ಗೌತಮ್ ಜ್ಯೋತ್ಸ್ನಾ ಬರೆದ ನೀಳ್ಗತೆ : ತಾಟಕಿ

ನಡುಹಗಲಿಗೆ ಮಂಕು ಬರಿಸುತ್ತಾ ಇದ್ದ ಸುಡುವ ಗಾಳಿಯಲ್ಲಿ ಬೆವರುತ್ತಾ ಸುಝೇನ್  ವೆಸ್ಪಾ ಸ್ಕೂಟರನ್ನು ಕಾಮ್ರೇಡ್ ಪಾರ್ಟಿಯ ಆಫ಼ೀಸಿಗೆ ಅಡ್ಡವಾಗಿ ಎರಡು ದೊಡ್ಡ ಗಾಡಿಗಳು ನಿಂತಿದ್ದರಿಂದ ಎಡಗಡೆಯಿದ್ದ ಓಣಿಯ ಹತ್ತಿರ ನಿಲ್ಲಿಸಿ ಅವಸರವಸರವಾಗಿ ಹೆಜ್ಜೆ ಹಾಕಿದಳು. ಅವಳ ತಲೆ ಗೊಂದಲದ ಗೂಡಾಗಿತ್ತು. ವೇಗವಾಗಿ ಒಳ ನಡೆದಾಗ ಹೋದ ತಿಂಗಳು ಅಚಾನಕ್ಕಾಗಿ  ಆದ ಶೂಟ್ ಔಟ್ ಬಳಿಕ ಡ್ಯಾಮೇಜ್ ಆಗಿದ್ದ ಗೋಡೆ ಬಾಗಿಲು ಹಾಗೂ ಗಾಜಿನ ಕ್ಯಾಬೀನ್ಗಳನ್ನೆಲ್ಲ ರಿಪೇರಿ ಮಾಡಿ ಸುಸ್ಥಿತಿಗೆ ತರುತ್ತಿದ್ದ ಕೆಲಸದವರಿಗೆ ಢಿಕ್ಕಿ ಹೊಡೆದು ಆಯತಪ್ಪಿ ಬೀಳುವಳಿದ್ದಳು. ಆದರೆ ಇಳಿ ಮಧ್ಯಾಹ್ನದ ಹೊತ್ತಿಗೆ ಪಾರ್ಟಿಯ ಯುವ ಸ್ವಯಂ ಸೇವಕರಿಗೆ  ಬಿಸಿ ಚಾ ಸಮೋಸ ಡೆಲಿವಿರಿ ಮಾಡುವ ಹುಡುಗ ಶ್ರೀದೇವ ಆಕೆಯ ಸೊಂಟ ಹಿಡಿದು ಕಾಪಾಡಿದ್ದರಿಂದ ಆಕೆ ಇದ್ದಕಿದ್ದಂತೆ ಆಗುವ ಗಂಡಾತರಿಂದ ಬಚಾವಾದಳು. “ವಾಟ್ ದ ಫ಼ಕ್…” ಅಂತ ಅಂಡಿಂದ ಕೂಗಿ, ಶ್ರೀದೇವನನ್ನೇ ದುರು ದುರು ನೋಡಿ ಸೊಲ್ಲೆತ್ತದೆ ಒಳಗೆ ನುಗ್ಗಿದ್ದಳು.

ಅಲ್ಲಿ ಪಕ್ಷದ ಸದಸ್ಯರೆಲ್ಲ ಕಂಪ್ಯೂಟರ್ ಲ್ಯಾಪ್ ಟ್ಯಾಪ್ ಎದುರು ಕೂತು ಮೈ ಮರೆತಿದ್ದರು. ಈಗಷ್ಟೇ ಜರುಗಿದ ಸುಝೇನ್ ಸಾಹಸವನ್ನು ಗಮನಿಸಲು ಅವರ್ಯಾರಿಗೂ ಪುರುಸೊತ್ತಿರಲಿಲ್ಲ. ಮಹಾನಗರದ ವ್ಯಾಪ್ತಿಗೆ ಬರುವ ಸುಮಾರು ಇಪ್ಪತ್ತೆಂಟು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾ ಇದ್ದ ಈ ಕಾಮರೇಡ್ ಪಾರ್ಟಿಯ ಸದಸ್ಯರ ಚಿಹ್ನೆ ಗಟ್ಟಿಯಾಗಿ ಬಿಗಿದ ಮುಷ್ಟಿಯಾಗಿತ್ತು. ಇದರ ಅಧ್ಯಕ್ಷ ಸೊಗಸಾಗಿದ್ದ ಯುವಕ ಸೂರ್ಯನಾರಾಯಣ. ಇನ್ನೂ ಮೂವತ್ತರ ವಯಸ್ಸಿನವ. ಓದಿದ್ದೆಲ್ಲ ಹಾವರ್ಡ್ ಯುನಿವರ್ಸಿಟಿಯಲ್ಲಿ.  ಯು.ಎಸ್. ಅಲ್ಲಿ ಓದಿ ಹಾಡಿ ಕುಣಿದು ಬೆಳೆದ ಬಾಲಕ. ಕಳೆದ ಆರು ವರುಷಗಳಿಂದ ಈ ಕ್ಯಾಪಿಟಲಿಶ್ಟ್ ಸಾರವಿರುವ ಎಜ್ಯುಕೇಶನ್ನ್ ಸಿಸ್ಟಮ್ಮ್ ಮೇಲೆ ಜಿಗುಪ್ಸೆ ಹುಟ್ಟಿ ಡ್ರಾಪ್ ಔಟ್ ಆಗಿ, ಮತ್ತೆ ಇಂಗ್ಲೀಷಿನಲ್ಲಿ ಒಂದು ಫ಼ಿಕ್ಷನ್ನ್ ಹಾಗೂ ಬದಲಾದ ಮಾರ್ಕ್ಸ್ ಸ್ವರೂಪದ ಬಗ್ಗೆ ನಾನ್ ಫಿಕ್ಷನ್ನ್ ಪುಸ್ತಕ ಬರೆದು, ನಂತರ ಯೂಟ್ಯೂಬ್ ಚಾನಲ್ನಲ್ಲಿ ಭಾರತದ ಸಮಾಜದ ರೂಪ ವಿರೂಪಗಳ ಬಗ್ಗೆ ಅನೇಕ ಶಾರ್ಟ್ಸ್ ವೀಡಿಯೋಗಳನ್ನು ಮಾಡಿ ಪ್ರಖ್ಯಾತನಾಗಿದ್ದ. ಈತ ಮರಳಿ ಭಾರತಕ್ಕೆ ಬಂದ ಉದ್ದೇಶವೇ ಹೀಗೆ ಜನ ಸಾಮಾನ್ಯರ್ಯಾರು ಮೂಲಭೂತ ಹಕ್ಕುಗಳಿಂದ ವಂಚಿತರಾಗಬಾರದು; ನಮ್ಮ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಂವಿಧಾನ ನೀಡಿದ ಸವಲತ್ತುಗಳು ಸಿಗಬೇಕು ಅದರ ಬಗ್ಗೆ ಅರಿವು ಮೂಡಿಸಲು ನಾನೇ ಒಂದು ಪಾರ್ಟಿ ಕಟ್ಟಬೇಕು ಎಂದು. ಈ  ಸೂರ್ಯನಾರಾಯಣನ ಅಪ್ಪ ಹತ್ತಾರು ಪೆಟ್ರೋಲ್ ಬಂಕುಗಳ, ನಗರದ ಮಧ್ಯಬಾಗದಲ್ಲೇ ಆಧುನಿಕವಾಗಿ ಕಟ್ಟಿದ್ದ ಶಾಪಿಂಗ್ ಮಾಲ್ ಒಂದರ ಒಡೆಯ. ಏನಿಲ್ಲ ಅಂದರೂ ೫೦೦ರಿಂದ ಆರುನೂರು ಕೋಟಿ ಬೆಲೆಬಾಳುವ ಕುಳ. ಇರುವ ಒಬ್ಬನೇ ಮಗ ನನ್ನ ಹಣವೆಲ್ಲ ಹಾಳು ಮಾಡಿ ಕಾಚದಲ್ಲಿ ನನ್ನ ಬೀದಿಗೆ ತಂದು ನಿಲ್ಲಿಸುತ್ತಾನೆ ಅನ್ನೋದರಲ್ಲಿ ಅವರಿಗೆ ಅನುಮಾನವೇ ಇರಲಿಲ್ಲ. ಆದರೆ ಕಳೆದ ಎರಡೇ ವರುಷಗಳಲ್ಲಿ ಯೂಟ್ಯೂಬ್ ಬ್ಲಾಗರ್ ಆಗಿದ್ದ ವ್ಯಕ್ತಿಯ ವೀಡಿಯೋಗಳಿಗೆ ಮಿಲಿಯನ್ನ್ ಗಟ್ಟಲೆ ವ್ಯೂಸ್ ಸಿಕ್ಕಿ, ನೋಡನೋಡುತ್ತಲೇ ಆತ ಪ್ರತಿಷ್ಟಿತ ಲಿಟರರ್ರಿ ಫ಼ೆಶ್ಟುಗಳಲ್ಲಿ ಪಾಲ್ಗೊಂಡು, ಬರೆದ ಎರಡೂ ಪುಸ್ತಕಗಳು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿ ಭಾರತದ ಭವ್ಯ ಭವಿಷ್ಯದ ಯುವ ಮುಖ ಎಂದೇ ಸೂರ್ಯನಾರಾಯಣ ಪಾಪ್ಯುಲರ್ ಆದಾಗ ದೊಡ್ಡ  ಸಾಹೇಬರು ಆನಂದ ಭಾಷ್ಪ ಹಾಕಿದ್ದರು. ಈತ ಇಟ್ಟ ಮುಂದಿನ ದಿಟ್ಟ ಹೆಜ್ಜೆ ಪೊಲಿಟಿಕಲ್ ಪಕ್ಷ ಒಂದನ್ನು ಸ್ಥಾಪಿಸಿ ಇನ್ನೇನು ಬರಲಿದ್ದ ಚುನಾವಣೆಯಲ್ಲಿ ಸ್ಪರ್ಧಿಸಿ ನಗರದಲ್ಲಿ ಆದಷ್ಟು ಸೀಟುಗಳನ್ನು ಗೆಲ್ಲುವುದು. ನೋಡನೋಡುತ್ತಲೇ ಈತ ಪಾರ್ಟಿ ಕಟ್ಟುವ ವಿಷಯ ಮಂಡಿಸಿದಾಗ ಲಕ್ಷಲಕ್ಷ ಅಂತರ್ಜಾಲದ ಬಂಧುಗಳು ಇಂಥಾ ಪಾದರಸದ ರಕ್ತದ ತರುಣನಿಗೆ ಮುಕ್ತ ಬೆಂಬಲ ನೀಡಿ ಬೆನ್ನು ತಟ್ಟಿದರು. ಈ ಸುಝೇನ್ನ್ ನಾನೂ ಈ ಪಾರ್ಟಿ ಸೇರಬೇಕೆಂದು ಕುತುಕುತು ಅಂತ ಕುಣಿದದ್ದು ಆಕೆಗೆ ರಾಜಕೀಯ ಪಕ್ಷದ ಬಗ್ಗೆ ಇರುವ ಆಸ್ಥೆಗಿಂತ  ಕ್ಯೂಟಾಗಿ ನರ್ಡಿ ಕನ್ನಡಕ ಹಾಕಿಕೊಂಡು ಭೋಳನಂತೆ ನಗುತ್ತಾ ನಮ್ಮ ದೇಶದ ಸೂಕ್ಷ್ಮ ವಿಷಯಗಳ ಬಗ್ಗೆ ಲೆಕ್ಚರ್ ಕೊಡುತ್ತಾ ಇದ್ದ ಸೂರ್ಯನಾರಾಣನ ವೀಡಿಯೋಗಳನ್ನು ನೋಡಿ ಉಂಟಾದ ಶುದ್ಧ ಕಾಮದ ಜ್ವಾಲೆಯಿಂದ. ಅದೇ ಬಿಸಿಯಲ್ಲಿ ಈ ಸೂರ್ಯನಾರಾಯಣನ ಪರ್ಸ್ನಲ್ಲ್ ನಂಬರ್ ಪತ್ತೆ ಮಾಡಿ, ಮಾತಾನಾಡಿ, ನಂತರ  ಆತನ ಜತೆ ನಡೆಸಿದ ಇನ್ಫಾರ್ಮಲ್ ಸಂದರ್ಶನವನ್ನು ಸುಝೇನ್ ಇನ್ಸ್ಟಾಗ್ರಾಮ್ ಅಕೌಂಟಲ್ಲಿ ಅಪ್ಲೋಡ್ ಮಾಡಿದ್ದ ವೀಡಿಯೋಗೆ ಒಂದು ಮಿಲಿಯನ್ನ್ ಪ್ಲಸ್ ವ್ಯೂಸ್ ಸಿಕ್ಕಿ, ಕರ್ನಾಟಕ ಮಾತ್ರವೇ ಅಲ್ಲದೆ ಭಾರತಾದ್ಯಂತ ಈ ಫ್ಯಾನ್ ಗರ್ಲ್ ನ  ಚಂದದ ನಗು ಪ್ರಜ್ವಲಿಸಿತ್ತು. ಈ ವಿಡಿಯೋ ಇಷ್ಟು ರೈಸಾಗಲು ಇನ್ನೊಂದು ಕಾರಣ, ಸೂರ್ಯನಾರಾಯಣ ಇಂಗ್ಲೀಷಿನಲ್ಲಿ , “ಸುಝೇನ್ ನೀಲಿ ಕಣ್ಣಿನ, ಕನಸೇ ಹುಡುಗಿಯ ರೂಪದಲ್ಲಿ ಎದ್ದು ಬಂದಿರುವ ನೀನ್ಯಾಕೆ ನಮ್ಮ ಕಾಮ್ರೇಡ್ ಪಾರ್ಟಿಗೆ ಸೇರಬಾರದು … ನಮ್ಮ ಲಕ್ಷ್ಯಕ್ಕೆ ಬೇಕಾದ ಬೆಂಕಿ ನಿನ್ನಲ್ಲಿದೆ” ಎಂದಾಗ ಈಕೆ ತಾನು ಎಷ್ಟೋ ಬಾರಿ ಕನ್ನಡಿಯ ಮುಂದೆ ನಿಂತು ಪ್ರಾಕ್ಟೀಸ್ ಮಾಡಿದ್ದ ಆಲಿಯ ಭಟ್ ನಗುವಲ್ಲಿ ಫಳಾರೆಂದು ನಕ್ಕಿದ್ದು…  ಈ ಸಂಭಾಷಣೆ ಮತ್ತು ಆ ನಗು ಎಷ್ಟು ಜನಪ್ರಿಯವಾಗಿತ್ತೆಂದರೆ ಖುದ್ದು ವಿರೋಧಪಕ್ಷದ ಹೈಕಮಾಂಡ್ ಲೀಡರ್ ಮಲಶೇಖರ್ ಈ ಸಂದರ್ಶನದ ಕೊಂಡಿಯನ್ನು ತಮ್ಮ ಪರ್ಸಲ್ ಅಕೌಂಟಲ್ಲಿ ಟ್ವೀಟ್ ಮಾಡಿದ್ದರು.

ಸೂಝೇನ್ ಅಪ್ಪ ಹಿಂದೂ ಧರ್ಮದ ಪ್ರಬಲ ಕೋಮಿಗೆ ಸೇರಿದ್ದ ವ್ಯಕ್ತಿ, ಅಮ್ಮ ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ನರು.  ಆದರೆ ಎಂಭತ್ತರ ವಿಚಾರ ಕ್ರಾಂತಿಯ ಹವಾದಲ್ಲಿ ಎಲ್ಲ ಗೊಡ್ಡು ಸಂಪ್ರಾದಯಗಳನ್ನು ಧಿಕ್ಕರಿಸಿ ಸೋಶಿಯಲ್ಲಿಸಮ್ಮನ್ನೇ ತಮ್ಮ ಮೂಲಮಂತ್ರವನ್ನು ಜಪಿಸುತ್ತಾ  ರಿಜಿಸ್ಟರ್ ಮದುವೆಯಾಗಿದ್ದರು. ಆದರೆ ಕೆಲ ವರ್ಷಗಳ ನಂತರ ಅವಳಮ್ಮ ಸುಝಾನಳ ಲಿಬರಲ್ ಅಪ್ಪನನ್ನು ಹೆಣ್ಣು ಲಂಪಟ ಮತ್ತು ಮಹಾ ಕುಡುಕನೆಂದು ಘೋಶಿಸಿ ಡಿವೋರ್ಸ್ ಕೊಟ್ಟು “ರಿಜಿಸ್ಟರ್ ಮದುವೆಯಾದಗ್ ನನ್ಗೆ ಮೂರು ತಿಂಗ್ಳು…ಥ್ಯಾಟ್ಸ್ ದ ರೀಸನ್ ಫ಼ಾರ್ ಥ್ಯಾ ಸೊ ಕಾಲ್ಡ್ ಮ್ಯಾರೇಜ್ ಮೇಡ್ ಲಿಬರಲ್ ರೆಬೆಲಿಯನ್ನ್ ಹೆವನ್ನ್” ಎಂದು ಗುಡುಗಿದ್ದಳು. ಇತ್ತ ಸುಝೇನ್ಳ ಅಪ್ಪ “ಇದೊಂದು ಹುಚ್ಚು ಹೆಂಗಸು ವಾಸ್ತವಕ್ಕೂ ಪುಸ್ತಕದ ಡಮ್ಮಿ ಐಡಿಯಲ್ಲಿಸಮ್ಮಿಗೂ ಸಂಭಂದ ತಿಳಿದಿಲ್ಲ ಈಕೆಗೆ” ಅಂತ ಮುಕ್ತಕಂಠದಲ್ಲಿ ಉಗಿದಿದ್ದ. ನಂತರ ಬೇರೆ ಮದುವೆಯೂ ಆಗಿ ಮುಂಬೈ ಕಡೆ ಹೊರಟೂ ಹೋಗಿದ್ದ. ಇವಳಮ್ಮ ಮಡಿಕೇರಿಯಲ್ಲಿ ತನ್ನ ತಂದೆಯಿಂದ ಬಂದಿದ್ದ ಎಸ್ಟೇಟ್ ನೋಡಿಕೊಳ್ಳುತ್ತಾ ಆಗಾಗ ಪುಸ್ತಕಗಳನ್ನು ಪ್ರಕಟಿಸುತ್ತಾ ಇದ್ದಳು. ಯಾಕೋ ಸುಝೇನ್ಗೆ ಇವರಿಬ್ಬರೂ ಇನ್ನೊಬ್ಬರ ಮೇಲೆ ಮಾಡುತ್ತಿರುವ ಆರೋಪ ಶೇಕಡಾ ನೂರು ಪಟ್ಟು ಸತ್ಯ ಅಂತ  ಅನ್ನಿಸಿ ಈ ಹೆತ್ತವರೇ ಮಹಾ ತಲೆಕೆಟ್ಟ ಜನ ಎಂದು ನಿರ್ಣಯಿಸಿ ಇಬ್ಬರಿಂದಲೂ ಈ ಜೀವನಕ್ಕೆ ಸಾಕಾಗುವಷ್ಟು ಹಣ ಕೀಳುತ್ತಾ ಸುಖವಾಗಿ ಬದುಕಿದ್ದಳು.  ಇವಳು ಈ ಕಾಮ್ರೇಡ್ ಪಾರ್ಟಿಗೆ ಸೇರಿ ಈಗಾಗಲೇ ಆರು ತಿಂಗಳಾಗಿತ್ತು. ಫ಼ೇಸ್ಬುಕಲ್ಲಿ ನಿರಂತರವಾಗಿ ಈಕೆಯೂ ಲಿಬರಲ್ ಚಿಂತನೆಗಳ ಮುಖಾಂತರ ಸದ್ಯದ ಸಮಾಜದಲ್ಲಿ ಘಟಿಸುತ್ತಿರುವ ವಿದ್ಯಾಮಾನಗಳಿಗೆ ಸ್ಪಂದಿಸುತ್ತಾ ಇದ್ದಳು. ಆ ವಿಡಿಯೋ ನಂತರ ಈಕೆಯ ಮುಖವು ದೇಶದ ಎಲ್ಲ ನೆಟ್ಟಿಗರಿಗೆ ಹೆಚ್ಚುಕಮ್ಮಿ ಚಿರಪರಿಚಿತವಾಗಿ ಸೂಝಾನ್ನ್ಳ ಫ಼ೇಸ್ಬುಕ್ಕ್ ಮತ್ತು ಇನ್ಸ್ಟಾಗ್ರಾಮ್ ಅಕೌಂಟಿಗೆ ನೀಲಿ ಟಿಕ್ಕ್ ಮಾರ್ಕಿನ ಚಿಹ್ನೆ ದಕ್ಕಿತ್ತು. ಈಕೆ ಈಗಷ್ಟೆ ಇಂಗ್ಲೀಷ್ ಸಾಹಿತ್ಯದಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಳು. “ಪಿಯು ಅಲ್ಲಿ ಪಿಸಿಎಮ್ಭಿ ಕಾಂಬಿನೇಷನ್ನ್ ತಗೆದುಕೊಂಡಿದ್ದರೂ, ಫ಼ುಡ್ ಆಂಡ್ ನ್ಯೂಟ್ರಿಶಿಯನ್ನಲ್ಲಿ ಬಿ ಎಸ್ಸಿ ಪದವಿ ಪಡೆದಿದ್ದರೂ ನನಗೆ ಸಾಹಿತ್ಯದ ಬಗ್ಗೆ ಇರುವ ಅಪಾರ ಪ್ರೀತಿಯಿಂದ ವಿಜ್ಞಾನವನ್ನು ಧಿಕ್ಕರಸಿ ಕಲೆಯನ್ನು ಆರಿಸಿಕೊಂಡೆ…” ಎಂದು ಬರೆದಿದ್ದಾಗ ಆಕೆಯ ನಡೆಯನ್ನು ಮೆಚ್ಚಿ ಹಲವಾರು ಅಮೂರ್ತ ಕೈಗಳು ಆಕೆಯ ಪೋಶ್ಟನ್ನು  ಶೇರ್ ಮಾಡಿದ್ದರು. ಆದರೆ ವಾಸ್ತವವನ್ನ ಆಧರಿಸಿ ಹೇಳುವುದಾದರೆ ಸೈನ್ಸ್ ಕಾಂಬಿನೇಷನ್ನ್ ಅಲ್ಲಿ ಅತೀ ಕಡಿಮೆ ಅಂಕ ಗಳಿಸಿ ಇನ್ನೇನು ಫ಼ೇಲ್ ಆಗುವ ಹಂತಕ್ಕೆ ಬಂದು, ನಂತರ ಎಂಬಿಬಿಎಸ್ ಇರಲಿ, ಮೂಲಭೂತ ಬಿಎಸ್ಸಿ ಪದವಿಗೂ ಅವಳಪ್ಪನ ಗೆಳೆಯರಿಂದ ಇನ್ಫ಼್ಲೂಯೆನ್ಸ್ ಮಾಡಿಸೋ ಪರಿಸ್ಥಿತಿ ಸುಝೇನಳಿಗೆ ಎದುರಾಗಿತ್ತು. ಈ ಗತಿ ಮತ್ತೆ ಮರುಕಳಿಸದೇ ಇರಲಿ ಎಂದು ಇಂಗ್ಲೀಷ್ ಸಾಹಿತ್ಯ ಆಯ್ದು ಕಥೆಗಿತೆ ಓದಿಕೊಂಡು, ನಾಟಕಗೀಟ್ಕ ಮಾಡಿಕೊಂಡು ’ಕಲಾವಿದೆ’ ಎಂದು ವಿಶ್ವವಿದ್ಯಾನಿಲಯದಲ್ಲೂ ಪ್ರಖ್ಯಾತಿ ಪಡೆದಿದ್ದಳು. ಸುಝೇನ್ನ್ ಭವಿಷ್ಯದ ಬಗ್ಗೆ ಕಾಳಜಿಯಲ್ಲಿ ಅಪ್ಪ ಅಮ್ಮ ಏನಾದರೂ ಕೇಳಿದರೆ ಸಾಕು “ಅಭಿವ್ಯಕ್ತಿ ಸ್ವಾತಂತ್ರ್ಯ, ಜೀವಿಸುವ ಹಕ್ಕು, …” ಅಂತ ಸಂವಿಧಾನದ ವಿಧಿಗಳನ್ನೇ ಕೋಟ್ ಮಾಡುತ್ತಾ ಇದ್ದ  ಇವಳ ಭುಜಂಗಯ್ಯಿಯ ದಶಾವತಾರವನ್ನು ನೋಡಿ ನಜ್ಜುಗುಜ್ಜಾಗಿದ್ದ ಈಕೆಯ ಹೆತ್ತವರು “ಏನಾದರೂ ಮಾಡಿ ಸಾಯಿ” ಅಂತ ಇವಳ ತಂಟೆಗೆ ಬರುವುದನ್ನೇ ನಿಲ್ಲಿಸಿದಳು.

ಎಲೆಕ್ಷನ್ನಿಗೆ ಇದ್ದದ್ದು ಇನ್ನು ಕೇವಲ ಎರಡು ತಿಂಗಳು. ಕಳೆದ ಒಂದು ವರುಷಗಳಿಂದಲೂ ಸೂರ್ಯನಾರಯಣನ ಪಾರ್ಟಿ ಆರ್ಗಾನಿಕ್ಕಾಗಿ ಜನಮನ ಸೂರೆಗೊಳ್ಳೂತ್ತಾ ಇತ್ತು. ಅಂಕಿ ಅಂಶಗಳೆಲ್ಲ ಈ ಕಾಮ್ರೇಡ್ ಪಕ್ಷ, ಪ್ರತಿಸ್ಪರ್ಧಿಸುತ್ತಿವ ಎಲ್ಲ ಕ್ರ‍ೇತ್ರಗಳಲ್ಲೂ ಕ್ಲೀನ್ ಸ್ವೀಪ್ ವಿಕ್ಟರಿ ಹೊಡೆಯುವುದು ಗ್ಯಾರಂಟಿ ಎಂದೇ ಸೂಚಿಸಿದ್ದವು. ಆಗ ಒಂದು ವಿಚಿತ್ರ ಘಟನೆ ನಡೆಯಿತು. ಅನ್ಯಕೋಮಿನ ಭಾಷೆಯಲ್ಲಿ ಬಹಳ ಜೋರಾಗಿ ಅರಚಿಕೊಂಡು ಕಪ್ಪು ಓಮ್ನಿಂದ ಆಚೆ ನೆಗೆದ ಇಬ್ಬರು ಮುಸುಕುದಾರಿಗಳು ಈ ಮುಷ್ಟಿ ಚಿಹ್ನೆಯ ಪಕ್ಷದ ಕಚೇರಿಗೆ ಮುಂಜಾನೆ ಸುಮಾರು ಆರುವರೆ ಅಷ್ಟೊತ್ತಿಗೆ  ನುಗ್ಗಿ ಕೈಯಲ್ಲಿದ್ದ ಎಕೆ ೪೭ (ಮತ್ತೆ ಪೋಲಿಸ್ ಹಾಗೂ ಫಾರೆನ್ಸಿಕ್ಸ್ ಸ್ಥಳದಲ್ಲಿ ಬಿದ್ದಿದ ಬುಲೆಟ್ಟುಗಳನ್ನು ಸಂಗ್ರಹಿಸಿದ ಪರೀಕ್ಷಿಸಿದ ಆಧಾರದ ಮೇಲೆಗೆ ಮಾಡಿದ ಊಹೆ) ಯಿಂದ ಸರಾಗವಾಗಿ ಕಚೇರಿಯ ತುಂಬೆಲ್ಲಾ ಅಗಣಿತ ಗುಂಡಿನ ಪಿಚಕಾರಿ ಹಾರಿಸಿದರು. ಅಷ್ಟೊತ್ತಿಗೆ ಗ್ರಹಚಾರಕ್ಕೆ ಅವತ್ತು ಬೇಗ ಆಫೀಸಿಗೆ ಬಂದಿದ್ದ ಪಕ್ಷದ ಕಾರ್ಯಕರ್ತರಾದ   ಸಾಧನ ಕುಸುಮ್, ಮೊಹಮ್ಮದ್ದ್ ಅಕ್ರಂ ಹಾಗೂ ಗೋಪಾಲ ಕೃಷ್ಣ ಬುಲೆಟ್ಟ್ ಈಟಿಗೆ ಸ್ಥಳದಲ್ಲೇ ಅಸುನೀಗಿದರು. ಈ ಘಟನೆಯ ಬಗ್ಗೆ ವ್ಯಾಪಕ ಖಂಡನೆ ದೇಶಾದ್ಯಾಂತ ವ್ಯಕ್ತವಾಯಿತು. ಇದೊಂದು ವೈಯುಕ್ತಿಕ ಸ್ವಾತಂತ್ರ್ಯದ ಕಗ್ಗೊಲೆ ಎಂದಿದ್ದರು ನಮ್ಮ ಮಾನ್ಯ ಅಧ್ಯಕ್ಷರು ಅದೂ ಅಂತರ್ಜಾಲದಲ್ಲಿ ಲೈವ್ ಆಗಿ ಕಾಣಿಸಿಕೊಂಡು. ಅಧ್ಯಕ್ಷರ ಧೋರಣೆ, ವಿಚಾರಧಾರೆ ಈ ಮುಷ್ಟಿ ಪಾರ್ಟಿಗೆ ತದ್ವಿರುದ್ಧವಾಗಿದ್ದರೂ ಅದೆಲ್ಲ ಮರೆತು ಈ ಟೆರರಿಶ್ಟ್ ಕೃತ್ಯವನ್ನು ಖಂಡಿಸಿದ್ದನ್ನು ನೋಡಿ, ಅವರ ಅಭಿಮಾನಿಗಳು ಚಪ್ಪಾಳೆ ಹೊಡೆದು ತಮ್ಮ ವಾಟ್ಸಾಪ್ ಸ್ಟೇಟಸಲ್ಲಿ ಅಧ್ಯಕ್ಷರ ಮಾತುಗಳ ತುಣುಕನ್ನು ಮಾರ್ವೆಲ್ಸ್ ಅವೆಂಜರ್ ಬಿಜಿಎಮ್ ಜತೆ ಎಡಿಟ್ಟ್ ಮಾಡಿ ಶೇರ್ ಮಾಡಿದ್ದರು. ವಿರೋಧಪಕ್ಷದ ನಾಯಕ ಮಲಶೇಖರ್ ಈ  ಘಟನೆಯ ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು D.I.K. ಕಮಿಟಿಗೆ ಸರಕಾರ ಒಪ್ಪಿಸಲೇ ಬೇಕೆಂದು ಟ್ವೀಟ್ ಮಾಡಿದ್ದರು.

ಈ ತಲ್ಲಣಕಾರಿ ಆಗುಹೋಗುಗಳಿಂದ ಕಾಮ್ರೇಡ್ ಪಾರ್ಟಿ ಇನ್ನೂ ಹೆಚ್ಚು ಬಲಶಾಲಿಯಾಯಿತು. ಹ್ಯಾಶ್ಟ್ಯಾಗ್ ಐ ಆಮ್ ಅ ಕಾಮ್ರೇಡ್ ಎನ್ನುವ ಹೇಳಿಕೆಯು ವಿಪರೀತ ವೇಗದಲ್ಲಿ ಟ್ರೆಂಡಿಂಗ್ನಲ್ಲಿತ್ತು. ಇಷ್ಟೆಲ್ಲ ಅಂತರ್ಜಾಲದ ಕಾಣದಕೈಗಳ ಬೆಂಬಲ ತರುಣ ರಾಜಕಾರಣಿ ಸೂರ್ಯನಾರಾಯಣನಿಗೆ ದಕ್ಕುತ್ತಾ ಇದ್ದರೂ ಅವ್ಯಾವುದರ ಬಗ್ಗೆ ಚೂರೂ ತಲೆಕೆಡಿಸಿಕೊಳ್ಳದೆ ನಿರ್ವಿಕರಾವಾಗಿ “ನನ್ಗೆ ನಮ್ಮ ಸಂವಿಧಾನದಲ್ಲಿ ನಮ್ಮ ಕೋರ್ಟಲ್ಲಿ ನಂಬಿಕೆ ಇದೆ…. ಕ್ರಿಮಿನಲ್ಸ್ ಶ್ಯಾಲ್ ಬಿ ಪನಿಶ್ಡ್…. ಸತ್ಯಮೇವ ಜಯತೆ…” ಅಂತ ಹೇಳಿಕೆ ಕೊಟ್ಟು ಕಳ್ಳಭಟ್ಟಿ ಸಾರಾಯಿ ಕುಡಿದು ಸತ್ತ ಅನೇಕ ಕೂಲಿ ಕಾರ್ಮಿಕರ ಕುಟುಂಬದವರಿಗೆ ಸಾಂತ್ವನ ಹೇಳುತ್ತಾ, ಆ ಕೆಟ್ಟ ಹೆಂಡ ತಯ್ಯಾರು ಮಾಡಿದ ಜನಗಳಿಗೆ ಶಿಕ್ಷೆ ಆಗಬೇಕೆಂದು ಪಟ್ಟು ಹಿಡಿದು, ಅಲ್ಲಿನ ಲೋಕಲ್ ಪೋಲಿಸ್ ಸ್ಟೇಶನ್ ಮುಂದೆ ತನ್ನ ಸಂಗಡಿಗರ ಜತೆ ಮುಷ್ಕರ ಮಾಡಿದ್ದ. ಹಾಗೇ ಈ ಸುಝೇನ್ ಮುಂತಾದ ಸಹಚರರ ಜತೆ ಈತ ಜಿಲ್ಲಾಧಿಕಾರಿ ಬಂಗಲೆಗೆ ಮುತ್ತಿಗೆ ಹಾಕಿ ಈ ಕೆಲಸದಾಳುಗಳ ಮನೆಯವರಿಗೆಲ್ಲ ದೊಡ್ಡ ಮಟ್ಟದ ಪರಿಹಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದ. ಹೀಗೆ ಈ ಮುಷ್ಟಿ ಪಾರ್ಟಿ ತುಂಬಾ ಅನ್ನ್ ಕನ್ವೆಂಶ್ನಲ್ ಆಗಿ ಚುನಾವಾಣೆಯ ದಿನಗಳು ಸನಿಹವಿದ್ದಾಗಲೂ  ನಿಜಕ್ಕೂ ಸಮಾಜದ ಒಳಿತಿಗಾಗಿ ಶ್ರಮಿಸುತ್ತಾ ಇತ್ತು. ಒಮ್ಮೆ ಸುಝೇನ್ ನೇತೃತ್ವದಲ್ಲಿ ಗಿರಿಜನರ ಹಕ್ಕುಗಳ ರಕ್ಷಣೆಗಾಗಿ ಸುರಿಯೋ ಮಳೆಯನ್ನು ಲೆಕ್ಕಿಸದೆ, ಫಾರೆಶ್ಟ್ ಗಾರ್ಡುಗಳ ಯಾವ ಭಯವೂ ಇಲ್ಲದೆ ಗುಡ್ಡಗಾಡಿನಲ್ಲಿ ಹುಟ್ಟಿರುವ ಕುರುಚಲು ಕಾಡುಗಳಲ್ಲಿ ಇದ್ದ ಈ ಮಂದಿಯ ಜೋಪಡಿಗಳಿಗೆ ಹೋಗಿತ್ತು ಈ ಕಾಮ್ರೇಡ್ ಪಾರ್ಟಿ. ರೂಲಿಂಗ್ ಪಾರ್ಟಿಯ ಜನ, ಈ ಸೂರ್ಯನಾರಾಯಣ ಮತ್ತು ಆತನ ಯುವ ಬೆಟಾಲಿಯಂ ಎಲೆಕ್ಷನಲ್ಲಿ ಗೆದ್ದೇ ಬಿಡುತ್ತಾರೆ ಎಂದು ಹೆದರಿ ಪೆದ್ದುಪೆದ್ದಾಗಿ, ” ನೋಡ್ರಪ್ಪ ಈ ಕಾಮ್ರೇಡ್ಗಿರಿ ಸಮಜ್ವಾದ ಅಂತೆಲ್ಲ ಭಾಷಣ ಹೊಡೆದು ಅದೇನೋ ಎಲ್ಲಾ ಸಮಾನತೆಯಾಗ್ರಿಬೇಕು ಅಂತ ಓರಾಟ ಮಾಡ್ತಾ ಇರೋ ಒಸ ಪಕ್ಷದ ಜನ್ರನ್ನೇ ಈ ಅನ್ಯಕೋಮಿನ ಭಯೋತ್ಪಾದಕರು ಹೊಡೀತಾರೆ… ಅಂದ್ರೆ ನೋಡಿ ಈ ಕಾಮ್ರೇಡ್ ಪಾರ್ಟಿ ಭಯೋತ್ಪಾದಕರ ಪಕ್ಷವಾಗೇ ಬೆಳಿತಾ ಇತ್ತು ಅದನ್ನೇ ಈ ಟೆರರಿಶ್ಟ್ಗಳು ಹೊಡೆದ್ ಹಾಕ್ತಾರೆ ಅಂದ್ರೆ… ಗೊತ್ತಾಯಿತಲ್ಲ ನಿಮ್ಗೇ… ಇವರ ಮಧ್ಯನೇ ಒಗ್ಗಟ್ಟಿಲ್ಲ…” ಅಂತೆಲ್ಲ ಏನೇನೋ ಸ್ಟೇಟ್ಮೆಂಟ್ ಕೊಟ್ಟು  ಅಂತರ್ಜಾಲದಲ್ಲೆಲ್ಲಾ ಟ್ರ‍ೋಲ್ಗೆ ಗುರಿಯಾಗಿದ್ದರು.

ಹೀಗೆ ಅನಾಮತ್ತಾಗಿ ಈ ಬಣಗಳ ಗಣವಾಗಿದ್ದ ಸುಝೇನ್ ಅರಿವಿಲ್ಲದಂತೆಯೇ ಈ ಪಂಗಡದ ಬಿಡಿಸಲಾಗದ ಕೀಲಾಗಿ ಹೋಗಿದ್ದಳು. ಆಕೆಯ ಕ್ರಶ್ ಸೂರ್ಯನಾರಾಯಣನ ಮೇಲೆ ಅತಿ ಮೋಹದಲ್ಲಿ ಈ ಪಾರ್ಟಿ ಸೇರಿದ್ದರೂ, ಆತನನ್ನು ಹತ್ತಿರದಿಂದ ನೋಡಿ, ಒಡನಾಡಿದಾಗ ಅವನೊಬ್ಬ ನಿರ್ಲಿಪ್ತ ಮನುಷ್ಯ ಎಂಬ ಸತ್ಯ ಅರ್ಥ್ವಾಗಿ, ಕೃತ್ರಿಮ ಕಾಮ ಮಾಯವಾಗಿತ್ತು . ಹಾಗೇ ಸೂರ್ಯನಾರಾಯಣನ ರೆಕೆಮಂಡೇಷನ್ನನಂತೆ ಮಾರ್ಕಸ್ ಅರೇಲಿಸ್ನ ಸ್ಟಾಯಿಸಂ ತತ್ತ್ವದ ಉಲ್ಲೇಖವಿದ್ದ ಚಿಕ್ಕ ಪುಸ್ತಕವನ್ನು ಆಕೆ ತನ್ನ ಕಿಂಡಲ್ ಅಲ್ಲಿ ಇನ್ಸ್ಟಾಲ್ ಮಾಡಿ ಓದಲು ಯತ್ನಿಸಿದ್ದಳು. ಆದರೆ ಏಕೋ ಏನೋ ಈ ಯುವ ಇಂಟಲೆಕ್ಚುವಲ್ಲ್ ರಾಜಕಾರಾಣಿಗೆ ವರ್ಕ್ ಔಟ್ ಆಗಿದ್ದ ಈ ಸ್ಟಾಯಿಸಂ ನಮ್ಮ ಹುಡುಗಿಗೆ ಅಷ್ಟಾಗಿ ರುಚಿಸಿರಲಿಲ್ಲ. ಹೀಗೆ ಹೇಳೋಣ. ಮನುಷ್ಯನೊಬ್ಬ ಸಂಘ ಭಾವಗಳ ಜೀವಿ; ಐಲುಪೈಲು ವ್ಯಕ್ತಿ. ವಿಚಿತ್ರ ಘರ್ಷಣೆಗಳ ಭಾವತಿರೇಕಗಳ ಮಾಂಸದ ಮುದ್ದೆ; ಈ ಪರಿಯ ಪ್ರಜ್ಞಾಪ್ರವಾಹವನ್ನು ಸಂಪೂರ್ಣವಾಗಿ ನಿಯಂತ್ರಿಸಿ ರಾಗದ್ವೇಷಗಳ ಅಸಂಗತ ಒಡನಾಟ ಇಲ್ಲದೆ ನಿರ್ವಿಕಾರವಾಗಿ ಬದುಕಿದರೆ, ಒಮ್ಮೆಲೆ ಸುಪ್ತಲೋಕದಿಂದ ಅದುಮಿಟ್ಟ ಎಲ್ಲ ಅಪಾಯಕಾರಿ ಖಯಾಲಿಗಳು ವಿಷವಾಗಿ ಪರಿವರ್ತನೆಯಾಗಿ ಚಿಮ್ಮಿ ಬಂದು ಮನುಷ್ಯ ಸರ್ವನಾಶದ ಪಥ ಹಿಡಿಯುತ್ತಾನೆ ಅಂತ ಸುಝೇನ್ ನಂಬಿದ್ದಳು. ಹಾಗಿದ್ದು ಸೂರ್ಯನಾರಾಯಣ್ ಸರ್ (ಆತ ಯಾವೊಬ್ಬನೂ ತನ್ನನ್ನು ಸರ್ ಎಂದು ಕರೆಯಬಾರದು ನನಗೆ ಯಾವ ನೈಟ್ ಹುಡ್ ಪದವಿ ಸಿಕ್ಕಿಲ್ಲ ಎಂದು ತಾಕಿತು ಮಾಡಿದ್ದರೂ)  ತನಗಿಂತ ತುಂಬಾ ತುಂಬಾ ದೊಡ್ಡ ಮನುಷ್ಯ ಅಂತ ಈಕೆಯ ಊಹೆಯಿದ್ದುದರಿಂದ ಸ್ಟಾಯಿಕ್ಕ್ ಆಗಿ ಎಲ್ಲ ಪುಂಡರಿಗೂ ಇರುವುದಕ್ಕೆ ಸಾಧ್ಯವಿಲ್ಲ, ಅದೆಲ್ಲ ಯೋಗಿಗಳ ಸಾಧನೆ, ನಮ್ಮ ಸೂರ್ಯನಾರಯಾಣ್ ಕೂಡ ಒಬ್ಬ ಯೋಗಿಯೇ ಎಂದು ಭಕ್ತಿಪೂರ್ವಕವಾಗಿ ಗ್ರಹಿಸಿದ್ದಳು.

ಇವತ್ತು  ಒಳಗೆ ನುಗ್ಗಿದಾಗ  ತಲೆ ಗೊಂದಲದ ಗೂಡಾಗಿದ್ದಕ್ಕೆ ಕಾರಣ ಹಲವು. ಸಾಯುವ ಒಂದು ತಿಂಗಳು ಮುಂಚೆಯಷ್ಟೇ ತನ್ನ ಟೆಲಿಗ್ರಾಂ ಅಕೌಂಟಿಗೆ ಸಾಧನ ಕುಸುಮ್ ಇಂದ ಮೆಸೇಜು ಬಂದಿತ್ತು ಅಂತ ಸುಝೇನ್ಗೆ ಗೊತ್ತಾದದ್ದು ನಿನ್ನೆ ರಾತ್ರಿ. ಆಕೆ ಈ ಟೆಲಿಗ್ರಾಂ ಅಪ್ಲಿಕೇಷನ್ ಡಿಲೀಟ್ ಮಾಡಿ ಒಂದೆರೆಡು ವರುಷವಾಗಿತ್ತು. ನಿನ್ನೆ ಯಾವುದೋ ಮಲಯಾಳಂ ಸಿನಿಮಾ ಎಲ್ಲೂ ಸಿಗದೆ ಅದನ್ನ ಟೆಲಿಗ್ರಾಮ್ ಅಲ್ಲಿ ಹುಡುಕಿ ಡೌನ್ಲೋಡ್ ಮಾಡಲು ಮತ್ತೆ ಟೆಲಿಗ್ರಾಮ್ ಆಪ್ ಅನ್ನು ಇನ್ಸ್ಟಾಲ್ ಮಾಡಿದ್ದಳು. ಆದರೆ ಟೆಲಿಗ್ರಾಂ ಓಪನ್ ಆಗುತ್ತಾ ಇದ್ದಂತೆ ಸುಝೇನಳ ಕಣ್ಣುಕುಕ್ಕಿದ್ದು ಸಾಧನ ಕಳಿಸಿದ್ದ ಹಳೆಯ  ಮಿಂಚಂಚೆ. ಏನೂ ಹೇಳದ ಮೆಸೇಜು ಅದು. ಕೇವಲ ಒಂದು ವೆಬ್ಬ್ ಲಿಂಕ್ . ಆ ಅಂತರ್ಜಾಲಕೊಂಡಿಯ ಸುಝೇನ್ ಒತ್ತಿದ ತಕ್ಷಣ ಗೋವಾ ಸರಹದ್ದಿನಿಂದ ಆಚೆಯಿದ್ದ ಏಕಾಂತ ಶ್ರೀಮಂತ ಪ್ರೈವೇಟ್ ಬೀಚ್ ರೆಸಾರ್ಟ್ ಒಂದು ಪರದೆಯ ಮೇಲೆ ಪ್ರತ್ಯಕ್ಷವಾಗಿತ್ತು. ಗ್ಸಾನಾಡು ಎಂಬ ಹೆಸರಿದ್ದ ತಾಣವದು. ಎಲ್ಲೂಆ ಜಾಗದ ಕಾಂಟಾಕ್ಟ್ ನಂಬರ್ ಆಗಲಿ ವೆಬ್ ವಿಳಾಸವಾಗಲಿ ಏನೂ ಕಾಣಿಸಲಿಲ್ಲ. ಕಂಡದ್ದು ಬರೀ ಸಾಗರದ ಕಪ್ಪಿನಲ್ಲಿ ಉಗಮವಾದ ಬೆಳದಿಂಗಳ ಹಾನಿಕಾರಕ ಬೆಳ್ಳಿ ಪ್ರಭೆಯಲ್ಲಿ ಮಿನುಗುತ್ತಾ ಇದ್ದ ಈ ಸಂಭಾವಿತ ಕೋಟೆಯ ಡಿಜಿಟಲ್ ಪ್ರೊಜೆಕ್ಷನ್ನ್. ಈಕೆ ಗೂಗಲ್ ಅಲ್ಲಿ ಎಷ್ಟು ಹುಡುಕಿದರೂ ಆ ಬೀಚ್ ರೆಸಾರ್ಟ್ನ ಬಗ್ಗೆ ಜಾಸ್ತಿ ಮಾಹಿತಿ ಸಿಕ್ಕಿರಲಿಲ್ಲ.  ಆದರೆ ಮನೋಜ್ ಪರ್ವತನೇನಿ ಅನ್ನೋ ವ್ಯಾಪಾರಿ ಮೊಘಲ್ಲ್ ನಿಗಾದಲ್ಲೇ ಈ  ದುಬಾರಿ ರೆಸಾರ್ಟ್ ಇದೆ ಎಂದು ಆಕೆಗೆ ತಿಳಿಸಿದ್ದು ಗೆಳೆಯ ಆಶ್. ಅವನಿಗಿದ್ದ ಕೆಲ ಹ್ಯಾಕರ್ ಮಿತ್ರರ ನೆರವಿನಿಂದ, ಈ ರೆಸಾರ್ಟ್ಗೆ ಸಂಭಂದಪಟ್ಟ ಅನೇಕ ಕುರುಹು ಶಬ್ಧಗಳನ್ನೇ ಆಧಾರವಿಟ್ಟುಕೊಂಡು ಡೀಪ್ ವೆಬ್ಬಿನಾಳಕ್ಕಿಳಿದು ಈ ಮಾಹಿತಿ ಸಂಗ್ರಹಿಸಿದ್ದ ಆಶ್. ಹಾಗೇ ಈ ಅಂತರ್ಜಾಲದ  ಗರ್ಭದಾಳದಲ್ಲಿ ಅವಿತಿರುವ ಸುರಂಗ ಮಾರ್ಗವಾಗಿರುವ ಈ ಡೀಪ್ ವೆಬ್ಬ್ ಶಿಶುಕಾಮಿಗಳ, ಡ್ರಗ್ಗ್ ಸ್ಮಗ್ಲರ್ಸ್ಗಳ, ಮನುಷ್ಯರನ್ನ, ಕ್ರಿಮಿಗಳನ್ನ, ಜಂತುಗಳನ್ನ, ಸರೀಸೃಪಗಳನ್ನ, ಚತುಶ್ಪಾದಿಗಳನ್ನ ಕಳ್ಳಸಾಗಾಣೆ ಮಾಡುವ ಆಗುಂತಕರ ಗುಪ್ತಮಾರ್ಗ. ತನ್ನನ್ನು ತಾನು ಮುಕ್ತವಾಗಿ ಯಾರ ಹಂಗೂ ಇಲ್ಲದೆ ದುಡಿಯುವ ಕ್ರೈಂ ಪತ್ರಕರ್ತ ಎಂದೇ ಗುರುತಿಸಿಕೊಳ್ಳುತ್ತಿದ್ದ ಆಶ್ ಎಷ್ಟೋ ಬಾರಿ ಹೀಗೆ ನಿಗೂಢವಾದ ರಹಸ್ಯಗಳನ್ನು ಪತ್ತೆ ಮಾಡಲು, ತನಗಿದ್ದ  ಗುಪ್ತಚರ ಮೂಲಗಳ ಜತೆ ಸಂಪರ್ಕದಲ್ಲಿರಲು ಈ ಗರ್ಭಜಾಲಕ್ಕೆ ಆಗಾಗ ಇಳಿಯುತ್ತಿದ್ದ. ಮತ್ತೆ ಮಹಾಗಾಂಜಾ ವ್ಯಸನಿ ಈ ಆಶ್ ಆಗಿದ್ದರಿಂದ ಯಾವ ಕಾನೂನಿನ ಕಟ್ಟುಪಾಡುಗಳಿಲ್ಲದೆ  ಸುಲಭವಾಗಿ ಸ್ಕೋರ್ ಮಾಡಲು ಈ ತಾಣದ ಖಾಯಂ ಅತಿಥಿಯಾಗಿದ್ದ. ಪಟ್ಟನೆ ಬೇಕಾದಾಗ ಸುಝೇನ್ಗೆ ಇಂಥ ಮಾಹಿತಿಗಳನ್ನು ಕೊಡೋ ಆಶ್, ಈ ಬಾರಿ ಈ ಮನೋಜ್ ಪರ್ವತ್ನೇನಿಯ ಡೈರೆಕ್ಷನ್ನಲ್ಲಿ ಆ  ಗ್ಸಾನಡು ಅನ್ನೋ ಹೈ ಫ಼ೈ ಲಗ್ಷುರಿ ಕೋಟೆ ಮೂಡಿದ್ದರೂ, ಅದಕ್ಕೆ ಹಣ ಹೂಡಿದವರಲ್ಲಿ ಹಲವು ದೊಡ್ಡ ಮನುಷ್ಯರ ಕೈವಾಡವಿದೆ ಎಂದು ಊಹಿಸಿದ್ದ. ಹಾಗೇ ಮಲಶೇಖರ್ ಪಾರ್ಟಿ ಜನ ಈಗ ಆಳುತ್ತಿರುವ ಜನರ ಪಾರ್ಟಿಗೆ ಫ಼ಂಡ್ ನೀಡುವುದು ಇದೇ ಪರ್ವತನೇನಿ ಎಂದು ಪುಕಾರು ಹಬ್ಬಿಸಿದಾಗ, ” ಹೀಗೆಲ್ಲ ಯಾವ ಪುರಾವೆ ಇಲ್ಲದೆ ಆರ‍ೋಪ ಮಾಡೋ ಈ ನೀಚ ಜನ ಬೇಷರತ್ತ್ ಕ್ಷಮೆ ಕೇಳದೆ ಇದ್ದರೆ ನನ್ನ ವಕೀಲ ವೃಂದ ಲೀಗಲ್ಲಾಗಿ ಇವರೆಲ್ಲರ ಮೇಲೆ ಮೊಕದೊಮ್ಮೆ ಹೂಡುತ್ತಾರೆ…” ಎಂದು ಗುಡುಗಿದ್ದ ಪರ್ವತನೇನಿ. ಇದಾಗಿದ್ದು ಏಳು ತಿಂಗಳ ಹಿಂದೆ. ದ ಹಿಂದೂ ಪತ್ರಿಕೆಯ ಏಳನೆಯ ಪೇಜಿನಲ್ಲಿ ಈ ಸುದ್ದಿ ಪ್ರಕಟವಾಗಿದ್ದು ಬಿಟ್ಟರೆ ಬೇರೆಲ್ಲೂ ಈ ಘಟನೆಯ ಸುಳಿವಿರಲಿಲ್ಲ. ಆ ನಂತರ ಯಾವನೂ ಈ ಆರೋಪ ಪ್ರತ್ಯಾರೋಪಗಳ ಬಗ್ಗೆ ಚಕಾರವೆತ್ತಿರಲಿಲ್ಲ. ಆದರೆ ಇಷ್ಟೆಲ್ಲ ಅಮೂರ್ತ ಕನೆಕ್ಷನ್ನುಗಳನ್ನು, ಹಿಂದಿನ ರಾತ್ರಿ ಈ ಫಜೀತಿ ಬಗ್ಗೆ ಆಕೆ ಹೇಳುತ್ತಿದ್ದಂತೆ ಮೂರನೆಯ ಜಾವದ ಹೊತ್ತಿಗೆಲ್ಲ ಹೇಗೋ ಅಗೆದು ತೆಗೆದಿದ್ದ ಆಶ್ ಜತೆಯೇ ಇಯರ್ ಫೋನ್ ಸಿಕ್ಕಿಸಿಕೊಂಡು ಸ್ಕೂಟರ್ ಅಲ್ಲಿ ಮಾತನಾಡುತ್ತ ಬಂದಿದ್ದ ಸುಝೇನ್ ಮಿದುಳು ಜೆಲ್ಲಿ ಮೀನಿನಂತೆ ಎಲ್ಲೆಲ್ಲೋ ಹರಿದಾಡುತ್ತಾ ಏನೇನೋ ಪೇಚಾಡುತ್ತಾ ಇತ್ತು. ಆಕೆಯ ತಲೆ ಕೆಡಲು ಮುಖ್ಯ ಕಾರಣವೆಂದರೆ ಈ ಸಾಧನಳ ಜತೆ ಅಂತಹ ಅನೋನ್ಯವಾದ ಸಂಭಂದವೇ ಇಲ್ಲದೆ ಇದಾಗ ಈ ವಿವಾದಾತ್ಮಕ ಅಂತರ್ಜಾಲದ ಲಿಂಕನ್ನು ತನಗೆ ಯಾಕೆ ಕಳುಹಿಸಿದಳು ಅನ್ನೋ ಯಕ್ಷ ಪ್ರಶ್ನೆ. ಎದುರುಬದುರು ಸಿಕ್ಕಾಗ ಕಷ್ಟಪಟ್ಟು ಹಲ್ಲು ಕಿಸಿಯುತ್ತಿದ್ದರು ಈ ಈರ್ವರು. ಬಹುಶಃ ಸಾಧನಳಿಗಿದ್ದ ಪರ್ಫೆಕ್ಟ್ ಫ಼ಿಗರ್ ಬಗ್ಗೆ ಸುಝೇನ್ಗಿದ್ದ ಹೊಟ್ಟೆಕಿಚ್ಚೇ ಕಾರಣವೇ ಈ ಶೀತಲ ಸಮರಕ್ಕೆ? ಗೊತ್ತಿಲ್ಲ ಆದರೆ ಆಶ್ ಮಾತ್ರ ” ನಿನ್ಗೆ ತಿನ್ನೋದರಲ್ಲಿ ಕಂಟ್ರ‍ೋಲ್ ಇಲ್ಲ ಹಾಳ್ ಮೂಳ್ ತಿಂದು ತಿಂದ್ ಅಂಡೆಲ್ಲ ಊದಿಸಿಕೊಂಡಿದ್ಯ… ಅದಕ್ಕೆ ನಿನ್ಗೇ ಅವ್ಳ ಮೇಲೆ ಜೆಲೆಸಿ… ಯು ನೋ ಶೀ ಹಿಟ್ಸ್ ಜಿಮ್ ರೆಗ್ಯುಲರ್ಲೀ… ಗೋಲ್ಡ್ ಜಿಮ್ಮ್ ಪರ್ಮೆಂಟ್ ಮೆಂಬರ್ ಅವ್ಳು…” ಎಂದು ಛೇಡಿಸಿದ್ದ. ಆ ವಿಷಯ ಹಳೆಯದು ಬಿಡಿ. ಆದರೆ ಹೀಗೆ ಎಂದೂ ಮುಖ ಕೊಟ್ಟೂ ಮಾತನಾಡದ ಸಹ ಸದಸ್ಯೆ ಸಾಯಕ್ಕೆ ಒಂದು ತಿಂಗಳು ಮುಂಚೆ ಈ ವಿಳಾಸವನ್ನೇಕೆ ಮೆಸೇಜಲ್ಲಿ ಕಳಿಸಬೇಕಿತ್ತು….. ಮತ್ತೆಮತ್ತೆ ಅದೇ ಪ್ರಶ್ನೆ ಗುಯ್ಞಿಗುಟ್ಟುತ್ತಿತ್ತು.

ಇದೇ ಲಿಬರಲ್ಲ್ ಪಾರ್ಟಿಯ ಕಚೇರಿಯ ಒಂದು ಕೋಣೆಯೊಳಗೆ ಆಶ್ ಕುಳಿತು ಲ್ಯಾಪ್ಟಾಪ್ ಕೀಲಿಮಣೆಯಲ್ಲಿ ಏನೇನೋ ಟೈಪ್ ಮಾಡುತ್ತಿದ್ದ. ನಿಶ್ಚಿತ ಕಾರ್ಯಕೆಲಸವೊಂದೂ ಇಲ್ಲದ ಈ ಆಶ್ ಔಟ್ ಸೋರ್ಸ್ ಕೆಲಸದಾಳಿನ ಹಾಗೆ. ಬೇಕಾದಾಗ ಮದುವೆ ಪಾರ್ಟಿಯಲ್ಲಿ ಸ್ಟಡಿ ಕ್ಯಾಮ್ ಆಪರೇಟರ್ ಸಹಾಯಕನಾಗುತ್ತಿದ್ದ; ಇನ್ನು ಕೆಲವೊಮ್ಮೆ ಹೆಲಿಕ್ಯಾಮ್ ಹಾರಿಸುತ್ತಿದ್ದ… ಮತ್ತೆ ಕೆಲವೊಮ್ಮೆ ಕಂಪ್ಯೂಟರ್ ಟೆಕ್ನೀಶಿಯನ್ನಾಗಿ ಅಂಕಲ್ ಆಂಟಿಯರ ಮನೆಯಲ್ಲಿ ಸಿಸ್ಟಮ್ಮ್ ರಿಪೇರಿ ಮಾಡುತ್ತಿದ್ದ. ಈ ಆಶ್ ಮಹಾಶಯನ ಒಂದೇ ಒಂದು ಅಂಕಣವಾಗಲೀ ಅಥವಾ ಕಥೆ ಕವನವಾಗಲೀ ಎಲ್ಲೂ ಪ್ರಕಟವಾಗದೇ ಇದ್ದರೂ “ಮೊನ್ನೆ ಬಂದಿತ್ತಲ್ಲ ಮೂರನೆಯ ಪೇಜಲ್ಲಿ ’೪ ಕಿಲೋ ಗಾಂಜಾ ಸಾಗಿಸುತ್ತಾ ಇದ್ದ ಮೂರು ಜನರು ಪೋಲಿಸರ ವಶಕ್ಕೆ’ ಅದನ್ನ ಬರೆದಿದ್ದು ನಾನೇ” ಅಂತ ಸುಳ್ಳು ಹೊಡೆಯುತ್ತಿದ್ದ. ಯಾವುದೋ ಬುದ್ಧಿಜೀವಿಗಳ ಬಳಗಕ್ಕೆ ಮಾತ್ರ ಅರ್ಥವಾಗುವ ಚಲನಚಿತ್ರೋತ್ಸವಕ್ಕೆ ಹೋಗಿದ್ದಾಗ ಸುಝೇನ್ಗೆ ಈತನ ಪರಿಚಯವಾಗಿತ್ತು. ಅಲ್ಲಿ ಬ್ಲೂ ಈಸ್ ದ ವೆಟ್ಟೆಶ್ಟ್ ಕಲರ್ ಅನ್ನೋ  ಫ಼್ರೆಂಚ್ ಚಿತ್ರವೊಂದು ಪ್ರದರ್ಶನವಾಗುತ್ತಿದ್ದ ವೇಳೆ ಸೆಲೆಕ್ಟೆಡ್ ಸಕಲ ನೋಡುಗರು ಎವೆಕ್ಕದೆ ಕಣ್ಣನ್ನೆಲ್ಲ ಬೆಳ್ಳಿತೆರೆ ಮೇಲೆ ನೆಟ್ಟಿದ್ದಾಗ ಹಿಂದಿನ ಕಾರ್ನರ್ ಸೀಟಿನಲ್ಲಿ ಕೂತ ಆಶ್ ಗುಪ್ತವಾಗಿ ಜಟಕಾ ಹೊಡೆದುಕೊಳ್ಳುತ್ತಾ ಇದ್ದ – ಅರ್ಥಾತ್ ಮುಷ್ಟಿಮೈಥುನದಲ್ಲಿ ನಿರತನಾಗಿದ್ದ. ಈ ವಿಚಿತ್ರ ವಾಸ್ತವ,  ಬೆಳ್ಳಿತೆರೆ ಮೇಲೆ ಆಗುತ್ತಿದ್ದ ವಾಸ್ತವಕ್ಕೆ ಸಡ್ಡು ಹೊಡೆಯುವ ಲವ್ ಮೇಕಿಂಗ್ ದೃಶ್ಯಾವಳಿಗಿಂತ ಕುತೂಹಲವೆನಿಸಿ ಈ ಸುಝೇನ್ ಈ ಜರ್ಕಿಂಗ್ ಆಸಾಮಿಯನ್ನೇ ಎವೆಕ್ಕದೆ ನೋಡುತ್ತಾ ಇದ್ದಳು. ಈ ಮ್ಯಾಟರ್ ಹೇಗೋ ಆ ಚಿತ್ರೋತ್ಸವದ ಕ್ಯುರೇಟರ್ ಕಣ್ಣಿಗೆ ಸಿಕ್ಕಿ ಆತ “ಏಯ್ ಏಯ್ ಪರ್ವಟ್ ಬಾಶ್ಟ್ರಡ್ರ್ಸ್… ಹೀ ಈಸ್ ಶೋಯಿಂಗ್… ಹಿಸ್ ಥಿಂಘ್ ಹೀ ಈಸ್ ಅ ಫ಼್ಲಾಶರ್ರ್….” ಎಂದು ಅರಚಾಡಿ ಈತನನ್ನು ಅಟ್ಟಿಸಿಕೊಂಡು ಹೋಗಿದ್ದ…  ನಂತರ ಪಾರ್ಕಿಂಗ್ ಲಾಟಲ್ಲಿ ಈ ಆಶ್ ಸುಝೇನ್ ವೆಸ್ಪ ನಿಲ್ಲಿಸಿದ್ದ ಕಾರಿನ ಪಕ್ಕ ಅಡಗಿ ನಿಂತಿದ್ದನ್ನು ಪತ್ತೆ ಹಚ್ಚಿ, ಆಕೆ ಅವನಿಗೆ ತನ್ನ ಇನ್ನೊಂದು ಹೆಲ್ಮೆಟ್ ಕೊಟ್ಟು ಈ ಕ್ರೋಧದಲ್ಲಿ ಉದ್ವಿಗ್ನರಾಗಿ ಈ ವಿಕೃತನನ್ನು ಹೊಡೆದು ಚಚ್ಚಿ ಹಾಕಲು ಬರುತ್ತಿದ್ದ ಈ ಕಲಾಸಕ್ತ ಬುದ್ಧಿಜೀವಿ ಗುಂಪಿನಿಂದ ಆಶ್ನನ್ನು ಉಳಿಸಿದ್ದಳು. ಸ್ಕೂಟರ್ ಅಲ್ಲಿ ಅವಳ ಹಿಂದೆ ಕೂತು ಮುಖ ಮುಚ್ಚಿ ಮಗುಮ್ಮಾಗಿದ್ದ ಆಶ್ ಎಷ್ಟೋ ಟ್ರಾಫ಼ಿಕ್ ಸಿಗ್ನಲ್ ಕಳೆದ ಬಳಿಕ ಹೆಲ್ಮೆಟ್ ತೆಗೆದು ನಿರಾಳವಾಗಿ ಉಸಿರಾಡುತ್ತಾ “ಸಾರಿ ತುಂಬಾ ಹೈ ಆಗಿದ್ದೆ ಗಾಂಜಾ ಹೊಡ್ದು ಹಾಗೆ ಯಾರ್ದೋ ಪಾಸ್ ಇತ್ತು ಹೋಗಿ ಅಲ್ಲಿ ನಿದ್ದೆ ಮಾಡ್ತಾ ಇದ್ದೇ…. ಈ ಸಿನಿಮಾ ಸ್ಕ್ರೀನಿಂಗ್ ಯಾವಾಗ್ ಶುರು ಆಯ್ತೋ ಗೊತ್ತಿಲ್ಲ…ಬಟ್ ಗಾಡ್! ಏನ್ ಸೀನ್ ಗುರೂ! ಏನೇ ಅನ್ಲಿ ಗೊತ್ತಿರೋವ್ರು ಈ ಆರ್ಟ್ ಹೌಸ್ ಸಿನಿಮಾದವರಿಂದ ಕಲಿ ಬೇಕು ರಿಯಲಿಶ್ಟಿಕ್ಕ್ ಸೆಕ್ಸ್ ಸೀನ್ಸ್ ಹೇಗೆ ಶೂಟ್ ಮಾಡ್ಬೇಕು ಅಂತ… “

ಹೀಗೆ ಶುರು ಆಗಿದ್ದು ಇವರಿಬ್ಬರ ಸ್ನೇಹ…. ನಂತರ  ಈತನಿಂದಲೇ ಅದೆಷ್ಟೋ ಗಾಂಜಾ ಪ್ರಿಯರು ಖುಷಿಯಾಗಿ ಕಾಲಕಳೆಯುತ್ತಿದ್ದಾರೆ ಎಂಬ ವಿಷಯವೂ ಅರಿವಾಗಿತ್ತು ಸುಝೇನ್ಗೆ. ಈ ಟಾಪ್ ಕ್ವಾಲಿಟ್ ಮಾಲನ್ನ ಕೇರಳದಲ್ಲಿ ಬೆಳೆಯೋ ರೈತ್ರ ಹತ್ತಿರ ಕೊಂಡು, ಅದನ್ನು ತನ್ನ ವಲಯದವರಿಗೆ ಕೈಗೆ ಸಿಗೋ ಬೆಲೆಗೆ ಹಂಚುತ್ತಾ ಇದ್ದ ಈ ಆಶ್. ಇವನ ಗಾಂಜಾ ಎಲೆಗೆಳ ವಿಶೇಷತೆ ಏನಂದರೆ ಅತ್ತ ಪೂರ್ತಿ ಕಂದೂ ಅಲ್ಲ ಇತ್ತ ಹಸಿರೂ ಅಲ್ಲ ಅನ್ನುವಂತಹ ರಂಗಿನಲ್ಲಿ ಕಂಗೊಳಿಸಿದ್ದ ಈ ಮಾರೂವನದ ದಳಗಳು, ಸೇದಿದವರಿಗೆ ಶುದ್ಧ ಆಧ್ಯಾತ್ಮದ ಪ್ರಭೆಯ ದಯಪಾಲಿಸುತ್ತಿತ್ತೇ ವಿನಃ ಆತಂಕದ ತಳಮಳಗಳನ್ನಲ್ಲ! ಹೀಗೆ ಗೆಳೆತನ ಬೆಳೆದು ಒಮ್ಮೆ ಇವ ವಾಸ ಮಾಡುತ್ತಿದ್ದ ಫ಼್ಲಾಟ್ಗೆ ಸುಝೇನ್ ಹೀಗೆ ಹೋಗಿ, ತಾನೂ ಒಂದು ರೌಂಡ್ ಗಾಂಜಾ ಹೊಡೆದು ಆ ಸೋರುತ್ತಾ ಇದ್ದ ಕೋಣೆಯ ಹಾಸಿಗೆಯಲ್ಲಿ ಬಿದ್ದುಕೊಂಡು ಮುದ್ದಾಟ ಆಡಲು ಹೋದಾಗ ಈ ಆಶ್ ತೀರದ ಪ್ಯಾರನಾಯದಲ್ಲಿ ಇನ್ನೇನು ಪೋಲಿಸರು ಬಂದು ತನ್ನ ಅರೆಶ್ಟ್ ಮಾಡೇ ಬಿಡುತ್ತಾರೆ ಎನ್ನುವ ಭಯದಲ್ಲಿ ಸುಝೇನ್ಳ ಸರಸಕ್ಕೆ ಸಾಥೆ ಕೊಡದೆ ಚಡಪಡಿಸಿದ್ದ…. “ಜಾಸ್ತಿ ಗಾಂಜಾ ಹೊಡ್ದ್ರೆ ಹೀಗೆ ಆಗೋದು…. ನಿನ್ಗೆ ಭಯ್ದ ರೋಗದ ಹಿಡ್ದಿದಿದೆ… ಹಾಗೇ ಸೆಕ್ಷುಯಲಿ… ಇಂಪೋಟೆಂಟ್ ಕೂಡ ಆಗ್ತಾ ಇದ್ಯಾ….” ಅಂತ ರೇಗಿ ಕೋಪದಲ್ಲಿ ಬಟ್ಟೆ ಹಾಕಿಕೊಂಡು ವಾಪಾಸ್ಸು ಬಂದಿದ್ದಳು ಈ ಸುಝೇನ್.

ಇವತ್ತು ಇದೇ ಆಶ್ ಅವಳ ಆಫ಼ೀಸಿನಲ್ಲಿ ಕೂರಲು ಕಾರಣ ಕೆಲ ತಿಂಗಳುಗಳಿಂದ ಎಲ್ಲೂ ಆತನಿಗೆ ಸೂಕ್ತವಾದ ಕಾರ್ಯ ಪ್ರಾಪ್ತಿಯಾಗದೆ, ಆತ ಕೆನಡಾಗೆ ಹಾರಲು ವೀಸಾ (ಕಳೆದ ೫ ವರುಷಗಳಿಂದ ಅವನಿಗಿದ್ದ ಒಂದೇ ಒಂದು ಗುರಿ ಯಾವುದಾದರೂ ಯುರೋಪ್ ದೇಶಕ್ಕೆ ಹೋಗಿ ಚೆನ್ನಾಗಿ ಗೇದು ಹಣ ಮಾಡಿ ಭಾರತಕ್ಕೆ ಬಂದು ಹೊಸ ಧಂಧೆ ಶುರು ಮಾಡುವುದು)  ಸಿಗಲು ಬರೆಯಬೇಕಾಗಿದ್ದ ಕಾಮನ್ ಎಂಟ್ರೆಸಲ್ಲಿ ಅತ್ಯಂತ ಕಳಪೆ ಅಂಕಗಳನ್ನು ತೆಗೆದು (ಇದಕ್ಕೆ ಬಹುಮುಖ್ಯ ಕಾರಣ ಇಂಗ್ಲೀಶಲ್ಲಿ ಆತನಿಗೆ ಸಿಕಿದ್ದು ಬರೀ ೫) ಬೇರೆ ಯಾವ ಕೆಲಸವೂ ಇಲ್ಲದೆ ಕೂತಿದ್ದಾಗ ಇದೇ ಸುಝೇನ್ ಆತನಿಗೆ ಟೆಕ್ನಿಕಲ್ ಅಡ್ವೈಸರ್ ಆಗಿ ತಮ್ಮ ಕ್ಯಾಂಪೇನ್ ಕ್ಯಾಂಪ್ ಅಲ್ಲಿ ಹಂಗಾಮಿ ನೌಕರಿ ಕೊಡಿಸಿದ್ದಳು.   ಸುಝೇನ್ ಕೋಣೆಗೆ ಬರುತ್ತಾ ಇದ್ದಂತೆ ಅವಳು ತೊಟ್ಟಿದ್ದ ತಿಳಿ ನೀಲಿ ಬಣ್ಣದ ಸ್ಲೀವ್ ಲೆಸ್ ಕುರ್ತಾ ನೋಡಿ “ಲಾಶ್ಟ್ ವೀಕ್ ಆರ್ಡರ್ ಮಾಡಿದ್ದೆ ಅಲ್ಲ…” ಎಂದು ನಸು ನಕ್ಕ.. “ನಿನ್ಗೇ ಹೇಗೆ ಗೊತ್ತಾಯ್ತು…” ಅಂತ ಸುಝೇನ್ ಸಿಡುಕಿದಾಗ ಆತ “ನನ್ಗೆ ಮೂರ್ನೆಯ ಕಣ್ಣಿದೆ ಇಲ್ಲಿ….” ಅಂತ ತನ್ನ ನೆತ್ತಿಯ ಕಡೆ ಬೊಟ್ಟು ಮಾಡಿದ್ದ… “ಡೋಂಟ್ ಹ್ಯಾಕ್ ಮೈ ಫ಼ಕಿಂಘ್ ಫೋನ್” ಅಂತ ಆಕೆ ಅರಚುತ್ತಾ ಇದ್ದಾಗ ಅವಳ ಫೋನ್ ಇದಕ್ಕಿದ್ದಂತೆ ರಿಂಗಾಯಿತು.    ಟ್ರೂ ಕಾಲರ್ ಜಂಕ್ ಸ್ಪಾಮ್ ಕಾಲ್ ಅಂತ ತೋರಿಸುತ್ತಾ ಇದ್ದರೂ ಏಕೋ ಅಸ್ಪಷ್ಟ ಗಾಬರಿಯ ಭಾವದಲ್ಲಿ ಕರೆಯನ್ನು ಸ್ವೀಕರಿಸಿದಳು. ಮೊದ-ಮೊದಲು ಅತ್ತ ಬದಿಯಿಂದ ಏನೇನೋ ಸದ್ದು ಗದ್ದಲ… ಬರೀ ಮಾತಿಗೂ ಮೀರಿದ ಕಂಪನಗಳು… ಚುಕ್ಕೆ ಚುಕ್ಕೆಯಂತ ಶಬ್ಧವಾಹಕಳು… ಕ್ಯಾಂಪೇನ್ ಆಫ಼ೀಸಿನ ಗಲಾಟೆಯಿಂದ ಆಚೆ ಬಂದು ಹಿಂಬದಿಯಿದ್ದ ವಾಟರ್ ಟ್ಯಾಂಕನ ಹತ್ತಿರ ಅರ್ಥವಾಗದ  ತಲ್ಲಣದಲ್ಲಿ ಮಾತು ಶುರುಮಾಡುವ ಮುಂಚೆಯೇ ಆ ಕರೆ ನಂದಿ ಹೋಯಿತು.

ವಾಪಾಸ್ಸು ಬಂದು ತನ್ನ ಕುರ್ಚಿಯಲ್ಲಿ ಕೂತು ಏಕೋ  ಕ್ಯಾಂಪೇನಿಂಗ್ ಸಂಭಂಧಪಟ್ಟ ವಿಷಯಗಳ ಗಮನ ಕೊಡಲು ಮೂಡಿಲ್ಲದೆ ಆಕೆ ಆಶ್ನತ್ತ ನೋಡಿ “ಹೇಗಾದರೂ ಮಾಡೀ ನನ್ಗೆ  ಈ ಸಾಧನ್ ಕಾಲ್ ರೆಕಾರ್ಡ್ಸ್ ಡಿಟೈಲ್ಸ್ ಕಾಪಿ ಕೊಡಿಸ್ತೀಯ… ಪ್ಲೀಸ್….  ಕಾಪ್ಸ್ ಜತೆ ನಿನ್ಗಿರೋ ಕಾಂಟ್ಯಾಕ್ ಯೂಸ್ ಮಾಡೋ…” ಎಂದು ಅಂಗಲಾಚಿದ್ದಳು. “ನಿನ್ನ ಪಾರ್ಟಿ ತಾನೇ ಅವಳು ನೀನೆ ಹುಡ್ಕೋ ಪೋಲೀಸ್ ಸ್ಟೇಶನ್ನಲ್ಲಿದೆ ಅವ್ಳ ಫೋನ್ ರೆಕಾರ್ಡ್ಸ್ ಅಷ್ಟೆಲ್ಲ ಕಷ್ಟಪಡಕ್ಕೆ ದುಡ್ಡು ಕರ್ಚಾಗುತ್ತೆ….” ಅಂತ ಉಢಾಫೆಯ ಉತ್ತರ ಕೊಟ್ಟರೂ ಅದೇ ದಿನ ಸಂಜೆ ಆಕೆಯ ವಾಟ್ಸಾಪ್ ಅಕೌಂಟಿಗೆ ಆ ದಾಖಲೆಗಳನ್ನು ಕಳುಹಿಸಿಕೊಟ್ಟಿದ್ದ. ಆ ಕಾಲ್ ಲಿಶ್ಟ್ನಲ್ಲಿ ಇವಳ ಕುತೂಹಲ ಕೆರೆಳಿಸಿದ್ದು ಶೂಟ್ ಔಟ್ ಆದ ಹಿಂದಿನ ರಾತ್ರಿಯ ಮೂರನೆಯ ಜಾವದ ಹೊತ್ತಿಗೆ ಯಾವುದೋ ಜಂಕ್ ನಂಬರ್ರಿಂದ ಈ  ಸಾಧನ ಕುಸುಮ್ ಸೆಲ್ಫ಼ೋನಿಗೆ  ಬಂದಿದ್ದ ಕಾಲ್. ಆ ಕಾಲ್ ಮಾಡಿದ ವ್ಯಕ್ತಿಯ ಜತೆ ಆಕೆ ಬರೋಬ್ಬರಿ ಅರ್ಧಗಂಟೆ ಮಾತನಾಡಿದ್ದಳು. ನಡು ಬೆಳಗಿನ ಜಾವ ೩೨೬ರಿಂದ ೪:೦೫ ರ ತನಕ ಈ ಸಂಭಾಷಣೆ ಸಾಗಿತ್ತು. ಕೆಟ್ಟ ಕೌತುಕ ತಡೆಯಲಾಗದೆ ಮತ್ತೆ ಈಕೆ ಆಶ್ಗೆ ಫೋನ್ ಮಾಡಿ ಹೇಗಾದರೂ ಈ ಸಾಧನ ನಂಬರ್ಗೆ  ಯಾವ ಲೊಕೇಶನ್ನ್ ಇಂದ ಕರೆ ಬಂದಿರಬಹುದು ಎಂದು ಪತ್ತೆ ಹಚ್ಚುವಂತೆ ಒತ್ತಾಯಿಸಿದಳು. “ಲೇಯ್ ಆ ಸೈಬರ್ ಕ್ರೈಮ್ ಡಿಫಾರ್ಟೆಮೆಂಟಲ್ಲಿ ಒಬ್ಬ ನಿನ್ನ ಖಾಯಂ ಗಿರಾಕಿ ಅಲ್ವೇನೋ …. ಒಂದ್ ಹೆಲ್ಪ್ ಆಗ್ಬೇಕಿತ್ತು ಅಪ್ಪೀ….” ಅಂತ ಬಹಳ ರಾಗ ಎಳೆದು ಮತ್ತೆ ಆಶ್ ಇಂದ ತನಗೆ ಬೇಕಾದ ಮಾಹಿತಿ ಸಂಗ್ರಹಿಸಿದಳು.

ಆ ಕಾಲ್ ಬಂದದ್ದು ಸಿಟಿ ಮಾರ್ಕೆಟ್ಟಿಗೆ ಅಂಟಿಕೊಂಡೇ ಹುಟ್ಟಿದ್ದ ಚೈನಾ ಬಝಾರ್ ಇಂದ. ಅಲ್ಲಿ ಬಣ್ಣ ಬಣ್ಣದ ಗ್ಯಾಡ್ಜೆಟ್ಟುಗಳು, ಕಣ್ಣು ಕುಕ್ಕುವ ಕೃತ್ರಿಮ ಬೆಳಕು ಸೂಸುವ ದೀಪಗಳಿಂದ ಅಲಂಕೃತವಾಗಿದ್ದ ಅಂಗಡಿಗಳಿಂದ ಚಿಮ್ಮುತ್ತಿತ್ತು. ಹತ್ತು ರೂಪಾಯಿ ಕರ್ಚೀಪು, ೫೦೦ ರೂಪಾಯಿಗೆ ನಾಲ್ಕು ಕುರ್ತಾ , ಜೋರಾಗಿ ಶಬ್ಧ ಮಾಡುತ್ತಾ ಚೀರಾಡುವ ಸ್ಪೀಕರ್ರುಗಳು, ಹಾರುವ ಟಾಯ್ ಕಾರುಗಳನ್ನು ಅರ್ಧ ಬೆಲೆಗೆ ಮಾರುತ್ತಾ ಇದ್ದ ವ್ಯಾಪಾರಿಗಳು, ವಿಭಿನ್ನ ವಿನ್ಯಾಸಗಳಿದ್ದ ಮೊಬೈಲ್ ಫೋನ್ ಶಾಪುಗಳು, ಆಕರ್ಷಕ ಬೆಲೆಗಳಿಗೆ ಕೊಳ್ಳಬಹುದಾಗಿದ್ದ ಆಪಲ್ ಲ್ಯಾಪ್ ಟಾಪ್ ಮತ್ತು ಗುಚ್ಚಿ ಬ್ಯಾಗುಗಳ ಮಾರಾಟಕಟ್ಟೆಗಳು ಎಲ್ಲ ಮಹಡಿಗಳಲ್ಲಿ ಕಂಡು ಬರುತ್ತಾ ಇದ್ದವು. ಈ ಜಾಗದ ಕೊನೆಯ ಅಂದ್ರೆ ನಾಲ್ಕನೆಯ ಮಹಡಿಯ ಅಂಚಿನಲ್ಲಿದ್ದ ಒಂದು ಕೋಣೆಯಿಂದ ಆ ಕರೆ ಹೊಮ್ಮಿತ್ತು. ಎಷ್ಟೇ ಹೊತ್ತು ಬಾಗಿಲು ಬಡಿದರೂ ಒಳಗಿಂದ ಉತ್ತರ ಬರದೆ ಇದ್ದಾಗ ತಲೆಕೆಟ್ಟು ಆ ಬಾಗಿಲಿಗೆ ಸುಝೇನ್ ಜಾಡಿಸಿ ಒದ್ದಾಗ ಆ ಬಾಗಿಲು ಹೆಚ್ಚು ಕಮ್ಮಿ ಮುರಿದೇ ಹೋದಂತೆ ತೆರೆದುಕೊಂಡಿತು. ಒಳಗೆ ಗಾಂಜಾದ ಗಮ್ಮ್ ಗಮ್ಮ… ಬೆಂಕಿಪೆಟ್ಟಿಗೆಯಷ್ಟು ದೊಡ್ಡದಿದ್ದ ಆ ನಾಲ್ಕು ಗೋಡೆಗಳ ಕೋಣೆಯ ಮುಕ್ಕಾಲರಷ್ಟು ಅವಕಾಶವನ್ನು ಒಂದು ದೊಡ್ಡ ಸೋಫಾವೇ ಆಕ್ರಮಿಸಿತ್ತು. ಆ ಸೋಫಾದ ಮೇಲೊಬ್ಬ ನರಪೇತಲ ಗಾಂಜಾದ ಹೊಗೆಯನ್ನು ದೊಡ್ಡ ಚಿಲಿಮೆಯಲ್ಲಿ ಎಳೆದುಕೊಳ್ಳುತ್ತಾ ಕೂತಿದ್ದ. ಆ ಕಮರೆಗೆ ಅಂಚೇ ಇಲ್ಲ ಎನ್ನುವ ಹಾಗೇ ಮರ್ಯುಯಾನದ ಹೊಗೆ ಎಲ್ಲ ಕಡೆ ತೇಲಿ ರಾರಾಜಿಸುತ್ತಾ ಇತ್ತು.  ಗಾಂಜಾ ಹೊಡೆದಿದ್ದ ಅಮಲೋ ಅಥವಾ ಉದಾಸೀನವೋ ಆತ ಬಹಳ ಹೊತ್ತಿನ ನಂತರ ಬಾಯಿ ಬಿಟ್ಟ ಅದೂ ಸುಝೇನ್ ನೆಕ್ಶ್ಟ್ ಗಾಂಜಾ ಸ್ಕೋರ್ ಮಾಡಲೆಂದು ಈ ಜೀವಿಗೆ ಸ್ಥಳದಲ್ಲೇ ತನ್ನಲ್ಲಿದ್ದ ಐದು ಸಾವಿರದಷ್ಟು ಹಣವನ್ನು ಕೊಟ್ಟಾಗ. ಅವನ ಹೇಳಿದ್ದೇನೆಂದರೆ, ” ನೀವ್ ಹೇಳೋ ಯಾವಾ ಸಾಧನ ಸರ್ಗಂ ಗೊತ್ತಿಲ್ಲ ನನ್ಗೇ…. ನೋಡಿ ಮೇಡಂ ನಾನೊಬ್ಬ ಡೀಲರ್….ಎಲ್ಲ ಥರದ ಡೀಲೂ ಮಾಡ್ತೀನಿ ಆಯ್ತಾ…. ಏನ್ ಡೀಲ್ ಮಾಡ್ತೀಯ ಅಂತ ಮಾತ್ರ ಕ್ಕೇಳ್ಬೇಡೀ ದಯವಿಟ್ಟು…! ಈ ಪೋಲಿಸ್ರು ಹಲ್ಕಾ ನನ್ನ ಮಕ್ಳು ಮೇಡಂ…ಎಸ್ಪೆಶಿಲೀ ಈ ಸಿಸಿಬಿ ಡಿಪಾರ್ಟೆಮೆಂಟವ್ರು … ಸುಮ್ನೆ ನನ್ಗೆ ಟಾರ್ಚರ್ ಇಕ್ತಾರೆ ಮೇಡಮ್ಮ್…! ಸುಮ್ನೆ ಏನೋ ಅವ್ರಿಗೆಲ್ಲ ಇನ್ಫಾರ್ಮರ್ರ್ ಆಗಿ ವರ್ಕ್ ಮಾಡಿದ್ರೂ… ಯಾರೂ ಕೈಗೆ ಸಿಗ್ದೇ ಇದ್ದಾಗ ನನ್ನ ಗಾಂಜಾ ಡೀಲಿಂಗ್ಗೂ ಕಲ್ಲಿ ಹಾಕೀ ನನ್ನೇ ಅರೆಶ್ಟ್ ಮಾಡ್ತಾರೆ…. ನನ್ನ ಹತ್ರ ಇರೋ ಫೋನ್ ಕೂಡ ಆ ನನ್ನಮ್ಮಕ್ಕ್ಳೇ ಕಿತ್ತ್ಕೊಂಡಿರೋದು…. ಆ ಮುಕ್ಕಾರ್ ಏರಿಯಾ ಇದ್ಯಯಲ್ಲ ಅಲ್ಲಿರೋ ಲೋಕಲ್ ಕಾಪ್ಸ್ ಜತೆ ಒಬ್ಬ ಆ ಸಿಸಿಬಿ ಕಡೇ ಮನುಷ್ಯ ಅಂತಾನಪ್ಪ ಅವ್ನು ಆವಾಗ್ವಾಗ ನನ್ನ ವರ್ಕ್ ಮಾಡ್ತಾನೇ…. ಜಯರಾಮೋ ಪಟ್ಟಾಭಿ ರ್…ರಾಮ್ಮ್… ಅಂತೇನೋ ಅವ್ನ ಹೆಸ್ರು…. ಆ ನನ್ನ್ಮಗನ್ನ ಕೇಳಿ ಮೇಡಂ,… ಅಧಿಕಾರ ಇದೇ ಅಂತ ನಮ್ಮಂತೆ ಬಡಪಾಯಿಗಳಿಗೆ ಹಿಂಗ್ ಮಾಡೀದ್ರೆ… ನಾವ್ ಊಟ ಮಾಡೋದ್ ಬೇಡ್ವಾ…!”

ನೆಕ್ಶ್ಟ್ ಡೇ ಎಲ್ಲ ಕೆಲಸಕ್ಕೂ ತಿಲಾಂಜಲಿ ಕೊಟ್ಟ ಸುಝೇನ್ ಗಾಂಜಾ ಹುಡುಕುವ ಗಿರಾಕಿಯಂತೆ ಈ ಪಟ್ಟಾಭಿರಾಮ್ ಅನ್ನೋ ವ್ಯಕ್ತಿಯನ್ನು ಅನ್ವೇಷಿಸುವ ಆಸ್ಥೆಯಲ್ಲಿ ಮುಕಾರ್ ಕಡೆ ಹೊರಟಳು. ಆ ಪ್ರಾಂತ್ಯದ ಕಡೆ ಸಾಗೋ ಲೋಕಲ್ ಬಸ್ಸಲ್ಲಿ ವಿಪರೀತ ಜನ. ಹೆಸರಿಗೆ ಮಾತ್ರ ರಾಷ್ಟ್ರೀಯ ಹೆದ್ದಾರಿಯಾದರೂ ಒಂದೇ ಮಳೆಗೆ ಯಕ್ಕುಟ್ಟಿ ಹೋಗಿದ್ದ ರಸ್ತೆಯೆಲ್ಲ ಈಗ ಚಚ್ಚುತ್ತಿದ್ದ ಸುಡು ಬಿಸಿಲಿನ ಹಬೆಗೆ ಕೆಂಪಾಗಿ ಹೋಗಿ,  ಬದಿಯಲ್ಲಿ ಹರಡಿದ್ದ ಕೆಂಪು ಮಣ್ಣೆಲ್ಲ ಗಾಳಿಯಲ್ಲಿ ಹಾರಿ  ಮಾರ್ಗ ಪೂರ್ತಿ ಕೆಂಪಾದ ಮರುಭೂಮಿಯಲ್ಲಿ ಬಿರುಗಾಳಿ ಎದ್ದಂತೆ ಕೆಂಪು ಹೊಗೆಯಲ್ಲಿ ಅದ್ದಿಹೋಗಿತ್ತು.

ಮುಕ್ಕಾರು ಸ್ಟೇಷನ್ನ್ ಎಸ್.ಐ. ಈಕೆ ಪಟ್ಟಾಭಿ ರಾಮ್ ಅನ್ನೋ ಹೆಸರು ಹೇಳುತ್ತಿದ್ದಂತೆಯೇ ಹಾವು ಕಚ್ಚಿದವನಂತೆ ಸುಝೇನಳನ್ನು ದುರು ದುರು ನೋಡಿ “ಯಾರ್ ನೀವು…. ಯಾರಿಂದ ಹೀಗೆಲ್ಲ ಇನ್ಫರ್ಮೇಷನ್ನ್ ಕಲೆಕ್ಟ್ ಮಾಡ್ತಾ ಇದ್ದೀರ…” ಅಂದ. ಈಕೆ ಐಡೀ ಕಾರ್ಡು ಮತ್ತಿತರ ದಾಖಲೆಗಳನ್ನೆಲ್ಲ ತೋರಿಸಿ ಯುವ ನೇತಾರ ಸೂರ್ಯಕಾಂತ್ ಕನೆಕ್ಷನ್ನ್ ಹೇಳಿದಾಗ ಆತ ಇನ್ನೂ ಕಕ್ಕಾಬಿಕ್ಕಿಯಾಗಿ ಕಂಡು “ನಿಮ್ಗೆ ಸಂಭಂದಪಡ್ದೇ ಇರೋ ವಿಷ್ಯದಲ್ಲಿ ಇನ್ವಾಲ್ವ್ ಆಗ್ದೇ ಇರೋದು ಬೆಟರ್…” ಅಂತ ಯಾವ ಮುಲಾಜು ಇಲ್ಲದೆ ಅವಳಿಗೆ ತಣ್ಣಗೆ ಬೆದರಿಕೆ ಹಾಕಿ ಕಳುಹಿಸಿದ್ದ.

ಈ ಘಟನೆಯ ಬಳಿಕ ಒಂಥರ ವಕ್ರ ಗುಮಾನಿಯಲ್ಲಿ ಆಶ್ ಜತೆ ಕೂತು ಬೀರ್ ಹೊಡೆಯುತ್ತಾ “ಈ ಸಾಧನ ನನ್ಗೇ ಯಾಕೇ ಆ ಮೆಸೇಜ್ ಮಾಡಿರ್ತಾಳೆ…. ” ಅಂತ ತಲೆ ಕೆಡಿಸಿಕೊಳ್ಳುತ್ತಾ ಇದ್ದಳು. ಆಶ್ ಗಾಂಜಾ ತಲೆ ಬೇರೆಯ ಥರ ಓಡುತ್ತಾ ಇತ್ತು, “ಅವ್ಳು ಮೋಶ್ಲೀ ಅರ್ಜೆಂಟಲ್ಲಿ ಆ ಲೊಕೇಶನ್ ವೆಬ್ ಅಡ್ರೆಸ್ನ ಸೇಫ್ ಆಗ್ ಎಲ್ಲಾದ್ರೂ ಸ್ಟೋರ್ ಆಗಿರ್ಲೀ…ಅಂತ  ರಾಂಡಮ್ಮ ಆಗಿ ನಿನ್ಗೇ ಕಳ್ಸಿರ್ಬೇಕು….”

“ನನ್ಗೂ ಹಂಗೇ ಅನ್ನಿಸ್ತಾ ಇದೆ…. ಬಟ್ಟ್ ಆ ಡ್ರಗ್ ಜಂಕಿ ಯಾಕೆ ಅವ್ಳಿಗೆ ಲಾಶ್ಟ್ ಕಾಲ್ ಮಾಡ್ತಾನೆ…,! ಅವ್ನ ಕಥೆ ಪ್ರಕಾರ ಯಾರೋ ಸಿಕ್ರೇಟ್ ಕಾಪ್ ಪಟ್ಟಾಭಿ ರಾಮ್ …. ಫ಼್ರಂ ಸಿಸಿಬಿ ಹತ್ತಿರ ಇವ್ನ ಫೋನ್ ಇದ್ಯಂತೆ…”,

“ಆದ್ರೆ ನನ್ಗೆ ಗೊತ್ತಿರೋ ಮಟ್ಟಿಗೆ ನಮ್ಮ ಸಿಸಿಬಿ ಗ್ಯಾಂಗಲ್ಲಿ ಪಟ್ಟಾಭಿ ಅಂತ ಯಾವ ಕಾಪ್ ಕೂಡ ಇಲ್ಲ… ಬಟ್ಟ್ ಆ ಮುಕ್ಕಾರ್ ಎಸ್ ಐ ನಿನ್ಗೆ ಅಷ್ಟು ಸ್ಟ್ರಾಂಗ್ ಆಗ್ ವಾರ್ನ್ ಮಾಡಿದ್ದಾನೆ ಅಂದ್ರೇ…. “

“ಯ…. ಸಮ್ಥಿಂಗ್ ಮಶ್ಟ್ ಬಿ ರಾಟನ್ನ್….” ಎನ್ನುತ್ತಾ ಇದ್ದಾಗಲೇ ಅವಳ ಫೋನ್ ಹೊಡೆದುಕೊಂಡಿತ್ತು. ವಿಪರೀತ ಗದ್ದಲವಿದ್ದ ಆ ಪಬ್ಬಿನಿಂದ ರಾತ್ರಿ ನಗರಿಯ ಮೌನ ಬೀದಿಗಳಿಗೆ ಇಳಿದು ಸಿಗರೇಟು ಹಚ್ಚಿ ಆ ಕರೆ ಸ್ವೀಕರಿಸಿದಾಗ ಅತ್ತ ಬೌದ್ಧ ಘಂಟೆಯನ್ನು ನುಣುಪಾಗಿ ಸವರಿದರೆ ಹೊಮ್ಮಿದ ಹಾಗಿದ್ದ ಸ್ವರವೊಂದು ಚೇಷ್ಟೆಯ ದ್ವನಿಯಲ್ಲಿ, “ಜಾಸ್ತಿ ಟೈಮಿಲ್ಲ… ನಾನ್ ಹೇಳೋದ್ನ ಗಮ್ನ ಇಟ್ಟು ಕೇಳು ಸುಝೇನ್…” ಎಂದಿತು. ಕುಡಿದ ನಶೆಯ ಜತೆ ನಿಕೋಟಿನ್ನ್ ಕೂಡ ನುಣ್ಣಗೆ ಬೆರೆತಿದ್ದರಿಂದ ತುಂಬಾ ಕೂಲಾಗೇ ಆಲಿಸುತ್ತಾ ಸುಝೇನ್… “ಯಸ್… ಬಟ್ ಹ್…ಹೂ ಈಸ್ ದ್..ದಿಸ್…” ಅಂದಳು. “ಪಟ್ಟಾಭಿ ರಾಮ್….! ಬಟ್ಟ್ ಥ್ಯಾಟ್ಸ್ ನಾಟ್ ದ ಪಾಯಿಂಟ್…ದ ಪಾಯಿಂಟ್ ಈಸ್…. ನಿನ್ಗೇ ಕ್ಯಾಂಪೇನ್ ಕೆಲ್ಸ ಬೋರ್ ಆಗಿದ್ರೆ… ನಾಳೆ ಇಂಡಿಯಾ ಮಾಲ್ ಅಲ್ಲಿರೋ ನೆಕ್ರೋಪ್ಲೆಕ್ಸ್ ಸಿನಿಮಾಸಿಗೆ ಬೆಳಗ್ಗೆ ಹತ್ತು ಗಂಟೆ ಶೋಗೆ ಟಿಕೆಟ್ ತಗೊಂಡು ಸರಿಯಾಗಿ ಹತ್ತೂವರೆಗೆ ಪ್ರಾಜೆಕ್ಟ್ ರೂಮ್ ಕಡೆ ಹೋಗು ಅದಿರೋದು ಲಾಶ್ಟ್ ಫ಼್ಲೋರ್ ಅಲ್ಲಿ….” ಅಂತ ತುರ್ತಾಗಿ ದೆವ್ವ ಓಡಿಸುವ ನಿಗೂಢ ಮಂತ್ರದಂತೆ ಇಷ್ಟನ್ನೂ ಪಠಿಸಿ ಅಳಿಸಿಹೋದ ಆ ಬದಿ ಮಾತನಾಡುತ್ತಾ ಇದ್ದ ಅಜ್ಞಾತ ವ್ಯಕ್ತಿ. ಸುಝೇನ್ಗೆ ವಾಸ್ತವ ಮತ್ತು ಕಲ್ಪನೆಯ ನಡುವೆ ಇರುವ ಸ್ತರಗಳೆಲ್ಲ ಒಡೆದು ಹೋಗುತ್ತಾ ಇರುವಂತೆ ಭಾಸವಾಯಿತು.

ಮುಂದಿನ ದಿನ ಯಾವುದೋ ವಿಶ್ವವಿದ್ಯಾನಿಲದ  ವಿಧ್ಯಾರ್ಥಿಗಳ ಜತೆ ಯುವ ನಾಯಕ ಸೂರ್ಯನಾರಾಯಣನ ಸಂವಾದವಿತ್ತು. ಆ ಕೂಟದಲ್ಲಿ ಈ ಸೂರಿ (ಆತ ಎಲ್ಲರಿಗೂ ತನನ್ನು ಸೂರಿ ಎಂದೇ ಕರೆಯುವಂತೆ ಪ್ರೋತ್ಸಾಹಿಸುತ್ತಾ ಇದ್ದ) ಕೇವಲ ಹನ್ನೊಂದು ವರುಷದವನಾಗಿದ್ದಾಗ  ಇಂಗ್ಳೀಷಿನಲ್ಲಿ ಬರೆದಿದ್ದ ಲಯ ಬದ್ಧ ಸಾಲುಗಳಿದ್ದ ಸ್ಪ್ರಿಚುಯಲ್ ಗೀತೆಗಳ ವಾಚನ ಕೂಡ ಇತ್ತು. ಆದರೆ ಗಡಿಯಾರದ ಮುಳ್ಳು ಒಂದೊಂದು ಸೆಕೆಂಡ್ ಮುಂದೆ ಓಡುತ್ತಿದ್ದಂತೆ ಹೊಡೆದುಕೊಳ್ಳುತ್ತಿದ್ದ ಹೃದಯವನ್ನು ಸಂಭಾಳಿಸಿಕೊಳ್ಳಲಾಗದೇ ಸುಝೇನ್ ಈ ಕ್ಯಾಂಪೇನ್ಗೆ ಚಕ್ಕರ್ ಹೊಡೆದು ಆ ಅನಾಮಿಕ ಆಜ್ಞಾಪಿಸಿದಂತೆ ಯಾವುದೋ ಸಿನಿಮಾಗೆ ಟಿಕ್ಕೆಟ್ಟ್ ತಗೊಂಡು ನಂತರ ವಾಶ್ ರೂಮ್ಗೆ ಹೋಗುವಂತೆ ನಾಟಕ ಮಾಡುತ್ತಾ ಪ್ರಾಜೆಕ್ಟ್ ರೂಮಿಗೆ ಹೋಗುವ ಮಹಡಿ ಹತ್ತಿದಳು. ಆದರೆ ಐದನೆಯ ಅಂತಸ್ತಿನಲ್ಲಿದ್ದ ಪ್ರಾಜೆಕ್ಟ್ ರೂಮಿಗೆ ಐಡಿ ಕಾರ್ಡ್ ಸ್ಕಾನ್ ಮಾಡದೆ ಒಳ ನುಗ್ಗಲು ಆಗದೇ ಈಗ ಯಾವ ರೀತಿ ವರ್ತಿಸಬೇಕೆಂದು ಅರಿಯದೆ ಒದ್ದಾಡುತ್ತಿದ್ದಾಗ, ಓರ್ವ ಆಜಾನುಬಾಹು ವ್ಯಕ್ತಿ ಇವಳ ಹಿಂದೆ ಬಂದು ನಿಂತ. ಸೂಟ್ ಬೂಟಿನಲ್ಲಿ ಸಂಭಾವಿತನಂತಿದ್ದ ಆತ ಇವಳ ಬರುವನ್ನು ನಿರೀಕ್ಷಿಸಿದ್ದ ಹಾಗೇ ತನ್ನದೇ ಐ ಡೀ ಕಾರ್ಡಿಂದ ಆ ಬಾಗಿಲನ್ನು ತೆರೆದು ಸುಝೇನ್ ಳನ್ನು ಸುಮ್ಮನೆ ನೋಡಿದ.  ಮಾತಿಲ್ಲದೇ   ಸಂವಹಿಸುವ ಒಂದು ರಹಸ್ಯ ಪಂಗಡದ ಸದಸ್ಯನಂತೆ ಕಂಡು ಬಂದನಾತ. ಈಗ ಸುಝೇನ್ ಆ ಪಂಗಡಕ್ಕೆ ಹೊರಗಿನವಳಾದಳು ಆಕೆಗಿದ್ದ ಮಿಷನ್ನ್ ಅನ್ನು ಪೂರೈಸಲು ಒಳಗೆ ನಡೆದಳು.  ನೆಕ್ರೋಪ್ಲೆಕ್ಸ್ ಸಿನಿಮಾ ಮಂದಿರದ ಪ್ರಾಜೆಕ್ಟ್ ರೂಮ್ ತಣ್ಣನೆಯ ಹವೆ ಮತ್ತು ಕತ್ತಲ ಸಮ್ಮಿಲನವಾಗಿತ್ತು. ಆಗಾಗ ಮಿಣುಗಾಡುತ್ತಿದ್ದ ನೀಲಿ, ಕೆಂಪು ಮತ್ತು ಹಸಿರು  ಬಿಂದುಗಳು ಕತ್ತಲಿಗೆ ಕನಸಿನ ಬಣ್ಣ ಬಳಿಯುತ್ತಾ ಇದ್ದವು. ಆಕೆಯ ಎಡಬಲಗಳೆಲ್ಲ ದೈತ್ಯಾಕಾರದ ಪ್ರಾಜೆಕ್ಟ್ಟರ್ರು ಗಳಿಂದ ಆವೃತವಾಗಿದ್ದವು. ಆ ಮಷಿನ್ನುಗಳಿಂದ ಹೊಮ್ಮುತ್ತಿದ್ದ ವಿಕಿರಣಗಳ ಸುಡದ ಜ್ವಾಲೆಗಳು ಗಾಜಿನ ಪರದೆಯಾಚೆ ಇದ್ದ  ರಾಕ್ಷಸ ಗಾತ್ರದ ಬೆಳ್ಳಿಪರದೆಗಳ ಮೇಲೆ ಅಲೌಕಿಕ ಚಿತ್ತಾರಗಳ ಲೋಕವನ್ನೇ ಸೃಷ್ಟಿಸುತ್ತಾ ಇದ್ದವು. ಈ ಅಗೋಚರ ಸನ್ನಿವೇಶಕ್ಕೆ ಹಿನ್ನಲೆಯಲ್ಲಿ ಗುಪ್ತವಾಗಿ ಝೇಂಕರಿಸುತ್ತಾ ಇದ್ದ ನಿಗೂಢ ಯಂತ್ರಗಳ ನಿರಂತರ ಕಂಪನ ವಾಮ ಪಾರಮಾರ್ಥಿಕ ಪ್ರಭೆ ನೀಡಿತ್ತು, ಸುಮಾರು ಹೊತ್ತು ಈ ಅಸಾಮಾನ್ಯ ಅಧ್ಯಾತ್ಮ ಸೂಚಕ ಹವಾಮಾನದಲ್ಲಿ ಧ್ಯಾನಸ್ತಳಂತೆ ನಿಂತಿದ್ದ ಸುಝೇನ್ಗೆ ಹಲವಾರು ನಿಮಿಷಗಳ ನಂತರ ಯಾರೋ ಆ ಬದಿಯ ಮೂಲೆಯಲ್ಲಿ ಅವಳನ್ನೇ ನೋಡುತ್ತಾ ಇರುವ ಅನುಭವವಾಗಿ ಅತ್ತ ಹೋದಾಗ ಆಕಾರವಿಲ್ಲದ ಕತ್ತಲಿಂದ ಒಂದು ಕೈ ನೀಲಿ ಮಿಶ್ರ‍ಿತ ಕೆಂಪು ಬೆಳಕಿನತ್ತ ಚಾಚಿ   ಕಪ್ಪಗಿದ್ದ ಒಂದು ಪೆನ್ ಡ್ರೈವನ್ನು ಇವಳ ಕೈಯಲ್ಲಿ ತುರುಕಿ ಮಾಯವಾಯಿತು,

ತನ್ನ ಕೋಣೆಗೆ  ವಾಪಾಸ್ಸಾಗಿ ಲ್ಯಾಪ್ ಟಾಪಲ್ಲಿ ಅವಸರವಾಗಿ ಆ ಪೆನ್ಡ್ರೈವನ್ನು ಸಿಕ್ಕಿಸಿದಾಗ ಆಕೆಗೆ ಕಂಡದ್ದು ಒಂದು ಪಿಡಿಎಫ಼್ ಫ಼ೈಲು. ಅದನ್ನೆ ತೆರೆಯಲು ಬೇಕಾಗಿದ್ದ ಪಾಸ್ ವರ್ಡ್ ಗೊತ್ತಿಲ್ಲದೆ ಸುಝೇನ್ ತಲ್ಲಿಣಿಸುತ್ತಾ ಇದ್ದಾಗ ಮತ್ತದೇ ಸ್ಪ್ಯಾಮ್ ನಂಬರ್ರಿಂದ ಅವಳಿಗೆ ಕರೆ ಬಂತು. “ಪಟ್ಟಾಭೀ….!” ಎಂದಳು ಮೆಲುದನಿಯಲ್ಲಿ… “ಅದು ಆಡಿಟರ್ ಕುಲಕರ್ಣಿ ಪ್ರಿಪೇರ್ ಮಾಡಿರೋ ಐ ಟಿ ರಿಟರ್ನ್ಸ್ ಫ಼ೈಲಿಂಗ್ಸ್….  ಯು ನೋ ಹೂಸ್ ಐಟಿ ರಿಟರ್ನ್ಸ್…. ಥ್ಯಾಟ್ ಇಸ್…” ಯಾರು….” ಅಂತ ಸುಝೇನ್ ಕೇಳುವಷ್ಟರಲ್ಲೇ ಆತ ನಾಲ್ಕು ಡಿಜಿಟ್ಟಿನ ಪಾಸ್ವರ್ಡ್ ಒಂದನ್ನು ಉರುಹಿ ಕರೆಯನ್ನೇ ನಂದಿಸಿದ. ಪಾಸ್ವರ್ಡ್ ಹಾಕಿ ಆ ಕಡತವನ್ನು ಬಿಚ್ಚಿದಳು ಸುಝೇನ್. ಅದು ಸತ್ತ ಸಾಧನ ಕುಸುಮಳ ಈ ವರ್ಷದ ಐಟ್ ರಿರ್ಟನ್ಸ್ ಡಾಕ್ಯುಮೆಂಟ್ಸ್…. ಅದಕ್ಕೆ ಅಂಟಿಕೊಂಡಂತೆ ಆಕೆಯ ಈ ಇಡೀ ವರ್ಷದ ಬ್ಯಾಂಕ್ ಸ್ಟೇಟ್ಮೆಂಟ್ಸ್ ಕೂಡ ಅದೇ ಫೈಲಿನಲ್ಲಿತ್ತು …. ವಿದ್ಯುತ್ ಸಂಚಾರದಂತಹ ಅನುಭವ ಸುಝೇನ್ಳಿಗೆ ಆಗಿದ್ದು ಸಾಧನ ಸಾಯುವ ಒಂದುವಾರಕ್ಕೆ ಮುಂಚೆಯೇ ಆಕೆಯ ಖಾತೆಗೆ ಎಂತದ್ದೋ ರಾಯಲ್ ಅಕ್ರಮ್ ಬೇಕರಿಯನ್ನೋ ಅಕೌಟಿನಿಂದ ಸುಮಾರು ೫೫ ಲಕ್ಷದಷ್ಟು ಮೊತ್ತದ ಹಣ ಸಂದಾಯವಾಗಿರುವುದು. ಈ ಆಡಿಟರ್ ಕುಲಕರ್ಣಿ ಕೂಡ ಐಟಿ ರಿಟರ್ನ್ ಫ಼ೈಲ್ ಮಾಡುವಾಗ ಆ ಅನುಮಾನಸ್ಪದ ಟ್ರಾಂಕ್ಸ್ಷನ್ನ್   ವಿವರಗಳ ಸುತ್ತಾ ವೃತ್ತಗಳನ್ನು ಸುತ್ತಿದ್ದ. ಆದರೆ ಸುಝೇನ್ಳ ಗುದ ನಡುಗಿದ್ದು ಒಂದು ಮರೆತ ಸುದ್ದಿಯ ನೆನಪು ಮತ್ತೆ ಜ್ಞಾಪಕಕ್ಕೆ ಬಂದಾಗ. ಈ ಸಿ.ಎ. ಕುಲಕರ್ಣಿ ಎರಡು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ಆದ ಹೃದಯ ಸ್ತಂಭನದಿಂದ ಅಸುನೀಗಿದ್ದ. ಎಲ್ಲ ದಿನಪತ್ರಿಕೆಗಳ ಲೋಕಲ್ ಸುದ್ದಿ ಪುಟಗಳಲ್ಲಿ ಆತನ ಚಿತ್ರದ ಜತೆ ಆತನ ಅನಾಮತ್ತ್ ಸಾವಿನ ಬಗ್ಗೆ ವರದಿಗಳಿದ್ದವು. ಆತ ಸತ್ತು ಎರಡು ಮೂರು ವಾರಗಳ ತರುವಾಯ ಸೂರ್ಯನಾರಾಯಣ ಕಟ್ಟಿದ್ದ ಕಾಮ್ರೇಡ್ ಪಾರ್ಟಿಯ ಮೇಲೆ ಗುಂಡಿನ ಮಳೆ ಬಿದ್ದಿತ್ತು.

ನಿಧಾನಕ್ಕೆ ಸುಝೇನ್ಳಿಗೆ ಈ ಅನ್ವೇಷಣೆಯ ನಶೆ ಹತ್ತಿ, ಕ್ಯಾಂಪೇನ್ ವಿಚಾರಗಳು ಮರತೇ ಹೋಯಿತು. ಗಂಡಾತರ ತನ್ನ ಬೆನ್ನು ಬಿದ್ದಿದೆ ಅಂತ ಖಚಿತವಾಗಿ ಅನ್ನಿಸುತ್ತಾ ಇದ್ದರೂ ಆ ಸೂಚನೆಯೇ ಆಕೆಗೆ ಮಜವಾದ ಕಿಕ್ಕ್ ಕೊಡುತ್ತಾ ಇದ್ದುದರಿಂದ ಸುಝೇನ್ ಈ ದಿನ ರಾಯಲ್ ಅಕ್ರಮ್ ಬೇಕರಿಯ ಜಾಡು ಹಿಡಿಯಲು ಸಿದ್ಧಳಾದಳು. ಆಶ್ ಈ ಸ್ಥಳದ ವಿಳಾಸ ಪತ್ತೆ ಮಾಡಿದ್ದ. ನಗರದ ಹಳೆಯ ರಾಜಬೀದಿಯಲ್ಲಿ ಹಾಳು ಬಿದಿದ್ದ ಒಂದಾನೊಂದು ಕಾಲದಲ್ಲಿ  ಯುವಕ ಯುವತಿಯರ ಸೇರುವ ಅಡ್ಡವಾಗಿದ್ದ ಸಿರಾಜುದ್ದೀನ್ ಕಾಂಪ್ಲೆಕ್ಸ್ನ ಮೊದಲ ಮಹಡಿಯಲ್ಲಿದ್ದ ಸ್ವೀಟ್ ಅಂಗಡಿಯೇ ಈ ರಾಯಲ್ ಅಕ್ರಮ್ಮ್ ಬೇಕರಿ. ಆಶ್ ವಾದ ಮಾಡುತ್ತಲೇ ಇದ್ದ “ಬ್ಯುಸಿನೆಸ್ಸ್ ಇಲ್ಲದೆ ಹಾಳಾಗಿ ಹೋಗಿರೋ ಜಾಗ ಅದು… ಅಲ್ಲಿಂದ ಹಣ ಬಂದಿದೆ ಅಂದ್ರೆ ಮೇ ಬಿ ದೇ ಆರ್ ಆಕ್ಟಿಂಗ್ ಆಸ್ ಸಮ್ ಒನ್ಸ್ ಕವರ್….” ಅಂತ ಸಿಡುಕುತ್ತಾ ತನ್ನ ಸೆಕೆಂಡ್ ಹ್ಯಾಂಡ್ ಕಾರ್ ಓಡಿಸುತ್ತಾ ಇದ್ದ. “ಬಟ್ ವೈ…ಥ್ಯಾಟ್ ಗಾಯ್ ಪಟ್ಟಾಭಿ ಈಸ್ ಕಾಂಟ್ಯಾಕ್ಟಿಂಗ್ ಮೀ… ನನ್ಗೆ ಅದೇ ಅರ್ಥ ಆಗ್ತಾ ಇಲ್ಲ…” “ಮೇಬೀ ಆ ಪಟ್ಟಾಭಿ ಅನ್ನೋವ್ನೇ ನಿಜನೋ ಸುಳ್ಳೋ ಯಾರಿಗೇ ಗೊತ್ತು…. ನೀನ್ ಆ ಗ್ಸಾನಾಡು ಅನ್ನೋ ಸೀಕ್ರೆಟ್ ರೆಸಾರ್ಟ್ ಲಿಂಕ್ ಓಪನ್ನ್ ಮಾಡಿದ್ಯಲ್ಲ… ಆಗ ಆಚೆ ಬಂದ ಪಿಶಾಚಿ ಇರ್ಬೇಕು ಅದು….” ಅಂತ ತುಂಟ ನಗೆ ನಕ್ಕಿದ್ದ. ಅಸಲಿಗೆ ಸುಝೇನ್ಗೂ ಆಗ ಈ ಸಮಾಜಾಯಿಷಿ ನಿಜವೆಂದು ತೋರಿತು.  ಆಕೆಗೆ ಈ ಅನಾಮಧೇಯ ಕಾಲರ್ರ್ ಬಗ್ಗೆ ಅಮೂರ್ತ ಮೋಹ ಹುಟ್ಟಿತ್ತು. ಆತನ ಭೂಕಂಪನ ಸ್ವರ, ಕತ್ತಲಿಂದ ಉದ್ಭವಿಸುವ ಆ ಅಶರೀರ, ಧುತ್ತೆಂದು ಎಲ್ಲ ಬಲ್ಲ ಶಿವಗಣದ ಹಾಗೆ ಆತ ಈಗ ಕೊಡುತ್ತಿರುವ ಕುರುಹುಗಳು… ಗೊತ್ತಿಲ್ಲದೆಯೇ ಈ ಅನಿಶ್ಚಿತ ಅನೈಛ್ಚಿಕ ನಂಟು ಆಕೆಗೆ ಮುದ ಕೊಡುತಿತ್ತು. ಎಲ್ಲ ಗೌಪ್ಯತೆಯನ್ನೂ ನಿವಾರಿಸಿ ಬಿಟ್ಟರೆ ಕೌತುಕದ ಬೆರಗು ಮಾಯವಾಗಿ, ಜಡವಾಸ್ತವತೆಯ ಜತೆ ಜೀವಿಸಬೇಕಾವುದು  ಸುಝೇನಳಿಗೆ ಬೇಕಿರಲಿಲ್ಲ. ಅದಕ್ಕೇ ಇವತ್ತು  ಸೂರ್ಯನಾರಾಯಣ ಮತ್ತೆ ಆತನ ಪಟಲಾಮ್ ಶ್ರಮಿಕ ವರ್ಗದವರ ಮಕ್ಕಳನ್ನು ದತ್ತು ತೆಗೆದುಕೊಂಡು ಅವರನ್ನು ಶಾಲೆಗೆ ಸೇರಿಸುವ ಜವಾಬ್ದಾರಿಯನ್ನು ವಹಿಸಿ, ಈ ಮಕ್ಕಳ ಓದಿಗೆ ಸಹಾಯಕವಾಗಲು ತಮ್ಮ ಪಾರ್ಟಿ ಖರ್ಚಿನಲ್ಲೇ ಒಂದು ಉಚಿತ ಹಾಶ್ಟೆಲ್ಲ್ ಕಟ್ಟಿಸಿಕೊಡುವ ಘೋಷಣೆಯನ್ನೂ ಮಾಡಲಿದ್ದ ಆ ಕಾರ್ಯಕ್ರಮಕ್ಕೆ ಹೋಗಲೇಬೇಕಾದ ಅನಿವಾರ್ಯವಿದ್ದರೂ “ನನ್ಗೆ ಕೋವಿಡ್ ಸಿಂಪ್ಟಮ್ಸ್ ಇದೇ… ಸಿಕ್ಕಾಪಟ್ಟೆ ಕೆಮ್ಮು ಮೊನ್ನೆ ಇಂದ ಮೈ ಕೈ ನೋವು ಸ್ವಲ್ಪ್ವ ದಿನ ಐಸೋಲೇಟ್ ಆಗಿದ್ರೆ ಎಲ್ಲರಿಗೂ ಒಳ್ಳೆದೇ….” ಅಂತ ಸಬೂಬು ಹೇಳಿ ತಪ್ಪಿಸಿಕೊಂಡಿದ್ದ ಸುಝೇನ್ ಈಗ ಆಶ್ ಜತೆ ರಾಯಲ್ ಅಕ್ರಮ್ ಬೇಕರಿ ಹತ್ತಿರ ಇಳಿಯುತ್ತಿದ್ದ ಹಾಗೇ ಎರೆಡೆರಡು ವ್ಯಾನುಗಳು ಶರವೇಗದಲ್ಲಿ ಇವರ ಗಾಡಿಯ ಪಕ್ಕವೇ ರಪ್ಪನೆ ನಿಂತಿತು. ರುಮ್ಮನೇ ತಲೆಗೆ ಚಚ್ಚುತ್ತ ಇದ್ದ ಹನ್ನೊಂದರ ಹಗಲಿನ ಬಿಸಿಲಿನ ಜತೆ ವಾಸ್ತವ ಸುಝೇನ್ಳ ಕಣ್ಣು ಕುಕ್ಕಿದ್ದು ಈ ಎರಡೂ ವ್ಯಾನುಗಳಿಂದ ಗಡಿಬಿಡಿಯಲ್ಲಿ ಇಳಿದ ಹಟ್ಟಾಕಟ್ಟ ಜನರು ಮಾರುವೇಷದಲ್ಲಿರುವ ಪೋಲಿಸರು ಎಂಬ ಸತ್ಯದ ಅರಿವಾದಗ. ಆಶ್ ಈ ಜನರ ಹಾವಭಾವಗಳನ್ನೇ ನೋಡಿ ಪಿಸುಗುಟ್ಟಿದ “ಸಿಸಿಬಿ ಜನ”

“ಗೆಟ್ ಬ್ಯಾಕ್…ಗೆಟ್ ಬ್ಯಾಕ್…” ಅಂತ ಇವರಿಬ್ಬರನ್ನು ಕ್ಷುಧ್ರ ಜಂತುಗಳೆನ್ನುವಂತೆ ನೋಡಿ ಆ ಸಂಕೀರ್ಣದೊಳಗೆ ನುಗ್ಗಿತವರ ಗುಂಪು. ನುಗ್ಗಿ ಕೆಲವೇ ಸೆಕೆಂಡುಗಳಲ್ಲಿ ಒಳಗಿಂದ ಸಿಸಿಬಿ ಅವರ ದಿಕ್ಕಿನಿಂದ ಫ಼ೈರಿಂಗ್ ಆದ ಶಬ್ಧ ಮಾರ್ಧನಿಸಿತು.

ಅಲ್ಲಿ ಆಗಿದ್ದು ಇಷ್ಟು. ಹೋದ ತಿಂಗಳು ಈ ಕಾಮ್ರೇಡ್ ಪಾರ್ಟಿಯ ಕಚೇರಿಯ ಮೇಲೆ ಗುಂಡಿನದಾಳಿ ನಡೆಸಿದ ಇಬ್ಬರ ಪೈಕಿ ಒಬ್ಬ -ಆತನ ಹೆಸರು ರಶೀದ್ ಲತೀಫ್- ಇದೇ ರಾಯಲ್ ಅಕ್ರಮ್ಮ್ ಬೇಕರಿಯ ನೆಲಮಾಳಿಗೆಯಲ್ಲಿ ಇಷ್ಟು ದಿನವೂ ಅಡಗಿದ್ದ. ಆತನ ಇರುಹವನ್ನು ಪತ್ತೆ ಹಚ್ಚಿ ಕ್ರೈಂ ಬ್ರಾಂಚಿನ ಸಿಬ್ಬಂದಿ ಅಲ್ಲಿಗೆ ಧಾಳಿ ಮಾಡುತ್ತಾ ಇದ್ದಂತೆ ಆತನಿಗೆ ಇವರ ಸುಳಿವು ಸಿಕ್ಕಿ ತನ್ನ ಎಕೆ ೪೭ರಿಂದ ಇವರತ್ತ ಫ಼ೈರಿಂಗ್ ಮಾಡಲು ಅಣಿಯಾದ. ಅಷ್ಟ್ರೊಳಗೆ ಈ ಶಾರ್ಪ್ ಶೂಟರ್ಸ್ ಕಾಪ್ಸ್ ರಶೀದನನ್ನು ಸ್ವಾಹ ಅನ್ನಿಸಿದರು. ೨೪ ಗಂಟೆಯೂ ಮೀಡಿಯಾ ಜನ ಇದೇ ಸುದ್ದಿಯನ್ನು ಮತ್ತೆ ಮತ್ತೆ ಪ್ರಸಾರಿಸಿ ನಮ್ಮ ನಗರದ ಪೋಲೀಸ್ ಅಧಿಕಾರಿಗಳ ಧೈರ್ಯ ಕೊಂಡಾಡುತ್ತಾ ಆ ವೀಡಿಯೋ ತುಣುಕಗಳಿಗೆ ಕೆ.ಜಿ.ಎಫ಼್ ಭಾಗ ೨ರ ಹಿನ್ನಲೆಯನ್ನು ಸಂಗೀತವನ್ನು ಮಿಶ್ರಿಸಿ ಮತ್ತೆ ಮತ್ತೆ ಈ ಪೋಲಿಸ್ ಟೀಮ್ ಆ ಬೇಕರಿಯ ಪರಿಸರದಲ್ಲಿ ನಡೆದುಕೊಂಡು ಬರುವುದನ್ನು ಸ್ಲೋ ಮೋಷನ್ನ್ ಇಫೆಕ್ಟ್ ಅಲ್ಲಿ ತೋರಿಸುತ್ತಲೇ ಇದ್ದರು. ಎಷ್ಟೋ ಯುವ ದೇಶಪ್ರೇಮಿಗಳು ಈ ಪೋಲೀಸರ ವೀಡಿಯೋವನ್ನೇ ತಮ್ಮ ಸ್ಟೇಟಸಲ್ಲಿ ಹಾಕಿಕೊಂಡು ’ಅವರ್ ಪೋಲೀಸ್ ಅವರ್ ಪ್ರೈಡ್” ಅನ್ನೋ ಶೀರ್ಷಿಕೆ ಇರುವ ಪೋಶ್ಟನ್ನು ಎಲ್ಲೆಡೆ ಪಸರಿಸುತ್ತಾ ಇದ್ದರು. ಇನ್ನು ಕೆಲ ದೇಶಭಕ್ತ ಜಾಲಿಗರು ಬಾಯಿಗೆ ಬಂದ ಪದಗಳನ್ನು ಉಪಯೋಗಿಸಿ ಭಯೋತ್ಪಾದಕರನ್ನು ನಿಂದಿಸಿ ಫ಼ೇಸ್ಬುಕ್ಕಲ್ಲಿ ಉದ್ದುದ್ದ ಪೋಶ್ಟ್ ಬರೆದು ಹಾಕುತ್ತಾ ಇದ್ದರು.  ಮಾನ್ಯ ಅಧ್ಯಕ್ಷರು ಈ ಪೋಲೀಸರ ಚಾಕಚಕ್ಯತೆ ಮತ್ತು ವೀರತ್ವವನ್ನು ಮೆಚ್ಚಿ ಇಡೀ ಟೀಮಿಗೆ ೫ ಕೋಟಿ ಬಹುಮಾನವನ್ನು ಘೋಶಿಸಿದ್ದರು. ನಮ್ಮ ಯುವ ನಾಯಕ ಸೂರ್ಯನಾರಾಯಣ್ ರಾವ್ “ಜಶ್ಟಿಸ್ ಈಸ್ ಡನ್… ಬಟ್ ವಾಟ್ ಅಬೌಟ್ ದ ಫ಼ೇಸಸ್ ಇನ್ ದ್ ಶ್ಯಾಡೋ…?” ಎನ್ನುವ ಟ್ವೀಟ್ ಮಾಡಿ  ’ಅವರ್ ಪೋಲೀಸ್ ಅವರ್ ಪ್ರೈಡ್” ಅನ್ನೋ ಹ್ಯಾಶ್ಟ್ಯಾಗ್ ಅನ್ನು ಜೋಡಿಸಿದ್ದರು. ಆದರೆ ವಿರೋಧಪಕ್ಷದ ನಾಯಕ ಮಲಶೇಖರ್ ಮಾತ್ರ “ಇದು ಪೋಲಿಸರ ಕುಕೃತ್ಯ… ಬದುಕಲು ಬಿಡದಂತೆ ಒಬ್ಬ ಅಮಾಯಕನ ಕೊಂದಿದ್ದಾರೆ. ಕಡೇ ಪಕ್ಷ ಆತನನ್ನು ಜೀವಂತವಾಗಿ ಹಿಡಿದಿದ್ದರೆ ಈ ಭಯೋತ್ಪಾದಕ ಅಟ್ಯಾಕ್ಕ್ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಬಹುದಿತ್ತು…” ಅನ್ನೋ ವಿವದಾತ್ಮಕ ಹೇಳಿಕೆ ಕೊಟ್ಟು ಎಲ್ಲರಿಂದ ಉಗಿಸಿಕೊಂಡು . “ಮಲಶೇಕರ್ ಟೆರೆರಿಶ್ಟ್ ಜಾತಿಯ ಟ್ರೈಟರ್…” ಅನ್ನೋ ಹ್ಯಾಶ್ಟ್ಯಾಗ್ ಟ್ರೆಂಡಿಗ್ಗೆ ಕಾರಣವಾದರು.

ಆದರೆ ನಿಜಕ್ಕೂ ಜ್ವರ ಬಂದು ಮಲಗಿದ್ದು ನಮ್ಮ ಸುಝೇನ್. ಮೊನ್ನೆಯಷ್ಟೇ ಈ ಚಾರ್ಟೆಡ್ ಅಕೌಂಟಂಟ್ ಕುಲಕರ್ಣಿ ಸಾವಾದ ಕೆಲವೇ ವಾರಗಳಲ್ಲಿ ಆತನ  ಕ್ಲೈಂಟ್ ಸಾಧನಳ ಕೊಲೆಯಾದದ್ದು, ಆಕೆ ಖಾತೆಗೆ ಅನುಮಾನಸ್ಪದವಾಗಿ ದೊಡ್ಡ ಮೊತ್ತದ ಹಣ ಬಂದ ರಾಯಲ್ ಅಕ್ರಮ್ ಬೇಕರಿಯಲ್ಲೇ ಈ ರಶೀದ ಅನ್ನೋ ಟೆರರಿಶ್ಟ್ ಅಡಗಿದ್ದು, ಆತನನ್ನು ಪೋಲಿಸರು ನಾಯಿಯಂತೆ ಹೊಡೆದು ಹಾಕಿದ್ದು… ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ರಾತ್ರಿ ಐ.ಜಿ ದೇವಾನಂದ ನಾಯಕ್ ಕರೆದಿದ್ದ ಪತ್ರಿಕಾ ಘೋಷ್ಟಿಯಲ್ಲಿ, ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಒಂದಾನೊಂದು ಕಾಲದಲ್ಲಿ ಕುಖ್ಯಾತವಾಗಿದ್ದ, ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಪಾಪರ್ ಆಗಿದ್ದ Walhalla Tora Figures (WTF) ಎಂಬ ಸಂಘಟನೆಯ ಸದಸ್ಯ ಈ ರಶೀದ… ಮತ್ತೆ ತಮ್ಮ WTF ತೃಣ ಮೂಲದಿಂದ ಬೆಳೆಸಲು ಹೀಗೇ ಲಿಬರಲ್ಲ್ ಧೋರಣೆಗಳಿರುವ ಹೊಸ ಪಕ್ಷದ ಮೇಲೆ ಸಮರ ಸಾರಿದೆ, ಏಕೆಂದರೆ ಪಕ್ಕದ ಅಫ಼್ಗಾನಿಸ್ಥಾನದಲ್ಲಿ ಇದೇ ಸಂಘಟನೆ ಸರ್ವಾಧಿಕಾರ ಜಾರಿಗೆ ತಂದ ಹಾಗೇ ಇಲ್ಲೂ ಅದೇ ಧ್ಯೇಯವನ್ನು ಇಟ್ಟುಕೊಂಡು ಲಿಬರಲ್ಲ್ ಆಚಾರಗಳನ್ನ ಇಲ್ಲಿ ನಾಶಪಡಿಸಲು ಈ ಮುಷ್ಟಿ ಪಕ್ಷವನ್ನು ನಿಗ್ರಹಿಸಲು ಪಣ ತೊಟ್ಟಿದೆ… ಅದೂ ಅಲ್ಲದೆ ಕೆಲವು ದಿನಗಳ ಹಿಂದೆ ಈ ಹೆಡ್ಸ್ಕ್ರಾಫ್ ಗಲಾಟೆ ಜೋರಾದಾಗ ಈ ಯುವ ನಾಯಕ ಸೂರಿ “ಈ ಬಲಪಂಥೀಯರು ಮೂಲಭೂತವಾದಿಗಳು ಎಲ್ಲ ಕಡೆಯೂ ಇದ್ದಾರೆ…. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಬಿಡಲಿ ಆದರೆ ವಸ್ತ್ರಸಂಹಿತೆ ಅನ್ನುವುದು ಎಲ್ಲರಿಗೂ ಒಂದೇ ಇರಬೇಕು… ಲಿಬರಿಸಂ ಅಂದರೆ ಸಮಾನ ದೃಷ್ಟಿ ಹಾಗೂ ಏಕತೆ… ಸುಖಾಸುಮ್ಮನೆ ಧರ್ಮ ಆಚರಣೆ ಅಂತ ಅಂದು ಬಿಟ್ಟು  ಸ್ತ್ರೀಗಳ ಸಂಪೂರ್ಣ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವ ಹಾಗೂ ಆಕೆ ಮಹಿಳೆ ಅನ್ನುವ ಕಾರಣಕ್ಕೆ ಆಕೆಗೆ ಮಾತ್ರ ಪ್ರತ್ಯೇಕವಾದ ’ಸಮವಸ್ತ್ರಗಳನ್ನು’ ಹೇರುವ ಪದ್ಧತಿ ಮೂಢ ನಂಬಿಕೆಯ ಪರಮಾವಧಿ… ಎಂದದ್ದು ತಮ್ಮ ಆಚರಣೆ ಬಗ್ಗೆ ಮಾಡಿದ ಕಾಮೆಂಟು ಅಂತ ಈ ಸೂರ್ಯನಾರಾಯಣನ ಈ ಕಾಮೆಂಟನ್ನು ಸೀರಿಯಸ್ಸಾಗಿ ತೆಗೆದುಕೊಂಡ Walhalla Tora Figures (WTF) ಸಂಘಟನೆಯು ಇದಕ್ಕೆ ಪ್ರತೀಕಾರವಾಗಿ ಇಂತಹ ಹೇಯ ಕೃತ್ಯಕ್ಕೆ ಕೈ ಹಾಕಿದೆ ಎನ್ನುವುದೇ ಎಲ್ಲ ಸುದ್ಧಿ ಚಾನಲ್ಲುಗಳಲ್ಲಿ ಪ್ರಚಲಿತದಲ್ಲಿತ್ತು. ಇದಕ್ಕೆ ತಾಳ ಹಾಕುವಂತೆ ಸಿಸಿಬಿ ಶಾರ್ಪ್ ಶೂಟರ್ಸುಗಳಿಗೆ ಈ ರಶೀದನ ಅಡಗುದಾಣದಲ್ಲಿ WTF ಸಂಭಂಧಪಟ್ಟ ಅನೇಕ ಕರಪತ್ರಗಳು, ಭಿತ್ತಿ ಚಿತ್ರಗಳು ಹಾಗೇ ಸೂರ್ಯನಾರಾಯಣನ ತಲೆ ತಂದವರಿಗೆ ಇನಾಮು ಕೊಡುತ್ತೇವೆ ಎಂದು ಆದೇಶ ನೀಡಿದ್ದ ಕೆಲ ಧರ್ಮಗುರುಗಳ ಫೋಟೋ ಮತ್ತು ಹೇಳಿಕೆಗಳ ಮಿಂಚಂಚೆಗಳು ಇವೆಲ್ಲ ಲಭ್ಯವಾಗಿತ್ತು. ಒಟ್ಟಿನಲ್ಲಿ ಈ ಹೊಸ ಕ್ರೂರ WTF ಅಂಬೋ ಟೆರರಿಶ್ಟ್ ಪಾರ್ಟಿಯಿಂದು ನಮ್ಮ ನಾಡಿನೊಳಗೆ ನುಗ್ಗಿ ಸದ್ದಿಲ್ಲದೆ ಹಬ್ಬುತ್ತಾ ನಮ್ಮನ್ನೆಲ್ಲಾ ಪರಿವರ್ತನೆ ಮಾಡುವುದು ಖಂಡಿತ ಎಂದು ಎಷ್ಟೋ ಜ್ಯೋತಿಷ್ಯರು ಸ್ಟೇಟ್ಮೆಂಟ್ ಪಾಸ್ ಮಾಡಿದ್ದು…. ಇವೆಲ್ಲ ನಮ್ಮ ಸುಝೇನಳ ಮೈ ಮನಸ್ಸಿನ ತಾಪಮಾನವನ್ನು ಏರಿಸಿತ್ತು.

“ನಾನ್ಹೇಗೆ ಕನೆಕ್ಟ್ ಆಗಿದ್ದೀನಿ ಈ ಕೂಪದಲ್ಲಿ…. ಯಾರಿಗೆ ಯಾರ್ ಕನೆಕ್ಟ್ ಆಗಿದ್ದಾರೆ ಇಲ್ಲಿ…. ನೆರಳು ಹೊಗೆಗಳ ಮೂಲಕ ಹೆಣಗಳು ಬಿದ್ದಾಗ ಮಾತ್ರ ಪ್ಲೇಯರ್ಸ್ ಐಡೆಂಟಿಟಿ ಗೊತ್ತಾಗುತ್ತೆ ಇಲ್ಲಿ…ಆದರೆ ಆಟ ಆಡಿಸ್ತಾ ಇರೋವ್ರ ಮುಖ ಕೊನೆ ತನ್ಕ ರಿವೀಲ್ ಆಗಲ್ಲ… ಹೇಗೆ ಪರಮಾತ್ಮ ಯಾವತ್ತೂ ತನ್ನ ಭಕ್ತಾಧಿಗಳ್ಗೇ ಕಾಣಿಸಲ್ವೋ ಹಾಗೇ ಇದೂನು…” ಅಂತ ಕನವರಿಸುತ್ತಾ      ಜ್ವರ ಮಿಶ್ರಿತ ಭೀತಿಯಲ್ಲಿ ಹಾಸಿಗೆಯಲ್ಲಿ ಒದ್ದಾಡಿದಳು. ಪದೇ ಪದೇ ಆಶ್ನಿಂದ ಬರುತ್ತಿದ್ದ ಕರೆಯನ್ನು ತಪ್ಪಿ ಕೂಡ ರಿಸೀವ್ ಮಾಡದೆ ಚಡಪಡಿಸುತ್ತಾ ಇದ್ದಳು. ಮೂರವರೆ ಜಾವದ ಹೊತ್ತಿಗೆ ಏನೋ ಹೊಳೆದ ಹಾಗೇ ಆಗಿ ಅಂದು ದೆವ್ವದ ಕೈಯಿಂದ ಕಸಿದು ತಂದಿದ್ದ ಪೆನ್ ಡ್ರೈವನ್ನು ಸಿಕ್ಕಿಸಿ ಮತ್ತೆ ಈ ಸಾಧನ ಕುಸುಮಳ ಬ್ಯಾಂಕ್ ಸ್ಟೇಟ್ಮೆಂಟ್  ಟ್ರಾನ್ಯಾಂಕ್ಷಗಳನ್ನೆಲ್ಲ ಗಮನಿಸುತ್ತಾ ಇದ್ದಾಗ ಇದೇ ಸಾಧನ ಆ ಗ್ಸಾನಾಡು ರೆಸಾರ್ಟಲ್ಲಿ ಸಾಯಕ್ಕೆ ಒಂದು ತಿಂಗಳ ಮುಂಚೆ ಮಧ್ಯರಾತ್ರಿ ಒಂದೂವರೆ ಗಂಟೆಗೆ ತನ್ನ  ಡೆಬಿಟ್ ಕಾರ್ಡಿಂದ ೫.೦೦೦ದಷ್ಟು ಹಣ ಪಾವತಿಸಿದ್ದ ವಿವರಗಳೆಲ್ಲ ಸುಝೇನ್ ಕಣ್ಣಿಗೆ ಬಿತ್ತು. ಕೂಡಲೇ ತಡೆಯಲಾಗದ ಕುತೂಹಲದಲ್ಲಿ ಆಕೆ ಆಶ್ ನಂಬರ್ರಿಗೆ ಕಾಲ್ ಮಾಡಿದಳು ಆಗ ಸಮಯ ರಾತ್ರಿ ಒಂದು ಗಂಟೆ.

ತಮಾಷೆ ಎಂದರೆ ಈಕೆ ಈ  ಹೊಸ ಆವಿಷ್ಕಾರಗಳನ್ನು ಹೇಳಿ ತನ್ನ ಗುಮಾನಿಗಳಿಗೆ ಉತ್ತರ ಕಂಡುಕೊಳ್ಳುವ ಕಾತರದಲ್ಲಿದ್ದರೆ ಈ ಆಶ್ ಆಕೆಗೆ ಕನೆಕ್ಟ್ ಆಗದ ಹೊಸ ವಿಚಿತ್ರ ಸುದ್ದಿ ಮುಟ್ಟಿಸುವ ಗಡಿಬಿಡಿಯಲ್ಲಿದ್ದ. ಅದೇನೆಂದರೆ ಹೋದ ವಾರ ನಮ್ಮ ನಗರದ ರಿಂಗ್ ರೋಡಿನ ಹತ್ತಿರ ಇರುವ ಮೃಗಾಲಯದಿಂದ ಎರಡು ತೋಳಗಳು ತಪ್ಪಿಸಿಕೊಂಡು ಹೋಗಿದ್ದವು. ಈ ಆಶ್ ಎಂತಾ ತಲೆಯವನೆಂದರೆ ರಶೀದನ ಎನ್ಕೌಂಟರ್, ಸೂರ್ಯನಾರಾಯಣನ ಕ್ಯಾಂಪೇನ್ ಹೋಗಲಿ ನಮ್ಮ ಸುಝೇನ್ಳ ಪರಿಸ್ಥಿತಿ ಇವ್ಯಾವಕ್ಕೂ ತಲೆಕೆಡಿಸಿಕೊಳ್ಳದೆ ಹೈವೇ ಅಲ್ಲಿ ಅಡ್ಡಾಡುವ ತೋಳಗಳನ್ನು ಪತ್ತೆ ಮಾಡಿಸಿ ಮತ್ತೆ ಅದನ್ನು ಕಾಡಿಗೆ ಬಿಟ್ಟು ಬಿಡುವ ಮಿಶನ್ನ್ ಬಗ್ಗೆ ಬುದ್ಧಿ ಖರ್ಚು ಮಾಡುತ್ತಾ, ಆ ಸಾಹಸಕ್ಕೆ ಈ ಸುಝೇನ್ಳ ನೆರವನ್ನು ಬೇಡಲು ಆವಾಗಲಿಂದಲೂ ಆಕೆಗೆ ಕರೆ ಮಾಡುತ್ತಲೇ ಇದ್ದ. ಯಾವಾಗ ಸುಝೇನ್ ಆ ಬಗ್ಗೆ  ಚೂರೂ ಆಸ್ಥೆ ತೋರಿಸದೆ ಈ ಸಾಧನ್ ಮತ್ತು ಆಕೆಯ ಗೋವಾ ಕನೆಕ್ಷನ್ನ್ ಬಗ್ಗೆ ಹೇಳಿದಾಗ ಅವನ ಉತ್ಸಾಹಕ್ಕೆ ತಣ್ಣೀರು ಎರೆಚಿದಂತಾಗಿ “ನಿನ್ನ ಅಜ್ಜಿ ಪಿಂಡ…” ಅಂತ ಉಗಿದು ಫೋನ್ ಕಟ್ಟಿ ಮಾಡಿದ. ಆದರೆ ಅರ್ಧ ಗಂಟೆಯ ನಂತರ ಇದ್ದಕ್ಕಿದ್ದಂತೆ ಕಾಲ್ ಮಾಡಿ, ಯಾವ ದಿನ ಈ ಸಾಧನ ಆ ಗ್ಸಾನಾಡು ರೆಸಾರ್ಟಲ್ಲಿ ಹಣ ಕರ್ಚು ಮಾಡಿದ್ದು ಅಂತ ಕೇಳಿದ. ಟೈಮು, ಡೇಟು ಇತ್ಯಾದಿ ಮಹೂರ್ತಗಳ ಮಾಹಿತಿ ಎಲ್ಲ ಸುಝೇನ್ ಬಾಯಿಪಾಟ ಮಾಡಿಟ್ಟು ಕೊಟ್ಟಂತೆ ಹೇಳಿದ ಮೇಲೆ ಆಶ್, “ಫನ್ನಿ…. ಅದೇ ಡೇಟಿಗೆ ನಮ್ಮ ಸೂರಿ ರಾಯ ಲಾಶ್ಟ್ ಮಿನಿಟ್ಟಲ್ಲಿ ಅವ್ನ ಮ್ಯಾಂಗಲೂರ್ ಕ್ಯಾಂಪೇನ್ ಕ್ಯಾನ್ಸಲ್ಲ್ ಮಾಡಿ ಗೋವಾಗೆ ನನ್ಗೆ ಟಿಕೆಟ್ ಬುಕ್ಕ್ ಮಾಡಕ್ಕೆ ಹೇಳಿದ್ದ… ಐ ಜಶ್ಟ್ ಚೆಕ್ಟ್ ದ ಡೇಟ್…ಇಟ್ ಮ್ಯಾಚಸ್ ಪರ್ಫ಼ೆಕ್ಟ್ಲೀ…”

“ಆರ್ ಯು ರಿಯಲೀ ಶ್ಯೂರ್ ಮ್ಯಾನ್…?

“ಯ ಟೋಟಲ್ ಶ್ಯೂರ‍್… ಜೀಸಸ್ ಕ್ರೈಸ್ಟ್ ಕ್ರಾಸಲ್ಲಿ ಸತ್ತ ಅಲ್ಲ ಅಷ್ಟೇ ಶ್ಯೂರ‍್…. ಯಾಕಂದ್ರೆ ಎಲ್ಲೂ ಬೇರೆ ಟಿಕೆಟ್ ಸಿಗ್ದೇ ಲಾಶ್ಟ್ ಮೊಮೆಂಟಲ್ಲಿ ಹೇಗಾದ್ರೂ ನನ್ಗೆ ಇರೋ ಕಾಂಟ್ಯಾಕ್ಟ್ ಯೂಸ್ ಮಾಡಿ ಬುಕ್ಕ್ ಮಾಡಕ್ಕೆ ಹೇಳಿದ್ದ  ನನ್ಗೆ ಈ ಸೂರ್ಯ ನಾರಾಯಣ ಹಿ ವಾಸ್ ಲಿಟ್ರಲಿ ಬೆಗ್ಗಿಂಗ್!”

ಮಂಗಳೂರಿನ ಕ್ಯಾಂಪೇನ್ ರದ್ದುಗೊಳಿಸಿದ್ದು- ಅದೂ ಕೊನೆ ಕ್ಷಣದಲ್ಲಿ- ಸುಝೇನ್ಗೆ ಚೆನ್ನಾಗೇ ಗೊತ್ತಿತ್ತು. ವಿಪರೀತ ಹೊಟ್ಟೆ ನೋವು ಮೇ ಬಿ ಇಟ್ಸ್ ಫ಼ುಡ್ ಪಾಯಿಸನ್ನ್ ನನ್ಗೆ ಅಟೆಂಡ್ ಮಾಡಕ್ಕೆ ಆಗ್ತಾ ಇಲ್ಲ… ಈ ಕ್ಯಾಂಪೇನಿಂಗ್…. ಅಂತ ಅಂದು  ತಪ್ಪಿಸಿಕೊಂಡಿದ್ದ ಸೂರಿ. ಆದರೆ ಅದೇ ದಿನ ಗುಟ್ಟಾಗಿ ರಾತ್ರಿಗೆಲ್ಲ ಗೋವಾ ತಲುಪುವ ತುರ್ತೇನು…? ಅದೂ ಪಕ್ಷದ ಯಾವ ಕಾರ್ಯಕರ್ತರಿಗೂ ಈ ವಿಷಯ ತಿಳಿಸದೆ,   ಗಾಂಜಾ ಪೆಡ್ಲರ್ ಕಮ್ಮ್ ಔಟ್ ಸೋರ್ಸ್ಟ್ಡ್ ಪಾರ್ಟಿ ವರ್ಕರ್ರಾದ ಈ ಆಶ್ಗೆ ಈ ಟಿಕೆಟ್ ಬುಕ್ಕ್ ಮಾಡೋ ಅಸೈನ್ಮೆಂಟ್ ಕೊಡುತ್ತಾನೆ ಅಂದರೆ….?!

ಯಾರೋ ಅವಳ ಮನಸ್ಸಿನ ಮಾತುಗಳನ್ನೇ ಕದ್ದು ಆಲಿಸಿ ಈಗ ಅವಳ ಮೌನ ಪ್ರಶ್ನೆಗಳಿಗೆ ಅಶರೀರವಾಣಿಯ ಪ್ರತ್ಯುತ್ತರದಂತೆ ಅವಳ ಫೋನ್ ರಿಂಗಣಿಸಿತು. ಮತ್ತದೇ ಜಂಕ್ ನಂಬರ್ರ್…. ಮತ್ತದೇ ಪಟ್ಟಾಭಿ ರಾಮ….” ನನ್ಗೇ ಯಾಕೆ ಕಾಲ್ ಮಾಡ್ತಾ ಇದ್ಯ…. ಏನ್ ಆಗ್ತಾ ಇದೇ ಇಲ್ಲಿ….?” ಅನ್ನುತ್ತಾ ಕ್ಷೀಣ ಸ್ವರದಲ್ಲಿ ಈಕೆ ಚೀರಿದಾಗ ಆತ, “ಜಾಸ್ತಿ ಪ್ರಶ್ನೆ ಕೇಳ್ಬೇಡ… ಮತ್ತೆ ಬರೀ ಸಾಯೋದಲ್ಲ…ಸತ್ತ ಮೇಲೂ ಮುಕ್ತಿ ಸಿಗದೇ ಅಲೆದಾಡೋ ಹೀನಾಯ ಪಿಶಾಚಿ ಆಗೋ ಗತಿ ಬರುತ್ತೆ…. ಜಶ್ಟ್ ಎಂಟರ್ ಡೀಪ್ ವೆಬ್ಬ್…. ನಿನ್ನ ಹತ್ರ ವಿಪಿ ಎನ್ ಇಲ್ದೇ ಇದ್ರೂ ಪರ್ವಾಗಿಲ್ಲ….” ಎನ್ನುತ್ತಾ ಡೀಪ್ ವೆಬ್ಬ್ ಅನ್ನೋ ಗರ್ಭಜಾಲಕೆ ಒಪೆರಾ ಬ್ರೌಸರ್ ಮೂಲಕ ಆನಿಯನ್ನ್ ಅನ್ನೋ ವಿಶೇಷ ಕೊಂಡಿಯನ್ನು ಅಳವಡಿಸಿ ಹೇಗೆ ಇಳಿಯುವುದು ಎಂದು ತ್ವರಿತವಾಗಿ ಹೇಳಿಕೊಟ್ಟು ಅಲ್ಲಿನ ಯಾವುದೋ ಒಂದು ಜಾಲದ ಲಿಂಕನ್ನು ಆಕೆಯ ವಾಟ್ಸಾಪ್ಪಿಗೆ ರವಾನಿಸಿ ಮತ್ತೆ ಮಾಯವಾದ. ಕಾಲ್ ಡಿಸ್ಕನೆಕ್ಟ್ ಆದ ಕೂಡಲೇ ತನ್ನ ವಾಟ್ಸಾಪ್ ಸಂಖ್ಯೆಗೆ ಅನಾಮಿಕ ಅಕೌಂಟಿದ ಬಂದ ಆ ಲಿಂಕನ್ನು ಕಾಪಿ ಮಾಡಿ ಡೀಪ್ ವೆಬ್ಬಿಗೆ ಇಳಿದು ಆ ಕೊಂಡಿಯ ಮೇಲೆ ಕ್ಲಿಕ್ ಮಾಡುತ್ತಿದ್ದ  ಹಾಗೇ ಅವಳ ತಲೆ ಸುತ್ತಿತದಂತಾಯಿತು. ಆ ಪುಟದಲ್ಲಿ ಉತ್ಪತ್ತಿಯಾದ ಮೊದಲನೆಯ ಚಿತ್ರ ಅದೇ ಗ್ಸಾನಡು ರೆಸಾರ್ಟಿನದ್ದು…. ಇನ್ನೊಂದು ಅದರ ಒಳಾಂಗಣದ್ದು… ಮತ್ತೊಂದು ಚಿತ್ರ  ಆ ಗ್ಸಾನಡು ರೆಸಾರ್ಟನ್ನ ಪಾತಾಳ ಲೋಕದಲ್ಲಿ ತೆಗೆದಂತಿದ್ದ ಮಿಣುಕು ಕತ್ತಲೆ ಬೆಳಕಿನ ಚಿತ್ರದಲ್ಲಿ ಸುಮಾರು ಹತ್ತು ವರುಷ ತುಂಬಿರುವ ಇಬ್ಬರೂ ಬಾಲಕರ ಜತೆ ಅಶ್ಲೀಲ ಭಂಗಿಯಲ್ಲಿ ಬಿದ್ದುಕೊಂಡಿರುವ ಯುವ ನಾಯಕ ಸೂರ್ಯ ನಾರಾಯಣ್ ಮತ್ತೊಂದು ಚಿತ್ರದಲ್ಲಿ ಈ ಸೂರ್ಯನಾರಾಯಣ,  ಮನೋಜ್ ಪರ್ವತನೇನಿ … ಮತ್ತು ಅಫ಼್ಘಾನ್ನನಂತೆ ಕಾಣುತ್ತಾ ಇದ್ದ ಬಿಳಿಯ ಕೋಟ್ ಹಾಕಿದ್ದ ಮೂರನೆಯ ವ್ಯಕ್ತಿ ಪರಸ್ಪರ  ಧೀರ್ಘ ಸಂಭಾಷಣೆಯಲ್ಲಿ ತೊಡಗಿರುವುದು…. ಏನಿದೆಲ್ಲ…? ಆ ಮೂರನೆಯ ವ್ಯಕ್ತಿಯೇ Walhalla Tora Figures (WTF) ಸಂಘಟನೆಯ ಹೊಸ ನಾಯಕ  ಎಂದು ಕಂಡು ಹಿಡಿಯಲು ಸುಝೇನ್ಗೆ ಬಹಳ ಹೊತ್ತು ಹಿಡಿಯಲಿಲ್ಲ.

ಈ ಚಿತ್ರಗಳನ್ನೆಲ್ಲ ಮತ್ತೆ ತನ್ನ ಪೆನ್ ಡ್ರೈವ್ಗೆ ಸೇವ್ ಮಾಡಿಕೊಳ್ಳಲು ಆಕೆ ತಡಕಾಡುತ್ತಾ ಇರುವಷ್ಟರಲ್ಲೇ ತನ್ನಷ್ಟಕ್ಕೇ ತಾನೇ ಆ ಪುಟ ನಿಷ್ಕ್ರಿಯವಾಯಿತು. ಎಷ್ಟೇ ಸಲ ಪದೇ ಪದೇ ರಿಫ಼್ರೆಶ್ ಬಟನ್ನ್ ಒತ್ತಿದರೂ  ಜೀವದ ಕುರುಹೂ ಆ ಪೇಜಲ್ಲಿ ಇದ್ದಂತೆ ಕಾಣಲಿಲ್ಲ….   ಸುತ್ತ ಇದ್ದ ಗೋಡೆಗಳೇ ನನ್ನನ್ನು  ಕದ್ದು ನೋಡುತ್ತಾ ಇದೆ ಎನ್ನುವಂತಹ ಆತಂಕ ಹುಟ್ಟಿ, ಮನೆ ಬಿಟ್ಟು   ನೆಚ್ಚಿನ ಸಮುದ್ರದಂಡೆ ತನಕ ಸ್ಕೂಟರ್ ಅಲ್ಲೇ ಸಾಗಿ ಆ ಉಪ್ಪು ಮರಳು ಮತ್ತು ಕತ್ತಲ ನಿರಾಕಾರ ಕಡಲನ್ನೇ ನೋಡುತ್ತಾ ಕೂತಳು. ಆಗ ಸಮಯ ಮೂರು ಗಂಟೆ. ಕೆಲವೇ ನಿಮಿಷಗಳಲ್ಲಿ ಆಶ್ ಕೂಡ ಅಲ್ಲಿಗೆ ಬಂದ. “ಏನಾಯ್ತೂ ಯಾಕಿಷ್ಟೂ ಅರ್ಜೆಂಟಾಗಿ ಕರ್ದೆ ಇಲ್ಲಿಗೆ….?! ಅರ್ ಯು ಹೈ?” ಎಂದ… “ಲೆಟ್ಸ್ ಸ್ವಿಮ್….” ಅಂತ ಪಿಸುಗುಟ್ಟಿದಳು. ಆಕೆಯ ಮುಖದಲ್ಲಿರುವ ಕರಾಳತೆಯ ರೇಖೆಗಳನ್ನು ನೋಡಿ ಈತ ಸರಿಯೆಂದು ತಲೆ ಅಲ್ಲಾಡಿಸಿದ. ಇಬ್ಬರೂ ಹೊಸ ಮನುಷ್ಯರಂತೆ ಸಂಪೂರ್ಣವಾಗಿ ಬೆತ್ತಲಾಗಿ ಕೈ ಕೈ ಹಿಡಿದು ಸಮುದ್ರ ಒಳಗೆ ಪಾದವಿಟ್ಟರು. ರಾತ್ರಿ ಮೂರಾದರೂ ನೀರಿನ್ನೂ ಬೆಚ್ಚಗಿತ್ತು. ಅಲೆಗಳ ವೇಗಕ್ಕೆ ಇಬ್ಬರೂ ಚೂರು ಹಿಂದೆ ಮುಂದೆ ಹೋದರೂ ನಂತರ ಕೆಲ ನಿಮಿಷ ಹಾಗೇ ತೆರೆಗಳ ಕೂಡೇ ನಲಿದಾಟವಾದ ಮೇಲೆ, ಸ್ವಲ್ಪ ನಿರಾಳವೆನಿಸಿ, ಆ ತುಯ್ದಾಡುವ ಭೂಮಿಯಲ್ಲೇ ಆಯ ತಪ್ಪಿ ನೀರಲ್ಲೇ ಮುಳುಗದಂತೆ ಆಶ್ ನನ್ನು ಬಾಚಿ ನಿಧಾನಕ್ಕೆ ಸುಝೇನ್ ಎಲ್ಲವನ್ನು ಹೇಳಿದಳು. ಕಡಲ ಸದ್ದು ಸುಝೇನ್ಳ ಬಲು ರಹಸ್ಯದ ಮಾತನ್ನು  ಆಚೆ ಸೋರದಂತೆ ಕಂಪನದ ಕೋಟೆಯನ್ನೇ ಕಟ್ಟಿದವು.

ಆದರೆ ಆಶ್ ಇವಳು ಹೇಳಿದ ಕಥೆಗಳನ್ನು ಕೇಳಿ ಪಕಪಕನೇ ನಕ್ಕ…  ಸೂರ್ಯ ನಾರಾಯಣ ಒಬ್ಬ ಶಿಶುಕಾಮಿ ಹಾಗೂ ಮನೋಜ್ ಪರ್ವತನೇನಿ ಆ ರೆಸಾರ್ಟನ್ನು ಗುಟ್ಟಾಗಿ ನಡೆಸುತ್ತಾ ಇರುವುದು … ಇಬ್ಬರೂ ಸೇರಿ ಈ Walhalla Tora Figures (WTF) ಗೆ ದೊಡ್ಡ ಮೊತ್ತದ ಹಣ ನೀಡಿ ತಮ್ಮ ಪಾರ್ಟಿಯ ಆಫ಼ೀಸಿನ ಮೇಲೆ ಧಾಳಿ ಮಾಡಿಸಿರುವುದು – ಅದೂ ಆ ಗ್ಸಾನಾಡೂ ರೆಸಾರ್ಟಲ್ಲೇ ಇದರ ಮೀಟಿಂಗ್ ಆಗಿರುವುದು!- ತೀರ ಉತ್ಪ್ರೇಕ್ಷೆ…. ಇವನ್ನೆಲ್ಲ ನಿಜ ಎಂದು ಸಾಬೀತು ಪಡಿಸಲು ಬೇಕಾದ ಒಂದೇ ಒಂದು ಆಧಾರವೂ ಈಕೆಯ ಬಳಿ ಇಲ್ಲದೇ ಇರುವುದು ಅವನ ಅಪನಂಬಿಕೆಯನ್ನು ದ್ವಿಗುಣಗೊಳಿಸಿತ್ತು… “ಜಾಸ್ತಿ ಗಾಂಜಾ ಸೇದೋ ನನ್ಗೇ ಇಂಥಾ ಐಡೀಯಾ ಬರಲ್ಲ… ನೀನ್ ಎಂಥಾ ಮಾರ್ಯಾಯ್ತೀ…. ಯಾವ ಡ್ರಗ್ಗ್ ಟ್ರೈ ಮಾಡಿದ್ಯಾ….! ಈ ಥರ ಅಸಮ್ಶನ್ನ್ ಮಾಡಿದ್ಯಯಲ್ಲ” ಎಂದು ನಕ್ಕ.,,, ಕಪ್ಪೆಚಿಪ್ಪು ಚುಚುತ್ತಾ ಇದ್ದ ಒದ್ದೆ ಉಪ್ಪು ಮರಳಿನ ಹಾಸಿಗೆಯಲ್ಲಿ ಬಿದ್ದುಕೊಂಡು ಬೆಳ್ಳಿ ಬೆಳಕಲ್ಲಿ ಈ ಕತ್ತಲ ಸಮುದ್ರವನ್ನು ದಹಿಸುತ್ತಾ ಇದ್ದ ಚಂದ್ರನನ್ನೇ ದುರುಗುಟ್ಟಿ ನೋಡುತ್ತಾ ಇದ್ದ ಸುಝೇನ್ ನಿರ್ವಿಕಾರವಾದ ಮೌನದಲ್ಲಿ ಲೀನವಾಗಿದ್ದಳು.

ಮರಳಿನ ಹಾಸಿಗೆಯಿಂದ  ಎದ್ದು ಕೊನೆಗೆ ತೊಡೆಗೆ ಅಂಟಿ ಕೊಂಡಿದ್ದ ಮರಳಿನ ಕಣಗಳನ್ನೆಲ್ಲಾ ಕೊಡವಿ ಪೈಜಾಮ ಹಾಕಿಕೊಳ್ಳುತ್ತಾ ಆಶ್ ಹೇಳಿದ್ದ “ನೋಡಮ್ಮ ಇವರೆಲ್ಲ ಪವರ್ ಫುಲ್ಲ್ ಜನ! ನೀನ್ ಎಂಟ್ರಿ ಕೊಟ್ಟಿರೋದು ಡೀಪ್ ವೆಬ್ಬ್ ಸೈಟಿಗೆ, ವಿಥೌಟ್ ವಿಪಿಎನ್; ಸೈಬರ್ ಸೆಲ್ಲ್ ಅವ್ರು ಈಸಿಯಾಗಿ ನಿನ್ನ ಇಂಟರೆನೆಟ್ ಪ್ರೊಟೋಕಾಲ್ ಅಡ್ರೆಸ್ನ ಟ್ರೇಸ್ ಮಾಡಿ ನೀನ್ ಚೈಲ್ಡ್ ಪಾರ್ನ್ ವ್ಯೂ ಮಾಡಿದ್ಯಾ ಅಂತ ಕೇಸ್ ಜಡಿತಾರೆ… ಆವಾಗ ನೀನ್ ಏನ್ ಜಶ್ಟಿವಿಕೇಷನ್ ಕೊಡ್ತಿಯಾ? ಪ್ಲಸ್ ನೀನ್ ನಿಜಕ್ಕೂ ಆ ಸೂರ್ಯನಾರಾಯಣ ಚಿಕ್ಕ ಹುಡುಗರ ಜತೆ ಇರೋ ಪಿಕ್ಚರ್ ನೋಡಿದ್ದೂ ನಿಜಾನೇ ಆಗಿದ್ರೂ  ಮೇ ಬಿ ಅದನ್ನ ಮಾರ್ಫ್ ಮಾಡಿರ್ಬೇಕು ಯಾರೋ….! ಯಸ್ ಈ ಡೀಪ್ ಫ಼ೇಕ್ ವೀಡಿಯೋಗಳ ಕಾಲ ಇದು… ಯಾವ ಪಿಕ್ಶ್ಚರ್ರ್ನ ಬೇಕಾದ್ರೂ ಹೇಗೆಲ್ಲ ಎಡಿಟ್ಟ್ ಮಾಡಿ ಅಪ್ಲೋಡ್ ಮಾಡಕ್ಕೆ ಆಗುತ್ತೆ. ಮತ್ತೆ ಆ ಡೀಪ್ ವೆಬ್ಬಲ್ಲಿ ಈ ಸೆಕ್ಶುಯಲ್ಲ್ ಪಿಕ್ಸ್ಚರ್ಸ್ ವೀಡಿಯೋ ಎಲ್ಲ ತನ್ನಷ್ಟಕ್ಕೆ ತಾನೇ ಪ್ಲೇ ಆಗ್ತಾ ಇರುತ್ತೆ… ನೀನ್ ಎಂಟ್ರಿ ಆಗ್ತಾ ಇದ್ದ ಹಾಗೇ… ಸೋ ಮೇಬಿ ನರ್ವಸ್ಸ್ ಆಗಿ ನೀನು ಅಂಥ ಕ್ಲಿಪ್ಸ್ ಮೇಲೆಲ್ಲ ಕಣ್ಣಾಡಿಸಿ… ಈ ಸೂರ್ಯನಾರಾಯಣನೇ ಅಲ್ಲಿದ್ದಾನೆ ಅಂತ ಅಂದ್ಕೊಂಡಿರ್ಬಹುದು… ಇನ್ನು  ಈ ವಲಹಲ್ಲಾ ಪಾರ್ಟಿ… ಪರ್ವತ ನೇನಿ… ಸೂರ್ಯ ನಾರಾಯಣ ಒಟ್ಟಾಗಿದ್ದಾರೆ…. ಅನ್ನೋದೆಲ್ಲ ನನ್ಗೇನೋ ಕಾನ್ಸ್ಪಿರಸಿ ಥಿಯರಿ ಥರಾ ಕೇಳಿಸ್ತಾ ಇದೇ… ನನ್ಗೆ ಗೊತ್ತಿರೋ ಮಟ್ಟಿಗೆ ಈ ಸೂರಿ ಒಬ್ಬ ಒಳ್ಳೆ ಮನುಷ್ಯ… ನಿಜಕ್ಕೂ ದರ್ದಿದೆ ಅವ್ನ ಕಣ್ಣಲ್ಲಿ ಏನೋ ಮಾಡ್ಬೇಕು ಅಂತ… ಈಗ ಇವ್ನು ಯಾವನೋ ಪಟ್ಟಾಭಿ ಅನ್ನೋವ್ನು ನಿನ್ನ ಪಾನ್ ಥರ ಉಪಯೋಗಿಸ್ಕೊಂಡು ಈ ಥರ ಫ಼ಾಲ್ಸ್ ಪ್ರಪಗಾಂಡ ಕ್ರಿಯೇಟ್ ಮಾಡ್ತಾ ಇರ್ಬೇಕು ಸೂರ್ಯನಾರಾಯಣನ ಎಲೆಕ್ಷನ್ ಕ್ಯಾಂಪೇನ್ನ ಹಾಳಾಗ್ಲೀ ಅಂತ… ನೀನ್ ಸೋಶಿಯಲ್ಲ್ ಮೀಡಿಯಾದಲ್ಲಿ ಫೇಮಸ್ ಬೇರೆ ಜನ ನಿನ್ನ ಪ್ರೊಫ಼ೈಲ್ಲನ ಫ಼ಾಲೋ ಮಾಡ್ತಾರೆ  ಬೇರೆ… ಬಟ್ ಬಿ ವೆರಿ ಕೇರ್ಫ಼ುಲ್ಲ್ ಏನೇನೋ ಅಸಮ್ಷನ್ನ್ ಇಟ್ಕೊಂಡು ಅಲಿಗೇಷನ್ನ್ ಮಾಡಕ್ಕೆ ಹೋಗ್ಬೇಡ… ಅಸಲಿಗೆ ಏನ್ ಪ್ರೂಫ್ ಇದೆ ನಿನ್ನ ಹತ್ತಿರ…? ಆ ಪೆನ್ ಡ್ರೈವ್ ಸಿಕ್ಕಿದ್ದು ನಿನ್ಗೆ ಇಲ್ಲೀಗಲ್ಲ್ ಮೀನ್ಸ್ ಇಂದ… ಅದು ನಿಜಕ್ಕೂ ಸಾಧನ ಅಕೌಂಟ್ಸ್ ಸ್ಟೇಟ್ಮೆಂಟ್ ಅಂತ ಹೇಗೆ ಗೊತ್ತು ನಿನ್ಗೆ…? ಅದೂ ಫ಼ೇಕ್ ಆಗಿದ್ರೆ….?! ನಾನ್ ನಿನ್ಗೆ ಕ್ರೈಮ್ ಬ್ರಾಂಚಿಂದ ಸೈಬರ್ ಸೆಲ್ಲಿಂದ ಕೊಟ್ಟಿರೋ ಇನ್ಫ಼ೋ ಎಲ್ಲ ಇಲ್ಲೀಗಲ್ಲ್ ಮೀನ್ಸಿಂದ ಅಕ್ಯುಮುಲೇಟ್ ಆಗಿರೋದು… ಯಾವ ಕಾಪ್ ಕೂಡ ನಾಳೆ ಕೋರ್ಟ್ ಅಲ್ಲಿ ಬಂದು ಆ ಎವಿಡೆನ್ಸ್ ನಮ್ಮ ಆಫ಼ೀಸಿಂದ ಲೀಕ್ ಆಗಿದ್ದು ಅಂತ ಒಪ್ಪಲ್ಲ… ಅವ್ರ ಬುಡಕ್ಕೆ ಬರುತ್ತೆ ಅಂತ ಬೇಕಾದ್ರೆ ಆ ನಿಜವಾದ ರೆಕಾರ್ಡ್ಸ್ನೆಲ್ಲ ಅವ್ರೇ ಡೆಶ್ಟ್ರಾಯ್ ಮಾಡಿ ಬಿಡ್ತಾರೆ…. ಫ಼ಶ್ಟ್ ಆಫ಼್ ಆಲ್ ನೀನ್ ಬೊಟ್ಟು ಮಾಡ್ತಾ ಇರೋ ಈ ಜನ  ಕ್ರಿಮಿನಲ್ಸ್ ಅನ್ನೋದಕ್ಕೆ ಒಂದ್ ಹಾರ್ಡ್ ಎವಿಡೆನ್ಸ್ ಇಲ್ಲ ನಿನ್ನ ಹತ್ತಿರ…. ಇನ್ನು ನೀನ್ ಈ ಮ್ಯಾಟರನ ಲೀಕ್ ಮಾಡಿದ್ರೆ ಇದೇ ಸೋಶಿಯಲ್ಲ್ ಮೀಡಿಯದ ಜನ ನಿನ್ನ ಡೆಶ್ಟ್ರಾಯ್ ಮಾಡ್ ಬಿಡ್ತಾರೆ…. ನೀನ್ ಹುಚ್ಚಿ …. ಅಂತ ಟ್ರೋಲ್ ಮಾಡ್ತಾರೆ… ಯಾರಿಗೆ ಗೊತ್ತು ನೀನ್ ಗಾಂಜಾ ಸೇದಿರೋ ಯಾವ್ದೋ ಪಿಕ್ಕ್ ಹುಡ್ಕೀ ನಿನ್ಗೆ ಬುದ್ಧಿ ನೆಟ್ಟಗಿಲ್ಲ ಅಂತಾರೆ…. ಆಗ ಯಾರ್ ಬರ್ತಾರೆ ನಿನ್ನ ಡಿಫ಼ೆಂಡ್ ಮಾಡಕ್ಕೇ? ಡೋಂಟ್ ಕೌಂಟ್ ಆನ್ ಮೀ…. ನಾನೊಬ್ಬ ಡ್ರಗ್ಗ್ ಪೆಡ್ಲರ್… ಅಂಡ್ ಪಬ್ಲಿಕ್ ಫ಼್ಲಾಶರ್…. ನನ್ನ ಮಾತೆ ಯಾರ್ ಕೇಳ್ತಾರೆ…ಸೋ ನಿನ್ನ ಲೈಫ಼್ ನಿನ್ನ್ ಕೈಯಲ್ಲಿದೆ….. “

ಹೀಗೆ ಆಶ್ ಅಂತ ಮುಕ್ತ ಮನಸ್ಸಿನ ವ್ಯಕ್ತಿಯೇ ಇವಳ ಊಹೆಯ ನೋಡಿ ನಕ್ಕ ಮೇಲೆ ಆಕೆಗೆ ತನಗಾದ ಅನುಭವದ ಮೇಲೆ ಅನುಮಾನ ಶುರುವಾಯಿತು ಸುಝೇನಳಿಗೆ. ಕಣ್ಣೆದುರು ಕಂಡದ್ದು ಉರಿದು ಹೋದ ಮೇಲೆ ಬಾಯಿ ಮಾತಲ್ಲಿ ತನಗಾದ ಸತ್ಯ ದರುಶನವನ್ನು ಹಂಚಿಕೊಂಡಾಗ ಹೀಗೆ ಅದಕ್ಕೆ ಪುರಾವೆಗಳನ್ನು ಕೇಳುವ ಸಮಾಜದಲ್ಲಿ ತಾನು ಏನನ್ನೂ ಸಾಬೀತು ಮಾಡಲು ಸಾಧ್ಯ ಎಂಬ ಹತಾಶೆಯಲ್ಲಿ ಪಟ್ಟಾಭಿ ರಾಮ ಅನ್ನೋ ಹೆಸರಿನ ವ್ಯಕ್ತಿಯೇ ತನ್ನ ಭ್ರಾಂತ ನರಗಳು ಕಟ್ಟಿದ ಕಲ್ಪನಾ ವಿರೂಪ ಎಂದು ನಂಬಲು ಹವಣಿಸುತ್ತಾ ಇದ್ದಾಗ ಮತ್ತೆ ಅವನಿಂದ ಕರೆ ಬಂತು. ಈ ಬಾರಿ ತುಸು ಜಾಸ್ತಿ ಹೊತ್ತು ಮಾತನಾಡಿದ ಈ ಕಂಚಿನ ಕಂಪನದ ದನಿಯಿದ್ದ ಪಟ್ಟಾಭಿ. ಆತನ ಮಾತಿನ ಸಾರಾಂಶವಿಷ್ಟು. ಈ ಪಟ್ಟಾಭಿ  ಗುಪ್ತವಾಗಿ ತಮಗೆ ಆಗದವರನ್ನು ನಿರ್ನಾಮ ಮಾಡುವ ರೂಪುರೇಷೆ ಇಟ್ಟುಕೊಂಡು  ನಿರ್ಮಿಸಿದ್ದ ಅಧ್ಯಕ್ಷರ ಖಾಸಗೀ ಸೇನೆಯ ಭಾಗವಾಗಿದ್ದವ. ಪಟ್ಟಾಭಿಯಂತಹ ಒಂದಷ್ಟು ಬಾಡಿಗೆ ಕೊಲೆಗಾರರ ಗುಂಪನ್ನು ಸೃಷ್ಟಿಸಿ ಹಿಟ್ಟ್ ಲಿಶ್ಟನ್ನು ತಯ್ಯಾರಿಸಿ ಅಧ್ಯಕ್ಷರ ಆಳ್ವಿಕೆಗೆ ಸರಿ ಹೋಗದಂತಹ ವಿಶೇಷ ವ್ಯಕ್ತಿಗಳನ್ನು ಯಾವ ಕಡಕ್ಕ್ ಸಾಕ್ಷಿ ಇಲ್ಲದಂತೆ ಮುಗಿಸಿ ಬಿಡುವುದು ಈ ಗುಂಪಿನ ಉದ್ದೇಶ. ಉದಾಹರಣೆಗೆ ಹೋದ ವರ್ಷ ಕವಿ ಸಾಹಿತಿ ಶಶಿಧರ್ ಬನವಾಸಿ ಹೀಗೆ  ಹೃದಯ ಸ್ತಂಭನವಾಗಿ ಸತ್ತ ಘಟನೆಯ ಹಿಂದೆ ಇದೇ ಪಟ್ಟಾಭಿ ಗುಂಪಿನ ಕೈ ಚಳಕವಿತ್ತಂತೆ. ಹಾಗೇ ಲಾಯರ್ ಜಂಬಗಿ ಲಾರಿ ಆಕ್ಸಿಡೆಂಟಲ್ಲಿ ಸತ್ತದ್ದು… ಮೊನ್ನೆ ಆಡಿಟರ್ ಕುಲಕರ್ಣಿಗೆ ಹಾರ್ಟ್ ಅಟ್ಯಾಕ್ ಆಗಿದ್ದು ಇದೆಲ್ಲ ಈ ಬಳಗದ  ಜನರ ಕಿತಾಪತಿಯಂತೆ. ಈ ವಿಷಯ ತುಂಬಾ ಕಾಂಪ್ಲಿಕೇಟ್ ಆಗಿದ್ದು ಮೊನ್ನೆ  ಕಾಮರೇಡ್ ಪಾರ್ಟಿಯ ಆಫ಼್ಹೀಸಿನ ಮೇಲೆ ಶೂಟ್ ಔಟ್ ಆದಾಗ.  ಸಮಸ್ಯೆ ಶುರು ಆಗಿದ್ದೇ ಅಲ್ಲಿದ್ದ ಸಾಧನ ಕುಸುಮ್ಗೆ ಎರಡು ಮುಖ್ಯ ರಾಜರಹಸ್ಯಗಳು ಹಿಂದೆಯೇ ಗೊತ್ತಾಗಿದ್ದರಿಂದ -ಸೂರ್ಯನಾರಾಯಣ ಒಬ್ಬ ಗುಪ್ತ ಶಿಶುಕಾಮಿ ಹಾಗೂ ಮನೋಜ್ ಪರ್ವತನೇನಿ ದುಡ್ಡಿನಲ್ಲೇ ಈ ಸಂಭಾವಿತರ ವಿಕೃಟ ಲಂಪಟ ಪಾರ್ಟಿಗಳು ನಡೆಯುತ್ತಿದ್ದ ಗ್ಸಾನಾಡು ರೆಸಾರ್ಟಿಗೆ ಈತ ಖಾಯಂ ಅತಿಥಿ. ಹಾಗೂ ಇಲ್ಲೇ ಪರ್ವತನೇನಿ ಮಧ್ಯವಸ್ತಿಕೆಯಲ್ಲಿ ಈ Walhalla Tora Figuresನ ಮುಖ್ಯಸ್ಥನ ಜತೆ ಅಪರೂಪಕೊಮ್ಮೆ ಮೀಟೀಂಗ್ಗಳು ಆಗುತ್ತಾ ಇರುತ್ತಿರುವುದು.- ಈ ವಿಷಯವನ್ನೆಲ್ಲ ಆ ರೆಸಾರ್ಟ್ನ ಮ್ಯಾನೇಜರಿಂದ ಪತ್ತೆ ಹಚ್ಚಿ…   ಕದ್ದು ಕೆಲ ಫೋಟೋಗಳನ್ನೂ ತೆಗೆಸಿದ್ದ ಸಾಧನ ಈ ಕಾಮ್ರೇಡ್ ಪಾರ್ಟಿ ಸೂರಿಯನ್ನ  ಬ್ಲಾಕ್ ಮೇಲ್ ಮಾಡುತ್ತಾ ಇದ್ದಳು. ಹಾಗೂ ಹೀಗೂ ಅಲ್ವಸ್ವಲ್ಪ ಹಣವನ್ನು ಕೊಡುತ್ತಾ ಹೈರಾಣಾಗಿದ್ದ ಸೂರ್ಯನಾರಾಯಣ ಖುದ್ದು ಅಧ್ಯಕ್ಷರ ಮೊರೆ ಹೋಗಿದ್ದ…. ಈ ಮಾತು ಹೇಳಿದಾಗ ಅವಕ್ಕಾದಳು ನಮ್ಮ ಸುಝೇನ್; ಅಧ್ಯಕ್ಷರು ಹಾಗೂ ಲಿಬರಲ್ ಪಾರ್ಟಿ ಎತ್ತಣದಿಂದೆತ್ತಣ ಸಂಭಧವಯ್ಯ…!

ಅದಕ್ಕೂ ಸಮಜಾಯಿಷಿ ಕೊಟ್ಟ ಪಟ್ಟಾಭಿ. ಆ ಸಮಜಾಯಿಷಿ ಕೇಳಿ ಸುಝೇನ್ ಮೂರ್ಚೆ ತಪ್ಪದೇ ಇದ್ದದೇ ದೊಡ್ಡ ಅಚ್ಚರಿ…. “ನೀನ್ ಅಂದ್ಕೊಂಡ ಹಾಗೇ ಈ ಸೂರಿ ಏನ್ ಲಿಬರಲ್ಲ್ ದೇವತೆ ಅಲ್ಲ… ಆತ ಅಧ್ಯಕ್ಷರ ಬ್ರೈನ್ ಚೈಲ್ಡ್…. ಮೊದ್ಲಿಂದ ಅವ್ನ ಏಳ್ಗೆಯನ್ನ ನೋಡಿ ಮೆಚ್ಚಿ ಅಧ್ಯಕ್ಷರೇ ಅವ್ನ ಎಲ್ಲ ಚಟುವಟಿಕೆಗಳಿಗೆ ಫ಼ಂಡ್ ಮಾಡ್ತಾ ಇದ್ರು…. ಈಗ ಅವ್ರ ರೂಲಿಂಗ್ ಪಾರ್ಟಿಯಲ್ಲಿ ಯಾರಲ್ಲೂ ಬೆಂಕಿ ಇಲ್ಲ… ಅದಕ್ಕೆ ಹೀಗೆ ಯಂಗ್ ಬ್ಲಡ್ನ ಲಿಬರಲ್ಲ್ ಕಮ್ ಸೋಶಿಯಲಿಶ್ಟ್ನ ಕ್ರಿಯೇಟ್ ಮಾಡಿ…ಪಾಪ್ಯುಲರ್ ಮಾಡಿ ನೆಕ್ಶ್ಟ್ ಎಲೆಕ್ಷನಲ್ಲಿ ಇವ್ರೆಲ್ಲ ಗೆಲ್ತಾ ಇದ್ದ ಹಾಗೇ ಈ ಮುಷ್ಟಿ ಕಾಮ್ರೇಡ್ ಪಾರ್ಟಿ  ಅಧ್ಯಕ್ಷರ ಪಕ್ಷದ ಹೊಟ್ಟೆಯಲ್ಲೇ ಜೀರ್ಣ ಆಗುತ್ತೆ. ಅಂದ್ರೇ ಕಾಮ್ರೇಡ್ ಪಾರ್ಟಿ ಅಧ್ಯಕ್ಷರ ಪಕ್ಷದ ಭಾಗ ಆಗಿ ಬಿಡುತ್ತೆ. ಈಗಿರೋ ಎಷ್ಟೋ ವೇಶ್ಟ್ಬಾಡೀ ರೂಲಿಂಗ್ ಪಾರ್ಟಿ ಮೆಂಬರ್ಸ್ ಮಾಯ ಆಗ್ತಾರೆ ಈ ಸೂರ್ಯನಾರಾಯಣನೇ ಮಂತ್ರಿಯಾಗ್ತಾನೆ…. ಹೀಗೆಲ್ಲ ಇವರ ಮಾಶ್ಟರ ಪ್ಲಾನ್ ಇದ್ದಾಗ  ಈ ಟೈಮಲ್ಲೇ   ಸಾಧನ ಬ್ಲಾಕ್ಮೇಲ್ ಎಪಿಸೋಡ್ ಶುರು ಆಗಿದ್ದರಿಂದ ಫುಲ್ ನರ್ವಸ್ ಆದ ನಮ್ಮ ಸೂರಿ ಖುದ್ದು ಅಧ್ಯಕ್ಷರಿಗೆ ಕಾಲ್ ಮಾಡ್ತಾನೆ….” ಎನ್ನುತ್ತಾ ಧೀರ್ಘ ಉಸಿರೆಳೆದುಕೊಂಡ.

ಮತ್ತೆ ನಡೆದದ್ದೆಲ್ಲ ಇತಿಹಾಸ. ತಮ್ಮನ್ನು ತಾವು ಸರ್ಜನ್ಸ್ ಎಂದೇ ಕರೆದುಕೊಳ್ಳುತ್ತಿದ್ದ ಈ ಖಾಸಗೀ ಸೇನೆಯವರು, ಸೂರ್ಯನಾರಯಣನ ರಾಡಿಯನ್ನು ಶುಚಿಗೊಳಿಸಲು ಸಾಧನಳನ್ನು ಮುಂಜಾನೆಯ ಹೊತ್ತಿಗೆ ಪಾರ್ಟಿ ಆಫ಼ೀಸಲ್ಲೇ ಹೊಡೆದು ಹಾಕುತ್ತಾರೆ. ಅದೊಂದು ಟೆರರಿಶ್ಟ್ ಆಕ್ಟ್ ಎಂದು ಸಾಬೀತು ಪಡಿಸಲು ಇನ್ನಿಬ್ಬರು ಅಮಾಯಕ ಕಾರ್ಯಕರ್ತರ ಕೊಲೆಯೂ ಆಗುತ್ತದೆ. ಹಾಗೇ ಅಧ್ಯಕ್ಷರ ಖಾಸಗೀ ಖಜಾನೆ ಬಿಲಿಯನ್ನ್ ಮಲ್ಯನಿಂದ ದುಡ್ಡು ಹೊಡೆದ Walhalla Tora Figures ಸಂಘಟನೆ ಈ ಧಾಳಿ ತನ್ನ ಕಾಡಿನದ್ದು ಎಂದು ಸಾರ್ವಜನಿಕವಾಗಿ ಘೋಷಿಸುತ್ತದೆ. ಒಟ್ಟಿನಲ್ಲಿ ಮುಷ್ಟಿ ಕಾಮ್ರೇಡ್ ಪಾರ್ಟಿ ಆಯಸ್ಸು ಇನ್ನೂ ಗಟ್ಟಿಯಾಗುತ್ತದೆ.

“ವೈಟ್… ನೀನ್ ಹೇಳೋದ್….ಅಂದ್ರೇ  ಈ…ಈ WTF ಆರ್ಗನೈಸೇಷನ್ನ್ ಅನ್ನೋದೆ ಸುಳ್ಳಾ… ಅದನ್ನ ಕ್ರಿಯೇಟ್ ಮಾಡಿದ್ದೇ ಈ ಕ್ಯಾಪಿಟಲಿಶ್ಟ್  ಪರ್ವತನೇನಿನಾ? ಮತ್ತೆ ಆ ಹಣ ಯಾಕೆ ಸಾಧನ ಅಕೌಂಟಿಗೆ ಈ ವಲ್ಹಲ್ಲ ಜನ ಯಕೆ ಹಾಕಿದ್ರು….?

“ನೋ ನೋ ಇಟ್ಸ್ ವೆರಿ ರಿಯಲ್ಲ್…ಬಟ್ಟ್ ಈ ಸಂಧರ್ಭದಲ್ಲಿ ಅದಕ್ಕೆ ಬೇಕಾದ ಫ಼ಂಡ್ ಒದಗಿಸ್ತಾ ಇರೋರು ನಮ್ಮದೇ  ಮನೋಜ ಪರ್ವತನೇನಿ ಆಂಡ್ ಈ ಮನುಷ್ಯ ಸೂರ್ಯನಾರಾಯಣಂಗೆ ಕ್ಲೋಸ್ ಅಂತ ಎಲ್ಲೂ ಕ್ಲೂ ಕೊಡ್ದೆ ಬದುಕ್ತಾ ಇದ್ದಾನೆ…. ಬಟ್ಟ್ ಆತ ಮತ್ತೆ ಸೂರಿ ಇಬ್ರೂ ಕನೆಕ್ಟಾಗಿದ್ದಾರೆ…. ಸೋ ಇದೇ ಪರ್ವತನೇನಿ ಕೊಟ್ಟ್ ಲಾಶ್ಟ್ ಆಫ಼್ಹರ್ ಆ ೫೫ ಲಕ್ಷ…. ಯೆಟ್ಟ್ ಸಾಧನಳ ಡಿಮ್ಯಾಂಡ್ಸು ತುಂಬಾ ಇತ್ತು… ಸೆಂಟ್ರಲ್ ಕ್ಯಾಬಿನೇಟಲ್ಲಿ ಸೀಟ್ ಕೇಳಿದ್ಲು…. ಇನ್ ಅ ವೇ ಶಿ ಹ್ಯಾಡ್ ದ್ಯಾಟ್ ಕಮ್ಮಿಂಗ್ಗ್”

ಒಕೆ…. ಇದೆಲ್ಲ ಸರಿ…ಇಂತಹ ರಿಸರ್ವ್ ಆರ್ಮಿಯ ಮುಖ್ಯ ತಲೆ… ಈ ಪಟ್ಟಾಭಿ…(ಅಥವಾ ಅವನ ನಿಜ ಹೆಸರು ಏನಿದೆಯೋ….) ನನ್ನ ಹತ್ತಿರ ಯಾಕೆ ಈ ಎಲ್ಲ ರಾಜರಹಸ್ಯಗಳನ್ನು ನಿವೇದಿಸುತ್ತಾ ಇದ್ದಾನೆ ಎಂದು ಕೇಳಿದಾಗ ಪಟ್ಟಾಭಿ ನೇರವಾಗಿ ಹೇಳಿದ “ನೀನು ಆಸಕ್ತಿ ತೋರಿಸ್ಧೆ ನನ್ನ ಕೇಸಲ್ಲಿ…. ಆಂಡ್ ಮೊದ್ಲಿಂದ ನಿನ್ನ ಬ್ಲಾಗ್ ನಿನ್ನ ಸೋಶೀಯಲ್ ಅಕೌಂಟ್ಸ್…ನಿನ್ನ ಆರ್ಟಿಕಲ್ಲ್ ಇವೆಲ್ಲದರ ಮೇಲೆ ಕಣ್ಣಿಟ್ಟಿದ್ದೆ ನಾನು… ಈ ಪಾರ್ಟಿಯ ಎಲ್ಲರ ಫೋನ್ ಎಲ್ಲರ ಮೈಲ್ ಆಂಡ್ ಕಂಪ್ಯೂಟರ್ಸ್ ನಮ್ಮ ಕಣ್ಣ ಕೆಳಗಿದೆ…. ನೀನ್ ಯಾವ ಮೆಡಿಕಲ್ಲ್ ಸ್ಟೋರಲ್ಲಿ ನಿನ್ನ ಕ್ರಾಮ್ಸ್ ನೋವಿಗೆ ಯಾವ ಮಾತ್ರೆ ತಕ್ಕೋತೀಯ…. ನಿನ್ನ ರೀಸೆಂಟ್ ಪೇ ಟಿಮ್ ಅಕೌಂಟಿಂದ ನೀನ್ ಕಾಕ ಅಂಗಡಿಯಲ್ಲಿ ಯಾವ್ ಬ್ರಾಂಡಿನ ಸಿಗರೇಟ್ಗೆ ಪೇ ಮೆಂಟ್ ಮಾಡಿದ್ದೆ…. ನಿನ್ನ ಮೈಲ್ ಇಂದ ಡಿಲೀಟ್ ಆದ ಯಾವೆಲ್ಲ ಫ಼ೈಲ್ಸ್ ಟ್ರಾಶ್ಸ್ ಫ಼ೋಲ್ಡರಲ್ಲಿದೆ…. ಹಾಗೇ ನೀನ್ ಮೊನ್ನೆ ಯಾವ ಮಾನಿಟರ್ ಆರ್ಡರ್ ಮಾಡ್ದೇ… ಅಮೇಜನ್ ಕಿಂಡಲ್ಲ್ ಅಲ್ಲಿ ಇರೋ ನೀನ್ ಓದದೇ ಇಟ್ಟಿರುವ ಇ- ಬುಕ್ಸ್ ಕಲೆಕ್ಷನ್ನ್…  ಇದೆಲ್ಲ ನಮ್ಗೆ ನಿನ್ನಕ್ಕಿಂತ ಚೆನ್ನಾಗಿ ಗೊತ್ತು…. ಸೋ ನಿನ್ನ ಪಾಶ್ಟ್ ಆಕ್ಟಿವಿಟ್ ಗೆಸ್ ಮಾಡ್ತಾ ಮಾಡ್ತಾ ನಿನ್ನ ಫ಼್ಯೂಚರ್ ವ್ಯಕ್ತಿತ್ವನ ಎಗ್ಸಾಟ್ಟ್ ಆಗಿ ಪ್ರೆಡಿಕ್ಟ್ ಮಾಡಕ್ಕೆ ಆಗುತ್ತೆ ನಮಗೆ.” ಆದರೆ ಹೀಗೆ ಬೇಹುಗಾರಿಕೆ ಮಾಡುತ್ತಲೇ ಈ ಮನುಷ್ಯನಿಗೆ ಈ ಹುಡುಗಿಯ ಭ್ರಮೆಗಳು, ಕನಸುಗಳು, ಊಹೆಗಳು ಅನಿಸಿಕೆಗಳು ತೀರ ಹಿಡಿಸಿದ್ದವು. ಅದೇ ಹೊತ್ತಿಗೆ ಸರಿಯಾಗಿ ಈ ಖಾಸಗೀ ಕೊಲೆಗಾರರು ಒಬ್ಬೊಬ್ಬರೇ ನಿಗೂಢವಾಗಿ ಕೊಲೆಯಾಗಿಯೋ ಅಥವಾ ನಾಪತ್ತೆಯಾಗಿಯೋ ಪರ್ಯಾವಸನಗೊಳ್ಳುತ್ತಾ ಇದ್ದಾಗ ಪಟ್ಟಾಭಿಗೆ ತನ್ನ ಕುತ್ತಿಗೆಗೆ ಸಂಚಕಾರವಿದೆ ಎನಿಸಿ ಈ ಅಸೈನ್ಮೆಂಟ್ ಮುಗಿಯುತ್ತಾ ಇದ್ದಂತೆ ಶಾಶ್ವತವಾಗಿ ಅಂಡರ್ಗೌಂಡ್ ಆಗಿ ಹೋಗಿದ್ದ. ಮತ್ತೆ ಅವನನ್ನು ಎಬ್ಬಿಸಿದ್ದು ಈ ಸುಝೇನ್ಳ ಕುತೂಹಲವೇ…. ಅದೇ ಸಮಯಕ್ಕೆ ಸರಿಯಾಗಿ ತನ್ನ ಇನ್ನೊಬ್ಬ ಸಹಚರ ರಶೀದ್ ಲತೀಫ್ ಆಲಿಯಾಸ್ ಅಬ್ದುಲ್ಲ್ ಅಹದ್ನನ್ನು ಪೋಲಿಸರು ಹೊಡೆದು ಹಾಕಿದಾಗ ಇದೇ ರೀತಿ ತಾನು ಕೊನೆಯಾಗಬಾರದೆಂದು ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಈ ಯಂಗ್ ಲಿಬರಲ್ಲ್ ಸುಝೇನ್ಳ ಬಳಿ ಎಲ್ಲವನ್ನು ನಿವೇದಿಸಿದ್ದ. “ಅಧ್ಯಕ್ಷರು ಯಾರನ್ನೂ ನಂಬಲ್ಲ… ನಮ್ಮಂತವರಿಗೆ ದುಡ್ಡ್ ಸಿಗುತ್ತೆ ಕೇಳದಷ್ಟೂ…ಆದ್ರೆ ಅಸ್ತಿತ್ವ ಅನ್ನೋದೆ ಇಲ್ಲ… ದೆವ್ವಗಳ ಹಾಗೇ ಬದುಕ್ತೀವಿ….ಸತ್ತ ಮೇಲೆ ಮನುಷ್ಯ ದೆವ್ವ ಆಗೋದು ಆದ್ರೆ ನಾವು ಈಗಾಗ್ಲೇ ಪಿಶಾಚಿಗಳು….  ಹುಟ್ಟೇ ಇಲ್ದೇ ಇರೋ ಪಿಶಾಚಿಗಳ್ನು ಹೊಡೆಯಕ್ಕೆ ನಮ್ಮ ಅಧ್ಯಕ್ಷರ ಮಂದಿಗೇನ್ ಕಷ್ಟ ಇಲ್ಲ… ಎಲ್ಲ ಸಾಕ್ಷಿಗಳನ್ನ ಅಳಿಸಿ ಹಾಕಿ ಸ್ವಚ್ಛ ದೇಶ ನಿರ್ಮಿಸೋದೇ ಅವ್ರ ಗುರಿ…ಸೋ ನಮ್ಮಂಥವರನ್ನು ಆಗಾಗ ನಿವಾರಿಸ್ತ ಇರ್ತಾರೆ….” ಎಂದು ನಿಟ್ಟಿಸಿರು ಬಿಟ್ಟ…  ಪೋನ್ ಇಡುವ ಮುನ್ನ ಈತ ಸಂಪೂರ್ಣವಾಗಿ ಕಣ್ಮರೆಯಾಗುವ  ಮುಂಚೆ ತನ್ನಲ್ಲಿದ್ದ ಹಾರ್ಡ್ ಎವಿಡೆನ್ಸ್ ಅನ್ನೆಲ್ಲ ಈ ಹುಡುಗಿಗೆ ಕೊಟ್ಟ ಅಂತರ್ಧಾನವಾಗುವ ಬಗ್ಗೆ ಯೋಚಿಸಿದ್ದ. ಹಾಗೇ ಈ ಪ್ರಥಮ ಮತ್ತು ಕೊನೆಯ ಭೇಟಿಗೆ ಸುಝೇಳನ್ನು ತನ್ನ ಅಡಗುದಾಣಕ್ಕೆ ಕರೆದೂ ಇದ್ದ.

ಇದಾಗಿ ಕೆಲ ದಿನಗಳ ಕಾಲ ಸುಝೇನ್ ಕತ್ತಲ ಸಾಮ್ರಾಜ್ಯದಲ್ಲೇ ಕಳೆದುಹೋಗಿದ್ದಳು. ಬೆಳೆಕೆಂದರೆ ಆಕೆಗೆ ಭಯ ಮೂಡುತ್ತಾ ಇತ್ತು. ಮುಂದಿನ ದಿನವೇ ತನ್ನನ್ನು ಒಂದು ನಿರ್ಧಿಷ್ಟ ಜಾಗಕ್ಕೆ ಬಂದು ಭೇಟಿಯಾಗುವಂತೆ ಈ ಆಗುಂತಕ ಆಗ್ರಹಿಸಿದ್ದರೂ ಸುಝೇನ್ ಮಂಚ ಬಿಟ್ಟು ಇಳಿಯುವ ಧೈರ್ಯ ಮಾಡಿರಲಿಲ್ಲ. ಮನೆ ಕೆಲಸದವಳನ್ನೂ ದೂರ ಇಟ್ಟು, ತನ್ನ ತಾಯಿಯನ್ನು ನೋಡಲು ಮಡಿಕೇರಿಗೆ ಕಡೆ ಹೋಗುತ್ತೇನೆ ಎಂದು ಗೆಳೆಯರಿಗೆ ಹಾಗೂ ಪಾರ್ಟಿಯವರಿಗೆ ತಿಳಿಸಿ ಅಪಾರ್ಮೆಂಟ್ನ ಒಳಗೇ ತನ್ನನ್ನು ತಾನು ಲಾಕ್ ಡೌನ್ ಮಾಡಿಕೊಂಡಿದ್ದಳು. ಯಾವುದು ಸತ್ಯ ಯಾವುದು ಯಾರು ಕಟ್ಟಿದ ಕಥೆ ಎಂದರಿಯದೆ ಒದ್ದಾಡಿದಳು. ಇದಾಗಿ ಎರಡೇ ದಿನಗಳಲ್ಲಿ ಯುನಿವರ್ಸಿಟಿ ಹುಡುಗರಿಗೆ ಗಾಂಜಾ ಮಾರುತ್ತಿದ್ದ ಎಂಬ ಆರ‍ೋಪದ ಮೇಲೆ ಆಶ್ನನ್ನು ಪೋಲಿಸರು ಅರೆಶ್ಟ್ ಮಾಡಿದ್ದರು. ಆಶ್ಗೂ ತಮ್ಮ ಪಕ್ಷಕ್ಕೂ ಯಾವ ಕನೆಕ್ಷನ್ನೂ ಇಲ್ಲ… ಎನ್ನುವ ಸ್ಪಷ್ಟೀಕರಣವನ್ನ ಯಾರೂ ಕೇಳದೆ ಇದ್ದರೂ  ಸೂರ್ಯ ನಾರಾಯಣ ರಾಯರು “ಆಶ್ ಮುಷ್ಟಿ ಪಾತ್ರದ ಸದಸ್ಯ್ ಅಲ್ಲ ಜಶ್ಟ್ ಕಂಪ್ಯೂಟರ್ ಸಾಫ಼್ಟೇವೇರ್ ಅಪ್ದೇಡ್  ಮಾಡಲು ಒಂದೆರೆಡು ಸಾರಿ ಇಲ್ಲಿಗೆ ಬಂದ್ ಹೋಗಿದ್ದ” ಅಂತ ಸ್ಪಷ್ಟೀಕರಣ ಕೊಟ್ಟೇ ಬಿಟ್ಟಿದ್ದರು. ಅಚ್ಚರಿ ಎಂದರೆ ಆಶ್ಶ್ ಗೂ ಕಾಮ್ರೇಡ್ ಪಾರ್ಟಿಗೂ ಅವಿನಾಭವ ಸಂಭಂದ ಇರುವುದನ್ನು ನಿರೂಪಿಸಲು ಎಷ್ಟೋ ಸಾಕ್ಷಿ ಇದ್ದರೂ ಯಾವ ರೂಲಿಂಗ್ ಪಾರ್ಟಿ ಮೆಂಬರ್ರುಗಳು ಈ ಆಧಾರಗಳನ್ನು ಇಟ್ಟುಕೊಂಡು ತಮ್ಮ ಎದುರಾಳಿ ಮುಷ್ಟಿ ಪಕ್ಷವನ್ನು ಅಟ್ಯಾಕ್ ಮಾಡುವುದು ಬಿಟ್ಟು ಇದೊಂದು ಮ್ಯಾಟರ್ರೇ  ಅಲ್ಲ ಅನ್ನುವಂತೆ ವರ್ತಿಸಿದ್ದರು, ಅದೂ ಎಲೆಕ್ಷನ್ನಿಗೆ ಕೆಲವೇ ವಾರಗಳಿದ್ದಾಗ ! ಎಲ್ಲಕ್ಕಿಂತ ಹೆಚ್ಚು ದಿಗಿಲು ಹುಟ್ಟಿಸಿದ್ದು ಯಾವ ಅನಾಹುತವೂ ಆಗದೆ ಇರಲಿ ಎನ್ನುವ ಉದ್ದೇಶದಿಂದ  ಸಾಧನ ಕುಸುಮಳ ಐಟಿ ಬ್ಯಾಂಕ್ ಸ್ಟೇಟ್ಮೆಂಟುಗಳ ದಾಖಲೆಗಳಿದ್ದ ಪೆನ್ ಡ್ರೈವನ್ನು ಈಕೆ ಆಶ್ಗೆ ಕೊಟ್ಟಿದ್ದಳು. ಆದರೆ ಈಗ ಆಶ್ ಅರೆಶ್ಟ್ ಆಗಿದ್ದಾನೆ! ಅನಾಮಿಕನ ಸುಳಿವಿಲ್ಲ…! ತಾನು ಕತ್ತಲ ಕೋಣೆಯ ವಾಸಿ! ಒಮ್ಮೆ ಆಕೆಯ ಕೊರಳು ಅವಳ ನಿಯಂತ್ರಣದಿಂದ ತಪ್ಪಿಸಿಕೊಂಡು ವಿಕಾರವಾಗಿ ಚೀರಿದ್ದು ಪಾರ್ಟಿಯ ಸಂಘಟಕರ ಬಣದ ಸಂದೀಪ ಕೇಶವ ಕರೆ ಮಾಡಿ “ಹೇಯ್ ಮ್ಯಾನ್ ….ಹೌ ಯು ಡೂಯಿಂಗ್, ಸೂರ್ಯನಾರಾಯಣ ಕೇಳ್ತಾ ಇದ್ರು… ’ಎಲ್ಲಿ ನನ್ನ ಫ್ಯಾನ್ ಗರ್ಲ್… ಹೇಗಿದ್ದಾಳೆ…. ಕೋವಿಡ್ ಜ್ವರ ಬಂದ್ಲೇಲೆ ಎಲ್ಲಿ ಅವರಮ್ಮನ ಮನೆಗೆ ಹೋದ್ಲಾ ಹೇಗೆ… ’ ಅಂತ ಹಿ ವಾಸ್ ಕನ್ಸರ್ನ್ಡ್ ಅಷ್ಟೇ…”  ಎಂದಾಗ. ಯಾಕೋ ಈ ಸೂರ್ಯನಾರಾಯಣ ಅನ್ನೋ ಶಬ್ಧ ಕೇಳಿದಾಗಲೆಲ್ಲಾ ಸುಝೇನ್ಗೆ  ರೌರವ ಸ್ವರದಲ್ಲಿ ಅರಚಾಡುವ ತೆವಲಾಗುತ್ತಿತ್ತು. ಈ  ಹೆಸರೇ ಸುಝೇನಳನ್ನು ಧಿಗ್ಮೂಢಳನ್ನಾಗಿಸುತ್ತಾ ಇತ್ತು.

ಇದೇ ತಳಮಳದಲ್ಲಿ ಹಗಲು ಯಾವುದು ಇರುಳು ಯಾವುದು ಎಂಬ ಜ್ಞಾನವಿಲ್ಲದೇ ಹಾಗೇ ಕಣ್ಣು ಮುಚ್ಚಿದ್ದಾಗ  ಕನಸಲ್ಲಿ ಗುಪ್ತ ಕಡಲಿನ ಅಲೆಗಳಲ್ಲಿ ಒಂದೊಂದು ವಿಚಿತ್ರಾಕೃತಿಗಳು ಆತ್ಮಗಳಂತೆ ಹಾರಿ ನಿಷ್ಕ್ರಿಯವಾಗಿ ನಿಂತಿದ್ದ ಸುಝೇನ್ಳ ಗರ್ಭಕ್ಕೆ ನುಗ್ಗುತ್ತಾ ಇದ್ದವು. ಹಾ ಎಂದು ಚೀತ್ಕರಿಸಿ ಕಣ್ಣು ಬಿಟ್ಟರೆ ಆಕೆಯ ತೊಡೆಗಳ ಮಧ್ಯೆ ರಕ್ತ ಹರಿಯುತ್ತಾ ಇತ್ತು… ಒಂದೇ ತಿಂಗಳಲ್ಲಿ ಆಕೆ ಈ ಸಲ ಎರಡು ಬಾರಿ ಮುಟ್ಟಾಗಿದ್ದಳು.

Epilogue

ಎಷ್ಟು ದಿನಗಳಾಯಿತು…? ಎರಡು ದಿನ… ಹತ್ತು ದಿನ….? ಅಥವಾ ಕೆಲವೇ ಗಂಟೆಗಳೇ… ಕಾಲದ ಹಂಗಿಗೆ ಬೀಳದೆ ಕತ್ತಲ ತೂತಲ್ಲೇ ಗರ್ಭದೊಳಗಿನ ಬೆಚ್ಚೈಗಿನ ರಕ್ಷೆ ಅನುಭವಿಸಿ ಯಾವುದೋ ಅಗೋಚರ ಕೈ ಆಕೆಯನ್ನು ಹಿಡಿದು ನಡೆಸುತ್ತಾ ಇದೆ ಎನ್ನುವಂತೆ ಸುಝೇನ್ನ್ ಕೈಗೆ ಸಿಕ್ಕ ಬಟ್ಟೆ ತೊಟ್ಟು ನಿದ್ರಾ ಹೀನ ಕಣ್ಣುಗಳಲ್ಲಿ ಪಾಳು ಬಿದ್ದ ಕೆರ್ವಾಜೆ ಅನ್ನೋ ಹೆಸರಿನ ಶಾಲೆಯ ಬಳಿ ಸ್ಕೂಟರ್ ನಿಲ್ಲಿಸಿದಳು. ಈ ಜಾಗದ ಹೆಸರು ಹೇಳಿ ತನ್ನ ಕೊನೆಯ ಕರೆಯನ್ನು ಕಟ್ಟ್ ಅಂದು ಮಾಡಿದ್ದ ಪಟ್ಟಾಭಿ. ಇಲ್ಲಿ ಈ ಅಜ್ಞಾತವಾಸಿ ಕಾಣ ಸಿಗುತ್ತಾನೆ ಅನ್ನೋ ಊಹೆ ಕೂಡ ಆಕೆಗೆ ತೀರ ಉತ್ರ್ಪೇಕ್ಷೆ ಅನ್ನಿಸಿದರೂ ಕಡೆಯ ಛಾನ್ಸ್ ಎನ್ನುವಂತೆ ಹೆಲ್ಮೆಟ್ ತೆಗೆದು ಆ ಪುರಾತನ ಕಟ್ಟಡದತ್ತೆ ಕಣ್ಣು ಹಾಯಿಸಿದಳು. ನಗರದ ಸುತ್ತಲೂ ಕೋಟೆಯಂತೆ ಆವೃತವಾಗಿದ್ದ ರಿಂಗ್ ರೋಡಿನ ತುದಿಯಲ್ಲಿ ಹದಿನೈದು ವರುಷಗಳಿಂದ ವಿಧ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋದ ಸರಕಾರಿ ಶಾಲೆ ಈಗ ಯಾವುದೋ ಅಜ್ಞಾತ ಮರ ಬಳ್ಳಿ ಬೇರು ಲಂಟಾನ ಪೊದೆಗಳ ಪ್ರದೇಶವಾಗಿತ್ತು… ತುಕ್ಕು ಹಿಡಿದ ಗೇಟಿಗೆಲ್ಲ ಹಬ್ಬಿದ ಸಸ್ಯದ ಬಗೆಬಗೆಯ ಬೇರುಗಳು ಜೋತು ಬಿದ್ದಿದ್ದವು. “ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂದು ಸ್ಕೂಲಿನ ಮುಖ್ಯ ಗೋಡೆಯ ಮೇಲೆ  ಬರೆದಿದ್ದ  ಹಿತವಚನವನ್ನು ಥರಥರಾರಿ ಹಸಿರಿನ ಸಂತತಿಗಳು ಆವರಿಸಿದ್ದವು. ಒಳಗೆ ಅಡಿಯಿಟ್ಟಲು ಸುಝೇನ್. . .ಹಾಗೇ ಎಡಕ್ಕೆ ತಿರುಗಿ ಮೆಟ್ಟಿಲು ಹತ್ತಿ ಲಂಟಾನವೃತವಾಗಿದ್ದ ಬಾಗಿಲನ್ನು ನಿಧಾನಕ್ಕೆ ತಳ್ಳಿದಳು. ಸೂರ್ಯನ ಬೆಳಕೇ ತೂರದ ಕೋಣೆಯ ಬಾಗಿಲು ತೆಗೆಯುತ್ತಾ ಇದ್ದಂತೆ, ಕತ್ತಲಲ್ಲಿ ಹೊಳೆಯುತ್ತಾ ಇದ್ದ ಈಕೆಯನ್ನೇ ದಿಟ್ಟಿಸುತ್ತಾ ಇದ್ದ ಆಕಾರವಿಲ್ಲದ ಆಕೃತಿಗಳ ಕೆಂಪು ವಜ್ರಗಳಂತಹ ಕಣ್ಣುಗಳು ಸುಝೇನಳನ್ನು ನಡುಗಿಸಿದವು… ಪ್…ಪಟ್ಟಾಭಿ… ಅಂದಳು. ಆ ಸ್ವರ ತನ್ನದೇ ಎಂದು ಗುರುತಿಸಲು ಆಗದಷ್ಟು ಗಾಢವಾಗಿ ಇಳಿದು ಹೋಗಿತ್ತು. ನಂತರ ’ಕೆಸ್ಸ್ಸ್….” ಎಂದು ಭುಸುಗುಟ್ಟಿದ ಎರಡೂ ತೋಳಗಳು ಚಂಗನೆ ಶಿಕ್ಷಕರಗೆಂದಿದ್ದ ಹಳೆಯ ಟೇಬಲ್ ಮೇಲೆ ನೆಗೆದು ಇವಳನ್ನು ಸವರಿ ಬಾಗಿಲಿಂದ ಆಚೆಗೆ ಓಡಿದವು. ” ಗ್ಗ್ಘ್ಹ್ಹ್ಹ್….” ಭಾಷೆಯೇ ಮರೆತು ಹೋಗಿ ಯಾವುದೋ ಪುರಾತನ ಕೊರಳಲ್ಲಿ ಊಳಿಟ್ಟಳು ಅವಳು. ಸುತ್ತಲ್ಲೂ ಮಸಿಯಂತಹ  ವಾತಾವರಣ. ಮೂಗಿಗೆ ಬಡಿಯುತ್ತಾ ಇದದ್ದು ಹಸಿ ಗಿಡಗಂಟೆಗಳ ವಾಸನೆ. ಗುಯ್ಞೀ ಕೀಟಗಳ ಸದ್ದು. ನಡುಹಗಲೇ ಕತ್ತಲಾಗಿದ್ದ ಲಂಟಾನಗವಿ ತರಗತಿಯದು. ಮೇಲಿಂದ ಬೀಳುತ್ತಿದ್ದ ಚೂರುಪಾರು ಬೆಳಕಿನ ಹುಂಡುಗಳು ದಟ್ಟವಾಗಿ ಗೋಡೆ ಮೇಜು ಡೆಸ್ಕುಗಳ ಮೇಲೆಲ್ಲ ವಿಸ್ತರಿಸುತ್ತಿದ್ದ ಪೊದೆಗಳನ್ನು ಮಂಕಾಗಿ ಪ್ರಜ್ವಲಿಸಿತ್ತು,

ನಾನ್ಯಾಕೆ ಇಲ್ಲಿ ಬಂದೆ…. ಎನ್ನುವಂತಹ  ಮಬ್ಬಾದ ಯೋಚನೆಯಲ್ಲಿ “ಜೀಸಸ್ ಕ್ರೈಸ್ಟ್….” ಅಂತ ಅಲ್ಲೇ ಕುಸಿದಳು  ಸುಝೇನ್ನ್.  ಕಾಲ ಮಂಡಿಗೆ ಏನೋ ತಣ್ಣಗಿದ್ದ ವಸ್ತು ತಾಗಿತು. ಸ್ತಂಭಿಸುತ್ತಾ ಇದ್ದ ಹೃದಯವು ನಿಂತೇ  ಹೋಗಲಿ ಎಂದೇ ಆಶಿಸಿ, ಮೊಬೈಲ್ ಬೆಳಕಲ್ಲಿ ಕೆಳಗೆ ಬಿದ್ದಿದ್ದನ್ನು ಪರೀಕ್ಷೆ ಮಾಡಿದಾಗ ಅದೊಂದು ಕೊಳೆಯಲು ಅಣಿಯಾಗುತ್ತಿದ್ದ ಹೆಣವೆಂದು ಆಕೆಗೆ ಅರಿವಾಯಿತು. ಆ ಬೆಳಕನ್ನು ಆ ವ್ಯಕ್ತಿಯ ಮುಖದತ್ತ ರವಾನಿಸಿದಳು ಚೆನ್ನಾಗಿ ತುಪ್ಪಳದಂತೆ ಬೆಳೆಸಿದ್ದ ಮೀಸೆ ಕಂದಿತ್ತು… ಅಸ್ತವ್ಯಸ್ತವಾಗಿ ಬೆಳೆದಿದ್ದ ಗಡ್ಡ… ಹಾಕಿದ್ದ ಕಂದು ಜಾಕೆಟ್ ಮಣ್ಣಾಗಿ ಮಾಸಿದಂತೆ… ಜೀನ್ಸ್ ಒಳಗೆ ವಿಕಾರವಾಗಿ ಉಬ್ಬಿದಂತಿದ್ದ ಕಾಲುಗಳು… ತೊಟ್ಟಿದ್ದ ಅಂಗಿಯನ್ನು ಸೀಳಿ ಮೇಲಕ್ಕೆ ಬಂದಿದ ಗ್ಯಾಸ್ ತುಂಬಿದ ಹೊಟ್ಟೆ…. ಕಂದಾಗಿದ್ದ ಹಣೆಯಲ್ಲಿ ಮತ್ತೆ ಹೃದಯದ ಬಳಿ ಗುಂಡೇಟಿನ ಆಳವಾದ ಗುಳಿಗಳು. ಆ ವ್ಯಕ್ತಿ ಸತ್ತು ಕನಿಷ್ಟ ಹತ್ತು ದಿನಗಳಾದರೂ ಆಗಿದೆಯೇ…ಅಥವಾ ಒಂದು ತಿಂಗಳೇ….? ಅಥವಾ ಈ ನಿನ್ನೆ ಮೊನ್ನೆ ಸತ್ತನೇ….?! ಹಲ್ಲು ಬಿಟ್ಟುಕೊಂಡು ಬಿರಿದಿದ್ದ ಮುಖವನ್ನು ಮಿನುಗುತ್ತಿದ್ದ ಬ್ಯಾಟರಿ ಬೆಳಕಿನಲ್ಲಿ ಮತ್ತೆ ಮತ್ತೆ ನೋಡಿ, ನನಗೆ ಕರೆ ಮಾಡಿದ್ದ ವ್ಯಕ್ತಿಯ ಧ್ವನಿಗೂ ಇಲ್ಲಿ ಅಳಿಸಿ ಹೋಗಿ ಕ್ರಿಮಿಗಳ ಆಹಾರವಾಗಲಿದ್ದ ಕಳೇಬರದ ಮುಖಕ್ಕೂ ಹೊಂದಾಣಿಕೆಯಾಗುತ್ತದೆಯೇ ಎಂದು ನಿಸ್ತೇಜ ಕಣ್ಣುಗಳಲ್ಲಿ ಯಾಂತ್ರಿಕವಾಗಿ ಪರಿಶೀಲಿಸುತ್ತಾ ಕೂತಿದ್ದಳು ಸುಝೇನ್.

ಚಿತ್ರಃ ಅಪೂರ್ವ ಭಟ್

One comment to “ಗೌತಮ್ ಜ್ಯೋತ್ಸ್ನಾ ಬರೆದ ನೀಳ್ಗತೆ : ತಾಟಕಿ”
  1. ಹಲೋ ಸರ್,
    ನಿಮ್ಮ ನೀಲ್ಗತೆ ತುಂಬಾ ಚೆನ್ನಾಗಿದೆ. ಪತ್ತೇದಾರಿ ಕಥೆ ರೀತಿ ಓದಿಸಿಕೊಂಡು ಹೋಗತ್ತೆ. ಧನ್ಯವಾದಗಳು 🙏

ಪ್ರತಿಕ್ರಿಯಿಸಿ