಶ್ರಮಿಸಬೇಕು.
4. ಕೆಲವೊಂದು ಯೋಜನೆಗಳು, ಸಮುದಾಯಗಳ ಆಹಾರ ಉತ್ಪಾದನೆಯ ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಸಾಮರ್ಥ್ಯಗಳನ್ನು ನಾಶ ಮಾಡುವ ರೀತಿಯಲ್ಲಿ ಸ್ಥಳೀಯ ಸಂಸ್ಕೃತಿಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ:
– ಯೋಜನೆಗೆ ಪ್ರಸ್ತಾಪಿಸಿದ ಪ್ರದೇಶದಲ್ಲಿ ವಾಸಿಸುವ ಸಮುದಾಯದ ಸಂಸ್ಕೃತಿಯ ಮೇಲೆ ಯೋಜನೆಯು ಹೇಗೆ ಪರಿಣಾಮ ಬೀರುತ್ತದೆ ಎಂಬ ವಿಶ್ಲೇಷಣೆಯನ್ನು ಸಹ ಇಐಎಗಳು ಒಳಗೊಂಡಿರಬೇಕು.
5. ಇಐಎ ಅನುಷ್ಠಾನದಲ್ಲಿ ಸಾಮಾನ್ಯವಾಗಿ ನಿರೀಕ್ಷಿಸಲಾಗಿರುವ ಗುಣಮಟ್ಟದ ಮಾನದಂಡಗಳನ್ನು ಸೇರಿಸುವ ಯಾವುದೇ ಕ್ರಮಗಳನ್ನು ನಾವು ಇಐಎ 2020 ಅಧಿಸೂಚನೆಯೊಳಗೆ ಕಂಡಿಲ್ಲ (ಇಐಎ ವರದಿಯಲ್ಲಿ ಒದಗಿಸಲಾದ ಮಾಹಿತಿಯ ಗುಣಮಟ್ಟ, ಇಐಎ ಒಳಗೆ ನಡೆಸಲಾದ ವಿವಿಧ ಅಧ್ಯಯನಗಳ ಗುಣಮಟ್ಟ, ಮೌಲ್ಯಮಾಪನಕ್ಕಾಗಿ ಬಳಸಲಾಗುವ ವಿಧಾನಗಳ ವಿವರಣೆಯ ಗುಣಮಟ್ಟ, ಉದಾಹರಣೆಗೆ: ಸಂಚಿತ ಪರಿಣಾಮಗಳು ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ನಡೆಸುವ ವಿಧಾನಗಳ ಗುಣಮಟ್ಟ ಮತ್ತು ಇಐಎ ವರದಿಯ ಒಟ್ಟು ಗುಣಮಟ್ಟ.) ಹಾಗಾಗಿ:
– ಇಐಎ 2020 ಅಧಿಸೂಚನೆ ಇಐಎ ಗುಣಮಟ್ಟದ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಕ್ರಮಗಳು / ಕಾರ್ಯವಿಧಾನಗಳನ್ನು ಒಳಗೊಂಡಿರಬೇಕು,
6. ಪ್ರಸ್ತಾಪಿತ ಯೋಜನೆಯಿಂದಾಗಿ ವಾತಾವರಣಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಯಾಗುವ ಹಸಿರುಮನೆ ಅನಿಲಗಳಿಂದಾಗಿ (ಇಂಗಾಲದ ಡೈಆಕ್ಸೈಡ್, ಮೀಥೇನ್ ಇತ್ಯಾದಿ) ರಾಷ್ಟ್ರೀಯ ನಿರ್ಧರಿತ ಕೊಡುಗೆಯಲ್ಲಿ (ಓಆಅ) ಆಗುವ ಒಟ್ಟು ಹೆಚ್ಚಳ, ಇಂತಹ ವಿವರಗಳನ್ನೂ ಮತ್ತು ಅಂತಹ ಹೊರಸೂಸುವಿಕೆಯನ್ನು ತಗ್ಗಿಸಲು ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ವಿವರಗಳನ್ನು ಇಐಎಗಳು ಹೊಂದಿರಬೇಕು. ಅದಕ್ಕಾಗಿ:
– ಹವಾಮಾನ ಬದಲಾವಣೆಯ ಸಮಸ್ಯೆ ಮತ್ತು ಹವಾಮಾನ ಬದಲಾವಣೆಗೆ ಇಐಎಗಳು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ಇಐಎ ಅಧಿಸೂಚನೆ 2020ರಲ್ಲಿ ವಿವರಿಸಬೇಕು.
7. ಇದಲ್ಲದೆ, ಕಾರ್ಯತಂತ್ರದ ಪರಿಸರ ಮೌಲ್ಯಮಾಪನ (strategic environmental assessment – SEA) ಯಂತಹ ನೀತಿ ಉಪಕರಣದ ಅವಶ್ಯಕತೆಯಿದೆ. ಇದರಲ್ಲಿ ಕ್ರಿಯಾಯೋಜನೆಗಳ (Plans) ಮತ್ತು ಕಾರ್ಯಕ್ರಮಗಳ (Programmes) ಮೌಲ್ಯಮಾಪನ ಮಾಡಬೇಕು. Sಇಂಗಳ ಮುಖಾಂತರ ಒಂದು ಪ್ರದೇಶದ ಪರಿಸರ ಮತ್ತು ಸಾಮಾಜಿಕ ಸ್ಥಿತಿಯ ಆಧಾರದ ಮೇಲೆ ಮತ್ತು ಪರಿಸರ ಧಾರಣಾ ಸಾಮರ್ಥ್ಯದ ಅಧ್ಯಯನವನ್ನು ಒಳಗೊಂಡು ಆ ಪ್ರದೇಶದ ಪರಿಸರಕ್ಕೆ ತಕ್ಕವಾದ ಕ್ರಿಯಾ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ರಚಿಸಬೇಕು. ರಚಿಸಿದ ಕ್ರಿಯಾ ಯೋಜನೆಗಳು ಮತ್ತು ಕಾರ್ಯಕ್ರಮಗಳಡಿ ಬರುವ ಯೋಜನೆಗಳಿಗೆ ಮುಂದೆ ಇಐಎ ಪ್ರಕ್ರಿಯೆಯನ್ನುನಡೆಸಬೇಕು. ಅದಕ್ಕಾಗಿ;
– ಎಸ್ಇಎಯನ್ನು ಶಾಸನಾತ್ಮಕವಾಗಿ ಕಡ್ಡಾಯ ಮಾಡಬೇಕು ಮಾತ್ತು ಅದನ್ನು ಮೇಲೆ ಉಲ್ಲೇಖಿಸಿದ ರೀತಿಯಲ್ಲಿ ಇಐಎ ಜೊತೆ ಜೋಡಿಸಬೇಕು.
8. ಈಗಿರುವ ಸ್ಥಿತಿಯಲ್ಲಿ ಇಐಎ 2020 ಅಧಿಸೂಚನೆಯು ತೀರಾ ದುರ್ಬಲವಾಗಿದೆ. ಪರಿಸರ ಅನುಮತಿ ನೀಡುವ ಸಂಪೂರ್ಣ ಪ್ರಕ್ರಿಯೆಯ ಸುಧಾರಣೆಯ ಅಗತ್ಯವಿದೆ. ನಮ್ಮ ರಾಜ್ಯದ ಕೆಲವು ಪರಿಸರ ಹೋರಾಟಗಾರರು ಸೂಚಿಸುವಂತೆ ಇಐಎ 2020 ಅಧಿಸೂಚನೆಯು ಸಂವಿಧಾನ ಕೊಡಮಾಡಿದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದು 74 ನೇ ಸಾಂವಿಧಾನಿಕ ತಿದ್ದುಪಡಿಗೆ ಅನುಗುಣವಾಗಿ ಸ್ಥಳೀಯ ಸರ್ಕಾರಗಳ ಬಲವರ್ಧನೆ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತುಕೊಟ್ಟು ಇಐಎ 2020 ಕಾಯ್ದೆಯನ್ನು ರೂಪಿಸಬೇಕಾಗಿದೆ.
ಔದ್ಯಮಿಕ ದುರಂತಗಳು ಹಾಗೂ ಅಭಿವೃದ್ದಿ ಪ್ರಕ್ರಿಯೆಗಳಿಂದಾದ ಪ್ರಾಕೃತಿಕ ದುರಂತಗಳಿಂದ ಕಲಿತ ಪಾಠಗಳು ಪರಿಸರ ಪರಿಣಾಮಗಳ ಮೌಲ್ಯಮಾಪನ ಕಾಯ್ದೆ ರೂಪುಗೊಳ್ಳಲು ಕಾರಣವಾಗಿವೆ. ಕಾಲ, ಕಾಲಕ್ಕೆ ಇದನ್ನು ಪರಿಷ್ಕರಿಸುವ ಕೆಲಸವನ್ನು ಸರಕಾರಗಳು ಮಾಡುತ್ತವೆ, ಆ ಸಂದರ್ಭದಲ್ಲಿ ಆರ್ಥಿಕ ಲಾಭವನ್ನು ಮಾತ್ರ ಗಮನದಲ್ಲಿರಿಸಿಕೊಂಡ ಔದ್ಯಮಿಕ ಹಾಗೂ ನಿರ್ಮಾಣವಲಯದ ಪ್ರಭಾವಿಗಳು ಕಾಯ್ದೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಲಾಬಿ ಮಾಡುತ್ತವೆ. ಆಗ, ದೇಶದ ಹಿತದ ದೃಷ್ಟಿಯಿಂದ ಹಾಗೂ ಮುಂದಿನ ಪೀಳಿಗೆಗಳಿಗೆ ಆರೋಗ್ಯವಂತ ಪರಿಸರವನ್ನು ಉಳಿಸುವ ದೃಷ್ಟಿಯಿಂದ, ಲೋಪವನ್ನೆಸಗದಂತೆ ಸರಕಾರದ ಮೇಲೆ ಪ್ರಜೆಗಳು ಒತ್ತಡ ಹೇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಸರಕಾರಕ್ಕೆ ಮೇಲ್ಕಾಣಿಸಿದ ವಿಷಯಗಳನ್ನೊಳಗೊಂಡಂತೆ ಪ್ರತಿಕ್ರಿಯೆ ಕಳುಹಿಸಿದ್ದೇವೆ. ಸರಕಾರ, ಆಗಸ್ಟ್ ತಿಂಗಳ 11ರ ವರೆಗೂ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತದೆ. ದೇಶದ ಸಮಗ್ರ ಜನತೆಗೆ ಅಧಿಸೂಚನೆಯ ಬಗ್ಗೆ ಅರಿವು ಮೂಡಿಸುವ ಹಾಗೂ ಅವರ ಪ್ರತಿಕ್ರಿಯೆಗೆ ಅವಕಾಶ ನೀಡುವ ವಿಷಯದಲ್ಲಿ ಸರಕಾರ ನೀಡಿದ ಸಬೂಬನ್ನು ನ್ಯಾಯಾಲಯ ಒಪ್ಪದಿದ್ದರೆ ಸಾರ್ವಜನಿಕ ಪ್ರತಿಕ್ರಿಯೆಯ ಅವಧಿ ಇನ್ನೂ ವಿಸ್ತರಿಸಲ್ಪಡುವ ಸಾಧ್ಯತೆ ಇದೆ. ಜವಾಬ್ದಾರಿಯುತ ನಾಗರಿಕರೆಲ್ಲರೂ, ಸರಕಾರ ಈಗಿರುವ ಕಾಯ್ದೆಯನ್ನು ಮತ್ತೂ ದುರ್ಬಲಗೊಳಿಸದಂತೆ, ಹಾಗೂ ಮಾರಕ ಸಾಂಕ್ರಾಮಿಕ ರೋಗಗಳ ಹಾವಳಿಯ ಹಿನ್ನೆಲೆಯಲ್ಲಿ ಆರೋಗ್ಯವಂತ ಪರಿಸರಕ್ಕಾಗಿ ಇನ್ನೂ ಕಠಿಣ ನಿಯಮಗಳನ್ನು ರೂಪಿಸುವಂತೆ ಸರಕಾರವನ್ನು ಒತ್ತಾಯಿಸಿ [email protected] ಗೆ ಪ್ರತಿಕ್ರಿಯೆ/ಆಕ್ಷೇಪಗಳನ್ನು ಕಳುಹಿಸುವುದು ಈ ಹೊತ್ತಿನ ಅಗತ್ಯ. ಮತ್ತು, ತಡೆ ಆಜ್ಞೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಸ್ವೀಕರಿಸುವ ಅವಧಿಯನ್ನು ಸರಕಾರ ವಿಸ್ತರಿಸುವ ಸಾಧ್ಯತೆ ಇದೆ. ಒಂದು ವೇಳೆ ವಿಸ್ತರಿಸದೆ, ಅಂತಿಮ ಅಧಿಸೂಚನೆಯನ್ನು ಪ್ರಕಟಿಸಿದಲ್ಲಿ, ಆ ನಂತರವೂ ಪ್ರಕಟಿತ ಅಧಿಸೂಚನೆಗೆ ಸಾರ್ವಜನಿಕ ಅಸಮ್ಮತಿ ಸೂಚಿಸುತ್ತಾ ಇಐಎ2020 ಅಧಿಸೂಚನೆಯಲ್ಲಿ ಪರಿಸರ ಪರ ತಿದ್ದುಪಡಿ/ ಬದಲಾವಣೆಗಳನ್ನು ಮಾಡುವಂತೆ ಸರಕಾರವನ್ನು ಒತ್ತಾಯಿಸುವುದು ನಮ್ಮ ಆದ್ಯತೆಯಾಗಬೇಕು.
ಲೇಖಕರು:
• ಡಾ. ಕೇದಾರ್ ಉತ್ತಮ್
Post-doctoral ಸಂಶೋಧಕ (ಪರಿಸರ ಪರಿಣಾಮಗಳ ಮೌಲ್ಯಮಾಪನ) ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ವೀಡನ್.
• ಡಾ. ರಾಮಚಂದ್ರ ಭಟ್ಟ, ನಿವೃತ್ತ ಪ್ರಾಧ್ಯಾಪಕರು, ಮೀನುಗಾರಿಕಾ ಕಾಲೇಜು, ಮಂಗಳೂರು