(‘ಅಮರ್ತ್ಯ ಸೆನ್ ಅವರ ಆತ್ಮಚರಿತ್ರೆ ‘ಹೋಮ್ ಇನ್ ದ ವರ್ಲ್ಡ್: ಅ ಮೆಮೊರ್’ನ ಆಯ್ದ ಭಾಗ.) ತಮ್ಮ ಆತ್ಮಕಥೆಯಲ್ಲಿ, ಹತ್ತನೇ ಶತಮಾನದ ಕೊನೆಯಲ್ಲಿ ಭಾರತದಲ್ಲಿ ಹಲವು ವರ್ಷಗಳನ್ನು ಕಳೆದ ಇರಾನಿನ ಗಣಿತಜ್ಞ ಅಲ್-ಬಿರುನಿ, ಅವರ ಪುಸ್ತಕ ತಾರಿಖ್ ಅಲ್-ಹಿಂದ್‌ನಲ್ಲಿ ಪರಸ್ಪರರ ಬಗ್ಗೆ ಕಲಿಯುವುದು ಜ್ಞಾನ ಮತ್ತು ಶಾಂತಿಗೆ ಕೊಡುಗೆ ನೀಡುತ್ತದೆ ಎಂದು ಹೇಳಿದ್ದನ್ನು ಅಮರ್ತ್ಯ ಸೇನ್ ಉಲ್ಲೇಖಿಸುತ್ತಾ ರಚನಾತ್ಮಕ ಸ್ನೇಹದಿಂದ ಮಾನವ ಜ್ಞಾನವು ವಿಸ್ತರಿಸುತ್ತದೆ ಎಂಬ ಅವನ ಮಾತಿನ ಬಗ್ಗೆ ಸಹಮತ ವ್ಯಕ್ತಪಡಿಸುತ್ತಾರೆ. ಭಾರತೀಯರ ಗಣಿತ /ವಿಜ್ಞಾನದ ಪರಿಣಿತಿಯನ್ನು ಮೆಚ್ಚುತ್ತಲೇ, ಸಂಪೂರ್ಣವಾಗಿ ಏನೂ ತಿಳಿದಿಲ್ಲದ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವ ಭಾರತೀಯರ ಸಾಮರ್ಥ್ಯದ ಬಗ್ಗೆಯ ಅಲ್-ಬಿರುನಿಯ ಕೀಟಲೆಯನ್ನೂ ಸ್ವಾಗತಿಸುತ್ತಾ “ನಾನು ಆ ಉಡುಗೊರೆಯನ್ನು ಹೊಂದಿದ್ದರೆ ಅದರ ಬಗ್ಗೆ ಹೆಮ್ಮೆಪಡುತ್ತೇನೆಯೇ? ನನಗೆ ಗೊತ್ತಿಲ್ಲ, ಆದರೆ ಬಹುಶಃ ನಾನು ತಿಳಿದಿರುವ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಪ್ರಾರಂಭಿಸಬೇಕು. ಈ ಆತ್ಮಚರಿತ್ರೆ ಅಂತಹ ಒಂದು ಪ್ರಯತ್ನ”ಎಂದಿದ್ದಾರೆ.ಪುಸ್ತಕವು ಬರ್ಮಾ, ಕಲ್ಕತ್ತಾ, ಶಾಂತಿನಿಕೇತನದಿಂದ ಲಂಡನ್ ನ ಟ್ರಿನಿಟಿ ಕಾಲೇಜಿನ ಅವರ ನೆನಪುಗಳು ,ರಚನಾತ್ಮಕ ಚರ್ಚೆ-ಅನುಭವಗಳನ್ನು ಒಳಗೊಂಡಿದೆ.
ಭಾರತವು ಬ್ರಿಟಿಷ್ ಆಡಳಿತಕ್ಕಿಂತ ಮೊದಲು, ಜಗತ್ತಿನ ಇತರೆ ರಾಷ್ಟ್ರಗಳಿಗಿಂತ ಹಿಂದುಳಿಯಲು ಶುರುವಾಗಿತ್ತು ಎಂಬುದು ಸತ್ಯವಾದ ಮಾತು. ಆದರೆ ಬ್ರಿಟಿಷ್ ರಾಜ್‌ನ್ನು ಸಮರ್ಥಿಸುವ ಅನೇಕ ವಾದಗಳು ಭಾರತದ ಗತಕಾಲ, ಸಾಮ್ರಾಜ್ಯಶಾಹಿ, ಇತಿಹಾಸದ ಬಗೆಗಿನ ಗಂಭೀರ ತಪ್ಪು ಕಲ್ಪನೆಗಳಿಂದ ಕೂಡಿವೆ.
ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯವು ೨೩ ಜೂನ್ ೧೭೫೭ ರಂದು ಜರುಗಿದ ಪ್ಲಾಸಿ ಕದನದ ಅಂತ್ಯದೊಂದಿಗೆ ಸ್ಥಾಪಿತವಾಯಿತು. ಸಾಧಾರಣ ಮಳೆಗಾಲದ ಮುಂಜಾವಿನಲ್ಲಿ ಆರಂಭಗೊಂಡ ಪ್ಲಾಸಿ ಕದನವು, ಕ್ಷಿಪ್ರವಾಗಿ ಜರುಗಿ ಸೂರ್ಯಾಸ್ತದೊಂದಿಗೆ ಅಂತ್ಯಗೊಂಡಿತು.ಮ್ಯಾಂಗ್ರೋವ್ ಕಾಡುಗಳಿಂದ ಸುತ್ತುವರಿದಿರುವ, ಬ್ರಿಟಿಷ್ ಸೈನ್ಯವು ನಿಯೋಜಿಸಲ್ಪಟ್ಟಿದ್ದ ಕಲ್ಕತ್ತಾ ನಗರ ಮತ್ತು ಬಂಗಾಳದ ರಾಜಧಾನಿ ಮುರಶಿದಾಬಾದ್ ಮಧ್ಯೆ ಇರುವ ಪಟ್ಟಣವೇ ಈ ಪ್ಲಾಸಿ. ಈ ಮ್ಯಾಂಗ್ರೋವ್ ಕಾಡುಗಳಲ್ಲಿ ಬ್ರಿಟಿಷ್ ಸೇನೆಯು ನವಾಬ ಸಿರಾಜುದೌಲನ ಸೇನೆಯನ್ನು ಅನಾಯಾಸವಾಗಿ ಸೋಲಿಸಿತು.ಸುಮಾರು ೨೦೦ ವರುಷಗಳ ಬ್ರಿಟಿಷ್ ಆಳ್ವಿಕೆಯು ತರುವಾಯ ೧೪ನೇ ಆಗಷ್ಟ್ ೧೯೪೭ ರಂದು ನೆಹರುರವರ ಪ್ರಸಿದ್ಧ ಭಾಷಣ “ಟ್ರಿಸ್ಟ್ ವಿಥ್ ಡೆಸ್ಟಿನಿ”ಯೊಂದಿಗೆ ಅಂತ್ಯವಾಯಿತು. ಎರಡು ನೂರು ವರ್ಷಗಳೆಂದರೆ ಅದು ತುಂಬಾ ಧೀರ್ಘವಾದ ಅವಧಿ. ಬ್ರಿಟಿಷ್‌ರು ಈ ದೀರ್ಘ ಅವಧಿಯಲ್ಲಿ ಭಾರತದಲ್ಲಿ ಸಾಧಿಸಿದ್ದಾದರೂ ಏನು, ಮತ್ತು ಸಾಧಿಸಲು ವಿಫಲವಾದ್ದಾದರು ಏನು?
೧೯೪೦ ರ ದಶಕದಲ್ಲಿ, ಪಶ್ಚಿಮ ಬಂಗಾಳದ ಪ್ರಗತಿಪರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ, ಈ ಮೇಲಿನ ಪ್ರಶ್ನೆಗಳು ಪದೇ ಪದೇ ನಮ್ಮ ನಡುವೆ ನಡೆಯುತ್ತಿದ್ದ ಚರ್ಚೆಗೆ ಬರುತ್ತಿದ್ದವು. ಈ ಪ್ರಶ್ನೆಗಳು ಇಂದಿಗೂ ಮುಖ್ಯವಾಗಿರುವುದು ಬ್ರಿಟಿಷ್‌ರು ಯಶಸ್ವಿ ಜಾಗತಿಕ ಆಡಳಿತ ನಡೆಸಿದರು ಎಂದಲ್ಲ. ಆದರೆ ಬ್ರಿಟನ್ ತಾನು ಯಶಸ್ವಿಯಾಗಿ ವಿಶ್ವದಲ್ಲೇ ಸರ್ವಶ್ರೇಷ್ಠ ಸಾಮ್ರಾಜ್ಯಶಾಹಿ ಶಕ್ತಿಯ ಪಾತ್ರವಹಿಸಿದೆ ಎಂದು ಅಮೇರಿಕಾವನ್ನು ಒಪ್ಪಿಕೊಳ್ಳುವಂತೆ ಮಾಡಿದ್ದು. ಇತಿಹಾಸಕಾರ ನಯಾಲ್ ಫರಗ್‌ಸನ್ ಹೀಗೆ ಪ್ರಶ್ನಿಸುತ್ತಾನೆ, “ಅಮೇರಿಕಾ ತಾನು ಪರಂಪರೆಯಿಂದ ಪಡೆದಿರುವ ಸಾಮ್ರಾಜ್ಯಶಾಹಿಯ ಭಾರವನ್ನು ಹೊರಬೇಕ ಅಥವಾ ಅದರಿಂದ ಬಿಡುಗಡೆ ಪಡೆಯಬೇಕಾ?” ಇದೊಂದು ಆಸಕ್ತಿಕರವಾದ ಪ್ರಶ್ನೆ ಮತ್ತು ಫರಗ್‌ಸನ್ ವಾದಿಸುವ ಹಾಗೆ ಈ ಪ್ರಶ್ನೆಯನ್ನು ಬ್ರಿಟಿಷ್ ಸಾಮ್ರಾಜ್ಯದ ಏಳಿಗೆ ಮತ್ತು ಅಂತ್ಯ – ಹಾಗೂ ಅದು ನಿರ್ವಹಿಸಲ್ಪಟ್ಟ ರೀತಿಯನ್ನು ತಿಳಿಯದೇ ಉತ್ತರಿಸಲಾಗುವುದಿಲ್ಲ.
ಕೆಲವೇ ದಶಕಗಳ ಹಿಂದೆ ರವೀಂದ್ರನಾಥ್ ಠಾಗೋರ್ ಸ್ಥಾಪಿಸಿದ ಶಾಂತಿನಿಕೇತನ ಶಾಲೆಯಲ್ಲಿ ಈ ವಿಷಯಗಳ ಬಗ್ಗೆ ನಾವು ವಾದ ಮಾಡುತ್ತಾ ಒಂದು ಸಂಕೀರ್ಣ ಕ್ರಮಬದ್ಧ ಪ್ರಶ್ನೆಯ ಸುಳಿಗೆ ಸಿಲುಕಿದ್ದೆವು. ಆ ಪ್ರಶ್ನೆ ಏನೆಂದರೆ, ಬ್ರಿಟಿಷ್ ಆಳ್ವಿಕೆಗೆ ಭಾರತ ಒಳಗಾಗದೆ ಇರದಿದ್ದರೆ ೧೯೪೦ ರ ದಶಕದಲ್ಲಿ ಭಾರತದ ವಾಸ್ತವ ಹೇಗಿರುತ್ತಿತ್ತು?
೧೭೫೭ ರ ಭಾರತವನ್ನು ೧೯೪೭ ರ ಭಾರತದೊಂದಿಗೆ ಹೋಲಿಸುವ ಪ್ರಯತ್ನವು ಹೆಚ್ಚಿನದೇನನ್ನು ನಮಗೆ ತಿಳಿಸುವುದಿಲ್ಲ. ಬ್ರಿಟಿಷರ ಆಳ್ವಿಕೆಯ ಅನುಪಸ್ಥಿತಿಯಲ್ಲಿ ಭಾರತವು ಖಂಡಿತವಾಗಿಯೂ ಪ್ಲಾಸಿ ಕದನದ ಸಂದರ್ಭದ ಭಾರತದಂತೆ ಉಳಿಯುತ್ತಿರಲಿಲ್ಲ. ಬ್ರಿಟಿಷರ ಆಳ್ವಿಕೆ ಘಟಿಸದಿದ್ದರೆ ಈ ದೇಶ ಇತಿಹಾಸದಲ್ಲಿ ನಿಶ್ಚಲವಾಗೇನು ನಿಲ್ಲುತ್ತಿರಲಿಲ್ಲ. ಹಾಗಾದರೆ, ಬ್ರಿಟಿಷರ ಆಳ್ವಿಕೆಯಿಂದ ಆದ ವ್ಯತ್ಯಾಸವೇನು ಎಂಬ ಪ್ರಶ್ನೆಗೆ ನಾವು ಉತ್ತರಿಸುವುದಾದರೂ ಹೇಗೆ?
ಇಂತಹ ”ಪರ್ಯಾಯ ಇತಿಹಾಸ”ದ ಮಹತ್ವವನ್ನು ವಿವರಿಸಲು, ನಾವು ಮತ್ತೊಂದು ಪ್ರಕರಣವನ್ನು ಪರಿಗಣಿಸಬಹುದು – ಜಪಾನಿನಲ್ಲಿ ಸಂಭವಿಸಬಹುದಾಗಿದ್ದ ಅಮೇರಿಕಾದ ಸಾಮ್ರಾಜ್ಯಶಾಹಿ ವಿಜಯ ವಾಸ್ತವದಲ್ಲಿ ಜರುಗಲಿಲ್ಲ.೧೮೫೩ ರಲ್ಲಿ ಅಮೇರಿಕಾ ನೌಕಪಡೆಯ ಕಮಾಂಡರ್ ಮ್ಯಾಥ್ಯೂ ಪರ‍್ರಿ ನಾಲ್ಕು ಯುದ್ಧ ನೌಕೆಗಳೊಂದಿಗೆ ಜಪಾನಿನ ಎಡೋ ಕೊಲ್ಲಿಯನ್ನು ಬಂದು ತಲುಪಿದನು. ಈಗ ನಾವು ಕಮಾಂಡರ್ ಮ್ಯಾಥ್ಯೂ ಪರ‍್ರಿ ಅಮೇರಿಕಾದ ಶಕ್ತಿ ಪ್ರದರ್ಶನವನ್ನಷ್ಟೇ ಪ್ರದರ್ಶಿಸದೆ (ವಾಸ್ತವದಲ್ಲಿ ಅವನು ಮಾಡಿದ್ದು ಅಮೇರಿಕಾದ ಶಕ್ತಿ ಪ್ರದರ್ಶನವಷ್ಟೆ), ಭಾರತದಲ್ಲಿ ರಾಬರ್ಟ ಕ್ಲಯ್ವ್ ಸ್ಥಾಪಿಸಿದಂತೆ ಸೂರ್ಯೊದಯದ ನಾಡಾದ ಜಪಾನಿನಲ್ಲಿ ಅಮೇರಿಕನ್ ಸಾಮ್ರಜ್ಯಶಾಹಿಯನ್ನು ಸ್ಥಾಪಿಸಿದ ಎಂದು ಭಾವಿಸೋಣ. ಈ ಸಂಭವಿಸಬಹುದಾಗಿದ್ದ ಅಮೇರಿಕನ್ ಆಳ್ವಿಕೆಯ ಸಾಧನೆಗಳನ್ನು ಸರಳವಾಗಿ ಸಾಮ್ರಾಜ್ಯಶಾಹಿಯ ಪೂರ್ವದ ಜಪಾನ್ ಮತ್ತು ನಂತರದ ಜಪಾನ್ ಗಳ ನಡುವೆ ಹೋಲಿಕೆ ಮಾಡುವುದರ ಮೂಲಕ ನೋಡೊಣ.
ಆಗಿಹೋದ ಸಾಧನೆಗಳ ವ್ಯತ್ಯಾಸಗಳೆಲ್ಲವು ಅಮೇರಿಕನ್ ಸಾಮ್ರಾಜ್ಯಶಾಹಿಯಿಂದ ಎಂದು ಭಾವಿಸಿದರೆ, ೧೮೬೮ ರ ಮೀಜಿ ಪುನರ್ ಸ್ಥಾಪನೆಯ ನಂತರದ ಅವಧಿಯ ಕೊಡುಗೆಗಳನ್ನು ನಿರ್ಲಕ್ಷಿಸಿದಂತಾಗುತ್ತದೆ, ಮತ್ತು ಇತರ ಜಾಗತಿಕ ಬೆಳವಣಿಗೆಗಳು ಜಪಾನಿನ ಮೇಲೆ ಬೀರಿದ ಪರಿಣಾಮಗಳನ್ನು ಸಹ ನಿರ್ಲಕ್ಷಿಸಿದಂತಾಗುತ್ತದೆ. ಇದರಿಂದ ನಮಗೆ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಪಶ್ಚಿಮ ಸಾಮ್ರಜ್ಯಶಾಯಿಯ ಆಳ್ವಿಕೆಗೆ ಒಳಪಡದ ಜಪಾನ್ ಇತಿಹಾಸವು ಹಾಗೇ ನಿಶ್ಚಲವಾಗಿ ಚರಿತ್ರೆಯಲಿ ನಿಂತು ಹೋಗಲಿಲ್ಲ; ಹಾಗೆಯೇ ಭಾರತವು ಬ್ರಿಟೀಷ್ ಆಳ್ವಿಕೆಗೆ ಒಳಪಡದೆ ಇದ್ದರೆ ಭಾರತದ ಇತಿಹಾಸವು ನಿಶ್ಚಲವಾಗಿ ಚರಿತ್ರೆಯಲಿ ನಿಂತು ಹೋಗುತ್ತಿರಲಿಲ್ಲ.ಮೀಜಿ ಆಳ್ವಿಕೆಯ ಕಾಲದಲ್ಲಿ ಜಪಾನಿನಲ್ಲಿ ಏನು ಜರುಗಿತು ಎಂಬುದು ನಮ್ಮ ಕಣ್ಣೆದುರೆ ಇದ್ದರೂ, ಬ್ರಿಟಿಷರ ಆಳ್ವಿಕೆಯು ಘಟಿಸದಿದ್ದರೆ ಉಪಖಂಡದ ಇತಿಹಾಸವು ಯಾವ ದಿಕ್ಕಿನಲ್ಲಿ ಸಾಗುತ್ತಿತ್ತು ಎಂಬುದನ್ನು ಊಹಿಸುವುದು ಅತ್ಯಂತ ಕಠಿಣವಾದುದು. ಭಾರತವು ಜಪಾನ್ ದೇಶದಂತೆ ಜಾಗತಿಕ ವಿಶ್ವದಲ್ಲಿ ಆಧುನೀಕರಣದ ಕಡೆಗೆ ಸಾಗುತ್ತಿತ್ತೇ ಅಥವಾ ಆಫಘಾನಿಸ್ಥಾನದಂತೆ ಬದಲಾವಣೆಯನ್ನು ನಿರಾಕರಿಸುತ್ತಿತ್ತೇ ಅಥವಾ ಥೈಲ್ಯಾಂಡ್‌ನಂತೆ ನಿಧಾನವಾಗಿ ಸಾಗುತ್ತಿತ್ತೇ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.
ಇವು ಉತ್ತರಿಸಲು ಸಾಧ್ಯವೇ ಇರದ ಸಂಕೀರ್ಣ ಪ್ರಶ್ನೆಗಳು. ಪರ್ಯಾಯ ಐತಿಹಾಸಿಕ ಸನ್ನಿವೇಶಗಳು ವಾಸ್ತವದಲ್ಲಿ ಲಭ್ಯವಿಲ್ಲದಿದ್ದರೂ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಬಹುದು. ಇದರಿಂದ ಬ್ರಿಟಿಷರು ಭಾರತದಲ್ಲಿ ವಹಿಸಿದ ಪಾತ್ರವನ್ನು ಅರಿಯಲು ಸಹಾಯಕವಾಗುತ್ತದೆ. ನಾವು ಈ ಮುಂದಿನ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು: ಬ್ರಿಟಿಷ್ ಆಕ್ರಮಣದ ಅವಧಿಯಲ್ಲಿ ಭಾರತ ಎದುರಿಸಿದ ಸವಾಲುಗಳಾವುವು, ಮತ್ತು ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಆ ಸಂದಿಗ್ಧ ಕ್ಷೇತ್ರಗಳಲ್ಲಿ ಏನು ಜರುಗಿತು?
ಅರಾಜಕತೆಯಿಂದ ಕೂಡಿದ ಮತ್ತು ಸಾಂಸ್ಥಿಕವಾಗಿ ಹಿಂದುಳಿದ ಭಾರತಕ್ಕೆ ಪ್ರಮುಖ ಬದಲಾವಣೆಗಳ ಅವಶ್ಯಕತೆ ಖಂಡಿತವಾಗಿಯೂ ಇತ್ತು. ೧೮ನೇ ಶತಮಾನದಲ್ಲಿ ಭಾರತದಲ್ಲಿ ಬದಲಾವಣೆಯನ್ನು ತರಲೇಬೇಕಾದ ಅಗತ್ಯಗಳಿದ್ದರೂ ಭಾರತದ ಸಾಧನೆಗಳನ್ನು ಈ ಸಂದರ್ಭದಲ್ಲಿ ನಾವು ನಿರ್ಲಕ್ಷಿಸುವಂತಿಲ್ಲ. ಭಾರತವು ಅಸಾಧಾರಣವಾದ ಸಾಧನೆಗಳನ್ನು ವಿವಿಧ ರಂಗಗಳಾದ ತತ್ವಶಾಸ್ತ್ರ , ಗಣಿತ , ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಸಂಗೀತ, ವೈಧ್ಯಕೀಯ, ಭಾಷಾಶಾಸ್ತ್ರ, ಮತ್ತು ಖಗೋಳಶಾಸ್ತ್ರಗಳಲ್ಲಿ ಮಾಡಿದ್ದರು. ಅನೇಕ ಭಾರತೀಯ ಅತಿ ರಾಷ್ತ್ಟ್ರೀಯವಾದಿಗಳಲ್ಲಿ ಭಾರತದ ಭವ್ಯ ಐತಿಹಾಸಿಕ ಸಾಧನೆಗಳ ಬಗ್ಗೆ ಒಂದು ರೀತಿಯ ಶಂಕೆ ಇತ್ತು. ಭಾರತವು ವಸಾಹತುಶಾಹಿ ಆಡಳಿತಕ್ಕೆ ಸಿಲುಕುವ ಮೊದಲೇ ವ್ಯಾಪಾರ ಮತ್ತು ವಹಿವಾಟಿನಿಂದ ಕೂಡಿದ ಸಮೃದ್ಧವಾದ ಆರ್ಥಿಕತೆಯನ್ನು ಹೊಂದಿತ್ತು. ಬ್ರಿಟಿಷ್ ವೀಕ್ಷಕನಾದ ಆಡಮ್ ಸ್ಮಿತ್‌ನು ಭಾರತದ ಆರ್ಥಿಕ ಸಂಪತ್ತು ಮತ್ತು ಪ್ರಗತಿಯ ಬಗ್ಗೆ ಅಧಿಕೃತವಾಗಿ ಅನುಮೋದಿಸಿದ್ದನು.
ಭಾರತವು ೧೮ನೇ ಶತಮಾನದಲ್ಲಿ ಈ ಎಲ್ಲಾ ಸಾಧನೆಗಳ ಹೊರತಾಗಿಯೂ, ಅನೇಕ ಕ್ಷೇತ್ರಗಳ ಪ್ರಗತಿಯಲ್ಲಿ ಯುರೋಪಿನ ಸಾಧನೆಗಳನ್ನು ಮೀರಿಸಲು ಆಗದೇ ಹಿಂದುಳಿದಿತ್ತು. ಈ ಹಿಂದುಳಿದಿರುವಿಕೆಯ ನಿರ್ದಿಷ್ಟ ಸ್ವರೂಪ ಮತ್ತು ಮಹತ್ವಗಳ ಬಗ್ಗೆ ನಮ್ಮ ಶಾಲೆಯಲ್ಲಿ ಸಂಜೆ ವೇಳೆಯಲ್ಲಿ ನಡೆಯುವ ಉಲ್ಲಾಸಭರಿತ ಚರ್ಚೆಗಳಲ್ಲಿ ಪದೇ ಪದೇ ಚರ್ಚಿಸಲಾಗುತ್ತಿತ್ತು.
ಭಾರತದ ಬಗ್ಗೆ ಕಾರ್ಲ್ ಮಾರ್ಕ್ಸ್ ಬರೆದ ಒಳನೋಟಗಳಿಂದ ಕೂಡಿದ ಒಂದು ಪ್ರಬಂಧವು ನಮ್ಮಲ್ಲಿನ ಕೆಲವರ ಗಮನವನ್ನು ಸೆಳೆದಿತ್ತು. ೧೮೫೩ರಲ್ಲಿ ಬರೆದ ಈ ಪ್ರಬಂಧದಲ್ಲಿ ಮಾರ್ಕ್ಸ್, ಭಾರತವು ಆಮೂಲಾಗ್ರ ಮರುಪರಿಶೀಲನೆಗೆ ಮತ್ತು ಸ್ವಯಂ ಪರೀಕ್ಷೆಗೆ ಒಳಗಾಗಬೇಕಾಗಿದ್ದ ಜರೂರತಿನ ಹಿನ್ನೆಲೆಯಲ್ಲಿ ಬ್ರಿಟಿಷ್ ಆಳ್ವಿಕೆಯ ರಚನಾತ್ಮಕ ಪಾತ್ರದ ಬಗ್ಗೆ ಗಮನ ಸೆಳೆದಿದ್ದಾನೆ. ೧೯ನೇ ಶತಮಾನದಲ್ಲಿ ಬ್ರಿಟಿಷ್ ವಸಾಹತುಶಾಹಿಯಿಂದ ಭಾರತವು ಪಶ್ಚಿಮ ಜಗತ್ತಿನ ಪ್ರಾಥಮಿಕ ಸಂಪರ್ಕಕವನ್ನು ಸಾಧಿಸಿತು. ಈ ಪಶ್ಚಿಮ ಜಗತ್ತಿನ ಸಂಪರ್ಕವು ಭಾರತದ ಮೇಲೆ ಬೀರಿದ ಪ್ರಭಾವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಭಾರತದಲ್ಲಿ ನಿಧಾನವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಸ್ಥಳೀಯ ಜಾಗತೀಕರಣದ ಸಂಸ್ಕೃತಿಯು ಇಂಗ್ಲಿಷ್ ಬರವಣಿಗೆಗಳಿಗೆ ಮಾತ್ರವಲ್ಲದೆ, ಬ್ರಿಟೀಷರ ಮೂಲಕವೆ ಪರಿಚಯವಾದ ಇಂಗ್ಲಿಷ್‌ಯೇತರ ಇತರ ಯುರೋಪಿನ ಭಾಷೆಗಳ ಪುಸ್ತಕಗಳಿಗೂ ಮತ್ತು ಬರವಣಿಗೆಗಳಿಗೂ ಅನಂತ ಆಭಾರಿಯಾಗಿರಬೇಕು.
೧೭೭೨ ರಲ್ಲಿ ಜನಿಸಿದ ಬಂಗಾಳದ ಸಮಾಜ ಸುಧಾರಕ ರಾಜರಾಮ್ ಮೋಹನ್ ರಾಯ್ ಸಂಸ್ಕೃತ, ಆರೇಬಿಕ್ ಮತ್ತು ಪರ್ಶಿಯನ್ ನಂತಹ ಸಾಂಪ್ರದಾಯಿಕ ಜ್ಞಾನದ ಪಠ್ಯಗಳಿಂದ ಮತ್ತು ಇಂಗ್ಲಿಷ್ ಬರವಣಿಗೆಗಳಿಂದಲೂ ಪ್ರಭಾವಿತರಾಗಿದ್ದರು. ರಾಯ್ ನಂತರ ಬಂಗಾಳದಲ್ಲಿ ಪ್ರವರ್ಧಮಾನಕ್ಕೆ ಬಂದ ಈಶ್ವರ್ ಚಂದ್ರ ವಿದ್ಯಾಸಾಗರ್, ಮಧುಸೂದನ್ ದತ್, ಟ್ಯಾಗೋರ್ ತಲೆಮಾರಿನ ಅನೇಕ ಲೇಖಕರು ಮತ್ತು ಅವರ ಅನುಯಾಯಿಗಳು ಭಾರತವನ್ನು ೧೮ ಮತ್ತು ೧೯ ನೇ ಶತಮಾನದ ಯುರೋಪಿನಲ್ಲಿ ಘಟಿಸಿದ ವಿದ್ಯಾಮಾನಗಳ ಬೆಳಕಿನಲ್ಲಿ ಮರುಪರಿಶೀಲಿಸುತ್ತಿದ್ದರು. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾರಣದಿಂದ ದೊರಕುತ್ತಿದ್ದ ಇಂಗ್ಲಿಷ್ ಪುಸ್ತಕಗಳು ಮಾತ್ರ ಇವರ ಜ್ಞಾನ ಮತ್ತು ಮಾಹಿತಿಯ ಮೂಲಗಳಾಗಿದ್ದವು. ಬ್ರಿಟಿಷರ ಆರ್ಥಿಕ, ಸೈನಿಕ, ರಾಜಕೀಯ ಅಧಿಕಾರವು ಕೊನೆಗೊಂಡ ನಂತರವೂ ಯುರೋಪಿನ ವಿವಿಧ ಸಂಸ್ಕೃತಿಗಳನ್ನು ಒಳಗೊಂಡ ಆ ಬೌದ್ಧಿಕ ಪ್ರಭಾವವು ಈ ದಿನಮಾನಗಳಲ್ಲೂ ಕಾಣಬಹುದು. ಪುನರುಜ್ಜೀವನ ಮತ್ತು ಕೈಗಾರಿಕ ಕ್ರಾಂತಿಗಳಿಂದ ಜಗತ್ತಿನಾದ್ಯಂತ ಪ್ರಾರಂಭವಾದ ಬೌದ್ಧಿಕ ಮತ್ತು ಆರ್ಥಿಕ ಜಾಗತೀಕರಣದ ಭಾಗವಾಗದೇ ಹೊರಗುಳಿದ ಕಾರಣದಿಂದ ಭಾರತದ ಹಳೆಯ ವ್ಯವಸ್ಥೆಯು ಕುಸಿಯುತ್ತಿತ್ತು ಮತ್ತು ಈ ಕಾರಣದಿಂದ ಭಾರತದಲ್ಲಿ ಆಮೂಲಾಗ್ರ ಬದಲಾವಣೆಯ ಜರೂರತೆಯನ್ನು ಪತ್ತೆಹಚ್ಚುವಲ್ಲಿ ಕಾರ್ಲ್ ಮಾರ್ಕ್ಸ್ ಸರಿಯಾಗಿಯೇ ಗ್ರಹಿಸಿದ್ದನೆಂದು ನನ್ನನ್ನು ಒಪ್ಪಿಸಲಾಗುತ್ತಿತ್ತು.
ವಸಾಹತುಶಾಹಿ ಆಳ್ವಿಕೆಯಿಂದ ಮಾತ್ರ ಭಾರತವು ಆಧುನಿಕ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯ ಎಂಬ ಕಾರ್ಲ್ ಮಾರ್ಕ್ಸ್ನ ಪ್ರಮೇಯವು ತುಂಬ ತಪ್ಪು ಗ್ರಹಿಕೆಯಿಂದ ಕೂಡಿತ್ತು. ಆ ಸಂದರ್ಭದಲ್ಲಿ ಭಾರತಕ್ಕೆ ನಿಜವಾಗಿಯೂ ಬೇಕಾಗಿದ್ದದ್ದು ರಚನಾತ್ಮಕವಾದ ಜಾಗತೀಕರಣವೇ ಹೊರತು ಸಾಮ್ರಜ್ಯಶಾಹಿಯಲ್ಲ. ಈ ವ್ಯತ್ಯಾಸವು ತುಂಬಾ ಮುಖ್ಯವಾದುದು. ಭಾರತವು ಇತಿಹಾಸದುದ್ದಕ್ಕೂ ಹೊರ ಜಗತ್ತಿನೊಂದಿಗೆ ವಿಚಾರ ವಿನಿಮಯ ಮತ್ತು ವಸ್ತುಗಳ ವಿನಿಮಯವನ್ನು ಮಾಡಿಕೊಂಡು ಬಂದಿರುವುದನ್ನು ಕಾಣಬಹುದು. ಅನೇಕ ಶತಮಾನಗಳಿಂದ, ಸುಮಾರು ೨೦೦೦ ವರ್ಷಗಳ ಆರಂಭದಿಂದಲೂ ಭಾರತ ಮತ್ತು ಪೂರ್ವದ ದೇಶಗಳಾದ ಚೀನಾ, ಇಂಡೋನೇಷಿಯಾ, ಮಲೇಷಿಯಾ, ಕಾಂಬೋಡಿಯಾ, ವಿಯಟ್ನಾಂ, ಥೈಲ್ಯಾಂಡ್ ಮೊದಲಾದ ದೇಶಗಳ ನಡುವೆ ವರ್ತಕರು, ವಿದ್ವಾಂಸರು ಮತ್ತು ನೆಲಸಿಗರು ಸಂಚರಿಸಿದ್ದಾರೆ. ಈ ಪ್ರಸರಣದ ಪ್ರಭಾವವು ವಿಶೇಷವಾಗಿ ಭಾಷೆ, ಸಾಹಿತ್ಯ, ವಾಸ್ತುಶಿಲ್ಪಗಳ ಮೇಲೆ ಆಗಿರುವುದನ್ನು ಇಂದಿಗೂ ಹೇರಳಾವಾಗಿ ಕಾಣಬಹುದು. ಆರಂಭದಿoದಲೂ, ಭಾರತವು ವಿಶ್ವದ ಅನೇಕ ಭಾಗಗಳಿಂದ ಜನಾಂಗೀಯ ಹಿಂಸೆಯಿಂದ ತಪ್ಪಿಸಿಕೊಂಡು ಆಶ್ರಯ ಹುಡುಕಿ ವಲಸೆ ಬಂದವರಿಗೆ ಆದರದಿಂದ ಬರಮಾಡಿಕೊಂಡು ನೆಲೆಯನ್ನು ಕಲ್ಪಿಸಿದೆ.
೧ನೇ ಶತಮಾನದಲ್ಲಿ ಜೆರುಸಲೆಂ ಪತನದ ತಕ್ಷಣ ಮತ್ತು ನಂತರದ ಅನೇಕ ಶತಮಾನಗಳವರೆಗೂ ಭಾರತಕ್ಕೆ ಯಹೂದಿಗಳ ವಲಸೆ ನಿರಂತರವಾಗಿ ಮುಂದುವರಿಯಿತು. ಬೃಹತ್ ಸಂಖ್ಯೆಯಲ್ಲಿ ಬಾಗ್ದಾದಿ ಯಹೂದಿಗಳು ೧೮ನೇ ಶತಮಾನದ ಕೊನೆಯವರೆಗೂ ಭಾರತಕ್ಕೆ ಆಶ್ರಯ ಹುಡುಕಿ ಬಂದರು. ೪ನೇ ಶತಮಾನ ಅಥವಾ ಬಹುಶಃ ಅದಕ್ಕಿಂತಲೂ ಮೊದಲಿನಿಂದಲೇ ಕ್ರಿಶ್ಚಿಯನ್ನರು ಭಾರತಕ್ಕೆ ಬರಲು ಪ್ರಾರಂಭಿಸಿದರು. ಈ ವಲಸೆಗಳ ಬಗ್ಗೆ ವರ್ಣರಂಜಿತ ದಂತಕಥೆಗಳಿವೆ. ಒಂದು ದಂತಕಥೆಯ ಪ್ರಕಾರ ಮೊದಲ ಶತಮಾನದಲ್ಲಿ ಭಾರತಕ್ಕೆ ಬಂದ ಮೊದಲಿಗನಾದ ಧರ್ಮಪ್ರಚಾರಕ ಸೆಂಟ್ ಥಾಮಸ್‌ನು ಮಲಬಾರ್ ತೀರ ಪ್ರದೇಶದಲ್ಲಿ ಕೊಳಲು ನುಡಿಸುತ್ತಿರುವ ಯಹೂದಿ ಹುಡುಗಿಯನ್ನು ಭೇಟಿಯಾದನಂತೆ. ಭಾರತೀಯ ಸಂಪ್ರದಾಯಗಳ ಬಹುಸಂಸ್ಕೃತಿಯ ಬೇರುಗಳನ್ನು ವಿವರಿಸುವ ಈ ದಂತಕಥೆಯನ್ನು ನಮ್ಮ ತರಗತಿಯ ಚರ್ಚೆಗಳಲ್ಲಿ ಬಹುವಾಗಿ ಮೆಚ್ಚಿಕೊಳ್ಳುತ್ತಿದ್ದೆವು. ೮ನೇ ಶತಮಾನದ ಆರಂಭದಿಂದಲೇ , ಪಾರ್ಸಿಗಳು ತಮ್ಮ ಮೇಲಿನ ಜನಾಂಗೀಯ ಹಿಂಸೆಯಿಂದ ತಪ್ಪಿಸಿಕೊಳ್ಳಲು ತಮ್ಮ ತಾಯ್ನಾಡಾದ ಇರಾನ್‌ನಿಂದ ಭಾರತಕ್ಕೆ ವಲಸೆ ಬರಲು ಶುರು ಮಾಡಿದರು. ನಂತರದ ಶತಮಾನದಲ್ಲಿ ಅರಮೇನಿಯನ್ನರು ಕೇರಳದಿಂದ ಬಂಗಾಳದವರೆಗೂ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದರು. ಮುಸ್ಲಿಂ ದಾಳಿಕೋರರು ಬರುವ ಅನೇಕ ಶತಮಾನಗಳ ಮೊದಲೇ, ಅರಬ್ ಮುಸ್ಲಿಂ ವ್ಯಾಪಾರಿಗಳು ಭಾರತದ ಪಶ್ಚಿಮ ಕರಾವಳಿಯಲ್ಲಿ ಗಣನೀಯ ಪ್ರಮಾಣದಲ್ಲಿದ್ದರು. ೧೯ನೇ ಶತಮಾನದಲ್ಲಿ ಕಿರುಕುಳಕ್ಕೆ ಒಳಗಾದ ಬಹಾಯಿಗಳು ಇರಾನಿನಿಂದ ಭಾರತಕ್ಕೆ ಬಂದು ಆಶ್ರಯ ಪಡೆದರು.
ಪ್ಲಾಸಿ ಕದನದ ವೇಳೆಗಾಗಲೇ ಯುರೋಪಿನ ಅನೇಕ ದೇಶಗಳ ವ್ಯಾಪಾರಿಗಳು, ವರ್ತಕರು,ವೃತ್ತಿಪರರು ಬಹುಸಂಖ್ಯೆಯಲ್ಲಿ ಉತ್ತಮ ಸ್ಥಿತಿಯಲ್ಲಿ ಗಂಗಾ ನದಿಯ ತಟದಲ್ಲಿ ನೆಲೆಸಿದ್ದರು. ಯುರೋಪಿನ ಸಾಮ್ರಾಜ್ಯಶಾಹಿ ಯಿಂದಲೇ ಭಾರತವು ವಿದೇಶಗಳೊಂದಿಗೆ ಸಂಪರ್ಕ ಸಾಧಿಸಿತು ಮತ್ತು ವಿದೇಶಗಳಿಂದಲೇ ಕಲಿಯಿತು ಎಂಬುದು ತಪ್ಪು ಗ್ರಹಿಕೆ. ೧೮೬೮ ರಲ್ಲಿ ಜಪಾನಿನಲ್ಲಿ ಮೇಜಿ ಆಳ್ವಿಕೆಯ ಅವಧಿಯಲ್ಲಿ ಹೊಸ ಸುಧಾರಣವಾದಿ ಸರಕಾರದ ಸ್ಥಾಪನೆಯಿಂದಾಗಿ ವಸಾಹತುಶಾಹಿ ಆಳ್ವಿಕೆಗೆ ಒಳಪಡದೆಯೇ ಜಪಾನ್ ಪಶ್ಚಿಮ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಸಫಲವಾಯಿತು. ಜಪಾನ್ ಸರಕಾರವು ತನ್ನ ದೇಶದ ನಾಗರಿಕರನ್ನು ಅಮೇರಿಕಾ ಮತ್ತಿತರ ಯುರೋಪಿನ ದೇಶಗಳಿಗೆ ತರಬೇತಿಗೆ ಕಳುಹಿಸುವುದರ ಮೂಲಕ ಪಾಶ್ಚಿಮಾತ್ಯ ಪ್ರೇರಿತ ಸಾಂಸ್ಥಿಕ ಬದಲಾವಣೆಗಳನ್ನು ಮಾಡಿಕೊಂಡಿತು. ಅವರು ಸಾಮ್ರಾಜ್ಯಶಾಹಿ ಒತ್ತಡದಿಂದಾಗಿ ಜಾಗತೀಕರಣದ ಪ್ರಕ್ರಿಯೆಗೆ ಒಳಪಡಲಿಲ್ಲ.
ಬ್ರಿಟಿಷ್ ಸಾಮ್ರಜ್ಯಶಾಹಿ ಸಿದ್ದಾಂತಿಗಳು ಏಕೀಕೃತ ಭಾರತವನ್ನು ಸೃಷ್ಟಿಸುವಲ್ಲಿನ ಬ್ರಿಟಿಷರ ಪಾತ್ರವನ್ನು ವಿಶೇಷವಾಗಿ ಗುರುತಿಸುತ್ತಾರೆ. ಬ್ರಿಟಿಷ್ ಆಳ್ವಿಕೆಗೂ ಮೊದಲು ಭಾರತವು ವಿವಿಧ ದೇಶಿಯ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು. ಭಾರತವು ಬ್ರಿಟೀಷ್ ಆಳ್ವಿಕೆಯ ಮೊದಲು ಏಕೀಕೃತ ರಾಷ್ಟವಾಗಿರದೇ, ವಿವಿಧ ಬೌಗೋಳಿಕ ಪ್ರದೇಶಗಳಲ್ಲಿ ಚದುರಿ ಹೋಗಿತ್ತು ಎಂದು ವಾದಿಸಲಾಗುತ್ತಿತ್ತು. ಈ ವಾದದ ಪ್ರಕಾರ ಬ್ರಿಟಿಷ್ ಸಾಮ್ರಜ್ಯವು ಭಾರತವನ್ನು ಏಕೀಕೃತ ರಾಷ್ಟ್ರವನ್ನಾಗಿಸಿದೆ. ವಿನ್‌ಸ್ಟನ್ ಚರ್ಚಿಲ್ ಪ್ರಕಾರ ಬ್ರಿಟಿಷರ ಆಗಮನದ ಸಂದರ್ಭದಲ್ಲಿ ಭಾರತವೆಂಬ ಏಕೀಕೃತ ರಾಷ್ಟ್ರವಿರಲಿಲ್ಲ. “ಭಾರತವೆಂಬುದು ಭೌಗೋಳಿಕ ಗುರುತನ್ನು ಸೂಚಿಸುವ ಒಂದು ಪದ.” ಎಂದು ಚರ್ಚಿಲ್ ಒಮ್ಮೆ ಪ್ರಸ್ತಾಪಿಸಿದ್ದನು.
ಇದು ನಿಜವಾದರೆ, ಬ್ರಿಟೀಷ್ ಸಾಮ್ರಜ್ಯಶಾಹಿ ಭಾರತವನ್ನು ಏಕೀಕರಣಗೊಳಿಸುವ ಮೂಲಕ ಆಧುನೀಕರಣಗೊಳಿಸುವಲ್ಲಿ ಪರೋಕ್ಷವಾದ ಪಾತ್ರವನ್ನು ವಹಿಸಿದೆ ಎಂದು ಸ್ಷಷ್ಟವಾಗಿ ಹೇಳಬಹುದು. ಆದರೂ, ಬ್ರಿಟಿಷ್ ರಾಜ್ ಭಾರತವನ್ನು ಏಕೀಕೃತ ರಾಷ್ಟವಾಗಿಸಿತು ಎಂಬ ಹೇಳಿಕೆ ನಿಜವೇ? ನಿಜವಾಗಿಯು, ೧೭೫೭ ರಲ್ಲಿ ಕ್ಲಾಯ್ವ್ ನ ಈಸ್ಟ್ ಇಂಡಿಯಾ ಕಂಪನಿ ಬಂಗಾಳದ ನವಾಬನನ್ನು ಸೋಲಿಸಿದ ಸಂದರ್ಭದಲ್ಲಿ, ಭಾರತವನ್ನು ಯಾವುದೇ ಏಕೈಕ ರಾಜಕೀಯ ಶಕ್ತಿ ಆಳುತ್ತಿರಲಿಲ್ಲ. ಆದಾಗ್ಯೂ, ಕೇವಲ ಬ್ರಿಟೀಷ್‌ರು ಮಾತ್ರ ಚದುರಿ ಹೋಗಿದ್ದ ಭಾರತದ ವಿಭಿನ್ನ ಪ್ರಾಂತ್ಯಗಳನೆಲ್ಲಾ ಏಕೀಕೃತ ಆಡಳಿತಕ್ಕೆ ಒಳಪಡಿಸಿದರು ಎಂಬ ಹೇಳಿಕೆಗೂ ಮತ್ತು ಬ್ರಿಟಿಷ್ ಆಳ್ವಿಕೆಯು ಏಕೀಕೃತ ಆಡಳಿತಕ್ಕೆ ಭಾರತವನ್ನು ಒಳಪಡಿಸಿತು ಎಂಬ ಹೇಳಿಕೆಗೂ ತುಂಬಾ ವ್ಯತ್ಯಾಸವಿದೆ.
ಭಾರತೀಯ ಇತಿಹಾಸವನ್ನು ನೋಡುವ ಕ್ರಮಕ್ಕು ಮತ್ತು ಸಾವಿರಾರು ವರ್ಷಗಳಿಂದ ಅನೇಕ ಬೃಹತ್ ದೇಶಿಸಾಮ್ರಾಜ್ಯಗಳು ಭಾರತವನ್ನು ನಿರೂಪಿಸಿರುವ ಐತಿಹಾಸಿಕ ವಾಸ್ತವಕ್ಕೂ ವ್ಯತ್ಯಾಸವಿದೆ. ಕ್ರಿ.ಪೂ. ೩ನೇ ಶತಮಾನದಿಂದ ಆಳ್ವಿಕೆ ಮಾಡಿದ ಮಹತ್ವಕಾಂಕ್ಷೆಯುಳ್ಳ ಮತ್ತು ಶಕ್ತಿಶಾಲಿಯಾದ ಸಾಮ್ರಾಟರು ವಿಶಾಲವಾದ ಪ್ರದೇಶಗಳನ್ನು ಗೆಲ್ಲುವ ಮತ್ತು ಒಗ್ಗೂಡಿಸುವ ಮೂಲಕ ಒಂದು ಏಕೀಕೃತ ದೇಶ ಕಟ್ಟಲು ಹೋರಾಡಿದ್ದಾರೆ, ಮತ್ತು ತಮ್ಮ ಆಳ್ವಿಕೆಯ ಅಡಿಯಲ್ಲಿ ಈ ಹಂಚಿ ಹೋದ ಸಣ್ಣ ಸಣ್ಣ ಪ್ರದೇಶಗಳನ್ನು ಒಂದುಗೂಡಿಸುವವರೆಗೂ ತಮ್ಮ ಆಳ್ವಿಕೆಯು ಸಂಪೂರ್ಣ ಎಂದು ಭಾವಿಸಿಕೊಳ್ಳುತ್ತಿರಲಿಲ್ಲ. ಇದರಲ್ಲಿ ಅಶೋಕ, ಗುಪ್ತ ಸಾಮ್ರಾಟರು, ಅಲ್ಲಾವುದ್ದೀನ್ ಖಿಲ್ಜಿ, ಮೊಘಲರು ಮತ್ತು ಇತರೆ ಸಾಮ್ರಾಟರು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಭಾರತೀಯ ಚರಿತ್ರೆಯಲ್ಲಿ ಬೃಹತ್ ದೇಶಿ ಸಾಮ್ರಾಜ್ಯಗಳು ಅನುಕ್ರಮವಾಗಿ ವಿಭಜನೆಯಾದ ಸಾಮ್ರಾಜ್ಯಗಳಾಗಿ ಬದಲಾಗಿದ್ದನ್ನು ಕಾಣಬಹುದು. ಆದ್ದರಿಂದ ನಾವು ೧೮ನೇ ಶತಮಾನದ ಭಾರತದಂತೆ ಇತಿಹಾಸದುದ್ದಕ್ಕೂ ಭಾರತವು ಸಣ್ಣ ಸಣ್ಣ ಸಾಮ್ರಜ್ಯಗಳಲ್ಲಿ ಚದುರಿ ಹೋಗಿತ್ತು ಮತ್ತು ಬ್ರಿಟೀಷರೇ ಮೊದಲ ಬಾರಿಗೆ ಈ ಚದುರಿ ಹೋದ ಭಾರತೀಯ ವಿವಿಧ ಸಾಮ್ರಾಜ್ಯಗಳನ್ನು ಒಗ್ಗೂಡಿಸಿದರೆಂದು ನಾವು ತಪ್ಪಾಗಿ ಗ್ರಹಿಸಿಕೊಳ್ಳಬಾರದು.
ಇತಿಹಾಸದ ಪಠ್ಯ ಪುಸ್ತಕಗಳು ಬ್ರಿಟಿಷರನ್ನು ಭಾರತದಲ್ಲಿ ಮೊಘಲರ ಉತ್ತರಾಧಿಕಾರಿಗಳು ಎಂದು ಬಿಂಬಿಸಿವೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ ಬ್ರಿಟಿಷರು ಮೊಘಲರನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬ್ರಿಟಿಷರ ಆಳ್ವಿಕೆಯು ಮೊಘಲರ ಅಧಿಕಾರ ಕ್ಷೀಣಿಸಿದ್ದ ಸಂದರ್ಭದಲ್ಲಿ ಭಾರತದಲ್ಲಿ ಶುರುವಾಯಿತು. ಬ್ರಿಟಿಷರು ಸೋಲಿಸಿದ್ದ ಬಂಗಾಳದ ನವಾಬನು ಮೊಗಲರ ಸಾಮಂತನಾಗಿದ್ದರೂ ಸಹ, ಅವರ ಆಜ್ಞೆಗಳನ್ನು ಗಂಭೀರವಾಗಿ ಪಾಲಿಸುತ್ತಿರಲಿಲ್ಲ. ಮೊಘಲ್ ಸಾಮ್ರಾಜ್ಯದ ಅಧಿಕಾರವು, ಪ್ರಬಲವಾದ ಸಾಮ್ರಾಜ್ಯವಾಗಿರದಿದ್ದರೂ ವ್ಯಾಪಕವಾಗಿ ಒಪ್ಪಿಗೆಯನ್ನು ಪಡೆದಿತ್ತು.
೧೮೫೭ ರ ಸಿಪಾಯಿ ದಂಗೆಯ ಸಂಧರ್ಭದಲ್ಲಿ ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯ ಭದ್ರ ಬುನಾದಿಯನ್ನು ಅಲುಗಾಡಿಸಿದಾಗ, ಅನೇಕ ಬ್ರಿಟಿಷ್ ವಿರೋಧಿ ಪಡೆಗಳು ಮೊಘಲ್ ಸಾಮ್ರಾಟನೇ ಭಾರತದ ರಾಜ ಎಂಬ ಸಹಮತದಲ್ಲಿ ಜಂಟಿ ಹೋರಾಟವನ್ನು ರೂಪಿಸಿದರು. ಮೊಘಲ್ ದೊರೆ ಬ್ರಿಟಿಷರ ವಿರುದ್ಧ ವಿರೋಧಿ ಪಡೆಗಳನ್ನು ಮುನ್ನೆಡೆಸುವುದನ್ನು ತಿರಸ್ಕರಿಸಿದರೂ ಸಹ ಬ್ರಿಟಿಷ್ ವಿರೋಧಿ ಪಡೆಗಳು ಮೊಘಲ್ ಸಾಮ್ರಾಟನನ್ನೇ ಭಾರತದ ಸಾಮ್ರಾಟನೆಂದು ಘೋಷಿಸಿದರು. ೮೨ ವರ್ಷದ ಮೊಘಲ್ ದೊರೆ ಜಾಫರ್ ಎಂದು ಕರೆಯಲ್ಪಡುವ ಬಹದ್ದೂರ್ ಷಾ-೨ನು ಕಾವ್ಯವನ್ನು ಓದುವುದು ಮತ್ತು ಬರೆಯುವುದರಲ್ಲಿ ಆಸಕ್ತನಾಗಿದ್ದನೇ ಹೊರತು ಯುದ್ಧ ಮಾಡುವುದರಲ್ಲಿ ಮತ್ತು ಭಾರತವನ್ನು ಆಳುವುದರಲ್ಲಿ ಅವನಿಗೆ ಯಾವ ಆಸಕ್ತಿಯು ಇರಲಿಲ್ಲ. ಬ್ರಿಟಿಷ್‌ರು ೧೪೦೦ ನಿರಾಯುಧ ದೆಹಲಿಯ ನಾಗರಿಕರನ್ನು ಕೊಂದು, ನಗರವನ್ನು ಬಹುಪಾಲು ನಾಶ ಮಾಡುವುದರ ಮೂಲಕ ದಂಗೆಯನ್ನು ಯಶಸ್ವಿಯಾಗಿ ಹತ್ತಿಕ್ಕಿದಾಗ ಮೊಘಲ್ ದೊರೆಯು ಯಾವ ವಿರೋಧವನ್ನು ತೋರಲಿಲ್ಲ. ನಂತರ ಕವಿ-ದೊರೆಯಾದ ಬಹದ್ದೂರ್‌ನನ್ನು ಬರ್ಮಾಗೆ ಗಡಿಪಾರು ಮಾಡಲಾಯಿತು.
ನನ್ನ ಬಾಲ್ಯದಲ್ಲಿ ಒಮ್ಮೆ, ೧೯೩೦ರ ದಶಕದಲ್ಲಿ ನನ್ನ ಪೋಷಕರು ಬರ್ಮಾದಲ್ಲಿದ್ದಾಗ ನನ್ನನ್ನು ಶ್ವೇಡಾಗನ್ ಪಗೋಡಗೆ ಸಮೀಪವಿರುವ ರಂಗೂನ್‌ನಲ್ಲಿರುವ ಜಾಫರ್ ಸಮಾಧಿ ನೋಡಲು ಕರೆದೊಯ್ದಿದ್ದರು.ನಿರ್ವಹಣೆ ಇಲ್ಲದ ತುಕ್ಕಿಡಿದ ಕಬ್ಬಿಣದಿಂದ ಮುಚ್ಚಿದ ಕಲ್ಲಿನ ಚಪ್ಪಡಿಗಿಂತ ಹೆಚ್ಚಾಗಿ ಸಮಾಧಿಯ ಬಳಿ ಗುರುತಿಸುವಂತಹದ್ದು ಏನೂ ಇರಲಿಲ್ಲ. ಭಾರತದ ಮತ್ತು ಬರ್ಮಾದ ಬ್ರಿಟೀಷ್ ಆಡಳಿತಗಾರರು ಮೊಘಲ್ ಕೊನೆ ದೊರೆಯ ಅವಶೇಷಗಳ ಪ್ರಚೋದಕ ಶಕ್ತಿಯ ಬಗೆಗೆ ಹೇಗೆ ಭಯಭೀತರಾಗಿರಬೇಕು ಎಂದು ನನ್ನ ತಂದೆಯ ಜೊತೆಗೆ ಚರ್ಚಿಸಿದ್ದು ನೆನಪಾಗುತ್ತಿದೆ. ಸಮಾಧಿಯ ಮೇಲೆ ”ಬಹದ್ದೂರ್ ಷಾ ದೆಹಲಿಯ ಮಾಜಿ ದೊರೆ” ಎಂಬ ಉಲ್ಲೇಖವಿತ್ತು. ಆದರೆ ಸ್ಮರಣೆಯಲ್ಲಿ ಸಾಮ್ರಾಟ ಎಂಬ ಪ್ರಸ್ತಾಪವಿರಲಿಲ್ಲ! ೧೯೯೦ ರ ದಶಕದಲ್ಲಿ ಮೊಘಲ್ ಸಾಮ್ರಾಟನ ಸಮಾಧಿಗೆ ಸಲ್ಲಬೇಕಾಗಿರುವ ಗೌರವವನನ್ನು ಸಲ್ಲಿಸಲಾಯಿತು.
ಬ್ರಿಟಿಷ್ ರಾಜ್ ಅನುಪಸ್ಥಿತಿಯಲ್ಲಿ, ಬಹುಶಃ ಮೊಘಲರ ಉತ್ತರಾಧಿಕಾರಿಗಳಾಗಿ ಬಾಂಬೆ ಹತ್ತಿರ ಹೊಸದಾಗಿ ಉದಯವಾಗುತ್ತಿದ್ದ ಹಿಂದೂ-ಮರಾಠ ಸಾಮ್ರಜ್ಯ ಭಾರತದಾದ್ಯಂತ ಅಧಿಕಾರವನ್ನು ನಡೆಸುತ್ತಿದ್ದರು. ಈ ಹೊಸ ಸಾಮ್ರಜ್ಯವು ಆಗಿಂದಾಗ್ಗೆ ಮೊಘಲರ ರಾಜಧಾನಿ ದೆಹಲಿಯ ಮೇಲೆ ಧಾಳಿ ಮಾಡಿ ಸೂರೆ ಮಾಡುತ್ತಿದ್ದರು ಮತ್ತು ಭಾರತದಾದ್ಯಂತ ಅಧಿಕಾರ ಚಲಾಯಿಸುವ ಪ್ರಯತ್ನವನ್ನೂ ಮಾಡುತ್ತಿದ್ದರು. ಆದ್ದರಿಂದ ೧೭೪೨ ರ ಹೊತ್ತಿಗೆ, ಈಸ್ಟ್ ಇಂಡಿಯಾ ಕಂಪನಿಯು ಮರಾಠ ಅಶ್ವಸೇನೆಯ ಮಿಂಚಿನ ದಾಳಿಯನ್ನು ತಡೆಯಲು ಕಲ್ಕತ್ತಾದ ಅಂಚಿನಲ್ಲಿ ”ಮರಾಠ ಕಂದಕ”ವನ್ನು ನಿರ್ಮಿಸಿತ್ತು. ಆದರೂ ಮರಾಠರು ಏಕೀಕೃತ ಭಾರತವನ್ನು ಆಳುವುದರಿಂದ ಇನ್ನು ತುಂಬಾ ದೂರದಲ್ಲಿದ್ದರು.
ಬ್ರಿಟಿಷರು ಉಪಖಂಡದಾದ್ಯಂತ ಪ್ರಬಲ ಅಧಿಕಾರದ ಕೇಂದ್ರವನ್ನು ಸ್ಥಾಪಿಸುವವರೆಗೂ ತೃಪ್ತರಾಗಲಿಲ್ಲ. ಪ್ಲಾಸಿ ಕದನದ ತಕ್ಷಣ ಬ್ರಿಟಿಷರು ತಮ್ಮ ಆಡಳಿತವನ್ನು ತಮ್ಮ ಸಾಮ್ರಾಜ್ಯಶಾಹಿಯ ಕೇಂದ್ರವಾದ ಕಲ್ಕತ್ತಾದಿಂದ ದೇಶದ ಉಳಿದ ಭಾಗಗಳಿಗೆ ವಿಸ್ತರಿಸಿದರು. ಕಂಪನಿಯ ಅಧಿಕಾರವು ಭಾರತದಾದ್ಯಂತ ವಿಸ್ತರಿಸಿದಂತೆ ಕಲ್ಕತ್ತವು ಭಾರತದ ಹೊಸ ರಾಜಧಾನಿಯಾಯಿತು ಮತ್ತು ೧೯೧೧ರಲ್ಲಿ ದೆಹಲಿಯನ್ನು ರಾಜಧಾನಿ ಮಾಡುವವರೆಗೆ ಮುಂದುವರಿಯಿತು. ಕಲ್ಕತ್ತಾದಿಂದಲೇ ದೇಶದ ಇತರೆ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಯೋಜನೆಯನ್ನು ತಯಾರಿಸಿ ಕಾರ್ಯ ರೂಪಕ್ಕೆ ತರಲಾಯಿತು. ಈಸ್ಟ್ ಇಂಡಿಯಾ ಕಂಪನಿಯು ಬಂಗಾಳದಲ್ಲಿ ಆರ್ಥಿಕ ಚಟುವಟಿಕೆಗಳಿಂದ ಗಳಿಸಿದ ಲಾಭದಿಂದಲೇ ಬ್ರಿಟಿಷ್ ವಸಾಹತುಶಾಹಿಯ ವಿಸ್ತರಣ ಅವಧಿಯಲ್ಲಿ ನಡೆಸಿದ ಯುದ್ಧಗಳಿಗೆ ಹಣಕಾಸು ವ್ಯವಸ್ಥೆಯನ್ನು ಮಾಡಲಾಯಿತು.ಪ್ಲಾಸಿ ಕದನದ ನಂತರ ”ಬಂಗಾಳದ ಆರ್ಥಿಕ ರಕ್ತಸ್ರಾವ” ಬಹಳ ಬೇಗನೆ ಶುರುವಾಯಿತು. ಬಂಗಾಳದ ನವಾಬನು ತನ್ನ ಅಧೀನದಲ್ಲಿ ಇದ್ದದುರಿಂದ ಕಂಪನಿಯು ಅತ್ಯಧಿಕ ಪ್ರಾದೇಶಿಕ ಆದಾಯವನ್ನಷ್ಟೇ ಗಳಿಸದೆ, ಸುಂಕ ರಹಿತ ವ್ಯಾಪಾರದಿಂದಲೂ ಹೆಚ್ಚಿನ ಆದಾಯವನ್ನು ಗಳಿಸುತ್ತಿತ್ತು.
ಇದಿಷ್ಟೇ ಅಲ್ಲದೇ ಸ್ಥಳೀಯ ವರ್ತಕರಿಂದ ಕೊಡುಗೆಯ ರೂಪದಲ್ಲಿಯು ಸಹ ಕಂಪನಿ ಆದಾಯ ಗಳಿಸುತ್ತಿತ್ತು. ಬ್ರಿಟಿಷ್ ಸಾಮ್ರಜ್ಯದ ವೈಭವದಿಂದ ಪ್ರೇರಿತರಾಗಲು ಬಯಸುವವರು ಆಡಮ್ ಸ್ಮಿತ್‌ನ ”ದ ವೆಲ್ತ್ ಆಫ್ ನೇಷನ್ಸ್” ನಲ್ಲಿ ಚರ್ಚಿಸಿರುವ ವ್ಯಾಪಾರಿ ಕಂಪನಿಯು ಇಂಡಿಯಾದಲ್ಲಿ ಹೇಗೆ ರಾಜ್ಯಗಳ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅವುಗಳ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸಿತು ಎಂಬ ಭಾಗವನ್ನು ಓದುವುದಿಲ್ಲ. ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಗಮನಿಸಿದಂತೆ” ಆರ್ಥಿಕ ಅಂಕಿ ಅಂಶಗಳು ವಾಸ್ತವದ ಬಗ್ಗೆ ಮಾತನಾಡುತ್ತವೆ. ೧೬೦೦ ರಲ್ಲಿ ಕಂಪನಿಯು ಸ್ಥಾಪನೆಗೊಂಡಾಗ ಬ್ರಿಟನ್‌ನ ಜಿಡಿಪಿಯು ೧.೮% ಇದ್ದರೆ, ಭಾರತದ ಜಿಡಿಪಿಯು ೨೨.೫% ರಷ್ಟಿತ್ತು. ನಂತರದ ಕಾಲದಲ್ಲಿ ಬ್ರಿಟಿಷ್ ರಾಜ್ ಭಾರತದಲ್ಲಿ ಉತ್ತುಂಗ ಸ್ಥಿತಿಯನ್ನು ತಲುಪಿದಾಗ ಈ ಅಂಕಿಅಂಶಗಳು ಹೆಚ್ಚು ಕಡಿಮೆ ಅದಲು ಬದಲು ಆದವು. ಕಾಲಕ್ರಮೇಣ, ವಿಶ್ವದ ಉತ್ವಾದನ ರಾಷ್ಟ್ರಗಳಲ್ಲೇ ಮುಂಚೂಣಿಯಲ್ಲಿದ್ದ ಭಾರತವನ್ನು ಬರಗಾಲ, ಕ್ಷಾಮ ಮತ್ತು ಕೊರತೆಯ ಸಂಕೇತದ ರಾಷ್ಟ್ರವನ್ನಾಗಿ ಮಾಡಲಾಯಿತು.
ಬಂಗಾಳದ ಆರ್ಥಿಕ ಲೂಟಿಯ ಅಧಿಕ ಲಾಭಾಂಶವನ್ನು ಬ್ರಿಟಿಷ್ ಅಧಿಕಾರಿಗಳು ಗಳಿಸಿದರೂ ಸಹ ಬ್ರಿಟನ್‌ನ ರಾಜಕೀಯ ನಾಯಕರು ಮತ್ತು ದೊಡ್ಡ ವ್ಯಾಪಾರಿಗಳು ಕೂಡ ಈ ಲೂಟಿಯ ಪಾಲುದಾರರಾಗಿದ್ದರು. ಪ್ಲಾಸಿ ಕದನದ ನಂತರ ಬ್ರಿಟಿಷ್ ಸಂಸತ್ತಿನ ಸುಮಾರು ಕಾಲು ಭಾಗದಷ್ಟು ಸದಸ್ಯರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಷೇರುದಾರರಾಗಿದ್ದರು. ಹೀಗೆ ಬ್ರಿಟಿಷ್ ವ್ಯವಸ್ಥೆಯು ಬ್ರಿಟಿಷ್ ಭಾರತೀಯ ಸಾಮ್ರಜ್ಯದಿಂದ ವಾಣಿಜ್ಯ ಲಾಭಗಳನ್ನು ಪಡೆಯಿತು.
ಅಂತಿಮವಾಗಿ ಈ ಆಳುವ ಮತ್ತು ಕೊಳ್ಳೆ ಹೊಡೆಯುವ ಸಂಯೋಜನೆಯ ಪರಿಣಾಮವಾಗಿ ಕಾನೂನು ಮತ್ತು ಸುವ್ಯವಸ್ಥಿತ ಆಡಳಿತದ ಅಗತ್ಯತೆಗಳನ್ನು ತಿಳಿದು ಕೊನೆಗೆ ವಸಾಹತುಶಾಹಿಗೆ ದಾರಿ ಮಾಡಿಕೊಟ್ಟಿತು. ಆದರೆ ಈಸ್ಟ್ ಇಂಡಿಯಾ ಕಂಪನಿಯ ದುರಾಡಳಿತದಿಂದ ಬಂಗಾಳದ ಆರ್ಥಿಕತೆಯು ಭಾರಿ ನಷ್ಟಕ್ಕೆ ಸಿಲುಕಿತ್ತು. ೧೭೦೩ ರಲ್ಲಿ ನಕ್ಷಾಶಾಸ್ತ್ರಜ್ಞ ಜಾನ್ ಥಾರ್ನ್ಟನ್ ಬಂಗಾಳವನ್ನು ಅತಿ ಶ್ರೀಮಂತ ಸಾಮ್ರಜ್ಯವೆಂದು ವರ್ಣಿಸಿದ್ದ . ಆದರೆ ೧೭೬೯-೭೦ರ ಅವಧಿಯಲ್ಲಿ ಬಂಗಾಳವು ಭೀಕರ ಕ್ಷಾಮದಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಜನರನ್ನು ಕಳೆದುಕೊಂಡಿತು. ಆಹಾರದ ಕೊರತೆ ಮತ್ತು ಮರಣ ಪ್ರಮಾಣವನ್ನು ಗಮನಿಸಿದರೆ ಇದೊಂದು ದೊಡ್ಡ ದುರಂತವೆಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಮೂರನೇ ಒಂದು ಭಾಗದಷ್ಟು ಜನರು ಸತ್ತರು ಎಂಬ ಅಂಕಿಅಂಶವು ನಂಬಲಸಾಧ್ಯವಾದುದು. ಈ ಭಾಗದಲ್ಲಿ ಸ್ವತಂತ್ರ ನಂತರದ ಅವಧಿಯಲ್ಲಿ ಬಹಳ ಕಾಲದವರೆಗೆ ಯಾವುದೇ ಕ್ಷಾಮಗಳು ಸಂಭವಿಸಿಲ್ಲ.
ಈ ದುರಂತವು ಎರಡು ಪ್ರಮುಖ ಪರಿಣಾಮಗಳನ್ನು ಬೀರಿತು. ಮೊದಲನೆಯದಾಗಿ, ಅಸಮಾನತೆಯಿಂದ ಕೂಡಿದ ಆರಂಭದ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನಿನಲ್ಲೆ ಪ್ರಖರವಾದ ರಾಜಕೀಯ ವಿಮರ್ಶೆ ಮಾಡಲಾಯಿತು.ಆಡಮ್ ಸ್ಮಿತ್ ನ ”ದ ವೆಲ್ತ್ ಆಫ್ ನೇಷನ್ಸ್”ನಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಆಕ್ರಮಿತ ಪ್ರದೇಶಗಳನ್ನು ಆಳಲು ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿ ಬರೆದನು ಮತ್ತು ನಂತರ ಎಡ್‌ಮಂಡ್ ಬರ್ಕ್ರಂತಹ ಅನೇಕ ಬ್ರಿಟಿಷ್ ಚಿಂತಕರು ಇಂತಹದೇ ಟೀಕೆಯನ್ನು ಕಂಪನಿಯ ವಿರುದ್ಧ ಮಾಡಿದರು. ಎರಡನೆಯದಾಗಿ ಬಂಗಾಳದ ಆರ್ಥಿಕ ಅಧಃಪತನವು ಕೊನೆಗೆ ಕಂಪನಿಯ ವ್ಯವಹಾರವನ್ನು ಹಾಳು ಮಾಡುವ ಮೂಲಕ ಬ್ರಿಟಿಷ್ ಹೂಡಿಕೆದಾರರನ್ನ ಘಾಸಿಗೊಳಿಸಿತು. ಇದರ ಪರಿಣಾಮವಾಗಿ ಕಂಪನಿಯ ಕೈಯಿಂದ ವ್ಯಾಪಾರ ವಹಿವಾಟು ಮತ್ತು ಆಡಳಿತವು ಬ್ರಿಟಿಷ್ ಸರ್ಕಾರದ ನೇರ ಅಂಕೆಗೆ ಒಳಪಟ್ಟಿತು. ಬ್ರಿಟಿಷ್ ಆಳ್ವಿಕೆ ಆರಂಭವಾದ ”ಪೂರ್ವ ಪ್ಲಾಸಿ ಲೂಟಿ”ಯ ಅವಧಿ ಎಂದು ಕರೆಯಲ್ಪಡುವ, ೧೮ನೇ ಶತಮಾನದ ಕೊನೆಯ ಅವಧಿಯು ಭಾರತವನ್ನು ವಸಾಹತು ಸ್ವಾಧೀನಕ್ಕೆ ತಳ್ಳಿತು ಮತ್ತು ಇದು ನಂತರದಲ್ಲಿ ಸಾಮ್ರಜ್ಯಶಾಹಿಯ ಉತ್ತಮ ಮಾನದಂಡವಾಯಿತು ಮತ್ತು ಉಪಖಂಡವು ಆನಂತರದ ನೂರೈವತ್ತು ವರ್ಷಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಯೊಂದಿಗೆ ಹೆಚ್ಚು ಪರಿಚಿತವಾಯಿತು.
೧೮ ನೇ ಶತಮಾನದ ದ್ವಿತೀಯಾರ್ಧದಲ್ಲಿ ಶುರುವಾಗಿ ೧೯೪೭ರಲ್ಲಿ ಸ್ವತಂತ್ರ ಪಡೆಯುವ ವರೆಗು ಅಸ್ತಿತ್ವದಲ್ಲಿದ್ದ ಈ ಧೀರ್ಘಾವದಿಯ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯಶಾಹಿಯು ಯಶಸ್ವಿಯಾಗಿದ್ದಾದರು ಹೇಗೆ? ಪ್ರಜಾಪ್ರಭುತ್ವ, ಕಾನೂನು ವ್ಯವಸ್ಥೆ, ರೈಲ್ವೆ ವ್ಯವಸ್ಥೆ, ಜಂಟಿ ಬಂಡವಾಳ ಮಾರುಕಟ್ಟೆ ಮತ್ತು ಕ್ರಿಕೆಟ್ ಗಳನ್ನು ಭಾರತಕ್ಕೆ ನಾವು ನೀಡಿದ ಕೊಡುಗೆಗಳೆಂದು ಬ್ರಿಟಿಷರು ಹೇಳಿಕೊಂಡರೂ ಕೂಡ ಕ್ರಿಕೆಟ್ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿನ ಅವರ ಕೊಡುಗೆಯ ವಾಸ್ತವ ಸತ್ಯ ಸಾಮ್ರಜ್ಯಶಾಹಿ ಇತಿಹಾಸದುದ್ದಕ್ಕು ಎರಡು ದೇಶಗಳ ಮಧ್ಯೆ ಬೇರೆಯೇ ಇತ್ತು. ಸ್ವತಂತ್ರ ಬರುವವರೆಗೂ ವಾಸ್ತವದಲ್ಲಿನ ಅವರ ಸಾಧನೆಗಳನ್ನು ಒಟ್ಟುಗೂಡಿಸಿ ಅವರ ವಾಗಾಡಂಬರದ ಸಾಧನೆಗಳೊಂದಿಗೆ ಹೋಲಿಸಿ ನೋಡಿದಾಗ ಕ್ರಿಕೆಟ್ ಹೊರತು ಪಡಿಸಿ ಕಾಣುವ ಅವರ ನೈಜ ಸಾಧನೆಗಳು ಅತ್ಯಲ್ಪವಾಗಿವೆ.
ರುಡ್ಯಾರ್ಡ್ ಕಿಪ್ಲಿಂಗ್‌ರವರು ಸಾಮ್ರಾಜ್ಯಶಾಹಿ ಕುರಿತ ತನ್ನ ಜನಪ್ರಿಯ ”ವೈಟ್ ಮ್ಯಾನ್ಸ್ ಬರ್ಡನ್” ಎನ್ನುವ ಕವಿತೆಯಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಆಡಳಿತಗಾರರನ್ನು ಪ್ರಶಂಶಿಸಿ ಗುಣಗಾನ ಮಾಡಿದ್ದಾನೆ. ವಸಾಹತು ಜನರನ್ನು ನಾಗರೀಕರನ್ನಾಗಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕೆಂದು ಬಿಳಿಯ ಜನಾಂಗದವರನ್ನು ಹುರಿದುಂಬಿಸುತ್ತಾನೆ.
” ತೆಗೆದುಕೊ ಬಿಳಿ ಜನಾಂಗದ ಭಾರವನ್ನು ,ಹೂಡು ಕ್ರೂರ ಶಾಂತಿಯ ಯುದ್ಧಗಳನ್ನು,
ಕ್ಷಾಮಗಳ ಹಸಿವಿಗೆ ಕೂಳನ್ನ ಸುರಿ , ಸಾಂಕ್ರಾಮಿಕ ಖಾಯಿಲೆಗಳಿಗೆ ವಿದಾಯ ಹಾಡು.. “
ಬ್ರಿಟಿಷರು ಭಾರತದಲ್ಲಿ ರೋಗರುಜಿನಗಳನ್ನಾಗಲಿ ಅಥವಾ ಕ್ಷಾಮಗಳನ್ನು ತಡೆಗಟ್ಟುವ ಅತ್ಯುತ್ತಮ ಸಾಧನೆಗಳನ್ನೇನೂ ಮಾಡಲಿಲ್ಲ. ಬ್ರಿಟಿಷ್ ಆಳ್ವಿಕೆಯು ಭಾರತದಲ್ಲಿ ಅಂತ್ಯಗೊಂಡಾಗ ಭಾರತೀಯರ ಸರಾಸರಿ ಜೀವಿತಾವಧಿ ಬರೀ ೩೨ ವರ್ಷಗಳಾಗಿದ್ದವು.ವಸಾಹತುಶಾಹಿ ಆಳ್ವಿಕೆಯು ಆಕ್ರಮಿತ ದೇಶದ ಜನರ ಮೂಲಭೂತ ಶಿಕ್ಷಣದ ಅಗತ್ಯತೆಗಳ ಬಗ್ಗೆ ಉದಾರವಾಗಿಯೇನು ನಡೆದುಕೊಂಡಿರಲಿಲ್ಲ. ಆಳುವವರು ಮತ್ತು ಆಳಿಸಿಕೊಳ್ಳುವ ದೇಶಗಳ ಜನರ ನಡುವೆ ಅಜಗಜಾಂತರ ವ್ಯತ್ಯಾಸವಿತ್ತು. ೧೯ನೇ ಶತಮಾನದಲ್ಲಿ ಬ್ರಿಟಿಷ್ ಸರ್ಕಾರವು ತನ್ನ ದೇಶದಲ್ಲಿ ಸಾರ್ವತ್ರಿಕ ಸಾಕ್ಷರತೆಯನ್ನು ಸಾಧಿಸಲು ಧೃಡ ನಿರ್ಣಯ ಕೈಗೊಂಡಿದ್ದ ಸಂಧರ್ಭದಲ್ಲಿ ಭಾರತದಲ್ಲಿ ಸಾಕ್ಷರತೆಯ ಪ್ರಮಾಣವು ತುಂಬಾ ಕನಿಷ್ಟ ಮಟ್ಟದಲ್ಲಿತ್ತು. ಬ್ರಿಟಿಷ್ ಆಳ್ವಿಕೆಯು ಭಾರತದಲ್ಲಿ ಅಂತ್ಯಗೊಂಡಾಗ ಭಾರತೀಯರ ವಯಸ್ಕರ ಸಾಕ್ಷರತೆಯ ಪ್ರಮಾಣವು ಕೇವಲ ೧೫% ರಷ್ಟಿತ್ತು. ಹೆಚ್ಚಿನ ಸಾಕ್ಷರತೆಯನ್ನು ಸಾಧಿಸಿದ್ದ ಪ್ರದೇಶಗಳೆಂದರೆ ಸ್ಥಳೀಯ ಸಾಮ್ರಜ್ಯಗಳಾದ ತಿರುವಾವಂಕೂರು ಮತ್ತು ಕೊಚ್ಚಿನ್(ಬ್ರಿಟಿಷ್ ಆಡಳಿತದಿಂದ ಹೊರವಿದ್ದ ಸಾಮ್ರಜ್ಯಗಳು). ಈ ಸಾಮ್ರಜ್ಯಗಳು ವಿದೇಶಾಂಗ ನೀತಿ ಮತ್ತು ರಕ್ಷಣ ವಿಷಯಗಳಲ್ಲಿ ಬ್ರಿಟಿಷ್ ಆಡಳಿತವನ್ನು ಅವಲಂಬಿಸಿದ್ದರೂ ತಾಂತ್ರಿಕವಾಗಿ ಬ್ರಿಟಿಷ್ ಆಡಳಿತದಿಂದ ಹೊರವಿದ್ದು, ತಮ್ಮದೇ ಆದ ಸ್ಥಳೀಯ ಆಡಳಿತದಲ್ಲಿ ಗಣನೀಯ ಪ್ರಮಾಣದ ಸ್ವತಂತ್ರವನ್ನು ಹೊಂದಿದ್ದರಿಂದ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಅಭಿವೃದ್ಧಿಯನ್ನು ಸಾಧಿಸಿದ್ದವು.
೨೦೦ ವರ್ಷಗಳ ವಸಾಹತುಶಾಹಿ ಆಡಳಿತದ ಅವಧಿಯು ಆರ್ಥಿಕ ಜಡತ್ವದ ಅವಧಿಯಾಗಿದ್ದು, ತಲಾದಾಯದಲ್ಲಿ ಯಾವುದೇ ಪ್ರಗತಿಯನ್ನು ಕಂಡಿರಲಿಲ್ಲ. ಈ ಕ್ರೂರ ಸಂಗತಿಗಳನ್ನು ಸ್ವತಂತ್ರ ನಂತರದ ದಿನಗಳಲ್ಲಿ ಹೊಸದಾಗಿ ಸ್ವತಂತ್ರ ಪತ್ರಿಕಾ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು. ಈ ವಿಮೋಚನ ಮಾಧ್ಯಮದ ಶ್ರೀಮಂತ ಸಂಸ್ಕೃತಿಯು ಬ್ರಿಟಿಷ್ ನಾಗರೀಕ ಸಮಾಜದ ಬಳುವಳಿಯೇ ಆಗಿತ್ತು ಎಂಬುದನನ್ನು ನಾವು ಒಪ್ಪಿಕೊಳ್ಳಬೇಕು. ಬ್ರಿಟಿಷ್ ರಾಜ್ ಸಂದರ್ಭದಲ್ಲಿ ಅದರಲ್ಲೂ ವಿಶೇಷವಾಗಿ ಬಂಗಾಳದ ಕ್ಷಾಮದ ಸಂದರ್ಭದಲ್ಲಿ ಸಾಮ್ರಜ್ಯಶಾಹಿ ಆಡಳಿತವನ್ನು ಟೀಕಿಸುವ ಭಾರತೀಯ ಮಾಧ್ಯಮಗಳ ಸ್ವತಂತ್ರವನ್ನು ನಿರ್ಭಂದಿಸಿದ್ದರೂ ಸಹ ಬ್ರಿಟನಿನಲ್ಲಿ ಜಾಗರುಕತೆಯಿಂದ ಪೋಷಿಸಿದ ಮುಕ್ತ ಪತ್ರಿಕಾ ಪರಂಪರೆಯು ಸ್ವತಂತ್ರ ನಂತರದ ಭಾರತಕ್ಕೆ ಉತ್ತಮ ಮಾದರಿಯನ್ನು ಒದಗಿಸಿತು.
ಖಂಡಿತವಾಗಿ ಭಾರತವು ಬ್ರಿಟಿಷ್ ಆಡಳಿತದಿಂದ ಅನೇಕ ರಚನಾತ್ಮಕ ವಿಷಯಗಳನ್ನು ಪಡೆದುಕೊಂಡಿದೆ. ಆದರೆ ಈ ರಚನಾತ್ಮಕ ವಿಷಯಗಳನ್ನು ಸ್ವತಂತ್ರದ ನಂತರವೇ ಪೂರ್ಣ ರೂಪದಲ್ಲಿ ಗುರುತಿಸುವಂತಾಗಿದ್ದು. ಭಾರತೀಯ ವಿವಿಧ ಭಾಷೆಗಳ ಸಾಹಿತ್ಯವು ಇಂಗ್ಲಿಷ್ ಸಾಹಿತ್ಯದಿಂದ ಸ್ಪೂರ್ತಿಯನ್ನಷ್ಟೇ ಪಡೆಯದೇ ಅನೇಕ ಸಾಹಿತ್ಯದ ಪ್ರಕಾರಗಳನ್ನು ಎರವಲು ಪಡೆಯಿತು ವಿಶೇಷವಾಗಿ ಕಾದಂಬರಿ ಪ್ರಕಾರವನ್ನು. ಬ್ರಿಟಿಷ್ ರಾಜ್ ಸಂದರ್ಭದಲ್ಲಿ ಪುಸ್ತಕಗಳನ್ನು ಮುದ್ರಿಸುವುದರ ಮೇಲೆ, ಓದುವುದರ ಮೇಲೆ ನಿಯಂತ್ರಣಗಳಿದ್ದವು. ಟ್ಯಾಗೋರ್ ರವರ ಕೆಲವು ಪುಸ್ತಕಗಳನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ದಿನಮಾನಗಳಲ್ಲಿ ಭಾರತೀಯ ಸರ್ಕಾರಕ್ಕೆ ಪುಸ್ತಕಗಳನ್ನು ನಿಷೇಧಿಸುವ ಯಾವ ಅವಶ್ಯಕತೆಯು ಇಲ್ಲದಿದ್ದರೂ ದೇಶಿಯ ರಾಜಕಾರಣದ ಕಾರಣಗಳಿಂದಾಗಿ ಕೆಲವೊಮ್ಮೆ ವಸಾಹತುಶಾಹಿ ಆಳ್ವಿಕೆಗಿಂತ ಹೆಚ್ಚಿನ ನಿರ್ಭಂಧನೆಗಳನ್ನು ಹೇರಲಾಗುತ್ತಿದೆ.
ಬಹುಪಕ್ಷೀಯ ಪ್ರಜಾಪ್ರಭುತ್ವ ಮತ್ತು ಮುಕ್ತ ಪತ್ರಿಕೋದ್ಯಮಗಳು ಇವುಗಳಲ್ಲಿ ಅತಿ ಪ್ರಮುಖವಾದವುಗಳು. ಆದರೆ ಇವುಗಳನ್ನು ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಸಾಮ್ರಜ್ಯಶಾಹಿಯ ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗಲಿಲ್ಲ. ಬ್ರಿಟಿಷರು ಭಾರತವನ್ನು ತೊರೆದು ಹೋದ ಮೇಲೆ ಕಾರ್ಯರೂಪಕ್ಕೆ ಬಂದವು. ಇವುಗಳು ಬ್ರಿಟನ್‌ನ ಸ್ವಂತ ಅನುಭವದಿಂದ ಕಲಿತ ಪಾಠಗಳಾಗಿವೆ ಮತ್ತು ಭಾರತವು ಬ್ರಿಟಿಷರು ದೇಶ ಬಿಟ್ಟು ಹೋದ ಮೇಲೆ ಈ ಅನುಭವಗಳನ್ನು ಸ್ವತಂತ್ರವಾಗಿ ಉಪಯೋಗಿಸಿಕೊಂಡಿತು. ಸಾಮ್ರಜ್ಯಶಾಹಿಯ ಆಡಳಿತಕ್ಕೆ ಸ್ವಲ್ಪ ಮಟ್ಟಿಗೆ ದಬ್ಬಾಳಿಕೆಯ ಅಗತ್ಯತೆಯಿರುತ್ತದೆ. ಮುಕ್ತ ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವವು ಅಸಮಾನತೆಯ ಅಧಿಕಾರವನ್ನು ಬಯಸುವುದಿಲ್ಲ ಏಕೆಂದರೆ ಇವೆರೆಡು ವಸಾಹತುಶಾಹಿಯ ಆಳ್ವಿಕೆಗೆ ಒಳಪಟ್ಟ ಪ್ರಜೆಗಳನ್ನು ನಿಯಂತ್ರಿಸಲು ತೊಡಕಾಗುತ್ತವೆ.
ಭಾರತದಂತಹ ರಾಷ್ಟ್ರಗಳಲ್ಲಿ ಕ್ಷಾಮವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿದ್ದೇವೆ ಎಂಬ ಬ್ರಿಟಿಷರ ಘೋಷಣೆಯ ಸಾಧನೆಯನ್ನು ಸಂದೇಹದಿಂದ ನೋಡುವುದರಲ್ಲಿ ಯಾವುದೇ ತಪ್ಪಿಲ್ಲವೆನಿಸುತ್ತದೆ. ೧೭೬೯-೭೦ರ ಕ್ಷಾಮದ ಸಂಧರ್ಭದಲ್ಲಿ ಬ್ರಿಟಿಷರ ಆಡಳಿತವು ಭಾರತದಲ್ಲಿ ಶುರುವಾಯಿತು ಮತ್ತು ತಮ್ಮ ಆಡಳಿತದ ಅವಧಿಯುದ್ಧಕ್ಕೂ ನಿಯಮಿತವಾಗಿ ಕ್ಷಾಮದ ಪರಿಸ್ಥಿತಿಗಳನ್ನು ಎದುರಿಸಿದರು. ೧೯೪೩ ರ ಭೀಕರ ಕ್ಷಾಮದೊಂದಿಗೆ ಬ್ರಿಟಿಷರ ಆಡಳಿತವು ಭಾರತದಲ್ಲಿ ಅಂತ್ಯಗೊಂಡಿತು. ಆಶ್ಚರ್ಯವೇನೆಂದರೆ, ೧೯೪೭ ರ ನಂತರ ಸ್ವತಂತ್ರ ಭಾರತದಲ್ಲಿ ಯಾವುದೇ ಕ್ಷಾಮಗಳು ಸಂಭವಿಸಿಲ್ಲ.
ವ್ಯಂಗವೇನೆಂದರೆ , ಸ್ವತಂತ್ರ ಭಾರತದಲ್ಲಿ ಕ್ಷಾಮಗಳನ್ನು ಕೊನೆಗಾಣಿಸಿದ ಸಂಸ್ಥೆಗಳಾದ ಪ್ರಜಾಪ್ರಭುತ್ವ ಮತ್ತು ಮುಕ್ತ ಪತ್ರಿಕಾ ಮಾಧ್ಯಮವು ಬ್ರಿಟಿಷರಿಂದ ಎರವಲು ಪಡೆದ ಸಂಸ್ಥೆಗಳು. ಈ ಸಂಸ್ಥೆಗಳು ಮತ್ತು ಕ್ಷಾಮಗಳನ್ನು ನಿಯಂತ್ರಸುವುದರ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳುವುದು ತುಂಬ ಸರಳವಾದುದ್ದಾಗಿದೆ. ಕ್ಷಾಮಗಳನ್ನು ನಿಯಂತ್ರಿಸುವುದು ತುಂಬಾ ಸುಲಭ. ಒಂದಿಷ್ಟು ಉಚಿತ ಆಹಾರ ಮತ್ತು ಕನಿಷ್ಟ ಕೂಲಿಯ ಉದ್ಯೋಗವನ್ನು ಒದಗಿಸುವ ಮೂಲಕ ಆಹಾರವನ್ನು ಮತ್ತು ಸಂಬಂಧಿಸಿದ ಆಹಾರ ಪಧಾರ್ಥಗಳನ್ನು ಕೊಳ್ಳುವ ಸಾಮರ್ಥ್ಯವನ್ನು ಜನರಲ್ಲಿ ಹೆಚ್ಚಿಸಿ ತೀವ್ರ ಹಸಿವಿನಿಂದ ಜನರನ್ನು ಪಾರು ಮಾಡಬಹುದು. ಯಾವುದೇ ಸರ್ಕಾರವು ಕಾರ್ಯ ನಿರ್ವಹಿಸುವ ಪ್ರಜಾಪ್ರಭುತ್ವದಲ್ಲಿ ಕ್ಷಾಮದ ಭಯವು ಸಣ್ಣ ಪ್ರಮಾಣದಲ್ಲಿರಲಿ ಅಥವಾ ದೊಡ್ಡ ಪ್ರಮಾಣದಲ್ಲೇ ಇರಲಿ ಮುಕ್ತ ಪತ್ರಿಕಾ ಮಾಧ್ಯಮವನ್ನು ಎದುರಿಸಿ ತನ್ನ ಸ್ವಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ತಡೆಯಬೇಕಾಗುತ್ತದೆ. ಮುಕ್ತ ಪತ್ರಿಕಾ ಮಾಧ್ಯಮವು ಉಲ್ಬಣಗೊಳ್ಳುವ ಕ್ಷಾಮದ ಸಂಗತಿಗಳನ್ನು ಸಾರ್ವಜನಿಕರಿಗೆ ತಿಳಿಸುತ್ತದೆ ಮತ್ತು ಸರ್ಕಾರಕ್ಕು ಸಹ ತಿಳಿಸುತ್ತದೆ. ಈ ಮೂಲಕ ಮಾಧ್ಯಮವು ಪರೋಕ್ಷವಾಗಿ ಸರ್ಕಾರಕ್ಕೆ ಅಗತ್ಯವಿರುವ ಕ್ಷಾಮದ ಬಗೆಗಿನ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿಳಂಬ ಮಾಡದೇ ಜನರ ನೆರವಿಗೆ ಧಾವಿಸುವಂತೆ ಮಾಡುತ್ತದೆ. ಕ್ಷಾಮವನ್ನು ನಿರ್ಲಕ್ಷಿಸಿದ ಮತ್ತು ಜನರ ನೆರವಿಗೆ ಧಾವಿಸದ ಸರ್ಕಾರವು ಕ್ಷಾಮದ ನಂತರದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾರರ ಕೃಪೆಗೆ ಒಳಗಾಗುವುದು ಸಾಧ್ಯವಿಲ್ಲ.
ವಿಶ್ವದ ಅಗ್ರಗಣ್ಯ ಪ್ರಜಾಸತ್ತಾತ್ಮಕ ರಾಷ್ಟ್ರವೊಂದು ನಮ್ಮನ್ನು ಆಳುತ್ತಿದ್ದರೂ ಮತ್ತು ಆ ದೇಶದ ಮಹಾನಗರಗಳು ಮುಕ್ತ ಪತ್ರಿಕೋದ್ಯಮಕ್ಕೆ ಪ್ರಸಿದ್ಧಿಯನ್ನು ಪಡೆದಿದ್ದರೂ, ಭಾರತೀಯರಿಗೆ ಎಲ್ಲಿಯವರೆಗೆ ಪ್ರಜಾಸತ್ತಾತ್ಮಕ ಹಕ್ಕುಗಳಿರಲಿಲ್ಲವೋ ಅಂದರೆ ಸ್ವತಂತ್ರ ಗಳಿಸುವವರೆಗೆ ಕ್ಷಾಮಗಳಿಂದ ಮುಕ್ತಿಯಿರಲಿಲ್ಲ. ಬ್ರಿಟನ್ ಮಹಾನಗರಗಳಲ್ಲಿ ಮುಕ್ತ ಪತ್ರಿಕೊದ್ಯಮವಿತ್ತೆ ವಿನಹಃ ಭಾರತದಂತಹ ವಸಾಹತು ದೇಶಗಳಲ್ಲಿ ಇರಲಿಲ್ಲ. ಈ ಸ್ವತಂತ್ರವುಳ್ಳ ಸಂಸ್ಥೆಗಳು ಆಳುವವರಿಗಾಗಿ ಇದ್ದವೇ ಹೊರತು ಸಾಮ್ರಜ್ಯಶಾಹಿ ಪ್ರಜೆಗಳಿಗಂತೂ ಇರಲಿಲ್ಲ.
೧೯೪೧ ರಲ್ಲಿ ಟ್ಯಾಗೋರ್ ರವರು ಬ್ರಿಟಿಷ್ ಆಡಳಿತದ ಬಗ್ಗೆ ಮಂಡಿಸಿದ ಪ್ರಬಲವಾದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದಂತೆ ಭಾರತವು ಬ್ರಿಟನ್ ಜೊತೆಗಿನ ಸಂಬಂಧದಿಂದ ಉತ್ತಮ ರೀತಿಯಲ್ಲಿ ಲಾಭವನ್ನು ಪಡೆದಿದೆ. ಉದಾಹರಣೆಗೆ ಟ್ಯಾಗೋರ್ ಹೇಳುವಂತೆ ”ಷೇಕ್ಸ್ಪಿಯರನ ನಾಟಕ ಮತ್ತು ಬೈರನ್‌ನ ಕಾವ್ಯವನ್ನು ಕೇಂದ್ರೀಕರಿಸಿದ ಚರ್ಚೆಗಳಿಂದ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ೧೯ನೇ ಶತಮಾನದ ವಿಶಾಲ ಹೃದಯದ ಉದಾರವಾದ ಸಿದ್ದಾಂತದಿಂದ ಭಾರತವು ಅನುಕೂಲ ಪಡೆಯಿತು”. ಆದರೆ ಬ್ರಿಟಿಷ್ ಆಡಳಿತದ ದುರಂತವನ್ನು ಠಾಗೂರರು ಈ ರೀತಿ ಹೇಳುತ್ತಾರೆ “ಬ್ರಿಟಿಷರು ತಮ್ಮ ನಾಗರೀಕತೆಯ ಉತ್ತಮವಾದುದನ್ನ, ಮನುಷ್ಯ ಸಂಬಂಧಗಳ ಘನತೆಯನ್ನು ಈ ದೇಶದ ಆಡಳಿತದಲ್ಲಿ ಪಾಲಿಸಲಿಲ್ಲ.” ಬ್ರಿಟಿಷರು ಭಾರತೀಯ ಪ್ರಜೆಗಳಿಗೆ ಸಾಮ್ರಾಜ್ಯದ ಬಗ್ಗೆ ಭೀತಿ ಹುಟ್ಟಿಸದೇ ಈ ಸ್ವತಂತ್ರಗಳನ್ನು ಪಡೆಯಲು ಅವಕಾಶ ಮಾಡಿಕೊಡಲಿಲ್ಲ.
ಬ್ರಿಟನ್‌ನ ಪಾತ್ರ ಮತ್ತು ಬ್ರಿಟಿಷ್ ಸಮ್ರಾಜ್ಯಶಾಹಿಯ ನಡುವಿನ ವ್ಯತ್ಯಾಸವು ನಮಗೆ ಸ್ಪಷ್ಟವಾಗಿರಲಿಲ್ಲ. ಬ್ರಿಟನ್‌ನ ಬಾವುಟ ”ಯೂನಿಯನ್ ಜಾಕ್”ನ್ನು ಭಾರತದಾದ್ಯಂತ ಕೆಳಗಿಳಿಸಿದಾಗ ಅದರ ವ್ಯತ್ಯಾಸವು ನಮಗೆ ಸ್ಪಷ್ಟವಾಗಿ ಗೋಚರಿಸಿತು.
ಕೃಪೆ : ಸಮಾಜಮುಖಿ
ಅನುವಾದ:
ವೀರೇಂದ್ರ ಯಾದವ್ ಬಿ.ಎಂ, ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ,ಕರ್ನಾಟಕ ಕಲಾ ಕಾಲೇಜು, ಧಾರವಾಡ.
ಪ್ರಸಿದ್ದ ಅರ್ಥಶಾಸ್ತ್ರಜ್ಞ. ಮಾನವ ಕಲ್ಯಾಣ ಅರ್ಥಶಾಸ್ತ್ರ (welfare economics) ಮತ್ತು ಸಾಮಾಜಿಕ ಆಯ್ಕೆಗಳ ಪ್ರತಿಪಾದನೆ (social choice theory)ಗಳಲ್ಲಿ ಮಾಡಿರುವ ಮಹತ್ವದ ಕೆಲಸಕ್ಕೆ ವಿಶ್ವಮಾನ್ಯರಾಗಿದ್ದಾರೆ. 1998ರ ವರ್ಷದ ನೊಬೆಲ್ ಪ್ರಶಸ್ತಿ ಹಾಗೂ ೧೯೯೯ರ ವರ್ಷದಲ್ಲಿನ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ವೂ ಸೇರಿದಂತೆ ವಿಶ್ವದಾದ್ಯಂತ ಅನೇಕ ಪ್ರಶಸ್ತಿ ಗೌರವಗಳು ಅವರಿಗೆ ಸಂದಿವೆ.