ಹೌದು ಮಹಾಸ್ವಾಮಿ

ಉರ್ದು ಕವಿ ಗೌಹರ್ ರಜ಼ಾ ಅವರ ‘ಮೈ ಲಾರ್ಡ್’ ಕವಿತೆಯನ್ನು ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರು ರೂಪಾಂತರ ಮಾಡಿದ್ದಾರೆ. ಕಳೆದ ಕೆಲವು ವಾರಗಳಿಗೆ ಕನ್ನಡಿಯಾಗಿ ಈ ಸಾಲುಗಳಿವೆ ಎಂಬುದಕ್ಕಿಂತ ಹೆಚ್ಚಾಗಿ ಏನನ್ನು ಹೇಳಿದರೂ ‘ಅಪರಾಧ’ ವಾಗಬಹುದು.

#PrashantBhushan

ಹೌದು ಮಹಾಸ್ವಾಮಿ 

ಪಾತಕ ಮಾಡಿದ್ದೇನೆ ನಾನು 
ಮಹಾಪಾಪಿಷ್ಠನೆ  

ಬಾಯ್ ಮುಚ್ಚಿಕೊಂಡೇ ಇರಬೇಕಾದ ಈ ಕಾಲದಲ್ಲಿ  
ಸೊಲ್ಲೆತ್ತಿಬಿಟ್ಟೆ ತಪ್ಪು ತಪ್ಪಾಯ್ತು ಮಹಾ
ಪಾತಕವಾಯ್ತು ತಪ್ಪಿತಸ್ಥ ಅಂತಲೆ ತೀರ್ಮಾನಿಸಿಬಿಡಿ 
ಬೇಕಾದ ಶಾಸ್ತಿ ಬೇಕಾದಹಾಗೆ ಮಾಡಿ ಮಾಡಿಬಿಡಿ 

ಪರಮಾತ್ಮನ ನೆರಳು ನೀವು ಮಹಾಸ್ವಾಮಿ 
ಇರುವುದೆ ನ್ಯಾಯ ನೀತಿ ಧರ್ಮದ ಬಟ
ವಾಡೆಗೆಂದು ಆಗಲಿ ಆಗಲಿ ಮಹಾಸ್ವಾಮಿ 
ಸಾಗಲಿ ಇಂದಿಗೆ ನಿಮ್ಮದೇs ನಡೆಯಲಿ

ನಿಮಗಾವ ಅಡ್ಡಿ ಮಹಾಸ್ವಾಮಿ  ತಿರುಪಿ ತಿರುಚಿ 
ನ್ಯಾಯ ನೀತಿ ಧರ್ಮ ಹೇಗೆ ಬೇಕಾದರೂ ಕೆತ್ತಿ ಬಿಡಿ 
ಒಪ್ಪಿಗೆಯೆ ಅದು ಹಗೆ ತೀರಿಸಿಕೊಳ್ಳುವುದೆ ನ್ಯಾಯವೆನ್ನಿ 
ಸೊಲ್ಲೆತ್ತಿದವರ ತುಟಿ ಹೊಲಿದುಬಿಡಲು ಇದೇ ದಬ್ಬಳವೆನ್ನಿ

ಇನ್ನು ಇಗೋ ಈ  ಇದೇ ನ್ಯಾಯ ನೀತಿ ಧರ್ಮವೆಂಬ
ಕುಡುಗೋಲಿನಿಂದ ಒಂದಾದಮೇಲೊಂದು ಬೆರಳ್
ಕೊಚ್ಚಿ ಬಿಸುಟುಹಾಕಿ ಬೆರಳು ಮಾಡದಂತೆ ಯಾರೂ
ಯಾವತ್ತೂ ಆಳುವ ಧಣಿಗಳತ್ತ ಇನ್ನು ತೋರದಂತೆ

ನಿಮಗಾವ ಅಡ್ಡಿ ಮಹಾಸ್ವಾಮಿ ಕಾನೂನು ರೂಲುದೊಣ್ಣೆ 
ಎತ್ತೆತ್ತಿ ಬಾರಿಸಿ ಕೂಲಿಮಠದಯ್ಯಗಳು ಬಡಿಯುತ್ತ ಇದ್ದಂತೆ
ತಲೆಹೋಕ ಹೈಕಳು ಎತ್ತಿದ್ದ ತಲೆಯ ಹೌದ್ಹೌದು ಮನ್ನಿಸ 
ಬಾರದ ಪಾತಕಿ ನಾನು ಹಾಲಲ್ಲದ್ದಿ ಮಾಸ್ವಾಮಿ ಆಸಿಡ್ಡಲದ್ದಿ

ನಿಮ್ಮ ಪರ್ಮಿಟ್ಟಿದ್ದರೆ ಬುದ್ಧಿ ಇನ್ನೊಂದು ಮಾತು 
ಇತಿಹಾಸದಿಂದ ಕಲಿತದ್ದು: ಮಾಗಿ ಬೋಳಿನ ಮಧ್ಯದಲ್ಲೇ 
ಹೂ ಅರಳಲು  ಶುರುವಾದರೆ ತಡೆಯಲಾಗದು ಯಾರೂ ಅದನ್ನು
ಕಾರ್ಮೋಡವೆದ್ದರೆ ತೊಯ್ದುಹೋಗುತ್ತದೆ ಮರಳುಗಾಡೂ 

ಎಲೆಯುದುರಿದ ಮರದಲ್ಲಿ ಕೋಗಿಲೆಯ ಹಾಡು ಶುರುವಾದರೆ
ಕೂಗೇ ಕೂಗತsದ ಗಿರಣಿ ಕರೆಯೊ ಹಾಂಗ ಆಗ ಕಣಿವೆಕಣಿವೆ 
ಓಗೊಟ್ಟುಗೊಟ್ಟು ಗುಡ್ಡಗುಡ್ಡ ನುಗ್ಗಾಗಿಹೋಗಿ ಯಾರೇನು
ಮಾಡಿದರೂ ನಿಲ್ಲದು ಅದು ಮೀಯಿಸಿಬಿಡುತ್ತದೆ ಎಲ್ಲ ಎಲ್ಲವನ್ನೂ

ಹೌದು ಮಹಾಸ್ವಾಮಿ 

ಪಾತಕ ಮಾಡಿದ್ದೇನೆ ನಾನು 
ಮಹಾಪಾಪಿಷ್ಠನೆ  


ಮೂಲ ಕವಿತೆ: ವಿಜ್ಞಾನಿ, ಕವಿ ಗೌಹರ್ ರಜ಼ಾ ಅವರ ಉರ್ದು ಕವಿತೆ ‘ಮೈ ಲಾರ್ಡ್’

ಚಿತ್ರ ಕೃಪೆ : ದಿ ಕ್ವಿಂಟ್

One comment to “ಹೌದು ಮಹಾಸ್ವಾಮಿ”
  1. ತುಂಬಾ ವೈರುಧ್ಯದ ಸಂಘರ್ಷದ ಕ್ಷಣಗಳಲ್ಲಿ ನಾವು ಬದುಕುತ್ತಿದ್ದೇವೆ ಇದರ ಅರಿವು ನಮಗಿದ್ದರೂ ಹಾಗೂ ಸಮಾಜಕ್ಕೆ ಇದ್ದರೂ ಭಯದ ಸುಳಿಗೆ ಸಿಕ್ಕು ತಾತ್ಕಾಲಿಕ ನೆಮ್ಮದಿಯನ್ನರಸಿ ಸಂಘರ್ಷಗಳಿಂದ ಪಾರಾಗುವ ಧಾವಂತದಲ್ಲಿ ದುರಂತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದೆವೆ. ಇವತ್ತಿನ ಈ ಕ್ಷಣಗಳು ಭಾರತದ ಪ್ರತಿಯೊಬ್ಬ ನಾಗರಿಕ ವಾಸ್ತವವನ್ನು ಅರಿತುಕೊಂಡು ವ್ಯವಸ್ಥೆಗೆ ಹೇಗೆ ಪ್ರತಿಕ್ರಿಯಿಸುತ್ತಾನೆ
    ಎಂಬುವುದರ ಮೇಲೆ ಭವಿಷ್ಯ ನಿರ್ಧಾರವಾಗಲಿದೆ

ಪ್ರತಿಕ್ರಿಯಿಸಿ