ಯಾವುದು ಮಾನಹಾನಿ?

ನಮ್ಮಲ್ಲಿ `ಮಾನನಷ್ಟ ಕಾಯ್ದೆ’ ಎಂಬುದು ಯಾವುದೂ ಇಲ್ಲ. ಈ ವಿಚಾರದಲ್ಲಿ ನಾವು ನ್ಯಾಯಾಧೀಶರು ರೂಪಿಸಿದ ಕಾನೂನುಗಳು, ಹಿರಿಯ ನ್ಯಾಯಶಾಸ್ತ್ರಜ್ಞರು ವಿಕಸಿಸಿದ ಕಾನೂನು ಹಾಗೂ ದೇಶದ ಕಾನೂನು ಸಮುದಾಯ ಮೂರು ಶತಮಾನಗಳಿಂದ ಒಪ್ಪಿಕೊಂಡು ಬಂದಿರುವ ಸಾಮಾನ್ಯ ನಿಯಮಗಳನ್ನು ಪಾಲಿಸುತ್ತಿದ್ದೇವೆ.

ಕೃಪೆ: The Criminal Law Blog

ಕೃಪೆ: The Criminal Law Blog

ವರದಿಗಾರರು ತಮ್ಮ ವೃತ್ತಿಜೀವನದಲ್ಲಿ ಎದುರಿಸುವ ಅಡೆತಡೆಗಳಲ್ಲೊಂದು ಮಾನನಷ್ಟ ಅಥವಾ ಮಾನಹಾನಿಯ ಬೆದರಿಕೆ. ಪ್ರಕಟಿತ ವರದಿಯಿಂದ ತಮ್ಮ ಘನತೆಗೆ ಕುಂದುಂಟಾಯಿತೆಂದು ವರದಿಗಾರರನ್ನು, ಮಾಧ್ಯಮ ಸಂಸ್ಥೆಯನ್ನು ನ್ಯಾಯಾಲಯಕ್ಕೆ ಎಳೆಯುವವರು ಸಾಕಷ್ಟು ಮಂದಿಯಿದ್ದಾರೆ. ಆ ಕಾರಣದಿಂದಲೇ ವರದಿಗಾರನಿಗೆ ತಾನು ಬರೆಯುವ ವರದಿಯಲ್ಲಿ ಯಾವ ಅಂಶ ಮಾನಿಹಾನಿಕರ ಆಗಿರಬಹುದು, ಯಾವುದು ಮಾನಹಾಕಿಕರವಲ್ಲ ಎನ್ನುವ ಪ್ರಾಥಮಿಕ ತಿಳಿವಳಿಕೆ ಅಗತ್ಯ.

ಮಾನನಷ್ಟ ಅಥವಾ ಮಾನಹಾನಿ ಅಂದರೆ ಏನು? ಬೇರೆ ಬೇರೆ ಜನ ಇದಕ್ಕೆ ಬೇರೆ ಬೇರೆ ಅರ್ಥ ನೀಡುತ್ತಾರೆ. ತನ್ನ ಮಾನಹಾನಿ ಆಗಿದೆ ಎಂದು ಯಾರೋ ಒಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿ, 100 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಪರಿಹಾರ ರೂಪದಲ್ಲಿ ಕೇಳಿದ್ದಾರೆ ಎಂಬ ಸುದ್ದಿಯನ್ನು ನೀವು ಗಮನಿಸಿರಬಹುದು. ಇಂತಹ ಪ್ರಕರಣಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತವಾದರೂ, ಇಂಥವು ದೇಶದಲ್ಲಿ ಒಂದು ದಶಕದ ಅವಧಿಯಲ್ಲಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಮಾತ್ರ ದಾಖಲಾಗುತ್ತವೆ. ನಾನು ವಕೀಲನಾಗಿ ಅಂತಹ ಎರಡು ಪ್ರಕರಣಗಳನ್ನು ನಿಭಾಯಿಸುತ್ತಿರುವ ಕಾರಣ, ಮಾನನಷ್ಟಕ್ಕೆ ಸಂಬಂಧಿಸಿದ ಒಂದೆರಡು ವಿಚಾರಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುವೆ.

ಸಮಾಜದಲ್ಲಿ ಸರಿಯಾದ ಮಾರ್ಗದಲ್ಲಿ ಸಾಗುತ್ತಿರುವ ವ್ಯಕ್ತಿಗಳ ಮನಸ್ಸಿನಲ್ಲಿ, ಇನ್ನೊಬ್ಬ ವ್ಯಕ್ತಿಗೆ ಇರುವ ಬೆಲೆಯನ್ನು, ಗೌರವವನ್ನು ಕಡಿಮೆ ಮಾಡುವಂತಹ ಯಾವುದೇ ಸುಳ್ಳು ಹೇಳಿಕೆ ಅಥವಾ ಮಾತು `ಮಾನಹಾನಿ’ಕರ. ಇಂತಹ ಮಾನಹಾನಿಕರ ಮಾತಿನ ಪರಿಣಾಮವಾಗಿ, ಸರಿಯಾದ ಮಾರ್ಗದಲ್ಲಿ ಸಾಗುವ ವ್ಯಕ್ತಿಗಳು, ಮಾನಹಾನಿಕರ ಮಾತನ್ನು ಹೇಳಿಸಿಕೊಂಡ ವ್ಯಕ್ತಿಯನ್ನು ತಮ್ಮ ಗುಂಪಿನಿಂದ ಹೊರಹಾಕಬಹುದು. ಮಾನಹಾನಿಕರ ಹೇಳಿಕೆಯನ್ನು ಸಾರ್ವಜನಿಕವಾಗಿಯೇ ನೀಡಿರಬೇಕು, ಅದು ಸಾಕಷ್ಟು ಜನರನ್ನು ತಲುಪಿರಬೇಕು ಎಂದೇನೂ ಇಲ್ಲ. ಅಂತಹ ಮಾತು, ಆ ಮಾತು ಆಡಿದ ವ್ಯಕ್ತಿ ಹಾಗೂ ಆ ಮಾತನ್ನು ಯಾರ ವಿರುದ್ಧ ಆಡಲಾಗಿದೆಯೋ ಅವನನ್ನು ಹೊರತುಪಡಿಸಿ, ಮೂರನೆಯ ಒಬ್ಬ ವ್ಯಕ್ತಿಯ ಕಿವಿಗೆ ಬಿದ್ದಿದೆ ಎಂದಾದರೆ ಸಾಕು; ಅದು ಮಾನಹಾನಿಕರ ಆಗುತ್ತದೆ. ನೀವು ಒಬ್ಬ ವ್ಯಕ್ತಿಯ ವಿರುದ್ಧ ತಪ್ಪು-ಕೆಟ್ಟ ಮಾತುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬರೆದು, ಅದನ್ನು ಮುಚ್ಚಿದ ಲಕೋಟೆಯಲ್ಲಿ ಅಂಚೆಯ ಮೂಲಕ ಆ ವ್ಯಕ್ತಿಗೇ ಕಳುಹಿಸಿದರೆ? ಅದನ್ನು ಆ ವ್ಯಕ್ತಿ ಹೊರತುಪಡಿಸಿ ಬೇರೆ ಯಾರೂ ಓದದಿದ್ದರೆ? ಅದು ಮಾನಹಾನಿ ಎಸಗಿದಂತೆ ಆಗುವುದಿಲ್ಲ.

ಇನ್ನೊಬ್ಬನಿಗೆ `ಅವಮಾನ’ ಮಾಡುವುದು `ಮಾನಹಾನಿ’ ಮಾಡಿದಂತೆ ಅಲ್ಲ. ವ್ಯಕ್ತಿಯೊಬ್ಬನನ್ನು `ನಾಯಿ’ ಎಂದೋ `ದೆವ್ವ’ ಎಂದೋ ಸಾರ್ವಜನಿಕವಾಗಿ ದೂಷಿಸುವುದು `ಅವಮಾನಿಸಿದಂತೆ’ ಎನ್ನುವುದಾದರೆ, ಅದು ಆ ವ್ಯಕ್ತಿಯ `ಮಾನಹಾನಿ’ ಮಾಡಿದಂತೆ ಅಲ್ಲ ಎಂಬುದನ್ನು ಗಮನಿಸಬೇಕು. `ನಾಯಿ’ ಎಂದು ಕರೆಸಿಕೊಂಡ ವ್ಯಕ್ತಿ, ಹಾಗೆ ಹೇಳಿದವನ ವಿರುದ್ಧ ಮೊಕದ್ದಮೆ ದಾಖಲಿಸಿದರೆ, `ಪ್ರತಿವಾದಿಯು ದೂರುದಾರರನ್ನು `ನಾಯಿ’ ಎಂದು ಕರೆದಿದ್ದಾರೆ; ದೂರುದಾರರು `ನಾಯಿ’ಯೇ ಮತ್ತು ದೂರುದಾರರು `ನಾಯಿ’ ಎಂಬುದನ್ನು ಪ್ರತಿವಾದಿಯು ನ್ಯಾಯಾಲಯದಲ್ಲಿ ಸಾಬೀತುಮಾಡಬಹುದೇ’ ಎಂದು ನ್ಯಾಯಾಲಯವು ದೋಷಾರೋಪ ನಿಗದಿ ಮಾಡುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲು ಆಗದು. ಯಾವುದು ಮಾನಹಾನಿ, ಯಾವುದು ಅವಮಾನ ಎಂಬುದು ಹಲವು ವಕೀಲರನ್ನೂ ಗೊಂದಲಕ್ಕೆ ದೂಡುತ್ತದೆ. ಈ ಅನಗತ್ಯ ಗೊಂದಲದಿಂದಾಗಿ ನ್ಯಾಯಾಲಯದ ಸಮಯ ಕೂಡ ವ್ಯರ್ಥವಾಗುತ್ತದೆ.

ಮಾನಹಾನಿಗೆ ಒಳಗಾದ ವ್ಯಕ್ತಿಗೆ ಭಾರತದಲ್ಲಿ ಎರಡು ಆಯ್ಕೆಗಳು ಇರುತ್ತವೆ. ಒಂದು ಆಯ್ಕೆ; ಹಣಕಾಸಿನ ಪರಿಹಾರ ಹಾಗೂ ಇತರ ಪರಿಹಾರ ಕೋರಿ ಆತ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಬಹುದು. ಇಂತಹ ಪ್ರಕರಣಗಳಲ್ಲಿ, ಪ್ರತಿವಾದಿಗೆ ತನ್ನನ್ನು ರಕ್ಷಿಸಿಕೊಳ್ಳಲು ಇರುವ ಪರಿಪೂರ್ಣ ಅಸ್ತ್ರ `ಸತ್ಯ’. `ಮಾನಹಾನಿಕ’ ಎಂಬ ಆರೋಪಕ್ಕೆ ಗುರಿಯಾದ ಹೇಳಿಕೆಯಲ್ಲಿ `ಸತ್ಯ’ವಿದೆ ಅಥವಾ `ಗಣನೀಯ ಪ್ರಮಾಣದ ಸತ್ಯ’ವಿದೆ ಎಂಬುದನ್ನು ಕೋರ್ಟ್‍ಗೆ ಮನವರಿಕೆ ಮಾಡಿಕೊಟ್ಟರೆ, ಮಾನಹಾನಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸುತ್ತದೆ.

ಇನ್ನೊಂದು ಆಯ್ಕೆ, ಮಾನಹಾನಿಕರ ಹೇಳಿಕೆ ನೀಡಿದವನ ವಿರುದ್ಧ ಕ್ರಿಮಿನಲ್ ನ್ಯಾಯಾಲಯದಲ್ಲಿ ಕ್ರಿಮಿನಲ್ ದಾವೆ ಹೂಡುವುದು. ಇಂತಹ ಪ್ರಕರಣಗಳಲ್ಲಿ ಪೊಲೀಸರ ಪಾತ್ರ ಏನೂ ಇರುವುದಿಲ್ಲ. `ನನ್ನ ಮಾನಹಾನಿ ಆಗಿದೆ’ ಎಂದು ನ್ಯಾಯಾಲಯಕ್ಕೆ ಸಂಪೂರ್ಣವಾಗಿ ಮನವರಿಕೆ ಮಾಡುವ ಹೊಣೆ ದೂರುದಾರನ ಮೇಲಿರುತ್ತದೆ. ಇಂತಹ ಪ್ರಕರಣಗಳಲ್ಲಿ `ಸತ್ಯ’ವೆಂಬುದು ಗಣನೀಯ ಪ್ರಮಾಣದಲ್ಲಿ ರಕ್ಷಣೆಗೆ ಬರುತ್ತದೆಯೇ ವಿನಾ ಅದು ಹೇಳಿಕೆ ನೀಡಿದವನನ್ನು ಪೂರ್ಣವಾಗಿ ರಕ್ಷಿಸದು. ತಾನು ಆಡಿದ `ಸತ್ಯ’ ಸಾರ್ವಜನಿಕ ಒಳಿತಿನ ಉದ್ದೇಶವನ್ನೂ ಹೊಂದಿತ್ತು ಎಂಬುದನ್ನು ಆರೋಪಿ ಸ್ಥಾನದಲ್ಲಿ ಇರುವವ ಸಾಬೀತು ಮಾಡಬೇಕಾಗುತ್ತದೆ. ಮಾತನಾಡಿದ್ದರಲ್ಲಿ `ಸತ್ಯ’ ಇದ್ದರೂ, ಅದರಲ್ಲಿ ಸಾರ್ವಜನಿಕ ಒಳಿತು ಏನೂ ಇರಲಿಲ್ಲ ಎಂಬಂತಹ ಹೇಳಿಕೆಗಳಲ್ಲಿ ಯಾವುದಾದರೂ ಒಂದನ್ನು ನೆನಪಿಸಿಕೊಳ್ಳಬಹುದೇ? ಹೇಳಿಕೆ `ಸತ್ಯ’ವಾಗಿದ್ದರೂ ಅದರಲ್ಲಿ ಸಾರ್ವಜನಿಕ ಹಿತ ಅಡಗಿರಲಿಲ್ಲ ಎಂದು ಕ್ರಿಮಿನಲ್ ಕೋರ್ಟ್‍ಗಳು ಹೇಳಿರುವ ಪ್ರಕರಣಗಳ ಸಂಖ್ಯೆ ಕಡಿಮೆ.

ಕಾನೂನಿನ ಈ ಶಾಖೆಯ ಸೂಕ್ಷ್ಮಗಳನ್ನು ಓದುಗರು ಅರ್ಥ ಮಾಡಿಕೊಳ್ಳಲು ಸಹಾಯ ಆಗುವ ನಿಟ್ಟಿನಲ್ಲಿ ಕೆಲವು ಉದಾಹರಣೆಗಳನ್ನು ನೀಡುತ್ತೇನೆ. ಈಗ ದಂಪತಿಯೊಬ್ಬರ ಪ್ರಕರಣವನ್ನು ಪರಿಶೀಲಿಸೋಣ. ಅವರು ಮದುವೆ ಆಗಿ ಹಲವು ವರ್ಷಗಳು ಸಂದಿವೆ. ಅವರು ಜನಸಾಮಾನ್ಯರು – ಅಂದರೆ ಖಾಸಗಿ ವ್ಯಕ್ತಿಗಳು – ಎಂಬುದನ್ನು ಇಲ್ಲೊಮ್ಮೆ ಉಲ್ಲೇಖಿಸುವೆ. ತನ್ನ ಪತ್ನಿ ಆದವಳಿಗೆ ಕಾಲೇಜಿನ ದಿನಗಳಲ್ಲಿ ಸಹಪಾಠಿಯೊಬ್ಬನ ಜೊತೆ ನಿಕಟ ಸಂಬಂಧ ಇತ್ತು ಎಂಬುದು ಪತಿಗೆ ಗೊತ್ತಿಲ್ಲ. ಆದರೆ, ಮದುವೆಯ ನಂತರದ ದಿನಗಳಲ್ಲಿ ಆಕೆ, ಆ ಸಹಪಾಠಿಯ ಜೊತೆ ಎಂದಿಗೂ ಸಂಪರ್ಕ ಸಾಧಿಸಿಲ್ಲ. ಇಬ್ಬರೂ ಹಿಂದಿನ ಪ್ರೇಮಸಂಬಂಧವನ್ನು ಮರೆತು ಜೀವನದಲ್ಲಿ ಮುಂದೆ ನಡೆದಿದ್ದಾರೆ. ಬಹುತೇಕ ಯಾರೂ ಕೂಡ ಈ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿಲ್ಲ. ಆದರೆ, ಒಬ್ಬ ವ್ಯಕ್ತಿ ಅವರ ಹಿಂದಿನ ಸಂಬಂಧದ ಬಗ್ಗೆ ಮಾತನಾಡುತ್ತಾನೆ. ಅದರ ಪರಿಣಾಮವಾಗಿ ಅವರ ವಿವಾಹ ಜೀವನ ಸಂಪೂರ್ಣವಾಗಿ ಹಾಳಾಗುತ್ತದೆ. ಪ್ರೇಮಸಂಬಂಧ ಇತ್ತು ಎಂಬುದನ್ನು ಒಪ್ಪಿಕೊಂಡು, ಆಕೆ ಆ ವ್ಯಕ್ತಿಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಬಹುದೇ? ಮಾನನಷ್ಟ ಕಾನೂನಿನ ಅಡಿ ಆಕೆ ಆ ವ್ಯಕ್ತಿಯಿಂದ ಪರಿಹಾರ ಕೇಳಬಹುದೇ? ಅದರ ಬದಲು, ಆಕೆ ಆ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರೆ ಪರಿಸ್ಥಿತಿ ಭಿನ್ನವಾಗಿ ಇರುತ್ತದೆಯೇ?

ವಿಚಾರಣೆಯ ಆರಂಭದಲ್ಲೇ, ಆಕೆ ಸಿವಿಲ್ ನ್ಯಾಯಾಲಯದ ಎದುರು ತನ್ನ ಪ್ರೇಮ ಸಂಬಂಧದ ಬಗ್ಗೆ ಒಪ್ಪಿಕೊಂಡರೆ, ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಕೋರ್ಟ್‍ಗೆ ಕಷ್ಟವಾಗುತ್ತದೆ? ಏಕೆಂದರೆ, `ಸತ್ಯ’ ಎಂಬುದು ಆ ವ್ಯಕ್ತಿಯ ರಕ್ಷಣೆಗೆ ಬರುತ್ತದೆ. ಒಂದು ವೇಳೆ ಆಕೆ, ಆ ವ್ಯಕ್ತಿ ತನ್ನ ವಿರುದ್ಧ ಸುಳ್ಳು ಹೇಳಿದ್ದಾನೆ ಎಂದು ಆರೋಪಿಸಿದರೂ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸುವುದು ಕೋರ್ಟ್‍ಗೆ ಕಷ್ಟವಾಗುತ್ತದೆ. ಏಕೆಂದರೆ, ಕಾಲೇಜು ಜೀವನದಲ್ಲಿ ಪ್ರೇಮಸಂಬಂಧ ಹೊಂದಿದ್ದ ಹೆಣ್ಣುಮಗಳನ್ನು ಸಮಾಜದ ಗಣ್ಯರು ದೂರ ಇರಿಸಿಬಿಡುತ್ತಾರೆ ಎಂದು ಕೋರ್ಟ್ ಭಾವಿಸುವುದಿಲ್ಲ. ಆದರೆ, ನಮ್ಮ ಸಮಾಜದ ಹಲವರು ಇಂತಹ ಹೆಣ್ಣುಮಗಳನ್ನು ದೂರ ಇರಿಸುವ ಸಾಧ್ಯತೆ ಹೆಚ್ಚು ಎಂಬುದು ವಾಸ್ತವ.

ಹೀಗಿದ್ದರೂ, ಮಾನನಷ್ಟಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವಾಗ, ಕೆಲವು ಸಂದರ್ಭಗಳಲ್ಲಿ ಕೋರ್ಟ್, ವಾಸ್ತವದ ಸಮಾಜವನ್ನು ತನ್ನ ಮನಸ್ಸಿನಲ್ಲಿ ಇರಿಸಿಕೊಳ್ಳಲು ಆಗುವುದಿಲ್ಲ. ಅದು ಋಜು ಮಾರ್ಗದಲ್ಲಿ ಆಲೋಚನೆ ಮಾಡುವ ವ್ಯಕ್ತಿಗಳಿಂದ ತುಂಬಿರುವ ಆದರ್ಶ ಸಮಾಜವೊಂದನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಬೇಕಾಗುತ್ತದೆ. ಅಂದರೆ, ಸರಿಯಾದ ರೀತಿಯಲ್ಲಿ ಆಲೋಚನೆ ಮಾಡುವ ವ್ಯಕ್ತಿಗಳಿಂದ ತುಂಬಿದ ಜಗತ್ತಿನಲ್ಲಿ, ಸಹಪಾಠಿಯೊಬ್ಬನನ್ನು ಪ್ರೀತಿಸುವ ಹೆಣ್ಣುಮಗಳನ್ನು ಸಮಾಜ ದೂರ ಇರಿಸುವುದೂ ಇಲ್ಲ, ಅದರಿಂದ ಆಕೆಯ ಘನತೆ ಕಡಿಮೆ ಆಗುವುದೂ ಇಲ್ಲ. ಅಂಥದ್ದೊಂದು ಸಮಾಜವು, ಅಗತ್ಯ ಕಂಡುಬಂದರೆ ಆ ಹೆಣ್ಣುಮಗಳಿಗೆ ಮಾರ್ಗದರ್ಶನ ನೀಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಸತ್ಯ ಏನು ಎಂಬುದನ್ನು ತಿಳಿದುಕೊಳ್ಳುವುದು ಅನಗತ್ಯವೆಂದೂ, ಆ ಮಾತು ಸತ್ಯವಲ್ಲದಿದ್ದರೂ ಅದು ಮಾನನಷ್ಟಕ್ಕೆ ಸಮ ಎಂದು ಪರಿಭಾವಿಸಲಾಗದು ಎಂದೂ ಸಿವಿಲ್ ನ್ಯಾಯಾಲಯ ಹೇಳಬಹುದು. ಆದರೆ, ಆ ಹೆಣ್ಣುಮಗಳು ಆ ವ್ಯಕ್ತಿಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲೇ ಬೇರೆ ಆಧಾರಗಳನ್ನು ಇಟ್ಟುಕೊಂಡು ದಾವೆ ಹೂಡಲು ಸಾಧ್ಯವಿಲ್ಲ ಎಂದು ಅಲ್ಲ.

ವಾಸ್ತವವಾಗಿ, ಆಕೆ ಆ ವ್ಯಕ್ತಿಯ ವಿರುದ್ಧ ಬೇರೊಂದು ಬಗೆಯಲ್ಲಿ ದಾವೆ ಹೂಡಬಹುದು. ತನಗೆ ಮಾನಸಿಕವಾಗಿ ಹಿಂಸೆಯಾಗುವಂತೆ ಆತ ನಡೆದುಕೊಂಡಿದ್ದಾನೆ, ಹಾಗಾಗಿ ಆತನಿಂದ ತನಗೆ ಪರಿಹಾರ ಕೊಡಿಸಿ ಎಂದು ಆಕೆ ಕೇಳಬಹುದು. ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಬೇರೆ ಬೇರೆ ಬಗೆಯ ಪ್ರಕರಣಗಳು ಆ ಪ್ರಕರಣಕ್ಕೆ ಸಂಬಂಧಿಸಿದವರು ಸತ್ಯವನ್ನು ಸಾಬೀತುಪಡಿಸಬೇಕಾದ ವಿಚಾರದಲ್ಲಿ ಬೇರೆ ಬೇರೆ ಬಗೆಯ ಹೊಣೆಗಾರಿಕೆಯನ್ನು ನಿಗದಿ ಮಾಡುತ್ತವೆ. ಮೇಲೆ ಹೇಳಿದ ಪ್ರಕರಣಗಳಂಥವುಗಳಲ್ಲಿ, ಆಕೆ ಮಾಡಿದ ಆರೋಪವನ್ನು ಸುಳ್ಳೆಂದು ಸಾಬೀತು ಮಾಡಲು ಆ ವ್ಯಕ್ತಿಗೆ ಆಗುವುದಿಲ್ಲ; ಪರಿಹಾರ ರೂಪದಲ್ಲಿ ನಿರ್ದಿಷ್ಟ ಮೊತ್ತ ಪಾವತಿ ಮಾಡಬೇಕು ಎಂದು ಸಿವಿಲ್ ನ್ಯಾಯಾಲಯ ಆ ವ್ಯಕ್ತಿಗೆ ತಾಕೀತು ಮಾಡುತ್ತದೆ. ಇಂಥ ಸಂದರ್ಭಗಳಲ್ಲಿ, ಹೇಳಿಕೆಯ ಸತ್ಯಾಸತ್ಯತೆಯು ನ್ಯಾಯಾಲಯದ ಪಾಲಿಗೆ ಅಷ್ಟೊಂದು ಮುಖ್ಯ ಆಗುವುದಿಲ್ಲ. ಆ ವ್ಯಕ್ತಿ ಹೇಳಿದ್ದು ಸತ್ಯವನ್ನು ಆಧರಿಸಿದ್ದು ಹೌದೋ ಅಲ್ಲವೋ ಎಂಬುದನ್ನು ತೀರ್ಮಾನಿಸುವುದೇ ಅನಗತ್ಯ ಎಂದು ನ್ಯಾಯಾಲಯ ಹೇಳಬಹುದು. ಆ ವ್ಯಕ್ತಿ ಪರಿಹಾರದ ಮೊತ್ತ ಕೊಡಬೇಕಿರುವುದು ಹೆಣ್ಣುಮಗಳೊಬ್ಬಳ ಇತಿಹಾಸವನ್ನು ಕೆದಕಿ, ಆಕೆಗೆ ಮಾನಸಿಕವಾಗಿ ಹಿಂಸೆ ಆಗುವಂತೆ ಮಾಡಿದ್ದಕ್ಕೆ; ಆ ವ್ಯಕ್ತಿ ನೀಡಿದ ಹೇಳಿಕೆ ಸತ್ಯವೋ ಸುಳ್ಳೋ ಎಂಬುದು ಮುಖ್ಯವಲ್ಲ ಎಂದು ಕೋರ್ಟ್ ಹೇಳಬಹುದು. ಆ ಹೇಳಿಕೆ ಅನಗತ್ಯವಾಗಿತ್ತು, ಅದು ಅರ್ಜಿದಾರರಿಗೆ ದೊಡ್ಡ ಮಟ್ಟದಲ್ಲಿ ನೋವು ಕೊಟ್ಟಿತು, ಮಾನಸಿಕ ಯಾತನೆಗೆ ಕಾರಣವಾಯಿತು ಎಂಬುದು ಸಾಬೀತಾದರೆ ಸಾಕು.

ಈಗ ಕ್ರಿಮಿನಲ್ ಮಾನನಷ್ಟ ಪ್ರಕರಣಗಳ ಕಡೆ ಗಮನ ಹರಿಸೋಣ. ಇದರ ಪರಿಕಲ್ಪನೆಯು ಸಿವಿಲ್ ಮಾನನಷ್ಟಕ್ಕಿಂತ ಬೇರೆಯದೇನೂ ಅಲ್ಲ? ವ್ಯಾಖ್ಯಾನದಲ್ಲಿ ಅವರೆಡೂ ಒಂದೇ. ಅರ್ಜಿ ಸಲ್ಲಿಸಿದ ಆ ಹೆಣ್ಣುಮಗಳು ಕಾಲೇಜಿನಲ್ಲಿ ಇದ್ದಾಗ ಪ್ರೇಮಸಂಬಂಧ ಹೊಂದಿದ್ದಳು ಎಂಬ ಹೇಳಿಕೆ ಆಕೆಯ ಮಾನಹಾನಿ ಮಾಡಿದ್ದಕ್ಕೆ ಸಮ ಎಂದು ಕ್ರಿಮಿನಲ್ ಕೋರ್ಟ್ ಭಾವಿಸಿ, ವಿಚಾರಣೆ ಮುಂದುವರಿಸಲು ತೀರ್ಮಾನಿಸಿದರೆ, ಆರೋಪಿ ಸ್ಥಾನದಲ್ಲಿ ನಿಂತ ಆ ವ್ಯಕ್ತಿಯಿಂದ ಎರಡು ವಿಚಾರ ಬಯಸುತ್ತದೆ. ಆ ಹೆಣ್ಣುಮಗಳು ಪ್ರೇಮಸಂಬಂಧ ಹೊಂದಿದ್ದು ಸತ್ಯ ಎಂದು ಸಾಬೀತು ಮಾಡಲು ಸಾಧ್ಯವೇ ಎನ್ನುವುದು ಒಂದನೆಯದು. ಅದನ್ನು ಸಾರ್ವಜನಿಕವಾಗಿ ಹೇಳಿದ್ದರ ಹಿಂದಿನ `ಸಾರ್ವಜನಿಕ ಒಳಿತಿನ’ ಉದ್ದೇಶ ಏನು ಎಂಬುದು ಎರಡನೆಯದು. ಹಾಗಾಗಿ, ಆ ವ್ಯಕ್ತಿ ಆ ಹೆಣ್ಣುಮಗಳ ಬಗ್ಗೆ ಆಡಿದ ಮಾತು ಸತ್ಯ ಎಂದು ಕೋರ್ಟ್‍ಗೆ ಸಂಪೂರ್ಣವಾಗಿ ಮನವರಿಕೆ ಮಾಡಿದರೂ, ಆ ರೀತಿ ಹೇಳಿದ್ದರ ಹಿಂದೆ ಸಾರ್ವಜನಿತ ಹಿತದ ಉದ್ದೇಶ ಇತ್ತು ಎಂಬುದನ್ನು ಸಾಬೀತು ಮಾಡುವುದು ಕಷ್ಟದ ಕೆಲಸವಾಗುತ್ತದೆ. ಹಾಗಾಗಿ, ಅಂತಹ ಸಂದರ್ಭಗಳಲ್ಲಿ ಹಾಗೆ ಹೇಳಿಕೆ ನೀಡಿದ ವ್ಯಕ್ತಿ ದೋಷಿಯಾಗುತ್ತಾನೆ. ಇಂತಹ ಪ್ರಕರಣಗಳಲ್ಲಿ ಗರಿಷ್ಠ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಭಾರತೀಯ ದಂಡಸಂಹಿತೆಯ ಸೆಕ್ಷನ್ 499ರಿಂದ 503ರವರೆಗೆ ಕ್ರಿಮಿನಲ್ ಮಾನನಷ್ಟಕ್ಕೆ ಸಂಬಂಧಿಸಿದವು.

ಸಿವಿಲ್ ಮಾನನಷ್ಟವು ದೇಶದ ಯಾವುದೇ ಕಾನೂನಿನಲ್ಲಿ ಅಡಕವಾಗಿರುವಂಥದ್ದಲ್ಲ. ಅಂದರೆ, ನಮ್ಮಲ್ಲಿ `ಮಾನನಷ್ಟ ಕಾಯ್ದೆ’ ಎಂಬುದು ಯಾವುದೂ ಇಲ್ಲ. ಈ ವಿಚಾರದಲ್ಲಿ ನಾವು ನ್ಯಾಯಾಧೀಶರು ರೂಪಿಸಿದ ಕಾನೂನುಗಳು, ಹಿರಿಯ ನ್ಯಾಯಶಾಸ್ತ್ರಜ್ಞರು ವಿಕಸಿಸಿದ ಕಾನೂನು ಹಾಗೂ ದೇಶದ ಕಾನೂನು ಸಮುದಾಯ ಮೂರು ಶತಮಾನಗಳಿಂದ ಒಪ್ಪಿಕೊಂಡು ಬಂದಿರುವ ಸಾಮಾನ್ಯ ನಿಯಮಗಳನ್ನು ಪಾಲಿಸುತ್ತಿದ್ದೇವೆ.

ವ್ಯಕ್ತಿಯೊಬ್ಬನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ ನ್ಯಾಯಾಲಯಕ್ಕೆ ಎಳೆದಾಗ, `ನಾನು ದೋಷಿ ಅಲ್ಲ. ಬೇರೆಯವರು ಈಗಾಗಲೇ ಹೇಳಿರುವುದನ್ನು ನಾನು ಪುನರುಚ್ಚರಿಸಿದ್ದೇನೆ. ಬೇರೆಯವರು ಈ ಮಾತನ್ನು ಪರಿಣಾಮಗಳ ಬಗ್ಗೆ ಲೆಕ್ಕಿಸದೆ ಮತ್ತೆ ಮತ್ತೆ ಹೇಳುತ್ತಲೇ ಬಂದಿರುವಾಗ ನಾನು ನನ್ನ ಮಾತು ಸತ್ಯ ಎಂಬುದನ್ನು ಸಾಬೀತು ಮಾಡಬೇಕಾಗಿ ಇಲ್ಲ’ ಎಂದು ಹೇಳುವಂತೆ ಇಲ್ಲ. ಇದನ್ನು ಪುನರಾವರ್ತನೆಯ ನಿಯಮ ಎನ್ನಲಾಗುತ್ತದೆ.

ಹಾಗಾಗಿ, ವ್ಯಕ್ತಿಯೊಬ್ಬ ತನ್ನ ಮನೆಕೆಲಸದವಳ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಒಬ್ಬ ಹೇಳಿದರೆ, ಅದಕ್ಕೆ ಪ್ರತಿಯಾಗಿ ಆ ವ್ಯಕ್ತಿ ಸಿವಿಲ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದರೆ, `ಇದನ್ನು ಈಗಾಗಲೇ ಹಲವರು ಹೇಳಿದ್ದಾರೆ’ ಎಂಬ ವಾದ ಪ್ರಯೋಜನಕ್ಕೆ ಬರುವುದಿಲ್ಲ. `ಅ’ ಎನ್ನುವ ವ್ಯಕ್ತಿಯನ್ನು ಹಲವರು `ಅತ್ಯಾಚಾರಿ’ ಎಂದು ಹಲವು ವರ್ಷಗಳಿಂದ ಕರೆಯುತ್ತಿದ್ದರೂ, ಆ ವಿಚಾರವಾಗಿ `ಅ’ ಏನನ್ನೂ ಮಾಡದೆ ಇದ್ದರೂ, ನೀವು ಅದೇ ಮಾತು ಆಡಿದಾಗ, `ಅ’ ನಿಮ್ಮ ವಿರುದ್ಧ ಮೊಕದ್ದಮೆ ದಾಖಲಿಸಬಹುದು. ಆದರೆ ಇಂತಹ ಸಂದರ್ಭದಲ್ಲಿ ನೀವು, `ಅ ಎಂಬ ವ್ಯಕ್ತಿಯು ಅತ್ಯಾಚಾರ ನಡೆಸಿದ್ದಾನೆ ಎಂದು ಸಾರ್ವಜನಿಕವಾಗಿ ಹಲವರು ಹೇಳಿದ್ದಾರೆ. ಆದರೆ ಆ ಸಂದರ್ಭಗಳಲ್ಲಿ ಆತ ಏನೂ ಮಾಡಿಲ್ಲ. ಆ ಮಾತುಗಳನ್ನೆಲ್ಲ ಸಹಿಸಿಕೊಂಡಿದ್ದಾನೆ. ಅವಕಾಶ ಇದ್ದರೂ, ತನ್ನ ಬಗ್ಗೆ ಹಿಂದೆ ಹೀಗೆ ಮಾತನಾಡಿದವರನ್ನು ಕೋರ್ಟ್‍ಗೆ ಎಳೆದಿಲ್ಲ’ ಎಂಬುದನ್ನು ನೀವು ಕೋರ್ಟ್‍ಗೆ ಮನವರಿಕೆ ಮಾಡಿಕೊಟ್ಟರೆ, ಕೋರ್ಟ್ ಆತನಿಗೆ ನಿಮ್ಮಿಂದ ಹೆಚ್ಚಿನ ಮೊತ್ತದ ಪರಿಹಾರ ಕೊಡಿಸಲಿಕ್ಕಿಲ್ಲ, ಅಷ್ಟೆ.

ಮಾನಹಾನಿ ಎಸಗಿದ್ದೀರಿ ಎಂದು ನಿಮ್ಮ ವಿರುದ್ಧ ವ್ಯಕ್ತಿಯೊಬ್ಬ ಸಿವಿಲ್ ಕ್ರಮ ಜರುಗಿಸಬೇಕು ಎಂಬ ಬಯಕೆ ಹೊಂದಿದ್ದರೆ ಆತ ಅದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಬೇಕು. ಆತ ಕೊಡುವ ನೋಟಿಸ್‍ಗೆ ನೀವು ಹೇಗೆ ಪ್ರತಿಕ್ರಿಯೆ ಕೊಡುತ್ತೀರಿ ಎಂಬುದು ಅತ್ಯಂತ ಮಹತ್ವದ್ದು – ಆತ ಮುಂದೆ ನಿಮ್ಮ ವಿರುದ್ಧ ಕೋರ್ಟ್‍ನಲ್ಲಿ ದಾವೆ ಹೂಡಿದರೆ. ಸಿವಿಲ್ ಮಾನನಷ್ಟ ಮೊಕದ್ದಮೆಗಳ ವಿಚಾರದಲ್ಲಿ, ಮಾನಹಾನಿ ಆಗುವ ಕ್ರಿಯೆ ನಡೆದ ಒಂದು ವರ್ಷದೊಳಗೆ ಮೊಕದ್ದಮೆ ಹೂಡಬೇಕು. `ಮಾನಹಾನಿ ನಡೆದ ಕ್ರಿಯೆ’ ಅಂದರೆ ಮಾನಹಾನಿಕರ ವರದಿ ಪ್ರಕಟವಾದ ಅಥವಾ ಪ್ರಸಾರವಾದ ದಿನಾಂಕ ಅಲ್ಲ. ಮಾನಹಾನಿಕರ ವರದಿ ದೂರುದಾರ ತನ್ನ ಗಮನಕ್ಕೆ ಬಂತು ಎಂದು ಹೇಳಿಕೊಳ್ಳುವ ದಿನವೂ ಅಲ್ಲ. ಅದರ ಅರ್ಥ, ಮಾನಹಾನಿಕರವಾದ ವರದಿಯ ಬಗ್ಗೆ ದೂರುದಾರ ಎಷ್ಟು ಬೇಗ ತಿಳಿದುಕೊಳ್ಳಲು ಸಾಧ್ಯವಿತ್ತೋ ಆ ದಿನ. ಕ್ರಿಮಿನಲ್ ಮಾನನಷ್ಟ ಪ್ರಕರಣಗಳಲ್ಲಿ, ಮೂರು ವರ್ಷಗಳ ಒಳಗೆ ಮ್ಯಾಜಿಸ್ಟ್ರೇಟರ ಎದುರು ದೂರು ದಾಖಲಾಗಬೇಕು.

ನೀವು ವ್ಯಕ್ತಿಯೊಬ್ಬನ ಬಗ್ಗೆ ಒಂದು ತನಿಖೆ ನಡೆಸಿ ಅದರ ಬಗ್ಗೆ ವರದಿ ಬರೆಯುತ್ತೀರಿ ಎಂದಾದರೆ, ಆ ವ್ಯಕ್ತಿಯ ಜೊತೆ ನೀವು ಮಾತನಾಡುವುದು ಯುಕ್ತ. ನೀವು ತನಿಖೆಯ ಮೂಲಕ ಕಂಡುಕೊಂಡ ವಿಷಯಗಳ ಬಗ್ಗೆ ಆತನಿಂದ ಪ್ರತಿಕ್ರಿಯೆ ಪಡೆದುಕೊಳ್ಳಬೇಕು. ಆದರೆ ವಾಸ್ತವದಲ್ಲಿ, ವರದಿಯಲ್ಲಿ ಪ್ರಕಟವಾಗುವ ವಿಷಯಗಳು ವ್ಯಕ್ತಿಗೆ ಧಕ್ಕೆ ಆಗುವಂಥವಾಗಿದ್ದರೆ, ಆ ವ್ಯಕ್ತಿ ಪ್ರತಿಕ್ರಿಯೆ ನೀಡಲು ನಿರಾಕರಿಸುತ್ತಾನೆ, ವರದಿ ಪ್ರಕಟವಾದರೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಬೆದರಿಸುವ ಸಾಧ್ಯತೆ ಇರುತ್ತದೆ, ವರದಿ ಪ್ರಕಟವಾಗದಂತೆ ಮಾಡುವ ಉದ್ದೇಶ ಬೆದರಿಕೆಯ ಹಿಂದೆ ಇರುತ್ತದೆ. ಇಷ್ಟಾದ ನಂತರವೂ, ನೀವು ವರದಿ ಪ್ರಕಟಿಸಿದರೆ ಆತ ತನ್ನ ವಕೀಲರ ಮೂಲಕ ನಿಮಗೆ ನೋಟಿಸ್ ಜಾರಿಗೊಳಿಸಿ, ಮಾನನಷ್ಟ ಮೊಕದ್ದಮೆಯ ಬೆದರಿಕೆ ಒಡ್ಡಬಹುದು. ಆಗ ನಿಮಗೆ ಈ ವಿಚಾರ ತಿಳಿದಿರಬೇಕು: ನೀವು ತನಿಖೆಯ ಮೂಲಕ ಕಂಡುಕೊಂಡ ವಿಷಯಗಳ ಬಗ್ಗೆ ಸ್ಪಷ್ಟನೆ ಅಥವಾ ಅವುಗಳ ನಿರಾಕರಣೆಗೆ ಹೋಗದೆಯೇ ಆ ವ್ಯಕ್ತಿ ನಿಮ್ಮನ್ನು ಕೋರ್ಟ್ ಕಟಕಟೆಗೆ ಎಳೆಯುವುದಾಗಿ ಬೆದರಿಸಿದರೆ, ನಿಮ್ಮ ವರದಿಯ ಬಹುಪಾಲು ಅಂಶಗಳು ಅಥವಾ ಕೆಲವು ಅಂಶಗಳು ಸತ್ಯ ಎಂದು ಆತನೇ ದೃಢಪಡಿಸುತ್ತಿದ್ದಾನೆ ಎಂದು ಅರ್ಥ!

ಈಗ, ನಾವು ಈ ಬರಹದ ಆರಂಭದಲ್ಲಿ ಚರ್ಚಿಸಿದ ವಿಷಯದತ್ತ ಮರಳಿ ಬರೋಣ. ಮಾನನಷ್ಟ ಎಂಬುದು ಸುಳ್ಳು ಹೇಳಿಕೆಗಳಿಗೆ ಸಂಬಂಧಿಸಿದ್ದು. ಹಾಗಾದರೆ, ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಏನಾಗಬಹುದು? ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೂ ಮಾನನಷ್ಟ ಎಂದು ಆರೋಪಿಸಿ, ಪ್ರಕರಣ ದಾಖಲಿಸಬಹುದೇ? ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಹಾಗೆ ಮಾಡಬಹುದು. ನೀವು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸತ್ಯದ ನೆಲೆಗಟ್ಟು ಇದ್ದಲ್ಲಿ, ಕೋರ್ಟ್‍ನಲ್ಲಿ ನಿಮಗೆ ಸಮಸ್ಯೆ ಆಗುವುದಿಲ್ಲ. ಆದರೆ, ನಿಮ್ಮ ವರದಿಯು ಒಂದಿಷ್ಟು ಸತ್ಯ ಸಂಗತಿಗಳ ಸಾರ ಮಾತ್ರವೇ ಆಗಿದ್ದು, ಆ ಸತ್ಯ ಸಂಗತಿಗಳು ನಿಮ್ಮ ಬಳಿಯಾಗಲಿ, ನಿಮ್ಮ ವರದಿಯಲ್ಲಾಗಲಿ ಇಲ್ಲದಿದ್ದರೆ, ನೀವು ವ್ಯಕ್ತಪಡಿಸಿದ ಅಭಿಪ್ರಾಯ ಕೂಡ ಮಾನಹಾನಿಕರ ಆಗಬಹುದು.

ಮೇಲೆ ಉಲ್ಲೇಖಿಸಲಾದ ಕಾಲೇಜು ಹುಡುಗಿಯ ಉದಾಹರಣೆಯನ್ನು ಮತ್ತೆ ನೋಡೋಣ. ಮದುವೆಯಾದ ನಂತರ ಆ ಹೆಣ್ಣುಮಗಳು, ತನ್ನ ಪತಿಗೆ ನಿಷ್ಠಳಾಗಿ ಇರುವ ಸಾಧ್ಯತೆ ಇಲ್ಲ, ಮದುವೆಯ ಚೌಕಟ್ಟಿನಲ್ಲಿ ಇದ್ದೂ ಅವಳು ವಿವಾಹೇತರ ಸಂಬಂಧ ಹೊಂದುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ನೀವು ವ್ಯಕ್ತಪಡಿಸಿದಲ್ಲಿ, ಆಕೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ, ಅದರಲ್ಲಿ ಜಯ ಸಾಧಿಸಬಹುದೇ? ‘ಹೌದು’ ಎನ್ನಬೇಕಾಗುತ್ತದೆ. ಸಂಪ್ರದಾಯವಾದಿಗಳಲ್ಲಿ ಹಲವರು ನೀವು ಹೊಂದಿರುವ ಅಭಿಪ್ರಾಯವನ್ನೇ ಹೊಂದಿದ್ದರೂ, ನೀವು ಮಾನನಷ್ಟದ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಕಷ್ಟ. ಸಮಾಜದಲ್ಲಿ ಇತರ ಹಲವರು ಹೊಂದಿರಬಹುದಾದ ಅಭಿಪ್ರಾಯವನ್ನೇ ನೀವೂ ಹೊಂದಿದ್ದೀರಿ, ಹಾಗಾಗಿ ನೀವು ಮಾನನಷ್ಟ ಎಸಗಿಲ್ಲ ಎಂದು ಕೋರ್ಟ್ ಹೇಳುವುದಿಲ್ಲ. ವಾಸ್ತವ ಸಂಗತಿಗಳಿಗೆ ಮೀರಿದ ಅಭಿಪ್ರಾಯ ದಾಖಲಿಸಿದ್ದಕ್ಕಾಗಿ ನಿಮ್ಮನ್ನು ಕೋರ್ಟ್ ಹೊಣೆಗಾರನನ್ನಾಗಿ ಮಾಡುತ್ತದೆ.

ಮಾನನಷ್ಟಕ್ಕೆ ಸಂಬಂಧಿಸಿದ ವಿಚಾರವಾಗಿ ವ್ಯಕ್ತಿಗಳ ಬಗ್ಗೆ ಬರೆಯುವಾಗ, ನಿರ್ದಿಷ್ಟ ವಿಷಯದಲ್ಲಿ ವ್ಯಕ್ತಿಯೊಬ್ಬನ ಖಾಸಗಿತನದ ವ್ಯಾಪ್ತಿ ಕೂಡ ಬಹುವಾಗಿ ಪರಿಗಣನೆಗೆ ಬರುತ್ತದೆ. ಖಾಸಗಿತನದ ವ್ಯಾಪ್ತಿ ಎಂಬುದು ಅದಕ್ಕೆ ಸಂಬಂಧಿಸಿದ ಕಾನೂನಿಗೆ ಅನುಗುಣವಾಗಿ ತೀರ್ಮಾನವಾಗುತ್ತದೆ.

ಉದಾಹರಣೆಗೆ, ತೃಪ್ತಿಕರ ವಿವರಣೆ ನೀಡಲಾಗದಷ್ಟು ಆಸ್ತಿಯನ್ನು ಭಾರತದ ಯಾವುದೇ ಸರ್ಕಾರಿ ಸೇವಕ ಹೊಂದಿರುವಂತೆ ಇಲ್ಲ. ಅಷ್ಟು ಆಸ್ತಿ ಹೊಂದಿದ್ದರೆ ಆತನನ್ನು ಏಳು ವರ್ಷಗಳ ಅವಧಿಗೆ ಜೈಲಿಗೆ ಕಳುಹಿಸಲು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988 ಅವಕಾಶ ಕಲ್ಪಿಸಿಕೊಡುತ್ತದೆ. ಆದಾಯ ಮೀರಿದ ಆಸ್ತಿಯನ್ನು ಸಂಪಾದಿಸಿದ್ದೇ ಭ್ರಷ್ಟ ಮಾರ್ಗದ ಮೂಲಕ ಎಂದು ಪರಿಭಾವಿಸಲಾಗುತ್ತದೆ. ಸರ್ಕಾರಿ ಸೇವಕ ಯಾವ ಭ್ರಷ್ಟ ಮಾರ್ಗದ ಮೂಲಕ ಅದನ್ನು ಸಂಪಾದಿಸಿದ ಎಂದು ತೋರಿಸುವ ಅಗತ್ಯ ಪ್ರಾಸಿಕ್ಯೂಷನ್‍ಗೆ ಇರುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಸರ್ಕಾರಿ ಹುದ್ದೆ ಹಾಗೂ ಆ ಹುದ್ದೆಯನ್ನು ಹೊಂದಿದ್ದ ಅವಧಿಯಲ್ಲಿ ಅಕ್ರಮ ಆಸ್ತಿಯಲ್ಲಿ ಆದ ಏರಿಕೆಯೇ ವ್ಯಕ್ತಿಯೊಬ್ಬನನ್ನು ಶಿಕ್ಷೆಗೆ ಗುರಿಪಡಿಸಲು ಕೋರ್ಟ್‍ಗಳಿಗೆ ಸಾಕಾಗುತ್ತವೆ. ಹಲವು ಕಾನೂನುಗಳ ಪ್ರಕಾರ ವಿವಿಧ ವರ್ಗಗಳ ಸರ್ಕಾರಿ ಸೇವಕರು ಸರ್ಕಾರದ ಜೊತೆ ಗುತ್ತಿಗೆ ಅಥವಾ ವಾಣಿಜ್ಯಕ ಸಂಬಂಧ ಹೊಂದುವಂತೆ ಇಲ್ಲ. ಹೀಗಿರುವಾಗ, ಸರ್ಕಾರಿ ಸೇವಕನು ಸರ್ಕಾರದ ಹುದ್ದೆಯಲ್ಲ್ಲಿ ಇದ್ದ ಅವಧಿಯಲ್ಲಿ ಸಂಪಾದಿಸಿದ ಆಸ್ತಿಯ ವಿಚಾರದಲ್ಲಿ ಖಾಸಗಿತನ ಎಂಬುದು ಇಲ್ಲ.

ಸರ್ಕಾರಿ ಸೇವಕನೊಬ್ಬನ ಕುಟುಂಬದ ಸದಸ್ಯರು ಭಾರಿ ಪ್ರಮಾಣದಲ್ಲಿ ಆಸ್ತಿ ಸಂಪಾದಿಸುತ್ತಿರುವುದು ನಿಮ್ಮ ಗಮನಕ್ಕೆ ಬಂದರೆ, ಈ ಹಿಂದೆ ಅವರ ಬಳಿ ಇದ್ದ ಆಸ್ತಿ ಕಡಿಮೆ ಎಂಬುದು ನಿಮಗೆ ಗೊತ್ತಿದ್ದರೆ, ಅವರ ಕುಟುಂಬದ ಒಬ್ಬ ವ್ಯಕ್ತಿ ಸರ್ಕಾರಿ ಸೇವಕ ಆದ ತಕ್ಷಣ ಆಸ್ತಿಯ ಪ್ರಮಾಣದಲ್ಲಿ ಏರಿಕೆ ಆಗಿದ್ದು ಹೇಗೆ ಎಂಬ ಪ್ರಶ್ನೆಯನ್ನು ನೀವು ಅವರ ಮುಂದೆ ಇರಿಸಬಹುದು. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದ ಸಂದರ್ಭದಲ್ಲಿ, ಸತ್ಯಸಂಗತಿಯನ್ನು ನೀವು ಬರೆಯಬಹುದು. ಅದರ ಜೊತೆ ನಿಮ್ಮ ಅನಿಸಿಕೆಯನ್ನೂ ವ್ಯಕ್ತಪಡಿಸಬಹುದು? ಆ ಸರ್ಕಾರಿ ಸೇವಕನು ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ತನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸುತ್ತಿರುವ ಸಾಧ್ಯತೆ ಇದೆ ಎಂದು ಕೂಡ ಹೇಳಬಹುದು. ಹೀಗೆ ಹೇಳುವಾಗ ನಿಮಗೆ ಒಂದು ವಿಚಾರ ಸ್ಪಷ್ಟವಾಗಿ ಗೊತ್ತಿರಬೇಕು. ಆ ಸರ್ಕಾರಿ ಸೇವಕನ ಕುಟುಂಬದ ಸದಸ್ಯರು ತಮ್ಮ ಪ್ರತಿಭೆಯನ್ನು ಬಳಸಿ ಆ ಮಟ್ಟದ ಆಸ್ತಿಯನ್ನು ಚಿಕ್ಕ ಅವಧಿಯಲ್ಲಿ ಸಂಪಾದಿಸಿರಲು ಸಾಧ್ಯವಿಲ್ಲ ಎನ್ನುವುದು ನಿಮಗೆ ಖಚಿತವಾಗಿ ತಿಳಿದಿರಬೇಕು. ಆ ಸರ್ಕಾರಿ ಸೇವಕ ಅಥವಾ ಅವನ ಕುಟುಂಬದ ಸದಸ್ಯರು ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದರೆ, ಕುಟುಂಬದ ಸದಸ್ಯರ ವಹಿವಾಟುಗಳ ದಾಖಲೆ ನಿಮ್ಮ ಬಳಿ ಇರುವುದಿಲ್ಲ. ಏಕೆಂದರೆ, ಖಾಸಗಿ ವ್ಯಕ್ತಿಯ ವಹಿವಾಟುಗಳ ದಾಖಲೆಗಳು ಲಭ್ಯವಿರುವುದಿಲ್ಲ. ಆಗ, ಅವರ ವಹಿವಾಟುಗಳು ಅನುಮಾನಾಸ್ಪದವಾಗಿವೆ ಎಂದು ಕೋರ್ಟ್‍ಗೆ ಮನವರಿಕೆ ಮಾಡಿಕೊಡಲು ನಿಮ್ಮಿಂದ ಆಗುವುದಿಲ್ಲ. ಹೀಗಿದ್ದರೂ, ಮಾನಹಾನಿ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಒಂದು ಅನುಕೂಲ ಇರುತ್ತದೆ. ಸಾರ್ವಜನಿಕ ಸೇವಕನ ಕುಟುಂಬದ ಸದಸ್ಯರು ಅಷ್ಟೊಂದು ಆಸ್ತಿಯನ್ನು ಆ ಸಾರ್ವಜನಿಕ ಸೇವಕನ ಅಧಿಕಾರಾವಧಿಯಲ್ಲಿ ಹೇಗೆ ಸಂಪಾದಿಸಿದರು ಎಂಬುದರ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸೂಚಿಸುವಂತೆ ಕೋರ್ಟ್‍ಗೇ ನೇರವಾಗಿ ಮನವಿ ಮಾಡಿಕೊಳ್ಳಬಹುದು. ಇಂತನ ಮನವಿಗಳನ್ನು ಕೋರ್ಟ್ ಪುರಸ್ಕರಿಸುತ್ತದೆ. ಅಂತಹ ದಾಖಲೆಗಳ ಪ್ರತಿಯನ್ನು ಮಾನಹಾನಿ ಎಸಗಿದ ಆರೋಪ ಎದುರಿಸುತ್ತಿರುವವನಿಗೆ ಕೊಡುವಂತೆ ಕೋರ್ಟ್ ಸೂಚನೆ ನೀಡುತ್ತದೆ. ಇಂಥ ಕಾನೂನು ಅವಕಾಶಗಳೆಲ್ಲ ಲಭ್ಯವಾಗುವುದು ಪ್ರಕಟಿತ ವರದಿಯು ತಾರ್ಕಿಕ ಅಂಶಗಳನ್ನು ಹೊಂದಿದ್ದರೆ ಮಾತ್ರ. ಆಶ್ಚರ್ಯದ ಸಂಗತಿಯೆಂದರೆ, ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಲಭ್ಯವಿರುವ ಈ ಆಯ್ಕೆಯನ್ನು ಬಹುತೇಕ ವಕೀಲರು ಬಳಸಿಕೊಳ್ಳುವುದಿಲ್ಲ.

ಕೆಲವು ನಡಾವಳಿಗಳನ್ನು ಅವು ನಡೆದಂತೆಯೇ ನೀವು ಪ್ರಕಟ ಮಾಡಿದರೆ, ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬರುವುದಿಲ್ಲ. ಉದಾಹರಣೆಗೆ, ಸಂಸತ್ತಿನ ಅಥವಾ ವಿಧಾನಮಂಡಲಗಳ ಭಾಷಣ/ಚರ್ಚೆಗಳಲ್ಲಿ ವ್ಯಕ್ತವಾದ ಅನಿಸಿಕೆ-ಅಭಿಪ್ರಾಯಗಳನ್ನು ಕಡತಗಳಿಂದ ತೆಗೆದುಕೊಂಡು ಬರೆದರೆ, ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಅವಕಾಶ ಇಲ್ಲ. ಏಕೆಂದರೆ, ಅಂತಹ ಮಾತುಗಳನ್ನು ಶಾಸನ ಸಭೆಗಳಲ್ಲಿ ಆಡಿದವರ ವಿರುದ್ಧವೇ ಮಾನನಷ್ಟ ಮೊಕದ್ದಮೆ ದಾಖಲಿಸಲು ಅವಕಾಶವಿಲ್ಲ. ಅವರಿಗೆ ಮಾನಹಾನಿಯಂತಹ ಪ್ರಕರಣಗಳಿಂದ ಸಂಪೂರ್ಣ ರಕ್ಷಣೆ ಇರುತ್ತದೆ. ಅದೇ ರೀತಿ, ನ್ಯಾಯಾಧೀಶರು, ಸಾಕ್ಷಿಗಳು, ವಕೀಲರು ನ್ಯಾಯಾಂಗದ ಕಲಾಪಗಳ ವೇಳೆ ಆಡುವ ಮಾತುಗಳಿಗೆ ಮಾನನಷ್ಟ ಮೊಕದ್ದಮೆಯಿಂದ ರಕ್ಷಣೆ ಇರುತ್ತದೆ.

ಮಾನನಷ್ಟಕ್ಕೆ ಸಂಬಂಧಿಸಿ ಕಾನೂನು ಉದ್ದೇಶ ಶುದ್ಧಿ ಇರುವ ವ್ಯಕ್ತಿಗಳನ್ನು ಯಾವಾಗಲೂ ರಕ್ಷಿಸುತ್ತದೆ. ನೀವು ಸಾರ್ವಜನಿಕ ಹಿತಕ್ಕಾಗಿ ಕೆಲಸ ಮಾಡಿದ್ದರೆ, ವ್ಯಕ್ತಿಯೊಬ್ಬನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಾಗ ಲಕ್ಷ್ಮಣರೇಖೆಯನ್ನು ದಾಟದಿದ್ದರೆ, ಅಮಾಯಕನ ಹಾಗೂ ಅಪರಾಧಿಯ ಭಾವನೆಗಳ ಬಗ್ಗೆ ಸೂಕ್ಷ್ಮ ಅರಿವು ಹೊಂದಿದ್ದರೆ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಸಾರ್ವಜನಿಕ ಹಿತಕ್ಕಿಂತ ದೊಡ್ಡದಾಗಿ ಪರಿಗಣಿಸದೆ ಇದ್ದರೆ ಮಾನನಷ್ಟ ಕಾನೂನು ನಿಮ್ಮನ್ನು ಬಾಧಿಸುವುದಿಲ್ಲ. ಈ ಕಾನೂನು ಶತಮಾನಗಳಿಂದ ವಿಕಸನ ಹೊಂದುತ್ತ ಬಂದಿದೆ. ಈ ಮೇಲೆ ಹೇಳಿದ ಗುಣಗಳನ್ನು ಪ್ರದರ್ಶಿಸುವ ವ್ಯಕ್ತಿಯನ್ನು ರಕ್ಷಿಸುವ ಸದಾಶಯ ಹೊಂದಿದೆ.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


ಪ್ರತಿಕ್ರಿಯಿಸಿ