‘ಬೂತಾರಾಧನೆ’, ಕರ್ನಾಟಕ ಕರಾವಳಿ ಪ್ರದೇಶದ ಸಾಮಾಜಿಕ – ಸಾಂಸ್ಕೃತಿಕ ಪರಿಸರದಲ್ಲಿ ಹಾಸುಹೊಕ್ಕಾಗಿರುವ ಒಂದು ವಿಶಿಷ್ಟ ಆಚರಣೆ. ಸಾಮಾನ್ಯವಾಗಿ ಈ ‘ಬೂತ’(ದೈವ)ಗಳು ತಮ್ಮ ದೈವಿಕ ಶಕ್ತಿಯಿಂದ ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸುತ್ತದೆ ಎನ್ನುವುದು ನಂಬಿಕೆ. ಬಹಳಷ್ಟು ಬಾರಿ ಈ ‘ಬೂತ’ಗಳ ಹಿಂದಿನ ಕತೆಗಳೆಲ್ಲಾ ದುರಂತಮಯವಾಗಿದ್ದು, ಯಾವುದೋ ಸಾಮಾಜಿಕ ಸಂಘರ್ಷಕ್ಕೆ ತಮ್ಮ ಜೀವದ ಬೆಲೆ ತೆತ್ತು, ನಂತರ ಮಾಂತ್ರಿಕವಾಗಿ ‘ಕಣ್ಮರೆ’ ಯಾಗುವ ಮೂಲಕ ‘ದೈವ’ಗಳಾಗಿ ಮಾರ್ಪಾಡಾಗಿ ಆರಾಧನೆಗೆ ಒಳಪಟ್ಟಿರುವವೇ ಆಗಿವೆ. ಹೀಗೆ ‘ಮಾಯಕ’ವಾಗುವ ದೈವಗಳು ಮುಂದೆ ಅನೂಹ್ಯವಾದ ಮಾಯದ ಪರಿಧಿಯಲ್ಲಿ ಸಿಲುಕಿಕೊಂಡು ಇತರ ಜೀವಂತ ಜರ್ಜರಿತ ಜೀವಗಳ ರಕ್ಷಕರಾಗಿಬಿಡುತ್ತವೆ. ಹೀಗೆ ದೈವತ್ವಕ್ಕೆ ಏರಿದ ‘ಬೂತ’ ಗಳ ಹೋರಾಟದ ಬದುಕಿನ ಕತೆಗಳನ್ನು ‘ಪಾಡ್ದನ’ ಎನ್ನುವ ಜಾನಪದೀಯ ಹಾಡಿನ ರೂಪದಲ್ಲಿ ನಿರೂಪಿಸಲಾಗುತ್ತದೆ. ಈ ‘ಬೂತ’ಗಳು ಅಮೂರ್ತವಾದ ಜೀವ (totemic) ಸಂಕೇತಗಳಿಂದ ಬಿಂಬಿಸಲ್ಪಡುತ್ತವೆ.
‘ಕೋಲ’ ಎನ್ನುವುದು ಈ ದೈವಮಾನವರನ್ನು ಆಚರಣೆಯ ಮೂಲಕ ಆರಾಧಿಸುವ ಪ್ರಕ್ರಿಯೆ. ಈ ಆಚರಣೆಯ ಸಂದರ್ಭದಲ್ಲಿ ‘ಬೂತ’ಗಳು ಮೊದಲೇ ಗೊತ್ತುಮಾಡಿಟ್ಟುಕೊಂಡಿರುವ ದೇಹಗಳ (ಶ್ರೇಣೀಕೃತ ವ್ಯವಸ್ಥೆಯ ಕೆಳಜಾತಿಯಿಂದ ಬಂದ ಜನರ) ಮೂಲಕ ಪ್ರವೇಶ ಪಡೆದು ಲೌಕಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಿ ಜನರ ಜತೆ ಸಂವಹನ ನಡೆಸುತ್ತವೆ. ಮನೋವೈಜ್ಞಾನಿಕ ನೆಲೆಯಲ್ಲಿ ಇದನ್ನು ‘ಪೊಸೆಷನ್ ಸಿಂಡ್ರೋಮ್’ ಎನ್ನುತ್ತಾರೆ ಮತ್ತು ಈ ಪ್ರಕ್ರಿಯೆಗೆ ಒಳಗಾಗುವ ವ್ಯಕ್ತಿಯು ತಾತ್ಕಾಲಿಕವಾಗಿ ತನ್ನ ಐಹಿಕ ಗುರುತನ್ನು ಕಳೆದುಕೊಂಡು ಸಮಾಜದ ಒಪ್ಪಿಗೆಯಿಂದ ಇನ್ನೊಂದು ಬಾಹ್ಯ ಗುರುತಿನ ಸಮ್ಮೋಹನಕ್ಕೆ ಒಳಗಾಗುತ್ತಾನೆ. ‘ಕಾಂತಾರ’ (ಮಾಯಾ ಕಾಡು ಎಂದರ್ಥ) ಇಂತಹ ತಾರ್ಕಿಕ ದೃಷ್ಟಿಕೋನಕ್ಕೆ ಬದ್ದವಾಗಿಲ್ಲದಿದ್ದರೂ, ಇದರಲ್ಲಿ ಇಂತಹುದೇ ತಾತ್ಕಾಲಿಕ ಗುರುತಿನ ಸಮ್ಮೋಹನಕ್ಕಾಗೊಳಗಾಗುವ ನಾಯಕನಿದ್ದಾನೆ.
ಚಿತ್ರದ ಮುಖ್ಯಕತೆ ನಡೆಯುವುದು ೧೯೯೦ರ ದಶಕದಲ್ಲಿ. ಆದರೆ ಕತೆಯ ಹಿನ್ನೆಲೆ ಸುಮಾರು ೧೩೦ ವರುಷ ಹಳೆಯದ್ದು. ಸ್ಥಳೀಯ ಮುಖ್ಯಸ್ಥನೊಬ್ಬ ತನ್ನ ನೆಮ್ಮದಿಗೋಸ್ಕರ ತನ್ನ ಪ್ರದೇಶದ ಮೂಲನಿವಾಸಿಗಳೊಂದಿಗೆ ಅವರು ನಂಬಿಕೊಂಡು ಬಂದಿದ್ದ ಅಮೂರ್ತ ಜೀವ ಸಂಕೇತ (totem) ಕಲ್ಲನ್ನು ತನ್ನದಾಗಿಸಿಕೊಂಡು ಬದಲಿಗೆ ತನ್ನ ಭೂಮಿಯ ಒಡೆತನವನ್ನು ಅವರಿಗೆ ನೀಡುತ್ತಾನೆ. ಕಾಲಕ್ರಮೇಣ ೧೯೭೦ರ ಸುಮಾರಿಗೆ ಆ ಮುಖ್ಯಸ್ಥನ ವಂಶಜನೊಬ್ಬ ಮುಂಬೈಯಿಂದ ಹಿಂದಿರುಗಿ ಮೂಲನಿವಾಸಿಗಳಿಗೆ ಈ ಹಿಂದೆ ಕೊಟ್ಟಿದ್ದ ಭೂಮಿಯನ್ನು ವಾಪಸ್ ಪಡೆಯ ಬಯಸುತ್ತಾನೆ. ಕೊಟ್ಟ ಮಾತು ಹಿಂತಿರುಗಿಸುವುದು ಸುಲಭಸಾಧ್ಯವಾಗಿರುವಾಗ, ‘ಕೋಲ’ ನಡೆಯುತ್ತದೆ. ಈ ಕೋಲದ ಆಚರಣೆಯಲ್ಲಿ ದೈವದ ಪಾತ್ರಿಯಾಗಿರುವ ಅದೇ ಮೂಲನಿವಾಸಿಗಳ ವಂಶಜನಾಗಿರುವ ನಾಯಕನ ತಂದೆಯನ್ನು ಅನುಮಾನಿಸಲಾಗುತ್ತದೆ. ಇದು ದೈವಕ್ಕೇ ಮಾಡಿದ ಅವಮಾನವೆಂದು ದೈವಪಾತ್ರಿ ಸಿಟ್ಟಿನಲ್ಲಿ, ಕಾಡೊಳಗೆ ಓಡಿ ‘ಮಾಯ’ವಾಗುತ್ತಾನೆ. ಹೀಗೆ ‘ಮಾಯ’ವಾಗುವ ಮೊದಲು ಮುಖ್ಯಸ್ಥನ ಸಂತತಿಗೆ ಶಾಪವನ್ನೂ ಕೊಟ್ಟು ಹೋಗುತ್ತಾನೆ. ಶಾಪ ತಟ್ಟಿ ಮುಖ್ಯಸ್ಥನ ವಂಶಜ ಸಾಯುತ್ತಾನೆ.
ಇಪ್ಪತ್ತು ವರುಷಗಳ ನಂತರ, ‘ಮಾಯ’ವಾದ ದೈವಪಾತ್ರಿಯ ಮಗನಾದ ಶಿವ, ತಂದೆಯ ಅನುಪಸ್ಥಿತಿಯ ಪ್ರಭಾವವೋ ಎಂಬಂತೆ ಅವನ ಹೆಜ್ಜೆಯಲ್ಲಿ ಮುಂದುವರಿಯಲು ಹಿಂಜರಿದು ತಾನು ದೈವಪಾತ್ರಿಯಾಗಲು ಒಪ್ಪಿಕೊಳ್ಳುವುದಿಲ್ಲ. ಗೆಳೆಯರ ಜತೆ ಸೇರಿ ಉಂಡಾಡಿಯಂತೆ ತಂಟೆ ಗಲಾಟೆಯಂತಹ ಕೆಲಸಕ್ಕೆ ಬಾರದ ಚಟುವಟಿಕೆಗಳಲ್ಲಿಯೇ ಹೊತ್ತು ಕಳೆಯುತ್ತಾ, ತನ್ನ ಪ್ರೇಯಸಿಯ ಜತೆಗೂ ಒರಟಾಗಿ ವರ್ತಿಸುವಂತಹ ಸಹ್ಯಕರವಲ್ಲದ ವ್ಯಕ್ತಿತ್ವ ಶಿವನದ್ದು. ತೆರೆಯ ಮೇಲೆ ಅಷ್ಟೇನು ಯುವಕನ ಹಾಗೆ ಕಾಣದ ಈ ನಾಯಕನ ವಿಷಪೂರಿತ ಪುರುಷತ್ವ (Toxic masculinity) ‘ಬಾಹುಬಲಿ’ ಚಲನಚಿತ್ರದ ನಾಯಾಕನಿಗೂ ಹೆಮ್ಮೆ ಬರಿಸುವಂತದ್ದೆ. ಶಿವನ ಪ್ರೇಯಸಿ ವಿದ್ಯಾವಂತೆ. ಅರಣ್ಯ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಂಡಾಕೆಯಾದರೂ ಚಿತ್ರದ ಕೊನೆಯಲ್ಲಿ ಯುನಿಫಾರ್ಮ್ ಬದಲು ಸೀರೆ ಸುತ್ತಿಕೊಂಡು ಶಿವನನ್ನು ಮದುವೆಯಾಗುವ ಅನಿವಾರ್ಯತೆ ಆಕೆಯದ್ದು.
ಆರಂಭದಲ್ಲಿ ಶಿವನು ತನ್ನ ಜಮೀನುದಾರನ ಅಕ್ರಮ ಮರದ ವ್ಯಾಪಾರದಲ್ಲಿರುವ ಎಲ್ಲಾ ಅಡ್ಡ ಕೆಲಸಗಳಿಗೆ ಸಾಥ್ ನೀಡುವವನಾಗಿರುತ್ತಾನೆ. ಚಿತ್ರದ ಕಥಾವಸ್ತುವಿನಲ್ಲಿರುವ(plot), ಧಣಿಯ ಕುಟುಂಬದ ಮೇಲಿರುವ ಸುಮಾರು ೨೦ ವರುಷಗಳ ಹಿಂದಿನ ಶಾಪದ ಹಿನ್ನೆಲೆ, ಧಣಿ ಮತ್ತು ಶಿವನಿಗೂ ಆ ಕಾರಣಕ್ಕಾಗಿಯೇ ಇರುವ ಕೊಂಡಿಯನ್ನು ಹಾಗು ಅದಕ್ಕೂ ಹಿಂದೆ ಪಾಳೇಗಾರ ಹಾಗು ಮೂಲನಿವಾಸಿಗಳ ನಡುವೆ ಆಗಿರುವ ಜಮೀನಿನ ಒಪ್ಪಂದವನ್ನು ಸಲೀಸಾಗಿ ಮರೆತು ಬಿಡುತ್ತದೆ. ಬದಲಿಗೆ ಊರಿಗೆ ಹೊಸತಾಗಿ ನೇಮಿಸಲಾಗಿರುವ ಅರಣ್ಯಾಧಿಕಾರಿ ಮತ್ತು ಶಿವನ ನಡುವಿನ ತಕರಾರು ಮಾತು ಜಗಳ ಇವುಗಳ ಆಚೆ ಈಚೆಯೇ ಸುತ್ತುತ್ತಾ ಇರುತ್ತದೆ. ಆ ಊರಿನ ಜಾಗವನ್ನು ಸಂರಕ್ಷಿತ ಅರಣ್ಯ ಪ್ರದೇಶವನ್ನಾಗಿಸುವ ಸರಕಾರದ ಆದೇಶವನ್ನು ಜಾರಿಗೊಳಿಸುವ ಮತ್ತು ಅದಕ್ಕಾಗಿ ಅರಣ್ಯಕ್ಕೆ ಒತ್ತಾಗಿ ಇರುವ ಸಮುದಾಯವನ್ನು ಅಲ್ಲಿಂದ ಎಬ್ಬಿಸುವ ಪ್ರಯತ್ನ ಈ ಹೊಸ ಅಧಿಕಾರಿಯದ್ದು.
ಒಟ್ಟು ಚಿತ್ರದ ಕಾಲಾವಧಿಯಲ್ಲಿ (Screen time) ಸಮುದಾಯ ಮತ್ತು ಅರಣ್ಯಾಧಿಕಾರಿ ನಡುವಿನ ಸಂಘರ್ಷಕ್ಕೆ ನೀಡಿರುವ ಸಮಯ ನೋಡಿದರೆ, ಈ ಚಿತ್ರ ಊರಿನ ಜನರ ಹಕ್ಕುಗಳ ಬಗ್ಗೆ ಮಾತಾಡುತ್ತದೆಯೇನೋ ಎನ್ನುವಂತೆ ಅನ್ನಿಸಬಹುದು. ಶಿವ ಮತ್ತು ಗ್ರಾಮಸ್ಥರು, ಅರಣ್ಯಾಧಿಕಾರಿ ತಂಡವು ತಮ್ಮನ್ನು ಬಲವಂತವಾಗಿ ಊರ ಹೊರಹಾಕಲು ಮಾಡುವ ಪ್ರಯತ್ನಗಳಿಗೆ ಹಿಂಸಾಚಾರದಿಂದ ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಶಿವ ಮತ್ತು ಅವನ ಸ್ನೇಹಿತರು ಬಳಸುವ ಕಚ್ಚಾ ಬಾಂಬ್ ಗಳ ಬಳಕೆಯು ಬೇರೆ ಯಾವುದೇ ಪ್ರಗತಿಪರ ನಿರ್ದೇಶಕರ ಚಿತ್ರವಾಗಿದ್ದಲ್ಲಿ ನಕ್ಸಲೈಟ್ ಚಟುವಟಿಕೆಗಳಿಗೆ ಬೆಂಬಲಿಸುವವರು ಎನ್ನುವ ಹಣೆಪಟ್ಟಿ ತಗಲಿಸಿಕೊಳ್ಳುವ ಅಪಾಯವಿತ್ತು. ಆದರೆ ‘ಕಾಂತಾರ’ದಲ್ಲಿ ಕೇವಲ ಹಿಂಸೆ-ಹಾಸ್ಯ-ಮನೋರಂಜನೆಗೋಸ್ಕರ ಇವನ್ನು ತೋರಿಸಲಾಗಿದೆಯೇ ಹೊರತು ಸೈಧ್ದಾಂತಿಕವಾದ ಯಾವ ಹಿನ್ನೆಲೆಯನ್ನೂ ಈ ದೃಶ್ಯಗಳು ಕಟ್ಟಿಕೊಡುವುದಿಲ್ಲ.
ಈ ಬಗ್ಗೆ ‘ಕಾಂತಾರ’ ಚಿತ್ರ ತೋರಿದ ಸಾಮಾಜಿಕ ಕಾಳಜಿ ದಾರಿ ತಪ್ಪಿಸುವಂತದ್ದಾಗಿವೆ. ಚಿತ್ರದ ಕೊನೆಯಲ್ಲಿ ಅರಣ್ಯಾಧಿಕಾರಿಯು ಅದುವರೆಗಿನ ತನ್ನ ಪಾತ್ರಸಹಜಗುಣ ಬಿಟ್ಟು, ಶಿವ ಮತ್ತು ಅವನ ಸಮುದಾಯದ ಬಗ್ಗೆ ಸಹಾನುಭೂತಿ ತೋರಿ, ಅವರ ಹೋರಾಟ ತನಗೆ ಮನವರಿಕೆಯಾದಂತೆ ಒಮ್ಮಿದೊಮ್ಮೆಲೇ ಪಾತ್ರ ಸಂಬಂದಿತ ಪ್ರೇರಣೆ (Character Motivation) ಇಲ್ಲದೆ ಚೇಂಜ್ ಆಗಿಬಿಡುತ್ತಾನೆ. ಅಲ್ಲಿಯವರೆಗೂ ನಿಖರವಾಗಿ ಬಿಂಬಿಸಲ್ಪಟ್ಟ ಈ ಪಾತ್ರ ಈಗ ಗೊತ್ತು ಗುರಿ ಇಲ್ಲದೆ ‘ಘನವಾಗಿ’ ಏನನ್ನೋ ಯೋಚಿಸುತ್ತ, ಶಿವನನ್ನು, ‘ಬೂತ-ದೈವ’ಗಳನ್ನು ನಂಬುವ ಸಮುದಾಯವನ್ನು ‘ಘನವಾಗಿ’ ನೋಡುತ್ತಾ, ಆಲಂಕಾರಿಕ ವಸ್ತುಯಾಗಿ ಬಿಟ್ಟು, ಹಾಸ್ಯಾಸ್ಪದವಾಗುತ್ತಾನೆ.
ಬಹುಶಃ ಇಲ್ಲಿರುವ ಇಂಗಿತಾರ್ಥ ಪ್ರಬಲವಾಗಿರುವ ಸರಕಾರವು ಮೂಲನಿವಾಸಿ ಸಮುದಾಯದ ಹೋರಾಟದ ಕೆಚ್ಚಿನ ಎದುರು ಮಂಡಿಯೂರುವುದು. ಆದರೆ ಇದು ನಿಜದಲ್ಲಿ ನಡೆಯುವ ಸಂಗತಿಯಲ್ಲ ಅಂತ ನಮಗೆಲ್ಲರಿಗೂ ಗೊತ್ತಿದೆ. ಈ ಶರಣಾಗತಿ ಬೇರೆ ಯಾವ ಕಾರಣಕ್ಕಲ್ಲದೆ ದೈವನಂಬಿಕೆಯ ಎದುರು ಎಲ್ಲರೂ ಮಣಿಯಲೇಬೇಕು ಎನ್ನುವ ಉದ್ದೇಶಕ್ಕೇ ಮಾಡಲಾಗಿದೆ ಅಂತ ನಮಗೆ ಚಿತ್ರದ ಕೊನೆಯಲ್ಲಿ ಮನವರಿಕೆಯಾಗುತ್ತದೆ. ಚಿತ್ರದುದ್ದಕ್ಕೂ ಬರುವ ಮೂಲನಿವಾಸಿ ಸಮುದಾಯ ಮತ್ತು ಸರಕಾರದ ನಡುವಿನ ಸಂಘರ್ಷ, ಅರಣ್ಯವಾಸಿಗಳ ನೆಲದ ಹಕ್ಕು, ಸ್ವಾತಂತ್ರ್ಯ ಇವೆಲ್ಲವೂ ಚಿತ್ರದ ಕೊನೆಯಲ್ಲಿ ಮರೆತೇ ಹೋಗಿರುವಂತಿದೆ. ನಾಟಕೀಯ ಸಂಘರ್ಷಗಳನ್ನು ಸಿನಿಮೀಯ ಅಂಶಗಳೊಂದಿಗೆ ಬೆರೆಸಿ, ಅವುಗಳ ಮೂಲಕ ಪ್ರೇಕ್ಷಕರನ್ನು ತೆಕ್ಕೆಯಲ್ಲಿಟ್ಟು, ತಮ್ಮ ವಶಕ್ಕೆ ತೆಗೆದುಕೊಂಡು, ಅವರನ್ನು ಸೂಕ್ಷ್ಮವಾಗಿ ಶರಣಾಗತಿ ಹಾಗು ಭಕ್ತಿಯ ಮಾರ್ಗಕ್ಕೆ ಕೊಂಡೊಯ್ಯುವ ಕಾರ್ಯ ಇಲ್ಲಿ ನಡೆದಿದೆ. ಹಾಗಾಗಿಯೇ, ಸಾಮಾಜಿಕ ಕಾಳಜಿಯು ಚಿತ್ರದ ಆಶಯವೇ ಎನ್ನುವ ಸಂದೇಹ ಬಂದುಬಿಡುವುದು ಸಹಜ.
ಚಿತ್ರದ ಕೊನೆಯು, ಮೊದಲ ದೃಶ್ಯದಲ್ಲಿ ತೋರಿಸಿದ ಸಂಗತಿಗೇ ಬಂದು ನಿಲ್ಲುತ್ತದೆ. ಸುಮಾರು ಶತಮಾನದ ಹಿಂದೆ ರಾಜನಿಂದ ಮೂಲನಿವಾಸಿ ಸಮುದಾಯಕ್ಕೆ ಕೊಡಮಾಡಲಾದ ಭೂಮಿ ಮತ್ತು ಅವನ ವಂಶಸ್ಥರು ತದನಂತರ ಭೂಮಿಯನ್ನು ಮರಳಿ ಪಡೆಯಲು ಮಾಡುವ ವಿಫಲ ಯತ್ನಗಳು ಮತ್ತು ಕೊನೆಯ ಬಾರಿ ಈ ಪ್ರಯತ್ನಕ್ಕೆ ಅಡ್ಡಿ ಮಾಡುವುದು ಶಿವನೇ. ಶಿವನ ಈ ಪ್ರಯತ್ನಕ್ಕೆ ಸಹಕಾರ ನೀಡುವವರು ಯಾರು ಅಂತ ಕೇಳಿದರೆ, ಅದು ಸ್ವತಃ ಕಾರ್ಣಿಕದ ‘ಬೂತ’ವೇ ! ಶಿವ ತನ್ನ ಬದುಕಿನುದ್ದಕ್ಕೂ ವಂಶಪಾರಂಪರಿಕವಾಗಿ ಬಂದಿರುವ (‘ಬೂತ’ಕ್ಕೆ ಮಾಧ್ಯಮವಾಗುವ) ತನ್ನ ಕುಟುಂಬದ ಹಕ್ಕನ್ನು ತಿರಸ್ಕರಿಸಿದ್ದ. ಆದರೆ ತನ್ನ ಸಮುದಾಯವು ಯಾವಾಗ ದುಷ್ಟ ಯಜಮಾನನಿಂದ ಕೊಲ್ಲಲ್ಪಡುತ್ತದೇಯೋ ಆಗ ಶಿವನ ಸುಪ್ತ ಮನಸ್ಸು ಅರೆಸತ್ತದೆಶೆಯಲ್ಲಿದ್ದರೂ ಎಚ್ಚರಗೊಳ್ಳುತ್ತದೆ. ಈ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ಸ್ವತಃ ಕಾರ್ಣಿಕದ ‘ಬೂತ’ವೇ ಎಲ್ಲ ವಿಕಾರಗಳನ್ನು ತನ್ನ ಮಡಿಲಲ್ಲಿ ಧರಿಸಿ ಶಿವನನ್ನು ಮಾಂತ್ರಿಕವಾಗಿ ಆವರಿಕೊಳ್ಳುತ್ತದೆ. ಆವಾಹಿಸಿಕೊಂಡು, ಪೌರಾಣಿಕ ಚಿತ್ರಗಳಲ್ಲಿರುವಂತೆ ದುಷ್ಟಸಂಹಾರ ಮಾಡುತ್ತದೆ. ಮೇಲ್ವರ್ಗದ ಕ್ರೌರ್ಯವನ್ನು ಸ್ವತಃ ‘ಬೂತ’ಗಳೂ ಸಹಿಸುವುದಿಲ್ಲವೆಂದಾಯಿತು. ಪೌರಾಣಿಕ ಚಿತ್ರಗಳಲ್ಲಿನ ದೇವರುಗಳು ವೈದಿಕ ಪರಂಪರೆಯನ್ನು ಪುನರ್ ಧೃಡೀಕರಿಸಿದರೆ, ‘ಕಾಂತಾರ’ ಚಿತ್ರವು ಟೊಟೆಮಿಕ್ ಗುಣಗಳಿರುವ ಜನಪದೀಯ ಆಚರಣೆಯಾದ ‘ಬೂತಾರಾಧನೆ’ಯನ್ನು ಸಂಭ್ರಮದಲ್ಲಿ ತೋರಿಸಿ ಮೆರೆಸಿ ವಿಜೃಂಭಿಸಿ ದೃಡೀಕರಿಸುತ್ತದೆ.
ರಾಜನಿಗೆ ‘ಬೂತದ’ ಕಲ್ಲು ಸಿಕ್ಕಾಗ, ಎಂದೂ ಕಾಣಸಿಗದ ಮನಶಾಂತಿ ಪ್ರಾಪ್ತಿಯಾಗುತ್ತದೆ. ಇನ್ನು ‘ಬೂತ’ ಶಕ್ತಿಯನ್ನು ನಂಬದವರು ಮುಂಬೈಯಿಂದ ಹಿಂದಿರುಗಿದ ಭೂಮಾಲೀಕ ಹಾಗೂ ಅವನ ಮಗನಾದ ಈಗಿನ ಧಣಿ ನಿರ್ದಯವಾಗಿ ಕೊಲ್ಲಲ್ಪಡುತ್ತಾರೆ. ಪ್ರಾಮಾಣಿಕ ದಕ್ಷ ಅಧಿಕಾರಿಯಂತೆ ಕಾಣುವ ಅರಣ್ಯಾಧಿಕಾರಿಯೂ, ‘ಬೂತ’ದ ಶಕ್ತಿಯ ಬಗ್ಗೆ ತನಗೆ ಅನುಮಾನಗಳಿದ್ದರೂ ಕೊನೆಗೆ ಬೂತದ ಪರ ವಹಿಸಿಕೊಂಡು ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎನ್ನುವ ಭರವಸೆಯನ್ನು ನೀಡುತ್ತಾನೆ. ಸರ್ಕಾರದ ಪ್ರತಿನಿಧಿ ಭೂತಾರಾಧಕರನಾದರೆ, ಸರಕಾರವು ಆದಂತೆ. ಅಷ್ಟೇಕೆ, ‘ಬೂತ’ ಕಟ್ಟುವ ತನ್ನ ಪಾರಂಪರಿಕ ಹಕ್ಕನ್ನು ಬಿಟ್ಟುಕೊಟ್ಟು ಬದುಕಿನ ಬಗ್ಗೆ ಗೊತ್ತುಗುರಿಯಿಲ್ಲದೇ ಇದ್ದ ಶಿವನನ್ನೂ ಸಹ ‘ಬೂತ’ ಸರಿ ದಾರಿಗೆ ತರುವಲ್ಲಿ ಯಶಸ್ವಿಯಾಗುತ್ತದೆ. ಚಿತ್ರದ ಕೊನೆಯಲ್ಲಿ ಶಿವನನ್ನು ಆವಾಹಿಸಿಕೊಳ್ಳುವ ‘ಬೂತ’ ಎಲ್ಲರಿಗೂ ಒಳ್ಳೆಯದನ್ನೇ ಮಾಡುವ ಶಕ್ತಿಯಾಗಿ ಎಲ್ಲ ಸಮುದಾಯವನ್ನೂ ಸಾಂಕೇತಿಕವಾಗಿ ಒಟ್ಟುಗೂಡಿಸುತ್ತದೆ. ‘ಬೂತ’ದ ವೇಶದಲ್ಲಿರುವ ಶಿವ ಕಾಡಿನ ಕಡೆ ಓಡಿ, ಹಿಂದೆ ಅದೇ ಕಾಡಿನಲ್ಲಿ ‘ಅದೃಶ್ಯ’ವಾಗಿದ್ದ ತನ್ನ ತಂದೆಯ ಜತೆಗೂಡುತ್ತಾನೆ. ಇಬ್ಬರೂ ‘ಮಾಯ’ವಾಗುವಲ್ಲಿಗೆ, ಶಿವನೂ ಸಹ ಒಂದು ಬೂತವಾಗಿ ಕರುಣೆಯಿಂದ ಎಲ್ಲರನ್ನೂ ಪೊರೆಯುವ ಶಕ್ತಿಯಾಗುತ್ತಾನೆ ಎಂದು ಸೂಚ್ಯವಾಗಿ ತೋರಿಸಲಾಗಿದೆ.
ಹಾಗಾದರೆ, ಶ್ರೇಣೀಕೃತ ವ್ಯವಸ್ಥೆಯೊಳಗೆ ಕೆಳಜಾತಿಯ ಮೇಲೆ ಮೇಲ್ಜಾತಿಯವರು ನಡೆಸುವ ದಬ್ಬಾಳಿಕೆಯ ಕುರಿತು ನಿಜವಾಗಿಯೂ ಈ ಚಿತ್ರವು ಗಂಭೀರ ಆಶಯವನ್ನು ಹೊಂದಿದೆಯೇ? ಅಥವಾ ಈ ಸಂಘರ್ಷವು ಕೇವಲ ನಾಟಕೀಯ ತೀವ್ರತೆಗಾಗಿ ಸಿನಿಮೀಯವಾಗಿ ದೃಶ್ಯಸಂಯೋಜನೆಗಳನ್ನು ಜೋಡಿಸಿ, ಪ್ರೇಕ್ಷಕರನ್ನು ಭಕ್ತಿಯ ಪರಾಕಾಷ್ಠೆಗೆ ಒಯ್ದು, ಅತಿಮಾನುಷ ಶಕ್ತಿಗೆ ಸಂಪೂರ್ಣವಾಗಿ ಶರಣಾಗಿಸುವ ಪ್ರಯತ್ನವೇ? ಒಂದು ಚಿತ್ರದ ನಿಜ ಆಶಯ ಅದರ Mise-en-scène( ಸಿನೆಮಾದ ವಿನ್ಯಾಸ)ನಲ್ಲಿ ಅಡಗಿರುತ್ತದೆ. ಕೊನೆಯಲ್ಲಿನ ಇಪ್ಪತ್ತು ನಿಮಿಷಗಳಷ್ಟು ದೃಶ್ಯಗಳು, ದುಷ್ಟರ ದಮನಕ್ಕೆ ಮತ್ತು ನಂತರದ ‘ಬೂತ’ಕೋಲದ ಭವ್ಯಸಂಭ್ರಮಕ್ಕೇ ಮೀಸಲಿಟ್ಟಿರುವುದು ಇದಕ್ಕೆ ಒಂದು ದೊಡ್ಡ ಸಾಕ್ಷಿ. ಅಷ್ಟೂ ಅಲ್ಲದೆ, ಚಿತ್ರದಲ್ಲಿ ಕೋಲದ ದೃಶ್ಯಗಳಲ್ಲಿ ಈ ನೆಲದ ಜನಪದರ ಮೂಲ ಹಾಡುಗಳಾದ ‘ಪಾಡ್ದನ’ಗಳನ್ನು ಬಳಸದೆ ಫ಼್ಯೂಶನ್ ಮಾದರಿಯ ವೈದಿಕ ಸ್ತೋತ್ರದಂತಿರುವ ಸಾಲುಗಳನ್ನು ಬಳಸಲಾಗಿದೆ. ಚಿತ್ರದ ದ್ವನಿ ಸಂಯೋಜನೆಯಲ್ಲಾದ ಈ ತರಹದ ಅತಿಕ್ರಮಣ ಅಥವಾ ಸೀಮೋಲ್ಲಂಘನೆ ನಮ್ಮ ಕಾಲವನ್ನು ಯಥಾವತ್ತಾಗಿ ಪ್ರತಿಬಿಂಬಿಸುತ್ತದೆ.
ಬಹುಮುಖ್ಯವಾಗಿ, ‘ಬೂತಾರಾಧನೆ’ ದ್ರಾವಿಡ ಮೂಲದ್ದು. ಬ್ರಾಹ್ಮಣೇತರವಾದದ್ದು. ಆದರೆ ಈಗಿನ ದಿನಗಳಲ್ಲಿ, ‘ಬೂತ’ಗಳನ್ನು ಮೆಚ್ಚಿಸಲು ದೇವಸ್ಥಾನಗಳಂತೆ ವೈದಿಕ ಆಚರಣೆಗಳನ್ನು ಆಚರಿಸಲಾಗುತ್ತಿದೆ. ಮೂಲದ್ರಾವಿಡ ಮಣ್ಣಿನ ಗುಣ ಪಧ್ದತಿಗಳನ್ನು ಆದಷ್ಟು ದೂರವಿರಿಸಿ, ‘ಬೂತ’ಗಳಿಗಾಗಿ ಕಟ್ಟಲಾಗುತ್ತಿರುವ ಗುಡಿಗಳೆಲ್ಲಾ ಗೋಪುರ ದ್ವಾರಮಯವಾಗಿ ರಾಮ, ಕೃಷ್ಣ, ಶಿವ ದೇವಸ್ಥಾನಗಳಂತೆ ಕಂಗೊಳಿಸುತ್ತಿವೆ. ಮೇಲ್ವರ್ಗದ ಆಚರಣೆಗಳ ಪ್ರಭಾವಕ್ಕೆ ಮೂಲನಿವಾಸಿಗಳ, ಕೆಳವರ್ಗದ ಮಂದಿಯ ಅಸ್ಮಿತೆಯು ಅಲುಗಾಡುವುದು ಹೀಗೆಯೇ, ಅವರ ಸಂಸ್ಕೃತಿಯನ್ನು ಅಳಿಸಿ ಸ್ವಾಧೀನಗೊಳಿಸುವುದು ಹೀಗೆಯೇ.
‘ಬೂತಕೋಲ’ ಆಚರಣೆಯನ್ನು ಆಯೋಜಿಸುವುದು ಅದೊಂದು ದೊಡ್ಡ ವ್ಯವಸ್ಥೆಯೇ. ಇಡೀ ಗ್ರಾಮಕ್ಕೆ ಊಟದ ವ್ಯವಸ್ಥೆ, ಜಾತ್ರೆಯಂತೆ ನಡೆಯುವ ಸಂಭ್ರಮ ಸತ್ಕಾರ, ಅರ್ಪಣಾ ಮನೋಭಾವದಿಂದ ಹರಕೆಯಂತೆ ಸಲ್ಲಿಸುವ ಕಾರ್ಯ ಅದು. ಸಾಮಾನ್ಯವಾಗಿ ಮೇಲ್ವರ್ಗದ ಔದಾರ್ಯವಿಲ್ಲದೆ ಸುಲಭಸಾಧ್ಯವಾಗದು. ‘ಬೂತ’ಗಳ ಕೃಪಾಕಟಾಕ್ಷಕ್ಕೂ ಮೇಲ್ವರ್ಗದ ಕೃಪಾಕಟಾಕ್ಷ!! ಕೆಳವರ್ಗದವರು ‘ಬೂತ’ವನ್ನು ಆರಾಧಿಸಲು ಸಾಧ್ಯವಾಗುವುದು ಮೇಲ್ಜಾತಿಯ ಬೆಂಬಲದಿಂದ ಮಾತ್ರ ಎಂದಾದರೆ, ದೈವದ ರಕ್ಷೆ, ಆಶೀರ್ವಾದ ಎಲ್ಲವೂ ಸಿಗುವುದು ಮೇಲ್ವರ್ಗದ ಇಚ್ಚೆ ಮತ್ತು ಉಪಕಾರ ಸ್ಮರಣೆಯಿಂದಲೇ ಎಂದಾಗುತ್ತದೆ.
ಚಿತ್ರ ಮುಗಿಯುವ ವೇಳೆಗೆ, ಎಲ್ಲವೂ ಚೆನ್ನಾಗಿದೆ ಎಂಬಂತೆ, ಊರ ಜನರಿಂದ ‘ಕೋಲ’ ಆಚರಣೆ ನಡೆಯುತ್ತದೆ. ಈ ಕೋಲದಲ್ಲಿ ಇನ್ನೊಬ್ಬ ಭೂಮಾಲೀಕನ ಉಪಸ್ಥಿತಿಯಿದೆ. ಆತ, ನಾಯಕನಿಂದ ಕೊಲ್ಲಲ್ಪಟ್ಟ ಕೆಟ್ಟ ಭೂಮಾಲೀಕನ ಪ್ರತಿಸ್ಪರ್ಧಿ. ಮೊದಲಿನ ಧಣಿ ಭೂಮಿಯನ್ನು ಕಸಿದುಕೊಳ್ಳುವ ದುರುದ್ದೇಶದಿಂದ ಕೋಲವನ್ನು ಪ್ರಾಯೋಜಿಸಿದ್ದ. ಈಗ, ಈತನೂ ಜನರ ಸ್ನೇಹ ಬೆಳೆಸಿಕೊಳ್ಳುತ್ತಿದ್ದಾನೆ. ‘ಕೋಲ’ದ ಆಚರಣೆಯ ಸಂದರ್ಭದಲ್ಲಿ ಜನರ ಜತೆ ಹೊಸ ಧಣಿಯ ಇರುವಿಕೆಯು, ಜಾತಿ ಸಂಬಂಧಿತ ವಸ್ತುಸ್ಥಿತಿಯ ವಾಸ್ತವ ಸತ್ಯವು ಕತೆಯ ವಸ್ತುವಾಗಿದೆ ಎಂದು ಚಿತ್ರದ ತಯಾರಕರು ಒಪ್ಪಿಕೊಳ್ಳುತಿದ್ದಾರೆ ಎನ್ನಬಹುದೇ? ಶಿವನಿಗೆ ಈ ಹಿಂದೆ ಜೈಲಿನಿಂದ ಹೊರಬರಲು ಜಾಮೀನು ಒದಗಿಸಿದ್ದು ಇದೇ ಧಣಿ ಎನ್ನುವುದೂ ಗಮನಾರ್ಹ. ಪೀಡಿಸುತ್ತಿದ್ದ ಧಣಿಯೇನೋ ಸತ್ತುಹೋದ, ಇನ್ನು ಹೊಸ ಧಣಿಗೆ ಜನರ ಜೈಕಾರ!
ಅಧೀನಕ್ಕೊಳಗೊಂಡ ಮನಸ್ಸುಗಳಿಗೆ ‘ಕಾಂತಾರ’ ಚಿತ್ರವು ತಮ್ಮದೇ ಕತೆಯನ್ನು ಸಮರ್ಪಕವಾಗಿ ಪ್ರತಿನಿಧಿಸುತ್ತಿದೆ ಎಂದನಿಸಿದರೂ, ಚಿತ್ರದ ಗೂಢಾರ್ಥವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಿಸ್ಸಂಶಯವಾಗಿ ಚಿತ್ರವು ಮೇಲ್ಜಾತಿ ಮನಸ್ಥಿತಿಯನ್ನು ಪುಶ್ಠೀಕರಿಸುತ್ತದೆ ಮತ್ತು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯನ್ನು ಗಟ್ಟಿಯಾದ ದ್ವನಿಯಲ್ಲಿ ಧೃಢೀಕರಿಸುತ್ತದೆ. ಎಲ್ಲಾ ರೀತಿಯ ಜನರ ಅಭಿರುಚಿ ಹಾಗೂ ರಾಜಕೀಯಗಳಿಗೆ ಚಿತ್ರವು ತನ್ನ ಜಾಣ ತಂತ್ರಗಾರಿಕೆಯಿಂದ ಒತ್ತುಕೊಟ್ಟಿರುವುದರಿಂದ ಎಲ್ಲರೂ ಖುಷಿಯಲ್ಲೇ ತೇಲಾಡುತ್ತಿದ್ದಾರೆ.
‘ಕಾಂತಾರ’ ಚಿತ್ರವು ಈಗಾಗಲೇ ಅಭೂತಪೂರ್ವ ಯಶಸ್ಸನ್ನು ಸಾಧಿಸಿರುವುದರಿಂದ, ಹೆಚ್ಚು ಜನಪ್ರಿಯವಾಗದೇ ಉಳಿದಿರುವಂತಹ ಈ ರೀತಿಯ ಆಚರಣೆಗಳು (ಸುಪ್ತಭಾವನೆಗಳು ಅಭಿವ್ಯಕ್ತಿಯ ರೂಪದಲ್ಲಿ ಪ್ರಕಟಗೊಳ್ಳುವ ಆರಾಧನಾ ಆಚರಣೆಗಳು) ಜಗತ್ತಿಗೇ ಪ್ರಚುರವಾಗುವುದಂತೂ ಹೌದು. ಚಿತ್ರದಲ್ಲಿ ಶಿವನು ಸೇವಿಸುವ ಗಾಂಜಾ ನಶೆಯಂತೆ, ಇಂತಹ ಆಚರಣೆಗಳೂ ಸಹ ಅಲೌಕಿಕ ಮತ್ತು ಅತೀಂದ್ರಿಯವಾದ ಅನುಭೂತಿಯನ್ನು ನೀಡುವಂತದ್ದು. ಹಲವು ದಶಕಗಳ ಹಿಂದೆ ೧೯೭೦ ರ ದಶಕದ ಮಧ್ಯಭಾಗದ ತುರ್ತುಪರಿಸ್ಥಿತಿಯ ಯುಗದಲ್ಲಿ ಭಕ್ತಿಯ ಪರಾಕಾಷ್ಥೆಯನ್ನು ನಿರೂಪಿಸುವ ಚಿತ್ರವೊಂದು (ಜೈ ಸಂತೋಷಿ ಮಾ, ೧೯೭೫) ರಾತ್ರಿ ಬೆಳಗಾಗುವುದರೊಳಗೆ ಸೂಪರ್ ಯಶಸ್ಸನ್ನು ಹೊಂದಿ, ಭಕ್ತಿಲೋಕಕ್ಕೆ ಹೊಸ ದೇವತೆಯನ್ನೇ (ಸಂತೋಷಿ ಮಾ) ಅರ್ಪಿಸಿತ್ತು. ಇನ್ನು ‘ಕಾಂತಾರ’ದ ಆಧುನಿಕ ‘ಹಿತಚಿಂತಕ ಶಕ್ತಿ’ ಶಿವನ ಬಗ್ಗೆ ಹೆಚ್ಚು ಹೇಳಬೇಕೇ?
ಕೃಪೆ : upperstall
ಅನುವಾದ: ಹೇಮಶ್ರೀ ಸಯೇದ್
ಮಾಧ್ಯಮ ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ. ಈಟಿವಿ-ಕನ್ನಡ, ದೂರದರ್ಶನ, ಕಸ್ತೂರಿ ಟಿವಿಚಾನೆಲ್ ಗಳ ಸುದ್ದಿ ವಿಭಾಗದಲ್ಲಿ ಕೆಲಸದ ಅನುಭವ. ಫ್ರೀಲಾನ್ಸರ್ ಆಗಿಯೂ ಕಿರುಚಿತ್ರ, ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿ ನಿರ್ದೇಶನ ಮಾಡಿರುತ್ತಾರೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರವಣಿಗೆ ಹವ್ಯಾಸ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸ.
‘ಫಿಲ್ಮ್ ಅಂಡ್ ಟಿವಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ ದಿಂದ ‘ಚಿತ್ರಕಥೆ ಬರವಣಿಗೆ ಮತ್ತು ನಿರ್ದೇಶನ’ದಲ್ಲಿ 1991 ರಲ್ಲಿ ಪದವೀಧರರು. ಹಲವು ಸಾಕ್ಷ್ಯಚಿತ್ರಗಳು, ವೈಶಿಷ್ಟ್ಯಗಳು, ಕಿರುಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ತುಳು ಭಾಷೆಯಲ್ಲಿ ಅವರ ಮೊದಲ ಚಲನಚಿತ್ರವಾದ ಸುದ್ಧ (ದಿ ಕ್ಲೆನ್ಸಿಂಗ್ ರೈಟ್ಸ್) ಅವರಿಗೆ ಒಸಿಯನ್ ಸಿನೆಫಾನ್ ಫೆಸ್ಟಿವಲ್ ಆಫ್ ಏಷ್ಯನ್ ಫಿಲ್ಮ್ಸ್, ನವದೆಹಲಿ ಇಂಡಿಯನ್ 2006 ರಲ್ಲಿ ಅತ್ಯುತ್ತಮ ಭಾರತೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. ಇದು ಮುಂದಿನ ವರ್ಷದಲ್ಲಿ ಅವರಿಗೆ ಹ್ಯೂಬರ್ಟ್ ಬಾಲ್ಸ್ ಪ್ರದರ್ಶನ ಅನುದಾನವೂ ದೊರಕುವಂತೆ ಮಾಡಿತು. ಕನ್ನಡ ಭಾಷೆಯಲ್ಲಿ ಅವರ ಎರಡನೇ ಚಲನಚಿತ್ರ PUTAANI PARTY (ದಿ ಕಿಡ್ ಗ್ಯಾಂಗ್) 2009 ರಲ್ಲಿ ಭಾರತೀಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಲನಚಿತ್ರವನ್ನು ಗೆದ್ದುಕೊಂಡಿತು. ಹಿಂದಿ ಭಾಷೆಯಲ್ಲಿ ಅವರ ಮೂರನೇ ಚಿತ್ರ HAAL-E-KANGAAL (ದಿವಾಳಿಗಳು). ಅವರು ಆಗಾಗ ಚಲನಚಿತ್ರ ಅಧ್ಯಯನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ, ವಿವಿಧ ಸಂಸ್ಥೆಗಳಲ್ಲಿ ಚಲನಚಿತ್ರ ಕಾರ್ಯಾಗಾರಗಳನ್ನು ನಡೆಸುತ್ತಾರೆ. ಮೂಲತಃ ತುಳುನಾಡಿನವರು. ಸದ್ಯ ಮುಂಬೈ ನಿವಾಸಿ.
ಎಂತ ಸಾವು ಮಾರಾಯ್ರೆ ನಿಮ್ದೆಲ್ಲಾ? ಕುಂಬಳ ಕಾಯಿ ಬೆಳೆದಿದೆ ಎಂದರೆ ಅದರಲ್ಲೂ ಬ್ರಾಹ್ಮಣ್ಯ ವೈದಿಕ ಶೋಷಣೆ ತಳಸಮುದಾಯ ಎಂದೆಲ್ಲಾ ಜಗ್ಗಾಡ್ತೀರಿ? ನಿಮ್ಮ ಕಮ್ಯೂನಿಸಂ ಸತ್ತು ವರ್ಷಗಳೇ ಅದರೂ ನೀವಿನ್ನೂ ಸತ್ತಿಲ್ವಲ್ಕ ಮಾರಾಯ್ರೆ ಸಾವ್.
ಸಾಮಾನ್ಯ ಚಿತ್ರ ಅದು. ಇಷ್ಟೆಲ್ಲ ವ್ಯಾಖ್ಯಾನ ಬೇಕಿಲ್ಲ.
ಜನರನ್ನು ತಲುಪಿದ ರಂಜನೆ. ಅದು ಅವರೇ ಹೇಳೋ ಹಾಗೆ ದಂತ ಕತೆ. ಯಾಕೆ ಈ ಅಸಹಿಷ್ಣುತೆ. ?
ಹೀಗೂ ಅರ್ಥ ಮಾಡಿಕೊಳ್ಳಬಹುದು.
https://newsics.com/anavarana/dhwanibimba-column-35-by-b-k-sumati-about-kaantaara-film/121652/