ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ (ಕಾವ್ಯ ಕುಸುರಿ) : “ರೂಪಕ” – ಭಾಗ ೨

೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ.   ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಎರಡನೇ ಭಾಗದ ಎರಡನೇ ಕಂತು ಋತುಮಾನ ದ ಓದುಗರಿಗಾಗಿ.

ರೂಪಕ

ಭಾಗ ೧: https://ruthumana.com/2020/10/18/borges-craft-of_verses-the-metaphor-1/

ಮುಂದುವರೆದ ಭಾಗ …

ಒಂದು ವಿಷಯವನ್ನು ಸುಮ್ಮನೆ ಹೇಳಿದರೆ – ಇನ್ನೊ ಒಳ್ಳೆಯದೆಂದರೆ ಸೂಚಿಸಿದರೆ – ನಮ್ಮ ಕಲ್ಪನೆಯು ಆತಿಥ್ಯವನ್ನು ತೋರಿದಂತಿರುತ್ತದೆ. ಸುಮಾರು ಮೂವತ್ತು ವರ್ಷಗಳ ಹಿಂದೆ ಮಾರ್ಟಿನ್ ಬುಬರನ ಬರಹಗಳನ್ನು ಓದಿದ್ದು ನೆನಪಾಗುತ್ತಿದೆ. ಅವು ಅದ್ಭುತ ಕವನಗಳೆಂದು ನನಗನ್ನಿಸಿದ್ದವು. ಆಮೇಲೆ, ಬೊನೋಸ್ ಐರಸ್ (Buenos Aires) ಶಹರದಲ್ಲಿ ಮಿತ್ರ ದುಹೊವ್ನೆಯ ಪುಸ್ತಕವನ್ನು ಓದಿದಾಗ, ಈ ಮಾರ್ಟಿನ್ ಬುಬರ್ ತತ್ವಜ್ನಾನಿ ಎಂದೂ, ನಾನು ಕಾವ್ಯವೆಂದು ಓದಿದ್ದ ಅವನ ಪುಸ್ತಕಗಳಲ್ಲಿ ಅವನೆಲ್ಲ ತತ್ವಶಾಸ್ತ್ರೀಯ ಬರಹಗಳಿರುವುದೆಂದೂ ತಿಳಿದು ಬಂತು. ಪ್ರಾಯಶಃ, ಬುಬರನ ಪುಸ್ತಕಗಳು ನನಗೆ ವಾದವಾಗಿ ಒದಗದೆ, ಸೂಚಿತ ಅರ್ಥಗಳ, ನಾದಮಯತೆಯ, ಕಾವ್ಯಮುಖೇನ ಒದಗಿದ್ದರಿಂದ ನಾನವುಗಳನ್ನು ಕಾವ್ಯವೆಂದು ಭಾವಿಸಿಕೊಂಡೆನೆನಿಸುತ್ತದೆ. ಅಮೇರಿಕಾದ ಕವಿ ವಾಲ್ಟ್ ವಿಟ್ಮನ್ ನಲ್ಲಿಯೂ ಕೂಡ ನಾವು ತರ್ಕ ಹೇಗೆ ಮನವೊಲಿಸಲು ಪರಿಣಾಮಕಾರಿಯಲ್ಲ ಎನ್ನುವ ಕಲ್ಪನೆಯನ್ನು ಕಾಣಬಹುದು. ವಾದಕ್ಕಿಂತಲೂ, ರಾತ್ರಿ ಸಮಯದ ಗಾಳಿ, ಹೊಳೆವ ತಾರೆಗಳು ಹೆಚ್ಚು ಪರಿಣಾಮಕಾರಿ ಎಂದು ಹೇಳುತ್ತಾನೆ ವಿಟ್ಮನ್.

ಇನ್ನೂ ಬೇರೆಬೇರೆ ಮಾದರಿಯ ರೂಪಕಗಳ ಕುರಿತು ನಾವು ಯೋಚಿಸಬಹುದು. ಇತರ ಉದಾಹರಣೆಗಳಷ್ಟು ಸಾಮಾನ್ಯವಲ್ಲದ ಯುದ್ಧ ಮತ್ತು ಬೆಂಕಿಯ ರೂಪಕದ ಮಾದರಿಯನ್ನು ತೆಗೆದುಕೊಳ್ಳೋಣ. ಗ್ರೀಕ ಕವಿ ಹೋಮರನ ಇಲಿಯಡ್-ನಲ್ಲಿ, ಬೆಂಕಿಯಂತೆ ಪ್ರಜ್ವಲಿಸುತ್ತಿರುವ ಯುದ್ಧದ ಉಲ್ಲೇಖವಿದೆ. ಪ್ರಾಚೀನ ಇಂಗ್ಲೀಷಿನ ವೀರ ಕಾವ್ಯದ (heroic poetry) ಅವಶೇಷವಾದ ಫಿನ್ಸಬರ್ಗ್ ತುಣುಕಿನಲ್ಲಿ ಡೇನ್ ಸೈನ್ಯ ಮತ್ತು ಫ್ರೀಶಿಯಾ ಸೈನ್ಯಗಳ ನಡುವೆ ಅಯುಧ, ಕತ್ತಿ ಗುರಾಣಿಗಳನ್ನು ಝಳಪಿಸುತ್ತ ನಡೆವ ಕಾಳಗದ ವರ್ಣನೆ ಬರುತ್ತದೆ. ನಂತರ, ಕವಿ ಹೇಳುತ್ತಾನೆ, “ಆ ಕಾಳಗ ಇಡೀ ಫಿನ್ಸಬರ್ಗ್, ಇಡೀ ಫಿನ್ ಕೋಟೆಯೇ, ಹೊತ್ತಿ ಉರಿಯುತ್ತಿದೆ ಎಂಬಂತಿತ್ತು.”

ಬಹುಶಃ ಕೆಲವು ಸಾಮಾನ್ಯ ಮಾದರಿಗಳನ್ನು ನಾನು ಕೈಗೆತ್ತಿಕೊಂಡಿಲ್ಲ. ಈವರೆಗೆ ನಾವು ಕೈಗೆತ್ತಿಕೊಂಡ ರೂಪಕಗಳ ಮಾದರಿಗಳೆಂದರೆ ಕಂಗಳು ಮತ್ತು ತಾರೆ, ಮಹಿಳೆ ಮತ್ತು ಹೂವು, ಕಾಲ ಮತ್ತು ನದಿ, ಬಾಳು ಮತ್ತು ಕನಸು, ಸಾವು ಮತ್ತು ನಿದ್ದೆ, ಬೆಂಕಿ ಮತ್ತು ಯುದ್ಧ. ಸಮಯ ಮತ್ತು ಇನ್ನಷ್ಟು ಪಾಂಡಿತ್ಯವಿದ್ದಿದ್ದರೆ, ನಾವು ಇನ್ನೂ ಆರೇಳು ಮಾದರಿಗಳನ್ನು ಚರ್ಚಿಸಬಹುದಿತ್ತು. ಅವೆಲ್ಲ ಸೇರಿದರೆ ಸಾಹಿತ್ಯದಲ್ಲಿ ಕಂಡುಬರುವ ರೂಪಕಗಳ ಬಹುತೇಕ ಎಲ್ಲ ಮಾದರಿಗಳು ಅಲ್ಲಿಗೆ ಮುಗಿಯುತ್ತಿದ್ದವು.

ಎಣಿಕೆಯಷ್ಟು ಮಾದರಿಗಳಿವೆ ಎನ್ನುವುದಲ್ಲ ಇಲ್ಲಿ ಮುಖ್ಯ, ಆದರೆ ಅವುಗಳು ಕೊನೆಯಿಲ್ಲದ ರೂಪಗಳನ್ನು ತಳೆಯುವುದು ಸಾಧ್ಯ ಎನ್ನುವುದು ಮುಖ್ಯ. ಕಾವ್ಯಸಿದ್ಧಾಂತದ ಬದಲು ಕಾವ್ಯದ ಕುರಿತು ಯೋಚಿಸುವ ಓದುಗ, “ನಾನು ರಾತ್ರಿಯಾಗಿದ್ದರೆ”, “ಕಣ್ಣುಗಳಿಂದ ಕಟ್ಟಿದ ದೈತ್ಯ”, “ತಾರೆಗಳು ಕೆಳ ನೋಡುತ್ತಿವೆ” ಇವೆಲ್ಲವನ್ನೂ ಒಂದೇ ಸಿದ್ಧಮಾದರಿಯ ರೂಪಗಳು ಎಂದು ಓದಿಯಾನು. ನಾನೊಬ್ಬ ಧೈರ್ಯಶಾಲಿ ಚಿಂತಕನಾಗಿದ್ದರೆ (ನಾನು ದಾರಿಗಾಗಿ ತಡಕಾಡುವ ಫುಕ್ಕಲ) ಒಟ್ಟಾರೆ ರೂಪಕಗಳ ಮಾದರಿಗಳು ಹೆಚ್ಚುಕಮ್ಮಿ ಒಂದು ಡಜನ್ನಿನಷ್ಟು ಮಾತ್ರ, ಇನ್ನುಳಿದವೆಲ್ಲ ಕೃತಕ ಪ್ರದರ್ಶನಗಳು ಎಂದು ಹೇಳಿಬಿಡುತ್ತಿದ್ದೆ. ಅಂದರೆ, ಚೀನಾದ “ಹತ್ತು ಸಾವಿರ ಸಂಗತಿಗಳು” ಎಂಬ ವ್ಯಾಖ್ಯೆಯಲ್ಲಿ, ಮೂಲಭೂತ ನಂಟು ಇರುವ ಸಂಗತಿಗಳು ಹನ್ನೆರಡರಷ್ಟು. ದಿಗ್ಭ್ರಮೆಗೀಡು ಮಾಡುವ ಇನ್ನಿತರ ಹೋಲಿಕೆಗಳನ್ನು ನಾವು ಕಾಣಬಹುದು, ಆದರೆ ದಿಗ್ಭ್ರಮೆ ಹೆಚ್ಚು ಹೊತ್ತು ಬಾಳುವುದಿಲ್ಲ.

ಕನಸು ಮತ್ತು ಬಾಳು ಎಂಬ ಮಾದರಿಗೆ ಒಳ್ಳೆಯ ಉದಾಹರಣೆಯೊಂದನ್ನು ಮರೆತಿದ್ದೆ. ಈಗ ನೆನಪಾಗುತ್ತಿದೆ: ಅಮೇರಿಕಾದ ಕವಿ ಇ. ಇ. ಕಮಿಂಗ್ಸನ ಇದರಲ್ಲಿ ನಾಲ್ಕು ಸಾಲುಗಳಿವೆ. ಇದರ ಮೊದಲೆರಡು ಸಾಲುಗಳ ಬಗೆಗೆ ನನ್ನನ್ನು ಕ್ಷಮಿಸಿ, ಇದನ್ನು ಬರೆದಾಗ ಕವಿ ಯುವಕರಿಗಾಗಿ ಬರೆಯುತ್ತಿದ್ದ ಯುವಕವಿಯಾಗಿದ್ದ. ನಾನಂತೂ ಈಗ ಈ ಎಲ್ಲ ಆಟಗಳಿಗೆ ಬಹಳ ವಯಸ್ಸಾದವನಾಗಿದ್ದೇನೆ. ಇಡೀ ಚರಣವನ್ನು ಉಲ್ಲೇಖಿಸಬೇಕಾಗುತ್ತದೆ. ಮೊದಲ ಸಾಲು: “god’s terrible face, brighter than a spoon” (ಚಮಚಕ್ಕಿಂತಲೂ ಉಜ್ವಲವಾದ ದೇವರ ಘೋರ ಮುಖ). ಈ ಚಮಚದ ರೂಪಕದಲ್ಲಿ ಸೊಗಸಿಲ್ಲ, ಕ್ಷಮಿಸಿ. ನನಗನಿಸುವಂತೆ, ಕವಿ ಮೊದಲು ಕತ್ತಿ, ಮೊಂಬತ್ತಿ, ಸೂರ್ಯ, ಗುರಾಣಿ, ಅಥವಾ ಹೊಳೆವ ವಸ್ತುವಿನ ಇನ್ಯಾವುದಾದರೂ ಪಾರಂಪರಿಕ ರೂಪಕವನ್ನು ಯೋಚಿಸಿರಬಹುದು; ನಂತರ ಅವನಿಗನಿಸಿರಬಹುದು, “ಇಲ್ಲ, ನಾನು ನವ್ಯ ಕವಿ, ನಾನೊಂದು ಚಮಚದ ಹೋಲಿಕೆ ಬಳಸುತ್ತೇನೆ”. ಹೀಗೆ ಬಂದಿರಬಹುದಾದ ಚಮಚದ ಹೋಲಿಕೆಯನ್ನು, ಮುಂದೆ ಬರುವ ಸಾಲುಗಳಿಗಾಗಿ ನಾವು ಕಡೆಗಣಿಸಬಹುದು. ಎರಡನೆಯ ಸಾಲು “collects the image of one fatal word” (’ಒಂದು ಮಾರಕ ಪದದ ಪ್ರತಿಮೆಯನ್ನು ಕಲೆಹಾಕುತ್ತದೆ’) ಮೊದಲನೆಯದಕ್ಕಿಂತ ಮಿಗಿಲು. ನನ್ನ ಮಿತ್ರ ಮರ್ಕಿಸನ್ ನನಗೆ ಹೇಳಿದ ಹಾಗೆ, ಹಲವು ಪ್ರತಿಮೆಗಳು ಚಮಚದಲ್ಲಿ ಕಲೆಹಾಕಿರುವುದು ಸಾಧ್ಯ. ನಾನು ಈ ಸಾಧ್ಯತೆಯನ್ನು ಎಣಿಸಿರಲಿಲ್ಲ, ಚಮಚದ ಹೋಲಿಕೆಯಿಂದ ಆವಾಕ್ಕಾಗಿಬಿಟ್ಟು, ಬೇರೆ ಯೋಚನೆಗೆ ತಯಾರಿರಲಿಲ್ಲ.

god’s terrible face, brighter than a spoon,

collects the image of one fatal word,

so that my life (which liked the sun and the moon)

resembles something that has not occurred.

     ಚಮಚಕ್ಕಿಂತಲೂ ಉಜ್ವಲವಾದ ದೇವರ ಘೋರ ಮುಖ

     ಒಂದು ಮಾರಕ ಪದದ ಪ್ರತಿಮೆಯನ್ನು ಕಲೆಹಾಕುತ್ತದೆ

     (ಸೂರ್ಯ ಚಂದ್ರರನ್ನು ಮೆಚ್ಚುವ) ನನ್ನ ಬಾಳು

     ಘಟಿಸದ ಏನನೋ ಹೋಲಲಿ ಎಂದು.

“ಘಟಿಸದ ಏನನೋ ಹೋಲಲಿ” ಎನ್ನುವಲ್ಲಿ ಅದೇನೋ ಆಶ್ಚರ್ಯಕರ ಸರಳತೆಯಿದೆ. ನನಗನ್ನಿಸುವಂತೆ ಈ ಸರಳ ಸಾಲು ಬಾಳಿನಲ್ಲಿರುವ ಸ್ವಪ್ನದ ಅಂಶವನ್ನು, ಸುಪ್ರಸಿದ್ಧ ಕವಿಗಳಾದ ಶೇಕ್ಸಪಿಯರನ ಅಥವಾ ವಾಲ್ಟರ್ ಫೊನ್ ಡೆ ಫೂಗೆಲವಾಯ್ಡೆಯ ಸಾಲುಗಳಿಗಿಂತ ಚೆನ್ನಾಗಿಯೇ ಹೇಳುತ್ತದೆ.

ನಾನು ಇಲ್ಲಿ ಸೀಮಿತ ಉದಾಹರಣೆಗಳನ್ನು ಮಾತ್ರ ತೆಗೆದುಕೊಂಡಿದ್ದೇನೆ. ಖಂಡಿತವಾಗಿ ನೀವು ಜತನವಾಗಿಟ್ಟಿರುವ ರೂಪಕಗಳಿಂದ ನಿಮ್ಮ ನೆನಪುಗಳು ತುಂಬಿಹೋಗಿರಬಹುದು – ನೀವು ಪ್ರಾಯಶಃ ಕಾಯುತ್ತಿರಬಹುದು ನಾನು ಅವುಗಳನ್ನು ಉಲ್ಲೇಖಿಸುವೆನೆಂದು. ಎಷ್ಟೆಲ್ಲ ಒಳ್ಳೊಳ್ಳೆ ರೂಪಕಗಳನ್ನು ಉದಹರಿಸಲು ಮರೆತಿದ್ದರಿಂದ ಈ ಉಪನ್ಯಾಸದ ತರುವಾಯ ನನಗೇ ಖೇದವಾಗಲಿದೆ ಎಂದು ಸಹ ನನಗೆ ಗೊತ್ತು. ನೀವು ನನಗೆ ಸೂಚ್ಯವಾಗಿ ಕೇಳ ಬಹುದು, ನಾನೇಕೆ ಇಂತಿಂತ ರೂಪಕಗಳನ್ನು ಉದಾಹರಿಸಲಿಲ್ಲವೆಂದು. ಆಗ ನಾನು ತಡವರಿಸುತ್ತ ಕ್ಷಮಾಯಾಚನೆ ಮಾಡಬೇಕಾಗುತ್ತದಷ್ಟೇ.

ಆದರೆ, ಈಗ, ನಾವು ಹಳೆಯ ಮಾದರಿಗಳಿಂದ ಹೊರತಾದ ರೂಪಕಗಳ ಕಡೆಗೆ ತಿರುಗೋಣ. ನಾನಾಗಲೇ ಚಂದ್ರನ ಉಲ್ಲೇಖ ಮಾಡಿರುವುದರಿಂದ, ಬ್ರೌನನ “ಪರ್ಶಿಯಾದ ಸಾಹಿತ್ಯ ಚರಿತ್ರೆ”ಯಲ್ಲಿ ನಾನು ಓದಿದ ರೂಪಕವನ್ನು ಎತ್ತಿಕೊಳ್ಳುತ್ತೇನೆ. ಈ ರೂಪಕ ಫರೀದ್ ಅಲ್-ದೀನ್ ಅತ್ತರ್, ಅಥವಾ ಉಮರ್ ಖಯ್ಯಾಂ, ಅಥವಾ ಹಫೀಜ್, ಅಥವಾ ಪರ್ಶಿಯಾದ ಇನ್ನಾವುದೋ ಮಾಹಾನ್ ಕವಿಯದ್ದು ಇದ್ದೀತು. ಆತ ಚಂದಿರನನ್ನು, “ಕಾಲದ ದರ್ಪಣ” ವೆಂದು ಕರೆಯುತ್ತಾನೆ. ಚಂದ್ರ ದರ್ಪಣದಂತಿರುವುದು ಖಗೋಳಶಾಸ್ತ್ರಕ್ಕೆ ಅನುಗುಣವಾಗಿಯೇ ಇದೆಯಾದರೂ, ಕಾವ್ಯದ ದೃಷ್ಟಿಯಿಂದ ಇದು ಮುಖ್ಯವಲ್ಲ. ಚಂದಿರ ಪ್ರತಿಬಿಂಬಿಸುತ್ತಾನೋ, ಇಲ್ಲವೋ ಅನ್ನುವುದು ಕಾವ್ಯದಲ್ಲಿ ಅಮುಖ್ಯ, ಯಾಕೆಂದರೆ ಅದು ನಮ್ಮ ಕಲ್ಪನೆಗೆ ಸಂಬಂಧಿಸಿದ್ದು. ಕಾಲವನ್ನು ಪ್ರತಿಫಲಿಸುವ ಚಂದಿರನ ರೂಪಕ ತುಂಬಾ ಚೆನ್ನಾಗಿದೆಯೆಂದು ನನ್ನ ಅನಿಸಿಕೆ. ಯಾಕೆಂದರೆ, ಮೊದಲನೆಯದಾಗಿ, ದರ್ಪಣದ ಕಲ್ಪನೆ ಚಂದಿರನ ಹೊಳಪನ್ನು ಮತ್ತು ನಾಜೂಕನ್ನು ನೆನಪಿಸುತ್ತದೆ. ಎರಡನೆಯದಾಗಿ, ಆ ಅದೇ, ನಾವು ನೋಡುತ್ತಿರುವ ಚಂದಿರ ಕಾಲದಷ್ಟೇ ಪುರಾತನವಾಗಿದ್ದು, ಆ ಕುರಿತಾಗಿ ಅದೆಷ್ಟೋ ಕಾವ್ಯ, ಮಿಥಕಗಳಿರೋದು, ತಕ್ಷಣ ನಮ್ಮ ಗಮನಕ್ಕೆ ಬರುತ್ತದೆ.

ನಾನೀಗ “ಕಾಲದಷ್ಟು ಪುರಾತನ” ಎಂಬ ಪದಪ್ರಯೋಗ ಮಾಡಿರೋದರಿಂದ, ಇನ್ನೊಂದು ಸಾಲನ್ನು ಉಲ್ಲೇಖಿಸಲೇ ಬೇಕು. ನಿಮಗೂ ಅದು ಮನಸ್ಸಿನಲ್ಲಿ ಮೂಡಿರಬಹುದು. ಲೇಖಕನ ಹೆಸರು ನನಗೀಗ ನೆನಪಾಗುತ್ತಿಲ್ಲ. ನಾನದನ್ನು ರಡ್ಯಾರ್ಡ್ ಕಿಪ್ಲಿಂಗನ ಅಷ್ಟೇನೂ ಮಹತ್ವದ್ದಲ್ಲದ From Sea to Sea (ಸಮುದ್ರದಿಂದ ಸಮುದ್ರಕ್ಕೆ)ದಲ್ಲಿ ಓದಿದ ನೆನಪು. “A rose-red city, half as old as Time.” (ಕಾಲದರ್ಧದಷ್ಟು ಹಳೆಯದಾದ ಗುಲಾಬಿ-ಕೆಂಪು ಶಹರ) ಕವಿಯೇನಾದರೂ “ಕಾಲದಷ್ಟು ಹಳೆಯ” ಎಂದಿದ್ದರೆ ಅದಕ್ಕೆ ಏನೂ ಹೆಚ್ಚುಗಾರಿಕೆ ಇರುತ್ತಿರಲಿಲ್ಲ. “ಕಾಲದರ್ಧದಷ್ಟು’ ಎನ್ನುವುದು ಅದಕ್ಕೊಂದು ಅದ್ಭುತ ನಿಖರತೆಯನ್ನು ದೊರಕಿಸುತ್ತದೆ. “I will love you forever and a day.” (ನಾನು ನಿನ್ನನೆಂದೆಂದಿಗೂ ಮತ್ತೊಂದು ದಿನಕ್ಕೂ ಪ್ರೀತಿಸುವೆ) ಎಂಬ ಇಂಗ್ಲೀಷಿನಲ್ಲಿರುವ ಒಂದು ವಿಚಿತ್ರವಾದರೂ ಅದ್ಭುತ ನಿಖರತೆ ಉಳ್ಳ ನುಡಿಗಟ್ಟಿನಲ್ಲಿರುವಂತೆ. ಆದರದು ತೀರಾ ಅಮೂರ್ತವಾದುದರಿಂದ, ಮನಸ್ಸಿಗೆ ನಾಟುವುದಿಲ್ಲ.

ಅಂತಹುದೇ ಒಂದು ಚಾತುರ್ಯ, ಈ ಪದಪ್ರಯೋಗವನ್ನು ಕ್ಷಮಿಸಿ, Thousand and One Nights (ಸಾವಿರ ಮತ್ತೊಂದು ರಾತ್ರಿ) ಎಂಬ ಸುಪ್ರಸಿದ್ಧ ಪುಸ್ತಕದ ಶೀರ್ಷಿಕೆಯಲ್ಲಿಯೂ ಇದೆ. ಇಲ್ಲಿನ “ಸಾವಿರ ರಾತ್ರಿಗಳು” ಪದವನ್ನು ನಮ್ಮ ಕಲ್ಪನೆ “ಹಲವಾರು ರಾತ್ರಿಗಳು” ಎಂದು ಗ್ರಹಿಸುತ್ತದೆ. ಹದಿನೇಳನೇ ಶತಮಾನದಲ್ಲಿ ನಲವತ್ತು ಎನ್ನುವುದನ್ನು ಸಹ ಇಂಗ್ಲೀಷಿನಲ್ಲಿ “ಹಲವಾರು” ಎಂಬರ್ಥದಲ್ಲಿ ಉಪಯೋಗಿಸಲಾಗುತ್ತಿತ್ತು. ಶೇಕ್ಸಪಿಯರ ಒಂದು ಕಡೆ “When forty winters shall besiege thy brow” (ನಿನ್ನ ಕಣ್ಣೆವೆಗಳಿಗೆ ನಲವತ್ತು ಚಳಿಗಾಲಗಳು ಮುತ್ತಿದಾಗ) ಎಂದು ಬಳಸುತ್ತಾನೆ. ಇಂಗ್ಲೀಷಿನಲ್ಲಿ ನಿದ್ದೆ ಎನ್ನಲು ಸಾಮಾನ್ಯವಾಗಿ ಬಳಸುವ ನುಡಿಗಟ್ಟಾದ “forty winks” ನೋಡಿ – ಇಲ್ಲಿ ನಲವತ್ತು ಎಂದರೆ ಹಲವಾರು ಎಂದಷ್ಟೇ ಅರ್ಥ. ಹಾಗೆಯೇ, “ಸಾವಿರ ಮತ್ತೊಂದು ರಾತ್ರಿ” ಎನ್ನುವುದು “ಗುಲಾಬಿ-ಕೆಂಪು ಶಹರ” ಎಂದಹಾಗೆ, ಅಥವಾ ಆ ಕಾಲ್ಪನಿಕ ನಿಖರತೆಯ “ಕಾಲದರ್ಧದಷ್ಟು ಹಳೆಯ” ಎಂದಹಾಗೆ; ಹಾಗೆ ಹೇಳಿದಾಗ ಕಾಲ ಇನ್ನೂ ದೀರ್ಘವೆನಿಸುತ್ತದೆ.

ಇನ್ನಷ್ಟು ವಿವಿಧ ರೂಪಕಗಳನ್ನು ವಿಶ್ಲೇಷಿಸುವ ಸಲುವಾಗಿ, ಈಗ ನಾನು ನನ್ನ ನೆಚ್ಚಿನ ಆಂಗ್ಲೋ-ಸ್ಯಾಕ್ಸನ್ ಕಾವ್ಯಕ್ಕೆ ತಿರುಗುತ್ತೇನೆ. ಒಂದು ಬಹುನಾಮಪದಕ್ಕೆ (ನಾಮಪದಕ್ಕೆ ವಿಷೇಶಣವಾಗಿ ನಾಮಪದವನ್ನೇ ಬಳಸಿರುವ ಪದ) ಸರ್ವೇಸಾಮಾನ್ಯ ಉದಾಹರಣೆಯಾಗಿ ಬಳಸಲಾಗುವ ನುಡಿಗಟ್ಟು: ಸಮುದ್ರವನ್ನು “the whale road” (ತಿಮಿಂಗಲದ ಹಾದಿ) ಎಂದು ಹೆಸರಿಸುವುದನ್ನು ನೋಡೋಣ. ಇದನ್ನು ಮೊಟ್ಟಮೊದಲು ಬಳಸಿದ ಸ್ಯಾಕ್ಸನ್ ವ್ಯಕ್ತಿಗೆ ಇದು ಎಷ್ಟು ಉತ್ತಮ ಪದಪ್ರಯೋಗವೆಂಬ ಅರಿವಿತ್ತಾ ಎಂದು ನಾನು ಕೆಲಸಲ ಕೌತುಕ ಪಡುತ್ತೇನೆ. ತಿಮಿಂಗಲದ ಭಾರಿ ಗಾತ್ರವು ಸಮುದ್ರದ ಅಗಾಧತೆಯನ್ನು ಸೂಚಿಸುತ್ತದೆ ಮತ್ತು ಒತ್ತಿ ಹೇಳುತ್ತದೆ ಎನ್ನುವುದು ಆತನಿಗೂ ಹೊಳೆದಿತ್ತಾ?

ನಾರ್ಸ್ ಜನಾಂಗದಲ್ಲಿ ರಕ್ತದ ಕುರಿತಾಗಿ ಒಂದು ರೂಪಕವಿದೆ, ಅದೂ ಕೂಡ ಒಂದು ಬಹುನಾಮಪದವೇ: ರಕ್ತಕ್ಕೆ “the water of the serpent” (ಸರ್ಪದ ನೀರು). ಈ ರೂಪಕದ ಹಿಂದೆ ಸ್ಯಾಕ್ಸನ್ನುಗಳಲ್ಲಿಯೂ ಸಹ ಕಂಡುಬರುವ ಒಂದು ಕಲ್ಪನೆ ಇದೆ. ಅದೆಂದರೆ, ಖಡ್ಗ ಜನರ ರಕ್ತವನ್ನು ನೀರಿನಂತೆ ಕುಡಿಯುತ್ತದೆ ಎಂದು, ಹಾಗಾಗಿ ಖಡ್ಗವನ್ನು ಕೇಡು ಎಂದು ಬಗೆಯಲಾಗಿದೆ.

ಕಾಳಗಗಳಿಗೆ ಬಳಸುವ ರೂಪಕಗಳಲ್ಲಿ ಕೆಲವು ತುಂಬಾ ಸವಕಳಿಯಾದ ಪದಗಳು – “ಜನರು ಎದುರಾಗುವುದು” ಎಂಬಂತವು. ಇಲ್ಲಿ, ಜನರು ಎದುರುಬದುರಾಗುವುದೇ ಒಬ್ಬರನ್ನೊಬ್ಬರು ಕೊಲ್ಲಲು, ಬೇರೆ ರೀತಿಯ ಎದುರುಬದುರಾಗುವ ಸಂಧರ್ಭವೇ ಇಲ್ಲ ಎಂಬ ಅರ್ಥವಿರುವಂತಿದೆ. ಹಾಗೆಯೇ, “ಖಡ್ಗಗಳು ಎದುರಾಗುವುದು”, “ಖಡ್ಗಗಳ ನೃತ್ಯ”, “ಕವಚಗಳ ಸಂಘರ್ಷ”, “ಗುರಾಣಿಗಳ ಸಂಘರ್ಷ” ಇತ್ಯಾದಿ ಬಹುನಾಮಪದಗಳೂ ಇವೆ. ಬ್ರುನಾಬರ್ಹನ ಗೀತೆಯೊಂದರಲ್ಲಿ ಈ ಎಲ್ಲ ಪ್ರಯೋಗಗಳನ್ನೂ ಕಾಣಬಹುದು. ಇನ್ನೂ ಒಂದು ಸೊಗಸಾದ ರೂಪಕವಿದೆ – “ಕ್ರೋಧ ಎದುರುಬದುರಾಗುವುದು”. ಈ ರೂಪಕದ ವಿಶೇಷವೆಂದರೆ, ಜನ ಎದುರಾದಾಗ ಸ್ನೇಹ, ಸಾಂಗತ್ಯಗಳಿರುತ್ತವೆ. ಅಂತೆಯೇ ಅದಕ್ಕೆ ವ್ಯತಿರಿಕ್ತವಾಗಿ, ಕ್ರೋಧವೂ ಇದ್ದೀತು.

ಕಾಳಗಗಳ ರೂಪಕಗಳಲ್ಲಿ, ಇವುಗಳಿಗಿಂತಲೂ ಉತ್ತಮವಾದುದೆಂದರೆ, ಒಂದು ನಾರ್ಸ್ ಜನಾಂಗದ ಹಾಗೂ ಐರಿಷ್ ಜನಾಂಗದವರೂ ಕೂಡ ಬಳಸುವ “ಜನರ ಜಾಲ” ಎಂಬ ಪದ. ಇಲ್ಲಿ ಜಾಲ ಎಂಬ ಪದದ ಪ್ರಯೋಗ ಚೆನ್ನಾಗಿದೆ, ಯಾಕೆಂದರೆ ಮಧ್ಯಯುಗದ ಕಾಳಗಗಳ ಮಾದರಿ ಜಾಲದ್ದೇ ಆಗಿದೆ. ಖಡ್ಗ, ಗುರಾಣಿ, ಮತ್ತವುಗಳು ಒಂದನ್ನಿನ್ನೊಂದು ಅಡ್ಡಪಡಿಸುವ ರೀತಿ ಜಾಲದ ಹಾಗೆ. ಅಲ್ಲದೇ, ಜೀವಿತ ಜನರಿಂದ ಮಾಡಿದ ಬಲೆ ಎಂಬ ದುಃಸ್ವಪ್ನದಂತಹ ಸೂಚನೆ, “ಜನರ ಜಾಲ” – ಒಬ್ಬರಿನ್ನೊಬ್ಬರನ್ನು ಸಾಯಿಸುತ್ತ ಸಾಯುತ್ತಿರುವ ಜನರ ಜಾಲ.

“ಜನರ ಜಾಲ”ದಂತದ್ದೇ ಒಂದು ರೂಪಕ ಸ್ಪೇನಿನ ಕವಿ ಗೊಂಗೋರಾನ ಕಾವ್ಯದಲ್ಲಿರುವುದು ಏಕಾಏಕಿ ಹೊಳೆಯುತ್ತಿದೆ ಮನಸ್ಸಿಗೆ. ಯಾತ್ರಿಯೊಬ್ಬನನ್ನು ವರ್ಣಿಸುತ್ತಿರುವ ಕವಿ ಹೇಳುತ್ತಾನೆ, ಯಾತ್ರಿ  “barbarous village” (ಅನಾಗರಿಕ ಹಳ್ಳಿ)ಗೆ ಬರುತ್ತಾನೆ. ಆಗ ಆ ಹಳ್ಳಿಯ ನಾಯಿಗಳ ಒಂದು ಜಾಲವೇ ಅವನನ್ನು ಸುತ್ತುವರಿಯುತ್ತದೆ.

Como suele tejer

Bárbara aldea

Soga de perros

Contra forastero.

         

          ಎಷ್ಟು ಸಹಜವಾಗಿ

          ಅನಾಗರಿಕ ಹಳ್ಳಿಯ

          ನಾಯಿಗಳ ಜಾಲ

          ಸುತ್ತುಕೊಂಡಿದೆ ಅಪರಿಚಿತನ

ಕೌತುಕವೆಂದರೆ, ಇಲ್ಲಿಯೂ ಅದೇ ರೂಪಕವಿದೆ. ಜೀವಿಗಳೇ ಒಂದು ಹಗ್ಗವಾಗುವ ಅಥವಾ ಜಾಲವಾಗುವ ಕಲ್ಪನೆ. ಒಂದರಂತೆ ಒಂದಿದ್ದರೂ ಸಹ, ಇವುಗಳ ನಡುವೆಯೂ ಭಿನ್ನತೆಗಳಿವೆ. ನಾಯಿಗಳ ಬಳ್ಳಿ ಎಂಬ ಚಿತ್ರ ಎಷ್ಟು ಘೋರವಾಗಿದೆ, ಅಂತೆಯೇ, “ಜನರ ಜಾಲ” ಎಂಬ ಚಿತ್ರ ಅದೇನೋ ಭೀಕರವಾದದ್ದನ್ನು ಸೂಚಿಸುತ್ತದೆ.

ಕೊನೆಯದಾಗಿ, ಇಂದು ಎಲ್ಲ ಮರೆತಿರುವ ಇಂಗ್ಲೀಷ ಕವಿ ಬೈರನ್ನನ ಒಂದು ಹೋಲಿಕೆಯನ್ನು (ನಾನೇನು ಅಧ್ಯಾಪಕನಾ, ಹೋಲಿಕೆ, ರೂಪಕಗಳ ನಡುವಿನ ವ್ಯತ್ಯಾಸದ ಬಗೆಗೆ ತಲೆಕೆಡಿಸಿಕೊಳ್ಳಲು!) ತೆಗೆದುಕೊಳ್ಳುತ್ತೇನೆ. ನಾನು ಚಿಕ್ಕ ಹುಡುಗನಾಗಿದ್ದಾಗ ಓದಿದ ಕವನವಿದು – ನೀವೂ ಸಹ ಚಿಕ್ಕಂದಿನಲ್ಲಿ ಇದನ್ನು ಓದಿರಬಹುದು. ಆದರೆ, ಎರಡು ಮೂರು ದಿನಗಳ ಹಿಂದಷ್ಟೇ ಈ ರೂಪಕದ ಸಂಕೀರ್ಣತೆ ನನಗೆ ಹೊಳೆಯಿತು. ಬೈರನ್ ಎಂಬ ಕವಿ ಸಂಕೀರ್ಣ ಶೈಲಿಯಲ್ಲಿಯೂ ಬರೆದಿದ್ದಾನೆ ಎಂದು ನನಗೆ ಅರಿವೇ ಇರಲಿಲ್ಲ. ಈ ಸಾಲುಗಳು ನಿಮಗೆ ನೆನಪಿದೆಯಾ: “She walks in beauty, like the night.”  (ರಾತ್ರಿಯಂತವಳು ಚೆಲುವಿನಲ್ಲಿ ಚಲಿಸುವಳು) ಈ ಸಾಲು ಎಷ್ಟು ಪರಿಪೂರ್ಣವಾಗಿದೆಯೆಂದರೆ ನಾವು ಹೆಚ್ಚು ಯೋಚನೆಗೆ ತೊಡಗುವುದಿಲ್ಲ. ನಾವೂ ಕೂಡ ಬರೆಯಬಹುದಾದ ಸಾಲು ಎಂದೂ ನಮಗನಿಸಬಹುದು. ಆದರೆ, ಬೈರನ್ ಮಾತ್ರ ಬರೆಯುವ ಮನಸು ಮಾಡಿದ.

ಈ ಸಾಲಿನಲ್ಲಿ ಹುದುಗಿರುವ ರಹಸ್ಯ ಸಂಕೀರ್ಣತೆಯನ್ನು ಗಮನಿಸೋಣ. ನಾನು ಏನನ್ನು ತೋರಿಸಹೊರಟಿದ್ದೇನೆ ಎಂದು ಪ್ರಾಯಶಃ ನಿಮಗೆ ಆಗಲೇ ತಿಳಿದಿರಬೇಕು. (ಪತ್ತೇದಾರಿ ಕತೆಗಳಲ್ಲಿಯೂ ಹೀಗಾಗುತ್ತದಲ್ಲವೇ, ಕೌತುಕವಿದ್ದಲ್ಲಿ ಯಾವಾಗಲೂ ಹೀಗೆ ಆಗುವುದು ಸ್ವಾಭಾವಿಕ) “ರಾತ್ರಿಯಂತವಳು ಚೆಲುವಿನಲ್ಲಿ ಚಲಿಸುವಳು”: ಶುರುವಿನಲ್ಲಿ ಓರ್ವ ಚೆಲುವೆ ಇದ್ದಾಳೆ. ಆಮೇಲೆ ಅವಳು ಚೆಲುವಾಗಿ ಚಲಿಸುವುದಾಗಿ ಹೇಳಲಾಗಿದೆ. ಅವಳನ್ನು ರಾತ್ರಿಗೆ ಹೋಲಿಸಲಾಗಿದೆ. ಈ ವಾಕ್ಯವನ್ನು ಅರಿಯಲು, ನಾವು ರಾತ್ರಿಯನ್ನು ಸಹ ಮಹಿಳೆ ಎಂದು ತಿಳಿಯಬೇಕಾಗುತ್ತದೆ, ಇಲ್ಲವಾದರೆ, ವಾಕ್ಯ ಅರ್ಥಶೂನ್ಯವಾಗುತ್ತದೆ. ಆದ್ದರಿಂದ, ಈ ಸರಳ ಸಾಲಿನಲ್ಲಿ ಎರಡು ರೂಪಕಗಳಿವೆ: ಮಹಿಳೆಯೊಬ್ಬಳನ್ನು ರಾತ್ರಿಗೆ ಹೋಲಿಸಲಾಗಿದೆ, ರಾತ್ರಿಯನ್ನು ಮಹಿಳೆಗೆ. ಬೈರನ್ ಹಾಗೆಯೇ ಹೇಳಬಯಸಿದ್ದನೋ, ಇಲ್ಲವೋ ನನಗೆ ಗೊತ್ತಿಲ್ಲ, ಅದಕ್ಕೆ ನಾನು ಮಹತ್ವವನ್ನೂ ಕೊಡುವುದಿಲ್ಲ. ಅವನೇನಾದರೂ, ಇಲ್ಲಿ ಎರಡು ರೂಪಕಗಳಿವೆ ಎಂದು ಗ್ರಹಿಸಿದ್ದರೆ, ಬಹುಶಃ ಈ ಸಾಲು ಅಷ್ಟು ಸೊಗಸಾಗಿ ಇರುತ್ತಿರಲಿಲ್ಲ. ನಿಧನಕ್ಕೆ ಮೊದಲು ಅವನ ಅರಿವಿಗೆ ಬಂದಿರಲೂ ಬಹುದು, ಅಥವಾ ಯಾರದರೂ ಅವನಿಗೆ ತಿಳಿಸಿರಲೂ ಬಹುದು.

ಈ ಉಪನ್ಯಾಸದ ಅಂತ್ಯದಲ್ಲಿ ನಾವೀಗ ಎರಡು ಮಹತ್ವದ ನಿರ್ಣಯಗಳಿಗೆ ತಲುಪಿದ್ದೇವೆ. ಮೊದಲನೆಯದೆಂದರೆ, ಸಾವಿರಾರು ರೂಪಕಗಳಿದ್ದರೂ ಸಹ, ಅವೆಲ್ಲವನ್ನೂ ಕೂಡ ಕೆಲವೇ ಸರಳ ಮಾದರಿಗಳಲ್ಲಿ ಗ್ರಹಿಸಬಹುದು. ಇದು ಅಷ್ಟೇನೂ ನಮ್ಮನ್ನು ಚಿಂತೆಗೀಡುಮಾಡುವ ಹಾಗಿಲ್ಲ, ಯಾಕೆಂದರೆ, ಪ್ರತಿ ರೂಪಕವೂ ಹೊಸದೇ ಇರುತ್ತದೆ. ಪ್ರತಿ ಸಲದ ಪ್ರಯೋಗದಲ್ಲಿಯೂ ರೂಪಕದ ಮಾದರಿಯು ಹೊಸ ರೂಪವೊಂದನ್ನು ದರ್ಶಿಸುತ್ತದೆ. ಎರಡನೆಯ ನಿರ್ಣಯವೆಂದರೆ, ಕೆಲವು ರೂಪಕಗಳನ್ನು, ಉದಾಹರಣೆಗೆ, “ಜನರ ಜಾಲ”, “ತಿಮಿಂಗಲದ ರಸ್ತೆ”, ನಿರ್ದಿಷ್ಟ ಮಾದರಿಯ ಜೊತೆ ಸೀಮಿತಗೊಳಿಸಲಾಗದು. ಹಾಗೆಂದೇ, ನನಗನಿಸುತ್ತದೆ, ಈ ಉಪನ್ಯಾಸದ ನಂತರವೂ ಕೂಡ ರೂಪಕಗಳಿಗೆ ಭವಿಷ್ಯವಿದೆ. ಯಾಕೆಂದರೆ, ನಾವು ಬಯಸಿದರೆ, ಮುಖ್ಯ ಧಾರೆಗಳ ಹೊಸ ರೂಪಗಳನ್ನು ಯಾವಾಗಲೂ ಪ್ರಯತ್ನಿಸಬಹುದು. ಹೊಸ ರೂಪಗಳು ಸೊಗಸಾಗಿರುತ್ತವೆ. ಕೆಲವು ವಿಮರ್ಶಕರು, ನನ್ನಂತವರು, ಹೇಳಬಹುದು, “ಹಾಂ, ಅದೋ ಅಲ್ಲಿ ಕಣ್ಣು ಮತ್ತು ತಾರೆ ಬಂದಿವೆ, ಇದೋ ಇಲ್ಲಿ, ಕಾಲ ಮತ್ತು ನದಿ ಬಂದಿವೆ, ಮತ್ತೆ ಮತ್ತೆ.” ರೂಪಕಗಳು ಕಲ್ಪನೆಯನ್ನು ಕೆಣಕುತ್ತವೆ. ಅಥವಾ, ಸಿದ್ಧ ಮಾದರಿಗಳಿಗೆ ಒಗ್ಗದ ನವನವೀನ ರೂಪಕಗಳನ್ನು ಹುಟ್ಟುಹಾಕುವ ಕಲೆ ನಮ್ಮದಾಗ ಬಹುದು – ಯಾಕಾಗಬಾರದು?

ಮುಂದುವರೆಯುವುದು …

ಕಾವ್ಯ ಎಂಬ ಒಗಟು

ಭಾಗ ೧: https://ruthumana.com/2020/08/24/borges-craft-of_verses-riddles-of-poetry-1/

ಭಾಗ ೨: https://ruthumana.com/2020/09/04/borges-craft-of_verses-riddles-of-poetry-2/

ರೂಪಕ

ಭಾಗ ೧: https://ruthumana.com/2020/10/18/borges-craft-of_verses-the-metaphor-1/


ಮೂಲ: The Craft of Verse

One comment to “ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ (ಕಾವ್ಯ ಕುಸುರಿ) : “ರೂಪಕ” – ಭಾಗ ೨”
  1. ತುಂಬ ಉಪಯುಕ್ತ, ಮನೋಜ್ಞ ಸರಣಿ. ಅಭಿನಂದನೆ ಋತುಮಾನಕ್ಕೆ.. ಅಭಿನಂದನೆ ಕಡೆಯವರಿಗೂ.

ಪ್ರತಿಕ್ರಿಯಿಸಿ