ಶೈಕ್ಷಣಿಕ ಕ್ಷೇತ್ರದಲ್ಲಿ ದಲಿತ ಮತ್ತು ಆದಿವಾಸಿ ಮಹಿಳೆ

ಶೈಕ್ಷಣಿಕ ಕ್ಷೇತ್ರದ ಹೊಳಹೊಕ್ಕು ಚಲಿಸಿ ವ್ಯವಹರಿಸುವುದು ಒಬ್ಬ ದಲಿತ ಮಹಿಳೆಯನ್ನು “ಪೀಡಿಸಿ ದಿಗ್ಭ್ರಮೆಗೊಳಿಸಿಬಿಡುತ್ತದೆ”.

–ಪ್ರಿಯಾಂಕ ಭಾಲ್‍ಶಂಕರ್

 

ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯಲ್ಲಿ(ಟಿ.ಐ.ಎಸ್.ಎಸ್) ಮುಂಬಯಿಯ ಒಬ್ಬ ದಲಿತ ಮಹಿಳೆ ಜಯಾ (ಹೆಸರು ಬದಲಾಯಿಸಿದೆ), ಸಾಮಾಜಿಕ ಕೆಲಸದಲ್ಲಿ ಸ್ನಾತಕೋತ್ತರ ಅಧ್ಯಯನದಲ್ಲಿ ತೊಡಗಿದ್ದಾರೆ. ಮೂರು ತಲೆಮಾರುಗಳಿಂದ ಸಫಾಯಿ ಕರ್ಮಚಾರಿಗಳಾಗಿದ್ದ ಅವರ ಕುಟುಂಬದಲ್ಲಿ ಆಕೆ, ಶಿಕ್ಷಣ ಪಡೆಯುತ್ತಿರುವ ಮೊದಲ ಪೀಳಿಗೆಯ ವ್ಯಕ್ತಿ. ತನ್ನ 17ನೇ ವಯಸ್ಸಿನಿಂದಲೇ ಅರೆ-ಕಾಲದ ಉದ್ಯೋಗಗಳನ್ನು ಮಾಡುತ್ತಾ ತನ್ನ ವಿದ್ಯಾಭ್ಯಾಸಕ್ಕಾಗಿ ಬೇಕಾಗುವ ಹಣವನ್ನು ಆಕೆ ತಾನೇ ಸಂಪಾದನೆ ಮಾಡುತ್ತಲಿದ್ದಾರೆ.

“ನಾನು ನನ್ನ ಸಮುದಾಯದವರಿಗೆ ಸಹಾಯ ಮಾಡಲೆಂದು ಮತ್ತು ಅವರ ಅಭಿವೃದ್ಧಿ ಮತ್ತು ಕ್ಷೇಮಗಳಿಗೆ ನನ್ನ ಸೇವೆ ಸಲ್ಲಿಸಲೆಂದು ಸಾಮಾಜಿಕ ಕೆಲಸದ ಅಭ್ಯಾಸವನ್ನು ಆರಿಸಿಕೊಂಡೆ’, ಎಂದು ಅವರು ಹೇಳುತ್ತಾರೆ. 2018ರಲ್ಲಿ ಟಿ.ಐ.ಎಸ್.ಎಸ್. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಇದ್ದ ವಿದ್ಯಾರ್ಥಿ ಶುಲ್ಕ ಮನ್ನಾ ಸೌಲಭ್ಯವನ್ನು ಹಿಂತೆಗೆದುಕೊಂಡಿತು. ಇದರಿಂದಾಗಿ ಅವರ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವುದು ಕಠಿಣವಾಗಿದೆಯೆಂದು ಅವರು ಹೇಳುತ್ತಾರೆ.” ಜೀವನ ನಡೆಸಲು ನನ್ನ ಕುಟುಂಬದ ಆದಾಯ ಸಾಕಾಗುವುದಿಲ್ಲ. ಹಾಗಾಗಿ ನನ್ನ ವಿದ್ಯಾಭ್ಯಾಸಕ್ಕಾಗಿ ಅವರನ್ನು ಹಣ ಕೇಳುವುದು ನನ್ನಿಂದ ಸಾಧ್ಯವಿಲ್ಲ. ನನಗೆ ಪೂರ್ಣಾವಧಿಯ ವಿದ್ಯಾಭ್ಯಾಸ ಮಾಡುವ ಆಸೆಯಿತ್ತು. ಆದರೆ, ವಿದ್ಯಾರ್ಥಿ ಶುಲ್ಕದ ಮನ್ನ ಇಲ್ಲದಿರುವುದರಿಂದ ನಾನು ಅರೆಕಾಲದ ಕೆಲಸವನ್ನು ಮುಂದುವರೆಸಬೇಕಾಗುತ್ತದೆ. ಇದು ನನ್ನನ್ನು ದಿಗ್ಭ್ರಮೆಗೊಳಿಸಿ ಪೀಡಿಸುತ್ತದೆ.”

Representational image.

ಜಯಾಳಂತಹ ಬಹಳಷ್ಟು ದಲಿತ/ಆದಿವಾಸೀ ಸಮುದಾಯಗಳಿಂದ ಬಂದ ವಿದ್ಯಾರ್ಥಿನಿಯರು, ತಮ್ಮ ತಮ್ಮ ಕುಟುಂಬಗಳು ಮತ್ತು ಸಮುದಾಯಗಳನ್ನು ಉತ್ತಮಗೊಳಿಸುವ ಸಲುವಾಗಿ ಒಂದು ಗೌರವಾನ್ವಿತ ಶಿಕ್ಷಣವನ್ನು ಪಡೆಯಲು ಒದ್ದಾಡುತ್ತಿದ್ದಾರೆ.

ಶುಲ್ಕ ಮನ್ನಾವನ್ನು ಹಿಂತೆಗೆದುಕೊಂಡಿರುವುದು ಟಿ.ಐ.ಎಸೆಸ್. ಮಾತ್ರವಲ್ಲ. ದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯವೂ (ಎಯುಡಿ) ಮನ್ನಾವನ್ನು ಹಿಂತೆಗೆದುಕೊಂಡಿತ್ತು, ಆದರೆ ಒಂದು ದೊಡ್ಡ ಸಂಖ್ಯೆಯಲ್ಲಿ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳು ಪ್ರತಿಭಟಿಸಿದುದರಿಂದ ಅದನ್ನು ಬದಲಾಯಿಸಿತು. ಇತ್ತೀಚೆಗೆ ತಮ್ಮ ಅಧ್ಯಾಪಕ ವರ್ಗದವರ ಉದ್ಯೋಗಭರ್ತಿಯಲ್ಲಿ ಮೀಸಲಾತಿಯನ್ನು ತೆಗೆದುಬಿಡಬೇಕೆಂದು ಐ.ಐ.ಟಿ.ಗಳು ಕೇಳಿಕೊಳ್ಳುತ್ತಿವೆ. ಈ ರೀತಿಯ ಕೋರಿಕೆಗಳಿಂದ ಇನ್ನು ಸಧ್ಯದಲ್ಲೇ ಉನ್ನತ ಮಟ್ಟದ ಸಂಸ್ಥೆಗಳು ಎಂದು ಕರೆಸಿಕೊಳ್ಳುವ ಸಂಸ್ಥೆಗಳಲ್ಲಿ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಪ್ರತಿನಿಧಿತ್ವವೇ ಇಲ್ಲದಾಗಿಬಿಡಬಹುದು. ಈ ರೀತಿಯ ಸಾರ್ವಜನಿಕ ಬಂಡವಾಳಗಳಿಂದ ನಡೆಸಲ್ಪಡುವ ಸಂಸ್ಥೆಗಳೇ ಎಸ್ಸಿ/ಎಸ್ಟಿ ಸಮುದಾಯಗಳನ್ನು ಬೆಂಬಲಿಸದಿದ್ದರೆ, ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಪ್ರಶ್ನೆಯೇ ಬರುವುದಿಲ್ಲ.

ಅಖಿಲ ಭಾರತ ಉನ್ನತ ಶಿಕ್ಷಣದ ಸರ್ವೇ(ಎ.ಐ.ಎಸ್.ಎಚ್.ಇ) 2018-19ರ ಸ್ಥೂಲ ದಾಖಲಾತಿ ಪ್ರಮಾಣವನ್ನು ನೀಡುತ್ತದೆ (ಜಿ.ಇ.ಆರ್.). ಅದರ ಪ್ರಕಾರ ಪ್ರಸಿದ್ಧ ವಿಶ್ವವಿದ್ಯಾಲಯಗಳು ದಾಖಲಾತಿ ಮಾಡಲೇ ಬೇಕಾದ ಸಂಖ್ಯೆಯನ್ನೂ ತುಂಬಿಸುವುದಿಲ್ಲ.(22.5 %-15% ಎಸ್ಸಿ, ಮತ್ತು 7.5% ಎಸ್ಟಿ) ಎಸ್ಸಿ ವಿದ್ಯಾರ್ಥಿಗಳು ಒಟ್ಟು ದಾಖಲಾತಿಯ 14.8% ಪ್ರಮಾಣದಲ್ಲಿದ್ದಾರೆ ಮತ್ತು ಎಸ್ಸ್ಟಿ ವಿದ್ಯಾರ್ಥಿಗಳು 5.5% ಪ್ರಮಾಣದಷ್ಟು ಮಾತ್ರಾ ಇದ್ದಾರೆ. ಪಿಎಚ್ಡಿಗಳಲ್ಲಿ ಕೇವಲ 10% ರಷ್ಟು ದಲಿತ ವಿದ್ಯಾರ್ಥಿಗಳಿದ್ದಾರೆ.
ಉನ್ನತ ಶಿಕ್ಷಣದ ಅಧ್ಯಾಪಕ ವರ್ಗದಲ್ಲಿ ಸಹಾ ಎಸ್ಸಿ/ಎಸ್ಟಿ ಸಮುದಾಯಗಳ ಪ್ರತಿನಿಧಿತ್ವ ಬಹಳ ಕಡಿಮೆಯಿದೆ. 57% ರಷ್ಟು ಅಧ್ಯಾಪಕವರ್ಗದವರು ಸಾಮಾನ್ಯ ವರ್ಗದಿಂದ ಬಂದವರಾಗಿದ್ದಾರೆ. ದಲಿತರ ಮತ್ತು ಆದಿವಾಸಿಗಳ ಪ್ರತಿನಿಧಿತ್ವ 8.8% ಮತ್ತು 2.4% ಇದೆ.

ಶೈಕ್ಷಣಿಕ ಕ್ಷೇತ್ರದಲ್ಲಿ ದಲಿತ ಮತ್ತು ಆದಿವಾಸೀ ಸಮುದಾಯಗಳ ಪ್ರತಿನಿಧಿತ್ವವು ಅತಿ ನಿರಾಶಾದಾಯಕವಾಗಿದೆ. ಆದರೂ ಅದು ಪರಿಪೂರ್ಣ ಚಿತ್ರವನ್ನು ನೀಡುವುದಿಲ್ಲ. ದಲಿತರು ಮತ್ತು ಆದಿವಾಸಿಗಳನ್ನು ಒಂದು ದೊಡ್ಡ ಏಕರೂಪದ ಸಮಗುಣಲಕ್ಷಣಗಳ ಸಮುದಾಯಗಳಂತೆ ಪರಿಗಣಿಸಲಾಗುತ್ತದೆ. ಅದು ಸತ್ಯವಲ್ಲ. ಅವರು ಬಹಳಷ್ಟು ಜಾತಿ-ಉಪಜಾತಿಗಳನ್ನು ಮತ್ತು ಪಂಗಡ ಉಪಪಂಗಡಗಳನ್ನು ಹೊಂದಿದವರಾಗಿದ್ದಾರೆ.ಈ ಜಾತಿ, ಉಪಜಾತಿಗಳ ಮತ್ತು ಪಂಗಡ ಉಪಪಂಗಡಗಳ ಬಗ್ಗೆ ಅವರ ಪ್ರತಿನಿಧಿತ್ವವನ್ನು ಬಿಂಬಿಸುವ ಡೇಟಾಗಳಾಗಳನ್ನು ನೀಡುವ, ಸರ್ವೇಗಳಾಗಲೀ , ದಾಖಲೆಗಳಾಗಲೀ ಅಧ್ಯಯನಗಳಾಗಲೀ ನಡೆದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿನ ದಲಿತ ಮಹಿಳೆಯರ ಪ್ರತಿನಿಧಿತ್ವದ ಬಗೆಗಿನ ಡೇಟಾ ಸಹಾ ಇಲ್ಲ.

ದಲಿತ ಮತ್ತು ಆದಿವಾಸೀ ಮಹಿಳೆಯರನ್ನು ಸಾಮಾಜಿಕ ಶ್ರೇಣಿಯ ತಳಕ್ಕೆ ಒತ್ತರಿಸಿ ತಳ್ಳಲಾಗುತ್ತದೆ. ಮೇಲ್ಜಾತಿ ಎಂದು ಕರೆಸಿಕೊಳ್ಳುವವರ, ಪುರುಷ ಪ್ರಧಾನವಾದ ಸಮಾಜದಲ್ಲಿ ತಮ್ಮ ಸ್ಥಾನಕ್ಕಾಗಿ ಅವರು ಹೋರಾಡಬೇಕಾಗುತ್ತದೆ.

ಈ ಬಗೆಯ ಲಿಂಗ ಮತ್ತು ಜಾತಿಯ ಅಂತರ್ವಿರೋಧ/ಅಂತರ್ವರ್ಗೀಕರಣ ಅವರನ್ನು ಶೋಷಣೆಗೆ ಮತ್ತು ಪ್ರತ್ಯೇಕತೆಗೆ ಎರಡು ಪಟ್ಟು ಗುರಿ ಮಾಡುತ್ತದೆ.


ದಲಿತ್ ವುಮೆನ್ಸ್ ಎಜುಕೇಶನ್ ಇನ್ ಮಾಡರ್ನ್ ಇಂಡಿಯಾ: ಡಬಲ್ ಡಿಸ್ಕ್ರಿಮಿನೇಶನ್ ಎಂಬ ತನ್ನ ಪುಸ್ತಕದಲ್ಲಿ ಡಾ.ಶೈಲಜಾ ಪೈಕ್ ಹೀಗೆ ವಿವರಿಸುತ್ತಾ 20ನೆಯ ಶತಮಾನದುದ್ದಕ್ಕೂ ದಲಿತ ಮಹಿಳೆಯರು ಜಾತಿ ಮತ್ತು ಲಿಂಗ ಸಂಬಂಧಿತವಾದ ದ್ವಿಗುಣ ಹೊರೆಯನ್ನು ಹೊರಬೇಕಾಯಿತು ಎಂದು ಹೇಳುತ್ತಾರೆ. ಅವರು ಮೇಲ್ಜಾತಿಯ ಪ್ರಭುತ್ವದ ಶೈಕ್ಷಣಿಕ ಕ್ಷೇತ್ರವನ್ನು ಹೇಗೆ ಎದುರಿಸಿದರು ಎಂದೂ ಆಕೆ ಹೇಳುತ್ತಾರೆ. ಸ್ತ್ರೀತ್ವ ಹೋರಾಟದ ಆಂತರಿಕ ಮಿತಿಗಳನ್ನೂ ಮತ್ತು ದಲಿತ-ಆದಿವಾಸಿ ಚಳುವಳಿಗಳ ಆಂತರಿಕ ಮಿತಿಗಳನ್ನೂ ಅವರು ಬೆಟ್ಟು ಮಾಡಿ ತೋರಿಸುತ್ತಾರೆ.

ಸ್ತ್ರೀತ್ವ ಚಳುವಳಿಯು ಮಹಿಳೆಯರನ್ನು ವ್ಯತ್ಯಾಸಗಳಿಲ್ಲದ ಏಕರೂಪದ ಗುಂಪಾಗಿ ಪರಿಗಣಿಸುತ್ತದೆ. ಹಾಗೆಯೇ ದಲಿತ ಚಳುವಳಿಯೂ ಸಹ ಮಹಿಳೆಯರನ್ನು ಸಂಪೂರ್ಣವಾಗಿ ಕಡೆಗಣಿಸಿ, ದಲಿತರೆಲ್ಲರನ್ನೂ ಒಂದೆಂದು ಬಗೆಯುತ್ತದೆ. “ಮಹಿಳೆಯರೆಲ್ಲರೂ ದಲಿತರೇ” ಎಂದೇನೋ ಹೇಳುತ್ತದೆ, ಆದರೆ ಅದೇ ಸಮಯದಲ್ಲಿ ದಲಿತ-ಆದಿವಾಸೀ ಮಹಿಳೆಯರು ಅನುಭವಿಸುವ ಜಾತಿ ಮತ್ತು ಲಿಂಗ ಸಂಬಂಧಿತ ಅನ್ಯಾಯಗಳನ್ನು ಗುರುತಿಸುವುದರಲ್ಲಿ ತನಗಿರುವ ಅಸಾಮಥ್ರ್ಯವನ್ನೂ ಎತ್ತಿ ತೋರಿಸುತ್ತದೆ. ಸ್ತ್ರೀವಾದದಲ್ಲಿ ಮತ್ತು ದಲಿತ ಚಳುವಳಿಗಳು, ದಲಿತ-ಆದಿವಾಸೀ ಮಹಿಳೆಯರ ನಿರ್ದಿಷ್ಟ ಅಸ್ಮಿತೆಯನ್ನು ಒಪ್ಪಿಕೊಂಡು ಗುರುತಿಸಲು ಹಾಕುವ ಹಿಂದೇಟು ಶೈಕ್ಷಣಿಕ ಕ್ಷೇತ್ರದಲ್ಲಿ ಅಂಥಹ ಮಹಿಳೆಯರ ಪ್ರತಿನಿಧಿತ್ವದ ಗೈರುಹಾಜರಿಯ ಒಂದು ಕಾರಣವಿರಬಹುದೇ? ಶೈಕ್ಷಣಿಕ ಕ್ಷೇತ್ರವಷ್ಟೇ ಅಲ್ಲ, ಮಾಧ್ಯಮ, ನ್ಯಾಯಾಂಗ,ಆಡಳಿತವರ್ಗ ಮತ್ತು ವಾಣಿಜ್ಯೋದ್ಯಮಗಳಲ್ಲೂ ದಲಿತ-ಆದಿವಾಸೀ ಮಹಿಳೆಯರು ಇಲ್ಲವೇಇಲ್ಲ ಅಥವಾ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಬೇರೆ ಯಾವಯಾವ ಕಾರಣಗಳಿರಬಹುದು?

ಎಐ.ಎಸ್.ಎಚ್.ಇ. ಯು, ಉನ್ನತ ವ್ಯಾಸಂಗದ ಕ್ಷೇತ್ರದಲ್ಲಿ ದಲಿತ-ಆದಿವಾಸೀ ಮಹಿಳೆಯರು ಅತಿ ಕಡಿಮೆ ಮಟ್ಟದಲ್ಲಿ ಪ್ರತಿನಿಧಿತ್ವವನ್ನು ಪಡೆದಿದ್ದಾರೆ ಎಂದೇನೋ ತೋರಿಸಿಕೊಡುತ್ತದೆ. ಆದರೆ ಅದು ಈ ರೀತಿಯ ಅಲ್ಪ ಪ್ರಮಾಣದ ಪ್ರತಿನಿಧಿತ್ವಕ್ಕೆ ಕಾರಣಗಳೇನು ಎಂದು ಹೇಳುವುದಿಲ್ಲ.

ದಲಿತ ಮತ್ತು ಬಹುಜನ ಸಮುದಾಯದಿಂದ ಬರುವ ವಿದ್ಯಾರ್ಥಿಗಳ ಶೈಕ್ಷಣಿಕ ಅನುಭವದ ಭಾಗದಂತೆ ನಡೆಯುವ ವ್ಯವಸ್ಥಾತ್ಮಕ ತಾರತಮ್ಯ ನಡವಳಿಕೆ.

ಡಾ. ಪೈಕ್ ತಮ್ಮ ಪುಸ್ತಕದಲ್ಲಿ ಕೆಲವು ಕಾರಣಗಳನ್ನು ಶೋಧಿಸುತ್ತಾರೆ. ವ್ಯವಸ್ಥಾತ್ಮಕ ತಾರತಮ್ಯ ನಡವಳಿಕೆಗಳು ದಲಿತ ಮತ್ತು ಆದಿವಾಸೀ ಮಹಿಳೆಯರನ್ನು ಅಂಚಿಗೆ ತಳ್ಳಿ ಕಡೆಗಣಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಶಾಲೆಯ ದಿನಗಳಿಂದಲೇ ಅವರು ಬೇಧಭಾವವನ್ನು ಎದುರಿಸಿರುತ್ತಾರೆ. ಅವರು ಹಿಂದಿನ ಬೆಂಚುಗಳಲ್ಲಿ ಕೂರುತ್ತಾರೆ. ಶಾಲೆಯ ಪಾಯಿಖಾನೆಗಳನ್ನು ತೊಳೆಯಲು ಅವರಿಗೆ ಹೇಳಲಾಗುತ್ತದೆ. ಊರಿನ ಸುತ್ತಾ ಅವರು ತಮ್ಮ ತಂದೆತಾಯಿಯರೊಡನೆ ಸೇರಿಕೊಂಡು ಜಾಡಮಾಲಿ ಕೆಲಸ ಮಾಡಲು ಸಹಾ ಹೋಗಬೇಕೆಂದು ನಿರೀಕ್ಷಿಸಲಾಗುತ್ತದೆ. ಶಿಕ್ಷಕರು ಕೂಡಾ ಎಸ್ಸಿ.ಎಸ್ಟಿ ವಿದ್ಯಾರ್ಥಿಗಳ ಬಗ್ಗೆ ನಕಾರಾತ್ಮಕ ಭಾವನೆಯನ್ನು ಹೊಂದಿದವರಾಗಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮೇಲ್ಜಾತಿಯ ಶಿಕ್ಷಕರಿಂದ ಅವರು ಬೈಗುಳ, ಅವಹೇಳನೆಗಳನ್ನೂ ಅನುಭವಿಸಬೇಕಾಗುತ್ತದೆ. ಹೀಗಾಗಿ ಅವರ ಆತ್ಮಸ್ಥೈರ್ಯ ಮತ್ತು ಧೈರ್ಯಕ್ಕೆ ಕುಂದುಂಟಾಗಿ ಅವರು ಶಾಲೆಯನ್ನು ಬಿಟ್ಟುಬಿಡುವಂತೆ ಮಾಡುತ್ತವೆ.

ದಲಿತ ಹೆಣ್ಣುಮಕ್ಕಳು ವಿದ್ಯಾಸಂಸ್ಥೆಗಳ ಒಳಗಡೆ ಸವಾಲುಗಳನ್ನು ಎದುರಿಸುವುದಲ್ಲದೆ ಆ ಸಂಸ್ಥೆಗಳಿಗೆ ಹೋಗುವ ಹಾದಿಯಲ್ಲೂ ಸಹ ಸವಾಲುಗಳನ್ನೆದುರಿಸುತ್ತಾರೆ. ಶಾಲಾಕಾಲೇಜುಗಳಿಗೆ ಹೋಗುವ ದಾರಿಯಲ್ಲಿ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆಗಳು ನಡೆಯುವುದನ್ನು ನಾವೆಲ್ಲಾ ದಿನಪತ್ರಿಕೆಗಳಲ್ಲಿ ಓದಿಯೇ ಇರುತ್ತೇವೆ. ನಾವೆಲ್ಲರೂ ತನ್ನ ಜಾತಿಯ ಕಾರಣಕ್ಕಾಗಿ ತಾನು ಅನುಭವಿಸಿದ ಪಕ್ಷಪಾತದ ಸಲುವಾಗಿ ತನ್ನ ಜೀವವನ್ನು ತಾನೇ ಕಳೆದುಕೊಳ್ಳುವಂಥ ಒತ್ತಡಕ್ಕೊಳಗಾದ ಡಾ. ಪಾಯಲ್ ತಾಡ್ವಿಯ ಬಗ್ಗೆ ಓದಿದ್ದೇವೆ.

ಉನ್ನತ ಶಿಕ್ಷಣಗಳಲ್ಲಿ ದಲಿತ-ಆದಿವಾಸೀ ಮಹಿಳೆಯರು ತಮ್ಮತಮ್ಮ ವಿಶ್ವವಿದ್ಯಾಲಯಗಳ ಸಹಪಾಠಿಗಳು ಮತ್ತು ಅಧ್ಯಾಪಕರುಗಳಿಂದ “ಗ್ಯಾಸ್ಲೈಟಿಂಗಿಗೆ” ಅಂದರೆ, ‘ಸತತವಾಗಿ ಮಾನಸಿಕ ಒತ್ತಡಗಳನ್ನು ತರುವುದರಿಂದ ಅವರನ್ನು ಅವರಿಗೇ ಸ್ವತಃ ತಮಗೆ ತಾವೇ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದೇವೆಯೋ ಎಂಬಂತೆ ನಂಬಿಸಿ ಬಿಡುವುದು…..’ ಗುರಿಯಾಗಿ ಬಲಿಪಶುಗಳಾಗುತ್ತಾರೆ. ಅದರ ಜೊತೆಗೆ ಅವರು ತಮ್ಮದೇ ಸಮುದಾಯದ ಗಂಡಸರಿಂದ ವಿಷಪೂರಿತ ಪುರುಷತ್ವ, ಮತ್ತು ಪುರುಷಪ್ರಧಾನತೆಯನ್ನು ಅನುಭವಿಸಬೇಕಾಗುತ್ತದೆ. ಡಾ.ಪೈಕ್ ಹೇಳುವಂತೆ ದಲಿತ-ಆದಿವಾಸೀ ಮಹಿಳೆಯರು ತಮ್ಮ ಕಾರ್ಯಭಾರದ್ದೆಡೆಗೆ ನಿರ್ಲಕ್ಷ್ಯವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅಲ್ಲದೆ ಅವರ ಸ್ತ್ರೀತ್ವದ ಹೀಯಾಳಿಕೆಯನ್ನು ಮನೆಯ ಒಳಗೂ ಮತ್ತು ಹೊರಗೂ ಅನುಭವಿಸಬೇಕಾಗುತ್ತದೆ.

ದಲಿತ ಮತ್ತು ಆದಿವಾಸೀ ಮಹಿಳೆಯರಿಗೆ ಕುಟುಂಬದಿಂದ ಯಾವುದೇ ರೀತಿಯ ಪ್ರೋತ್ಸಾಹವಾಗಲೀ ಬೆಂಬಲವಾಗಲೀ ಸಿಗುವುದಿಲ್ಲ. ಅವರನ್ನು ಮನೆಯ ಹೊರಗೆ ಪದೇ ಪದೇ ಭಕ್ಷಕ ನೋಟಗಳು, ಲೈಂಗಿಕ ದೌರ್ಜನ್ಯ, ಹೀಯಾಳಿಕೆ ಮತ್ತು ನಿಂದನೆಗಳಿಗೆ ಗುರಿಮಾಡಲಾಗುತ್ತದೆ. ಇವೆಲ್ಲಾ ಸಂಗತಿಗಳು ಅವರನ್ನು ಅಂಚಿಗೆ ದೂಡಿ ನಿಕೃಷ್ಟರಂತೆ ಕಡೆಗಣಿಸಲ್ಪಟ್ಟ ಸಮುದಾಯಗಳಲ್ಲೇ ಅತಿ ಹೆಚ್ಚು ಅಂಚಿಗೆ ದೂಡಿಸಿಕೊಂಡು ಕಡೆಗಣಿಸಲ್ಪಟ್ಟ ಸಮುದಾಯವನ್ನಾಗಿ ಮಾಡುತ್ತದೆ.

ಸರಕಾರವೂ ಸಹ ದಲಿತ-ಆದಿವಾಸೀ ಮಹಿಳೆಯರ ರಕ್ಷಣೆಗೆ ಮುಂದೆ ಬರುವುದಿಲ್ಲ. ವಿದ್ಯರ್ಥಿ ಶುಲ್ಕ ಮನ್ನ ಮಾಡುವುದನ್ನು ಹಿಂತೆಗೆದುಕೊಳ್ಳುವುದು, ವಿದ್ಯಾರ್ಥಿ ವೇತನಗಳು ತಡವಾಗಿ ಲಭ್ಯವಾಗುವುದು, ಆರ್ಥಿಕ ಸಹಾಯವನ್ನು ನೀಡುವ ಕ್ರಮದಲ್ಲಿರುವ ಭ್ರಷ್ಟಾಚಾರ ಇವುಗಳೆಲ್ಲವೂ ಅವರಿಗಾಗಲೇ ಇರುವ ಕಾರ್ಪಣ್ಯಗಳನ್ನು ಹೆಚ್ಚಿಸುತ್ತದೆ. ಶೈಕ್ಷಣಿಕ ಮತ್ತಿತರ ಕ್ಷೇತ್ರಗಳಲ್ಲಿ ದಲಿತ ಮತ್ತು ಆದಿವಾಸೀ ಮಹಿಳೆಯರ ಅಲ್ಪ ಪ್ರಮಾಣದ ಪ್ರತಿನಿಧಿತ್ವಕ್ಕೆ ಕಾರಣಗಳನ್ನು ಹುಡುಕಲೂ ಸಹ ಸರಕಾರವು ತಲೆ ಕೆಡಿಸಿಕೊಳ್ಳುವುದಿಲ್ಲ.ಅಥವಾ ಈ ದೈನ್ಯ ಪರಿಸ್ಥಿತಿಯನ್ನು ಸರಿಪಡಿಸಲು ಯಾವ ಉಪಶಮನ ಕಾರ್ಯಗಳನ್ನೂ ಆರಂಭಿಸುವುದಿಲ್ಲ.

ಕೆಲವೊಮ್ಮೆ ದಲಿತ ಮತ್ತು ಆದಿವಾಸೀ ಸಮುದಾಯಗಳ ಸಮಸ್ಯೆಗಳನ್ನು ಅಭ್ಯಸಿಸಲು ರಚಿಸಿರುವ ಸಮಿತಿಗಳಲ್ಲಿ ಆ ಸಮುದಾಯದ ಸದಸ್ಯರುಗಳೇ ಇರುವುದಿಲ್ಲ. ನಿಯೋಜಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅಸಮರ್ಥತೆ ಕಂಡುಬರುತ್ತದೆ.

ದಲಿತ ಮತ್ತು ಆದಿವಾಸೀ ಮಹಿಳೆಯರ ವಿಮೋಚನೆ ಆಗದಿದ್ದರೆ ಸಮಾನತೆಯ ಗುರಿಯನ್ನು ಸಾಧಿಸಲಾಗುವುದಿಲ್ಲ. ಅವರ ಅಭಿವೃದ್ಧಿಯನ್ನು ಇನ್ನಿತರ ದುರ್ಬಲ ವರ್ಗದರ ಅಭಿವೃದ್ಧಿಯನ್ನು ಅಳೆಯಲು ಉಪಯೋಗಿಸುವ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲ.ಅಥವಾ ನೀವು ಸಾಮಾಜಿಕ ಶ್ರೇಣಿಯ ಗೋಪುರದ ಮೇಲ್ತುದಿಯಲ್ಲಿ ನಿಂತುಕೊಂಡು ಅವರಿಗೆ ಅಭಿವೃದ್ಧಿಯ ಆಶ್ವಾಸನೆಯನ್ನೂ ನೀಡಲಾಗುವುದಿಲ್ಲ. ಕೆಳಮಟ್ಟದ ದೃಷ್ಟಿಯಿಂದ ಸಮಸ್ಯೆಯನ್ನು ಅವಲೋಕಿಸುವ ವಿಧಾನವನ್ನು ಅನುಸರಿಸಬೇಕಾಗುತ್ತದೆ.

ಮೀಸಲಾತಿಯನ್ನು ಸರಿಯಾಗಿ ಕಾರ್ಯರೂಪಕ್ಕೆ ತರಬೇಕು ಎಂದೂ, ವಿದ್ಯಾರ್ಥಿವೇತನಗಳೂ ಮತ್ತು ಸಂಶೋಧನಾ ವೇತನಗಳೂ ಸಮಯಕ್ಕೆ ಸರಿಯಾಗಿ ವಿತರಣೆಯಾಗಬೇಕು ಎಂದೂ ನಾವು ನಿಗಾ ವಹಿಸಬೇಕಾಗುತ್ತದೆ. ಎಸ್ಸಿ/ಎಸ್ಟಿ ಮಹಿಳೆಯರಿಗೆ ಅವರದೇ ಆದ ಧ್ವನಿ ಬೇಕು. ಅವರಿಗೆ ಸಂಕೇತ ಮಾತ್ರದ ಆಶ್ವಾಸನೆ ಬೇಡ, ಬದಲಿಗೆ ಅಕ್ಶರಶಃ ಮತ್ತು ಕಾರ್ಯತಃ ಸಬಲೀಕರಣ ಬೇಕು. ಜಾತಿಪದ್ಧತಿಯ ನಿರ್ಮೂಲನೆಯಿಂದ ಮಾತ್ರಾ ಸಬಲೀಕರಣ ಬರಲು ಸಾಧ್ಯ. ನಾವು ಜಾತಿ ಪದ್ಧತಿಯ ಮೂಲತವಾದ, ತಾರತಮ್ಯದ ಕ್ರೂರ ವಿಚಾರಗಳನ್ನು ನಿರ್ಮೂಲನ ಮಾಡಬೇಕು.


ಡಾ. ಬಾಬಾ ಸಹೇಬ್ ಅಂಬೇಡ್ಕರ್ ಅವರು, “ಒಂದು ಸಮುದಾಯದ ಅಭಿವೃದ್ಧಿಯನ್ನು ನಾನು ಆ ಸಮುದಾಯದ ಹೆಣ್ಣು ಮಕ್ಕಳು ಸಾಧಿಸಿರುವ ಅಭಿವೃದ್ಧಿಯ ಪ್ರಮಾಣದಿಂದ ಅಳೆಯುತ್ತೇನೆ.” ಎಂದು ಹೇಳಿದ್ದಾರೆ. ಹಾಗಾಗಿ ನಾವು ನಿಜವಾದ ರೀತಿಯಲ್ಲಿ ದಲಿತ ಮತ್ತು ಆದಿವಾಸೀ ಮಹಿಳೆಯರ ಅಭಿವೃದ್ಧಿಯನ್ನು ಖಚಿತ ಪಡಿಸಬೇಕು. ಅವರ ಅಭಿವೃದ್ಧಿಯ ಮಾಪನದಿಂದ ಮಾತ್ರಾ ನಾವು ಸಮಾಜದ ಅಭಿವೃದ್ಧಿಯನ್ನು ಅಳೆಯಬಹುದಾಗಿದೆ.

  • ಪ್ರಿಯಾಂಕಾ ಭಾಲ್‍ಶಂಕರ್

ಕೃಪೆ :  https://www.youthkiawaaz.com/2021/01/overwhelming-and-taxing-navigating-academia-as-a-dalit-woman/


ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .


ಪ್ರತಿಕ್ರಿಯಿಸಿ