ಪ. ರಂಜಿತ್ ಸಂದರ್ಶನ – ಭರದ್ವಾಜ್ ರಂಗನ್ ಭಾಗ: 2

ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ದಲಿತ ಕೇಂದ್ರಿತ ವಿಷಯವನ್ನು Mainstream ಚಿತ್ರಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ ತಮಿಳಿನ ಪ್ರತಿಭಾವಂತ ಯುವ ನಿರ್ದೇಶಕ ಪ. ರಂಜಿತ್ ಅವರ ಸಂದರ್ಶನದ ಎರಡನೇ ಭಾಗ ಇಲ್ಲಿದೆ. ದಲಿತ ಕೇಂದ್ರಿತ ವಸ್ತುಗಳನ್ನು ನಿಭಾಯಿಸುವಾಗ- ಮೊದಲ ಪ್ರಯತ್ನದ ಭಯ, ಆನಂತರದ ಸ್ಥೈರ್ಯ, ಬಳಿಕ ಗಳಿಸಿಕೊಂಡ ಹಿಡಿತ ಹಾಗೂ ಸ್ಪಷ್ಟತೆಗಳ ಕುರಿತ ಮಾತುಕತೆ ಈ ಭಾಗದಲ್ಲಿದೆ. 

ಭರದ್ವಾಜ್ ರಂಗನ್:   ನಮಸ್ಕಾರ ಸರ್. ವೆಲ್ಕಮ್ ಟು ಫಿಲಂ ಕಂಪನಿ ಸೌತ್.  ನಿಮ್ಮ ಸಿನಿಮಾ ಬದುಕಿನ ಬಗ್ಗೆ ಮಾತನಾಡುವ. ನೀವು ಮೊಟ್ಟ ಮೊದಲು ನೋಡಿದ ಸಿನಿಮಾ ಯಾವುದು?

ಪ. ರಂಜಿತ್: ಮೊಟ್ಟ ಮೊದಲೇ, ರಜನಿಕಾಂತ ಸಿನಿಮಾ, ನಮ್ಮೂರಲ್ಲಿ ಎರಡು ಟಾಕೀಸ್ ಇತ್ತು. ಸೆಲ್ವಿ ಟಾಕೀಸ್ ಇತ್ತು, ಅಲ್ಲೇ ಮೊದಲು ಸಿನಿಮಾ ನೋಡಿದ್ದು, ವಿಜಯಕಾಂತ್ ಚಿತ್ರ `ಪೊರುತ್ತದು ಪೊಂದು’ ಅನ್ನೋ ಸಿನಿಮಾ. ನಂತರ ವೆಂಗಲ್ ನಮ್ಮ ಅಜ್ಜಿ ಊರು, ಅದು ನಮ್ಮ ಅಮ್ಮನ ಊರು. ಅಲ್ಲಿ ಭವಾನಿ ಥ್ಯೇಟರ್ ಅಂತ ಇತ್ತು. ಅಲ್ಲಿ ತುಂಬಾ ಸಿನಿಮಾ ನೋಡಿದ್ದೀನಿ. ಅಲ್ಲಿ ತೆಲುಗು ತಮಿಳಿಗೆ ಡಬ್ಬಾಗಿ ಬರ್ತಿದ್ದ ಸಿನಿಮಾಗಳು ಬಹಳ.  ಅಲ್ಲೇ ಸಾಯಿಕುಮಾರ್ ಮುಂತಾದವರನ್ನು ನೋಡಿರೋದು. ಬಹಳ ಸತ್ಯರಾಜ್ ಸಿನಿಮಾಗಳು ಬರ್ತಿದ್ದವು. ಅದನ್ನು ಬಹಳ ವಿಜೃಂಭಣೆಯಿಂದ ರಿಲೀಸ್ ಮಾಡೋರು. ನಮ್ಮ ಮಾವ ಸತ್ಯರಾಜ್ ಅಭಿಮಾನಿಯಾಗಿದ್ರೂ, ಮೊಟ್ಟ ಮೊದಲು ಕುಟುಂಬದ ಜತೆ ಒಳ್ಳೆಯ ಥ್ಯೇಟರಲ್ಲಿ ನೋಡಿದ ಸಿನಿಮಾಂದ್ರೆ `ಸೋಲೈಯಮ್ಮಾ’ ಸಿನಿಮಾ. ಆವಡಿಯಲ್ಲಿ ಮೀನಾಕ್ಷಿ ಟಾಕೀಸ್ನಲ್ಲಿ, ನಮ್ಮ ತಂದೆ ಕರೆದುಕೊಂಡು ಹೋಗಿದ್ರು. ನಂತರ  `ವಲ್ಲಳ್’ ಎರಡನೇ ಸಿನಿಮಾ ಅದೂ ಸತ್ಯರಾಜ್ ಸಿನಿಮಾ.

ಭ.ರಂ: ನೀವು ಚಿಕ್ಕ ವಯಸ್ಸಲ್ಲಿ ಫೈಟಿಂಗ್ ಮಾಡಿದ್ದೀರಾ, ಕಮಲ್, ರಜನಿ ಅಭಿಮಾನಿಯಾಗಿ?

ಪ.ರಂ: ಹಾಗಲ್ಲಾ ಫೈಟ್ ಮಾಡಿದ್ದಿಲ್ಲ. ಆಗ ನನಗೆ ಸಿನಿಮಾ ಬಗ್ಗೆ  ಬಹಳ ಆಸಕ್ತಿ ಏನೂ ಇರಲಿಲ್ಲ. ಕಾಲೇಜಿಗೆ ಹೋಗೋವರೆಗೂ ಬಹಳ ಸಿನಿಮಾ ಏನೂ ನೋಡಿಲ್ಲ. ಆದರೆ ಕೆಲವು ಸಿನಿಮಾಗಳನ್ನು ನೋಡಬೇಕಂತ ಹೋಗಿದ್ದೀನಿ.   ಮೊದಲನೇ ದಿನ ಮೊದಲನೇ ಶೋ, ರಜನೀಕಾಂತ ಸಿನಿಮಾ, ಬಹಳ ರಶ್ ಇತ್ತು. ಪೋಲಿಸಿನವರು ಜನಗಳನ್ನು ಹೊಡೀತಿದ್ರು. ನಂಗೊ ಸಿಕ್ಕಾಪಟ್ಟೆ ಕೋಪ ಬಂತು. ಒಂದು ಸಿನಿಮಾ ನೋಡೋದಿಕ್ಕೆ ಹೀಗೆಲ್ಲಾ ಹೊಡೆತಾ ತಿನ್ನಬೇಕಾಂತ, ಆ ಸಿನಿಮಾ ನೋಡದಲೇ ಬಂದುಬಿಟ್ಟೆ.

ಭ.ರಂ: ಯಾವ ಸಿನಿಮಾಂತ ನೆನಪಿದೆಯೇ?

ಪ.ರಂ: ಅಯ್ಯಯ್ಯೋ, ಯಾವ ಸಿನಿಮಾ ? ಹಾ, ಸುಂದರ್ ಸಿ ನಿರ್ದೇಶನದಲ್ಲಿ ಬಂದ ಸಿನಿಮಾ.

ಭ.ರಂ:  ಅರುಣಾಚಲಂ

ಪ.ರಂ: ಹ…ಹೌದು. ಅದೇ ಸಿನಿಮಾ.

ಭ.ರಂ: ನೀವು ಮಾಜೀದ್ ಮಜೀದಿ ಅವರ `ಚಿಲ್ಡ್ರನ್ ಆಫ್ ಹೆವನ್’ ಸಿನಿಮಾ ನೋಡಿದ ಮೇಲೆ ನೀವು ಸಿನಿಮಾ ರಂಗಕ್ಕೆ ಬರಬೇಕಂತ ಆಸೇ ಆಯ್ತು ಅಂತ ಒಂದು ಕಡೆ ಹೇಳಿದ್ರಿ. ಅದಕ್ಕೆ ಮೊದಲು ನೀವು ಸಿನಿಮಾ ಬಗ್ಗೆ ಯೋಚನೆ ಮಾಡಿರಲಿಲ್ಲ್ವಾ?

ಪ.ರಂ: ಯೋಚನೆ ಮಾಡಿದ್ದೆ. ನಾನು ಏಳನೇ ತರಗತಿ ಓಡುತ್ತಿರಬೇಕಾದರೆ ಶಾಲೆಯಲ್ಲಿ ಒಂದು ನಾಟಕದಲ್ಲಿ ಒಂದು ಪಾತ್ರ ಕೊಟ್ರು. ಆದರೆ ಅದರಲ್ಲಿ ಸರಿಯಾಗಿ ನಟನೆ ಮಾಡಲಿಲ್ಲಾಂತ, ನನಗೆ ಒಂದು ಹಾಡಿಗೆ ಡಾನ್ಸ್ ಮಾಡೋದಿಕ್ಕೆ ಛಾನ್ಸ್ ಕೊಟ್ರು. ನಂತರ ಎಂಟನೇ ಒಂಬತ್ತನೇ ಕ್ಲಾಸಿಗೆ ಬಂದಾಗ ಸ್ವಲ್ಪ ಕವಿತೆ ಬರಿಯೋದಿಕ್ಕೆ ಪ್ರಯತ್ನ ಮಾಡಿದ್ದೀನಿ. Obviously ಪ್ರೇಮ ಕವಿತೆಗಳನ್ನು ಬರಿಯೋದಿಕ್ಕೆ ಟ್ರೈ ಮಾಡಿದ್ದೆ. ಆದರೆ ಬರವಣಿಗೆ ಕಡೆ ಬರೋದಿಕ್ಕೆ ಸ್ವಲ್ಪ ಹಿಂದೆಮುಂದೆ ನೋದ್ತಿದ್ದೆ. ಆದರೆ 12th ಗೆ ಬಂದಾಗ ನಮ್ಮ ಶಾಲೆಯಲ್ಲಿ ಒಂದು ನಾಟಕ ಮಾಡಿದ್ವೀ, ಅದರಲ್ಲಿ ನಾನು ಕಾಮೇಡಿಯನ್ನಾಗಿ ಪಾತ್ರ ಮಾಡಿದ್ದೆ. ಎಲ್ರೂ ನನ್ನ ನಟನೆಯನ್ನ ಬಹಳ ಮೆಚ್ಚಿಕೊಂಡ್ರು, ತುಂಬಾ ಚಪ್ಪಾಳೆ ಬೇರೆ. ಅದಾದನಂತರ ನಮ್ಮ ಊರಲ್ಲಿ ಒಂದು ಜಾತ್ರೆ ನಡೆಯುತ್ತೇ. ಅಲ್ಲಿ ಒಂದು ನಾಟಕಾ ಆಡೋಣಾಂತ ಯೋಚಿಸ್ತೀವಿ. ಅದು ಯಾವ ನಾಟಕಾಂದ್ರೆ ನಾನು ಏಳನೇ ತರಗತಿಯಲ್ಲಿ ನಟಿಸಬೇಕಾದ ನಾಟಕವನ್ನು ಬರೀತೀನಿ. ಅದರಲ್ಲಿ ಬಾಳೆಹಣ್ಣಿನ ಕಾಮೆಡಿ ಸೀನನ್ನ ರೀಕ್ರಿಯೇಟ್ ಮಾಡಿ ಬರೀತೀನಿ.

ಭ.ರಂ: ಸೆಂದಿಲ್, ಕೌಂಡಮಣಿ ಕಾಮೆಡಿ ಅಲ್ವೇ?

ಪ.ರಂ: ಹೌದು , ಅದೇ. ನಾನು ಬಹಳ ಜನಗಳ ಜತೆ ಬೆರೀತಾ ಇರ್ಲಿಲ್ಲ. ಸದಾ ಒಂಟಿಯಾಗಿ ಏನನ್ನಾದರೂ ಯೋಚಿಸ್ತಾ ಇರ್ತೀದ್ದೆ. ನಮ್ಮ ಅಮ್ಮಾನೆ ಹೇಳೋರು `ಯಾಕೆ ಮನೆಯಲ್ಲಿ ಒಂಟಿಯಾಗಿ ಕೂತಿದ್ದೀಯಾ, ಎಲ್ಲಾದರೂ ಹೊರಗೆ ಸುತ್ತಾಡಿಕೊಂಡು ಬಾ’ ಅಂತ. ಹಾಗೆ ನಾನು ಒಂಟಿಯಾಗಿ ಇರ್ತೀದ್ದೆ. ಏಕಾಂತವನ್ನು ತುಂಬಾ ಬಯಸ್ತಿದ್ದೆ. ಅಂತ ಸಮಯಗಳಲ್ಲಿ ತುಂಬಾ ಯೋಚನೆ ಮಾಡೋವೆ. ಅವೆಲ್ಲಾ ಕಥೆಗಳ ಬಗ್ಗೆಯೇ ಇರೋದು. ಆಗೆಲ್ಲಾ ಡೈರೆಕ್ಟರ್ ಆಗ್ತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ ದೀಪಾವಳಿ , ಸಂಕ್ರಾಂತಿ ಸಮಯಗಳಲ್ಲಿ ಸಿನಿಮಾ ಡೈರೆಕ್ಟರ್ ಗಳು ಟೀವಿನಲ್ಲಿ ಬಂದು ಮಾತಾಡೋರಲ್ಲಾ, ಅದನ್ನ ಕೇಳಿದ್ದೀನಿ. ಆದರೆ  ಸಿನಿಮಾ ಡೈರೆಕ್ಟರ್ ಆಗಬೇಕೆಂಬ ಆಸೆ ಏನೂ ಇರಲಿಲ್ಲ. ಕಾಲೇಜ್ ಆಫ್ ಫೈನ್ ಆರ್ಟ್ ನಲ್ಲಿ ಓದಬೇಕಾದರೆ ,  ಆರ್ಟ್ ಡೈರೆಕ್ಟರ್ ಅಥವಾ ಅನಿಮೇಟರ್ ಆಗಬೇಕಂತ ಯೋಚನೆ ಮಾಡಿದ್ದೆ. ಆರ್ಟ್ ಡೈರೆಕ್ಟರ್ ಯಾಕೆ ಆಗಬೇಕೆಂದುಕೊಂಡೆ ಅಂದ್ರೆ, ನಮ್ಮೂರು ವೆಂಗಲ್ ಅಲ್ಲಿಯ  ಕದಿರ್ ಅನ್ನೋರು ಈಗ ಸಿನಿಮಾದಲ್ಲಿ ದೊಡ್ಡ ಆರ್ಟ್ ಡೈರೆಕ್ಟರ್ ಆಗಿದ್ದಾರೆ. ಮತ್ತೆ ನನ್ನ ಮಾವ ಗೌತಮ್ ಸಿನಿಮಾದಲ್ಲಿ ಕೆಲಸಮಾಡಿ ಬಂದೋರು. ಅವರನ್ನೆಲ್ಲಾ ನೋಡಿದ ಮೇಲೆ ನಾನು ಯಾಕೆ ಆರ್ಟ್ ಡೈರೆಕ್ಟರ್ ಆಗಬಾರದು, ಸಿನಿಮಾರಂಗಕ್ಕೆ ಬರಬಾರದು ಅಂತ ಯೋಚಿಸಿದೆ. ಆಗ ನಮ್ಮ ಕಾಲೇಜಲ್ಲಿ ಒಂದು ಶೂಟಿಂಗ್ ನಡೀತಿತ್ತು, ನನಗೆ ಅದರಲ್ಲಿ ಅಂತಹ ಆಸಕ್ತಿ ಇರಲಿಲ್ಲ, ಸುಮ್ಮನೆ ನೋಡಿ ಹೊರಟುಹೋದೆ. ಆಗ ನಮ್ಮ ಕಾಲೇಜಿಗೆ ಒಂದು ನಾಟಕ ಬರೀತೀನಿ, ಅದರಲ್ಲಿ ಡ್ಯೂಯಲ್ ಪಾತ್ರಗಳನ್ನ  ಸೃಷ್ಟಿಸಿ ಬರೀತೀನಿ, ಒಳ್ಳೆ ಕಾಮೆಡಿ ನಾಟಕ. ನನ್ನ ಕೋರ್ಸ್ ನಾಲ್ಕು ವರ್ಷದ್ದು. ನಾಲ್ಕನೇ ವರ್ಷ ಓದೋವಾಗ ನಮ್ಮ ಕಲ್ಚರಲ್ ಟೀಮಲ್ಲಿ ಸೆಂಥಿಲ್ ಅಂತ ಇದ್ರು, ಅವರು ನನ್ನನ್ನ ಸಂತೋಷ್ ನಾರಾಯಣನ್ ಅನ್ನೋವರಗೆ ಪರಿಚಯ ಮಾಡಿಕೊಟ್ರು. ಅವರು ಆನಂದವಿಕಟನ್ ಮುಂತಾದ ಪತ್ರಿಕೆಗಳಲ್ಲಿ ಬರೀತಾರೆ. ಒಳ್ಳೆಯ ಡಿಸೈನರ್. ಅವರ ಬಳಿ ಹೋಗಿ ನಾನು ಒಂದು ನಾಟಕ ಬರೆದಿದ್ದೇನೆ ಅದನ್ನು ಸ್ಟೇಜ್ ಮಾಡಬೇಕೆಂದಿದ್ದೇನೆ ನಿಮ್ಮ ಸಹಾಯ ಬೇಕು ಎಂದು ಕೇಳಿದಾಗ, “ನೀನು ಯಾರು?’ ಎಂದಾಗ `ನಾನು ಮೊದಲನೆಯ ವರ್ಷದ ವಿದ್ಯಾರ್ಥಿ’ ಎಂದೆ. `ಮೊದಲನೆಯ ವರ್ಷದಲ್ಲೇ ನೀನು ನಾಟಕ ಮಾಡಬೇಕಾ, ನಿನ್ನಿಂದ ಸಾಧ್ಯವಿಲ್ಲ, ನಾನು ಒಂದು ನಾಟಕ ಮಾಡುತ್ತಿದ್ದೇನೆ, ಅದರಲ್ಲಿ ಬೇಕಾದರೆ ನಟಿಸು’ ಎಂದರು. ಆಗ ನಾಟಕದ ತಾಲೀಮಿಗೆ ಹೋದಾಗ ಅದು ಅಲ್ಲಿ ಬೇರೆಯೇ ಆಗಿತ್ತು. ಅವರ ನಾಟಕದಲ್ಲಿ ಸಂಭಾಷಣೆ ಬಹಳ ಕಡಿಮೆಯಾಗಿಯೂ, ನಟನೆ, ಬಾಡಿ ಲ್ಯಾಂಗುವೇಜ್ ಮುಂತಾದವು ಹೆಚ್ಚಾಗಿಯೂ ಇತ್ತು. ಆದರೆ ನಾನು ಬರೆದಿದ್ದ ನಾಟಕದಲ್ಲಿ ಪುಟಗಟ್ಟಳೆ ಸಂಭಾಷಣೆಗಳಿದ್ದವು. ಅದರಲ್ಲಿ ನಾನು ಎರಡು ಪಾತ್ರವಹಿಸಿದಾಗಲೇ ಗೊತ್ತಾಯಿತು ನವೀನ ನಾಟಕಗಳು ಹೇಗಿರುತ್ತದೆ ಎಂದು.

ಆಗ ನಮ್ಮ ಕಾಲೇಜಿನಲ್ಲಿ ಫಿಲಂ ಫೆಸ್ಟಿವಲ್ ನಡೆಯುತ್ತದೆ. ಅಲ್ಲಿ ನಾನು ನೋಡಿದ ಸಿನಿಮಾ “Children of Haven”  ಭಾಷೆ, ಸಬ್ ಟೈಟಲ್ ಯಾವುದೂ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಆದರೆ ಅದೆಲ್ಲಾ ಮೀರಿ ಆ ಸಿನಿಮಾ ನೋಡುತ್ತಿದ್ದಾಗ ಮನ ಕಲಕಿತು. ಈ ವಿಶುಯಲ್ಸ್ ಗೆ ಎಷ್ಟೊಂದು ಶಕ್ತಿ ಇದೆ ಎಂಬುದರ ಅರ್ಥವಾಯಿತು. ಅಂದು ಆ ಫಿಲಂ ಫೆಸ್ಟಿವಲನಲ್ಲಿ  ಹಾಗೆ ನಾನು ನೋಡಿದ ಸಿನಿಮಾಗಳು Roberto Benigni ನಿರ್ದೇಶನದ Life is Beautiful, Vittorio De Sica ನಿರ್ದೇಶನದ Bicycle Thieves’, Giuseppe Tornatore ನಿರ್ದೇಶನದ Cinema Paradeso, Tom Tykwer ನಿರ್ದೇಶನದ  ‘‘Run Lola Run’’,  Gillo Pontecorvo ನಿರ್ದೇಶನದ ‘The Battle of Algiers’, Sergei Eisenstein ನಿರ್ದೇಶನದ ’‘Battleship Potemkin’ ಮುಂತಾದ ಚಿತ್ರಗಳನ್ನು ಭಾಷೆಯೇ ತಿಳಿಯದೆ ನಾನು ನೋಡಿದ್ದೇನೆ.

Children of Haven ಚಿತ್ರದ ದೃಶ್ಯ

Children of Haven ಚಿತ್ರದ ದೃಶ್ಯ

ನಂತರ ನಾನು ಸೆಂಥಿಲ್ ಅವರ ಬಳಿ ಹೋಗಿ ನನಗೆ ಸಿನಿಮಾ ನಿರ್ದೇಶಕನಾಗ ಬೇಕೆಂಬ ಆಸೆ ಇದೆ ಎಂದಾಗ, ಅವರು, ನೀನು ಮೊದಲು ತುಂಬಾ ಓದಬೇಕು ಎಂದು ಅವರು ಕೆಲವು ಪುಸ್ತಕಗಳನ್ನು ನನಗೆ ಪರಿಚಯಿಸುತ್ತಾರೆ. ಆ ಪುಸ್ತಕಗಳನ್ನು ಓದಲು ಪ್ರಾರಂಭಿಸಿದಾಗಲೆ ನನ್ನನ್ನು ನಾನು ರೂಪಿಸಿಕೊಳ್ಳಲು ಸಾಧ್ಯವಾಯಿತು.  ನಂತರ ಫಿಲಂ ಚೆಂಬರಿನ ಸದಸ್ಯನಾಗುತ್ತೇನೆ. ಅಲ್ಲಿ ತುಂಬಾ ಸಿನಿಮಾಗಳನ್ನು ನೋಡುವ ಅವಕಾಶ ದೊರಯುತ್ತದೆ. ಹಾಗೆಯೇ ಕೆಲವು ಸಂಸ್ಥೆಗಳು ಪ್ರದರ್ಶಿಸುವ ಸಿನಿಮಾಗಳನ್ನು ಹುಡುಕಿಕೊಂಡುಹೋಗಿ ನೋಡುವುದು, ಮತ್ತು ಹೆಚ್ಚಾಗಿ ಸಾಹಿತ್ಯ ಓದುವುದು, ಇತಿಹಾಸ ಓದುವುದು ಅಭ್ಯಾಸ ಮಾಡಿಕೊಂಡೇ. ಇವೆಲ್ಲ `ನಾನು ಯಾರು’ ಎಂಬ ನನ್ನ ಹುಡುಕಾಟಕ್ಕೆ ನೆರವಾದವು.

ಭ.ರಂ: ನೀವು ಸಿನಿಮಾ ನೋಡುವಾಗ ಈ ಸಿನಿಮಾಗಳಲ್ಲಿ ಯಾಕೆ ದಲಿತ ಕಣ್ಣೋಟವಿಲ್ಲ ಎಂದು ಎಂದಾದರೂ ಅನಿಸಿದೆಯೇ?

ಪ.ರಂ: ನನ್ನ ಮೇಲೆ ಬಹಳ ಪ್ರಭಾವ ಬೀರಿದ ಸಿನಿಮಾ Children of Heaven. ಇದು ಬಹಳ ಮುಖ್ಯವಾದ ಚಿತ್ರ. ಈ ಸಿನಿಮಾದಲ್ಲಿ ಹೇಳಲ್ಪಡುವ ಸಂಸ್ಕೃತಿ ಯಾಕೆ ಈ ಬಡತನವನ್ನು ಈ ರೀತಿಯಲ್ಲಿ ಹೇಳಿದೆ, ಯಾಕೆ ಅಂತಹ ರೀತಿಯಲ್ಲಿ ಇಲ್ಲಿ ಕಥೆ ಹೇಳುವುದಿಲ್ಲ ಎಂಬ ಪ್ರಶ್ನೆಯನ್ನು ಉಂಟುಮಾಡಿತು. ಆ ರೀತಿ ಬಂದ ಒಂದು ಬಹಳ ಹಳೆಯ ಸಿನಿಮಾ `ಏಳೈ ಪಡುಂ ಪಾಡು’ ಎಂದಂದುಕೊಂಡಿರುವೆ. ದೂರದರ್ಶನಲ್ಲಿ ಪ್ರಸಾರ ಮಾಡಿದ್ದರು.  ನಾನು ಸಿನಿಮಾಗೆ ಬರುವುದಕ್ಕೆ ಮೊದಲೇ ಬಹಳಷ್ಟು ಸಲ ನೋಡಿದ ಸಿನಿಮಾ, ರಾಜಕೀಯವಾಗಿ ಮಾತನಾಡಿದ ಸಿನಿಮಾ, ನನ್ನನ್ನು ನಾನು ಕನೆಕ್ಟ್ ಮಾಡಿಕೊಂಡ ಸಿನಿಮಾ `ಪರಾಶಕ್ತಿ’. ಸಿನಿಮಾಗೆ ಬರುವ ಮೊದಲೇ ಬಹಳ ಸಲ ನೋಡಿದ ಸಿನಿಮಾ. ಇವೆಲ್ಲಾ ಸಾಮಾನ್ಯ ಸಿನಿಮಾ. ಈ ಸಿನಿಮಾಗಳು ನನ್ನ ಬಗ್ಗೆ ಮಾತನಾಡುತ್ತದೆಯೇ, ಇಲ್ಲವೇ ಎಂಬುದೆಲ್ಲ ಬೇರೆಯ ವಿಷಯ. ಆದರೆ ನನಗೆ ಬೇರೆಯ ಜಗತ್ತನ್ನ ಪರಿಚಯ ಮಾಡಿಸಿದ್ದು ದಲಿತ ಸಾಹಿತ್ಯ. ಆಗೆಲ್ಲ ಬಹಳ ದಲಿತ ಸಾಹಿತ್ಯದ ಲೇಖಕರಿದ್ದರು. ಸಾಹಿತ್ಯದಲ್ಲಿ ಉಂಟಾದ ಇಂತಹ ಬದಲಾವಣೆಗಳು ಏಕೆ ಸಿನಿಮಾದಲ್ಲಿ ಉಂಟಾಗಲಿಲ್ಲ. ಸಿನಿಮಾದಲ್ಲಿ ಯಾಕೆ ದಲಿತ ಕಥೆಗಳು ಬರುತ್ತಿಲ್ಲ. ಇಂತಹ ಪ್ರಶ್ನೆಗಳು ನನ್ನಲ್ಲಿ ಹುಟ್ಟಲು ಕಾರಣ ಕೆಲವು ಬರಹಗಾರರು, ಪ್ರಮುಖವಾಗಿ ಸ್ಟಾಲಿನ್ ರಾಜಾಂಗಮ್, ಯಮುನಾ ರಾಜೇಂದ್ರನ್, ಚಾರುನಿವೇದಿತಾ ಇವರೆಲ್ಲರ ಬರಹ ಮುಖ್ಯವಾಹಿನಿಯ ಸಿನಿಮಾ ವಿಮರ್ಶನೆಗಳಿಂದ ಪೂರ್ಣವಾಗಿ ಭಿನ್ನವಾಗಿರುವಂತಹವು. ಅಲ್ಲಿ ಜಾತಿ, ಮತ, ವರ್ಗಗಳ ಬಗ್ಗೆಯ ಬರವಣೆಗಳಾಗಿರುತ್ತವೆ. ಮುಖ್ಯವಾಗಿ ಯಮುನಾ ರಾಜೇಂದ್ರನ್ ಅವರ ಒಂದು ಪುಸ್ತಕದಲ್ಲಿ ಲೈಂಗಿಕ ಬಲಾತ್ಕಾರ ಮತ್ತು ಮತಕ್ಕೆ ಮುಖ್ಯತ್ವ ನೀಡಿದ ಸಿನಿಮಾಗಳನ್ನು ಸಂಕಲಿಸಿ ಬರೆದಿರುವಂತಹದ್ದು. ನೀಲಳ್ತನಾಥನ್ ಇರಾನ್ ಸಿನಿಮಾಗಳ ಬಗ್ಗೆ ಒಂದು ಸಂಕಲನ ತಂದಿದ್ದಾರೆ. ಅದರಲ್ಲಿ ಅವರ ರಾಜಕೀಯ ಚಿಂತನೆಗಳನ್ನು ನಮ್ಮಿಂದ ಅರ್ಥಮಾಡಿಕೊಳ್ಳಲು ಸಾಧ್ಯ. ಜಾಗತಿಕ ಸಿನಿಮಾಗಳನ್ನು ನೋಡುವಾಗ ಭಾರತೀಯ ಸಿನಿಮಾಗಳಲ್ಲಿ ಯಾಕೆ ಇವೆಲ್ಲ ಸಹಜವಾಗಿ ನಡೆಯಲಿಲ್ಲ. ಇದನ್ನೆಲ್ಲ ಓದುವಾಗ ಇವು ಕೇವಲ ಸಿನಿಮಾವಾಗಿ ಮಾತ್ರವಲ್ಲದೆ, ಕಥೆಯಷ್ಟೆಯಾಗಿ ಮಾತ್ರವಲ್ಲದೇ ಇದರೊಳಗೆ ಒಂದು ಸಬ್ ಟೆಕ್ಸ್ಟ್ ಇದೆ ಎಂಬುದೆಲ್ಲ ಅರ್ಥವಾಗುತ್ತದೆ. ಆಗಲೇ ಅಂದುಕೊಂಡೆ ಯಾಕೆ ನಾನು ನಮ್ಮ ಬಗ್ಗೆ ಒಂದು ಕಥೆ ಹೇಳಬಾರದು. ಯಾಕೆ ಇಲ್ಲಿ ದಲಿತ ಕಥಾಪಾತ್ರಗಳು ಪ್ರಮುಖವಾದ ಪಾತ್ರಾಗಳಾಗಿಲ್ಲ ಎಂಬ ಆಲೋಚನೆಗಳು ಬಂದವು.

ಸಿನಿಮಾಗಳನ್ನು ಹೀಗೆ ವಿಂಗಡಿಸಬಹುದು. ಮೊದಲು ದೈವಾಂಶವುಳ್ಳ ಕಥೆಗಳ ಬಗ್ಗೆ, ನಂತರ ಭಾರತೀಯ ಸ್ವಾತಂತ್ರ ಸಂಗ್ರಾಮಗಳ ಬಗ್ಗೆ ನಂತರ ಜಾತೀಯತೆಯ ಬಗ್ಗೆಯ ಸಿನಿಮಾಗಳು, `ಸಭಾಪತಿ’ ಎಂಬ ಸಿನಿಮಾದಲ್ಲಿ `ಮೂದಲಿಯಾರ್ವಾಳ್’ ಎಂದೇ ಸಂಬೋಧಿಸುತ್ತಾರೆ. ನಂತರ ಚಿಣ್ಣ ಕೌಂಡರ್, ದೇವರ್ ಮಗನ್ ಮುಂತಾದ ಸಿನಿಮಾಗಳು ಮಧ್ಯಮವರ್ಗದ ಜಾತಿಗಳ ಬಗ್ಗೆ ಮಾತನಾಡುತ್ತವೆ. ಭಾರತಿರಾಜ ಬಂದ ಮೇಲೆ ಇವು ವಿಸ್ತಾರಗೊಳ್ಳುತ್ತವೆ. ಇವನ್ನೆಲ್ಲ ಯೋಚಿಸಿದಾಗ ಯಾಕೆ ದಲಿತ ಜೀವನದ ಬಗ್ಗೆ ಯಾರು ಕಥೆಯಾಗಿ ಸಿನಿಮಾ ಮಾಡಲಿಲ್ಲ, ಎಂಬ ಪ್ರಶ್ನೆ ಎದ್ದಿತು. ಬಹುಶಃ ಅಲ್ಲಿಂದ ಈ ಕ್ಷೇತ್ರಕ್ಕೆ ಯಾರು ಬಂದಿಲ್ಲ, ಹಾಗೆಯೇ ಬಂದಿದ್ದರೂ ಯಾಕೆ ಈ ಬಗ್ಗೆ ಹೇಳಲಿಲ್ಲ. ಆದರೂ ಕೆಲವರು ಪ್ರಯತ್ನ ಮಾಡಿದ್ದಾರೆ, ಭಾರತಿರಾಜ `ಎನ್ನುಯಿರ್ ತೋಳ’ ಮತ್ತು ಚೇರನಿನ `ಭಾರತಿ ಕಣ್ಣಮ್ಮ’ ಪ್ರಮುಖವಾದ ಚಿತ್ರಗಳು. ಇವರೆಲ್ಲರೂ ಪ್ರಯತ್ನ ಮಾಡಿದ್ದಾರೆ. ಇವರೆಲ್ಲರೂ ಅಂತಹ ಸಿನಿಮಾಗಳನ್ನು ಮಾಡಿದಾಗ ಯಾಕೆ ಅವು ಬಹಳ ದೊಡ್ಡ ಮಟ್ಟದಲ್ಲಿ ವಿವಾಧ ವಾಗಲಿಲ್ಲ.  ನಾನು ಮಾಡುವಾಗ ಮಾತ್ರ ಇಷ್ಟೊಂದು ವಿವಾಧವಾಗುತ್ತದೆ ಎಂಬುದನ್ನು ನಾನು ಮುಖ್ಯವೆಂದು ಭಾವಿಸುತ್ತೇನೆ.

ಭ.ರಂ: ನೀವು ದೇವರ್ ಮಗನ್, ಚಿಣ್ಣ ಕೌಂಡರ್ ಸಿನಿಮಾಗಳ ಬಗ್ಗೆ ಹೇಳಿದರಲ್ಲ, ಅದರ ಬಗ್ಗೆ ಸಾಮಾಜಿಕ ಚಿಂತಕರು ಕೆಲವರ ಅಭಿಪ್ರಾಯಗಳು ಹೀಗಿವೆ: `ಆ ಚಿತ್ರಗಳನ್ನು ನೋಡಿ ಆಯಾಯ ಜಾತಿಗಳು ಹೆಮ್ಮೆ ಪಟ್ಟುಕೊಳ್ಳುತ್ತವೆ, ಅಂತಹ ಚಿತ್ರಗಳು ಸಾಮಾಜಿಕ ಬೇಜವಾಬ್ದಾರಿ ಎಂದು ಹೇಳುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಪ.ರಂ: ಇಲ್ಲಿಯ ಸಿನಿಮಾಗಳು ನಿಜವಾಗಿಯೂ ಸಿನಿಮಾಗಳಾಗಿವೆಯೇ ಎಂಬುದನ್ನೂ ಆಲೋಚಿಸಬೇಕು. ಇಲ್ಲಿಯ ಸಿನಿಮಾಗಳು ಸಾಮಾನ್ಯ ಮನುಷ್ಯನನ್ನು ಹೇಗೆ ಕನೆಕ್ಟ್ ಮಾಡುತ್ತದೆ. ದ್ರಾವಿಡ ಚಳುವಳಿಯ ಕಾಲದಲ್ಲಿ ಸಿನಿಮಾಗಳನ್ನು ಕೇವಲ ಸಿನಿಮಾವಾಗಿ ಮಾತ್ರವೇ ಮಾಡಲ್ಪಟ್ಟಿತೆ. ನಾನು ಯಾಕೆ `ಪರಾಶಕ್ತಿ’ ಸಿನಿಮಾದೊಂದಿಗೆ ನನ್ನನ್ನು ಕನೆಕ್ಟ್ ಮಾಡಿಕೊಳ್ಳುತ್ತೇನೆ ಎಂದರೆ, ಆ ಸಿನಿಮಾ ಅಂದಿನ social irrelevance ನ ವಿರೋಧಿಸಿ  ಮಾತನಾಡುತ್ತದೆ. ಅದು ಅಂದಿನ ಅವಶ್ಯಕತೆಯಾಗಿರುತ್ತದೆ. ಆ ಅವಶ್ಯಕತೆಯ ಹಿಂದೆ ಒಂದು ಸಂಘಟನೆ ಇದೆ. ಅದು ಒಂದು ದೊಡ್ಡ mass movement ಅನ್ನು ಸೃಷ್ಟಿಮಾಡಿತು. ರಾಜಕೀಯವಾಗಿದ್ದ ಅದು 80ರ ನಂತರ ಬೇರೆಯ ರೀತಿಯಾಗಿ ಬದಲಾಗುತ್ತದೆ. ತಮ್ಮ ಸ್ವಚಿಂತನೆ, ಬದುಕಿನ ಬಗ್ಗೆ, ಕಲಾತ್ಮಕವಾದ ದೃಷ್ಟಿಕೋಣದಲ್ಲಿ ಪ್ರಮುಖವಾದ ಒಂದು ಘಟ್ಟವನ್ನು ಮುಟ್ಟುತ್ತದೆ. ಅವು ಸ್ವಮೌಲ್ಯಗಳ ಬಗ್ಗೆ ಮಾತನಾಡದೇ ಸ್ವಜಾತಿಯ ಹಿರಿಮೆಗಳ ಬಗ್ಗೆ ಮಾತನಾಡುತ್ತವೆ. ಮುಖ್ಯವಾಗಿ ಕಾರ್ಮಿಕ ವರ್ಗಗಳ ಮನೋಭಾವದಿಂದ  evolve ಆಗುವ ಜಮೀನ್ದಾರಿಯ ಬಗ್ಗೆಯ ಹಿರಿಮೆಗಳನ್ನು  ಮಾತನಾಡಲು ಹೋಗಿ ಇವು ಕೇವಲ ಚಿತ್ರಗಳು ಎಂಬ ಸ್ಥಿಯನ್ನು ದಾಟಿ ಅದರ ಸುತ್ತಮುತ್ತಲಿನ ಜಾಗದಲ್ಲಿ ಒಂದು ಬಗೆಯ ಜಾತಿಯ ರೀತಿಯ ನೋಟವನ್ನುಂಟುಮಾಡುತ್ತದೆ. ಇವುಗಳಲ್ಲಿ ಬರುವ ಹಾಡುಗಳು ತಮ್ಮ ಜಾತಿಯ ಹಿರಿಮೆಗಳ ಬಗ್ಗೆ ಮಾತನಾಡುವುದರಿಂದ ಅವರು ಬದುಕುವ ಸ್ಥಳಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ.

ಭ.ರಂ: ನೀವು ಹೇಳುವ ಜಾಗಗಳಲ್ಲಿ ಬಹಳ ಕಡೆ ದಲಿತರ ಮೇಲೆ ಕ್ರೌರ್ಯ ನಡೆಯುತ್ತಿದೆಯಲ್ಲಾ ಇಂದು ಸಹ ಒಂದು….

ಪ.ರಂ: ಹೌದು, ಈ ದಿನ ಸಹ ವರ್ಷಿಣಿಪ್ರಿಯ ಎಂಬ ಹುಡುಗಿ ಮರಣಹೊಂದಿದ್ದಾಳೆ.

ಭ.ರಂ: ನೀವು ಬಹಿರಂಗವಾಗಿ ಈ  ಚಿತ್ರ ದಲಿತ ಚಿತ್ರಗಳು ಎನ್ನುವಾಗ, ಅಂತಹ ಜಾಗಗಳಲ್ಲಿ ನಿಮ್ಮ ಚಿತ್ರ ಬಿಡುಗಡೆಯಾಗುವಾಗ, ಯಾರಾದರೂ ನಾನು ಈ ಚಿತ್ರವನ್ನೂ ನೋಡುವುದಿಲ್ಲ ಎಂಬ ಮಾತೇನಾದರೂ ಕೇಳಿ ಬಂದಿದೆಯೇ?

ಪ.ರ: ಇಲ್ಲಿ ಯಾರೂ ಸಿನಿಮಾ ಹೀಗೆ ಹಾಗೆ ಎಂದುಕೊಂಡು ಬರುವುದಿಲ್ಲ. ಇಲ್ಲಿ ಸಿನಿಮಾ ಬೇರೆ, ಬದುಕು ಬೇರೆ. ಸಿನಿಮಾ ಅವರಿಗೆ ಒಂದು ಆಹ್ಲಾದಕರವಾದ ಮನೋಸ್ಥಿತಿಯನ್ನು ಕೊಡುತ್ತದೆ. ಅವರು ಕೆಲವು ಸಿನಿಮಾವನ್ನು ಸುಮ್ಮನೆ ನೋಡಿ ಹೋಗುವವರಾಗಿಯೇ ಇದ್ದಾರೆ. ಆದರೆ ಆ ಚಿತ್ರ ನೋಡುವವರ ಮನಸ್ಸಿನ ಮೇಲೆ, ನೋಟದ ಮೇಲೆ ಎಂತಹ ಪರಿಣಾಮವನ್ನು ಬೀರುತ್ತದೆ ಎಂಬುದು ಮುಖ್ಯ. ಇಲ್ಲಿ ಸಿನಿಮಾ ಸಾಹಿತ್ಯ ರಚಿಸುವವರೂ, ನಿರ್ದೇಶಕರೂ ನಾನು ಇಂತಹ ಅಭಿಪ್ರಾಯವನ್ನು ಇಲ್ಲಿ ಪ್ರಸ್ತುತ ಮಾಡುತ್ತೇನೆ ಎಂದು ಹೇಳುವುದು ಬಹಳ ಕಡಿಮೆ. ಆದರೆ ಬದುಕಿನ ನಿಜಸ್ಥಿತಿಯನ್ನು ಹಾಗೆಯೇ ಪ್ರತಿಬಿಂಭಿಸುವ ಪ್ರಯತ್ನ ಮಾಡಿದ್ದಾರೆ. ಮುಖ್ಯವಾಗಿ ಇಲ್ಲಿಯ ತಮಿಳು ಸಿನಿಮಾ Trans Genders ಅನ್ನು ಹೇಗೆ ಚಿತ್ರಿಸಿದೆ ಎಂಬುದನ್ನು ನೋಡಬೇಕು. ಅವರಿಗೆ ಯಾವ ರೀತಿಯ ನಾಚಿಕೆಯೂ ಇಲ್ಲದ, ಮಾನವ ಸಂವೇಧನೆಗಳೂ ಇಲ್ಲದ,  ಬಹಳ  ತುಚ್ಛವಾದ ಪಾತ್ರಗಳಾಗಿ ಚಿತ್ರಿಸುತ್ತಾರೆ. ಅದನ್ನು ಮಾತ್ರವಲ್ಲ, ಹೆಣ್ಣುಗಳನ್ನೂ ಸಹ ಲೈಂಗಿಕ ಶೋಷಣೆ ಮಾಡುವುದಾಗಲಿ, ಹೆಣ್ಣು ಗಂಡಿಗೆ ಅಧೀನ ಎಂಬುದನ್ನು ಇಲ್ಲಿ ಜೀವನದ ತತ್ವವಾಗಿದೇ ಎಂಬುದನ್ನೂ ಸಿನಿಮಾದಲ್ಲಿ ಪ್ರತಿಬಿಂಭಿಸುತ್ತಾರೆ. ಆದರೆ ಅವರ ಬಳಿ ಇದರ ಬಗ್ಗೆ ಕೇಳಿದರೆ, ಅವರು ಉತ್ತರವಿಲ್ಲದೆ ತತ್ತರಿಸುತ್ತಾರೆ.  ಪ್ರೇಕ್ಷಕ ಇಂತಹ ಚಿತ್ರಗಳನ್ನು ನೋಡುವಾಗ ಅವನು ಅರಿತೋ ಅರಿಯದಲೋ ಇದೊಂದು ಸಂಸ್ಕೃತಿಯಾಗಿ ಕಾಣುತ್ತದೆ. ಮೊದಲೇ ಬದುಕಿನಲ್ಲಿರುವುದೇ ಹಾಗೆ ಅದನ್ನು ನಾವು ಚಿತ್ರದಲ್ಲಿ Re-Impose ಮಾಡುವಾಗ ಮತ್ತಷ್ಟು ಬಲಿಷ್ಟವಾಗುತ್ತದೆ.

ಭ.ರಂ: ಅಂದರೆ ಸಮಾಜದಿಂದ ಸಿನಿಮಾಗೆ ಹೋಗಿ ಮತ್ತೆ ಸಿನಿಮಾದಿಂದ ಸಮಾಜಕ್ಕೆ ಮರಳಿ ಬರುತ್ತದೆ ಎನ್ನುತ್ತೀರಾ?

ಪ.ರಂ: ನೀವು ವಲಸೆ ಬಂದು ಆಶ್ರಯ ಪಡೆಯುತ್ತಿರುವ ಶ್ರೀಲಂಕನ್ ತಮಿಳರ ಬಗ್ಗೆಯಾಗಲೀ, ಮಲೇಷಿಯಾ , ಸಿಂಗಪೂರದ ತಮಿಳರಿಗಾಗಲಿ ಎಲ್ಲಿಂದ ಬದುಕನ್ನು  ಮತ್ತೆ  Re-Impose ಮಾಡುತ್ತಾರೆ ಅಂದುಕೊಂಡಿರುವಿರಿ. ಸಿನಿಮಾದಿಂದಲೇ. ಇಲ್ಲಿಂದ ಹೋಗಿ ಭಾಷೆಯ ಆಧಾರದ ಮೇಲೆ ಒಂದಾಗಿದ್ದ ಅವರು ಇಂದು ಬೇರ್ಪಟ್ಟಿದ್ದಾರೆ ಎಂದರೆ ಅದು ಜಾತಿಯಿಂದಲೇ. ಇದಕ್ಕೆ ಮುಖ್ಯ ಕಾರಣ ಸಿನಿಮಾ. ಸಿನಿಮಾ ನಿನಗೊಂದು ಪಾಠ ಹೇಳಿಕೊಡುತ್ತಿದೆ ಅದನ್ನು ನೀನು ಬಂದು ಕಲಿತುಕೋ ಎಂಬುದರೊಳಗೆ ಅವನು ಹೋಗಲೇ ಇಲ್ಲ. ಯಾರ ಅರಿವಿಗೂ ಬಾರದೇ ಸಿನಿಮಾ ಅವನಿಗೆ ಒಂದು Practice ಅನ್ನು ಕೊಡುತ್ತದೆ. Practice ಅನ್ನುವುದು ಇಲ್ಲಿಯ ಹೈಯರಾರ್ಕಿ ಪದ್ಧತಿಯನ್ನು, ಜಾತಿಯ ಪದ್ಧತಿಯನ್ನು, ಹೆಣ್ಣು ಅಸಮಾನತೆಯನ್ನು ಬೆಂಬಲಿಸುವಂತಹವಾಗಿವೆ.  ಇಂತಹವನ್ನು ಅವನ ಅರಿವಿಲ್ಲದಂತೆಯೇ ಅವನು ಸ್ವೀಕರಿಸುತ್ತಾನೆ. ಸಿನಿಮಾ ಎಂಬುದು ಒಂದು ದೈಹಿಕ ದೌರ್ಜನ್ಯ. ಕಲೆಯೇ ಅದರೂ. ಅದೇ ರೀತಿ ಶಬ್ಧ, ಮಾತು, ಬಣ್ಣ ಇವು ದೈಹಿಕಾವಾಗಿ, ಮಾನಸಿಕವಾಗಿ ಮನುಷ್ಯನೊಳಗೆ ಇಳಿಯುತ್ತದೆ.  ವಿಶೇಷವಾಗಿ ದೇಹಕ್ಕೆ ಸಂಬಂಧಿಸಿದ ಹಾಸ್ಯ ದೃಶ್ಯಗಳಿರಲಿಕ್ಕೆ  ಇವೇ ಕಾರಣ. ಇಂದು ನಾವು ಒಬ್ಬ ಶೌಚಾಲಯವನ್ನು ಶುದ್ಧ ಮಾಡುವವನ ಬಗ್ಗೆ ಗೇಲಿಯಾಗಿ `ಹತ್ರ ಬರಬೇಡ, ನಾಥ’ ಅಂತ ಹೇಳಿ ಅವನನ್ನು ಹೊಡೆಯುವುದು ಹಾಸ್ಯಕ್ಕೆ ಬೇಕಾದರೆ ಚೆನ್ನಾಗಿರಾಬಹುದು ಅದನ್ನು ನೋಡಿ  ನಗಬಹುದು.  ಆದರೆ ನಿಜ ಜೀವನದಲ್ಲಿ ಇಂತಹ ಒಂದು ಸಮಾಜವನ್ನು ನಾವು ಸೃಷ್ಟಿಸಿಮಾಡಿಟ್ಟಿದ್ದೇವೆ. ಆ ದೃಶ್ಯವನ್ನು ನೋಡುವಾಗ ಅಂತಹವನ ಮನೋಸ್ಥಿತಿ ಹೇಗಿರುತ್ತದೆ ಎಂದು ಯಾರು ಯೋಚಿಸಿಯೇ ಇರುವುದಿಲ್ಲ. ಅದು ಸಮಾಜದಲ್ಲಿ ಒಂದು ಹಾಸ್ಯವಾಗಿ ಪರಿವರ್ತನೆಗೊಳ್ಳುತ್ತದೆ. ವಿದೇಶಗಳಿಗೆ  ಹೋಗಿ ಬರುವವರನ್ನು ಮೊದಲು ಕೇಳುವ ಪ್ರಶ್ನೆಯೇ `ಏನು, ಅಲ್ಲಿ ಕಕ್ಕಸ್ ತೊಳೀತಿದ್ದೆಯಾ?’ ಎಂದೇ. ಅದು ಅವರಿಗೊಂದು ಹಾಸ್ಯವಾಗಿದೆ. ಸಮಾಜದಲ್ಲಿ ಇದೊಂದು ಸಮಸ್ಯೆ. ಆದರೆ ಅದರ ಬಗ್ಗೆ ಆಲೋಚಿಸುವುದೇ ಇಲ್ಲ. ಈ ರೀತಿ ಬಹಳ ಸಮಸ್ಯೆಗಳಿವೆ. ಅವರಲ್ಲಿ ಮೊದಲೇ ಇರುವ ಇಂತಹ structure ಗಳನ್ನು ಒಡೆಯದೆ ಮತ್ತಷ್ಟು ಬಲಪಡಿಸುತ್ತದೆ. ಅವುಗಳಿಗೆ ವಿರೋಧವಾಗಿ ಮಾತೆತ್ತುವುದಿಲ್ಲ. ಕೊನೆಯ ಪಕ್ಷ  ಸಾಮಾಜಿಕ ಹೊಣೆಗಾರಿಕೆ ಎಂಬುದಾದರೂ ಬೇಕಾಗಿದೆ.

ಭ.ರಂ: ನೀವು ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಸಿನಿಮಾ ತೆಗೆಯುತ್ತೀರಿ ಸರಿ, ಆದರೆ ನಾವು ಎರಡು ಸಿನಿಮಾಗಳ ಬಗ್ಗೆ ಮಾತನಾಡುವ, `ನಾಯಗಣ್ ಮತ್ತು ಕಾಲಾ’ ಎರಡೂ ಸಹ ಮುಂಬಯಿಯ ದಾರಾವಿ ಬದುಕನ್ನು ತಳವಾಗಿಟ್ಟುಕೊಂಡ, ಡಾನ್ ಅಧಾರಿತ ಸಿನಿಮಾ ಕಥೆಗಳು. ಅದು ಕೇವಲ ಒಂದು ಕೇರಕ್ಟರ್ ಆಧಾರಿತ, ಭಾವನೆಯ ಆಧಾರಿತವಾದ ಕಥೆ. It is fairly apolitical, ಅದರ interest ಕಮಲ್ ಕೇರೆಕ್ಟರ್ ಹೇಗೆ ಹೋಗುತ್ತಿದೆ ಎಂಬುದೇ…. ಆದರೇ ನೀವು ಅದೇ ಸ್ಥಳವನ್ನು ತೆಗೆದುಕೊಂಡು ಆ ಸ್ಥಳದ ರಾಜಕೀಯವನ್ನು ಸಿನಿಮಾವಾಗಿ ಮಾಡಿದ್ದೀರಿ. ಈ ರೀತಿ ಅವೆರಡೂ ಒಟ್ಟಾಗಿ exist ಆಗಿರಲು ಸಾಧ್ಯವೇ? ಅಥವಾ ಯಾವುದಾದರೊಂದೇ ದಾರಿ ಸರಿಯಾದದ್ದೇ?

ಕಾಲಾ ಚಿತ್ರದ ಒಂದು ದೃಶ್ಯ

ಕಾಲಾ ಚಿತ್ರದ ಒಂದು ದೃಶ್ಯ

ಪ.ರಂ: ನಾನು `ಕಾಲಾ’ ವಿನ ಕೇರೆಕ್ಟರನ್ನು ಡಾನ್ ಕೇರೆಕ್ಟರ್ ಅನ್ನು ಗೇಂಗ್ಸ್ಟರ್ ಅಂತ ಹೇಳಲೇ  ಇಲ್ಲ. ದಾರಾವಿಗೆ ಯಾವ ಮುಖವಿದೆ, ದಾರಾವಿಯ ಭೂ ಮೌಲ್ಯವೇನು, ದಾರಾವಿಯ ಸಮಸ್ಯಗಳೇನು ಎಂಬುದರ ಬಗ್ಗೆ ನಾವು ಆಲೋಚಿಸುವಾಗ, ಇಂತಹ ಸಮಸ್ಯೆಗಳೊಂದಿಗೇ ಬದುಕುವವನು ಏನನ್ನು ಯೋಚಿಸಬಹುದು, ಯಾವ ನಿರ್ಧಾರ ತೆಗೆದುಕೊಳ್ಳಬಹುದು, ಆ ಸ್ಥಳ ಯಾವ ರೀತಿ ಇರಬಹುದು ಎಂಬುದನ್ನೂ ದೃಶ್ಯವಾಗಿಸುವ ಪ್ರಯತ್ನ ನನ್ನದು.

ಭ.ರಂ:  ಈಗ ಆರ್ಟಿಕಲ್ 15 ಎಂಬ ಸಿನಿಮಾ ಬಂದಿದೆ. ಅದರಲ್ಲಿ ಒಂದು controversy ಏನೆಂದರೆ ಒಬ್ಬ ಉಚ್ಚ ಜಾತಿಯವನು ದಲಿತರ saviour ಆಗಿ ಚಿತ್ರಿಸುರುವ ಕಥೆ. ಆದನ್ನು ಕೆಲವರು ಹೀಗೆ criticize ಮಾಡುತ್ತಾರೆ ಮತ್ತು ಕೆಲವು ದಲಿತ ಬರಹಗಾರರು ಬರೆಯುತ್ತಾರೆ, `ಇದು ನಮ್ಮ ತಳ , ಇದರಲ್ಲಿ ನಮ್ಮನ್ನು ಇರಲು ಬಿಡಿ,  ನೀವು ಯಾಕೆ ಬರುತ್ತೀರಿ’ ಎಂಬ ದೃಷ್ಟಿಯಲ್ಲಿದೆ. ಒಂದು ಕಥೆಯ ತಳ ಒಬ್ಬ ಕಲೆಗಾರನಿಗೆ ಮೀಸಲಿಡಬೇಕಾದದ್ದೆ? ಇಲ್ಲ……

ಪ.ರಂ: ಇಲ್ಲ, ನಾನು ಈ ಅಭಿಪ್ರಾಯದಿಂದ ಭಿನ್ನವಾಗಿದ್ದೇನೆ. ಖಂಡಿತವಾಗಿ ಯಾರು ಬೇಕಾದರೂ ಯಾವ ತಳವನ್ನು ಬೇಕಾದರೂ ತೆಗೆದುಕೊಂಡು ಕಥೆ, ಸಿನಿಮಾ ಮಾಡಬಹುದು. ಅದು ಸಮಸ್ಯೆಯಲ್ಲ.  ಆದರೆ ಸಾಮಾನ್ಯವಾಗಿ ಸಿನಿಮಾ ಎಂತಹ ಕಥೆಗಳನ್ನು ಸೃಷ್ಟಿಸಿದೆ ಎಂದು ನೋಡಬೇಕು. ಸಾಮಾನ್ಯವಾಗಿ ಮೇಲ್ವರ್ಗದ ಜನ ಕೆಳ ವರ್ಗದ ಜನಗಳನ್ನು ಉದ್ಧಾರ ಮಾಡುವಂತಹ ಕಥೆಗಳೇ ಇಲ್ಲಿ ಗೆದ್ದಿವೆ.  ವಿಶೇಷವಾಗಿ `ಮದುರೈ ವೀರನ್’ ಸಿನಿಮಾವನ್ನು ತೆಗೆದುಕೊಳ್ಳೋಣ. ಅದರ ಪೂರ್ತಿ ಕಥೆ ನಿಜವಾದ ಕಥೆ ಎಂಬುದು ಬೇರೆಯ ವಿಷಯ. ಆ ಕಥೆಯ ನಾಯಕ ಮಂಗಲಮುಖಿಯರ ಸಮಾಜದಲ್ಲಿಯೇ ಬೆಳೆದು ಬಂದವನು, ಆದರೆ ಸಿನಿಮಾದಲ್ಲಿ ಅದನ್ನು ಬಹಳಷ್ಟು ಬದಲಾಯಿಸುತ್ತಾರೆ, ಅವನು ಉನ್ನತ ಜಾತಿಯಲ್ಲಿ ಹುಟ್ಟಿದವನು ಆದರೆ ಮಂಗಲಮುಖಿಯರ ಸಮಾಜದಲ್ಲಿ ಬೆಳೆಯುತ್ತಾನೆ, ಅದರಲ್ಲಿ ಹಲವು ಸಮಸ್ಯೆಗಳು ಎಂಬ ರೀತಿಯಲ್ಲಿ ಸಿನಿಮಾ ಇದೆ. ಈ ರೀತಿ ಬಹಳಷ್ಟು ಸಿನಿಮಾಗಳು ಬಂದಿವೆ.

ಹೀರೋ ಕೊಳಚೆ ಪ್ರದೇಶದಲ್ಲಿ ಫೈಟ್ ಎಲ್ಲಾ ಮಾಡುತ್ತಾನೆ, ಆದರೆ ಕೊನೆಗೆ ಅವನು ಹುಟ್ಟಿದ್ದು ಎಲ್ಲಿ ಎಂದರೆ ಒಂದು ಮೇಲ್ವರ್ಗದಲ್ಲಿ. ಆದರೆ ಕೊಳಚೆ ಪ್ರದೇಶದಲ್ಲಿ ಹುಟ್ಟಿ ಬೆಳೆದವನಿಗೆ ಅವನ ಸಮಸ್ಯೆಗಳ ಬಗ್ಗೆ ಹೋರಾಡುವ ಸಾಮರ್ಥ್ಯ , ಶಕ್ತಿ ಇರುವುದಿಲ್ಲವೇ ಎಂಬುದೇ ಪ್ರಶ್ನೆ. ಉದಾಹರಣೆಗೆ ಮಹಾಭಾರತದ ಕರ್ಣನನ್ನೇ ತೆಗೆದುಕೊಳ್ಳಬಹುದು. ಅವನನ್ನು ಎಲ್ಲರೂ ಕೀಳಾಗಿಗೆ ನೋಡುತ್ತಾರೆ, ಆದರೆ ಕೊನೆಗೆ ಅವನು ಕುಂತಿಯ ಮಗ. ಹಾಗೆ ಇಲ್ಲದಿದ್ದರೂ ಅವನ ಸಾಮರ್ಥ್ಯ, ಶಕ್ತಿ, ಗುಣಕ್ಕೆ ಯಾವ ಕುಂದೂ ಇರುತ್ತಿರಲಿಲ್ಲ. ಹಾಗೆಯೇ ಇದ್ದರೂ ಅವನು ಕ್ಷತ್ರಿಯ ವಂಶಕ್ಕೆ ಸೇರಿದವನು ಎಂದು ಕಥೆ ಹೋಗುತ್ತದೆ.

ಸಮಾಜ ಎಂಬುದು ಎಲ್ಲರನ್ನೂ ಒಳಗೊಂಡದ್ದು. ಯಾರು ಯಾರ ಬಗ್ಗೆ ಬೇಕಾದರೂ ಕಥೆ , ಸಿನಿಮಾ ಮಾಡಬಹುದು. ಆದರೆ ಅದರಲ್ಲಿ ಒಂದು ಸತ್ಯಾಂಶವಿರುತ್ತದೆ. ಅದನ್ನು ಯಾರು ಅಲ್ಲಗೆಳೆಯಬಾರದು. `ಅವತಾರ್’ ಸಿನಿಮಾ ಬಗ್ಗೆ ಮಾತಾಡೋಣ. ಬುಡಕಟ್ಟು ಜನಾಂಗದಿಂದ ಕಾಡನ್ನು ಅಪಹರಿಸಲು ಮೇಲ್ವರ್ಗದ ಒಂದು ಗುಂಪು ಬರುತ್ತದೆ. ಆ ಗುಂಪಿನ ಒಬ್ಬ ಮಾತ್ರವೇ ಬುಡಕಟ್ಟು ಜನಾಂಗಕ್ಕಾಗಿ ಹೋರಾಡುತ್ತಾನೆ. ಇದೆಂತಹ ಮೋಸ ಅಂತ ಅನಿಸುವುದಿಲ್ಲವೇ. ಅಂದರೆ ಬುಡಕಟ್ಟು ಜನಕ್ಕೆ ಹೋರಾಡುವ ಸಾಮರ್ಥ್ಯವೇ ಇಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಆದರೆ ಅಲ್ಲಿ ಶಕ್ತಿಯುತವಾದ ಒಂದು ಹೆಣ್ಣು ಪಾತ್ರ ಇದೆ, ಆದರೂ ಯಾಕೆ ಇಂತಹ ವಿಷಯಗಳು ಮತ್ತೆ ಮತ್ತೆ Re-impose ಮಾಡಲ್ಪಡುತ್ತದೆ, ಎಂಬುದೇ ನನ್ನ ಪ್ರಶ್ನೆ.

ಈಗ ಒಬಾಮಾ ಮತ್ತು ಟ್ರಂಪನ್ನು ನೋಡೋಣ. ಒಬಾಮಾ ಜನಗಳನ್ನು ಕಾಪಾಡಲಿಕ್ಕೂ, ಟ್ರಂಪ್ ಜನಗಳನ್ನು ಕಾಪಾಡಲಿಕ್ಕೂ ಬಹಳ ವ್ಯತ್ಯಾಸಗಳಿವೆ, ನಾನು ಒಬಾಮಾವನ್ನು ನನ್ನೊಂದಿಗೆ ಕನೆಕ್ಟ್ ಮಾಡಿಕೊಳ್ಳಬಹುದಾದ ವ್ಯಕ್ತಿಯಾಗಿ ನೋಡಬಲ್ಲೆ. ಟ್ರಂಪ್ ಬಲಪಂಥೀಯ ಚಿಂತನೆಗಳಿದ್ದರೂ, ಏನೇ ಒಳಿತು ಮಾಡಿದರೂ ಈತ ಏತಕ್ಕಾಗಿ ನನಗೆ ಸಹಾಯ ಮಾಡುತ್ತಾನೆ ಎಂಬ ಸಂಶಯದೊಳಗೆ ನನ್ನನ್ನು ದೂಡುತ್ತದೆ. ಆದ್ದರಿಂದಲೇ ನನ್ನ ಸಿನಿಮಾಗಳಲ್ಲಿ, ನನ್ನ ಬದುಕನ್ನು, ನನ್ನ ದನಿಯನ್ನು, ನನ್ನ ನೋವನ್ನು ನನ್ನ ದನಿಯಿಂದಲೇ ಮಾತನಾಡಲು ಪ್ರಯತ್ನ ಮಾಡುತ್ತೇನೆ. ಹಾಗೆ ಮಾತನಾಡುವಾಗ ಎರಡು ದೊಡ್ಡ ಸಮಸ್ಯೆಗಳು ಉಂಟಾಗುತ್ತವೆ. ಒಂದು ಈತ ಸ್ವಜಾತಿಯ ತಳಹದಿಯ ಮೇಲೆ ನಿಂತು ಮಾತನಾಡುವ ಮನುಷ್ಯ ಎಂದು ನೋಡುತ್ತಾರೆ, ಅದೇ ಮತ್ತೊಬ್ಬ ಮಾಡುವಾಗ ಅದು ಕ್ರಾಂತಿ ಎನಿಸಿಕೊಳ್ಳುತ್ತದೆ. ಈ ಮನೋಭಾವಗಳಿಗೆ ವಿರುದ್ಧವಾಗಿ ಮಾತನಾಡಬೇಕಾದ ಅವಶ್ಯಕತೆ ಇದೆ.

ಭ.ರಂ: ನಿಮ್ಮ ಮೊದಲ ಎರಡು ಚಿತ್ರಗಳಲ್ಲಿ ನೀವು ದಲಿತ ದೃಷ್ಟಿಕೋನವನ್ನು ಸ್ವಲ್ಪ underplay ಮಾಡಿದಿರಿ. ಅದು ಯಾಕೆ ಎಂದು ಹೇಳಬಹುದೇ?

ಪ.ರಂ: ಭಯ ಅಷ್ಟೇ.

ಮಡ್ರಾಸ್ ಚಿತ್ರದ ಪೋಸ್ಟರ್

ಮಡ್ರಾಸ್ ಚಿತ್ರದ ಪೋಸ್ಟರ್

ಭ.ರ.: ಆದರೆ ನಾನು `ಮೆಡ್ರಾಸ್’ ಸಿನಿಮಾ ನೋಡುವಾಗ ಅದನ್ನು ಒಂದು Class  narrative ಆಗಿ ನೋಡಿದೆ. Caste narrative ಆಗಿ ನೋಡುವುದಕ್ಕಿಂತ.  ಯಾಕೆಂದರೇ ನಗರಗಳಲ್ಲಿ ಅಂತಹ differences ಹೆಚ್ಚಾಗಿ ಕಾಣದಿರುವುದರಿಂದ ಅದನ್ನು class narrative ಆಗಿಯೇ ನೋಡಿದೆ. ನಂತರ ಬಹಳಷ್ಟು ಜನ ಹೇಳಿದ ಮೇಲೆಯೇ ನಿಮ್ಮ symbols, sub text ಗಳೆಲ್ಲವೂ ಅರ್ಥವಾಯಿತು. ನೀವು ಒಂದು mission ನೊಂದಿಗೆ ಸಿನಿಮಾ ಮಾಡುತ್ತೀರಲ್ಲ ಆಗ ಇಂತಹ symbols ಗಳನ್ನು ಅರ್ಥ ಮಾಡಿಕೊಂಡವರಿಗೆ  ಅವು   ಹೋಗಿ ಸೇರುವುದು ಒಳ್ಳೆಯದೇ.  ಉದಾಹರಣೆಗೆ ನೀವು ಇಂತಹವು ಹಳ್ಳಿಗೆ ಹೋಗಿ ಸೇರಬೇಕೆಂದು ಕೊಳ್ಳುತ್ತೀರಿ, ಆಗ ಅವರು ಈ symbol ಗಳನ್ನು ಅರ್ಥ ಮಾಡಿಕೊಂಡೇ `ಅಟ್ಟ  ಕತ್ತಿ’ ಸಿನಿಮಾವನ್ನು ತಮ್ಮ ಕಥೆ ಎಂದು ಸ್ವೀಕರಿಸುತ್ತಾರೆ ಎಂದರೆ ಅವರಿಗೆ ಮೊದಲು ಅವು ಅರ್ಥವಾಗುತ್ತದೆಯೇ…..ಎಂಬುದರ ಬಗ್ಗೆ ಸ್ವಲ್ಪ ಹೇಳಬಹುದೇ?

ಪ.ರಂ; ಅಟ್ಟ ಕತ್ತಿ ಸಿನಿಮಾವನ್ನು ಬಹಳ ಸುಲಭವಾಗಿ ಅರ್ಥ  ಮಾಡಿಕೊಂಡರು. ಅದು ಅವರಿಗೇನು ಹೊಸತಲ್ಲ. ಆದರೆ ಸಿನಿಮಾದಲ್ಲಿರುವವರು ಇದೆಂತಹ ಸಿನಿಮಾ ಎಂದು ಯೋಚಿಸಬಹುದು. ಅದೇ ಈ ಸಿನಿಮಾವನ್ನು ರಿಲೀಸ್ ಮಾಡಿದ ಸ್ಟುಡಿಯೋಗ್ರೀನ್ ಸಂಸ್ಥೆಗೆ ಈ ಸಿನಿಮಾ ಎಲ್ಲಿಂದ ಬಂದಿದೆ ಎಂಬುದು ಗೊತ್ತು. ಅದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಮರೆಮಾಚುವುದೇನೆಂದರೆ ನೇರವಾಗಿ ಈ ವಿಷಯವನ್ನು ಮಾತನಾಡದೇ ಬೇರೊಂದು ಜೀವನದ ಮೂಲಕ ಮಾತನಾಡಿದ್ದೇವೆ. ವಿಶೇಷವಾಗಿ `ಮೆಡ್ರಾಸ್’ ಚಿತ್ರವೇ ಅಂತಹದ್ದು. ನನಗೆ ದಕ್ಕುವ possibilities ಒಳಗೆ ನಾನು ಕಥೆ ಹೇಳಲು ಸಾಧ್ಯವೇ? ಎಂಬುದೇ.

ಭ.ರಂ; ದೊರಕುವ possibilities ಅಂದರೇ?

ಪ.ರಂ: ಅದೆಂದರೇ ನಿರ್ಮಾಪಕರ ಬೆಂಬಲ, ವ್ಯಾಪಾರ ಮೌಲ್ಯ, ಇವೆಲ್ಲಾ ಮಾಡಲ್ ಅಷ್ಟೇ. ಈ ಮೊದಲು ಇಂತಹ ಚಿತ್ರಗಳು ಬಂದಿಲ್ಲ. ಮೊಟ್ಟಮೊದಲು ಇಂತಹ ಚಿತ್ರಗಳು ಮಾರಟವಾಗುತ್ತವೆಯೇ ಎಂಬ ಗೊಂದಲ ಇದೆ. ಅದಕ್ಕೆ ಮೊದಲೇ ಮಾರಟವಾದ ಸಿನಿಮಾಗಳ ರೀತಿಯಲ್ಲೇ ನಾವು ಏನನ್ನು ಹೇಳಲು ಸಾಧ್ಯ ಎಂಬುದೇ ಈ ಎರಡು ಚಿತ್ರಗಳು. ಮೊದಲು ನನಗೆ ಬಹಳ restriction ಇದ್ದವು. ಒಬ್ಬ ಕಲಾಸೃಷ್ಟಿಕರ್ತನಾಗಿ, ಬರಹಗಾರನಾಗಿ, ಸಿನಿಮಾ ನಿರ್ದೇಶಕನಾಗಿ ಇತ್ತು. ನಾನು ಭರದ್ವಾಜ್ ರಂಗನ್ ಜತೆಯಲ್ಲಿ ಹೇಗೆ ಮಾತನಾಡ ಬಲ್ಲೆ. ಆಗ ಫಿಲಂ ಭಾಷೆ ಮುಖ್ಯವಾಗುತ್ತೆ. ಆ ಫಿಲಂ ಭಾಷೆಯೊಳಗೆ ನಾನು ಹೇಗೆ ಕನೆಕ್ಟ್ ಆಗುತ್ತೇನೆ ಎಂಬುದು ಮುಖ್ಯ. ಆ ಫಿಲಂ ಭಾಷೆಯೊಳಗೆ ನಾನು ಜೀವನವನ್ನು  ಸಿನಿಮಾ ಮಾಡಬೇಕು. ವಿಶೇಷವಾಗಿ ಅವುಗಳ ಬಗ್ಗೆಯಲ್ಲಾ ಒಂದು ಸಣ್ಣ ಭಯವಿತ್ತು. ಮೊದಲು ಆ ಫಿಲಂ ಭಾಷೆಯನ್ನು discussion ಮೂಲಕ ಅರ್ಥಮಾಡಿಕೊಳ್ಳಬೇಕು ಎಂಬುದು ಮುಖ್ಯ. ನಾನು ಸಿನಿಮಾಗೆ ಬಂದಾಗ ಬಹಳಷ್ಟು ಜನ  `ನೀನು ಯಾರು ಎಂದು ಹೇಳಿಕೊಳ್ಳಬೇಡ’ ಎಂದೆಲ್ಲಾ ಹೇಳಿದರು. ಆದರೆ ಅವೆಲ್ಲವನ್ನೂ ಮೀರಿ ನಾನು ನನ್ನ ಗುರುತನ್ನು ಕಳೆದುಕೊಳ್ಳಬಾರದು ಎಂಬ ಆಲೋಚನೆಯೊಂದಿಗೆ  ನನ್ನ ಸಿನಿಮಾಗಳು ಮಾಡಲ್ಪಟ್ಟಿವೆ.

ಭ.ರಂ: `ಅಟ್ಟ ಕತ್ತಿ’ ಸಿನಿಮಾದಲ್ಲಿ ಒಬ್ಬ ಸಿನಿಮಾ ನಗರದ ವ್ಯಕ್ತಿಗೆ ಆ ಕಮ್ಯೂನಿಟಿಯ ಬಗ್ಗೆ ಏನೆಲ್ಲಾ ಹೇಳುತ್ತದೆ ಎಂಬುದನ್ನು ಹೇಳಲು ಸಾಧ್ಯವೇ?

ಪ.ರಂ: ಆ ಸಿನಿಮಾದಲ್ಲಿ ನಾನು ಒಂದೇ ಒಂದು ವಿಷಯದ ಮೂಲಕ ಅದನ್ನು ಹೇಳಿರುವೆ. ವಿಶೇಷವಾಗಿ ದನದ ಮಾಂಸ ತಿನ್ನುವುದರ ಬಗ್ಗೆ ಸಂಭಾಷಣೆ ಒಂದು ದೃಶ್ಯದಲ್ಲಿ ಬರುತ್ತದೆ. ಐಶ್ವರ್ಯಾ ರಾಜೇಶ್ ಮತ್ತು ಸಿನಿಮಾ ನಾಯಕ ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಅಲ್ಲಿ ಅಮ್ಮ ಕೇಳುತ್ತಾರೆ, `ನಿಮ್ಮ ಮನೆಯಲ್ಲಿ ಯಾವ ಸಾರು?’ ಎಂದು. ಆಗ ದನದ ಮಾಂಸವನ್ನು ಯಾರು ತಿನ್ನುತ್ತಾರೆ, ಅದು ಸಾಮಾನ್ಯವಾಗಿ ಯಾರ ಆಹಾರವಾಗಿ ಇರುತ್ತದೆ ಎಂಬ ಒಂದು ಸಂಭಾಷಣೆ ನಡೆಯುತ್ತದೆ. ಅದು ಒಂದು symbolic ಆಗಿ ಹೇಳಲ್ಪಟ್ಟ ವಿಷಯ. ನಮ್ಮ ದೇಶದಲ್ಲಿ ದನದ ಮಾಂಸ ತಿನ್ನುವವರು ಕೇವಲ ಮುಸಲ್ಮಾನರು ಎಂಬ ಒಂದು ಅಭಿಪ್ರಾಯ ಇದೆ. ಹಿಂದುಗಳು ತಿನ್ನುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ದಕ್ಷಿಣ ಭಾರತದಲ್ಲಿ ಹಾಗೆ ಹೇಳಲು ಸಾಧ್ಯವಿಲ್ಲ. ತಮಿಳು ನಾಡು, ಕೇರಳ, ಆಂಧ್ರ ಮುಂತಾದ ಕಡೆ ದನದ ಮಾಂಸ ಅವರ ಆಹಾರ. ಆ ಆಹಾರದಿಂದ ಒಂದು identity ಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದ್ದೇವೆ.

ಭ.ರಂ: `ಕಪಾಲಿ’ ಸಿನಿಮಾದಲ್ಲಿ ರಜನಿಕಾಂತ್ ಓದುವ ಪುಸ್ತಕ `My Father Baliah’ . ನಾನು ಕಮ್ಯುನಿಸ್ಟ್ ಅಲ್ಲ ಆದರೆ ಒಂದು ಆಸಕ್ತಿಗಾಗಿ ಕಾರ್ಲ್ ಮಾರ್ಕ್ಸನ್ನು ಓದಬಹುದು. ಆದರೆ ಅವರು ಆ ಪುಸ್ತಕ ಓದುತ್ತಾರೆ, ಅದರಿಂದ ಅವರು ಆ ಕಮ್ಯೂನಿಟಿಗಾಗಿ ಹೋರಾಡುತ್ತಾರೆ ಎಂಬ ಅರ್ಥವನ್ನು ತೆಗೆದುಕೊಳ್ಳಬಹುದೇ?

ಕಪಾಲಿ ಚಿತ್ರದ ಒಂದು ದೃಶ್ಯ

ಕಪಾಲಿ ಚಿತ್ರದ ಒಂದು ದೃಶ್ಯ

ಪ.ರಂ: ಆ ಒಂದು ದೃಶ್ಯವನ್ನು ಇಟ್ಟುಕೊಂಡು ನಾವು ಸಿನಿಮಾವನ್ನು ಮುಂದುವರೆಸಿಲ್ಲ. `ಮೆಡ್ರಾಸ್’ ಸಿನಿಮಾ ನೋಡಿದರೇ `ತೀಂಡಾದ ವಸನಮ್’ ಎಂಬ ಪುಸ್ತಕವನ್ನು ಕಾರ್ತಿ ಓದುತ್ತಿರುತ್ತಾರೆ. ಅದರಲ್ಲಿ ಏನು ಹೇಳಿದೆ ಎಂಬುದು ಆ ಪುಸ್ತಕ ಓದಿದವವರಿಗೆ ಮಾತ್ರ ಅರ್ಥವಾಗುತ್ತೆ. ಹಾಗೆ ಸಿಂಬಾಲಿಕ್ ಆಗಿ ಕೆಲವು ವಿಷಯಗಳನ್ನು underline ಮಾಡುತ್ತೇವೆ. ಕಪಾಲಿ ಸಿನಿಮಾದಲ್ಲಿ ಓದುವ  ಮೈ ಫಾಧರ್ ಬಾಲಯ್ಯಾ, ಎಂಬ ಪುಸ್ತಕಕ್ಕೂ, ಕಪಾಲಿ ಪಾತ್ರಕ್ಕೂ ಏನಾದರೂ ಸಂಬಂಧ ಇದೆಯೇ? ಮೈ ಫಾಧರ್ ಬಾಲಯ್ಯ ಪುಸ್ತಕದಲ್ಲಿ ಒಂದು ಸಣ್ಣ ಹಳ್ಳಿಯಿಂದ ವಲಸೆ ಬಂದು ರೈಲ್ವೇಯಲ್ಲಿ ಕೆಲಸಕ್ಕೆ ಸೇರಿಕೊಂಡು ಒಂದು ತಲೆಮಾರಿನ ನಂತರ ಬಹಳ ಬದಲಾವಣೆಗಳು ಉಂಟಾಗುತ್ತವೆ. ಅದು ಒಂದು ದೊಡ್ಡ ಕಥೆ. ಅದನ್ನು ನೋಡುವಾಗ ಅದೇ ರೀತಿಯ ಒಂದು ಕಥೆಯನ್ನು ಇಲ್ಲಿಯೂ ಸಹ ನಾನು ಕನೆಕ್ಟ್ ಮಾಡುತ್ತೇನೆ. ಕಪಾಲಿ ಬಗ್ಗೆ ಮಾತನಾಡುವಾಗ ಅವರ ಪ್ರೇಮ ಜೀವನದ ಬಗ್ಗೆ ಮಾತನಾಡುತ್ತಾರೆ, ಅಲ್ಲೂ ಅದೇ ಸಮಸ್ಯೆ ಉಂಟಾಗುತ್ತದೆ. ಅದರ ಬಗ್ಗೆ ಜಾನ್ ವೆಡ್ಜ್ ಮಾತಾನಾಡುತ್ತಾರೆ, `ತಮಿಳರು ಎಲ್ಲಿ ಬಂದರೂ ಜಾತಿಯನ್ನು ಹೊತ್ತುಕೊಂಡು ಬರುತ್ತಾರೆ, ಆ ಸಮಸ್ಯೆಯನ್ನು ಪರಿಹರಿಸಿ, ಅವರಿಗೆ ಮದುವೆ ಮಾಡಿಸಿದ್ದೇ ನಾನು’ ಎಂಬಂತಹ ಸಮಸ್ಯೆಗಳನ್ನು symbolic ಆಗಿ ಹೇಳುತ್ತಾ ಹೋಗುತ್ತೇವೆ. ಇದರಲ್ಲಿ ಎರಡು ಪ್ರಮುಖವಾದ ಸಂಭಾಷಣೆಗಳು ಬಹಳ ದೊಡ್ಡ level ನಲ್ಲಿ reach ಆಯಿತು. ಒಂದು, `ಅಂಬೇಡ್ಕರ್ ಕೋಟ್ ದರಿಸುವುದಕ್ಕೂ, ಗಾಂಧಿ ಬಟ್ಟೆ ಇಲ್ಲದೆ ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ಅದು ರಾಜಕೀಯ’ ಎಂದು ಹೇಳುತ್ತಾರೆ. ಅದೇ ರೀತಿಯಲ್ಲಿ `ಕಾಲು ಮೇಲೆ ಕಾಲು ಹಾಕಿಕೊಂಡು ಕೂರುವೆನು, ಗತ್ತಿನಿಂದ’ ಎಂಬ ಸಂಭಾಷಣೆಯೂ ಇದೆ. ಆ ದೃಶ್ಯ ನೇರವಾಗಿ ದಲಿತ್ ಗಳಿಗೆ ಮಾತ್ರ ಸೃಷ್ಟಿಸಿದ್ದಲ್ಲ. ಮಲೇಷಿಯಾದಲ್ಲಿ ಅವರು oppressed class. ಬಹಳಷ್ಟು ವರ್ಷ ಮಲೇಷಿಯಾದಲ್ಲಿ ದುಡಿದಿದ್ದರೂ ಅವರಿಗೆ ಭೂಮಿಯ ಹಂಚಿಕೆ ಎಂಬುದು ಇಲ್ಲವೇ ಇಲ್ಲ. ಇಂದಿಗೂ ತೋಟಗಳಲ್ಲಿ ಹೋಗಿ ನೋಡಿದರೆ, ಮೂರು ತಲೆಮಾರಿನಿಂದ ನಗರವನ್ನು ಬಂದು  ನೋಡದ ಜನ ತೋಟಗಳಲ್ಲಿ ಇದ್ದಾರೆ. ಅವರು ಬಹಳಷ್ಟು oppressed ಕ್ಲಾಸ್. ಅಲ್ಲಿರುವ ಮಲೇಷಿಯನ್ ಮತ್ತು ಚೀನರು ಅವರನ್ನು ಹೇಗೆ ನೋಡುತ್ತಾರೆ ಎಂಬುದು ಮುಖ್ಯ. ವಿಶೇಷವಾಗಿ ಉಡುಗೆಯ ಬಗ್ಗೆ ಬಹಳ ದೊಡ್ಡ ರಾಜಕೀಯವಿದೆ. ತಮಿಳರ ಉಡುಗೆ ತೊಡಿಗೆಗಳನ್ನು ಗೇಲಿ ಮಾಡುವುದು, ಒಂದು ಮುಖ್ಯವಾದ ಅಂಶ. ಅಲ್ಲಿರುವ ತಮಿಳರು ಉಳಿದವರ ಎದುರು ತಮ್ಮ ಜೀವನವನ್ನು ಕಟ್ಟಿಕೊಂಡಿರುವುದು ಒಂದು ರಾಜಕೀಯ ನಿಲುವು. ಅಲ್ಲಿಯ ಮಲೇಷಿಯನ್ ಜನಗಳು ಕೋಟು ಸೂಟಿನಲ್ಲಿರುವುದು, ಅಲ್ಲಿಯ ತಮಿಳರನ್ನ ಅವರು ಕೀಳಾಗಿ ನೋಡುವುದು, ಅಲ್ಲಿಯ oppressed class ಮನೋಭಾವವನ್ನು ಇಲ್ಲಿ  ತೋರಿಸುವಾಗ ಅದು ದಲಿತ ಮನೋಸ್ಥಿತಿಯಾಗಿ ಕಾಣುತ್ತದೆ. ಎರಡೂ ಒಂದೇ. ಬೇರೆಬೇರೆ ಸ್ಥಳಗಳಲ್ಲಿ ಅದು ತನ್ನ identityಯನ್ನು ತೋರಿಸುತ್ತದೆ. ಆದರೆ ಇಲ್ಲಿಯ ತಮಿಳರು ನಾನು ಮಲೇಷಿಯಾ ತಮಿಳರ ಬದುಕಿನ ಬಗ್ಗೆ ಹೇಳಲಿಲ್ಲ, ಇಲ್ಲಿಯ ದಲಿತ್ ಬಗ್ಗೆ ಹೇಳುತ್ತಿದ್ದೇನೆ ಎಂದರು. ಆದರೆ, ಅದೇ ಮಲೇಷಿಯಾದ ತಮಿಳರು ನೀವು ನಮ್ಮ ಬದುಕನ್ನೇ ಚಿತ್ರಿಸಿದ್ದೀರಿ ಎಂದರು. ಅಲ್ಲಿರುವ ತಮಿಳರಿಗೆ ಅದು ಜಾತಿಯಾಗಿ ಕಾಣಲಿಲ್ಲ. ಆದರೆ ಇಲ್ಲಿಯ ತಮಿಳರಿಗೆ ಅದು ಜಾತಿಯಾಗಿ ಕಂಡಿತು. ಅಂದರೆ ಒಂದು ಸಿನಿಮಾವನ್ನು ನೋಡುವಾಗ ಎರಡು ಬಗೆಯ ಆಲೋಚನೆಗಳನ್ನು ಉಂಟುಮಾಡುತ್ತವೆ. ಇಲ್ಲಿರುವ oppressed class ಗೆ ವಿರೋಧವಾದ ಚಿತ್ರವಾಗಿ ಬದಲಾಗುತ್ತದೆ. ಆದರೆ ಅಲ್ಲಿರುವ ಚೀನರ, ಮಲೇಷಿಯರ ಕಣ್ಣಿಗೆ ಅಲ್ಲಿಯ ದಬ್ಬಾಳಿಕೆಗೆ ಒಳಗಾದ ಜನಗಳ ಬದುಕಾಗಿ ಕಾಣುತ್ತದೆ. ಆ ರೀತಿಯಲ್ಲಿಯೇ ನಾನು ನೋಡುತ್ತೇನೆ.

ಭ.ರಂ: ನಿಮ್ಮ ಮೊದಲ ಎರಡು ಚಿತ್ರವನ್ನು underplay ಮಾಡಿದ್ದಿರಿ. ಮೂರನೆಯ ಸಿನಿಮಾದಲ್ಲಿ ಆ ಭಯ ಹೇಗೆ ಹೊರಟುಹೋಯಿತು?

ಪ.ರಂ: `ಮೆಡ್ರಾಸ್’ ಚಿತ್ರದ ಗೆಲುವಿನಿಂದಲೇ ನನಗೆ `ಕಪಾಲಿ’ ಚಿತ್ರ ದೊರಕುತ್ತದೆ. ಆ ಗೆಲುವು ನನ್ನನ್ನು ಬಹಳಷ್ಟು ವಿಸ್ತಾರವಾಗಿ ಮಾತನಾಡಬೇಕು ಎಂದು ಹುರಿದುಂಬಿಸುತ್ತದೆ. ವಿಶೇಷವಾಗಿ, `ಮೆಡ್ರಾಸ್’ ಮತ್ತು `ಅಟ್ಟ ಕತ್ತಿ’ ಸಿನಿಮಾವನ್ನು ನೋಡಿ ಸೂಪರ್ ಸ್ಟಾರಂತಹವರು ನನ್ನೊಂದಿಗೆ ಒಂದು ಸಿನಿಮಾ ಮಾಡಬೇಕೆಂದಾಗ, ನಾನು ಒಂದಿಷ್ಟು ಧೈರ್ಯವನ್ನು ತುಂಬಿಕೊಳ್ಳಬೇಕಾಗುತ್ತದೆ. ಕಪಾಲಿ ಕಥೆಯ flash back ನಲ್ಲಿ ಮತ್ತೊಂದು ಕಥೆಯಿತ್ತು. ಅದನ್ನೂ ನಾನು ಮಾಡಿದ್ದರೆ, ಜನಗಳಿಗೆ ಇನ್ನಷ್ಟು ತೃಪ್ತಿಯಾದ ಚಿತ್ರವನ್ನೂ ಕೊಡಬಹುದಿತ್ತೇನೋ ಎಂದು ಈಗ ಅನಿಸುತ್ತದೆ.  ಇನ್ನೂ ಅದರ ಬಗ್ಗೆ ವಿಸ್ತಾರವಾದ ಮಾತುಗಳು ಬರುತ್ತಿದ್ದವು. ಅಲ್ಲಿ `ಉಡುಪಿನ ರಾಜಕೀಯ’ ದ ಬಗ್ಗೆ ಮತ್ತಷ್ಟು ಸ್ಪಷ್ಟವಾಗಿ ಮಾತುಕತೆ ಇತ್ತು. ಅದನ್ನು ನಾನು ಸೇರಿಸಲಿಲ್ಲ. ಅದನ್ನೂ ನಾನು ಮಾತನಾಡಿದ್ದರೆ….. ಅವೆಲ್ಲವನ್ನೂ ಮಾತನಾಡಿದ್ದಾರೆ ಮತ್ತಷ್ಟು ಕಠಿಣ ಆಗಿಬಿಡುತ್ತಾರೆ ಎಂದು ಮಾಡಲಿಲ್ಲ.

ಭ.ರಂ: ನಿಮ್ಮ ನಾಲ್ಕನೆಯ ಚಿತ್ರವಾದ `ಕಾಲಾ’ ದಲ್ಲಿ ನಾನಾ ಪಾಟೇಕರ್ ರಜನಿಯ ಮನೆಗೆ ಬಂದು ನೀರು ಕುಡಿಯದೆ ಬರುವ ಆ un-touchability ದೃಶ್ಯವನ್ನು ತೋರಿಸುವುದು ನಿಮ್ಮ progression ಎಂದು ಹೇಳಬಹುದೇ?

ಪ.ರಂ:  ಕಥೆ ನಡೆಯುವ ಸನ್ನಿವೇಶ ನನಗೆ ಅಂತಹ ಒಂದು ಅವಕಾಶವನ್ನು ಮಾಡಿಕೊಟ್ಟದ್ದರಿಂದ ಅದು ಅಲ್ಲಿ ನಡೆಯಿತು. ಮತ್ತು ಅದು ಕಥೆಯ ಅವಶ್ಯಕತೆಯೂ ಸಹಾ. ಒಂದು ದೃಶ್ಯದ need. ಅದನ್ನ ಬೇಕಂತಲೇ ತುರುಕಲಿಲ್ಲ. ಇಷ್ಟೊಂದು ಚಿತ್ರಗಳನ್ನು ಮಾಡಿದ ಧೈರ್ಯ ಸಹ ನನಗೆ ಅದಕ್ಕೆ ಇಂಬು ಕೊಟ್ಟಿರಬಹುದು. ಅದಕ್ಕೆ ಬಹಳಷ್ಟು ಜನ ಇವನಿಗೆ ಚಿತ್ರ ಮಾಡುವ ಅವಕಾಶವನ್ನೇ ಕೊಡಬಾರದು ಎಂದು ಬರೆಯುತ್ತಾರೆ. ಸಿನಿಮಾ ರಂಗದಲ್ಲಲ್ಲ….ಹೊರಗೆ….

ಭ.ರಂ: ನಿಮ್ಮ ಚಿತ್ರಗಳಲ್ಲಿ ನಿಮ್ಮ ವೈಯಕ್ತಿಕ ಅನುಭವಗಳು ಎಷ್ಟಿದೇ? ನೀವು football ಆಡುತ್ತಿದ್ದದ್ದಾಗಿ ಹೇಳಿರುವಿರಿ, ಅಂತಹ ಅಥವಾ ಅದಕ್ಕಿಂತ ಹೆಚ್ಚಿನ ಅನುಭವಗಳು ನಿಮ್ಮ ಚಿತ್ರಗಳಲ್ಲಿ ಬಂದಿವೆಯೇ?

ಪ.ರಂ: ವೈಯಕ್ತಿಕ ಅನುಭವಗಳಿಲ್ಲದೆ ಸಾಧ್ಯವಿಲ್ಲ. ಕಥೆ ನನ್ನ ಜೀವನದಲ್ಲಿ ನಡೆಯದೆ ಇದ್ದಿರಬಹುದು. ಆದರೆ ಕಥೆಯಲ್ಲಿ ಬರುವ ಪಾತ್ರಗಳು ನನ್ನ ಜೀವನದಲ್ಲಿ ನೋಡಿದ ವ್ಯಕ್ತಿಗಳು. ಅಟ್ಟೈ ಕತ್ತಿ ಸಿನಿಮಾದಿಂದ ಕಾಲಾ ಸಿನಿಮಾದವರೆಗೆ ನಾನು ನೋಡಿದ ನಿಜ ಮನುಷ್ಯರ character ಅನ್ನು ನನ್ನ ಸಿನಿಮಾಗಳಲ್ಲಿ ಬಳಸಿಕೊಂಡಿದ್ದೇನೆ. ಕಾಲಾ ಸಿನಿಮಾದಲ್ಲಿ ಬರುವ ಕಾಲನ ತಂದೆಯ character ನಮ್ಮ ತಾತನನ್ನು ಮನಸ್ಸಲ್ಲಿ ಇಟ್ಟುಕೊಂಡು ಸೃಷ್ಟಿಸಿದ್ದು. ಕಥೆ ನನ್ನ ಬದುಕಿಗೆ ಸಂಬಂಧಪಡದೆ ಇರಬಹುದು, ಆದರೆ character, ಸಂಭಾಷಣೆ ನನ್ನ ನಿಜ ಜೀವನದಲ್ಲಿ ನೋಡಿರುವುದೇ. ಅನೇಕ ಸಂಭಾಷಣೆಗಳು ನನ್ನ ಅಮ್ಮ, ಅಪ್ಪ ಮಾತನಾಡುವ ಮಾತುಗಳೇ. ಆ ರೀತಿ ಬಹಳ ದೃಶ್ಯಗಳಿವೆ, ಅಟ್ಟೈ ಕತ್ತಿ, ಮೆಡ್ರಾಸ್ ಇಲ್ಲೆಲ್ಲಾ ಬಹಳ ಸಂಭಾಷಣೆಗಳನ್ನು ಬಳಸಿಕೊಂಡಿದ್ದೇನೆ. ಹೀಗೆ ಬದುಕಿನಿಂದಲೇ ನಾನು ತೆಗೆದುಕೊಳ್ಳುವುದು. ಸಾಹಿತ್ಯ ನನಗೆ ಇದನ್ನು ಕಲಿಸಿಕೊಟ್ಟಿತು. ಅಲ್ಲಿ ಬರುವ ಸಂಭಾಷಣೆಗಳು ನಿಜಕ್ಕೆ ಹತ್ತಿರವಾಗಿ ಇರಬೇಕು ಎಂಬುದನ್ನೂ ಕಲಿಸಿತು. ಅದು ಜೀವನದಿಂದ ಬರುವಾಗ ಹೇಗಿರುತ್ತದೆ ಎಂಬುದನ್ನು ಯೋಚಿಸಿಯೇ ನಾನು ಮಾಡಿರುವುದು.

ಭ.ರಂ: ಸಿನಿಮಾದಲ್ಲಿ ಲೈಟ್, ಕಲರ್, ಮ್ಯೂಸಿಕ್ ಇದೆ ಎಂದು ಬರುವ audienceಮಾತ್ರವಲ್ಲದೆ ಕೇವಲ  ನಿಮ್ಮ ಆಲೋಚನೆಗಳಿಗೆ ಹೊಂದಿಕೊಂಡು ಹೋಗುವ audience ಮಾತ್ರ ಬಂದು ನೋಡಬೇಕು ಅಂದುಕೊಳ್ಳುತ್ತೀರಾ?

ಪ.ರಂ: ಹಾಗಲ್ಲಾ. ನಾನು ಸಾಧ್ಯವಾದಷ್ಟು ಎರಡೂ ತರಹದ audienceಗಳೂ ಬಂದು ನೋಡಬಹುದಾದಂತಹ ಸಿನಿಮಾಗಳನ್ನೇ ತೆಗೆಯುತ್ತೇನೆ. ನಾನು ಮೊದಲೇ ಹೇಳಿದಂತೆ ಸಿನಿಮಾ ಒಂದು tool . ಜನ ಈ ನಟನ ಸಿನಿಮಾ ನೋಡಬೇಕೆಂದುಕೊಂಡು ಬಂದರೂ ಸಹ ಅವರಿಗೆ ನಾವು ಮತ್ತಿನ್ನೇನನ್ನೋ ಕೊಟ್ಟು ಕಳುಹಿಸುತ್ತೇವೆ. ಅದೇ ಸಿನಿಮಾ. ಅದನ್ನೇ ನನ್ನ ಸಿನಿಮಾಗಳು ಮಾಡುವುದು. ಸಿನಿಮಾ ಕೇವಲ ಒಂದು entertainment ಅಷ್ಟೇ ಅಥವಾ ಅಲ್ಲ ಅಂದುಕೊಂಡು ಅವರು ಥಿಯೇಟರ್ ನಿಂದ ಹೊರಹೋಗಬಹುದು. ಆದರೆ ಖಂಡಿತ ಕಥಾಪತ್ರಗಳು ಅವರೊಂದಿಗೆ ನಂತರ ಮಾತನಾಡುತ್ತವೆ. ಅದು ಆ ಸಿನಿಮಾ ನೋಡಿ ಮುಗಿಸಿದ ಮರು ನಿಮಿಷದಲ್ಲಿ ಇರಬಹುದು, ಅಥವಾ ಹತ್ತು ನಿಮಿಷಗಳನಂತರ ಅಥವಾ ಹತ್ತು ದಿನಗಳ ನಂತರವೋ, ಒಂದು ವರ್ಷದ ಬಳಿಕವೋ ಸಹಾ ಇರಬಹುದು. ಸಿನಿಮಾ ಖಂಡಿತ ಆ ಶಕ್ತಿಯನ್ನು  ಹೊಂದಿದೆ. ಆದರೆ ನಾನು ಎಲ್ಲ ತರಹದ audience ಅನ್ನು ತೃಪ್ತಿಪಡಿಸಲು ನೋಡುತ್ತೇನೆ. ನಾನು ಭರತ್ ರಂಗನ್ ಅಂತಹ ಮನುಷ್ಯನಿಗೂ, ಅದೇ ರೀತಿ ಒಬ್ಬ ಬಹಳ ಸರಳವಾದ ವ್ಯಕ್ತಿಯನ್ನೂ ಹೋಗಿ ತಲುಪಬೇಕು. ಅದೇ ನನ್ನ ಪ್ರಯತ್ನ. ಅಂತಹ ಒಂದು ಭಾಷೆಯನ್ನು ನಾನು ಉಂಟುಮಾಡಲೇ ಪ್ರಯತ್ನಮಾಡುತ್ತಿರುವೆ. ನನ್ನ ಎಲ್ಲ ಚಿತ್ರಗಳು ಹಾಗೆ reach ಆಗಿವೆಯೇ ಎಂದರೆ ಎರಡೂ ತರಹವೂ ಇದೆ. ಆದರೆ ಅದರಲ್ಲಿ percentage ಇದೆ. ಈ ಅನುಭವಗಳಿಂದ ನಾನು ಬೆಳೆಯುತ್ತಾ ಹೋದಂತೆ ಜನಗಳೂ ಬೆಳೆಯುತ್ತಾರೆ, ಅವರೊಂದಿಗೆ ಕನೆಕ್ಟ್ ಮಾಡಿಕೊಳ್ಳುವುದೇ ನನ್ನ ಪ್ರಯತ್ನ.

ಭ.ರಂ: ನೀವು ಸಿನಿಮಾದಲ್ಲಿ ಹೇಳುವ ಸಂಭಾಷಣೆ ಒಬ್ಬ ಪಾತ್ರ ಹೇಳುವ ಸಂಭಾಷಣೆಯೇ ಅಥವಾ ನಿಮ್ಮ ಸಂಭಾಷಣೆಯೇ? ಅಲ್ಲಿ ನಾಯಕ ಹೀಗೆ ಹೇಳುತ್ತಾನೆ ಎಂದು ತೆಗೆದುಕೊಳ್ಳಲೂ ಬಹುದು, ಅಥವಾ ನಿಮ್ಮ ಮಾತಾಗಿಯೂ ಇರಬಹುದು. ನೀವು ಹೇಳಬೇಕಾದ್ದನ್ನು ರಾಜಕೀಯ ವೇದಿಕೆಯ ಮೇಲೆ ಹೇಳುವಾಗ ಅಲ್ಲಿ ಒಂದೇ ರೀತಿಯ audience ಇರುತ್ತಾರೆ, ಎಲ್ಲರಿಗೂ ಒಂದೇ ವಿಷಯವನ್ನು  ಹೇಳುತ್ತೀರಿ. ನಿಮಗೆ ರಾಜಕೀಯ ಆಸೆಗಳೇನಾದರೂ ಇದೆಯೇ?

ಪ.ರಂ: ಎರಡು ತರಹದ ಸುಧಾರಣೆಗಳಿವೆ. ಒಂದು ರಾಜಕೀಯ ಸುಧಾರಣೆ ಮತ್ತೊಂದು ಸಾಮಾಜಿಕ ಸುಧಾರಣೆ. ಖಂಡಿತ ಸಧ್ಯಕ್ಕೆ ನನಗೆ ರಾಜಕೀಯ ಸುಧಾರಣೆಯ ಬಗ್ಗೆ ಆಸಕ್ತಿ ಇಲ್ಲ. ಆದರೇ ಸಾಮಾಜಿಕ ಸುಧಾರಣೆ ಬಗ್ಗೆ ನನ್ನಗೆ ಬಹಳಷ್ಟು ಆಸಕ್ತಿ ಇದೆ. ಆದ್ದರಿಂದ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸಮಾಡುವ ಅವಶ್ಯಕತೆ ಇದೆ. ಅದಕ್ಕಾಗಿಯೇ ನಾನು ಕಲ್ಚರಲಾಗಿ ಕೆಲವು ಕೆಲಸಗಳನ್ನು ಮಾಡುತ್ತಿದ್ದೇನೆ. ಅದನ್ನು ಸಿನಿಮಾ ಖಂಡಿತವಾಗಿ ಮಾಡುತ್ತದೆ. ಅಲ್ಲಿಯ ಕಥಾಪಾತ್ರಗಳು ಪ್ರೇಕ್ಷಕನ ಆಲೋಚನೆಗಳಲ್ಲಿ ಬಹಳಷ್ಟು ಬದಲಾವಣೆಗಳನ್ನು  ತರಲು ಸಾಧ್ಯ.

ಭ.ರಂ: ನೀವು ತೆಗೆದ ನಾಲ್ಕು ಚಿತ್ರಗಳಲ್ಲಿ, ನೀವು ಹೇಳಿದ ವಿಷಯಕ್ಕೂ,ಮತ್ತು ಕಲಾತ್ಮಕವಾಗಿಯೂ ನಿಮಗೆ ಹಿಡಿಸಿದ ಚಿತ್ರ ಯಾವುದು?

ಪ.ರಂ: ಅಟ್ಟೈ ಕತ್ತಿ.  ಅದು ಬಹಳ ತೃಪ್ತಿ ಕೊಟ್ಟ, ಯಾರಿಗೂ ಹೆದರದೇ, ನಾನು ಬರೆದದ್ದನ್ನು ಹಾಗೆಯೇ shoot ಮಾಡಿದ ಸಿನಿಮಾ. ಆದರೆ film making ನಲ್ಲಿ ಕೆಲವು ಸಮಸ್ಯೆಗಳಿರಬಹುದು. ಆದರೆ ನನಗೆ ಬಹಳ ಹಿಡಿಸಿದ ಚಿತ್ರ. ನನಗೆ ಆ ಚಿತ್ರ ತೆಗೆಯುವಾಗ ಹೊಸಬ ಎಂದು ಸರಿಯಾದ ಬೆಂಬಲ production ಕಡೆಯಿಂದ ದೊರಕದೆ ಹೋಗಿರಬಹುದು. ProducerUÀÆ ಸಹ ಭಯವೇ, ಈ ಸಿನಿಮಾವನ್ನು ಮಾರುವುದು ಹೇಗೆ ಎಂದು. ಆದರೆ ನಾನು ಅಂದುಕೊಂಡಂತೆ, ಯಾವ ಭಯವೂ ಇಲ್ಲದೆ ತೆಗೆದ ಚಿತ್ರ ಅಟ್ಟ ಕತ್ತಿ. ಒಂದು ಕರು ಹುಟ್ಟಿದ ಕೂಡಲೇ ಎದ್ದು, ನಡೆದು, ಓಡಬೇಕು, ಕುಣಿಯಬೇಕು ಎಂಬಂತಹ  ಮನಸ್ಥಿತಿಯೇ ನಾನು ಅಟ್ಟ ಕತ್ತಿ ಸಿನಿಮಾ ಮಾಡಿದಾಗ ಇತ್ತು.

 

ಭ.ರಂ: ಶಂಕರ್ ಚಿತ್ರಗಳು ಹೀಗೆ ಇರುತ್ತವೆ ಎಂಬ ಒಂದು ಕಲ್ಪನೆ ಇದೆ. ಹಾಗೆಯೇ ನಿಮ್ಮ ಚಿತ್ರಗಳೂ ಹೀಗೆಯೇ ಎಂಬ ಇಮೇಜ್ ಸೃಷ್ಟಿಯಾಗುತ್ತದೆ. ಅದಲ್ಲದೆ ನೀವು ಸುಮ್ಮನೆ ಎರಡೇ ಕೇರಕ್ಟರ್ ಇಟ್ಟುಕೊಂಡು ಒಂದು ಸಿನಿಮಾಮಾಡಬೇಕೆಂಬ ಆಸೆ ಏನಾದರೂ ಇದೆಯೇ?

ಪ.ರಂ: ಖಂಡಿತ ನನಗೆ ಅಂತಹ ಆಸೆ ಇದೆ. ಅದಕ್ಕಾಗಿ ಒಂದು ಕಥೆಯೂ ತಯಾರಾಗಿದೆ. ಒಂದು ಆರ್ಟಿಸ್ಟಿಕ್ ಸಿನಿಮಾ ಮಾಡಬೇಕೆಂಬ ಆಸೆ ಇದೆ. ಒಂದು ಕ್ಯಾನ್ವಾಸನ್ನು ಮುಂದಿಟ್ಟುಕೊಂಡು ಯಾವ ಬಣ್ಣಗಳಿಂದ ತುಂಬ ಬೇಕು ಎಂಬ ಕಲಾತ್ಮಕವಾದ ದೃಷ್ಟಿ ಇರುವಂತೆ , ನನಗೂ ಅಂತಹ ಸಿನಿಮಾ ಮಾಡಬೇಕೆಂಬ ಆಸೆ, ಅದಕ್ಕೆ ಅವಕಾಶ, ಸಮಯ ಎಲ್ಲ ಕೂಡಿ ಬರಬೇಕು. ಯಾವಾಗ ಅದು ಕೈಗೂಡುತ್ತದೆ ಎಂಬುದೆಲ್ಲಾ ನನಗೆ ಗೊತ್ತಿಲ್ಲ.

ಭ.ರಂ: ಡಬೀರನ್ ಮೂವ್ಮೆಂಟ್ ಅವರ ಚಿತ್ರಗಳನ್ನು ಒಂದು propaganda tool ತರಹ ಬಳಸಿಕೊಂಡರು. ಆಗ ಜನಗಳಿಗೆ ಸಿನಿಮಾ relatively ಇನ್ನೂ ಹೊಸ medium. ಆಗ screen ನಲ್ಲಿ ನೋಡುವುದನ್ನು ಹಾಗೆಯೇ ನಿಜ ಜೀವನದಲ್ಲಿ ತೆಗೆದುಕೊಂಡರು. ಉದಾಹರಣೆಗೆ ಎಂ,ಜಿ,ಆರ್. ಅವರ personality develop ಆದದ್ದೂ ಹಾಗೆಯೇ. ಅವರು screen ನಲ್ಲಿ ಒಳ್ಳೆಯದು ಮಾಡಿ, ಅವರು ಹಾಗೆಯೇ ಒಳ್ಳೆಯವರು ಎಂಬ ಒಂದು ನಂಬಿಕೆ. ಆದರೆ ಈ ಕಾಲಘಟ್ಟದಲ್ಲಿ ಜನಗಳು ಸಿನಿಮಾ ಬೇರೆ ನಿಜ ಜೀವನ ಬೇರೆ ಎಂದುಕೊಂಡಿದ್ದಾರೆಯೇ ಇಲ್ಲ ಅಥವಾ ಇನ್ನೂ ಸಿನಿಮಾವನ್ನು ಅಂತಹ ಒಂದು propaganda tool ಆಗಿ ಈಗಲೂ ಬಳಸಬಹುದೇ?

ಪ.ರಂ: ಖಂಡಿತ ಹಾಗೆ ಮಾಡಲು ಸಾಧ್ಯವಿಲ್ಲ ಅಂದುಕೊಂಡಿರುವೆ. ಆದರೆ ಈಗ ಜನಗಳು ಹಾಗಿಲ್ಲ. ಕಾರಣ ಡಿಜಿಟಲ್ ಎಂಬ ಮಾಧ್ಯಮ ಹಲವು ರೀತಿಯಲ್ಲಿ ಕಥೆಗಳನ್ನು ಹೇಳುವ ರೀತಿಗಳನ್ನು ಸೃಷ್ಟಿಸಿದೆ. ಸಿನಿಮಾ ಹೇಗೆ ಪ್ರಮುಖವಾದ ಟೂಲ್ ಆಗಿದೆಯೋ ಹಾಗೆಯೇ ಇಂದು social media, you tube ಮುಂತಾದವು ಬಹಳಷ್ಟು ಕತೆಗಳನ್ನು ಹೇಳುತ್ತಾ ಬರುತ್ತಿದೆ. ಆದ್ದರಿಂದ ನೋಡುವವರೆಲ್ಲ ಅದನ್ನು ಜೀವನದಲ್ಲಿ ಹಾಗೆಯೇ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಮೊದಲು ಯಾರಾದರೂ ಹೇಳಿದರೆ ಒಂದು ಬೆಂಬಲದ ಮನೋಸ್ಥಿತಿ ಇತ್ತು. ಇಂದು ಏನನ್ನಾದರೂ ಹೇಳಿದರೇ ಅವನನ್ನು ಬೈದು, ಹೀಯಾಳಿಸಿದರೆ, ನಾಳೆ ಅದೇ ವ್ಯಕ್ತಿಯನ್ನು ಮತ್ತೊಂದು ವಿಷಯಕ್ಕೆ ಕೊಂಡಾಡುತ್ತಾರೆ. ಹಾಗೆ ಒಂದೇ ರೀತಿಯಲ್ಲಿ ಒಬ್ಬನನ್ನು / ಒಂದು ವಿಷಯವನ್ನು ಮುಂದುವರೆಸಿ ನೋಡುವ ಮನೋಭಾವ ಈಗ ಇಲ್ಲ.

ಭ.ರಂ: ನಿಮ್ಮ ಚಿತ್ರಗಳಿಗಿಂತ ಮಾರಿಸ್ ಸೆಲ್ವರಾಜ್ ಚಿತ್ರಗಳು ಸ್ವಲ್ಪ ಭಿನ್ನವಾದವು. ನಿಮ್ಮ ಚಿತ್ರಗಳಲ್ಲಿ people will fight back, ಆದರೆ ಅವರ ಸಿನಿಮಾಗಳಲ್ಲಿ ಒಂದು ಬಗೆಯ compromise ಮಾತುಗಳಿರುತ್ತವೆ. ನೀವು ಒಂದು ಬೇಟಿಯಲ್ಲಿ ಹೇಳಿದ್ದೀರಿ “if someone attacks you and then sympathises with you, there is no greater insult than that’ ಎಂದು.  ಅಂತಹ ಒಂದು ಮನೋಸ್ಥಿತಿಯಲ್ಲಿ ಹೇಗೆ ಆ ಸಿನಿಮಾವನ್ನು ಮಾಡಲು ಒಪ್ಪಿಕೊಂಡಿರಿ.

ಪ.ರಂ: ನನಗೂ ಅವನಿಗೂ ಆದ discussion ನಲ್ಲಿ ಅದನ್ನು ಕೇಳಿದೆ. `ಒಪ್ಪಿಕೊಂಡು compromise ಮಾಡಿಕೊಳ್ಳುವುದರಿಂದ ಮತ್ತಷ್ಟು ದಬ್ಬಾಳಿಕೆ ನಡೆಯುತ್ತದೆ. ಅದರ ವಿರುದ್ಧ ಧ್ವನಿ ಎತ್ತಬೇಕಾದ ಅವಶ್ಯಕತೆ ಈಗ ಇದೆ. ಅದನ್ನು ಅವನೂ ಸಹ ಒಪ್ಪಿಕೊಂಡ. ಆ ಸಿನಿಮಾದಲ್ಲಿ ಅಂತಹ ಒಂದು discussion ಬರುತ್ತದೆ. ಬದುಕು ಎಲ್ಲರಿಗೂ ಭಿನ್ನವಾಗಿರುತ್ತೆ. ನನಗೆ ದೊರೆತ ಬದುಕು ಎಲ್ಲರಿಗೂ ಸಿಗುವುದಿಲ್ಲ. ನನಗೆ resist ಮಾಡುವುದು ನನ್ನಲ್ಲಿ ಸಹಜವಾಗಿ ಇರುವ ಗುಣ. ಅಂತಹ ಅವಕಾಶಗಳು ನನಗೆ ದೊರಕಿತು, ಅವನ್ನು ನನ್ನ ಸಿನಿಮಾಗಳಲ್ಲಿ ತರಲು ಸಾಧ್ಯವಾಯಿತು. ಅದನ್ನು ಒಂದು ಪೊಲಿಟಿಕಲ್ statement ಆಗಿ ಹೇಳಲು ಸಾಧ್ಯವಾಯಿತು. ಆದರೆ ಇದೆ ಬುನಾದಿಯಲ್ಲಿ ಮಾರಿಸ್ ರಾಜನ ಬದುಕನ್ನ ನೋಡಿದರೆ ಅವನಿಗೆ ಬೇರೆಯೇ ಜೀವನ. ಅಂತಹ ಅನುಭವಗಳನ್ನು ಅವನು ಚಿತ್ರವಾಗಿ ಮಾಡುವಾಗ ಆ ಡಿeಚಿಟiಣಥಿ ಕೆಡದಂತೆ ಅವನು ಎಚ್ಚರಿಕೆ ವಹಿಸಿದ್ದಾನೆ. ಪಾಪ ಪರಿತಾಪ ಪಟ್ಟು ಒಬ್ಬರು ಯಾರಿಗೂ ಏನನ್ನೂ ಕೊಡಬಾರದು. ಅದನ್ನು ನಾನು ಬದಲಾಯಿಸಬೇಕೆಂದುಕೊಂಡಿರುವೆ. . ನಾನು ಈ ಸ್ಥಿತಿಯಲ್ಲಿದ್ದೇನೆ ಎಂದರೆ ಅದಕ್ಕೆ ನಿಮ್ಮ ಬದುಕು ಕಾರಣ. ಹಳ್ಳದಲ್ಲಿರುವವರಿಗೆ ಕೈನೀಡಿ ಮೇಲೆತ್ತುವುದಲ್ಲ ಬದಲಾವಣೆ. ನಂತರ ಆ ಹಳ್ಳವನ್ನು ಮುಚ್ಚುವ ಪ್ರಯತ್ನಮಾಡಬೇಕು.  ಆಗ ಮಾತ್ರ ಇಬ್ಬರೂ ಸಮನಾಗಿರಲು ಸಾಧ್ಯ. ಸಮತಟ್ಟಿನಲ್ಲಿ ಎಲ್ಲರೂ ಬಂದು ನಿಲ್ಲಲು ಸಾಧ್ಯವಿಲ್ಲ. ಜಾಗವಿಲ್ಲದೆ ಕೆಲವರು ಮತ್ತೆ ಹಳ್ಳಕ್ಕೆ ಬೀಳುತ್ತಾರೆ. ಇದು ನನಗೆ ಇಷ್ಟವಿಲ್ಲ. ಹಾಗಾಗದಿರಬೇಕಾದರೆ  ಹಳ್ಳವನ್ನು ಮುಚ್ಚಿದರೆ ಮಾತ್ರ ಸಾಧ್ಯ.

ಭ.ರಂ: ಅಂದರೆ ಆ ಚಿತ್ರದ ಸಂಭಾಷಣೆಗಳು ಇಬ್ಬರೂ discussion ಮಾಡಿ ಬರೆದದ್ದೇ.

ಪ.ರಂ: ಹಾಗೇನೂ ಇಲ್ಲ . ಅವನ ಕೆಲವು ಅಭಿಪ್ರಾಯಗಳೂ ಇವೆ, ನನ್ನದೂ ಕೆಲವಿದೆ. ನಾನು ಹೇಗೆ ಈ ಸಿನಿಮಾವನ್ನು ಮುಗಿಸಬೇಕೆಂದು ಕೊಂಡನೋ ಅದನ್ನೇ ಅವನೂ ಬಯಸಿದ. ದಲಿತ್ ಮನೋಭಾವವೇ ಸಮಾಜದ ಜತೆ ಕೂಡಿ ಬಾಳುವುದು. ಬೇರೆಯಾಗಿ ಹೋಗಿ ಬದುಕುವುದಲ್ಲ. ಊರು ಎಂದು ಒಂದಿರುತ್ತದೆ, ಕಾಲನಿ ಅಂತ ಮತ್ತೊಂದು. ಈ ಕಾಲನಿ ಅಂತ ಬೇರೆಯಾಗಿ ಇರುವಾಗ ಅದು ಬಹಳಷ್ಟು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಊರಲ್ಲಿ ಅವರೆಲ್ಲ ಒಂದಾಗಿರುವಾಗ ಮತ್ತೇಕೆ ಕಾಲನಿ ಎಂದು ನಮ್ಮನ್ನು ಬೇರೆಯಾಗಿ ಇಟ್ಟಿದ್ದಾರೆ ಎಂಬ ಭಾವನೆ ಉಂಟಾಗುತ್ತದೆ. ಎಲ್ಲ ದಲಿತರಿಗೂ ಊರೊಂದಿಗೆ ಕೂಡಿಬಾಳಬೇಕೆಂಬ ಮನೋಸ್ಥಿತಿಯೇ ಇರುವುದು. ಊರಿನ ಹೈಯರಾರ್ಕಿ ಸಿಸ್ಟೆಂ ಅನ್ನು ನಾನು ಪ್ರಶ್ನಿಸುತ್ತೇನೆ. ಅದನ್ನು ಕೆಡವಿದಾಗ ಮಾತ್ರವೇ ಸಮಾನತೆ ಸಾಧ್ಯ. ಅದನ್ನು ಮಾಡದೆ ಅವರ ಬದುಕಿನ ಮೇಲೆ ತೋರಿಸುವ ಪಾಪ ಪರಿತಾಪದ ನೋಟ ನನಗೆ ಬೇಕಿಲ್ಲ ಎಂದು ಹೇಳುವುದೇ ನನಗೆ ಮುಖ್ಯ. ನಾಗರಾಜ್ ಮಂಜುಳೆ ನಿರ್ದೇಶನದ ಮರಾಠಿ ಚಿತ್ರ Fandryಯ  ಕೊನೆಯ ದೃಶ್ಯದಲ್ಲಿ ಬರುವ, ಕಲ್ಲೆಸೆಯುವ ಒಬ್ಬ ಯುವಕಾನಾಗಿ  ಬದಲಾಗಬೇಕು ಎಂದು ಕೊಳ್ಳುವವನು ನಾನು. ಯಾಕೆಂದರೆ ನನ್ನ ದುಃಖ, ನೋವನ್ನು ನೋಡುತ್ತಿರುವಾಗ ಅದು ಕೊಡುವ ವ್ಯಸನವನ್ನು ಎದುರಿಸಬೇಕು.   ಮೊದಲು ಒಪ್ಪಿಕೊಳ್ಳಬೇಕು, ನಂತರ ಅದನ್ನು ಎದುರಿಸಬೇಕು. ಅದನ್ನು ಅವರು ಒಪ್ಪಿಕೊಳ್ಳದೆ `ಬಾ, ಕುಳಿತುಕೋ, ಮಾತನಾಡೋಣ’ ಎಂದರೆ ಹೇಗೆ ಸಾಧ್ಯ.

ಭ.ರಂ: `ಪರಿಯೇರುಮ್ ಪೆರುಮಾಳ್’ ಸಿನಿಮಾವನ್ನು ನೋಡುವಾಗ ನಿಮಗೆ ಯಾವ ಭಾವನೆ ಉಂಟಾಯಿತು?

ಪ.ರಂ: powerful film. ಖಂಡಿತ ಎಲ್ಲರಿಗೂ ಹಿಡಿಸುತ್ತದೆ. ನನಗೆ ಸಿನಿಮಾದಲ್ಲಿ ಹಿಡಿಸಿದ್ದು ಎರಡು ದೃಶ್ಯ. ಒಂದು ನಾನು ಡಾಕ್ಟರ್ ಅಂಬೇಡ್ಕರ್ ಆಗುವೆ ಎಂದು ಹೇಳುವುದು, ಪ್ರಿನ್ಸಿಪಲ್ ಮಾತನಾಡುವ ದೃಶ್ಯ , ಅವನನ್ನು ನೇಣು ಹಾಕಿಕೊಂಡು ಸಾಯಲೂ ಹೇಳುತ್ತೀಯ, ಅವನು ಎದುರಿಸಿ ಹೋರಾಡಲಿ, ಹೋರಾಡಿ ಸಾಯಲಿ’ ಎಂದು ಹೇಳುತ್ತಾರೆ. ಈ ಎರಡು ದೃಶ್ಯ ನನ್ನನ್ನು ತೃಪ್ತಿಗೊಳಿಸಿದ್ದು. ಅದಕ್ಕಾಗಿಯೇ

ಭ.ರಂ: ಕೊನೆಯದಾಗಿ `ಇರ್ಸಾಮುಂಡಾ’ ನಿಮ್ಮ ಮುಂದಿನ ಚಿತ್ರ. ಹಿಂದಿಯಲ್ಲಿ. ಒಬ್ಬ ಸ್ವಾತಂತ್ರ ಹೋರಾಟಗಾರನ ಬಗ್ಗೆಯ ಚಿತ್ರ. ಮತ್ತೊಂದು ಭಾಷೆಯಲ್ಲಿ ಮಾಡುವ ಮೊದಲ ಚಿತ್ರ . ಆ ಅನುಭವ ಹೇಗಿದೆ?

ಪ.ರಂ: ತಮಿಳು ಸಿನಿಮಾಗೂ , ಹಿಂದಿ ಸಿನಿಮಾಗೂ production style ನಲ್ಲಿಯೇ ಬಹಳ ವ್ಯತ್ಯಾಸಗಳಿವೆ. ಅವರು ಬಹಳ systematic ಆಗಿ ಕೆಲಸ ಮಾಡುತ್ತಾರೆ. ನಮ್ಮ ಕಡೆ ಹಾಗಿಲ್ಲ. ಅದನ್ನು ಒಪ್ಪಿಕೊಂಡು ನಾವು ಒಳಹೋಗಲೇ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಲ್ಲಿ ಮೊದಲು script final ಮಾಡಬೇಕು. ನಾನು script ತಯಾರಿಸಲು ಏಳೆಂಟು ತಿಂಗಳಾಯಿತು. ಮೊದಲು ನಾನು ಬರೆಯ ಬೇಕು ನಂತರ ಮತ್ತೊಬ್ಬ ಲೇಖಕನೊಂದಿಗೆ ಕುಳಿತು ಆ ಭಾಷೆಯಲ್ಲಿ ಬರೆಯಬೇಕು. ಅದಕ್ಕೆ ಮೂರು ನಾಲ್ಕು ತಿಂಗಳು ಸಮಯವಾಯಿತು. ಈಗ production team ಓದಿ feed back ಕೊಟ್ಟಿದೆ. ಇದಕ್ಕೆ ಬಹಳ ಸಮಯ ಹಿಡಿಸುತ್ತದೆ. ಅವರು ಶೂಟಿಂಗ್ ಹೋಗುವ ಮೊದಲೇ ಒಂದು ಫೈನಲ್ ಸ್ಕ್ರಿಪ್ಟ್ ಅನ್ನು ಅಪೇಕ್ಷಿಸುತ್ತಾರೆ. ಇದೊಂದು ಆರೋಗ್ಯಕರವಾದ ಸಂಗತಿ. ನಾನು ಶೂಟಿಂಗ್ ಸ್ಪಾಟ್ನಲ್ಲಿ ಬದಲಾವಣೆ ಮಾಡುವುದಿಲ್ಲ. ನಾನು ಮೊದಲು ಏನು ಬರೆದಿರುತ್ತೇನೋ ಅದನ್ನೇ ಶೂಟ್ ಮಾಡುವುದು. ಆದ್ದರಿಂದ ನನಗೆ ಇದು ಸಮಸ್ಯೆಯಲ್ಲ. ಆದರೆ ಅದು ಸ್ವಲ್ಪ slow process. ಇಲ್ಲಿ ತಮಿಳು ಸಿನಿಮಾಗಳಲ್ಲಿ  director ಮೇಲೆ ಒಂದು ನಂಬಿಕೆ ಇಟ್ಟಿರುತ್ತಾರೆ. ಅಲ್ಲಿ ಅದಿದ್ದರೂ  script ಬಗ್ಗೆ ಬಹಳ ಅವಲಂಬನೆ ಇರುತ್ತದೆ. ಸಿನಿಮಾ ಗೆಲ್ಲ ಬೇಕೆಂಬುದರ ಬಗ್ಗೆ ಅವರು ಮೊದಲೇ ಸ್ವಲ್ಪ ಎಚ್ಚರಿಕೆಯಿಂದ ಇರುತ್ತಾರೆ.

ಭ.ರಂ: ನಿಮ್ಮ ಸ್ಕ್ರಿಪ್ಟ್ ನಿಮಗೆ ಬಹಳ personal. ನೀವು ನಿಮಗೆ ಪರಿಚಯವಿರುವ ಕೇರೆಕ್ಟರ್ಗಳನ್ನು ಸಿನಿಮಾ ಸ್ಕ್ರಿಪ್ಟ್ ಮಾಡುವಂತಹವರಾಗಿರುವಾಗ, ನಿಮ್ಮ ತರಹದ ಅನುಭವವಿಲ್ಲದೆ, ಹೊರಗಿನಿಂದ ಇಬ್ಬರು ಬಂದು ಅಲ್ಲಿ ಬದಲಾವಣೆಗಳನ್ನು ಮಾಡುವಾಗ ನಿಮಗೆ conflict ಉಂಟಾಗುತ್ತದೆಯೇ?

ಪ.ರಂ: ಈ ಕಥೆ ಮಹಾಶ್ವೇತ ದೇವಿ ಬರೆದ `ಕಾಡಿನ ಹಕ್ಕು’ ಎಂಬ ಕಾದಂಬರಿ. ಆ ಕಾದಂಬರಿಯ ಹಕ್ಕನ್ನು ಪಡೆದು ಅದನ್ನು ಸ್ಕ್ರಿಪ್ಟ್ ಮಾಡಿದ್ದೇವೆ. ಮೊದಲು ಕಾದಂಬರಿಯನ್ನು ಅರ್ಥಮಾಡಿಕೊಳ್ಳಬೇಕು. ಅಂತಹ ಕಾದಂಬರಿ, ಬರಹಗಾರರನ್ನು ಗುರುತಿಸಬೇಕು. ಕೇವಲ ಕಾದಂಬರಿಯನ್ನು ಮಾತ್ರವೇ ಅರ್ಥ ಮಾಡಿಕೊಳ್ಳದೆ, ಅದರಲ್ಲಿಯ political ideology ಯನ್ನೂ ಅರ್ಥಮಾಡಿಕೊಳ್ಳುವ ಬರಹಗಾರರು ಬೇಕು ಅಂತಹವರನ್ನು ಹುಡುಕಿದೆವು. ಆಗ ಸುಲಭವಾಗುತ್ತದೆ.  ಹಾಗೆ political ideology differ ಆದರೆ ಈ ಸ್ಕ್ರಿಪ್ಟ್ ಅನ್ನು ಒಟ್ಟಾಗಿ ಕುಳಿತು ಬರೆಯುವುದು ಕಷ್ಟ. ನಾನು ತೆಗೆದ ಚಿತ್ರಗಳಲ್ಲೇ ಬಹಳಷ್ಟು ರಾಜಕೀಯ ಮಾತನಾಡುವ ಸಿನಿಮಾ ಬಹುಶಹಃ ಇರ್ಸಾಮುಂಡಾ ಇರಬಹುದು. ಅವರು ಬದುಕಿದ ಸಮಯದಲ್ಲಿ ಬಹಳ ದೊಡ್ಡ ಹೋರಾಟ ಮಾಡಿದ್ದಾರೆ. ಅವರು tribal ಜನಾಂಗದಲ್ಲಿ ಹುಟ್ಟಿ ಬೆಳೆದು, ತನ್ನ ಸುತ್ತ ಇರುವ ಸಮಾಜದ ಮೇಲೆ ಬಹಳ ದೊಡ್ಡ ಹೋರಾಟ ಮಾಡಿದ್ದಾರೆ. ವಿಶೇಷವಾಗಿ, ಭಾರತೀಯರನ್ನು ವಿರೋಧಿಸಿಯೂ, ಭೂಯಪಹರಣಕಾರರ ಎದುರಾಗಿ ಹೋರಾಡಿಯೂ, ಅದೇ ಸಮಯದಲ್ಲಿ, ಭಾರತೀಯರಿಗೆ ವಿರುದ್ಧವಾಗಿದ್ದ ಬ್ರಿಟಿಷರ ಎದುರಾಗಿಯೂ ಹೋರಾಡಿದವರು. ಇಂದಿಗೂ ಅಂತಹ ಘಟನೆಗಳು ಜಾರ್ಕಂಡ್ ಮುಂತಾದ ಸ್ಥಳಗಳಲ್ಲಿ ಭೂ ಅಪಹರಣದಂತಹ ನಡೆಯುತ್ತಿವೆ. ಇಂದಿನ ಪರಿಸ್ಥಿತಿಗೆ ಆ ಕಥೆ ಹಾಗೆಯೇ ಹೊಂದಿಕೊಳ್ಳುತ್ತದೆ. ಆದ್ದರಿಂದ ಇದೊಂದು ಪ್ರಮುಖವಾದ ರಾಜಕೀಯ ಸಿನಿಮಾವಾಗಿ ಆಗಲು ಸಾಧ್ಯತೆಗಳಿವೆ.

ಭ.ರಂ: ನೀವು ಹೇಳುವುದನ್ನು ನೋಡಿದರೆ, ಇದು ನಿಮ್ಮ ಬಹಳ ದೊಡ್ಡ production?

ಪ.ರಂ: ಹೌದು. ಬಹಳ ದೊಡ್ಡ production. ಇದರಲ್ಲಿ ಯುದ್ಧ ಇದೆ. ಬಹಳಷ್ಟು ಆಸಕ್ತಿಕರವಾದ ಕೇರಕ್ಟರ್ಗಳಿವೆ. ಅದನ್ನು ಬರೆಯುವಾಗಲೇ ಬಹಳ ಸಂತೋಷವಾಗಿತ್ತು. ಆ ಕೇರಕ್ಟರ್ಗಳ ಜತೆ ಸಂಭಾಷಿಸಲು ಸಾಧ್ಯವಾಯಿತು. ಬುಡಕತ್ತಿನ ಜನಾಂಗದ ಜೀವನವೂ ನಮ್ಮ ಜೀವನವೂ ಬಹಳ ವ್ಯತ್ಯಾಸವಾದದ್ದು. ನಾವು ಹೊರಗಿನಿಂದ ನೋಡುವುದಕ್ಕೂ ಅಲ್ಲಿರುವುದಕ್ಕೂ ಅಜಗಜಾಂತರ ವ್ಯತ್ಯಾಸ. ನಾವು ಅಂದುಕೊಳ್ಳುತ್ತೇವೆ ಬಹಳ ಮಾತನಾಡುವವನು ಹೀರೋ ಅಂತ ಆದರೆ ಅಲ್ಲಿ ಹಾಗಲ್ಲ, ಅಲ್ಲಿರುವ ಹತ್ತು ಜನಗಳೂ ಹೀರೋಗಳಾಗಿರುತ್ತಾರೆ. ಅವರೊಳಗೇ ಯಾವ ಭಿನಾಭಿಪ್ರಯಾಗಳೂ ಇರುವುದಿಲ್ಲ. ಆದರೆ ನಾವು ಏನು ಮಾಡ್ತೀವಿ ನಮ್ಮ ಸಿನಿಮಾಗಳಲ್ಲಿ, ಈ ಹತ್ತು ಜನರಲ್ಲಿ ಒಬ್ಬನನ್ನು ಮುಂದೆ ನಿಲ್ಲಿಸಿ, ನಾಯಕನನ್ನಾಗಿ ಮಾಡಿ, ಅವನನ್ನು ಸಾಯಿಸಿ, ಕೊನೆಗೆ ಆ ಹತ್ತು ಜನಗಳನ್ನು ಮೌನವಾಗಿಸುವುದೇ ಬಹಳ ದೊಡ್ಡ ರಾಜಕೀಯ. ಆದರೆ ಆ ಬುಡಕತ್ತಿನ ಜನ ಈ ಜೀವನಕ್ಕೆ ಪಳಗಳೇ ಇಲ್ಲ. ಈವರೆಗೂ ಅದೇ ಹೋರಾಟ ನಡೆಯುತ್ತಿದೆ..

ಭ.ರಂ: thank you so much. ಇಷ್ಟೊಂದು ಸಮಯ ನೀಡಿದ್ದಕ್ಕೆ.

ಪ.ರಂ: ನಿಮಗೂ ಧನ್ಯವಾದ.


Film Companion South ಗೆ ಭಾರಧ್ವಾಜ್ ರಂಗನ್ ಮಾಡಿದ ಸಂದರ್ಶನ

ಅನುವಾದ: ಕೆ. ನಲ್ಲತಂಬಿ

ಸಹಾಯ: ಯದುನಂದನ್ ಕೀಲಾರ

***

ಪ್ರತಿಕ್ರಿಯಿಸಿ