ಪುಸ್ತಕ ಪರಿಚಯ : Anatomy of a Disappearance – ಒಂದು ಕಣ್ಮರೆಯ ಸುತ್ತ

ಸಾಹಿತ್ಯವಲಯವೂ ಸೇರಿದಂತೆ ಸಾಮಾನ್ಯ ಓದುಗರಿಗೆ ಹೆಚ್ಚೇನು ಪರಿಚಿತವಲ್ಲದ, ಆದರೆ ಕಲಾಪ್ರಕಾರ, ತಂತ್ರಗಾರಿಕೆ ಕಥಾವಸ್ತು, ಸಂಸ್ಕೃತಿಗಳಲ್ಲಿ ವಿಶಿಷ್ಠವಾಗಿಯೂ, ವಿಭಿನ್ನವಾಗಿಯೂ, ಅಸಾಮಾನ್ಯವಾಗಿಯೂ ಕಾಣುವ ಲೇಖಕರನ್ನು, ಕೃತಿಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವುದು ಇದರ ಮುಖ್ಯ ಉದ್ದೇಶ. ಈ ಬಾರಿ 2011 ರಲ್ಲಿ ಪ್ರಕಟವಾದ ಬ್ರಿಟಿಷ್-ಲಿಬಿಯನ್ ಲೇಖಕ ಹಿಷಮ್ ಮಥರ್ ಅವರ ಎರಡನೇ ಕಾದಂಬರಿ ‘ಅನ್ಯಾಟಮೀ ಆಫ್ ಆ ಡಿಸಪೀಯರೆನ್ಸ್’ ಪರಿಚಯ.

ಗಡಾಫಿ ವಿರೋಧಿ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ, ರಾಜಕೀಯ ಭಿನ್ನಮತೀಯನೆಂದು ಗುರುತಿಸಲ್ಪಟ್ಟಿದ್ದ ಜಬಲ್ಲಾ ಮಥರ್, ಮೂಲತಃ ಲಿಬಿಯನ್. ಪ್ರಭುತ್ವದ ವಿರೋಧಿಯಾಗಿ ಗುರುತಿಸಿಕೊಂಡಿರುವ ಕಾರಣದಿಂದಾಗಿ ಅಮೇರಿಕಾ, ಪ್ಯಾರಿಸ್ಸನ್ನೆಲ್ಲಾ ಸುತ್ತಿ, ಕೊನೆಗೆ ಗಡಿಪಾರಾಗಿ ಈಜಿಪ್ಟಿನ ಕೈರೋನಲ್ಲಿ ನೆಲೆಯೂರುತ್ತಾರೆ. ಹನ್ನೊಂದು ವರ್ಷಗಳ ತರುವಾಯ, 1990 ರಲ್ಲಿ ಅವರ ಅಪಹರಣವಾಗುತ್ತದೆ. ನಂತರದಲ್ಲಿ ಅವರು ಕದ್ದುಮುಚ್ಚಿ ಬರೆದ, “ಈಜಿಪ್ಟಿನ ಗುಪ್ತ ಪೋಲೀಸ್ ಪಡೆ ನನ್ನನ್ನು ಅಪಹರಿಸಿ, ಲಿಬಿಯಾಕ್ಕೆ ರವಾನಿಸಿದ್ದು, ಈಗ ನನ್ನನ್ನು ಟ್ರಿಪೊಲಿಯಲ್ಲಿನ ಅಬು ಸಲೀಂ ಸೆರೆಮನೆಯಲ್ಲಿ ಇಡಲಾಗಿದೆ” ಎಂಬ ವಿಷಯವನ್ನೊಳಗೊಂಡ, ಎರಡು ಪತ್ರಗಳು ಅವರ ಕುಟುಂಬದ ಕೈ ಸೇರಿದ್ದು ಬಿಟ್ಟರೆ, ಇಲ್ಲಿಯವರೆಗೂ ಅವರ ಪತ್ತೆಯಾಗಿಲ್ಲ. ಜಬಲ್ಲಾ ಮಥರ್ ರವರು ಕಣ್ಮರೆಯಾದಾಗ, ಲಂಡನ್ನಿನಲ್ಲಿ ಓದುತ್ತಿದ್ದ ಅವರ ಎರಡನೇ ಮಗ ಹಿಷಮ್ ಮಥರ್ ನ ವಯಸ್ಸು ಇಪ್ಪತ್ತು. ಆ ಯುವಕ ತಾನು ಎದುರಿಸಿದ ಗಡಿಪಾರಿನ ಜೀವನ, ದುರಾಡಳಿತ ಹಾಗೂ ಇದರಿಂದ ಕಾಡುವ ಅನಾಥ ಪ್ರಜ್ಞೆ ಮತ್ತು ಏಕಾಂಗಿತನದ ಕಥನಗಳನ್ನು ರಚಿಸಿ ಇಂದು ಖ್ಯಾತ ಲೇಖಕರಾಗಿದ್ದಾರೆ.

ಬ್ರಿಟಿಷ್-ಲಿಬಿಯನ್ ಲೇಖಕ ಹಿಷಮ್ ಮಥರ್ ಹುಟ್ಟಿದ್ದು ಅಮೇರಿಕಾದ ನ್ಯೂಯಾರ್ಕ್‍ನಲ್ಲಿ, ಬೆಳೆದಿದ್ದು ಕೈರೋನಲ್ಲಿ, ವಿದ್ಯಾಭ್ಯಾಸ ಮುಂದುವರೆಸಿದ್ದು ಇಂಗ್ಲೆಂಡಿನಲ್ಲಿ. ರಾಯಲ್ ಸೊಸೈಟಿ ಆಫ್ ಲಿಟೆರೇಚರ್‍ನ ಫೆಲೋ ಆಗಿರುವ ಹಿಷಮ್, ಪ್ರಸ್ತುತ ಕೊಲಂಬಿಯಾ ವಿಶ್ವವಿದ್ಯಾಲಯದ ಬರ್ನಾರ್ಡ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಲೇಖನಿಯಿಂದ ಎರಡು ಕಾದಂಬರಿ, ಎರಡು ಮೆಮ್ವಾರ್, ಒಂದು ಮಕ್ಕಳ ಪುಸ್ತಕ, ಹಲವು ಲೇಖನಗಳು, ಪ್ರಬಂಧಗಳು ಹಾಗೂ ಸಣ್ಣ ಕಥೆಗಳು ಒಡಮೂಡಿವೆ.

ಒಂಬತ್ತು ವರ್ಷದ ಬಾಲಕ ಸುಲೈಮಾನ್, ಅವನ ತಂದೆಯ ಗಡಾಫಿ ವಿರೋಧಿ ಚಳುವಳಿಗಳು, ಮದ್ಯವ್ಯಸನಿಯಾಗಿರುವ ತಾಯಿ- ಇವರ ಸುತ್ತ ಹೆಣೆದ ಕಥೆಗೆ ಥಳುಕು ಹಾಕಿಕೊಂಡಂತೆ ಗಡಾಫಿಯ ಭಯಾನಕ ಆಡಳಿತ, ಲಿಬಿಯಾದಲ್ಲಿನ ಸಾಮಾನ್ಯ ಜನರ ಹೋರಾಟದ ಜೀವನದ ಚಿತ್ರಣ ಕಟ್ಟಿಕೊಡುತ್ತಾ ಸಾಗುವ ‘ಇನ್ ದಿ ಕಂಟ್ರಿ ಆಫ್ ಮೆನ್’ ಹಿಷಮ್ ರ ಮೊದಲ ಕಾದಂಬರಿ. 2006 ರ ಬೂಕರ್ ಪ್ರಶಸ್ತಿಗೆ ನಾಮಾಂಕಿತವಾಗಿದ್ದುದು ಇದರ ಹೆಗ್ಗಳಿಕೆ. ಹಿಷಮ್ ಮಥರ್ ರವರ ಜೀವನಗಾಥೆಯನ್ನೊಳಗೊಂಡ ಮೆಮ್ವಾರ್ ‘ದಿ ರಿಟರ್ನ್’ ಗೆ 2017 ರಲ್ಲಿ ಪುಲಿಟ್ಜರ್ ಪ್ರಶಸ್ತಿ ಸಂದಿದೆ.

2011 ರಲ್ಲಿ ಪ್ರಕಟವಾದ ಹಿಷಮ್ ರವರ ಎರಡನೇ ಕಾದಂಬರಿ ‘ಅನಾಟಮಿ ಆಫ್ ಎ ಡಿಸಪಿಯರೆನ್ಸ್’ ಮೇಲ್ನೋಟಕ್ಕೆ ಆತ್ಮಕಥೆಯ ಭಾಗದಂತೆ ಕಂಡುಬಂದರೂ, ಸ್ವತಃ ಕೃತಿಕಾರರೇ ಅದನ್ನು ಅಲ್ಲಗಳೆಯುತ್ತಾರೆ. ಈ ಕಾದಂಬರಿಯ ನಿರೂಪಕ ಹಾಗೂ ಮುಖ್ಯ ಪಾತ್ರದಾರಿ 14 ರ ಹರೆಯದ ಬಾಲಕ ನೂರಿ-ಎಲ್-ಅಲ್ಫಿ. ಹತ್ತನೇ ವಯಸ್ಸಿನ ಚಂಚಲ ಮನಸ್ಸಿನ ಬಾಲಕ ನೂರಿ ಇಪ್ಪತ್ನಾಲ್ಕರ ಪ್ರಬುದ್ಧ ಯುವಕನಾಗಿ ಬೆಳೆಯುವ ರೀತಿ ಹಾಗೂ ತನ್ನ ತಂದೆಯ ಕಣ್ಮರೆಯನ್ನು ವಯೋಮಾನಕ್ಕೆ ಅನುಗುಣವಾಗಿ ಭೇದಿಸುವ ಪರಿ ಈ ಕಾದಂಬರಿಯ ತಿರುಳಾಗಿದೆ.

ಹೆಸರಿಲ್ಲದ, ‘ನಮ್ಮ ದೇಶ’ ಎಂದೇ ಕಾದಂಬರಿಯುದ್ದಕ್ಕೂ ಸಂಭೋದಿಸಲ್ಪಡುವ ದೇಶದ ಪ್ರಜೆಯಾದ ಕಮಲ್ ಪಾಷಾ-ಎಲ್-ಅಲ್ಫಿ ಯ ಪೂರ್ವಿಕರು, ಸಿರಿವಂತ ರೇಷ್ಮೆ ವರ್ತಕರಾಗಿದ್ದವರು. ರಾಜಕೀಯ ಭಿನ್ನಮತದಿಂದಾಗಿ, ತನ್ನ ದೇಶದಿಂದ ಗಡೀಪಾರಿಗೆ ಒಳಗಾದ ಕಮಲ್ ಪಾಷಾ, ಹಲವು ದೇಶಗಳನ್ನು ಸುತ್ತುವಂತಾಗುತ್ತದೆ. ತನ್ನ ರಾಜಕೀಯ ಪ್ರೇರಿತ ರಹಸ್ಯ ಕಾರ್ಯಗಳ ಬಗೆಗೆ ಅಸಮಾಧಾನ ಹೊಂದಿದ್ದ ಪತ್ನಿಯ ಮಾತಿಗೆ ಮನ್ನಣೆ ಕೊಟ್ಟು, ಪ್ಯಾರಿಸ್ಸಿನಲ್ಲಿ ವಾಸವಿದ್ದಾಗ ನೂರಿಯ ಜನನವಾಗುತ್ತದೆ. ಕಡೆಗೆ ಈ ಕುಟುಂಬ ಕೈರೋ ದ ಅಪಾರ್ಟ್‍ಮೆಂಟ್ ಒಂದರಲ್ಲಿ ನೆಲೆ ಕಂಡುಕೊಳ್ಳುತ್ತದೆ.

ಬಾಲಕ ನೂರಿಗೆ ತಂದೆಯೊಂದಿಗೆ ಅಷ್ಟೇನೂ ಒಡನಾಟವಿಲ್ಲ. ಹತ್ತು ವರ್ಷಗಳಾಗಿದ್ದಾಗ ಸಂಭವಿಸಿದ ತಾಯಿಯ ಸಾವು ಆತನಿಗೆ ಹೇಳಲಸಾಧ್ಯ ಸಂಕಟ ತಂದೊಡ್ಡಿ, ಏಕತಾನತೆಗೆ ದೂಡುತ್ತದೆ. ಆ ಸಂದರ್ಭದಲ್ಲಿ ಆತನ ಮೇಲೆ ಮಾತೃಪ್ರೇಮದ ಹೊಳೆ ಹರಿಸಿದವಳು, ಹದಿಮೂರರ ವಯಸ್ಸಿನಿಂದಲೇ ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ, ಹುಟ್ಟಿದಂದಿನಿಂದ ನೂರಿಯನ್ನು ಮಗನಂತೆ ಸಲುಹಿದ್ದ ನೈಮಾ.

ವರ್ಷಗಳುದುರಿದಂತೆ, ರಜಾದಿನಗಳನ್ನು ಕಳೆಯಲು ತಂದೆ-ಮಗ ಬೀಚ್ ಒಂದರ ರೆಸಾರ್ಟ್‍ನಲ್ಲಿ ತಂಗಿದ್ದ ಸಮಯದಲ್ಲಿ, ಸುಮಾರು ಇಪ್ಪತ್ನಾಲ್ಕರ ಹರೆಯದ ಈಜಿಪ್ಟ್ ಮೂಲದ ಬ್ರಿಟೀಷ್ ಯುವತಿ ಮೋನಾಳ ಪರಿಚಯವಾಗುತ್ತದೆ. ಮೊದಲ ನೋಟದಲ್ಲಿಯೇ, ತನಗಿಂತ ಹದಿನಾಲ್ಕು ವರ್ಷ ಹಿರಿಯಳಾದ ಮೋನಾಳಿಗೆ ಆಕರ್ಷಿತನಾಗುವ ನೂರಿ, ಅವಳನ್ನು ಆರಾಧಿಸತೊಡಗುತ್ತಾನೆ. ಆದರೆ, ಗಂಭೀರ ವ್ಯಕ್ತಿತ್ವದ ಕಮಲ್‍ಪಾಷಾಗೆ ಮಾರುಹೋದ ಮೋನಾ ಆತನನ್ನು ಮದುವೆಯಾಗುತ್ತಾಳೆ. ತಂದೆಯೊಂದಿಗೆ ಹೆಚ್ಚೇನೂ ಸಾಮರಸ್ಯವಿಲ್ಲದ, ತಾಯಿಯ ಸಾವಿನಿಂದ ಜರ್ಜರಿತನಾಗಿದ್ದ ನೂರಿಗೆ, ತಾನು ಆರಾಧಿಸುವ ಮೋನಾಳನ್ನು ತಂದೆ ಮದುವೆಯಾಗಿದ್ದು ಈರ್ಷೆಗೆ ಈಡುಮಾಡುತ್ತದೆ.

ಮೋನಾಳೆಡೆಗೆ ಸಂಕೀರ್ಣ ಭಾವನೆಗಳನ್ನೊಂದಿದ್ದ ನೂರಿಯನ್ನು, ಕಮಲ್‍ಪಾಷಾ ಇಂಗ್ಲೆಂಡಿನ ಬೋರ್ಡಿಂಗ್ ಶಾಲೆಯೊಂದಕ್ಕೆ ದಾಖಲಿಸುತ್ತಾನೆ. ಇದು ನೂರಿಗೆ ತನ್ನ ತಂದೆಯ ಬಗೆಗಿನ ಅಸಮಾಧಾನ ಹೆಚ್ಚಾಗುವಂತೆ ಮಾಡುತ್ತದೆ. ಶಾಲೆಯಿಂದ ಆಗಾಗ್ಗೆ ಮೋನಾಳಿಗೆ ಪತ್ರ ಬರೆಯುವುದು, ಆಕೆಯ ಉತ್ತರಕ್ಕೆ, ದೂರವಾಣಿ ಕರೆಗೆ ಕಾಯುವುದು ನೂರಿಯ ಚಟುವಟಿಕೆಗಳಲ್ಲೊಂದಾಗುತ್ತದೆ. ತನ್ನ 14 ನೇ ವರ್ಷದ ಹುಟ್ಟುಹಬ್ಬದಂದು ಮೋನಾಳ ಉಡುಗೊರೆ, ಕರೆ ಅಥವಾ ಆಗಮನದ ನಿರೀಕ್ಷೆಯಲ್ಲಿದ್ದ ನೂರಿಗೆ, ಆಕೆ ಬರದಿದ್ದುದು ಬೇಸರ ಮೂಡಿಸಿದರೂ, ತನ್ನ ತಂದೆ ತನಗಾಗಿ ಇಂಗ್ಲೆಂಡಿಗೆ ಬಂದದ್ದು, ತನ್ನೊಡನೆ ಕಾಲ ಕಳೆದದ್ದು, ನವ ಚೈತನ್ಯವನ್ನು ಮೂಡಿಸುತ್ತದೆ. ತಂದೆಯ ಬಗೆಗೆ ಪ್ರೇಮ, ವಾತ್ಸಲ್ಯ ಚಿಗುರತೊಡಗುತ್ತದೆ.

ಕ್ರಿಸ್ಮಸ್ ರಜಾದಿನ ಕಳೆಯಲು, ಮೋನಾ ಹಾಗೂ ನೂರಿ ಸ್ವಿಟ್ಜರ್ಲೆಂಡಿನ ಮಾಂತ್ರೊನ ಹೋಟೆಲೊಂದರಲ್ಲಿ ತಂಗುವುದು, ಜಿನಿವಾದಲ್ಲಿ ಆಯೋಜಿಸಿರುವ ಒಂದು ತುರ್ತು ಮೀಟಿಂಗ್ ಮುಗಿಸಿ ಕಮಲ್ ಅವರಿಬ್ಬರನ್ನು ಸೇರುವುದೆಂಬ ಯೋಜನೆ ರೂಪಿಸಿರುತ್ತಾರೆ. ತಂದೆಯನ್ನು ಎದುರು ನೋಡುತ್ತಿದ್ದ ನೂರಿಗೆ, ಅವರ ಅಪಹರಣದ ಸುದ್ದಿ ಬರಸಿಡಿಲಿನಂತೆ ಬಂದೆರಗುತ್ತದೆ. ಸುದ್ದಿ ಕೇಳಿ ಸ್ಥಳಕ್ಕೆ ಧಾವಿಸುವ ಮೋನಾ ಹಾಗೂ ನೂರಿಗೆ, ‘ಸ್ವಿಸ್ ಮಹಿಳೆ ಬಿಯಟ್ರಿಸ್ ಬೆನಾಮ್ಯುರ್‍ಳ ಜೊತೆಗೆ ಏಕಾಂತದಲ್ಲಿದ್ದ ಸಮಯದಲ್ಲಿ ಕಮಲ್‍ಪಾಷಾ ರವರ ಅಪಹರಣ’ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಯೊಂದು ಅಪಹರಣದ ಬಗ್ಗೆ ಮಾಡಿದ್ದ ವರದಿಯ ಜೊತೆಗೆ, ಅದಕ್ಕೆ ಪೂರಕವಾಗಿ ಹಾಕಿದ್ದ ಪೋಟೋ ಮತ್ತಷ್ಟು ಆಘಾತವನ್ನುಂಟು ಮಾಡುತ್ತದೆ. ಇದೆಲ್ಲವೂ ಅಪಹರಣಕಾರರ ಪಿತೂರಿಯೆಂದೇ ಭಾವಿಸುವ ಈರ್ವರು, ಕಮಲ್ ಪಾಷಾನ ಸ್ವಿಸ್ ವಕೀಲ ಹಸ್‍ನ ಸಹಾಯದಿಂದ ಪೋಲೀಸ್ ಠಾಣೆಗೆ ಅಲೆಯುತ್ತಾರೆ, ಪತ್ರಿಕಾ ವರದಿಗಾರನನ್ನು ಹಾಗೂ ಆ ಸ್ವಿಸ್ ಮಹಿಳೆಯನ್ನು ಭೇಟಿ ಮಾಡುವ ವ್ಯರ್ಥ ಪ್ರಯತ್ನವನ್ನೂ ಮಾಡುತ್ತಾರೆ. ಮೋನಾಗೆ ಹೋಟೆಲ್‍ನಲ್ಲಿದ್ದಾಗ ಬರುವ ದೂರವಾಣಿ ಕರೆಯಿಂದಾಗಿ, ತಮ್ಮಿಬ್ಬರ ಪ್ರಾಣಕ್ಕೂ ಸಂಚಕಾರವಿದೆಯೆಂಬುದನ್ನು ತಿಳಿದು, ದಿಢೀರನೆ ಮೋನಾ ನೂರಿಯೊಂದಿಗೆ ಸ್ವಿಟ್ಜರ್‍ಲೆಂಡಿನಿಂದ ಕೈರೋಗೆ ಹಿಂತಿರುಗುತ್ತಾಳೆ. ಹಲವು ದಿನ ಕಳೆದರೂ ಕಮಲ್‍ನ ಬಗ್ಗೆ ಯಾವ ಮಾಹಿತಿಯೂ ಸಿಗದಾದಾಗ, ನೂರಿ ತನ್ನ ವಿದ್ಯಾಭ್ಯಾಸವನ್ನು ಇಂಗ್ಲೆಂಡಿನಲ್ಲಿಯೇ ಮುಂದುವರಿಸುತ್ತಾನೆ. ಎರಡು ತಿಂಗಳ ನಂತರ ಮೋನಾ ಸಹ ಲಂಡನ್ನಿಗೆ ಹಿಂತಿರುಗುತ್ತಾಳೆ.

ತನ್ನ ಭವಿಷ್ಯವನ್ನು ಮನಗಂಡಿದ್ದ ಕಮಲ್‍ಪಾಷಾ, ತಿಂಗಳಿಗೆ ಇಂತಿಷ್ಟು ಹಣವನ್ನು ಮೋನಾಳಿಗೆ ಮೀಸಲಿರಿಸಿ, ಉಳಿದೆಲ್ಲಾ ಆಸ್ತಿಗೆ ತನ್ನ ಏಕೈಕ ಮಗ ನೂರಿಯೇ ವಾರಸುದಾರ, ಆದರೆ ನೂರಿ ತನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಇಪ್ಪತ್ನಾಲ್ಕು ವರ್ಷ ಪೂರೈಸಿದ ನಂತರ ಆಸ್ತಿಯ ಸಂಪೂರ್ಣ ಹಕ್ಕುದಾರನಾಗುತ್ತಾನೆ, ಅಲ್ಲಿಯವರೆಗೆ ವಕೀಲ ಹಸ್ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಬಹಳ ಆಸ್ಥೆಯಿಂದ ಉಯಿಲು ಬರೆದಿರುತ್ತಾನೆ.

ಪಿಹೆಚ್‍ಡಿ ಪದವಿ ಪಡೆದ ನಂತರ, ಒಮ್ಮೆ ಮೋನಾಳನ್ನು ಭೇಟಿಯಾಗಲು ಬಂದ ನೂರಿಗೆ, ಗೆಳೆಯನೊಡನೆ ವಾಸವಿದ್ದ ಆಕೆಯನ್ನು ನೋಡಿ ಇರಿದಂತಾಗುತ್ತದೆ. ಈ ಘಟನೆಯಿಂದ ಮೋನಾಳ ಆಕರ್ಷಣೆಯಿಂದ ಹೊರಬರುವ ನೂರಿ, ತನ್ನ ತಂದೆಯ ಕಣ್ಮರೆಯ ಕುರಿತು ವಿಚಾರಿಸಲು, ಹತ್ತು ವರ್ಷಗಳ ನಂತರ ಸ್ವಿಟ್ಜರ್‍ಲೆಂಡಿಗೆ ಬರುತ್ತಾನೆ. ಅಲ್ಲಿ ಆ ಸ್ವಿಸ್ ಹೆಂಗಸಿನ ಭೇಟಿಯೂ ಆಗುತ್ತದೆ. ಆಕೆ, ತಾನು ತಿಳಿದಂತೆ ಪಿತೂರಿಯ ಭಾಗವಾಗಿರದೇ, ತನ್ನ ತಂದೆ ಅಪರಿಮಿತವಾಗಿ ಪ್ರೀತಿಸಿದ ಹೆಣ್ಣೆಂಬುದು ಅರಿವಾಗುತ್ತದೆ.

ಕಾಡುವ ಒಂಟಿತನ ಹಾಗೂ ತನ್ನದಲ್ಲದ ದೇಶದಲ್ಲಿರಲು ಮನಸಾಗದೇ, ಕೈರೊಗೆ ಮರಳುವ ನೂರಿಗೆ ಮನೆಯ ಕೆಲಸದವರಿಂದ ಅಭೂತಪೂರ್ವ ಸ್ವಾಗತ ದೊರೆಯುತ್ತದೆ. ಚಾತಕ ಪಕ್ಷಿಯಂತೆ ಕಾಯುತ್ತಿದ್ದ ನೈಮಾ ಸಹ ಓಡೋಡಿ ಬರುತ್ತಾಳೆ. ತನ್ನ ತಂದೆ, ತಾಯಿ, ಮೋನಾಳ ಜೊತೆಗಿನ ನೆನಪುಗಳನ್ನೊತ್ತ ಮನೆಯು ನೂರಿಗೆ ಹೊಸ ಹುಮ್ಮಸ್ಸನ್ನು ನೀಡುತ್ತದೆ. ತಂದೆಯ ಕೋಣೆಯನ್ನು ಹೊಕ್ಕುವ ನೂರಿ ತಂದೆಯ ಬಟ್ಟೆಗಳನ್ನು, ಕೋಟುಗಳನ್ನು ತೊಟ್ಟು ಪರೀಕ್ಷಿಸುತ್ತಾನೆ. ತುಸು ಬಿಗಿಯಾದಂತೆನಿಸುತ್ತದೆ. ಅಲ್ಲಿಯೇ ಇದ್ದ ತಂದೆಯ ರೈನ್‍ಕೋಟ್ ಕಣ್ಣಿಗೆ ಬೀಳುತ್ತದೆ. ತಂದೆ ಮರಳಿ ಬಂದಾಗ ಇದು ಬೇಕಾಗಬಹುದು ಎಂಬ ಆಲೋಚನೆಯೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಒಬ್ಬರ ಕಣ್ಮರೆ, ಅವಲಂಬಿತ ವ್ಯಕ್ತಿಗಳ ಮೇಲೆ ಉಂಟು ಮಾಡಬಹುದಾದ ಸಾಮಾಜಿಕ, ಆರ್ಥಿಕ, ಮಾನಸಿಕ ಪರಿಣಾಮಗಳನ್ನು ವಿಸ್ತೃತವಾಗಿ ಛೇದಿಸುತ್ತಾ ಸಾಗುತ್ತದೆ ‘ಅನಾಟಮಿ ಆಫ್ ಎ ಡಿಸಪಿಯರೆನ್ಸ್’. ಹಾಗಾಗಿ, ಈ ಕಾದಂಬರಿಯಲ್ಲಿ ಕಮಲ್‍ಪಾಷಾ ನ ಅಪಹರಣದ ಕುರಿತು ಯಾಕೆ, ಏನು, ಯಾರು, ಹೇಗೆ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಬದಲಿಗೆ ತಂದೆಯ ಅಪಹರಣ ಮಗ, ಮಲತಾಯಿ, ಮನೆಗೆಲಸದವರ ಜೀವನವನ್ನು ಮಾರ್ಪಡಿಸಿದ ಬಗೆ ಹೆಚ್ಚು ತೆರೆದುಕೊಳ್ಳುತ್ತದೆ. ವಿಯೋಗದಿಂದಾಗುವ ನಷ್ಟಕ್ಕಿಂತ, ಗೋಜಲಾಗಿರುವ, ಸಂಕೀರ್ಣತೆಯಿಂದ ಕೂಡಿದ ಭಾವನೆಗಳನ್ನು ತಿಳಿಗೊಳಿಸುವ, ಅವುಗಳಿಗೆ ಸ್ಪಷ್ಟ ರೂಪ ಕೊಡುವ ರಹದಾರಿಯಂತೆ ‘ಕಣ್ಮರೆ’ಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

ತಂದೆಯ ಅಪಹರಣದ ನಂತರ ನೂರಿ ಮೋನಾಳೆಡೆಗಿದ್ದ ತನ್ನ ವ್ಯಾಮೋಹದಿಂದ ದೂರಾಗುತ್ತಾನೆ, ತಾಯಿಯ ಸಾವಿನ ಕಾರಣ ತಿಳಿದುಕೊಳ್ಳುವ ಹಪಹಪಿಯನ್ನು ಬದಿಗಿರಿಸುತ್ತಾನೆ. ಇದುವರೆಗೂ ಕಡೆಗಣಿಸಿದ್ದ ನೈಮಾಳ ಮಮತೆಯ ಅರಿವಾಗುತ್ತದೆ. ದೂರದ ಇಂಗ್ಲೆಂಡಿನಲ್ಲಿ, ಸ್ವಿಟ್ಜರ್ಲೆಂಡಿನಲ್ಲಿ ತನ್ನವರಿಲ್ಲದೇ ಒಂಟಿಯೆಂದೆನಿಸಿದ್ದ ನೂರಿಗೆ ಕೈರೋದಲ್ಲಿರುವ ತನ್ನ ಮನೆಗೆ ಬರುತ್ತಿದ್ದಂತೆಯೇ ಮನೆಗೆಲಸದ ಆಮ್-ಸಮೀರ್ ಮತ್ತು ಅವನ ಮಗ ಗಮಾಲ್ ತೋರಿದ ಕಾಳಜಿ, ವಾತ್ಸಲ್ಯ, ಪ್ರೀತಿ ಅವನ ಕಣ್ತೆರೆಸುತ್ತದೆ. ದೂರದ ಸ್ವಿಟ್ಜರ್ಲೆಂಡಿನಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೇ, ತಂದೆಯೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಲೇ ಜೀವನ ಸವೆಸುತ್ತಿರುವ ಬಿಯಟ್ರಿಸ್ ಬೆನಾಮ್ಯೂರ್ ನೂರಿಗೆ ಪ್ರೇಮದ ಔನ್ನತ್ಯವನ್ನು ಪರಿಚಯಿಸುತ್ತಾಳೆ.

ಈ ಕಾದಂಬರಿಯಲ್ಲಿ ಬರುವ ಮಹಿಳಾ ಪಾತ್ರಗಳು ದಿಟ್ಟತನದ ರೂಪಕಗಳಂತೆ ಕಂಡುಬಂದರೂ, ನೇಪಥ್ಯಕ್ಕೆ ಸರಿದಂತೆ ಜೊತೆಗೆ ತಂದೆ-ಮಗನ ಹಿತಕ್ಕೆ ಬಲಿಯಾದ ಜೀವಗಳಂತೆ ಭಾಸವಾಗುತ್ತದೆ. ನೂರಿಯ ಪುತ್ರ ವಾತ್ಸಲ್ಯಕ್ಕೆ ಹಂಬಲಿಸುವ ನೈಮಾ, ತೆರೆಮರೆಯಲ್ಲಿಯೇ ಪ್ರಿಯಕರನ ಪ್ರೇಮಕ್ಕೆ ಹಲುಬುವ ನಿಸ್ವಾರ್ಥ ಪ್ರೇಮಿ ಬಿಯಟ್ರಿಸ್ ಬೆನಾಮ್ಯೂರ್, ಕಮಲ್‍ನ ಪತ್ತೆಗಾಗಿ ಶ್ರಮಿಸಿದ, ಅವನ ಅನುಪಸ್ಥಿತಿಯಲ್ಲಿಯೂ ಮಲಮಗನ ವಿದ್ಯಾಭ್ಯಾಸಕ್ಕೆ ಪ್ರಾಮಾಣಿಕವಾಗಿ ಒತ್ತುಕೊಟ್ಟ ಮೋನಾ, ತಂದೆಯ ಪ್ರಗತಿಗೆ ಅಡ್ಡಿಯಾದವಳಂತೆ ಚಿತ್ರಿತಳಾಗಿರುವ, ಕಾರಣವೇ ಗೊತ್ತಾಗದ ದಿಢೀರ್ ಸಾವಿಗೆ ತುತ್ತಾದ ತಾಯಿ- ಈ ಎಲ್ಲರ ಪಾತ್ರಗಳು ಓದುಗನನ್ನು ಕಾಡದೇ ಇರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಈ ಮಹಿಳಾ ಪಾತ್ರಗಳು ಪುರುಷ ಪಾರಮ್ಯಕ್ಕೆ ಸಿಲುಕಿ ನಲುಗಿದಂತೆ ಕಾಣುತ್ತದೆ.

ರಾಜಕೀಯ ಸಮಸ್ಯೆಗಳನ್ನು ಚಿತ್ರಿಸುವ ಇರಾದೆಯುಳ್ಳ ಹಲವು ಕಾದಂಬರಿಗಳು ಸಾಮಾನ್ಯವಾಗಿ ಎರಡು ಮಾರ್ಗಗಳನ್ನು ಕಂಡುಕೊಳ್ಳುತ್ತವೆ. ಕೆಲವು ಕಾದಂಬರಿಗಳು ರೂಪಕಗಳ ಸಹಾಯದಿಂದ ಇಲ್ಲವೇ ಕಾಲ್ಪನಿಕ ನೆಲೆಗಟ್ಟಿನಲ್ಲಿ ರಾಜಕೀಯ ಸಮಸ್ಯೆಗಳನ್ನು ವಿಶ್ಲೇಷಿಸಿದರೆ, ಉಳಿದ ಹಲವು ಕಾದಂಬರಿಗಳು ಬಹುದೊಡ್ಡ ರಾಜಕೀಯ ಅಥವಾ ಪ್ರಭುತ್ವದ ಹಿನ್ನೆಲೆಯಲ್ಲಿ, ಕುಟುಂಬವೊಂದು ಅಥವಾ ಕೆಲವರು ಹೇಗೆ ಸಮಸ್ಯೆಗೆ ಈಡಾಗುತ್ತಾರೆ ಎಂಬುದನ್ನು ಕುರಿತಾಗಿರುತ್ತದೆ. ಹಲವು ಕೃತಿಗಳು ಎರಡನೇ ಮಾರ್ಗವನ್ನು ಆಯ್ದುಕೊಳ್ಳುತ್ತಿವೆ. ಕಾದಂಬರಿಯ ಚೌಕಟ್ಟಿನ ಹಿನ್ನೆಲೆಯಲ್ಲಿ ಈ ಆಯ್ಕೆ ಸರಿ ಎನಿಸಿದರೂ, ಇಂತಹ ಮಾದರಿಗಳು ರಾಜಕೀಯ ವಿಡಂಬನೆ ಮಾಡುವುದರಲ್ಲಿ ಅಥವಾ ಪ್ರಭುತ್ವದ ಮೂಲಭೂತ ಗುಣಗಳನ್ನು ಪರಿಶೀಲಿಸುವಲ್ಲಿ ಯಶಸ್ವಿಯಾಗುತ್ತವೆಯೇ ಎಂಬ ಅನುಮಾನಗಳಿವೆ.

ಮಥರ್ ಅವರ ಕಾದಂಬರಿಯು ಈ ಎರಡನೇ ಮಾರ್ಗದಲ್ಲಿ ಚಲಿಸುತ್ತದೆ. ಮಧ್ಯ ಪ್ರಾಚ್ಯ ದೇಶಗಳ ಲೇಖಕರು ಹಲವು ಕಾರಣಗಳಿಂದ ತಮ್ಮ ದೇಶ ತೊರೆದು ಐರೋಪ್ಯ, ಅಮೇರಿಕಾ ಅಥವಾ ಏಷಿಯಾದ ಇನ್ನಿತರ ರಾಷ್ಟ್ರಗಳಲ್ಲಿ ವಾಸವಿರುವುದು ಸರಿಯಷ್ಟೇ. ವಿಶೇಷವಾಗಿ ಪ್ರಭುತ್ವದ ಸಮಸ್ಯೆಯಿಂದ ಲಿಬಿಯ, ಸಿರಿಯ, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಇನ್ನಿತರ ದೇಶದಿಂದ ಅಮೇರಿಕ ಮತ್ತು ಐರೋಪ್ಯ ರಾಷ್ಟ್ರಗಳಿಗೆ ವಲಸೆ ಹೋಗಿರುವ ಲೇಖಕರು ತಮ್ಮ ಬರಹದಲ್ಲಿ, ಇದೀಗ ಚಾಲ್ತಿಯಲ್ಲಿರುವ ಕ್ರಿಯೇಟಿವ್ ರೈಟಿಂಗ್ ಕೋರ್ಸ್(ಸೃಜನಶೀಲ ಬರವಣಿಗೆಯ ಪಠ್ಯ)ಅನ್ನು ಅನುಸರಿಸುತ್ತಾರೆ.

ಈ ಮಾದರಿಯ ಕೃತಿಗಳು ಸಾಮಾನ್ಯವಾಗಿ ನಾಯಕ/ಕಿ ಕೇಂದ್ರಿತವಾಗಿದ್ದು, ಅವರ ಪ್ರಯಾಣವನ್ನು ರಾಜಕೀಯ, ಸಾಮಾಜಿಕ ಅಥವಾ ಚಾರಿತ್ರಿಕ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ. ಈ ಚಿತ್ರಣದಲ್ಲಿ ಪ್ರೇಮ, ಕಾಮವನ್ನು ಒಳಗೊಂಡಂತೆ ಕೌತುಕತೆಯನ್ನು ಕಾಪಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿಯೇ ಮೋನಾಳನ್ನು ಮಗನು ಮೋಹಿಸುತ್ತಿರುವಾಗಲೇ ತಂದೆ ಮದುವೆಯಾಗುವಂತಹ, ಕಾದಂಬರಿಗೆ ಅಗತ್ಯವಿಲ್ಲದ ಕೌತುಕತೆಯನ್ನು ನೀಡಲಾಗಿದೆ. ಇಷ್ಟಾದರೂ ವಸ್ತುನಿಷ್ಠತೆ, ತಾರ್ಕಿಕತೆ ಅಥವಾ ಅರಬ್ ದಂಗೆಯ ರಾಜಕೀಯ ಪರಿಣಾಮಗಳಿಗಿಂತ ಹೆಚ್ಚಾಗಿ, ಭಾವನಾತ್ಮಕ ಹಿನ್ನೆಲೆಯಲ್ಲಿ ಹಿಷಮ್ ಮಥರ್‍ರವರ ಈ ಕಾದಂಬರಿ ಹೆಚ್ಚು ಅಪ್ಯಾಯಮಾನವಾಗುತ್ತದೆ.

ಪ್ರತಿಕ್ರಿಯಿಸಿ