ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೪: ಪದ-ನಾದ ಮತ್ತು ಅನುವಾದ

೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ.   ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ನಾಲ್ಕನೇಯ ಭಾಗ ಋತುಮಾನ ದ ಓದುಗರಿಗಾಗಿ.

ಸ್ಪಷ್ಟತೆಯ ಅನುಕೂಲಕ್ಕಾಗಿ ನಾನು ಪದ್ಯದ ಅನುವಾದಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ಮಾತನಾಡುವೆ. ಸಮಸ್ಯೆ ಪುಟ್ಟದಾದರೂ, ಬಹಳ ಪ್ರಸ್ತುತವಾದುದು. ಈ ಚರ್ಚೆಯ ಮೂಲಕ ನಾವು ಕಾವ್ಯದಲ್ಲಿ ಪದ-ನಾದ (ಅಥವಾ ಬಹುಶಃ ಪದ-ಮಾಯ), ಅರ್ಥ ಮತ್ತು ಧ್ವನಿಯ ಕುರಿತಾದ ಮಾತುಗಳತ್ತ ಹೊರಳಬಹುದು.

ಸಾರ್ವತ್ರಿಕವಾಗಿ ನಂಬಲಾಗುವ ಒಂದು ಅಂಧಶ್ರದ್ಧೆಯ ಪ್ರಕಾರ ಎಲ್ಲ ಅನುವಾದಗಳೂ ತಮ್ಮ ಮೂಲಕ್ಕೆ ಅಪಚಾರ ಎಸಗುತ್ತವೆ. ಇಟಾಲಿಯನ್ ಭಾಷೆಯಲ್ಲಿರುವ ಒಂದು ಅಂಬೋಣ ಇದನ್ನು ಚೆನ್ನಾಗಿ ಅಭಿವ್ಯಕ್ತಿಸುತ್ತದೆ: “ಅನುವಾದಕನೊಬ್ಬ ವಿಶ್ವಾಸದ್ರೋಹಿ” (“Traduttore, traditore”) – ಇದಕ್ಕೆ ಸಂವಾದಿ ಏನಿದ್ದೀತು? ಇದು ತುಂಬಾ ಜನಪ್ರಿಯವಾದ ಹೇಳಿಕೆಯಾದುದರಿಂದ ಇದರಲ್ಲಿ ಸತ್ಯದ ತಿರುಳು ಇದ್ದಿರಲೇಬೇಕು, ಎಲ್ಲಿಯೋ ಅಡಗಿ ಕುಳಿತಿರಬಹುದು. ಕಾವ್ಯಾನುವಾದದ ಸಾಧ್ಯತೆ-ಅಸಾಧ್ಯತೆಗಳ, ಯಶಸ್ಸು-ಅಪಯಶಸ್ಸುಗಳನ್ನು ನಾವು ಚರ್ಚಿಸೋಣ. ನನ್ನ ಈವರೆಗಿನ ಅಭ್ಯಾಸದಂತೆ, ಕೆಲವು ಉದಾಹರಣೆಗಳೊಂದಿಗೆ ಶುರುಮಾಡೋಣ: ಯಾಕೆಂದರೆ, ಉದಾಹರಣೆಯಿಲ್ಲದೇ ಚರ್ಚೆ ಹೇಗೆ ಸಾಧ್ಯ? ನನಗೆ ಅತಿಯಾದ ಮರೆವು ಇರುವುದರಿಂದ, ಸಂಕ್ಷಿಪ್ತ ಉದಾಹರಣೆಗಳನ್ನು ಎತ್ತಿಕೊಳ್ಳುತ್ತೇನೆ. ಇಡೀ ಚರಣವನ್ನಾಗಲೀ, ಕವನವನ್ನಾಗಲೀ ಚರ್ಚಿಸುವುದು ನಮಗಿರುವ ಸಮಯ ಮತ್ತು ನನ್ನ ಸಾಮರ್ಥ್ಯವನ್ನು ಮೀರಿದ್ದು.

ನಾವೀಗ, ಆಂಗ್ಲ ಕವಿ ಟೆನ್ನಿಸನ್ನನ “ಓಡ್ ಆಫ್ ಬ್ರುನಾನ್ಬರ್” ಎಂಬ ಅನುವಾದದೊಂದಿಗೆ ಮೊದಲಾಗೋಣ. ಇದು ಹತ್ತನೇ ಶತಮಾನದ ಶುರುವಿನಲ್ಲಿ ವೆಸೆಕ್ಸಿನ ಜನ ಡಬ್ಲಿನ್ ವೈಕಿಂಗ್ಸ್, ಸ್ಕಾಟ್ಸ್ ಮತ್ತು ವೆಲ್ಷನ ಜನರ ವಿರುದ್ಧ ಗಳಿಸಿದ ವಿಜಯವನ್ನು ಆಚರಿಸಲು ಬರೆದ ಹಾಡು. ಇದರ ಒಂದೆರಡು ಸಾಲುಗಳನ್ನು ಪರೀಕ್ಷಿಸೋಣ. ಮೂಲದ ಕವನದಲ್ಲಿ, “ಮುಂಜಾನೆಯಲ್ಲಿ ಸೂರ್ಯ”, ಮತ್ತು “ಆ ಪ್ರಸಿದ್ಧ ತಾರೆ” ಎಂಬ ನುಡಿಗಟ್ಟುಗಳ ಉಪಯೋಗವಿದೆ. ಕವಿ ಮುಂದುವರಿದು, ಸೂರ್ಯನನ್ನು “ದೇವರುಗಳ ಉಜ್ವಲ ಮೋಂಬತ್ತಿ” ಎಂದೂ ಕರೆಯುತ್ತಾನೆ.

Courtesy: Medium

Courtesy: Medium

ಈ ಪದ್ಯವನ್ನು ಟೆನ್ನಿಸನ್ನನ ಮಗ ಗದ್ಯಕಥನವನ್ನಾಗಿಸಿ ಪತ್ರಿಕೆಯಲ್ಲಿ ಪ್ರಕಟಿಸಿದ. ಪ್ರಾಯಶಃ ಮಗ ತನ್ನ ಪ್ರಸಿದ್ಧ ತಂದೆಗೆ ಪುರಾತನ ಆಂಗ್ಲ ಕಾವ್ಯದ ಲಯ, ಪ್ರಾಸದ ಬದಲಿಗೆ ಆದಿಪ್ರಾಸದ ಪ್ರಯೋಗ ಇತ್ಯಾದಿ ಸೂಕ್ಷ್ಮಗಳನ್ನು ವಿವರಿಸಿರುತ್ತಾನೆ. ಪ್ರಯೋಗ ಮಾಡುವಲ್ಲಿ ಆಸಕ್ತಿಯಿದ್ದ ಟೆನ್ನಿಸನ್ ನಂತರ ಪುರಾತನ ಆಂಗ್ಲ ಕಾವ್ಯವನ್ನು ಆಧುನಿಕ ಆಂಗ್ಲ ನುಡಿಯಲ್ಲಿ ರಚಿಸುವುದಕ್ಕೆ ಮುಂದಾದ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಪ್ರಯೋಗ ಸಾಕಷ್ಟು ಯಶಸ್ವಿಯಾದರೂ ಕೂಡ, ಟೆನ್ನಿಸನ್ ಮತ್ತೆಂದೂ ಇಂತಹ ಪ್ರಯೋಗಕ್ಕೆ ಮತ್ತೆ ಕೈ ಹಾಕಲಿಲ್ಲ. ಹಾಗಾಗಿ, ಲಾರ್ಡ್ ಆಲ್ಫ್ರೆಡ್ ಟೆನ್ನಿಸನ್ನನ ಕೃತಿಗಳಲ್ಲಿ ಪುರಾತನ ಆಂಗ್ಲ ಕಾವ್ಯಕ್ಕಾಗಿ ಹುಡುಕಾಡಿದರೆ, ನಮಗೆ ಸಿಗುವ ಏಕೈಕ ಕೃತಿ “ಓಡ್ ಆಫ್ ಬ್ರುನಾನ್ಬರ್”.

ಟೆನ್ನಿಸನ್ನನು ಆ ಎರಡು ನುಡಿಗಟ್ಟುಗಳನು – ““ಸೂರ್ಯ, ಆ ಪ್ರಸಿದ್ಧ ತಾರೆ” ಮತ್ತು “ದೇವರುಗಳ ಉಜ್ವಲ ಮೋಂಬತ್ತಿ” – ಅನುವಾದಿಸಿದ್ದು ಹೀಗೆ: “ಯಾವಾಗ ಮೊದಲು ಆ ಮಹಾನ್ / ಮುಂಜಾನೆಯ ಸೂರ್ಯ-ತಾರೆ”. ಇದು ತುಂಬಾ ಕಣ್ಸೆಳೆಯುವಂತ ಅನುವಾದವಲ್ಲವೇ? ಇದು ಮೂಲಕ್ಕಿಂತಲೂ ಹೆಚ್ಚಿಗೆ ಸ್ಯಾಕ್ಸನ್ ಲಕ್ಷಣ ಹೊಂದಿದೆ, ಯಾಕೆಂದರೆ ಇದರಲ್ಲಿ ಎರಡೆರಡು ಜರ್ಮನ್-ಮೂಲದ ಶಬ್ದಗಳಿವೆ (‘sun-star’ ಮತ್ತು ‘morning-tide’). ಆಂಗ್ಲ ಭಾಷೆಯ ’ಮಾರ್ನಿಂಗ್-ಟೈಡ್’ ಎಂಬ ನುಡಿಗಟ್ಟನ್ನು ’ಮಾರ್ನಿಂಗ್-ಟೈಮ್’ ಎಂದು ಅರ್ಥೈಸಿಕೊಳ್ಳಬಹುದು. ಬಹುಶಃ, ಟೆನ್ನಿಸನ್ನನು ಬೆಳಗು ಎನ್ನುವುದು ಆಕಾಶದ ಕೃಪೆ ಎಂದು ಸೂಚಿಸ ಬಯಸುತ್ತಿದ್ದಾನೆ ಎಂದು ಸಹ ನಾವು ಅಂದುಕೊಳ್ಳಬಹುದು. ಮುಂದೆ, ’ಬ್ರೈಟ್ ಕ್ಯಾಂಡ್ಲ್ ಆಫ್ ಗಾಡ್’ ಎಂಬ ನುಡಿಗಟ್ಟನ್ನು ಟೆನ್ನಿಸನ್ ’ಲ್ಯಾಂಪ್ ಆಫ್ ದ ಲಾರ್ಡ್ ಗಾಡ್’ (’ದೇವರ ದೀಪ’) ಎಂದು ಅನುವಾದಿಸುವುದನ್ನು ಕಾಣುತ್ತೇವೆ.

ನಾವೀಗ ಇನ್ನೊಂದು ಉದಾಹರಣೆಯನ್ನು ಎತ್ತಿಕೊಳ್ಳೋಣ, ತಪ್ಪಿಲ್ಲದ್ದು ಮಾತ್ರವಲ್ಲದೇ ಒಂದು ಒಳ್ಳೆಯ ಅನುವಾದ ಕೂಡ. ಈ ಸಲ ಸ್ಪ್ಯಾನಿಷ್ ಭಾಷೆಯ ಉದಾಹರಣೆಯನ್ನು ವಿಶ್ಲೇಷಿಸೋಣ. “ನೋಕೆ ಆಸ್ಕ್ಯುರಾ ದೆಲ್ ಅಲ್ಮಾ” (ಆತ್ಮದ ಕಾಳ ರಾತ್ರಿ) ಎಂಬ ಶೀರ್ಷಿಕೆಯ, ಹದಿನಾರನೇ ಶತಮಾನದಲ್ಲಿ ರಚಿತಗೊಂಡ, ಸ್ಪ್ಯಾನಿಷ ಭಾಷೆಯನ್ನು ಕಾವ್ಯಕ್ಕಾಗಿ ಬಳಸಿರುವವರೆಲ್ಲರ ನಡುವೆ ಉನ್ನತ – ನಾವು ಅತ್ಯುನ್ನತವೆಂದೂ ಹೇಳಬಹುದು – ಕವಿಯ ಒಂದು ಕವನ. ನಾನು ಸಹಜವಾಗಿ, ಸ್ಯಾನ್ ಹುವಾನ್ ದಿ ಲಾ ಕ್ರಜ್ (ಸಂತ ಜಾನ ಆಫ್ ಕ್ರಾಸ್) ನ ಕುರಿತು ಹೇಳುತ್ತಿರುವುದು. ಮೊದಲ ಚರಣ ಹೀಗಿದೆ:

ಒಂದು ಕಾಳರಾತ್ರಿಯಲ್ಲಿ

ತೀವ್ರ ಹಂಬಲದ ಉರಿಯಲ್ಲಿ ಪ್ರೇಮ ಬೆಳಗುತ್ತಿದ್ದಂತೆ

– ಎಂತಹ ನಲಿವಿನ ಕ್ಷಣವದು –

ಯಾರಿಗೂ ಕಾಣದಂತೆ ಮರಳಿದೆ

ವಿರಮಿಸಲು ನನ್ನ ಮನೆ ಮೌನದಲ್ಲಿರುವಾಗ

(Upon a darksome night,

Kindling with love in flame of yearning keen

—O moment of delight!—

I went by all unseen,

New-hush’d to rest in the house where I had been.)

 

ಇದೊಂದು ಸೋಜಿಗದ ಚರಣ. ಆದರೆ, ನಾವು ಕೊನೆಯ ಸಾಲನ್ನು ಮಾತ್ರ ಓದಿದರೆ (ಹಾಗೆ ಓದುವುದು ಅಸಾಧ್ಯ), ಇದೊಂದು ಸಾಧಾರಣ ಸಾಲು: “ನನ್ನ ಮನೆ ಮೌನದಲ್ಲಿರುವಾಗ”. ಇಲ್ಲಿ ಬುಸ್ಸೆನುವ ಪದ-ನಾದವಿದೆ (ಮೂಲ ಸ್ಪ್ಯಾನಿಷನಲ್ಲಿ ’casa sosegada’ ಎಂಬ ನುಡಿಗಟ್ಟಿನಲ್ಲಿ ಬರುವ ’ಸ’ ಪದ-ನಾದ). ಈ ಶಬ್ದ ’sosegada’ ಅಂತಹ ಆಕರ್ಷಕ ಪದವೇನೂ ಅಲ್ಲ. ನಾನಿಲ್ಲಿ ಕೃತಿಯನ್ನು ನಿಕೃಷ್ಟವಾಗಿ ನೋಡುತ್ತಲಿಲ್ಲ. ನಾನಿಲ್ಲಿ ಹೇಳುತ್ತಿರುವುದೆಂದರೆ (ಯಾಕೆಂದು ಸಧ್ಯವೇ ನಿಮಗೆ ಅರಿವಾಗಲಿದೆ) ಹಿನ್ನೆಲೆಯಿಂದ ಬೇರ್ಪಡಿಸಿ ಈ ಸಾಲನ್ನು ಮಾತ್ರ ನೋಡಿದರೆ ಇದು ಅತ್ಯಂತ ಸಾಧಾರಣ ಎನಿಸುವುದು.

ಈ ಕವನವನ್ನು ಇಂಗ್ಲೀಷಿಗೆ ಆರ್ಥರ್ ಸೈಮನ್ಸ್ ಹತ್ತೊಂಬತ್ತನೇ ಶತಮಾನದಂತ್ಯದಲ್ಲಿ ಅನುವಾದಿಸಿದ. ಯೇಟ್ಸ ಸಂಪಾದಿಸಿದ “ಆಕ್ಸಫರ್ಡ್ ಬುಕ್ ಆಫ್ ಮಾಡರ್ನ್ ವರ್ಸ್” ಸಂಕಲನದಲ್ಲಿ ನೀವು ಓದಬಹುದಾದ ಈ ಅನುವಾದ ಅಷ್ಟೇನೂ ಚೆನ್ನಾಗಿಲ್ಲ. ಕೆಲವು ವರ್ಷಗಳ ಹಿಂದೆ, ದಕ್ಷಿಣ ಆಫ್ರಿಕಾದ ಶ್ರೇಷ್ಠ ಸ್ಕಾಟಿಶ್ ಕವಿ ರಾಯ್ ಕ್ಯಾಂಪಬೆಲ್ ಕೂಡ “ಆತ್ಮದ ಕಾಳ ರಾತ್ರಿ” ಕವನವನ್ನು ಅನುವಾದಿಸಿದ್ದಾನೆ. ಆ ಪುಸ್ತಕ ಇದೀಗ ನನ್ನ ಬಳಿ ಇದ್ದಿದ್ದರೆ ಒಳ್ಳೆಯದಿತ್ತು; ಆದರೆ, ನಾನು ಹಿಂದೆ ಉಲ್ಲೇಖಿಸಿದ ಸಾಲನ್ನು ನೋಡೋಣ. ಕ್ಯಾಂಪಬೆಲ್ ಮಾಡಿದ ಆ ಸಾಲಿನ ಅನುವಾದ ಹೀಗಿದೆ: When all the house was hushed” (ಮನೆಯಿಡೀ ಮೌನದಲ್ಲಿರುವಾಗ). ಇಲ್ಲಿ ಬಳಸಲಾಗಿರುವ “ಇಡೀ” (“all”) ಶಬ್ದ ಕವನದ ಸಾಲಿಗೆ ಜಾಗದ, ವಿಶಾಲತೆಯ ಅರ್ಥವನ್ನು ದೊರಕಿಸುತ್ತದೆ. ಮತ್ತು ಇಲ್ಲಿ ಬಳಸಲಾಗಿರುವ ಸೊಗಸಾದ ಆಂಗ್ಲ ಪದ “hushed”. ಈ ಪದ ಅದು ಹೇಗೋ ಮೌನದ ನಾದವನ್ನು ನಮಗೆ ಕೇಳಿಸುತ್ತದೆ.

ಅನುವಾದ ಕಲೆಯ ಈ ಎರಡು ಸೊಗಸಾದ ಉದಾಹರಣೆಗಳಿಗೆ ಮೂರನೆಯದನ್ನು ಸೇರಿಸುತ್ತೇನೆ. ನಾನಿದರ ಚರ್ಚೆಗೆ ಹೋಗುವುದಿಲ್ಲ, ಯಾಕೆಂದರೆ ಇದು ಪದ್ಯದಿಂದ ಪದ್ಯಕ್ಕೆ ರೂಪಾಂತರಿಸಿದ್ದಲ್ಲ, ಬದಲಿಗೆ ಗದ್ಯವನ್ನು ಪದ್ಯವಾಗಿಸಿರುವುದು.

Courtesy: Atlas Obscura

Courtesy: Atlas Obscura

ಗ್ರೀಕಿನಿಂದ ಲ್ಯಾಟಿನ್ನಿಗೆ ಬಂದ ಒಂದು ಸಾಧಾರಣ ಹೇಳಿಕೆಯಿದೆ: “ಕಲೆ ದೀರ್ಘ, ಬದುಕು ಹ್ರಸ್ವ” (“Ars longa, vita brevis”). ಇದೊಂದು ಸರಳ ಹೇಳಿಕೆ, ಒಂದು ಅಭಿಪ್ರಾಯ. ಇದು ಸುಲಭ ನಡೆ, ಸೀದಾಸಾದಾ. ಯಾವುದೇ ಆಳದ ಮಾತಿಲ್ಲ ಇದರಲ್ಲಿ. ಇದೊಂದು ಅತಿಯಾಗಿ ಪುನರಾವರ್ತಿಸಿರುವ ಸಾಲು: “Art is long, life is short.” ಹದಿನಾಲ್ಕನೇ ಶತಮಾನದಲ್ಲಿ, ಮಹಾನ ಅನುವಾದಕನಾದ ಜೆಫರಿ ಚಾಸರನಿಗೆ ಈ ಸಾಲನ್ನು ಬಳಸುವ ಅವಶ್ಯಕತೆ ಕಂಡುಬಂತು. ಅವನೇನೂ ಔಷಧಿಗಳ ಕುರಿತು ಯೋಚಿಸುತ್ತಿರಲಿಲ್ಲ, ಪ್ರಾಯಶಃ ಕಾವ್ಯದ ಕುರಿತು. ಅಥವಾ ಅವನು ಪ್ರೇಮದ ಕುರಿತಾದ ಸಂಧರ್ಭದಲ್ಲಿ ಈ ಸಾಲನ್ನು ಬಳಸ ಬೇಕಾಗಿತ್ತು. ಅವನು ಬರೆದ ಸಾಲು ಹೀಗಿತ್ತು: “ಬಾಳೆಂಬುದು ಎಷ್ಟು ಅಲ್ಪ, ಕಲೆ ಕಲಿಯಲೋ ಬೇಕು ದೀರ್ಘಕಾಲ” (“The life so short, the craft so long to learn”). ಇಲ್ಲಿ ನಮಗೆ ಅಭಿಪ್ರಾಯ ಮಾತ್ರವಲ್ಲ, ವ್ಯಥೆಯ ಛಾಯೆಯುಳ್ಳ ಸಂಗೀತವೂ ಸಿಗುತ್ತದೆ. ನಾವಿಲ್ಲಿ ಕಾಣುವುದೆಂದರೆ, ಕವಿ ಬಾಳು ಚಿಕ್ಕದು, ಕಲೆಯನ್ನು ಕರಗತ ಮಾಡಿಕೊಳ್ಳಲು ಎಷ್ಟು ಕಷ್ಟ ಎಂದು ಕೇವಲ ಯೋಚಿಸುತ್ತಿಲ್ಲ, ಅದನ್ನು ಅನುಭವಿಸುತ್ತಿದ್ದಾನೆ. ಇದು ಸಾಧ್ಯವಾಗಿರುವುದು ಒಂದು ಅಗೋಚರ, ಅಶ್ರವ್ಯ ಮುಖ್ಯಪದ – “so.” ಈಗ ನಾವು ಮೊದಲ ಎರಡು ಉದಾಹರಣೆಗಳಿಗೆ ಮರಳೋಣ: ಟೆನ್ನಿಸನ್ನನ ಅನುವಾದದ ಪ್ರಸಿದ್ಧ ಓಡ್ ಮತ್ತು ಸಂತ ಜಾನ್ ಆಫ್ ಕ್ರಾಸ್ ಬರೆದ “ಆತ್ಮದ ಕಾಳ ರಾತ್ರಿ” ಕವನಗಳಿಗೆ. ನಾನು ಉಲ್ಲೇಖ ಮಾಡಿರುವ ಅನುವಾದಗಳು ಮೂಲಕ್ಕೆ ಹೋಲಿಸಿದರೆ ಕೆಳದರ್ಜೆಯದೇನೂ ಅಲ್ಲ. ಆದರೂ ನಮಗೆ ಭಿನ್ನತೆ ಕಾಣುತ್ತದೆ. ಈ ಭಿನ್ನತೆಯು ಅನುವಾದಕನಿಗೆ ಇರುವ ಸಾಧ್ಯತೆಗಳನ್ನು ಮೀರಿದ್ದು; ಅದು ನಾವು ಕಾವ್ಯವನ್ನು ಓದುವ ರೀತಿಗೆ ಸಂಬಂಧಿಸಿದ್ದು. ನಾವು ’ಓಡ್ ಆಫ್ ಬ್ರುನಾನ್ಬರ್’ ಕಡೆ ಮತ್ತೊಮ್ಮೆ ದೃಷ್ಟಿ ಹಾಯಿಸಿದರೆ, ಅದು ಆಳ ಭಾವನೆಗಳಿಂದ ಹೊಮ್ಮಿರುವ ಕವಿತೆಯೆನ್ನುವುದು ಮನದಟ್ಟಾಗುತ್ತದೆ. ಸ್ಯಾಕ್ಸನ್ನರು ಹಲವು ಬಾರಿ ಡೇನ ಕುಲದವರಿಂದ ಸೋಲು ಕಂಡಿದ್ದರು, ಇದನ್ನು ಅರಗಿಸಿಕೊಳ್ಳಲು ಅವರಿಗೆ ಕಷ್ಟವಾಗಿತ್ತು. ಇಂಗ್ಲಂಡಿನ ಮಧ್ಯಯುಗದ ಯುದ್ಧಗಳಲ್ಲೆಲ್ಲ ಮುಖ್ಯವಾದ ಬ್ರುನಾನ್ಬರ್-ನಲ್ಲಿ ನಡೆದ ಒಂದು ದಿನದ ಕದನದ ಬಳಿಕ ಸ್ಯಾಕ್ಸನ್ನರು ಡಬ್ಲಿನ್ ವೈಕಿಂಗರ ರಾಜ ಓಲಾಫ್-ನನ್ನು ಸೋಲಿಸಿದಾಗ ಅವರಿಗೆ ಆಗಿರಬಹುದಾದ ಸಂತೋಷವನ್ನು ನಾವು ಕಲ್ಪಿಸಿಕೊಳ್ಳಬಹುದು. ಅವರ ಭಾವನೆಗಳನ್ನು, ಈ ಓಡನ್ನು ಬರೆದ ಕವಿಯ ಭಾವನೆಗಳನ್ನು, ನಾವು ಕಲ್ಪಿಸಿಕೊಳ್ಳಬಹುದು. ಬಹುಶಃ ಆ ಕವಿ ಒಬ್ಬ -ಮಂಕ್ – ಬಿಕ್ಕುವಾಗಿದ್ದ. ಆದರೂ, ನಿಜವೇನೆಂದರೆ, ದೇವರಿಗೆ ವಂದನೆಗಳನ್ನು ಸಲ್ಲಿಸುವ ಬದಲು, ಅವನು ತನ್ನ ರಾಜನ ಮತ್ತು ರಾಜಕುಮಾರ ಎಡ್ವರ್ಡನ ಖಡ್ಗಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಾನೆ. ದೇವರು ಗೆಲುವನ್ನು ದಯಪಾಲಿಸಿದನೆಂದು ಅವನು ಹೇಳುವುದಿಲ್ಲ, ಖಡ್ಗದ ಅಲುಗಿನಿಂದ ಪಡೆದ ಗೆಲುವು ಅನ್ನುತ್ತಾನೆ. ಇಡೀ ಕವನವೂ ಒಂದು ಬಗೆಯ ತೀವ್ರ, ಕರುಣಾಹೀನ ಹರ್ಷದಿಂದ ತುಂಬಿದೆ. ಸೋಲಿಗೊಳಗಾದವರನ್ನು ಕವಿ ಅಣಕಿಸುತ್ತಾನೆ. ಅವರು ಸೋತಿದ್ದಾರೆಂದು ಅವನಿಗೆ ಅಮಿತ ಆನಂದ. ರಾಜ ಮತ್ತವನ ಸಹೋದರ, ತಮ್ಮ ವೆಸೆಕ್ಸ್ ಪ್ರದೇಶಕ್ಕೆ ಮರಳುವುದರ ಕುರಿತು ಕವಿ ನಮೂದಿಸುತ್ತಾನೆ – ಟೆನ್ನಿಸನ್ ಹೇಳುವಂತೆ ಅವರು ಮರಳಿದ್ದು ಪಶ್ಚಿಮ ಸ್ಯಾಕ್ಸನ ಪ್ರದೇಶಕ್ಕೆ (ತಂತಮ್ಮ ಪಶ್ಚಿಮ ಸ್ಯಾಕ್ಸನ್ ಪ್ರದೇಶಕ್ಕೆ ಅವರು ಮರಳಿದರು, ಕದನ ಖುಷಿಯಲ್ಲಿ). ಆಮೇಲೆ, ಇಂಗ್ಲಂಡಿನ ಪುರಾತನ ಇತಿಹಾಸಕ್ಕೆ ಅವನು ಹೊರಳುತ್ತಾನೆ. ಹೊರ್ಸಾ, ಹೆನ್ಗಿಸ್ಟ್, ಜಟ್ಲಾಂಡ್ ಪ್ರದೇಶಗಳಿಂದ ಬಂದವರ ಕುರಿತು ಯೋಚಿಸುತ್ತಾನೆ. ಇದು ಒಂಥರಾ ಸೋಜಿಗದ ವಿಷಯ: ಮಧ್ಯಯುಗದಲ್ಲಿ ಬಹಳ ಜನರಿಗೆ ಅಷ್ಟು ಐತಿಹಾಸಿಕ ಪ್ರಜ್ನೆ ಇರಲಿಲ್ಲವೆಂದು ನನ್ನ ಅನಿಸಿಕೆ. ಹಾಗಾಗಿ, ಈ ಕವನ ಆಳದ ಭಾವನೆಗಳಲ್ಲಿ ಹೊಮ್ಮಿದ್ದು ಎಂದು ನಾವು ಕಲ್ಪಿಸಿಕೊಳ್ಳಬೇಕಾಗುತ್ತದೆ. ಉನ್ನತ ಕಾವ್ಯ ಸಾಲುಗಳ ಓಘ ಹರಿದು ಬಂದಂತೆ ಎಂದು ಅಂದುಕೊಳ್ಳ ಬೇಕಾಗುತ್ತದೆ.

ಟೆನ್ನಿಸನ್ನನ ಕವನಕ್ಕೆ ಬಂದರೆ, ನಾವದನ್ನು ಎಷ್ಟೇ ಮೆಚ್ಚಿದರೂ ಕೂಡ, ಆಧುನಿಕ ಕಾವ್ಯದ ಪ್ರವೀಣನಿಂದ ಹಳೆಯ ಆಂಗ್ಲ ಭಾಷೆಯಲ್ಲಿ ನಡೆಸಿದ ಯಶಸ್ವೀ ಪ್ರಯೋಗವೆಂದು ನಾವು ಅಂದುಕೊಳ್ಳುತ್ತೇವೆ; ಆದರೆ ಸಂಧರ್ಭ ಭಿನ್ನವಾದದ್ದು. ಅದಕ್ಕೆ, ಸಹಜವಾಗಿ, ಅನುವಾದಕನನ್ನು ದೂರಲಾಗದು. ರಾಯ್ ಕ್ಯಾಂಪಬೆಲ್ ಮತ್ತು ಜಾನ್ ಆಫ್ ಕ್ರಾಸ್-ನ ಸಂತನ ಸಂಧರ್ಭದಲ್ಲಿಯೂ ಹೀಗೇ ಆಗುತ್ತದೆ. ಸಾಹಿತ್ಯಿಕ ದೃಷ್ಟಿಯಿಂದ ಕ್ಯಾಂಪಬೆಲ್ಲನ ಸಾಲು ಸ್ಪ್ಯಾನಿಶ ಮೂಲಕೃತಿಯ ಸಾಲಿಗಿಂತ ಸೊಗಸೆನಿಸಬಹುದು. ಆದರೆ, ಈ ಮೂಲಕೃತಿಗಳ ಕುರಿತ ನಮ್ಮ ಎಣಿಕೆಯಲ್ಲಿ ಈ ಮೆಚ್ಚುಗೆಗೆ ಜಾಗವಿಲ್ಲ. ಜಾನ ಆಫ್ ಕ್ರಾಸನ ಸಂತನ ಬಗೆಗೆ ಹೇಳುವುದಾದರೆ, ಮನುಷ್ಯನ ಆತ್ಮ ಏರಬಹುದಾದ ಎತ್ತರವನ್ನು ಅವನು ಏರಿದ್ದ – ದೈವಿಕ ಆತ್ಮದ ಜೊತೆ ವಿಲೀನವಾಗುವ ಮಾನವ ಆತ್ಮ, ದೈವದ ಆತ್ಮದ ಜೊತೆ, ಪರಮಾತ್ಮನ ಜೊತೆ – ಅಂತಹ ಭಾವಪರವಶತೆಯ ಅನುಭವ ಅವನದು ಎಂದು ನಾವು ಅಂದುಕೊಳ್ಳುತ್ತೇವೆ. ಇಂತಹ ಅಭಿವ್ಯಕ್ತಿಸಲಾಗದಂತ ಅನುಭವ ಪಡೆದ ನಂತರ, ರೂಪಕಗಳ ಮುಖಾಂತರ ಹೇಗಾದರೂ ಆ ಅನುಭವವನ್ನು ಹಂಚಿಕೊಳ್ಳಬೇಕಾಗಿದೆ ಕವಿಗೆ. ಆಗ, ಕವಿಯು ಮಾನವ ತನ್ನ ಪರಮಾತ್ಮನ ಜೊತೆ ಒಂದಾಗುವುದನ್ನು ರೂಪಕಾತ್ಮಕವಾಗಿ ಹಂಚಿಕೊಳ್ಳಲು, ಲೈಂಗಿಕ ಪ್ರೇಮದ ರೂಪಕದ ಮೊರೆ ಹೋಗುತ್ತಾನೆ, ಅನೇಕ ಅನುಭಾವಿಗಳು ಮಾಡಿರುವಂತೆ. ಕವಿಯ ಶಬ್ದಗಳನ್ನೇ ನಾವು ಕೇಳುತ್ತಿದ್ದೇವೆ. ರಾಯ್ ಕ್ಯಾಂಪಬೆಲ್ಲನ ಅನುವಾದಕ್ಕೆ ಬರೋಣ. ನಾವೆಂದುಕೊಳ್ಳಬಹುದು, ಈ ಸ್ಕಾಟ್ಸಮನ್ ಒಳ್ಳೆಯ ಕೆಲಸ ಮಾಡಿದ್ದಾನೆ, ಎಂದು. ಆದರೂ ಇಲ್ಲೊಂದು ಭಿನ್ನತೆ ಇದೆ. ಅದೇನು ಎಂದರೆ, ಮೂಲಕೃತಿ ಮತ್ತು ಅನುವಾದಿತ ಕೃತಿಯ ನಡುವಿನ ಭಿನ್ನತೆ ಕೇವಲ ಕೃತಿಯ ಸ್ತರದ್ದಲ್ಲ. ಯಾವುದು ಮೂಲ, ಯಾವುದು ಅನುವಾದವೆಂದು ನಮಗೆ ಗೊತ್ತಿಲ್ಲದಿದ್ದರೆ, ಪ್ರಾಯಶಃ ನಾವು ಅವುಗಳನ್ನು ಹೋಲಿಸಬಹುದು. ಆದರೆ, ಹಾಗೆ ಮಾಡಲಾಗುವುದಿಲ್ಲ. ಅನುವಾದಕನ ಕೃತಿ ಯಾವಾಗಲೂ ಕೊಂಚ ಕಮ್ಮಿಯೇ ಎನ್ನುವುದು ವಾಡಿಕೆ, ನುಡಿಯ ಸ್ತರದಲ್ಲಿ ಮೂಲಕೃತಿಯಷ್ಟೇ ಸೊಗಸಾಗಿದ್ದರೂ ಕೂಡ.

ನಾವೀಗ ಇನ್ನೊಂದು ಸಮಸ್ಯೆಯತ್ತ ಹೊರಳೋಣ: ಅಕ್ಷರಶಃ ಅನುವಾದ. ನಾನು ’ಅಕ್ಷರಶಃ’ ಅನುವಾದ ಎಂದಾಗ, ವಿಶಾಲ ರೂಪಕವನ್ನು ಬಳಸುತ್ತಿದ್ದೇನೆ. ಯಾಕೆಂದರೆ, ಅನುವಾದವೊಂದು ಮೂಲಕೃತಿಯ ನುಡಿ ನುಡಿಗೂ ನಿಷ್ಠವಾಗಿರಲು ಸಾಧ್ಯವಿರದಿದ್ದಾಗ, ಪದಪದಕ್ಕೂ ನಿಷ್ಠವಾಗಿರಲು ಅಸಾಧ್ಯವೇ ಸೈ. ಹತ್ತೋಂಬತ್ತನೇ ಶತಮಾನದಲ್ಲಿ, ನಾರ್ಮನ್ ಎಂಬ ವಿಸ್ಮೃತಿಗೊಳಗಾಗಿರುವ ಗ್ರೀಕ ಪಂಡಿತನೊಬ್ಬ ಹೋಮರನ ಕಾವ್ಯದ ಅಕ್ಷರಶಃ ಅನುವಾದಕ್ಕೆ ಪ್ರಯತ್ನಿಸಿದ. ಅಲೆಕ್ಸಾಂಡರ ಪೋಪ ಮಾಡಿದ್ದ ಹೋಮರನ ಅನುವಾದದ ವಿರುದ್ಧ ಒಂದು ಅನುವಾದ ಪ್ರಕಟಿಸುವುದು ಅವನ ಉದ್ದೇಶವಾಗಿತ್ತು. ಅವನು “ಒದ್ದೆಯಲೆಗಳು”, “ವೈನಿನಂತ ಕಾಳ ಸಾಗರ” (“wet waves,” “wine-dark sea”) ಇಂತಹ ನುಡಿಗಟ್ಟುಗಳನ್ನು ಹುಟ್ಟಿಹಾಕಿದನು. ಇಂಗ್ಲೀಷ ಕವಿ, ವಿಮರ್ಷಕ ಮ್ಯಾಥ್ಯೂ ಅರ್ನಾಲ್ಡ್ ಹೋಮರನನ್ನು ಅನುವಾದಿಸುವ ಕುರಿತು ತನ್ನದೇ ವಾದಗಳನ್ನು ಹೊಂದಿದ್ದ. ನ್ಯೂಮನ್ನನ ಪುಸ್ತಕವನ್ನು ಅರ್ನಾಲ್ಡ್ ವಿಮರ್ಶಿಸಿದ, ಅದಕ್ಕೆ ನ್ಯೂಮನ್ ಉತ್ತರಿಸಿದ; ಅದಕ್ಕೆ ಅರ್ನಾಲ್ಡ್ ಪ್ರತ್ಯುತ್ತರಿಸಿದ. ಅರ್ನಾಲ್ಡನ ಪ್ರಭಂಧಗಳಲ್ಲಿ ಈ ಚುರುಕು ಮತ್ತು ಚತುರ ಚರ್ಚೆ ನಮಗೆ ಓದಲು ಸಿಗುತ್ತದೆ.

ಇಬ್ಬರೂ ಕೂಡ ತಂತಮ್ಮ ದೃಷ್ಟಿಯಿಂದ ಸಾಕಷ್ಟು ಚರ್ಚೆ ನಡೆಸಿದ್ದಾರೆ. ನ್ಯೂಮನ್ನನ ಪ್ರಕಾರ ಅಕ್ಷರಶಃ ಅನುವಾದ ಮೂಲಕ್ಕೆ ವಿಧೇಯ ಅನುವಾದದ ರೀತಿಯಾಗಿದೆ. ಮ್ಯಾಥ್ಯೂ ಅರ್ನಾಲ್ಡ್ ಹೋಮರನ ಕುರಿತಾಗಿಯೇ ತನ್ನ ವಾದದೊಂದಿಗೆ ಚರ್ಚೆಗಿಳಿಯುತ್ತಾನೆ. ಅವನ ಪ್ರಕಾರ ಹೋಮರನಲ್ಲಿ ಸ್ಪಷ್ಟತೆ, ಘನತೆ, ಸರಳತೆಗಳಂತಹ ಗುಣಗಳು ಪ್ರಧಾನವಾಗಿ ಕಾಣುತ್ತವೆ. ಅರ್ನಾಲ್ಡನ ಪ್ರಕಾರ ಅನುವಾದಕ ಈ ಬಗೆಯ ಮುಖ್ಯ ಗುಣಗಳನ್ನು ದರ್ಶಿಸುವಂತೆ ಕೃತಿಯನ್ನು ಅನುವಾದಿಸಬೇಕು. ಅರ್ನಾಲ್ಡನ ಪ್ರಕಾರ ಅಕ್ಷರಶಃ ಅನುವಾದ ಈ ಗುಣಗಳ ಬದಲಿಗೆ ಅಸಹಜತೆ, ಒಗಟುತನಗಳನ್ನು ದರ್ಶಿಸುತ್ತದೆ.

ಉದಾಹರಣೆಗೆ, ರೋಮನ್ ಭಾಷೆಗಳಲ್ಲಿ “It is cold” ಅನ್ನುವುದಿಲ್ಲ; ಬದಲಿಗೆ “It makes cold” ಅನ್ನುತ್ತಾರೆ. ಆದರೂ, ಅನುವಾದಿಸುವಾಗ “It makes cold” ಅನ್ನದಿರುವುದೇ ಉತ್ತಮ. ಇನ್ನೊಂದು ಉದಾಹರಣೆ: ಇಂಗ್ಲೀಷಿನ “Good morning” ಎಂಬ ಭಾವಕ್ಕೆ ಸ್ಪ್ಯಾನಿಶ್ ಭಾಷೆಯ ಸಮಾನ ಪದವೆಂದರೆ  “Good days” (“Buenos días”). ಇಂಗ್ಲೀಷಿನ “Good morning” ಪದವನ್ನು ಸ್ಪ್ಯಾನಿಶ್ ಭಾಷೆಗೆ ಅನುವಾದಿಸುವಾಗ ಅಕ್ಷರಶಃ “Buena mañana” ಎಂದು ಅನುವಾದಿಸಿದರೆ ಅದು ಅಸಹಜ.

Mathew Arnold- Courtesy - Poetry Foundation

Mathew Arnold- Courtesy – Poetry Foundation

ಮ್ಯಾಥ್ಯೂ ಅರ್ನಾಲ್ಡ್ ಹೇಳುವಂತೆ ಅಕ್ಷರಶಃ ಅನುವಾದದಲ್ಲಿ ತಪ್ಪು ಪ್ರಾಶಸ್ತ್ಯ ಹುಟ್ಟಿಕೊಳ್ಳುತ್ತದೆ. ಕ್ಯಾಪ್ಟನ್ ಬರ್ಟನ್ನನ ’ಅರೇಬಿಯನ್ ನೈಟ್ಸ್’ ಕೃತಿಯ ಅನುವಾದವನ್ನು ಅರ್ನಾಲ್ಡ್ ಕಂಡಿದ್ದನೋ ಇಲ್ಲವೋ ನನಗೆ ಗೊತ್ತಿಲ್ಲ; ತಡವಾಗಿ ಕಂಡಿರಲೂ ಬಹುದು. ಬರ್ಟನ್ನನು “ಕಿತಾಬ್ ಅಲಿಫ಼್ ಲೈಲಾ ವಾ ಲೈಲಾ” ಎನ್ನುವುದನ್ನು Book of the Thousand and One Nights   ಎನ್ನುವ ಬದಲಿಗೆ Book of the Thousand Nights and a Night ಎಂದು ಅನುವಾದಿಸುತ್ತಾನೆ. ಇದು ಅಕ್ಷರಶಃ ಅನುವಾದ. ಅರೇಬಿಕ್ ಮೂಲದ ಪದಗಳಿಗೆ ನಿಷ್ಠ ಅನುವಾದ. ಅರೇಬಿಕ್ ಭಾಷೆಯಲ್ಲಿ ಸಹಜವಿರುವ ನುಡಿಗಟ್ಟು ಇಂಗ್ಲೀಷ ಭಾಷೆಯಲ್ಲಿ ಅಸಹಜವಾಗಿ ನಮಗೆ ತೋರುತ್ತದೆ. ಮೂಲಕೃತಿಯಲ್ಲಿ ಈ ರೀತಿಯ ಅಸಹಜತೆಯೇನೂ ಇಲ್ಲವಲ್ಲ.

ಹೊಮರನ ಅನುವಾದಕರು ತಮ್ಮ ಪಕ್ಕ ಬೈಬಲ್ ಇಟ್ಟುಕೊಂಡಿರಲಿ ಎಂದು ಮ್ಯಾಥ್ಯೂ ಅರ್ನಾಲ್ಡ್ ಸೂಚಿಸುತ್ತಾನೆ. ಬೈಬಲ್ಲಿನ ಇಂಗ್ಲೀಷ ಅನುವಾದ ಹೋಮರನನ್ನು ಅನುವಾದಿಸಲು ಒಂದು ಬಗೆಯ ಮಾದರಿ ಎಂದು ಅವನ ವಾದ. ಆದರೂ, ಅರ್ನಾಲ್ಡ್ ತನ್ನ ಬೈಬಲ್ ಕೃತಿಯನ್ನು ಕೂಲಂಕಷ ಓದಿದರೆ, ಅದರಲ್ಲಿ ಹಲವಾರು ಅಕ್ಷರಶಃ ಅನುವಾದಗಳನ್ನು ಕಾಣುತ್ತಿದ್ದ ಮತ್ತು ಇಂಗ್ಲೀಷ್ ಬೈಬಲ್ಲಿನ ಸೊಗಸಿಗೆ ಈ ಅಕ್ಷರಶಃ ಅನುವಾದಗಳೂ ಕಾರಣ ಎಂದೂ ಸಹ ಮನಗಾಣುತ್ತಿದ್ದ.

ಉದಾಹರಣೆಗೆ, ಇಂಗ್ಲೀಷ ಬೈಬಲ್ಲಿನಲ್ಲಿರುವ ಒಂದು ನುಡಿಗಟ್ಟು ಎಂದರೆ “a tower of strength”. ಇದು ಲೂಥರನ ಜರ್ಮನ್ ಅನುವಾದದಲ್ಲಿರುವ “ein feste Burg” ನುಡಿಗಟ್ಟಿನ ಅನುವಾದ. ಮತ್ತೆ, “the song of songs” ಎಂಬ ಪ್ರಯೋಗವೂ ಕೂಡ ಆಸಕ್ತಿಕರವಾದದ್ದು. ನಾನು ಓದಿರುವ ಪ್ರಕಾರ ಹೀಬ್ರ್ಯೂ ಭಾಷೆಯಲ್ಲಿ – superlative –  ಅತ್ಯುಕೃಷ್ಟ ಅಭಿವ್ಯಕ್ತಿಗಳಿಲ್ಲವಾದ್ದರಿಂದ ಅವರು “the highest song” ಅಥವಾ “the best song” ಎಂಬ ಶಬ್ದಗಳ ಪ್ರಯೋಗ ಮಾಡಲಿಲ್ಲ. ಅವರು ಹೇಗೆ ಸಾಮ್ರಾಟನಿಗೆ “the king of kings” ಅನ್ನುತ್ತಿದ್ದರೋ, ಅಥವಾ ಅತ್ಯಂತ ಶುಭ್ರ ಚಂದಿರನಿಗೆ “the moon of moons” ಅನ್ನುತ್ತಿದ್ದರೋ, ಹಾಗೆಯೇ ಅತ್ಯಂತ ಉಚ್ಛ ಸ್ತರದ ರಚನೆಗೆ “the song of songs” ಎಂದಿದ್ದಾರೆ.

ಜರ್ಮನ್ ಭಾಷೆಯಲ್ಲಿ ಲೂಥರನು, ಚೆಲುವಾದ ಶಬ್ದಕ್ಕಾಗಿ ತಡಕಾಡದೇ, ಓದುಗರಿಗೆ ಸ್ಪಷ್ಟ ಅರ್ಥವಾಗಬೇಕು ಎಂದ ಉದ್ದೇಶ ಮಾತ್ರದಿಂದ ಇದನ್ನು “das hohe Lied” (ಉಚ್ಛ ಗೀತೆ) ಎಂದು ಅನುವಾದಿಸಿದ್ದಾನೆ. ಹೀಗೆ, ಇವೆರಡೂ ಅಕ್ಷರಶಃ ಅನುವಾದಗಳು ಸೊಗಸಾದ ನುಡಿಗಟ್ಟುಗಳಾಗಿ ನಮಗೆ ಲಭ್ಯವಾಗಿವೆ.

ನಿಜವಾಗಿ ಹೇಳಬೇಕೆಂದರೆ, ಅಕ್ಷರಶಃ ಅನುವಾದಗಳು, ಅರ್ನಾಲ್ಡ್ ನಂಬಿದಂತೆ, ಯಾವಾಗಲೂ ಒರಟು ಮತ್ತು ಅಸಹಜವಷ್ಟೇ ಆಗಿರುವುದಿಲ್ಲ, ಕೆಲಸಲ ಕೌತುಕಮಯಿ ಮತ್ತು ಸುಂದರವಾಗಿಯೂ ಇರಲು ಸಾಧ್ಯ. ಇದು ನಮಗೆಲ್ಲ ವೇದ್ಯವಾಗುವ ಸಂಗತಿ; ಅಕ್ಷರಶಃ ಅನುವಾದಿಸಿರುವ ಕವನವೊಂದರಲ್ಲಿ ನಾವು ವಿಚಿತ್ರವಾದುದನ್ನು ನಿರೀಕ್ಷಿಸುತ್ತೇವೆ, ಮತ್ತು ಅಂತಹುದು ಕಾಣದಿದ್ದರೆ ನಮಗೆ ನಿರಾಸೆಯಾಗುತ್ತದೆ.

ಈಗ ನಾವು ಇಂಗ್ಲೀಷಿಗೆ ಅನುವಾದಿಸಿರುವ ಅತ್ಯಂತ ಪ್ರಸಿದ್ಧ ಮತ್ತು ಒಳ್ಳೆಯ ಕೃತಿಯತ್ತ ನೋಡೋಣ. ಫಿಟ್ಜೆರಾಲ್ಡನು ಅನುವಾದಿಸಿರುವ ಓಮರ್ ಖಯ್ಯಾಮನ ರುಬಾಯತ್ ಕೃತಿಯ ಕುರಿತು ನಾನು ಹೇಳುತ್ತಿರುವುದು. ಈ ಕೃತಿಯ ಮೊದಲ ಚರಣ ಹೀಗಿದೆ:

Awake! For morning in the bowl of night

Has flung the stone that puts the stars to flight;

And, lo! the hunter of the East has caught

The Sultan’s turret in a daze of light.

 

(ಎಚ್ಚರ! ರಾತ್ರಿಯ ಬಟ್ಟಲಲ್ಲಿ ಮುಂಜಾನೆಯು

ತಾರೆಗಳನು ಓಡಲು ತೊಡಗಿಸುವ ಕಲ್ಲೆಸೆದಿದೆ

ಅದೋ, ಪೂರ್ವದ ಬೇಟೆಗಾರ ಹಿಡಿದಿದ್ದಾನೆ

ಬೆಳಕ ಪ್ರಭೆಯಲ್ಲಿ ಸುಲ್ತಾನನ ಬುರುಜು ಗೋಪುರಗಳನು)

ನಿಮಗೆ ತಿಳಿದಿರಬಹುದು, ಇಂಗ್ಲೀಷ್ ಕವಿಗಳಾದ ಸ್ವಿನ್ಬರ್ನ್ ಮತ್ತು ರೋಸೆಟ್ಟಿ, ಈ ಕೃತಿಯನ್ನು ಒಂದು ಪುಸ್ತಕದಂಗಡಿಯಲ್ಲಿ ಕಂಡುಕೊಂಡರು. ಇದರ ಸೊಗಸು ಅವರನ್ನು ಆಕರ್ಷಿಸಿತು. ಫಿಟ್ಜೆರಾಲ್ಡನ ಹೆಸರನ್ನು ಅವರು ಕೇಳಿಯೇ ಇರಲಿಲ್ಲ. ಬರವಣಿಗೆಯ ಕ್ಷೇತ್ರದಲ್ಲಿ ಪ್ರಸಿದ್ಧನಲ್ಲದ ಎಡ್ವರ್ಡ್ ಫಿಟ್ಜೆರಾಲ್ಡ್ ಆ ಮೊದಲು ಫರೀದ್ ಅಲ್-ದಿನ್ ಅತ್ತರನ ಕೃತಿ “Parliament of Birds” ಕೃತಿಯನ್ನು ಅನುವಾದಿಸಿದ್ದ. ಆದರೆ ಅದೇನೂ ಅಷ್ಟು ಚೆನ್ನಾಗಿರಲಿಲ್ಲ. ಆ ನಂತರ ಬಂದ ಈ ಕೃತಿ ಪ್ರಸಿದ್ದವೂ ಆಯಿತು, ಮತ್ತು ಈಗ ಅದನ್ನು ಒಂದು ಕ್ಲಾಸಿಕ್ ಎಂದು ಪರಿಗಣಿಸಲಾಗುತ್ತದೆ.

ರೋಸೆಟ್ಟಿ ಮತ್ತು ಸ್ವಿನ್ಬರ್ನ್ ಅವರು ಈ ಅನುವಾದದ ಸೊಗಸಿಗೆ ಮಾರುಹೋಗಿದ್ದು ನಿಜ, ಆದರೆ, ಫಿಟ್ಜೆರಾಲ್ಡ್ ಈ ಕೃತಿಯನ್ನು ಅನುವಾದವೆನ್ನದೇ ತನ್ನದೇ ಮೂಲಕೃತಿ ಎಂದು ಪ್ರಕಟಿಸಿದ್ದರೆ, (ಸ್ವಲ್ಪಮಟ್ಟಿಗೆ ಅದು ಅವನದೇ ಮೂಲಕೃತಿ ಎನ್ನಲೂಬಹುದು) ಅವರಿಗೆ ಹಿಡಿಸುತ್ತಿತ್ತೆ? ಅವರಿಗೆ ಅನಿಸುತ್ತಿತ್ತೇ ಫಿಟ್ಜೆರಾಲ್ಡ್  “Awake! For morning in the bowl of night / Has flung the stone that puts the stars to flight” ಎನ್ನುವ ಸಾಲು ಸ್ವೀಕಾರಾರ್ಹವೆಂದು? (ಪುಟದಂತ್ಯದ ಟಿಪ್ಪಣಿಯಲ್ಲಿ ಎರಡನೇ ಸಾಲಿನ ವಿವರಣೆ ನೀಡಲಾಗಿದೆ –  ಹೊರಡುತ್ತಿರುವ ಪ್ರವಾಸಿ ತಂಡವನ್ನು ಅದು ಸೂಚಿಸುತ್ತದೆಯೆಂದು). ಫಿಟ್ಜೆರಾಲ್ಡ್ ಇದು ತನ್ನದೇ ಕವನವೆಂದಿದ್ದರೆ “noose of light” ಮತ್ತು “sultan’s turret” ಈ ಬಗೆಯ ನುಡಿಗಟ್ಟುಗಳ ಬಳಕೆಯನ್ನು ಓದುಗರು ಸ್ವೀಕರಿಸುತ್ತಿದ್ದರೆ?

ನಾವೀಗ ಇನ್ನೊಂದು ಚರಣದ ಒಂದು ಸಾಲಿನ ಮೇಲೆ ದೃಷ್ಟಿ ಕೇಂದ್ರೀಕರಿಸೋಣ. ಆ ಚರಣ ಹೀಗಿದೆ:

Dreaming when dawn’s left hand was in the sky

I heard a voice within the tavern cry,

“Awake my little ones, and fill the cup

Before life’s liquor in its cup be dry.”

 

ಬೆಳಗಿನ ಎಡಗೈ ಬಾನಿನಲ್ಲಿರುವಾಗ ಕನಸುತ್ತಿದ್ದ ನಾನು

ಹೆಂಡದಂಗಡಿಯಲ್ಲೊಂದು ಧ್ವನಿಯ ಕೇಳಿದೆ

“ಎದ್ದೇಳಿ, ಚಿಕ್ಕವರೆ, ತುಂಬಿಕೊಳ್ಳಿರಿ ಬಟ್ಟಲು

ಬಾಳ ಬಟ್ಟಲಲ್ಲಿ ಜೀವನವೆಂಬ ಮದ್ಯ ಮುಗಿದುಹೋಗುವ ಮುನ್ನ”

ಈ ಚರಣದ ಮೊದಲ ಸಾಲನ್ನು ಗಮನಿಸೋಣ: “Dreaming when dawn’s left hand was in the sky.” ಇಲ್ಲಿನ ಮುಖ್ಯ ಶಬ್ದವೆಂದರೆ, ಸಹಜವಾಗಿಯೇ, “left.” ಬೇರೆ ಯಾವುದೇ ವಿಶೇಷಣವನ್ನು ಬಳಸಿದ್ದರೂ ಸಹ ಈ ಸಾಲು ಅರ್ಥಹೀನವಾಗುತ್ತಿತ್ತು. ಆದರೆ, “left hand” ಶಬ್ದ ವಿಚಿತ್ರವಾದುದೇನನ್ನೋ, ಅಶುಭವಾದುದೇನನ್ನೋ, ನಮ್ಮ ಕಲ್ಪನೆಗೆ ತರುತ್ತದೆ. ನಾವು “right” ಎನ್ನುವ ಪದವನ್ನು “righteousness” (ನ್ಯಾಯಬದ್ಧ) ಜತೆಗೆ, ನೇರವಾದುದರ ಜತೆಗೆ ಸಂಬಂಧಿಸಿದ್ದು ಎಂಬರ್ಥದಲ್ಲಿ ನೋಡಿದರೆ, ಇಲ್ಲಿರುವುದು ಅನಿಷ್ಟ ಸೂಚಕ ಪದ “left.” ಸ್ಪ್ಯಾನಿಷ ಭಾಷೆಯಲ್ಲಿ ಒಂದು ಅಂಬೋಣವಿದೆ: “ಎಡಗಡೆಗೆ ಎಸೆದಿದ್ದು ಹೃದಯ ಹೋಳು ಮಾಡಿತು” (“lanzada de modo izquierdo que atraviese el corazón”) ಕೆಡುಕಿನ ಕುರಿತು ಸೂಚಿಸುವಂತದ್ದು. ಹಾಗಾಗಿ, ನಮಗೆ “ಬೆಳಗಿನ ಎಡಗೈ” ಎಂದರೆ ಅಶುಭವೇನೋ ಇದೆಯೆನಿಸುತ್ತದೆ. ಪರ್ಶಿಯನ್ನನು ಬೆಳಗಿನ ಎಡಗೈ ಬಾನಿನಲ್ಲಿರುವಾಗ ಕನಸುತ್ತಿದ್ದನಾದರೆ, ಅವನ ಕನಸು ಯಾವುದೇ ಕ್ಷಣದಲ್ಲಿಯೂ ದುಃಸ್ವಪ್ನವಾದೀತು. ಅದೇನೇ ಇದ್ದರೂ, ಎಡ ಎಂಬ ಶಬ್ದ ಇಲ್ಲಿ ಅತ್ಯಂತ ಮುಖ್ಯ. ಕವನದ ಗೂಢತೆ, ಸೂಕ್ಷ್ಮತೆಯನ್ನು ಸೂಚಿಸುವಂತಹ ಶಬ್ದ. ಈ ಸಾಲನ್ನು ನಾವು ಒಪ್ಪಿಕೊಳ್ಳಲು ಕಾರಣ ಇದರ ಹಿಂದೆ ಓಮರ್ ಖಯ್ಯಾಮನ ಅದಾವುದೋ ಮೂಲ ನುಡಿಗಟ್ಟಿದೆ ಎಂದು ನಾವು ಭಾವಿಸುತ್ತೇವೆ ಎನ್ನುವುದು. ನನಗೆ ತಿಳಿದಿರುವಂತೆ, ಓಮರ ಖಯ್ಯಮನ ಮೂಲ ಕೃತಿಯಲ್ಲಿ ಫಿಟ್ಜೆರಾಲ್ಡನ ನುಡಿಗಟ್ಟನ್ನು ಹೋಲುವಂತದ್ದೇನೂ ಇಲ್ಲ. ಇದು ನಮ್ಮನ್ನು ಒಂದು ಕೌತುಕದ ಸಮಸ್ಯೆಯ ಎದುರು ನಿಲ್ಲಿಸುತ್ತದೆ: ಅಕ್ಷರಶಃ ಅನುವಾದ ಹುಟ್ಟುಹಾಕುವ ಸೊಗಸು.

ಅಕ್ಷರಶಃ ಅನುವಾದ ಮೊದಲಾದ ಬಗೆಯ ಕುರಿತು ನನಗೆ ಯಾವಾಗಲೂ ಕುತೂಹಲ. ಇತ್ತೀಚೆ, ಅಕ್ಷರಷಃ ಅನುವಾದವನ್ನು ಬಹಳ ಜನ ಇಷ್ಟಪಡುತ್ತಾರೆ ಮತ್ತು ಅದಕ್ಕೆ ಪ್ರಾಶಸ್ತ್ಯ ಕೊಡುತ್ತಾರೆ. ಹಿಂದಿನ ಕಾಲದಲ್ಲಿ ಇದೊಂದು ಬಗೆಯ ಅಪರಾಧವನ್ನಾಗಿ ಕಾಣಲಾಗುತ್ತಿತ್ತು. ಇದಕ್ಕಿಂತಲೂ ಹೆಚ್ಚು ಪ್ರಶಸ್ತವಾದುದನ್ನು ಅವರು ಬಯಸುತ್ತಿದ್ದರು. ಮೂಲದಷ್ಟೇ ದೇಶಭಾಷೆಗಳೂ ಕೂಡ ಮಹತ್ವದ ಕಾವ್ಯಗಳಿಗೆ ಸೂಕ್ತವೇ ಆಗಿದೆಯೆಂದು ಅವರೆಣಿಕೆಯಾಗಿತ್ತು. ಲ್ಯಾಟಿನ್ ಭಾಷೆಯ ಕವಿ ಲೂಕನ್ನನ ಕಾವ್ಯವನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸಿದ ಡಾನ್ ಹುವಾನ್ ಡಿ ಹೌರೆಗ್ವಿ ಕೂಡ ಬಹುಶಃ ಹಾಗೆ ಯೋಚಿಸಿದ್ದನೆಂದು ನನ್ನೆಣಿಕೆ. ನನಗನ್ನಿಸುವಂತೆ, ಅಲೆಕ್ಸಾಂಡರ್ ಪೋಪನ ಸಮಕಾಲೀನರು ಹೋಮರ ಮತ್ತು ಪೋಪನ ಕುರಿತಾಗಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಓದುಗರು, ಅದರಲ್ಲೂ ಗಂಭೀರ ಓದುಗರು, ಕಾವ್ಯದ ಕುರಿತಾಗಿಯಷ್ಟೇ ಯೋಚಿಸುತ್ತಿದ್ದರು. ಅವರ ಆಸಕ್ತಿ ಇಲಿಯಡ್ ಕುರಿತು ಮತ್ತು ಓಡಿಸ್ಸಿ ಕುರಿತಾಗಿತ್ತೇ ವಿನಃ ಕಿಂಚಿತ್ ಶಬ್ದಗಳಲ್ಲಿ ಅವರಿಗೆ ಆಸಕ್ತಿ ಇರಲಿಲ್ಲ. ಮಧ್ಯಯುಗದುದ್ದಕ್ಕೂ ಅನುವಾದವನ್ನು ಅಕ್ಷರಶಃ ಅನುವಾದದ ಬದಲು ಪುನರಚನೆಯೆಂದೇ ಅರ್ಥೈಸುವುದು ಸಾಮಾನ್ಯವಾಗಿತ್ತು. ತಾನು ಓದಿದ ಕೃತಿಯೊಂದನ್ನು ತನ್ನದಾಗಿಸಿಕೊಂಡು, ತನ್ನದೇ ಸಾಮರ್ಥ್ಯದ ಆಧಾರದ ಮೇಲೆ, ತನ್ನ ಭಾಷೆಯ ಸಾಧ್ಯತೆಗಳ ಚೌಕಟ್ಟಿನಲ್ಲಿ, ರಚಿಸುವುದು ಅಂದಿನ ಕ್ರಮವಾಗಿತ್ತು.

ಅನುವಾದಗಳು ಹೇಗೆ ಮೊದಲಾದವು? ಪಾಂಡಿತ್ಯದ ಕಾರಣದಿಂದಾಗಿ ಅನುವಾದಗಳು ಶುರುವಾಗಲಿಲ್ಲ; ಬದಲಿಗೆ, ಅನುವಾದದ ಹುಟ್ಟಿಗೆ ಧಾರ್ಮಿಕ ಹಿನ್ನೆಲೆಯಿದೆ. ಹೋಮರನು ಮಹಾನ್ ಕವಿ ಎಂದು ಜನರಿಗೆ ಗೊತ್ತಿದ್ದರೂ ಕೂಡ, ಅವನು ಮಾನವನಾಗಿದ್ದಿದ್ದರಿಂದ, ಅವನ ನುಡಿಗಳನ್ನು ಪುನರ್ರಚಿಸಬಹುದೆಂದು ಅವರು ನಂಬಿದ್ದರು. ಆದರೆ, ಬೈಬಲ್ಲಿನ ಅನುವಾದದ ಸಂಧರ್ಭದಲ್ಲಿ ಹಾಗಿರಲಿಲ್ಲ, ಯಾಕೆಂದರೆ ಬೈಬಲ್ಲು ದೇವರ ನುಡಿ ಎಂಬ ನಂಬಿಕೆ ಇದ್ದುದರಿಂದ. ಪರಮೇಶ್ವರನ ಅಮಿತ ಬುದ್ಧಿವಂತಿಕೆಯು ಬರವಣಿಗೆಯಲ್ಲಿ ತೊಡಗಿಕೊಂಡಾಗ ಯಾವುದೇ ನಗಣ್ಯ ಎನ್ನಬಹುದಾದ ಅಂಶಗಳನ್ನು ನಾವದರಲ್ಲಿ ನಿರೀಕ್ಷಿಸಲಾಗದು. ಪರಮೇಶ್ವರನು ಕೃತಿರಚನೆಯಲ್ಲಿ ತೊಡಗಿಕೊಂಡರೆ, ಆಗ ಪ್ರತಿ ಶಬ್ದ, ಪ್ರತಿ ಅಕ್ಷರ, ಪರಿಪೂರ್ಣ ವಿವೇಚನೆಯಿಂದ ಬರೆದುದೆಂದು ನಾವು ಅಂದುಕೊಳ್ಳಬೇಕಾಗುತ್ತದೆ. ಅಪರಿಮಿತ, ಅನಂತ, ಬುದ್ದಿಯುಳ್ಳ ಪರಮಾತ್ಮನು ರಚಿಸಿದ ಕೃತಿಯಲ್ಲಿ ಬದಲಾವಣೆ ತರುವುದನ್ನು ಅಧಾರ್ಮಿಕವೆಂದು ಬಗೆಯಬೇಕಾಗುತ್ತದೆ.

Courtesy: The Literary Hub

Courtesy: The Literary Hub

ಹೀಗೆ, ಅಕ್ಷರಷಃ ಅನುವಾದದ ಕಲ್ಪನೆಯ ಮೂಲ ಇರುವುದು ಬೈಬಲ್ಲಿನ ಅನುವಾದಗಳಲ್ಲಿ. ಇದು ನನ್ನೆಣಿಕೆ, ಇದು ತಪ್ಪಾಗಿದ್ದರೆ, ವಿದ್ವಾಂಸರು ನನ್ನನ್ನು ತಿದ್ದಿಯಾರು ಎಂದು ನಂಬಿದ್ದೇನೆ. ಬೈಬಲ್ಲಿನ ಒಳ್ಳೊಳ್ಳೆಯ ಅನುವಾದಗಳಾದಂತೆ ಜನರು ಅಕ್ಷರಷಃ ಅನುವಾದ ಹೊಮ್ಮಿಸುವ ಭಿನ್ನ ಬಗೆಯ ಅಭಿವ್ಯಕ್ತಿಗಳಲ್ಲಿ ಒಂದು ಬಗೆಯ ಸೊಗಸಿದೆ ಎಂದು ಕಂಡು ಕೊಂಡರು. ಅಕ್ಷರಷಃ ಅನುವಾದದಲ್ಲಿ ಯಾವಾಗಲೂ ಒಂದು ಹೊಸತನ, ಅನಿರೀಕ್ಷಿತ ಆಶ್ಚರ್ಯಗಳು ಕಾಣಬರುತ್ತವಾದ್ದರಿಂದ ಈಗೀಗ ಎಲ್ಲರೂ ಅಕ್ಷರಷಃ ಅನುವಾದವನ್ನು ಬಯಸುತ್ತಾರೆ. ನಿಜವಾಗಿ, ಮೂಲಕೃತಿಯ ಅವಶ್ಯಕತೆಯೇ ಇಲ್ಲವೆಂದೂ ಕೂಡ ಹೇಳಬಹುದು ಎನಿಸುತ್ತದೆ. ಅನುವಾದವನ್ನು ತನ್ನೊಳಗೆ ತಾನು ಸಂಪೂರ್ಣವೆಂದು ನೋಡುವ ದಿನಗಳೂ ಬಂದಾವು. ಈ ಸಂಧರ್ಭದಲ್ಲಿ, ಎಲಿಜಬೆಥ್ ಬ್ಯಾರೆಟ್ ಬ್ರೌನಿಂಗಳ Sonnets from the Portuguese ನೆನಪಿಸಿಕೊಳ್ಳಬಹುದು.

ಕೆಲವೊಮ್ಮೆ ನಾನು ನವೀನ ರೂಪಕಗಳನ್ನು ಬಳಸಿದ್ದಿದೆ, ಆದರೆ ಅದು ನನ್ನದೆಂದರೆ ಯಾರೂ ಒಪ್ಪಿಕೊಳ್ಳಲಾರರು, (ನಾನು ಸಮಕಾಲೀನ ಮಾತ್ರನಲ್ಲವೇ), ಆದ್ದರಿಂದ ನಾನದನ್ನು ಯಾವುದೋ ಕೇಳಿಲ್ಲದ ಪರ್ಶಿಯಾದ ಅಥವಾ ನಾರ್ಸನ ಬರಹಗಾರನದೆಂದು ಹೇಳಿದ್ದಿದೆ. ಆಗ, ನನ್ನ ಸ್ನೇಹಿತರು ಮೆಚ್ಚಿಗೆಯ ಮಾತನ್ನಾಡಿದ್ದಾರೆ. ನಾನು ಅವರಿಗೆ ಎಂದಿಗೂ ಅದು ನಾನೇ ಹುಟ್ಟುಹಾಕಿದ ರೂಪಕವೆಂದು ಹೇಳಹೋಗಿಲ್ಲ. ಎಷ್ಟೆಂದರೂ ಪರ್ಶಿಯಾದ ಅಥವ ನಾರ್ಸನ ಕವಿಗಳು ಅಂತಹ ಅಥವಾ ಅದಕ್ಕಿಂತ ಉತ್ತಮ ರೂಪಕಗಳನ್ನು ಹುಟ್ಟುಹಾಕಿರಬಹುದಲ್ಲವೇ!

ಹೀಗೆ, ನಾನು ಮೊದಲಲ್ಲಿ ಹೇಳಿದ ಮಾತಿಗೆ ನಾವೀಗ ಬಂದು ಮುಟ್ಟುತ್ತೇವೆ: ಅನುವಾದವನ್ನು ಶಬ್ದಗಳ ಆಧಾರದ ಮೇಲೆ ಅಳೆಯಬೇಕು, ಆದರೆ ಹಾಗೆ ಅಳೆಯಲಾಗುವುದಿಲ್ಲ. ಉದಾಹರಣೆಗೆ, ಬಾದಿಲೇರನ Fleurs du mal ಮತ್ತು ಸ್ಟೀಫನ್ ಜಾರ್ಜನ Blumen des Böse ಗಮನಿಸಬೇಕು. ಇಬ್ಬರಲ್ಲಿ ಬಾದಿಲೇರ ಖಂಡಿತವಾಗಿ ಶ್ರೇಷ್ಠ ಕವಿ. ಆದರೆ, ಸ್ಟೀಫನ್ ಜಾರ್ಜ ಹೆಚ್ಚು ಚತುರ ಕುಶಲಕರ್ಮಿ. ಸಾಲುಗಳ ಸ್ತರದಲ್ಲಿ ಅವರನ್ನು ಹೋಲಿಸಹೋದರೆ ನಮಗೆ ಸ್ಟೀಫನ್ ಜಾರ್ಜನ ಅನುವಾದ ಹೆಚ್ಚು ಹಿಡಿಸುವುದರಲ್ಲಿ ಸಂಶಯವಿಲ್ಲ. ಆದರೆ, ಇದರಿಂದ ಸ್ಟೀಫನ್ ಜಾರ್ಜನಿಗೆ ಏನೂ ಉಪಯೋಗವಿಲ್ಲ. ಏಕೆಂದರೆ, ಬಾದಿಲೇರನ ಕಾವ್ಯದಲ್ಲಿ ಆಸಕ್ತಿ ಇರುವವರಿಗೆ ಈ ಸಾಲುಗಳು ಬಾದಿಲೇರನವು. ಸ್ಟೀಫನ್ ಜಾರ್ಜನನ್ನು ನಾವು ಬಾದಿಲೇರನನ್ನು ಜರ್ಮನ್ ಭಾಷೆಗೆ ಅನುವಾದಿಸಿದ ಇಪ್ಪತ್ತನೇ ಶತಮಾನದ ಕವಿ ಎಂದು ಮಾತ್ರ ಕಾಣುತ್ತೇವೆ.

ನಾನು ವರ್ತಮಾನದ ಕುರಿತು ಮಾತನಾಡಿದ್ದೇನೆ. ನಾವು ಐತಿಹಾಸಿಕ ಪ್ರಜ್ನೆಯಡಿಯಲ್ಲಿ ನಲುಗಿ ಹೋಗಿದ್ದೇವೆಯೆಂದು ನನ್ನ ಅನಿಸಿಕೆ. ಪುರಾತನ ಕೃತಿಯೊಂದನ್ನು ಮಧ್ಯಯುಗದ, ಅಥವಾ ರಿನೆಸಾನ್ ಕಾಲದ ಅಥವಾ ಹದಿನೆಂಟನೇ ಶತಮಾನದ ಜನರಂತೆ ನೋಡುವುದು ನಮಗೆ ಅಸಾಧ್ಯ. ನಾವು ಹಿನ್ನೆಲೆಯ ಕುರಿತಾಗಿ ತುಂಬಾ ಚಿಂತಿಸುತ್ತೇವೆ: ನಮಗೆ ಹೋಮರ ಯಾಕೆ “wine-dark sea” ಹೇಳಿದನೆಂದು ಪರೀಕ್ಷಿಸ ಬೇಕಾಗುತ್ತದೆ. ನನಗನ್ನಿಸುವ ಪ್ರಕಾರ ಮುಂದೆ ಜನರು ಇತಿಹಾಸದ ಕುರಿತು ಇಷ್ಟು ಚಿಂತಿಸದೇ ಇರುವ ಕಾಲ ಬರಲಿದೆ. ಅಂತಹ ಕಾಲದಲ್ಲಿ, ಜನರು ಸೌಂದರ್ಯದ ಹಿನ್ನೆಲೆ, ಸಂಧರ್ಭಗಳ ಕುರಿತು ಯೋಚಿಸುವ ಬದಲು, ಸೌಂದರ್ಯದ ಬಗೆಗೆಯೇ ಹೆಚ್ಚು ಗಮನ ಕೊಡುತ್ತಾರೆ. ಪ್ರಾಯಶಃ, ಕವಿಗಳ ಜೀವನಚರಿತ್ರೆಯ ಕುರಿತು ಕೂಡ ಗಮನ ಕೊಡಲಿಕ್ಕಿಲ್ಲ. ಕೆಲವು ದೇಶಗಳಲ್ಲಿ ಜನರು ಹೀಗೆಯೇ ಯೋಚಿಸುತ್ತಾರೆನ್ನುವುದು ಯಾವಾಗ ನಮ್ಮ ಗಮನಕ್ಕೆ ಬರುವುದೋ, ಆಗ ಇದು ಒಳ್ಳೆಯದೇ ಎಂದು ನಮಗೆ ಹೊಳೆಯುತ್ತದೆ. ಉದಾಹರಣೆಗೆ, ಭಾರತದಲ್ಲಿ ಜನರಿಗೆ ಐತಿಹಾಸಿಕ ಪ್ರಜ್ನೆ ಇಲ್ಲವೆಂದು ನನಗನ್ನಿಸುತ್ತದೆ. ಭಾರತೀಯ ತತ್ವಶಾಸ್ತ್ರದ ಕುರಿತು ಬರೆದ ಐರೋಪ್ಯರನ್ನು ಮತ್ತೆ ಮತ್ತೆ ಚುಚ್ಚುವ ಮುಳ್ಳು ಏನೆಂದರೆ, ಭಾರತೀಯರು ಎಲ್ಲ ತತ್ವಶಾಸ್ತ್ರವನ್ನೂ ಕೂಡ ಸಮಕಾಲೀನವೆಂದು ಭಾವಿಸುವ ರೀತಿ. ಅಂದರೆ, ಅವರಿಗೆ ಸಮಸ್ಯೆಯ ಕುರಿತಾಗಿಯೇ ಹೆಚ್ಚು ಆಸಕ್ತಿ, ಅದರ ಹಿನ್ನೆಲೆಯ ಅಥವಾ ಐತಿಹಾಸಿಕ ವಾಸ್ತವಕ್ಕಿಂತ. ಯಾರು ಗುರು, ಯಾರು ಶಿಷ್ಯ, ಯಾರ ಪ್ರಭಾವ ಯಾರ ಮೇಲಿದೆ ಇತ್ಯಾದಿ ವಿವರಗಳಲ್ಲಿ ಅವರಿಗೆ ಆಸಕ್ತಿಯಿಲ್ಲ. ಲೋಕ ಎದುರಿಗಿಡುವ ಒಗಟಿನ ಕುರಿತು ಅವರಿಗೆ ಆಸಕ್ತಿ. ಮುಂದಿನ ದಿನಗಳಲ್ಲಿ ಜನರು ಸೌಂದರ್ಯದ ಸಂಧರ್ಭದ ಬದಲು, ಸೌಂದರ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಲಿದ್ದಾರೆ, ಮತ್ತು ಅಂತಹ ದಿನಗಳು ಬೇಗ ಬರಲಿವೆ ಎಂದು ನನ್ನ ನಂಬಿಕೆ. ಆಗ, ನಮ್ಮಲ್ಲಿ ಚಾಪಮನ್ನನ ಹೋಮರನಷ್ಟು, ಉರ್ಕಹಾರ್ಟನ ರಬೇಲಿಯಾಸನಷ್ಟು, ಪೋಪನ ಓಡಿಸ್ಸಿಯಷ್ಟು ಸುಂದರ ಅನುವಾದಗಳು ಬರುತ್ತವೆ. ಅಂತಹ ಪರಿಸ್ಥಿತಿಯನ್ನು ನಾವು ತೀವ್ರವಾಗಿ ಬಯಸುವುದು ಅಪೇಕ್ಷಣೀಯ.

… ಮುಂದುವರೆಯುವುದು


 

ಕಾವ್ಯ ಎಂಬ ಒಗಟು:

ಭಾಗ ೧: https://ruthumana.com/2020/08/24/borges-craft-of_verses-riddles-of-poetry-1/

ಭಾಗ ೨: https://ruthumana.com/2020/09/04/borges-craft-of_verses-riddles-of-poetry-2/

ರೂಪಕ:

ಭಾಗ ೧: https://ruthumana.com/2020/10/18/borges-craft-of_verses-the-metaphor-1/

ಭಾಗ ೨: https://ruthumana.com/2020/12/31/borges-craft-of_verses-the-metaphor-2/

ಕಥೆಯ ನಿರೂಪಣೆ:

ಪೂರ್ಣ ಭಾಗ: https://ruthumana.com/2021/05/11/borges-craft-of_verses-the-narrating_a_story/

One comment to “ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೪: ಪದ-ನಾದ ಮತ್ತು ಅನುವಾದ”
  1. Pingback: ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – 5: ವಿಚಾರ ಮತ್ತು ಕಾವ್ಯ – ಋತುಮಾನ

ಪ್ರತಿಕ್ರಿಯಿಸಿ