ಐದೂವರೆ ಗುಂಟೆ

kathana-5vareguntedivderspa

ಅಘನಾಶಿನಿ ಹರಿಯುವ ದೇವಮನೆ ಘಟ್ಟವಿಳಿದು ಮಿರ್ಜಾನ್ ಮುಟ್ಟುವ ಮುನ್ನ ರಾಧಕ್ಕನ ಮನೆಯಿದೆ. ಕುಮಟೆಗೂ, ಮಿರ್ಜಾನ್ ಗೂ ಮಧ್ಯದ ಕಾಡಿನಲ್ಲಿ ಕಳೆದುಹೋಗಿರುವ ಊರು ಕಡತೋಕಾ. ಎಷ್ಟೋ ಸಾರಿ ಕಾರವಾರದ ಕಡೆಗೆ ಹೋಗುವಾಗ ಈ ಊರಿನ ಹತ್ತಿರದ ಟಾರು ರಸ್ತೆಯನ್ನ ದಾಟಿರುವನಾದರೂ ಕೇತುಗೆ, ಇಲ್ಲಿ ರಾಧಕ್ಕ ಇರುವುದು ಮೂರು ತಿಂಗಳ ಹಿಂದೆ ಆಕೆಯ ಟ್ರಂಕ್ ಕಾಲ್ ಬರುವವರೆಗೂ ನೆನಪಿಲ್ಲ.

ಬೆಂಗಳೂರಿನ ಧಾವಂತಕ್ಕೆ ದುಮ್ಮಿಕ್ಕಿ ಹತ್ತೇ ವರ್ಷವಾಗಿದ್ದರೂ ಹಳೆಯ ಹಳವಂಡಗಳನ್ನ ಕನವರಿಸಲೂ ಪುರುಸೋತ್ತಿಲ್ಲದೇ ಬದುಕುತ್ತಿರುವ ಕೇತುಗೆ ಕಳೆದುಹೋದ ಸಂಬಂಧಗಳನ್ನು ಜೋಡಿಸಿಕೊಳ್ಳುವುದು ಸಾಯಲಿ ಸಾವಧಾನದಲ್ಲಿ ನೆನೆಸಿಕೊಳ್ಳಲೂ ಆಗುತ್ತಿಲ್ಲ. ಯಾವಾಗಲೂ ಬ್ಯೂಸಿ – ಬ್ಯೂಸಿಯಾಗಿರುವ ಈ ಮನುಷ್ಯನಿಗೆ ಬ್ಯೂಸಿ ಬೀ ಎಂದೇ ಹತ್ತಿರದವರೆಲ್ಲ ಕರೆಯುವುದುಂಟು.

“ಫೋನ್ ಮಾಡಿದರೆ ಎತ್ತಲಿಕ್ಕಾಗದಿರುವಷ್ಟು ಬ್ಯೂಸಿ ನಾ ನೀನು..? “, “ವರ್ಷಕ್ಕೆ ಒಮ್ಮೆ ಮೀಟ್ ಮಾಡಲಿಕ್ಕಾಗದಷ್ಟು ಬ್ಯೂಸಿ ನಾ?”, “ನನ್ನ ತಂಗಿಯ ಮದುವೆಗೆ ಹೋಗಲಿ, ಹಿಂದಿನ ದಿ
ನದ ರಿಸೆಪ್ಷನ್ ಗೆ ಬರದಷ್ಟು ಬ್ಯೂಸಿ ನ..?” ಪ್ರತಿಯೊಬ್ಬರೂ ತರಹೇವಾರಿ ಕೇಳುವವರೇ.. ಇವರಿಗೇನು ಗೊತ್ತು ತನಗೆ ಅಂಡು ತುರಿಸಲು ಪುರುಸೊತ್ತಿಲ್ಲ ಎಂದು. ಇಷ್ಟಿದ್ದರೂ ಈ ಬ್ಯೂಸಿಗಳ ನಡುವೆ ತಾನು ಮದುವೆಯಾಗಿದ್ದು, ತಿಂಗಳು ಗಟ್ಟಳೆ ಹನಿಮೂನು, ಬಾಗಿನ ಅಂತ ಹೆಂಡತಿಯೊಡನೆ ಊರೆಲ್ಲಾ ಸುತ್ತಿದ್ದು ಹೇಗೆ ಅಂತ ಆಶ್ಚರ್ಯವಾಗುತ್ತೆ ಅಂದುಕೊಳ್ಳುತ್ತಿದ್ದ.

ತಾನು ಮದುವೆಯಾದ ಹದಿನೈದೇ ದಿನಕ್ಕೆ ರಾಧಕ್ಕ ಅಪ್ಪನಿಗೆ ಫೋನ್ ಮಾಡಿದ್ದಳಂತೆ. “ಪುತ್ತು ಶೇಟ್ ರ ವಂಶ ಬೆಳಿತಾ ಇರೋದು ಕೇಳಿ ಖುಷಿ ಆಯ್ತು. ನೀವೆಲ್ಲ ಒಮ್ಮೆ ಕಡತೋಕಾಗೆ ಬನ್ನಿ. ನಿನ್ನ ಮಗ-ಸೊಸೆ ನ ನೋಡಿದ ಹಾಗಾಯ್ತು. ನೀವೂ ಗೋಕರ್ಣ, ಮುರ್ಡೇಶವರ ಎಲ್ಲಾ ಸುತ್ಕೊಂಡು ನಮ್ಮ ಮಂತನ ಅಡಿಗೆ ರುಚಿ ನೋಡಿವಿರಂತೆ. ತಾರ್ಲೆ ಆಮಶೆ ತುಂಬಾ ಚೆನ್ನಾಗಿ ಮಾಡ್ತಾನೆ ಮಂತ. ನಂಗೆ ಮದುವೆಗೆ ಬರಲಿಕ್ಕೆ ಆಗಿಲ್ಲ. ನೀನು ನೆನಪಿಟ್ಟುಕೊಂಡು ಲಗ್ನ ಪತ್ರಿಕೆ ಕಳಿಸಿದ್ದು ತುಂಬಾ ಖುಷಿ ಆಯ್ತು.”
ರಾಧಕ್ಕನ ಮಾತು ಕೇಳಿ ಅಪ್ಪ ಗಳ ಗಳ ಅತ್ತರಂತೆ. ಕೇತುಗೂ ತನ್ನ ಅರಿವಿಗೇ ಇರದಿದ್ದ ಕೊಂಡಿಯೊಂದು ರಾಧಕ್ಕನ ರೂಪದಲ್ಲಿ ಸೇರಿಕೊಂಡದ್ದು ಕೌತಕವೆನಿಸಿದಷ್ಟೇ, ಸಂತೋಷವೂ ಎನಿಸಿತ್ತು.

ಅಪ್ಪ ಆ ದಿನವೇ ಹೇಳಿದ್ದರು. ಗಂಡ ಹೆಂಡತಿ ಇಬ್ರೂ ಹೋಗಿ ರಾಧಕ್ಕನ ಆಶೀರ್ವಾದ ತೊಗೊಂಡು ಬನ್ನಿ. ನಮ್ಮ ಕುಟುಂಬದಲ್ಲೇ ಹಿರಿ ಜೀವ ಅದು. ಅದರ ಆಶೀರ್ವಾದ ನಿಮ್ಮನ್ನ ಕಾಪಾಡುತ್ತೆ ಅಂತ. ಹೆಂಡತಿಗೋ ಹೊನ್ನಾವರ, ಕುಮಟೆಯ ಕಡೆಗೆ ಹೋಗುವುದೆಂದರೆ ಪ್ರಾಣ. ಒಂದು ಒಳ್ಳೆಯ ಮೀನೂಟ ಅಥವಾ ಸಿಗಡಿ ತಿನ್ನಬಹುದು,
ಸಾಯಂಕಾಲ ಬೀಚ್ ನಲ್ಲಿ ತಿರುಗಬಹುದು, ಬೋರಾದರೆ ಹೈವೆಯಲ್ಲಿ ಗೋಕರ್ಣಕ್ಕೆ ಹೋಗಿ ಬರಬಹುದು. ಆದರೆ ತನಗೆ ಟೈಮು ಸಿಗಬೇಕಲ್ಲ ಎಂದುಕೊಂಡಿದ್ದ ಕೇತು.
ಹೋದ ತಿಂಗಳಷ್ಟೆ ಧರ್ಮಸ್ಥಳಕ್ಕೆ ಅಂತ ಎರಡು ದಿನ ರಜೆ ಹಾಕಿದ್ದಾಯ್ತು. ಮತ್ತೆ ಮುಂದಿನ ತಿಂಗಳು ಸ್ನೇಹಿತ್ರೊಡನೆ ಚಾರಣಕ್ಕೆ ಹೊರಡಬೇಕು ಎಂದೆಲ್ಲಾ ನೆವ ಹುಡುಕುತ್ತಿದ್ದ ಕೇತು ಮೊನ್ನೆ ಸಡನ್ನಾಗಿ ನಡೀ ಈ ವೀಕೆಂಡ್ ರಾಧಕ್ಕನ್ನ ನೋಡಿಕೊಂಡು ಬರೋಣ ಎಂದಿದ್ದು ಪತ್ನಿ ಕಮಲೆಗೂ ಸಖೇದಾಷ್ಚರ್ಯ ಉಂಟು ಮಾಡಿತು.

*************************

ರಾಧಕ್ಕ , ರಾಧಜ್ಜಿಯಾಗಿ ದಶಕಗಳೇ ಕಳೆದರೂ ಸಂಬಂಧಿಕರ ಬಾಯಲ್ಲೆಲ್ಲ ಆಕೆಯಿನ್ನೂ ರಾಧಕ್ಕಳೇ. ಈ ರಾradhakkaಧಕ್ಕ ಯಾರೂ ಅಂದರೆ ಕೇತುವಿನ ತಾತನ ತಂಗಿ. ಕೇತುವಿನ ತಾತ ಗೋಕರ್ಣದಿಂದ ಸಾಗರ ಬಂದು ಪೌರೋಹಿತ್ಯ ಮಾಡಿ ಸಮಾಜದಲ್ಲೆಲ್ಲಾ ಜನಪ್ರಿಯ ಪುರೋಹಿತರು ಅನ್ನಿಸಿಕೊಂಡವರು. ರಾಧಕ್ಕನಿಗೋ ಗೋಕರ್ಣದಿಂದ 80 ಮೈಲಿ ದೂರದ ಕಡತೋಕಾದ ಗಂಡು ನೋಡಿ ಮದುವೆ ಮಾಡಿಸಿಬಿಟ್ಟಿದ್ದರು. ಆಕೆಗೆ ಗೋಕರ್ಣ , ಬಿಟ್ಟರೆ ಕಡತೋಕವೇ ಲೋಕ. ಆಗೀಗ ಮದುವೆಗೆ ಮುಂಜಿಗೆ ಅಂತ ಹೊನ್ನಾವರಕ್ಕೋ, ಕುಮಟೆಗೋ ಹೋಗಿದ್ದು ಬಿಟ್ಟರೆ ರಾಧಕ್ಕ ಬೇರೆ ಊರು ನೋಡಿದವಳಲ್ಲ. ಹೊನ್ನಾವರಕ್ಕೆ ಹೋಗುವುದೆಂದರೇನೆ ಆಕೆಗೆ ಭಯ. ಆ ಗಾಡಿ ಸದ್ದು, ಜನ, ಗಲಾಟೆ ಅಂತ ರಾಗ ಎಳೆಯುವವಳು. ಕೇತುವಿನ ತಾತ ಸಾಗರದಿಂದ ಪೌರೋಹಿತ್ಯಕ್ಕೆ ಕುಮಟೆ, ಕಾರವಾರದ ಕಡೆ ಹೋಗುವಾಗ ಮಧ್ಯೆ ಕಡತೋಕಾದಲ್ಲಿ ಇಳಿದು ತಂಗಿಯನ್ನ ಮಾತನಾಡಿಸಿಕೊಂಡು ಹೋಗುತ್ತಿದ್ದರು.

ಕೇತುವಿನ ಮದುವೆಯ ಹೊತ್ತಿಗೆ ರಾಧಕ್ಕನಿಗೆ 80 ರ ಆಸು ಪಾಸು. ಕಾರ್ತಿಕದ ದಿನ ತಾನು ಹುಟ್ಟಿದ್ದು ಎಂಬುದು ಬಿಟ್ಟರೆ ಆಕೆಗೆ ತನ್ನ ವಯಸ್ಸಿನ ಅಂದಾಜಿಲ್ಲ. ಅದರ ಲೆಕ್ಕದ ಬಗ್ಗೆಯೂ ಆಸಕ್ತಿಯಿಲ್ಲ.

ಕೇತು ರಾಧಕ್ಕನನ್ನ ನೋಡಲಿಕ್ಕೆ ಕಡತೋಕಾ ಹೋಗ್ತಾ ಇದಾನೆಂದು ತಿಳಿದದ್ದೇ, ಆತನ ಅಪ್ಪ-ಅಮ್ಮ ಇಬ್ಬರೂ ಖುಷಿಯಾಗಿ ಬರ್ತಾ ಆಕೆಯ ಕೈಯಲ್ಲಿ ಐನೂರರ ನೋಟಾದರೂ ಇಟ್ಟಿ ಬಾ. ಆಕೆಯ ಕಾಲಿಗೆ ಬಿದ್ದು ಆಶೀರ್ವಾದ ತೊಗೊಳಕ್ಕೆ ಮರೀಬೇಡ. ಅವರ ಮನೆ ಹಿಂದಿನ ಚೌಂಡಮ್ಮಗೂ ಪೂಜೆ ಮಾಡಿಸಿಕೊಂಡು ಬಾ ಎಂದೆಲ್ಲಾ ಉಪದೇಶದ ಲಿಸ್ಟ ಮಾಡಿ ಹೇಳಿದ್ದರು. ಎಂದಿನಂತೆ ಎಲ್ಲದಕ್ಕೂ ಹೂ ಗುಟ್ಟಿದ್ದ ಕೇತು ತನ್ನ ಕಾರನ್ನು ಸರ್ವೀಸ್ ಗೆ ಬಿಟ್ಟು ಬಂದು ಲ್ಯಾಪಟಾಪಿನಲ್ಲಿ ತನ್ನ ಪ್ರೋಜೆಕ್ಟ್ ಅನ್ನ ಪ್ಲ್ಯಾನ್ ಮಾಡತೊಡಗಿದ.

***********************

ಘಟ್ಟದ ಕೆಳಗೆ ಕಾರು ಓಡಿಸುವುದು ಸರಿಯಲ್ಲವೆಂದು ಎಲ್ಲರೂ ರಗಳೆ ಮಾಡಿದ್ದರಿಂದ ಕೇತು ಮತ್ತು ಕಮಲೆ ಶನಿವಾರ ಬೆಳಿಗ್ಗೆ ಐದರ ಬೆಂಗಳೂರು-ಕುಮಟೆಯ ಬಸ್ಸು ಹತ್ತಿ ಬಂದಿದ್ದರು. ಕಡತೋಕಾ ಇಳಿದಾಗ ಸಂಜೆ ಐದರ ಮಬ್ಬು. ಮುಂಗಾರು ಶುರುವಾಗದಿದ್ದರೂ ಊರಿನ ತುಂಬಾ ಮೋಡ ಮುಚ್ಚಿಕೊಂಡಿತ್ತು. ಬಸ್ಸಿನಲ್ಲಿ ತಾವಿಬ್ಬರು ಇಳಿದದ್ದು ಬಿಟ್ಟರೇ ಆ ರಸ್ತೆಯ ದೂರ ದೂರಕ್ಕು ಜನ ಕಾಣುತ್ತಿಲ್ಲ. ಬಸ್ಸಿನಿಂದ ಇಳಿಯುತ್ತಿದ್ದಂತೆ ಕೇತು, “ಗ್ರಾಮ ಪಂಚಾಯ್ತಿ ಕಡತೋಕಾ , ಸುಸ್ವಾಗತ” ಅಂತ ಇದ್ದ ಹಳದಿ ಫಲಕದ ಫೋಟೊ ತೆಗೆದುಕೊಂಡ.
ಅಲ್ಲಿ ಯಾರನ್ನ ಕೇಳಿದರೂ ರಾಧಕ್ಕನ ಮನೆ ಎಲ್ಲಿ ಎಂದು ಹೇಳುತ್ತಾರೆ ಎಂದು ಅಪ್ಪ ಹೇಳಿದ್ದು ನೆನಪಾಗಿ ರಸ್ತೆಯ ಆ ಬದಿಯಲ್ಲೇ ಇದ್ದ ಪುಟ್ಟ ಕಿರಾಣಿ ಅಂಗಡಿಯೊಂದರಲ್ಲಿ ವಿಚಾರಿಸಿದ.
“ನಿಮಗೆ ಹಾಗೆ ಹೇಳಿದರೆ ಗೊತ್ತಾಗಲಿಕ್ಕಿಲ್ಲ, ನಮ್ಮ ಹುಡುಗನ್ನ ಕಳಿಸ್ತಿನಿ ತಡೀರಿ” ಎಂದು ತನ್ನ ಅಂಗಡಿಯಲ್ಲಿ ಕುಳಿತಿದ್ದ ಹುಡುಗನನ್ನ ಕರೆದು ” ಏ ಅಣ್ಣಪ್ಪಾ, ಇವರಿಗೆ ರಾಧಕ್ಕನ ಮನೆ ಬಿಟ್ಟು ಬಾರೋ, ಹಾಗೆ ಬರ್ತಾ ಶಂಕ್ರಣ್ಣನ ಮನೆಯಿಂದ ಕರಿಬೇವಿನ ಸೊಪ್ಪ ತೊಗೊಂಡು ಬಾ ” ಎಂದ.
ಅಂಗಡಿಯವನ ಉದಾರತೆ ನೋಡಿ ಕೇತು “ನಿಮಗ್ಯಾಕೆ ತೊಂದ್ರೆ, ನಾವೇ ಹೋಗ್ತೀವಿ ಬಿಡಿ” ಅಂದ.
“ಇದ್ರಲ್ಲಿ ತೊಂದ್ರೆ ಎಂತ.. ಅಡ್ಡಿಲ್ಲ ಹುಡುಗನ ಹಿಂದೆ ಹೋಗಿ” ಎಂದ.
ಇಳಿಜಾರಿನ ರಸ್ತೆಯಲ್ಲಿ ದೊಗಳೆ ಚಡ್ಡಿಯ ಅಣ್ಣಪ್ಪ್ ಕೇತುವನ್ನು, ಎರಡು ಮೂರು ಕೇರಿಯೊಳಗೆ ನುಗ್ಗಿಸಿ, ಕಲ್ಲಿನ ಕಂಪೌಂಡಿನ ಎದುರಿಗೆ ಬಿಟ್ಟು ಇದೇ ರಾಧಜ್ಜಿ ಮನೆ ಎಂದು ನಿಲ್ಲದೇ ಓಡಿ ಹೋದ.
ಎರಡೂ ಕಡೆ ಹರಡಿಕೊಂಡಿದ್ದ ಆ ಕೆಂಪು ಕಲ್ಲಿ ನ ಕಂಪೌಂಡಿನಲ್ಲಿ ಇಬ್ಬರು ಒಟ್ಟಿಗೆ ಹೋಗುವ ಹಾಗಿರಲಿಲ್ಲ. ತೀರಾ ಕಿರಿದಾದ ಬಾಗಿಲಿನಲ್ಲಿ ಮೊದಲು ಕೇತು, ಆಮೇಲೆ ಕಮಲೆ ನುಸುಳಿಕೊಂಡು ಒಳ ಹೋದರು. ಎಡಗಡೆ ಬೇಲಿ , ಬಲಗಡೆ ಮಣ್ಣಿನ ಗೋಡೆ ದಾಟಿ ಸ್ವಲ್ಪ ದೂರ ಹೋದ ಮೇಲೆ ವಿಶಾಲ ಹಜಾರ; ಮಧ್ಯೆ ಐದಡಿಯ ತುಳಸಿಕಟ್ಟೆ . ಅದರ ಮೇಲೆ ಹಚ್ಚಿದ್ದ ದೀಪದ ಹಣತೆ ಸಾಯಂಕಾಲವನ್ನೂ ಕೇತುವನ್ನೂ ಬರಮಾಡಿಕೊಳ್ಳುವಂತೆ ಉರಿಯುತ್ತಿತ್ತು.

**************

ಕೇತು-ಕಮಲೆ ಅಂದುಕೊಂಡಂತೆ ರಾಧಕ್ಕ ಎದ್ದು ಕೂರುವ ಸ್ಥಿತಿಯಲ್ಲೂ ಇರಲಿಲ್ಲ. ವಯಸ್ಸು, ಕೆಲಸ ಆಕೆಯನ್ನ ಹೈರಾಣ ಮಾಡಿ ಮೂರು ತಿಂಗಳಿಂದ ಆಕೆ ಹಾಸಿಗೆ ಹಿಡಿದುಬಿಟ್ಟಿದ್ದಳು. ಹಾಸಿಗೆ ಹಿಡಿದರೂ ರೋಗಿಯಂತಿರದೆ, ಹಣೆಯಲ್ಲಿ ದೊಡ್ಡ ಕುಂಕುಮ, ನೀಟಾಗಿ ಬಾಚಿದ ತಲೆಗೂದಲು, ಉರುಟಾದ ಮೂಗುಬಟ್ಟು ಆಕೆಯೊಳಗಿನ ಸೌಂದರ್ಯವನ್ನ ಇಮ್ಮಡಿಗೊಳಿಸಿತ್ತು. ನೋಡಿದವರಿಗೆಲ್ಲ ಪ್ರಸನ್ನತೆ ಉಂಟಾಗುವಂತಹ ನಗುಮುಖ ಅವಳದು. ಕೇತುವಿನ ಮುಖದಲ್ಲೂ ಈ ಸ್ನಿಗ್ದ ನಗುವನ್ನ ಕಮಲೆ ಕಂಡಿದ್ದಳು.
” ಸುಸ್ತು ಅನ್ನೋದು ಬಿಟ್ಟರೆ ನನಗೆ ಎಂಥಾ ರೋಗಾನೂ ಇಲ್ಲ. ರೋಗ ಬಂದ್ರು ಬರದಿದ್ರೂ ಸಾವು ಬರದೇ ಇರುತ್ಯೆ? ಆ ಸಾವಿಗಾಗಿ ಕಾಯ್ತಾ ಇರೋದಷ್ಟೇ ನನ್ನ ಕೆಲಸ. ನಾನು ಹೋಗೋಕೆ ಮುಂಚೆ ನೀವು ಬಂದಿದ್ದು ನನಗೆ ತುಂಬಾ ಸಮಾಧಾನ ಆಯ್ತು.” ಕೇತುವಿನ ಕೈ ಹಿಡಿದುಕೊಂಡು ಹಾಸಿಗೆಯಲ್ಲಿ ಕುಳಿತೇ ಆಕೆ ಮಾತನಾಡುತ್ತಿದ್ದುದು ನೋಡಿ ಕಮಲೆಗೂ ಕಣ್ಣಲ್ಲಿ ನೀರಾಡಿತು.

ಒಂದು ಕಾಲದಲ್ಲಿ ಜನರಿಂದ ಗಿಜಿಗುಡುತ್ತಿದ್ದ ಈ ಮನೆಯಲ್ಲಿ ಈಗ ಇಬ್ಬರೇ, ರಾಧಕ್ಕ ಮತ್ತು ಆಕೆಯ ಮೊಮ್ಮಗ ಮಂತ.
ಮಂತ ರಾಧಕ್ಕನ ಎರಡನೆಯ ಮಗನ ಮಗ. ಮಕ್ಕಳೆಲ್ಲಾ ದೊಡ್ಡವರಾದಂತೆ ಒಬ್ಬೊಬ್ಬರಾಗಿ ಹುಬ್ಬಳ್ಳಿ, ದಾವಣಗೆರೆ, ರಾಯಚೂರು ಅಂತ ಹೊರಟು ಬಿಟ್ಟರು. ಹೆಣ್ಣು ಮಕ್ಕಳ ಮದುವೆಯಾಗಿ ಅವರೂ ದೂರ ಹೋದರು. ರಾಧಕ್ಕನ ಗಂಡ ತೀರಿಕೊಂಡಾಗ ರಾಧಕ್ಕನಿಗೆ 60 ರ ಆಸುಪಾಸು. ಈಕೆಯನ್ನ ನೋಡಿಕೊಂಡು ಇಲ್ಲೇ ಇರಲಿ ಅಂತ ರಾಧಕ್ಕನ ಎರಡನೇ ಮಗನೇ ಮಂತನನ್ನ ಅಜ್ಜಿಯ ಬಳಿ ಕಳಿಸಿಕೊಟ್ಟಿದ್ದ. ಆಗ ಹದಿನೈದರ ಪೋರನಾಗಿದ್ದ ಮಂತ ನಿಗೆ ಈಗ 28 ರ ವಯಸ್ಸು.
ಅವನೇ ಅಡಿಗೆ ಮನೆಯ ಕೆಲಸದ ಜೊತೆಗೆ ಚಿಕ್ಕ ಪುಟ್ಟ ಬಂಗಾರದ ರಿಪೇರಿ ಕೆಲಸ ಮಾಡುತ್ತಾನೆ. ಅಪ್ಪ ತಿಂಗಳಿಗೆ ದಾವಣಗೆರೆಯಿಂದ ಸಾವಿರ ರೂಪಾಯಿ ಮನಿ ಆರ್ಡರ್ ಮಾಡ್ತಾರೆ. ಅದರಲ್ಲೇ ಜೀವನ.

ಮೊದಲು ವರ್ಷಕ್ಕೊಮ್ಮೆಯಾದರೂ ಬರುತ್ತಿದ್ದ ಮಕ್ಕಳು ಈಗ ಅಪರೂಪವಾಗಿಬಿಟ್ಟಿದ್ದಾರೆ. ಗಂಡನ ಶ್ರಾದ್ಧವೂ ದೊಡ್ಡ ಮಗ ಹುಬ್ಬಳ್ಳಿಯಲ್ಲಿ ತನ್ನ ಸ್ವಂತ ಮನೆಯಲ್ಲಿ ಮಾಡುತ್ತಾನೆ. ಸಂಸಾರದಲ್ಲಿ ತಾಪತ್ರಯಗಳು ಬಂದಾಗ ಕಡತೋಕಾದ ಚೌಂಡಮ್ಮ ನೆನಪಾಗಿ ಚೌಂಡಮ್ಮನಿಗೆ ಹರಕೆ ಹೊತ್ತು ಬರುತ್ತಾರೆ, ಬಂದಾಗ ರಾಧಕ್ಕನ ಕೈಯಲ್ಲಿ ಸಾವಿರ, ಎರಡು ಸಾವಿರ ಕೊಟ್ಟು ಹೋಗುತ್ತಾರೆ. ನೀನು ನಮ್ಮ ಜೊತೆ ಬಂದುಬಿಡು ಇಲ್ಲೇನು ಮಾಡುತ್ತೀಯಾ, ಒಬ್ಬಳೆ ಅಂದರೆ ರಾಧಕ್ಕ ಇಲ್ಲ ಅನ್ನುತ್ತಾಳೆ. ದೊಡ್ಡ ಊರುಗಳಲ್ಲಿ ನನಗ ಕಳವಳ ಬಂದುಬಿಡುತ್ತದೆ. ಏನೂ ತೋಚುವುದಿಲ್ಲ. ಹೊನ್ನಾವರ, ಕುಮಟೆಯೇ ನನಗೆ ಆಗಿ ಬರುವುದಿಲ್ಲ, ಇನ್ನು ಅಲ್ಲೆಲ್ಲ ಹೇಗೆ ಬರಲಿ ಅನ್ನುತ್ತಾಳೆ. ಇಲ್ಲಿ ಮಂತ ಇದ್ದಾನಲ್ಲ, ನನ್ನ ಚಿಂತೆ ನಿಮಗೆ ಬೇಡ ಅನ್ನುತ್ತಾಳೆ.
ಬಂದು ಹೋಗುವ ಎಲ್ಲರಿಗೂ ತಾನು ಮಾಡಿದ ಮಿಡಿ ಮಾವಿನಕಾಯಿ ಉಪ್ಪಿನಕಾಯಿಯನ್ನು ಕೊಡಲು ಮಾತ್ರ ರಾಧಕ್ಕ ಮರೆಯುತ್ತಿರಲಿಲ್ಲ.

ಮಂತನಿಗೆ ಮದುವೆ ಮಾಡಿಬಿಡಬೇಕೆಂಬುದು ರಾಧಕ್ಕನ ಆಸೆ. ಆದರೆ ಸರಿಯಾದ ದುಡಿಮೆ ಇಲ್ಲದ ಆತನಿಗೆ ಹೆಣ್ಣು ಕೊಡುವರ್ಯಾರು? ಜೊತೆಗೆ ಈ ಮುದುಕಿಯ ಚಾಕರಿ ಬೇರೆ ಮಾಡಬೇಕು? ಹಾಗಂತ ರಾಧಕ್ಕ ತನ್ನ ಬಳಿ ಇದ್ದ ಐದು ಎಕರೆ ಬರಡು ಜಮೀನನ್ನ ಮಂತನ ಹೆಸರಿಗೆ ಮಾಡಿಸಿಟ್ಟಿದ್ದಾಳೆ. ಮುಂಚೆ ಏನೂ ಬೆಲೆ ಇರದಿದ್ದ ಆ ಜಾಗಕ್ಕೆ ಈಗ ಸಾಗರ-ಹೊನ್ನಾವರ ಹೈವೆ ಆದ ಮೇಲೆ ಬಂಗಾರದ ಬೆಲೆಯಿದೆ. ಎಂದಾದರೂ ಮಂತನಿಗೆ ಉಪಯೋಗಕ್ಕೆ ಬಂದೀತು. ನನ್ನ ಚಾಕರಿ ಮಾಡಿದ್ದಕ್ಕೆ ಇಷ್ಟಾದರೂ ಮಾಡಬೇಡವೇ..?

************

ರಾತ್ರಿಯೆಲ್ಲಾ ಕಮಲೆಗೆ ರಾಧಕ್ಕನೊಡನೆ ಮಾತು, ಮಾತು- ಆಡುತ್ತಿದ್ದರೆ ರಾಧಕ್ಕನಿಗೂ ಆಯಾಸವೆಲ್ಲ ಹೋಗಿ ಹಾಸಿಗೆ ಮೇಲೆ ಎದ್ದು ಕುಳಿತಳು. ನಾಳೆ ಭಾನುವಾರ ಒಳ್ಳೆ ತಾರಲೇ ಮೀನಿನ ಆಮ್ಸೆ ಮತ್ತು ಗಂಜಿ ಮಾಡೋಣ ಎಂದು ರಾಧಕ್ಕ ಲವಲವಿಕೆಯಿಂದ ಮಂತನಿಗೆ ಹೇಳಿದಳು.

ಮಂತನೂ, “ನೀವು ಒಂದುವಾರ ಇದ್ದು ಹೋಗಿ, ಮತ್ತೆ ಮತ್ತೆ ಬರಲಿಕ್ಕಾಗುತ್ತದೆಯೇ? ಬಂದಾಗಲೇ ಉಳಿದುಕೊಂಡು ಬಿಡಬೇಕು. ಬರಬೇಕು ಅಂದರೂ ಬರಲಿಕ್ಕಾಗುವುದಲ್ಲ.” ಯಜಮಾನನಂತೆ ಮಾತನಾಡುವ ಮಂತನನ್ನ ಕಂಡು ಕಮಲೆ ಕೂಡ ಅಚ್ಚರಿ ಪಟ್ಟಳು. ರಾಧಕ್ಕನ ಜೊತೆಗಿದ್ದೂ ಆಕೆಯ ಥರವೇ ಮಾತನಾಡಲು ಕಲಿತುಬಿಟ್ಟಿದ್ದಾನೆ ಎಂದುಕೊಂಡಳು.

ಇತ್ತ ಕೇತು ಮಾತ್ರ ತನ್ನ ಲ್ಯಾಪ ಟಾಪಿನಲ್ಲಿ ಮುಳುಗಿ ಹೋಗಿದ್ದ. ಯಾವುದೋ ಮ್ಯಾಪನ್ನೆಲ್ಲಾ ತೆಗೆದು ನೋಡುತ್ತಾ, ಎನೋ ಲೆಕ್ಕಾಚಾರದಲ್ಲಿ ಮುಳುಗಿದ್ದ. ರಾತ್ರಿಯ ಊಟ ಮುಗಿಸಿ ಮಂತನೊಡನೆ ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟ.

ಮಂತ ಮತ್ತು ಕೇತು ಇಬ್ಬರೂ ನಡೆಯುತ್ತಲೇ ಮನೆಯಿಂದ ಹೊರಬಿದ್ದರು. ಲುಂಗಿ ತೊಟ್ಟು ಬನಿಯನ್ ಹಾಕಿದ ಇಬ್ಬರೂ ನೋಡಲು ಒಂದೇ ತೆರನಾದ ಮುಖ ಭಾವದವರು.

” ನೀನು ಮತ್ತೆ ಮನಸ್ಸು ಬದಲಾಯಿಸುವುದಿಲ್ಲವಲ್ಲ..” ಕೇತು ಕೇಳಲೋ ಬೇಡವೋ ಎನ್ನುವಂತೆ ತನ್ನ ಅನುಮಾನ ಹೊರ ಹಾಕಿದ.
“ಇಲ್ಲ ಭಾವಜೀ.. ನಾನು ನಿರ್ಧಾರ ಕೈಗೊಂಡಾಗಿದೆ. ಈಗ ಆಕೆಯ ಔಷದಿಗೇ ತಿಂಗಳಿಗೆ ಸಾವಿರದ ಮೇಲೆ ಹಣ ಬೇಕು. ಕುಮಟೆಯಿಂದ ಬಂದು ಹೋಗುವ ಡಾಕ್ಟರ್ ಗೆ ಫೀಜಿನ ಜೊತೆಗೆ ಬಂದು ಹೋಗುವ ಚಾರ್ಜು ಕೊಡಬೇಕು. ಅಪ್ಪ ಶೇರು ಮಾರ್ಕೇಟಿನಲ್ಲಿ ಹಣ ಕಳೆದುಕೊಂಡು ಈಗ ಆರು ತಿಂಗಳಿಂದ ಅವರು ಕಳಿಸುವ ಹಣವೂ ನಿಂತು ಹೋಗಿದೆ. ನನಗೂ ಕೆಲಸ ಇಲ್ಲ. ಊರಿನ ಮಂದಿಯೆಲ್ಲಾ. ಹೊನ್ನಾವರದಲ್ಲೋ, ಕುಮಟೆಯಲ್ಲೋ ಮಾರವಾಡಿಗಳ ಕೈಯಲ್ಲಿ ಆಭರಣ ಮಾಡಿಸ್ತಾರೆ. ನನಗೆ ಬೇರೆ ಏನೂ ಕಾಣ್ತಾ ಇಲ್ಲ..”
“ಹ್ಮ್ಮ್ ” ಎಂದು ನಿಟ್ಟುಸಿರಿಟ್ಟ ಕೇತು
” ಅಜ್ಜಿ ಎಷ್ಟು ದಿನ ಬದುಕ್ತಾಳೆ ಅನ್ನೋದು ನನಗೂ ಗೊತ್ತಿಲ್ಲ. ಅವರು ಇರೋವರ್ಗು ನಾನು ಇರ್ತೀನಿ. ಆಮೇಲೆ ನಾನು ಬೆಂಗಳೂರಿಗೋ, ಗೋವೆಗೋ ಹೋಗಿ ಬದುಕು ನೋಡ್ಕೊಬೇಕು. ಈ ಕೊಂಪೆಯಲ್ಲಿ ಎಷ್ಟು ದಿನ ಅಂತ ಇರೋದು ಹೇಳಿ” ಎಂದ.
ಅವನ ನಿರ್ಧಾರಗಳು ಅಚಲವಾಗಿದ್ದನ್ನ ಅವನ ಕಣ್ಣುಗಳು ಮತ್ತು ದೃಢವಾದ ಮಾತುಗಳೇ ಹೇಳುತ್ತಿದ್ದವು.
ಕೇತು ಎಲ್ಲಾ ಒಂದು ಹಂತಕ್ಕೆ ಬಂದದ್ದೇ ನಿರುಮ್ಮಳನಾದ.
“ಹಾಗಿದ್ರೆ ಒಂದು ಕೆಲಸ ಮಾಡೋಣ. ನಾನು ನಾಳೇನೆ ನನ್ನ ಸ್ನೇಹಿತರ ಹತ್ರ ಮಾತನಾಡಿ ಹಣದ ವ್ಯವಸ್ಥೆ ಮಾಡ್ತೀನಿ. ಅದು ಆದ ತಕ್ಷಣ ಎಲ್ಲಾ ವ್ಯವಹಾರ ಮುಗಿಸಿ ಬಿಡೋಣ. ನೀನು ಕಾಗದ ಪತ್ರವನ್ನೆಲ್ಲಾ ಸರಿಯಾಗಿ ಜೋಡಿಸಿಟ್ಟುಕೋ. ಆಮೇಲೆ ಎನೂ ತಾಪತ್ರಯ ವಾಗಬಾರದು, ಅವರೆದುರಿಗೆ” ಅಂದ.
ಕಳೆದ ರಾತ್ರಿಯ ಮೋಡಗಳೆಲ್ಲ ಮರೆಯಾಗಿ ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ಮೂರನೇ ದಿನದ ಚಂದ್ರ ದಾರಿಯುದ್ದಕ್ಕೂ ಬೆಳಕು ಚಲ್ಲಿದ್ದ.
ರಾತ್ರಿ ಮಲಗುವಾಗ ಕಮಲೆ, “ಇಲ್ಲಿ ಎಷ್ಟು ಚಂದ ಇದೇ ಅಲ್ವಾ? ಆ ಅಪಾರ್ಟಮೆಂಟಿಗಿಂತ ಇಲ್ಲೇ ಇರೋಣ ಅನ್ಸುತ್ತೆ ಒಮ್ಮೊಮ್ಮೆ.” ಅಂತ ಹೇಳುತ್ತ ಮಲಗಿದ್ಲು.

**************

ಭಾನುವಾರ ಸಾಯಂಕಾಲವೇ ತಾವು ಹೊರಡ್ತೀವಿ ಅಂತ ತಿಳಿದು ರಾಧಕ್ಕ ಬೇಜಾರಾದಳು. ಆದರೂ ಚೌಂಡಮ್ಮನ ಪೂಜೆ ಮಾಡಿಸ್ಬೇಕೆಂದು ತಾನೆ ಬೇಗನೆ ಸ್ನಾನ ಮಾಡಿ ಅಂಗಳದ ದಾಸವಾಳದ ಹೂವನ್ನು ತಂದು ಚೌಂಡಮ್ಮನ ಪೂಜೆಗೆ ಅಣಿ ಮಾಡಿಸಿದಳು. ಮಡಿ ಮಾಡಿಕೊಂಡಿದ್ದ ಮಂತನೇ ಕೇತುವಿನ ಪರವಾಗಿ ಪೂಜೆ ಮಾಡಿ ಕಡಲೇಬೇಳೆ-ಬೆಲ್ಲದ ಸಿಹಿಪಾಕವನ್ನ ಪ್ರಸಾದ ಮಾಡಿದ. ರಾಧಕ್ಕ ಆದಷ್ಟು ಬೇಗ ಗಂಡು ಮಗುವಾಗಿ ಪುತ್ತು ವಿನ ವಂಶ ಬೆಳೆಯಲಿ ಅಂತ ಆಶೀರ್ವಾದ ಮಾಡಿದಳು.

ಪೂಜೆ ಮುಗಿಸಿದವನೇ ಮಂತ ಗಂಜಿ ಮತ್ತು ತಾರಲೇ ಮೀನಿನ ಆಮಶೆ ಮಾಡುವುದಾಗಿ ಹೇಳಿ ಮೀನು ತರಲು ಹೊನ್ನಾವರಕ್ಕೆ ಹೋದ.

“ರಾಧಕ್ಕ ನೀವು ಆಯಾಸ ಮಾಡಿಕೊಳ್ಳಬೇಡಿ” ಎಂದರೂ ಕೇತುವಿನ ಮಾತನ್ನ ಕೇಳದೇ, ಇಬ್ಬರನ್ನೂ ಹಿತ್ತಲಿಗೆ ಕರೆದುಕೊಂಡು ಹೋದಳು. ಸುಮಾರಷ್ಟು ದೊಡ್ಡದಾಗಿದ್ದ ಹಿತ್ತಲು. ಐದಾರು ತೆಂಗಿನ ಮರ, ಪೇರಲೆ ಹಣ್ಣಿನ ಮರ, ಮರಕ್ಕೆ ತಾಗಿದಂತೇ ಇರುವ ಬಾವಿ, ಕಾಡು ಹೂಗಳು, ಹಿತ್ತಲಿನ ಸುತ್ತಲೂ ದಣಪೆ, ಅದರ ಮಧ್ಯೆಯಲ್ಲೆಲ್ಲೋ ತುಂಬಿಟ್ಟಿದ್ದ ಗುಜರಿ ಐಟಮ್ಮುಗಳು, ನುಗ್ಗೆಕಾಯಿ ಮರ, ಪ್ರತಿಯೊಂದಕ್ಕೂ ಒಂದೊಂದು ಕಥೆ ಒಂದೊಂದು ಇತಿಹಾಸ.
02ನಿನ್ನ ಅಜ್ಜ ಅಂದ್ರೆ ನನ್ನ ಮನೆಯವರಿಗೆ ಹಿತ್ತಲು ಅಂದ್ರೆ ಪಂಚಪ್ರಾಣ. ಈ ತೆಂಗಿನ ಮರಗಳನ್ನೆಲ್ಲಾ ಅವರೇ ನೆಟ್ಟಿ ಸಾಕಿದ್ದು. ಇಲ್ಲಿ ನೆಟ್ಟಿರೋ ಐದು ತೆಂಗಿನ ಮರಗಳು ನನ್ನ ಐದು ಮಕ್ಕಳು ಹುಟ್ಟಿದಾಗ ನೆಟ್ಟಿದ್ದು. ಇದು ಮೊದಲನೆ ಮಗ ನಾರಾಯಣಿ, ಅವನು ಬದುಕೋದೆ ಇಲ್ಲ ಅಂತಾ ಆದಾಗ ಈ ಮರ ನೆಟ್ರು, ಎರಡನೆದು ನಮ್ಮ ಸುನಂದಾ ಹುಟ್ಟಿದಾಗ, ಮೂರನೆದು ಮಂತನ ಅಪ್ಪ ಭಾಸ್ಕರ ಹುಟ್ಟಿದಾಗ, ಆಮೇಲೆ ಇದು ನಾಲ್ಕನೆದು ವಜ್ರು ಹುಟ್ಟಿದಾಗ, ಐದನೆದು ಈ ಮರ ಇದು ತುಂಬಾ ಚೆನ್ನಾಗಿ ಫಲ ಕೊಡುತ್ತೆ ಆದ್ರೆ ಇದರ ಜೊತೆಗೆ ಹುಟ್ಟಿದ ನಮ್ಮ ಸುಲೋಚನಾ ಚಿಕ್ಕ ವಯಸ್ಸಿಗೇ ಹೋಗಿಬಿಟ್ಳು. “ಅವಳು ಹೋಗಿದ್ದು ನನಗೆ ಇವತ್ತಿಗೂ ಆಶ್ಚರ್ಯ. ಆ ದಿನ ಬಿಸಿಲು ಅಂದ್ರೆ ಯಮ ಬಿಸಿಲು, ಅವಳಿಗಿನ್ನೂ ಹದಿನೈದರ ಪ್ರಾಯ. ಇಲ್ಲೇ ಆಟ ಆಡ್ತಾ ಇದ್ದವಳನ್ನ ನಾನು ಬೈದು ಬಾವಿಯಿಂದ ನೀರು ಸೇದಿ ಹಾಕು, ಅಂದೆ ಅಷ್ಟೇ. ಎರಡು ಕೊಡಪಾನ ತಂದು ಸುರಿದವಳು, ಮೂರನೇ ಕೊಡಪಾನ ತರುವಾಗ ಬಿದ್ದವಳು ಮತ್ತೆ ಏಳಲಿಲ್ಲ. ಇಲ್ಲಿ ನೋಡಿ, ಇದೇ ಜಾಗದಲ್ಲೇ ಅವಳು ಬಿದ್ದಿದ್ದು ಎಂದು ಮರಳುಕಲ್ಲುಗಳಿಂದ ತುಂಬಿಕೊಂಡಿದ್ದ ನೆಲ ತೋರಿಸಿದಳು.
ಮಗಳನ್ನ ನೆನೆಸಿಕೊಂಡಂತೆ ರಾಧಕ್ಕನ ಕಣ್ಣು ನೀರಾಯಿತು; ಕೇತು ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದೇ ಮುಖ ಕೆಳಗೆ ಹಾಕಿದ. ಕಮಲೆ ಆಕೆಯ ಕೈ ಹಿಡಿದು ಮನೆ ಒಳಗಿನ ಹಜಾರದವರೆಗೂ ತಂದು ಕಟ್ಟೆಯ ಮೇಲೆ ಕೂರಿಸಿದಳು.
ರಾಧಕ್ಕನ ಮನೆ ನೂರು ವರ್ಷದಷ್ಟು ಹಳೆಯದು. ಉದ್ದನೆಯ ಹಜಾರಕ್ಕೆ ಎರಡು ಗಿಡ್ಡ ಬಾಗಿಲು. (ರೆಡ್ ಆಕ್ಸೈಡ್ ) ಕಾವಿ ಬಣ್ಣದ ರೆಡ್ ಆಕ್ಸೈಡ್ ನೆಲ. ಬಾಗಿಲಿನ ಮೇಲೆ ಮಹಾಲಸಾ ದೇವರ ದೊಡ್ಡ ಫೋಟೊ. ಅದರ ಪಕ್ಕಕ್ಕೆ ರಾಧಕ್ಕನ ಮಾವ-ಅತ್ತೆಯರ ಫೋಟೊ, ಅದಕ್ಕೆ ತಾಗಿಕೊಂಡಂತೆ ನೆಂಟರಿಷ್ಟರ ಸಾಲು ಸಾಲು ಫೋಟೊಗಳು. ಹಂಚುಗಳ ಭಾರವನ್ನ ಹೊತ್ತಿರುವ ಉದ್ದನೆಯ ರೀಪೀಸುಗಳು. ರೀಪಿಸುಗಳ ನಡುವೆ ಬೂದಿ ಬಣ್ಣದ ಗಂಟುಗಳು. ಕೇತು ಅದೇನು ಎನ್ನುವಂತೆ ಕೇಳಿದ.
“ಅದು ನಮ್ಮ ಮನೆಯವರ ಅಸ್ಥಿ” ಎಂದ ರಾಧಕ್ಕನಿಗೆ ಗಂಡನ ನೆನಪಾಯಿತು..
“ನಮ್ಮ ಮನೆಯವರಿಗೆ ಪ್ರಾಣ ಬಿಟ್ರೆ ಹಿತ್ತಲಿನಲ್ಲೇ ಪ್ರಾಣ ಬಿಡಬೇಕು ಅಂತ ಆಸೆಯಿತ್ತು. ಆದರೆ ಅವರು ಸ್ನಾನದ ಮನೆಯಲ್ಲಿ ಬಿದ್ದು ತೀರಿಕೊಂಡುಬಿಟ್ರು ಎಂದು ಒಳಗೆ ಕರೆದುಕೊಂಡು ಹೋದ್ರು. ಸ್ನಾನದ ಮನೆಯ ಬಾಗಿಲು ತೆಗೆದು ತೋರಿಸಿದ್ರು, ಸಾಯುವ ಮುನ್ನ ’ರಾಧಾ…’ ಅಂದ್ರು ಅಷ್ಟೇ, ನಾನು ತುಳಸಿಕಟ್ಟೆ ಸುತ್ತುತ್ತಾ ಇದ್ದವಳು ಓಡಿ ಬಂದೆ ಪ್ರಾಣ ಹೋಗಿಬಿಟ್ಟಿತ್ತು. ಇವತ್ತು ನನಗೆ ಈ ಸ್ನಾನದ ಮನೆ ಕಂಡ್ರೆ ಅವರು ಕೊನೆ ಸಾರಿ ಕರೆದದ್ದು ನೆನಪಾಗುತ್ತೆ.
ನನ್ನ ಮೈದುನ ತುಂಬಾ ಗಟ್ಟಿ. ನಮ್ಮ ಮನೆಯವರಿಗಿಂತ ಹೆಚ್ಚು ಅವನೇ ದುಡಿತಿದ್ದ , ಊರುರು ತಿರುಗ್ತಿದ್ದ. ಏನು ಮಾಡ್ತಾನೆ ಅಂತ ಗೊತ್ತಿರಲಿಲ್ಲ , ಆದರೆ ತಿಂಗಳಿಗೊಮ್ಮೆ ಮನೆಗೆ ಬೇಕಾಗಿದ್ದೆಲ್ಲ ತಂದು ಕೊಡ್ತಿದ್ದ. ಮದುವೆ ಮಾಡ್ಬೇಕು ಅಂತ ನಮ್ಮ ಮಾವ ಎಲ್ಲಾ ತುಂಬಾ ಹೇಳಿದ್ರು ಕೇಳಿರ್ಲಿಲ್ಲ. ಕೊನೆಗೆ ನನ್ನ ಮಾತಿಗೆ ನಾಚಿಕೆಯಿಂದ ಹೂಂ ಅಂದಿದ್ದ. ಇನ್ನೇನು ಆಷಾಢ ಕಳೆದ ಮೇಲೆ ಮದುವೆ ಮಾಡುದೇ ಅಂದಾಗ ದೇವರ ಕೋಣೆಲಿ ಪೂಜೆ ಮಾಡ್ತಿದ್ದವನು ಹಾಗೇ ಹೋಗ್ಬಿಟ್ಟ.

ನಮ್ಮ ಮಾವನವರು ಈ ಕೋಣೆಯಲ್ಲಿ ಕೊನೆವರೆಗೂ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ರು. ಅವರ ಸಾವು ಮಾತ್ರ ಯಾರಿಗೂ ಬೇಡ. ನಾನೇ ಸಾಯೋ ತನಕ ಅವರ ಚಾಕರಿ ಮಾಡಿದೆ, ಕೊನೆ ಕೊನೆಯಲ್ಲಿ ಮಾತನಾಡಲಿಕ್ಕೂ ಆಗದೆ ಅವರು ಸನ್ನೆ ಯಲ್ಲೇ ಎಲ್ಲವನ್ನು ಹೇಳ್ತಾ ಇದ್ರು. ಎಷ್ಟೊಂದು ಜನರ ಸಾವು ನೋಡಿದೆ ಈ ಮನೆ. ನಮ್ಮ ಅತ್ತೆ ಅಂತೂ ನಾ ಬರೋ ಮೋದಲೇ ಅಂಗಳದಲ್ಲೇ ಹಾಸಿಗೆ ಹಿಡಿದು ಹೋಗಿ ಬಿಟ್ರಂತೆ. ಆಗಿನ್ನೂ ನನ್ನ ಮದ್ವೆ ಆಗಿಲ್ಲ. ಈಗ ಪ್ರತಿ ದಿನ ನನ್ನ ಸಾವು ಎಲ್ಲಿ ಬರುತ್ತೆ ಅಂತ ಕಾಯ್ತಾ ದಿನಾ ದೂಡ್ತಾ ಇದೀನಿ. ಆ ದೇವರು ನನಗೆಲ್ಲಿ ಸಾವು ಕೋಡ್ತಾನೋ? ನಾವು ದಿನ ಓಡಾಡೋ ಜಾಗದಲ್ಲಿ , ಇರೋ ಮನೆಯಲ್ಲಿ ಏನೆಲ್ಲಾ ನಡೆದಿರುತ್ತೆ, ನಾವು ಎಲ್ಲಾ ಮರೀತಾ ಹೋಗ್ತೀವಿ, ಮರೀಬೇಕು ಕೂಡ. ಆದರೆ ನನಗೆ ಮಾತ್ರ ಯಾಕೋ ಇದೆಲ್ಲಾ ನೆನಪಾಗ್ತಾನೆ ಇರುತ್ತೆ. ಈ ಸಾವು ನಡೆದ ಜಾಗ ಎಲ್ಲ ನನ್ನ ತಲೆಯಲ್ಲಿ ಗಟ್ಟಿಯಾಗಿ ಕೂತ್ಕೊಂಡು ಬಿಟ್ಟಿದೆ.
ನನಗೇನಾದ್ರು ನಿನಗೆ ಎಲ್ಲಿ ಸಾವು ಬೇಕು ಅಂಥ ಯಮಧರ್ಮರಾಯ ಕೇಳಿದ್ರೆ, ಇಲ್ಲೇ ಈ ಪಕ್ಕದ ಕೋಣೆಯಲ್ಲಿ ನಮ್ಮ ಶೋಭನ ನಡೆದ ಕೋಣೆಯಲಿ ಅಂತೀನಿ “ಅಂದು ನಕ್ಕರು. ಇಡೀ ಬದುಕಿನ ವ್ಯಂಗ್ಯ ಕಮಲೆಗೆ ಆ ನಗುವಿನಲ್ಲಿ ಕಂಡಿತ್ತು.
**************
ಕೊನೆಗೂ ತಾರಲೆಯ ಆಮಶೆ ತಿಂದು ಸಾಯಂಕಾಲ ಆರರ ಬಸ್ಸಿಗೆ ಕೇತು – ಕಮಲೆ ಇಬ್ಬರೂ ಹೊರಟರು. ಹೊರಡುವ ಮುಂಚೆ ರಾಧಕ್ಕನ ಕಾಲಿಗೆ ಬಿದ್ದು ಐದು ಸಾವಿರದ ಕಂತೊಂದನ್ನು ರಾಧಕ್ಕನ ಕೈಗಿಡಲು ಧೈರ್ಯ ಬರದೇ, ಮಂತನಿಗೆ ಕೊಟ್ಟ. ಅಷ್ಟು ಹಣ ತೆಗೆದುಕೊಟ್ಟದ್ದು ನೋಡಿ ಕಮಲೆಯೂ ಖುಶಿಯಾದಳು.
ಕಡತೋಕಾದಲ್ಲಿ ನೆಟ್ ವರ್ಕ್ ಇರದ್ದರಿಂದ ಹೊನ್ನಾವರ ಬರುವುದನ್ನೇ ಕಾಯುತ್ತಿದ್ದ ಕೇತು ಮೊಬೈಲ್ ಎತ್ತುಕೊಂಡ.
” ಎಲ್ಲಾ ನೋಡಿದೆ , ಸ್ಪೇಸ್ ತುಂಬಾ ಸ್ಯೂಟೇಬಲ್ ಆಗಿದೆ. ಹದಿನೈದು ಗುಂಟೆ ಅಂದರೆ ಸುಮಾರು ಐದು ಏಕರೆ ಇದೆ ಅನ್ನಬಹುದು. ಹೈವೆ ನಂ 27 ನಲ್ಲಿ ಇದೆ. ಬೆಂಗಳೂರಿಂದ ಸಿಕ್ಸ್ ಹವರ್ಸ್ ಅಂತ ಇಟ್ಕೊಬಹುದು. ನಾವು ಅಂದುಕೊಂಡ ಹಾಗೆ ರೆಸಾರ್ಟ್ ಗೆ ತುಂಬಾ ಪಕ್ಕಾ ಪ್ಲೇಸ್ ಆಗುತ್ತೆ. ಮಾರ್ಕೇಟ್ ವ್ಯಾಲ್ಯೂ 1.5 ಕ್ರೋರ್ ತನಕ ಇದೆ, ನಾನು 60 ಲಕ್ಷಕ್ಕೆ ಒಪ್ಸಿದಿನಿ. ಆಮೇಲೆ ಅಟ್ಲಿಸ್ಟ್ 1 ಕ್ರೋರ್ ಇನ್ವೆಸ್ಟ್ ಮೆಂಟ್ ಬೇಕಾಗುತ್ತೆ. ಲೆಟ್ ಅಸ್ ಇನಿಷಿಯೇಟ್ ದಿಸ್.. ನಾಳೆ ಜೆ ಪಿ ನಗರ ಸಬ್ ವೇ ಗೆ ಬಂದು
ಬಿಡು ಅರೌಂಡ್ ಸಿಕ್ಸ್, ಮಾತಾಡೋಣ ” ಎಂದು ಉತ್ಸಾಹದಿಂದ ಫೋನ್ ಇಟ್ಟ.
ಏನೂ ಅರ್ಥವಾಗದೇ ಯಾವ ಜಾಗ ನೋಡಿದ್ರಿ? ಎನು ಕಥೆ? ಎಂದು ಕಮಲೆ ಹುಬ್ಬೇರಿಸಿದಳು.
03“ರಾಧಕ್ಕ , ಮಂತನಿಗೆ ಬರೆದುಕೊಟ್ಟ ಜಾಗ ಇದೆಯಲ್ಲ, ಅದನ್ನವನು ಸೇಲ್ ಮಾಡ್ತಾನಂತೆ.. ಸೋ ನಾನು ಹೇಳ್ತಾ ಇದ್ನಲ್ಲಾ ಏನಾದ್ರೂ ಬ್ಯೂಸಿನೆಸ್ ಪ್ಲಾನ್ ಮಾಡ್ಬೇಕು ಅಂತ , ಈಗ ಒಳ್ಳೆ ಡೀಲ್ ಸಿಕ್ಕಿದೆ. ನಮ್ಮ ಆಡಿಟರ್ ಮಹೇಶ್ ಇದಾರಲ್ಲ ಅವರ ಜೊತೆ ಸೇರಿ ಇಲ್ಲೊಂದು ರೆಸಾರ್ಟ್ ಮಾಡಿದ್ರೆ ಬ್ಯೂಸಿನೆಸ್ ಕೂಡ ಕ್ಲಿಕ್ ಆಗುತ್ತೆ, ಜೊತೆಗೆ ನಾವು ಬೇಕೆಂದಾಗಲೆಲ್ಲ ಇಲ್ಲಿ ಬರಬಹುದು..” ಅಂದ.
ಕಮಲೆಗೆ ಗೆ ಅಕ್ಷರಶಃ ಏನು ಹೇಳಬೇಕು ತಿಳಿಯದೇ, ಕಿಟಕಿಯ ಹೊರಗೆ ಕಣ್ಣಾಡಿಸಿದಳು. ಹೊನ್ನಾವರದ ಪೇಟೆಯ ಹೈವೆಯ ಮೇಲೆ ಹರಡಿದ್ದ ಹಸಿ ಮೀನಿನ ವಾಸನೆ ಮೂಗನ್ನೆಲ್ಲಾ ಆವರಿಸಿತು.

ಚಿತ್ರಗಳು : ನಿಹಾರಿಕಾ ಶೆಣೈ 

ಪ್ರತಿಕ್ರಿಯಿಸಿ