ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೬: ಶಾಸ್ತ್ರೀಯತೆ, ಕನ್ನಡ ಮತ್ತು ದಾಸರ ಪದಗಳು

ತಮಿಳುನಾಡಿನ ಸಂಗೀತ ಪರಂಪರೆಗೆ ಪರ್ಯಾಯವಾಗಿ ಮೈಸೂರಿಗೆ ಮೈಸೂರಿದ್ದೇ ಆದ ಸಂಗೀತ ಪರಂಪರೆಯನ್ನು ಬೆಳೆಸಿಕೊಳ್ಳಲಾಗಲಿಲ್ಲ. ಮಹಾರಾಜರ ಮೂಲಕ ಎತ್ತಲ್ಪಟ್ಟ ಕನ್ನಡದ ಪ್ರಶ್ನೆಯನ್ನು ಶಾಸ್ತ್ರೀಯ ಸಂಗೀತ ಕ್ಷೇತ್ರ ಇಷ್ಟಪಟ್ಟು ಸ್ವೀಕರಿಸಲಿಲ್ಲ. ಆದರೆ ಈ ಕನ್ನಡದ ಪ್ರಶ್ನೆ ಬೇರೆ ಕೆಲವು ಸಾಧ್ಯತೆಗಳನ್ನು ಹುಟ್ಟು ಹಾಕಿತು. ಅದೇನೆಂದು ಈ ಸಂಚಿಕೆಯಲ್ಲಿ ನೋಡಲಾಗಿದೆ.

 

ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ – https://ruthumana.com/2020/05/02/carnatic-music-kannada-and-kannadigas-part-1

ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ –  https://ruthumana.com/2020/05/02/carnatic-music-kannada-and-kannadigas-part-2/

ಭಾಗ ೩ : ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ – https://ruthumana.com/2020/05/03/carnatic-music-kannada-and-kannadigas-part-3/

ಭಾಗ ೪ : ಶಾಸ್ತ್ರೀಯತೆ, ಕನ್ನಡತನ ಮತ್ತು ಪೋಷಕರು – https://ruthumana.com/2020/05/09/carnatic-music-kannada-and-kannadigas-part-4/

ಭಾಗ ೫: ‘ಕರ್ನಾಟಿಕ್’ ಸಂಗೀತ ಪರಂಪರೆ ಮತ್ತು ಮೈಸೂರಿನ ಸಂಗೀತ – https://ruthumana.com/2020/05/26/carnatic-music-kannada-and-kannadigas-part-5/

ಮುಮ್ಮಡಿ ಕೃಷ್ಣರಾಜ ಒಡೆಯರ್

ಮುಮ್ಮಡಿ ಕೃಷ್ಣರಾಜ ಒಡೆಯರ್

ತಮಿಳುನಾಡಿನ ಕರ್ನಾಟಿಕ್-ತಂಜಾವೂರು ಪ್ರದೇಶದಲ್ಲಿ ವಸಾಹತುಶಾಹಿಯ ಪೋಷಣಾವ್ಯವಸ್ಥೆಯಲ್ಲಿ ಕರ್ನಾಟಕ ಸಂಗೀತವು ಯಾವ ರೀತಿಯಲ್ಲಿ ಘನೀಭವಿಸಿತು ಮತ್ತು ಮೈಸೂರಿನಂಥ ಸಂಸ್ಥಾನದ ಸಂಗೀತಗಾರರು ಹೇಗೆ ಈ ಪರಂಪರೆಯೊಳಗೇ ತಮ್ಮನ್ನು ಗುರುತಿಸಿಕೊಂಡರು ಎನ್ನುವುದನ್ನು ಈ ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ತಮಿಳುನಾಡಿನಲ್ಲಿ ಸಾಧ್ಯವಾದ ಪೋಷಣಾ ವ್ಯವಸ್ಥೆ (patronage) ಮೈಸೂರಿನಲ್ಲಿ ಏಕೆ ಸಾಧ್ಯವಾಗಲಿಲ್ಲ ಎಂದು ನೋಡೋಣ. ಮೈಸೂರು ರಾಜ್ಯವು ನೇರವಾಗಿ ಕಂಪೆನಿಯ ಅಧೀನವಾಗದೇ ರಾಜ ಸಂಸ್ಥಾನವಾಗಿ ಉಳಿದಿತ್ತು. ಹಣಕಾಸಿನ ಮತ್ತು ಖರ್ಚಿನ ವಿಷಯದಲ್ಲಿ ಕಂಪೆನಿ ಸರ್ಕಾರದಿಂದ ಮಿತಿ ಹೇರಲಾಗಿತ್ತು. ಇತಿಹಾಸಜ್ಞೆ ಜಾನಕಿ ನಾಯರ್‍ರವರ ಪ್ರಕಾರ 1811ರಿಂದ 1831ನೇ ಇಸವಿಯವರೆಗೆ ನಾನಾ ರೀತಿಯ ಸುಮಾರು 1,68,400 ಕಾಂತಿರಾಯ್ ಪಗೋಡಾಗಳಷ್ಟು (ಸುಮಾರು 4,84,000/- ರೂಪಾಯಿಗಳಷ್ಟು) ಬೆಲೆಯಾಗುವ ಇನಾಮ್ ಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರೂ ಕೊಟ್ಟಿದ್ದರಂತೆ. ಆದರೆ ಈ ಇನಾಮುಗಳು ಬಹುತೇಕ ಹಸಿಭೂಮಿಗಳಾಗಿದ್ದು ಬ್ರಿಟಿಷರು ಕೊಟ್ಟ ಇನಾಮಿನಂತೆ ವೈವಿಧ್ಯಮಯವಾಗಿರಲಿಲ್ಲ. ಮತ್ತು ಮೈಸೂರಿನ ಈ ಇನಾಮುಗಳನ್ನು ವಸಾಹತುಶಾಹಿ ಅಧಿಕಾರಿಗಳು ಅಪಾರ ನಷ್ಟವೆಂದು ಪರಿಗಣಿಸಿದ್ದರು ಹಾಗೂ ಅವರಿಗೆ ಅದು ಅಸಮ್ಮತವಾಗಿತ್ತು (ನಾಯರ್ ಅವರ The Devadasi, Dharma and the state ಎಂಬ ಪ್ರಬಂಧದಲ್ಲಿ ನೋಡಬಹುದು). ಈ ತರಹದ ಖರ್ಚುಗಳು ವಸಾಹತು-ಪೂರ್ವದ ಆಡಳಿತವನ್ನು ಅಧಿಕೃತಗೊಳಿಸುವುದೇನೋ ಎಂಬ ಭಯ ಅವರಿಗಿತ್ತು. ಬ್ರಿಟಿಷರಿಗೆ ಇದು 1831ರಲ್ಲಿ ಸಂಸ್ಥಾನದ ನೇರ ಆಳ್ವಿಕೆಗೆ ಒತ್ತಾಸೆಯಾಗಿ ಮಾರ್ಪಟ್ಟಿತು. ಹಾಗಾಗಿ, ಇಲ್ಲಿ ದೊಡ್ಡ ಪ್ರಮಾಣದ ಅನುದಾನಗಳು ಸಾಧ್ಯವಿಲ್ಲದೆ ಹೋಗಿದ್ದರಿಂದ ತಮಿಳುನಾಡಿನಲ್ಲಿದ್ದಂತೆ ಸ್ಥಳೀಯವಾಗಿ ಮತ್ತು ಕೆಳ ಮಟ್ಟದಲ್ಲಿ ಸಂಗೀತ-ನೃತ್ಯ ಚಟುವಟಿಕೆಗಳಿಗೆ ಪೋಷಣೆ ಕೊಡುವ ಗಣ್ಯವ್ಯಕ್ತಿಗಳು ಇಲ್ಲವಾದರು. ಮೈಸೂರು ಪ್ರಾಂತ್ಯದಲ್ಲಿ ತಮಿಳುನಾಡಿನಲ್ಲಿದ್ದಂತೆ ಎಟ್ಟಯಾಪುರಂ ಅಥವಾ ರಾಮನಾಡ್ ನಂತಹ ದೊಡ್ಡ ಜಮೀನುದಾರೀ ಪ್ರದೇಶಗಳೂ ಇರಲಿಲ್ಲವಾದ್ದರಿಂದ ಮತ್ತು ಭೂಮಾಲೀಕತ್ವ ಹೆಚ್ಚಾಗಿ ಸಣ್ಣ ಪ್ರಮಾಣದಲ್ಲಿ ಇದ್ದದ್ದರಿಂದ ಸಂಗೀತಗಾರರಿಗೆ ಪೋಷಣೆಯೆನ್ನುವುದು ಅಂತಹ ಭೂಮಾಲೀಕರಿಂದ ಸಾಧ್ಯವಿರಲಿಲ್ಲ. ಮದರಾಸಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೊತೆ ದೊಡ್ಡ ಮಟ್ಟದ ವ್ಯವಹಾರ ಮಾಡಿ ಸಂಗೀತ-ನೃತ್ಯಗಾತಿಯರನ್ನು ಪೋಷಿಸುತ್ತಿದ್ದಂಥ ದೊಡ್ಡ ವ್ಯವಹಾರಸ್ಥರೂ ಮತ್ತು ದುಭಾಷಿಗಳೂ ಮೈಸೂರಲ್ಲಿ ಕಾಣಸಿಗಲಿಲ್ಲ. ಒಟ್ಟಾರೆ ತಮಿಳುನಾಡಿನಲ್ಲಿ ಸಿಗುತ್ತಿದ್ದಂತಹ ಉತ್ತೇಜನ ಮತ್ತು ಆಶ್ರಯ ಮೈಸೂರಿನಲ್ಲಿ ಲಭ್ಯವಾಗದೆ ಇದ್ದ ಕಾರಣಕ್ಕಾಗಿ ಅಲ್ಲಿ ಒಂದು ಪರ್ಯಾಯ ಸಂಗೀತ ಪರಂಪರೆ ಗಟ್ಟಿಯಾಗಿ ಬೆಳೆಯಲಿಲ್ಲ. ‘ಮೈಸೂರಿನ ಸಂಗೀತ ಪರಂಪರೆ’ ಎಂದು ಕೆಲವೊಮ್ಮೆ ಕೇಳಿಬಂದರೂ ಅದು ಕೆಲವು ಸಣ್ಣಪುಟ್ಟ ವಿಶಿಷ್ಟತೆಗಳ ಕಡೆಗೆ ಬೊಟ್ಟುಮಾಡುತ್ತಿತ್ತೇ ವಿನಃ ಒಂದು ಪರ್ಯಾಯ ಪದ್ಧತಿಗಲ್ಲ. ತ್ರಿಮೂರ್ತಿಗಳ ಪರಂಪರೆಯ ಒಂದು ಕೈಯೇ ಈ ಕಡೆ ಚಾಚಿದಂತಿತ್ತು.

ಸಂಗೀತಗಾರರು ತಮಿಳುನಾಡು ಹಾಗೂ ಮೈಸೂರಿನ ಮಧ್ಯೆ ಸಂಗೀತದ ಅಧ್ಯಯನ ಮತ್ತು ಆಶ್ರಯಕ್ಕಾಗಿ ನಿರಂತರವಾಗಿ ಹೋಗಿ ಬಂದಿರುವುದು ಗೋಚರಿಸುತ್ತದೆ. ಹೈದರ್-ಟಿಪ್ಪುವಿನ ಕಾಲದಲ್ಲಿ ಯುದ್ಧಗಳಿಂದ ಬೇಸತ್ತು ಮೈಸೂರಿನಿಂದ ಕಲಾವಿದರು ತಮಿಳುನಾಡಿನ ಕಡೆಗೆ ಹೋಗಿದ್ದು ಕಂಡುಬಂದರೆ ಇನ್ನೊಂದೆಡೆ ತಂಜಾವೂರಿನ ಸಂಸ್ಥಾನ ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಬಿದ್ದು ಹೋದ ಮೇಲೆ ಅಲ್ಲಿಂದ ಕಲಾವಿದರು ಮೈಸೂರಿಗೆ ಬಂದು ಆಶ್ರಯ ಪಡೆದುಕೊಂಡದ್ದು ಕಂಡುಬರುತ್ತದೆ (ಸೀತಾ ಅವರ Tanjore as Seat of Music ನಿಂದ). ಮೈಸೂರಿನ ಸಂಗೀತಗಾರರು ತಮ್ಮನ್ನು ಕರ್ನಾಟಿಕ್-ತಂಜಾವೂರು ಮೂಲದ ಪರಂಪರೆಯ ಅಂಗವಾಗಿ ಗುರುತಿಸಿಕೊಳ್ಳಲು ಇಚ್ಛೆ ಪಡುತ್ತಿದ್ದರೆ ವಿನಃ ಮೈಸೂರಿನ ಸಂಗೀತ ಪರಂಪರೆ ಎಂದಲ್ಲ. ಇವರಲ್ಲಿ ಅನೇಕರು ಸಂಗೀತದಲ್ಲಿ ಭಾಷೆಗೆ ವಿಶೇಷ ಗಮನವನ್ನು ನೀಡಬೇಕೆಂಬ ಹಂಬಲ ಇಟ್ಟುಕೊಂಡಿದ್ದರು – ಆದರೆ ಕನ್ನಡಕ್ಕೆ ಅಲ್ಲ; ಕರ್ನಾಟಕ ಸಂಗೀತ ಪರಂಪರೆಯನ್ನು ಕಟ್ಟಿದ (ತೆಲುಗು, ಇತ್ಯಾದಿ) ಭಾಷೆಗಳ ಬಗ್ಗೆ. ವಾಸುದೇವಾಚಾರ್ಯರ ನಂತರದ ಪೀಳಿಗೆಯವರಲ್ಲೂ ಈ ಧೋರಣೆ ಮುಂದುವರೆಯಿತು. ಉದಾಹರಣೆಗೆ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರವರಂತಹ ಸಂಗೀತಗಾರರು ಇಪ್ಪತ್ತನೇ ಶತಮಾನದ ಐವತ್ತು-ಅರುವತ್ತರ ದಶಕದಲ್ಲಿ ಮೈಸೂರಿನ ಸಂಸ್ಕೃತಿ ಸಂಕಥನವನ್ನು ಉತ್ಪ್ರೇಕ್ಷೆಯೆಂದು ಪರಿಗಣಿಸಿದ್ದರು. ‘ಮೈಸೂರು ಮಾತೆ’, ‘ಮೈಸೂರು ಸಂಸ್ಕೃತಿ’ಯೆಂಬೆಲ್ಲ ಅಭಿವ್ಯಕ್ತಿಗಳನ್ನು ಪರಿಚಿತರ ಮಧ್ಯೆ ‘ಮೈಸೂರು ಮಾತೆ, ಮೈಸೂರು ಮಾತೆ, ನೀ ಬರಿಯ ಮಾತೆ’ ಎಂದು ಲೇವಡಿ ಮಾಡುತ್ತಿದ್ದರಂತೆ (ಎ.ಎನ್.ಮೂರ್ತಿ ರಾಯರ ಗಾನವಿಹಾರದಲ್ಲಿ ಈ ವಿಷಯವನ್ನು ನೋಡಬಹುದು).

GC 8 17989&17990 P 1744 Veena Sheshanna Veena Mariadhagadhara | A pre 1st world war period (till 1914) accoustic recording This recordind was made during 1910-11


ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಮೈಸೂರಿನಲ್ಲಿದ್ದ ಕೆಲವು ಸಂಗೀತ ವಿದ್ವಾಂಸರುಗಳ ಪರಂಪರೆ ಎಲ್ಲಿಂದ ಬಂದಿತ್ತು ಎಂದು ನೋಡೋಣ. ಇವರಲ್ಲಿ ಅತಿ ಪ್ರಮುಖರೆಂದರೆ ವೀಣೆ ಶೇಷಣ್ಣನವರು. ಮಹಾರಾಜರ ಮುಂದೆ ಹಾಡುವ ಮೊದಲು ಎಲ್ಲಾ ಸಂಗೀತಗಾರರನ್ನು ಪರೀಕ್ಷಿಸುವ ಅಧಿಕಾರವನ್ನು ಅವರು ಹೊಂದಿದ್ದರು (ಸೀತಾರಾಮಯ್ಯ ಅವರ ಮಹನೀಯರು: ಜೀವನ ಚಿತ್ರಗಳು ಎಂಬ ಪುಸ್ತಕದಿಂದ). ಶೇಷಣ್ಣನ ತಂದೆಯವರು ತಂಜಾವೂರಿನಿಂದ ಬಂದು ವೆಂಕಟಸುಬ್ಬಯ್ಯನವರ ನೆರವನ್ನು ಕೋರಿ ಸಂಸ್ಥಾನದ ಸಂಗೀತಗಾರರಾಗಿ ಸೇರಿದ್ದರು (ವಾಸುದೇವಾಚಾರ್ಯರ ನಾ ಕಂಡ ಕಲಾವಿದರು ಪುಸ್ತಕದಿಂದ). ಶೇಷಣ್ಣನವರ ಗುರುಗಳಾದ ಮೈಸೂರು ಸದಾಶಿವರಾಯರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಿಂದಲೇ ಅವರು ಅರಮನೆಯಲ್ಲಿ ಸಂಗೀತಗಾರರಾಗಿ ನೆಲೆಸಿದ್ದರು. ನಂತರ ಮೈಸೂರಿನ ಹಲವಾರು ಕಲಾವಿದರು ಶೇಷಣ್ಣನವರಿಂದ ಸಂಗೀತ ಕಲಿತು ಸಂಸ್ಥಾನದ ಗಾಯಕರೂ ಆಗಿದ್ದರು. ಮೈಸೂರು ವಾಸುದೇವಾಚಾರ್ಯರು ತಿರುವಯ್ಯಾರಿಗೆ ಹೋಗಿ ಪಟ್ಣಂ ಸುಬ್ರಮಣ್ಯ ಅಯ್ಯರ್ (ಇವರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರೆ) ರವರಿಂದ ಸಂಗೀತ ಕಲಿತದ್ದು ಚಾಮರಾಜ ಒಡೆಯರ ಆಶ್ರಯದಲ್ಲಿ. ಬಿಡಾರಂ ಕೃಷ್ಣಪ್ಪನವರು ಮೈಸೂರಿನಲ್ಲೇ ಇದ್ದು ಶೇಷಣ್ಣನವರನ್ನೂ ಒಳಗೊಂಡಂತೆ ಎರಡು ಮೂರು ಗುರುಗಳಿಂದ ಸಂಗೀತ ಕಲಿತರು. ಅವರಿಗೆ ಮದರಾಸು ಮತ್ತು ಇತರೆ ನಗರಗಳಿಂದ ಆಹ್ವಾನ ನಿರಂತರವಾಗಿ ಬರುತಿತ್ತು (ಬಿ.ವಿ.ಕೆ. ಶಾಸ್ತ್ರಿ ಇವರ ಕಲೆಯ ಗೊಂಚಲು ಎಂಬ ಪುಸ್ತಕದಿಂದ). ಇಪ್ಪತ್ತರ ದಶಕದ ಕೊನೆಯಲ್ಲಿ ಸಂಗೀತಗಾರರಾಗಿ ಸೇರಿದ ಮುತ್ತಯ್ಯ ಭಾಗವತರ್‍ರವರು ತಮಿಳುನಾಡಿನ ಹರಿಕೇಶನಲ್ಲೂರ್ ಎಂಬ ಊರಿಗೆ ಸೇರಿದ್ದವರಾಗಿದ್ದು, ಅವರ ಗುರುಗಳಾದ ಸಾಂಬಶಿವ ಐಯ್ಯರ್ ಕೂಡ ತ್ಯಾಗರಾಜರ ಪರಂಪರೆಗೆ ಸೇರಿದವರಾಗಿದ್ದರು (ಮೀರಾ ರಾಜಾರಾಮ್ ಪ್ರಾಣೇಶ್ ಅವರ Musical Composers During Wodeyar Dynasty ಎಂಬ ಪುಸ್ತಕದಿಂದ). ಇದಲ್ಲದೆ ತಮಿಳುನಾಡಿನ ಪ್ರಖ್ಯಾತ ಸಂಗೀತಗಾರರಾಗಿದ್ದ ಮಹಾವೈದ್ಯನಾಥ ಅಯ್ಯರ್, ಪಟ್ಣಂ ಸುಬ್ರಹ್ಮಣ್ಯ ಅಯ್ಯರ್, ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ ಮುಂತಾದವರು ಮೈಸೂರು ಸಂಸ್ಥಾನದಲ್ಲಿ ಹಾಡಿ ಹೆಸರು ಗಳಿಸಿದ್ದರು. ಸಂಸ್ಥಾನದ ಸಂಗೀತಗಾರರಲ್ಲಿ ಶೇಷಣ್ಣ, ಸುಬ್ಬಣ್ಣ ಮತ್ತು ಕೃಷ್ಣಪ್ಪನವರು ಆಗಾಗ್ಗೆ ತಮಿಳುನಾಡಿಗೆ ಹೋಗಿ 3 ಸಂಗೀತ ಕಛೇರಿಗಳನ್ನು ನೀಡುತ್ತಿದ್ದರು. ಅವರ ಭೇಟಿಯಿಂದಾಗಿ ಎರಡು ಪ್ರದೇಶಗಳ ಸಂಗೀತಗಾರರ ನಡುವೆ ಸಾಕಷ್ಟು ಸ್ನೇಹ ಮತ್ತು ಪರಸ್ಪರ ವಿನಿಮಯಗಳು ಉಂಟಾದವು. ಪೋಷಣೆ ಮತ್ತು ಆಶ್ರಯದ ವಿಷಯದಲ್ಲಿ ಮೈಸೂರು-ತಮಿಳುನಾಡುಗಳ ನಡುವೆ ಕೊಡುಕೊಳು ಇದ್ದರೂ, ಅಧ್ಯಯನದ ವಿಷಯಕ್ಕೆ ಬಂದಾಗ ಮೈಸೂರಿನಿಂದ ತಮಿಳುನಾಡಿಗೆ ಹೋಗುವವರೆ ಇದ್ದರು. ತಮಿಳುನಾಡಿನಿಂದ (ಮದರಾಸು-ತಂಜಾವೂರಿನಿಂದ) ಮೈಸೂರಿಗೆ ಬಂದು ಸಂಗೀತಾಧ್ಯಯನ ಮಾಡಿದವರು ಇಲ್ಲವೆಂದೇ ಹೇಳಬಹುದು. ಅಂದರೆ ಕರ್ನಾಟಿಕ್ ಪ್ರಾಂತ್ಯವು ಸಂಗೀತ ಸಂಸ್ಕೃತಿಯ ಕೇಂದ್ರವಾಗಿತ್ತೆ ಹೊರತು ಮೈಸೂರು ಅಲ್ಲವೆಂದು ಈ ಅಂಶದಿಂದ ತಿಳಿಯುತ್ತದೆ.

1928ರಲ್ಲಿ ಮದರಾಸ್ ಅಕಾಡೆಮಿ ಸ್ಥಾಪನೆಯಾದ ನಂತರವಂತೂ ಸಂಗೀತ ತ್ರಿಮೂರ್ತಿ (ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ, ಹಾಗೂ ಶ್ಯಾಮಾಶಾಸ್ತ್ರಿ) ಗಳ ಕೃತಿಗಳಿಗೆ ಮತ್ತು ಅದರ ಮೂಲಕ ಶಾಸ್ತ್ರೀಯ ರಾಗಗಳಿಗೆ ನಿರ್ದಿಷ್ಟ ಸ್ವರೂಪವನ್ನು ಕೊಡುವ ಕೆಲಸ ವೇಗವಾಗಿ ನಡೆಯಿತು. ಹೀಗಾಗಿ ಈ ಕೃತಿಗಳು ಅತಿ ಬೇಗನೆ ಪ್ರಸಿದ್ಧಿಯನ್ನೂ ಮತ್ತು ಪ್ರಾಮುಖ್ಯತೆಯನ್ನೂ ಪಡೆದವು. ಆದರೆ ಮ್ಯೂಸಿಕ್ ಅಕಾಡೆಮಿಯಲ್ಲಿ ಈ ವಿಷಯದ ಕುರಿತಂತೆ ಬಿಸಿ ಚರ್ಚೆಗಳಾಗುತ್ತಿದ್ದವು. ಪ್ರಮುಖವಾಗಿ ತ್ಯಾಗರಾಜರ ಶಿಷ್ಯಪರಂಪರೆಯ ಪ್ರಭಾವ ಇಲ್ಲಿ ಎದ್ದು ಕಾಣುತ್ತಿತ್ತು. ಕೆಲವು ವಿದ್ವಾಂಸರು ‘ತ್ಯಾಗರಾಜರನ್ನು ಮಹಾತ್ಮನನ್ನಾಗಿಸುವ ತವಕದಿಂದ’ ಎಲ್ಲಾ ವಿಷಯಗಳನ್ನು ತ್ಯಾಗರಾಜರ ಮೂಲಕ್ಕೆ ತೆಗೆದುಕೊಂಡು ಹೋಗುವುದರ ವಿರುದ್ಧ ಧ್ವನಿಯೆತ್ತಿದ್ದರು. 1932ರಲ್ಲಿ ವರಾಹ ನರಸಿಂಹಾಚಾರಿ ಎನ್ನುವವರೊಬ್ಬರು ರಾಗಗಳ ಮೂಲದ ಬಗ್ಗೆ ಮಾತಾಡುತ್ತಾ ರಾಗಗಳ ಹೆಸರನ್ನು ಸುಖಾಸುಮ್ಮನೆ ತ್ಯಾಗರಾಜರ ಹೆಸರಿನೊಂದಿಗೆ ಜೋಡಿಸುವ ಪ್ರವೃತ್ತಿಯನ್ನು ಖಂಡಿಸಿದ್ದರು. ಇದು ಏಕೆಂದರೆ ತ್ಯಾಗರಾಜರು ಸ್ವತಃ ರಾಗಗಳ ಹೆಸರನ್ನು ನಮೂದಿಸುವ ಕೆಲಸ ಮಾಡಿರಲಿಲ್ಲ (ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಜರ್ನಲ್ಲಿನ 1932ರ ಸಂಚಿಕೆಯಲ್ಲಿ ನೋಡಬಹುದು). ಆದರೂ ಇಂಥ ಪ್ರಯತ್ನವೊಂದು ಏಕೆ ಮತ್ತು ಹೇಗೆ ನಡೆಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಬೇರೆ ಬೇರೆ ಸಂಸ್ಥಾನಗಳಿಗೆ ವಲಸೆ ಹೋಗಿ ನೆಲೆನಿಂತ ಅಸಂಖ್ಯಾತ ಶಿಷ್ಯರುಗಳು, ತ್ಯಾಗರಾಜರ ಕುರಿತಾದ ಹರಿಕಥೆಗಳು, ಧನ-ಕನಕಾದಿಗಳನ್ನು ವರ್ಜಿಸಿದ ಹಾಗೂ ರಾಜರುಗಳ ಪೋಷಣೆಯನ್ನು ತಿರಸ್ಕರಿಸಿದ ಕಥೆಗಳು ತ್ಯಾಗರಾಜರ ವ್ಯಕ್ತಿತ್ವವನ್ನು ಜೀವನ-ಸಹಜ ಪಾತ್ರಕ್ಕಿಂತ ಆತಿಯಾಗಿ ಉತ್ಪ್ರೇಕ್ಷಿಸಿ ಕೊಟ್ಟಿದ್ದವು. ವಸಾಹತುಶಾಹೀ ಮತ್ತು ಆಧುನಿಕ ಕಾಲದಲ್ಲಿ ನಡೆದ ಈ ಪ್ರಕ್ರಿಯೆಯನ್ನು ಅಧ್ಯಯನ ಮಾಡಿದರೆ ವಸಾಹತುಪೂರ್ವದಲ್ಲೂ ಸಾಮಾನ್ಯ ಮನುಷ್ಯರನ್ನು ಮಹಾತ್ಮರನ್ನಾಗಿಸುತ್ತಿದ್ದ ಬಗೆಯ ಒಳಸುಳಿವುಗಳು ಸಿಗಬಲ್ಲುದು. ಆದರೆ ಇಲ್ಲಿ ಹೊಸತೇನಿತ್ತೆಂದರೆ ಆಧುನಿಕ ಯುಗದ ಮುದ್ರಣದ ಪ್ರಭಾವ. ಸ್ವರಲಿಪಿ ಪದ್ಧತಿಯನ್ನು ಅಧ್ಯಯನಮಾಡಿ ಅದನ್ನು ಕರ್ನಾಟಕ ಸಂಗೀತಕ್ಕೆ ಅಳವಡಿಸಿಕೊಳ್ಳಲಾಯಿತು. ಕೃತಿಗಳನ್ನು ಬರಹ-ಮುದ್ರಣರೂಪದಲ್ಲಿ ಪ್ರತಿನಿಧಿಸುವುದು, ಅಧ್ಯಯನ ಮಾಡುವುದು ಸಾಧ್ಯವಾದದ್ದರಿಂದ ಅನೇಕಾನೇಕ ಪ್ರತಿಗಳು ಸಾರ್ವಜನಿಕರನ್ನು ತಲುಪುವುದು ಸುಲಭಸಾಧ್ಯವಾಯಿತು. ಕೃತಿಗಳು ಮಾತ್ರವಲ್ಲದೇ ತ್ಯಾಗರಾಜರ ಹಾಗೂ ಅವರ ಸಮಕಾಲೀನರ ಕಥೆಗಳನ್ನೂ ಹೀಗೆಯೇ ಮುದ್ರಣದ ಮೂಲಕ ಪ್ರಚುರಪಡಿಸಿದ್ದರಿಂದಾಗಿ ಇದು ತ್ರಿಮೂರ್ತಿಗಳ ಪರಂಪರೆಯನ್ನು ಮತ್ತಷ್ಟು ಬಲಪಡಿಸಿ ಅವರ ಕೃತಿಗಳಿಗೆ ಅಧಿಕೃತತೆ ತಂದುಕೊಡಲು ಅನುವು ಮಾಡಿತು. ಮೈಸೂರು ಸಂಸ್ಥಾನದಲ್ಲಿ ರಚಿಸಲಾದ ಕನ್ನಡ ಕೃತಿಗಳು ತ್ರಿಮೂರ್ತಿಗಳ ಮಾದರಿಯ ಅನುಕರಣೆಯಾಗಿದ್ದಿತು. ಆದರೆ ಈ ಹಿಂದೆ ನೋಡಿದಂತೆ ಸಂಗೀತಗಾರರಲ್ಲೇ ಈ ಕನ್ನಡ ಕೃತಿಗಳನ್ನು ಹಾಡುವ ಉತ್ಸಾಹ ಕಂಡುಬರುತ್ತಿರಲಿಲ್ಲ ಮತ್ತು ಅವುಗಳನ್ನು ಜನಪ್ರಿಯಗೊಳಿಸಬೇಕೆಂಬ ಆಸೆಯೂ ಕಾಣಲಿಲ್ಲ. ತಮ್ಮ ಶಿಷ್ಯರಿಗೆ ಕೂಡ ಅವರುಗಳು ಈ ಕೃತಿಗಳನ್ನು ಕಲಿಸುತ್ತಿರಲಿಲ್ಲವೆನಿಸುತ್ತದೆ. ಏಕೆಂದರೆ ಈ ಮೈಸೂರು ಸಂಗೀತಗಾರರ ಶಿಷ್ಯ-ಪ್ರಶಿಷ್ಯಂದಿರು ಯಾರೂ ಹೊಸ ಕನ್ನಡ ಕೃತಿಗಳಿಂದಲೇ ಮಾಡಿದ ಕಛೇರಿ ದಾಖಲಾಗಲಿಲ್ಲ. ಉದಾಹರಣೆಗೆ ವೀಣೆ ಶೇಷಣ್ಣನವರು ಕನ್ನಡ, ತೆಲುಗು ಭಾಷೆಗಳಲ್ಲಿ ಕೃತಿ ರಚನೆ ಮಾಡಿದ್ದರೂ ತಮ್ಮ ಕಛೇರಿಗಳಲ್ಲಿ ಅವರು ತ್ಯಾಗರಾಜರು ಮತ್ತು ಗುರುಗಳಾದ ಸದಾಶಿವ ರಾವ್ ಇವರ ಕೃತಿಗಳನ್ನು ಮಾತ್ರ ಹಾಡುತ್ತಿದ್ದರು. ಪರಂಪರೆಯ ಈ ಆಕರ್ಷಣೆಯಿಂದಾಗಿ ಮಹಾರಾಜರ 4 ಆದೇಶವನ್ನು ವಿರೋಧಿಸದೆ ಸಂಗೀತಗಾರರು ನೂರಾರು ಕನ್ನಡ ಕೃತಿಗಳನ್ನು ರಚಿಸಿದ್ದರೂ ಅವುಗಳು ಕಾಲಾನುಕ್ರಮೇಣ ಜನಮಾನಸದಿಂದ ಮರೆತುಹೋಗಿ ರಚನೆಯ ಕೆಲಸ ಕೇವಲ ಸಮಯದ ವ್ಯಯ ಎಂಬುವಂತಾಯಿತು.

ಇತಿಹಾಸ ತಜ್ಞೆ ಪ್ರೊ. ಜಾನಕಿ ನಾಯರ್

ಇತಿಹಾಸ ತಜ್ಞೆ ಪ್ರೊ. ಜಾನಕಿ ನಾಯರ್

ಆದರೆ ಇದೇ ಸಂದರ್ಭದಲ್ಲಿ ಅತ್ತ ಸಂಪ್ರದಾಯವಾದಿಗಳನ್ನೂ , ಇತ್ತ ಕನ್ನಡಕೃತಿಗಳನ್ನು ಬಯಸುವವರನ್ನೂ ಸಮಾಧಾನಪಡಿಸಲೋ ಎಂಬಂತೆ ದಾಸಸಾಹಿತ್ಯವು ಸಂಗೀತಕಛೇರಿಯ ಮೆಟ್ಟಲೇರುತ್ತದೆ. ಸಾಮಾನ್ಯವಾಗಿ ಬ್ರಾಹ್ಮಣ ಹೆಂಗಸರು ಮನೆಕೆಲಸ ಮಾಡಿಕೊಳ್ಳುವಾಗಲೋ ಅಥವಾ ಶೂದ್ರರ ಭಜನಾಗುಂಪುಗಳಲ್ಲೋ ಹಾಡಲಾಗುತ್ತಿದ್ದ ದಾಸರ ಪದಗಳು ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ನಿಧಾನಕ್ಕೆ ಪ್ರಸ್ತುತಿಗೊಳ್ಳತೊಡಗಿತು. ಹುಬ್ಬಳ್ಳಿಯ ಸಂಗೀತ ವಿದ್ವಾಂಸರಾದ ಹುಲಗೂರು ಕೃಷ್ಣಾಚಾರ್ಯರು ಮೈಸೂರಿನ ಆಸ್ಥಾನದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಇವರು ವಿದುಷಿ ಗಂಗೂಬಾಯಿ ಹಾನಗಲ್ ಅವರಿಗೆ ಪ್ರಾರಂಭದಲ್ಲಿ ಕರ್ನಾಟಕ ಸಂಗೀತ ಪಾಠಮಾಡಿದ ಗುರುಗಳೂ ಹೌದು. ಇಪ್ಪತ್ತನೇ ಶತಮಾನದ ಕರ್ನಾಟಕ ಸಂಗೀತಕ್ಷೇತ್ರವು ಪುರಂದರದಾಸರೆಂಬ ಪ್ರಭೃತಿಯನ್ನು ಮದ್ರಾಸ್ ಅಕಾಡೆಮಿಯ ಮೂಲಕ ಗಮನಿಸಲು ಈತ ಮುಖ್ಯ ಕಾರಣ. ಮ್ಯೂಸಿಕ್ ಅಕಾಡೆಮಿಯಲ್ಲಿ ಈತ ಮಾಡಿದ ಭಾಷಣಗಳು ವಿದ್ವತ್ಪೂರ್ಣವೆನಿಸಿಕೊಂಡಿದ್ದವು ಹಾಗೂ ಇದರಿಂದ ಮೈಸೂರಿನಲ್ಲಿ ಇವರ ಕೀರ್ತಿ ಹಬ್ಬಿತ್ತು. ಒಡೆಯರು ಮೈಸೂರಿನಲ್ಲಿ ಹುಲಗೂರರಿಗೆ ವಿಶೇಷ ಸನ್ಮಾನಗಳನ್ನೂ ಮಾಡಿದ್ದರು. ಇವರ ಪ್ರಭಾವದಿಂದ ಇರಬಹುದೇನೋ, ಬಿಡಾರಂ ಕೃಷ್ಣಪ್ಪನವರು ದಾಸರ ಪದಗಳನ್ನು ಮಾತ್ರ ಅಳವಡಿಸಿ ಹಲವಾರು ಕಛೇರಿಗಳನ್ನು ಮಾಡಿದರು. ಈ ಮುಂಚೆ ಕೃಷ್ಣಪ್ಪನವರು ಕೆಲವೊಮ್ಮೆ ನಾಟಕದ ಪಾತ್ರಗಳಲ್ಲಿ ಹಾಡುಗಾರಿಕೆ ಮಾಡುತ್ತಾ ತ್ಯಾಗರಾಜರ ಕೃತಿಗಳಿಗೆ ಹೋಲುವಂಥ ಕನ್ನಡ ಕೃತಿಗಳನ್ನು ವೇದಿಕೆಯಲ್ಲಿ ಹಾಡುತ್ತಿದ್ದರು. ಮೋಹನ ರಾಗದ ತ್ಯಾಗರಾಜರ ಕೃತಿಯಾದ ಮೋಹನ ರಾಮ ಎನ್ನುವ ಕೃತಿಯನ್ನೆ ಹೋಲುವ ಅದೇ ರೀತಿ ಆರಂಭವಾಗುವ ಕನ್ನಡದ ಕೃತಿಯೊಂದನ್ನು ಕೃಷ್ಣಪ್ಪನವರಿಂದ ನಾಟಕವೊಂದರಲ್ಲಿ ಕೇಳಿರುವುದನ್ನು ಡಿ.ವಿ.ಜಿ.ಯವರು ತಮ್ಮ ಜ್ಞಾಪಕಚಿತ್ರಶಾಲೆಯಲ್ಲಿ ನೆನಪಿಸುತ್ತಾರೆ. ಆದರೆ ಅಂಥ ಕೃತಿಗಳನ್ನು ಸಂಗೀತ ಕಛೇರಿಗಳಲ್ಲಿ ಹಾಡಿದ್ದು ದಾಖಲಾದಂತಿಲ್ಲ. ಆದರೆ ದಾಸರ ಪದಗಳು ವೈಷ್ಣವಗೌಡ ಸಾರಸ್ವತ ಹಿನ್ನೆಲೆಯಿಂದ ಬಂದಿದ್ದ ಕೃಷ್ಣಪ್ಪನವರಿಗೆ ಕೌಟುಂಬಿಕವಾಗಿಯೇ ಹತ್ತಿರವಾಗಿದ್ದಿರಬಹುದು. ಅತ್ತ ಕನ್ನಡ ಕೃತಿರಚನೆಗಳು ಗಂಭೀರವಾಗಿ ಕಛೇರಿಗೆ ಒದಗಿ ಬರದೇ, ಇತ್ತ ಮಹಾರಾಜರ ಕನ್ನಡದ ಆಕಾಂಕ್ಷೆಗಳನ್ನೂ ನಗಣ್ಯ ಮಾಡದೇ ಒಂದು ಮಧ್ಯಮಮಾರ್ಗವಾಗಿ ದಾಸಸಾಹಿತ್ಯ ಒದಗಿಬಂದಂತಿತ್ತು. ಇದೇ ಮಾದರಿಯನ್ನು ಅವರ ಶಿಷ್ಯರೂ ಕೂಡಾ ಹಲವಾರು ಬಾರಿ ಅನುಸರಿಸಿದ್ದರು. ದೇವೇಂದ್ರಪ್ಪ, ಡಿ. ಸುಬ್ಬರಾಮಯ್ಯ, ಎ. ಸುಬ್ಬರಾವ್ ಇವರು ಪ್ರಮುಖರು. ದೇವೇಂದ್ರಪ್ಪನವರು ಮೈಸೂರು ಸಂಸ್ಥಾನದ ವಿದ್ವಾಂಸರಾಗಿ ಕೆಲಸ ಮಾಡಿದರು ಮಾತ್ರವಲ್ಲ, ಮುಂದೆ ನಡೆಯಲಿದ್ದ ಕನ್ನಡ ಚಳುವಳಿಯ ನೇತಾರರಾದ ಅ.ನ. ಕೃಷ್ಣರಾಯರ ಸಲಹೆಯ ಮೇರೆಗೆ ವಚನಗಳನ್ನೂ ಶಾಸ್ತ್ರೀಯ ರಾಗ ಸಂಯೋಜನೆ ಮಾಡಿ ಕಛೇರಿಗಳಲ್ಲಿ ಹಾಡತೊಡಗಿದರು.

ಆದರೆ ಈ ಎಲ್ಲಾ ಪ್ರಯೋಗಗಳೂ ಶಾಸ್ತ್ರೀಯ ಸಂಗೀತದ ಚೌಕಟ್ಟಿನ ಒಳಗೆ ಬಹಳಷ್ಟೇನೂ ಬದಲಾವಣೆ ಮಾಡಲಿಲ್ಲ. ಮಹಾರಾಜರಿಗೇ ಅಗಲಿ ಅಥವಾ ಸಂಪ್ರದಾಯವಾದಿಗಳಿಗೇ ಆಗಲಿ, ಈ ಪ್ರಯೋಗಗಳೇನೂ ವಿಶೇಷವಾಗಿ ರುಚಿಸಿದಂತಿರಲಿಲ್ಲ. ಸಂಗೀತ ಕ್ಷೇತ್ರದ ಕನ್ನಡ ಸಂಕಥನ ಪುರಂದರ ದಾಸರು, ದಾಸರ ಪದಗಳು ಮತ್ತು ವಚನಗಳನ್ನು ತನ್ನ ರಾಜಕೀಯಕ್ಕೆ ಉಪಯೋಗಿಸಿಕೊಂಡರೂ ಕರ್ನಾಟಕ ಸಂಗೀತದ ತಿರುಳಾಗುವುದು ಆ ಪ್ರಕಾರಗಳಿಗೆ ಸಾಧ್ಯವಿರಲಿಲ್ಲ, ಆಗಲೂ ಇಲ್ಲ. ಆದರೆ ಭಕ್ತಿಪಂಥದ ಈ ಪ್ರಕಾರಗಳಿಗೆ ಬೇರೆಯೇ ಒಂದು ದಾರಿ ಸದ್ಯದಲ್ಲಿ ಕಡೆದಂತಿತ್ತು. ಅದೇನೆಂದು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಮುಂದುವರೆಯುವುದು ..

ಅನುವಾದ: ಪ್ರೊ. ಎಸ್. ನಾರಾಯಣನ್

One comment to “ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೬: ಶಾಸ್ತ್ರೀಯತೆ, ಕನ್ನಡ ಮತ್ತು ದಾಸರ ಪದಗಳು”
  1. ಸಾಮಾನ್ಯವಾಗಿ ಬ್ರಾಹ್ಮಣ ಹೆಂಗಸರು ಮನೆಕೆಲಸ ಮಾಡಿಕೊಳ್ಳುವಾಗಲೋ ಅಥವಾ ಶೂದ್ರರ ಭಜನಾಗುಂಪುಗಳಲ್ಲೋ ಹಾಡಲಾಗುತ್ತಿದ್ದ ದಾಸರ ಪದಗಳು ಶಾಸ್ತ್ರೀಯ ಸಂಗೀತದ ಚೌಕಟ್ಟಿನಲ್ಲಿ ನಿಧಾನಕ್ಕೆ ಪ್ರಸ್ತುತಿಗೊಳ್ಳತೊಡಗಿತು. – ಶೂದ್ರರ ಭಜನಾಗುಂಪು ಇತ್ತೆ? ಅಂದರೆ ಶೂದ್ರರಿಗೆ ಭಜನಾಗುಂಪು ಕಟ್ಟಿಕೊಳ್ಳಲು ಮೇಲುಜಾತಿಗಳು ಆಸ್ಪದ ಕೊಟ್ಟಿದ್ದವೆ? ನನಗೆ ದಾಸ ಸಾಹಿತ್ಯದ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲ, ಆದರೂ ಈ ವಾಕ್ಯ ಅಷ್ಟು ಸರಿಯಾಗಿದೆ ಎಂದು ಅನ್ನಿಸುತ್ತಿಲ್ಲ.

ಪ್ರತಿಕ್ರಿಯಿಸಿ