೧೯೯೦ ರಲ್ಲಿ ಹುಟ್ಟಿದ ಮನು ಎಸ್. ಪಿಳ್ಳೈ , ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಆಧುನಿಕ ಇತಿಹಾಸ ಬರಹದಲ್ಲಿ ಹೆಸರು ಮಾಡಿದವರು. ಮೊದಲಿಗೆ 3 ಖಂಡಗಳಲ್ಲಿ 6 ವರ್ಷ ಸಂಶೋಧನೆ ನಡೆಸಿ “The Ivory Throne: Chronicles of the House of Travancore” ಪುಸ್ತಕ ಬರೆದರು. ಈ ಪುಸ್ತಕ ಅವರಿಗೆ ಅಪಾರ ಖ್ಯಾತಿ ತಂದಿತ್ತಿದು . ೨೦೧೭ ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಈ ಕೃತಿಗೆ ಬಂತು. ೨೦೧೮ ರಲ್ಲಿ ಇವರ ” Rebel Sultans: The Deccan from Khilji to Shivaji ” ಪುಸ್ತಕ ಹೊರಬಂತು. ‘ಛಂದ ಪುಸ್ತಕ’ ಈ ಪುಸ್ತಕವನ್ನು ಕನ್ನಡಲ್ಲಿ ಪ್ರಕಟಿಸಿದೆ. ೨೦೨೦ರಲ್ಲಿ ಇವರ ಹೊಸ ಪುಸ್ತಕ “The Courtesan, the Mahatma & the Italian Brahmin” ಬಿಡುಗಡೆಯಾಗಿದೆ.
ಬರಹಗಾರ, Tie – ಕೇರಳ ಇದರ ಸ್ಥಾಪಕ ಸಿ.ಬಾಲಗೋಪಾಲ್ ಅವರು ಯುವ ಇತಿಹಾಸಕಾರ ಮನು ಪಿಳ್ಳೈ ಅವರೊಡನೆ ನಡೆಸಿದ ಸಂವಾದದ ಇಲ್ಲಿದೆ.
ಬಾಲಗೋಪಾಲ್: ಮನು ನಿಮಗೆ ಇತಿಹಾಸ ಅಧ್ಯಯನದಲ್ಲಿ ಇತಿಹಾಸದ ಸಂಶೋಧನೆಯಲ್ಲಿ ಏಕೆ ಆಸಕ್ತಿ ಬಂದಿತು?
ಮನುಪಿಳ್ಳೈ: ಬಾಲ್ಯದಲ್ಲಿ ನಾವು ಏನನ್ನು ನೋಡಿಕೊಂಡು, ಕೇಳಿಕೊಂಡು ಬೆಳೆಯುತ್ತೇವೊ ನಮ್ಮ ಆಸಕ್ತಿ ಕೂಡ ಅದರ ಕಡೆಗೆ ಇರುತ್ತದೆ ಎಂದು ಮುತ್ತುಮಣಿ ಹೇಳಿದಂತೆ , ನನ್ನ ವಿಷಯದಲ್ಲಿ ನಾನು ಶಾಲೆಯಲ್ಲಿ ಓದುವಾಗ ಇತಿಹಾಸ ನನಗೆ ಅತ್ಯಂತ ನೀರಸದ ವಿಷಯವಾಗಿತ್ತು. ಪ್ರತಿ ಬೇಸಿಗೆಯಲ್ಲಿ ನನ್ನ ಅಜ್ಜಿ ಮನೆ ಕೇರಳಕ್ಕೆ ಬರುತ್ತಿದ್ದೆ. ಇದು ನಾನು ವಂಶದವರ ಗತ ಜೀವನವನ್ನು ಅರಿಯಲು ದಾರಿ ಮಾಡಿದಂತೆ ಆಯಿತು. ಅಜ್ಜಿ ಹೇಳುತ್ತಿದ್ದ ಕತೆಗಳು ನನ್ನ ಕುಟುಂಬಕ್ಕೆ ಸಂಬಂಧಿಸಿದವೆ ಆಗಿದ್ದವು.ಹಲವು ರೀತಿಯಲ್ಲಿ ಆಕೆ ಹೇಳುತ್ತಿದ್ದ ಕತೆಗಳಿಗೆ ಮುಚ್ಚುಮರೆ ಇರಲಿಲ್ಲ. ಅವಳ ಕತೆಗಳ ಕೊನೆಯಲ್ಲಿ ಒಂದು ನೀತಿ ಇರುತ್ತಿತ್ತು. ನನ್ನ ಅಜ್ಜಿಯ ಕತೆಯಲ್ಲಿ ಮನೋರಂಜನೆ ಮತ್ತು ಪ್ರಾಮಾಣಿಕತೆ ಎರಡು ಇರುತ್ತಿತ್ತು. ಆ ಕತೆಯಲ್ಲಿ ನನ್ನ ಅಜ್ಜಿಯ ಮುತ್ತಜ್ಜಿ ಆನೆ ಸಾಕಿದ್ದಳು, ನನ್ನ ಮುತ್ತಜ್ಜನೊಬ್ಬ ಹಳ್ಳಿಯ ಮಕ್ಕಳನ್ನೆಲ್ಲ ದಾರಿ ತಪ್ಪಿಸುತ್ತಿದ್ದ. ಇವೆಲ್ಲ ಕತೆಗಳು ನಮ್ಮನ್ನು ತಡೆದು ನಿಲ್ಲಿಸುತ್ತಿದ್ದವು. ಪ್ರತಿಯೊಬ್ಬ ಹಿರಿಯರು ಕೂಡ ಪ್ರಸ್ತುತ ಜನಾಂಗ ನೈತಿಕ ಮೌಲ್ಯಗಳನ್ನು ಕಲಿಯಬೇಕು ಎಂದು ಆಸೆ ಪಡುತ್ತಾರೆ. ನನಗನಿಸುವ ಹಾಗೆ 4 ತಲೆಮಾರಿನ ಹಿಂದಿನವರು ಕೂಡ ನಮ್ಮಂತೆ ಇದ್ದರು. ನನ್ನ ಕುಟುಂಬದ ವಿಷಯ ಹೇಳುವುದಾದರೆ ನನ್ನ ಮೊದಲ ಪುಸ್ತಕ ಐವರಿ ಥ್ರೋನ್ ಗೆ ನನ್ನ ವಂಶದವರ ಬಗೆಗೆ ಇದ್ದ ಕುತೂಹಲವೆ ಕಾರಣ.
ಕೇರಳವರ್ಮ ವೆಲಿಯಾಳುದೊಂಬರನ್ – ಮಲಯಾಳಂ ಸಾಹಿತ್ಯದ ಪಿತಾಮಹ ಸಂಸ್ಕೃತದ ದೊಡ್ಡ ವಿದ್ವಾಂಸ. ಆತ 1877 ರಲ್ಲಿ ಬರೆದ ಪತ್ರವೊಂದು ನನಗೆ ಲಂಡನ್‌ನಲ್ಲಿ ಸಿಕ್ಕಾಗ ದಿಗ್ಭ್ರಮೆಯಾಯಿತು. ಅದನ್ನು ಬರೆದಾಗ ಆತನಿಗೆ ಮೂವತ್ತು ವರ್ಷ, ಅವನ ಕಾಲದ ಕುರಿತು ಆತ ಹೇಳುತ್ತಾನೆ.ಆತ ಬೈಬಲ್ ಓದುತ್ತಿದ್ದ, ಅರಮನೆಯಲ್ಲಿ ಇರುತ್ತಿದ್ದ. ಆಸಕ್ತಿ ವಿಷಯವೆಂದರೆ ಆತ ಭಾಂಗ್ ಮುಂತಾದ ಅಮಲು ಪದಾರ್ಥಗಳನ್ನು ಇಷ್ಟ ಪಡುತ್ತಿದ್ದ. ಅಂದರೆ ಇಂದು ಯುವಜನರು ಮಾದಕ ಪದಾರ್ಥಗಳ ದಾಸರಾಗಿರುವ ಹಾಗೆ ಒಬ್ಬ ಮಹಾಕವಿ ಇದರ ಹುಡುಕಾಟದಲ್ಲಿ ಇರುತ್ತಿದ್ದ ಎಂಬುದು ಮನುಷ್ಯರ ಆಸಕ್ತಿಗಳು ಎಲ್ಲ ಕಾಲಕ್ಕೂ ಒಂದೆ ಆಗಿರುತ್ತದೆ ಎಂಬುದು ಇದು ಹೇಳುವಂತಿದೆ.ಅಂದರೆ ಗತದಲ್ಲಿ ಬದುಕಿದವನು ನಮಗಿಂತ ಭಿನ್ನವಾಗಿರಲಿಲ್ಲ ಎಂಬುದು ಇಲ್ಲಿನ ವಿಷಯ.ಕಾಲ ಬದಲಾಗಿದೆ, ಜಗತ್ತು ಬದಲಾಗಿದೆ ಎನ್ನುತ್ತೇವೆ, ಮನುಷ್ಯನ ನಾಡಿಮಿಡಿತ ಬದಲಾಗಿಲ್ಲ. ಐವರಿಥ್ರೋನ್ ನಲ್ಲಿ ನಾನು ಬರೆದಂತೆ ಹದಿನಾರನೆಯ ಶತಮಾನದ ಸುಲ್ತಾನರು ನನ್ನ- ನಿಮ್ಮ ಹಾಗೆಯೆ ಇದ್ದರು.ಅವರೇನು ಬೇರೆ ಗ್ರಹದಿಂದ ಇಳಿದು ಬಂದವರಲ್ಲ. ಅವರು ನಮ್ಮಂತೆ ಬದುಕಿದರು. ಅವರೇನು ಇತಿಹಾಸ ನಿರ್ಮಿಸಲಿಲ್ಲ. ಅವರ ಬದುಕನ್ನು ಅವರು ಬದುಕಿದರು.ನಾವಿಲ್ಲಿ ಕುಳಿತು ಅವರ ಬದುಕು ವಿಶೇಷವಾಗಿತ್ತು ಎಂದು ಮಾತನಾಡುತ್ತೇವೆ. ಮೌಲ್ಯದ ಬಗ್ಗೆ ಹೇಳುವಾಗ ಅವರು ಯುದ್ದವನ್ನು ಅಯ್ಕೆ ಮಾಡಬೇಕಿತ್ತ, ಬೇಡವ ಎಂದು ಮಾತನಾಡುತ್ತೇವೆ. ಈ ರೀತಿಯ ಇತಿಹಾಸದ ನಿರೂಪಣೆ ಕಳೆದ ಐವತ್ತು ವರ್ಷಗಳಿಂದ ನಮ್ಮ ಮುಂದೆ ಬರುತ್ತಿದೆ. ಇತಿಹಾಸ ಜೀವಂತಿಕೆಯದು, ಅದು ಜನರ ಕತೆ, ಅದನ್ನು ಹೇಳುವ ಅವಶ್ಯಕತೆ ಇದೆ.
ಬಾಲಗೋಪಾಲ್: ನಾವೇಕೆ ಇತಿಹಾಸ ತಿಳಿಯಬೇಕು? ಅದು ಕೇವಲ ಹಿಂದೆ ನಡೆದು ಹೋದ ಕತೆ. ಅದು ನಮಗೆ ಹೇಗೆ ಸಹಾಯಕ? ಪ್ರಸ್ತುತಕ್ಕೆ ಅದರಿಂದ ಏನು ಸಿಗುತ್ತದೆ? ನಾನು ಆ ವಿಷಯಕ್ಕೆ ಬರುತ್ತೇನೆ. ನಿಮ್ಮ ಮೊದಲ ಪುಸ್ತಕದ ವಿಷಯ ಬಗ್ಗೆ ಹೇಳುವುದಾದರೆ ಅದು ಬಹಳ ಪ್ರಭಾವಿತ ಕೃತಿ, ಕೇರಳದ ತಿರುವಾಂಕೂರಿನ ಇತಿಹಾಸದ ಕುರಿತು ಅದು ಮಾತನಾಡುತ್ತದೆ. ಇದುವರೆಗೂ ದೊಡ್ಡ ದೊಡ್ಡ ಇತಿಹಾಸಕಾರರು ಗತದ ಬಗ್ಗೆ ಹೇಳಿದ ವಿಷಯಗಳನ್ನು ಈ ಕೃತಿ ಬುಡಮೇಲು ಮಾಡಿದೆ.ತಿರುವಾಂಕೂರಿನ ಬಗ್ಗೆ ನಿಮಗೆ ಆಸಕ್ತಿ ಬರಲು ಕಾರಣವೇನು?
ಮನು ಪಿಳ್ಳೈ: ಇದಕ್ಕೆ ಹಲವಾರು ಕಾರಣಗಳಿವೆ. ಇತಿಹಾಸದಲ್ಲಿ ರಾಜ- ರಾಣಿಯರ ಉಲ್ಲೇಖ ಮಾಡುವಾಗ ಅದನ್ನು ಬರೆದವರು ಪುರುಷರೆ ಆಗಿರುತ್ತಾರೆ ಮತ್ತು ಅದು ಪುರುಷರೆ ಕುರಿತೆ ಆಗಿರುತ್ತದೆ. ಮಹಿಳೆಯರ ವಿಷಯ ಅದರಲ್ಲಿ ಸ್ವಲ್ಪವೇ ಇರುತ್ತದೆ. ಆ ಕಾರಣಕ್ಕಾಗಿ ಇತಿಹಾಸದಲ್ಲಿ ಮಹಿಳೆಯರ ಹುಡುಕಾಟದ ಪ್ರಯತ್ನ ನಡೆಸಿದೆ. ಜಗತ್ತಿನ ಇತಿಹಾಸದಲ್ಲಿ ಮಹಿಳೆಯರು ಇದ್ದಾರೆ. ಆದರೆ ಪುರುಷರು ಬರೆದ ಇತಿಹಾಸದಲ್ಲಿ ಅವರು ಅಡಿಟಿಪ್ಪಣಿಯಷ್ಟು ಮಹತ್ವವನ್ನು ಮಾತ್ರ ಪಡೆಯುತ್ತಾರೆ. ಅವರ ಸ್ಥಾನ ಮುಖ್ಯವಾಗುವುದೆ ಇಲ್ಲ. ಲಕ್ಷ್ಮೀಬಾಯಿ ತನ್ನ ಐದನೆ ವಯಸ್ಸಿಗೆ ತಿರುವಾಂಕೂರು ಸಂಸ್ಥಾನಕ್ಕೆ ದತ್ತು ಮಗುವಾಗಿ ಬಂದವಳು. ಐದನೆ ವಯಸ್ಸಿಗೆ ರಾಣಿಯು ಅದಳು. ಅವಳ ಸುತ್ತ ಯಾವಾಗಲೂ ಮುನ್ನೂರು ಜನರಿರುತ್ತಿದ್ದರು. ಅವಳ ತಂದೆಯೆ ಅವಳನ್ನು ‘ ಘನತೆವೆತ್ತ ಮಹಾರಾಣಿ’ ಎನ್ನಬೇಕಿತ್ತು. ಆಕೆ ಕೋಣೆಯ ಕಡೆಗೆ ಹೊರಟರೆ ಎಲ್ಲರು ಎದ್ದು ನಿಲ್ಲುತ್ತಿದ್ದರು.ತನ್ನ ಇಪ್ಪತ್ತನೆಯ ವರ್ಷಕ್ಕೆ 50 ಲಕ್ಷ ಜನರನ್ನು ಅವಳು ಆಳುತ್ತಿದ್ದಳು. ಕೋಟ್ಯಾಂತರ ರೂಪಾಯಿ ಕಂದಾಯ ಬರುತ್ತಿತ್ತು.30 ನೇ ವಯಸ್ಸಿಗೆ ಅವಳ ಕುಟುಂಬ ಮುಂದಿನ ವಾರಸುದಾರನಿಗೆ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಅವಳನ್ನು ಬದಿಗೆ ಸರಿಸಿತು.
ಅವಳ ನಲವತ್ತು ವಯಸ್ಸಿಗೆ ದೇಶಕ್ಕೆ ಸ್ವಾತಂತ್ರ್ಯ ಬಂದಿತು, ಅವಳ ಐವತ್ತನೆ ವಯಸ್ಸಿನಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದಿತು.ಅವಳು ತನ್ನ ಅರಮನೆ, ವೈಭವದ ಬದುಕನ್ನು ಬಿಟ್ಟು ಕೊಡಬೇಕಾಯಿತು. ಅವಳ ಐದನೇ ವಯಸ್ಸಿಗೆ ಸಿಕ್ಕ ವೈಭವವನ್ನು ಬಿಟ್ಟು ಬೆಂಗಳೂರಿಗೆ ಬಂದಳು. ಅಲ್ಲಿ ಅವಳು ಅಮ್ಮುಮ ಎಂದು ಕರೆಯಲ್ಪಡುತ್ತಿದ್ದಳು. ಅವಳ ಬದುಕಿನ ಮೂರು ದಶಕವನ್ನು ಬೆಂಗಳೂರಿನಲ್ಲಿ ಕಳೆದಳು..ಅವಳ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಅವಳ ಹಣವಿರಲಿಲ್ಲ, ಬ್ಯಾಂಕ್ ಖಾತೆಯಲ್ಲಿ ಕೆಲವೆ ಸಾವಿರ ರೂಪಾಯಿ ಹಣವಿತ್ತು. ಇಪ್ಪತ್ತೊಂದು ಸುತ್ತು ಗನ್ ಸಲ್ಯೂಟ್ ಗೌರವ ಪಡೆಯುತ್ತಿದ್ದವಳು, ಯಾರ ಹುಟ್ಟಿದ ದಿನವನ್ನು ನಾಡು ಹಬ್ಬದಂತೆ ಆಚರಿಸುತ್ತಿತ್ತೊ , ಯಾರ ಕುಟುಂಬದ ಗೀತೆಯನ್ನು ಶಾಲೆಯ ಮಕ್ಕಳು ಹಾಡುತ್ತಿದ್ದರೊ ಅವಳು ತನ್ನ 80 ನೇ ವಯಸ್ಸಿನಲ್ಲಿ ತೀರಿಕೊಂಡಾಗ ಅವಳ ಕುಟುಂಬದ ಕೆಲವೆ ಬಂಧುಗಳ ಸಮ್ಮುಖದಲ್ಲಿ ಬೆಂಗಳೂರಿನ ಸಾಮಾನ್ಯ ಚಿತಾಗಾರದಲ್ಲಿ ಅವಳ ಶವವನ್ನು ದಹಿಸಲಾಯಿತು. ಅವಳಿಗೆ ಪ್ರಜಾಪ್ರಭುತ್ವ ಸರ್ಕಾರ ಬಂದಿದೆ ಎಂದು ತಿಳಿದಿತ್ತು ಹಾಗಾಗಿ ಒಂದೆ ರೀತಿಯ ಜೀವನಕ್ಕೆ ಅಂಟಿಕೊಂಡಿರಲು ಸಾಧ್ಯವಿಲ್ಲ ಎಂದು ಆಕೆಗೆ ಅರಿವಾಗಿತ್ತು. ಒಂದು ಗಮನಿಸಬಹುದಾದ ಅಂಶವೆಂದರೆ ಇಲ್ಲಿ ಕುಳಿತಿರುವವರೆಲ್ಲರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿದವರೆ, ಆದರೆ ಮುಂದಿನ ಹತ್ತು ವರ್ಷಗಳ ನಂತರ ಏನು? ಹದಿನೈದು ವರ್ಷಗಳ ನಂತರ ಏನು? ಯಾವುದು ಗುರಿ, ಹಾದಿ ಯಾವುದು? ಎಂಬುದನ್ನು ಕಂಡುಕೊಳ್ಳಬೇಕು. ಯಾವುದು ತನ್ನ ಗುರುತಾಗಿತ್ತೊ ಅದನ್ನು ತನ್ನ ಅರವತ್ತನೆ ವಯಸ್ಸಿನ ಬಿಟ್ಟು ಕೊಡುವುದು ಅಷ್ಟು ಸುಲಭವದ ವಿಷಯವೆ? ಬ್ರಿಟಿಷ್ ದಾಖಲೆಗಳಲ್ಲಿ ರಾಣಿ ಎಷ್ಟೊತ್ತಿಗೆ ಏಳುತ್ತಿದ್ದಳು, ಎಷ್ಟು ರೀತಿಯ ಪಾಯಸ ತಿನ್ನುತ್ತಿದ್ದಳು ಎಂದೆಲ್ಲ ಬರೆಯಲಾಗಿದೆ.ಅಂದರೆ ಬ್ರಿಟಿಷರ ಪ್ರಕಾರ ಅವಳು ಯಾವತ್ತೂ ಶ್ರೀಮಂತಳೆ.
ತಿರುವಾಂಕೂರಿನ ಬಗ್ಗೆ ಇನ್ನೊಂದು ವಿಷಯ ಹೇಳಬೇಕು, ಅದು ಹಿಂದೂ ರಾಜ್ಯವೆಂದು ಪ್ರಸಿದ್ದವಾಗಿತ್ತು. ಹಿಂದೂ ರಾಜ್ಯವೆಂದು ಕರೆಯಲ್ಪಡುವ ತಿರುವಾಂಕೂರಿನ ಬಹುದೊಡ್ಡ ವ್ಯಂಗ್ಯವೆಂದರೆ 18 ನೇ ಶತಮಾನದಲ್ಲಿ ಅಲ್ಲಿ ಸಾಮಾಜ್ಯ ಸ್ಥಾಪನೆ ಮಾಡಿದವನು ಅದುವರೆಗಿನ ನಿಯಮಗಳನ್ನು ಮುರಿದು ಹಾಕಿದ. ಅವನು ಈಸ್ಟ್ ಇಂಡಿಯಾ ಕಂಪನಿಯ ಆಯುಧಗಳನ್ನು ಬಳಸಲು ಪ್ರಾರಂಭಿಸಿದ, ತಮಿಳುನಾಡಿನಿಂದ ಮಿಷನರಿಗಳು ಬಂದರು. ಡಚ್ ದೇಶದವನು ಅಲ್ಲಿ ಜೈಲರ್ ಆಗಿದ್ದ. ಹಿಂದೂ ಎಂಬ ಸಾಮ್ರಾಜ್ಯದ ಕಲ್ಪನೆ ವಿದೇಶಿ ವಸ್ತುಗಳಿಂದ ಮಾಡಲ್ಪಟ್ಟಿತ್ತು.
ಉದಾಹರಣೆಗೆ – ದೇಶದ ಸಂಕೀರ್ಣತೆ , ಅಧಿಕಾರದ ಸಂಕೀರ್ಣತೆಯ ಹಾಗೆ ಅಧಿಕಾರವು ಮೇಲಕ್ಕೆ ಹೋಗುತ್ತದೆ, ಹಾಗೆಯೆ ಕೆಳಗೆ ಬೀಳುತ್ತದೆ, ಬ್ರಾಹ್ಮಣರ ಹಿಂದೂತ್ವದ ಪರಿಕಲ್ಪನೆ, ಕಮ್ಯುನಿಸ್ಟ್ ಅಧಿಕಾರ ಎಲ್ಲವು ಹೇಗೆ ಕೊನೆಯಾದವು ಎಂಬುದನ್ನು ನನ್ನ ಏಳುನೂರು ಪುಟದ ಪುಸ್ತಕ ಐವರಿ ಥ್ರೋನ್ ನಲ್ಲಿ ಬರೆದಿದ್ದೇನೆ.
ಬಾಲಗೋಪಾಲ್: ಇತಿಹಾಸವನ್ನು ನೋಡಿದರೆ ಅದನ್ನು ಬೇರೆ ಬೇರೆಯವರು ಅವರದೆ ಆದ ರೀತಿಯಲ್ಲಿ ಗ್ರಹಿಸುತ್ತಾರೆ, ನೀವೆ ಹೇಳಿದಿರಿ ಸುವರ್ಣಯುಗ ಯಾವತ್ತೂ ಇರಲಿಲ್ಲವೆಂದು. ಟಾಯ್ನಾಬಿ ಇತಿಹಾಸವನ್ನು ಒಂದು ಚಕ್ರೀಯ ಚಲನೆ ಎನ್ನುತ್ತಾರೆ. ಇದರಲ್ಲಿ ರೋಮ್ ನಂತಹ ಸಾಮ್ರಾಜ್ಯಗಳೆ ಎದ್ದಿವೆ, ಮತ್ತೆ ಬಿದ್ದಿವೆ.ನಿಮ್ಮ ಓದು ಅಧ್ಯಯನದ ಹಿನ್ನೆಲೆಯಲ್ಲಿ ಹೇಳುವುದಾದರೆ ಗತದಲ್ಲಿ ಆಗಿ ಹೋಗಿರುವುದರ ಕುರಿತು ನಾವೇಕೆ ಆಸಕ್ತಿ ತಾಳಬೇಕು?
ಮನು ಪಿಳ್ಳೈ: ನೋಡಿ ಸುವರ್ಣಯುಗದ ಬಗ್ಗೆ ಮಾತನಾಡುವುದಾದರೆ ಆ ಕಲ್ಪನೆ ನಮ್ಮ ತಲೆಯಲ್ಲಿದೆ ಅಷ್ಟೆ. ನಾವು ವಿಷಯಗಳನ್ನು ರೋಚಕವಾಗಿಸುತ್ತೇವೆ, ಇತಿಹಾಸದ ನಾಯಕರಿಗೆ ಬಹುಪರಾಕ್ ಹೇಳುತ್ತೇವೆ ಮತ್ತು ಗತದಿಂದ ಪ್ರೇರಣೆ ಪಡೆಯಬಹುದು ಎಂದು ಆಲೋಚಿಸುತ್ತೇವೆ. ನಾನು ಈಗಾಗಲೇ ಹೇಳಿದಂತೆ ಗತ ಕಾಲದಲ್ಲಿ ಬದುಕಿದವರಿಗೆ ಅವರದೆ ಆದ ಸಮಸ್ಯೆ, ಸವಾಲುಗಳಿದ್ದವು. ವಿಶಾಲ ವ್ಯಾಪ್ತಿಯ ಪ್ರಶ್ನೆಯೆಂದರೆ ನಾವೇಕೆ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂಬುದು. ಸರಳ ಉತ್ತರವೆಂದರೆ ನಮಗಿಂತ ಮೊದಲು ಬಂದವರು ನಾವಿವತ್ತು ಬದುಕಿರುವ ಸಮಾಜವನ್ನು ನಿರ್ಮಿಸಿದರು, ನಾವು ಅದರ ತಳಪಾಯವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅದನ್ನು ನಾಶಪಡಿಸಲು ಸಾಧ್ಯವಿಲ್ಲ. ಆ ಹಂತ ಹೇಗಿತ್ತು ಎಂದು ಆಲೋಚಿಸುತ್ತೇವೆ.
ಬೇರೆ ಬೇರೆ ಇತಿಹಾಸಕಾರರಿಗೆ ಅವರದೆ ಆದ ರಾಜಕಾರಣವಿದೆ. ನಾನು ಉದಾಹರಣೆಯನ್ನು ಕೊಡುವುದಾದರೆ ತಾಳಿಕೋಟೆ ಕದನದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಯಿತು, ಇದಕ್ಕೆ ದಖ್ಖನ್ ಸುಲ್ತಾನರು ಕಾರಣ ಎನ್ನಲಾಗುತ್ತದೆ. ಇವತ್ತು ರಾಜಕೀಯದಲ್ಲಿ ಧರ್ಮ ಪ್ರಮುಖ ಅಂಶವಾಗಿದೆ. ಇತಿಹಾಸ ಒಂದು ರಾಜಕೀಯ ವಿಷಯವಾಗುತ್ತಿದೆ. ತಾಳಿಕೋಟೆ ಕದನವನ್ನು ಹಿಂದೂ- ಮುಸ್ಲಿಂ ಯುದ್ದವೆಂದು ಹೇಳಲಾಗುತ್ತದೆ. ಇತಿಹಾಸಕಾರರಿಗೆ ಸುಲಭವಾಗಿ ಅರ್ಥವಾಗುವ ಸತ್ಯ ಸಂಗತಿಯೆಂದರೆ ತಾಳಿಕೋಟೆ ಯುದ್ದದಲ್ಲಿ ವಿಜಯನಗರದ ಪರವಾಗಿ ಸಾರಥ್ಯ ವಹಿಸಿದವನು, ಮೊದಲು ಕೆಲಸ ಮಾಡಿದ್ದು ಗೋಲ್ಕೊಂಡದ ಕುತುಬ್ ಷಾ ನ ಆಸ್ಥಾನದಲ್ಲಿ, ಅವನು ಒಬ್ಬ ಮುಸ್ಲಿಂ.
ಕುತುಬ್ ಷಾ ತನ್ನ ಜೀವನದ ಏಳು ವರ್ಷಗಳನ್ನು ವಿಜಯನಗರದಲ್ಲಿ ಕಳೆದವನು, ತೆಲುಗು, ಸಂಸ್ಕೃತ ಭಾಷೆಗಳನ್ನು ಕಲಿತು ಸ್ಥಳೀಯ ಹೆಣ್ಣನ್ನು ಮದುವೆಯಾದವನು. ಗೋಲ್ಕೊಂಡಕ್ಕೆ ಹಿಂದಿರುಗಿ ಮಹಾಭಾರತದ ದೇಶಭಕ್ತಿಯ ಪದ್ಯಗಳನ್ನು ಓದಿದವನು, ಕ್ಷೇತ್ರಯ್ಯ ಕವಿಯ ಹಾಗೆ ಮಧುರೈ, ತಂಜಾವೂರುಗಳನ್ನು ಸಂದರ್ಶಿಸಿದವನು, ಅವನಿಗೆ 1500 ಕಾಲಾಳು ಪಡೆ ಇತ್ತು. ವಿಜಯನಗರ ಯುದ್ದದಲ್ಲಿ 6000 ಮರಾಠರು ಅವನ ಪರವಾಗಿದ್ದರು. ಐನುಲ್ – ಮುಲ್ ಗಿಲಾನಿ ವಿಜಯನಗರದ ಸಾಮ್ರಾಜ್ಯದ ದಂಡನಾಯಕನಾಗಿದ್ದ. ಇತಿಹಾಸಕಾರರಿಗೆ ಅವರದೆ ಆದ ರಾಜಕಾರಣವಿದೆ, ಅವರದೆ ಆದ ಪೆಟ್ಟಿಗೆಗಳಿವೆ. ಗತದಲ್ಲಿ ಏನಾಯಿತು ಎಂಬುದನ್ನು ಆ ಪೆಟ್ಟಿಗೆಯೊಳಗೆ ಅವರು ಹಾಕುತ್ತಾರೆ. ಆದರೆ ನಾವು ಗತವನ್ನು ನಮ್ಮ ದೃಷ್ಟಿಯಲ್ಲಿ ಗ್ರಹಿಸಬೇಕು. ಈ ವಿಷಯದಲ್ಲಿ ರಾಜಕಾರಣಿಗಳು ಮಿತಿ ಮೀರಿ ಹೋಗಿದ್ದಾರೆ. ಅದು ಉಗ್ರ ಬಲಪಂಥೀಯರಿರಬಹುದು, ಉಗ್ರ ಎಡಪಂಥೀಯರಿರಬಹುದು. ಅವರಿಗೆ ಇತಿಹಾಸ ‘ ಶೆಟಲ್ ಕಾಕ್’ ನ ಹಾಗೆ. ಅವರು ತಮ್ಮತನವನ್ನು, ತಮ್ಮ ಪಕ್ಷವನ್ನು ರಾಜಕಾರಣವನ್ನು ಸಮರ್ಥಿಸಲು ಇತಿಹಾಸವನ್ನು ಬಳಸಿಕೊಳ್ಳುತ್ತಾರೆ. ಯಾವುದೆ ಇತಿಹಾಸದಿಂದ ಪಡೆಯಬೇಕಿರುವುದು ಅದಲ್ಲ, ಇತಿಹಾಸಕ್ಕೆ ತನ್ನದೆ ಆದ ನಿಲುವು, ತಾತ್ವಿಕತೆಗಳಿವೆ. ನಾವು ಅದರಿಂದ ಪ್ರೇರಣೆ ಪಡೆಯಬೇಕು. ನಾವು ನಮ್ಮ ಉದ್ವೇಗವನ್ನು ಇತಿಹಾಸದ ಮೇಲೆ ತೋರಿಸಬಾರದು. ನಾವು ದುರ್ಬಲತೆಯನ್ನು, ಸಮಸ್ಯೆಗಳನ್ನು, ಇತಿಹಾಸದ ದೃಷ್ಟಿಯಿಂದ ಕಾಣಬಾರದು. ಇತಿಹಾಸ ಒಂದು ಚಂದದ ವಿಷಯ. ಬಂಡಾಯಗಾರ ಸುಲ್ತಾನ ಇಬ್ರಾಹಿಂ ಆದಿಲ್ ಶಾನನ್ನು ಇತಿಹಾಸಕಾರರು ಒಬ್ಬ ಸುನ್ನಿ ಮುಸ್ಲಿಂ ಎಂದು ಇತಿಹಾಸಕಾರರು ಗುರುತಿಸುತ್ತಾರೆ. ಅವನು ರುದ್ರಾಕ್ಷ ಮಾಲೆ ಧರಿಸುತ್ತಿದ್ದ, ಅವನು ತನ್ನನ್ನು ತಾನು ಗುರು ಗಣಪತಿ ಮತ್ತು ಸರಸ್ವತಿಯ ಮಗನೆಂದು ಹೇಳಿಕೊಳ್ಳುತ್ತಿದ್ದ. ಅವನ ಆಸ್ಥಾನ ಬ್ರಾಹ್ಮಣರು ಮತ್ತು ಮರಾಠರಿಂದ ತುಂಬಿತ್ತು. ಅವನ ಪ್ರೀತಿಯ ಪತ್ನಿ ಮಹಾರಾಷ್ಟ್ರದವಳು. ಇವನ ಕಾಲದಲ್ಲಿ ಆಫ್ರಿಕಾದ ಕಪ್ಪು ಜನರು ಮಹಾರಾಷ್ಟ್ರದ ಭಾಗದಲ್ಲಿ ವಾಸಿಸಲು ಆರಂಭಿಸಿದರು.
ಶಿವಾಜಿಗಿಂತ 27 ವರ್ಷ ಮುಂಚೆ ಮೊಘಲರು ದಖನ್ ಕಡೆಗೆ ಬಾರದಂತೆ ತಡೆದಿದ್ದ ಇಥಿಯೋಪಿಯದಲ್ಲಿ ಜನಿಸಿದ ಮಳಿಕಂಬರ್ ಗುಲಾಮನಾಗಿ ಬಾಗ್ದಾದ್ ಗೆ ಹೋದವ, ಆತ ದಖನ್ ಕಡೆಗೆ ಬಂದಾಗ ಒಬ್ಬ ಕಿಂಗ್ ಮೇಕರ್ ಎನಿಸಿ ಅವನ ಮಗಳನ್ನು ರಾಜನಿಗೆ ಮದುವೆ ಮಾಡಿಕೊಟ್ಟ ಅವನು ಅಹ್ಮದ್ ನಗರದಲ್ಲಿ ಮಧ್ಯಕಾಲೀನ ಯುಗದ ಮೊದಲ ಕಪ್ಪು ರಾಣಿ ಎನಿಸಿಕೊಂಡಳು. ಜಹಾಂಗೀರ್ ಕೂಡ ಮಳಿಕಂಬರ್ ಗೆ ಭಯ ಪಡುತ್ತಿದ್ದ, ಅವನನ್ನು ನೇರವಾಗಿ ಸೋಲಿಸಲಾಗದೆ ಮಳಿಕಂಬರ್ ನ ಚಿತ್ರವನ್ನು ಮಾಡಿ ಜಹಾಂಗೀರ್ ಅದಕ್ಕೆ ಬಾಣ ಹೊಡೆಯುತ್ತಿದ್ದ. ಶಿವಾಜಿಯ ತಾತಾ ಮಾಲೋಜಿ ಮಳಿಕಂಬರ್ ನ ಬಲಗೈ ಬಂಟನಾಗಿದ್ದ. ನಾವು ಎಲ್ಲೋರ ಗುಹೆಯ ಬಳಿಗೆ ಹೋದರೆ ಮಾಲೋಜಿ ಮತ್ತು ಅವನ ಸಹೋದರರ ಸಮಾಧಿಗಳಿವೆ. ಆ ಸಮಾಧಿಗಳೆಲ್ಲವು ಇಸ್ಲಾಂ ವಾಸ್ತುಶಿಲ್ಪದ ಶೈಲಿಯಲ್ಲಿ ಇವೆ. ಅಲ್ಲಿ ಸಮಾಧಿಯಾಗಿದ್ದ ಹಿಂದೂಗಳ ಮೊಮ್ಮಗ ಶಿವಾಜಿ. ಅಫಜಲ್ ಖಾನ್ ಶಿವಾಜಿಯನ್ನು ಕೊಲ್ಲಲು ಬಂದಾಗ ಶಿವಾಜಿಯ ಇದ್ದವನು ಸಿದ್ದ್ ಇಬ್ರಾಹಿಂ ಎಂಬ ಮುಸ್ಲಿಂ, ಅಫಜಲ್ ಖಾನ್ ನ ಸೈನ್ಯದಲ್ಲಿ ಘೋರ್ಪಡೆ ಮುಂತಾದ ಮಹಾರಾಷ್ಟ್ರದ ಹಿಂದೂಗಳಿದ್ದರು. ಶಿವಭಾರತ ಎಂಬ ತನ್ನ ಕುರಿತ ಪದ್ಯಗಳಲ್ಲಿ ಶಿವಾಜಿ ಹೇಳಿರುವಂತೆ ಮಳಿಕಂಬರ್ ಒಬ್ಬ ಆಫ್ರಿಕಾದಿಂದ ಬಂದ ಬಹುದೊಡ್ಡ ಶೂರನಾಗಿದ್ದ, ಶಿವಾಜಿಯ ತಾತ ಅವನ ಬಳಿ ಇದ್ದ, ಶಿವಾಜಿಯ ತಂದೆ ನಿಜಾಮ್ ಷಾ ನಲ್ಲಿ ಇದ್ದ. ನಿಜಾಮ್ ಷಾ ಒಬ್ಬ ಮುಸ್ಲಿಂ , ಅವನ ಪೂರ್ವಜರು ಬ್ರಾಹ್ಮಣರು. ಪರ್ಷಿಯಾದಿಂದ ಬಂದ ಯೂಸುಫ್ ಅವನು ಆಟೋಮನ್ ಸುಲ್ತಾನನ ಮಗ ಅವನು ದಕ್ಷಿಣದ ಕಡೆಗೆ ಬಂದು ಮರಾಠ ಸ್ತ್ರೀಯನ್ನು ಮದುವೆಯಾದ.ಇವನಿಂದ ಆದಿಲ್ ಷಾ ಸಾಮ್ರಾಜ್ಯದ ಸ್ಥಾಪನೆಯಾಯಿತು. ಹಾಗಾಗಿ ಆದಿಲ್ ಶಾಹಿಗಳಿಗೆ ಒಂದು ರೀತಿಯಲ್ಲಿ ಪರ್ಷಿಯದ ಹಿನ್ನೆಲೆ ಇದ್ದರೆ ಇನ್ನೊಂದು ಕಡೆ ಮಹಾರಾಷ್ಟ್ರ ಮೂಲದ ಸಂಸ್ಕೃತದ ಹಿನ್ನೆಲೆ ಇತ್ತು.
ತಿರುಪತಿ ದೇವಾಲಯದಕ್ಕೆ ಹೋದರೆ ಕೃಷ್ಣದೇವರಾಯ ಹಾಗೂ ಅವನ ಪತ್ನಿಯರ ಕಂಚಿನ ವಿಗ್ರಹಗಳಿವೆ. ಅಲ್ಲಿನ ಕೃಷ್ಣದೇವರಾಯನ ಪ್ರತಿಮೆಯ ಟೋಪಿಯನ್ನು ಗಮಸಿದರೆ ಅದು ಪರ್ಷಿಯನ್ ಟೋಪಿಯಂತೆ ಕಾಣುತ್ತದೆ.ಇದು ವಿಜಯನಗರದಲ್ಲಿ ಪರ್ಷಿಯನ್ ಶೈಲಿ ಆರಂಭವಾಗಿತ್ತು ಎಂಬುದಕ್ಕೆ ಸಾಕ್ಷಿ.
ಇಂದು ಧರ್ಮ ಸೇರಿದಂತೆ ಎಲ್ಲವನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಧರ್ಮ ಒಂದು ಅವಕಾಶ, ರಾಷ್ಟ್ರೀಯತೆ ಒಂದು ಅವಕಾಶ. ರಾಜಕೀಯ ಕಾರಣಕ್ಕಾಗಿ ಈ ಅವಕಾಶಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಬಾಲಗೋಪಾಲ್: ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಗತ- ಪ್ರಸ್ತುತಗಳ ಬಗ್ಗೆ ಚನ್ನಾಗಿ ವಿವರಿಸಿದಿರಿ. ಇತ್ತೀಚೆಗೆ ನಡೆದ ಒಂದು ವಿದ್ಯಮಾನದ ಬಗ್ಗೆ ಹೇಳುವುದಾದರೆ ಅದು ಶಬರಿಮಲೆ, ನಾನು ಅದರ ವಿವರಕ್ಕೆ ಹೋಗುವುದಿಲ್ಲ. ನಾನು ಅರ್ಥ ಮಾಡಿಕೊಂಡ ಹಾಗೆ ಸುಪ್ರೀಂ ಕೋರ್ಟ್ ಹೇಳಿದ್ದು ಯಾವುದೆ ಕಾರ್ಯಕಾರಿ ಸಮಿತಿಯು ಮಹಿಳೆಯರು ಶಬರಿಮಲೆಗೆ ಹೋಗುವುದನ್ನು ತಡೆಯುವುದು ಸಂವಿಧಾನ ವಿರೋಧಿಯಾಗುತ್ತದೆ. ಅವರು ಎಲ್ಲ ಮಹಿಳೆಯರು ಶಬರಿಮಲೆಗೆ ಹೋಗಿ ಎಂದು ಹೇಳಲಿಲ್ಲ, ಸುಪ್ರೀಂ ಕೋರ್ಟ್ ನ ಆಜ್ಞೆಯು ಹಾಗಿರಲಿಲ್ಲ. ಯಾರಾದರೂ ಹೋಗಲು ಬಯಸಿದರೆ ಅವರಿಗೆ ಹೋಗಲು ಹಕ್ಕಿದೆ ಎಂದು ಹೇಳಿತು.ಸಾಮಾಜಿಕ ಜಾಲತಾಣಗಳಲ್ಲಿ ಇದು ಚರ್ಚೆಯಾಯಿತು.ಆದರೆ ನೀವು ಹೇಳುತ್ತೀರಿ ಎಂಬತ್ತು ವರ್ಷದ ಹಿಂದೆಯು ದೇವಾಲಯ ಪ್ರವೇಶಕ್ಕೆ ಸಂಬಂಧಿಸಿ ಹೋರಾಟ ನಡೆದಿತ್ತು ಎಂದು, ಆ ಸಂದರ್ಭದಲ್ಲಿ ರಾಜನೆ ಭಯ ಪಡುವಂತ ವಾತಾವರಣ ನಿರ್ಮಾಣವಾಯಿತು. ದಲಿತರು ಹಿಂದೂ ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮದತ್ತ ಹೋಗಲು ಪ್ರಾರಂಭಿಸಿದರು. ರಾಜ ಹಿಂದೂ ಸಮುದಾಯದವರ ಜೊತೆ ಚರ್ಚಿಸಿ ಕೆಲವು ರಿಯಾಯಿತಿಗಳನ್ನು ನೀಡಲು ಆಲೋಚಿಸಿದ. ದಲಿತರು ದೇವಾಲಯದ ಹೊರಗಿರಲು ಹಿಂದೂ ಶಾಸ್ತ್ರಗಳೆ ಕಾರಣವಾಗಿದ್ದವು. ಒಟ್ಟಾರೆ ಈ ವಿದ್ಯಮಾನದಿಂದ ಏನಾದರೂ ಒಳಿತಿನ ಅಂಶಗಳನ್ನು ಗ್ರಹಿಸಬಹುದು ಎಂದು ನಿಮಗೆ ಅನಿಸುತ್ತ?
ಮನುಪಿಳ್ಳೈ: ಮಹಿಳೆಯರು ದೇವಾಲಯದ ಒಳಗೆ ಹೋಗಬೇಕೊ ಬೇಡವೊ ಎಂಬುದನ್ನು ನಾನು ಹೇಳುವುದಿಲ್ಲ. ಪ್ರತಿ ಹಿಂದೂ ದೇವರಿಗೆ ಅದರದೆ ಆದ ಪರಿಕಲ್ಪನೆಗಳಿವೆ. ನಾನು ಹೇಳುವುದು ಏನೆಂದರೆ ಸುಪ್ರೀಂ ಕೋರ್ಟ್ ಆ ಆಜ್ಞೆಯನ್ನು ಹೊರಡಿಸಿದಾಗ ಪದ್ದತಿ ಬದಲಾಯಿತು ಎಂದಲ್ಲ. ಪ್ರಾಚೀನ ಕಾಲದಿಂದಲೂ ಪದ್ದತಿ ಬದಲಾಗುತ್ತಲೆ ಬಂದಿದೆ. ದಲಿತರ ದೇವಸ್ಥಾನ ಪ್ರವೇಶ ಕುರಿತು 1930 ರಲ್ಲಿ ಒಂದು ವಿಚಾರಣ ಸಮಿತಿಯನ್ನು ರಚಿಸಲಾಯಿತು. ತಿರುವಾಂಕೂರಿನ ಮಾಜಿ ದಿವಾನ ಅದರಲ್ಲಿ ಇದ್ದ. ಡಿ.ಕೆ. ವೇಲುಪಿಳ್ಳೈ( ತಿರುವಾಂಕೂರು ಮಾನ್ಯುವಲ್ ಬರೆದವನು) ಹೀಗೆ ಗಣ್ಯರೆಲ್ಲ ಅದರಲ್ಲಿ ಇದ್ದರು. 1934 ರಲ್ಲಿ ಈ ಸಮಿತಿ ದಲಿತರನ್ನು ದೇವಾಲಯದೊಳಗೆ ಬಿಡುವುದು ಬೇಡವೆಂದು ತೀರ್ಮಾನಿಸಿತು. ಏಕೆಂದರೆ ಪದ್ದತಿ ಹೇಳುತ್ತದೆ, ದಲಿತರು ದೇವರ ಮೂರ್ತಿಯ ಬಳಿಗೆ ಬಂದರೆ ಅದರ ಪವಿತ್ರತೆ ಹಾಳಾಗುತ್ತದೆ. ಅವರಿಗಾಗಿ ಇರುವ ದಾರಿಯಲ್ಲಿ ಅವರು ಬಂದು ಹೋಗಬೇಕು. ಇವತ್ತು ಕೂಡ ತಂತ್ರ ಸಮುಚ್ಚಯ ಹೇಳುತ್ತಿರುವುದು ಪದ್ದತಿ ಪಾಲಿಸಿರಿ , ಪವಿತ್ರ ಹಾಳಾಗದಂತೆ ನೋಡಿಕೊಳ್ಳಿ ಇತ್ಯಾದಿ.
ನಾನು ಹೇಳುತ್ತಿರುವುದು ಏನೆಂದರೆ ಪದ್ದತಿ ಬದಲಾಗಿದ್ದು 1936 ರಲ್ಲಿ, ದೇವಾಲಯ ಪ್ರವೇಶ ಸಮಿತಿ ಬೇಡವೆಂದಿತು, ಕೊಚ್ಚಿನ್ ರಾಜ ಬೇಡವೆಂದ. ಕಲ್ಲಿಕೋಟೆಯ ರಾಜನೊಬ್ಬ ನಾವು ದಲಿತರನ್ನು ದೇವಾಲಯ ಒಳಗೆ ಬಿಟ್ಟರೆ ಸ್ಥಳೀಯ ಜನರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂದ. ಹೀಗೆಲ್ಲ ಇರುವಾಗ ಒಬ್ಬ ರಾಜ ಮಾತ್ರ ಹೇಳಿದ ನಾನು ಮುಂದೆ ಹೋಗುತ್ತೇನೆ ದಲಿತರು ನನ್ನ ಜೊತೆ ಬರುತ್ತಾರೆ. ಅವನ ಈ ಮಾತು ಬಿದ್ದು ಹೋಯಿತ . ಅದರ ವಿಷಯ ದೇವರಿಗಷ್ಟೆ ಗೊತ್ತು.
ಇತಿಹಾಸದಲ್ಲಿ ಹೊಸ ಸಂಗತಿಗಳು ನಿಗೂಢವಾಗಿರುತ್ತವೆ. ಭಾರತಕ್ಕೆ ಹೊಸದಾಗಿ ರೈಲು ಬಂದಾಗ ಬ್ರಾಹ್ಮಣರು ಮತ್ತು ದೇವಾಲಯ ಸಮಿತಿಯವರು ಆತಂಕಕ್ಕೆ ಒಳಗಾದರು. ಇದು ” ದೆವ್ವದ ಬಂಡಿ” ಎಂದು ಕರೆದರು. ಜನರನ್ನು ಹೊತ್ತು ದೆವ್ವದಂತೆ ಓಡುತ್ತದೆ ಎಂದರು. ಆದರೆ ಬನಾರಸ್ ಬ್ರಾಹ್ಮಣರಿಗೆ ಅರ್ಥವಾದ ಸಂಗತಿಯೆಂದರೆ ಕೆಲವು ದೇವಾಲಯಗಳ ಪ್ರವೇಶಕ್ಕೆ ಬಹಳ ಸಮಯ ಬೇಕಾಗುತ್ತಿತ್ತು. ರೈಲಿನಿಂದ ಬೇಗ ಹೋಗಿ ಬರುವಂತೆ ಆಯಿತು. ಕಲ್ಕತ್ತಾದಿಂದ ಪುರಿ ದೇವಾಲಯಕ್ಕೆ ಹನ್ನೆರಡು ಗಂಟೆಯಲ್ಲಿ ಹೋಗುವಂತಾಯಿತು. ಯಾವುದನ್ನು ಅವರು ಆರಂಭದಲ್ಲಿ ವಿರೋಧಿಸಿದರೂ ಅದರಿಂದಲೆ ಅವರಿಗೆ ಹೆಚ್ಚಿನ ಲಾಭ ಬರುವಂತೆ ಆಯಿತು. ಬನಾರಸ್ ನಲ್ಲಿ ವ್ಯಾಪಾರ ಹೆಚ್ಚಾಯಿತು. ಸ್ಥಳೀಯ ಜನರಿಗೆ ಇದರಿಂದ ಒಳಿತಾಯಿತು. ನಾನು ದೇವರ ಕುರಿತ ಕಾಳಜಿಯನ್ನು ಕೂಡ ಹೀಗೆ ಅರ್ಥ ಮಾಡಿಕೊಳ್ಳುತ್ತೇನೆ. ದೇವರನ್ನು ಕೂಡ ಒಬ್ಬ ವ್ಯಕ್ತಿಯಂತೆ ಭಾವಿಸಿ ಅವನಿಗೆ ಸ್ನಾನ ಮಾಡಿಸುವುದು, ಬಟ್ಟೆ ತೊಡಿಸುವುದು, ಊಟ ಮಾಡಿಸುವುದು ಇದೆಲ್ಲದರ ಮೂಲಕ ಅವನನ್ನು ವಿಶೇಷವಾಗಿ ಗುರುತಿಸಲು ಪ್ರಯತ್ನಿಸುತ್ತಾರೆ. ಪ್ರಾಚೀನ ಕಾಲದಿಂದಲೂ ರಾಜರು ಮತ್ತು ಕಾರ್ಯಕಾರಿ ಸಮಿತಿಯವರನ್ನು ‘ ಮೇಲ್ ಕೋಮಾ’ ಎನ್ನಲಾಗುತ್ತಿತ್ತು. ಅವರು ಯಾವುದೆ ದೇವಾಲಯಕ್ಕೆ ಹೋಗಬಹುದಿತ್ತು, ಅವರಿಗೆ ಯಾವುದೆ ನಿಯಮಗಳಿರಲಿಲ್ಲ. ಪದ್ದತಿ ಮತ್ತು ನಿಯಮಗಳು ಕಾಲಾತೀತವಾದ ಪರಿಕಲ್ಪನೆಗಳು. ಪದ್ದತಿ ನಿಯಮಗಳಿಗೆ ನಮ್ಮ ಸಮಾಜ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡುತ್ತದೆ.ಇದರಲ್ಲಿ ಪ್ರಜ್ಞಾಪೂರ್ವಕವಾದ ರಾಜಕೀಯವಿದೆ. ಸಮಾಜಶಾಸ್ತ್ರಜ್ಞರು ಇದನ್ನು’ ಪರಂಪರೆಯ ಅನ್ವೇಷಣೆ ‘ ಎನ್ನುತ್ತಾರೆ. ನನಗೆ ತಿರುವಾಂಕೂರಿನ ಚರಿತ್ರೆಯಲ್ಲಿ ಬಹಳ ಇಷ್ಟವಾದ ಕತೆ ಮಾರ್ತಾಂಡ ವರ್ಮನದು. ವಿಜಯ ಯಾತ್ರೆಯನ್ನು ನಡೆಸಿ ರಾಜನಾದವನು ಈತ. ನಾನೇನು ವಿಶೇಷವಲ್ಲ, ಎಲ್ಲರ ಹಾಗೆ ನಾನು ಎಂದವನು, ಯಾರೂ ಬೇಕಾದರೂ ಬಂದು ನನ್ನ ಕೊಲ್ಲಬಹುದು ಎಂದವನು. ಇಂತಹ ರಾಜ ಪರಂಪರೆಯೊಂದನ್ನು ಶುರು ಮಾಡಿದನು. ಆ ಪರಂಪರೆಯ ಹೆಸರು ‘ ಹಿರಣ್ಯಗರ್ಭ’ ಪದ್ದತಿ. ಈ ಪವಿತ್ರ ಹಸುವಿನ ಹೆಸರಿನಲ್ಲಿ ಬಂಗಾರದ ಹಸುವೊಂದನ್ನು ರಚಿಸಲಾಯಿತು. ರಾಜ ಹಸುವಿನ ಬಾಯೊಳಗೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಬ್ರಾಹ್ಮಣರು ಗೋ ಮೂತ್ರ , ಹೂವುಗಳನ್ನು ಅದರ ಮೇಲೆ ಹಾಕುತ್ತಾರೆ. ಹುಟ್ಟಿನ ಮಂತ್ರಗಳನ್ನು ಪಠಿಸುತ್ತಾರೆ.
ನಂತರ ರಾಜ ಹಸುವಿನ ಬಾಲದ ಬಳಿಗೆ ಹೋಗುತ್ತಾನೆ. ಈಗವನು ಕ್ಷತ್ರಿಯನಾಗಿ ಪುನಃ ಜನಿಸಿದ ಎನ್ನಲಾಗುತ್ತಿತ್ತು. ಆತ ಸೂರ್ಯ, ಚಂದ್ರರ ಮೂಲದವನು ಎಂದು ಹೇಳಲಾಗುತ್ತಿತ್ತು. ಇದರಿಂದ ರಾಜನ ಜಾತಿ ಎತ್ತರಕ್ಕೆ ಹೋಗುತ್ತಿತ್ತು. ಇದರ ನಂತರ ಮಾರ್ತಾಂಡ ವರ್ಮ ತಮಿಳು ಬ್ರಾಹ್ಮಣರನ್ನು ತಂದ..ಸುತ್ತಲು ಬ್ರಾಹ್ಮಣರು ಇರುವ ಕಾರಣ ಅವನನ್ನು ಯಾರೂ ಮುಟ್ಟುವಂತಿರಲಿಲ್ಲ. ಒಂದು ಕಾಲದ ರಾಣಿ ರುಕ್ಮಿಣಿ ವರ್ಮ ಅವರನ್ನು ನಾನು ಬೆಂಗಳೂರಿನಲ್ಲಿ ಭೇಟಿಯಾದೆ.1940 ರ ಆಕೆ ವಿಹಾರಕ್ಕೆ ಹೋಗುವಾಗ ಆಕೆಯ ಸುತ್ತ ಸೇವಕರು ಇರುತ್ತಿದ್ದರು. ಮನೆತನದ ಪ್ರತಿಯೊಬ್ಬರಿಗೂ ಸೇವಕರು ಇರುತ್ತಿದ್ದರು. ಒಂಬತ್ತು ವರ್ಷದ ಒಂದು ಹುಡುಗಿ ವಿಹಾರ ಹೊರಟರೆ ಅವಳ ಜೊತೆ ಹದಿನಾರು ಜನ ಸೇವಕರು ಇರುತ್ತಿದ್ದರು. ಇದೇನು ಮೂರ್ಖತನದ ಪದ್ದತಿಯಲ್ಲ, ನಮ್ಮ ಕುಟುಂಬ ಎಷ್ಟು ಶ್ರೀಮಂತ ಎಂದು ತೋರಿಸಿಕೊಳ್ಳಲು ಇದು ಬೇಕಾಗಿತ್ತು. ಕೆಲವರು ತಲೆಯ ಮೇಲೆ ಚಾಮರ ಹಿಡಿರುತ್ತಿದ್ದರು, ರಕ್ಷಣಾಪಡೆ ಇರುತ್ತಿತ್ತು. ಇದೇ ಅಧಿಕಾರ, ನಾವು ವಿಶೇಷ, ನಿಮ್ಮ ಹಾಗೆ ಅಲ್ಲ ಎಂದು ತೋರಿಸಬೇಕಾಗಿತ್ತು. ಸಾಮಾನ್ಯ ಜನರು ಸ್ನಾನ ಮಾಡುವುದಾದರೆ ಅದೇನು ವಿಶೇಷವಲ್ಲ, ಆದರೆ ರಾಜ ಮನೆತನದವರು ಅದನ್ನು ವಿಶೇಷ ಎಂದು ಭಾವಿಸಲಾಗುತ್ತಿತ್ತು. ರಾಣಿ ಗರ್ಭಿಣಿಯಾದರೆ ಅದನ್ನು ಗರ್ಭಿಣಿ ಎಂದು ಹೇಳುವಂತಿರಲಿಲ್ಲ, ‘ ತಿರುವಾಂಕೂರು ವಾಣು’ ಎನ್ನಬೇಕಿತ್ತು. ಪ್ರಸವವಾದರೆ ಸಾಮಾನ್ಯರಂತೆ ಪ್ರಸವ ಎನ್ನುವಂತಿರಲಿಲ್ಲ, ಅದನ್ನು ತಿರುವಾಂಕೂರು ವಾಂಙು’ ಎನ್ನಬೇಕಾಗಿತ್ತು. ರಾಜ ಮನೆತನದವರೆಲ್ಲ ದೈವ ಸಮಾನರಾದ ಮನುಷ್ಯರು. ಎತ್ತರ- ಎತ್ತರಕ್ಕೆ ಅವರ ಘನತೆ ಹೋಗುತ್ತಿತ್ತು. ಅವರ ಹೆಸರು ಕೂಡ ಬದಲಾಗುತ್ತಿತ್ತು. ಸಾಮಾನ್ಯ ನಾಯರ್ ಹೆಣ್ಣುಗಳಂತೆ ಇದ್ದ ಲಕ್ಷ್ಮಿ ಅಮ್ಮ ಎಂಬ ಹೆಸರು ಗೌರಿ ಲಕ್ಷ್ಮಿಬಾಯಿ ಆಗುತ್ತಿತ್ತು . ಬಾಯಿ ಎಂಬ ಹೆಸರು ಮರಾಠಿ ಮೂಲದ್ದು. ಹೆಸರಿನಲ್ಲಿಯೂ ನಾವು ವಿಶೇಷ ಎಂದು ತೋರಿಸಬೇಕಾಗಿತ್ತು. ಇದನ್ನೇ ‘ ಪರಂಪರೆಯ ಹುಡುಕಾಟ’ ಎಂದು ಹೇಳಿದ್ದು.ನಾವು ಪ್ರಾಚೀನವೆಂದು ಎಲ್ಲವನ್ನೂ ಭಾವಿಸಬೇಕಾಗಿಲ್ಲ, ಕೆಲವು ಅನ್ವೇಷಣೆ ನಡೆದದ್ದು ಇತ್ತಿಚೆಗೆ. ಶಬರಿಮಲೆಯ ಕುರಿತ ಚರ್ಚೆಯಲ್ಲಿ ಅದು ಬುಡಕಟ್ಟು ದೈವಸ್ಥಾನ ಹೌದೆ ಅಲ್ಲವೆ ಎಂಬ ಚರ್ಚೆಯು ಇದೆ . ಇದರ ತಂತ್ರಿಗಳು 1902 ರಲ್ಲಿ ಬಂದರು. ಅಂದರೆ ಅವರಿಗೆ ನೂರು ವರ್ಷದ ಇತಿಹಾಸ ಮಾತ್ರವೆ ಇರುವುದೆ? ಇವೆಲ್ಲ ಚರ್ಚೆಗಳಲ್ಲಿ ಸತ್ಯವಿರುವುದು ಚಿಟಿಕೆ ಉಪ್ಪಿನಷ್ಟು ಮಾತ್ರ.ಪರಂಪರೆಯ ರಕ್ಷಣೆ ಎಂದರೆ ಅದು ರಾಜಕೀಯ ಉದ್ದೇಶವೆ ಹೊರತು ಪರಂಪರೆ ಅಲ್ಲವೆ ಅಲ್ಲ.
ಬಾಲಗೋಪಾಲ್: ನೀವೀಗ ನಿಮ್ಮ ಮಾತುಗಳನ್ನು ಹೇಳಿದಿರಿ, ಇತಿಹಾಸವನ್ನು ನೋಡಿದರೆ ಜನ ತಮ್ಮಷ್ಟಕ್ಕೆ ತಮ್ಮ ಜೀವನ ನಡೆಸಿದರು. ನೂರು ವರ್ಷದ ನಂತರ ಅದರ ಕಡೆಗೆ ತಿರುಗಿ ನೋಡಿದರೆ ಅದೆ ಇತಿಹಾಸವಾಗಿರುತ್ತದೆ. ಆಸಕ್ತಿಯ ವಿಷಯವೆಂದರೆ ಐತಿಹಾಸಿಕ ವಾಸ್ತವ ಎಂದರೇನು? ರುಬಿಕಾನ್ ನದಿಯನ್ನು ಸೀಸರ್ ದಾಟಿದ್ದು ಮಾತ್ರ ವಿಶೇಷ, ಅವನಿಗಿಂತ ಮೊದಲು ಅಥವಾ ಅವನ ನಂತರ ಅನೇಕರು ಅದನ್ನು ದಾಟಿರಬಹುದು.ಸೀಸರ್ ದಾಟಿರುವುದೆ ಏಕೆ ಐತಿಹಾಸಿಕ ವಾಸ್ತವವಾಗುತ್ತದೆ.ಇತರರು ದಾಟಿದ ವಿಷಯ ಯಾಕೆ ಅದರೊಳಗೆ ಬರುವುದಿಲ್ಲ? ನಿಮ್ಮ ಪುಸ್ತಕವನ್ನು ಓದಿದರೆ ಇತಿಹಾಸ ನಮಗೆಷ್ಟು ಮುಖ್ಯ ಎಂದು ಅರ್ಥವಾಯಿತು. ಹೇಳಿ ಇತಿಹಾಸ ಎಂದರೇನು?
ಮನುಪಿಳ್ಳೈ: ಇತಿಹಾಸವನ್ನು history ಎನ್ನುತ್ತೇವೆ. ಅದು his story, ಅಂದರೆ ಅದು ಅವನ ಕತೆ- ಇದನ್ನು ಪುರುಷರೆ ಬರೆದಿರುತ್ತಾರೆ ಎಂದು ಈಗಾಗಲೇ ಹೇಳಿದೆ. ಇದರಲ್ಲಿ ಹೆಣ್ಣಿನ ಧ್ವನಿಯೆ ಇಲ್ಲ. ಇತಿಹಾಸ ರಾಜರ ಕತೆಯಾಗಿರುತ್ತದೆ. ಕೆಲವೊಮ್ಮೆ ಮಾತ್ರ ಅದರಲ್ಲಿ ರಾಣಿಯರ ಕತೆ ಬರುತ್ತದೆ. ಇತಿಹಾಸವೆಂದರೇನೆ ಪಿತೃಪ್ರಧಾನ ವ್ಯವಸ್ಥೆ ಆಡಳಿತ ಎಂದಾಗಿದೆ. ನೀವು ಹೇಳಿದ ರುಬಿಕಾನ್ ಬಗ್ಗೆ ಹೇಳುವುದಾದರೆ ನನ್ನ ಮೊದಲ ಪುಸ್ತಕ ‘ ಐವರಿ ಥ್ರೋನ್’ ವಾಸ್ಕೋ ಡಾ ಗಾಮಾ ಕೇರಳಕ್ಕೆ ಆಗಮಿಸುವ ವಿಷಯದೊಂದಿಗೆ. ಅವನೊಬ್ಬ ಅಪರಾಧಿಯಾಗಿದ್ದ, ಆತ ಪೋರ್ಚುಗಲ್ ನಿಂದ ಹೊರಟಾಗ ಅವನೆಲ್ಲಿಗೆ ಯಾರಿಗೂ ಗೊತ್ತಿರಲಿಲ್ಲ, ಅವನೊಂದಿಗೆ ಹೊರಡಲು ಯಾರೂ ತಯಾರಿಲಿಲ್ಲ. ಪೋರ್ಚುಗಲ್ ರಾಜರ ಮಾನ್ಯುಯಲ್ ಪ್ರಕಾರ ಜೈಲಿನ ಖೈದಿಗಳು ಹಡಗಿನ ರಕ್ಷಣೆ ಮಾಡಬೇಕಿತ್ತು. ಹಾಗಾಗಿ ಕೇರಳಕ್ಕೆ ಮೊದಲು ಕಾಲಿಟ್ಟವನು ಒಬ್ಬ ಅಪರಾಧಿ, ಅವನು ಯಾರೆಂದು ಯಾರಿಗೂ ತಿಳಿದಿರಲಿಲ್ಲ, ಅವನನ್ನು ದೂರ ಕಳಿಸಿ ತಾವು ಭಯವಿಲ್ಲದೆ ಬದುಕಬಹುದೆಂದು ಪೋರ್ಚುಗಲ್ ನ ಜನ ಆಲೋಚಿಸಿದ್ದರು. ಆದರೆ ಅವನು ಬಂದಿದ್ದು ಒಂದು ಇತಿಹಾಸವಾಯಿತು.
ಇತಿಹಾಸದ ಒಂದು ಸಂಗತಿಯೆಂದರೆ ಅದರ ಪಠ್ಯ ಯಾವ ಭಾಷೆಯಲ್ಲಿ ಇದೆ, ಅದನ್ನು ಯಾರು ಬರೆಯುತ್ತಾರೆ ಎಂಬುದೆಲ್ಲ ಮುಖ್ಯ. ಸಂಸ್ಕೃತದಲ್ಲಿ ಬರೆದರೆ ಮಾತ್ರ ಅದು ಗಣ್ಯ ವ್ಯಕ್ತಿಗಳಿಗೆ ತಲುಪುತ್ತಿತ್ತು . ಇದೊಂದು ವ್ಯವಸ್ಥಿತ ವಿಷಯ. ಹಾಗದರೆ ದಲಿತ ಇತಿಹಾಸದ ವಿಷಯ ಏನು? ಅವರ ನಾಯಕರ ವಿಷಯ ಎಲ್ಲಿದೆ? ಅವರ ನಾಯಕಿಯರು ಎಲ್ಲಿದ್ದಾರೆ? ಏಕೆಂದರೆ ಅದು ಬರಹ ರೂಪದಲ್ಲಿ ಇಲ್ಲ.
ಅವರಿಗೂ ನ್ಯಾಯ ಸಿಗಬೇಕೆಂದರೆ ಪುಸ್ತಕ ರೂಪದಲ್ಲಿ ಇರುವುದು, ಗಣ್ಯರದು ಮಾತ್ರ ಇತಿಹಾಸವಲ್ಲ ಎಂಬ ಅರಿವು ಸಮಾಜಕ್ಕೆ ಬರಬೇಕು.ಚೆಂಗನ್ನೂರು ಗಾಯಕ್ವಾಡ್ ಮನೆತನದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅದು ಮುಖ್ಯವೆಂದು ಇತಿಹಾಸಕಾರರಿಗೆ ಅನಿಸಿಲ್ಲ. ದಿನನಿತ್ಯದ ಜೀವನದಲ್ಲಿ ಇಂತಹ ಅನೇಕ ಸಂಗತಿಗಳು ಕಳೆದು ಹೋಗುತ್ತವೆ .ಇದು ಇತಿಹಾಸದ ದುರಂತ.
ಕನ್ನಡಕ್ಕೆ: ನವೀನ್ ಮಂಡಗದ್ದೆ