ಕ್ರಿಕೆಟ್ ಸ್ವಿಂಗ್ ಬೌಲಿಂಗ್ ಹಿಂದಿನ ವಿಜ್ಞಾನ

ಕನ್ವೆನ್ಷನಲ್ ಸ್ವಿಂಗ್, ರಿವರ್ಸ್ ಸ್ವಿಂಗ್, ಕಾಂಟ್ರಾಸ್ಟ್ ಸ್ವಿಂಗ್. ಕಳೆದ ಕೆಲವು ವರ್ಷಗಳಲ್ಲಿ ಕ್ರಿಕೆಟ್ ನಲ್ಲಿ ಬೌಲರ್ ಗಳು ಎಸೆಯುವ ಚೆಂಡು ಗಾಳಿಯಲ್ಲಿ ಚಲಿಸುವ ಮತ್ತು ಸುರುಳಿ ಸುತ್ತುವ ರೀತಿಯನ್ನು ಅಂದಾಜಿಸಿ ಸ್ವಿಂಗ್ ಬೌಲಿಂಗ್ ನಲ್ಲಿ ವಿವಿಧ ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಆದರೆ ಆಯ್ದ ಕೆಲವರು ಮಾತ್ರ ಪ್ರತಿಯೊಂದರ ನಡುವೆ ವ್ಯತ್ಯಾಸವನ್ನು ತೋರಿಸಬಲ್ಲರು. ಅದರ ಹಿಂದಿನ ವಿಜ್ಞಾನವನ್ನು ಬಿಚ್ಛಿಡಬಲ್ಲರು . ಅಂತಹ ಒಬ್ಬ ವ್ಯಕ್ತಿ ನಾಸಾ ವಿಜ್ಞಾನಿ ಮತ್ತು ಕ್ಯಾಲಿಫೋರ್ನಿಯಾ ಮೂಲದ ಮಾಜಿ ಕ್ಲಬ್ ವೇಗದ ಬೌಲರ್ ರವೀಂದ್ರ ಮೆಹ್ತಾ, ಸುಮಾರು ಮೂರು ದಶಕಗಳಿಂದ ಕ್ರಿಕೆಟ್-ಬಾಲ್ ವಾಯು ಚಲನಾಶಾಸ್ತ್ರ ( aerodynamics ) ಅಧ್ಯಯನ ಮಾಡಿದ್ದಾರೆ. ಇಲ್ಲಿ ಅವರು ಸ್ವಿಂಗ್‌ನ ರಹಸ್ಯಗಳಿಗೆ ಅವರು ಖಚಿತವಾದ ಉತ್ತರವನ್ನು ನೀಡಿದ್ದಾರೆ. 

ಮಾಸ್ಟರ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಸರ್ಫ್ರಾಜ್ ನವಾಜ್ . ರಿವರ್ಸ್ ಸ್ವಿಂಗನ್ನು ಅಂತರರಾಷ್ಟ್ರೀಯ ಕ್ರಿಕೆಟಿನಲ್ಲಿ ಮೊದಲಿಗೆ ಬಳಸಿದವರು ಎನ್ನಲಾಗುತ್ತದೆ.

ಕ್ರಿಕೆಟ್ ಆಡುವ ನೋಡುವ ಪ್ರತಿಯೊಬ್ಬರೂ ವೇಗದ ಬೌಲರುಗಳು ದಾಂಡಿಗನನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಸ್ವಿಂಗ್ ಬೌಲಿಂಗಿನ ಬಗೆಗೆ ಕೇಳಿರಲೇಬೇಕು. ಬೌಲರ್ನ ಕೈಯಿಂದ ವೇಗವಾಗಿ ನೆಲಕ್ಕಪ್ಪಳಿಸಿ ಪುಟಿವ  ಚೆಂಡು ಯಾವ ಮಾರ್ಗದಲ್ಲಿ ಸಾಗಬೇಕೆಂಬುದನ್ನು ಎಸೆಯುವಾತ ಮೊದಲೇ ನಿರ್ಧರಿಸಿರುತ್ತಾನೆ. ಕೆಲವೊಮ್ಮೆ ಗಾಳಿಯಲ್ಲಿ ಸಾಗುವಾಗಲೇ ದಿಕ್ಕು ಬದಲಿಸಿ ದಾಂಡಿಗ (ಬ್ಯಾಟ್ಸ್ ಮ್ಯಾನ್ )ನ ಅಂದಾಜು ತಲೆಕೆಳಗು ಮಾಡಿ, ರನ್ ಗಳಿಸದಂತೆ ಕಟ್ಟಿಹಾಕುವ, ಕೆಟ್ಟ ಹೊಡೆತಕ್ಕೆ ಕೈ ಹಾಕಿದರೆ ವಿಕೆಟ್ ಚೆಲ್ಲಿಸುವ ಮಾರಕ ದಾಳಿಯೇ ಸ್ವಿಂಗ್.

ಸ್ವಿಂಗ್ ನಲ್ಲಿ ಮೂರು ವಿಧಗಳಿವೆ. ಸಾಂಪ್ರದಾಯಿಕ ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಕಾಂಟ್ರಾಸ್ಟ್ ಸ್ವಿಂಗ್. ಕಳೆದ ಹಲವು ದಶಕಗಳಿಂದ ಚೆಂಡಿನ ಈ ವರ್ತನೆಗೆ ತಮ್ಮದೇ ಆದ ವಿವರಣೆಗಳನ್ನು ಕ್ರಿಕೆಟಿಗಳು ನೀಡುತ್ತಿದ್ದರೂ ಅದರ ಹಿಂದಿನ ಮರ್ಮವನ್ನು ವಿಜ್ಞಾನವನ್ನು ನಾಸಾ ವಿಜ್ಞಾನಿಯಾದ ಭಾರತೀಯ ಸಂಜಾತ ರಬೀಂದ್ರ ಮೆಹ್ತಾ ಬಿಡಿಸಿಟ್ಟಿದ್ದಾರೆ. ಸ್ವತಃ ಫಾಸ್ಟ್ ಬೌಲರ್ ಆಗಿ ಕ್ಲಬ್ ಗಳಲ್ಲಿ ಕ್ರಿಕೆಟ್ ಆಡಿರುವ ಇವರು ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಚೆಂಡಿನ ವಾಯುಗತಿಶೀಲತೆಯನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಈ ಮೂಲಕ ಸ್ವಿಂಗ್ ಬೌಲಿಂಗ್ ಬಗೆಗಿದ್ದ ಎಲ್ಲಾ ತಪ್ಪಾದ ವಿವರಣೆಗಳಿಗೂ ಮಿಥ್ಯೆಗಳಿಗೂ ತೆರೆ ಎಳೆದಿದ್ದಾರೆ.

ಸ್ವಿಂಗ್ ಬೌಲಿಂಗಿನ ಹಿಂದಿರುವ ವೈಜ್ಞಾನಿಕ ವಿವರಣೆ ಏನು? ಯಾವ ಸ್ವಿಂಗ್ ಹೆಚ್ಚು ಪರಿಣಾಮಕಾರಿ? ಹೇಗೆ ಎಸೆದರೆ ಚೆಂಡು ಬೇಕಾದ ದಿಕ್ಕಿನಲ್ಲಿ ಸಾಗುತ್ತದೆ? ಎಂಬುದು ಸ್ವತಃ ಬೌಲರುಗಳಿಗೇ ತಿಳಿದಿರದ ಸಂಗತಿ. ಒಂದೊಮ್ಮೆ ಅವರು ಇದನ್ನು ಅರ್ಥೈಸಿಕೊಂಡರೆ ವಿಜ್ಞಾನದ ಬಗ್ಗೆ ಹೆಮ್ಮೆ ಪಡುವುದರೊಂದಿಗೆ ತಮ್ಮ ಬೌಲಿಂಗಿನಲ್ಲಾಗುವ ತಪ್ಪುಗಳನ್ನು ಸರಿಪಡಿಸಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವುದಂತೂ ದಿಟ. ಕ್ರಿಕೆಟ್ ಚೆಂಡಿನ ವಾಯುಗತಿಶೀಲತೆಯನ್ನು 25ವರ್ಷಗಳಿಂದ ಅಭ್ಯಾಸ ಮಾಡಿರುವ ಅನುಭವದಲ್ಲಿ ಸ್ವಿಂಗ್ ಬೌಲಿಂಗಿನ ಸುತ್ತಲೂ ಇರುವ ರಹಸ್ಶಗಳಿಗೆ ಉತ್ತರಿಸುತ್ತಾ, ಹಲವು ಮಿಥ್ಯೆಗಳಿಗೂ ಇಂದಿಗೂ ಕ್ರಿಕೆಟ್ ಲೋಕದಲ್ಲಿ ಕೇಳಿಬರುವ ತಪ್ಪಾದ ವಿವರಣೆಗಳಿಗೂ ಶಾಶ್ವತವಾಗಿ ತೆರೆಯೆಳೆಯುವ ಪ್ರಯತ್ನವನ್ನಿಲ್ಲಿ ಮಾಡಿದ್ದೇನೆ.

ಕ್ರಿಕೆಟ್ ಬಾಲಿನ ಮೂರೂ ಬಗೆಯ ಸ್ವಿಂಗ್ ಗಳನ್ನು ವಿವರಿಸುವ ಮೊದಲು ಪ್ರವಾಹಿ ಭೌತಶಾಸ್ತ್ರದ ಮೂಲಭೂತ ವಿವರಗಳನ್ನು ಗಮನಿಸೋಣ. ಬೌಲರ್ನ ಕೈಯಿಂದ ಎಸೆಯಲ್ಪಟ್ಟ ಚೆಂಡು ಗಾಳಿಯಲ್ಲಿ ಸಾಗುವಾಗ ಅದರ ಮೇಲ್ಮೈನ ಸುತ್ತಲೂ ಒಂದು ತೆಳುವಾದ ಪದರ ನಿರ್ಮಾಣವಾಗುತ್ತದೆ. ಇದನ್ನು ಬೌಂಡರಿ ಲೇಯರ್ (ಮೇಲ್ಮೈ ಪದರ)  ಎಂದು ಕರೆಯುತ್ತಾರೆ. ಆದರೆ ಚೆಂಡಿನ ಸುತ್ತಲೂ ನಿರ್ಮಾಣವಾಗುವ ಈ ಪದರ ಹೆಚ್ಚು ಹೊತ್ತು ಮೇಲ್ಮೈಯಿಗೆ ಅಂಟಿಕೊಂಡಿರಲು ಸಾಧ್ಯವಿಲ್ಲದೆ, ಒಂದು ಸಮಯಕ್ಕೆ ಮೇಲ್ಮೈಯಿಂದ ಬೇರ್ಪಟ್ಟು ದೂರವಾಗುತ್ತದೆ. ಗಾಳಿಯ ಪದರವು ಬೇರ್ಪಡುವ ಬಿಂದುವಿನಲ್ಲಿ ‘ಬಲ’ ಸೃಷ್ಟಿಯಾಗುತ್ತದೆ. ಈ ಬೇರ್ಪಡಿಸುವಿಕೆ ನಿಧಾನವಾದರೆ ಆ ಪಾರ್ಶ್ವದಲ್ಲಿ ಒತ್ತಡವೂ ಕಡಿಮೆಯಾಗುತ್ತದೆ. ಹೀಗೆ ಚೆಂಡಿನ ಎರಡೂ ಬದಿಗಳಲ್ಲಿ ಉಂಟಾಗುವ ಒತ್ತಡಗಳ ವ್ಯತ್ಯಾಸದಿಂದ ಸೃಷ್ಡಿಯಾಗುವ ಪಾರ್ಶ್ವಬಲವನ್ನು ಸ್ವಿಂಗ್ ಎನ್ನುತ್ತಾರೆ.

ಬೌಂಡರಿ ಲೇಯರಿಗೆ ಎರಡು ಸ್ಥಿತಿಗಳಿರುತ್ತವೆ. ಒಂದು; ನಯವಾಗಿ ಸ್ಥಿರವಾಗಿರುವ ಸರಾಗ ಸ್ಥಿತಿ. ಎರಡು: ಸಮಯದೊಂದಿಗೆ ಬದಲಾಗುವ ಅಸ್ತವ್ಯಸ್ಥವಾದ ಪ್ರಕ್ಷುಬ್ಧ ಸ್ಥಿತಿ. ಕಾಲುವೆಯಲ್ಲೋ ಅಥವಾ ನದಿಯಲ್ಲೋ ಶಾಂತವಾಗಿ ನೀರು ಹರಿಯುವುದನ್ನು ನೀವು ನೋಡಿರಬಹುದು. ಅದು ಸರಾಗ ಸ್ಥಿತಿ. ಹೀಗೆ ಹರಿವ ನೀರಿಗೆ ಅಡ್ಡಲಾಗಿ ಕೈ ಇಟ್ಟರೆ ಕೈಯ ಸುತ್ತಲೂ ಸಣ್ಣ ಸುಳಿಗಳು ಸೃಷ್ಡಿಯಾಗಿ ನೀರಿನ ಹರಿವು ಪ್ರಕ್ಷುಬ್ಧಗೊಳ್ಳುತ್ತದೆ. ಸರಾಗ ಸ್ಥಿತಿಯಿಂದ ಪ್ರಕ್ಷುಬ್ಧ ಸ್ಥಿತಿಗೆ ಗಾಳಿಯ ಮೇಲ್ಮೈ ಪದರ ಸ್ಥಿತ್ಯಂತರವಾಗಲು ಬೇಕಾದ ನಿರ್ಣಾಯಕ ವೇಗವನ್ನು ಚೆಂಡಿನ ಒರಟುತನ ನಿರ್ಧರಿಸುತ್ತದೆ. ಅದು ಒರಟಾದಷ್ಟೂ ನಿರ್ಣಾಯಕ ವೇಗವು ಕಡಿಮೆಯಾಗುತ್ತದೆ. ಅದಾಗ್ಯೂ ಕಡಿಮೆ ವೇಗದಲ್ಲಿ ಸಾಗುತ್ತಿರುವ ಚೆಂಡಿನ ಬೌಂಡರಿ ಲೇಯರಿನ ಸರಾಗ ಸ್ಥಿತಿಯನ್ನು ಒಂದು ಸಣ್ಣ ಅಡಚಣೆಯನ್ನುಂಟುಮಾಡಿ ಅಸ್ತವ್ಯಸ್ತಗೊಳಿಸಬಹುದು. ಚೆಂಡಿನ ಒರಟುತನವು ಸರಾಗವಾಗಿ ಹರಿಯುವ ಬೌಂಡರಿ ಲೇಯರಿನಲ್ಲಿ ಸುಳಿಗಳನ್ನು ಸೃಷ್ಟಿಸಿ ಪ್ರಕ್ಷುಬ್ಧಗೊಳಿಸುತ್ತದೆ. ಹೀಗೆ ಸೃಷ್ಟಿಯಾದ ಪ್ರಕ್ಷುಬ್ಧ ಪದರವು ಸರಾಗ ಪದರಕ್ಕಿಂತ ಹೆಚ್ಚಿನ ಸಮಯದವರೆಗೆ ಚೆಂಡಿನ ಮೇಲ್ಮೈಯಿಗೆ ಅಂಟಿಕೊಂಡಿರುತ್ತದೆ.

ಸಾಂಪ್ರದಾಯಿಕ ಸ್ವಿಂಗ್: ಈ ಶತಮಾನದ ಆದಿಯಿಂದಲೂ ಬಳಕೆಯಲ್ಲಿರುವ ಪುರಾತನವಾದ ಸ್ವಿಂಗ್ ಬೌಲಿಂಗ್ ತಂತ್ರವಿದು. ಆ ಕಾಲದ  ಬೌಲರುಗಳಾದ W.G. ಗ್ರೇಸ್ ಮತ್ತಿತರರು ಹೊಚ್ಚ ಹೊಸ ಚೆಂಡಿನ “ವಿಶಿಷ್ಟವಾದ  ವಾಯುಪಥ” ದ ಬಗ್ಗೆ ಒಲವು ಹೊಂದಿದ್ದರು. ಅವರುಗಳು ಉಲ್ಲೇಖಿಸಿದ  ಈ ವಾಯುಪಥವೇ ಸ್ವಿಂಗ್ ಎನ್ನುವುದರಲ್ಲಿ ಸಂಶಯವಿಲ್ಲ. ಕ್ರಿಕೆಟ್ಟಿನಲ್ಲಿ ವೇಗದ ಬೌಲರುಗಳು ಚೆಂಡನ್ನು ಸ್ವಿಂಗ್ ಮಾಡುವಲ್ಲಿ ಅದರ ಹೊಲಿಗೆಯನ್ನು ಮುಖ್ಯವಾಗಿ ದುಡಿಸಿಕೊಳ್ಳುತ್ತಾರೆ. ಹೊಲಿಗೆಯನ್ನು ಒಂದು ಕೋನದಲ್ಲಿ (20 ಡಿಗ್ರಿಗಳಷ್ಟು) ಹಿಡಿದು ಚೆಂಡನ್ನು ಎಸೆಯಲಾಗುತ್ತದೆ.  ಹೊಲಿಗೆಯನ್ನು ಯಾವ ದಿಕ್ಕಿನತ್ತ ಗುರಿಯಾಗಿಸಿ ಎಸೆಯಲಾಗುತ್ತದೆಯೋ ಚೆಂಡು ಅದೇ ದಿಕ್ಕಿನಲ್ಲಿ ಸ್ವಿಂಗ್ ಆಗುತ್ತದೆ. ಉದಾಹರಣೆಗೆ  ಸ್ಲಿಪ್ ಫೀಲ್ಡರುಗಳ ಕಡೆಗೆ ಗುರಿಯಿಟ್ಟರೆ ಚೆಂಡು ಬ್ಯಾಟ್ಸ್ ಮೆನ್ ನಿಂದಾಚೆಗೆ ಫೀಲ್ಡರುಗಳ ದಿಕ್ಕಿಗೇ ಸಾಗುತ್ತದೆ. ಇದನ್ನು ‘ಔಟ್ ಸ್ವಿಂಗ್’ ಎನ್ನುತ್ತಾರೆ. ಅದೇ ಚೆಂಡೆನ ಹೊಲಿಗೆಯನ್ನು ಫೈನ್ ಲೆಗ್ ಕಡೆಗೆ ಗುರಿಯಾಗಿಸಿ ಎಸೆದರೆ ಅದು ದಾಂಡಿಗನ ಕಾಲಿನೆಡೆಗೆ ನುಗ್ಗುತ್ತ್ದೆ. ಇದನ್ನು ‘ಇನ್ ಸ್ವಿಂಗ್’ ಎನ್ನುತ್ತಾರೆ.

ಸಾಂಪ್ರದಾಯಿಕ ಸ್ವಿಂಗಿನಲ್ಲಿ ಬಾಲು ಹೇಗೆ ಮತ್ತು ಏಕೆ ಸ್ವಿಂಗ್ ಆಗುತ್ತದೆ? ಹೊಲಿಗೆಯನ್ನು ಒಂದು ಕೋನದಲ್ಲಿರಿಸಿ ಬಾಲನ್ನು ಎಸೆದಾಗ ಉಂಟಾಗುವ ಗಾಳಿಯ ಪ್ರವಾಹವನ್ನು ಚಿತ್ರ 1 ರಲ್ಲಿ ಗಮನಿಸಬಹುದು.

ಸುಮಾರು 30 ಮೈಲಿ ಪ್ರತಿ ಘಂಟೆಯಿಂದ  70 ಮೈಲಿಗಳ ವೇಗದಲ್ಲಿ ಸಾಗುವಾಗ ಚೆಂಡಿನ ತಳಭಾಗದಲ್ಲಿ ಸೃಷ್ಟಿಯಾಗುವ ನಯವಾದ ಪದರವು ಮೇಲ್ಭಾಗದಿಂದ ಬೇರ್ಪಡುತ್ತದೆ. ಆದರೆ ಹೊಲಿಗೆಯು ಈ ನಯವಾದ ಪದರವನ್ನು ಪ್ರಕ್ಷುಬ್ಧಗೊಳಿಸುವ ಕಾರಣ ಚೆಂಡಿನ ಮೇಲ್ಮೈಯಿಂದ ಪ್ರಕ್ಷುಬ್ಧ ಪದರದ ಬೇರ್ಪಡುವಿಕೆಯು ನಿಧಾನವಾಗುತ್ತದೆ. ಇದರಿಂದ ಚೆಂಡಿನ ಮೇಲಾಗುವ ಒತ್ತಡಲ್ಲಿ (ಮೇಲ್ಭಾಗದಲ್ಲಿ  ಕಡಿಮೆ ಒತ್ತಡ ಮತ್ತು ಕೆಳಭಾಗದಲ್ಲಿ ಹೆಚ್ಚು ) ವ್ಯತ್ಯಾಸವಾಗುತ್ತದೆ. ಈ ಒತ್ತಡದ ಅಸಮಮಿತಿಯಿಂದ ಪಾರ್ಶ್ವ ಬಲ ಸೃಷ್ಟಿಯಾಗಿ ಯಾವ ದಿಕ್ಕಿಗೆ ಹೊಲಿಗೆಯನ್ನು ಗುರಿಯಾಗಿಸಲಾಗಿದೆಯೋ ಅದೇ ದಿಕ್ಕಿಗೆ ಬಾಲು ಸ್ವಿಂಗ್ ಆಗುತ್ತದೆ. ಇದು ಮೂಲಭುತ ತತ್ವವಾಯಿತು. ಆದರೆ ಪ್ರಾಯೋಗಿಕವಾಗಿಯೂ ಹೇಗೆಯೇ ಆಗುತ್ತದೆಯೇ? ಚಿತ್ರ2 ಗಮನಿಸಿ.

ಸುರಂಗದಿಂದ ಬರುವ ಗಾಳಿಗೆ ಹೊಲಿಗೆಯನ್ನು ಮೇಲ್ಮುಖವಾಗಿರಿದ ಚೆಂಡನ್ನು ಅಡ್ಡಲಾಗಿರಿಸಲಾಗಿದೆ. ಗಾಳಿಯ ದಿಕ್ಕು ಬಲದಿಂದ ಎಡಕ್ಕಿದ್ದು ಹಿಂಬದಿಯಿಂದ ಹೊಗೆಯನ್ನು ತೂರಿಬಿಡಲಾಗಿದೆ. ಈ ಪ್ರಯೋಗವನ್ನು ವಾಯುಸುರಂಗ ಪ್ರಯೋಗ ( wind tunnel experiment) ವೆಂದು ಕರೆಯಲಾಗುತ್ತದೆ.ಈ ಹೊಗೆಯು ಚೆಂಡಿನ ಮೇಲ್ಭಾಗಕ್ಕಿಂತಲೂ ಮುಂಚಿತವಾಗಿ ತಳಭಾಗದಲ್ಲಿ ಮೇಲ್ಮೈಯಿಂದ ಬೇರ್ಪಡುವುದನ್ನು ಸ್ಪಷ್ಟವಾಗಿ ಕಾಣಬಹುದು. ಚೆಂಡಿನ ತಳಭಾಗದ ಬೇರ್ಪಡುವ ಬಿಂದುವಿನಲ್ಲಿ ಹೊಗೆಯು ಬೌಂಡರಿ ಲೇಯರಿನ ಸರಾಗ ಸ್ಥಿತಿಯನ್ನೂ, ಮೇಲ್ಭಾಗಲ್ಲಿ  ಅಸ್ತವ್ಯಸ್ತವಾದ ಪ್ರಕ್ಷುಬ್ಧ ಸ್ಥಿತಿಯನ್ನು ತೋರುತ್ತದೆ. ಚೆಂಡಿನ ನುಣುಪಾದ ಪಾರ್ಶ್ವವನ್ನು ದಾಂಡಿಗನತ್ತ ಮುಖಮಾಡಿ ನಯವಾದ ಬೇರ್ಪಡುವಿಕೆ ಉಂಟಾಗುವಂತೆ ಚೆಂಡನ್ನು ಎಸೆಯುವುದರಲ್ಲಿ ಸಾಂಪ್ರದಾಯಿಕ ಸ್ವಿಂಗಿನ ಯಶಸ್ಸು ಅಡಗಿದೆ.

ಬೌಲರುಗಳು ಚೆಂಡನ್ನು ತಮ್ಮ ಪ್ಯಾಂಟುಗಳಿಗೆ ಉಜ್ಜುತ್ತಾ ಹೊಳಪನ್ನು ನೀಡುವ ಗತಕಾಲದ ಇತಿಹಾಸಕ್ಕೊಂದು ವೈಜ್ಞಾನಿಕ ಆಯಾಮವಿದೆ. ಚೆಂಡಿನ ಹೊಳಪಿಗಾಗಿ ಕೆಲವು ವರ್ಷಗಳ ಹಿಂದೆ ಬೌಲರುಗಳು ವ್ಯಾಸಲೀನ್ ಅಥವಾ ಬ್ರಿಲ್ ಕ್ರೀಮುಗಳನ್ನು ಬಳಸುವ  ಆಪಾದನೆಗಳಿದ್ದವು. ಇನ್ನು ಕೆಲವರು ಚೂಯಿಂಗ್ ಗಮ್ ಅಗೆದ ಎಂಜಲನ್ನು ಚೆಂಡಿಗೆ ಉಗಿದು, ಉಜ್ಜಿ ಹೊಳಪನ್ನು ಹೆಚ್ಚಿಸುವ ಬಗ್ಗೆಯೂ ಗುಲ್ಲುಗಳಿದ್ದವು. ಇದರ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಲಾಗದಿದ್ದರೂ ಮೆರುಗು ಕಳೆದುಕೊಂಡ ಚೆಂಡನ್ನು ಹೀಗೆ ಉಜ್ಜುವುದರಿಂದ,ಅದರ ಚರ್ಮದಲ್ಲಿರುವ ನೈಸರ್ಗಿಕ ತೈಲಗಳು ಬಿಡುಗಡೆಯಾಗಿ ನುಣುಪನ್ನು ಪಡೆಯಬಹುದು ಎಂಬುದಂತೂ ನಿಜ.

ಚೆಂಡು ಹೆಚ್ಚು ಅಲುಗಾಡದಂತೆ ಹೊಲಿಗೆಯ ಉದ್ದಕ್ಕೂ ಹಿಮ್ಮುಖವಾಗಿ ತಿರುಗುವಂತೆ ಬೌಲಿಂಗ್ ಮಾಡಿದರೆ ಯಶಸ್ವೀ ಸ್ವಿಂಗ್ ಲಭಿಸುತ್ತದೆ. ವಾಯುಸುರಂಗದ ಪರೀಕ್ಷೆಯ ಫಲಿತಾಂಶದ ಪ್ರಕಾರ 20ಡಿಗ್ರಿ ಕೋನದಲ್ಲಿ, ಸೆಕೆಂಡಿಗೆ 11ಬಾರಿ ಹಿಮ್ಮುಖವಾಗಿ ಗಿರಕಿ ಹೊಡೆಯುತ್ತಾ 70 ಮೈಲುಗಳ ವೇಗದಲ್ಲಿ ಚೆಂಡು ಸಾಗಿದರೆ ಅದಕ್ಕೆ ಹೆಚ್ಚಿನ ಪಾರ್ಶ್ವಬಲ ದೊರೆಯುತ್ತದೆ. 70 ಮೈಲಿಗಳ ವೇಗ ಮೀರಿದರೆ? ತಳಭಾಗದ ಮೇಲ್ಮೈ ಪದರದಲ್ಲಿ ಬದಲಾವಣೆ ಶುರುವಾಗಿ, ಒತ್ತಡ ಕಡಿಮೆಯಾಗಿ ಎಷ್ಟೇ ಕರಾರುವಕ್ಕಾಗಿ ಬೌಲಿಂಗ್ ಮಾಡಿದರೂ ಚೆಂಡು ಸ್ವಿಂಗ್ ಆಗುವುದೇ ಇಲ್ಲ.

ರಿವರ್ಸ್ ಸ್ವಿಂಗ್:

ನನ್ನ ಸಹಪಾಠಿಯಾದ ಇಮ್ರಾನ್ ಖಾನ್ ವಿಶ್ವ ಕಂಡ ಶ್ರೇಷ್ಠ ಮತ್ತು ಮೊದಲ ರಿವರ್ಸ್ ಸ್ವಿಂಗ್ ಬೌಲರ್. ನಾನು 1980ರ ಆಗಸ್ಟ್ ನಲ್ಲಿ ಕ್ರಿಕೆಟ್ ಚೆಂಡಿನ ವಾಯುಗತಿಶೀಲತೆಯ ಬಗ್ಗೆ ‘ನ್ಯೂ ಸೈನ್ಟಿಸ್ಟ್’ ನಿಯತಕಾಲಿಕೆಯಲ್ಲಿ ಬರೆದಾಗ, ಇಮ್ರಾನ್ ತಾನು ಎಸೆದ ಚೆಂಡು ವಿರುದ್ಧ ದಿಕ್ಕಿನಲ್ಲಿ ಸ್ವಿಂಗ್ ಆಗುವ ಬಗ್ಗೆ ತಿಳಿಸಿದರು. ಪ್ರಮುಖವಾಗಿ ಆತ ಇನ್ ಸ್ವಿಂಗ್ ಬೌಲರ್. ಆದರೆ ಇನ್ ಸ್ವಿಂಗ್ ಮಾಡಿದಾಗಲೂ ಚೆಂಡು ತನ್ನ ನಿರ್ದಿಷ್ಟ ದಿಕ್ಕನ್ನು ಬದಲಿಸಿ, ವಿರುದ್ಧ ದಿಕ್ಕಿನಲ್ಲಿ ಬ್ಯಾಟ್ಸ ಮನ್ ನಿಂದ ಹೊರಗೆ ಸಾಗುತ್ತಿತ್ತು.ಆಗಿನ ಕಾಲಕ್ಕೆ ಇದನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವಾಗದಿದ್ದ ಕಾರಣ ನಾನು ಇಂತಹ ಒಂದು ಸಾಧ್ಯತೆಯನ್ನೇ ಅಲ್ಲಗಳೆದಿದ್ದೆ. ಆದರೂ ಕೆಲ ವರ್ಷಗಳಲ್ಲಿಯೇ ನಾವು ನಡೆಸಿದ ವಾಯುಸುರಂಗದ ಪರೀಕ್ಷೆಯಲ್ಲಿ ಇಮ್ರಾನರ ಎಸೆತದ ರಹಸ್ಯ ಬಯಲಾಯಿತು. ಚೆಂಡಿನಲ್ಲಿ ರಿವರ್ಸ್ ಸ್ವಿಂಗ್ ಉಂಟುಮಾಡುವ ವಾಯುಚಲನೆಯನ್ನು ಚಿತ್ರ 3 ರಲ್ಲಿ ತೋರಿಸಲಾಗಿದೆ.

ಅತಿ ವೇಗದಲ್ಲಿ ಅಂದರೆ ಸುಮಾರು 85 ಮೈಲಿಗಿಂತಲೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಿದಾಗ ಮೇಲ್ಮೈ ಪದರವು ತನ್ನ ಸರಾಗ ಸ್ಥಿತಿಯಿಂದ ಪ್ರಕ್ಷುಬ್ಧ ಸ್ಥಿತಿಗೆ ಅತ್ಯಂತ ವೇಗವಾಗಿ, ಅದರಲ್ಲೂ ಮುಖ್ಯವಾಗಿ ಹೊಲಿಗೆಯ ಜಾಗವನ್ನು ತಲುಪುವ ಮೊದಲೇ ಬದಲಾಗುತ್ತದೆ. ಈ ಪ್ರಕರಣದಲ್ಲಿ ಅದಾಗಲೇ ಪ್ರಕ್ಷುಬ್ಧ ಸ್ಥಿತಿಯ ಮೇಲ್ಮೈ ಪದರವನ್ನು ಹೊಲಿಗೆಯು ಮತ್ತಷ್ಟು ಹಾನಿ ಮಾಡಿ ಕ್ಷೀಣಿಸಿ ತಳ ಮೈಯಿಗೂ ಮೊದಲೇ ಬೇರ್ಪಡಿಸುತ್ತದೆ. ಇದರಿಂದ  ಅಸಮಮಿತಿ ಮತ್ತು ಪಾರ್ಶ್ವಬಲಗಳು ಸಾಂಪ್ರದಾಯಿಕವಾಗಿರದೆ ವಿರುದ್ಧ ದಿಕ್ಕಿನಲ್ಲಿ ಬದಲಾಗುತ್ತವೆ. ಪರಿಣಾಮ ಚೆಂಡೂ ಕೂಡಾ ವಿರುದ್ಧ ದಿಕ್ಕಿನಲ್ಲಿ ಸ್ವಿಂಗ್ ಆಗುತ್ತದೆ. ಅಂದರೆ ಚೆಂಡಿನ ಹೊಲಿಗೆಯನ್ನು ಯಾವ ದಿಕ್ಕಿನಲ್ಲಿ ಮುಖಮಾಡಿ ಬೌಲಿಂಗ್ ಮಾಡುತ್ತಾರೋ ಅದರ ವಿರುದ್ಧ ದಿಕ್ಕಿನಲ್ಲಿ ಸ್ವಿಂಗ್ ಆಗಾದಾಗ ಮಾತ್ರ ಅದನ್ನು ಪರಿಪೂರ್ಣ ರಿವರ್ಸ್ ಸ್ವಿಂಗ್ ಎನ್ನಬಹುದು. ಹೊಚ್ಚಹೊಸ ಚೆಂಡಿನಲ್ಲಿ 90 ಮೈಲಿಗೂ ಅಧಿಕ ವೇಗದಲ್ಲಿ ಎಸೆಯುವ ಬೌಲರುಗಳು ರಿವರ್ಸ್ ಸ್ವಿಂಗ್ ಉತ್ಪಾದಿಸಬಲ್ಲರು.

ಆದರೆ ಎಲ್ಲರಿಗೂ 90 ಮೈಲುಗಳ ವೇಗವನ್ನು ಮುಟ್ಟಲು ಸಾಧ್ಯವಿಲ್ಲವಲ್ಲ. ಅಂತಹ ಬೌಲರುಗಳು ರಿವರ್ಸ್ ಸ್ವಿಂಗ್ ಮಾಡುವುದು ಹೇಗೆಂಬ ಪ್ರಶ್ನೆ ಬಂದಾಗ, ಚೆಂಡಿನ ಒರಟುತನ ಚಿತ್ರಣಕ್ಕೆ ಬರುತ್ತದೆ. ಚೆಂಡಿನ ಪ್ರಧಾನ ಬದಿಯ (ದಾಂಡಿಗನನ್ನು ಮುಖ ಮಾಡಿರುವ ಬದಿ) ಒರಟುತನ ಹೆಚ್ಚಾದಂತೆಲ್ಲ ರಿವರ್ಸ್ ಸ್ವಿಂಗ್ ಪಡೆಯಲು ಬೇಕಾಗುವ ವೇಗದಲ್ಲಿ ಇಳಿಕೆ ಕಂಡುಬರುತ್ತದೆ. ಇನ್ನೊಂದು ಅರ್ಥದಲ್ಲಿ ಅತಿ ಹೆಚ್ಚಿನ ವೇಗಗಳಲ್ಲಿಯೂ ಸಹ ಚೆಂಡನ್ನು ರಿವರ್ಸ್ ಸ್ವಿಂಗ್ ಮಾಡಬಹುದು. ಹಾಗಾಗಿಯೇ ಚೆಂಡು ಹಳತಾದಂತೆಲ್ಲ ಹೆಚ್ಚು ಹೆಚ್ಚು ರಿವರ್ಸ್ ಸ್ವಿಂಗ್ ಎಸೆತಗಳು ಮೂಡಿಬರುತ್ತವೆ. ಆಸಕ್ತಿಕರ ವಿಷಯವೇನೆಂದರೆ ಹೊಸ ಚೆಂಡಿನಲ್ಲಿ ಔಟ್ ಸ್ವಿಂಗ್ ಮಾಡಬಲ್ಲಂತಹ ಬೌಲರ್, ತನ್ನ ಹಿಡಿತವನ್ನಾಗಲೀ (grip) ಅಥವಾ ಶೈಲಿಯನ್ನಾಗಲೀ (style) ಬದಲಾಯಿಸದೆ ಹಳೆಯ ಚೆಂಡಿನಲ್ಲಿ ಇನ್ ಸ್ವಿಂಗ್ ಮಾಡಬಹುದು. ಹಾಗೆಯೇ ಇನ್ ಸ್ವಿಂಗ್ ಮಾಡುವ ಬೌಲರ್ ಔಟ್ ಸ್ವಿಂಗ್ ಮಾಡಬಹುದು.

ದುರಾದೃಷ್ಟವೆಂದರೆ ರಿವರ್ಸ್ ಸ್ವಿಂಗಿಗೆ ಚೆಂಡನ್ನು ವಿರೂಪಗೊಳಿಸುವ ಕುಖ್ಯಾತಿಯೊಂದು ಅಂಟಿಕೊಂಡುಬಿಟ್ಟಿದೆ. ಚೆಂಡಿನ ಒರಟು ಮೈಯಿಯ ಪ್ರಾಮುಖ್ಯತೆ ಬೌಲರುಗಳಿಗೆ ತಿಳಿದಿದ್ದೇ ತಡ, ಅದನ್ನು ವಿರೂಪಗೊಳಿಸುವ ಕೆಲಸಕ್ಕೆ ಕೈಹಾಕಿದರು. 1994ರ ಇಂಗ್ಲೆಂಡಿನ ಕೌಂಟಿ ಕ್ರಿಕೆಟ್ ನ ಮೈಕ್ ಅಥರ್ಟನ್ ರವರ ‘ಜೇಬಿನಲ್ಲಿ ಮಣ್ಣು’ ಇಟ್ಟುಕೊಂಡಿದ್ದ ಪ್ರಕರಣದ ನಿಮಿತ್ತ ನನ್ನನ್ನು ಆಹ್ವಾನಿಸಲಾಗಿತ್ತು. ಅಲ್ಲಿ ವಿರೂಪಗೊಂಡಿರಬಹುದಾದ ಅನುಮಾನದ ಮೇಲೆ ಫೀಲ್ಡ್ ಅಂಪೈರುಗಳು ವಶಪಡಿಸಿಕೊಂಡಿದ್ದ ಹಲವು ಚೆಂಡುಗಳನ್ನು ನನಗೆ ತೋರಿಸಿದರು. ಬಾಟಲಿಯ ಮುಚ್ಚಳಗಳಿಂದ ಉಜ್ಜಿದ, ಉಗುರಿನಿಂದ ಹೊಲಿಗೆಗಳನ್ನು ಕಿತ್ತಿದ್ದ ಚೆಂಡುಗಳು ಅವುಗಳಲ್ಲಿ ಮುಖ್ಯವಾಗಿದ್ದವು. ಚೆಂಡಿಗೆ ಬೆವರು ಅಥವಾ ಎಂಜಲನ್ನು ಮೆತ್ತಿ, ಮಣ್ಣನ್ನು ಅಂಟಿಸಿ ಸಾಮಾನ್ಯ ಬೌಲಿಂಗ್ ವೇಗದಲ್ಲೂ ರಿವರ್ಸ್ ಸ್ವಿಂಗ್ ಪಡೆಯಬಹುದು. ಹೀಗೆ ಎಸೆದ ಚೆಂಡು ವಿಕೆಟ್ ಕೀಪರ್ ಕೈ ಸೇರುವಷ್ಟರಲ್ಲಿ ಯಾವ ಸಾಕ್ಷ್ಯವೂ ಉಳಿಯುವುದಿಲ್ಲ. ಬಹುಶಃ ಅಥರ್ಟನ್ ಇದೇ ಪ್ರಯತ್ನದಲ್ಲಿದ್ದರೋ ಎನೋ.

ರಿವರ್ಸ್ ಸ್ವಿಂಗ್ ಬಗೆಗೆ ಕೆಲವು ತಪ್ಪು ತಿಳುವಳಿಕೆಗಳಿವೆ. ಒಂದು; ಚೆಂಡಿನ ಒಂದು ಪಾರ್ಶ್ವವನ್ನು ಒದ್ದೆಯಾಗಿಸುವುದರಿಂದ ಉಂಟಾಗುವ ತೂಕದ ಅಸಮತೋಲನದಿಂದ ಸ್ವಿಂಗ್ ಆಗುತ್ತದೆಂಬ ನಂಬಿಕೆಯಿದೆ. ಆದರೆ ಇದಕ್ಕೆ ಇಲ್ಲಿಯವರೆಗೂ ವೈಜ್ಞಾನಿಕ ಪುರಾವೆಗಳು ಲಭಿಸಿಲ್ಲ. ಚೆಂಡು ನೆನೆಯುವುದರಿಂದ ಕೊಂಚ ಒರಟುತನ ಲಭಿಸಬಹುದು. ಆದರೆ ಒರಟುತನ ಮತ್ತು ಒಣಗಿರುವಿಕೆ ಎರಡರ ಪ್ರಾಮುಖ್ಯತೆ ಇತ್ತೀಚಿನ ಬೌಲರುಗಳಿಗೆ ಚೆನ್ನಾಗಿ ತಿಳಿದಿರುವುದರಿಂದ ಆದಷ್ಟೂ ಒರಟಾದ ಬದಿಯು ಒದ್ದೆಯಾಗುವುದನ್ನು ತಪ್ಪಿಸಲು ಅವರು ತಮ್ಮ ಕೈಗಳಿಂದ ಮುಟ್ಟುದಂತೆ ಎಚ್ಚರವಹಿಸುತ್ತಾರೆ.

ಎರಡು; ಚೆಂಡು ನಿಧಾನವಾಗಿ ಸಾಗಿ ಚಕ್ಕನೆ ಸ್ವಿಂಗ್ ಆಗುವುದರಿಂದ ರಿವರ್ಸ್ ಸ್ವಿಂಗ್ ಮಾರಕ ಎಂಬುದು. ರಿವರ್ಸ್ ಸ್ವಿಂಗಿನ ಪಾರ್ಶ್ವ ಒತ್ತಡದ ದಿಕ್ಕು ಮತ್ತು ಸ್ವಿಂಗ್ ಉಂಟಾಗುವ ಪ್ರಮಾಣಗಳು ಸಾಂಪ್ರದಾಯಿಕ ಸ್ವಿಂಗ್ ನೊಂದಿಗೆ ತಾಳೆಯಾಗುತ್ತವೆ. ಎರಡೂ ರೀತಿಯ ಸ್ವಿಂಗ್ ಗಳಲ್ಲಿಯೂ ಚೆಂಡು ಪ್ಯಾರಾಬೋಲಿಕ್ (ಪರವಲಯ) ವಾಯುಪಥದಲ್ಲಿ ಚಲಿಸುವುದರಿಂದ ಅದರ ಚಲನವಲನಗಳು ತನ್ನ ಸಂಚಾರದ ಕೊನೆಯಲ್ಲಿ ಗೋಚರಿಸುತ್ತವಷ್ಟೆ. ಇದರಲ್ಲಿ ವಿಶೇಷವೇನೂ ಇಲ್ಲ. ಅಂದರೆ ನಿಧಾನ ಗತಿಯ ಚೆಂಡಿನ, ವೇಗವಾಗಿ ಸ್ವಿಂಗ್ ಆಗುವ ಪ್ರಕ್ರಿಯೆ ಅಂತರ್ನಿರ್ಮಿತ.  ಒಂದು ಬದಿಯಲ್ಲಿ ನುಣುಪಾಗಿಯೂ, ಮತ್ತೊಂದು ಬದಿಯಲ್ಲಿ ಒರಟಾಗಿಯೂ ಇರುವ ಚೆಂಡು ಸಾಂಪ್ರದಾಯಿಕ ಮತ್ತು ರಿವರ್ಸ್ ಸ್ವಿಂಗುಗಳಿಗೆ ಪರಿಪೂರ್ಣವಾಗಿರುತ್ತದೆ.

ಕಾಂಟ್ರಾಸ್ಟ್ ಸ್ವಿಂಗ್ : ಇಂಗ್ಲೀಷ್ ಕ್ರಿಕೆಟ್ ಕ್ಲಬ್ಬಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಚೆಂಡಿನ ವಾಯುಗತಿಶೀಲತೆಯ ನನ್ನ ಸಂಶೋಧನೆಯನ್ನು ಮಂಡಿಸಲು ಹೋದಾಗ ಆಟಗಾರರಲ್ಲಿ ರಿವರ್ಸ್ ಸ್ವಿಂಗ್ ಬಗೆಗಿರುವ ಗೊಂದಲಗಳು ನನ್ನ ಗಮನಕ್ಕೆ ಬಂದವು. ಅಲ್ಲಿ ಉದ್ದೇಶಪೂರ್ವಕವಾಗಿ ಒಂದು ಬದಿಯನ್ನು ವಿರೂಪಗೊಳಿಸಿದ ಚೆಂಡುಗಳಿಂದ ರಿವರ್ಸ್ ಸ್ವಿಂಗ್ ಪಡೆಯುವ ಅಭ್ಯಾಸ ನಡೆಯುತ್ತಿತ್ತು. ಕೆಲವು ಬೌಲರುಗಳೇನೋ ಚೆಂಡನ್ನು ಉತ್ತಮವಾಗಿಯೇ ಸ್ವಿಂಗ್ ಮಾಡುತ್ತಿದ್ದರಾದರೂ ಅದು ಸರಿಯಾದ ರಿವರ್ಸ್ ಸ್ವಿಂಗ್ ಆಗಿರಲಿಲ್ಲ. ಚೆಂಡಿನ ಹೊಲಿಗೆಯನ್ನು ಪಿಚ್ ಗೆ ಸಮಾನಾಂತರವಾಗಿ ಹಿಡಿದು ಬೌಲಿಂಗ್ ಮಾಡುತ್ತಿದ್ದರೆ ನುಣುಪಾಗಿರುವ ಪಾರ್ಶ್ವದತ್ತ ಚೆಂಡು ಸ್ವಿಂಗ್ ಆಗುತ್ತಿತ್ತು. ಅಲ್ಲಿನ ತರಬೇತುದಾರರು ಮತ್ತು ಆಟಗಾರರಿಗೆ ಈ ವಿಚಿತ್ರ ಪ್ರಕ್ರಿಯೆಯನ್ನು ವಿವರಿಸುವ ಸಲುವಾಗಿ ಅದಕ್ಕೊಂದು ಹೊಸ ನಾಮಕರಣ ಮಾಡಿದೆ. ಅದುವೇ ಕಾಂಟ್ರಾಸ್ಟ್ ಸ್ವಿಂಗ್ ( ವೈರುಧ್ಯ ಸ್ವಿಂಗ್).

ಕಡಿಮೆ ವೇಗದಲ್ಲಿ ಗಾಳಿಯಲ್ಲಿ ಸಾಗುತ್ತಿರುವ ಚೆಂಡಿನ ಮೇಲ್ಮೈ ಪದರವನ್ನು ಚಿತ್ರ 4(a) ಯಲ್ಲಿ ಕಾಣಬಹುದು. ನುಣುಪಾದ ಭಾಗದಲ್ಲಿ ಚೆಂಡಿನ ಮೇಲ್ಮೈಯಿಂದ ಪದರವು ಬಹಳ ಬೇಗನೆ ಬೇರ್ಪಟ್ಟರೆ, ಒರಟಾದ ಭಾಗದಲ್ಲಿ ಪ್ರಕ್ಷುಬ್ಧತೆ ಉಂಟಾಗಿ ಬಹಳ ನಿಧಾನವಾಗಿ ಬೇರ್ಪಡುತ್ತದೆ. ಈ ಅಸಮಮಿತಿಯ ಪರಿಣಾಮ ಪಾರ್ಶ್ವ ಬಲವು ಸೃಷ್ಟಿಯಾಗಿ ಚೆಂಡನ್ನು ಒರಟಾದ ಪಾರ್ಶ್ವದ ದಿಕ್ಕಿಗೆ ಸ್ವಿಂಗ್ ಆಗುವಂತೆ ಮಾಡುತ್ತದೆ.

 

ಹಾಗೇನಾದರೂ ಚೆಂಡನ್ನು ವೇಗವಾಗಿ ಎಸೆದರೆ ಚಿತ್ರ 4(b) ನಲ್ಲಿರುವಂತೆ ಮೇಲಿನ ಕ್ರಿಯೆಗೆ ವ್ಯತಿರಿಕ್ತವಾಗಿ ವರ್ತಿಸುತ್ತದೆ. ಇಲ್ಲಿ ಎರಡೂ ಪಾರ್ಶ್ವಗಳಲ್ಲಿ ಬದಲಾವಣೆಗಳುಂಟಾದರೂ ಒರಟಾದ ಪಾರ್ಶ್ವದಲ್ಲಿ ಪ್ರಕ್ಷುಬ್ಧತೆ ಹೆಚ್ಚಿ ಮೇಲ್ಮೈ ಪದರವು ಬಹಳ ಬೇಗನೆ ಚೆಂಡಿನಿಂದ ಬೇರ್ಪಟ್ಟು ನುಣುಪಾದ ಭಾಗದ ಕಡೆಗೆ ಚೆಂಡು ಸ್ವಿಂಗ್ ಆಗುತ್ತದೆ.

ಚೆಂಡು ಯಾವ ಪಾರ್ಶ್ವದೆಡೆಗೆ ಸ್ವಿಂಗ್ ಆಗಬೇಕೆಂದು ನಿರ್ಧರಿಸಬೇಕಾದ ನಿರ್ಣಾಯಕ ವೇಗವು ಚೆಂಡಿನ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.ಸೊಗಸಾದ ಕಾಂಟ್ರಾಸ್ಟ್ ಸ್ವಿಂಗ್ ಬೌಲಿಂಗ್ ಅನ್ನು ಆಂಡ್ರ್ಯೂ ಫ್ಲಿಂಟಾಫ್ ರವರ ಬೌಲಿಂಗ್ ನಲ್ಲಿ ಕಾಣಬಹುದು.

ಕಾಂಟ್ರಾಸ್ಟ್ ಸ್ವಿಂಗಿನ ಆಸಕ್ತಿದಾಯಕ ಲಕ್ಷಣವೆಂದರೆ ಎಸೆತದ ವೇಗವನ್ನು ಲೆಕ್ಕಿಸದೆ ಯಾವುದೇ ಬೌಲರ್ ಕೂಡಾ ಇದನ್ನು ರೂಢಿಸಿಕೊಳ್ಳಬಹುದು. ಚೆಂಡಿನ ಹೊಲಿಗೆಯನ್ನು ಒಂದು ಕೋನದಲ್ಲಿ ಹಿಡಿದು ಸ್ಲಿಪ್ ಕಡೆಗೋ, ಫೈನ್ ಲೆಗ್ ಕಡೆಗೋ ಬೌಲಿಂಗ್ ಮಾಡುವುದಕ್ಕಿಂತ, ನೇರವಾಗಿ ಹಿಡಿದು ಎಸೆಯುವುದು ಸುಲಭ. ಸಾಮಾನ್ಯರೂ ಕೂಡಾ ತಮ್ಮ ಶೈಲಿ(style)ಯನ್ನು ಬದಲಿಸದೆ ಅನಾಯಾಸವಾಗಿ ಚೆಂಡನ್ನು ಎರಡೂ ಪಾರ್ಶ್ವಗಳಿಗೆ ಸ್ವಿಂಗ್ ಮಾಡಬಹುದು. ಮಧ್ಯಮ ವೇಗಿಗಳು ಮತ್ತು ಹವ್ಯಾಸಿ ಬೌಲರುಗಳು ಸಹ ಚೆಂಡಿನ ಹೊಲಿಗೆಯ ನೇರವಾಗಿ ಬೌಲಿಂಗ್ ಮಾಡಿ, ಹೆಚ್ಚು ಪುಟಿಸಿ(bounce) ಅಕ್ಕಪಕ್ಕಕ್ಕೆ ಸ್ವಿಂಗ್ ಮಾಡಿಸಬಲ್ಲರು. ಚೆಂಡಿನ ಒರಟುತನದ ವೈರುಧ್ಯವನ್ನು ದುಡಿಸಿಕೊಂಡು ಯಾವುದೇ ಹೆಚ್ಚಿನ ಪರಿಶ್ರಮವಿಲ್ಲದೆ ಪರಿಣಾಮಕಾರಿಯಾಗಿ ಸ್ವಿಂಗ್ ಮಾಡಿ ದಾಂಡಿಗರನ್ನು ಗೊಂದಲಕ್ಕೀಡುಮಾಡುತ್ತಾರೆ. ಚೆಂಡಿನ ಹೊಲಿಗೆಯು ಸಂಪೂರ್ಣ ಸವೆದಿದ್ದರೂ ಸಹ ಅನಾಯಾಸವಾಗಿ ಕಾಂಟ್ರಾಸ್ಟ್ ಸ್ವಿಂಗ್ ಮಾಡಬಹುದು, ಆದರೆ ಸಾಂಪ್ರದಾಯಿಕ ಸ್ವಿಂಗ್ ಮತ್ತು ರಿವರ್ಸ್ ಸ್ವಿಂಗ್ ಗಳಿಗೆ ಹೊಲಿಗೆ ಇರುವುದು ಅತ್ಯವಷ್ಯಕ.

ಸ್ವಿಂಗ್ ಬೌಲಿಂಗ್ ಗೆ ಬೇಕಾದ ಆದರ್ಶಮಯವಾದ ಚೆಂಡಿನ ಒಂದು ಬದಿ ನುಣುಪಾಗಿಯೂ, ಮತ್ತೊಂದು ಬದಿ ಒರಟಾಗಿಯೂ ಇದ್ದು ಹೊಲಿಗೆಯು ಸುಸ್ಥಿತಯಲ್ಲಿರಬೇಕು. ಹೊಸ ಚೆಂಡನ್ನು ಪಡೆದುಕೊಂಡ ಫೀಲ್ಡಿಂಗ್ ತಂಡವು ನುಣುಪಾದ ಬದಿಯನ್ನು ಮೊದಲೇ ಪರೀಕ್ಷಿಸಿ ಪಂದ್ಯದುದ್ದಕ್ಕೂ ಆ ಬದಿಯನ್ನು ಉಜ್ಜುತ್ತಾ ಹೊಳಪು ಕೊಡಬೇಕು. ಮತ್ತೊಂದು ಬದಿಯನ್ನು ಒರಟಾಗಲು ಬಿಟ್ಟು ಶುಷ್ಕತೆಯನ್ನು ಕಾಪಾಡಿಕೊಳ್ಳಬೇಕು.

ಈಗ ಹೇಳಿ, ನಿಮ್ಮ ನೆಚ್ಚಿನ ವೇಗದ ಬೌಲರ್ ಮಾಡುವ ಸ್ವಿಂಗ್ ಯಾವುದು? ಚೆಂಡಿನ ಹೊಲಿಗೆಯನ್ನು ಒಂದು ಕೋನದಲ್ಲಿ ಹಿಡಿದು ಬೌಲಿಂಗ್ ಮಾಡಿದಾಗ ಹೊಲಿಗೆಯ ದಿಕ್ಕಿನಲ್ಲಿಯೇ ಸ್ವಿಂಗ್ ಆದರೆ ಅದು ಸಾಂಪ್ರದಾಯಿಕ ಸ್ವಿಂಗ್, ವಿರುದ್ಧ ದಿಕ್ಕಿಗೆ ಸ್ವಿಂಗ್ ಆದರೆ ಅದು ರಿವರ್ಸ್ ಸ್ವಿಂಗ್. ಹೊಲಿಗೆಯನ್ನು ಪಿಚ್ ನ ನೇರಕ್ಕಿರಿಸಿ ಬೌಲಿಂಗ್ ಮಾಡಿದರೆ ಅದು ಕಾಂಟ್ರಾಸ್ಟ್ ಸ್ವಿಂಗ್.

 

ಸರ್ಫ್ರಾಜ್ ನವಾಜ್ 9/86 – ಆಸ್ಟ್ರೇಲಿಯಾ ಮೊದಲನೇ ಟೆಸ್ಟ್ 1978/79

ಅನುವಾದ : ಹೇಮಂತ್ ಎಲ್


ಪ್ರತಿಕ್ರಿಯಿಸಿ