ಪದ್ಯದ ಮಾತು ಬೇರೆ ~ ೪

‘ಜಾತ್ರೆಯಲ್ಲಿ ಶಿವ’ : ಸವಿತಾ ನಾಗಭೂಷಣ
ಚಿತ್ರ : ಸ್ನೇಹಜಯಾ ಕಾರಂತ


ಜಾತ್ರೆಯಲ್ಲಿ ಶಿವ
– ಸವಿತಾ ನಾಗಭೂಷಣ

ಅದೇ ಆ ಶಿವನ ವೇಷಧಾರಿ
ನಾನಿದ್ದ ಬಸ್ಸಿನಲ್ಲಿಯೇ ಇದ್ದ
ನನ್ನೊಂದಿಗೇ ಬಸ್ಸಿನಿಂದಿಳಿದ

ತೇಗದ ಮರದ ಹಾಗೆ
ಉದ್ದಕೆ ಸಪೂರ
ಮೋಡದ ಮೈಬಣ್ಣ, ಮಿಂಚಿನ ನಗು
ಮುಡಿಗೆ ತಗಡಿನ ಚಂದ್ರನನು ಮುಡಿದಿದ್ದ
ತೋಳಿಗೆ ಕಣಗಿಲೆಯ ಹೂವು
ಕೊರಳಲ್ಲಿ ಪ್ಲಾಸ್ಟಿಕ್ ಹಾವು
ಹುಲಿ ಚರ್ಮದ ಚಿತ್ರವಿರುವ
ಮಾಸಿದ ಹಳದಿ ಬಣ್ಣದ ಅರ್ಧ ಲುಂಗಿ
ಹವಾಯಿ ಚಪ್ಪಲಿ ಧರಿಸಿದ್ದ…

ನನ್ನ ಬೆರಗಿಗೆ ಉತ್ತರ
ನೀಡುವವನಂತೆ
ಡಮರುಗ ನುಡಿಸಿ
ತ್ರಿಶೂಲ ಆಡಿಸಿ
ಕಾಲ್ಗೆಜ್ಜೆ ಗಲಗಲ ಕುಣಿಸಿ
ನಾ… ಶಿವ ಎಂದ

2
ನಾ… ಮುಂದ ಅವ… ಹಿಂದೆ
ಜಾತ್ರೆಯ ಕೌಂಟರಿನಲ್ಲಿ
ಟಿಕೀಟು ಕೊಳ್ಳುವಾಗಲೂ
ಬೆನ್ನ ಹಿಂದೆಯೇ ಇದ್ದ
ಗಿಲೀಟು ಒಡವೆಯಂಗಡಿಯಲ್ಲಿ
ಕಣ್ಣ ಮುಂದೆಯೇ ಬಂದ
ಫಳಫಳ ಹೊಳೆಯುವ
ಮೂಗುತಿಯನು ಅಂಗೈಯೊಳಗೆ
ಹೊರಳಾಡಿಸಿ
ಈ ವಜ್ರಕ್ಕೆಷ್ಟಪ್ಪಾ ಬೆಲೆ
ಎಂದು ಅಂಗಡಿಯಾತನ ಛೇಡಿಸಿದ

ಪುಗ್ಗೆಯಂಗಡಿಯಲ್ಲಿ ಒಂದೊಂದೂ
ಪುಗ್ಗೆಯ ಮೇಲೂ ಮೃದುವಾಗಿ ಕೈಯಾಡಿಸಿ
ಪರಪರ ಶಬ್ದಕ್ಕೆ ಕಿವಿಯಾನಿಸಿ
ಬಾಗಿಲು ದಾಟುವುದರೊಳಗೆ
ಠುಸ್ಸೆನ್ನುವುದೀ ಪುಗ್ಗೆ, ಜೊತೆಗೆ
ಹಿಗ್ಗಿನ ಬುಗ್ಗೆ ಎಂದು ಅಲ್ಲೇ ಪದ ಕಟ್ಟಿ ಹಾಡಿ
ಒಂದು ಪೀಪಿ, ಒಂದು ವಾಚು ಪುಕ್ಕಟೆ ಪಡೆದ

ಬಣ್ಣ ಬಣ್ಣದ ಪರಕಾರಗಳ ತೆಗೆಸಿ
ಪೂರ ಅಂಗಡಿಯನೆ ಎಳೆದಾಡಿಸಿ
ಚೌಕಾಸಿ ಬೆಲೆಯಲ್ಲೇ
ಒಂದು ಗಜ ರವಿಕೆಯ ಬಟ್ಟೆ ಕೊಂಡ

ಕೆಂಪು ನೀರಿನ ಶರಬತ್ತಿನಂಗಡಿಯಲ್ಲಿ
ಗಿಣಿ ಶಾಸ್ತ್ರದವನೊಡನೆ ಹರಕು
ಛತ್ರಿಯ ಅಡಿಯಲ್ಲಿ…
ಕರಡಿ ಮಜಲು ಕುಣಿತದ
ಕರಡಿಯಾಸದವನೊಡನೆ
ಅಲ್ಲಿ… ಇಲ್ಲಿ… ಇಲ್ಲಿ… ಅಲ್ಲಿ
ಜಾತ್ರೆಯ ಉದ್ದಗಲ ಹಬ್ಬಿ ನಿಂತವನು
ಮೋಟು ಬೀಡಿಯ ಸೇದುತ್ತ
ಕಡಲೆಯ-ಪುರಿಯ
ಗುಡ್ಡವ ದಾಟಿ ಹೋದ

3
ಹೋದ ಎನ್ನುವಷ್ಟರಲ್ಲಿಯೇ
ಬತ್ತಾಸಿನ ಅಂಗಡಿಯಲ್ಲಿ
ಪರಿಚಿತ ನಗೆಯೊಡನೆ ಪ್ರತ್ಯಕ್ಷ!

ಮೆಲ್ಲನೆ ಬಳಿ ಸಾರಿ ಗೋಣ ಬಗ್ಗಿಸಿ
ಮಗ ಹಸಿದಿದ್ದಾನೆ-
ಹೆಂಡತಿಗೆ ಕಾಯಿಲೆ ಅಂದ
ಬಾಡಿದ ಮುಖ, ಬಸಿದಿತ್ತು ದುಃಖ

ಗಣಪ ಹಸಿದಿದ್ದಾನೆ
ಗಿರಿಜೆಗೆ ಕಾಯಿಲೆ…
ಹೆಂಡತಿ-ಮಕ್ಕಳಿಗಾಗಿ
ಶಿವನಲ್ಲದೆ ಭವಿ ಅಳುವನೆ?!

ಪುಟ್ಟ ಪರ್ಸಿನ ಮೂಲೆ ಮೂಲೆಯನು ತಡವಿ
ರುದ್ರನೊಡ್ಡಿದ ಬೊಗಸೆಗೆ
ಐದರ ನೋಟಿರಿಸಿ ಇಷ್ಟೇ ಅಂದೆ!
ಮಿಂಚಂತ ಹೊಳೆದು
ತಳಾಂಗು ತದಿಗಿಣ ತೋಂ ಎಂದು
ನಾಟ್ಯದ ಮಟ್ಟಿನಲ್ಲಿ ಕುಣಿದು
ಅರ್ಧ ನಿಮೀಲಿತ ನೇತ್ರನಾಗಿ
ನಟರಾಜನ ಭಂಗಿಯಲ್ಲಿ ನಿಂತುಬಿಟ್ಟ!

ಬಿಟ್ಟ ಬಾಯಿ ಬಿಟ್ಟಂತೆಯೇ
ನೆಟ್ಟ ಕಣ್ಣು ನೆಟ್ಟಂತೆಯೇ
ಎರಡೂ ಕೈ ಜೋಡಿಸಿ
ಮೈದುಂಬಿ ನುಡಿದು ಬಿಟ್ಟೆ…

ಸಾಕ್ಷಾತ್ ಶಿವ
ಸಾಕ್ಷಾತ್ ಶಿವ ! !

ಪ್ರತಿಕ್ರಿಯಿಸಿ