೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ. ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಎರಡನೇ ಭಾಗದ ಮೊದಲನೇ ಕಂತು ಋತುಮಾನ ದ ಓದುಗರಿಗಾಗಿ.
ರೂಪಕ ನನ್ನ ಇಂದಿನ ಉಪನ್ಯಾಸದ ವಿಷಯವಾಗಿರುವುದರಿಂದ, ಒಂದು ರೂಪಕದೊಂದಿಗೆ ಆರಂಭಿಸುತ್ತೇನೆ. ನಾನು ಪ್ರಸ್ತುತಪಡಿಸಲಿರುವ ಅನೇಕ ರೂಪಕಗಳಲ್ಲಿ ಮೊದಲನೆಯದಾದ ಇದು ಮೂಲತಃ ಚೀನಾದ್ದು. ನನಗೆ ತಿಳಿದಿರುವಂತೆ ಚೀನಾದಲ್ಲಿ ವಿಶ್ವ ಎನ್ನಲು ಬಳಸುವ ಪದದ ಅರ್ಥ “ಹತ್ತು ಸಾವಿರ ಸಂಗತಿಗಳು” ಅಥವಾ – ಅನುವಾದಕರ ಅಭಿರುಚಿಯನ್ನವಲಂಬಿಸಿ – “ಹತ್ತು ಸಾವಿರ ಜೀವಿಗಳು”.
ಈ ಹತ್ತು ಸಾವಿರವೆಂಬ ಹಗುರ ಲೆಕ್ಕವನ್ನು ಅವಗಣಿಸೋಣ. ಯಾಕೆಂದರೆ, ಜಗತ್ತಿನಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಇರುವೆಗಳು, ಹತ್ತು ಸಾವಿರಕ್ಕಿಂತ ಹೆಚ್ಚು ಮನುಷ್ಯರು, ಹತ್ತು ಸಾವಿರಕ್ಕಿಂತ ಹೆಚ್ಚು ಆಸೆ, ಭಯ, ಆತಂಕಗಳಿವೆ ತಾನೆ. ಎಲ್ಲ ರೂಪಕಗಳೂ ಸಹ ಎರಡು ಪ್ರತ್ಯೇಕ ಸಂಗತಿಗಳ ಹೆಣಿಗೆ ಎನ್ನುವುದನ್ನು ನೆನಪಿನಲ್ಲಿರಿಸಿಕೊಂಡರೆ, ಮತ್ತು ಈ ಹತ್ತು ಸಾವಿರದ ಲೆಕ್ಕವನ್ನೇ ನಾವು ಹಿಡಿದು ಹೊರಟೆವಾದರೆ, ಇವುಗಳ ಮೂಲಕ ನಂಬಲಸಾಧ್ಯ ಸಂಖ್ಯೆಯ ರೂಪಕಗಳನ್ನು ನಾವು ರಚಿಸಬಹುದು, ಅಷ್ಟು ವೇಳೆ ನಮಗಿದ್ದರೆ! ನನ್ನ ಬೀಜಗಣಿತವೇನೂ ಗಟ್ಟಿ ಇಲ್ಲ, ಆದರೂ ನನ್ನ ಲೆಕ್ಕದ ಪ್ರಕಾರ ಆ ಸಂಖ್ಯೆ ಹತ್ತು ಸಾವಿರ ಗುಣಿಲೆ ೯೯೯೯ ಗುಣಿಲೆ ೯೯೯೯, ಇತ್ಯಾದಿ. ಈ ಗಣಿತ ನಮಗೆ ನೀಡುವ ಒಟ್ಟಾರೆ ಸಂಖ್ಯೆ ಅನಂತವೇನಲ್ಲ, ಆದರೂ ಅದು ನಮ್ಮ ಕಲ್ಪನೆಗೆ ಮೀರಿದ್ದು. ಅಸಂಖ್ಯ ಸಂಯೋಜನೆಗಳಲ್ಲಿ ರೂಪಕಗಳನ್ನು ಹೊಸೆಯಬಹುದಾದರೂ, ನಾವು ಯೋಚಿಸಬೇಕಾಗಿರುವ ಪ್ರಶ್ನೆ ಎಂದರೆ ಯಾಕೆ ಲೋಕದ ಎಲ್ಲೆಡೆಯ ಕವಿಗಳು ಮತ್ತು ಎಲ್ಲ ಕಾಲದ ಕವಿಗಳು ಸೀಮಿತ ಸಂಖ್ಯೆಯ ರೂಪಕಗಳನ್ನೇ ಪದೇ ಪದೇ ಬಳಸುತ್ತಾರೆ?
ಕವಿಗಳು ಯಾವಾಗಲೂ ಅದೇ ಅದೇ ರೂಪಕಗಳನ್ನು ಪದೇ ಪದೇ ಬಳಸುತ್ತಾರೆ ಎಂದು ೧೯೦೯ರಷ್ಟು ಹಿಂದೇಯೇ ಹೇಳಿದ ಅರ್ಜೆಂಟೀನಾದ ಕವಿ, ಲ್ಯೂಗೋನ್ಸ್, ತಾನು ಚಂದಿರನಿಗಾಗಿ ಹೊಸ ರೂಪಕವನ್ನು ಶೋಧಿಸುವುದಾಗಿ ಹೇಳಿ, ಅಂತಹ ನೂರಾರು ರೂಪಕಗಳನ್ನು ಹೊಸೆದದ್ದು ಸಹ ನಿಜ. “ಲೂನಾರಿಯೋ ಸೆಂಟಿಮೆಂಟಲ್” ಎಂಬ ಪುಸ್ತಕದ ಮುನ್ನುಡಿಯಲ್ಲಿ ಅವನು ರೂಪಕಗಳೆಲ್ಲ ಸತ್ತು ಹೋಗಿವೆ ಎಂದೂ ಸಹ ಬರೆದಿದ್ದ. ನಮಗೆಲ್ಲ ಜೀವಂತ ಮತ್ತು ಮೃತ ರೂಪಕಗಳ ನಡುವಿನ ಭಿನ್ನತೆ ತಿಳಿದೇ ತಿಳಿಯುತ್ತದೆ. ಒಂದು ಒಳ್ಳೆಯ ವ್ಯುತ್ಪತ್ತಿ ಶಬ್ದಕೋಶವನ್ನು ತೆರೆದು ಯಾವುದಾದರೂ ಒಂದು ಪದವನ್ನು ಎತ್ತಿಕೊಂಡರೆ, ಅದರ ವಿವರಣೆಗಳಲ್ಲಿ ಎಲ್ಲೋ ಹುದುಗಿರುವ ಒಂದಾದರೂ ರೂಪಕ ನಮಗೆ ಸಿಕ್ಕುತ್ತದೆ.
ಉಧಾಹರಣೆಗೆ – ಬಿಯೋವುಲ್ಫ್ ಕವನದ ಮೊದಲ ಸಾಲಿನಲ್ಲಿಯೇ ಕಾಣಬರುವ – ‘threat’ ಎಂಬ ಹಳೆಯ ಇಂಗ್ಲೀಷ ಪದದ ಅರ್ಥ, “ಕೋಪೋದ್ರಿಕ್ತ ಗುಂಪು”. ಆದರೆ, ಈಗ ಈ ಶಬ್ದ ಮೂಲಕಾರಣವಾದ ಗುಂಪಿನ ಬದಲಾಗಿ, ಅದರ ಪರಿಣಾಮವಾದ ಭೀತಿಯ ಕುರಿತಾಗಿದೆ. ಅಥವಾ ಇಂಗ್ಲೀಷಿನ ಇನ್ನೊಂದು ಸಾಧಾರಣ ಪದವನ್ನೇ ನೋಡೋಣ – “king”. ಈ ಶಬ್ದದ ಮೂಲ ಪದ cyning, ಮತ್ತು ಅದರ ಅರ್ಥ “ತನ್ನ ಸಮುದಾಯದ ಪ್ರತಿನಿಧಿ” (kin) ಎಂದಾಗಿತ್ತು. ಹಾಗೆಂದೇ, ವ್ಯುತ್ಪತ್ತಿಯ ಪ್ರಕಾರ, ಇಂಗ್ಲೀಷ ಭಾಷೆಯ “king” (ರಾಜ), “kinsman” (ಸಮುದಾಯದವ) ಮತ್ತು “gentleman” (ಸಜ್ಜನ) ಇವೆಲ್ಲದರ ಅರ್ಥ ಒಂದೇ – ಸಮುದಾಯಕ್ಕಾಗಿ ಇರುವವ. ಹಾಗಿರುವಾಗಲೂ, “The king sat in his counting house, counting his money” (ತನ್ನ ಲೆಕ್ಕದ ಮನೆಯಲ್ಲಿ ಕುಳಿತು ರಾಜ ತನ್ನ ಹಣವನ್ನು ಎಣಿಸುತ್ತಿದ್ದ) ಎಂಬ ಸಾಲಿನಲ್ಲಿ “king” ಎನ್ನುವ ಪದವನ್ನು ನಾವೇನೂ ರೂಪಕವೆಂದು ಯೋಚಿಸುವುದಿಲ್ಲ. ಅಮೂರ್ತ ಯೋಚನೆಗೆ ತೊಡಗಿದರೆ ನಾವು ಪದಗಳು ರೂಪಕಗಳಾಗಿದ್ದವು ಎನ್ನುವುದನ್ನು ಮರೆಯಬೇಕಾಗುತ್ತದೆ. ಉದಾಹರಣೆಗೆ, consider ಎಂಬ ಇಂಗ್ಲೀಷ ಪದದಲ್ಲಿ ಜ್ಯೋತಿಷ್ಯದ ಸೂಚನೆ ಇದೆ: ಮೂಲತಃ ಈ ಪದ “being with the stars” (ತಾರೆಗಳ ಜೊತೆಗೆ ಇರುವುದು), “making a horoscope” (ಜಾತಕ ತಯಾರಿಸುವುದು) ಎಂಬ ಅರ್ಥವುಳ್ಳದ್ದು! ಅದಕ್ಕೇ, ನಾನೆಂದೆ, ಒಂದು ಕಾಲದಲ್ಲಿ ರೂಪಕವಾಗಿತ್ತು ಎನ್ನುವುದನ್ನು ನಾವು ಮರೆತುಬಿಡುತ್ತೆವೆ.
ನನ್ನ ದೃಷ್ಟಿಯಲ್ಲಿ ರೂಪಕವೊಂದರ ಬಗೆಗೆ ಮುಖ್ಯವಾದದ್ದೆಂದರೆ, ಓದುಗರಿಗೆ ಅಥವಾ ಕೇಳುಗರಿಗೆ ಪದವೊಂದು ರೂಪಕವೆಂಬ ಭಾವನೆ ಬರುವುದು. ನನ್ನ ಈ ಉಪನ್ಯಾಸದಲ್ಲಿ, ಓದುಗರು ಸಾಮಾನ್ಯವಾಗಿ ಯಾವುದನ್ನು ರೂಪಕಗಳೆಂದು ಪರಿಗಣಿಸುತ್ತಾರೋ ಅವುಗಳ ಚರ್ಚೆ ಮಾತ್ರ ಮಾಡುತ್ತೇನೆ. ಇಲ್ಲವಾದರೆ, “king”, ‘threat” ಗಳಂತ ಅಸಂಖ್ಯ ಪದಗಳ ಹಿಂದೆಯೂ ಕೊನೆಯಿಲ್ಲದೆ ಅಲೆಯುತ್ತ ಇರಬೇಕಾಗುತ್ತದೆ.
ಮೊದಲನೆಯದಾಗಿ, ರೂಪಕಗಳ ಸಿದ್ಧ ಮಾದರಿಗಳನ್ನು ಎತ್ತಿಕೊಳ್ಳುತ್ತೇನೆ. ಇಲ್ಲಿ ನಾನು “ಮಾದರಿ” ಎಂಬ ಶಬ್ದವನ್ನು ಉಪಯೋಗಿಸಲು ಕಾರಣ, ನಾನು ಉಲ್ಲೇಖಿಸಲಿರುವ ರೂಪಕಗಳು ಭಿನ್ನವೆನಿಸಿದರೂ ಸಹ, ತಾರ್ಕಿಕವಾಗಿ ಅವು ಭಿನ್ನವೆನ್ನಲಾಗದು. ನಾವು ಅವುಗಳನ್ನು ಸಮಾನವೆನ್ನಬಹುದು. ಮನಸ್ಸಿಗೆ ತೋಚುತ್ತಿರುವ ಒಂದು ಸಿದ್ಧ ಉಪಮೆಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ಕಂಗಳುಗಳನ್ನು ಮತ್ತು ತಾರೆಗಳಿಗೆ, ಅಥವಾ ವ್ಯತಿರಿಕ್ತವಾಗಿ ತಾರೆಗಳನ್ನು ಕಂಗಳುಗಳಿಗೆ ದೀರ್ಘಾವಧಿಯಿಂದ ಹೋಲಿಸಲಾಗುತ್ತಿದೆ. ನನಗೆ ನೆನಪಿಗೆ ಬರುವ ಹಾಗೆ ಈ ಹೋಲಿಕೆಯ ಮೊದಲ ಪ್ರಯೋಗ ಒಂದು ಗ್ರೀಕ ಸಂಕಲನದಲ್ಲಿ ಬರುತ್ತದೆ ಮತ್ತು ಇದನ್ನು ಪ್ಲೇಟೋ ಬಳಸಿದನೆಂದು ಪ್ರತೀತಿ ಇದೆ. ಆ ಸಾಲು ಹೆಚ್ಚು ಕಮ್ಮಿ ಇಂತಿದೆ (ನನಗೇನೂ ಗ್ರೀಕ ಭಾಷೆ ಬರದು): “I wish I were the night, so that I might watch your sleep with a thousand eyes.” (ನಾನು ರಾತ್ರಿಯಾಗಿದ್ದರೆ, ನೀನು ನಿದ್ದಿಸುವುದನ್ನು ಸಾವಿರ ಕಂಗಳಿಂದ ನೋಡ ಬಹುದಿತ್ತು). ತನ್ನ ಪ್ರೇಮಿಕೆಯನ್ನು ಹಲವು ಕೋನಗಳಿಂದ ಒಮ್ಮೆಗೇ ನೋಡಬಯಸುತ್ತಿರುವ ಈ ಪ್ರೇಮಿಯ ನವಿರು ಭಾವ ಇಲ್ಲಿ ನಮ್ಮ ಗಮನಕ್ಕೆ ಬರುತ್ತದೆ.
ಅಷ್ಟೇನೂ ಸುಪ್ರಸಿದ್ಧವಲ್ಲದ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, “The stars look down” (ತಾರೆಗಳು ನೋಡುತ್ತಿವೆ ಕೆಳಗೆ). ಈ ಸಾಲಿನಲ್ಲಿ ಬಳಸಿರುವ ರೂಪಕ ಮತ್ತು ಪ್ಲೇಟೋನ ವಾಕ್ಯದಲ್ಲಿ ನಾವು ಕಂಡ ರೂಪಕ ತಾರ್ಕಿಕವಾಗಿ ಬೇರೆಬೇರೆ ಅಲ್ಲ. ಆದರೆ ನಮ್ಮ ಕಲ್ಪನೆಯ ಮೇಲೆ ಅವುಗಳ ಪರಿಣಾಮದಲ್ಲಿ ವಿಪರೀತ ಭಿನ್ನತೆ ಇದೆ. “ತಾರೆಗಳು ಕೆಳಗೆ ನೋಡುತ್ತಿವೆ” ಎಂಬ ವಾಕ್ಯ ನವಿರಾದ ಭಾವನೆಯ ಬದಲು, ಭುವಿಯ ಮೇಲೆ ಕಾಲಾಂತರದಿಂದ ಪರಿಶ್ರಮದಲ್ಲಿ ತೊಡಗಿರುವ ಜನರ ಕಡೆ ತೀವ್ರ ನಿರಾಸಕ್ತಿಯಿಂದ ತಾರೆಗಳು ಕಣ್ಣು ಹಾಕಿವೆ, ಎನ್ನುವ ವಿಚಾರನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.
ಇನ್ನೊಂದು ವಿಭಿನ್ನ ಉದಾಹರಣೆಯತ್ತ ತಿರುಗುತ್ತೇನೆ – ನನ್ನನ್ನು ಆಳವಾಗಿ ತಾಕಿದ ಸಾಲುಗಳಿವು. ಇಂಗ್ಲೀಷ ಕವಿ ಚೆಸ್ಟರ್ಟನ್ನನ “A Second Childhood” (ದ್ವಿತೀಯ ಬಾಲ್ಯ) ಎನ್ನುವ ಕವನದಿಂದ ಆಯ್ದ ಸಾಲುಗಳು:
But I shall not grow too old to see enormous night arise,
A cloud that is larger than the world
And a monster made of eyes.
ಗಾಢರಾತ್ರಿಯು ಉದಯವನ್ನು ಕಾಣಲೆಂದು ನಾ ವೃದ್ಧನಾಗಲಾರೆ
ವಿಶ್ವಕ್ಕಿಂತ ವಿಶಾಲ ಮೋಡ
ಕಣ್ಣುಗಳಿಂದಲೇ ಕಟ್ಟಿರುವ ದೈತ್ಯ.
ಕಣ್ಣುಗಳಿಂದ ತುಂಬಿರುವ ದೈತ್ಯನಲ್ಲ, (ಬೈಬಲ್ಲಿನ ಸಂತ ಜಾನನ “Revelation”ನಿಂದಾಗಿ ಆ ರೂಪಕ ನಮಗೆ ಪರಿಚಿತವೇ ಸೈ), ಅದಕ್ಕಿಂತಲೂ ಭೀಕರವಾದ ಕಣ್ಣುಗಳಿಂದಲೇ ಮಾಡಿರುವ ದೈತ್ಯ, ಹೇಗೆ ಅಂದರೆ ಆ ಕಣ್ಣುಗಳೇ ಆ ದೈತ್ಯನ ಜೀವಂತ ನರನಾಡಿಗಳೋ ಎಂಬಂತೆ.
ನಾವೀಗ ಎತ್ತಿಕೊಂಡಿರುವ ಮೂರು ಪ್ರತಿಮೆಗಳು ಒಂದೇ ಮಾದರಿಯದೆಂದು ತಿಳಿಯಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ – ಈ ಉಪನ್ಯಾಸದಲ್ಲಿ ನಾನು ಹೇಳಬಯಸುವ ಎರಡು ಸಂಗತಿಗಳಲ್ಲಿ ಇದು ಒಂದು – ಮಾದರಿ ಒಂದೇ ಆದರೂ ಕೂಡ, ಮೊದಲನೆಯ ಉಲ್ಲೇಖದ ಗ್ರೀಕ ಕವಿಯ “I wish I were the night” ಉದಾಹರಣೆಯಲ್ಲಿ ಕವಿ ನಮ್ಮಲ್ಲಿ ಒಂದು ಆರ್ದೃತೆ ಹಾಗೂ ಆತಂಕಗಳನ್ನು ಭಾವಿಸುವಂತೆ ಮಾಡುತ್ತಾನೆ; ಎರಡನೆಯದರಲ್ಲಿ ಮಾನವ ಸಂಗತಿಗಳ ಕುರಿತು ದಿವ್ಯ ನಿರ್ಲಕ್ಷ್ಯವನ್ನು ಭಾವಿಸುತ್ತೇವೆ; ಮೂರನೆಯದರಲ್ಲಿ, ಸುಪರಿಚಿತ ರಾತ್ರಿ ದುಃಸ್ವಪ್ನದಂತೆ ಭಾಸವಾಗುತ್ತದೆ.
ಇನ್ನೊಂದು ಮಾದರಿಯನ್ನು ಗಮನಿಸೋಣ. ಕಾಲದ ಪ್ರವಾಹವೆಂಬ ಕಲ್ಪನೆಯಲ್ಲಿ ಕಾಲವನ್ನು ನದಿಯ ಪ್ರವಾಹದಂತೆ ನೋಡಲಾಗಿದೆ. ಇಂಗ್ಲೀಷ ಕವಿ ಟೆನಿಸನ್ ಹದಿಮೂರು ಹದಿನಾಲ್ಕರ ವಯಸ್ಸಿನಲ್ಲಿ ಬರೆದ ಕವನವೊಂದರ ಉದಾಹರಣೆ ತೆಗೆದುಕೊಳ್ಳೋಣ. ಆ ಕವನವನ್ನು ಟೆನಿಸನ್ ಎಸೆದು ಬಿಟ್ಟಿದ್ದರೂ, ಅದೃಷ್ಟವಶಾತ್ ಅದರ ಒಂದು ಸಾಲು ಆಂಡ್ರ್ಯೂ ಲ್ಯಾಂಗ್ ಬರೆದ ಕವಿಯ ಜೀವನಚರಿತ್ರೆಯಲ್ಲಿ ನಮಗೆ ಲಭ್ಯವಿದೆ: “Time flowing in the middle of the night.” (ನಡುರಾತ್ರಿಯಲ್ಲಿ ಕಾಲದ ಪ್ರವಾಹ). ಇಲ್ಲಿ ಟೆನಿಸನ್ ತುಂಬ ಜಾಣ್ಮೆಯಿಂದ ಸಮಯದ ಆಯ್ಕೆ ಮಾಡಿದ್ದಾನೆಂದು ನನ್ನ ಎಣಿಕೆ. ರಾತ್ರಿ ಹೊತ್ತು ಜನ ನಿದ್ರಿಸುತ್ತ, ಎಲ್ಲವೂ ಸ್ತಬ್ಧವಿರುವಾಗ, ಸಮಯ ಸದ್ದಿರದೆ ಪ್ರವಹಿಸುತ್ತಲೇ ಇರುತ್ತದೆ ಎನ್ನುವ ಸೂಚನೆ ಆಸಕ್ತಿಕರವಾದುದು.
“ಕಾಲ ಮತ್ತು ನದಿ” ಎಂಬ ಸರಳ ಹೆಸರಿನ ಒಂದು ಕಾದಂಬರಿಯೂ ಇದೆ, ನಿಮಗೆ ನೆನಪಿರಬಹುದು. ಇವೆರಡು ಶಬ್ದಗಳನ್ನು ಒಟ್ಟಿಗೆ ಬಳಸಿದರೆ ಸಾಕು ರೂಪಕ ನಮ್ಮ ಗಮನಕ್ಕೆ ಬರುತ್ತದೆ. ಕಾಲ ಮತ್ತು ನದಿ ಎರಡೂ ಕೂಡ ಹರಿಯುತ್ತಲೇ ಇರುತ್ತವೆ. ಗ್ರೀಕ ತತ್ವಜ್ನಾನಿಯೊಬ್ಬ ನುಡಿದ ಸುಪ್ರಸಿದ್ಧ ಸಾಲೊಂದಿದೆಯಲ್ಲ: “ಯಾರೂ ಒಂದೇ ನದಿಯಲ್ಲಿ ಎರಡು ಸಲ ಇಳಿಯಲಾರರು”. ಇಲ್ಲಂತೂ, ನಮಗೆ ಕೊಂಚ ಭೀತಿಯೂ ಆದೀತು, ಯಾಕೆಂದರೆ, ಮೊದಲು ನಾವು ನದಿ ಹರಿಯುವುದರ ಕುರಿತು ಯೋಚಿಸುತ್ತೇವೆ, ಹಾಗಾಗಿ ನದಿಯಲ್ಲಿರುವ ನೀರಹನಿಗಳು ಪ್ರತಿಕ್ಷಣವೂ ಭಿನ್ನವೆಂದು ಗ್ರಹಿಸುತ್ತೇವೆ. ಆಮೇಲೆ ನಮಗೆ ಹೊಳೆಯುತ್ತದೆ, ನಾವೂ ನದಿಯಂತೆ, ಅಷ್ಟೇ ಅನಿಶ್ಚಿತ ಎನ್ನುವುದು.
ಸ್ಪೇನಿನ ಕವಿ ಹೊರ್ಹೆ ಮನ್ರಿಕ್ ಬರೆದ ಸಾಲು ಹೀಗಿದೆ:
Our lives are the rivers
that flow into that sea
which is death.
ಸಾವೆಂಬ ಸಾಗರವ
ಸೇರಲು ಹರಿವ
ನದಿಯಂತೆ ನಮ್ಮ ಬಾಳು
ಇದನ್ನು ಲಾಂಗಫ಼ೆಲೋ ಹೇಗೆ ಅನುವಾದಿಸಿರುವನೆಂದು ನನಗೆ ನೆನಪಿಲ್ಲ, ಆದರೆ, ಅನುವಾದದಲ್ಲಿ ಇದು ಅಷ್ಟು ಪ್ರಭಾವಶಾಲಿಯಾಗಿಲ್ಲ. ಸಿದ್ಧಮಾದರಿಯ ಈ ರೂಪಕದ ಹಿಂದೆ ಗಂಭೀರ ನಾದವಿದೆ (ಈ ವಿಷಯವನ್ನು ಇನ್ನೊಂದು ಉಪನ್ಯಾಸದಲ್ಲಿ ಚರ್ಚಿಸೋಣ). ಅಂತೂ, ಈ ಎಲ್ಲ ಉದಾಹರಣೆಯಲ್ಲಿನ ರೂಪಕ ಮಾತ್ರ ಒಂದೇ.
ಈಗ, ನಿಮಗೆ ನಗೆ ತರಿಸ ಬಹುದಾದ ಒಂದು ಸವಕಲು ರೂಪಕದತ್ತ ತಿರುಗುತ್ತೇನೆ: ಹೆಂಗಳೆಯರನ್ನು ಹೂವಿಗೆ, ಹೂವನ್ನು ಹೆಂಗಳೆಯರಿಗೆ ಮಾಡುವ ಹೋಲಿಕೆ. ಇದಕ್ಕೆ ದೊರೆಯುವ ಉದಾಹರಣೆಗಳು ಅಪಾರ. ನಿಮಗೆ ಪ್ರಾಯಶಃ ಪರಿಚಿತವಲ್ಲದ, ರಾಬರ್ಟ್ ಲೂಯಿ ಸ್ಟೀವನ್ಸನ್ನನ “ಹರ್ಮಿಸ್ಟನ್ ಪ್ರದೇಶದ ವೇಯರ್” ಎಂಬ ಅಪೂರ್ಣ, ಆದರೂ ಅಪೂರ್ವ ಕೃತಿಯಲ್ಲಿ ಬರುವ ಒಂದು ಉದಾಹರಣೆಯನ್ನು ನೆನಪಿಸಿಕೊಳ್ಳ ಬಯಸುತ್ತೇನೆ. ಸ್ಟೀವನ್ಸನ್-ನ ಕೃತಿಯ ನಾಯಕ ಸ್ಕಾಟಲ್ಯಾಂಡಿನ ಚರ್ಚೊಂದಕ್ಕೆ ಹೋಗುವ ದೃಶ್ಯದಲ್ಲಿ ನಾಯಕ ಹುಡುಗಿಯೊಬ್ಬಳನ್ನು ನೋಡುತ್ತಾನೆ. ಆಕೆಯೋ ಚೆಲುವೆ ಎಂದು ನಮಗೆ ತಿಳಿದುಬರುತ್ತದೆ. ನಾಯಕ ಈ ಚೆಲುವೆಯ ಪ್ರೇಮಪಾಶದಲ್ಲಿ ಸಿಲುಕುತ್ತಾನೆ ಎಂದೇ ನಾವೆಲ್ಲ ಅಂದುಕೊಳ್ಳುತ್ತೇವೆ. ಯಾಕೆಂದರೆ, ಅವನು ಅವಳನ್ನು ನೋಡಿದ ಕ್ಷಣ ಯೊಚಿಸುತ್ತಾನೆ – ಇಷ್ಟು ಚೆಲುವೆಯಾದ ಅವಳಲ್ಲಿ ನಶ್ವರ ಆತ್ಮ ಇರಲು ಸಾಧ್ಯವೇ? ಅಥವಾ ಆಕೆ ಹೂವಿನ ಬಣ್ಣದ ಪ್ರಾಣಿ ಇರಬಹುದೇ? ಈ ವಾಕ್ಯದಲ್ಲಿ, ’ಪ್ರಾಣಿ’ ಎಂಬ ಪದಪ್ರಯೋಗದ ಕ್ರೂರತೆ ’ಹೂವಿನ ಬಣ್ಣದ’ ಎಂಬ ಪದಪ್ರಯೋಗದಿಂದಾಗಿ ಇಲ್ಲವಾಗಿದೆ. ಎಲ್ಲ ಕಾಲದಲ್ಲಿ, ಎಲ್ಲ ಭಾಷೆಗಳಲ್ಲಿ, ಎಲ್ಲ ಸಾಹಿತ್ಯದಲ್ಲಿ ನಮಗೆ ಕಂಡುಬರುವ ಈ ಮಾದರಿಯ ರೂಪಕಕ್ಕಾಗಿ ಬೇರೆ ಯಾವ ಉದಾಹರಣೆಯೂ ಬೇಕಿಲ್ಲವೆನಿಸುತ್ತದೆ.
ರೂಪಕಗಳ ಮತ್ತೊಂದು ಮೂಲಭೂತ ಮಾದರಿಯತ್ತ ಸಾಗೋಣ. ಅದೆಂದರೆ ಜೀವನವೊಂದು ಕನಸು ಎಂದು ನಮ್ಮಲ್ಲಿ ಉಂಟಾಗುವ ಭಾವನೆ. ಸಹಜವಾಗಿ ನೆನೆಪಿಗೆ ಬರುವ ಉದಾಹರಣೆಯೆಂದರೆ ಶೇಕ್ಸಪಿಯರನದು, “We are such stuff as dreams are made on” (ಕನಸುಗಳನ್ನು ಮಾಡಿರುವ ಸಂಗತಿಗಳಂತೆ ನಾವು). ನನ್ನ ಮಾತು ಅತಿಯೆನಿಸಬಹುದು – ಶೇಕ್ಸಪಿಯರನೆಂದರೆ ನನಗೆ ತುಂಬಾ ಇಷ್ಟವಾದ್ದರಿಂದ, ನಾನು ಅಷ್ಟು ತಲೆಕೆಡಿಸಿಕೊಳ್ಳುವುದಿಲ್ಲ – ನಾವು ಗಮನವಿಟ್ಟು ಓದಿದರೆ (ತೀರಾ ಹತ್ತಿರದಿಂದಲೂ ಓದಲು ಹೋಗಬೇಡಿ, ನಾವು ಶೇಕ್ಸಪಿಯರನಿಗಿದ್ದ ಇವೆಲ್ಲ ಕೌಶಲ್ಯಗಳಿಗಾಗಿ ಕೃತಜ್ನರಾಗಿರಬೇಕು) ಇಲ್ಲೊಂದು ಪುಟ್ಟ ವಿರೋಧಾಭಾಸವನ್ನು ಕಾಣುತ್ತೇವೆ. ಒಂದು, ನಮ್ಮ ಬಾಳು ಕನಸಿನಂತಿದೆ, ಅಥವಾ ಕನಸಿನ ಅಂಶವಿದೆ ಎನ್ನುವುದು. ಇನ್ನೊಂದು, ಒಂದು ಬಗೆಯ ಬೀಸು ಹೇಳಿಕೆ, “ಕನಸುಗಳನ್ನು ಮಾಡಿರುವ ಸಂಗತಿಗಳಂತೆ ನಾವು”. ನಾವು ಕನಸಿನಲ್ಲಿಯ ವಾಸ್ತವವಾಗಿದ್ದರೆ, ಅಥವಾ ನಾವು ಕನಸುಗಳನ್ನು ಕನಸುವವರು ಮಾತ್ರವಾದರೆ, ನಾವು ಇಂಥ ಬೀಸು ಹೇಳಿಕೆಯನ್ನು ಕೊಡಲು ಸಾಧ್ಯವೇ ಎಂದು ನನಗೆ ಸೋಜಿಗ. ಶೇಕ್ಸಪಿಯರನ ಈ ವಾಕ್ಯ ಕಾವ್ಯಕ್ಕಿಂತ ಹೆಚ್ಚಾಗಿ ತತ್ವಜ್ನಾನಕ್ಕೆ ಸೇರಿದ್ದು. ಆದರೂ, ಈ ವಾಕ್ಯ ಬರುವ ಸಂಧರ್ಭ ಅದನ್ನು ಉತ್ತುಂಗಕ್ಕೆ ಎತ್ತಿ ಕಾವ್ಯವಾಗಿಸುತ್ತದೆ.
ಇದೇ ಮಾದರಿಯ ಇನ್ನೊಂದು ಉದಾಹರಣೆ ದೊರೆಯುವುದು ಓರ್ವ ಮಹಾನ್ ಜರ್ಮನ್ ಕವಿ ವಾಲ್ಟರ್ ಫೊನ್ ಡೆ ಫೂಗೆಲವಾಯ್ಡೆಯ ಪ್ರಸಿದ್ಧ ಕೃತಿಯಲ್ಲಿ (ಶೇಕ್ಸಪಿಯರನಿಗೆ ಹೋಲಿಸಿದರೆ ಕಿರಿಯ, ಆದರೆ ಅವನ ಪಕ್ಕ ಎಲ್ಲರೂ ಕುಬ್ಜರೇ ಬಿಡಿ, ಒಬ್ಬಿಬ್ಬರನ್ನು ಬಿಟ್ಟರೆ). ಅದು ಹೀಗಿದೆ, “Ist mir mîn leben getroumet, oder ist es war?” (ನನ್ನ ಬಾಳೆನ್ನುವುದು ನಾನು ಕಾಣುತ್ತಿರುವ ಸ್ವಪ್ನವೇ ಅಥವಾ ಇದು ನಿಜವೇ?) ಬೀಸಾದ ಹೇಳಿಕೆಯ ಬದಲು ಇಲ್ಲಿ ಪ್ರಶ್ನೆ ಇರುವುದರಿಂದ, ಇದು ಕವಿ ಹೇಳಬಯಸುವ ಮಾತಿಗೆ ಹತ್ತಿರವಾಗಿದೆ. ಕವಿ ಇಲ್ಲಿ ಸೋಜಿಗದಲ್ಲಿದ್ದಾನೆ, ನಮಗೂ ಅನೇಕ ಸಲ ಅನುಭವವಾಗುವ ಹಾಗೆಯೇ. ಆದರೆ, ವಾಲ್ಟರ್ ಫೊನ್ ಡೆ ಫೂಗೆಲವಾಯ್ಡೆಯಂತೆ ನಾವು ಶಬ್ದಗಳಲ್ಲಿ ಹೇಳಲು ಶಕ್ಯರಾಗಿಲ್ಲ. ಕವಿ ತನಗೆ ತಾನೇ ಕೇಳಿಕೊಳ್ಳುವ “ನನ್ನ ಬಾಳೆನ್ನುವುದು ನಾನು ಕಾಣುತ್ತಿರುವ ಸ್ವಪ್ನವೇ ಅಥವಾ ಇದು ನಿಜವೇ?” ಎಂಬ ಪ್ರಶ್ನೆಯಲ್ಲಿನ ಅನುಮಾನ ನಮಗೆ ಆ ಕನಸಿನ ಆಂಶವುಳ್ಳ ಬಾಳನ್ನು ನೆನಪಿಸುತ್ತದೆ ಎಂದು ನನ್ನ ಅನಿಸಿಕೆಯಾಗಿದೆ.
ನಾನು ತುಂಬಾ ಮೆಚ್ಚುವ ಚೈನಾದ ತತ್ವಜ್ನಾನಿ ಚ್ವಾನ್ ಚು-ನ (Chuan Tzu) ವಾಕ್ಯವೊಂದಿದೆ, ಅದನ್ನು ನಾನು ಈ ಮೊದಲು ಉಲ್ಲೇಖಿಸಿದ್ದೇನೋ ಇಲ್ಲವೋ ನೆನಪಿಲ್ಲ. ತಾನು ಪಾತರಗಿತ್ತಿಯಾಗಿದ್ದೇನೆ ಎಂಬ ಕನಸು ಬೀಳುತ್ತದೆ ಅವನಿಗೆ. ಎಚ್ಚರಾದ ಮೇಲೆ ಅವನು ಕೌತುಕ ಪಡುತ್ತಾನೆ: ಪಾತರಗಿತ್ತಿಯಾದಂತ ಕನಸು ಕಂಡ ಮಾನವನಾ ತಾನು ಅಥವಾ, ಮಾನವನಾದಂತೆ ಈಗ ಕನಸು ಕಾಣುತ್ತಿರುವ ಪಾತರಗಿತ್ತಿಯಾ? ನನ್ನ ಎಣಿಕೆಯ ಪ್ರಕಾರ, ಇದು ಎಲ್ಲ ರೂಪಕಗಳಿಗಿಂತ ಮಿಗಿಲಾದದ್ದು. ಯಾಕೆಂದರೆ, ಇದು ಕನಸಿನಿಂದ ಮೊದಲಾಗುತ್ತದೆ, ಮತ್ತು ನಂತರ ಎಚ್ಚರಾದ ಮೇಲೂ ಕೂಡ ಬಾಳಿನಲ್ಲಿ ಕನಸಿನಂತದೇನೋ ಉಳಿದೇ ಇರುತ್ತದೆ. ಎರಡನೆಯ ಕಾರಣವೆಂದರೆ, ಅವರ್ಣನೀಯ ಆನಂದದಿಂದ ಲೇಖಕ ಆಯ್ದಿರುವ ಪಾತರಗಿತ್ತಿ ಇಲ್ಲಿ ಸೂಕ್ತ ಜೀವಿ. ಅವನೇನಾದರೂ, “ಚ್ವಾನ್ ಚು ಕಂಡ ಕನಸಿನಲ್ಲಿ ಅವನು ಹುಲಿಯಾಗಿದ್ದ” ಎಂದರೆ ಸರಿಹೋಗುತ್ತಿರಲಿಲ್ಲ. ಪಾತರಗಿತ್ತಿ ಎನ್ನುವಲ್ಲಿ ಅದೇನೋ ನವಿರಾದ, ಕ್ಷಣಿಕವಾದ ಹೊಳಹಿದೆ. ನಾವೊಂದು ಕನಸಾಗಿದ್ದರೆ ಅದನ್ನು ಸೂಚಿಸುವ ಸೂಕ್ತ ರೂಪಕ ಪಾತರಗಿತ್ತಿಯೇ ಹೊರತು, ಹುಲಿಯಲ್ಲ. ಚ್ವಾನ್ ಚುಗೆ ತಾನು ಟೈಪರೈಟರ್ ಎಂದು ಕನಸು ಬಿದ್ದಿದ್ದರೆ? ಅಥವಾ, ತಿಮಿಂಗಲ – ಇಲ್ಲ, ಅವೆಲ್ಲ ಸರಿ ಹೊಂದುತ್ತಿರಲಿಲ್ಲ. ತಾನು ಹೇಳಬೇಕಿರುವುದಕ್ಕೆ ಅವನು ಅತ್ಯಂತ ಸೂಕ್ತ ಪದವನ್ನೇ ಆಯ್ದುಕೊಂಡಿದ್ದಾನೆ.
ಇನ್ನೊಂದು ಸರ್ವೇಸಾಧಾರಣ ಮಾದರಿಯನ್ನು ಚರ್ಚಿಸೋಣ. ಅದೆಂದರೆ, ಸಾವು ಮತ್ತು ನಿದ್ದೆಯ ಸಮೀಕರಣ. ದೈನಂದಿನ ಮಾತುಕತೆಯಲ್ಲಿಯೂ ಇದು ಸಾಮಾನ್ಯವಾಗಿ ಕಾಣಸಿಗುತ್ತದೆ. ಆದರೆ, ನಾವು ಉದಾಹರಣೆಗಳನ್ನು ನೋಡಿದರೆ, ಅದು ಬೇರೆಯದೇ ಆಗಿ ತೋರುತ್ತವೆ. ಹೋಮರ ಒಂದು ಕಡೆ “ಸಾವೆಂಬ ಕಬ್ಬಿಣದ ನಿದ್ದೆ” ಎನ್ನುವ ಪದಪ್ರಯೋಗ ಮಾಡುತ್ತಾನೆ. ಇಲ್ಲಿ ಎರಡು ವಿರುದ್ಧ ಅರ್ಥಗಳನ್ನು ಹೋಮರ ಕೊಡುತ್ತಾನೆ. ಒಂದು, ಸಾವೆನ್ನುವುದು ನಿದ್ದೆಯಂತೆ; ಆದರದು ಎಂತಹ ನಿದ್ದೆ ಅಂದರೆ, ಕಬ್ಬಿಣದಂತ ಗಡಸು ಲೋಹದಂತ, ಕ್ರೂರಿಯಾದ ನಿದ್ದೆ. ಮುರಿಯದ, ಮುರಿಯಲಾರದ ನಿದ್ದೆ ಅದು. ಜರ್ಮನ್ ಕವಿ ಹೈನ್ರಿಕ್ ಹೈನ್-ನ ಉದಾಹರಣೆಯೂ ನಮ್ಮ ಮುಂದಿದೆ – “Der Tod daß ist die frühe Nacht.” (“Our death is in the cool of night” – “ತಣ್ಣನೆಯ ರಾತ್ರಿಯಲ್ಲಿ ನಮ್ಮ ಸಾವು”) ನಾವು ಉತ್ತರ ಬೋಸ್ಟನ್ನಿನಲ್ಲಿ ಇರುವುದರಿಂದ, ರಾಬರ್ಟ್ ಫಾಸ್ಟನ ಜನಜನಿತ ಸಾಲುಗಳನ್ನು ನಾವು ನೆನಪಿಸಿಕೊಳ್ಳಲೇ ಬೇಕು:
The woods are lovely, dark, and deep,
But I have promises to keep,
And miles to go before I sleep,
And miles to go before I sleep.13
ತೋಟವದು ಅದೆಷ್ಟು ಗೂಢ ಮನೋಹರ
ಆದರೆ, ಕೊಟ್ಟ ವಚನಗಳು ಕರೆದಿವೆ ನನ್ನನ್ನ
ಹೋಗಬೇಕಿದೆ ಇನ್ನೂ ಮೈಲುದೂರ ನಿದ್ದೆಗೆ ಮುನ್ನ
ಹೋಗಬೇಕಿದೆ ಇನ್ನೂ ಮೈಲುದೂರ ನಿದ್ದೆಗೆ ಮುನ್ನ
ಈ ಸಾಲುಗಳು ಎಷ್ಟು ಪರಿಪೂರ್ಣವೆಂದರೆ ಅದರಲ್ಲಿ ಅದೇನಾದರೂ ಚಾತುರ್ಯವಿದೆ ಎಂದು ನಮಗನಿಸುವುದೇ ಇಲ್ಲ. ಆದರೆ, ಏನು ಮಾಡುವುದು, ಎಲ್ಲ ಸಾಹಿತ್ಯದಲ್ಲಿಯೂ ಚಾತುರ್ಯ ಇದ್ದೇ ಇರುತ್ತದೆ, ಮತ್ತು ಒಂದಲ್ಲ ಒಂದು ದಿನ ಆ ಚಾತುರ್ಯಗಳು ನಮ್ಮ ಗೋಚರಕ್ಕೆ ಬರುತ್ತಾವೆ. ಹಾಗೇ ಅದು ಗೋಚರಿಸಿದಾಗ, ಓದುಗನಿಗೆ ಆಯಾಸವಾಗಿಬಿಡಬಹುದು. ಆದರೆ, ಫಾಸ್ಟನ ಈ ಸಾಲುಗಳಲ್ಲಿ ಅದು ಎಷ್ಟು ಅಗೋಚರ ರೀತಿಯಲ್ಲಿದೆಯೆಂದರೆ, ಇದೊಂದು ಚಾತುರ್ಯವೆನ್ನಲು ಸಹ ಮನಸ್ಸಾಗುತ್ತಿಲ್ಲ. ಬೇರೆ ಶಬ್ದವಿಲ್ಲವೆಂದಷ್ಟೇ ನಾನು ಈ ಪದಬಳಕೆ ಮಾಡುತ್ತಿರುವೆ. ಯಾಕೆಂದರೆ, ಫಾಸ್ಟ್ ಇಲ್ಲಿ ಒಂದು ಸಾಲನ್ನು ಯಾವುದೇ ಪದಬದಲಾವಣೆಯಿಲ್ಲದೇ ಪುನರಾವರ್ತಿಸಿದ್ದಾನೆ. ಆದರೂ, ನಮಗೆ ಅವುಗಳ ಅರ್ಥ ವಿಭಿನ್ನವೆಂಬ ಭಾಸವಾಗುತ್ತದೆ. “ಹೋಗಬೇಕಿದೆ ಇನ್ನೂ ಮೈಲುದೂರ ನಿದ್ದೆಗೆ ಮುನ್ನ” ಎಂಬ ಸಾಲು ಮೊದಲ ಸಲ ಬಂದಾಗ, ಕ್ರಮಿಸಬೇಕಿರುವ ಭೌತಿಕ ದೂರವನ್ನು ಸೂಚಿಸುತ್ತದೆ – ಇಲ್ಲಿ ’ಮೈಲು’ ಸ್ಥಳಸೂಚಕ ಪದ; ’ನಿದ್ದೆ’ ಕೂಡ ವಿರಾಮವನ್ನು ಸೂಚಿಸುವ ಪ್ರಯೋಗ, ಎರಡನೆಯ ಸಾಲಿನಲ್ಲಿ, ’ಮೈಲು’ ಎನ್ನುವುದು ಸ್ಥಳ ಸೂಚಕಮಾತ್ರವಲ್ಲ, ಕಾಲಸೂಚಕವೂ ಎನ್ನುವ ಭಾವನೆ ನಮ್ಮಲ್ಲಿ ಉಂಟಾಗುತ್ತದೆ. ಅಂದರೆ, ’ನಿದ್ದೆ’ ಇಲ್ಲಿ ’ಸಾವು’ ಅಥವಾ ಅಂತಿಮ ವಿರಾಮ. ಇದನ್ನೇನಾದರೂ ಕವಿ ಬಿಡಿಸಿ ಹೇಳಿದ್ದರೆ, ಕವನ ಪರಿಣಾಮಕಾರಿಯಾಗಿರಲು ಸಾಧ್ಯವೇ? ನನಗನ್ನಿಸುವ ಹಾಗೆ, ತೆರೆದು ಹೇಳುವ ರೀತಿ, ಧ್ವನಿತ ಅಥವಾ ಸೂಚನೆಯಾಗಿ ಮಾತ್ರ ಹೇಳುವ ರೀತಿಯಷ್ಟು ಪರಿಣಾಮಕಾರಿ ಅಲ್ಲ. ಬಹುಶಃ ಮಾನವ ಮನಸು ಘೋಷಣೆಯನ್ನು ಒಪ್ಪುವುದಿಲ್ಲ. ಅಮೇರಿಕಾದ ಕವಿ ಎಮರ್ಸನ್ ಹೇಳಿದ್ದನ್ನು ನೆನಪಿಸಿಕೊಳ್ಳಿ: “ವಾದದಿಂದಾಗಿ ಯಾರಿಗೂ ಮನವರಿಕೆ ಆಗುವುದಿಲ್ಲ”. ವಾದವಾಗಿ ಪ್ರಸ್ತುತಿಪಡಿಸಿದರೇನೆ ಮನವರಿಕೆಯಾಗುವಲ್ಲಿ ಅವು ಅಸಮರ್ಥವಾಗುತ್ತವೆ. ಆಗ, ನಾವು ಅದನ್ನು ನೋಡುತ್ತೇವೆ, ಹಿಂದೆಮುಂದೆ ಮಗುಚುತ್ತೇವೆ, ಮತ್ತು ನಾವು ಅವುಗಳ ವಿರುದ್ಧ ಮನಸು ಮಾಡಿಬಿಡುತ್ತೇವೆ.
ಮುಂದುವರೆಯುವುದು…
ಕಾವ್ಯ ಎಂಬ ಒಗಟು
ಭಾಗ ೧: https://ruthumana.com/2020/08/24/borges-craft-of_verses-riddles-of-poetry-1/
ಭಾಗ ೨: https://ruthumana.com/2020/09/04/borges-craft-of_verses-riddles-of-poetry-2/
ಮೂಲ: The Craft of Verse
ಕಮಲಾಕರ ಕಡವೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಶಿರ್ಶಿಯ ಕಡವೆ ಗ್ರಾಮದವರು.
ಈಗ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದರೆ.
ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಬರೆಯುವ, ಅನುವಾದ ಮಾಡಿರುವ ಅವರು ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ.
Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ (ಕಾವ್ಯ ಕುಸುರಿ) : “ರೂಪಕ” : ಭಾಗ ೨ – ಋತುಮಾನ
Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೩ : ಕತೆಯ ನಿರೂಪಣೆ – ಋತುಮಾನ