ಡಿ. ಆರ್. ನಾಗರಾಜ್ ಉಪನ್ಯಾಸ : ಪ್ರಗತಿ ಮತ್ತು ಅಭಿವೃದ್ಧಿ (#Progress & Development)

1997ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಐವತ್ತು ವರ್ಷಗಳಾದ ಸಂದರ್ಭದಲ್ಲಿ ಮಣಿಪಾಲದ ಮಾನವಿಕ ಅಧ್ಯಯನಗಳ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಉಪನ್ಯಾಸ ಸರಣಿಯಲ್ಲಿ ’ಭಾರತೀಯ ಕಲ್ಪನೆಯ ಸಮಕಾಲೀನ ರೂಪಗಳು’ ಎಂಬ ವಿಷಯದ ಮೇಲೆ ಶ್ರೀಯುತ ಡಿ. ಆರ್. ನಾಗರಾಜ್ ಅವರು ಇಂಗ್ಲೀಷಿನಲ್ಲಿ ಕೊಟ್ಟ ಮೂರು ದಿನಗಳ ಉಪನ್ಯಾಸ ಮಾಲಿಕೆಯ ಮೂರನೇ ಉಪನ್ಯಾಸ ‘ಪ್ರಗತಿ ಮತ್ತು ಅಭಿವೃದ್ಧಿ’ ಇಲ್ಲಿದೆ. ಈ ಉಪನ್ಯಾಸದ ಕನ್ನಡ ಅನುವಾದವನ್ನು ಇಲ್ಲಿ ಮಾಡಲಾಗಿದೆ.

ಈ ಮಾಲಿಕೆಯ ಮೊದಲ ಉಪನ್ಯಾಸ – ‘ರಾಷ್ರೀಯತೆ’. ಧ್ವನಿ ಮತ್ತು ಬರಹರೂಪ ವನ್ನು ಇಲ್ಲಿ ಓದಿ : http://ruthumana.com/2018/05/21/drnagarjonnationalism/

ಈ ಮಾಲಿಕೆಯ ಎರಡನೇ ಉಪನ್ಯಾಸ – ‘ಸೆಕ್ಯುಲರಿಸಂ’. ಧ್ವನಿ ಮತ್ತು ಬರಹರೂಪ ವನ್ನು ಇಲ್ಲಿ ಓದಿ : https://ruthumana.com/2018/11/03/drnagarjonsecularism/

ಭಾರತದ ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ನಾವು ಮೊದಲು  ಜಾಗತಿಕ ಬಂಡವಾಳ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕು. ಅಥವಾ ನನ್ನಿಷ್ಟದ ಒಂದು ನುಡಿಗಟ್ಟನ್ನು ಬಳಸುವುದಾದರೆ,  ಜಾಗತಿಕ ಬಂಡವಾಳ ವ್ಯವಸ್ಥೆಯ ಸಾಂಸ್ಕೃತಿಕ ತರ್ಕವನ್ನು ಮಾಡಿಕೊಳ್ಳುವುದು ಕಡ್ಡಾಯ. ಯಾಕೆಂದರೆ ಸಮಾಜವೊಂದರಲ್ಲಿ ನ್ಯಾಯವನ್ನು ಅರಿಯುವ ಮತ್ತು ಆಚರಣೆಯಲ್ಲಿ ತರುವ ಮೂಲಮಾದರಿಯ ಬದಲಾವಣೆ ಆಗುತ್ತಿದೆ ಅಂತಾದರೆ ಭವಿಷ್ಯವನ್ನು ಕುರಿತಂತೆ ಆ ಸಮಾಜದಲ್ಲೆನೋ ವ್ಯತ್ಯಯ ಉಂಟಾಗಿದೆ ಎಂದೇ ಅರ್ಥ. ಹಾಗಾದರೆ ಈ ಬದಲಾವಣೆಗೆ ಕಾರಣವೇನು? ಈ ಬದಲಾವಣೆಗೆ ಭಾರತದಲ್ಲಿ ಸಂಭವಿಸಿದ ಯಾವುದೋ ಸಂಗತಿ ಕಾರಣವೆ? ಈಗ ಈ ಪ್ರಶ್ನೆಗೆ ಉತ್ತರಿಸಲು  ನಾನು ಭಾರತದಲ್ಲಿ ನಮಗೆ ಸಿಗುವ  ಪರಿಕರಗಳನ್ನು ಬಿಟ್ಟು ಪಶ್ಚಿಮದ ಪರಿಕರಗಳನ್ನು ಬಳಸಿಕೊಳ್ಳುತ್ತೇನೆ.

ಸೈದ್ಧಾಂತಿಕವಾಗಿ ಇದು ಬೇರೆ ರೀತಿಯ ವಿಧಾನ. ಈ ಕ್ರಮವು ನಮ್ಮೆದುರಿಗೆ ಒಂದು ಜಾಗತಿಕ ಅರ್ಥ ವ್ಯವಸ್ಥೆ ಇದೆ ಎಂಬುದನ್ನು ಕಲ್ಪಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಜಾಗತಿಕ ಬಂಡವಾಳಶಾಹಿ ಎಂಬ ವಿದ್ಯಮಾನವಿದೆ  ಎಂಬುದನ್ನು ಕಲ್ಪಿಸಿಕೊಳ್ಳುತ್ತದೆ.  ಒಂದು ಅಂತರರಾಷ್ಟ್ರೀಯ ಅರ್ಥ ವ್ಯವಸ್ಥೆ  ಇದೆ ಮತ್ತು ಅದಕ್ಕೆ ತನ್ನೊಳಗೆ ಅಂತರ್ಗತವಾದ  ತರ್ಕವನ್ನು ಜಗತ್ತಿನ ಇತರ ಭಾಗಗಳ ಮೇಲೆ ಹೇರಲು ಇನ್ನಿಲ್ಲದ ತವಕ. ಹಾಗಾಗಿ ಇದೊಂದು ವಿಭಿನ್ನ ರೀತಿಯ ವೈಚಾರಿಕ ವಿಧಾನ, ಸೈದ್ಧಾಂತಿಕ ವಿಧಾನ.  ಒಂದು ನಿರ್ದಿಷ್ಟ ವಿದ್ಯಮಾನದ ಸೂಕ್ಷ್ಮ ಸ್ತರದ ವಿಶ್ಲೇಷಣೆಯ ಬದಲು,  ಸಮಗ್ರದಲ್ಲಿನ ಒಂದು ಅಂಶವನ್ನಿಟ್ಟುಕೊಂಡು ವಿಶ್ಲೇಷಿಸುವ ಬದಲು  ಅದನ್ನು ಒಂದು ಒಂದು ವಿಸ್ತೃತ ನೆಲೆಯಲ್ಲಿ, ಅಂಶವನ್ನು ಸಮಗ್ರದ ಹಿನ್ನೆಲೆಯಲ್ಲಿ ಇಟ್ಟು ನೋಡುವ ಕ್ರಮ ಇದು ಎನ್ನಬಹುದು. ಇದು ಮೂಲಭೂತವಾಗಿ ನನ್ನ ವೈಚಾರಿಕ ವಿಧಾನವನ್ನು ರೂಪುಗೊಳಿಸಿದ ಒಂದು ನಿರ್ಣಾಯಕ ನಂಬಿಕೆ.

ಪಶ್ಚಿಮದಲ್ಲಿ ಏನಾಗುತ್ತಿದೆ ಹಾಗಾದರೆ? ಏನಾಗುತ್ತಿದೆ ಜಗತ್ತಿನ  ಭೌಗೋಲಿಕ  ಮತ್ತು ರಾಜಕೀಯ ಶಕ್ತಿಕೇಂದ್ರಗಳಲ್ಲಿ? ಜಗತ್ತಿನ ಅರ್ಥ ವ್ಯವಸ್ಥೆಯ ಅತಿ ಬಲಶಾಲಿ ಕೇಂದ್ರಗಳಲ್ಲಿ ಈಗ ಏನು ನಡೆಯುತ್ತಿದೆ?  ಇದನ್ನು ಪ್ರಚಲಿತ ಮಾದರಿಯ ಭಾಷೆಯಲ್ಲಿ ಹೇಳುವುದಾದರೆ,  ವಿಶ್ವದ ಎಲ್ಲೆಡೆ ಈಗ ಉತ್ಪಾದನೆ ಎನ್ನುವ ವಿದ್ಯಮಾನದ ಪರಿಕಲ್ಪನೆಯೇ ಬದಲಾಗುತ್ತಿದೆ. ವಿಶ್ಲೇಷಣಾ ಪರಿಕರಗಳ ಪರಿಕಲ್ಪನೆಯೂ ಬದಲಾಗುತ್ತಿದೆ. ಅದೂ ಅಮೂಲಾಗ್ರವಾಗಿ. ಜಾಗತಿಕ ಅರ್ಥವ್ಯವಸ್ಥೆಯ  ಮುಂಚೂಣಿಯಲ್ಲಿರುವ ದೇಶಗಳಲ್ಲಿ ಕೂಡ ಈ ಬದಲಾವಣೆ ನಡೆಯುತ್ತಿದೆ. ಅಮೇರಿಕ, ಜಪಾನ್, ಜರ್ಮನಿಯನ್ನೇ ತೆಗೆದುಕೊಳ್ಳಿ.  ಮುಂಚೂಣಿಯಲ್ಲಿರುವ ದೇಶಗಳ ಒಂದು ಪಟ್ಟಿ ತಯಾರಿಸಿದರೆ ಉತ್ಪಾದನೆ ಎನ್ನುವುದರ ಪರಿಕಲ್ಪನೆಯೇ  ಅಥವಾ  ರಾಜಕೀಯ ಅರ್ಥವ್ಯವಸ್ಥೆ ಎನ್ನುವುದರ ಪರಿಕಲ್ಪನೆಯೇ  ಆಮೂಲಾಗ್ರವಾಗಿ ಬದಲಾಗುತ್ತಿದೆ.  ಈ ಪಲ್ಲಟವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಕೈಗಾರಿಕೋತ್ತರ ಸಮಾಜದ ಒಂದು ವಿಸ್ತೃತ ವಿಮರ್ಶೆ ನಡೆಯಬೇಕಾಗಿದೆ. ನನ್ನ ಮಿತ್ರರೊಬ್ಬರು ಹೇಳುವ ಹಾಗೆ ಅದು ಕೈಗಾರಿಕೋತ್ತರ ಬಂಡವಾಳಶಾಹಿ. ಮೇಲ್ನೋಟಕ್ಕೆ ನಿಲುಕದ ಹಾಗೆ ಮೊದಲ ಜಗತ್ತಿನ ಅಂತರರಾಷ್ಟ್ರೀಯ ಬಂಡವಾಳದಾರರು ಮತ್ತು ತೃತೀಯ ಜಗತ್ತಿನ ಬಡ ಹೂಡಿಕೆದಾರರ ನಡುವೆ ಒಂದು ಗಮನಾರ್ಹ ವಿನಿಮಯ ನಡೆಯುತ್ತದೆ. ಇವೆರಡು ಕ್ಷೇತ್ರಗಳ ನಡುವೆ ನಡೆಯುವ ಈ ವಿನಿಮಯದ ಸ್ವರೂಪವನ್ನು ಅರ್ಥ ಮಾಡಿಕೊಂಡರೆ ಆಗ ನಮಗೆ ಭಾರತದಲ್ಲಿ ನಡೆಯುತ್ತಿರುವ ಮೂಲಮಾದರಿಯ ಪಲ್ಲಟ ಅರ್ಥವಾಗುತ್ತದೆ.

ಅಂತರರಾಷ್ಟ್ರೀಯ ಅರ್ಥ ವ್ಯವಸ್ಥೆಯ ಅಥವಾ ಜಾಗತಿಕ ಬಂಡವಾಳಶಾಹಿಯ  ಪ್ರಮುಖ ಭೌಗೋಲಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ   ಬುದ್ದಿಪೂರ್ವಕವಾಗಿಯೇ  ನಡೆಯುತ್ತಿರುವ ಒಂದು ಪ್ರಯತ್ನದ ಬಗೆಗೆ ಹೇಳುತ್ತೇನೆ. ಜಾಗತಿಕ ಮಟ್ಟದಲ್ಲಿ ಅಂತರರಾಷ್ಟ್ರೀಯ ಉತ್ಪಾದನೆಯ ಕ್ಷೇತ್ರಗಳಿಂದ ದಿನನಿತ್ಯ ಬಳಸುವ ವಸ್ತುಗಳನ್ನು ಹೊರಹಾಕುತ್ತಲಿದ್ದಾರೆ.  ಏನು ಹಾಗಂದರೆ? ಇನ್ನೂ ಈ ಪ್ರಯೋಗ ಯಶಸ್ವಿಯಾಗಿಲ್ಲ. ಆದರೆ ಇದೊಂದು ಎಚ್ಚರಿಕೆಯಿಂದ ಯೋಚಿಸಿ ಮಾಡಿದ ಪ್ರಯೋಗ. ಉತ್ಪಾದನೆಯ ಮೂಲಮಾದರಿಯನ್ನೇ ಬದಲಾಯಿಸುವ ಪ್ರಯೋಗ.  ಪಶ್ಚಿಮದಲ್ಲಿ ಈಗ ಇದು ನಡೆಯುತ್ತಿದೆ.  ಜನಸಾಮಾನ್ಯರಿಗೆ ದಿನನಿತ್ಯ ಪ್ರಯೋಜನಕ್ಕೆ ಬರುವ ವಸ್ತುಗಳನ್ನು ನಿಷಿದ್ಧಗೊಳಿಸುವ ಮೂಲಕ ಅವರು ಅದನ್ನು ನಡೆಸುತ್ತಿದ್ದಾರೆ.

ರಾಜ್ಯಶಾಸ್ತ್ರಜ್ಞರಾದ ಕಾರ್ಲ್ ಹೇಳ್ತಾರೆ ಇದೊಂದು ನಿರ್ಣಾಯಕ ಬಹಿಷ್ಕಾರ. ಅದು ವಾಸ್ತವದಲ್ಲಿ ನಡೆದ ಬಹಿಷ್ಕಾರ ಆಗಿರಲಿಕ್ಕಿಲ್ಲ. ಅದರರ್ಥ ಏನೆಂದರೆ ಈಗ ಜಾಗತಿಕ ಬಂಡವಾಳಶಾಹಿಯ ಪ್ರಮುಖ ರಾಷ್ಟ್ರಗಳು ತೃತೀಯ ಜಗತ್ತಿನಲ್ಲಿ ತಯಾರಿಸಲಾದ ಬಟ್ಟೆಗಳನ್ನು ಖರೀದಿಸುತ್ತಿವೆ. ಬೇಳೆಕಾಳುಗಳೂ ತೃತೀಯ ಜಗತ್ತಿನಿಂದ ಬರುತ್ತಿವೆ. ತಮಗೆ ಮುಖ್ಯವೆನಿಸುವ ಎಲ್ಲಾ  ನಿತ್ಯೋಪಯೋಗಿ ವಸ್ತುಗಳ ಸಲುವಾಗಿ ಅವರು ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ಅವಲಂಬಿತರಾಗಿದ್ದಾರೆ. ಅವಲಂಬಿತಾರಾಗಿದ್ದಾರೆ ಎಂದರೆ ಅವರು ಆ ವಸ್ತುಗಳ ಉತ್ಪಾದನೆಯಲ್ಲಿ ಸಮಯ ಮತ್ತು ಶಕ್ತಿಯನ್ನು ವ್ಯಯಿಸಲು ಇಚ್ಛಿಸುತ್ತಿಲ್ಲ ಎಂದರ್ಥ. ಹೀಗಾಗಿ ಅವರು ತಮ್ಮ ಸಾಮಾಜಿಕ ಶಕ್ತಿಯನ್ನು ಬೇರೆ ವಿಷಯಗಳ ಮೇಲೆ ವ್ಯಯಿಸುತ್ತಾರೆ, ಅಂದರೆ ಅವರಿಗೆ ಆಸಕ್ತಿ ಇರುವುದು ವಿಶ್ವದೆಲ್ಲೆಡೆ ತಮ್ಮ ಅಧಿಕಾರವನ್ನು ಸ್ಥಾಪಿಸಬಲ್ಲ ಸರಕುಗಳು. ಈ ಪಲ್ಲಟ ಖಂಡಿತಕ್ಕೂ ಒಂದು ನಾಟಕೀಯ ಪಲ್ಲಟ. ಅಮೇರಿಕ, ಜರ್ಮನಿ ಮತ್ತು ಜಪಾನ್- ಈ ಮೂರು ರಾಷ್ಟ್ರಗಳ ಅರ್ಥ ವ್ಯವಸ್ಥೆಯ ಮೇಲೆ ಮಾಡಿದ ಅಧ್ಯಯನವನ್ನು ತೆಗೆದುಕೊಳ್ಳಿ. ಮುಖ್ಯವಾಗಿ ಅಮೇರಿಕದಲ್ಲಿ ನೋಡಿ, ಅದು ಉತ್ಪಾದಿಸುವದು ಬರೀ ಅವರ ವಿಶ್ವದೆಲ್ಲೆಡೆ ಅಧಿಕಾರವನ್ನು ಬಲಪಡಿಸುವ ಸರಕುಗಳನ್ನು.

ಇನ್ನೂ ಸ್ಪಷ್ಟವಾದ ಆಕಾರ ಪಡೆಯದ ಒಂದು ಪ್ರಮೇಯವನ್ನು ನಿಮ್ಮ ಮುಂದಿಡುತ್ತೇನೆ. ಏನೆಂದರೆ, ಅಧಿಕಾರಕ್ಕೂ  ನಿತ್ಯೋಪಯೋಗಿ ವಸ್ತುಗಳಿಗೂ  ನಂಟಿಲ್ಲ. ವಸಾಹತುಶಾಹಿ ಕಾಲದಲ್ಲಿ ಬೇರೆಯದೇ  ಸನ್ನಿವೇಶ ಇತ್ತು. ಗಾಂಧಿಯವರಿಗೆ  ರಾಷ್ಟ್ರೀಯತಾವಾದಿ ಚಳುವಳಿಯನ್ನು ಹುಟ್ಟುಹಾಕುವುದು ಅನಿವಾರ್ಯವಾಗಿತ್ತು. ಪರ್ಯಾಯ ಮಾರ್ಗವಿರಲಿಲ್ಲ.  ಅವರು ವಿದೇಶಿ ವಸ್ತುಗಳನ್ನು ಬಹಿಷ್ಕರಿಸಲು ಕರೆ ಕೊಟ್ಟಾಗ ಹೇಳಿದ್ದೇನೆಂದರೆ ಭಾರತದ ನೇಕಾರರು ಸಂಕಷ್ಟದಲ್ಲಿದ್ದಾರೆ. ಆ ಹೊತ್ತಿಗೆ ನಮ್ಮ ದೇಶೀಯ ನೇಯ್ಗೆ ಸಂಕಷ್ಟದಲ್ಲಿತ್ತು.  ವಿದೇಶದಿಂದ ಸರಕು ಬರುತ್ತಿತ್ತು. ಹೀಗೆ, ವಸಾಹತುಶಾಹಿಯ ಆರಂಭದ ದಿನಗಳಲ್ಲಿ, ವಸಾಹತುಶಾಹಿ ಮತ್ತು ಬಂಡವಾಳಶಾಹಿ ಎರಡೂ ಒಟ್ಟಿಗೇ ಶುರುವಾದ ಪ್ರಾರಂಭಿಕ ಹಂತದಲ್ಲಿ ದಿನನಿತ್ಯ ಬಳಸುವ ವಸ್ತುಗಳ ಉತ್ಪಾದನೆ ಎಷ್ಟು ಮುಖ್ಯವಾಯಿತೆಂದರೆ ದೇಶಿಯ ಅರ್ಥವ್ಯವಸ್ಥೆಯ ಕೆಲವು ಮರ್ಮ ಭಾಗಗಳು ಧ್ವಂಸಗೊಂಡವು. ನಾವು ಅದಾಗಲೇ ಅರ್ಧ ಸೋತಿದ್ದೆವು. ಢಾಕಾ, ಪಶ್ಚಿಮ ಬಂಗಾಲ, ತಮಿಳುನಾಡು, ಕರ್ನಾಟಕ ಹೀಗೆ ಈ ಎಲ್ಲ ಪ್ರಾಂತ್ಯದ ನೇಕಾರರು ಎಲ್ಲ ವಸಾಹತು-ಬಂಡವಾಳಶಾಹಿಯ ಬಲಿಪಶುಗಳಾದರು.

ಆದರೆ ಇವತ್ತು ಪರಿಸ್ಥಿತಿ ಸಂಪೂರ್ಣ ತಿರುವುಮುರುವಾಗಿದೆ. ಯಾಕೆಂದರೆ ಪಶ್ಚಿಮವು ಕೇವಲ ಅಧಿಕಾರವನ್ನು ಉತ್ಪಾದಿಸುತ್ತದೆ ಮತ್ತು ಅಧಿಕಾರವು ಉತ್ಪಾದನೆಯ ಮೂರು ವಿಭಾಗಗಳಲ್ಲಿ ನೆಲೆಸಿರುತ್ತದೆ. ಮೊದಲನೆಯದು ಹೈಟೆಕ್ ವಿಭಾಗ. ಪಶ್ಚಿಮದಲ್ಲಿ ಸರಕುಗಳ ಸಾಗಣೆಯ ಮೇಲೆ ಒಳ್ಳೆಯ ಸಂಶೋಧನೆ ನಡೆದಿದೆ. ಕೆಲವು ನವ್ಯೋತ್ತರ ಚಿಂತಕರ ಪ್ರಕಾರ ಅಮೇರಿಕದಲ್ಲಿ ಇವತ್ತು ಸರಕುಗಳು ಭೌತಿಕವಾಗಿ ಸಾಗಾವಣೆ ಆಗುವುದೇ ಇಲ್ಲ. ಹೀಗೆ ಅಮೇರಿಕದ ಆರ್ಥ ವ್ಯವಸ್ಥೆ ಬೇರೆ ರೀತಿಯಲ್ಲಿ ರೂಪುಗೊಳ್ಳುತ್ತಲಿದೆ. ಹೈಟೆಕ್ ವಿಭಾಗವನ್ನು ಮಾಹಿತಿ ವಿಭಾಗ ಎಂದು ಕರೆಯವುದು ಈಗ ಹೆಚ್ಚು ಪ್ರಚಲಿತದಲ್ಲಿದೆ. ಅದು ಭೌತಿಕವಾಗಿ ಇರುವ ಸರಕುಗಳೊಂದಿಗೆ ವ್ವಹರಿಸುವದಿಲ್ಲ, ಅದು ಸರಕುಗಳಿಗೆ ಸಂಬಂಧಪಟ್ಟ ಮಾಹಿತಿಯೊಂದಿಗೆ ವ್ಯವಹರಿಸುತ್ತದೆ. ಇವತ್ತು ನಮ್ಮ ಪರಿಸ್ಥಿತಿ ಹೇಗಿದೆ ಎಂದರೆ ಭಾರತದ ಮಾನವ ಸಂಪನ್ಮೂಲಗಳು ಪಶ್ಚಿಮಕ್ಕೆ ರವಾನೆಯಾಗುತ್ತಿದೆ.  ಅಮೇರಿಕವೊಂದೇ ಇಂದು ಅತಿ ಹೆಚ್ಚು, ಇಲ್ಲಿ ಶೋಷಣೆ ಎಂಬ ಪದವನ್ನು ಬಳಸಲು ಇಚ್ಛಿಸುವುದಿಲ್ಲ,  ಅಮೇರಿಕವೊಂದೇ ಮಾನವ ಸಂಪನ್ಮೂಲವು ಅತಿ ಹೆಚ್ಚಾಗಿ ಬಳಕೆಯಾಗುವ  ಪ್ರದೇಶವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನೀವು ನೋಡಬೇಕು, ಅಲ್ಲಿ ಈಗ ಕನ್ನಡಿಗರ ಕಾಲೋನಿಗಳೇ ಕಟ್ಟಲ್ಪಟ್ಟಿವೆ. ಬಿಲ್ ಗೇಟ್ಸ್ ಈಗ ಅಮೇರಿಕದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ. ಅವರ ವ್ಯಾಪಾರ ನಿತ್ಯೋಪಯೋಗಿ ವಸ್ತುಗಳದ್ದಲ್ಲ. ಅವರ ಪ್ರಭಾವ ಅಲ್ಲಿ ಎಷ್ಟಿದೆಯೆಂದರೆ ಭಾರತೀಯರ ಸಲುವಾಗಿ  ಅಮೇರಿಕದ ಆರ್ಥಿಕ ನೀತಿಯನ್ನೇ ಬದಲಾಯಿಸುವಷ್ಟಿದೆ. ನಿಜ ಅಂದರೆ ಭಾರತೀಯರು ಅವರನ್ನು ದೇವರಂತೆ ಕಾಣುತ್ತಾರೆ. ಒಂದು ಕಡೆ ಅಮೇರಿಕ ತನ್ನ  ದೇಶದ  ಅಲ್ಪಸಂಖ್ಯಾತರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ವಿಪರೀತ ಕಟ್ಟಳೆಗಳು.  ಒಂದು ರಾಷ್ಟ್ರ ಪ್ರಭುತ್ವವಾಗಿ ಅಮೇರಿಕ ಕೂಡ ತೀವ್ರ ಸಂಘರ್ಷದೊಳಗಿದೆ. ಯಾಕೆಂದರೆ ಅಲ್ಲಿನ ಬಹುರಾಷ್ಟ್ರೀಯ ಕಂಪೆನಿಗಳು ತಮಗೆ ಹಿತಕರವಾದ ಆರ್ಥಿಕ ನೀತಿಗಳನ್ನು ರೂಪಿಸಿಕೊಳ್ಳಲು ಅಮೇರಿಕದ ಪ್ರಭುತ್ವವನ್ನು ಬಗ್ಗಿಸುತ್ತಿವೆ. ಈ ನೀತಿಗಳು ಅವರ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾಗಿವೆ. ಇದು ಉತ್ಪಾದನೆಯ ಮೊದಲ ವಿಭಾಗದ ಕತೆ.

ಇನ್ನು ಎರಡನೆಯ ವಿಭಾಗದ ಬಗೆಗೆ ಜಾಸ್ತಿ ಹೇಳುವ ಅಗತ್ಯವಿಲ್ಲವೆನಿಸುತ್ತದೆ. ಅದು ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳ ಉದ್ಯಮ. ಮೂರನೆಯದು……[ಧ್ವನಿ ಮುದ್ರಿಕೆಯಲ್ಲಿ ಮುಂದಿನ ಕೆಲ ಮಾತುಗಳು ಮುದ್ರಿತವಾಗಿಲ್ಲ. ಮತ್ತೆ ಎಲ್ಲಿಂದ ಮುದ್ರಿತವಾಗಿದೆಯೋ ಅಲ್ಲಿಂದ]………ರೂಪಕಗಳ ಭಾಷೆಯಲ್ಲಿ ಇಡುವುದಾದರೆ ಜಾಗತಿಕ ಉದ್ಯಮದ ಪ್ರಮುಖ ರಾಷ್ಟ್ರಗಳು ತಮ್ಮ ಅರ್ಥ ವ್ಯವಸ್ಥೆಯಿಂದ ನಿತ್ಯೋಪಯೋಗಿ ಸರಕುಗಳ ಉತ್ಪಾದನೆಯನ್ನು ಬಹಿಷ್ಕರಿಸಿದ್ದಾರೆ ಅಥವಾ  ಬಹಿಷ್ಕರಿಸಲು ಯತ್ನಿಸುತ್ತಿದ್ದಾರೆ.  ಕೆಲವು ವಿದ್ವಾಂಸರು ಹೊಸತಾಗಿ ಉದ್ಯಮ ಕ್ಷೇತ್ರದಲ್ಲಿ ಮಿಂಚುತ್ತಿರುವ ರಾಷ್ಟ್ರಗಳ ಅರ್ಥ ವ್ಯವಸ್ಥೆಯ ಬಗೆಗೆ ಆಸಕ್ತಿಕರ ವಿಚಾರಗಳನ್ನು ಮಂಡಿಸಿದ್ದಾರೆ. ಥಾಯ್‌ಲ್ಯಾಂಡ್ ಈಗಾಗಲೇ ಸಂಘರ್ಷವನ್ನು ಅನುಭವಿಸುತ್ತಿದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಜಾಗತಿಕ ಉದ್ಯಮಕ್ಕೆ ಭಾರತ ಒಂದು ಕಾರ್ಯಾಗಾರವಿದ್ದಂತೆ. ಈ ಕಾರ್ಯಾಗಾರದೊಂದಿಗೆ ಅದಕ್ಕೆ ಯಾವುದೇ ಭಾವನಾತ್ಮಕ ಸಂಬಂಧವಿಲ್ಲ. ಪಶ್ಚಿಮದ ಹೊಲಸೆಲ್ಲ ಮೂರನೆಯ ಜಗತ್ತಿನ ರಾಷ್ಟ್ರಗಳಲ್ಲಿ ಉತ್ಪಾದನೆಯಾಗುತ್ತದೆ.  ಜಾಗತಿಕ ಉದ್ಯಮಕ್ಕೆ ಮೂರನೆಯ ಜಗತ್ತು ಮೂರು ಬಗೆಯ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಮೊದಲನೆಯದು ಅವರ ಉತ್ಪನ್ನಗಳ ಕಾರ್ಯಾಗಾರ. ಎರಡನೆಯದು ಗುಜರಿಗಳನ್ನು ತಂದು ಹಾಕುವ ಜಾಗ. ಮೂರನೆಯದು –ಅತ್ಯಾಕರ್ಷಕ ಪ್ರವಾಸಿ ತಾಣ. ಇವು ಮೂರೂ ಒಂದಕ್ಕೊಂದು ಸಂಬಂಧಪಟ್ಟಿವೆ. ಅವರ್ಯಾರೂ ಅಲ್ಲಿ ಬಟ್ಟೆ ಹೊಲಿಸಲು ಬಯಸುವುದಿಲ್ಲ. ಮಾಂಸವನ್ನು ಕೂಡ ಅಲ್ಲಿ ಉತ್ಪಾದಿಸುವುದಿಲ್ಲ. ಇನ್ನೂ ಮುಂದೆ ಹೋದರೆ ತರಕಾರಿಗಳು, ಹೂಗಳೂ ಕೂಡ ಮೂರನೆಯ ಜಗತ್ತಿನ ರಾಷ್ಟ್ರಗಳಿಂದಲೇ ಬರಬೇಕು. ಬಂಡವಾಳಶಾಹಿ ಎಂದರೆ ಲಭ್ಯವಿರುವ ಸಾಮಾಜಿಕ ಶಕ್ತಿಯನ್ನು ಶಕ್ತಿ ಮೀರಿ ಬಳಸಿಕೊಳ್ಳುವುದು ಎಂದಾದರೆ ಜಾಗತಿಕ ಉದ್ಯಮವು ಲಭ್ಯವಿರುವ ಸಾಮಾಜಿಕ ಶಕ್ತಿಯ ದಿಕ್ಕನ್ನು ಬದಲಿಸುತ್ತಿದೆ. ಆದ್ದರಿಂದ ಮೊದಲ ಜಗತ್ತಿನ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಥಾಯ್‌ಲ್ಯಾಂಡ್ ಆಕರ್ಷಿಸುವುದು ಆಶ್ಚರ್ಯವಾಗುವುದಿಲ್ಲ. ಭಾರತವಿನ್ನೂ ಅವರ ಸ್ವಾಗತಕ್ಕೆ ಸಜ್ಜಾದಂತಿಲ್ಲ. ಅವರ ಪ್ರವಾಸೋದ್ಯಮವೆಂದರೆ ಲೈಂಗಿಕ ತೆವಲಿನ ಇಲ್ಲವೇ ಸಾಹಸದ ತೆವಲಿನ ಪ್ರವಾಸೋದ್ಯಮ. ಈಗಿನ ಪ್ರವಾಸೋದ್ಯಮವೆಂದರೆ ಬಂಡವಾಳಶಾಹಿಯು ಪ್ರತಿನಿಧಿಸುವ ಎಲ್ಲ ಕೆಡುಕಿನ ಒಂದು ಸಾಕಾರ ರೂಪವಾಗಿದೆ. ಇಲೆಚಿನ್ ತಮ್ಮ ಪ್ರಬಂಧವೊಂದರಲ್ಲಿ ಹೇಳುತ್ತಾರೆ: ಆಧುನಿಕ ಕಾಲದ ಪ್ರವಾಸಿಯು ಒಬ್ಬ ಡಕಾಯಿತನಂತೆ. ಅವನಿಗೆ ಲೂಟಿ ಹೊಡೆಯುವುದೆಂದರೆ ಇಷ್ಟ. ತನ್ನ ಜ್ಞಾನೇಂದ್ರಿಯಗಳಿಂದ ಕೊಳ್ಳೆ ಹೊಡೆಯುತ್ತಾನೆ. ಹಣದಿಂದ ಕೊಳ್ಳೆ ಹೊಡೆಯುತ್ತಾನೆ. ಅವನಿಗೆ ಇಲ್ಲಿ ಕಾಣುವ ಪ್ರತಿಯೊಂದೂ ಸಂತೋಷದ, ವಿನೋದದ ತಾಣ. ಈ ನಿಟ್ಟಿನಲ್ಲಿ ಇವತ್ತು ನಮ್ಮಲ್ಲಿ ಪ್ರವಾಸೋದ್ಯಮವು ಉತ್ಪಾದನಾ ಕ್ಷೇತ್ರದ ಒಂದು ಬಹುಮುಖ್ಯ ಅಂಗವಾಗಿ ಬೆಳೆಯುತ್ತಿರುವುದು ಅಚ್ಚರಿಯಾಗುವುದಿಲ್ಲ.

ಈಗ ಮೊದಲ ಜಗತ್ತಿನಲ್ಲಿ ನಿತ್ಯೋಪಯೋಗಿ ಸರಕುಗಳನ್ನು ಬಹಿಷ್ಕರಿಸಿದ್ದರಿಂದ ಯಾವ ರೀತಿಯ ಪರಿಣಾಮಗಳನ್ನು ಎದುರಿಸಬೆಕಾಗಿದೆ ಎಂಬುದನ್ನು ನೋಡೋಣ. ಅದರ ನೇರ ಪರಿಣಾಮ ಮೂರನೆಯ ಜಗತ್ತಿನ ದೇಶಗಳ ಮೇಲಾಗುತ್ತದೆ. ಮೂರನೆಯ ಜಗತ್ತಿನ ದೇಶಗಳಲ್ಲಿ ಹೊಸ ಬಗೆಯ ಸಂಘರ್ಷವನ್ನು ಅದು ಹುಟ್ಟಿಸುತ್ತಿದೆ. ಅದು ಸಮಾಜದೊಳಗಿನ ’space’ ನ ಪರಿಕಲ್ಪನೆಯನ್ನೇ ಪಲ್ಲಟಗೊಳಿಸುತ್ತಿದೆ. ಸಮುದಾಯಗಳ ಪರಿಕಲ್ಪನೆಯನ್ನು ಪಲ್ಲಟಗೊಳಿಸುತ್ತಿದೆ. ಅಷ್ಟೇ ಅಲ್ಲ ಮಾನವ ಜೀವಿಗಳು ಮತ್ತು ಅವರ ನಿತ್ಯ ಬಳಕೆಯ ವಸ್ತುಗಳ ನಡುವಿನ ಸಂಬಂಧವನ್ನೂ ಪಲ್ಲಟಗೊಳಿಸಿದೆ. ನಿತ್ಯ ಬಳಕೆಯ ವಸ್ತುಗಳ ಸ್ವರೂಪದ ಕಲ್ಪನೆಯೆ ಬದಲಾಗುತ್ತಿದೆ. ಈಗ ಇದೇ ಆಗುತ್ತಿರುವುದು.  ಇದು ಕೇಂದ್ರಾಪಗಾಮಿ ಬಂಡವಾಳಶಾಹಿಯ ಕಾಲಘಟ್ಟ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಮಾನವನ ಅಗತ್ಯಗಳ ಒಂದು ಹೊಸ ಸಾಂಸ್ಕೃತಿಕ ಮನಶ್ಶಾಸ್ತ್ರವನ್ನೇ  ಅದು ಸೃಷ್ಟಿಸುತ್ತದೆ.  ಈ ಸಾಂಸ್ಕೃತಿಕ ಮನಃಶಾಸ್ತ್ರದ ಪ್ರಭಾವಕ್ಕೆ ಒಳಗಾದ ಬಡವರಲ್ಲಿ ಅತಿ ಬಡವರು ಕೂಡ (ಸಾಮಾಜಿಕ) ನ್ಯಾಯದ ಪರಿಕಲ್ಪನೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಆನಂದದ ಪರಿಕಲ್ಪನೆ ಕೂಡ ಹೊಸ ಬಗೆಯದಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಬಹುತೇಕ ಎಲ್ಲ ಸಾಮಾಜಿಕ ವರ್ಗಗಳೂ, ಬುಡಕಟ್ಟುಗಳು ಮತ್ತು ಕೆಲವು ತಳಸಮುದಾಯದ ಚಳುವಳಿಗಳನ್ನು ಹೊರತು ಪಡಿಸಿ, ಎಲ್ಲ ವರ್ಗಗಳೂ ಈಗ ಆಕಾಂಕ್ಷೆಗಳ ಮೇಲೆ ನಿರ್ಧಾರವಾಗುವ (ಸಾಮಾಜಿಕ) ನ್ಯಾಯದ ಹೊಸ ಪರಿಕಲ್ಪನೆಗೆ ನೀರೆರೆಯುತ್ತಿವೆ. ಅಗತ್ಯಗಳಿಗೆ ಅನುಸಾರವಾದ ನ್ಯಾಯ ಪರಿಕಲ್ಪನೆಯು ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿದೆ. ಅಗತ್ಯಗಳಿಗೆ ಅನುಸಾರವಾದ ನ್ಯಾಯ ಮತ್ತೆ ಮುನ್ನೆಲೆಗೆ ಬರಲೂ ಬಹುದು, ಆದರೆ ಆ ಹೊತ್ತಿಗೆ ನಾವೆಲ್ಲ ಒಂದು ರಾಷ್ಟ್ರವಾಗಿ ಉಳಿಯುತ್ತೇವೆಯೋ ಇಲ್ಲವೋ ಗೊತ್ತಿಲ್ಲ.

ನಾನು ನನ್ನ ಈವರೆಗೆ ಹೇಳಿದ್ದರ ಒಟ್ಟೂ ಸಾರಾಂಶವೇನೆಂದರೆ, ಇವತ್ತಿನ ಭಾರತದಲ್ಲಿ ನಾವು ನ್ಯಾಯವನ್ನು ಹಿಗ್ಗುತ್ತಲೇ ಹೋಗುತ್ತಿರುವ ವಿಶ್ವದ ಒಂದು ಸದವಕಾಶ ಎಂಬ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದೇವೆ. ೫೦, ೬೦ ಮತ್ತು ೭೦ ರ ದಶಕಗಳಲ್ಲಿ ನ್ಯಾಯವು ಹೆಚ್ಚು ಕಮ್ಮಿ ಸೂಕ್ಷ್ಮ ಸ್ತರದ ಸಮುದಾಯಗಳಿಗೆ ಸೀಮಿತವಾಗಿತ್ತು. ಕರ್ನಾಟಕಕ್ಕೇ ಸೀಮಿತವಾದ ಕೆಲವು ಸಾಮಾಜಿಕ ಯೋಜನೆಗಳು,  ಭಾರತಕ್ಕೆ ಮಾತ್ರ ಸೀಮಿತವಾದ ಯೋಜನೆಗಳು –ಹೀಗೆ ಜಾಗತಿಕ ಪ್ರಜ್ಞೆ ಇನ್ನೂ ಒಳ ಹೊಕ್ಕಿರದ ಕಾಲ. ವಿಶ್ವವೆಂದರೆ ಒಂದು ಸಮುದಾಯ ಎಂಬ ಕಲ್ಪನೆ ಇನ್ನೂ ಹೊಕ್ಕಿರಲಿಲ್ಲ. ಆದರೆ ಈಗ  ಸದವಕಾಶಗಳ ಎಲ್ಲೆ ಹಿಗ್ಗುತ್ತಲೇ ಇವೆ. ಈ ಒಂದು ಕಾರಣಕ್ಕೇ ಖಾಸಗೀಕರಣದ ಬಗೆಗೆ ಒಂದು ಒಮ್ಮತ ಹುಟ್ಟಿಕೊಂಡಿದ್ದ; ಜಾಗತೀಕರಣದ ಬಗೆಗೆ ಮತ್ತು ಅಭಿವೃದ್ಧಿಯ ಹೊಸ ಹಾದಿಯ ಬಗೆಗೆ ಎಲ್ಲರಲ್ಲಿಯೂ ಒಂದು ಒಮ್ಮತ ಏರ್ಪಟ್ಟಿದ್ದು. ಹೀಗೆ ಸಾಮಾಜಿಕ ನ್ಯಾಯವನ್ನು ಇನ್ನೂ ಆರಂಭವಾಗದ ಒಂದು ಕಂಪೆನಿಯ ಭವಿತವ್ಯದ ಒಬ್ಬ ಪಾಲುದಾರ ಎಂಬಂತೆ ನಾವು ವ್ಯಾಖ್ಯಾನಿಸಿದ ಕ್ಷಣ ನಮ್ಮ ಆದ್ಯತೆಗಳು ಬದಲಾಗುತ್ತವೆ. ರಾಷ್ಟ್ರವೊಂದರ ಆದ್ಯತೆಗಳು ಬದಲಾಗುತ್ತವೆ. ಸ್ಥಳೀಯ ಸಮುದಾಯಗಳ ಆದ್ಯತೆಗಳೂ ಬದಲಾಗುತ್ತವೆ. ಆದರೆ ಜಾಗತಿಕ ಉದ್ಯಮದ, ಅಂತರರಾಷ್ಟ್ರೀಯ ವಾಣಿಜ್ಯೋದ್ಯಮದ ಸಾಂಸ್ಕೃತಿಕ ತರ್ಕ ಮಾತ್ರ ಬದಲಾಗದೇ ಉಳಿಯುತ್ತದೆ.  ಜಾಗತಿಕ ಬಂಡವಾಳ ಹೂಡಿಕೆಯ ಆದ್ಯತೆಗಳು ಬದಲಾಗದೇ ಉಳಿಯುತ್ತವೆ. ಈ ವಿದ್ಯಮಾನಕ್ಕೆ ತಡೆಯೊಡ್ಡುವವರು ಇಲ್ಲವಾಗುತ್ತಾರೆ. ಮತ್ತು ಜಾಗತಿಕ ಬಂಡವಾಳಶಾಹಿ ಜಗತ್ತಿನ ಇತರ ಭಾಗಗಳ ಮೇಲೆ ತನ್ನ ಸಾಂಸ್ಕೃತಿಕ ಸಂಕಲ್ಪಗಳನ್ನು  ಹೇರುವಲ್ಲಿ ಯಶಸ್ವಿಯಾಗುತ್ತದೆ. ಇದೆಲ್ಲದರ ಮುಖ್ಯ ಪರಿಣಾಮವೆಂದರೆ ಅದು –ಮೂರನೆಯ ಜಗತ್ತಿನ ರಾಷ್ಟ್ರಗಳ ಮೇಲೆ ಜಾಗತಿಕ ಬಂಡವಾಳಶಾಹಿಯ ಸಾಂಸ್ಕೃತಿಕ ಸಂಕಲ್ಪಗಳ ಹೇರಿಕೆ.

ಹಾಗಾದರೆ, ಜಾಗತಿಕ ಬಂಡವಾಳಶಾಹಿಯ ಸಾಂಸ್ಕೃತಿಕ ಸಂಕಲ್ಪಗಳ ಸ್ವರೂಪ ಏನು? ಈ ಹಂತದಲ್ಲಿ ಮತ್ತೆ ನನಗೆ ಬಂಡವಾಳಶಾಹಿಯ ಪಥದಲ್ಲಿ ಆಗುತ್ತಿರುವ ಮೂಲಮಾದರಿಯ ಪಲ್ಲಟವು  ಮುಖ್ಯವೆನಿಸುತ್ತದೆ. ಹತ್ತೊಂಬತ್ತನೆಯ ಶತಮಾನದ ಹೊತ್ತಿಗೆ ಇದೆಲ್ಲ ಶುರುವಾದಾಗ…ಈಗ ವೆಬೆರ್ ರವರ ಸೈದ್ಧಾಂತಿಕ ಚಿಂತನೆಗಳನ್ನು ತೆಗೆದುಕೊಂಡರೆ, ಅದರ ಪ್ರಕಾರ ಬಂಡವಾಳಶಾಹಿಗೆ ತನ್ನನ್ನು ತಾನು ಸುಸಂಬದ್ಧವಾಗಿ ವಸ್ತುನಿಷ್ಠವಾಗಿ ಸಂಘಟಿತಗೊಳಿಸಿಕೊಳ್ಳುವ ಕಲೆ ಒಲಿದಿದೆ. ಲಾಭವೊಂದೇ ಅದರ ಗುರಿ. ಲಾಭವೊಂದೇ ಗುರಿಯಾದಾಗ ಅದನ್ನು ಸಾಧಿಸಲು ಬಂಡವಾಳಶಾಹಿ ವ್ಯವಸ್ಥೆಯು  ಕೆಲವು ಅಗತ್ಯಗಳ ಕ್ಷೇತ್ರಗಳನ್ನು ಗುರುತಿಸುತ್ತದೆ ಮತ್ತು ಆ ಕ್ಷೇತ್ರಗಳು ನಿಷ್ಪಕ್ಷಪಾತ ಧೋರಣೆಯನ್ನು ಹೊಂದಿರುತ್ತವೆ, ವಸ್ತುನಿಷ್ಠವಾಗಿರುತ್ತವೆ ಎಂದು ಮೊದಮೊದಲಿನ ಚಿಂತನೆಗಳು ಪ್ರತಿಪಾದಿಸಿದವು. ಅಗತ್ಯಗಳಿಗೆ ಸಂಬಂಧಪಟ್ಟ ಹಾಗೆ ಬಂಡವಾಳಶಾಹಿಯು ಒಂದು ತಟಸ್ಥ ಭಾವದ ಸಿದ್ಧಾಂತವನ್ನು ಹೊಂದಿದೆ ಎಂದೇ ಮೊದ ಮೊದಲಿನ ಬಂಡವಾಳಶಾಹಿ ಸಿದ್ದಾಂತಗಳು ವಾದಿಸಿದವು. ಈ ತಾಟಸ್ಥ್ಯದ ಆಧಾರದ ಮೇಲೆ, ಅಗತ್ಯಗಳ ಒಂದು ಸಾರ್ವತ್ರಿಕ ಸಿದ್ಧಾಂತಗಳ ಆಧಾರದ ಮೇಲೆ ಬಂಡವಾಳಶಾಹಿಯು ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಲಾಯಿತು. ಈ ಒಂದು ಕಾರಣಕ್ಕಾಗಿ ನಾವು  ’ಪ್ರಗತಿ ಮತ್ತು ಅಭಿವೃದ್ಧಿಯ ಒಂದು ವಸ್ತುನಿಷ್ಠ ತರ್ಕ’ ವು ಬಂಡವಾಳಶಾಹಿಯನ್ನು ಮುನ್ನಡೆಸುತ್ತದೆ ಎಂಬ ಸಿದ್ದಾಂತವನ್ನು ಇದುವರೆಗೂ ಒಪ್ಪಿಕೊಂಡು ಬಂದೆವು. ಬಂಡವಾಳಶಾಹಿ ವ್ಯವಸ್ಥೆಯು ವಸ್ತುನಿಷ್ಠತೆಯನ್ನು ಕಾಪಾಡಿಕೊಂಡು ಬರುವ ಒಂದು ಪರಿಣಾಮಕಾರಿ ಅರ್ಥ ವ್ಯವಸ್ಥೆಯೆಂಬಂತೆ ಜಗತ್ತಿನ ಎಲ್ಲೆಡೆ   ಕಾಣಲಾಯಿತು.

ಅಭಿವೃದ್ಧಿಯ ಹುಟ್ಟು ಮತ್ತು ಬೆಳವಣಿಗೆಯನ್ನು ಪರೀಕ್ಷಿಸಿದರೆ ಬಂಡವಾಳಶಾಹಿಯ ವಸ್ತುನಿಷ್ಠತೆಯ ಬಗೆಗೆ ಖಂಡಿತ ಸಂದೇಹ ಮೂಡುತ್ತದೆ. ಬಂಡವಾಳಶಾಹಿಯು ತಟಸ್ಥವಲ್ಲ.  ಖಂಡಿತ ಅದಕ್ಕೆ ಲಾಭದಲ್ಲಿ ಆಸಕ್ತಿಯಿದೆ. ಉತ್ಪಾದನೆಯಲ್ಲಿ ಆಸಕ್ತಿಯಿದೆ. ಕ್ಷಿಪ್ರ ಬೆಳವಣಿಗೆಯಲ್ಲಿ ಆಸಕ್ತಿ ಇದೆ.  ಆದರೆ ಅದರರ್ಥ  ಅದು ಎಲ್ಲಿ ಬೆಳೆಯುತ್ತಿದೆಯೋ ಆ ಸಮಾಜವನ್ನು ಕುರಿತು ಅದಕ್ಕೆ ಒಂದು ತಟಸ್ಥ ಅಥವಾ ವಸ್ತುನಿಷ್ಠ ಗ್ರಹಿಕೆಯಿದೆ ಎಂದು ಹೇಳಲಾಗುವುದಿಲ್ಲ. ತನ್ನ ಪ್ರಚಾರದಲ್ಲಿ ಅದಕ್ಕೆ ಆಸಕ್ತಿಯಿದೆ. ಆದರೆ ನನ್ನ ವಾದವೇನೆಂದರೆ, ಜಾಗತಿಕ ಬಂಡವಾಳವು ತನ್ನ ಸಾಂಸ್ಕೃತಿಕ ಇಚ್ಛೆಗಳನ್ನು, ತನ್ನ ಆಶಯಗಳನ್ನು, ಬಯಕೆಗಳನ್ನು ಬೇರೆಯವರ ಅಗತ್ಯಗಳು ಎಂಬಂತೆ ಬಿಂಬಿಸಿ ಅದನ್ನು ಬೇರೆಯವರ ಮೇಲೆ ಹೇರಲು ಯತ್ನಿಸುತ್ತಿದೆ.  ತನ್ನ ಬಯಕೆಗಳನ್ನು ಇತರರ ಅಗತ್ಯಗಳನ್ನಾಗಿ ಪರಿವರ್ತಿಸುತ್ತದೆ. ಇದೊಂದು ಜಾಗತಿಕ ಬಂಡವಾಳಶಾಹಿಯ ತಂತ್ರ. ಮೂರನೆಯ ಜಗತ್ತಿನ ರಾಷ್ಟ್ರಗಳನ್ನು ಮಾನಸಿಕವಾಗಿ ನಿಯಂತ್ರಿಸುವ ತಂತ್ರ. ಹಾಗಾದಾಗ ಸಮಾಜವೊಂದರ ಅಗತ್ಯಗಳು ಆ ಸಮಾಜದ ಸದಸ್ಯರ ನೈಜದನಿಯಾಗಿರುವುದಿಲ್ಲ. ಪ್ರಸಿದ್ಧ ಕಲಾಮೀಮಾಂಸಕರಾದ ಜಾನ್ ಬರ್ಜರ್ ಅದನ್ನು ಹೀಗೆ ಇಡುತ್ತಾರೆ: ಅಗತ್ಯವು ಈಗ ಯಾರದ್ದು ಎಂದು ಹೇಳಲಾಗುತ್ತದೆಯೋ ಅವರ   ಸ್ವಂತ ಪ್ರತಿಪಾದನೆಯಾಗಿ ಉಳಿದುಕೊಂಡಿಲ್ಲ. ಜಾಗತಿಕ ಮಾರುಕಟ್ಟೆಯು ಯಾರ ಅಗತ್ಯಗಳನ್ನು ಸೃಷ್ಟಿಸಿದೆಯೋ ಆ ಸಮಾಜದ ನಿಜದನಿ ನಮಗೆ ಕೇಳಲು ಸಿಗುತ್ತಿಲ್ಲ. ಆ ಸಮಾಜದ ಅಗತ್ಯಗಳು ಜಾಗತಿಕ ಮಾರುಕಟ್ಟೆಯ ಬಯಕೆಗಳ ಮೇಲೆ ನಿರ್ಭರವಾಗಿವೆ. ಇದೇ ಕಾರಣಕ್ಕಾಗಿಯೇ ಇಂದು ಕೆಲವು ಸರಕುಗಳು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದಿಸಲ್ಪಡುತ್ತಿವೆ. ನಮಗೆ ಬೇಕಾಗಿಲ್ಲ, ಆದರೂ ಅವು ಇಲ್ಲಿ ಉತ್ಪಾದನೆಯಾಗುತ್ತಿವೆ. ಹೀಗಾಗಿ ಆ ಸಮಾಜದೊಳಗೆ ನೈತಿಕ ಕಾಳಜಿಯುಳ್ಳ ಅಪನಂಬಿಕೆಯೊಂದು ಹೊಗೆಯಾಡುತ್ತದೆ. ಆದರೆ ಅದನ್ನೂ ಅಲಕ್ಷಿಸಿ ಸರಕುಗಳು ಬೃಹತ್ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ. ನಮ್ಮ ದೈನಂದಿನ ವಾಸ್ತವವನ್ನು ಒಂದು ಬಗೆಯ  ಯುಟೋಪಿಯವನ್ನಾಗಿ ಬದಲಾಯಿಸಲು ಜಾಗತಿಕ ಬಂಡವಾಳ ವ್ಯವಸ್ಥೆಯು ಯಶಸ್ವಿಯಾಗಿದೆ ಎನ್ನಬಹುದು. ಅಂದರೆ ಒಂದರ್ಥದಲ್ಲಿ ಜಾಗತಿಕ ಬಂಡವಾಳ ವ್ಯವಸ್ಥೆಯ ಸಾಂಸ್ಕೃತಿಕ ಮನಶ್ಯಾಸ್ತ್ರದ ತಂತ್ರ ಏನೆಂದರೆ, ಮಾರುಕಟ್ಟೆಯನ್ನಾಧರಿಸಿದ ಆರ್ಥಿಕ ನೀತಿಯ ಆಧಾರದ ಮೇಲೆ ದೈನಂದಿನ ಬದುಕು ಮತ್ತು ಭವಿಷ್ಯದ ಯಾವುದೋ ಒಂದು ಯುಟೋಪಿಯಾದ ನಡುವಿನ ಗೆರೆಯನ್ನು ಸಂಪೂರ್ಣವಾಗಿ ಅಳಿಸಿಹಾಕುವುದು. ಆಗ ಭವಿಷ್ಯದ ಮಾರುಕಟ್ಟೆ ಮತ್ತು ದೈನಂದಿನ ಬದುಕಿನ ನಡುವೆ ವ್ಯತ್ಯಾಸವೇ ಉಳಿಯುವುದಿಲ್ಲ. ಇದು ಮೇಲ್ಜಾತಿ, ಕೆಳ ಜಾತಿಯಾದಿಯಾಗಿ ಎಲ್ಲರನ್ನೂ ತನ್ನ ತೆಕ್ಕೆಗೆ ಎಳೆದುಕೊಂಡ  ಅಲೆ.

ಕತೆಯ ಮೊದಲಿನ ಈ ಭಾಗವು ನಮ್ಮನ್ನು ಅಲುಗಾಡಿಸಿಬಿಡುತ್ತದೆ. ಯಾಕೆಂದರೆ, ಅದು  ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಈಗ ಎರಡನೆಯ ಭಾಗಕ್ಕೆ ಬರೋಣ. ಅದಕ್ಕೂ ಮೊದಲು ನನ್ನ ಮೊದಲ ನಿಲುವನ್ನು ಇನ್ನೊಮ್ಮೆ ಸಂಕ್ಷಿಪ್ತವಾಗಿ ಅವಲೋಕಿಸಿ ನಂತರ ಅದನ್ನು ಎರಡನೆಯದಕ್ಕೆ ಸೇರಿಸೋಣ. ಈ ಕೆಲವು ವರ್ಷಗಳಲ್ಲಿ ನ್ಯಾಯದ ಗ್ರಹಿಕೆಯು ನಾಟಕೀಯ ರೀತಿಯಲ್ಲಿ  ಬದಲಾಗಿದೆ. ಭಾರತದ ರಾಜಕೀಯ ವರ್ಗಗಳು ಅದಕ್ಕೆ ಕಾರಣೀಭೂತವಾಗಿವೆ. ಈಗ ನ್ಯಾಯವು ಅಗತ್ಯಗಳನ್ನಾಧರಿಸಿ ಇಲ್ಲ; ಹೆಬ್ಬಯಕೆಗಳನ್ನಾಧರಿಸಿ ಇದೆ. ಈ ಹೆಬ್ಬಯಕೆಗಳು ಜಾಗತಿಕ ಬಂಡವಾಳಶಾಹಿ ಎಂಬ ಯಂತ್ರದ ಫಲಶ್ರುತಿ. ಅದೊಂದು ನಿರ್ದಿಷ್ಟ ಸಾಂಸ್ಕೃತಿಕ ಸಂಕಲ್ಪವುಳ್ಳ ಸಮಾಜದ ಮನಸ್ಸುಗಳನ್ನು ಆಕ್ರಮಿಸುವ ಯಂತ್ರ. ಈ ಸಾಂಸ್ಕೃತಿಕ ಸಂಕಲ್ಪವು  ಮೊದ ಮೊದಲು ಪ್ರತಿಪಾದಿಸಿದಂತೆ ವಸ್ತುನಿಷ್ಠವಾಗಿ ಉಳಿದಿಲ್ಲ. ಪಾಶ್ಚಿಮಾತ್ಯ ಗ್ರಹಿಕೆಯ ಸರಕು ಸಂಸ್ಕೃತಿಯನ್ನು, ಪಾಶ್ಚಿಮಾತ್ಯ ಗ್ರಹಿಕೆಯ ದೈನಂದಿನ ಬದುಕನ್ನು ಅದು ನಮ್ಮ ಮೇಲೆ  ಹೇರುತ್ತಲಿದೆ.

ಈ ವಿದ್ಯಮಾನವನ್ನು ಹೇಗೆ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಅದಕ್ಕೊಂದು ಉತ್ತರ ಹುಡುಕುವ ನಿಟ್ಟಿನಲ್ಲಿ ನನ್ನ ಎರಡನೆಯ ವಾದವನ್ನು ಮುಂದಿಡುತ್ತೇನೆ. ಜಾಗತಿಕ ಬಂಡವಾಳ ವ್ಯವಸ್ಥೆಯ ಸಾಂಸ್ಕೃತಿಕ ಸಂಕಲ್ಪದ  ರಾಜಕಾರಣದಿಂದಾಗಿ ಭಾರತದಲ್ಲಿ ಎದ್ದಿರುವ ಸಂಘರ್ಷಗಳನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೆಲವು ಉದಾಹರಣೆಗಳೊಂದಿಗೆ ಮುಂದುವರೆಯೋಣ. ಈ ಜಿಲ್ಲೆಯಲ್ಲಿ ಎರಡು ರೀತಿಯ ಹೋರಾಟಗಳನ್ನು ಕಾಣುತ್ತೇವೆ. ಮೊದಲನೆಯದು ಬಂಡೆಗಳಿಗೆ ಸಂಬಂಧಪಟ್ಟದ್ದು. ಮತ್ತು ಎರಡನೆಯದು ಮೀನುಗಳಿಗೆ ಸಂಬಂಧಪಟ್ಟದ್ದು. ನಿಮಗೆ ಗೊತ್ತಾಗಿರಲೇಬೇಕು ನಾನು ಯಾವುದರತ್ತ ಬೊಟ್ಟು ತೋರಿಸುತ್ತಿದ್ದೇನೆ ಎಂದು. ಮೊದಲನೆಯದು ಪಾಜಕದ ವಿವಾದ, ಎರಡನೆಯದು ಕಡಲತಡಿಯ ಮೀನುಗಾರರ ಹೋರಾಟ. ತಮಾಶೆಯೆಂದರೆ, ಅವೆರಡೂ ಒಂದಕ್ಕೊಂದು ಸಂಬಂಧಪಟ್ಟಿವೆ.  ಯಾವ ದೃಷ್ಟಿಯಿಂದ ಸಂಬಂಧಪಟ್ಟಿವೆ ಎಂದರೆ ಎರಡೂ ಘಟನೆಗಳಲ್ಲಿ ನಮ್ಮ ಪ್ರತಿಕ್ರಿಯೆ ಒಂದೇ ರೀತಿ ಇತ್ತು ಎಂಬ ಕಾರಣಕ್ಕೆ.  ನಮಗೆ ಬಂಡೆಗಳೆಂದರೆ ಗ್ರನೈಟ್, ಸಮುದ್ರವೆಂದರೆ ಮತ್ತೇನಿಲ್ಲ ದೊಡ್ಡ ಗಾತ್ರದ ಮೀನಿನ ಟ್ಯಾಂಕ್ ಎಂದು ಒಪ್ಪಿಕೊಳ್ಳುವುದು ಕಷ್ಟವೇ ಆಗಲಿಲ್ಲ. ಇಲ್ಲಿ ನಮಗೆ ಮುಖ್ಯವಾಗುವುದೆಂದರೆ, ಬಂಡೆಗಳೆಂದರೆ ಗ್ರನೈಟ್ ಅಥವಾ ಸಮುದ್ರವೆಂದರೆ ಮೀನಿನ ತೊಟ್ಟಿ ಎಂದು ಸಲೀಸಾಗಿ ಇಲ್ಲಿಯ ಸಮುದಾಯಗಳ ಮನಸ್ಸಿನಲ್ಲಿ ಅಚ್ಚೊತ್ತಿದ ಪ್ರಕ್ರಿಯೆ. ಅಲ್ಲಿ ಜಾಗತಿಕ ಬಂಡವಾಳ ವ್ಯವಸ್ಥೆಯ ಸಾಂಸ್ಕೃತಿಕ ಸಂಕಲ್ಪದ ರಾಜಕಾರಣ ಕೆಲಸ ಮಾಡಿದೆ ಎಂದರ್ಥ. ಇವಾನ್ ಇಲ್ಯಿಚ್ ವಾದಿಸುತ್ತಾರೆ : ’ಕೈಗಾರಿಕೆಗಳ ಪರಿಭಾಷೆಯಲ್ಲಿ ನೀರೆಂದರೆ H2O. ಅದು ವೇದಗಳ ನೀರಲ್ಲ. ಗಂಗೆಯ ನೀರಲ್ಲ. ಬುಡಕಟ್ಟುಗಳ ಬದುಕಿನ ಭಾಗವಾದ ನೀರಲ್ಲ. ಒಂದೊಮ್ಮೆ ಸಮಾಜವು ನೀರನ್ನು ಕೈಗಾರಿಕಾ ಸಮಾಜದ ತ್ಯಾಜ್ಯ ಎಂದು ಭಾವಿಸಿದರೆ ವಿಸ್ಮೃತಿಯ ನೀರು ಇಡೀ ಸಮಾಜವನ್ನು ಮುಳುಗಿಸುತ್ತದೆ”

ಇವತ್ತು ನಮಗೆ ಬಂಡೆಗಳು ಗ್ರಾನೈಟುಗಳಾಗಿಬಿಟ್ಟಿವೆ. ಮತ್ತು ಬಂಡೆಗಳಿಗೆ ನೆನಪಿನ ಹಂಗಿಲ್ಲ ಎಂದು ನಾವು ನಂಬಲು ಶುರು ಮಾಡಿದ್ದೇವೆ.  ಪಾಶ್ಚಿಮಾತ್ಯ ಚಿಂತನೆಯಲ್ಲಿ ಬರುವ ಸೃಷ್ಟಿಯ ತಾತ್ವಿಕತೆಯನ್ನು ಓದಿದರೆ ಗೊತ್ತಾಗುತ್ತದೆ ಏನೆಂದರೆ ಸಾಗರಗಳು ಮತ್ತು ಮಹಾ ಸಾಗರಗಳು ಮತ್ತೇನಲ್ಲ ಬರಿಯ ಮೀನಿನ ತೊಟ್ಟಿಗಳು ಎಂದು. ಬಂಡೆಗಳಿಗೆ ನೆನಪುಗಳಿರುವುದಿಲ್ಲ ಎಂದು ನಾವು ಒಪ್ಪಿದ ಮರುಕ್ಷಣ  ನಾವು ಆರಾಧಿಸುವ ಪವಿತ್ರ ಬಂಡೆಗಳು ಯಾರದೋ ಮನೆಯ ಶೌಚಾಲಯದ ಕಲ್ಲುಚಪ್ಪಡಿಗಳಾಗಿಬಿಡುತ್ತವೆ. ಯಾರನ್ನು ದೂಷಿಸುವುದು? ಯಾವುದೇ ಮುಲಾಜಿಲ್ಲದೆ ಹೇಳುತ್ತೇನೆ, ಪರಂಪರೆಯಿಂದ ನಡೆದುಕೊಂಡು ಬಂದಂತಹ ಧಾರ್ಮಿಕ ಸಂಸ್ಥೆಗಳು, ಮಠಮಾನ್ಯಗಳು ಒಂದು ಪ್ರಕಾರದ ವಿಜ್ಞಾನದ ಪ್ರಚಾರವನ್ನು ತಮ್ಮ ಕರ್ತವ್ಯ ಎಂದು ಬಗೆದುಬಿಟ್ಟರೆ ಆಗ ನಮಗೆ ಬಂಡೆಗಳನ್ನು ಗ್ರಾನೈಟ್ ಎನ್ನದೇ ಬೇರೆ ದಾರಿಯಿರುವುದಿಲ್ಲ. ಸಹಜವಾಗಿಯೇ ಬಂಡೆಗಳು ನೆನಪುಗಳನ್ನು ಕಳೆದುಕೊಳ್ಳುತ್ತವೆ. ಉಡುಪಿಯ ಮತ್ತು ದಕ್ಷಿಣ ಭಾರತದ ಕೆಲವು ಪ್ರಮುಖ ಮಠಮಾನ್ಯಗಳು  ಆಧುನಿಕ ವಿಜ್ಞಾನವನ್ನು  ಬೆಂಬಲಿಸಲು ಹೊರಟಿವೆ ಎಂಬುದನ್ನು ನೋಡಿ ನನಗೆ ಆಘಾತವಾಗಿದೆ. ಹೊಸ ಕಾಲದ ವಿಜ್ಞಾನ ಅಥವಾ ಪಾಶ್ಚಿಮಾತ್ಯರ ಗ್ರಹಿಕೆಯ ವಿಜ್ಞಾನವನ್ನು ಬೆಂಬಲಿಸಲು ಹೊರಟರೆ ನಿಮ್ಮ ಮೂಲಪೀಠವು ವಿಸ್ಮೃತಿಗೊಳಗಾಗುತ್ತದೆ. (ಪರಂಪರೆಯ ವಿಸ್ಮೃತಿ ಮತ್ತು ಪಾಶ್ಚಿಮಾತ್ಯ ಗ್ರಹಿಕೆಯ ವಿಜ್ಞಾನ) ಅವೆರಡಕ್ಕೂ ಸಾವಯವ ಸಂಬಂಧವಿದೆ.

ಈ ಹಿನ್ನೆಲೆಯಲ್ಲಿ  ಆ ಜಾಗದಲ್ಲಿ ಕೆಲಸ ಮಾಡುತ್ತಿದ್ದ ದಲಿತರು ಪುನರ್ವಸತಿಗಾಗಿ ಒತ್ತಾಯಿಸಿದ್ದು ಅಚ್ಚರಿಯಾಗುವುದಿಲ್ಲ. ಇದರಲ್ಲಿ ರಿಲಿಜನ್ನಿನ ಪಾತ್ರವೇನು?  ಪರಂಪರಾನುಗತವಾಗಿ ಸಮುದಾಯವೊಂದರ ನಾಯಕತ್ವವನ್ನು ವಹಿಸಿಕೊಂಡ  ಧಾರ್ಮಿಕ ಗುರುಗಳ ಪಾತ್ರವೇನು? ಸಮುದಾಯವೊಂದರ ಪರಿಕಲ್ಪನೆಯಿಂದಲೇ ಅವರ ಅಸ್ತಿತ್ವಕ್ಕೆ ಅಧಿಕೃತ ಠಸ್ಸೆ ಬೀಳುತ್ತದೆ. ನೀವು ಸಮುದಾಯವೊಂದರ ನಾಯಕತ್ವವನ್ನು ವಹಿಸಿಕೊಂಡಿರುತ್ತೀರಿ. ಮತ್ತು ನಿಮ್ಮ ನಜರಿನಲ್ಲಿ ಒಂದೆರಡಲ್ಲ ಹಲವು ಗುಂಪಿನ ಹಿತಾಸಕ್ತಿಗಳಿರುತ್ತವೆ.  ಪರಂಪರೆಯ ಪ್ರಕಾರ ನಿಮ್ಮ ನಾಯಕತ್ವವನ್ನು ಹೇಗೆ ಕಾಣಲಾಗುತ್ತದೋ, ಯಾವ ಗ್ರಹಿಕೆಯಲ್ಲಿ ಅರ್ಥ ಮಾಡಿಕೊಂಡಿದ್ದಾರೋ ಆ ಹಾದಿಯನ್ನು ಬಿಟ್ಟು ನೀವು ಬೇರೆಡೆಗೆ ತಿರುಗಿದರೆ ಸಮುದಾಯದ ಕೊಂಡಿಗಳು ಕಳಚಿಕೊಳ್ಳುತ್ತವೆ. ಅವು ಸ್ಥಳಾಂತರಗೊಳ್ಳುತ್ತವೆ. ಮತ್ತು ಅದರ ಕಾವು ಎಲ್ಲೆಡೆ ಹರಡಿಕೊಳ್ಳುತ್ತದೆ. ಆಗ ಬಂಡೆಗಳು ವಿಸ್ಮೃತಿಗೆ ಒಳಗಾಗುವುದನ್ನು ತಪ್ಪಿಸಲಾಗುವುದಿಲ್ಲ  ಎಂದು ನಾನು ಮತ್ತೊಮ್ಮೆ ಒತ್ತಿ ಹೇಳಬೇಕಾಗುತ್ತದೆ. ಆಮೇಲೆ ಅದಕ್ಕೆ ತಳ ಸಮುದಾಯದವರನ್ನು ದೂಷಿಸಿ ಪ್ರಯೋಜನವಿಲ್ಲ. ತಮ್ಮ ಜೀವನೋಪಾಯದ ಉಳಿವಿನ ಪ್ರಶ್ನೆ ಬಂದಾಗ ಅವರ ಕೂಗು  ನ್ಯಾಯಯುತವಾಗಿಯೇ ಇದೆ. ಈ ಸಮಸ್ಯೆಯನ್ನು  ಪರಿಹರಿಸಬೇಕೆಂದಿದ್ದರೆ ಭಿನ್ನ ಗುಂಪುಗಳನ್ನುಳ್ಳ ಸಮುದಾಯದ ಒಂದು ಸಮಷ್ಟಿಯ ಕಲ್ಪನೆಗೆ ಮರಳಿ ಜೀವ ತುಂಬಬೇಕು. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವ ನೈತಿಕ ಹೊಣೆ ನಿಮ್ಮದು. ಇಲ್ಲಿ ಯಾವುದೇ ಒಂದು ನಿರ್ದಿಷ್ಟ ಧಾರ್ಮಿಕ ಸಂಘಸಂಸ್ಥೆಗಳನ್ನು ಗುರಿಯಾಗಿಸುವುದು ನನ್ನ ಉದ್ದೇಶವಲ್ಲ. ನಾನು ಸಂಸ್ಕೃತಿ ಅಧ್ಯಯನವನ್ನು ಕೈಕೊಂಡಿರುವ ಒಬ್ಬ  ವಿದ್ಯಾರ್ಥಿಯಾಗಿ  ಸಮುದಾಯದಲ್ಲಿ ನಡೆಯುವ ಸ್ಥಳಾಂತರಗಳ ಬೇರೆ ಬೇರೆ ನಮೂನೆಗಳನ್ನು ನಿಮ್ಮೆದುರು ಇಡುತ್ತಿದ್ದೇನೆ.  ಪರಂಪರೆಯಿಂದ ಊರ್ಜಿತವಾದ ಧಾರ್ಮಿಕ ಸಂಸ್ಥೆಗಳ ಮುಖಂಡರು ಆಧುನಿಕ ವಿಜ್ಞಾನದ ಹುನ್ನಾರಗಳನ್ನು ಉತ್ತೇಜಿಸುವುದು ಉಚಿತವಲ್ಲ ಎಂಬ ನನ್ನ ನಿಲುವನ್ನು ಕುರಿತು ನನಗೆ ಯಾವುದೇ ಸಂದೇಹಗಳಿಲ್ಲ. ಹಾಗೆ ಮಾಡುವುದರ ಮೂಲಕ ನೀವು ನಿಮ್ಮ ಬೇರುಗಳನ್ನು ಕತ್ತರಿಸಿಕೊಳ್ಳುತ್ತಿದ್ದೀರಿ.

ಸಮಾಜದಲ್ಲಿ ನಿಮ್ಮ ಸ್ಥಾನವು ಸಾವಯವ ಸಮುದಾಯವೊಂದರ ಬಗೆಗೆ ಇರುವ ಅರಿವಿನ  ಗ್ರಹಿಕೆಯಲ್ಲಿ ಮಾತ್ರ (ಸಮುದಾಯದ ಹೊರತಾಗಿ ನೀವು ಏನೂ ಅಲ್ಲ) ಸಕ್ರಮಗೊಳ್ಳುತ್ತದೆ. ಸಮುದಾಯ ಮತ್ತು ಸಮಾಜದೊಂದಿಗೆ ಸಮುದಾಯಕ್ಕೆ ಇರುವ ಸಂಬಂಧದ ಹಿನ್ನೆಲೆಯಲ್ಲಿ ಮಾತ್ರ ನಿಮ್ಮ ಸ್ಥಾನಕ್ಕೊಂದು ಮಹತ್ವ ಇದೆ. ಆದರೆ ಭಾರತದ ಅನೇಕ ಸ್ವಾಮೀಜಿಗಳು, ಅದು ಮಹೇಶ ಯೋಗಿಯವರ ಸಂಸ್ಥೆ ಇರಬಹುದು  ಆಗಿರಬಹುದು ಅಥವಾ ಆದಮಾರು ಮಠವಿರಬಹುದು, ಭಾರತದಲ್ಲಿ  ಇಪ್ಪತ್ತೋ ಇಪ್ಪತೈದೋ ಮಠಗಳಿರಬೇಕು. ಇವರೆಲ್ಲರೂ ಒಂದರ್ಥದಲ್ಲಿ ಧರ್ಮವನ್ನು ಅದರ ಮೂಲ ಸಂದರ್ಭದಿಂದ ಕಿತ್ತು ಬೇರೆಯದೇ ಆದ ಸಂದರ್ಭದೊಳಗೆ ಸ್ಥಾಪಿಸುತ್ತಿದ್ದಾರೆ ಎನಿಸುತ್ತದೆ. ಅಂತಹ ಒಂದು ನಡೆಯನ್ನು ನಾನು ಸ್ವೀಕರಿಸುವುದಿಲ್ಲ. ಸಮುದಾಯದ ಕಲ್ಪನೆಯನ್ನು  ಪುನರ್ ವ್ಯಾಖ್ಯಾನಮಾಡುವ  ನೈತಿಕ ಹೊಣೆಯನ್ನು ಒಬ್ಬ ಧಾರ್ಮಿಕ ಗುರು  ಎನಿಸಿಕೊಂಡವನು ಹೊರಬೇಕು.  ಮಹೇಶ ಯೋಗಿಯವರಿಗೆ ವೇದಿಕ್ ಸೈನ್ಸ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕುವ ಅಗತ್ಯವೇನಿತ್ತು? ಈಗಾಗಲೇ ಭಾರತದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕಿಂತ ಹೆಚ್ಚಿನದೇನನ್ನು ಇವರ  ಸಂಸ್ಥೆ ಮಾಡಬಲ್ಲದು? ಇವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕಿರುವಷ್ಟು ಸಂಪನ್ಮೂಲಗಳೆಲ್ಲಿಂದ ಬರಬೇಕು ಮೊದಲನೆಯದಾಗಿ? ಮೂರ್ನಾಲ್ಕು ಕೋಟಿ ಮಾತ್ರ ಇಟ್ಟುಕೊಂಡು ಗಂಭೀರ ಸ್ವರೂಪದ ಸಂಶೋಧನಾ ಕಾರ್ಯಕ್ರಮವನ್ನು ನಡೆಸಲಾಗುವುದಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನದ ವಿಭಾಗವು ಒಂದು ಬೃಹತ್ ಸಂಸ್ಥೆ. ಸಾವಿರ ಸಾವಿರ ಮಿಲಿಯನ್ ರೂಪಾಯಿಗಳು ಬೇಕು. ಅದರ ಬದಲು ಈ ಧಾರ್ಮಿಕ ಮಠಮಾನ್ಯಗಳು  ವೇದ, ಉಪನಿಷತ್ ಗಳ ಅಧ್ಯಯನಕ್ಕೆ ಬೇಕಾದರೆ ಉತ್ತೇಜನ ಕೊಡಲಿ.

ವಿಪರ್ಯಾಸವೆಂದರೆ ಆಧುನಿಕ ಜಗತ್ತನ್ನು ಆಕ್ರಮಿಸಿಕೊಂಡಿರುವ ಅಭಿವೃದ್ದಿ ಮತ್ತು ಪ್ರಗತಿಯ ಹೊಸ ಗ್ರಹಿಕೆಯೊಂದಿಗೆ ರಿಲಿಜನ್ ಕೂಡ ತನ್ನ ಅರ್ಥವ್ಯಾಪ್ತಿಯನ್ನು ಬದಲಾಯಿಸಿಕೊಳ್ಳುತ್ತಿದೆ. ರಿಲಿಜನ್ ಕೂಡ ಈಗ  ಆಶೋತ್ತರಗಳ ಮೇಲೆ ನಿರ್ಭರವಾದ ಅಗತ್ಯವಾಗಿದೆ. ಯಾಕೆಂದರೆ ಅದಕ್ಕೆ ಪ್ರಗತಿ ಮತ್ತು ಅಭಿವೃದ್ಧಿಯ ಹಿಂದೆ ನಾಗಾಲೋಟ ಹೂಡುತ್ತಿರುವ ಹೊಸ ಜಗತ್ತಿನೊಂದಿಗೆ ತಾನೂ ಓಡಬೇಕಾಗಿದೆ. ಆದರೆ ಹೊಸ ಜಗತ್ತಿಗೆ ಈ ರೀತಿಯ ರಿಲಿಜಿಯಸ್ ಸಂಸ್ಥೆಗಳ ಅವಶ್ಯಕತೆ ಇಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಅದಕ್ಕೆ ರಿಲಿಜನ್  ಒಂದು ಸಾಂಕೇತಿಕ ರೂಪದಲ್ಲಿ ಇದ್ದರೆ ಸಾಕು. ಯಾಕೆಂದರೆ ಆಧುನಿಕ ಜಗತ್ತಿನ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಂಕೇತಗಳಿಗೆ ಮಹತ್ವ. ಆದರೆ ಸಂಕೇತಗಳು ಮತ್ತು ಮೂಲಸತ್ವಗಳು ಒಂದೇ ಅಲ್ಲ; ಬೇರೆ ಬೇರೆ.

ಇವತ್ತಿನ ಸನ್ನಿವೇಶದಲ್ಲಿ  ಒಂದು ಕಡೆ ರಾಜಕೀಯ ಶಕ್ತಿಗಳು ಪ್ರಗತಿ ಮತ್ತು ಅಭಿವೃದ್ಧಿಯ ಹೆಗಲೇರಿಬಿಟ್ಟಿವೆ. ಈಗ ಎಂತಹ ಸನ್ನಿವೇಶ ನಿರ್ಮಾಣವಾಗಿದೆಯೆಂದರೆ  ಕಟ್ಟಾ ವಿರೋಧಿಗಳು ಕೂಡ ಈ ಒಂದು ವಿಷಯಕ್ಕೆ ರಾಜಿಯಾಗಿಬಿಟ್ಟಿದ್ದಾರೆ. ಹಿಂದೆಂದೂ ಕಾಣದಂತಹ ಛಲ, ದೃಢಸಂಕಲ್ಪ. ಇನ್ನೊಂದು ಕಡೆ ಸಹಜವಾಗಿಯೇ ಉದ್ಯಮಿಗಳು ಇದನ್ನು ತಮ್ಮ ಮೂಲಧ್ಯೇಯವೆಂಬಂತೆ ಮುನ್ನುಗ್ಗುತ್ತಿದ್ದಾರೆ. ಇದೆಲ್ಲಕ್ಕಿಂತ ದೊಡ್ಡ ವ್ಯಂಗ್ಯವೆಂದರೆ ಪರಂಪರೆಯ ರಕ್ಷಕರು ಎನಿಸಿಕೊಂಡ ಧಾರ್ಮಿಕ ಗುರುವೃಂದ ಕೂಡ ಈ ಒಂದು ವಿದ್ಯಮಾನಕ್ಕೆ ಉತ್ತೇಜನ ನೀಡುತ್ತಿವೆ. ಈ ಎಲ್ಲದರ ಪರಿಣಾಮವೆಂದರೆ ಹಳೆಯ ಸಮುದಾಯಗಳ ಕಲ್ಪನೆ ಬದಲಾಗಿಬಿಟ್ಟಿದೆ. ಜವಾಬ್ದಾರಿ ಎಂಬುದರ ಅರಿವು ಕೂಡ ಬದಲಾಗಿದೆ. ಏನಂದರೆ ನಾವು ಮೂರನೇ ದರ್ಜೆಯ ವಿಜ್ಞಾನವನ್ನು ಉತ್ಪಾದಿಸುತ್ತ ಉಳಿಯುತ್ತೇವೆ. ಆದರೆ ಮೂರನೆಯ ದರ್ಜೆಯ ವಿಜ್ಞಾನವನ್ನು ಯಾರೂ ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಒಂದೆರಡು ಹನಿ ರಿಲಿಜನ್ ಒಂದೆರಡು ಹನಿ ಆಧ್ಯಾತ್ಮವನ್ನು ಸಿಂಪಡಿಸಿ ತಯಾರಿಸಿದ ಮೂರನೇ ದರ್ಜೆಯ ವಿಜ್ಞಾನವನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ರಿಲಿಜನ್ ಕೂಡ ಪ್ರಗತಿ ಮತ್ತು ಅಬಿವೃದ್ಧಿಯ ಹೆಸರಿನಲ್ಲಿ ನಡೆಯುವ ಕ್ರೂರ ಆಟದ ಭಾಗೀದಾರ.

ಗೆಳೆಯರೇ, ಮಹಾತ್ಮ ಗಾಂಧಿಯವರ ಒಂದು ಪತ್ರದೊಂದಿಗೆ ನನ್ನ ಉಪನ್ಯಾಸವನ್ನು ಕೊನೆಗಾಣಿಸುತ್ತೇನೆ. ಅವರ ಗೆಳೆಯರೊಬ್ಬರಿಗೆ ಬರೆದ ಪತ್ರ. ಅದರ ಮೊದಲನೆಯ ಸಾಲೇ ಹೀಗಿದೆ:

ಹರಿಲಾಲನ ಗ್ಲಾಸ್ ಯಾವಾಗಲೂ ಕೆಂಪು….

ಹರಿಲಾಲ್ ಅವರು ನಿಮಗೆ ಗೊತ್ತಿದ್ದಂತೆ ಗಾಂಧೀಜಿಯವರ ಮಗ. ಅವರು ಅಡ್ಡ ಹಾದಿಗೆ ತಿರುಗಿದ್ದರು. ಪಾಪದ ಸಾಕಾರ ರೂಪವಾಗಿದ್ದರು. ಗಾಂಧಿಯವರು ಅದನ್ನೇನು ಮುಚ್ಚಿಡುವುದಿಲ್ಲ.

ಹರಿಲಾಲನ ಗ್ಲಾಸ್ ಯಾವಾಗಲೂ ಕೆಂಪು….

ಅದು ಕೆಂಪು ಯಾಕೆಂದರೆ ಅದರೊಳಗೆ ಮದ್ಯವಿದೆ. ನಂತರ ಗಾಂಧಿಯವರು ತಮ್ಮ ಮಗನ ವ್ಯಕ್ತಿತ್ವದ ಪತನಕ್ಕೆ ಇರಬಹುದಾದ ಕಾರಣಗಳನ್ನು ಶೋಧಿಸುತ್ತ ಹೋಗುತ್ತಾರೆ. ಮಗ ಯಾಕೆ ಹಾಗಾದ? ಅಂತ. ಆಮೇಲೆ ಅದಕ್ಕೆ ಅವರಿಗೆ ಒಂದು ಬಗೆಯ ಭಾರತೀಯರಿಗೆ ಸಾಕಷ್ಟು ಪರಿಚಿತವಿರುವ  ಆಧ್ಯಾತ್ಮಿಕ ಮನಶ್ಶಾಸ್ತ್ರದೊಳಗೆ ಪರಿಹಾರವೂ ಸಿಗುತ್ತದೆ. ಮುಂದೆ ಹೇಳುತ್ತಾರೆ. ’ಹರಿಲಾಲ್ ನನ್ನ ಭ್ರೂಣ’ ಹರಿಲಾಲ್ ಹುಟ್ಟಿದ ಆ ಹಂತದ ಬದುಕಿನಲ್ಲಿ ಗಾಂಧಿಯವರ ಕಾಮವಾಂಛೆ ಉತ್ತುಂಗದಲ್ಲಿತ್ತು. ಹರಿಲಾಲನನ್ನು ಸೃಷ್ಟಿಸಿದ ಗಳಿಗೆ ಅವರ ಬದುಕಿನಲ್ಲಿ ಅವರ ಅವರ ಕಾಮವಾಂಛೆಯು ಲಜ್ಜಾಹೀನ ಸ್ಥಿತಿಯಲ್ಲಿದ್ದ ಗಳಿಗೆ. ಮುಂದೆ  ’ಆ ಒಂದು ಗಳಿಗೆಯ ಫಲವನ್ನು ಈಗ ಅನುಭವಿಸುತ್ತಿದ್ದೇನೆ’ ಎಂದು ಬರೆಯುತ್ತಾರೆ. ನಾನು ಆಗ ಮಾಡಿದ ಪಾಪದ ಫಲವನ್ನು ಈಗ ಅನುಭವಿಸುತ್ತಿದ್ದೇನೆ ಎನ್ನುತ್ತಾರೆ. ನಾನು ಅದನ್ನು ಅನುಭವಿಸಲೇಬೇಕು ಎಂಬಲ್ಲಿಗೆ ಪತ್ರ ಮುಗಿಯುತ್ತದೆ.

ಈ ಪತ್ರವು ನಮಗೆ ಹೇಗೆ ಒಂದು ನಿದರ್ಶನವಾಗಬಲ್ಲದು ಎಂಬುದನ್ನು ನೋಡಿ. ಮೊದಲು ದೇಹದ  ವಿಶ್ಲೇಷಣೆಯೊಂದಿಗೆ ಆರಂಭವಾಗುತ್ತದೆ. ನಂತರ ಆತ್ಮವಿಶ್ಲೇಷಣೆಯತ್ತ ತಿರುಗುತ್ತದೆ. ನಂತರ ಗಾಂಧಿಯವರು ಹೇಳುತ್ತಾರೆ, ಹರಿಲಾಲ್ ನಿಜಕ್ಕೂ ಅವನ ಅಪ್ಪನಿಂದ ಬೇರ್ಪಟ್ಟಿಲ್ಲ. ಹರಿಲಾಲ್ ಮತ್ತು ಗಾಂಧಿ ಇಬ್ಬರನ್ನೂ ಸೃಷ್ಟಿಸಿದ ಸಮಾಜವು ಕೂಡ ಅಪ್ಪ ಮತ್ತು ಮಗನಿಂದ ಬೇರ್ಪಟ್ಟಿಲ್ಲ. ಪತ್ರದ  ಶುರುವಿನಿಂದ ಕೊನೆಯವರೆಗಿನ ಚಲನೆ ತುಂಬ ಸಂಕೀರ್ಣವಾದದ್ದು.  ಆದರೆ ಚಲನೆಯ ಘಟ್ಟಗಳನ್ನು ಗುರುತಿಸಬಹುದು. ಹೇಗೆಂದರೆ, ಮೊದಲು ಹರಿಲಾಲನ ಗ್ಲಾಸಿನಿಂದ ಶುರುವಾಗುತ್ತದೆ. ನಂತರ ಒಬ್ಬ ಅಪ್ಪನಾಗಿ ಗಾಂಧಿಯವರನ್ನು, ನಂತರ ಮಗನನ್ನು, ನಂತರ ಸಮಾಜವನ್ನು ವಿಶ್ಲೇಷಿಸುವ ಮೂಲಕ ಆತ್ಮವಿಶ್ಲೇಷಣೆಗೆ ಇಳಿಯುತ್ತದೆ.

ತಾತ್ಪರ್ಯ ಇಷ್ಟೇ. ನಮಗೆ ದೇಹದ ಒಂದು ಹೊಸ ಕಲ್ಪನೆ ಇರದೇ ಹೋದಲ್ಲಿ, ನಮ್ಮ ಬಯಕೆಗಳಿಗೆ ಇರುವ ಮಿತಿಗಳ ಬಗೆಗೆ ಹೊಸ ಅರಿವು ಮೂಡದೇ ಹೋದಲ್ಲಿ ನಾವು ಪ್ರಗತಿ ಮತ್ತು ಅಭಿವೃದ್ಧಿಯ ಬಗೆಗೆ ಹೊಸ ಅರಿವನ್ನು ಸೃಷ್ಟಿಸಲಾರೆವು ಎಂಬುದು ನನ್ನ ವಾದ. ನಾನು ಏನು ಹೇಳಬೇಕೆಂದಿದ್ದೇನೋ ಅದನ್ನು ನಮ್ಮ ಕನ್ನಡದ ಮೇರುಕವಿ ಪಂಪ  ಅದ್ಭುತವಾಗಿ ಅಭಿವ್ಯಕ್ತಿಸುತ್ತಾನೆ. ಕೆಡುವೊಡಲಕೆಡುವರಾಜ್ಯದ…ಕೆಡುವ ದೇಹ ಮತ್ತು ಕೆಡುವ ರಾಜ್ಯ ಇವೆರಡಕ್ಕೂ ಪಂಪ ಬಹಳ ಚೆನ್ನಾಗಿ ಕೊಂಡಿ ಕೂಡಿಸುತ್ತಾನೆ.  ಜೈನ ತಾತ್ವಿಕ ಪರಂಪರೆಯು ಹೀಗೆ ಕೂಡಿಸಲಾಗದ ಎರಡು ಸಂಗತಿಗಳನ್ನು ಕೂಡಿಸುವ ಬಗೆ ನಿಜಕ್ಕೂ ಅಸಾಧಾರಣವಾದದ್ದು. ದೇಹ ಕೊಳೆತರೆ ರಾಜ್ಯವೂ ಕೊಳೆಯುತ್ತದೆ. ದೇಹ ಕೊಳೆತರೆ ಸಮಾಜವೂ ಕೊಳೆಯುತ್ತದೆ. ಮಿತಿಯೇ ಇಲ್ಲದ ಬಯಕೆಗಳನ್ನೇ ಅಗತ್ಯವೆಂದು ಭಾವಿಸುವ ಒಂದು ಸಂಸ್ಕೃತಿ ನಿರ್ಮಾಣವಾದರೆ  ಅಥವಾ ಅನ್ಯ ಆಶೋತ್ತರಗಳ ಮೇಲೆ ನಿರ್ಭರವಾದ ಅಗತ್ಯಗಳ ಕಲ್ಪನೆಯನ್ನು ಹೇರುವ ಒಂದು ಪರಿಸರ ನಿರ್ಮಾಣವಾದರೆ ಅಂತಹ ಒಂದು ಸಮಾಜಕ್ಕೆ ವಿಮೋಚನೆಯಿಲ್ಲ. ಇಷ್ಟೆಲ್ಲ ಹೇಳಿಯೂ ಒಂದು ಪ್ರಶ್ನೆ ಉಳಿದುಕೊಳ್ಳುತ್ತದೆ. ಇದೇ ಮಾತನ್ನು  ನಾವು ತಳಸಮುದಾಯದವರಿಗೂ ಅನ್ವಯಿಸಬಹುದೆ ಎಂಬ ಪ್ರಶ್ನೆ.  ಅಲ್ಲೊಂದು ಸಮಸ್ಯೆಯಿದೆ. ಯಾಕೆಂದರೆ ಮೊದಲು ಎಲ್ಲ ಸಮುದಾಯದವರನ್ನೂ ಸಮಾನವಾಗಿ ಒಳಗೊಂಡ ಒಂದು  ಒಂದು ಸಮಗ್ರ ಸಮಾಜವನ್ನು ಪುನರ್ ನಿರ್ಮಿಸಬೇಕಾಗುತ್ತದೆ. ಅಂದರೆ ಆ ಒಂದು ಸಂದರ್ಭದಲ್ಲಿ  ಈ ಸಮಾಜದ ಕುಲೀನರು ಎನಿಸಿಕೊಂಡವರು ನನ್ನ ವಾದವನ್ನು ಒಪ್ಪಿಕೊಂಡರೆ ಆಗ  ತಳಸಮುದಾಯದವರನ್ನೂ ಒಪ್ಪಿಸಬಹುದು. ಅದರ ಬದಲು ಬರೀ ತಳಸಮುದಾಯದವರನ್ನಷ್ಟೇ ಒಪ್ಪಿಸಲು ಹೊರಟರೆ ಆಗ ಅದನ್ನು ತಿರಸ್ಕರಿಸುವ ಹಕ್ಕು ಅವರಿಗಿರುತ್ತದೆ. ಆಗ ಬಹುಶಃ ಮುಖಂಡ ಮತ್ತು ಗುಲಾಮ ಒಂದೇ ದೋಣಿಯೊಳಗೆ ಕಾಲಿಡುತ್ತಾರೆ.  ಅದು ಅದು ಇಬ್ಬರದ್ದೂ ದುರಂತ ಎಂದಷ್ಟೇ ಹೇಳಬಲ್ಲೆ.


ಮೂಲ ಇಂಗ್ಲೀಷ್ ಭಾಷಣ : ಡಿ.ಆರ್ ನಾಗರಾಜ್ | ಕನ್ನಡ ಅನುವಾದ ಮತ್ತು ಬರಹ ರೂಪ : ಪ್ರಜ್ಞಾ ಶಾಸ್ತ್ರಿ

ಪ್ರತಿಕ್ರಿಯಿಸಿ