ಸಣ್ಣೂರ ಮಣ್ಣು ಕಣ್ಣ ಕವದದ
ನಿಗಾ ನೆಗದಾಗ ಮುಗಿಲ ತುದಿಗೆ
ಹೆದರಿದ ಹುಮ್ಮಸ್ಸು ಗಡಿಸೀಮಿ ದಾಟ್ಯದ
ಯಳಿಗನಸ ಅಪಗೊಂಡು ತೇಕ್ಹಿಡಿದ ಯದಿಗೆ
ಹರಕ-ರಕ ಹುರುಪಿನ ಉರಿನs ಬರತಾವ
ಹರಿದಾಗ ಕಣ್ಣು ನಕ್ಷಿಯ ಕಡಿಗೆ
ಬಿಚ್ಚಿಟ್ಟ ಭೂಗೋಲ ಕೈಚಾಚಿ ಕರಿತದ
ಬೇಡ್ಯದ ಬಿರುಸಾದ ವೇಗದ ನಡಿಗೆ
ಊರಿಗೆ ಊರಿ ಹಿಂಬಡ ಹಾರ್ಯದ
ರೆಕ್ಕಿಯ ಬಿಚ್ಯದ ಬಿಟ್ಟು ನೆಲ ಬದಿಗೆ
ಅಂದಿನ ಮಂದಿಯ ಬಂಧನ ತೀರ್ಯದ
ಆಧಿನ ಹೋಗ್ಯದ ಘಾಳಿಯ ನದಿಗೆ
ಮುಂದಿನ ಅರಿವಂದ್ರ ಸ್ಥಿರವಾದ ಹರಿವದ
ಹಳಿ ಹಳಿ ಮುಚ್ಯದ ಹೊಸ ಪಟರಿಯಡಿಗೆ
ಥಣ್ಣೀರಿಗೆ ಜಿಗಧಂಗ ಮೈಚಳಿ ಬಿಟ್ಟದ
ನಡುನಡುಗಿ ನಲಿಧಂಗ ಮೊದಲೊಂದು ಘಳಿಗೆ
ಮೈತ್ರೇಯಿ ಕರ್ನೂರ್ ಕವಿ ಮತ್ತು ಅನುವಾದಕಿಯಾಗಿದ್ದಾರೆ. ಶ್ರೀನಿವಾಸ ವೈದ್ಯರ ಅಕಾಡಮಿ ಪುರಸಕೃತ ಕಾದಂಬರಿ ʼಹಳ್ಳ ಬಂತು ಹಳ್ಳʼದ ಮೈತ್ರೇಯಿ ಕರ್ನೂರರ ಅನುವಾದವಾದ ʼಎ ಹ್ಯಾಂಡ್ಫುಲ್ ಆಫ್ ಸೆಸಮೆʼ ಲ್ಯೂಸಿಯನ್ ಸ್ಟ್ರೈಕ್ ಏಶಿಯನ್ ಟ್ರಾನ್ಸಲೇಶನ್ ಪ್ರೈಸ್ ಗೆ ಶಾರ್ಟಲಿಸ್ಟ ಆಗಿದೆ. ಆವರ ಅನುವಾದಿತ ʼಫೋರ್ ಪ್ಲೇಯ್ಸʼ ಎಚ್. ಎಸ್ ಶಿವಪ್ರಕಾಶ್ ಅವರ ನಾಟಕಗಳು ಸಾಹಿತ್ಯ ಅಕಾಡಮಿಯಿಂದ ಪ್ರಕಟವಾಗಿವೆ. ಮೈತ್ರೇಯಿ ಮಾಂಟ್ರಿಯಲ್ ಇಂಟರನ್ಯಾಶನಲ್ ಪೋಯಟ್ರೀ ಪರೈಸ್ ೨೦೧೭ ಗೆ ಶಾರ್ಟಲಿಸ್ಟ ಅಗಿದ್ದರು. ಅವರ ಕವಿತೆ, ವಿಮರ್ಷೆ, ಅನುವಾದಿತ ಕೃತಿಗಳು ಹಾಗೂ ಪ್ರಬಂಧಗಳು ದ ಹಿಂದು, ಇಂಡಿಯನ್ ಎಕ್ಸಪ್ರೆಸ್, ಸ್ಕ್ರೋಲ್, ದ ವೈಯರ್, ಮ್ಯೂಸ್ ಇಂಡಿಯಾ ಮುಂತಾದವುಗಳಲ್ಲಿ ಪ್ರಕಟವಾಗಿವೆ.