ಪೆಗಾಸಸ್ ಪ್ರಾಜೆಕ್ಟ್ : ಗೂಡಚಾರಿ ತಂತ್ರಾಂಶ ನಿಮ್ಮ ಸುಖ ನಿದ್ದೆಗೆ ಕಾರಣವೇ?

ಪೆಗಾಸಸ್ ಕುತಂತ್ರಾಂಶ ಬಳಸಿ ದೇಶದ ಪ್ರಮುಖ ಪತ್ರಕರ್ತರು, ಸಾಮಾಜಿಕ ಹೋರಾಟಗಾರರ ಮೇಲೆ ಬೇಹುಗಾರಿಕೆ ನಡೆಸಿವ ಎಂಬ ತನಿಖಾ ವರದಿಗಳು ಕಳೆದ ವಾರ ಎಲ್ಲೆಡೆ ತಲ್ಲಣ ಮೂಡಿಸಿದವು . ಇದನ್ನು ಭಾರತವೂ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಬಳಸಲಾಗಿದೆ ಎಂದು ೧೬ ಸಂಸ್ಥೆಗಳು ಒಟ್ಟಿಗೆ ಸೇರಿ ನಡೆಸಿರುವ ತನಿಖಾ ವರದಿಗಳು ಹೇಳುತ್ತಿವೆ . ಅಧಿಕೃತ ಚುನಾಯಿತ ಸರ್ಕಾರಗಳಿಗೆ ಹೊರತಾಗಿ ಉಳಿದವರಿಗೆ ತಾವು ಈ ಕುತಂತ್ರಾಂಶವನ್ನು ಮಾರುವುದಿಲ್ಲ ಎಂದು ತಂತ್ರಾಂಶ ತಯಾರಿಕಾ ಸಂಸ್ಥೆಯು ನೀಡಿದ್ದ ಹೇಳಿಕೆ ಸರ್ಕಾರವನ್ನೇ ಕಟಕಟೆಯಲ್ಲಿ ನಿಲ್ಲಿಸಿದೆ . ಚಲನಶೀಲ ಪ್ರಜಾಸ್ತತೆಗೆ ಮಾರಕವಾಗಿರುವ ಇಂತಹ ವಿಷಯಗಳ ಕುರಿತು ನಾಗರಿಕರಿಗೆ ಹೆಚ್ಚಿನ ಅರಿವು ಅಗತ್ಯ. ಹಾಗಿದ್ದಲ್ಲಿ ಈ ಗೂಢಾಚಾರ ತಂತ್ರಾಶ ಏನು ? ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ .

 

ಕಳೆದ ಕೆಲವು ದಿನಗಳಿಂದ ನಾವು ಪೆಗಾಸಸ್ ಸ್ಪೈವೇರ್ ಬಗ್ಗೆ ಸಾಕಷ್ಟು ಕೇಳುತ್ತಾ ಇದ್ದೇವೆ. ಸ್ಪೈವೇರ್ ಎಂಬುದನ್ನು ಕನ್ನಡದಲ್ಲಿ ಗೂಢಚಾರ ತಂತ್ರಾಂಶ (ಸಾಫ್ಟ್ವೇರ್) ಎನ್ನಬಹುದು. 

ಫ್ರಾನ್ಸ್ ನಂತಹ ಮುಂದುವರಿದ ಪ್ರಜಾಪ್ರಭುತ್ವ, ನಮ್ಮ ದೇಶದ ತರದ ದೊಡ್ಡ ಪ್ರಜಾಪ್ರಭುತ್ವಗಳು ಸೇರಿದಂತೆ ಇತರೆ ಹಲವು ಸರ್ವಾಧಿಕಾರ ಹೊಂದಿರುವ ದೇಶಗಳಲ್ಲಿ ಇದು ಮಾನವ ಹಕ್ಕುಗಳ ಉಲ್ಲಂಘನೆ ಮಾಡಲು ಬಳಕೆ ಆಗುತ್ತಿದೆ ಎಂಬ ದೊಡ್ಡ ಆರೋಪ ಇದರ ಮೇಲೆ ಈಗ ಬಂದಿದೆ. ಈ ಆರೋಪ ಕಳೆದ ಆರು ವರ್ಷಗಳಿಂದ ಪೆಗಾಸಸ್ ತಂತ್ರಾಂಶ ಮೇಲೆ ಇರುವುದೇ ಅಲ್ಲದೆ ಇಂದು ಈ ತಂತ್ರಾಂಶ ಬಳಕೆ ಬಹಳ ದೇಶಗಳಿಗೆ ಹಾಗೂ ನಮ್ಮ ದೇಶಕ್ಕೆ ಕೂಡ ಬಂದದ್ದು ಕಳವಳ ಮೂಡಿಸುವ ಸುದ್ದಿ ಆಗಿದೆ. 

ವಿವಾದ ಶುರುವಾದ ಬಹಳ ದಿನಗಳ ನಂತರ ಇದರ ತಯಾರಕರಾದ ಇಸ್ರೇಲ್ ನ NSO Group ಹೇಳಿಕೆ ನೀಡಿ ನಮ್ಮ ತಂತ್ರಾಂಶ ವಿಶ್ವದ ಲಕ್ಷಾಂತರ ಜನರ ಸುಖ ನಿದ್ದೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ ನಿಮಗೆ ಅಚ್ಚರಿ ಆಗಬಹುದು. ಅದು ಹೇಗೆ ಇದು ಕೆಲವು ಜನರಲ್ಲಿ ಕಳವಳ ಮೂಡಿಸಿದೆ ಹಾಗೂ ಯಾಕೆ ಎಂದು. 

ಇಲ್ಲಿ ಎರಡೂ ಸತ್ಯಗಳು ಇವೆ. ಅದನ್ನು ಅರ್ಥ ಮಾಡಿಕೊಳ್ಳಲು ಮೊದಲು ಒಂದಷ್ಟು ಪದಗಳ ಅರ್ಥ ಮಾಡಿಕೊಳ್ಳೋಣ.

ಝೀರೋ ಡೇ ಲೋಪ/ದೌರ್ಬಲ್ಯ

ನೀವು ಒಂದು ತಂತ್ರಾಂಶ ಬಳಸುತ್ತಾ ಇದೀರಿ. ಅದರಲ್ಲಿ ಸಾಕಷ್ಟು ಉತ್ತಮ ಗುಣಮಟ್ಟದ ಭದ್ರತೆ ಇರುತ್ತದೆ. ಇಲ್ಲವಾದಲ್ಲಿ ತಂತ್ರಾಂಶ ತಯಾರಕರು ಬಳಕೆದಾರರಿಗೆ ಹಾನಿಯಾದಾಗ  ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಆದ್ದರಿಂದ ಅವರು ಭದ್ರತೆಯ ಕಡೆಗೆ ದೊಡ್ಡ ಗಮನ ಹರಿಸಿ ಅದನ್ನು ತಯಾರು ಮಾಡಿರುತ್ತಾರೆ. ಆದರೆ ಈ ಎಲ್ಲಾ ಪ್ರಯತ್ನಗಳ ಮೀರಿ ಅದರಲ್ಲಿ ಒಂದು ಲೋಪವಿದೆ. ಅದನ್ನು ತಯಾರಕರ ಗಮನಕ್ಕೆ ತಂದರೆ ಸರಿ ಮಾಡಬಲ್ಲರು. ಸರಿ ಮಾಡಿ ನಿಮಗೆ ಆ್ಯಪ್ ಅಪ್ಡೇಟ್ ಮಾಡಲು ಕೇಳುವರು. ಅಕಸ್ಮಾತ್ ಈ ಲೋಪ/ದೌರ್ಬಲ್ಯ ತಯಾರಕರಿಗೆ ಗೊತ್ತಾಗದೆ ಹೋದರೆ ಏನಾಗುತ್ತದೆ? ಆಗ ಅದನ್ನು ಸರಿ ಪಡಿಸಲು ಅವರಿಗೆ ಅದು ಕಾಣಿಸುವ, ಹಾನಿ ಮಾಡುವವರೆಗೆ ಕಾಯಬೇಕಾಗುತ್ತದೆ!. ಈ ರೀತಿ ಕಂಪನಿಯ ಹಾಗೂ ಬಳಸುವ ಜನರ ಇಬ್ಬರ ಅರಿವಿಗೂ ಬಾರದ ಆ ಲೋಪ ಈಗ ಕಿಡಿಗೇಡಿ, ಹಾನಿಕರ ಜನರ ಕೈಯಲ್ಲಿ ಹೋಗಬಹುದು. ಹಾಗೆ ಹೋಗಿ ಅದು ಬಳಕೆ ಆದಾಗ ಅದನ್ನು ಸರಿ ಮಾಡಲು ಕಂಪನಿಗೆ ಕೇವಲ ಸೊನ್ನೆ ದಿನಗಳು ಇರುತ್ತವೆ ಎಂದು ಈ ಪದದ ಅರ್ಥ. ಅಂದರೆ ಆಗಲೇ ಅಸ್ತ್ರವಾಗಿ ಬಳಕೆ ಆಗಿರುವ ಅದರ ಹಾನಿಯ ತಡೆಯಲು, ಅಪ್ಡೇಟ್ ಕೊಡಲು ಯಾವುದೇ ಸಮಯ ಇಲ್ಲವೇ ಇಲ್ಲ. 

ಒನ್ ಕ್ಲಿಕ್/ಝೀರೋ ಕ್ಲಿಕ್

ನೀವು ಈ ಸ್ಪೈವೇರ್ ನಿಂದ ಸೋಂಕಿತರಾಗಲು ಎಷ್ಟು ಕ್ಲಿಕ್ ಮಾಡ್ಬೇಕು ಎಂದು ಇದು ಸೂಚಿಸುತ್ತದೆ. ಯಾವುದೇ ಸ್ಪೈವೇರ್ ಅನ್ನು ಮೊದಲ ಬಾರಿಗೆ ನೀವೇ ಹಾಕಬೇಕು. ಇಲ್ಲವೇ ನಿಮ್ಮ ಫೋನ್ ಅದನ್ನು ತಾನಾಗಿ ಹಾಕಬೇಕು. ಒನ್ ಕ್ಲಿಕ್ ನಲ್ಲಿ ಮನುಷ್ಯರ ಹಸ್ತಕ್ಷೇಪ ಇದ್ದು ಕೆಲವರಿಗೆ ಗೊತ್ತಾಗುತ್ತದೆ. ಆದ್ರೆ ಝೀರೋ ಕ್ಲಿಕ್ ನಲ್ಲಿ ಅದು ಇಲ್ಲದೆ ಕೇವಲ ನಿಮ್ಮ ಫೋನ್ ತಾನೇ ತೆಗೆದುಕೊಳ್ಳುವ ಆಕ್ಷನ್ ಇರುತ್ತದೆ. ಆದ್ದರಿಂದ ನಿಮ್ಮ ಅರಿವಿಗೆ ಬಾರದೇ ಸ್ಪೈವೇರ್ ಇನ್ಸ್ಟಾಲ್ ಆಗುತ್ತದೆ.

ಅಟ್ಯಾಕ್ ವೆಕ್ಟರ್ಸ್ ಅಥವಾ ದಾಳಿಯ ದಾರಿಗಳು

ಯಾವುದೇ ಸ್ಪೈವೇರ್ ನಿಮ್ಮ ಫೋನ್ ಗೆ ಬರಲು ಮೇಲಿನ ಒನ್ ಕ್ಲಿಕ್ ಅಥವಾ ಝೀರೋ ಕ್ಲಿಕ್ ಅಕ್ಷನ್ ಕಾರಣ ಆಗುತ್ತದೆ. ಅವುಗಳಲ್ಲಿ ಮೇಲೆ ಹೇಳಿದ ಹಾಗೆ ಮನುಷ್ಯರು ಮೂಲಕ ಇನ್ಸ್ಟಾಲ್ ಮಾಡುವ ಅವಶ್ಯಕತೆ ಇದ್ದಲ್ಲಿ ಅದು ಬಹುತೇಕ ಒನ್ ಕ್ಲಿಕ್ ಆಗಿರುತ್ತದೆ. ನಿಮ್ಮ ಎಸ್ಎಂಎಸ್, ವಾಟ್ಸಪ್ ಎಲ್ಲಿಯೇ ಆಗಲಿ ಒಂದು ವೆಬ್ಸೈಟ್ ಲಿಂಕ್ ಇರುವ ಟೆಕ್ಸ್ಟ್ ಮೆಸೇಜ್ ನಿಮಗೆ ಬರುತ್ತದೆ. ನೀವು ಅಲ್ಲಿರುವ ಲಿಂಕ್ ಕ್ಲಿಕ್ ಮಾಡಿದರೆ ಆ ಅಟ್ಯಾಕ್ ಮಾಡ ಬಯಸುವ ಜನರ ವೆಬ್ಸೈಟ್ ಗೆ ಕನೆಕ್ಟ್ ಆಗುತ್ತದೆ. ನಿಮ್ಮ ಬ್ರೌಸರ್ ಕಳಿಸುವ ಮಾಹಿತಿ ಆಧಾರದ ಮೇಲೆ ನಿಮ್ಮ ಫೋನ್ ಅಲ್ಲಿ ಸ್ಪೈವೇರ್ ಹಾಕಲು ಬೇಕಾದ ಲೋಪ ಇದ್ದಲ್ಲಿ ಸ್ಪೈವೇರ್ ನಿಮಗೆ ಅರಿವಿಲ್ಲದೆ ಡೌನ್ಲೋಡ್ ಆಗುವುದೇ ಅಲ್ಲದೆ  ಇನ್ಸ್ಟಾಲ್ ಆಗುತ್ತದೆ. ಅದು ಒನ್ ಕ್ಲಿಕ್ ಮಾದರಿ. ಹಾಗೆ ಇತರೆ ದಾರಿಗಳು ಇವೆ. ವಾಟ್ಸಪ್ ಅಥವಾ ಸಾಮಾನ್ಯ ಕಾಲ್ ಬರಬಹುದು. ಇಲ್ಲವೇ ಕ್ಲಿಕ್ ಮಾಡದೇ ಇನ್ಸ್ಟಾಲ್ ಆಗುವ SMS ಬರಬಹುದು. ಅವೆಲ್ಲ ಮೇಲೆ ಹೇಳಿದ ಝೀರೋ ಕ್ಲಿಕ್ ಮಾದರಿ. 

ಈ ಎಲ್ಲಾ ದಾರಿಗಳು ಏನಿವೆ, SMS, ಕಾಲ್ ಎಲ್ಲವೂ ದಾಳಿ ಮಾಡಲು ಅನುವು ಮಾಡಿಕೊಡುವ ದಾರಿಗಳು ಅಥವಾ ಅಟ್ಯಾಕ್ ವೆಕ್ಟರ್ ಗಳು ಎನ್ನಲಾಗುತ್ತದೆ.  

ಒಮ್ಮೆ ನಿಮ್ಮ ಫೋನ್ ಗೆ ಬಂದು ಕೂರುವ ಈ ಸ್ಪೈವೇರ್ ನಿಮ್ಮ ಆಪರೇಟಿಂಗ್ ಸಿಸ್ಟಮ್ ನ ಮೂಲ ತಂತ್ರಾಂಶವನ್ನು ತಿರುಚಿ ತನ್ನನ್ನು ಯಾರೂ ಇದು ಸ್ಪೈವೇರ್ ಎಂದು ಗೊತ್ತಾಗದ ಹಾಗೆ ಮಾಡಿಕೊಳ್ಳುತ್ತದೆ. ನಿಮ್ಮ ಮಾಹಿತಿ ಸಂಗ್ರಹಿಸಿ ಆಗಾಗ ಕಳಿಸಲು ಆರಂಭ ಮಾಡುತ್ತದೆ. ಇದು ಹಿನ್ನೆಲೆಯಲ್ಲಿ ಕಳಿಸುತ್ತದೆ. ಇಲ್ಲವೇ ಯಾವಾಗ ನಿಮ್ಮ ಫೋನ್ ಬಳಕೆಯಲ್ಲಿ ಇಲ್ಲದೆ ಸ್ಕ್ರೀನ್ ಅಫ್ ಆಗಿದೆ ಆಗ ನಿಮಗೆ ಅದರ ನೆಟ್ವರ್ಕ್ ಚಲನೆ ಅರಿಯಲು ಸಾಧ್ಯವಾಗದ ಕಾರಣ ಇದು ಕೆಲಸ ಮಾಡ ತೊಡಗುತ್ತದೆ.

ಹಾಗಿದ್ದರೆ ಈ ರೀತಿಯ ಗೂಢಚಾರ, ನಿಮ್ಮ ಪ್ರೈವಸಿ ಹಾಗೂ ಭದ್ರತೆಗೆ ಹಾನಿ ಮಾಡುವ ಸ್ಪೈವೇರ್ ಕಂಪನಿಗೆ, ಯಾವ ನೈತಿಕ ಹಕ್ಕಿದೆ ಇದು ಎಷ್ಟೋ ಜನರ ಸುಖ ನಿದ್ದೆಗೆ ಕಾರಣ ಎಂದು ಹೇಳಿಕೊಳ್ಳಲು?

ಅದಕ್ಕೆ ಒಂದು ಕಾರಣ ಇದನ್ನು ಬಳಸಿ ಭಯೋತ್ಪಾದಕ, ಅಪರಾಧಿ ಚಟುವಟಿಕೆ ತಡೆಯುವುದು. ಆದರೆ ಹಾಗೆಯೇ ಈ ರೀತಿಯ ವೈಯುಕ್ತಿಕ ಹಾನಿ ಮಾಡುವ ಸ್ಪೈವೇರ್ ಅಥವಾ ವೈರಸ್ ಗಳು ಹಾನಿಕರ ಚಟುವಟಿಕೆಯಲ್ಲಿ ತೊಡಗಿರುವ ಸಂಸ್ಥೆಗಳ ಒಳಹೊಕ್ಕು ಕೂಡ ಹಾನಿ ಮಾಡಬಲ್ಲವು. ಇದಕ್ಕೆ ಹದಿನೈದು ವರ್ಷಗಳ ಹಿಂದೆ ತಯಾರಾದ ಸ್ಟಕ್ಸ್ ನೆಕ್ಸ್ಟ್ (Stuxnext) ಎಂಬ ವೈರಸ್ ಅನ್ನು ಉದಾಹರಣೆಯಾಗಿ ಕೊಡಬಹುದು. ಅದನ್ನು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಅಲ್ಲಿ ಪತ್ತೆಯಾದ ಒಂದು ಝೀರೋ ಡೇ ದೌರ್ಬಲ್ಯ ಬಳಸಿ ಡಿಸೈನ್ ಮಾಡಲಾಗಿತ್ತು. 

ಅದನ್ನು ಬಳಸಿದ ಕೆಲವು ದೇಶದ ಮಿಲಿಟರಿ ಗೂಡಚಾರರು ಐದು ವರ್ಷಗಳ ನಂತರ 2010ರಲ್ಲಿ ಈ ವೈರಸ್ ಅನ್ನು ನಿಧಾನವಾಗಿ ಇರಾನಿನ ಅಣ್ವಸ್ತ್ರ ಲ್ಯಾಬ್ ಸೇರಿಕೊಳ್ಳುವ ಹಾಗೆ ಮಾಡಿದರು. ಒಮ್ಮೆ ಆ ಲ್ಯಾಬ್ ಸೇರಿಕೊಂಡ ಆ ವೈರಸ್  ಮೆಲ್ಲನೆ ಅಲ್ಲಿನ ಕಂಟ್ರೋಲರ್ ಗಳಿಗೆ ಹಾನಿ ಮಾಡುತ್ತಾ ಇರಾನಿನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ದೊಡ್ಡ ಹಾನಿ ಮಾಡಿತು. ಕೊನೆಗೆ ಇರಾನ್ ತನ್ನ ಕಾರ್ಯಕ್ರಮ ತಗ್ಗಿಸುವ ಹಾಗೆ ಆಯಿತು! ಆದ್ದರಿಂದ ಇಂಥದ್ದು ಒಂದು ಯುದ್ದವನ್ನು ತಡೆಯಬಲ್ಲದು. ಆದರೆ ಎಲ್ಲಾ ಸಮಯದಲ್ಲಿ ಅದು ಸತ್ಯವಲ್ಲ.

ಹೇಗೆ ಮೇಲೆ ಹೇಳಿದ ವಿಂಡೋಸ್ ಅಲ್ಲಿ ಒಂದು ಝೀರೋ ಡೇ ಲೋಪ ಕಂಪನಿಯ ಕಣ್ಣಿಗೆ ಬೀಳದೆ ವರ್ಷಗಳ ಕಾಲ ಅಡಗಿತ್ತು, ಹಾಗೆ ನಮ್ಮ ನಿಮ್ಮ ಫೋನ್ ಗಳಲ್ಲಿ ಒಮ್ಮೊಮ್ಮೆ ಲೋಪಗಳು ಅಡಗಿರುತ್ತವೆ! ಆಗ ಆಸಕ್ತ ಜನ ಅವುಗಳ ಬಳಸಿಕೊಂಡು ನಮ್ಮ ಮೆಸೇಜ್, ಕಾಲ್, ಲೋಕೇಶನ್, ಆಡಿಯೋ, ವಿಡಿಯೋ ಇನ್ನೂ ಅನೇಕ ಮಾಹಿತಿ ತೆಗೆಯಬಹುದು. 

ನೀವು ಸಾಮಾನ್ಯರು ಆಗಿದ್ದಲ್ಲಿ ಇದನ್ನು ಬಯಸುತ್ತೀರಾ?  ನಮ್ಮ ದೇಶದ ಪತ್ರಕರ್ತರ, ಆಡಳಿತಾಧಿಕರಿಗಳ, ನ್ಯಾಯಾಂಗದ ಜನರ ಹೆಸರುಗಳು ಇದರಲ್ಲಿ ಕೇಳಿ ಬಂದಾಗ ನಾವು ಯೋಚಿಸಬೇಕು. ಅವರು ಅಣ್ವಸ್ತ್ರಗಳ ತಯಾರಕರಂತೂ ಅಲ್ಲ. ಹಾಗಿದ್ದ ಮೇಲೆ ಯಾಕೆ ಇದು ಬಳಕೆಯಾಯಿತು ಎಂದು ಕೇಳಬೇಕಾಗುತ್ತದೆ. ನಮ್ಮ ದೇಶದಲ್ಲಿ ಇತರೆ ದೇಶಗಳ ಹಾಗೆ  ಮಾನವ ಹಕ್ಕುಗಳ ದಮನ ಆಗುತ್ತಿದೆಯೆ? ನಮ್ಮ ಸಾಂವಿಧಾನಿಕ ಅಂಗ ಸಂಸ್ಥೆಗಳು ಕೆಲಸ ಮಾಡಲು ತೊಂದರೆ ಇದೆಯೆ? ಎಂಬ ಗಂಭೀರ ಪ್ರಶ್ನೆಗಳು ಈ ಪೆಗಾಸಸ್ ಕಂಡು ಬಂದ ಎಲ್ಲಾ ದೇಶಗಳಲ್ಲಿ ಎದ್ದಿವೆ. ಇದು ನಮ್ಮ ದೇಶ ಅಲ್ಲದೆ ಹೋದಲ್ಲಿ ಹೇಗೆ ಫ್ರಾನ್ಸ್ ನ ಅಧ್ಯಕ್ಷರ ಮೇಲೆ ಮೊರೊಕ್ಕೊ ಗೂಢಚಾರಿಕೆ ಮಾಡಿದೆ ಹಾಗೆ ನಮ್ಮ ಮೇಲೆ ಬೇರೆ ದೇಶಗಳು ಮಾಡಿವೆಯೇ ಎಂಬ ಕಾಳಜಿ ಮೂಡುತ್ತದೆ.

ಆದ್ದರಿಂದ ಪೆಗಾಸಸ್ ಸುಖ ನಿದ್ದೆ ಮಾಡಲು ಸಹಾಯಕ ಸ್ಪೈವೇರ್ ಹೌದೇ ಅಲ್ಲವೇ ಎಂದು ಅದರ ಬಳಕೆಯ ಆಧಾರದ ಮೇಲೆ ಹೇಳಬೇಕೆಂದರೆ, ಅಲ್ಲ ಎಂದು ಹೇಳಬಹುದು. ಆ ಕಾರಣಕ್ಕಾಗಿ ನಮ್ಮ ಎಲ್ಲಾ ಸರ್ಕಾರಗಳು, ಇಂದು ಮತ್ತು ಮುಂದೆ, ದೇಶವನ್ನು ಗಟ್ಟಿಯಾಗಿ ಕಟ್ಟಲು ಕಠಿಣ ಐಟಿ ಕಾನೂನುಗಳನ್ನು ಜನರ ವೈಯುಕ್ತಿಕ ಹಾಗೂ ದೇಶದ ಭದ್ರತೆ ಕಾರಣಕ್ಕೆ ತರಬೇಕಿದೆ.

3 comments to “ಪೆಗಾಸಸ್ ಪ್ರಾಜೆಕ್ಟ್ : ಗೂಡಚಾರಿ ತಂತ್ರಾಂಶ ನಿಮ್ಮ ಸುಖ ನಿದ್ದೆಗೆ ಕಾರಣವೇ?”

Leave a Reply to Ravandur Prakash Cancel reply