ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: ೧ – “ಕಾವ್ಯ ಎಂಬ ಒಗಟು”

ಇಂದು ೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನ. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ.   ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಮೊದಲ ಭಾಗ ಋತುಮಾನ ದ ಓದುಗರಿಗಾಗಿ.

ಮೊದಲಿಗೆ, ನನ್ನಿಂದ ಏನನ್ನು ಅಪೇಕ್ಷಿಸಬಹುದು, ಏನನ್ನು ಅಪೇಕ್ಷಿಸಲಾಗದು ಅಂತ ಸ್ಪಷ್ಟ ಪಡಿಸಿಬಿಡುತ್ತೇನೆ. ಈ ನನ್ನ ಮೊಟ್ಟಮೊದಲ ಉಪನ್ಯಾಸಕ್ಕೆ ಶೀರ್ಷಿಕೆ ಕೊಡುವಲ್ಲಿ ನಾನು ಎಡವಿದ ಹಾಗೆ ಕಾಣುತ್ತಿದೆ. ಈ “ಕಾವ್ಯ ಎಂಬ ಒಗಟು”, ಎಂಬ ಶೀರ್ಷಿಕೆಯಲ್ಲಿ ಹೆಚ್ಚು ಒತ್ತು ಇರುವುದು ನಿಜವಾಗಿ “ಒಗಟು” ಶಬ್ದದ ಮೇಲೆ. ಹಾಗಾಗಿ, ಒಗಟು ತುಂಬಾ ಮುಖ್ಯ ಸಂಗತಿ ಎಂದು ನೀವು ಯೋಚಿಸಬಹುದು. ಅದಕ್ಕಿಂತ ಹೆಚ್ಚಾಗಿ, ಅದೇನೋ ಈ ಒಗಟನ್ನು ನಾನು ಬಿಡಿಸಬಲ್ಲೆ ಎನ್ನುವ ನಂಬಿಕೆ ನನಗಿದೆ ಎಂದು ನೀವು ಬಗೆಯಬಹುದು. ಸತ್ಯ ಏನೆಂದರೆ, ನನ್ನ ಬಳಿ ಯಾವುದೇ ದಿವ್ಯಜ್ಞಾನ ಇಲ್ಲ. ಜೀವನವಿಡೀ ಓದುವುದು, ವಿಶ್ಲೇಷಿಸುವುದು, ಬರೆಯುವುದು (ಅಥವಾ ಬರೆಯಲೆತ್ನಿಸುವುದು), ಮತ್ತು ಸಂತೋಷದಿಂದ ಇರುವುದನ್ನಷ್ಟೇ ನಾನು ಮಾಡುತ್ತ ಬಂದಿದ್ದೇನೆ. ನಾನು ಕಂಡಿರುವ ಹಾಗೆ, ಈ ಕೊನೆಯದಿದೆಯಲ್ಲ, ಸಂತೋಷದಿಂದ ಇರುವುದು, ಅದೇ ಎಲ್ಲಕ್ಕಿಂತ ಮುಖ್ಯವಾದದ್ದು. ಕಾವ್ಯವನ್ನು ಆಸ್ವಾದಿಸುತ್ತ ಈ ಮಾತನ್ನು ಮನಗಂಡಿದ್ದೇನೆ. ನಿಜವೆಂದರೆ, ಪ್ರತಿಸಲ ಖಾಲಿ ಕಾಗದ ನನ್ನ ಮುಂದಿದ್ದಾಗಲೂ, ನನ್ನ ಮಟ್ಟಿಗಾದರೂ ಸಾಹಿತ್ಯವನ್ನು ಮರುಶೋಧಿಸಿಕೊಳ್ಳಬೇಕೆಂದು ನನಗೆ ಅನಿಸುತ್ತಲಿರುತ್ತದೆ. ಈ ನಿಟ್ಟಿನಲ್ಲಿ, ಹಿಂದಿನದು ನನಗೆ ಅಷ್ಟಾಗಿ ಏನೂ ಉಪಯೋಗಕ್ಕೆ ಬಾರದು. ಆದ್ದರಿಂದ, ಮೊದಲು ನಮೂದಿಸಿದಂತೆ, ನಿಮ್ಮ ಮುಂದೆ ಹೇಳಲು ನನ್ನ ಬಳಿ ಇರೋದು ನನ್ನ ಗೊಂದಲಗಳೇ ಆಗಿವೆ. ವಯಸ್ಸಲ್ಲಿ ಎಪ್ಪತ್ತರ ಸಮೀಪ ಇರುವ ನಾನು, ನನ್ನ ಬಾಳಿನ ಬಹುತಾಂಶ ಭಾಗವನ್ನು ಸಾಹಿತ್ಯಕ್ಕೆ ನೀಡಿದ್ದರೂ ಕೂಡ ನಾನೀಗ ನಿಮ್ಮ ಮುಂದೆ ಪ್ರಸ್ತುತಪಡಿಸಬಹುದಾದ ಸಂಗತಿ ಎಂದರೆ ಸಂದೇಹಗಳು.

ಹೊಸ ಸಮಸ್ಯೆಯೊಂದನ್ನು ಶೋಧಿಸುವುದು ಹಳೆಯ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಷ್ಟೇ ಮಹತ್ವದ್ದು ಎನ್ನುತ್ತಾನೆ ಇಂಗ್ಲೀಷಿನ ಮಹಾನ ಲೇಖಕ ಥಾಮಸ್ ಡಿ ಕ್ವಿನ್ಸಿ ತನ್ನ ಹದಿನಾಲ್ಕು ಸಂಪುಟಗಳ ಸಾವಿರಾರು ಪುಟಗಳ ಬರವಣಿಗೆಯಲ್ಲಿ ಒಂದು ಕಡೆ. ಹಾಗೆ ಹಳೆಯದನ್ನು ಸಹ ಕೊಡುವ ಸ್ಥಿತಿ ನನ್ನದಲ್ಲ. ಕಾಲಾನುಕಾಲದಿಂದ ತಿಳಿದಿರುವ ಗೊಂದಲಗಳನ್ನಷ್ಟೇ ನಾನು ನಿಮ್ಮೆದುರು ಇಡಬಲ್ಲೆ. ಆದರೂ, ನಾನೇಕೆ ಈ ಕುರಿತು ಚಿಂತೆ ಮಾಡಲಿ? ತತ್ವಶಾಸ್ತ್ರದ ಚರಿತ್ರೆ ಎಂದರೆ, ಹಿಂದುಗಳ, ಚೀನೀಯರ, ಗ್ರೀಕರ, ಬಿಷಪ್ ಬರ್ಕ್ಲಿಯ, ಹ್ಯೂಮನ, ಶೋಪೆನ್ಹೂವರನ, ಇತ್ಯಾದಿಗಳ ಸಮಸ್ಯೆಗಳದೇ ಇತಿಹಾಸವಲ್ಲದೇ ಮತ್ತೇನು? ನಾನಂತೂ, ಇವೆಲ್ಲ ಸಮಸ್ಯೆಗಳನ್ನು ಮಾತ್ರ ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.

ಸೌಂದರ್ಯಶಾಸ್ತ್ರದ ಪುಸ್ತಕಗಳಲ್ಲಿ ಕಣ್ಣಾಡಿಸಿದಾಗೆಲ್ಲ, ನಕ್ಷತ್ರಗಳತ್ತ ಎಂದೂ ಕಣ್ಣೆತ್ತಿ ನೋಡಿರದ ಖಗೋಳ ಶಾಸ್ತ್ರಜ್ಞರ ಕೃತಿಗಳನ್ನು ಓದುತ್ತಿರುವ ಹಾಗೆ ನನಗೆ ಕಿರಿಕಿರಿಯ ಭಾಸವಾಗುತ್ತದೆ. ಅವರು ಬರೆಯುವುದನ್ನು ನೋಡಿದರೆ ಕಾವ್ಯ ಎಂದರೆ ಅದರ ನಿಜವಾದ ಅಂಶಗಳಾದ ಭಾವೋತ್ಸಾಹ, ಆನಂದದ ಬದಲು, ಅದೇನೋ ಕರ್ತವ್ಯವೋ ಅನ್ನುವಂತಿದೆ. ಉದಾಹರಣೆಗೆ ನಾನು ಬೆನೆಡಿತೋ ಕ್ರೋಷೆಯ ಸೌಂದರ್ಯಶಾಸ್ತ್ರದ ಕುರಿತಾದ ಪುಸ್ತಕವನ್ನು ತುಂಬಾ ಗೌರವದಿಂದ ಓದಿದೆ, ಮತ್ತು ಅದರಲ್ಲಿ ಸಿಕ್ಕ ಕಾವ್ಯದ ವ್ಯಾಖ್ಯೆ ಎಂದರೆ ಕಾವ್ಯ ಮತ್ತು ಭಾಷೆ ಎನ್ನುವವು ಒಂದು “ಅಭಿವ್ಯಕ್ತಿ”. ನಾವು ಯಾವುದರ ಅಭಿವ್ಯಕ್ತಿಯ ಕುರಿತು ಯೋಚಿಸಿದರೂ ಸಹ ರೂಪ ಮತ್ತು ವಿಷಯ ಎಂಬ ಹಳೆಯ ಪ್ರಶ್ನೆಯನ್ನೇ ಕೈಗೆತ್ತಿಕೊಳ್ಳ ಬೇಕಾಗುತ್ತದೆ; ಅಥವಾ ನಾವು ಯಾವುದೇ ನಿರ್ದಿಷ್ಟ ಅಭಿವ್ಯಕ್ತಿಯ ಕುರಿತು ಮಾತನಾಡದಿದ್ದರೆ, ಹೇಳಲು ಏನೂ ಉಳಿಯುವುದಿಲ್ಲ. ಹಾಗಾಗಿ, ನಾವು ಭಯಭಕ್ತಿಯಿಂದ ಅಂತಹ ವ್ಯಾಖ್ಯೆಯನ್ನು ಸ್ವೀಕರಿಸುತ್ತೇವೆ, ಮತ್ತು ಮುಂದಕ್ಕೆ ಮತ್ತೊಂದು ವಿಷಯದತ್ತ, ಕಾವ್ಯದತ್ತಲೋ, ಬದುಕಿನತ್ತಲೋ, ಹೊರಳುತ್ತೇವೆ. ಮತ್ತು ಬದುಕು ಕಾವ್ಯದಿಂದಲೇ ಮಾಡಿರುವಂತದ್ದು. ಕಾವ್ಯವೇನೂ ಪರದೇಶಿಯಲ್ಲ – ಕಾವ್ಯವೆನ್ನುವುದು, ಮುಂದೆ ವಿಶದಪಡಿಸಿರುವಂತೆ, ನಮ್ಮ ಸುತ್ತಲಲ್ಲೇ ಎಲ್ಲಿಯೋ ಇರುತ್ತದೆ. ಅದು ಯಾವ ಕ್ಷಣದಲ್ಲೂ ಧುತ್ತೆಂದು ನಮ್ಮೆದುರು ಬರಬಹುದು.

ನಾವೀಗ ಒಂದು ಸರ್ವೇಸಾಮಾನ್ಯವಾದ ಗೊಂದಲಕ್ಕೆ ಬೀಳುವ ಸಾಧ್ಯತೆ ಇದೆ. ನಮಗನಿಸುತ್ತದೆ, ಉದಾಹರಣೆಗೆ, ಹೋಮರನನ್ನೋ, ಡಿವೈನ್ ಕಾಮೆಡಿಯನ್ನೋ, ಫ್ರೆ ಲೂಯಿ ಲಿಯಾಂನನ್ನೋ, ಮ್ಯಾಕ್ಬೆತ್ ನನ್ನೋ ಓದಿದರೆ ನಾವು ಕಾವ್ಯವನ್ನು ಓದುತ್ತಿದ್ದೀವಿ ಎಂದು. ಆದರೆ, ಪುಸ್ತಕಗಳು ಕಾವ್ಯಕ್ಕೊಂದು ಸಂಧರ್ಭ ಮಾತ್ರ.

ಗ್ರಂಥಾಲಯ ಎನ್ನೋದು ಸತ್ತವರು ಇರುವ ಒಂಥರದ ಮಾಯಾಗುಹೆ ಅಂದಿದ್ದಾನೆ, ಎಮರ್ಸನ್ ಅದೆಲ್ಲೋ ಒಂದು ಕಡೆ. ಸತ್ತವರು ಮತ್ತೆ ಹುಟ್ಟಬಹುದು, ಅವರನ್ನು ಜೀವಂತಗೊಳಿಸಲು ಸಾದ್ಯವಿರುವುದು ಅವರ ಪುಟಗಳನ್ನು ತೆರೆದಾಗ.

ಬಿಷಪ್ ಬರ್ಕ್ಲಿ ಅವರ ಒಂದು ಮಾತನ್ನು ಹೇಳಬೇಕೆಂದರೆ (ನಿಮಗೆ ನೆನಪಿಸುತ್ತೇನೆ, ಅವರು ಅಮೇರಿಕಾದ ಉನ್ನತಿಯ ಪ್ರವಾದಿ), ಅವರು ಬರೆದಿದ್ದಾರೆ ಸೇಬಿನ ರುಚಿ ಸೇಬಿನಲ್ಲಿರುವುದಿಲ್ಲ ಎಂದು. ಯಾಕೆಂದರೆ ಸೇಬು ತನ್ನ ರುಚಿ ತಾ ನೋಡಲಾಗದು – ತಿನ್ನುವವರ ಬಾಯಿಯಲ್ಲಿಯೂ ಇರುವುದಿಲ್ಲ. ಅವೆರಡರ ಸಂಪರ್ಕ ಅಗತ್ಯ. ಪುಸ್ತಕ, ಅಥವಾ ಗ್ರಂಥಾಲಯದ ಸಂಧರ್ಭದಲ್ಲೂ ಹಾಗೇ ಆಗುತ್ತದೆ. ತನ್ನಲ್ಲಿ ತಾನು ಪುಸ್ತಕ ಏನಾದೀತು? ಭೌತಿಕ ಪದಾರ್ಥಗಳ ವಿಶ್ವದಲ್ಲಿ ಮತ್ತೊಂದು ಭೌತಿಕ ಪದಾರ್ಥ ಅಷ್ಟೇ. ಅದೊಂದು ಸತ್ತ ಸಂಕೇತಗಳ ಕಂತೆ. ಯಾವಾಗ ಓದುಗ ಸಂಪರ್ಕಕ್ಕೆ ಬರುತ್ತಾನೋ, ಆಗ ಶಬ್ದಗಳು – ನಿಜವೆಂದರೆ ಶಬ್ದಗಳೊಳಗಿನ ಕಾವ್ಯ, ಅದರಷ್ಟಕ್ಕೆ ಶಬ್ದ ಸಂಕೇತ ಮಾತ್ರವೇ – ಜೀವಂತವಾಗುತ್ತವೆ, ಶಬ್ದಗಳು ಮರುಹುಟ್ಟು ಪಡೆಯುತ್ತವೆ.

ನಿಮಗೆಲ್ಲ ಬಾಯಿಪಾಠ ಇರುವ ಒಂದು ಕವನ ನನಗೆ ನೆನಪಾಗುತ್ತಿದೆ; ನೀವು ಎಂದೂ ಇದೆಷ್ಟು ವಿಚಿತ್ರವೆಂದು ಪ್ರಾಯಶಃ ಗಮನಿಸಿರಲಿಕ್ಕಿಲ್ಲ. ಕಾವ್ಯದಲ್ಲಿ ಪರಿಪೂರ್ಣವಾಗಿರುವ ಅಂಶ ವಿಚಿತ್ರವೆನಿಸುವುದೇ ಇಲ್ಲ; ಅವು ಅನಿವಾರ್ಯದಂತೆ ತೋರುತ್ತವೆ. ಹಾಗೆಂದೇ, ನಾವು ಲೇಖಕನ ಪರಿಶ್ರಮಕ್ಕೆ ಧನ್ಯವಾದ ಹೇಳಬೇಕೆಂದು ಅಂದುಕೊಳ್ಳುವುದಿಲ್ಲ. ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಲಂಡನ್ನಿನ ಹ್ಯಾಂಪ್ಸ್ಟೆಡ್ ನಲ್ಲಿ ಫುಪ್ಪುಸದ ಖಾಯಿಲೆಯಿಂದ ಮರಣಕ್ಕೀಡಾದ ಯುವ ಕವಿ ಜಾನ್ ಕೀಟ್ಸನ ಬಗ್ಗೆ ಮತ್ತು ಅವನ ಪ್ರಸಿದ್ಧ ಮತ್ತು ಈಗ ಹಳಸಲು ಎನಿಸುವ “ಚಾಪ್ಮನ್ನನ ಹೋಮರನನ್ನು ಮೊದಲ ಸಲ ಓದಿದಾಗ” ಎಂಬ ಸುನೀತದ (sonnet) ಕುರಿತು ಯೋಚಿಸುತ್ತಿದ್ದೇನೆ. ಮೂರ್ರ್ನಾಲ್ಕು ದಿನಗಳ ಹಿಂದೆ ಈ ಉಪನ್ಯಾಸದ ಕುರಿತು ಯೋಚಿಸುತ್ತಿದ್ದಾಗಲೇ ಈ ಕವನದಲ್ಲಿರುವ ಒಂದು ವಿಚಿತ್ರದ ಬಗ್ಗೆ ನನಗಿದು ಹೊಳೆಯಿತು – ಅದೆಂದರೆ ಈ ಕವನ ಕಾವ್ಯಾನುಭವಾದ ಕುರಿತಾಗಿಯೇ ಬರೆದದ್ದು ಎನ್ನುವ ಸತ್ಯ. ನಿಮಗಿದು ಬಾಯಿಪಾಠ ಇದ್ದರೂ, ಒಮ್ಮೆ ಅದರ ಕೊನೆಯ ಸಾಲುಗಳ ಪ್ರವಾಹ ಮತ್ತು ಗರ್ಜನೆಯನ್ನು ಕೇಳಿಸ ಬಯಸುತ್ತೇನೆ:

ಕೃಪೆ: The Aclade Texas Express

ಕೃಪೆ: The Aclade Texas Express

 

Then felt I like some watcher of the skies

When a new planet swims into his ken;

Or like stout Cortez when with eagle eyes

He star’d at the Pacific—and all his men

Look’d at each other with a wild surmise—

Silent, upon a peak in Darien.

 

ಹೊಸದೊಂದು ಗ್ರಹ ತನ್ನ ಕಣ್ಣಳತೆಯ ಎದುರು ತೇಲಿ ಬಂದಾಗ

ಖಗೋಳ ವೀಕ್ಷಿಸುವವನಿಗಾಗುವ ಭಾವನೆಯೇ ಎನ್ನದಾಯಿತು

ಅಥವಾ ತನ್ನ ಆಳುಗಳು ಹುಚ್ಚು ಊಹೆಯೊಂದಿಗೆ ಒಬ್ಬರನ್ನೊಬ್ಬರು

ನೋಡುತ್ತಿದ್ದಾಗ, ಪ್ಯಾಸಿಫಿಕ್ಕಿನ ಡೇರಿಯನ್ ಪ್ರದೇಶದ ಪರ್ವತದತ್ತ

ತನ್ನ ಗರುಡಗಮನ ನೆಟ್ಟಿರುವ ಕೆಚ್ಚೆದೆಯ ಕಾರ್ಟೆಜ಼್ನಿಗಾದಂತೆ.

 

ಇಲ್ಲಿ ಕಾವ್ಯಾನುಭವವೇ ನಮಗೆ ಕಂಡುಬರುತ್ತದೆ. ಶೇಕ್ಸಪಿಯರನ ಸ್ನೇಹಿತ ಮತ್ತು ಪ್ರತಿಸ್ಪರ್ದಿಯಾಗಿದ್ದ ಜಾರ್ಜ್ ಚಾಪ್ಮನ್, ಇನ್ನಿಲ್ಲದಿದ್ದರೂ ಸಹ, ಕೀಟ್ಸ್ ಅವನ ಇಲಿಯಡ್ ಅಥವಾ ಓಡಿಸ್ಸಿಯ ಓದಲು ತೊಡಗಿದಂತೆ ಅವನಿಲ್ಲಿ ಚಕ್ಕನೆ ಜೀವಂತವಾಗುತ್ತಾನೆ. ನಾನು ಶೇಕ್ಸಪಿಯರನ ವಿಷಯದಲ್ಲಿ ಪಂಡಿತನಲ್ಲದಿದ್ದರೂ, ನನಗನ್ನಿಸುವ ಪ್ರಕಾರ ಶೇಕ್ಸಪಿಯರ ಮುಂದಿನ ಸಾಲುಗಳನ್ನು ಬರೆದದ್ದು ಜಾರ್ಜ್ ಹಾಪ್ಮನ್ನನ ಕುರಿತಾಗಿಯೇ ಇರಬೇಕು:

 

Was it the proud full sail of his great verse

Bound for the prize of all too precious you?1

ಅವನ ಶ್ರೇಷ್ಠ ಪದ್ಯದ ಸೊಕ್ಕಿನ ತುಂಬು ಹಾಯಿ

ಹೊರಟಿತ್ತೇನು ನೀನೆಂಬ ಅತ್ಯಮೂಲ್ಯ ಪುರಸ್ಕಾರದತ್ತ?

 

“ಚಾಪ್ಮನ್ನನ ಹೋಮರನನ್ನು ಮೊದಲ ಸಲ ಓದಿದಾಗ” ಎಂಬಲ್ಲಿನ ಶಬ್ದಗಳಲ್ಲಿ ಒಂದು ನನಗೆ ಬಹು ಮುಖ್ಯವೆನಿಸುತ್ತದೆ: “ಮೊದಲ ಸಲ” ಇದು ನಮಗೆ ಬಹಳ ಉಪಯೋಗಕ್ಕೆ ಬರುವಂತದ್ದು. ಕೀಟ್ಸನ ಈ ಉಜ್ವಲ ಸಾಲುಗಳನ್ನು ನೆನೆಯುತ್ತ ನನ್ನ ನೆನಪಿನ ನಿಷ್ಠೆಯಲ್ಲಿ ನಾನಿದ್ದೇನೆಯಾ ಎಂದು ಅನಿಸಿತು. ಕೀಟ್ಸನ ಪದ್ಯದ ಸಾಲುಗಳಿಂದ ನನಗೆ ಸಿಗುತ್ತಿದ್ದ ರೋಮಾಂಚನ ಬಹುಶಃ ನನ್ನಪ್ಪ ಅವನ್ನು ಗಟ್ಟಿಯಾಗಿ ಓದುತ್ತಿದ್ದ ನನ್ನ ಬಾಲ್ಯದ ಆ ದೂರದ ಕ್ಷಣಗಳಲ್ಲಿ ಹುದುಗಿರಬಹುದು. ಕಾವ್ಯವಾಗಲೀ ಭಾಷೆಯಾಗಲೀ, ಸಂವಹನದ ಮಾಧ್ಯಮ ಮಾತ್ರವಾಗಿರದೆ, ಭಾವೋತ್ಸಾಹ, ಆನಂದವೂ ಆಗಿರಲು ಸಾಧ್ಯ ಎಂದು ಸ್ಪಷ್ಟವಾದಾಗ, ನನಗೆ ಶಬ್ದಗಳ ಅರ್ಥ ದಕ್ಕಿತೋ ಇಲ್ಲವೋ ಅರಿಯೆ, ಆದರೆ ನನ್ನ ಮೇಲೆ ಏನೋ ಪರಿಣಾಮ ಆಗುತ್ತಿದೆ ಎನ್ನುವ ಅರಿವಾಯಿತು. ಅದು ನನ್ನ ಪ್ರಜ್ಞೆಗಷ್ಟೇ ಅಲ್ಲ, ರಕ್ತ ಮಾಂಸದ ನನ್ನಿಡೀ ವ್ಯಕ್ತಿತ್ವಕ್ಕೆ ಆಗಿತ್ತು.

“ಚಾಪ್ಮನ್ನನ ಹೋಮರನನ್ನು ಮೊದಲ ಸಲ ಓದಿದಾಗ” ಎಂಬ ಶಬ್ದಗಳಿಗೆ ಮರಳುವುದಾದರೆ, ಜಾನ್ ಕೀಟ್ಸನಿಗೆ ಆದ ರೋಮಾಂಚನ ಇಲಿಯಡ್ ಮತ್ತು ಓಡಿಸ್ಸಿಯ ಹಲವಾರು ಅಧ್ಯಾಯಗಳೆಲ್ಲವನ್ನು ಓದಿ ಮುಗಿದ ಮೇಲೆ ಆಯಿತೇ ಎನ್ನುವ ಪ್ರಶ್ನೆ. ಕಾವ್ಯದ “ಮೊದಲ” ಓದೇ ನಿಜವಾದದ್ದು, ಆ ನಂತರ ನಾವು ಸಂವೇದನೆ, ಅನಿಸಿಕೆಗಳು ಮರುಕಳಿಸಿವೆ ಎಂದೆಲ್ಲ ನಮ್ಮನ್ನು ನಾವೇ ಮರುಳು ಮಾಡಿಕೊಳ್ಳುತ್ತೇವೆ. ಆದರೂ,  ಇದು ಕೇವಲ ಸ್ವ ನಿಷ್ಠೆ ಅಂದರೆ ನೆನಪಿನ ಒಂದು ಕೀಟಲೆಯಷ್ಟೇ ಇರಬಹುದೇ, ಅಥವಾ ಪ್ರಸಕ್ತ ಭಾವೋತ್ಸಾಹ ಮತ್ತು ಹಿಂದೊಮ್ಮೆ ಅನುಭವಿಸಿದ ಭಾವೋತ್ಸಾಹದ ನಡುವಿನ ಗೊಂದಲ ಮಾತ್ರವಿದ್ದೀತೆ? ಆದ್ದರಿಂದ, ಹೀಗೂ ಹೇಳಬಹುದು – ಕಾವ್ಯವು ಪ್ರತಿ ಸಲವೂ ಒಂದು ಹೊಸ ಅನುಭವ. ಪ್ರತಿ ಬಾರಿ ನಾನೊಂದು ಕವನ ಓದಿದಾಗಲೂ, ಆ ಅನುಭವ ಮತ್ತೆ ಮತ್ತೆ ಆಗೇ ಆಗುತ್ತದೆ. ಅದೇ ಕಾವ್ಯ.

ARGENTINA - CIRCA 1987: A stamp printed in argentina shows Jorge Luis Borges.

ARGENTINA – CIRCA 1987: A stamp printed in argentina shows Jorge Luis Borges.

ನಾನೊಮ್ಮೆ ಓದಿದ್ದೆ, ಅಮೇರಿಕಾದ ಕಲಾಕಾರ ವ್ಹಿಸ್ಲರ್ ಪ್ಯಾರಿಸ್ನಲ್ಲಿ ಒಂದು ಕೆಫೆಗೆ ಹೋಗಿದ್ದ. ಅಲ್ಲಿ ಜನರು ವಂಶಪಾರಂಪರ್ಯ, ಪರಿಸರ, ಆಯಾ ಕಾಲದ ರಾಜಕೀಯ ಪ್ರಭುತ್ವ, ಇತ್ಯಾದಿಗಳು ಕಲಾವಿದನ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ಚರ್ಚಿಸುತ್ತಿದ್ದರು. ಆಗ, ವ್ಹಿಸ್ಲರ್ ಅನ್ನುತ್ತಾನೆ: “ಕಲೆ ಜರುಗುತ್ತದೆ”. ಅಂದರೆ, ಕಲೆಯ ವಿಷಯದಲ್ಲಿ ಅದೇನೋ ನಿಗೂಢತೆ ಇದೆ. ಅವನ ಮಾತನ್ನು ಹೊಸ ಬಗೆಯಲ್ಲಿ ಅರ್ಥೈಸ ಬಯಸುತ್ತೇನೆ: “ಪ್ರತಿಯೊಮ್ಮೆ ಕವನ ಓದಿದಾಗಲೂ ಕಲೆ ಜರುಗುತ್ತದೆ”. ಇದರ ಅರ್ಥ, ಶ್ರೇಷ್ಠ ಕೃತಿ, ಸಾರ್ವಕಾಲಿಕ ಪುಸ್ತಕಗಳು, ಎಂದೆಂದಿಗೂ ಸೌಂದರ್ಯ ಕಾಣಬಹುದಾದ ಪುಸ್ತಕಗಳು ಎಂಬ ಎಲ್ಲ ಕಲ್ಪನೆಗಳನ್ನು ಎಸೆದು ಬಿಡಬೇಕು ಎಂದರ್ಥವೇ? ಅದು ಹಾಗಲ್ಲ ಎಂದೇ ನಾನು ನಂಬಿದ್ದೇನೆ.

ಪುಸ್ತಕದ ಚರಿತ್ರೆಯ ಸಂಕ್ಷಿಪ್ತ ಸಮೀಕ್ಷೆಯನ್ನು ಕೊಡಬಹುದು ಇಲ್ಲಿ. ನನಗೆ ನೆನಪಿರುವ ಪ್ರಕಾರ, ಗ್ರೀಕರಿಗೆ ಪುಸ್ತಕಗಳ ಹೆಚ್ಚಿನ ಉಪಯೋಗ ಇರಲಿಲ್ಲ. ಮಾನವ ಕುಲದ ಶ್ರೇಷ್ಠ ಗುರುಗಳೆಲ್ಲ ಮಾತುಗಾರರೇ, ಬರಹಗಾರರಲ್ಲ. ನೆನಪಿಸಿ ಕೊಳ್ಳಿ, ಪೈಥಾಗೊರಸ್, ಕ್ರೈಸ್ಟ್, ಸಾಕ್ರೆಟಿಸ್, ಬುದ್ಧ, ಇತ್ಯಾದಿ. ನಾನೀಗ ಸಾಕ್ರೆಟಿಸನನ್ನು ನಮೂದಿಸಿರುವುದರಿಂದ, ಪ್ಲೇಟೋನ ಕುರಿತು ಒಂದು ಮಾತು ಹೇಳುತ್ತೇನೆ. ಬರ್ನಾರ್ಡ್ ಷಾ ಅವರ ಪ್ರಕಾರ ಯಾವ ರೀತಿಯಲ್ಲಿ ನಾಲ್ವರು ಇವಂಜೆಲಿಸ್ಟರು ಕ್ರೈಸ್ತನನ್ನು ಸೃಷ್ಟಿಸಿದ ನಾಟಕಕಾರರೋ, ಅದೇ ರೀತಿಯಲ್ಲಿ ಸಾಕ್ರೆಟಿಸನನ್ನು ಸೃಷ್ಟಿಸಿದ ನಾಟಕಕಾರನೆಂದರೆ ಪ್ಲೇಟೋ. ಪ್ರಾಯಶಃ ಇದು ಕೊಂಚ ಅತಿಯೆನ್ನಬಹುದು, ಆದರೂ ಇದರಲ್ಲಿ ತಥ್ಯವಿದೆ. ಪ್ಲೇಟೋನ ಸಂಭಾಷಣೆಗಳಲ್ಲೊಂದರಲ್ಲಿ ಪುಸ್ತಕಗಳ ಕುರಿತು ಅವನು ಅಗೌರವ ತೋರಿಸುತ್ತ ಹೇಳಿದ್ದಾನೆ: “ಪುಸ್ತಕ ಅಂದರೇನು? ಚಿತ್ರದಂತೆಯೇ ಪುಸ್ತಕವು ಸಜೀವ ಪ್ರಾಣಿಯಂತೆ ತೋರುತ್ತದೆ. ಆದರೆ, ನಾವು ಅದಕ್ಕೇನಾದರೂ ಕೇಳಿದರೆ, ಅದು ಉತ್ತರಿಸುವುದಿಲ್ಲ. ಆಗ ನಾವು ಅದು ಸತ್ತಿದೆ ಎಂದು ತಿಳಿಯುತ್ತೇವೆ.” ಪುಸ್ತಕವನ್ನು ಸಜೀವ ಪ್ರಾಣಿಯಾಗಿಸಲು ಅವನು ಪ್ಲೇಟಾನಿಕ್ ಸಂಭಾಷಣೆಯ – ನಮ್ಮ ಸುದೈವಕ್ಕೆ – ಆವಿಷ್ಕಾರ ಮಾಡಿದ. ಓದುಗನ ಸಂದೇಶ, ಪ್ರಶ್ನೆಗಳನ್ನು ಪ್ಲೇಟಾನಿಕ್ ಸಂಬಾಷಣೆ ಮುಂಚಿತವಾಗಿಯೇ ನಿರೀಕ್ಷಿಸುತ್ತದೆ.

ಪ್ಲೇಟೋ ಸಾಕ್ರೆಟಿಸನಿಗಾಗಿ ಹಾತೊರೆಯುತ್ತಿದ್ದ ಎಂದೂ ಸಹ ನಾವು ಹೇಳಬಹುದು. ಸಾಕ್ರೆಟಿಸನ ಸಾವಿನ ನಂತರ ಅವನು ತನಗೆ ತಾನು ಹೇಳಿಕೊಳ್ಳುತ್ತಿದ್ದ, “ಸಾಕ್ರೆಟಿಸ್ ಈ ನನ್ನ ಸಂದೇಹದ ಕುರಿತು ಏನು ಹೇಳಬಹುದಿತ್ತು?” ನಂತರ, ತನ್ನ ಗುರುವಿನ ನಲ್ಮೆಯ ಧ್ವನಿಯನ್ನು ಮತ್ತೆ ಕೇಳಲು ಅವನು ಸಂಬಾಷಣೆಗಳನ್ನು ಸೃಷ್ಟಿಸಿದ. ಇಲ್ಲಿನ ಕೆಲವು ಸಂಭಾಷಣೆಗಳಲ್ಲಿ, ಸಾಕ್ರೆಟಿಸ್ ಸತ್ಯವನ್ನು ಬೆಂಬಲಿಸುತ್ತಾನೆ. ಇತರ ಕಡೆ, ಪ್ಲೇಟೋ ಅವನ ಹಲವು ಚಿತ್ತವೃತ್ತಿಗಳನ್ನು ನಾಟಕೀಯವಾಗಿಸಿದ್ದಾನೆ. ಇವುಗಳಲ್ಲಿ ಕೆಲ ಸಂಭಾಷಣೆಗಳು ಯಾವುದೇ ತೀರ್ಮಾನಕ್ಕೆ ತಲುಪುವುದಿಲ್ಲ, ಯಾಕೆಂದರೆ ತಾನು ಬರೆಯುತ್ತಿರುವಂತೆ ಪ್ಲೇಟೋ ಯೋಚಿಸುತ್ತಲೂ ಇದ್ದ; ಅವನು ಮೊದಲ ಪುಟ ಬರೆಯುತ್ತಿರುವಾಗ, ಕೊನೆಯ ಪುಟದಲ್ಲಿ ಎನಿದ್ದೀತು ಎಂದು ಅವನಿಗೆ ಗೊತ್ತಿರಲಿಲ್ಲ. ಅವನು ತನ್ನ ಮನಸ್ಸನ್ನು ಅತ್ತಿತ್ತ ವಿಹರಿಸಲು ಬಿಡುತ್ತಿದ್ದ, ಆ ಮನಸ್ಸನ್ನು ಅವನು ಹಲವು ವ್ಯಕ್ತಿಗಳಾಗಿ ನಾಟಕೀಯವಾಗಿಸುತ್ತಿದ್ದ. ನನ್ನ ಅನಿಸಿಕೆ ಅಂದರೆ ಅವನ ಪ್ರಮುಖ ಗುರಿ, ಸಾಕ್ರೆಟಿಸ್ ಹೆಂಲಾಕ್ ವಿಷ ಸೇವಿಸಿದ್ದರೂ ಸಹ, ತನ್ನೊಡನೆ ಸಾಕ್ರೆಟಿಸ್ ಇದ್ದಾನೆ ಎನ್ನುವ ಭ್ರಮೆಯ ಸೃಷ್ಟಿಯೇ ಹೌದು. ನನಗೆ ಇದು ನಿಜವೆನಿಸಲು ಕಾರಣ, ನನ್ನ ಜೀವನದಲ್ಲಿಯೂ ನನಗೆ ಬಹಳ ಗುರುಗಳು ಲಭಿಸಿದ್ದಾರೆ. ಒಬ್ಬ ಶಿಷ್ಯನಾಗಿರುವುದರ – ಒಳ್ಳೆಯ ಶಿಷ್ಯ ಎಂದು ಆಶಿಸುವೆ- ಹೆಮ್ಮೆ ನನಗಿದೆ. ಯಾವಾಗ ನಾನು ನನ್ನ ತಂದೆಯವರ ನೆನೆಸಿಕೊಳ್ಳುತ್ತೇನೋ, ಯಾವಾಗ ನಾನು ಯಹೂದಿ-ಸ್ಪಾನಿಷ್ ಲೇಖಕ ರಫಾಯೆಲ್ ಕ್ಯಾನ್ಸೀನೋಸ್-ಅಸ್ಸಾಂಸ್ ಅವರನ್ನು ನೆನೆಸಿಕೊಳ್ಳುತ್ತೇನೋ, ಯಾವಾಗ ನಾನು ಮಸಿಡೋನಿಯೋ ಫರ್ನಾಂಡೇಜ್ ಅವರನ್ನು ನೆನೆಸಿಕೊಳ್ಳುವೆನೋ, ನಾನೂ ಸಹ ಅವರ ದನಿ ಕೇಳ ಬಯಸುತ್ತೇನೆ. ಅವರು ಹೇಗೆ ಯೋಚಿಸುತ್ತಿದ್ದರೋ, ಹಾಗೆ ನನಗೂ ಯೋಚಿಸಲು ಸಾಧ್ಯವಾಗಲಿ ಎಂದು ಕೆಲವೊಮ್ಮೆ ಅವರ ಧ್ವನಿಯಂತೆ ನನ್ನ ಧ್ವನಿಯನ್ನು ಪಳಗಿಸುವ ಪ್ರಯತ್ನ ಮಾಡುತ್ತೇನೆ. ಅವರು ನನ್ನ ಸುತ್ತಮುತ್ತ ಯಾವಾಗಲೂ ಇರುತ್ತಾರೆ.

ಕೃಪೆ: The Paris Review

ಕೃಪೆ: The Paris Review

ಇನ್ನೊಂದು ವಾಕ್ಯ “ಫಾದರ್ಸ್ ಆಫ್ ದ ಚರ್ಚ್” ಕೃತಿಗಳಲ್ಲಿ ಒಂದರಲ್ಲಿದೆ. ಏನೆಂದರೆ, ಮಕ್ಕಳ ಕೈಯಲ್ಲಿ ಖಡ್ಗ ಕೊಡುವುದು ಎಷ್ಟು ಅಪಾಯಕಾರಿಯೋ, ಅಜ್ಞಾನಿಯ ಕೈಯಲ್ಲಿ ಪುಸ್ತಕ ಕೊಡುವುದು ಸಹ ಅಷ್ಟೇ ಅಪಾಯಕಾರಿ. ಹಾಗಾಗಿ, ಪುರಾತನರಿಗೆ ಪುಸ್ತಕಗಳೆಂದರೆ ತಾತ್ಕಾಲಿಕವಾದದ್ದು. ತನ್ನ ಹಲವು ಪತ್ರಗಳಲ್ಲೊಂದರಲ್ಲಿ ಸೆನೇಕಾ ಬೃಹತ್ ಗ್ರಂಥಾಲಯಗಳ ವಿರುದ್ಧವಾಗಿ ಬರೆದಿದ್ದಾನೆ. ಜನರು ಪುಸ್ತಕವನ್ನು ಕೊಳ್ಳುವುದನ್ನೇ ಪುಸ್ತಕದಲ್ಲಿರುವ ವಿಷಯಗಳನ್ನು ಕೊಂಡಂತೆ ಎಂದು ತಪ್ಪು ಭಾವನೆಯಲ್ಲಿರುತ್ತಾರೆ ಎಂದು ಶೋಪನ್ಹಾವರ್ ಬರೆದಿದ್ದಾನೆ. ಮನೆಯಲ್ಲಿರುವ ಪುಸ್ತಕಗಳನ್ನು ಕಂಡರೆ, ಅವನ್ನೆಲ್ಲ ಓದಿ ಮುಗಿಸುವ ಮೊದಲು ನಾನೇ ಮುಗಿದು ಹೋಗುತ್ತೇನೆ ಎಂದು ನನಗನಿಸುತ್ತದೆಯಾದರೂ, ಪುಸ್ತಕ ಕೊಳ್ಳುವ ಚಪಲತೆಗೆ ಬಗ್ಗದಿರಲು ನನಗೆ ಸಾದ್ಯವಾಗುವುದಿಲ್ಲ. ಪುಸ್ತಕದ ಅಂಗಡಿಯಲ್ಲಿ ಯಾವಾಗ ನನ್ನ ಇಷ್ಟದ ವಿಷಯಗಳಾದ ಪ್ರಾಚೀನ ಇಂಗ್ಲೀಷ ಅಥವಾ ಪ್ರಾಚೀನ ನಾರ್ಸ್ ಕಾವ್ಯದ ಕುರಿತ ಪುಸ್ತಕಗಳನ್ನು ಕಾಣುತ್ತೇನೆಯೊ, ನಾನು ಮನದಲ್ಲಿಯೇ “ಛೇ, ಈಗಾಗಲೇ ಇದರ ಪ್ರತಿ ನನ್ನ ಬಳಿ ಇದೆಯಾದ್ದರಿಂದ ಈ ಪುಸ್ತಕ ಕೊಳ್ಳುವ ಹಾಗಿಲ್ಲವಲ್ಲ” ಎಂದುಕೊಳ್ಳುವುದಿದೆ.

ಪುರಾತನರ ತರುವಾಯ, ಪೂರ್ವದಿಂದ ಪುಸ್ತಕದ ಕುರಿತ ವಿಭಿನ್ನವಾದ ಕಲ್ಪನೆ ಬಂತು – ಪವಿತ್ರ ಗ್ರಂಥ, ಪವಿತ್ರಾತ್ಮ (Holy Ghost) ರಚಿಸಿದ ಗ್ರಂಥದ ಕಲ್ಪನೆ, ಕುರಾನ್, ಬೈಬಲ್, ಇತ್ಯಾದಿ. ಸ್ಪೆಂಗ್ಲರನ “ದ ಡಿಕ್ಲೈ ನ್ ಆಫ್ ವೆಸ್ಟ್” (ಪಶ್ಚಿಮದ ಪತನ) ಎಂಬ ಕೃತಿಯನ್ನು ಅನುಸರಿಸಿ, ನಾನು ಕುರಾನಿನ ಉದಾಹರಣೆ ತೆಗೆದುಕೊಳ್ಳ ಬಯಸುತ್ತೇನೆ. ನನ್ನ ತಿಳುವಳಿಕೆಯ ಪ್ರಕಾರ, ಮುಸ್ಲಿಂ ಧಾರ್ಮಿಕ ಶಾಸ್ತ್ರಜ್ಞರು ಕುರಾನ್ ಗ್ರಂಥ ಶಬ್ದಕ್ಕೂ ಹಿಂದಿನದೆಂದು ಭಾವಿಸುತ್ತಾರೆ. ಕುರಾನ್ ಪವಿತ್ರಗ್ರಂಥ ಅರಬ್ಬೀ ಭಾಷೆಯಲ್ಲಿದ್ದರೂ ಸಹ ಮುಸ್ಲಿಮರು ಅದು ಭಾಷಾಪೂರ್ವದ್ದು ಎಂದು ನಂಬುತ್ತಾರೆ. ನಾನು ಓದಿರುವ ಹಾಗೆ ಅವರ ನಂಬಿಕೆಯ ಪ್ರಕಾರ ಕುರಾನ್ ಪವಿತ್ರಗ್ರಂಥ ದೈವಿಕ ನ್ಯಾಯ, ದೈವಿಕ ಕರುಣೆ, ದೈವಿಕ ವಿವೇಚನೆಗಳಂತೆ ದೇವರ ಗುಣಗಳಲ್ಲಿ ಒಂದೇ ಹೊರತು, ದೇವರ ರಚನೆ ಮಾತ್ರವಲ್ಲ.

ಹೀಗೆ ಬಂದಿತು ದೈವಿಕ ಕೃತಿಯ ಕಲ್ಪನೆ ಯುರೋಪಿಗೆ – ಮತ್ತು ನನ್ನ ಅನಿಸಿಕೆಯ ಪ್ರಕಾರ ಇದೊಂದು ಪೂರ್ಣವಾಗಿ ತಪ್ಪು ಕಲ್ಪನೆಯೂ ಅಲ್ಲ. ನಾನು ಸದಾ ನೆನೆಯುವ ಬರ್ನಾರ್ಡ್ ಶಾ ಅವರನ್ನು ಒಮ್ಮೆ ಬೈಬಲ್ ಗ್ರಂಥವನ್ನು ರಚಿಸಿದ್ದು ಪವಿತ್ರಾತ್ಮ ಎನ್ನುವುದನ್ನು ನಿಜವೆಂದು ಮಾನ್ಯ ಮಾಡುತ್ತೀರಾ ಎಂದು ಕೇಳಲಾಯಿತು. ಅವರೆಂದರು, “ಬೈಬಲ್ ಮಾತ್ರವಲ್ಲ, ಸರ್ವ ಗ್ರಂಥಗಳ ಕೃತಿಕಾರರೂ ಪವಿತ್ರಾತ್ಮ”. ಇದು ಸಹಜವಾಗಿಯೇ ಪವಿತ್ರಾತ್ಮರ ಮೇಲಿನ ಹೊರೆಯೇ ಸೈ, ಆದರೆ ತಾತ್ಪರ್ಯ ಪ್ರಾಯಶಃ ಏನೆಂದರೆ ಎಲ್ಲ ಪುಸ್ತಕಗಳೂ ಸಹ ವಾಚನಯೋಗ್ಯವೆಂದು. ಸ್ಪೂರ್ತಿದೇವತೆಯೊಂದಿಗೆ (Muse) ಮಾತನಾಡುವ ಹೋಮರನ ಮಾತಿನ ಅರ್ಥವೂ ನನ್ನಂದಾಜು ಇದೇ. ಪವಿತ್ರಾತ್ಮನ ದೇಗುಲವೆಂದರೆ ನಿಷ್ಕಲ್ಮಷ ಮತ್ತು ಶುದ್ಧ ಮಾನವ ಹೃದಯವೆಂದು ಹೀಬ್ರೂಗಳು ಮತ್ತು ಜಾನ್ ಮಿಲ್ಟನ್ ಹೇಳಿದ್ದು ಸಹ ಇದನ್ನೇ. ನಮ್ಮದೇ ಕಾಲದ ಕೊಂಚ ಕಡಿಮೆ ಆಕರ್ಷಕ ಪುರಾಣಗಳಲ್ಲಿ “ಸುಪ್ತ ಆತ್ಮ” , “ಸುಪ್ತ ಪ್ರಜ್ಞೆ” ಎಂದು ನಾವು ಹೇಳುತ್ತೇವೆ. ಸ್ಪೂರ್ತಿದೇವತೆ, ಪವಿತ್ರಾತ್ಮಗಳಿಗೆ ಹೋಲಿಸಿದರೆ ಈ ಶಬ್ದಗಳು ತುಂಬ ಒರಟು ಅನಿಸಬಹುದು. ಆದಾಗ್ಯೂ, ನಮ್ಮ ಕಾಲದ ಪುರಾಣಗಳನ್ನು ನಾವು ಸಹಿಸಿಕೊಳ್ಳಲೇ ಬೇಕಾಗುತ್ತದೆ ತಾನೆ. ಒಟ್ಟಾರೆ, ಈ ಶಬ್ದಗಳು ಸೂಚಿಸುತ್ತಿರುವುದು ಮಾತ್ರ ಮೂಲಭೂತವಾಗಿ ಒಂದೇ.

ಮುಂದುವರೆಯುವುದು…

ಮೂಲ: The Craft of Verse

9 comments to “ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: ೧ – “ಕಾವ್ಯ ಎಂಬ ಒಗಟು””
    • ಕಾವ್ಯವು ಪ್ರತಿ ಓದೂ ಒಂದು ಹೊಸ ಅನುಭವ. ಎಷ್ಟು ಸತ್ಯದ ಮಾತು. ಚೆನ್ನಾಗಿದೆ. ಮುಂದಿನದಕ್ಕೆ ಕುತೂಹಲದಿಂದ ಕಾಯುವೆ.

    • ಬೋರ್ಹೆಸ್ ಒಬ್ಬ ಸ್ವಾಭಾವಿಕ ಚಿಂತಕ ಅಂತ ಅವನನ್ನ ಓದುವಾಗಲೆಲ್ಲ ನನಗೆ ಅನಿಸುತ್ತದೆ… ಅವನಿಗೆ ಸ್ವಾಭಾವಿಕವಾದ ಎಲ್ಲವೂ ತಿಳಿಯುತ್ತವೆ, ಅಂದರೆ ಸೂರ್ಯ ಚಂದ್ರರು ಎಷ್ಟು ಸ್ವಾಭಾವಿಕವೋ ಅವರ ಕಾರ್ಯಗಳು ಅಷ್ಟೇ ಅದ್ವೀತಿಯ ಎಂಬದು ಬೋರ್ಹೆಸ್ಗೆ ತಿಳಿಯುತ್ತದೆ. ಅನುವಾದಕ್ಕೆ ಧನ್ಯವಾದಗಳು

  1. Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: “ಕಾವ್ಯ ಕುಸುರಿ” ಭಾಗ ೩ – ಋತುಮಾನ

  2. Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: “ಕಾವ್ಯ ಕುಸುರಿ” ಭಾಗ ೧ – ಋತುಮಾನ

  3. Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೩ : ಕತೆಯ ನಿರೂಪಣೆ – ಋತುಮಾನ

  4. Pingback: ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೪: ಪದ-ನಾದ ಮತ್ತು ಅನುವಾದ – ಋತುಮಾನ

  5. Pingback: ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – 5: ವಿಚಾರ ಮತ್ತು ಕಾವ್ಯ – ಋತುಮಾನ

ಪ್ರತಿಕ್ರಿಯಿಸಿ