ಬಿರು ಬೇಸಿಗೆಯ ದಿನಗಳಲ್ಲಿ ಎರಡು ಮಳೆಯ ಕವಿತೆಗಳು.

ಇಬ್ಬರು ಆಫ್ರಿಕನ್ ಕವಿಗಳು ಮಳೆಯನ್ನು ಕುರಿತು ರಚಿಸಿರುವ ಎರಡು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಜಯ ಶ್ರೀನಿವಾಸ ರಾವ್ ಅವರು. ಒಂದು ನೈಜಿರಿಯನ್ ಕವಿ ಜೆ.ಪಿ ಕ್ಲಾರ್ಕ್ ಅವರ ರಾತ್ರಿಯ ಮಳೆ. ಇನ್ನೊಂದು ಮಲಾವಿ ಕವಿ ಫ್ರಾಂಕ್ ಚಿಪುಸಲಾ ಅವರ ಬಿರುಗಾಳಿ ಮಳೆ.


ಬಿರುಗಾಳಿ ಮಳೆ

 

ಈ ಮಳೆ
ಗಾಳಿಯ ಅಂಗಿಯ ಒಗೆದು,
ಬೆಟ್ಟದ ಮೂಗಿನ ಧೂಳನ್ನು ಒರೆಸಿ,
ಅದರ ಶಿಖರದ ನೆತ್ತರ ನೆಕ್ಕಿ,
ಟಾರು ರಸ್ತೆಯ ಉದ್ದಗಲಕ್ಕೂ ಚೆಲ್ಲಿದ ಮೀನೆಣ್ಣೆಯ ತೊಳೆಯಿತು.

ಇಲ್ಲಿ, ನಮ್ಮನ್ನು ಹಿಂದೆ ಬಿಟ್ಟು ಹೋದ ರಸ್ತೆ,
ನಿಂತು, ನಮಗಾಗಿ ಕಾದು, ಕೇಳಿತು,
ನಾವು ಎಲ್ಲಿ ಇದ್ದೆವಾಗ
ಅವರು ಈ ನೆಲವ ಸುಲಿವಾಗ.

ಆಮೇಲೆ ಆ ರಸ್ತೆ, ಮಳೆಯನ್ನು ಲೆಕ್ಕಿಸದೇ,
ಸರ ಸರ ಸರಿದು ಹೊಯಿತು ಬೆಟ್ಟಗಳ ನಡುವೆ
ಬಿಟ್ಟು ನಮ್ಮನ್ನು ಅಚ್ಚರಿಯಲಿ, ಸೊಜಿಗವಾಯಿತು
ಈ ಸಪೂರ ಟಾರು ರಸ್ತೆ ನಮ್ಮನ್ನೆಲ್ಲಿಗೆ ಕೊಂಡೊಯ್ಯುತ್ತದೆಂದು.

ನಂತರ ಯೋಚಿಸಿದೆವು, ಎಲ್ಲಿತ್ತು ಈ ಮುಂಚೆ ಈ ಮಳೆ,
ನಮ್ಮ ಅಂಗೈಗಳಲ್ಲಿ ಕನಸುಗಳ ಹನಿಗಳ
ನಮ್ಮ ಹೃದಯಗಳ ಮಣ್ಣಿನಲಿ ಬಿತ್ತಲು ಬಿಟ್ಟು ಹೋದ ಈ ಮಳೆ.

ಆಕಾಶದ ಮುಂಜೂರಿನಡಿಯಲ್ಲಿ ನಾವು ತೆರೆದ
ಮನಗಳ ಇಟ್ಟು, ತುಂಬಿಸಿದೆವು ಅವುಗಳಲ್ಲಿ
ಸ್ವರ್ಗದಿಂದ ಸುರಿದ ನೈರ್ಮಲ್ಯದಿಂದ.

ಇಂಗ್ಲಿಷ್ ಮೂಲ: The Rain Storm
ಕವಿ: ಫ಼್ರ್ಯಾಂಕ್ ಮ್ಕಾಲವಿಲೆ ಚಿಪಾಸುಲಾ Frank Mkalawile Chipasula, Malawi
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್


ರಾತ್ರಿಯ ಮಳೆ

 

ರಾತ್ರಿಯ ಯಾವ ಹೊತ್ತು ಇದು ನಾನರಿಯೆ
ಸಮುದ್ರದಾಳದಿಂದ ಯಾವುದೊ ಮೀನನ್ನು
ಮತ್ತುಣ್ಣಿಸಿ ಮೇಲೆ ಬರಿಸಿದಂತೆ,
ನಾನು ನಿದ್ದೆಯ ಹೊಳೆಯಿಂದ
ಹೊಟ್ಟೆ ಮೇಲಾಗಿ ತೇಲಿ ಬಂದಂತೆ ಮಾತ್ರ ಅನಿಸಿತು,
ಕೋಳಿಗಳಾವೂ ಕೂಗಲಿಲ್ಲ.

ಜೋರಾಗಿ ತಾಳ ಬಡಿತಾ ಇದೆ ಇಲ್ಲಿ,
ಬೇರೆ ಎಲ್ಲಾ ಕಡೆಯೂ ಹೀಗೆಯೇ ಅಂತ ಅನಿಸುತ್ತೆ,
ಒಂದೇ ಸಮ ಹಠ ಹಿಡಿದು ಜೋರಾಗಿ
ನಮ್ಮ ಹುಲ್ಲು ಮಾಡಿನ ಮೇಲೆ, ಶೆಡ್ಡಿನ ಮೇಲೆ,
ಮಿಂಚಿನಿಂದ ಸೀಳಿಹೋದ ಹುಲ್ಲು ಕಟ್ಟೆಗಳೋಳಗಿಂದ ತೂರಿ
ಮಬ್ಬಾಗಿ ಕಾಣಿಸುವ ಸೂರಿನ ದೂಲಗಳಿಂದ
ದೊಡ್ಡ ದೊಡ್ಡ ನೀರ ಹನಿಗಳು ಉದುರುತ್ತಿವೆ,
ಬೀಳುತ್ತಿವೆ ಕಿತ್ತಳೆ ಯಾ ಮಾವಿನ
ಹಣ್ಣುಗಳ ತರ ಗಾಳಿಯಲ್ಲಿ ಸುರಿಯುತ್ತಿವೆ,
ಅಥವಾ ಹೀಗೆ ಹೇಳಬೇಕೋ
ದಾರದಲ್ಲಿ ಪೋಣಿಸಿದ ನಾ ಹೇಳಲೆನಿಸುವ ಜಪದ
ಮಣಿಗಳು ಒಡೆದು
ಮರದ ಯಾ ಮಣ್ಣಿನ ಪಾತ್ರೆಗಳಲ್ಲಿ ಬೀಳುತ್ತಿರುವ ಹಾಗೆ,
ಅವುಗಳನ್ನು ಅಮ್ಮ ಈಗ ತರಾತುರಿಯಲ್ಲಿ
ನಮ್ಮ ಸಣ್ಣ ಕೋಣೆಯಲ್ಲಿ ನೆಲದಮೇಲೆ ಹರಡುತ್ತಾಳೆ.
ತುಂಬಾ ಕತ್ತಲಾಗಿದ್ದರೂ ಅವಳ ಪರಿಚಿತ
ಹೆಜ್ಜೆಗಳ ನಾ ಬಲ್ಲೆ,
ಡಬ್ಬಗಳನ್ನು, ಚೀಲಗಳನ್ನು, ಜಾಡಿಗಳನ್ನು,
ಇರುವೆಗಳು ಮರದಿಂದ ಹೊರಗೆ ಸಾಲಾಗಿ ಬಂದು
ಚದುರಿ ಇಡೀ ನೆಲವನ್ನು ಆಕ್ರಮಿಸಿಕೊಂಡ ಹಾಗೆ
ಹರಿಯುತ್ತಿರುವ ನೀರಿನ ದಾರಿಯಿಂದ ಸರಿಸುತ್ತಿದ್ದಳು.

ಹೆದರಬೇಡಿ, ಸುಮ್ಮನೆ ತಿರುಗಿ, ಸೋದರರೇ,
ನೀವು ಮಲಗಿರುವ ಹರಿದ ಚಾಪೆಗಳ ಮಗ್ಗುಲಿಗೆ
ಇತರರು ಮಲಗಿಕೊಂಡಿರುವ ಕಡೆಗೆ ತಿರುಗಿ.
ನಾವು ಈ ರಾತ್ರಿ ಕುಡಿದ್ದಿದ್ದೇವೆ
ಹಾರಲಾಗದ ಗೂಬೆ ಬಾವಲಿಗಳ ತೊಯ್ದ
ರೆಕ್ಕೆಗಳಿಗಿಂತಲೂ ಗಾಢವಾದ ಮಾಟವ,
ನಿಂತಿವೆ ಅವು ಇರೊಕೋ ಮರದ ಮೇಲೆ ಚಂಡಿಯಾಗಿ,
ಹೃದಯಗಳ ತೊರೆದು, ಆದ್ದರಿಂದ
ಕದಲಲಾರವು ಅವು, ಇಲ್ಲ,
ಬೆಳಗಾದರೂ ಕೂಡ, ಏಕೆಂದರೆ
ಓಡೋಡಿ ಅಡಗಿಕೊಳ್ಳಬೇಕಾಗುತ್ತದೆ.
ಆದ್ದರಿಂದ, ನಾವು ಆಚೆಗೆ ಹೋರಳಿ
ನಮ್ಮ ಭೂಮಿಯ ಮೇಲೆ
ಬಡಿಯುತ್ತಿರುವ ತಾಳಕ್ಕೆ ಓಲಾಡುವ,
ಅದರ ಅಗಲವಾದ ಹಿತವಾದ
ಸಮುದ್ರದ ಜತೆ ಬೆಸೆದ
ಕೈಯ ಕೆಳಗೆ
ನಾವು ಮುಗ್ಧ ಮುಕ್ತರ ನಿದ್ದೆ ಮಾಡೋಣ.

ಇಂಗ್ಲಿಷ್ ಮೂಲ: Night Rain
ಕವಿ: ಜೆ. ಪಿ. ಕ್ಲಾಕ್, ನೈಜೀರಿಯಾದ ಕವಿ
(J. P. Clark, Nigerian Poet — John Pepper Clark-Bekederemo)
ಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್

 

ಅನುವಾದಕರ ಕುರಿತು:

ಹೈದರಾಬಾದಿನಲ್ಲಿ ಇಂಗ್ಲೀಶ್ ಪ್ರಾಧ್ಯಾಪಕರಗಾರುವ ಜಯಶ್ರೀನಿವಾಸ ರಾವ್ ಅವರು ಅನುವಾದದಲ್ಲಿ ಆಸಕ್ತಿ ಹೊಂದಿದ್ದಾರೆ. ಮುಖ್ಯವಾಗಿ ಕೆ.ವಿ ತಿರುಮಲೇಶರ ಕವಿತೆಗಳನ್ನ ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ಪ್ರತಿಕ್ರಿಯಿಸಿ