ಮಲಯಾಳದ ಪ್ರಸಿದ್ಧ ಕತೆಗಾರ ಶಿಹಾಬುದ್ದೀನ್ ಪೋಯ್ತುಂಕಡವು ಅವರ ಕತೆ ಋತುಮಾನದ ಓದುಗರಿಗಾಗಿ. ಕಳೆದ ನಲವತ್ತು ವರ್ಷಗಳಿಂದ ಮಲಯಾಳಂ ನಲ್ಲಿ ಬರೆಯುತ್ತಿರುವ ಶಿಹಾಬುದೀನ್ ರ ಮೊನಚು ಭಾಷೆ, ಚೂಪು ವಿವರಗಳನ್ನು ಅಷ್ಟೇ ಶಕ್ತವಾಗಿ ಸುನೈಫ್ ಕನ್ನಡಕ್ಕೆ ತಂದಿದ್ದಾರೆ. ಬರುವ ನಂವೆಂಬರ್ ನಲ್ಲಿ ಸುನೈಫ್ ಅನುವಾದಿಸಿರುವ ಶಿಹಾಬುದ್ದೀನ್ ಅವರ ಕತೆಗಳ ಸಂಕಲನ ಆಕೃತಿ ಪ್ರಕಾಶನದಿಂದ ಪ್ರಕಟವಾಗಲಿದೆ.
ಹೊರಗಡೆ ಪೋಲೀಸ್ ಜೀಪೊಂದು ಬಂದು ನಿಂತಿತು.
ನಾನಿನ್ನೂ ನಿದ್ದೆ ಬಿಟ್ಟು ಎದ್ದಿರಲಿಲ್ಲ.
ಭಯದಿಂದ ಓಡಿ ಬಂದ ತಂಗಿ ಹೆದರಿ ನಡುಗುತ್ತಾ ನನ್ನನ್ನು ತಟ್ಟಿ ಎಬ್ಬಿಸಿದಳು.
‘ಅಣ್ಣಾ, ಹೊರಗಡೆ ನಾಲ್ಕೈದು ಪೋಲೀಸರು ಬಂದಿದ್ದಾರೆ. ಮುಚ್ಚಿಲ್ಲೋಟ್ಟ್ ಭಗವತೀ… ಕೈಕಾಲೇ ಓಡ್ತಿಲ್ಲ ನನಗೆ.’
ಮಲಗಿದ್ದವ ಹಾಗೇ ಯೋಚಿಸಿದೆ:
ಅದಕ್ಕೆ ನೀನ್ಯಾಕೆ ಹೀಗೆ ಬಾಯಿ ಬಡ್ಕೋತಿದ್ದೀಯಾ ತಾಯಿ. ಇದು 95. ತುರ್ತು ಪರಿಸ್ಥಿತಿ ಮುಗಿಯಿತಲ್ಲ.
ಲುಂಗಿ ಎತ್ತಿಕಟ್ಟಿ ಹೊರಗಿಳಿಯುವಾಗ ಪೋಲೀಸರಲ್ಲೊಬ್ಬ ಪ್ರಶ್ನೆ:
‘ಕಡುವಾಕೋಡನ್ ನಾರಾಯಣನ ಮನೆ ಇದು ತಾನೇ?’
ಸಂಗತಿ ಅರ್ಥ ಆಯ್ತು. ಹಳೆಯ ಯಾವುದೋ ಕೇಸಿನ ವಾರ್ಷಿಕೋತ್ಸವ ಇರಬೇಕು.
‘ಆ ನಾರಾಯಣ ನಾನೇ.’
‘ನಿನ್ನ ಕೆಲಸ ಎಂತದಾ?’
(ಆ ‘ನಿನ್ನ’ ನನಗೆ ಅಷ್ಟಾಗಿ ರುಚಿಸುವುದಿಲ್ಲ)
‘ನಿನ್ನ ಕೆಲಸಕ್ಕಿಂತ ಒಳ್ಳೆಯ ಕೆಲಸ’
ತಂಗಿ ಭಯದಿಂದ ಓಡಿ ಬಂದು ಪಿಸುಗುಟ್ಟಿದಳು.
‘ಭಗವಂತಾ… ಅವರು ಪೋಲೀಸರು. ನೆನಪಿರಲಿ.’
ನನ್ನಿಂದ ಆ ಉತ್ತರವನ್ನು ನಿರೀಕ್ಷಿಸಿರದಿದ್ದ ಆತ ಒಮ್ಮೆ ತಡವರಿಸಿದ.
‘ಚಿತ್ರ ಬಿಡಿಸೋದು ತಾನೇ ನಿನ್ನ ಕೆಲಸ.’
‘ಹೌದು’
‘ನಿನ್ನನ್ನು ಸಾರ್ ಕರೆಯುತ್ತಿದ್ದಾರೆ.’
‘ಯಾವ ಸಾರ್?’
‘ಸರ್ಕಲ್ ಬೋಧೇಶ್ವರ ಸಾರ್.’
‘ನಿದ್ದೆಯಿಂದ ಎದ್ದದ್ದಷ್ಟೇ. ನಾನು ಬರ್ತೀನಿ, ನೀವು ಹೊರಡಿ.’
‘ಈ ಜೀಪಿನಲ್ಲೇ ಕರ್ಕೊಂಡು ಬರಬೇಕು ಅಂತ ಹೇಳಿದ್ದಾರೆ.’
‘ನಿಮ್ಮ ಈ ಜೀಪಿನಲ್ಲಿ ಕಕ್ಕೂಸು ಉಂಟಾ?’
ಹೆಡ್ ಮತ್ತೆ ತಡವರಿಸಿದ.
‘ನೀನೆಂತ ತಮಾಷೆ ಮಾಡ್ತಿದ್ದೀಯಾ?’
‘ಎಂತ ತಮಾಷೆ. ನನಗೀಗ ಅರ್ಜೆಂಟಾಗಿ ಕಕ್ಕೂಸಿಗೆ ಹೋಗ್ಬೇಕು. ಸಾರುಗಳು ಈಗ ಹೊರಡಿ. ನಾನು ಬರುತ್ತೇನೆ.’
ನಾನೊಂದು ದಿನೇಶ್ ಬೀಡಿಗೆ ಬೆಂಕಿ ಹಚ್ಚಿ ಕಕ್ಕೂಸಿಗೆ ಕಡೆಗೆ.
ಪೋಲೀಸರು ಒಂದು ನಿಟ್ಟುಸಿರಿಟ್ಟು ಜೀಪಿನ ಕಡೆಗೆ.
ಪೋಲೀಸ್ ಸ್ಟೇಷನ್ ವರಾಂಡದಲ್ಲಿ ನಾನೀಗ ಕೂತಿದ್ದೇನೆ.
ಬಂದ ಸುದ್ದಿಯನ್ನು ಸರ್ಕಲ್ಗೆ ತಿಳಿಸಿ ಅಂತ ಒಬ್ಬ ಪೋಲೀಸನಿಗೆ ಹೇಳಿದ್ದೇನೆ.
ಮನೆ ಮುಂದೆ ಪೋಲೀಸ್ ಜೀಪ್ ಬಂದು ನಿಂತದ್ದು, ನಾಲ್ಕೈದು ಪೋಲೀಸರು ನನ್ನನ್ನು ಸ್ಟೇಷನ್ನಿಗೆ ಕರೆದುಕೊಂಡು ಹೋಗಲು ನೋಡಿದ್ದು ಎಲ್ಲ ಈಗ ಊರಲ್ಲಿ ಸಣ್ಣದೊಂದು ಭೂಕಂಪವನ್ನು ಸೃಷ್ಟಿಸಿದೆ. ಮನೆಯಲ್ಲಿ ಎಲ್ಲ ಸೇರಿಸಿದರೆ ಒಟ್ಟು ನೂರೈವತ್ತು ರೂಪಾಯಿ ಸಿಗಬಹುದು. ಇಷ್ಟೊತ್ತಿಗೆ ತಂಗಿ ಅದೆಲ್ಲವನ್ನು ಮುಚ್ಚಿಲೋಟ್ಟ್ ಭಗವತಿಯ ಭಂಢಾರಕ್ಕೆ ಹಾಕಿಯೂ ಆಗಿರಬಹುದು. ಇದರಲ್ಲಿ ಅವಳ ತಪ್ಪೇನಿದೆ? ನಾಡಿದ್ದು ಮದುವೆ. ಹೆಣ್ಣಿನ ಕಡೆಯವರು ವಿಷಯ ತಿಳಿದು ಎದೆ ಒಡೆದು ಸತ್ತಿರಲೂಬಹುದು.
ಸರ್ ಸಿ.ಪಿ.ಯ ಕಾಲದ ಡೊಳ್ಳುಹೊಟ್ಟೆಯ ಒಬ್ಬ ಪೋಲೀಸಪ್ಪ ಸರ್ಕಲ್ ಕೋಣೆಯಿಂದ ಹೊರ ಬಂದು ಕೂಗಿದ:
‘ಕಡುವಾಕೋಡನ್ ನಾರಾಯಣನ್. ಆರ್ಟಿಸ್ಟ್.’
ನಾನು ಎದ್ದು ನಿಂತೆ.
ಆತನ ಸೈಲೆಂಟ್ ವ್ಯಾಲಿ ಮೀಸೆಯಡಿಯಲ್ಲಿ ಸಿಂಗಲೀಕ ನಗು ಹೊರಟಿತು. ಗೇಲಿತುಂಬಿದ ನಗು.
‘ನಿನ್ನ ಹೆಸರು ಕೇಳಿ ನಂಗೇ ನಡುಕ ಬಂದಿತ್ತಲ್ಲೋ. ನೀನು ನೋಡಿದ್ರೆ ಒಣಬೂತಾಯಿ ತರ ಇದ್ದೀಯಾ. ಹೂಂ. ನಡಿ ನಡಿ. ಸಾರ್ ಕರೀತಿದ್ದಾರೆ.’
ಅಲ್ಲಿಯ ತನಕ ಪೇರಿಸಿಟ್ಟಿದ್ದ ಧೈರ್ಯವೆಲ್ಲ ಕರಗಿ ಹೋಯಿತು. ಸರ್ಕಲ್ ಯಾಕೆ ನನ್ನನ್ನು ಕರೆಸಿಕೊಂಡಿರಬಹುದು?
ಬೋಳಿಮಗ ಅಂತನೋ… ಅಥವಾ ಬಡ್ಡಿಮಗ ಅಂತನೋ…
ನಾನು ಒಂದು ಅದೃಶ್ಯ ತೂಗು ಸೇತೆವೆ ದಾಟುವವನಂತೆ ಹೆಜ್ಜೆ ಹಾಕುತ್ತಾ ಸರ್ಕಲ್ಲಿನ ಮುಂದೆ ನಿಂತದ್ದೂ, ಬೋಧೇಶ್ವರ ಎದ್ದು ನಿಂತು ನನ್ನ ಕೈ ಕುಲುಕಿದ್ದೂ ಒಟ್ಟಿಗೇ ಆಯಿತು.
‘ಐ ಯಾಮ್ ರಿಯಲಿ ಸಾರಿ, ಮಿ. ನಾರಾಯಣ. ನೀವೊಬ್ಬ ಆರ್ಟಿಸ್ಟ್. ನಾನೇ ನಿಮ್ಮನ್ನು ಬಂದು ಕಾಣಬೇಕಿತ್ತು. ಆದರೆ ಕೆಲಸದ ರಗಳೆಯಲ್ಲಿ…’
ನನಗೊಂದೂ ಅರ್ಥ ಆಗಲಿಲ್ಲ.
ಬೊಧೇಶ್ವರ ಕುರ್ಚಿ ತೋರಿಸಿ ಕುಳಿತುಕೊಳ್ಳಿ ಎಂದ.
ಸಣ್ಣದೊಂದು ನಡುಕ. ನಾನು ತಿರುಗಿ ನೋಡಿದೆ. ಕುರ್ಚಿ ಇದೆ.
ಎಮರ್ಜೆನ್ಸಿಯಲ್ಲೂ ಮೊದಲಿಗೆ ಇಂತದ್ದೇ ಒಂದು ಕುರ್ಚಿ ಕೊಟ್ಟಿದ್ದರು.
ಬಹಳ ಎಚ್ಚರಿಕೆಯಿಂದ ನಾನು ಆ ಕುರ್ಚಿಯಲ್ಲಿ ಕುಳಿತೆ. 75ರಲ್ಲಿ ಬಹಳ ಚುರುಕಿನಿಂದ ರಾಜಕೀಯ ಖೈದಿಗಳನ್ನು ವಿಚಾರಿಸಿದ ಪೋಲೀಸ್ ಕುರ್ಚಿ ಅದು. ಮೂರು ಕಾಲಿನ ಕುರ್ಚಿ, ಎರಡು ಕಾಲಿನ ಕುರ್ಚಿ, ಒಂದು ಕಾಲಿನ ಕುರ್ಚಿ, ಕಾಲುಗಳೇ ಇಲ್ಲದ ಕುರ್ಚಿ… ಅವುಗಳ ಮೇಲೆ ಕೂರಿಸಿ…
ಬೋಧೇಶ್ವರ ಬಹಳ ವಿನಯದಿಂದ ಮಾತಿಗಿಳಿದ.
‘ಒಬ್ಬ ಪೋಲೀಸ್ ಅಧಿಕಾರಿಯಾದರೂ ನಾನೊಬ್ಬ ಕಲಾಪ್ರೇಮಿ ಮಿ. ನಾರಾಯಣ.’
ಯಾಕೆ ಅಂತ ಗೊತ್ತಿಲ್ಲ. ಈ ಮಾತಿನಿಂದ ನನ್ನ ಭಯ ಇನ್ನಷ್ಟು ಹೆಚ್ಚಾಯಿತು.
ಬೋಧೇಶ್ವರ ಮಾತು ಮುಂದುವರಿಸಿದ.
‘ನನ್ನ ಪ್ರಕಾರ ಎಲ್ಲ ಕಲೆಗಳಿಗಿಂತ ಉತ್ತಮ ಕಲೆ ಚಿತ್ರಕಲೆ.’
‘ಸಾರ್, ನಾನು ಹಿಂದೆ, ಅಂದರೆ 75ರ ಕಾಲದಲ್ಲಿ… ಈ ಸಾಂಸ್ಕೃತಿಕ ಸಂಘಟನೆಗಳಿಗೆಲ್ಲ… ಒಂದಷ್ಟು ಪೋಸ್ಟರ್ ಬಿಡಿಸಿದೆ ಎಂದಲ್ಲದೆ…’
ಆದರೆ ನನ್ನ ದುರ್ಬಲ ಮಾತುಗಳನ್ನು ಕಡೆಗಣಿಸಿ ಬೋಧೇಶ್ವರ ಮಾತನಾಡಿದ್ದು ಪೂರ್ತಿ ಚಿತ್ರಕಲೆಯಲ್ಲಿ ಅತೀ ಆಧುನಿಕತೆ, ರಿವೈವಲಿಸಂ, ದಾದಾಯಿಸಂ, ಪೋಸ್ಟ್ ಮೋಡರ್ನಿಸಂ, ಪಿಕಾಸೊ, ದಾಲಿ, ಕರುಣಾಕರನ್…
ಇದರ ನಡುವೆ ಚಾ ಮತ್ತು ವಡೆ.
ವಡೆಯಲ್ಲಿ ನಾಲ್ಕು ಸಲ ಕಲ್ಲು ಸಿಕ್ಕಿತು.
ಬೋಧೇಶ್ವರ ನಕ್ಕ.
‘ಪೋಲೀಸ್ ಕ್ಯಾಂಟೀನಿನ ಚಾ. ಹೊರಗಡೆಯಿಂದ ತರಿಸೋಣವೆಂದರೆ…’
ನಾನು ಚಾ ಮುಗಿಸಿದೆ. ಸರಿಯಾಗಿ ಬೆಂದೂ ಇರದ ವಡೆಯ ತುಂಡೊಂದನ್ನು ಬೋಧೇಶ್ವರ ಕಾಣದ ಹಾಗೆ ಮೇಜಿನ ಮೇಲಿದ್ದ ಫೈಲೊಂದರ ಒಳಗೆ ತೂರಿಸಿಬಿಟ್ಟೆ.
ನಾನು ಭಯದಿಂದಲೇ ಕೇಳಿದೆ:
‘ಸಾರ್, ನನ್ನನ್ನು ಕರೆಸಿಕೊಂಡ ವಿಷಯ?’
‘ಹೌದು. ಈಗ ವಿಷಯಕ್ಕೆ ಬರೋಣ.’
ಮೇಜು ಹಾಸಿನ ಒಳಗೆ ಕೈ ತೂರಿಸಿ ಏನನ್ನೋ ಹುಡುಕುತ್ತಾ ಬೋಧೇಶ್ವರ ಮಾತನಾಡಿದ.
‘ನಾನು ನಿಮ್ಮ ಅಭಿಮಾನಿ. ಯಾಕೆ ಇತ್ತೀಚೆಗೆ ನೀವು ಚಿತ್ರ….’
‘ಚಿತ್ರ ಬಿಡಿಸುವುದನ್ನು ನಿಲ್ಲಿಸಿದ್ದೇನೆ. ಈಗ ಹೊಟ್ಟೆಪಾಡಿಗೆ ಏನಾದರೂ ಬಿಡಿಸುತ್ತೇನೆ.’
‘ಗೊತ್ತು. ಪೊಟ್ರೇಟ್. ಅಲ್ವಾ? ತಾವು ಅದರಲ್ಲೂ ಖ್ಯಾತರು. ನನಗೆ ಎಲ್ಲ ಗೊತ್ತು. ಪೊಟ್ರೇಟ್ ಬಿಡಿಸುವುದು ಎಲ್ಲಕ್ಕಿಂತ ಉತ್ತಮ ಕಲಾಸೇವೆ ಎಂದು ನಾನು ಹೇಳುತ್ತೇನೆ.’
ಮೇಜಿನಡಿಯಲ್ಲಿ ಹುಡುಕುತ್ತಿದ್ದ ವಸ್ತು ಸಿಕ್ಕಿದ ಸಂತೋಷ ಬೋಧೇಶ್ವರನ ಮುಖದಲ್ಲಿ. ಕೈ ಹೊರತೆಗೆದಾಗ ಆತನ ಕೈಯಲ್ಲಿ ಒಂದು ಹಳೆಯ ಫೋಟೋ.
ಫೋಟೋವನ್ನು ನನ್ನ ಕೈಗಿಡುತ್ತಾ ಅತ್ಯಂತ ಗೌರವದಿಂದ ಬೋಧೇಶ್ವರ ಪರಿಚಯ ಮಾಡಿದ.
‘ಉಪ್ಪು ಭಾರ್ಗವನ್ ಪಿಳ್ಳೆ. ಕೇಳಿರಬಹುದು. ಆ ಕಾಲದಲ್ಲಿ ಗಾಂಧೀಜಿಯೊಟ್ಟಿಗೆ ಉಪ್ಪು ಸತ್ಯಾಗ್ರಹಕ್ಕೆ ಹೋಗಿದ್ದರು. ಜೈಲಲ್ಲೂ ಇದ್ದರು. ನನ್ನಜ್ಜ.’
ನಾನು ಫೋಟೋ ನೋಡಿದೆ.
ಬಣ್ಣ ಮಾಸಿದ ಹಳೆಯ ಫೋಟೋ. ಅದರಲ್ಲಿ ಆ ವ್ಯಕ್ತಿಯ ರೂಪ ಸ್ಪಷ್ಟವಾಗಿ ಕಾಣುತ್ತಿಲ್ಲ.
‘ಅಜ್ಜನ ಒಂದು ಪೋಟ್ರೇಟ್ ಬಿಡಿಸಿ ಕೊಡಬೇಕು. ದುಡ್ಡಿನ ಚಿಂತೆಯೇ ಬೇಡ.’
(ನನಗೆ ದುಡ್ಡೇ ದೊಡ್ಡ ಚಿಂತೆ)
‘ಬೇರೆ ಫೋಟೋ ಇಲ್ವಾ?’
ಬೋಧೇಶ್ವರ ದುಃಖಿತನಾದ.
‘ಒಂದೂ ಇಲ್ಲ. ಇದು ಕೂಡ ಹಳೆಯದೊಂದು ಗ್ರೂಪ್ ಫೋಟೋದಿಂದ ರಿಕಾಪಿ ಮಾಡಿಸಿದ್ದು.’
(ಕಷ್ಟ ಆಯ್ತಲ್ಲಾ ಬೊಧೇಶ್ವರಾ)
‘ಯಾವಾಗ ಸಿಗಬಹುದು?’
‘ಆದಷ್ಟು ಬೇಗ ಮುಗಿಸಿ ಕೊಡುತ್ತೇನೆ.’
‘ಎರಡು ದಿನ ಬಿಟ್ಟು ನಾನು ಬರಲಾ?’
‘ಮದುವೆ ಊಟ ಮಾಡಬಹುದು.’
ಬೋಧೇಶ್ವರ ನಕ್ಕ.
‘ಮಿ. ನಾರಾಯಣ ಬಹಳ ತಮಾಷೆ ವ್ಯಕ್ತಿ ನೀವು.’
‘ತಮಾಷೆ ಅಲ್ಲ ಸಾರ್. ಇನ್ನೆರಡು ದಿನದಲ್ಲಿ ನನ್ನ ಮದುವೆ.’
ಮುಖಭಾವ ಬದಲಾಗಿದ್ದನ್ನು ಅಡಗಿಸಿಕೊಳ್ಳಲು ಬೋಧೇಶ್ವರ ಕಷ್ಟ ಪಟ್ಟ.
‘ರಿಯಲಿ? ಯಾಕಿಷ್ಟು ತಡ ಮಾಡಿದಿರಿ?’
‘ಆರೋಗ್ಯ ಸರಿ ಇರಲಿಲ್ಲ ಸಾರ್. ಎರಡು ವರ್ಷ ಕಾಲ ಎಣ್ಣೆ ಮಂಚದಲ್ಲಿ ಮಲಗಿದೆ. ತಿಕ್ಕಿದ್ದು ತೀಡಿದ್ದು. ಇದ್ದ ದುಡ್ಡೆಲ್ಲ ಖರ್ಚಾಯ್ತು.’
‘ಓಹ್. ಏನಾಗಿತ್ತು?’
‘ಹೊಡೆತ ತಿಂದಿದ್ದೆ.’
‘ರಿಯಲಿ? ನಾರಾಯಣನಂತಹ ಕಲಾವಿದನನ್ನು ಹೊಡೆದದ್ದಾ? ಯಾರು?’
ನಾನು ಕುರ್ಚಿಯಿಂದ ಮೇಲೆದ್ದೆ.
ಬೋಧೇಶ್ವರನ ಅಜ್ಜನ ಫೋಟೋವನ್ನು ಜೋಪಾನವಾಗಿ ಎತ್ತಿಕೊಂಡೆ.
‘ಸರಿ. ನಾನು ಮತ್ತೆ ಬರುತ್ತೇನೆ.’
ಉಪಚಾರ ಪೂರ್ವಕ ನನ್ನನ್ನು ಬೀಳ್ಕೊಡುತ್ತಾ ಬೋಧೇಶ್ವರ ಮತ್ತೆ ಆ ಪ್ರಶ್ನೆಯನ್ನು ಎತ್ತಿ ಹಾಕಿದ.
‘ನಿಮ್ಮನ್ನು ಅಷ್ಟು ಕ್ರೂರವಾಗಿ ಹೊಡೆದವರು ಯಾರು ಅಂತ ನೀವು ಹೇಳಲಿಲ್ಲ.’
ಬಾಗಿಲ ಬಳಿ ಹೋಗುತ್ತಿದ್ದ ನಾನು ಒಂದು ಕ್ಷಣ ಉಸಿರುಗಟ್ಟಿದವನಂತೆ ನಿಂತು ಬಿಟ್ಟೆ. (ಹೇಳದೇ ಇರಲಾಗುತ್ತಿಲ್ಲ.)
ನಿಮ್ಮಂತ ಬೇವರ್ಸಿಗಳು. ಎಮರ್ಜೆನ್ಸಿಯಲ್ಲಿ.
ಮುಚ್ಚಿದ ಫ್ಲಾಶ್ ಡೋರಿನಾಚೆ ಬೋಧೇಶ್ವರನ ಅವಸ್ಥೆ ಹೇಗಿರಬಹುದು?
ಮರಳಿ ಬಂದಾಗ ಮನೆ ಮುಂದೆ ದೊಡ್ಡ ಜನ ಜಂಗುಳಿ. ಒಳಗಿನಿಂದ ತಂಗಿಯ ಆಕ್ರಂದನ ಕೇಳಿಸುತ್ತಿದೆ.
‘ಹೀಗೆ ಕರೆದುಕೊಂಡು ಹೋಗಿ ಎರಡು ವರ್ಷ ನನ್ನಣ್ಣ ಎಣ್ಣೆ ಮಂಚದಲ್ಲಿ ಮಲಗಿದ್ದ. ಮುಚ್ಚಿಲೋಟ್ಟ್ ಭಗವತೀ… ಇದೆಂತಾ ದುರ್ವಿಧಿ ನಮಗೆ?’
ಜನರು ಸಮಾಧಾನ ಮಾಡುತ್ತಿರುವುದೂ ಕೇಳಿಸುತ್ತಿದೆ.
‘ಬೇಕಿದ್ದರೆ ಜಾಮೀನಿನಲ್ಲಿ ಬಿಡಿಸಿಕೊಂಡು ಬರಲು ಒತೇನ ಮತ್ತೆ ಶಂಕರ ಹೋಗಿದ್ದಾರೆ ಕಲ್ಯಾಣಿ. ನೀನು ಹೀಗೆ ಅರೆಬಾಯಿ ಹಾಕಿ ಅಳಬೇಡ.’
ಅಂಗಳ ತಲುಪಿದ್ದೇ ಸೇರಿದ್ದ ಜನರೆಲ್ಲ ಆತಂಕದಿಂದ ಎದ್ದು ನಿಂತರು.
ನಾನು ಹೇಳಿದೆ:
‘ಇಲ್ಲಿ ಜನಗಣಮನ ಹಾಡುತ್ತಿಲ್ಲವಲ್ಲ. ಕೂತುಕೊಳ್ಳಿ.’
ಈ ನಡುವೆ ವಿಷಯ ತಿಳಿದ ಕಲ್ಯಾಣಿ ಓಡಿ ಬಂದು ತಬ್ಬಿ ಅಳತೊಡಗಿದಳು.
‘ನನಗೇನೂ ಆಗಿಲ್ಲಮ್ಮಾ. ಆತನಿಗೊಂದು ಫೋಟೋ ಬಿಡಿಸಿ ಕೊಡಬೇಕಂತೆ. ಅದಕ್ಕೆ ಕರೆಸಿಕೊಂಡದ್ದು.’
ಅವಳಿಗೆ ನಂಬಿಕೆ ಬರಲಿಲ್ಲ. ಮತ್ತೆ ಅಳತೊಡಗಿದಳು.
ನಾನು ಫೋಟೋ ತೋರಿಸಿದೆ.
ಅಳು ನಿಂತಿತು.
ಜನರೆಲ್ಲ ಫೋಟೋ ಸುತ್ತ ಸೇರಿದರು.
‘ಇದರಲ್ಲಿ ಎಂತದೂ ಕಾಣುತ್ತಿಲ್ಲವಲ್ಲ ನಾರಾಯಣಾ!’
ನಾನು ನಿಟ್ಟುಸಿರಿಟ್ಟೆ. ಫೋಟೋ ನೋಡುತ್ತಿದ್ದ ಜನರ ನಡುವೆ ನನ್ನ ನಿಟ್ಟುಸಿರಿನ ಗುರುತೂ ಅಳಿಯಿತು.
ಚಪ್ಪರ ಮಂಟಪಗಳಿಲ್ಲದೆ, ಗಟ್ಟಿಮೇಳದ ಗದ್ದಲವಿಲ್ಲದೆ, ಹದಿನೈದು ಜನರಿಗೆ ಬಡಿಸಿದ ಊಟದ ಆಡಂಬರದಲ್ಲಿ ಆ ಮದುವೆಯೂ ನಡೆಯಿತು.
ಅದೇನಾಯಿತೋ ಗೊತ್ತಿಲ್ಲ, ತಾಳಿ ಕಟ್ಟುವಾಗ ನನ್ನ ಮನಸ್ಸು ಪೂರ್ತಿ ಶೂನ್ಯವಾಗಿತ್ತು. ಆ ಶೂನ್ಯತೆಯ ನಾಲ್ಕು ಗೋಡೆಗಳಲ್ಲೂ ಭಯದ ನೆರಳುಗಳು ಮತ್ತು ಹೆಜ್ಜೆ ಗುರುತುಗಳು ಮಾತ್ರ.
ಕಲ್ಯಾಣಿ ಕುದಿಸಿದ ಹಾಲಿಗೆ ಸುಮತಿ ಸಕ್ಕರೆ ಹಾಕಿದಳು.
ಮೊದಲ ರಾತ್ರಿಗಾಗಿ ಅದನ್ನವಳು ಎತ್ತಿಕೊಂಡಳು.
ಸುಮತಿಯೊಂದಿಗೆ ಕೇಳಬೇಕಿದ್ದ ಪ್ರಶ್ನೆ ತಲೆಯ ಜೈಲು ಕೋಣೆಯೊಳಗೆ ಉಸಿರು ಕಟ್ಟಿ ನಿಂತಿತ್ತು – ಕೇಳುವೇಟ್ಟ ಎಲ್ಲ ಹೇಳಿದ್ದಾರೆ ತಾನೇ?
ಈ ಪ್ರಶ್ನೆ ದೇಹದ ಸಕಲ ನರ ನಾಡಿಗಳನ್ನೂ ಕೊರೆಯುತ್ತಿತ್ತು.
ಹಾಲಿಗೆ ತುಟಿ ಸೇರಿಸಿದಾಗ ಎರಡು ದಶಕಗಳಾಚೆಯಿಂದ ಕಲಬೆರಕೆಯಿಲ್ಲದ ಸಿಹಿ ರುಚಿ ನಾಲಗೆ ತಟ್ಟಿತು. ಬೆಚ್ಚಿ ಹೋದೆ ನಾನು.
‘ಕಲ್ಯಾಣಿ ಸುಮತಿಯ ಹತ್ತಿರ ಹೇಳಿರಲಿಲ್ಲವಾ?’
‘ಎಂತ?’
‘ನನಗೆ ಸಿಹಿ ಆಗುವುದಿಲ್ಲ.’
(ರೋಗಕ್ಕೆ ಆಗದಿದ್ದರೂ ಪರವಾಗಿಲ್ಲ, ಮೊದಲ ಸಲ ಶುಭಮಧುರ ಇರಲಿ ಅಂತ ಕಲ್ಯಾಣಿ ಸುಮ್ಮನಿದ್ದಿರಬಹುದು.)
ನಾನು ಏಕಾಂತತೆಯ ಒಬ್ಬಂಟಿತನವನ್ನು ಅರಿತೆ.
ನಾನು ಅವಳ ಕೈಗಳನ್ನು ಬಲವಾಗಿ ಅದುಮಿ ಹಿಡಿದುಕೊಂಡೆ. ಹೊರಗಡೆ ಬಂದು ಇಷ್ಟು ಹೊತ್ತೂ ಹೊತ್ತು ನಡೆಯುತ್ತಿದ್ದ ಪ್ರಶ್ನೆಯನ್ನು ಸ್ವಲ್ಪ ಜೋರಾಗಿಯೇ ಕೇಳಿದೆ:
‘ಕೇಳುವೇಟ್ಟ ಎಲ್ಲ ಸಂಗತಿಗಳನ್ನೂ ಹೇಳಿದ್ದಾರೆ ಅಲ್ವಾ, ಸುಮತಿ?’
‘ಎಂತ?’
‘ಹಿಂದೆ ನನ್ನನ್ನು ಪೋಲೀಸರು ಹಿಡಿದುಕೊಂಡು ಹೋದದ್ದು, ಅದರಿಂದ ನಾನು…’
‘ಅದು ಇಡೀ ಊರಿಗೇ ಗೊತ್ತಿರೋ ಗುಟ್ಟು. ಅದನ್ನ ಕೇಳುವೇಟ್ಟ ಹೇಳಿ ಗೊತ್ತಾಗಬೇಕಾ?’
ನಿಶ್ಶಬ್ದತೆ.
ಸುಮತಿ ಹೇಳುತ್ತಿದ್ದಾಳೆ:
‘ಕೇಳುವೇಟ್ಟ ನನ್ನ ಬಗ್ಗೆಯೂ ಎಲ್ಲ ಹೇಳಿದ್ದಾರೆ ತಾನೇ?’
ನಾನು ಅವಳ ಕೈ ಎತ್ತಿ ಮುತ್ತಿಟ್ಟೆ. ಮುತ್ತು ಪೂರ್ತಿ ಹಸಿ ಹಪ್ಪಳದ ವಾಸನೆ.
‘ಸುಮತಿಯ ಬಗ್ಗೆ ಕೇಳುವೇಟ್ಟ ಎಲ್ಲ ಹೇಳಿದ್ದಾರೆ.’
‘ಎಲ್ಲ ಅಂದರೆ?’
‘ಮದುವೆ ಆದದ್ದು, ಗಂಡ ಬಿಟ್ಟು ಹೋದದ್ದು…’
ಸುಮತಿ ತಕ್ಷಣ ಚಿಮ್ಮಿ ಆಚೆ ನಿಂತಳು.
‘ಓಹೋ… ಅವ ಬಿಟ್ಟು ಹೋದದ್ದಾ? ನಾನೇ ಅವನನ್ನು ಬಿಟ್ಟದ್ದು. ನಾನು ಬೆಳಿಗ್ಗೆಯಿಂದ ರಾತ್ರಿ ತನಕ ಹಪ್ಪಳ ತಟ್ಟಿ ದುಡಿದರೆ ಆ
ದುಡ್ಡನ್ನೆಲ್ಲ ಕೊಂಡು ಹೋಗಿ ಕುಡಿದು ಕುಡಿದು…’
ಅವಳು ಅಳು ಶುರುವಿಟ್ಟಳು.
‘ಹೆಣ್ಣೊಬ್ಬಳ ಬಯಕೆ, ನೋವುಗಳನ್ನೆಲ್ಲ ಆತ ಗಡಂಗಿನಲ್ಲಿ ಸುರಿದ. ಸೈತಾನ.’
ನನ್ನ ತಲೆಯೊಳಗೆ ವಿದ್ಯುತ್ ತಂತಿಗಳು ಮುರಿದು ಬಿದ್ದು ಕಿಡಿ ಹಾರಿದವು.
ಹಾಗಾದರೆ ಕೇಳುವೇಟ್ಟ ಹೇಳಿದ್ದು…
ನಾನವಳನ್ನು ಸಮಾಧಾನಿಸಿದೆ.
‘ಹೋಗಲಿ ಬಿಡು. ನೆನಪಿಸಬಾರದ ಸಂಗತಿಗಳನ್ನು ಮತ್ತೆ ಕೆದಕಬಾರದು. ಈ ನಾರಾಯಣ ನಿನ್ನ ಮುಂದೆ ಜೀವಂತ ಇರೋದಕ್ಕೆ ಕಾರಣವೇ ಈ ತತ್ವ.’
ನಮ್ಮ ಮೊದಲ ರಾತ್ರಿ ನಿದ್ದೆಗೆ ಜಾರಿತು.
ಆದರೆ ನನ್ನ ಕಣ್ರೆಪ್ಪೆಗಳು ಕೂಡಲಿಲ್ಲ.
ಆ ಕತ್ತಲಲ್ಲೂ ನೇಣುಕುಣಿಕೆ ನೇತಾಡುವುದನ್ನು ನಾನು ಕಂಡೆ.
ಲೆಕ್ಕಗಳೆಲ್ಲ ಕೈ ಜಾರುತ್ತಿವೆ. ಸತ್ತ ನರಗಳನ್ನು ಯಾವತ್ತೋ ದಫನ್ ಮಾಡಿಯಾಗಿದೆ ಸುಮತಿ. ಕೇಳುವೇಟ್ಟ ಏನೂ ಹೇಳಿಲ್ವೇ?
ನಿದ್ದೆಯಲ್ಲಿ ಸುಮತಿ ನನ್ನನ್ನು ಅಪ್ಪಿಕೊಂಡಳು.
ಮುಚ್ಚಿದ ಕೋಣೆ ಈಗ ನಾಲ್ಕು ಹೋಳಾದವು. ಗೋಡೆಗಳ ನಡುವೆ ಸಹಿಸಲಾಗದ ನೋವು. ದೇಹದಿಂದ ಆತ್ಮವನ್ನು ಹಿಂಡಿ ತೆಗೆಯುವ ನೋವು. ತುಟಿಗಳು ಒಣಗಿ ಕಲ್ಲಾಗುತ್ತಿವೆ. ನೀರು…
ಬಾಯಾರಿದಾಗ ಅವರು ಕೊಟ್ಟ ನೀರು ಉಪ್ಪುಪ್ಪಾಗಿ ಒಗರಾಗಿತ್ತು. ಮೂಗಿಗೆ ಕಬ್ಬಿಣದ ಕಂಬಿಗಳನ್ನು ತುರುಕಿದಂತೆ ಕೆಟ್ಟ ವಾಸನೆ.
ಮೂತ್ರ.
ಮುಂದೆ ಇದ್ದ ಕುರ್ಚಿಯ ಕಡೆಗೆ ಬಗ್ಗಿಸಿ ಲಾಠಿಯಿಂದ ಒಂದೇಟು; ಲಿಂಗಕ್ಕೆ. ರಕ್ತ ಚಿಮ್ಮಿತು.
ಬರೆಯೋ ನನ್ಮಗನೇ. ಈಗ ಬರಿ. ಕ್ರಾಂತಿ ಚಿರಾಯುವಾಗಲಿ. ಮಾಕ್ರ್ಸಿನ ಚಿತ್ರವನ್ನೂ ಬಿಡಿಸಲೇ ಬೋಸುಡಿ ಮಗನೇ.
ಬಿಳಿ ಹಾಳೆಯಲ್ಲಿ ಕೆಂಪು ರಕ್ತ. ಪ್ರಜ್ಞೆ ತಪ್ಪುತ್ತಿದೆ.

Image Courtesy : Matrubhoomi
ನೀರು, ಅಮ್ಮಾ…
ಸುಮತಿ ನೀರು ಹಿಡಿದು ತಟ್ಟಿ ಕರೆಯುತ್ತಿದ್ದಾಳೆ.
ಕಲ್ಯಾಣಿಯ ಕಣ್ಣಾಲಿಗಳು ತುಂಬಿದೆ.
ಮೂರು ನಾಲ್ಕು ಸಲ ಪೋಲೀಸರು ಬಂದರು.
ಬೋಧೇಶ್ವರ ಸಾರ್ ಹೇಳಿದ ಚಿತ್ರ ಮುಗಿದಿದ್ದರೆ ಕೊಂಡು ಹೋಗಲು.
ಮನೆ ಮುಂದೆ ಪೋಲೀಸ್ ಜೀಪು ಬಂದು ನಿಲ್ಲುವಾಗ ಅಕ್ಕಪಕ್ಕದಲ್ಲಿ ಈ ಹಿಂದೆ ಇದ್ದ ಭಯ ಕ್ರಮೇಣ ಇಲ್ಲವಾಯಿತು. ಅದು ನಿತ್ಯ ನಾಟಕವೆಂಬಂತಾಯಿತು.
ಯಾಕೆ ಅಂತ ಗೊತ್ತಿಲ್ಲ, ಬೋಧೇಶ್ವರ ಕೊಟ್ಟಿದ್ದ ಆ ಹಳೆಯ ಪಟವನ್ನು ನೋಡುವಾಗ ನಗುವೇ ಬರುತ್ತದೆ.
ಹಿಂದೆ ಈ ನಾರಾಯಣನ ಮನೆ ಮುಂದೆ ಪೋಲೀಸ್ ಜೀಪು ಬಂದು ನಿಂತದ್ದು ಅವನನ್ನ ಎಣ್ಣೆ ಮಂಚದಲ್ಲಿ ಮಲಗಿಸಳು. ಇವತ್ತು ಬೋಧೇಶ್ವರನ ಅಜ್ಜನನ್ನು ಎಣ್ಣೆಯಲ್ಲಿ ಅದ್ದಬೇಕು…
ಕಲ್ಯಾಣಿ ಚಾದೊಂದಿಗೆ ಬಂದಳು.
‘ಯಾರೊಟ್ಟಿಗೆ ಈ ನಗು ಅಣ್ಣಾ?’
‘ಏ ಎಂತದಿಲ್ಲ. ಹಳೆಯ ಲಾಕಪ್ ಹಿಂಸೆ ನೆನಪಾಯ್ತು.’
ಇದು ಕೇಳಿದ್ದೇ ಕಲ್ಯಾಣಿಯ ಮುಖದಲ್ಲಿ ಭಯದ ಕರಿನೆರಳು ಸುರಿಯಿತು.
(ಅಣ್ಣಂಗೆ ನೆನಪಿಸ್ಕೊಂಡು ನಗೋದಕ್ಕೆ ಸಿಕ್ಕ ಕಾರಣ)
‘ಆ ಸರ್ಕಲ್ ಸಾಹೇಬರ ಅಜ್ಜನ ಚಿತ್ರ ಬಿಡಿಸಿ ಆಯ್ತಾ ಅಣ್ಣಾ?’
ನನಗೆ ಮತ್ತೆ ನಗು ಬಂತು.
‘ಆ ಕಿತ್ತೋದ ಪಟ ನೋಡಿ ನಂಗೊಂದೂ ಅರ್ಥ ಆಗ್ತಿಲ್ಲ ಕಣಮ್ಮಾ.’
‘ಸುಮತಿ ಅತ್ತಿಗೆ ಒಂದು ವಾರ ಬಿಟ್ಟು ಬರ್ತಾರಂತೆ. ತಮ್ಮ ಬಂದು ಹೇಳಿ ಹೋದ. ಹಪ್ಪಳಕ್ಕೆ ಜಾಸ್ತಿ ಆರ್ಡರ್ ಉಂಟಂತೆ.’
ನಗುವೆಲ್ಲ ಒಲೆಯಾಳಕ್ಕೆ ನುಗ್ಗಿ ಮಾಯವಾದವು.
ಸುಮತಿ ನೆನಪಿನ ಕೆಲ ಅಕ್ಷರಗಳಾಗುತ್ತಿದ್ದಾಳೆ. ತುಲಾಭಾರವಾಗುತ್ತಿದ್ದಾಳೆ. ಕೇಳುವೇಟ್ಟ ಹೇಳಿದ್ದೆಲ್ಲ ಸುಳ್ಳು. ಗಂಡಸನ್ನು ತೃಪ್ತಿ ಪಡಿಸಲಾಗದ, ಬರೀ ಹಪ್ಪಳ ಸುಡುವ ಹೆಣ್ಣು. ಅದಕ್ಕೇ ಮೊದಲ ಗಂಡ ಬಿಟ್ಟು ಹೋಗಿದ್ದ. ಪ್ರಾಯ ಆಗ್ತಾ ಬಂತು. ಕೊನೆಗಾಲದಲ್ಲಿ ನಿನಗೊಂದಿಷ್ಟು ಹನಿ ನೀರಿಗಾದರೂ…
ಆತ ಹಲವು ಕಂತುಗಳಲ್ಲಿ ತೆಗೆದುಕೊಂಡಿದ್ದ ಚಿಕ್ಕ ಮತ್ತು ದೊಡ್ಡ ನೋಟುಗಳನ್ನು ಎಣಿಸಲು ನೋಡಿದ. ಒಂದೂ ನೆನಪಿಲ್ಲ. ಆದರೆ ಆತನ ವ್ಯಾಪಾರ ಮಾತ್ರ ಕೆಂಡವಾಗುಳಿಯಿತು. ಕೇಳುವೇಟ್ಟನ ಮಾತಿನಲ್ಲಿ ತುಂಬಿ ತುಳುಕುತ್ತಿದ್ದದ್ದು ಬಂಡಾಯದ ಕಿಡಿ. ಈಗ, ಸಿದ್ಧಾಂತವೆಲ್ಲ ಮಣ್ಣು ಮಸಿ. ಈ ಲೋಕ ಎಷ್ಟೊಂದು ಕರಾಳ ನಾರಾಯಣಾ… ಸುಮತಿ ಅಳುತ್ತಾ ತಳ್ಳಿದ ರಾತ್ರಿಗಳಿಗೆ ಕಾವಲಿದ್ದ ನನ್ನ ಬತ್ತಿದ ಕಣ್ಣುಗಳು…
ಇದ್ದಕ್ಕಿದ್ದಂತೆ ಜೀಪಿನ ಸದ್ದೂ ಸಡನ್ ಬ್ರೇಕೂ ಕೇಳಿಸಿತು.
ತಿರುಗಿ ನೋಡಿದರೆ ಬೋಧೇಶ್ವರ; ಮುಖದಲ್ಲಿ ನಗು ಹೊತ್ತುಕೊಂಡು.
ಬಂದ ಕೂಡಲೇ ಆತ ವಿದ್ಯಾವಂತ ಮೂರ್ಖನಂತೆ ಹೇಳಿದ:
‘ಈ ಕಲಾವಿದರ ಕತೆಯೇ ಇಷ್ಟು ನೋಡಿ. ಏಕಾಂತದಲ್ಲಿ ಕೂತು ಕನಸು ಹೆಣೆಯೋದು. ಅದಕ್ಕೊಂದು ರೂಪ ಸಿಕ್ಕರೆ ಕ್ಯಾನ್ವಾಸಿಗೆ ದಾಟಿಸೋದು.’
ಕಾಲು ಸರಿಯಿಲ್ಲದ ಕುರ್ಚಿಯನ್ನೇ ನೋಡಿ ಎಳೆದು ಬೋಧೇಶ್ವರವ ಮುಂದೆ ಇಟ್ಟೆ.
‘ಕೂತುಕೊಳ್ಳಿ.’
ಕಲ್ಯಾಣಿ ಭಯದಲ್ಲೇ ಕಾಫಿಗಿಟ್ಟಳು.
ಕಾಫಿ ಕುಡಿಯುತ್ತಾ ಬೋಧೇಶ್ವರನ ಆ ಪ್ರಶ್ನೆಯೂ ಬಂತು.
‘ನಾರಾಯಣಾ, ಅಜ್ಜನ ಚಿತ್ರದ ವಿಷಯ ಏನಾಯ್ತು?’
‘ಆಗ್ತಾ ಇದೆ ಸಾರ್. ಆದ್ರೆ ಅದಕ್ಕೊಂದು ಮೂಡ್ ಸಿಗ್ತಾ ಇಲ್ಲ ಅಷ್ಟೇ.’
‘ಎರಡೇ ದಿನದಲ್ಲಿ ಕೊಡ್ತೀನಿ ಅಂತ ಹೇಳಿದ ವಸ್ತು. ಈಗ ಆರೇಳು ತಿಂಗಳುಗಳು ಕಳೆದವು. ನನ್ನ ತಾಳ್ಮೆ ಕೆಡುತ್ತಿದೆ. ಜೊತೆಗೆ ಮುಂದಿನ ತಿಂಗಳು ಪ್ರಮೋಷನ್ನು; ತೃಶ್ಶೂರ್ ಅಥವಾ ಎರ್ನಾಕುಳಂ. ಅಲ್ಲಿಂದ ಹೀಗೆ ಅವಾಗವಾಗ ಬಂದು ಹೋಗುವುದು ಕಷ್ಟ ಅಂತ ಗೊತ್ತಲ್ಲ.’
ಬೋಧೇಶ್ವರನ ಮಾತು ಮುಗಿದಾಗ ಅದರಲ್ಲಿ ಪೋಲೀಸ್ ಭಾಷೆಯೂ ಸೇರಿಕೊಂಡಿತ್ತು. ನಾನು ಹೇಳಿದೆ:
‘ಮದುವೆ ಆಯ್ತಲ್ಲ. ಅದರ ಕೆಲ ತಾಪತ್ರಯಗಳು. ಮತ್ತೆ ಒಟ್ಟಲ್ಲಿ ಮೂಡ್ ಬೇಕಲ್ಲ.’
‘ಇದು ಕ್ರಿಯೇಟಿವ್ ವರ್ಕ್ ಅಲ್ಲವಲ್ಲ ನಾರಾಯಣಾ. ಸಾದಾ ಪೊಟ್ರೇಟ್. ನಾನೊಬ್ಬ ಕಲಾವಿದ ಅಲ್ಲದಿದ್ದರೂ ಚಿತ್ರಕಲೆಯ ಬಗ್ಗೆ ಚೂರುಪಾರು ನನಗೂ ಗೊತ್ತು. ನಾರಾಯಣ ಮೂಡಿಲ್ಲ ಅಂತ ಸುಮ್ಮನೇ ನನ್ನನ್ನು ಸಾಗ ಹಾಕುವ ಹಾಗಿದೆ.’
‘ತಪ್ಪು ತಿಳೀಬೇಡಿ. ಮುಂದಿನ ವಾರ ಖಂಡಿತಾ.’
‘ಪರವಾಗಿಲ್ಲ. ಮತ್ತೂ ಒಂದು ವಾರ ತಗೊಳ್ಳಿ. ನಾನೇ ಬರುತ್ತೇನೆ.’
ಬೋಧೇಶ್ವರನ ಮಾತಲ್ಲಿ ಅದುಮಿಟ್ಟ ಕಡುಕೋಪವಿತ್ತು. ಬೂಟು ಕಾಲನ್ನು ಬಲವಾಗಿ ತುಳಿಯುತ್ತಾ ಆತ ಜೀಪಿನೆಡೆಗೆ ನಡೆದ.
ಲೋಕ ಮತ್ತೊಮ್ಮೆ ಕರಾಳವಾಯಿತು.
ಬೋಧೇಶ್ವರ ನಿನ್ನೆಯೂ ಬಂದ. ಆದರೆ ಅಷ್ಟು ಹೊತ್ತಿಗೆ ನಾನು ಒಂದಷ್ಟು ಕೆಲಸ ಶುರು ಮಾಡಿಯಾಗಿತ್ತು.
ಅವ ಬಂದ ಕೂಡಲೇ ಒಂದು ಸುಳ್ಳು ಹೇಳಿದೆ:
‘ಅಜ್ಜನ ಹೊರ ರೂಪದ ಬಗ್ಗೆ ಕೆಲವು ಗೊಂದಲಗಳು. ಇಲ್ಲದಿದ್ದರೆ ಇಷ್ಟೊತ್ತಿಗೆ ಕೆಲಸ ಮುಗಿದಿರುತ್ತಿತ್ತು.’
ಆದರೆ ಅದನ್ನು ಆತ ನಂಬಿದಂತೆ ಕಾಣಲಿಲ್ಲ. ಈ ಸಲ ಕಲ್ಯಾಣಿ ತಂದುಕೊಟ್ಟ ಕಾಫಿ ಅರ್ಧವಷ್ಟೇ ಕುಡಿದ.
ನಂತರ ಹೇಳಿದ:
‘ಮಿ. ನಾರಾಯಣ, ದುಡ್ಡು ಬೇಕಿದ್ದರೆ ನೀವು ಇನ್ನೂ ಕೇಳಬಹುದು. ನಾನು ಹೀಗೆ ಸರಕಾರದ ದುಡ್ಡಿನಲ್ಲಿ ಎಷ್ಟು ಸಲ ಅಂತ ಬಂದು ಹೋಗೋದು. ಎಲ್ಲಕ್ಕಿಂತ ಊರ ಜನರಿಗೆ ನನ್ನ ಬಗ್ಗೆ ಎಂತ ಅಭಿಪ್ರಾಯ ಬರಬಹುದು?’
ಬೋಧೇಶ್ವರನನ್ನು ಬೀಳ್ಕೊಡುವಾಗ ನಡುಗುತ್ತಲೇ ಹೇಳಿದೆ:
‘ಬೇಡ ಸರ್. ನಾನಿದನ್ನ ಸ್ಟೇಷನ್ ಅಥವಾ ನಿಮ್ಮ ಮನೆಗೇ ತಲುಪಿಸ್ತೇನೆ.’
ಬೋಧೇಶ್ವರ ಗಾಡಿ ಸ್ಟಾರ್ಟ್ ಮಾಡಿ ತಿರುಗಿ ನಿಂತು ಒಮ್ಮೆ ಕ್ರೂರವಾಗಿ ನಕ್ಕ.
‘ಫೈಲಿನೊಳಗೆ ವಡೆಯ ತಂಡು ತುರುಕಿಸಿದ ಹಾಗೆ ಇದೂ ಕೂಡ ಒಂದು ತಮಾಷೆ ಅಲ್ವಾ ನಾರಾಯಣಾ. ಆಗಲ್ಲ ಅಂದ್ರೆ ಹೇಳಿ ಬಿಡಿ. ಮುಂದಿನ ಸಲ ಬರುವಾಗಲಾದರೂ…’
ಅಂದರೆ ಬೋಧೇಶ್ವರ ಅದನ್ನ ಗಮನಿಸಿದ್ದ. ದಾಲ್ವಡೆ.
ಕ್ಷಣ ಬಿಟ್ಟು ಶಾಂತನಾದವನಂತೆ ಆತ ಕೇಳಿದ:
‘ಯಾವಾಗ ಬರಬೇಕು?’
ಆತ ನಿರೀಕ್ಷಿಸಿರದಿದ್ದ ಉತ್ತರ ನನ್ನ ಬಾಯಿಂದ ಬಂತು.
‘ನಾಳೆ ಬೆಳಿಗ್ಗೆ.’
ಬೋಧೇಶ್ವರನಿಗೆ ಅದನ್ನು ನಂಬಲೇ ಆಗಲಿಲ್ಲ.
ಆತ ಮತ್ತೆ ಅದನ್ನೇ ಕೇಳಿದ:
‘ನಾಳೆ ಬೆಳಿಗ್ಗೆ?’
ಮೊದಲು ಇದನ್ನ ತಲೆ ಮೇಲೆ ಹಾಕಿ ಕೂರ್ಬೇಕು. ಆಮೇಲೆ ಒಂದು ಧ್ಯಾನ, ಏಕಾಗ್ರತೆ. ನಾನು ಚಿತ್ರ ಬಿಡಿಸಲು ತೊಡಗಿದೆ.
ಬಣ್ಣ ಕಿತ್ತು ಹೋಗಿದ್ದ ಪಟದಲ್ಲಿ ಬೋಧೇಶ್ವರನ ಅಜ್ಜ ಇಷ್ಟಿಷ್ಟೇ ಮೂಡಿದ.
ರಾತ್ರಿ ಊಟಕ್ಕೆಂದು ತಂಗಿ ಬಂದು ಕರೆದಾಗ ಚಿತ್ರ ರೆಡಿ. ಬಾಕಿ ಇರೋದು ಚಿಲ್ಲರೆ ಟಚ್ಚಿಂಗ್ ಕೆಲಸ ಮಾತ್ರ. ಬೋಧೇಶ್ವರ ಒಂದು ಕಾಟವಾಗತೊಡಗಿದ್ದಾನೆ. ಆತನ ಸಾನಿಧ್ಯ ಮತ್ತು ಆ ಖಾಕಿ ಬಣ್ಣ ಅನಗತ್ಯವಾಗಿ ನೆನಪಿನೊಂದಿಗೆ ಚೆಲ್ಲಾಟ ಆಡುತ್ತಿವೆ. ಉಸಿರುಗಟ್ಟಿಸುತ್ತಿದೆ.
ರಾತ್ರಿ ಊಟ ಮುಗಿಸಿದಂತೆ ಮಾಡಿ ಎದ್ದಾಗ ಕಲ್ಯಾಣಿ ಹೇಳಿದಳು:
‘ಸುಮತಿ ಅತ್ತಿಗೆ ಕೇಸ್ ಕೊಡುತ್ತಾರೆ ಅಂತ ಹೇಳ್ತಿದ್ದಾರೆ.’
ಮನಸ್ಸಲ್ಲಿ ನೋವಿನ ಅಲೆಗಳು ಅಬ್ಬರಿಸಿ ನಿಂತ ಮೇಲೆ ಉತ್ತರವಿಲ್ಲದ ಆ ಪ್ರಶ್ನೆ ಬಂದು ನಿಂತಿತು.
‘ಸುಮತಿ ಅತ್ತಿಗೆ ಹಪ್ಪಳ ಸುಟ್ಟು ಸಂಪಾದಿಸುವ ದುಡ್ಡನ್ನು ಎಗರಿಸೋದಕ್ಕೆ ಅಂತೆ ಈ ಮದುವೆ ನಾಟಕ ಮಾಡಿದ್ದು.’
ಟವೆಲಲ್ಲಿ ಎಷ್ಟೇ ಉಜ್ಜಿದರೂ ಕೈಗಂಟಿದ ಸಾರಿನ ಜಿಡ್ಡು ಹೋಗ್ತಾನೇ ಇಲ್ಲ.
‘ಪಂಚಾತಿಕೆಗೆ ಹೋಗಿದ್ದ ಶಂಕರೇಟ್ಟನಿಗೆ ಚೆನ್ನಾಗಿ ಬೈದು ಕಳಿಸಿದ್ರಂತೆ… ನಿನ್ನನ್ನೂ ಏಕವಚನದಲ್ಲಿ ಕರೆದ್ರಂತೆ.’
ಸುಮ್ಮನೇ ಹೂಂಗುಟ್ಟಿದೆ.
‘ಪರವಾಗಿಲ್ಲ.’
‘ಸುಮ್ಮನೇ ತಬ್ಬಿಕೊಂಡು ಮಲಗೋದಕ್ಕಾದರೆ ಉದ್ದಕ್ಕೆ ಒಂದು ತಲೆ ದಿಂಬು ಮಾಡಿಟ್ಟುಕೊಂಡರೆ ಸಾಕಿತ್ತಲ್ಲ ಅಂತ ಶಂಕರೇಟ್ಟನ ಹತ್ತಿರ ಕೇಳಿದ್ರಂತೆ.’
ಕಂಬಕ್ಕೆ ಒರಗಿ ನಿಂತೆ. ಒಳಗಿನಿಂದ ಕುದಿಯುತ್ತಾ ಬರುವ ಕಣ್ಣೀರನ್ನು ಕಣ್ಣುಗಳು ಬಂಡೆಗಲ್ಲಿನಂತೆ ತಡೆಯುತ್ತಿವೆ.
ಸುಮತಿ ಹಾಗೆಲ್ಲ ಹೇಳುತ್ತಾಳಾ?
ಕಲ್ಯಾಣಿ ನನ್ನ ಉತ್ತರಕ್ಕಾಗಿ ಕಾದು ನಿಂತಳು.
ತಲೆ ತಗ್ಗಿಸಿ ನಾನು ಕೋಣೆ ಸೇರಿಕೊಂಡೆ.
ಕೋಣೆಯಲ್ಲಿ ರಾತ್ರಿಯ ಏಕಾಂತತೆ ತುಂಬಿತು.
ತೆರೆದ ಕಿಟಕಿಯಿಂದ ಬಂದ ಗಾಳಿ ಏನೇನೋ ಕೆದಕಿತು.
ಅಳಬಾರದು.
ಕುಂಡೆಯೊಳಗೆ ಮಂಜುಗಡ್ಡೆ ತಳ್ಳಿದಾಗಲೂ ಅತ್ತಿರಲಿಲ್ಲ ನಾರಾಯಣ.
ಸುಮ್ಮನೇ ಎಣ್ಣೆ ಪಸೆಯಿದ್ದ ಕಪ್ಪು ಬಿಳುಪು ಬ್ರಷನ್ನು ಉಜ್ಜತೊಡಗಿದೆ.
ಸಾವು ಅದೆಷ್ಟು ಸಲ ಒಬ್ಬ ಶರಣಾಗತ ಕೈದಿಯಂತೆ ಅಳುತ್ತಾ ನನ್ನೆದುರು ಬಂದು ನಿಂತಿತ್ತು. ಆದರೆ ಯಾಕೆ ಇನ್ನೂ? ಯಾವ ಹಕ್ಕು ಬಾಕಿಯಿದೆ? ಪ್ರಜ್ಞೆಯೊಳಗಿಂದ ಎಣ್ಣೆ ಕರಟಿದ ವಾಸನೆ ಉಸಿರುಗಟ್ಟಿಸಿತು. ಗೋರಿ ಸೇರಿದ ನರನಾಡಿಗಳಿಗೆ ಸಾವಿನ ಪಶ್ಚಾತ್ತಾಪ.
ಎಣ್ಣೆಮಂಚದಲ್ಲ್ಲಿ ಸೋತು ಮಲಗಿರುವ ಅಂಗಾಂಗಗಳು. ಪಿತ್ತ ರಸದ ವಾಸನೆ ಬಡಿಯುವ ಎಂಜಲು ಗ್ರಂಥಿಯಲ್ಲಿ ದೊಂದಿ ಹಿಡಿದು
ಓಡಿದವು. ಸುಟ್ಟವು.
ಲಾಠಿಯೇಟಿಗೆ ಸತ್ತ ನರಗಳು.
‘ಬರಿಯೋ ನಾಯಿ ಮಗನೇ. ಅವನಮ್ಮನ ಕ್ರಾಂತಿ. ಎಲ್ಲೋ ಮತ್ತೊಬ್ಬ?’
ಜಾರ್ಜ್ ಇವಾಗ ತೃಶ್ಶೂರಲ್ಲಿ ಬ್ಲೇಡ್ ವಹಿವಾಟು ನಡೆಸುತ್ತಿದ್ದಾನೆ. ಜೊತೆಗೆ ಪುಸ್ತಕ ಪ್ರಕಾಶನ ಮತ್ತೆ ಡಿಟಿಪಿ. ಅವತ್ತು ಅಚ್ಯುತಮೆನನ್ ಅವನ ವಿಷಯದಲ್ಲಿ ಕಾಳಜಿ ತೋರಿಸಿದ್ದರಿಂದ ಆತನಿಗೀಗ ಮಕ್ಕಳಿದ್ದಾರೆ. ಜಾರ್ಜ್ನ ಅಪ್ಪ ಹಣವಂತ. ಕಡುವಕೋಡನ್ ನಾರಾಯಣನ ಅಪ್ಪನ ಕೆಲಸ ಬೀಡಿ ಕಟ್ಟುವುದು. ಆದ್ದರಿಂದ ಲಾಕಪ್ಪಲ್ಲೂ ಬಲವಾಗಿ ಸಿಕ್ಕಿತು. ಇವೆಲ್ಲದರ ಜೊತೆಗೆ ಜಾರ್ಜ್ ಓದಿದ್ದು ಇಂಗ್ಲೀಷ್ ಮೀಡಿಯಂ.
ಸುಮತೀ, ಆ ಕೇಳುವೇಟ್ಟ ನಮ್ಮನ್ನು ವಂಚನೆಯ ಕೂಪಕ್ಕೆ ತಳ್ಳಿಬಿಟ್ಟ. ಇವೆಲ್ಲ ಬರಿ ಮಾತಿನ ಗೋಪುರವೆಂದರಿಯದೆ ಮುತ್ತಿದೆ ನಿನ್ನನ್ನು. ಕ್ಷಮಿಸು.
ಬೋಧೇಶ್ವರನ ಅಜ್ಜ ಮತ್ತು ನಾನು ಮಾತ್ರ ಇರುವ ಏಕಾಂತತೆ. ರಾತ್ರಿ ತನ್ನ ಅನಂತ ಯಾತ್ರೆಯಲ್ಲಿ ಸದ್ದುಗದ್ದಲವಿಲ್ಲದೆ ಓಡುತ್ತಿದೆ.
ಬ್ರಷಿನಲ್ಲಿ ಒಂದು ಹನಿ ಬಣ್ಣ ತೆಗೆದು ಬೋಧೇಶ್ವರನ ಅಜ್ಜನ ಕಣ್ಣಿನ ಪಕ್ಕ ಹಿಡಿದೆ.
ಆ ಕ್ಷಣ ಅದು ನಡೆಯಿತು.
ಕ್ಯಾನ್ವಾಸಿನಲ್ಲಿ ಉಪ್ಪು ಭಾರ್ಗವನ್ ಪಿಳ್ಳೆ ಸಾತ್ವಿಕವಾಗಿ ಒಮ್ಮೆ ತಲೆಯಾಡಿಸಿದಂತೆ ಅನಿಸಿತು.
ಪಿಳ್ಳೆ ಮಾತಾಡಿದ:
‘ನಾರಾಯಣಾ, ನನ್ನ ಕಣ್ಣು.’
ಅವನರಿಯದೇ ಬ್ರಶ್ ಕೈ ಜಾರಿತು.
ಅದನ್ನು ಹೆಕ್ಕಲು ಬಗ್ಗಿದಾಗ ತನ್ನ ಗಾಂಧಿ ಟೋಪಿಯನ್ನು ಸರಿ ಮಾಡುತ್ತಾ ಪಿಳ್ಳೆ ಹೇಳಿದ:
‘ಅಲ್ಲ ನಾರಾಯಣಾ, ಇದೆಲ್ಲ ಯಾಕೆ ಅಂತ? ನಾನು ಬಾಪೂಜಿಯೊಟ್ಟಿಗೆ ಸೇರಿ ಎಲುಬೆಲ್ಲ ಮುರಿಯುವ ಹಾಗೆ ಪೆಟ್ಟು ತಿಂದು ಸತ್ತು ಹೋದೆ. ನನ್ನ ಮಗನೇ ನನ್ನನ್ನು ಹಿಡಿದುಕೊಟ್ಟು ದೊಡ್ಡ ಧನಿಕನಾದ. ಈಗ ಅವನ ಮಗ ಬೋಧೇಶ್ವರನಿಗೆ ತನ್ನ ಮೇಲಾಧಿಕಾರಿಗಳಿಗೆ ಸಾರಾಯಿ ಮತ್ತು ಮಾಂಸ ಬಡಿಸುವಾಗ ಗೋಡೆಯ ಮೇಲೊಂದು ಪಟ ತೂಗುತ್ತಿರಬೇಕು. ಗತ್ತಿಗೆ. ಇದು ನನ್ನ ಅಜ್ಜ ಅಂತ. ಹಿಂದೆ ಗಾಂಧೀಜಿಯೊಟ್ಟಿಗೆ ಏಟು ತಿಂದವರು…’
‘ಎಲ್ಲ ಅಳಿಸಿ ಬಿಡು ಮಗಾ. ಸಾವು ಮತ್ತು ಮರೆವಿನ ಅದೃಶ್ಯವಾದ ಕಣಿವೆಯಲ್ಲಿ ನಾನು ಹಕ್ಕಿಯಾಗಿ ಹಾರುತ್ತೇನೆ. ನಾನು ನಿನಗೇನೂ ದ್ರೋಹ ಬಗೆದಿಲ್ಲವಲ್ಲ?’
ನಾನು ತಲೆ ಎತ್ತಿದೆ.
‘ಹಾಗಾದರೆ ಸುಮತಿ?’
ಖಾದಿ ಟೊಪ್ಪಿಯ ತಲೆ ತಗ್ಗಿತು.
ಚಪ್ಪಲಿ ಹಾಕದ ಗಾಂಧೀಜಿ.
ನಾನು ಆ ಕಾಲುಗಳನ್ನು ಹಿಡಿದು ಮಗುವಿನಂತೆ ಅಳತೊಡಗಿದೆ.
‘ಅಜ್ಜಾ, ತಗೋ ನನ್ನ ಕೈ. ನಿಮ್ಮ ಆ ಕಣಿವೆಗೆ ನನ್ನನ್ನು ಎತ್ತಿಕೊಂಡು ಹೋಗು.’
ನಾಳೆ ಖಾಲಿ ಕ್ಯಾನ್ವಾಸಿನ ಕೆಳಗೆ ಸತ್ತು ಬಿದ್ದಿರುವ ನನ್ನನ್ನು ಕಂಡು ಬೋಧೇಶ್ವರ ಗೌರವದಿಂದ ತನ್ನ ಟೊಪ್ಪಿ ತೆಗೆಯಲಿ.
ಅಜ್ಜ ಏನೂ ಹೇಳಲಿಲ್ಲ.
ಕ್ಯಾನ್ವಾಸಿನಲ್ಲಿ ಮೂಡಿದ್ದು ಜಡಗಟ್ಟಿದ ರೂಪ. ಸಣಕಲು ದೇಹದಿಂದ ನೂಲು ಬಿಚ್ಚಿದ ಖಾದಿ ಬಟ್ಟೆ ಮಾತ್ರ ಗಾಳಿಯಲ್ಲಿ ತೊಯ್ದಾಡುತ್ತಿದೆ.
ಬೆಳಗ್ಗೆ.
ಹೊರಗಡೆ ಜೀಪು ಬಂದು ನಿಂತಿತು.
ಬೂಟುಕಾಲಿನ ಸದ್ದು.
ಅಜ್ಜನನ್ನು ಕೊಂಡು ಹೋಗಲು ಬೋಧೇಶ್ವರ ಬರುತ್ತಿದ್ದಾನೆ.
ಕನ್ನಡಕ್ಕೆ: ಸುನೈಫ್ – ಸುನೈಫ್ ಮಲಯಾಳಂನಿಂದ ಅನೇಕ ಕತೆಗಾರರನ್ನೂ ಕವಿಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ. ಪೊಟ್ಟೆಕ್ಕಾಟ್, ಮಾಧವಿಕುಟ್ಟಿ, ಸಂತೋಶ್ ಎಚ್ಚಿಕ್ಕಾನಂ, ಝಹರಾ ಅವ್ತ್ತುರ ಕತೆಗಳು ಮತ್ತು ಸಚ್ಚಿದಾನಂದನ್, ಉಮೇಶ್ ಬಾಬು, ಕಲ್ಪಟ್ಟ ನಾರಾಯಣನ್, ಅಖಿಲ್ ಎಸ್ ಮುರುಳೀಧರನ್, ಪವಿತ್ರನ್ ತೀಕ್ಕುನಿ, ಬಾಲಚಂದ್ರನ್ ಚುಳ್ಳಿಕ್ಕಾಡ್ ರಂಥ ಕವಿಗಳನ್ನು ಅನುವಾದಿಸಿರುವ ಇವರು ಕನ್ನಡದ ಓದುಗರಿಗೆ ಪರಿಚಿತರು. ಇತ್ತೀಚೆಗೆ ಅವರು ವೈಕಂ ಮುಹಮ್ಮದ್ ಬಶೀರರ ಕಾದಂಬರಿಯನ್ನು “ಭೂಮಿಯ ಹಕ್ಕುದಾರರು” ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ.
ಚಿತ್ರ: ಮೇಘಾ ಜೆ ಶೆಟ್ಟಿ