ಕೆಂಪು ಹುಡುಗಿ ಕಪ್ಪು ಕಾಲ್ಮರಿ: ಪುಸ್ತಕ ಪರಿಚಯ

ಕತೆಗಾರ ಶಂಕರ್ ಬೈಚಬಾಳ ಅವರ ಮೂರನೆಯ ಕತಾ ಸಂಕಲನ ‘ಕೆಂಪು ಹುಡುಗಿ ಕಪ್ಪು ಕಾಲ್ಮರಿ’ ಕುರಿತ ಪರಿಚಯಾತ್ಮಕ ಲೇಖನ ಬರೆದವರು ಲೇಖಕ ಡಿ.ಎಮ್ ನದಾಫ್

ಪ್ರಾದೇಶಿಕ ವಿವರಗಳಿಂದ ತುಳುಕಾಡುವ ವಿಶಿಷ್ಟ ಭಾಷಾ ಪ್ರಯೋಗದ ಕಥೆಗಳು

ಕತೆಗಾರ ಶಂಕರ ಬೈಚಬಾಳ ಅವರ ಮೂರನೇಯ ಕಥಾ ಸಂಕಲನ ” ಕೆಂಪು ಹುಡುಗಿ ಕಪ್ಪು ಕಾಲ್ಮರಿ” ಈಗ ಕಡಣಿಯ ಬೆರಗು ಪ್ರಕಾಶನ ಹಸ್ತಪ್ರತಿ ಬಹುಮಾನ ನೀಡಿ ಪ್ರಕಟಿಸಿದೆ. ಮೊದಲಿನ ಎರಡು ಕಥಾ ಸಂಕಲನಗಳ ಎಲ್ಲ ನೂನ್ಯತೆಗಳನ್ನು ಇಲ್ಲಿನ ಕತೆಗಳಲ್ಲಿ ಕಾಣಸಿಗುವದಿಲ್ಲ, ಸಶಕ್ತ, ಸತ್ವಯುತವಾದ ವಿಜಯಪುರ ಜವಾರಿ ಭಾಷೆಯು ಇಲ್ಲಿ ಮೈದುಂಬಿಕೊಂಡು ಅರಳಿದೆ.

ಪ್ರಾದೇಶಿಕ ಕನ್ನಡದ ಆಡು ನುಡಿಗಳನ್ನು ಬಳಸಿ ಬರೆಯುವ ರಚನೆಗಳು ಸ್ವಾನುಭವದ ಅಭಿವ್ಯಕ್ತಿ ಆಗಿರುತ್ತವೆ ಎಂಬ ಜಿಜ್ಞಾಸೆಯೊಂದು ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಹೊಸಗನ್ನಡ ಸಾಹಿತ್ಯದ ಆರಂಭ ಕಾಲದಿಂದಲೂ ಪ್ರಚಲಿತವಾಗಿದೆ. ಕುಂ. ವೀರಭದ್ರಪ್ಪನವರ ಬೇಲಿ ಮತ್ತು ಹೊಲ, ದೇವನೂರು ಮಹಾದೇವರ ಕುಸುಮಬಾಲೆ, ಚನ್ನಣ್ಣ ವಾಲೀಕಾರರ ಬೆಳ್ಯ, ಶಾಂತರಸರ ಮತ್ತು ಜಿ. ಗೀತಾ ನಾಗಭೂಷಣರ ಕಥೆ ಮತ್ತು ಕಾದಂಬರಿಗಳಲ್ಲಿ ಮಾಡಲಾದ ಭಾಷೆಯ ಪ್ರಯೋಗಗಳನ್ನು ಈ ಜಿಜ್ಞಾಸುಗಳು ಇದಕ್ಕೆ ಉದಾಹರಿಸುತ್ತಾರೆ.
ಇಂಥದೇ ಪ್ರಾದೇಶಿಕ ಸೊಗಡಿನ ಜನಪದೀಯ ಭಾಷೆಯ ನುಡಿಗಟ್ಟುಗಳು, ಸೂಳ್ನುಡಿಗಳು ಮತ್ತು ಗಾದೆಗಳ ಸಾರ್ಥಕ ಬಳಕೆಯಿಂದ “ಕೆಂಪು ಹುಡುಗಿ ಮತ್ತು ಕಪ್ಪು ಕಾಲ್ಮರಿ” ಸಂಕಲನದ ಕಥೆಗಳು ವಿಜೃಂಭಿಸುತ್ತ    ವೆ. ಕರ್ನಾಟಕದ ಒಳನಾಡು ಮತ್ತು ಮರಾಠಿ ಪ್ರಭಾವದ ಗಡಿನಾಡಿನ ಪರಿಸರದ ದಟ್ಟ ವಿವರಗಳನ್ನು ತಿಳಿಯಾದ ಭಾಷೆಯಲ್ಲಿ ಈ ಕಥೆ ಗಳು ಕಟ್ಟಿಕೊಡುತ್ತವೆ.
ಲೇಖಕರಿಗೆ ಈ ಪ್ರದೇಶದ ಸಾಮಾಜಿಕ, ಸಾಂಪ್ರದಾಯಿಕ, ಧಾರ್ಮಿಕ ಸಂದರ್ಭಗಳು ಅದೆಷ್ಟು ಪರ್ಫೆಕ್ಟ್ ಎಂದರೆ ಯಾವ ಕಥೆಯಲ್ಲಿಯೂ ಕಾಲ್ಪನಿಕತೆ ಕೃತಕತೆಯ ಚಿತ್ರಣಗಳು ಕಾಣುವುದೇ ಇಲ್ಲ. ಇಲ್ಲಿನ ಬಹುತೇಕ ಕಥೆಗಳು ದೈನಂದಿನ ಜೀವನ ಘಟನೆಗಳಿಗೆ ಚೌಕಟ್ಟು ಹಾಕಿದವುಗಳು. ಹಾಗೆಂದು ಈ ಚೌಕಟ್ಟು ಕಥೆಗಳನ್ನು ಅಂದಗೆಡಿಸಿಲ್ಲ. ಆದರೆ ಕಥೆಗಳ ಯಾವ ಪಾತ್ರವೂ ಆಕಾಶದಿಂದ ಇಳಿದು ಬರುವುದಿಲ್ಲ, ಅಥವಾ ಪಾತಾಳದಿಂದ ಮೇಲೆ ಏಳುವುದಿಲ್ಲ.
“ವಂದೇ ಮಾತರಂ”ಕಥೆಯ ಸಲೀಂ ಓದುಗನಿಗೆ ಅಂತಹ ಅನುಭವ ನೀಡಿದರೂ ಕೊನೆಯಲ್ಲಿ ವಂದೇ  ಮಾತರಂ ಎಂದು ಹೇಳುವುದರ ಹಿಂದೆ ಬದುಕೆಲ್ಲ ತನ್ನ ಊರ ಜನ – ಮನ ಮತ್ತು ಸೌಹಾರ್ದ ಪರಂಪರೆಯನ್ನು ಬೆನ್ನಿಗೆಟ್ಟುಕೊಂಡಿರುವದು ವೇದ್ಯವಾಗುತ್ತದೆ. ಅವನು ಕೊನೆಗೂ ಸ್ವಾತಂತ್ರ್ಯ ಹೋರಾಟದ ಸ್ಲೋಗನ್ ಹೇಳಿಬಿಡುತ್ತಾನೆ.
“ಮುರುವು ಚುಚ್ಚಿದ ಎಮ್ಮಿ ಸತ್ತಾಗ” ಕತೆ ಬಯಲು ನಾಡಿನ ತಬರನ ಕಥೆಯಾಗಿದೆ. ಬ್ಯಾಂಕ್ ಸಾಲ ಪಡೆದು ಎಮ್ಮೆ ಸಾಕಿದ್ದ ಭರಮಪ್ಪ ಈ ಸರಕಾರಿ ವ್ಯವಸ್ಥೆಯ ಚಕ್ರವ್ಯೂಹದಲ್ಲಿ ಸಿಕ್ಕು, ಕೊನೆಗೂ ತನ್ನ ಸತ್ತ ಎಮ್ಮೆಯ ಪರಿಹಾರದ ಹಣ ಕಾಣದೆ, ತನ್ನ
ಎಮ್ಮೆಯನ್ನೂ ಕಳಕೊಂಡು ವಿಮಾ ಪರಿಹಾರದ ಮೊತ್ತವೂ ಸಿಗದೇ ಬಡ್ಡಿ ಸಮೇತ ಸಾಲದ ದೊಡ್ಡ ಹೊರೆಯನ್ನು ಹೊತ್ತು ಮನೆಗೆ ಬಂದು ಉಣ್ಣದೆ ಮಲಗುತ್ತಾನೆ.
ತಾವು ಕರ್ತವ್ಯ ನಿರ್ವಹಿಸಿದ ಊರುಗಳ ಪ್ರಸಂಗಗಳನ್ನೇ ಲೇಖಕರು ಕಥೆಯಾ ಗಿಸಿರುವದರಿಂದ ಅಲ್ಲಿನ  ಜನ ಸಮುದಾಯ, ಪರಂಪರೆಗಳನ್ನು ಅರಹುತ್ತ ಅವುಗಳ ವರ್ಣನೆಯಲ್ಲಿ   ಮೈ ಮರೆತುಬಿಡುತ್ತಾರೆ.
“ಅಬ್ದುಲನ ಕೊರಳಲ್ಲಿ ಲಿಂಗ” ಕಥೆಯಲ್ಲಿ ಮಸೀಬಿನಾಳ ಗ್ರಾಮದ ಇಂಚಿಂಚು ವಿವರಗಳನ್ನು ಕೊಡುತ್ತಾರೆ. ಆ ಊರಿನ ಮಠ, ಮಸೀದಿ,ಅಂಬೇಡ್ಕರ್ ಭವನ, ಕೋಟೆ, ಹೂಡೆ, ಊರ ಕಟ್ಟಡಗಳಾದರೆ; ಹುಡುಗರು, ಅಂಗಳದಲ್ಲಿ ಮೂರು ಗುಂಡ್ಕಲ್ ಇಟ್ಟು ರೊಟ್ಟಿ ಮಾಡುತ್ತಿರುವ ಹೆಂಗಸರು, ಚಿಂದಿಯಾದ  ಕೌದಿಯಲ್ಲಿ ಬಿದ್ದುಕೊಂಡೆ ರೇಡಿಯೋ ಕೇಳುತ್ತಿರುವ ಒಂದಿಬ್ಬರು ಗಂಡಸರು, ಜೋಗಮ್ಮಗಳು, ಕುಡುಕರು, ಪುಟ್ಟ ಹಳ್ಳ, ಬಣ್ಣದ ಮನೆ, ಒಂದೇ ಎರಡೇ………….
ಕಥೆಯ ಕೇಂದ್ರ ಬಿಂದುವಾದ ಶಿವಾನಂದನು ಅಬ್ದುಲ್ ಸಾಬನ ಮಗ ಎಂದು ತಿಳಿದಾಗಲೆ ಕಥೆಯ ನಿಜವಾದ ಆರಂಭ ಆಗುತ್ತದೆ.
ಇಲ್ಲಿನ ಯಶಸ್ವಿ ಕಥೆಗಳಲ್ಲಿ ಒಂದಾದ “ಕೆಂಪು ಹುಡುಗಿ ಕಪ್ಪು ಕಾಲ್ ಮರಿ” ಕ್ಷಣ- ಕ್ಷಣಕ್ಕೂ ಕುತೂಹಲ ಕೆರಳಿಸಿ ಎರಡು ಜೊತೆ ಚಪ್ಪಲಿಗಳ ಸುತ್ತ ಸುತ್ತುತ್ತಾ ಬಂದು ಕೊನೆಯ ನಾಲ್ಕಾರು ವಾಕ್ಯಗಳಲ್ಲಿ ರಂಗಕ್ಕೆ ಬರುವ ಕಥಾನಾಯಕಿ ಬರೆದ ಪತ್ರ ಕಾಲ್ಮರಿಗಳ ಗುಟ್ಟು ರಟ್ಟು ಮಾಡಿ ಲೇಖಕರಷ್ಟೇ ಓದುಗರನ್ನು ಖುಷಿಗೊಳಿಸುತ್ತದೆ.
“ಕಷ್ಟದ ನಿಂಗಪ್ಪ” ಕಥೆಯು ಹೆಸರಿನಿಂದಲೇ ಕುತೂಹಲವನ್ನು ಹುಟ್ಟಿಸುತ್ತದೆ. ಊರ ಮಠದ ಶಿವಾನಂದ ಸ್ವಾಮಿಗಳು ತಾವು ಯಾವುದೋ ಶವ ಸಂಸ್ಕಾರಕ್ಕೆ ಹೋದಾಗ ಅನಾಥ ಶವಗಳನ್ನು ಸಂಸ್ಕರಿಸುತ್ತಿದ್ದ ನಿಂಗಪ್ಪನನ್ನು ತಂದು ಊರಲ್ಲಿ ಎಲ್ಲರ  ಕಷ್ಟಕ್ಕಾಗುವನು ಎಂಬ ಕಾರಣಕ್ಕೆ ಅದೇ ಹೆಸರನ್ನು (ಕಷ್ಟದ ನಿಂಗಪ್ಪ) ಇಟ್ಟು ಊರ ಸ್ಮಶಾನ ಕಾಯಲು ಬಿಡುತ್ತಾರೆ.
ಕಥೆಯ ಕೊನೆಯಲ್ಲಿ ಕಷ್ಟದ ನಿಂಗಪ್ಪ ಸತ್ತಾಗ ಸ್ವಾಮೀಜಿಯವರು ಕಾಲವಾಗಿ ವರ್ಷಗಳೇ ಕಳೆದಿರುತ್ತವೆ. ವಿಪರ್ಯಾಸ ಎಂದರೆ ಜಾತಿ ಮತ ಭೇದವಿಲ್ಲದೆ ಶವಗಳನ್ನು ದಫನ್ ಮಾಡಿದ್ದ ಕಷ್ಟದ ನಿಂಗಪ್ಪನೆ ಸತ್ತಾಗ ಅವನು ಯಾವ ಜಾತಿಯವನು ಎಂದು ಇತ್ಯರ್ಥ ಮಾಡಲಾಗದೆ ಎಲ್ಲ ಜಾತಿಯವರೂ ತಮ್ಮ ಸ್ಮಶಾನದಲ್ಲಿ ತಪ್ಪಿಯೂ ಅವನ ಶವ ಸಂಸ್ಕಾರ ಮಾಡಬಾರದೆಂದು ನಿರ್ಧರಿಸಿ ದಿನಗಟ್ಟಲೆ ಹೆಣವನ್ನು ಕೊಳೆಯುವಂತೆ ಮಾಡುತ್ತಾರೆ. ಆಗ ಬಂದ ಬಂಥನಾಳ ಸ್ವಾಮಿಗಳ ಮೆಡಿಕಲ್ ಕಾಲೇಜಿನ ಸಿಬ್ಬಂದಿ ಆಂಬುಲೆನ್ಸ್ ನಿಂದ ಇಳಿದು ಹೀಗೆ ಹೇಳುತ್ತಾರೆ.”ಕಷ್ಟದ ನಿಂಗಪ್ಪನವರು ನಮ್ಮ ಕಾಲೇಜಿಗೆ ತಮ್ಮ ದೇಹ ದಾನ ಮಾಡಿದ್ದಾರೆ” ಎಂದು ಹೇಳಿ ದಾನ ಪತ್ರ ಮತ್ತು ಕಷ್ಟದ ನಿಂಗಪ್ಪ ಮೃತಪಟ್ಟ ಸುದ್ದಿಯ ವಾಟ್ಸಪ್ ಸಂದೇಶಗಳನ್ನು ತೋರಿಸುತ್ತಾರೆ. ಕಷ್ಟದ ನಿಂಗಪ್ಪ ಮರಣದಲ್ಲೂ ಮಹಾಮಾನವನಾಗಿ ಕಂಗೊಳಿಸುತ್ತಾನೆ. ಇದು ಧರ್ಮದ ದಫನ್ ಕಥೆಯ ಸಂಕ್ಷಿಪ್ತ ಸಾರಾಂಶ.
“ಮಸಬಿನಾಳದ ಪಶುವಾದಿಗಳು” ಕತೆ ಮೀಸೆ ಬಂದರೆ ಗಂಡೆಂಬರು, ಮೊಲೆ ಮುಡಿ ಬಂದರೆ ಹೆಣ್ಣೆoಬರು ನಡುವೆ ಸುಳಿವ ಆತ್ಮ ಗಂ ಡೂ ಅಲ್ಲ ಹೆಣ್ಣೂ ಅಲ್ಲ ಎಂಬ ವಚನದ ತಾತ್ವಿಕತೆಯನ್ನು ಸಾರುತ್ತದೆ. ಮಾನವನಷ್ಟೇ ಅಲ್ಲ ಪಶುಗಳಲ್ಲಿ ಕೂಡ ಈ ತತ್ವ ಕಾಣಬೇಕು ಎಂಬುದು ಕತೆಗಾರರ ಆಶಯ. ಅದಕ್ಕಾಗಿ ಕಾರ ಹುಣ್ಣಿಮೆಯಲ್ಲಿ ಹೋರಿಗರುಗಳೇ ಏಕೆ? ಹೆಣ್ಣು ಕರುಗಳು ಕೂಡ ಕರಿ ಹರಿಯಬೇಕು ಎಂದು ಎತ್ತಿನ ಜಾಗದಲ್ಲಿ ಆಕಳನ್ನು ಸಿಂಗರಿಸಿಕೊಂಡು ತಂದು ಕರಿಹರಿಯುವ ಗ್ರಾಮೀಣ ವಸ್ತುವಿನ ಕಥೆ ಇದು.
ಇಲ್ಲಿರುವ ಹದಿನೈದು ಕಥೆಗಳಲ್ಲಿ ಎಲ್ಲವೂ ಗ್ರಾಮೀಣ ಪರಿಸರದ ಕಥೆಗಳೇ. ಇವುಗಳ ಜೀವಾಳವೇ ಜನಭಾಷೆ. “ಟೆರಿಲಿನ್ ಕ್ಲಾತ್ – ಖಾದಿ ಅರಿವೆ” ಸ್ವಾತಂತ್ರ್ಯ ಹೋರಾಟದ ಕಥಾವಸ್ತುವನ್ನು ಹೊಂದಿದ ಕತೆ.
ಒಟ್ಟು ಕಥೆಗಳಲ್ಲಿ ಫ್ಯಾಂಟಸಿ, ಸಿನಿಮೀಯತೆ, ನಾಟಕೀಯ ತಿರುವುಗಳು ಇಲ್ಲದೆ ಸರಳ-ಸಹಜ, ಕುತೂಹಲಕಾರಿಯಾಗಿ ಇವು ಮೂಡಿಬಂದಿವೆ.”ಚಟ್ಟ ಎತ್ತೂನು ದೈವ
ಎಬಸರಿ”ಇಮಾನದ ಮುಂದ”,”ಗಾಡಿ ಹೆರಿ”, “ಪವೂಡ್ ಪತಾಕಿ ದೋಸ್ತರಾ  ಹೋ……..ದ್ದಿನ್”(ಕತೆ:ಮಾಸಬಿನಾಳದ ಪಶುವಾದಿಗಳು) ಏಳೂರ ವತನ(ಕತೆ:ಭೂಮಿ ತೂಕದ ಜಕ್ಕವ್ವ) ಸನ್ಮತ್ , ಭರ್ಚಕ್,(ಕತೆ:ಗಂಗಾ ಕಾವೇರಿ ಕೃಷ್ಣಾ) ಇಂಥ ಮರಾಠಿ ಮಿಶ್ರಿತ ಕನ್ನಡ ಪದಗಳು ಪ್ರತಿ ಕಥೆಯಲ್ಲೂ ಹೇರಳವಾಗಿ ಬಳಕೆಯಾಗಿ ಈ ನೆಲದ ಭಾಷೆಯ ಸೊಗಡನ್ನು ಹೆಚ್ಚಿಸುತ್ತವೆ. ಕಥೆಗಳ ಶಕ್ತಿಯಾದ ಈ ಪದಗಳು ಮತ್ತು ವಿವರಗಳೇ ಕೆಲವೊಮ್ಮೆ ಮಿತಿಯಾಗಿಯೂ ಕಂಡು ಬರುತ್ತವೆ.
-ಡಿ.ಎಂ. ನದಾಫ್
ಅಫಜಲಪುರ

ಪ್ರತಿಕ್ರಿಯಿಸಿ