ಪುಣೇಕರರ ಅವಧೇಶ್ವರಿ- ಒಂದು ಹೊರಳು ನೋಟ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ‘ಗಂಗವ್ವ ಗಂಗಾಮಾಯಿ’ ಯಂತಹ  ಅಪರೂಪದ ಕಾದಂಬರಿಯ ಮೂಲಕ ತಮ್ಮ ಬರವಣಿಗೆಯ ಛಾಪು ಮೂಡಿಸಿ ಪರಿಚಿತರಾದವರು ಕನ್ನಡದ ಹಿರಿಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, ಅನುವಾದಕ ಶ್ರೀ ಶಂಕರ ಮೊಕಾಶಿ ಪುಣೇಕರ್ ಅವರು.
ಮನೋಹರ ಗ್ರಂಥಮಾಲೆಯ ಮುಖೇನ ೧೯೫೮ರಲ್ಲಿ ಮೊದಲು ಮುದ್ರಣ ಕಂಡ ‘ಗಂಗವ್ವ ಗಂಗಾಮಾಯಿ’ ಕಾದಂಬರಿ ಮುಂದೆ ನ್ಯಾಷನಲ್ ಬುಕ್ ಟ್ರಸ್ಟ್ ಮುಖೇನ ಭಾರತದ ಹಲವು ಪ್ರಮುಖ ಭಾಷೆಗಳಿಗೆ ಅನುವಾದಗೊಂಡಿತು. ಅಲ್ಲದೇ ಕನ್ನಡ ಭಾಷೆಯಲ್ಲಿ ಚಲನಚಿತ್ರವಾಗಿ ರೂಪುಗೊಂಡು ಅತ್ಯುತ್ತಮ ಕತೆ, ನಿರ್ದೇಶನ, ಉತ್ತಮ ನಟ, ಕಲಾ ನಿರ್ದೇಶನ ಮತ್ತು ನಿರ್ಮಾಣಕ್ಕಾಗಿ ಪ್ರಶಸ್ತಿಗಳನ್ನು ಸಹ ತನ್ನದಾಗಿಸಿಕೊಂಡಿತು.

೧೯೨೮ ರಲ್ಲಿ ಮೇ.೮.ರಂದು ಧಾರವಾಡದಲ್ಲಿ ಜನಿಸಿದ ಪುಣೇಕರರು ಅಲ್ಲಿಯೇ ತಮ್ಮ ಶಿಕ್ಷಣವನ್ನು ಪೂರೈಸಿ, ಮುಂದೆ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಎಂ.ಎ. ಮುಗಿಸಿ ಅಲ್ಲಿಯೇ ‘ದಿ ಲೆಟರ್ ಫೇಸ್ ಇನ್ ದ ಡೆವಲಪ್ಮೆಂಟ್ ಆಫ್ ಡಬ್ಲ್ಯೂ.ಬಿ.ಯೇಟ್ಸ್ ‘ ಎಂಬ ಪ್ರೌಢಪ್ರಬಂಧಕ್ಕೆ ಪಿ.ಎಚ್.ಡಿ. ಪದವಿಯನ್ನು ಪಡೆದರು. ಕನ್ನಡ ಇಂಗ್ಲಿಶ್ ಹಾಗೂ ಸಂಸ್ಕೃತ ಭಾಷೆಯಲ್ಲಿ ಬಿಗಿ ಹಿಡಿತ ಹಾಗೂ ಪಾಂಡಿತ್ಯವಿದ್ದ ಪುಣೇಕರರು ಕೆಲಕಾಲ ಟಾಟಾ ಕಂಪೆನಿಯಲ್ಲಿ ಟೆಕ್ನಿಕಲ್ ಡೈರೆಕ್ಟರ್ ಆಗಿ ಮುಂದೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೮೮ ರಲ್ಲಿ ನಿವೃತ್ತರಾದರು. ತಮ್ಮ ವೃತ್ತಿಜೀವನದ ಕೊನೆಯ ವರ್ಷದ ಸುಮಾರಿನಲ್ಲಿ ಅಂದರೆ ೧೯೮೭ರಲ್ಲಿ ರಚಿಸಿದ ‘ಅವಧೇಶ್ವರಿ’ ಕಾದಂಬರಿಗೆ ೧೯೮೮ ರ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಹಾಗೂ ಸಂಸ್ಕೃತ ಭಾಷೆಯ ಕಾಳಿದಾಸನ ಋತುಸಂಹಾರವನ್ನು ‘ದಿ ಸೈಕಲ್ ಆಫ್ ಸೀಸನ್ಸ್’ ಎಂಬ  ಶೀರ್ಷಿಕೆಯಡಿಯಲ್ಲಿ ಇಂಗ್ಲಿಶ್ ಭಾಷೆಗೆ ಅನುವಾದಿಸಿದ ಕೃತಿಗಳನ್ನೂ ಒಳಗೊಂಡಂತೆ, ಕನ್ನಡ ಹಾಗೂ ಇಂಗ್ಲಿಶ್ ಭಾಷೆಯಲ್ಲಿ ಸುಮಾರು ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಶಂಕರ ಮೊಕಾಶಿ ಪುಣೇಕರರು ತಮ್ಮ ಕೆಲವು ಬಿಡಿ ಕೃತಿಗಳಿಂದ ಕನ್ನಡ ವಿಮರ್ಶಾಕ್ಷೇತ್ರದಲ್ಲಿ ಚರ್ಚೆಗೆ ಒಳಪಟ್ಟಿದ್ದಾರೆ. ಆದರೆ ಅವರ ಸಾಹಿತ್ಯದ ಒಟ್ಟು ತಾತ್ವಿಕತೆಯನ್ನು ಗುರುತಿಸುವಲ್ಲಿ ಕನ್ನಡ ಸಂಶೋಧನಾ ಕ್ಷೇತ್ರದ ಪ್ರಯತ್ನ ಅಸಮಾಧಾನಕರವಾಗಿದೆ ಎನ್ನಬಹುದು.

ಪುಣೇಕರರ ಜನ್ಮದಿನದ ನೆಪದಲ್ಲಿ ಅವರ ಸಮಗ್ರ ಬರೆಹದ ತಾತ್ವಿಕತೆಯನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಕನ್ನಡದ ನಮ್ಮ ಅಧ್ಯಯನಗಳು ಮೊದಲಾಗಬೇಕು ಎಂಬುದು ಪ್ರಸ್ತುತ ಲೇಖನದ ಉದ್ಧೇಶವಾಗಿದೆ. (ಪುಣೇಕರ ಅವರ ಸಮಗ್ರ ಸಾಹಿತ್ಯವನ್ನು ೨೦೧೨ ರಲ್ಲಿ ಅಭಿನವ ಪ್ರಕಾಶನದವರು ಕಾದಂಬರಿ ತ್ರಿವಳಿ, ಸುಸಂಧಿ, ವಸ್ತು ವಿನ್ಯಾಸ, ಮಹತಿ ಎನ್ನುವ ಶೀರ್ಷಿಕೆಯ 4 ಸಂಪುಟಗಳಲ್ಲಿ ೨೦೧೨ ಹೊರ ತಂದಿದ್ದಾರೆ).

೧೯೫೮ ರಲ್ಲಿ ಬಿಡುಗಡೆಯಾದ ಅವರ ‘ಗಂಗವ್ವ ಗಂಗಾಮಾಯಿ’ ಕೃತಿಯು ವಿಮರ್ಶೆಗೆ ಒಳಪಟ್ಟಷ್ಟು ಅವರಿಗೆ ೧೯೮೮ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕಾದಂಬರಿ ‘ಅವಧೇಶ್ವರಿ’ ಚರ್ಚೆಗೆ ಅಷ್ಟಾಗಿ ಒಳಪಡಲಿಲ್ಲ ಎಂದೇ ಹೇಳಬಹುದು. ‘ಅವಧೇಶ್ವರಿ’ ಅವರೇ ಹೇಳುವಂತೆ ವೇದಕಾಲದ ರಾಜಕೀಯ ವಸ್ತುವನ್ನಾಧರಿಸಿದ್ದು. ಅಯೋಧ್ಯೆಯ ಶ್ರೀ ರಾಮಚಂದ್ರನ ೪೨ನೆಯ ತಲೆಮಾರಿನ ಪೂರ್ವಜರಲ್ಲಿ ಪ್ರಮುಖರ ಕುರಿತಾದ ಕಥೆ ಇದು. ಶ್ರೀರಾಮನು ಬರುವ ಮೊದಲು ಅಂಥ ಕುಗ್ರಾಮವೇನೂ ಆಗಿರದ, ಆದರೆ ದೊಡ್ಡ ಸಾಮ್ರಾಜ್ಯವೂ ಆಗಿಲ್ಲದ ಸುಮಾರು 30 – 40 ಗ್ರಾಮಗಳಿಗೆ ಅಧಿಪತಿಯಾದ ಸುಖ ಲೋಲುಪ ರಾಜ ಪುರುಕುತ್ಸ, ಆತನ ಸೋದರಿಯೂ ಪತ್ನಿಯೂ ಆದ ನರ್ಮದಾ ಪುರುಕುತ್ಸಾನಿ, ಪುರುಕುತ್ಸಾನಿಯ ಮಗ ತ್ರಸದಸ್ಯು, ಈತನ ಗೆಳೆಯ ವೃಶಜಾನ, ಮ್ಲೇಚ್ಛನಾದ ಶಂಬರಾಸುರ…. ಹೀಗೆ ಮೊದಲಾದವರ ಕುರಿತು ಹರಪ್ಪ – ಮೆಹೆಂಜೊದಾರೊಗಳ ಸೀಲು(ಫಲಕ)ಗಳಲ್ಲಿ ದೊರೆತ ಮಾಹಿತಿಯನ್ನಾಧರಿಸಿ ರಚಿಸಿದ Historical realism (ಚಾರಿತ್ರಿಕ ವಾಸ್ತವವಾದ) ಶೈಲಿಯ ಕಾದಂಬರಿ. ಅಂದರೆ ”ಪರಿಚಿತ ಭಾಷಾ ಪರಿಸರದಲ್ಲಿ ಅಪರಿಚಿತ ಪ್ರಾಚೀನ ಘಟನೆಗಳನ್ನು ಹೇಳಿದರೆ ವಿಸಂಗತಿ ಎಂದು ತಿಳಿಯುವ ಕಾರಣವಿಲ್ಲದೆ, ನಮ್ಮಂತೆ ಅವರು ಎಂಬ ಭಾವವೇ ಚಾರಿತ್ರಿಕ ವಾಸ್ತವವಾದದ ತಿರುಳು” (ಕಾದಂಬರಿಯ ಮುನ್ನುಡಿ – ಪುಟ ೯) ಎಂದು ಪುಣೇಕರರೇ ಕಾದಂಬರಿಯ ಓದಿಗೆ ಬೇಕಾದ ಮನಃಸ್ಥಿತಿಯನ್ನು ಸಿದ್ಧಪಡಿಸುತ್ತಾರೆ.

ಅಲ್ಲದೇ ಮುನ್ನುಡಿಯ ಭಾಗದಲ್ಲೇ ಇದು ”ವೇದಕಾಲದ ವಸ್ತುವಾದದ್ದರಿಂದ ನಿರೂಪಣೆಯನ್ನು ವೈದಿಕ ಭಾಷೆಯಲ್ಲಿ ಮಾಡದೆ, ನಮ್ಮದೇ ಭಾಷಾಶೈಲಿಯಲ್ಲೇ ಘಟನೆಗಳನ್ನು ಹೇಳಿ, ನಡುವಿನ ಕಾರ್ಯಕಾರಣ ಸಂಬಂಧಗಳನ್ನು ಓದುಗರಿಗೇ ಬಿಟ್ಟುಕೊಟ್ಟಿದ್ದೇನೆ. ಮೂಲ ಪುರಾಣಗಳು ಪ್ರಾಕೃತದಲ್ಲಿ ಇರಬಹುದು. ಕ್ರಿ.ಪೂ.3500ರಷ್ಟು ಹಿಂದೆ, ಇಂದಿನ ಸಂಸ್ಕೃತ ಭಾಷೆ ಉದಯವಾಗಿ ಅಖಿಲ ಭಾರತೀಯ ಪ್ರಚಾರಕ್ಕಾಗಿ ಪ್ರಾಕೃತ ಪುರಾಣಗಳ ಸಂಸ್ಕೃತೀಕರಣ ದೊಡ್ಡ ಪ್ರಮಾಣದಲ್ಲಿ ಜರುಗಿತು. ಮಧ್ಯ ಪ್ರಾಚ್ಯದ ಹೆಸರುಗಳಿಗೆ ಅವುಗಳನ್ನು ಹೋಲುವ ಸಂಸ್ಕೃತ ಹೆಸರುಗಳನ್ನು ಪುರಾಣಗಳಲ್ಲಿ ಬಳಸಿದ್ದು ಮಿಶ್ರ ಸಂಸ್ಕೃತಿಯ ಭಾರತೀಕರಣದ ಉದ್ದೇಶದಿಂದಲೇ” (ಪುಟ ೮,೯) ಎನ್ನುವ ತಮ್ಮ ನಿಲುವಿಗೆ ಸೂಕ್ತ ಸಾಕ್ಷ್ಯಗಳನ್ನು ಸಹ ಪುಣೇಕರರು ಒದಗಿಸುತ್ತಾರೆ. ಈ ಅಂಶಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡು   ‘ಅವಧೇಶ್ವರಿ’ ಕಾದಂಬರಿಯನ್ನು ಕೆಲವು ವಿಚಾರಗಳ ಹಿನ್ನೆಲೆಯಲ್ಲಿ ಮುಖಾಮುಖಿಯಾಗಲು ಇಲ್ಲಿ ಪ್ರಯತ್ನಿಸಿದ್ದೇನೆ.

ಹರಪ್ಪ – ಮೆಹೆಂಜೊದಾರೊ ಕಾಲದ ಫಲಕಗಳು ವೇದಕಾಲವನ್ನು ಜೀವಂತಗೊಳಿಸುತ್ತವೆ. ಆರಂಭದಲ್ಲಿ ಹೆಸರಿಸಿದ ಪುರುಕುತ್ಸ, ಪುರುಕುತ್ಸಾನಿ, ತ್ರಸದಸ್ಯು, ವೃಶಜಾನ ಮೊದಲಾದ ಪಾತ್ರಗಳ ಕುರಿತು ಋಗ್ವೇದದಲ್ಲಿ‌ ಮಾಹಿತಿಗಳಿವೆ. ವೇದಕಾಲದಲ್ಲಿ ಬದುಕಿದ್ದವರೆಲ್ಲಾ ಋಷಿಗಳಲ್ಲ, ವೇದಗಳಲ್ಲಿ ಬರೆದಿರುವುದೆಲ್ಲಾ ಯಾಜ್ಞಿಕ ಅರ್ಥವನ್ನು ಒಳಗೊಂಡವಲ್ಲ ಎಂಬುದು ಕಾದಂಬರಿಕಾರರ ಅಭಿಮತ. ಮತ್ತಿದು ನಿರಾಧಾರವಾಗಿರದೆ, ವೃಶಜಾನನಂತಹ ಹಸಿನಿಂದಕನಿಂದಲೂ ರಚಿತವಾದ ಕೆಲವು ಸೂಕ್ತಗಳನ್ನು ಉದಾಹರಿಸುವುದರ ಮೂಲಕ ವೇದಗಳಲ್ಲಿ ಬರೆದದ್ದೆಲ್ಲಾ ಮಹತ್ವದ್ದಲ್ಲ‌ ಎಂಬ ಅವರ ತರ್ಕಕ್ಕೆ ಸೂಕ್ತ ಸಾಕ್ಷ್ಯಗಳನ್ನು ಸಹ ಒದಗಿಸುವ ಪ್ರಯತ್ನವನ್ನು ಕಾದಂಬರಿಕಾರರು ಮಾಡಿದ್ದಾರೆ.

ವೇದಗಳ ಕಾಲಘಟ್ಟವನ್ನು ಸಂಪೂರ್ಣವಾಗಿ ದೈವೀ ಭಾವನೆಯಿಂದ, ಆರಾಧನಾ ಭಾವನೆಯಿಂದ ನೋಡುತ್ತಾ, ಇದನ್ನೇ ಭಾರತೀಯ ಸಂಸ್ಕೃತಿ ಎಂದು ಬಿಂಬಿಸುತ್ತಿರುವ ಈ ಹೊತ್ತಿನಲ್ಲಿ, ಹಿಂದೂ ಸಂಸ್ಕೃತಿಗೆ ಪ್ರಮಾಣಗ್ರಂಥಗಳೇ ಅಪೌರುಷೇಯವಾದ ವೇದೋಪನಿಷತ್ತುಗಳು ಎಂದು ನಂಬಿರುವ ಹಲವು ಮಂದಿ ಸಂಸ್ಕೃತಿ ಚಿಂತಕರಿಗೆ ವೇದಗಳನ್ನು, ವೇದಗಳ ಕಾಲವನ್ನು ನೋಡುತ್ತಿರುವ ನಮ್ಮ ಕ್ರಮವೇ ದೋಷಪೂರಿತ ಎನ್ನುವುದನ್ನು ಹಾಗೂ ಪೂರ್ವಗ್ರಹಗಳಿಂದ ಮುಕ್ತವಾದ ಮನಃಸ್ಥಿತಿಯಿಂದ ಆ ಕಾಲಘಟ್ಟವನ್ನು ನೋಡುವ ಕ್ರಮವನ್ನು ಪುಣೇಕರರು ತೋರಿಸಿಕೊಡುತ್ತಾರೆ. ಸೂಕ್ತ ಶ್ಲೋಕಗಳನ್ನು ಉದಾಹರಿಸುವುದರ ಮೂಲಕ ವೇದಗಳಲ್ಲಿ ಉಲ್ಲೇಖವಾದ ದ್ವೇಷಾಸೂಯೆಗಳ ಅರ್ಥ ಸ್ಪುರಿಸುವ ವಾಕ್ಯಗಳು ಕೂಡ ಭಾಷೆ ಹಾಗೂ ಸಂಸ್ಕೃತಿಯ ರಾಜಕಾರಣದಲ್ಲಿ ದೇವವಾಕ್ಯಗಳ ಸ್ಥಾನ ಪಡೆದದ್ದನ್ನು ಅವರು ನೆರವಾಗಿ ತಿರಸ್ಕರಿಸುತ್ತಾರೆ.

”ಭಾರತದ ಸಂಸ್ಕೃತಿ ವಿಶ್ವದ ಇತರ ಪ್ರಾಚೀನ ಸಂಸ್ಕೃತಿಗಳಾದ ಈಜಿಪ್ಟ್ ಅಂತಹ ಪ್ರದೇಶಗಳಿಂದ ಹೇಗೆ ಪ್ರವಹಿತಗೊಂಡು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂಬಂತಹ ವಿಶಿಷ್ಟ ಚಿಂತನೆಗಳನ್ನು ಇರಿಸಿಕೊಂಡ” (ವಿಕಿಪೀಡಿಯಾ) ‘ಅವಧೇಶ್ವರಿ’ಯ ವಿಷಯಕ್ಕೆ ಬರುವುದಾದರೆ, ಇಜಿಪ್ಟಿಯನ್ ರಾಜಮನೆತನಗಳಲ್ಲಿ ಹೊರಗಿನವರು ರಾಜಮನೆತನಕ್ಕೆ ಪ್ರವೇಶವಾಗಬಾರದು ಎಂದು ಒಡಹುಟ್ಟಿದವರನ್ನೇ ಮದುವೆಯಾಗುವ ಪದ್ಧತಿ ಇತ್ತು. ಅಯೋಧ್ಯೆಯ ಸೂರ್ಯವಂಶದ್ದು ಇದೇ ಕಥೆ. ಪುರುಕುತ್ಸ ನರ್ಮದಾಗೆ ಒಡಹುಟ್ಟಿದ ಅಣ್ಣ. ಆತನೇ ಗಂಡನಾದ ಕಾರಣಕ್ಕೆ ಆಕೆ ಪುರುಕುತ್ಸಾನಿ. (ಈ ವಂಶದ ಮುಂದಿನ 42ನೆಯ ತಲೆಮಾರು ಶ್ರೀರಾಮ ಹಾಗೂ ಆತನ ಮಡದಿ ಸೀತೆಯ ವಿಚಾರವಾಗಿಯೂ ಅವರಿಬ್ಬರು ಕೂಡ ಒಡಹುಟ್ಟಿದವರು ಎಂಬ ವಾದಗಳಿವೆ). ಆದರೆ ಪತ್ನಿಯಾಗಿ ಪುರುಕುತ್ಸಾನಿ ಪುರುಕುತ್ಸನಿಂದ ತಿರಸ್ಕೃತಳಾಗುತ್ತಾಳೆ. ಈ ತಿರಸ್ಕಾರಕ್ಕೆ ಕಾರಣ ಆಕೆ ತನ್ನ ಒಡಹುಟ್ಟಿದವಳು ಎನ್ನುವುದಕ್ಕಿಂತ ಹೆಚ್ಚಾಗಿ ಆಕೆಯ ಗಂಡುಬೀರಿತನ ಹಾಗೂ ಒರಟುತನಗಳು. ತನ್ನ ವರ್ಚಸ್ಸಿನಿಂದ ಸಮಸ್ತ ಆಯೋಧ್ಯೆಯ ಸಾಮ್ರಾಜ್ಞಿಯಾಗಿ ಮೆರೆದರೂ ಸಂಸಾರ ಸುಖವೊಂದು ಪುರುಕುತ್ಸಾನಿಯ ಪಾಲಿಗೆ ನಿಲುಕದ ನಕ್ಷತ್ರವಾಗಿ ಉಳಿದು ಬಿಡುತ್ತದೆ. ಮಕ್ಕಳೂ ಆಗದೇ ಸಾಮ್ರಾಜ್ಯದ ಉತ್ತರಾಧಿಕಾರಿಯ ಪ್ರಶ್ನೆ ಎದುರಾದ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ ಮನೆತನದಲ್ಲಿ ಅದುವರೆಗೆ ರೂಢಿಯಲ್ಲಿದ್ದ ವಿಶಿಷ್ಟ ವಿವಾಹಪದ್ಧತಿಯು ಅಂತ್ಯ ಕಂಡು ವರ್ಣಸಂಕರ ಆರಂಭವಾದದ್ದೇ ಕಾದಂಬರಿಯ ವಸ್ತು.

ನರ್ಮದಾ ಪುರುಕುತ್ಸಾನಿ ಈ ಕಾದಂಬರಿಯ ಚಾಲಕ ಶಕ್ತಿ.
ಇವರಿಬ್ಬರನ್ನು ಮದುವೆ ಮಾಡಿದ ಕೊರಗಿನಲ್ಲೇ ತಾಯಿ ಬಿಂದುಮತೀದೇವಿ ಪ್ರಾಣ ಬಿಡುತ್ತಾಳೆ. (ಒಡಹುಟ್ಟಿದವರನ್ನು ಮದುವೆ ಮಾಡುವ ಸಂಪ್ರದಾಯ ರಾಜಮನೆತನದಲ್ಲಿ ಇದ್ದಾಗ್ಯೂ ಬಿಂದುಮತೀದೇವಿಯ ಕೊರಗಿಗೆ ಕಾರಣಗಳೇನು? ಎನ್ನುವುದು ಇಲ್ಲಿ ಎದುರಾಗುವ ಮುಖ್ಯ ಪ್ರಶ್ನೆ). ತಾಯಿಯನ್ನು ಕಳೆದುಕೊಂಡ ಮೇಲೆ ಪತಿ-ಪತ್ನಿಯರ ಸಂಬಂಧಗಳ ಸೂಕ್ಷ್ಮವನ್ನು ಹೇಳುವವರಿಲ್ಲದೆ ಪುರುಕುತ್ಸಾನಿ ಒರಟಾಗಿಯೇ ಬೆಳೆಯುತ್ತಾಳೆ. ದೈಹಿಕವಾಗಿಯೂ ಪುರುಕುತ್ಸನಿಗಿಂತ ಈಕೆಯೇ ಬಲಾಢ್ಯಳು. ಇವರಿಬ್ಬರ ನಿಷೇಕ ಪ್ರಸ್ತದ ದಿನವೂ ಪುರುಕುತ್ಸನೊಂದಿಗೆ ದೈನಂದಿನ ಆಟಗಳನ್ನೇ ಮುಂದುವರಿಸಿ ಅವನ ಬೆನ್ನ ಮೇಲೆ ಬಾಸಾಳ ಮೂಡುವಂತೆ ಹೊಡೆದದ್ದೇ ನೆಪ. ಆಕೆಯೊಂದಿಗಿನ ಒಡನಾಟವನ್ನೇ ಪುರುಕುತ್ಸ ಬಿಟ್ಟುಬಿಡುತ್ತಾನೆ. ಮುಂದೆ ರಾಜನಾದ ಮೇಲೆ ಈತನ ವಿಷಯಲಂಪಟತೆಗೆ ಪುರಜನರು, ಪುರಪ್ರಮುಖರು ರೋಸಿಹೋಗುತ್ತಾರೆ.

ಪತಿಯನ್ನು ತನ್ನವನ್ನನ್ನಾಗಿಸಿಕೊಳ್ಳುವ ಪ್ರಯತ್ನದಲ್ಲಿ ಕೈ ಚೆಲ್ಲಿದ ಪುರುಕುತ್ಸಾನಿ ಒಂದೇ ದಿನದಲ್ಲಿ ತೆಗೆದುಕೊಂಡ ಧೀರೋದಾತ್ತ ನಡೆಯಿಂದ ರಾಜ್ಯ ಸೂತ್ರ ವಹಿಸಿಕೊಂಡು ಸಮಸ್ತ ಅಯೋಧ್ಯೆಯ ಸಾಮ್ರಾಜ್ಞಿಯಾಗುತ್ತಾಳೆ. ಅಲ್ಲಿಂದ ಮುಂದೆ ಸೇನಾಧಿಪತಿ ತಾರ್ಕ್ಷ್ಯ ಹೇಳುವ ಹಾಗೆ ‘ಯಾವಾಗಲೂ ರಾಣಿಯ ಹೆಜ್ಜೆ ಮುಂದೇ’. ರಾಜ್ಯದ ಹಡಗನ್ನು ನಡೆಸುವ ಸಮಗ್ರ ದೃಷ್ಟಿ ಆಕೆಗೆ ಕರಗತವಾಗಿ ಬಿಡುತ್ತದೆ.

ಸಾಮ್ರಾಜ್ಯ ವಿಸ್ತರಣೆಗೆ ಯುದ್ಧವೊಂದೇ ಉಪಾಯವಲ್ಲ ಎನ್ನುವುದನ್ನು ಅರಿತಿದ್ದ ಆಕೆ ಚತುರೋಪಾಯ ರಾಜಕೀಯ ನಡೆಗಳಿಂದ ಅಯೋಧ್ಯೆಯ ಗಡಿಯನ್ನು ವಿಸ್ತರಿಸುವ ರೀತಿ ಅಮೋಘವಾದುದು. ಆದಾಗ್ಯೂ ಭದ್ರಾಯು ರಾಜನಿಗೆ ತನ್ನ ಪತಿ ಸೆರೆಯಾಳಾದ ಸಂದರ್ಭದಲ್ಲಿ, ಆತನಿಂದ ವಿವಾಹದ ಆಮಂತ್ರಣ ಬಂದಾಗ, ಅದಕ್ಕೆ ತನ್ನ ಪತಿಯ ಸಹಮತಿ ಇದ್ದಾಗ್ಯೂ ಆಕೆ ಹೆಣ್ಣಾಗಿ ಮಾತ್ರವಲ್ಲ, ರಾಣಿಯಾಗಿ ಯೋಚಿಸಿ ಆ ಆಮಂತ್ರಣವನ್ನು ನಿರಾಕರಿಸುವ ಆಕೆಯ ನಿರ್ಧಾರ ಅಯೋಧ್ಯೆಯ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದು.

ತನ್ನ ನಂತರ ಸಾಮ್ರಾಜ್ಯವನ್ನು ಮುಂದುವರಿಸಿಕೊಂಡು ಹೋಗುವ ತನ್ನದೇ ಕುಡಿಯ ಅನಿವಾರ್ಯತೆ ಇದೆ ಎಂಬ ಸಂದರ್ಭ ಎದುರಾದಾಗ ಆಕೆ ಪ್ರಯೋಗಿಸುವ ‘ನಿಯೋಗ’ವೆಂಬ ಅಸ್ತ್ರ ಕಾದಂಬರಿಯ ಪ್ರಮುಖ ಘಟ್ಟ. ತನ್ನ ಕುಲಗುರು ದೇವದೇಮ ಮಹರ್ಶಿಗಳ ಮಾರ್ಗದರ್ಶನದ ಮೇರೆಗೆ ನಿಯೋಗ ಯಜ್ಞಕ್ಕೆ ಮುಂದಾಗುತ್ತಾಳೆ. ಕ್ಷತ್ರಿಯನೊಂದಿಗೆ ನಿಯೋಗ ನಡೆದರೆ ಅದು ತನ್ನ ಅಧಿಕಾರ ಹಾಗೂ ಸಾಮ್ರಾಜ್ಯದ ಹಿತಕ್ಕೆ ಉಂಟುಮಾಡಬಹುದಾದ ತೊಂದರೆಯನ್ನು ಮನಗಂಡು, ಬ್ರಾಹ್ಮಣರಲ್ಲೇ ಶ್ರೇಷ್ಠನಾದ, ನೈಷ್ಠಿಕನಾದ ಸಿಂಹಭಟ್ಟನೊಂದಿಗೆ ನಿಯೋಗಯಜ್ಞಕ್ಕೆ ಮುಂದಾಗುತ್ತಾಳೆ. ಪರಿಣಾಮವಾಗಿ ತ್ರಸದಸ್ಯುವಿನ ಜನನ.

ಮುಂದೆ ರಾಜ್ಯಾಡಳಿತಕ್ಕೆ ಸೂಕ್ತ ವಿದ್ಯೆಯನ್ನು ಮಗನಿಗೆ ನೀಡಿ ಪಟ್ಟ ಕಟ್ಟುತ್ತಾಳೆ. ಅನಿರ್ವಾಯ ಕಾರಣಗಳಿಂದ ಸಿಂಹಭಟ್ಟನ ಕಾಮದಾಹದಲ್ಲಿ ಸಿಲುಕಿ ನರಳುತ್ತಾಳೆ. ಒಂದು ಹಂತದಲ್ಲಿ ತನ್ನ ನಿಷ್ಟಾವಂತ ಸೇವಕ, ಸೇನಾಧಿಪತಿ, ತನ್ನ ಮಗನ ಗುರು, ತಾರ್ಕ್ಷ್ಯನ ಬಳಿ – “ಮನುಷ್ಯನಾಗು, ನನ್ನನ್ನೂ ಮನುಷ್ಯಳನ್ನಾಗಿ ಮಾಡು” ಎಂದು ಆತನನ್ನು ದೈಹಿಕವಾಗಿ ಕೂಡುವುದರ ಮೂಲಕ ತನ್ನ ಬದುಕಿನ ಕೊರತೆಯನ್ನು ನೀಗಿಸಿಕೊಳ್ಳುವಲ್ಲಿ ಸಫಲಳಾಗುತ್ತಾಳೆ. ಮಾತ್ರವಲ್ಲ ಆ ಮೂಲಕ ತನ್ನ ಜವಾಬ್ದಾರಿಯಿಂದ ನಿವೃತ್ತಿ ಪಡೆಯಲೇಬೇಕೆಂಬ ಅವನ ನಿರ್ಧಾರವನ್ನು ಬದಲಾಯಿಸಿ ಪರೋಕ್ಷವಾಗಿ ತ್ರಸದಸ್ಯು ಹಾಗೂ ಅಯೋಧ್ಯೆಗೆ ಆತನ ಸೇವೆ ಇನ್ನೂ ಮಹತ್ವದ್ದು ಎನ್ನುವ ಅನಿವಾರ್ಯದಲ್ಲಿ ತಾರ್ಕ್ಷ್ಯನನ್ನು ಕಟ್ಟಿಹಾಕುತ್ತಾಳೆ.

ತಾರ್ಕ್ಷ್ಯನಿಗಾದರೂ ಪುರುಕುತ್ಸಾನಿ ಮೊದಲಿಂದಲೂ ಭಕ್ತಿಯ ವಿಷಯವೇ ಆಗಿದ್ದಳು. ಪುರುಕುತ್ಸಾನಿ ಸಾಮ್ರಾಜ್ಞಿಯಾದ ಮೇಲಂತೂ ಆಕೆಯ ಕಲ್ಯಾಣಾರ್ಥವಾಗೇ ತಾನು ಪುರುಕುತ್ಸನನ್ನು ಕೊಂದದ್ದು ಎಂದೇ ತನ್ನನ್ನು ಸಮರ್ಥಿಸಿಕೊಳ್ಳುವವನು. ಆಕೆಯ ಆಡಳಿತ ವೈಖರಿಯನ್ನು ಬಹುವಾಗಿ ಮೆಚ್ಚಿಕೊಂಡವನು. ಆಕೆಗಾಗಿ ತಾರ್ಕ್ಷ್ಯ ತನ್ನ ಜೀವತ್ಯಾಗಕ್ಕೂ ಸಿದ್ಧ. ಅದನ್ನೇ ಕೊನೆವರೆಗೂ ಮಾಡುತ್ತಾನೆ. ಗುರುವಾಗಿ ತ್ರಸದಸ್ಯುವಿನ ಬೆಂಬಲಕ್ಕೆ ನಿಂತು ಆತನ ನೈತಿಕ ಬಲವೇ ತಾನಾಗುತ್ತಾನೆ. ಮುಂದೆ ವೃಶನಿಂದಾಗಿ ತ್ರಸದಸ್ಯುವಿಗೆ ತನ್ನ ಹುಟ್ಟಿನ ಕುರಿತಾಗಿ ಎದುರಾಗುವ ಅವನ ಅಸ್ತಿತ್ವದ ಪ್ರಶ್ನೆಗಳಿಗೂ ತಾರ್ಕ್ಷ್ಯನೇ ಉತ್ತರಿಸಲು ಪ್ರಯತ್ನಿಸುತ್ತಾನೆ. ಕಾದಂಬರಿಯು ತ್ರಸದಸ್ಯುವಿನ ತೀವ್ರ ಆತ್ಮನಿಂದೆ, ಆತ್ಮಸ್ತುತಿಗಳ ತೊಳಲಾಟದೊಂದಿಗೆ ಆತ ವಾಸ್ತವವನ್ನು ಒಪ್ಪಿಕೊಳ್ಳುವುದರೊಂದಿಗೆ ಮುಕ್ತಾಯವಾಗುತ್ತದೆ.

ಕಾದಂಬರಿಯ ಮೊದಲರ್ಧ ಭಾಗ ಪುರುಕುತ್ಸ ಹಾಗೂ ಪುರುಕುತ್ಸಾನಿಯರ ಸಂಬಂಧಗಳ ತೊಳಲಾಟ, ರಾಣಿಯಾದ ನಂತರ ಅಯೋಧ್ಯೆಯ ಗಡಿಯನ್ನು ವಿಸ್ತರಿಸುವ ಆಕೆಯ ರಾಜಕಾರಣ ನಡೆಗಳು, ಸಿಂಹಾಸನದ ಉತ್ತರಾಧಿಕಾರಿಗಾಗಿ ಪುರುಕುತ್ಸಾನಿ ತೆಗೆದುಕೊಳ್ಳುವ ‘ನಿಯೋಗ’ ದಂತಹ ಬಹುಮುಖ್ಯ ನಿರ್ಣಯಗಳ ಸಂದರ್ಭದಲ್ಲಿ ಆಕೆಯ ಒಳತೋಟಿಗಳನ್ನು ಪುಣೇಕರರು ಕಾದಂಬರಿಕಾರನ ಸೂಕ್ಷ್ಮತೆ ಹಾಗೂ ಚರಿತ್ರೆಕಾರನ ವಸ್ತುನಿಷ್ಠತೆಗಳೊಂದಿಗೆ ಹಿಡಿದಿಡುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ. ಕೃತಿಯ ಉಳಿದ ಅರ್ಧ ಭಾಗ ವರ್ಣಸಂಕರದಿಂದ ಹುಟ್ಟಿದ ಕಾರಣಕ್ಕೆ ತ್ರಸದಸ್ಯುವಿಗೆ ಸುತ್ತಲಿನ ಪರಿಸರದಲ್ಲಿ ಎದುರಾಗುವ ತನ್ನ ಅಸ್ತಿತ್ವದ ಪ್ರಶ್ನೆಗಳನ್ನು ಕೇಂದ್ರೀಕರಿಸಿದವು. ಜೊತೆಗೆ ಮನುಷ್ಯನ ಬದುಕಿನ ಒಳ – ಹೊರ ತೊಳಲಾಟಗಳನ್ನು ಕಾದಂಬರಿಯ ಒಂದೊಂದು ಪಾತ್ರಗಳನ್ನಾಗಿಸಿರುವುದು ಕಾದಂಬರಿಕಾರರ ಮನುಷ್ಯ ಸಮಾಜದ ಸೂಕ್ಷ್ಮ ಗ್ರಹಿಕೆಗೆ ಸಾಕ್ಷಿಯಾಗಿದೆ.

ಕಾದಂಬರಿಯ ಪೂರ್ವಾರ್ಧ ಹಾಗೂ ಉತ್ತರಾರ್ಧಗಳನ್ನು ಅವಲೋಕಿಸಿದಾಗ ”ಅವರ ಬರಹಗಳು ಪಶ್ಚಿಮದ ಪರಂಪರೆಗಳನ್ನು ಕುರಿತು ಆಳವಾದ ಒಳನೋಟಗಳನ್ನು ನೀಡಿದರೂ ಅಂತಿಮವಾಗಿ ಸಾಹಿತ್ಯ ಮೀಮಾಂಸೆಯ ಮಾನದಂಡಗಳು ಆಯಾಯ ಸಂಸ್ಕೃತಿಗಳ ವಿಶಿಷ್ಟತೆಗಳ ಹಿನ್ನೆಲೆಯಲ್ಲೇ ರೂಪುಗೊಂಡಿರಬೇಕೆಂದು ಅವರು ನಂಬಿದ್ದರು” – ಎಂಬ ರಾಜೇಂದ್ರ ಚೆನ್ನಿಯವರ ಮಾತುಗಳು ಇಲ್ಲಿ ಪ್ರಸ್ತುತ ಎನಿಸುತ್ತವೆ. (‘ಅಸಮಗ್ರ’ – ೨೦೧೦)

ಕಾಲಕಾಲಕ್ಕೆ ನಡೆದಿರಬಹುದಾದ ಭಾಷೆ, ಸಾಹಿತ್ಯ ಮನೋಧರ್ಮ, ಸಾಹಿತ್ಯ ವಿಮರ್ಶಾ ಸಿದ್ಧಾಂತ, ಸಮಾಜ – ಸಂಸ್ಕೃತಿಯಲ್ಲಿನ ಬದಲಾವಣೆಗಳು, ಅವುಗಳ ಶೇಷ್ಠ – ಕನಿಷ್ಠತೆಯ ಹಿಂದಿನ ರಾಜಕಾರಣಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಪುಣೇಕರರ ಕುರಿತು ರಾಜೇಂದ್ರ ಚೆನ್ನಿಯವರು ತಮ್ಮ ‘ಅಸಮಗ್ರ’ (2010) ಕೃತಿಯಲ್ಲಿ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ – “ಯಾವಾಗಲೂ ಸಿದ್ಧ ಮಾದರಿ ಮತ್ತು ರೂಢೀಕೃತ ಅಭಿಪ್ರಾಯಗಳನ್ನು ಗಟ್ಟಿಯಾಗಿ ಧಿಕ್ಕರಿಸುತ್ತಿದ್ದ ಅವರು ಯಾರಿಗೂ ಬಗ್ಗದ ಶಾಶ್ವತ ಭಿನ್ನಮತೀಯ. ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಯಾವ ಬಗೆಯ ರಾಜಿಕಬೂಲಿಗಳಿಗೆ ಮಣಿಯದ ಬುದ್ಧಿಜೀವಿಯಾಗಿ ನನಗೆ ನೆನಪಾಗುವುದು ಅವರೊಬ್ಬರೆ. ಅದೊಂದು ಪ್ರಜ್ಞಾಪೂರ್ವಕ ತಂತ್ರದ ಹಾಗೆ, ತಮ್ಮ ಎಲ್ಲ ಬಗೆಯ ಕೃತಿ ಪ್ರತಿಕ್ರಿಯೆಗಳನ್ನು ಸಾಹಿತ್ಯದ ಸ್ಥಾಪಿತ ನಂಬಿಕೆಗಳನ್ನು ಅಲ್ಲಾಡಿಸುವ ಉದ್ಧೇಶಕ್ಕಾಗಿಯೇ ರೂಪಿಸಿಕೊಂಡಿದ್ದರು. ಒಬ್ಬ ಭಿನ್ನ ಮತೀಯನನ್ನು ತಿರಸ್ಕಾರದಿಂದ ನೋಡುವ ಪರಿಪಾಠಕ್ಕೆ ಅಪವಾದ ಬರದಂತೆ ಸಾಹಿತ್ಯದ ಸ್ಥಾಪಿತ ಹಿತಾಸಕ್ತಿಗಳು ಕನ್ನಡದಲ್ಲಿಯೂ ಅವರನ್ನು ಅಸಡ್ಡೆಯಿಂದ ಕಂಡವು. ಅವರು ನಮ್ಮ ಅತ್ಯಂತ ಸ್ವೋಪಜ್ಞ ವಿಮರ್ಶಕರು, ಒಬ್ಬ ಪ್ರಖರ ವಸಾಹತೋತ್ತರ ಚಿಂತಕರು ಎನ್ನುವುದೇ ಸರಿ. ವಸಾಹತೋತ್ತರ ಚಿಂತನೆ ಏನೆಂಬುದು ಯಾರಿಗೂ ಗೊತ್ತೇ ಇರದ ಸಂದರ್ಭದಲ್ಲಿ ಅವರು ಪಶ್ಚಿಮದ ಯಜಮಾನಿಕೆಯ ಬಿಗಿಮುಷ್ಟಿಯಲ್ಲಿ ಪ್ರಾದೇಶಿಕ ಸಂಸ್ಕೃತಿ ಸಾಹಿತ್ಯಗಳು ಕುಗ್ಗಿ ಹೋಗುತ್ತವೆ ಎಂಬ ಅಪಾಯವನ್ನು ದಶಕಗಳ ಹಿಂದೆಯೇ ಗುರುತಿಸುವಷ್ಟು ದೂರದೃಷ್ಟಿಯನ್ನು ಹೊಂದಿದ್ದರು”.
ಇಲ್ಲಿಉಲ್ಲೇಖಿಸಿದ ರಾಜೇಂದ್ರ ಚೆನ್ನಿಯವರ ಮಾತುಗಳು ಪುಣೇಕರರ ವಿಮರ್ಶಾ ದೃಷ್ಟಿಕೋನವನ್ನು ಹಾಗೂ ವಿಮರ್ಶಕನಾದವನು ತನ್ನ ಸಮಕಾಲೀನ ಸಂದರ್ಭಕ್ಕೆ ತೋರಬೇಕಾದ ಪ್ರತಿಕ್ರಿಯೆ ಮತ್ತು ಅವರ ಸಾಹಿತ್ಯಕ ಬದ್ಧತೆಯನ್ನು ಸಮರ್ಥಿಸುವಂಥದ್ದು. ಆದರೆ ಪುಣೇಕರರ ಕಾಲಘಟ್ಟದ ಜನಪ್ರಿಯ ವಿಮರ್ಶಕ ವರ್ಗ ಅವರನ್ನು ‘ದೇಶೀವಾದದ ಹುಂಬ ಅಭಿಮಾನಿ’ (ಅಸಮಗ್ರ – ೨೦೧೦, ಪುಟ – ೫೯) ಎಂದು ದೂರ ತಳ್ಳಿದ ಕಾರಣದಿಂದಾಗಿ ಸಾಹಿತ್ಯಾಸಕ್ತರು ಅವರನ್ನು ಗಂಭೀರವಾಗಿ ಓದಲು ತಡೆಯಾಯಿತೇನೋ. ಚೆನ್ನಿಯವರ ಈ ಅಭಿಪ್ರಾಯ ಪುಣೇಕರರ ಒಟ್ಟು ಸಾಹಿತ್ಯಕ ವ್ಯಕ್ತಿತ್ವವನ್ನು ದೇಶೀವಾದದ ಹಿನ್ನೆಲೆಯಲ್ಲಿ ಗ್ರಹಿಸದೆ ವಸಾಹತೋತ್ತರ ಚಿಂತಕರ ನೆಲೆಯಲ್ಲಿ ಗ್ರಹಿಸಿರುವುದನ್ನು ಕಾಣಬಹುದಾಗಿದೆ.

ಆದರೆ ಅವರ ಈ ಅಭಿಪ್ರಾಯಕ್ಕೆ ವ್ಯತಿರಿಕ್ತವೆಂಬಂತೆ, ತಮ್ಮ ಗುರುಗಳಾಗಿದ್ದ ಶಂಕರ ಮೊಕಾಶಿ ಪುಣೇಕರರ ಕುರಿತು ರಹಮತ್ ತರಿಕೆರೆಯವರ ಅಭಿಪ್ರಾಯವೂ ಇಲ್ಲಿ ಮುಖ್ಯವಾಗುತ್ತದೆ. ಅವರು ತಮ್ಮ ‘ಸಾಂಸ್ಕೃತಿಕ ಅಧ್ಯಯನ’ (2019 – 3ನೇ ಮುದ್ರಣ) ಕೃತಿಯಲ್ಲಿ ಶಂಕರ ಮೊಕಾಶಿ ಪುಣೇಕರರನ್ನು ಒಳಗೊಂಡಂತೆ ಕನ್ನಡದ ಅನೇಕ ಸಂಸ್ಕೃತಿ ಚಿಂತಕರ ಮೇಲೆ ಪೌರ್ವಾತ್ಯವಾದಿ ಆನಂದ ಕುಮಾರಸ್ವಾಮಿಯವರ ಪ್ರಭಾವವಿರುವುದನ್ನು ಗುರುತಿಸುತ್ತಾರೆ. ಪಶ್ಚಿಮದ ದೇಶಗಳು ಪೂರ್ವದೇಶಗಳನ್ನು ತಮ್ಮ ವಸಾಹತನ್ನಾಗಿ ಆಕ್ರಮಿಸಿಕೊಂಡು, ರಾಜಕೀಯವಾಗಿ ಆಳ್ವಿಕೆ ನಡೆಸುತ್ತಾ, ಅವನ್ನು ಕುರಿತು ಕಟ್ಟಿದ ಸಂಕಥನವಾದ ಪೌರ್ವಾತ್ಯವಾದದಲ್ಲಿದ್ದ ದೋಷಗಳ ಬಗ್ಗೆ ಎಡ್ವರ್ಡ್ ಸೈದ್ ತನ್ನ ಓರಿಯಂಟಲಿಸಮ್ ಕೃತಿಯಲ್ಲಿ ಗುರುತಿಸುವ ಅಂಶಗಳ ಹಿನ್ನೆಲೆಯಲ್ಲಿ ರಹಮತ್ ತರಿಕೆರೆಯವರು ಪುಣೇಕರರನ್ನೂ ಒಳಗೊಂಡಂತೆ ಅನಕೃ, ಶ್ರೀಕಂಠಶಾಸ್ತ್ರೀ ಮೊದಲಾದವರು ಭಾರತೀಯ ಸಾಹಿತ್ಯ, ಸಂಸ್ಕೃತಿಯ ಕುರಿತಾಗಿ ಹೊಂದಿದ್ದ ವೈದಿಕ ಮನೋಧರ್ಮವನ್ನು ಪ್ರಶ್ನಿಸುತ್ತಾರೆ.

ರಹಮತ್ ಅವರ ಪ್ರಕಾರ ಪೌರ್ವಾತ್ಯವಾದಿ ದೃಷ್ಟಿಕೋನವು ‘ಪಶ್ಚಿಮದ ಅಹಂಕಾರದ ವಿರುದ್ಧ ಸಮರ ಸಾರಿ, ಸ್ವಾಭಿಮಾನ ಪಡೆಯಲು ಹಾಗೂ ವಸಾಹತೋತ್ತೀಕರಣ ಉಂಟುಮಾಡುವ ಗುಲಾಮಿ ಮನೋಭಾವದಿಂದ ಹೊರಬರಲು ಕೊಂಚ ನೆರವಾಗಬಹುದು. ಆದರೆ ತಮ್ಮ ಉನ್ನತ ಸ್ಥಾನಮಾನ ಕಳೆದು ಹೋಗುತ್ತಿರುವ ಪ್ರತಿಷ್ಠಿತ ವರ್ಗಗಳು ಹಾಗೂ ವೈದಿಕ ಸಂಸ್ಕೃತಿಯ ಪುನರುಜ್ಜೀವನವಾದಿಗಳು ಇದರ ಪ್ರಯೋಜನ ಪಡೆದರು’ (ಅದೇ ಪುಸ್ತಕ ಪುಟ – ೨೩) ಎಂಬುದಾಗಿದೆ. ಈ ಅಭಿಪ್ರಾಯವು ಸಂಸ್ಕೃತಿಯ ಅಧ್ಯಯನದ ದೃಷ್ಟಿಯಿಂದ ಸಮಂಜಸವಾಗಿದ್ದರೂ, ಲೇಖಕನೊಬ್ಬನ ಅಭಿಪ್ರಾಯ, ಧೋರಣೆ ಹೀಗೇ ಇರಬೇಕು ಎಂದು ಭಿನ್ನ ಕಾಲಘಟ್ಟದಲ್ಲಿ ನಿಂತು ಅಪೇಕ್ಷಿಸುವುದು ಪ್ರಾಯಶಃ ಸರಿಯಾದ ಕ್ರಮವಾಗಲಾರದು. ಪ್ರತಿಯೊಬ್ಬ ಬರಹಗಾರನ ವೈಚಾರಿಕತೆಯ ಮೇಲೆ ಆತನ ಸಾಮಾಜಿಕ ಪರಿಸರದ ಪ್ರಭಾವವಿದ್ದೇ ಇರುತ್ತದೆ. ಅಲ್ಲದೇ ಎಲ್ಲಾ ಬರಹಗಾರರಿಗೂ ಅವರವರ ಮಿತಿಗಳು ಇದ್ದೇ ಇರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ.

ಪುಣೇಕರರನ್ನು ಹಾಗೆ ವೈದಿಕ ಹಾಗೂ ಭಾರತೀಯ ಸಂಸ್ಕೃತಿಯ ಪುನರುಜ್ಜೀವನವಾದಿ ಎಂದು ಏಕಾಏಕಿ ತಿರಸ್ಕರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಕನ್ನಡ ಸಾಹಿತ್ಯಲೋಕದಲ್ಲಿ ಅವರನ್ನು ಶಾಶ್ವತರನ್ನಾಗಿಸಿದ ಕೃತಿಗಳು ಮುಖ್ಯವಾಗಿ ಮೂರು. ಮಾಯಿಯ ಮೂರು ಮುಖಗಳು ಕವನ ಸಂಕಲನ (೧೯೭೦), ಗಂಗವ್ವ ಗಂಗಾಮಾಯಿ (೧೯೫೬) ಹಾಗೂ ವೇದಗಳು ಮುಚ್ಚಿಟ್ಟ ಅಯೋಧ್ಯೆಯ ನಿಜ ಸಾಮ್ರಾಜ್ಞಿ ಪುರುಕುತ್ಸಾನಿಯ ಕತೆಯನ್ನೊಳಗೊಂಡ ಅವಧೇಶ್ವರಿ(೧೯೮೭) ಕಾದಂಬರಿಗಳು. ಈ ಮೂರೂ ಕೃತಿಗಳು ಹೆಣ್ಣನ್ನೇ ಪ್ರಮುಖವಾಗಿ ಕೇಂದ್ರೀಕರಿಸಿದವು. ಜೊತೆಗೆ ಹೆಣ್ಣು ತನ್ನ ಅಸ್ತಿತ್ವಕ್ಕೆ ನಡೆಸುವ ಹೋರಾಟ ಹಾಗೂ ಇತರ ಪಾತ್ರಗಳು ತಮ್ಮ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳನ್ನೇ ಮುಖ್ಯವಾಗಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಪಶ್ಚಿಮದ ಅಸ್ತಿತ್ವವಾದದ, ಸ್ತ್ರೀವಾದದ ನೆಲೆಯ ಓದುಗಳನ್ನು ಭಾರತದ ಸಾಂಸ್ಕೃತಿಕ, ಸಾಹಿತ್ಯಕ ಪರಿಸರದಲ್ಲಿ ಗುರುತಿಸುವ ಪ್ರಯತ್ನವನ್ನು ಪುಣೇಕರರು ಮಾಡಿದ್ದಿರಬಹುದು ಎಂದು ಊಹಿಸಲು ಅವರ ಕೃತಿಗಳು ವಿವರಗಳು ಅನುವು ಮಾಡಿಕೊಡುತ್ತವೆ. ಪೌರ್ವಾತ್ಯವಾದವು ಮಿತಿಗಳಾದ ಭಾರತದ ಅಸ್ಪೃಶ್ಯತೆ, ಜಾತಿಪದ್ಧತಿ, ಮೊದಲಾದ ಅಂಶಗಳನ್ನು ಅವರ ಸಾಹಿತ್ಯ ಹಾಗೂ ವಿಮರ್ಶಾ ಕೃತಿಗಳು ಒಳಗೊಳಲಿಲ್ಲ ಎಂಬ ನಿಲುವುಗಳಿಗೆ ದಿಢೀರನೆ ಬರುವುದಕ್ಕೂ ಮುನ್ನ ಅವರ ‘Harijan Contribution to Mediaeval Indian Thought’ (1991) ಎಂಬ ಕೃತಿಯಲ್ಲಿನ ವಿಚಾರಗಳನ್ನು ಗಮನಿಸುವುದು ಕೂಡ ಅತ್ಯಗತ್ಯ.

ಕನ್ನಡ ಹಾಗೂ ಇಂಗ್ಲಿಶ್ ಭಾಷೆಯಲ್ಲಿ ಒಟ್ಟು ಮೂವತ್ತೈದಕ್ಕೂ ಕೃತಿಗಳನ್ನು ರಚಿಸಿದ ಪುಣೇಕರರು ಮೇಲೆ ಚರ್ಚಿಸಿದ ವಿಷಯಗಳ ಹಿನ್ನೆಲೆಯಲ್ಲಿ ಅವರ ಕಾಲದ ಹಾಗೂ ಸಮಕಾಲೀನ ಸಾಹಿತಿಗಳು ಮತ್ತು ವಿಮರ್ಶಕರ ಗಂಭೀರ ಸಾಹಿತ್ಯಕ ಚರ್ಚೆಯಿಂದ ದೂರಕ್ಕೆ ತಳ್ಳಲ್ಪಟ್ಟವರು. ಇದಕ್ಕೆ ಕಾರಣವನ್ನು ರಹಮತ್ ಅವರ ಮಾತುಗಳಲ್ಲೇ ಹೇಳುವುದಾದರೆ – “ಕನ್ನಡದ ನವ್ಯರು ಅವರ ಪಾಲಿಗೆ ಚರಿತ್ರೆಯ ಬ್ರಿಟಿಶರ ಪಳೆಯುಳಿಕೆ ಗಳು. ಇದರಿಂದ ಅವರ ಮೇಲೆ ಸದಾ ಚಾಟಿ ಬೀಸುತ್ತಿದ್ದರು”. (‘ಕತ್ತಿಯಂಚಿನ ದಾರಿ’ – ಪುಟ ೨೧೭). ಆದರೆ ಅವರದು ಆರೋಗ್ಯಕರ ಬೌದ್ಧಿಕ ಕಿತ್ತಾಟವಷ್ಟೇ ಆಗಿತ್ತು. ಅವರು ಸಾಹಿತ್ಯ ಹಾಗೂ ವಿಮರ್ಶಾ ಪಂಥದಲ್ಲಿ ತಮ್ಮ ಕಾಲಘಟ್ಟದಲ್ಲಿ ಜನಪ್ರಿಯವಾಗಿದ್ದ ಸಿದ್ಧ ಮಾದರಿಗಳನ್ನು ಸಕಾರಣವಾಗಿ ಪಕ್ಕಕ್ಕೆ ತಳ್ಳಿ, ತಮ್ಮದೇ ಸ್ವತಂತ್ರ ಆಲೋಚನೆಗಳನ್ನು, ಹೊಸ ಶೈಲಿಯನ್ನು ರೂಢಿಸಿಕೊಂಡವರಾಗಿದ್ದರು. ಇದು ಸಾಧ್ಯವಾದದ್ದಕ್ಕೆ ಕಾರಣಗಳನ್ನು ರಹಮತ್ ಅವರು ಹೀಗೆ ಗುರುತಿಸುತ್ತಾರೆ. – “ಅವರು ವಯಸ್ಸಿನಲ್ಲಿ ಅಡಿಗ, ಶಿವರುದ್ರಪ್ಪ, ಕುರ್ತಕೋಟಿ, ಕಣವಿ, ಅವರ ತಲೆಮಾರಿನವರು. ಅವರ ಹಿಂದೆ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಮೊದಲಾದವರ ಬೆಟ್ಟದಂತಹ ಪರಂಪರೆ; ಮುಂದೆ, ಕೊಂಚ ಚಿಕ್ಕವರಾದ ತೇಜಸ್ವಿ, ಅನಂತಮೂರ್ತಿ, ಲಂಕೇಶ ಮುಂತಾದ ಯುವಲೇಖಕರ ಬಿರುಸು. ಇವೆರೆಡರ ನಡುವೆ ಇದ್ದ ಪುಣೇಕರರು ಎರಡೂ ತಲೆಮಾರುಗಳ ನಡುವಣ ಸಂಘರ್ಷಗಳಲ್ಲಿ ತಮ್ಮ ಸೃಜನಶೀಲತೆ ರೂಪಿಸಿಕೊಂಡವರು”. (ಅದೇ ಪುಸ್ತಕ , ಅದೇ ಪುಟ). ಈ ಕಾರಣಕ್ಕಾಗಿಯೇ ಕನ್ನಡದಲ್ಲಿ ‘ಅವಧೇಶ್ವರಿ’ ಯಂತಹ ಕೃತಿ ಮೂಡಿಬರಲು ಸಾಧ್ಯವಾಯಿತು.

ಹಾಗೆ ನೋಡಿದರೆ, ಇದುವರೆಗೂ ಭಾರತ ಮತ್ತು ಕನ್ನಡದ ಸಾಹಿತ್ಯದಲ್ಲಿ ಚರಿತ್ರೆ – ಕಾವ್ಯ – ಪುರಾಣಗಳ ಸಣ್ಣ ಜಾಡನ್ನು ಹಿಡಿದು ಸಮಕಾಲೀನ ಸಂದರ್ಭದಲ್ಲಿ ಅನುಸಂಧಾನಗೊಳಿಸಿ ಮರುಸೃಷ್ಟಿಗೊಂಡ ಕೃತಿಗಳು ಕನ್ನಡ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಸಾಕಷ್ಟು ಬಂದಿವೆ. ಹಾಗೂ ಅವು ಓದುಗರ, ವಿಮರ್ಶಕರ ಅಪಾರ ಮೆಚ್ಚುಗೆಯನ್ನು ಸಹ ಗಳಿಸಿವೆ. ‘ಅವಧೇಶ್ವರಿ’ಯ ಅನಂತಮೂರ್ತಿಯವರ ಮೆಚ್ಚುಗೆಯ ಮಾತುಗಳು ಹೀಗಿವೆ. – “ನಿಮ್ಮ ರಾಣಿ ನನಗೆ ಬಹಳ ಪ್ರಿಯಳಾದಳು. ನಿಯೋಗ ವೃತ್ತಾಂತವೊಂದನ್ನು ಇನ್ನು ಯಾರೂ ನಿಮ್ಮಷ್ಟು ಹದವಾಗಿ, ಚೆನ್ನಾಗಿ ನಿರ್ವಹಿಸಲಾರರು. ಭಾರತೀಯನಲ್ಲದೆ ಬೇರೆ ಯಾರು ಬರೆಯುವುದು ಸಾಧ್ಯವಿತ್ತು ಅವಧೇಶ್ವರಿಯನ್ನ ? ಯೇಟ್ಸ್ ಕೂಡ ಹೊಟ್ಟೆಕಿಚ್ಚುಪಡುವಂತೆ ಕೆಲವೆಡೆ ನೀವುಬರೆದಿದ್ದೀರಿ…” ( ಮೊಕಾಶಿಯವರಿಗೆ ಅನಂತಮೂರ್ತಿಯವರು ಬರೆದ ಪತ್ರದ ಸಾಲುಗಳನ್ನು ಈ ಕೃತಿಯ ಬೆನ್ನುಡಿಯಲ್ಲಿ ಬಳಸಲಾಗಿದೆ). ಆದರೆ ಇಂತಹ ವಿಭಿನ್ನ ಪ್ರಯೋಗಗಳು ಕೇವಲ ಮೆಚ್ಚುಗೆಗೆ ಸೀಮಿತವಾದವೇ ಹೊರತು ಈ ಬಗೆಯ ಕೃತಿಗಳನ್ನು ಓದುವ, ಅಧ್ಯಯನ ನಡೆಸುವ ಮಾನದಂಡಗಳನ್ನು ಕನ್ನಡದ ಸಂದರ್ಭದಲ್ಲಿ ನಾವು ಗುರುತಿಸಿಕೊಂಡಿದ್ದೇವೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.  ನನ್ನ ಸೀಮಿತ ಓದಿನ ವ್ಯಾಪ್ತಿಯಲ್ಲಿ ಇಂತಹದ್ದೇ ಇತರ ಕೆಲ ಕೃತಿಗಳನ್ನು ಹೆಸರಿಸುವುದಾದರೆ ಡಾ. ಅನುಪಮಾ ನಿರಂಜನ ಅವರ ‘ಮಾಧವಿ’ (ಮೊದಲ ಮುದ್ರಣ – ೧೯೭೬) ಎಸ್.ಎಲ್.ಭೈರಪ್ಪ ನವರ ‘ಪರ್ವ’ (ಮೊದಲ ಮುದ್ರಣ – ೧೯೭೯), ‘ಸಾರ್ಥ’ (ಮೊದಲ ಮುದ್ರಣ – ೧೯೯೮) ಹಾಗೂ ಇತ್ತೀಚೆಗೆ ಓದಿದ ಡಾ.ಟಿ.ಎನ್.ವಾಸುದೇವಮೂರ್ತಿ ಅವರ ಮೂಲಕ ಕನ್ನಡಕ್ಕೆ ಅನುವಾದಗೊಂಡ ಎನ್.ಆರ್.ನಾವಲೇಕರ್ ಅವರ ‘ರಾಮಾಯಣ – ಒಂದು ಹೊಸ ಓದು’ (೨೦೧೯). ಕೊನೆಯ ಒಂದು ಕೃತಿಯನ್ನು ಹೊರತುಪಡಿಸಿ ಉಳಿದ ಎಲ್ಲವೂ ಕ್ರಮವಾಗಿ ಎಂಟು, ಹತ್ತು, ಏಳು ಹಾಗೂ ಅದಕ್ಕಿಂತ ಹೆಚ್ಚು ಬಾರಿ ಮರುಮುದ್ರಣ ಕಂಡಿವೆ. ‘ಅವಧೇಶ್ವರಿ’ ಕಾದಂಬರಿಯೂ ಕೂಡ ೨೦೧೩ ರಲ್ಲಿ ಆರನೇ ಮುದ್ರಣ ಕಂಡಿದೆ. ಯಾವುದೇ ಕೃತಿಯ ಜನಪ್ರಿಯತೆಯನ್ನು ಅಳೆಯಲು ಮರುಮುದ್ರಣವನ್ನು ಕೂಡ ಒಂದು ಮಾನದಂಡವನ್ನಾಗಿ ಸ್ವೀಕರಿಸುವುದಾದರೆ, ಇವುಗಳು ಓದುಗರ ಮೆಚ್ಚುಗೆಗೆ ಕಾರಣವಾದ ಅಂಶಗಳನ್ನು ಅಧ್ಯಯನಕ್ಕೊಳಪಡಿಸುವುದು ಕಾದಂಬರಿ ರಚನೆಯಾದ ಕಾಲಘಟ್ಟದ ಸಮಾಜ – ಸಂಸ್ಕೃತಿಯನ್ನು ಅರಿಯುವ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ಗತದ ಅರಿವಿಲ್ಲದೇ, ವರ್ತಮಾನದ ತಲ್ಲಣಗಳನ್ನು ಗುರುತಿಸಿಕೊಳ್ಳುವುದಾಗಲೀ, ಭವಿಷ್ಯತ್ತಿಗೆ ಕಾಣ್ಕೆಗಳನ್ನಾಗಲೀ ಕಂಡುಕೊಳ್ಳಲು ಸಾಧ್ಯವಾಗಲಾರದು. ಹಾಗಾಗಿ ಕಾಲಕಾಲಕ್ಕೆ ಚರಿತ್ರೆ – ಕಾವ್ಯ- ಪುರಾಣಗಳು ಅನುಸಂಧಾನಗಳಿಂದ ಮರುರಚನೆಗೊಂಡ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡುವುದರ ಮೂಲಕ ಇಂತಹ ವಿಭಿನ್ನ ಬಗೆಯ ಕೃತಿಗಳ ರಚನೆಯ ಸಾಂಸ್ಕೃತಿಕ ಸಂದರ್ಭಕ್ಕೊಂದು ತಾತ್ವಿಕ ಚೌಕಟ್ಟನ್ನು ರೂಪಿಸಿಕೊಳ್ಳಲು ಉಪಯುಕ್ತವಾಗುತ್ತದೆ. ಅಲ್ಲದೇ ಕನ್ನಡ ಸಂಶೋಧನಾ ಕ್ಷೇತ್ರ ಇಂತಹ ಕೃತಿಗಳನ್ನು ಅಧ್ಯಯನ ನಡೆಸಲು ಬೇಕಾದ ಮಾದರಿಗಳನ್ನು ಹೊಂದಿದೆಯೇ ಅಥವಾ ರೂಪಿಸಿಕೊಳ್ಳಬೇಕಿದೆಯೇ ಎಂಬ ಪ್ರಶ್ನೆಗಳನ್ನು ಎದುರುಗೊಳ್ಳಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಶಂಕರ ಮೊಕಾಶಿ ಪುಣೇಕರರ ಓದು ಪ್ರಸ್ತುತವೆನಿಸುತ್ತದೆ.

******

ಪ್ರತಿಕ್ರಿಯಿಸಿ