ಗಜಲ್ ಜುಗಲ್ ಬಂದಿ: ಅಲ್ಲಮ-ಸಿರಿ ಅವರ ‘ನನ್ನ ದನಿಗೆ ನಿನ್ನ ದನಿಯು’

 2019ನೇ ಸಾಲಿನ ಶ್ರೀಮತಿ ಸುಮನ್ ಸೋಮಶೇಖರ್ ಸೋಮವಾರಪೇಟೆ ದತ್ತಿ ಪ್ರಶಸ್ತಿ ಪುರಸ್ಕೃತ ಕೃತಿ “ನನ್ನ ದನಿಗೆ ನಿನ್ನ ದನಿಯು” ಬಗ್ಗೆ ಆರ್. ವಿಜಯ ರಾಘವನ್ ಬರೆದ ಲೇಕನ ಇಲ್ಲಿದೆ. ಮುಖ್ಯವಾಗಿ ಹೆಣ್ಣು-ಗಂಡಿನ ನಡುವಿನ ಅಗಣಿತ ಭಾವಲೋಕಗಳನ್ನು  ಚೂಪಾಗಿ ಮೀಟುವ ಈ ರಚನೆಗಳು ಆಪ್ತವಾದ ಓದಿಗೆ ಒಡ್ಡಿಕೊಳ್ಳುವಂಥವು.

ಕನ್ನಡದಲ್ಲಿ ಕೆಲವು ವರ್ಷಗಳಿಂದ ಈಚೆಗೆ ಗಜಲ್ ಪ್ರಕಾರದ ಬಗ್ಗೆ ಕವಿಗಳಲ್ಲಿ ಒಲವು ಹೆಚ್ಚಾಗಿದೆ. ಪ್ರಾಯಶಃ ಇಂತಹ ಒಲವಿಗೆ ಹೈದರಾಬಾದ್ ಕರ್ನಾಟಕ ಭಾಗದ ಕವಿಗಳು ಗಜಲ್ನ ಪ್ರಭಾವಕ್ಕೆ ಹೆಚ್ಚು ಒಳಗಾದದ್ದು ಕಾರಣವಾಗಿರಬೇಕು ಎಂದು ತರ್ಕಿಸಲು ಅವಕಾಶವಿದೆ. ಈಗಲೂ ಗಜಲ್ ಗಾಯಕರು ಹಾಗೂ ರಚನೆಕಾರರಲ್ಲಿ ಬಹುಪಾಲು ಈ ಪ್ರಾಂತ್ಯಗಳಿಂದ ಬಂದವರೇ ಆಗಿದ್ದಾರೆ.

ಗಜಲ್ 7ನೇ ಶತಮಾನದಿಂದಲೂ ಚಾಲ್ತಿಯಲ್ಲಿರುವ, ಅರಬರ ವಿಶ್ವದಿಂದ ಪರ್ಶಿಯಾಗೆ ಹೋಗಿ, ಇಸ್ಲಾಮಿಕ್ ಸುಲ್ತಾನೇಟ್ ಗಳ ಮೂಲಕ ಭಾರತಕ್ಕೆ ಬಂದು ಉತ್ತರ ಭಾರತದಲ್ಲಿ 12ನೇ ಶತಮಾನದಲ್ಲಿ ಅರಳಿದ ಪ್ರಕಾರ. ಭಾರತದ ಮುಖ್ಯಧಾರೆ ಸೂಫಿ ಸಂಗೀತದ್ದಿರಬೇಕು. ಇದು ಕನ್ನಡ ಭಾಷೆಗೆ ಒಲಿದು ಬಂದಿದ್ದಲ್ಲ. ನಾವು ಒಲಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು.

ನಾವು ಕನ್ನಡದಲ್ಲಿ ಬಂದ ಶಾಂತರಸ, ಮುಕ್ತಾಯಕ್ಕ ಮುಂತಾದವರ ಗಜಲ್ ಗಳನ್ನು ಓದಿದ್ದೇವೆ.  ಒಂದಿಷ್ಟು ಗಜಲ್ಗಳನ್ನು  ಕನ್ನಡದಲ್ಲಿ ಗಾಯಕರು ಹಾಡಿದ್ದಾರೆ ಸಹ. ಅವುಗಳನ್ನು ಸಹ ನಾವು ಕೇಳಿದ್ದೇವೆ. ಹೀಗೆ ಕೇಳುವಾಗ ನಮಗೆ ನವೋದಯ ಕಾಲದಲ್ಲಿ ಭಾವಗೀತೆಗಳ ರಸದೌತಣವನ್ನು ಉಣಬಡಿಸಿದ ಹಲವು ಮುಖ್ಯ ಕವಿಗಳ ಕವಿತೆಗಳ ಗಾಯನದ ಜೊತೆ ಹೋಲಿಕೆ ಮಾಡುವ ಮನಸಾಗುವುದು ಸಹಜ.

ಕಾಳಿಂಗರಾಯರಿಂದ ಹಿಡಿದು ಈಚಿನವರೆಗಿನ ಭಾವಗೀತೆಗಳ  ದೊಡ್ಡ ಪರಂಪರೆ ಕನ್ನಡದಲ್ಲಿದೆ. ಇಂತಹ ಪರಂಪರೆಯು ಗಜಲ್ ಹಾಡುಗಾರಿಕೆಗೆ ಇಲ್ಲವಾದರೂ, ಅಶ್ವತ್ ಮೊದಲಾದವರು ಅತ್ತ ಹೊರಳಿದ್ದಿದೆ. ಕನ್ನಡ ಗಜಲ್ ಹಾಡುಗಾರಿಕೆಯ ಎರಡು ಮೂರು ಪ್ರಕಾರಗಳನ್ನು ನಾವಂತೂ ಕೇಳಿದ್ದೇವೆ. ಸಿ ಅಶ್ವಥ್, ಪುತ್ತೂರು ನರಸಿಂಹ ನಾಯಕ್, ರಫೀಕ್ ಶೇಕ್ ಅವರ ಗಜಲ್ ಅಥವಾ ಆ ಮಾದರಿಯ ಹಾಡುಗಾರಿಕೆಗಳು ನನ್ನ ನೆನಪಲ್ಲಿವೆ. ನನ್ನ ಮಟ್ಟಿಗೆ ಹಲವರ ಹಾಡುಗಾರಿಕೆ ಭಾವಗೀತೆಗಳ ಹಾಡುಗಾರಿಕೆಯ ಪ್ರಭಾವಲಯದ ಆಚೆಗೆ ಬಹುದೂರ ಸಾಗುವುದಿಲ್ಲ ಎನಿಸಿದೆ. ಹಾಗಾಗಿಯೇ ಗಝಲ್ ಗಾಯನದ ಹೊಸ ಪರಂಪರೆಯೊಂದು ಕನ್ನಡದಲ್ಲಿ ಮೂಡಬೇಕೆಂಬ ಜರೂರು ಗಜಲ್ ಪ್ರೇಮಿಗಳಿಗೆ ಕಂಡುಬಂದರೆ ಆಶ್ಚರ್ಯವೇನಿಲ್ಲ. ಗಜಲ್ ಕಟ್ಟುಪಾಡುಗಳ ಅರಿವೇ ಇಲ್ಲದಿದ್ದರೂ ಹೆಚ್ಚಿನ ಗಜಲ್ ಗಳ ರಚನೆ ಆಗುತ್ತಲಿದೆ. ಕವಿತೆಯನ್ನು ಸಂಗೀತಕ್ಕೊಲಿಸುವ ಮೋಹವೇ ಅದಕ್ಕೆ ಕಾರಣವಿದ್ದಿರಬಹುದು.

ಬಹಳ ಜನ ತಾವು ಬರೆದದ್ದನ್ನೆಲ್ಲ ಗಜಲ್ ಎಂದು ಭಾವಿಸಿರುವುದಿದೆ. ಗಜಲ್ ನಿರ್ದಿಷ್ಟ ಸ್ವರೂಪದ ಕಾವ್ಯ. ಬರಹ ಅದಕ್ಕೊಗ್ಗಿಯೇ ಇರಬೇಕಾಗುತ್ತದೆ.  ಇವತ್ತಿನ ಅತಿ ಮುಕ್ತ ಕಾವ್ಯರಚನಾ ಸಂದರ್ಭದಲ್ಲಿ ಬಿಗಿಯಾದ ನಿಯಮಗಳುಳ್ಳ ಒಂದು ಪ್ರಕಾರದ ಜೊತೆ ನಾವು ನಡೆಸುವುದು ಅನುಸಂಧಾನವೊ ಅಥವಾ ಸೆಣಸಾಟವೋ ಅರ್ಥವಾಗುವುದಿಲ್ಲ. ಹಾಗಾಗಿಯೇ ಶುದ್ಧ ಕಾವ್ಯಪ್ರೇಮಿಯೊಬ್ಬನಿಗೆ ಮೂಲತಃ ಕಾವ್ಯವಾಗದ ಗಜಲುಗಳ ಬಲವಂತದ ಪ್ರಾಸಗಳು ಆಭಾಸವೆನಿಸಿದರೆ ಆಶ್ಚರ್ಯವೇನಿಲ್ಲ.

ಈಗ ಪರಿಶೀಲನೆಗೆ ಒಳಪಟ್ಟಿರುವ ಕೃತಿ ನನ್ನ ದನಿಗೆ ನಿನ್ನ ದನಿಯುಈ ಬಗೆಯ ಉಪಾದಿಗಳಿಂದ ಬಿಡುಗಡೆ ಪಡೆದಿದೆ ಎನ್ನುವುದು ಸಂತೋಷದ ವಿಚಾರ.

ಸಂಕಲನದ ಕವಿಗಳು : ಗಿರೀಶ್ ಜಕಾಪುರೆ, ಶ್ರೀದೇವಿ ಕೆರೆಮನೆ

ಗಿರೀಶ ಜಕಾಪುರೆ ಅವರದು ಕನ್ನಡ ಗಜಲ್ ಸಾಹಿತ್ಯದಲ್ಲಿ ವಿಶಿಷ್ಟವಾದ ಹೆಸರು. ಅವರು ತಪಸ್ಸಿನಂತೆ ಶ್ರಮಪಟ್ಟು ಈ ಪ್ರಕಾರದ ಸೂಕ್ಷ್ಮಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬೇರೆ ಬೇರೆ ಪ್ರಕಾರಗಳಲ್ಲಿಯೂ ಕೆಲಸ ಮಾಡಿರುವ ಗಿರೀಶ್ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿರುವ ವ್ಯಕ್ತಿ. ಅವರು ಹಾಗೂ ಕವಿಯಿತ್ರಿ ಶ್ರೀದೇವಿ ಕೆರೆಮನೆ ಜೊತೆಗೂಡಿ ಈ ಕೃತಿ ರಚಿಸಿದ್ದಾರೆ. ಕನ್ನಡದಲ್ಲಿ ಇಂತಹ ಪ್ರಯೋಗಗಳು ಬೇರೆ ಕಡೆ ನಡೆದಿರುವ ಬಗ್ಗೆ ನನಗೆ ಮಾಹಿತಿಯಿಲ್ಲ.

ಮಹಾರಾಷ್ಟ್ರದ ಅಕ್ಕಲಕೋಟೆಯ ಗಿರೀಶರೆಂಬ ಮನುಷ್ಯನಿಗೂ ಕಾರವಾರದ ಶ್ರೀದೇವಿ ಕೆರೆಮನೆ ಅವರಿಗೂ ಕಾವ್ಯಕ್ಷೇತ್ರದ ದೊಡ್ಡ ಒಡನಾಟ ದೊರೆತಿರುವುದು ಗಜಲ್ ಎಂಬ  ಮಾಯಾಕಾವ್ಯದ  ನಿಮಿತ್ತವಾಗಿ.  ಶ್ರೀದೇವಿಯವರು ಹಿಂದೆ ಲೆಯೊಳಗಿನ ಮೌನ ಎಂಬ ಗಜಲ್ ಗಳ ಸಂಕಲನವೊಂದನ್ನು 2018ರಲ್ಲಿ ಪ್ರಕಟಿಸಿದವರು. ಇದು ಧಾರವಾಡದಿಂದ ಪ್ರಕಟವಾಗಿದೆ. ಇದಕ್ಕೆ ಮುನ್ನುಡಿ ಬರೆದ ಗಜಲ್ ಕ್ಷೇತ್ರದ ನುರಿತ ಲೇಖಕ ಅಲ್ಲಾಗಿರಿರಾಜ್ ಕನಕಗಿರಿ ಅವರು ಆ ಕೃತಿಯನ್ನು ‘ವಿರಹಕ್ಕೆ ಎದೆಯನ್ನು ಸುಟ್ಟುಕೊಳ್ಳುವ ಬಗೆ’ ಎಂದು ಹೇಳಿದ್ದಾರೆ. ಶ್ರೀದೇವಿ ಅವರ ಒಂದು ಗಜಲ್ ನ ಈ ಕೆಳಗಿನ ಸಾಲುಗಳನ್ನು ಅವರು ಉಲ್ಲೇಖಿಸುತ್ತಾರೆ;

 ಒಲವ ಹಾದಿಯಲ್ಲಿ ಗುಲ್ಮೊಹರ್ ಹಾಸಿದ್ದೇನೆ ನೀ ಎಲ್ಲಿದ್ದರೂ ಬಂದುಬಿಡು

 ಮಲ್ಲಿಗೆ ಚಪ್ಪರವ ದಾರಿಯುದ್ದಕ್ಕೂ ಹಾಸಿದ್ದೇನೆ ನೀ ಎಲ್ಲಿದ್ದರು ಬಂದುಬಿಡು

 ಉಸಿರು ನಿಲ್ಲುವ ತನಕ ನಿನ್ನದೊಂದೆ ಹೆಸರು ಎದೆಯೊಳಗೆ

 ಈ ಮುನಿಸು ತರವಲ್ಲ ಹಠ ತೊರೆದು  ಒಲವ ಹರಿಸಲು ನೀ ಎಲ್ಲಿದ್ದರೂ ಬಂದುಬಿಡು

–   ಹೀಗೆ ಉಲ್ಲೇಖಿಸಿ ಅವರು ಕೆರೆಮನೆಯವರು ಬಳಸಿದ ಮನದ ಮಾತುಗಳು ಮೂಲ ಗಜಲ್ ನ ರೂಪಕ. ನಾವು ಎದೆಯ ಮಾತನ್ನು ಮತ್ತೊಂದು ಎದೆಗೆ ತಲುಪಿಸುವ ಪ್ರಕಾರವೆ ಗಜಲ್ ಎನ್ನುತ್ತಾರೆ.

ಹೀಗೆ ಗಂಡು ಹೆಣ್ಣಿನ ಸಂಬಂಧದ ಪ್ರೀತಿ, ಅಗಲಿಕೆಗಳ, ಕೂಡುವ ಹಂಬಲಗಳ ಮೂಲ ಆಶಯವನ್ನು ಅಲೆಯೊಳಗಿನ ಮೌನ ಕೃತಿಯ ಗಜಲ್ ಗಳು ಹೊಂದಿದ್ದರೂ ಪ್ರಧಾನ ನೆಲೆಯಾಗಿ ಬಿರುಕಿಲ್ಲದ ಬಾಳುವೆಯ ಕಡೆಗೆ ತುಡಿಯುವ ಮನಸ್ಸೊಂದು ಅಲ್ಲಿ ಕಾಣಸಿಗುತ್ತದೆ.

ಎಂದೂ ಅಗಲದೆ ಉಳಿವ ನಿನ್ನ ಆಣೆಗೆ ಬದ್ಧನಾಗಿಬಿಡು 

ಕಳೆದುಕೊಳ್ಳುವ  ಭೀತಿಗೆ ಮನಸು ದ್ರವಿಸಿ ಹೋಗಿದೆ

 

ಎನ್ನುವ ಹೆಣ್ಣಿನ ಮನಸ್ಸು, ಮತ್ತೆ ಅದೇ ಗಂಡನ್ನು –

ಬದುಕಿನ ಮೇಲಿಟ್ಟ ನನ್ನ ನಂಬಿಕೆಯ  ಹುಸಿ ಗೊಳಿಸಬೇಡ

ಅಪನಂಬಿಕೆಯ ಕೊಳೆತ ಹೆಣದ ವಾಸನೆಯ ಸಹಿಸಲಾರೆ – ಎಂದು ಎಚ್ಚರಿಸುವ ಅಥವಾ ಪರಿತಪಿಸುವ ಮನಸ್ಸು ಅಲೆಯೊಳಗಿನ ಮೌನ ಕೃತಿಯಲ್ಲಿ ಪದೇಪದೇ ಕಂಡುಬರುತ್ತದೆ.  ಗಂಡಿನ ಅತಿಸೂಕ್ಷ್ಮ ದಮನಿಕೆಯನ್ನು ಅಷ್ಟೇ ಸೂಕ್ಷ್ಮವಾಗಿ ಶ್ರೀದೇವಿ ಅಭಿವ್ಯಕ್ತಿಸುತ್ತಾರೆ. ಗಂಟು ಕಟ್ಟಿದ ಕಣ್ಣಿನ ಪಟ್ಟಿಗೆ ನಾನು ಜಗದ ಕತ್ತಲೆ ಆಹ್ವಾನಿಸಿಕೊಂಡು ಕುರುಡಿಎಂದು ಅವರು ಗೀತಿಸುತ್ತಾರೆ. ಇಲ್ಲಿನ ಗಜಲ್ ಗಳ ಸ್ವರೂಪ ಗಜಲ್ ರಚಿಸುವ ಮೂಲಕವೇ ಅದರ ಸಾಧ್ಯತೆಗಳನ್ನು ಕಂಡುಕೊಳ್ಳುವ ಬಗೆಯಲ್ಲಿವೆ.

ಈಚೆಗೆ ಪ್ರಕಟಗೊಂಡಿರುವ ಗಿರೀಶ ಮತ್ತು ಶ್ರೀದೇವಿ ಅವರ ಗಜಲ್ ಜುಗಲಬಂದಿ ಎನ್ನಲಾದ  ನನ್ನ ದನಿಗೆ ನಿನ್ನ ದನಿಯು ಎಂಬ ಸಂಕಲನದಲ್ಲಿನ ಶ್ರೀದೇವಿ ಕವಿತೆಗಳಲ್ಲಿನ ಧಾತು ಧೋರಣೆಗಳನ್ನು ರೂಪಿಸಿರುವುದು ಪ್ರಾಯಶಃ ನನ್ನೆದೆಯ ಮಾತನ್ನು ನಿನ್ನೆದೆಗೆ ತಲುಪಿಸುವ ಉತ್ಸಾಹದ ಜತೆಗೂಡಿದ ಜರೂರತು ಹಾಗೂ ನಾನು ಮೇಲೆ ಉಲ್ಲೇಖಿಸಿದ ಸ್ತ್ರೀ-ತ್ವದ ನೆಲೆಗಳು.

ನನ್ನ ದನಿಗೆ ನಿನ್ನ ದನಿಯು ಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮಗೆ ತೋರುವುದು ಇಬ್ಬರ ಕವಿತೆಗಳಲ್ಲಿನ structural similarities. ಅಂದರೆ ಪ್ರತಿಯೊಂದು ಕವಿತೆಯನ್ನೂ ಈ ಸ್ವರೂಪದಲ್ಲಿ ರಚಿಸಬೇಕಿದೆ ಎಂದು ಇಬ್ಬರೂ ನಿಷ್ಕರ್ಷಿಸಿ ಬರೆಯ ಹೊರಡುವುದು. ಈ ಬಗೆಯ ಬರಹಗಳು ಮಾರ್ಗವನ್ನು ಕುರಿತು ಗಮ್ಯವನ್ನು ಕುರಿತದ್ದಕ್ಕಿಂತ ಹೆಚ್ಚು ಗಮನಿಸುತ್ತವೆ. ಆದ್ದರಿಂದ ಇವು ಆಂತರಿಕವಾಗಿ ಒಂದೇ ವಸ್ತುವನ್ನು ನಿರ್ವಹಿಸುವುದಿಲ್ಲ. ಕಾವ್ಯನಿರ್ವಹಣೆಯ ಸಾಮ್ಯವೊಂದರಿಂದಲೇ ವಸ್ತುವನ್ನು ವಿಶ್ಲೇಷಿಸಲಾಗುವುದಿಲ್ಲ. ಆದರೂ ಈ ಇಬ್ಬರೂ ಶಾಯರ್ ಗಳು ತಮ್ಮ ಕೆಲಸದಲ್ಲಿ ವಹಿಸಿರುವ ಎಚ್ಚರ ಮತ್ತು ಮುತುವರ್ಜಿಗಳು ಗಮನಾರ್ಹವಾಗಿವೆ.

ಮೃಗಜಲದ ಹಿಂದೆ ಓಡುವ ನಿನ್ನ ಚಾಳಿ ಹಳೆಯದು

ನಯವಂಚಕರನು ನಂಬುವ ನಿನ್ನ ಚಾಳಿ ಹಳೆಯದು  

-ಎಂದು ಅಲ್ಲಮ ಹೊರಟರೆ ಸಿರಿ ಹೊರಡುವುದು.

ಮಾತಾಡುತ್ತಲೇ ಮೌನವಾಗಿಬಿಡುವ ನಿನ್ನ ಚಾಳಿ ಹಳೆಯದು

ಮೌನದಲ್ಲೇ ಮನದ ಮಾತು ಸೃಜಿಸುವ ನಿನ್ನ ಚಾಳಿ ಹಳೆಯದು ಎನ್ನುತ್ತ. ಇಲ್ಲಿ ನಿನ್ನ ಚಾಳಿ ಹಳೆಯದು ಎಂಬ ರಿಫ್ರೈನ್ ಕಾವ್ಯವಸ್ತುವನ್ನು ರೂಪಿಸಲು ಒದಗುವುದು ಭಿನ್ನ ಪಾತಳಿಗಳಲ್ಲಿ.

ನಿನ್ನ ಸುತ್ತ ನೂರು ಕಣ್ಣು, ಹೇಗೆ ನಿನ್ನ ಮುಟ್ಟಲಿ?

ನೀನು ಬೆಣ್ಣೆ, ಬೆಂಕಿ ನಾನು, ಹೇಗೆ ನಿನ್ನ ಮುಟ್ಟಲಿ?

– ಎಂದು ಅಲ್ಲಮ ಹೊರಟರೆ, ಸಿರಿ ಹೊರಡುವುದು

ತಿಂಗಳ ಮೂರು ದಿನ  ಇನ್ನೂ ಮುಗಿದಿಲ್ಲ ಹೇಗೆ ನಿನ್ನ ಮುಟ್ಟಲಿ

ಮೈಗಂಟಿದ ಮೈಲಿಗೆ ಇನ್ನು ತೊಳೆದಿಲ್ಲ ಹೇಗೆ ನಿನ್ನ ಮುಟ್ಟಲಿ

– ಎನ್ನುತ್ತ.

ಹಾಗಾಗಿ ಆಲೋಚನೆಗಳು ಒಂದಾಗಿ ರೂಪುಗೊಳ್ಳದಿರುವುದನ್ನು ನಾವು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಜೊತೆಗೆ ಇಲ್ಲಿರುವ ಧ್ವನಿಯ ವಿರೋಧವನ್ನು ನಾವು ಸಹ ಗಮನಿಸಬೇಕು. ಇಂತಹ ಉದಾಹರಣೆಗಳು ಇಡೀ ಸಂಕಲನದುದ್ದಕ್ಕೂ ಕಂಡುಬರುತ್ತವೆ. ಜುಗಲ್ ಬಂದಿಯ ಕೊನೆಗೆ ಎಲ್ಲವೂ ಸೇರಿದ ದನಿಯಾಗಿ ಭಿನ್ನ ಭಾವವಳಿದು ಏಕವಾಗುತ್ತದೆ. ಆದರೆ ಇಲ್ಲಿ ದೂರ ತನ್ನ ಗಡಿಗಳನ್ನು ಗುರುತಿಸಿಕೊಳ್ಳುತ್ತಲಿರುತ್ತದೆ. ಹಾಗಾಗಿ ಈ ಸಂಕಲನವನ್ನು ನನ್ನ ದನಿಗೆ ನಿನ್ನ ದನಿಯು ಎಂದು ಓದಲಾಗುವುದಿಲ್ಲ.  ಬದಲಿಗೆ ನನ್ನ ದನಿಯು ನನ್ನ ದನಿಯು, ನಿನ್ನದನಿಯು ನಿನ್ನ ದನಿಯು ಎಂದೇ ಓದಬೇಕಾಗುತ್ತದೆ. ಎರಡೂ ಕಾವ್ಯಗಳ ಭಿನ್ನತೆಯನ್ನು ನಾವು ಗಮನಿಸಬೇಕಾಗುತ್ತದೆ.

ಇದಕ್ಕೆ ಇನ್ನೊಂದು ಕಾರಣವಿದೆ. ಶ್ರೀದೇವಿ ಹೆಣ್ಣನ್ನು ಕಂಡಿರುವ, ಕಾಣುವ, ಕಾಣಬಯಸುವ ಬಗೆಯೊಂದು ಬಗೆ. ಅವರು  ಅಲೆಯೊಳಗಿನ ಮೌನ  ಕೃತಿಯಲ್ಲಿ ತಮ್ಮ ಜಾಯಮಾನಕ್ಕೆ  ಒಗ್ಗದ ಕವಿತೆಗಳನ್ನು ಬರೆದಂತೆ ಕಂಡಿದ್ದರೆ ಅದೇನು ದೊಡ್ಡ ವಿಷಯವಲ್ಲ. ಏಕೆಂದರೆ ಇದನ್ನು ಗಜಲ್ ಬರೆವಣಿಗೆಯ ಅಭ್ಯಾಸದ ರಚನೆಗಳಂತೆ ಕಾಣಲು ಸಾಧ್ಯ

ಅಲೆಯೊಳಗಿನ ಮೌನ  ಕೃತಿಯಲ್ಲಿನ ಗಜಲ್ ಗಳ ನಿರ್ವಹಣೆಗೂ ನನ್ನ ದನಿಗೆ ಕೃತಿಯಲ್ಲಿನ ಗಜಲ್ ಗಳ ನಿರ್ವಹಣೆಗೂ ಇರುವ ವ್ಯತ್ಯಾಸ ಬಹಳ ದೊಡ್ಡದು. ಇಲ್ಲಿ ಶ್ರೀದೇವಿ ಅವರಿಗೆ ಅಂತರಂಗದ ಕಾವ್ಯವನ್ನು ಹೊಸವಿನ್ಯಾಸಕ್ಕೊಗ್ಗಿಸಲು ಬೇಕಾದ ಕಸುವು ದಕ್ಕಿದೆ. ಅಪರೂಪದ, ಗಟ್ಟಿ ಕಾವ್ಯಧ್ವನಿಯ ಮಾತುಗಳು ಇಲ್ಲಿನ ಶೇರ್ ಗಳಲ್ಲಿ ಒದಗಿ ಬಂದಿವೆ. ಹೆಣ್ಣಿನ ಗಟ್ಟಿ ದನಿಯು ಇಲ್ಲಿ ನಮಗೆ ಬಹಳ ಮುಖ್ಯವಾಗಿ ಕಾಣಸಿಗುತ್ತದೆ. ಅವರ ಆಂತರ್ಯದ ಮಾತಿನ ದನಿಯಾಗಿ ಕಾಮನ್ ಆಗಿರುವ ಆದರೆ ಶ್ರೀದೇವಿಯ ಕಾವ್ಯಕ್ಕೆ ಹೆಚ್ಚು ಅನ್ವಯಿಸುವ ಅರ್ಪಣೆಯನ್ನು ನೋಡಬೇಕು:

 

ಸಾವಿರ ಮಾತು ಎದೆಯಲ್ಲಿ ತುಂಬಿ

ಸ್ವರಕ್ಕೊಂದು ಗಟ್ಟಿದನಿ ನೀಡಿ

ಪ್ರತಿ ಹೆಜ್ಜೆಯೂ ಜೊತೆ ಸಾಗಿ

ಘನತೆ, ಗೌರವ, ಹೆಮ್ಮೆಯಿಂದ

ತಲೆಯೆತ್ತಿ ನಿಲ್ಲುವಂತೆ ಮಾಡಿದ

ಅಕ್ಷರವೆಂಬ ಆಯುಧಕ್ಕೆ;

ಲೇಖನಿಯೆಂಬ ಖಡ್ಗಕ್ಕೆ

ಗಿರೀಶ ಅವರು ಗಜಲ್ ಪ್ರಕಾರದ ಅನುಭವೀ ಪ್ರಾಕ್ಟೀಶನರ್ ಆಗಿರುವುದರಿಂದ ಇಲ್ಲಿನ ಕಾವ್ಯದ ಗ್ರಹಿಕೆ ಮತ್ತು ಅಭಿವ್ಯಕ್ತಿ ಅವರಿಗೆ ತೊಡಕಾಗಿಲ್ಲ. ಅದೇ ಸಮಯದಲ್ಲಿ ಈ ಬಗೆಯ ಯಾವುದೇ ಇಸಂಗಳು ಗಿರೀಶರಲ್ಲಿ ಕಾಣುವುದಿಲ್ಲ. ಇದು ಇಲ್ಲಿನ ಗಜಲ್ ಗಳ ಶಕ್ತಿಯನ್ನೇನೂ ಕುಂದಿಸುವುದಿಲ್ಲ. ಬದಲಿಗೆ ಇವೆರಡನ್ನೂ ಬಿಡಿಬಿಡಿ ಓದಬೇಕಾದ ಅನಿವಾರ್ಯತೆಯ ಕುರಿತು ಹೇಳುತ್ತದಷ್ಟೇ. ಇನ್ನೊಂದೆರಡು ಶಾಯಿರಿ ನೋಡೋಣ:

ಅಲ್ಲಮ – 3 (ಜುಲ್ ಕಾಫಿಯಾ)

ಅವಳ ನೆನಪುಗಳನು ಗುಡಿಸಿ ಚೆಲ್ಲದಿರು ಈಗ ಎದೆಯಲ್ಲಿ ಉಳಿದಿರುವುದು ಅದಿಷ್ಟೆ

ದೀಪ ಬೆಳಗಿಸಿ ಕತ್ತಲ ದೂಡದಿರು, ಈಗ ಮನೆಯಲ್ಲಿ ಉಳಿದಿರುವುದು ಅದಿಷ್ಟೆ  

ಸಿರಿ – 3 (ಜುಲ್ ಕಾಫಿಯಾ)

ಹೆಣ್ಣು ಕುಲ ಕಂಡ ಸಾವಿರದ ಕನಸುಗಳಲ್ಲಿ ಉಳಿದಿರುವುದು ಅದಿಷ್ಟೆ

ಅಹಂಕಾರದಿ ಘಾಸಿಗೊಳ್ಳದ ಮನಗಳಲ್ಲಿ ಉಳಿದಿರುವುದು ಅದಿಷ್ಟೆ  

***

ಅಲ್ಲಮ – 57 (ಸ್ವರಕಾಫಿಯಾ)

ಹೇಳಲಾಗದ ಬಯಕೆ, ನಿನ್ನ ಕಂಗಳಲಿ

ಭಾವ ಮೀರಿದ ಭಾಷೆ, ನಿನ್ನ ಕಂಗಳಲಿ

ಸಿರಿ – 57

ಅದೆಂತಹ ಪ್ರೀತಿ ಹೆಪ್ಪುಗಟ್ಟಿದೆ ನಿನ್ನ ಕಂಗಳಲಿ

ಅದೆಷ್ಟು ನಿಸ್ವಾರ್ಥ ಮಡುವುಗಟ್ಟಿದೆ ನಿನ್ನ ಕಂಗಳಲಿ

ಗ್ರಹಿಕೆಯ ನೆಲೆಗಳನ್ನು ಅರುಹುವ ಇಂತಹ ಹಲವು ಶೇರ್ ಗಳನ್ನು ಹೆಕ್ಕಿಕೊಡುವ ಕೆಲಸವನ್ನು ಕೃತಿ ಪರಿಶೀಲನೆಯಲ್ಲಿ ಮಾಡುವುದು ಬೇಡವೆನ್ನಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಕೃತಿಯ ಓದು ಮುಖ್ಯವಾಗಬೇಕೆನ್ನುವುದು.

ಇದಕ್ಕೂ ಜೊತೆಗೆ ಈ ಸಂಗ್ರಹವ ರೂಪಿಸುವಲ್ಲಿ ಸಿರಿ ಹೆಣ್ಣೆಂಬ, ಅಲ್ಲಮ ಗಂಡೆಂಬ undercurrent ಕೆಲಸ ಮಾಡಿರುವುದು ಗೋಚರಿಸುತ್ತದೆ. ಈ ಕಾರಣದಿಂದಲೇ ನಾನು ಈ ಕೃತಿಯ ಒಂದು ಪಾರ್ಶ್ವವನ್ನು ತುಸು ಹೆಚ್ಚಿಗೆ ಪರಿಶೀಲಿಸುತ್ತಿದ್ದೇನೆ. ಅದು ಶ್ರೀದೇವಿಯ ಬಿಡುಗಡೆಯ ಹಂಬಲದ ಭಾಗ.

ಹಣೆ ತುಂಬ ಕುಂಕುಮ, ಮೈ ತುಂಬ ಸೆರಗಿಟ್ಟು ನಾಚಿಕೆಯ ನಟಿಸಬೇಕು

ನಾಜೂಕಿನ ಜನ ಛೀಮಾರಿ ಹಾಕಬಹುದು ನಾನು ಕುಡಿದರೆ ಸರಾಯಿ

***

ಹೆಣ್ಣಿಗಂಟಿದ ಭಾಷ್ಯ ಕೊಚ್ಚಿಹೋಗಬಹುದು ನಾನು ಕುಡಿದರೆ ಸರಾಯಿ

***

ಸರಿ ತಪ್ಪುಗಳ ಪರಿಧಿಯ ಗೆರೆ ದಾಟಬಹುದು ನಾನು ಕುಡಿದರೆ ಸರಾಯಿ

***

ಕಾನೇರಿ ಕಣಿವೆಯಲಿ ಕತ್ತಲಾಗಬಹುದು ನಾನು ಕುಡಿದರೆ ಸರಾಯಿ

– ಈ ಉಲ್ಲಂಘನೆಯು ಹೊಸ ಆಲೋಚನೆಯ ಭಾಗವಾಗಿ, ಇತ್ಯಾತ್ಮಕವಾಗಿ ಬಂದಿದೆ, ಸ್ವೇಚ್ಛೆಯ ಹಂಬಲದಿಂದಲ್ಲ.

ಗಜಲಿನ (ಆರೋಪಿತ)  ಕಾವ್ಯಧರ್ಮಕ್ಕೆಅನುಗುಣವಾಗಿ ಇಲ್ಲಿನ ‘ಸಿರಿ’ ಗಜಲ್ ಗಳಲ್ಲಿ ಹೆಣ್ಣಿನ ಹಂಬಲಗಳು ಮೂಡಿವೆಯಾದರೂ ಅದಕ್ಕೆ ತಾಯ್ತನದ, ಪ್ರೇಮಿಯ, ಲುಕ್ಸಾನಿನ, ಗಳಿಕೆಯ ಆಯಾಮಗಳೂ, ಜೊತೆಗೆ ಗಂಡು ಹೆಣ್ಣಿನ ಬದುಕು ಆತ್ಮ ಸಂಗಾತದೊಡನೆ ಪೂರ್ಣವಾಗುವ, ಆಗುವ ಹಂಬಲದ ಚಿತ್ರಗಳೂ ಇವೆ. ಅದರೊಟ್ಟಿಗೆ ಭರವಸೆಯ ನಿರೀಕ್ಷೆಗಳೂ ಇವೆ. ಅದಕ್ಕೆ ತುಲನೆಯಲ್ಲಿ ಗಿರೀಶರ ದನಿ ಸಾಂಪ್ರದಾಯಿಕವಾಗಿದೆ.

 

3 comments to “ಗಜಲ್ ಜುಗಲ್ ಬಂದಿ: ಅಲ್ಲಮ-ಸಿರಿ ಅವರ ‘ನನ್ನ ದನಿಗೆ ನಿನ್ನ ದನಿಯು’”
  1. ಇಡೀ ಭಾರತೀಯ ಸಮಾಜವೇ ಪುರುಷ ಪ್ರಧಾನ. ಅದಕ್ಕೆ ಯಾವ ಕ್ಷೇತ್ರವೂ ಹೊರತಾಗಿಲ್ಲ. ವಿಮರ್ಶಾ ಕ್ಷೇತ್ರವೂ ಒಳಗೊಂಡಂತೆ. ಗಜಲ್ ಮೊದಲು ಕೇವಲ ಪುರುಷ ಪಾರಮ್ಯ ಇರುವಂತಹ ಕಾವ್ಯ. ಹೀಗಾಗಿ ಗಂಡು ದನಿ ಸಹಜವಾಗಿ ಸಾಂಪ್ರದಾಯಿಕ ಎನ್ನಿಸಿಕೊಳ್ಳುತ್ತದೆ. ಅದಕ್ಕೆ ಹೊರತಾದ ಹೆಣ್ಣಿನ ಪರವಾದ ದನಿ ಬಂದರೆ ಅದು ಸಹಜ ಎನಿಸುವುದಿಲ್ಲ. ಅದು ವಿಮರ್ಶಕರಿಗೂ ಕೂಡ. ಹೀಗಾಗಿ ಇಲ್ಲಿ ಕೂಡ ಗಂಡು ದನಿ ಹೆಚ್ಚು ಸಹಜ, ಸಾಂಪ್ರದಾಯಿಕ ನೆಲೆಗಟ್ಟು ಎನ್ನಿಸಿಕೊಂಡರೆ ಹೆಣ್ಣು ದನಿ ಅಸಹಜ ಮತ್ತು ಸಂಪ್ರದಾಯ, ಗಜಲ್ ಚೌಕಟ್ಟು ಮೀರಿದ್ದು ಎನಿಸುತ್ತದೆ. ಇಲ್ಲಿ ವಿಮರ್ಶಕರು ಹೇಳಿದಂತೆ ಗಂಡು ಕುಡಿಯುವ ಸರಾಯಿ ಸಹಜ. ಅದೇ ಹೆಣ್ಣು ಕುಡಿಯುವ ಸರಾಯಿ ಅತಿರೇಕ ಎನಿಸುವಂತೆ. ಗಂಡು ತನಗೆ ಎರಡು ವರ್ಷ ಗ್ಯಾಪ್ ಬೇಕು. ಎಂದು ಕಾಯಲು ಹೇಳಿದರೆ ಅದು ಸಹಜ. ಅದೇ ಮಾತನ್ನು ಹೆಣ್ಣು ಹೇಳಿದರೆ ಆಕೆ ನೀತಿಗೆಟ್ಟವಳಾಗುತ್ತಾಳೆ. ಯಾರಾದರೂ ಹೆಣ್ಣು ಗಂಡಿನ ತಾರತಮ್ಯ ಮೀರಬಹುದೆಂದು ಕಾಯುತ್ತಿರುವೆ

ಪ್ರತಿಕ್ರಿಯಿಸಿ