ಜೆಕ್ ಗಣರಾಜ್ಯದ ಕಥೆ : ರಿವಾಜು

ಸಿಜೇರಿಯನ್ ಮಾಡಬೇಕು ಅಂದಾಗಲೇ ಅವಳಿಗೆ ಅನಿಸಿತ್ತು – ಅಸಾಮಾನ್ಯ ಗರ್ಭಧಾರಣೆ ಅಂದ ಮೇಲೆ ಅಸಾಧಾರಣ ಪ್ರಸೂತಿ.
“ಚೊಚ್ಚಲ ಬಸುರೀನಾ?”
“ಹೌದು.”
“ವಯಸ್ಸು?”
“ಮುವತ್ತನಾಲ್ಕು.”
ತನ್ನ ಕಡೆಗೆ ಬಗ್ಗಿದ ಮುಖದಲ್ಲಿ ಭರವಸೆಯನ್ನು ಹುಡುಕುತ್ತಾ ದೀರ್ಘವಾಗಿ ಉಸಿರಾಡಲು ಯತ್ನಿಸಿದಳು.
“ಹೆದರಿಕೆಗೆ ಏನೂ ಕಾರಣ ಇಲ್ಲ. ಅನಸ್ಥೇಸಿಯ ಕೊಟ್ಟಿರುತ್ತೆ, ಸಿಸ್ಟರ್ ಬೆಕ್ಕಾ ನಿಮಗೆ ಎಲ್ಲಾ ವಿವರವಾಗಿ ಹೇಳ್ತಾರೆ.”
ನರ್ಸ್ ಬೆಕ್ಕಾ ಮುಖ ಕಪ್ಪಿಟ್ಟಿತು. “ಅಲ್ಲಾ ಡಾಕ್ಟ್ರೇ, ಎಲ್ಲಿಗೆ ಹಾಕೋಣ?”
“ಹಾಗಂದ್ರೆ ಹೇಗೆ ಸಿಸ್ಟರ್? OTಗೆ ಕರ್ಕೊಂಡು ಹೋಗಿ.”
“ಅದು ಗೊತ್ತು. ಮುಗಿದ ಮೇಲೆ ಎಲ್ಲಿಗೆ ಅಂತ?”
“ಮುಗಿದ ಮೇಲೆ? ನನಗಂತೂ ಒಂದೂ ಗೊತ್ತಿಲ್ಲ. ಸಂತೆ ಇದ್ದಹಾಗಿದೆ. ಎರಡನೇ ಮಾಳಿಗೆಯಲ್ಲಿ ಜಾಗ ಇದೆಯಂತೆ ನೋಡಿ.”
“ಅಲ್ಲಿ ಓಡಾಡೋ ದಾರೀಲಿ ಬರೀ ಪರದೆ ಕಟ್ಟಿ ಮಲಗಿಸಿದ್ದಾರೆ.”
“ಏನು?”
“ಹೌದು, ಕಾರಿಡಾರ್‌ನಲ್ಲೇ ಪರದೆ ಹಿಂದೆ…”
ಡಾಕ್ಟರ್ ಒಂದು ಕ್ಷಣ ಅವಾಕ್ಕಾದಂತೆ, ನಂಬಲಾರದೇ ತಲೆಯಾಡಿಸಿ ಹೊರಟರು.
“ಇನ್ನು ಬೆಂಕಿ ಬೀಳೋದೊಂದು ಬಾಕಿ…”

ಹತ್ತಿರದ ಎಲ್ಲಾ ಆಸ್ಪತ್ರೆಗಳಲ್ಲಿ North Shore University ಆಸ್ಪತ್ರೆಯೇ ಉತ್ತಮವೆಂದು ಅಲ್ಲಿಗೇ admit ಆಗಿದ್ದು. ೨೦೦೪ನೇ ಇಸವಿಯ ಮೇ ತಿಂಗಳ ಕೊನೆಯ ವಾರ ನ್ಯೂಯಾರ್ಕಿನ ಹೆರಿಗೆ ಆಸ್ಪತ್ರೆಗಳಿಗೆಲ್ಲಾ ಗರ್ಭಿಣಿಯರು ಮುತ್ತಿಗೆ ಹಾಕಿದಂತಿತ್ತು. ಯಾವ ಮುನ್ಸೂಚನೆಯೂ ಇಲ್ಲದ ಈ ಲಗ್ಗೆ ಬರಿಯ ಅಂಕಿಅಂಶಗಳ ಲೆಕ್ಕವನ್ನು ಇಡುವವರಿಗೆ ಅರ್ಥವೇ ಆಗಿರಲಿಲ್ಲ.
ಒಂಬತ್ತು ತಿಂಗಳ ಹಿಂದೆ ಅಮೆರಿಕಾದ ಪೂರ್ವ ಕರಾವಳಿ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಕಡಿತವಾಗಿ ಸಾವಿರಾರು ಜನರು ರೈಲಿನಲ್ಲಿ, ಲಿಫ್ಟಿನಲ್ಲಿ, ಸುರಂಗದಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿದ್ದರು. ಮನೆ ಸೇರಿದ್ದ ಅದೃಷ್ಟವಂತರು ಟೀವಿ ವಿಡಿಯೋ ಇಲ್ಲದೆ ಮೋಂಬತ್ತಿಯ ಬೆಳಕಿನಲ್ಲಿ ರಾತ್ರಿ ತಳ್ಳುವಂತಾಗಿ, ಕೊನೆಯಿಲ್ಲದ ಛಳಿರಾತ್ರಿಯನ್ನು ಕಳೆಯಲು ಕಾಸಿಲ್ಲದವರೂ ತೊಡಗಬಹುದಾದ ಕೇಳಿಯಲ್ಲಿ ಮೈಮರೆತಿದ್ದರು. ನವಮಾಸಗಳ ನಂತರ ಹೆರಿಗೆ ಆಸ್ಪತ್ರೆಗಳಿಗೆ ಲಗ್ಗೆಯಾಗದೆ ಇನ್ನೇನು!
ಎರಡು ಮೂರು ಹಾಸಿಗೆಯ ವಾರ್ಡುಗಳಲ್ಲಿ ಆರು ಏಳು ಬಸುರಿಗಳು ನರಳುವುದು ಡಾಕ್ಟರು, ನರ್ಸ್‍ಗಳಿಗೆ ಬೆವರಿಳಿಸಿತ್ತು.

ಇದೆಲ್ಲದರ ನಡುವೆ ಲಾರಾ ಸಿಕ್ಕಿಹಾಕಿಕೊಂಡಿಕ್ಕು ಅವಳ ತಪ್ಪಲ್ಲ. ಪ್ರಣಾಳ ಶಿಶು ತಜ್ಞರ ಹಲವು ವರ್ಷಗಳ ನಿರಂತರ ಶ್ರಮದಿಂದ ಈಗ ದಿನ ತುಂಬಿತ್ತು. IVF ಬಗ್ಗೆ ಲಾರಾಗೆ ಗೊತ್ತಿರದ ವಿಷಯವಿರಲಿಲ್ಲ. ಇಷ್ಟೆಲ್ಲ ಕಷ್ಟಪಟ್ಟ ಮೇಲೆ ಹೀಗಾಯಿತಲ್ಲಾ, ಬಟ್ಟೆಯೊಂದನ್ನು ನೇತುಹಾಕಿ ಅದರ ಹಿಂದೆ ಹೆರುವಂತಾಯಿತಲ್ಲಾ ಎಂದು ತನ್ನ ಹಣೆಬರಹವನ್ನು ಹಳಿದು ಬಿಕ್ಕಿದಳು.

ನೆನೆದವರ ಮನದಲ್ಲಿ ಎಂಬಂತೆ ಲ್ಯಾರಿ ಪ್ರತ್ಯಕ್ಷನಾದ. ಅವನ ಕೈಯನ್ನು ಗಟ್ಟಿಯಾಗಿ ಒತ್ತಿಹಿಡಿದು ಆದ ಅನ್ಯಾಯವನ್ನು ತೋಡಿಕೊಂಡಳು. ಅವನು ಸಮಾಧಾನಪಡಿಸುತ್ತಾ “ಹೋಗಲಿ ಬಿಡು. ಹೇಗಿದ್ರೂ ಹೆರಿಗೆ OTಯಲ್ಲಿ ಮಾಡ್ತಾರೆ. ವಾರ್ಡಲ್ಲಿ ಹಾಸಿಗೆ ಸುತ್ತ ಶುಭ್ರ ಬಿಳಿ ಬಟ್ಟೆಯನ್ನು ಹರಡುವ ಏರ್ಪಾಡು ನಾನು ಮಾಡ್ತೀನಿ. ನೀನೇನೂ ಹೆದರಬೇಕಿಲ್ಲ… ಸರಿ, ನಾನು ಇವತ್ತು ಕೆಲಸಕ್ಕೆ ಬರೋಲ್ಲ ಅಂತ ಫೋನ್ ಮಾಡ್ಬೇಕು. ಜ್ಯಾಕ್‍ಗೂ ಫೋನ್ ಮಾಡ್ತೀನಿ. ಅವನಿದ್ರೆ ನನಗೂ ಅದೇನೋ ಸಮಾಧಾನ. ಖುಷಿಯಿಂದ ಕುಣೀತಾನೆ ನೋಡ್ತಾ ಇರು.”

ಲ್ಯಾರಿಯ ಬೆನ್ನ ಹಿಂದೆಯೇ ಬಂದ ನರ್ಸ್ ಬೆಕ್ಕಾ ನಿರಾಳವಾದ ದನಿಯಲ್ಲಿಯೇ “ಯಾರದು ಜ್ಯಾಕ್? ನಿಮ್ಮ ಅಣ್ಣಾನಾ?”.
“ಅಲ್ಲ, ಗಂಡನ ಸಹಪಾಠಿ, Harvardಇನಲ್ಲಿ.” Harvard ಶಬ್ದಕ್ಕೆ ಎಂದಿನಂತೆಯೇ ಘನತೆಯ ಒತ್ತು ಸೇರಿತ್ತು.
“ಸರಿ… ಶುರು ಮಾಡೋಣವಾ?” ಎಂದು ನರ್ಸ್ ಕೇಳಿದಾಗ ಮೈ ನಡುಗಿದಂತಾಗಿ ಎದೆ ಬಡಿದುಕೊಳ್ಳತೊಡಗಿತು. ಸುತ್ತಲಿನ ವಾರ್ಡ್‍ಗಳಿಂದ ನರಳುವಿಕೆಯ ಸದ್ದು ಕಿವಿಗೆ ಅಪ್ಪಳಿಸಿತ್ತು. ವೈದ್ಯರುಗಳ ಅರ್ಥಹೀನ ಪದಗಳ ಪರದೆಯನ್ನು ಸೀಳಿದಂತೆ ನರ್ಸ್‍ ಒಬ್ಬಳ ಕೂಗು… “ಇನ್ನೆರಡು ಬಸುರಿ admit ಮಾಡ್ಕೋಬೇಕಂತೆ”

ಬೆನ್ನೆಲುಬುಗಳ ನಡುವೆ ಸೂಜಿ ತೂರಿಸಿದ ನೋವು ಕ್ಷಣಮಾತ್ರದಲ್ಲಿ ಮಾಯವಾಗಿತ್ತು. ಮುಂದಿನದೆಲ್ಲವನ್ನು ಓಡುತ್ತಿರುವ ರೈಲಿನ ಕಿಟಕಿಯಿಂದ ನೋಡಿದಂತೆ. ಎದೆಯ ಮಟ್ಟಕ್ಕೆ ಗಿಡ್ಡ ಪರದೆಯೊಂದನ್ನು ತಂದು ನಿಲ್ಲಿಸಿದರು – ಏನೂ ಕಾಣದಿರಲೆಂದು. ಆದರೆ ಹೊಳೆಯುತ್ತಿದ್ದ OTಯ ದೀಪಗಳಲ್ಲಿನ ಪ್ರತಿಬಿಂಬದಲ್ಲಿ ಎಲ್ಲವೂ ಬಟಾಬಯಲಾಗಿತ್ತು.
ಕತ್ತರಿಸಿ, ಮೊಣಕೈವರೆಗೂ ಡಾಕ್ಟರ್ ಹೊಟ್ಟೆಯೊಳಕ್ಕೆ ಕೈಹಾಕಿ ಶಿಶುವನ್ನು ಹೊರತೆಗೆಯಲು ಎರಡು ನಿಮಿಷವೂ ಹಿಡಿಯಲಿಲ್ಲ. ಈ ರಕ್ತಸಿಕ್ತ ಮಾಂಸದ ತುಂಡಿಗೋಸ್ಕರವೇ ನಾನು ಅಷ್ಟೆಲ್ಲಾ ಚಿತ್ರಹಿಂಸೆ ಸಹಿಸಿಕೊಂಡಿದ್ದು? ಒಂದೊಂದಾಗಿ ತಲೆಯೊಳಗೆ ಸಾವಿರಾರು ಚಿತ್ರಗಳು ಸರಪಳಿಯಂತೆ ಓಡಹತ್ತಿದವು:
ಅಂಡಾಶದ ಪ್ರಣಾಳಿಕೆ, ಇಂಜೆಕ್ಷನ್ನುಗಳ ಸೂಜಿ, ಡಾಕ್ಟರುಗಳ ಭರವಸೆಯ ಮಾತು, ಅಪೇಕ್ಷೆಯ ತುಡಿತ, ನಿರಾಶೆಯ ಕಣ್ಣೀರು… ಜೊತೆಗೆ ಎಲ್ಲವನ್ನೂ ಜೋಪಾನವಾಗಿ Excel ಪಟ್ಟಿಗಳಲ್ಲಿ ದಾಖಲಿಸುತ್ತಿರುವ ಗಂಡ, ಎಲ್ಲವೂ ನೆನಪಾದವು.
ಹೊಲಿಗೆ ಹಾಕಿ ಮುಗಿಸುವುದರಲ್ಲಿ ಯುಗವೇ ಮರಳಿದಂತಾಗಿತ್ತು.

ಕಾರಿಡಾರಿನಲ್ಲಿ ಸುತ್ತ ಅಚ್ಚಬಿಳಿ ಪರದೆಯನ್ನು ಹಾಕಿದ್ದ ಹಾಸಿಗೆಯ ಮೇಲೆ ಅವಳನ್ನು ಮಲಗಿಸಿ ಮಗುವನ್ನು ಎಲ್ಲಿಗೋ ಎತ್ತಿಕೊಂಡು ಹೋದರು. ಅವಳೆಡೆಗೆ ತಿರುಗಿದ ವೈದ್ಯರೆಲ್ಲರ ಕಣ್ಣುಗಳೂ ಗಾಬರಿಯಿಂದ ಅರಳಿದ್ದವು. ಹೆಚ್ಚಾಗಿದ್ದ ರಕ್ತದೊತ್ತಡ ಇಳಿಯದಿದ್ದನ್ನು ಕಂಡು drips ಚುಚ್ಚಿ ಏನಾಗುತ್ತೋ ನೋಡೋಣ ಎಂಬಂತೆ ಆಗಾಗ ಬಂದು ಆತಂಕದಿಂದ ಕಣ್ಣುಹಾಯಿಸಿ ಹೋಗುತ್ತಿದ್ದರು.

ಬೆವರುತ್ತಿದ್ದ ಅವಳ ಮುಖದ ಹತ್ತಿರಕ್ಕೆ ಬಗ್ಗಿ ನಿಂತ ಲ್ಯಾರಿಯ ಉಸಿರಿನಲ್ಲಿ ಬೆಳಗ್ಗೆ ತಿಂದಿದ್ದ ಬೇಗಲ್‍ನ ನಾತ ಮೂಗಿಗೆ ರಾಚಿ ಹೊಟ್ಟೆ ತೊಳೆಸಿದಂತಾಯಿತು.
ದನಿ ಏರಿಸಿ “ಏನಾಗ್ತಿದೆ? ಸಮಾಧಾನ ಮಾಡ್ಕೋಬೇಕು ಗೊತ್ತಾಯ್ತಾ? BP ಜಾಸ್ತಿಯಾಗಿದೆಯಂತೆ. ಡಾಕ್ಟರ್ ಹೇಳಿದ್ರು. ಕೇಳಿಸ್ತಾಯಿದ್ಯಾ? ಏನೇ? ಮಾತಾಡೇ…”
ಒಂಟಿಯಾಗಿ ಬಿಟ್ಟು ಎಲ್ಲಿಗಾದರೂ ತೊಲಗಬಾರದೇ ಎನ್ನಿಸಿ ಕಣ್ಣು ಮುಚ್ಚಿಕೊಂಡಳು.
“ಸರಿ… ಇಗೋ ಹೊರಟೆ. ನೀನು ಮಾತ್ರ ಸಮಾಧಾನ ತಂದ್ಕೋಬೇಕು ಗೊತ್ತಾ? ಭಾನುವಾರಕ್ಕಾಗಲೇ ರೆಸ್ಟೋರೆಂಟ್ ಬುಕ್ ಮಾಡಿದ್ದೀನಿ. ಏಲ್ಲರನ್ನೂ ಒಂದ್ಸಲ ಫೋನ್ ಮಾಡಿ ಬನ್ನಿ ಅಂತ ಹೇಳ್ಬೇಕು. ನೀನು ಮಾತ್ರ ಏನೂ ಯೋಚನೆ ಮಾಡ್ಬೇಡ, ತಿಳೀತಾ? ಅಂದ್ಹಾಗೆ, ಜ್ಯಾಕ್ ಇಲ್ಲೇ ಇದಾನೆ. ಬೆಳಿಗ್ಗೆಯಿಂದ ಏನೂ ತಿಂದಿಲ್ಲ ಅಂತ ಕ್ಯಾಂಟೀನ್‍ಗೆ ಹೋದ. ಕೇಳಿಸ್ತಾ? ಜ್ಯಾಕ್ ಬಂದಿದಾನೆ. ಕರ್ಕೊಂಡ್ ಬರ್ಲಾ? ಆಂ?”
“ಸಧ್ಯ, ಅವನೊಬ್ಬ ಬಾಕಿ! ಬೋನಿನಲ್ಲಿ ಮಲಗಿರೋ ನನ್ನ ನೋಡೋಕೆ ಅವನೂ ಬರಲಿ”
“ಏನು? ಜ್ಯಾಕ್ ಬರೋದ್ ಬೇಡ್ವಾ”
“ಬೇಡ.”
“ಸರಿ… ಕೋಪ ಮಾಡ್ಕೋಬೇಡ. ನಾನು ಬರ್ತೀನಿ”
ಅವನು ಹೊರಟ ಕ್ಷಣ ಜೀವ ಬಂದಹಾಗಾಯ್ತು. ಬಾಯಿ ಆರಿತ್ತು, ತಲೆ ಸಿಡಿಯುತ್ತಿತ್ತು. ಪಕ್ಕದ ಮಂಚದಲ್ಲಿನ ಬಸುರಿ ಜೋರಾಗಿ ನರಳುವುದಕ್ಕೆ ಶುರುಮಾಡಿದ್ದಳು. ಕೊಟ್ಟಿಗೆಯಲ್ಲಿ ಮಲಗಿದ್ದ ಹಾಗೆ ಅನಿಸಿತ್ತು. ಮಾಮೂಲಿನಂತೆ ಹೆರಿಗಯಾಗಿದ್ದರೆ ಎರಡೇ ದಿನದಲ್ಲಿ discharge ಆಗುತ್ತಿತ್ತು. ಆಪರೇಷನ್ ಆಗಿದ್ದರಿಂದ ನಾಲ್ಕು ದಿನ ಇರಬೇಕಾಯಿತು. ಆ ಗೊಂದಲವನ್ನು ಬಿಟ್ಟು ಮನೆಗೆ ಹೇಗೆ ಸೇರಿದಳೋ ಗೊತ್ತೇ ಆಗಲಿಲ್ಲ. ಕೊಂಪೆಯಂತಿದ್ದ ಆಸ್ಪತ್ರೆಯ ಗದ್ದಲವನ್ನು ಪುಟ್ಟ ಸ್ಯಾಮುಯೆಲ್‍ನ ಮುದ್ದು ಮುಖ ಮರೆಸಿತ್ತು.

ಮಗುವಿನ ಆಗಮನ ಉಪನಗರದ ಅವರ ಮನೆಯ ಮೂಲೆ ಮೂಲೆಯನ್ನೂ ತಟ್ಟಿ ಅದರ ಚಹರೆಯೇ ಬದಲಾಗಿತ್ತು. ಅಂಗಳವಂತೂ ಶಿಶುವಿಹಾರದ ಉಡುಗೆ ತೊಟ್ಟಿತ್ತು. ಮಧ್ಯಮವರ್ಗದ ಯಹೂದ್ಯ ದಂಪತಿಗಳು ನ್ಯೂಯಾರ್ಕಿನ ಗದ್ದಲದಿಂದ ಹೊರಗೆ ಹೋದರೂ ಅಲ್ಲಿನ ಕೆಲಸಕ್ಕೆ ಹತ್ತಿರವೆಂದು ಈಚೀಚೆಗೆ ಇಲ್ಲಿಗೆ ಬಂದು ಸೇರಿದ್ದರು. ಎಲ್ಲರಂತೆ ಅವಳದೂ ಸಾಧಾರಣ ಮನೆತನ – ಲ್ಯಾರಿ ಮನೆಯೊಡೆಯ, ಲಾರಾ ಮಗುವಿನ ತಾಯಿ, ಜೊತೆಗೆ Philippinesನಿಂದ ಕರೆತಂದ ಒಬ್ಬ ಆಯಾ.
ಆಯಾ ಬಂದು ವಾಸಮಾಡುತ್ತಾ ಆಗಲೇ ಎರಡು ವಾರವಾಗಿತ್ತು. ಸುತ್ತ ಮುತ್ತಲಿನ ಬೀದಿ, ಅಂಗಡಿಗಳು ಗುರುತಾಗಲೆಂದು ಒಂದೆರಡು ವಾರ ಮುಂಚೆಯೇ ಕರೆಸಿಕೊಂಡಿದ್ದರು. ನೆಲಮಾಳಿಗೆಯ ಗ್ಯಾರೇಜಿನ ಪಕ್ಕದಲ್ಲಿ ಅವಳಿಗೊಂದು ಪುಟ್ಟ ಕೋಣೆ. ಗಾಳಿ ಬೆಳಕು ಅಷ್ಟಕ್ಕಷ್ಟೆ ಆದರೂ ಇಲ್ಲಿ ಆಯಾಳ ತಂಟೆಗೆ ಯಾರೂ ಬರುವುದಿಲ್ಲ ಎಂಬುದು ಬಂದವರಿಗೆಲ್ಲಾ ಲಾರಾ ಉವಾಚ. ತಲೆಯೊಳಗೆ ಮಾತ್ರ ತನ್ನ ತಂಟೆಗೆ ಯಾರೂ ಬರದಿದ್ದರೆ ಸಾಕು ಎಂಬ ಸ್ವಗತ.

ಮೊಲೆಗೆ ತುಟಿಯಿಟ್ಟು ಲೊಚಗುಟ್ಟುತ್ತಿದ್ದ ಪುಟ್ಟ ಸ್ಯಾಮುಯೆಲ್‍ ಹಿಡಿದು, ಲಾರಾ ಮೊಬೈಲಿನಲ್ಲಿ ಗೆಳತಿಗೆ ಮೆಸೇಜ್ ಬರೆಯಹತ್ತಿದ್ದಳು. ಧಡಕ್ಕನೆ ತೆರೆದ ಬಾಗಿಲಲ್ಲಿ ಲ್ಯಾರಿ ಪ್ರತ್ಯಕ್ಷನಾದ.
“ಎಷ್ಟು ಹೊತ್ತಾಯ್ತು?” ಕೈಗಡಿಯಾರವನ್ನು ನೋಡುತ್ತಿದ್ದವನು ಹಿಡಿದಿದ್ದ ಪುಸ್ತಕ “ಕಂದಮ್ಮನ ಆರೈಕೆ”. ಹಾಸಿಗೆಯಲ್ಲೂ ಅದನ್ನು ಬಿಟ್ಟಿರಲಿಲ್ಲ.
“ಏನು?”
“ಈ ಮೊಲೆಗೆ ಕೊಟ್ಟು ಎಷ್ಟು ಹೊತ್ತಾಯ್ತು?”
“ಗೊತ್ತಿಲ್ಲ… ಹತ್ತು ನಿಮಿಷ ಆಯ್ತು ಅನ್ಸುತ್ತೆ, ಯಾಕೆ?”
“ಒಂದೇ ಮೊಲೆಯಿಂದ ಕಾಲು ಗಂಟೆ ಮೇಲೆ ಕುಡಿಸಬಾರದು ಅಂತ ಇಲ್ಲಿ ಬರೆದಿದೆ”
“ಹಾಗಾದರೆ ಅರ್ಧ ಗಂಟೆ ಆದ ಮೇಲೆ ನಿನ್ನ ಮೊಲೆಗೆ ಕೊಡಲಾ?”
“ನಿಂಗೆ ಆಟ. ಆಮೇಲೆ ಹಾಲು ಇಲ್ಲಾ ಅಂತ ಅಳ್ತಾ ಕೂರ್ಬೇಡ”
“ಧಿಮಾಕು ಮಾಡ್ತಾ ನಿಂತ್ರೆ ಕುಡಿಯೋದೇ ನಿಲ್ಲಿಸ್ತಾನೆ, ನೋಡ್ತಾಯಿರು”
“ಸರಿ. ಐದು ನಿಮಿಷ ಬಿಟ್ಟು ಬರ್ತೀನಿ”

ನಿಯಮಗಳೆಂದರೆ ಲ್ಯಾರಿಗೆ ಜೀವ. ಕೆಲಸಗಳು ನಿಯಮಾನುಸಾರವಾಗಿ ನಡೆಯದಿದ್ದರೆ ಲ್ಯಾರಿಗೆ ಎಲ್ಲಿಲ್ಲದ ಆತಂಕ. ನಿಯಮಗಳೇ ಇಲ್ಲದಂತೆ ತೋರುವ ಈ ಪ್ರಪಂಚದಲ್ಲಿ ತನಗೆ ತಾನೇ ಮಾಡಿಕೊಂಡ ಕಟ್ಟಳೆಗಳು, ಬರೆದುಕೊಂಡ ನಕಾಶೆ, ಕೋಷ್ಟಕಗಳು ಲ್ಯಾರಿಗೆ ಸ್ವಲ್ಪವಾದರೂ ಸಮಾಧಾನ ನೀಡುತ್ತಿದ್ದವು. ಇದರಿಂದಾಗಿಯೇ ಲ್ಯಾರಿ ಕೆಲಸದಲ್ಲಿ ಅಷ್ಟು ಬೇಗ ಮುಂದೆಬರಲು ಸಾಧ್ಯವಾಗಿದ್ದು. ಕಿಂಚಿತ್ತೂ ತಪ್ಪಾಗದಂತೆ ಎಚ್ಚರವಹಿಸುವುದು ಸಹೋದ್ಯೋಗಿಗಳಿಗೆ ಅಭ್ಯಾಸವಾಗಿಹೋಗಿತ್ತು.

ಇದೆಲ್ಲಕ್ಕೂ ಅಪವಾದವೆಂದರೆ ಲಾರಾ. ಅವನ ಕಟ್ಟಳೆ ಕಡತಗಳಿಗೆ ಲಾರಾ ಎಂದೂ ಹೊಂದಿರಲಿಲ್ಲ. ಗಂಟು ಬಿದ್ದಿದ್ದಾದರೂ ಹೇಗೆ ಎಂದು ಹಲವಾರು ಸಲ ಅನಿಸಿತ್ತು. ಅದಕ್ಕೆಂದೇ ಒಮ್ಮೆ ಒಂದೆರಡು ತಿಂಗಳು ಬೇರೆಯಾಗಿ, ಒಬ್ಬನೇ ಕೂತು ಯೋಚಿಸಿದಾಗ ಸರಿಯಾದ ಓದು ಇಲ್ಲದ ಈ ಭೋಳೇ ಹುಡುಗಿ ತನಗೆ ಹೊಂದಿಕೆಯಾಗದಿದ್ದದ್ದು ಸ್ಪಷ್ಟವಾಗಿತ್ತು. ತಲೆಯು ದೂರವಿರುವಂತೆ ಹೇಳುತ್ತಿದ್ದರೂ ತನುವಿನ ಕೂಗಿಗೆ ಓಗೊಟ್ಟು ಮತ್ತೆ ಸೇರಿ ಒಂದಾದ ಸಂಭ್ರಮದ ಅಮಲಿನಲ್ಲಿ ಮದುವೆಯ ಮಾತು ತುಟಿಗೆ ಬಂದಿತ್ತು.
ಸಾವಿರಕ್ಕೂ ಹೆಚ್ಚು ಜನ ಬಂದಿದ್ದ ಮದುವೆ ಮುಗಿದೊಡನೆ ಶುರುವಾಗಿತ್ತು ಮಗುವೊಂದಕ್ಕೆ ತಯಾರಿ. ಮೊದಮೊದಲು ಆಟವೆನಿಸಿದ್ದ ರತಿಕ್ರೀಡೆ ಬರಬರುತ್ತಾ ಜೀತವೆನಿಸತೊಡಗಿತ್ತು. ಲ್ಯಾರಿಗೆ ಜೀವನಪೂರ್ತಿ ಎಲ್ಲದರಲ್ಲೂ ಪೈಪೋಟಿ – ಕಾರಿನಲ್ಲಿ ಕೆಲಸಕ್ಕೆ ಹೋಗುವುದು, ಸ್ಯಾಂಡ್‍ವಿಚ್‍ಗೆ ಬೆಣ್ಣೆ ಹಚ್ಚುವುದು, ಸ್ಟೇಕ್ ತಿನ್ನುವುದು, ಎಲ್ಲದರಲಲ್ಲೂ ತನ್ನದೇ ರೆಕಾರ್ಡ್‍ಗಳನ್ನು ಬರೆದಿಟ್ಟುಕೊಂಡಿದ್ದ. ಹಾಗೆಯೇ ಕಂಡ ಕಂಡ IVF ಕ್ಲಿನಿಕ್‍ಗಳಲ್ಲಿ ಮಾಡುತ್ತಿದ್ದ ಮುಷ್ಠಿಮೈಥುನವನ್ನೂ ಒಂದು ಪಂದ್ಯವನ್ನಾಗಿಸಿದ್ದ. ಕೊನೆಗೂ ಲಾರಾ ಬಸುರಿಯೆಂದು ಖಚಿತವಾದಾಗ ನಿರಾಳವೆನಿಸಿದರೂ ಪಂದ್ಯವನ್ನು ಮುಂದುವರಿಸುವುದು ನಿಂತಿತೆಂದು ಪಿಚ್ಚೆನಿಸಿದೇ ಇರಲಿಲ್ಲ. ಬರುವ ನವಮಾಸಗಳಲ್ಲಿ ಏನೇನೆಲ್ಲಾ ಕಾದಿದೆಯೆಂದು ಅವನಿಗೆಲ್ಲಿ ಗೊತ್ತಿತ್ತು?
ಮೊದಲ ನಾಲ್ಕು ತಿಂಗಳು ಲಾರಾಗೆ ಹೇಳದೇ ಕೇಳದೇ ವಾಕರಿಕೆ ಬಂದು ಕಂಡಕಂಡಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ ಸಿನಿಮಾ, ನಾಟಕ, ರೆಸ್ಟೋರೆಂಟ್‍ಗಳಿಗೆ ಮನೆಯಾಚೆ ಹೋಗಲಾಗದೇ ಲ್ಯಾರಿಗೆ ತಲೆಕೆಟ್ಟುಹೋಗಿತ್ತು. ಕಾರಿನಲ್ಲಿ ಲಾರಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಸಾಕುಸಾಕಾಗಿತ್ತು.
ಆದರೆ ಆಧುನಿಕ ವೈದ್ಯಶಾಸ್ತ್ರದ ವಿಸ್ಮಯ, ತನ್ನದೇ ವಂಶದ ಕುಡಿ, ಪುಟ್ಟ ಸ್ಯಾಮುಯಲ್‍ನ ಮುಖ ಕಂಡದ್ದೇ ತಡ ಇಡೀ ಜೀವನವೇ ಬದಲಾಗಿತ್ತು.

ರಿವಾಜಿನ ಪ್ರಕಾರ ನವಜಾತ ಗಂಡು ಮಗುವಿಗೆ ವಿಧ್ಯುಕ್ತವಾಗಿ ಸುನತಿ ಮಾಡಬೇಕು. ಜನನದ ಸೋಜಿಗವನ್ನು ಶಸ್ತ್ರಚಿಕಿತ್ಸೆ ಕಡಿಮೆಯಾಗಿಸಿತೇನೋ ಎಂಬಂತೆ ಪುರಾತನ ಯಹೂದ್ಯ ಶಾಸ್ತ್ರದಲ್ಲಿ ಸಾಧಾರಣ ಹೆರಿಗೆಯಾದರೆ ಏಳನೇ ದಿನ, ಸಿಜೇರಿಯನ್ ಆದರೆ ಎಂಟನೇ ದಿನವೆಂದು ನಿಯಮ.
ಭಾನುವಾರ ಬೆಳಿಗ್ಗೆಯೇ ಬಳಗದವರೂ, ಗೆಳೆಯವರ್ಗದವರೂ ರೆಸ್ಟೋರೆಂಟ್ La Stellaಗೆ ಬಂದು ಸೇರಲಾರಂಭಿಸಿದ್ದರು. ಎಲ್ಲರದ್ದೂ ಹಬ್ಬದುಡುಗೆ. ಲಾರಾ ಅಲಂಕಾರ ಮಾಡಿಕೊಳ್ಳುವುದರಲ್ಲಿ ಯಾವುದನ್ನೂ ನಿರ್ಲಕ್ಷಿಸಿರಲಿಲ್ಲ. Great Neckನ ಪ್ರಸಿದ್ಧ ಸಲೂನಿನಲ್ಲಿ ಕೇಶ, ಕೈಗಳಿಗೆ ಸಿಂಗಾರ. ಹೊಟ್ಟೆಯ ಉಬ್ಬನ್ನು ಮರೆಮಾಚುವಂತೆ ಅಳತೆ ತೆಗೆದು ಹೊಲಿಸಿದ್ದ ಡ್ರೆಸ್ಸು. ಉದ್ವೇಗವನ್ನಾಗಲೀ ದಣಿವನ್ನಾಗಲೀ ಹೊರಗೆ ತೋರ್ಪಡಿಸದೆ ಎಲ್ಲರನ್ನೂ ಮುಗುಳ್ನಗೆಯಿಂದ ಬರಮಾಡಿಕೊಂಡಳು.
ಹಾಸುಹಾಸಿದ್ದ ಮೇಜುಗಳ ಮೇಲೆ ಭರ್ಜರಿ ಉಪಾಹಾರ ಸಿದ್ಧವಾಗಿತ್ತು. ಹತ್ತಿಪ್ಪತ್ತು ತರಹದ ಬೇಗಲ್ ಮತ್ತು ಸ್ಯಾಂಡ್‍ವಿಚ್, ಕರಿದ ಮೊಟ್ಟೆ, ಮೀನಿನ ಕಟ್ಲೆಟ್, ತುಂಡುಮಾಡಿದ ವಿಧವಿಧ ಹಣ್ಣು ತರಕಾರಿ, ಕೇಕುಗಳು, ತಾಜಾ ಹಣ್ಣಿನ ರಸ – ಪರಿಚಾರಕರು ಬಂದವರಿಗೆಲ್ಲಾ ಹಲ್ಲುಕಿರಿಯುತ್ತಾ ತಂದು ಕೊಡುವ ಸೇವೆ ಬೇರೆ.
ಕಟ್ಟಡದ ಕೊನೆಯಲ್ಲೊಂದು ಪುಟ್ಟ ಸಭಾಂಗಣ. ಉದ್ದದ ಮೇಜಿಗೆ ಅಚ್ಚಬಿಳಿಯ ಹಾಸು. ಶಾಸ್ತ್ರೋಕ್ತ ಉಡುಪು ಧರಿಸಿ ಬಂದ ರಾಬಿಯ ಕೈಯಲ್ಲಿ ಸಣ್ಣ ಕೈಚೀಲ.
“ಎಲ್ಲಿ ಹುಡುಗನನ್ನು ಕರೆತನ್ನಿ” ಎನ್ನುತ್ತಾ ಕೈಚೀಲದಿಂದ ಸಲಕರಣೆಗಳನ್ನು ತೆಗೆದು ಒಪ್ಪವಾಗಿ ಹಾಸಿನ ಮೇಲೆ ಜೋಡಿಸತೊಡಗಿದರು.
ನೆರದವರಿಗೆ ಶಾಸ್ತ್ರ ಹೇಗೆ ನಡೆಯುವುದೆಂದು ಗೊತ್ತಿರಲಿಲ್ಲ. ತಳಮಳವೆನ್ನಿಸಿ ಹೊರಬಾಗಿಲಿನೆಡೆಗೆ ನೋಡಲಾರಂಭಿಸಿದರು. ನಡೆಯುತ್ತಿದ್ದನ್ನು ನೋಡಿದ ಲ್ಯಾರಿಯ ಮತ್ತೊಬ್ಬ ಸಹಪಾಠಿ ಇಟೆಲಿಯನ್ ಫೆಡೆರಿಕೋಗೆ ವಾಕರಿಕೆ ಬಂದಂತಾಯಿತು. ಕ್ಯಾಥೊಲಿಕ್ ಆದ ಅವನು ಒಳಗೊಳಗೇ ಪ್ರಾರ್ಥನೆ ಶುರುಮಾಡಿದ. ಅವನ ಸಂಗಾತಿ ಜಪಾನಿನವಳು, ಅವಳಿಗೂ ಅದೇ ಗತಿ. “ಮನೆಯಲ್ಲಿಯೇ ತಿಂಡಿ ತಿಂದು ಬರಬೇಕಿತ್ತು” ಎಂದು ಗೊಣಗಿದಳು.
“ಅಯ್ಯೋ ದೇವರೇ! ಇಲ್ಲೇ ಸಭೆಯ ಮಧ್ಯದಲ್ಲೇ ಎಲ್ಲರ ಮುಂದೇನೇ ಕತ್ತರಿ ಹಾಕುತ್ತಾರೆಂದು ನನಗೇನು ಗೊತ್ತಿತ್ತು” ಎನ್ನುವಷ್ಟರಲ್ಲಿ ಹಿಂದಿನಿಂದ ಜ್ಯಾಕ್ ಅವನ ಕಿವಿಯಲ್ಲಿ, “ಸಧ್ಯ ಮೊಟ್ಟೆ ತಿನ್ನಲಿಲ್ಲ” ಎಂದು ಪಿಸುಗುಟ್ಟಿದ.

ಕೈಯಲ್ಲಿ ಕ್ಯಾಮೆರಾ ಹಿಡಿದು ಲಾರಾ ಮುಗುಳ್ನಗುತ್ತಾ ಇಬ್ಬರೂ ನಿಂತಿದ್ದಲ್ಲಿಗೆ ಬಂದು ನಿಂತಳು. “ಏನೋ, ಆರೋಗ್ಯಾನಾ?”
“ಓ, ನೀನಂತೂ ಬೆಳಗ್ತಾ ಇದೀಯ”
“ನಿಮ್ಮಿಬ್ಬರಲ್ಲಿ ಯಾರಾದರೂ ಒಬ್ಬರು ಫೋಟೋ ತೆಗೀತೀರಾ, ಪ್ಲೀಸ್? ನಾನೂ ಲ್ಯಾರಿ ಮಗು ಹಿಡ್ಕೋಬೇಕು, ಏನು?”
“ಓ ಅದಕ್ಕೇನಂತೆ” ಎಂದ ಜ್ಯಾಕ್ ಕೈಸೇರಿತು ಕ್ಯಾಮೆರಾ.

ರಾಬಿ ಶಾಸ್ತ್ರವನ್ನು ಶುರುಮಾಡುತ್ತಾ, “ಇಂದು ಸ್ಯಾಮುಯೆಲ್ ಬರುಖ್ ಕೊಹೆನನ್ನು ನಮ್ಮ ನಡುವೆ ಬರಮಾಡಿಕೊಳ್ಳುವುದಕ್ಕೆ ಇಲ್ಲಿ ಸೇರಿದ್ದೇವೆ” ಎಂದು ಘೋಷಿಸಿ ಸ್ತೋತ್ರಗಳನ್ನು ಪಿಟಿಗುಟ್ಟುತ್ತಾ ಸಾವಕಾಶವಾಗಿ ಮೇಜಿನ ಮೇಲೆ ಮಲಗಿಸಿದ್ದ ಮಗುವಿನ ಬಟ್ಟೆಗಳನ್ನು ಬಿಚ್ಚತೊಡಗಿದರು.
ಬಿಳಿಚಿ ನಿಂತಿದ್ದ ಫೆಡೆರಿಕೋ ಜ್ಯಾಕ್‍ನನ್ನು ತಿವಿದು, “ನಡಿಯೋ paparazzi, ನೋಡೋಣ, ಫೋಟೋ ಹೇಗೆ ತೆಗೀತಿಯಾ ಅಂತ”
ಧೈರ್ಯ ತಂದುಕೊಂಡು ಜ್ಯಾಕ್ ಕ್ಯಾಮೆರಾ ಮುಖಕ್ಕೇರಿಸಿದ. ಆದೇ ಕವಚವೇನೋ ಎಂಬಂತೆ, ನೋಡುತ್ತಿರುವುದು ತನ್ನದಲ್ಲ, ಕ್ಯಾಮೆರಾ ಕಣ್ಣೆಂಬಂತೆ ಒಂದಾದ ಮೇಲೊಂದು ಫೋಟೋ ಕ್ಲಿಕ್ಕಿಸಹತ್ತಿದ. ಸರಿಯಾದ ಸಮಯಕ್ಕೆ ರಾಬಿಯ ಕೈಯನ್ನು ಸೆರೆಹಿಡಿಯುವುದಕ್ಕೆ ಸಿದ್ಧನಾದ.
ಕೆಲವರು ಕಣ್ಣುಮುಚ್ಚಿಕೊಂಡರು, ಇನ್ನು ಕೆಲವರು ಕಿಟಕಿಯಿಂದಾಚೆಗೋ ನೆಲವನ್ನೋ ನೋಡಿದರು, ಒಂದಿಬ್ಬರು ಹೇಡಿಗಳು ಶೌಚಾಲಯಕ್ಕೆ ಕಳಚಿಕೊಂಡರು. ಮಗುವಿನ ಚೀತ್ಕಾರ ಕೇಳಿದ ಕ್ಷಣವೇ ನೆಲಕ್ಕೆ ಬಿದ್ದ ಲ್ಯಾರಿಯನ್ನು ಕಂಡು ಲಾರಾ ಕೂಗಿಕೊಂಡಳು. ಅವನ ಮುಖದಿಂದ ನೆಲಗಂಬಳಿಗೆ ರಕ್ತ ಹರಿಯುತ್ತಿತ್ತು. ಜ್ಯಾಕ್ ಯಾವುದೋ ಸನ್ನಿಯಲ್ಲಿದ್ದಂತೆ ಮೂರ್ಛೆಹೋದ ಗೆಳೆಯನ ಫೋಟೋ ತೆಗೆಯಲಾರಂಭಿಸಿದ. ಲಾರಾ ಸಂಯಮ ಕಳೆದುಕೊಳ್ಳದೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದಳು.
“ಹಲೋ, ರೆಸ್ಟೋರೆಂಟ್ La Stella, Middle Neck ರೋಡ್. ಹಲೋ? ಸುನತಿ ಮಾಡುವಾಗ ಗಂಡನಿಗೆ ಜ್ಞಾನ ತಪ್ಪಿದೆ. ಏನು? ಅಲ್ಲಲ್ಲಾ ನನ್ನ ಮಗನ ಸುನತಿ! ನೆಲಕ್ಕೆ ಬೀಳುವಾಗ ಮೇಜಿಗೆ ಹಲ್ಲು ಬಡೀತು ಅನ್ಸುತ್ತೆ! ತುಂಬಾ ರಕ್ತ ಸುರೀತಿದೆ. ಆಂ? ಹೌದು. ಮಗು ಚೆನ್ನಾಗಿಯೇ ಇದೆ”.
ರಾಬಿ ಉದ್ವೇಗಗೊಳ್ಳದೆ ತನ್ನ ಕೆಲಸ ಮುಗಿಸಿ ಅರಚುತ್ತಿದ್ದ ಕೂಸನ್ನು ಸಮಾಧಾನಿಸಲು ತಾಯಿಗೆ ಕೊಟ್ಟು ತಂದೆಯ ಕಡೆ ಗಮನಹರಿಸಿದರು. ಐದು ನಿಮಿಷದೊಳಗೆ ಆಂಬ್ಯುಲೆನ್ಸ್ ಬಂದು ನಿಂತಿತು.

ಲ್ಯಾರಿಗೆ North Shore University ಆಸ್ಪತ್ರೆಯಲ್ಲಿ ಜ್ಞಾನ ಬಂದಾಗ ಕೆಟ್ಟ ಕನಿಸಿನಂತೆ ಪುರಾತನ ರಿವಾಜು ನೆನಪಿಗೆ ಬಂತು. ಮುಂದಿನ ಮೂರು ಹಲ್ಲುಗಳು ಮಾಯ, ತಂತಿಹಾಕಿ ಜೋಡಿಸಿದ್ದ ಮೇಲ್ದವಡೆ, ಹೊಲಿಗೆ ಹಾಕಿದ್ದ ತುಟಿ, ಬಲಗಡೆಯ ಭುಜದಲ್ಲಿ ಮುರಿದ ಮೂಳೆ – ಇಷ್ಟೇ ಸಾಲದೆಂಬಂತೆ ಆಸ್ಪತ್ರೆಯ ಖರ್ಚಿನ ಭಾರೀ ಬಿಲ್!
ಸಾಮ್ಯುಯೆಲ್‍ಗೆ ವಾಸಿಯಾಗಿ ತೊಂದರೆ ಇಲ್ಲದೆ ಉಚ್ಚೆ ಹೊಯ್ಯುತ್ತಿದ್ದ. ತಂದೆ ಲ್ಯಾರಿಗೆ ಇನ್ನೂ ಕಿವುಚಿದ ಆಹಾರ. ಹರಿದ ತುಟಿ ಊದುಕೊಂಡಿದ್ದರಿಂದ ಹೊಲಿಗೆಗಳು ಬಿಟ್ಟುಕೊಂಡು ಮತ್ತೆ ಮತ್ತೆ ರಕ್ತ ಬರುತ್ತಿತ್ತು. ಆಸೆಪಟ್ಟು ಹಡೆದಿದ್ದ ಕೂಸು ಒಂದೆಡೆಗೆ, ಹಾಸಿಗೆ ಹಿಡಿದ ಗಂಡ ಮತ್ತೊಂದೆಡೆ – ಆಯಾ ಇದ್ದರೂ ಲಾರಾಗೆ ಸಾಕುಸಾಕಾಗಿತ್ತು.
ಹೊಲಿಗೆ ತೆಗೆದ ಮೇಲೆ ಹಲ್ಲು ಕಟ್ಟಿಸುವಿದಕ್ಕೆ ಸಿಕ್ಕಾಪಟ್ಟೆ ಖರ್ಚು ಮಾಡಬೇಕಾಗುವುದೆಂದು ಅವಳಿಗೆ ಹೇಳಲು ಪ್ರಯತ್ನಿಸುತ್ತಿದ್ದ ಲ್ಯಾರಿಯ ತೊದಲು ಮಾತು ಅವಳಿಗೆ ಅರ್ಥವೇ ಆಗಿರಲಿಲ್ಲ.
“ನಿಮ್ಮಿಬ್ಬರಲ್ಲಿ ಯಾರು ಮೊದಲು ಮಾತು ಕಲೀತೀರೋ ನೋಡ್ತೀನಿ”
ಕಾಗದದ ಮೇಲೆ ಎಡಗೈಯಲ್ಲಿ ಅಡ್ಡಾದಿಡ್ಡಿ ಅಕ್ಷರಗಳಲ್ಲಿ “ತುಂಬಾ ಖರ್ಚಾಗುತ್ತೆ” ಎಂದು ಬರೆದು ತೋರಿಸಿದ.
“ಅದಕ್ಕೇನಂತೆ ಚಿನ್ನ! ನಿನ್ನ ಆರೋಗ್ಯ ಮುಖ್ಯ ಅಲ್ಲವೇ?” ಎಂದಳು ಕೆನ್ನೆ ಸವರುತ್ತಾ.
ಲ್ಯಾರಿ ಬೆರಗಿನಿಂದ ಹೆಂಡತಿಯ ಕಡೆ ತಿರುಗಿದ. ಅವಳ ಉದಾರ ಹೃದಯ ಅವನನ್ನು ಮರುಳಾಗಿಸಿತ್ತು.
ಲಾರಾ ಗಂಡ ಅಂದುಕೊಂಡಷ್ಟು ಪೆದ್ದಿಯೇನಲ್ಲ. ಕಾಲೇಜು ಮೆಟ್ಟಲೇರದೆಯೂ ಆಗಿದ್ದೆಲ್ಲಾ ಒಳ್ಳೆಯದಕ್ಕೇ ಎಂಬ ಜ್ಞಾನ ಅವಳಿಗಿತ್ತು. ಹಲ್ಲುಬಿಟ್ಟು ನಕ್ಕರೆ ಕುದುರೆಯಂತೆ ಕಾಣುತ್ತಿದ್ದ ಗಂಡನ ಚಹರೆ ಇದರಿಂದಾಗಿ ಸ್ವಲ್ಪ ಸುಧಾರಿಸಬಹುದೆಂದು ಖುಷಿಯೂ ಆಯಿತು. ಮೊರದಂತಿರುವ ಕಿವಿಗಳನ್ನು ಏನೂ ಮಾಡಲಾಗುವುದಿಲ್ಲವಲ್ಲಾ ಎಂದು ದುಃಖವೂ ಆಯಿತು. ಇರಲಿ, ಮನುಷ್ಯನಿಗೆ ದುರಾಸೆ ಇರಕೂಡದು.

ಇತ್ತ ಮಡಿಲಲ್ಲಿ ಆಸೆಪಟ್ಟು ಹೆತ್ತ ಮಗು ನಗುತ್ತಿತ್ತು, ಅತ್ತ ಗಂಡನ ಬಾಯಿಗೆ ಬೀಗ ಬಿದ್ದಿತ್ತು.
ಇನ್ನೇನಪ್ಪಾ ಬೇಕು?


ಅನುವಾದ : ನಾಗವಳ್ಳಿ ಎಸ್. ಕಿರಣ್ 
1972ರಲ್ಲಿ ಹುಟ್ಟಿದ್ದು ಬೆಂಗಳೂರಿನಲ್ಲಿ . ಸಸ್ಯಶಾಸ್ತ್ರದಲ್ಲಿ ಡಾಕ್ಟ್ರರೇಟ್ ಪದವಿ ಗಳಿಸಿ , 2013 ರ ವರೆಗೆ ಸಸ್ಯ ವಿಜ್ಞಾದಲ್ಲಿ ಸಂಶೋಧನೆ ಮಾಡಿ , ಪ್ರಸ್ತುತ ಎಲೆಕ್ಟ್ರಾನ್ ಮೈಕ್ರೋಸ್ಕೋಪುಗಳ ತಯಾರಿಕಾ ಸಂಸ್ಥೆಯಲ್ಲಿ ಸಂಶೋಧನಾ ಪ್ರಾಯೋಜನೆಗಳ ನಿರ್ವಾಹಕರಾಗಿ ಕಾರ್ಯ . ಜೊತೆಗೆ ಸುಮಾರು 20 ವರ್ಷಗಳಿಂದ ಅನುವಾದಕರೂ ಕೂಡ . ಜಯಂತ ಕಾಯ್ಕಣಿಯವರ ‘ ಅಮೃತಬಳ್ಳಿ ಕಷಾಯ’ ಸಂಕಲನದ ಎರಡು ಕಥೆಗಳು ಇಂಗ್ಲೀಶ್ ನಲ್ಲಿ ‘Dot and Lines’ ಎಂದು 2004 ರಲ್ಲಿ ಪ್ರಕಟವಾಯಿತು . ದೆಹಲಿಯ ಕಥಾ ಸಂಸ್ಥೆ ಬ್ರಿಟೀಷ್ ಕೌನ್ಸಿಲ್ ಜೊತೆಗೆ 1997-98 ರಲ್ಲಿ ಆಯೋಜಿಸಿದ್ದ ಎರಡನೇ ಅಖಿಲ ಭಾರತ ಕಥಾನುವಾದ ಸ್ಪರ್ಧೆಯಲ್ಲಿ ಶಾಂತಿನಾಥ ದೇಸಾಯಿಯವರ ಕಥೆಯೊಂದರ ಅನುವಾದ ಅಭಿನಂದನಾ ಪ್ರಶಸ್ತಿ ಗಳಿಸಿತು . ಕಳೆದ 20 ವರ್ಷಗಳಿಂದ ಚೆಕ್ ಗಣರಾಜ್ಯದಲ್ಲಿ ನೆಲೆಸಿದ್ದಾರೆ .

ಚಿತ್ರಗಳು : ಪ್ರಮೋದ್ ಪಟಗಾರ್

ಪ್ರತಿಕ್ರಿಯಿಸಿ