ಏಸುವಿನ ನೆರಳಲ್ಲಿ

ಇವು ಈಸ್ಟರ್ ಹಬ್ಬದ ದಿನಗಳು. ಏಸು ಪ್ರಭುವನ್ನು ಶಿಲುಬೆಗೇರಿಸಿದ ದಿನವಾದ ಶುಭ ಶುಕ್ರವಾರವು ನಿನ್ನೆಯಲ್ಲ ಮೊನ್ನೆ ಆಗಿಹೋಗಿದೆ. ನಿನ್ನೆ ಪವಿತ್ರ ಶನಿವಾರದ ದಿನ. ಇಂದು, ಭಾನುವಾರ, ಈಸ್ಟರ್: ಏಸುವಿನ ಪುನರುತ್ಥಾನದ ಕಥೆ ನಮ್ಮನ್ನು ಹರಸುತ್ತಿರುವ ದಿನ. ಕ್ರಿಶ್ಚಿಯನ್ನರಿಗೆ ಮಾತ್ರವಲ್ಲ, ಏಸು ಪ್ರಭುವಿನ ಕಥೆಗೆ ಒಲಿದ ಎಲ್ಲರಲ್ಲಿಯೂ ಮುಕ್ತಿಯ ಭರವಸೆ ಮರುಕಳಿಸುವ ದಿನಗಳಿವು.

ಇಂಥ ಪರ್ವಕಾಲದಲ್ಲಿ, ಇಂಗ್ಲಿಶಿನಲ್ಲಿ ದ ಲಾರ್ಡ್ಸ್ ಪ್ರೇಯರ್ ಎಂದು ಕರೆಯಲಾಗುವ ಶ್ಲೋಕವು ನನ್ನ ಮನಸ್ಸಿನಲ್ಲಿ ಮತ್ತೆಮತ್ತೆ ಆಡತೊಡಗಿತು. ಏಸುವು ಬೆಟ್ಟದಮೇಲೆ ನೀಡಿದ ಸುಪ್ರಸಿದ್ಧ ಧರ್ಮಬೋಧೆಯ ಒಂದು ಚಿಕ್ಕ ಭಾಗ ಈ ಶ್ಲೋಕ; ಲೋಕದ ಎಲ್ಲ ಕಡೆಯ ಕ್ರಿಶ್ಚಿಯನ್ನರೂ ನಿತ್ಯವೂ ಹೇಳಿಕೊಳ್ಳಬೇಕಾದದ್ದು; ಅವರಲ್ಲಿನ  ಶ್ರದ್ಧಾವಂತರು ತಾವು ಊಟ ಮಾಡುವ ಮೊದಲು, ಊಟದ ತಟ್ಟೆಯ ಮುಂದೆ ಕಣ್ಣುಮುಚ್ಚಿ, ಕೈಮುಗಿದು, ತಲೆಬಾಗಿ ಕೂತು ಏಸುವನ್ನು, ಮತ್ತು ನಮ್ಮೆಲ್ಲರನ್ನು, ಪಡೆದವನಲ್ಲಿ ಕೃತಜ್ಞತೆ ಸಲ್ಲಿಸುತ್ತ ಇಡಬೇಕಾದ ಮೊರೆ.

ಇಲ್ಲಿ, ಮೊದಲಿಗೆ, ಆ ಶ್ಲೋಕದ ಇಂಗ್ಲಿಶ್ ಪಾಠವನ್ನು ಕೊಟ್ಟಿದೆ. ಹದಿನೇಳನೆಯ ಶತಮಾನವು ಶುರುವಾಗುವ ಹೊತ್ತಿಗೆ ಸರಿಯಾಗಿ ಇಂಗ್ಲೆಂಡಿನ ಅರಸನಾದವನು ಮೊದಲನೆಯ ಜೇಮ್ಸ್. ಆತನ ಅಪ್ಪಣೆಯಂತೆ, ವಿದ್ವಾಂಸರು ಹಲವರು ಸೇರಿ, ಹೀಬ್ರೂ, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿದ್ದ ಹಳೆಯ ಪಠ್ಯಗಳನ್ನು ಆಧರಿಸಿ, ಬೈಬಲ್‍ನ ಹೊಸ ಇಂಗ್ಲಿಶ್ ಅನುವಾದವೊಂದನ್ನು ಮಾಡಿಕೊಟ್ಟರು.  ಅವರ ಆ ಅನುವಾದದಲ್ಲಿರುವ ಶ್ಲೋಕದ ಪಾಠ ಇದು. ಕಿಂಗ್ ಜೇಮ್ಸ್ ಆಥರೈಸ್ಡ್ ವರ್ಷನ್ (ಮಹಾರಾಜಾ ಜೇಮ್ಸ್ ಮುದ್ರಾಂಕಿತ ಬೈಬಲ್ ಆವೃತ್ತಿ) ಎಂದು ಹೆಸರಾದ ಆ ಬೈಬಲ್‍ನ ಇಂಗ್ಲಿಶ್ ಬಹಳ ಚೆಲುವಾದದ್ದು, ಈ ಶ್ಲೋಕವೂ ಬಲುಚೆಲುವಾದದ್ದು, ಮತ್ತು ಅತ್ಯಂತ ಜನಪ್ರಿಯವಾದದ್ದು. ಇಂಗ್ಲಿಶ್ ಭಾಷೆಯ ಎತ್ತೆತ್ತರದ ಕೋಡುಗಲ್ಲುಗಳಲ್ಲಿ ಬೈಬಲ್‍ನ ಈ ಅವತರಣಿಕೆಯೂ ಒಂದು.  ಇದಿಷ್ಟು, ಇಲ್ಲಿ ಕೊಟ್ಟಿರುವ ಶ್ಲೋಕದ ಇಂಗ್ಲಿಶ್ ಪಾಠದ ಮಾತು.

ಬಳಿಕ, ಶ್ಲೋಕದ ಆ ಇಂಗ್ಲಿಶ್ ಪಾಠದ ಕೆಳಗೆ, ಅದರ ಕನ್ನಡ ಭಾವರೂಪಾಂತರವನ್ನು ಕೊಟ್ಟಿದೆ. ಈಗಷ್ಟೆ, ಹೊಸದಾಗಿ, ಮಾಡಿದ ರೂಪಾಂತರವಿದು.

ಆಬಳಿಕ, ಆ ಶ್ಲೋಕದ ಮೈಗಟ್ಟಿನ ನೆರಳಿನಲ್ಲಿಯೆ ಹೊಮ್ಮಿದ ಎರಡು ಪದ್ಯಗಳನ್ನು ಕೊಟ್ಟಿದೆ. ಶ್ಲೋಕಗಳೆನ್ನಿ, ಶಾಪಗಳೆನ್ನಿ, ವಿಲಾಪಗಳೆನ್ನಿ, ಹಳವಂಡದ ನರಳು ಎನ್ನಿ, ಕವಿತೆಗಳೆನ್ನಿ, ಪದ್ಯಗಳೆನ್ನಿ – ಅವುಗಳನ್ನು ಹೇಗೆ ಬೇಕೋ ಹಾಗೆ ಕರೆಯಿರಿ.

ಅಂಥವನ್ನು ಹೊಮ್ಮಿಸಿದ ನಮ್ಮ ದುರ್ಗತಿಗೆ ಮರುಗುತ್ತ,

ರಘುನಂದನ, 4 ಏಪ್ರಿಲ್ 2021, ಈಸ್ಟರ್ ದಿನ

 The Lord’s Prayer

In the name of the Father, and of the Son, and of the Holy Ghost.

Our Father which art in heaven,
Hallowed be thy name.
Thy kingdom come.
Thy will be done in earth,
as it is in heaven.
Give us this day our daily bread.
And forgive us our debts,
as we forgive our debtors.
And lead us not into temptation,
but deliver us from evil:
For thine is the kingdom,
and the power, and the glory,
forever. Amen.

The New Testament, St. Matthew
Chapter 28, Verse 19, and Chapter 6, Verses 9-13


 

ಪ್ರಭುವಿಗೆ ನಮನ

ಪಡೆದವನು, ಅವನ ಮಗನು, ಮತ್ತು ದಿವ್ಯಾತ್ಮನು,
ಇವರು ಒಂದೇ ಎಂಬುದನ್ನು ನೆನೆದು, ನೆನೆದು.

ನಾಕಲೋಕದಲ್ಲಿರುವ ಎಲೆ ನಮ್ಮ ತಂದೆಯೇ,
ನಿನ್ನ ಹೆಸರು ಬೆಳಗಲಿ. ನಿನ್ನ ರಾಜ್ಯವು ಬರಲಿ.
ನಿನ್ನ ಇಂಗಿತ ನಾಕದಲ್ಲಿ ನಡೆದಂತೆಯೆ ಈ ಭೂ
ಲೋಕದಲ್ಲಿಯೂ ನಡೆಯಲಿ. ನಮ್ಮ ದಿನದಿನದ
ಅನ್ನವನ್ನು ನಮಗಿಂದು ನೀಡು. ನಮ್ಮನ್ನು ನೋ
ಯಿಸುವವರ ನಾವು ಮನ್ನಿಸುವಂತೆ, ಹೆರರ ನೋ
ಯಿಸಿದ ನಮ್ಮನ್ನು ಮನ್ನಿಸು. ಆಸೆ, ದುರಾಸೆಯತ್ತ
ಲೊಯ್ಯಬೇಡ, ನಮ್ಮನ್ನು ಕಾಪಾಡು, ಕೇಡಿನಿಂದ
ಉಳಿಸು. ದಿಟವಾಗಿ, ರಾಜ್ಯ ನಿನ್ನದು, ಎಲ್ಲ ಶಕ್ತಿ,
ಮಹೋಜ್ವಲತೆ ನಿನ್ನದು. ಶಾಂತಿಃ. ಆಮೀನ್.

ಹೊಸ ಒಡಂಬಡಿಕೆ, ಸಂತ ಮ್ಯಾಥ್ಯೂ
ಅಧ್ಯಾಯ 28, ಶ್ಲೋಕ 19, ಮತ್ತು ಅಧ್ಯಾಯ 6, ಶ್ಲೋಕ 9-13


India’s Nightmare
a curse, and keening
in the shadow of the Lord’s Prayer

In the name of Bharat-India,
And the hapless Gau.

Our ruler who art in Dilli, curséd be thy name.
Thy rule be gone. Thy will not be done here,
Or there, or anywhere. Steal thou not our daily anna!
Justice, we demand, and for all and everything.
Push us not into darkness more, any more.
Cease thou and desist. For thine
Is not our life, our soul, our India – nor will ever b…

b…ayyo…ayyo…ayyo…It is… it is…
It is…it is it is it is it isbecoming so…

ayyo…


ಇಂಡಿಯಾದ ಹಳವಂಡ
ಶಾಪ, ವಿಲಾಪ
ಏಸು ಕ್ರಿಸ್ತನು ಹೇಳಿಕೊಟ್ಟ, ಪ್ರಭುವಿಗೆ ನಮನ – ದ ಲಾರ್ಡ್ಸ್ ಪ್ರೇಯರ್ – ಎಂಬ, ಶ್ಲೋಕದ ನೆರಳಲ್ಲಿ

ಇಂಡಿಯಾ ಎಂಬ ಭಾರತದ ಹೆಸರಲ್ಲಿ
ಮತ್ತು ಬಡಪಾಯಿ ಗೋವಿನ ಹೆಸರಲ್ಲಿ

ಆ ದೆಹಲಿಯಲ್ಲಿ ಇದ್ದು ನಮ್ಮನಾಳುವನೇ,
ಶಾಪ ತಟ್ಟಲಿ ನಿನ್ನಾಳ್ವಿಕೆಗೆ, ಅದು ಅಳಿಯಲಿ.
ಅಲ್ಲಿ ಇಲ್ಲಿ ಎಲ್ಲೂ ನಡೆಯದಿರಲಿ ನಿನ್ನ ಎಣಿಕೆ.
ಕಸಿಯಬೇಡ ಎಲವೋ ಬಾಯೊಳಗಿನ ತುತ್ತ!
ಬೇಕು ನಮಗೆ ನ್ಯಾಯ! ಸಿಗಲಿ ಅದು ಎಲ್ಲರಿಗೆ
ಎಂದು ನಮ್ಮ‌ ಹಕ್ಕೊತ್ತಾಯ. ದೂಡಬೇಡ
ನಮ್ಮನ್ನು ಇನ್ನೂ ಗವ್ಗತ್ತಲತ್ತ! ಬಿಡು, ಕೇಡಿಯೆ,
ಬಿಡು! ಆಗದು ಆಗದೆಂದಿಗೂ ನಮ್ಮ ಆತ್ಮ,
ಬದುಕು ನಿನ್ನದು, ನಮ್ಮಿಂಡಿಯಾ – ಯಾವತ್…

ತ್ತಯ್ಯೊ… ಅಯ್ಯೊ…ಅಯ್ಯೊ…ಆಗು…
ತ್ತಾಗು…ತ್ತಾಗುತ್ತಾಗುತ್ತಾಗುತ್ತಿದೆಯಲ್ಲ …

ಅಯ್ಯೊ…

********

Picture : Pablo Picasso, 1902-03, La Soupe (The Soup), oil on canvas, 38.5 x 46.0 cm, Art Gallery of Ontario, Toronto, Canada. This painting by Pablo Picasso is in the public domain in the United States because it was first published before 1923: Maurice Raynal, Picasso, 2., verm. Aufl. Aus dem französischen Manuskript übers. von Ludwig Gorm. Published 1921 by Delphin-Verlag in München. Written in German. This work is reproduced in section Gemälde, page 8


2 comments to “ಏಸುವಿನ ನೆರಳಲ್ಲಿ”
  1. The Lord’s prayer ಅನುವಾದವು ಬಹಳ ಸೊಗಸಾಗಿದೆ.
    ಅದರ ನೆರಳಿನಲ್ಲಿ ಹೊಮ್ಮಿದ ಕನ್ನಡ ಕವನ “ಇಂಡಿಯಾದ ಹಳವಂಡ” ಸರಣಿ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

    ರಘುನಂದನರು ಈ ಕವನ ವಾಚಿಸಿದ್ದಾರೆ. ಅದು ಸೊಗಸಾಗಿದೆ

ಪ್ರತಿಕ್ರಿಯಿಸಿ