ಅಯೋಧ್ಯೆ: ಸಂಕೇತದ ಗೆಲುವು

ಕನ್ನಡದ ಅಭಿಜಾತ ಚಿಂತಕ ಕೀರ್ತಿನಾಥ ಕುರ್ತಕೋಟಿಯವರ ಪ್ರಬಂಧದಲ್ಲಿ ಈ ಮುಂದಿನ ಸಾಲುಗಳಿವೆ:
“ನಮ್ಮ ಸಂಸ್ಕೃತಿ ಸಂಕೇತಗಳ ಸಂಸ್ಕೃತಿಯಾಗಿದೆ. ನಮ್ಮ ದೇವರಿಗೆ ಅರ್ಪಿಸುವ ಷೋಡಶೋಪಚಾರ ಪೂಜೆಗೂ ರಾಜನಿಗೆ ಅರ್ಪಿಸುವ ಪೂಜೆಗೂ ಅಂತರವಿಲ್ಲ. ಆದ್ದರಿಂದ ಕೆಲವರಿಗೆ ದೇವರು ರಾಜನಾಗುತ್ತಾನೆ. ಇನ್ನು ಕೆಲವರಿಗೆ ರಾಜನೇ ದೇವರಾಗುತ್ತಾನೆ.”
 
ಈ ದಿನ ಈ ಬರಹವನ್ನು ಯಾವ ಕಾರಣಕ್ಕಾಗಿ ಪ್ರಕಟಿಸುತ್ತಿದ್ದೇವೆ ಎಂದು ವಿವರಿಸುವ ಅಗತ್ಯವಿಲ್ಲ. ಆದರೆ, ಮುಖ್ಯ ವಿಚಾರವೆಂದರೆ, ಪ್ರತಿಕ್ಷಣವೂ ವಾಸ್ತವದಲ್ಲಿಯೇ ನಿಜನರಕವಾಗುತ್ತಿರುವ ಬದುಕು ಮತ್ತು ಜಗತ್ತುಗಳನ್ನು ಆಡಳಿತದ ರಾಜಕಾರಣ ಸಂಕೇತಗಳ ಚಪ್ಪರದಲ್ಲಿ ಮುಚ್ಚಿಹಾಕುತ್ತಿದೆ. ಅದನ್ನೆದುರಿಸಬೇಕಾದ ಪ್ರತಿರಾಜಕಾರಣವೂ ಈ ಗುಟ್ಟನ್ನು ಅರಿಯದೇ ಸೋಲುತ್ತಿದೆಯೇ?
ರಾಜಾ ರವಿವರ್ಮ

ರಾಜಾ ರವಿವರ್ಮ

ನಾನು ಅಯೋಧ್ಯೆಯನ್ನು ನೋಡಿದವನಲ್ಲ; ಮುಂದೆ ಕೂಡ ನಾನು ನೋಡಲಿಕ್ಕಿಲ್ಲ.ನಾನು ಅಯೋಧ್ಯೆಯನ್ನು ಕಂಡದ್ದು ರಾಮಾಯಣದ ಬಾಲಕಾಂಡದ ಐದು ಮತ್ತು ಆರನೆಯ ಸರ್ಗಗಳಲ್ಲಿ. ಅದನ್ನು ಬಿಟ್ಟರೆ ಕಾಳಿದಾಸನ ‘ರಘುವಂಶ’ದ ಹದಿನಾರನೆಯ ಸರ್ಗದಲ್ಲಿ. ರಾಮ ತನ್ನ ಅವತಾರ ಸಮಾಪ್ತಿಯ ಕಾಲದಲ್ಲಿ ಸರಯೂ ನದಿಯನ್ನು ನಿಚ್ಛಣಿಕೆಯನ್ನಾಗಿ ಮಾಡಿಕಂಡು ಇಡೀ ಅಯೋಧ್ಯೆಯನ್ನು ಸ್ವರ್ಗಕ್ಕೆ ತೆಗೆದುಕೊಂಡು ಹೋದನಂತೆ. ಈಗ ರಾಮನೂ ಇಲ್ಲ, ಅಯೋಧ್ಯೆಯೂ ಇಲ್ಲ. ರಾಮನ ತರುವಾಯ ಅಲ್ಲಿ ಕಾಡು ಬೆಳೆಯಿತು. ಅಯೋಧ್ಯೆಯ ನಗರದೇವತೆ ಕುಶನಿಗೆ ಕಾಣಿಸಿಕೊಂಡು ಮತ್ತೆ ನಗರವನ್ನು ಕಟ್ಟಲು ಕೇಳಿಕೊಂಡಳಂತೆ. ಕುಶ ಕಟ್ಟಿಸಿದ್ದು ಎರಡನೆಯ ಅಯೋಧ್ಯೆಯನ್ನು. ಅದೂ ಹಾಳಾಗಿರಬೇಕು. ಆದಿ ತೀರ್ಥಂಕರನ ಮಗ ಭರತ ಚಕ್ರವರ್ತಿಯ ರಾಜಧಾನಿಯೂ ಅಯೋಧ್ಯೆಯೇ. ಪುರಾಣ ಕಾಲವನನ್ನು ಬಿಟ್ಟು ಇತಿಹಾಸಕ್ಕೆ ಕಾಲಿಟ್ಟರೆ ಶ್ರಾವಸ್ತಿಯಂತೆ ಅಯೋಧ್ಯೆ ಕೂಡ ಬೌದ್ಧ ಧರ್ಮದ ಮಹತ್ವದ ಕೇಂದ್ರವಾಗಿತ್ತು. ಶತ್ರುಗಳಿಂದ ಗೆಲ್ಲಲು ಅಸಾಧ್ಯವೆಂದು ಈ ಊರಿನ ಹೆಸರು ಅಯೋಧ್ಯೆಯೆಂದಾಯಿತು. ಅನ್ವರ್ಥಕವಾದ ಹೆಸರುಳ್ಳ  ನಗರವನ್ನು ದಶರಥ ಆಳುತ್ತಿದ್ದನೆಂದು ರಾಮಾಯಣ ಹೇಳುತ್ತದೆ. ಈ ಮಾತು ಇಂದಿಗೂ ನಿಜ. ಈಗ ಕೂಡ  ನಗರದ ಮೇಲೆ ದಾಳಿಯಿಟ್ಟವರು ಶತ್ರುಗಳಲ್ಲ, ನಮ್ಮವರೇ.

ಕಳೆದ ನಲವತ್ತು ವರ್ಷಗಳಿಂದ ನಮ್ಮ ದೇಶ ಇತಿಹಾಸದಲ್ಲಿ ಬದುಕುವುದನ್ನು ಕಲಿಯತೊಡಗಿದೆ. ಇತಿಹಾಸದ ಅರಿವಿಗೆ ಮಾತ್ರ ಗತಕಾಲದ ನನೆನಪುಗಳಿರುತ್ತವೆ. ವರ್ತಮಾನದ ಸಂಕಟಗಳು ಮತ್ತು ಭವಿಷ್ಯದ ಹೆದರಿಕೆ ಇರುತ್ತವೆ. ಅಲ್ಲದೆ ನಿರಂತರವಾದ ಸತ್ಯದ ಅನ್ವೇಷಣೆಯಿಂದಾಗಿ ಇತಿಹಾಸಕ್ಕೆ ಮರೆವು ಗೊತ್ತಿಲ್ಲ. ಪುರಾತನ ಅವಶೇಷಗಳು, ಹಳೆಯ ಕಟ್ಟಗಳು, ಕಡತಗಳು, ಓಲೆಗರಿಯ ಪುಸ್ತಕಗಳು ಇವೆಲ್ಲ ಹಳೆಯ ನೆನಪುಗಳನ್ನು ಜೀವಂತವಾಗಿಸುತ್ತವೆ. ವರ್ತಮಾನದ ದೃಷ್ಟಿ ಕ್ರೂರವಾದದ್ದು ಹಳೆಯ ಕಟ್ಟಡಗಳು ಸೀಳಿಹೋಗುವಷ್ಟು ಕ್ರೂರವಾದದ್ದು. ಹಳೆಯ ಕಾಳಗಗಳು, ಹಳೆಯ ಅಪಮಾನ ಸೋಲುಗಳು, ಹಳೆಯ ಪ್ರೀತಿ ಅಭಿಮಾನಗಳು ಇವೆಲ್ಲ ಇತಿಹಾಸದ ನೆನಪಿನಿಂದ ಜೀವಂತವಾಗುತ್ತವೆ. ವರ್ತಮಾನದ ಸಂದರ್ಭದಲ್ಲಿ ಬಂದು ನಿಂತು ಏನೇನನ್ನೋ ಬೇಡುತ್ತವೆ, ಕಾಡುತ್ತವೆ. ಇತಿಹಾಸದ ದಿಕ್ಕು ಬದಲಾಗಿದ್ದಕ್ಕೆ ಆಕ್ರೋಶವನ್ನು ವ್ಯಕ್ತಪಡಿಸುತ್ತವೆ. ಶ್ರೇಯಾಂಶ ಚಕ್ರವರ್ತಿಯ ನೀರಡಿಕೆಯನ್ನು ತಣಿಸಲು ಅವನು ಇನ್ನೊಂದು ಜನ್ಮವೆತ್ತಿ ಬರಬೇಕಾಯಿತಂತೆ. ನಾಡಿನ ಸೇಡು ಜನ್ಮಾಂತರದ ಸೇಡು; ತನಗೆ ತಕ್ಕ ದೇಹವನ್ನು ಅದು ವರ್ತಮಾನಕಾಲದಲ್ಲಿ ಹುಡುಕತೊಡಗಿದೆ. ನಮ್ಮ ಮನಸ್ಸು ಬುದ್ಧಿಗಳಿನ್ನೂ ಹಳೆಯ ಬಂಧನಗಳಿಂದ ಮುಕ್ತವಾಗಿಲ್ಲವೋ ಏನೋ! ಶಸ್ತ್ರಗಳನ್ನು ಧರಿಸುವ ಹಕ್ಕನ್ನು ನಾವು ಬ್ರಿಟಿಶರ ಕಾಲದಲ್ಲಿಯೇ ಕಳೆದುಕೊಂಡಿದ್ದೇವೆ. ಆದರೂ ನಮಗಿರುವ ಕೈಯೇ ಅತ್ಯಂತ ಅನಾಗರಿಕವಾದ ಆಯುಧವಾಗಿ ಪರಿಣಮಿಸಿದೆ. ಇನ್ನೊಬ್ಬರನ್ನು ಕೊಲ್ಲಲು ಹಿಂಸೆಯೊಂದಿದ್ದರೆ ಸಾಕು, ಬೇರೆ ಆಯುಧ ಬೇಕಾಗಿಯೇ ಇಲ್ಲ.

 

ರಾಮ ಹುಟ್ಟಿದ್ದು ಚೈತ್ರಮಾಸದ ನಡುಹಗಲಲ್ಲಿ, ಬಾಬರಿ ಮಸೀದಿಯ ಗುಮ್ಮಟಗಳು ಬಿದ್ದಿದ್ದು ಡಿಸೆಂಬರ್ ತಿಂಗಳ ನಡುಹಗಲಲ್ಲಿ. ಇದು ಈ ಕೃತ್ಯದ ಕಾಲದೇಶಗಳ ಅಧಿಷ್ಠಾನ,  ಕೃತ್ಯದ ಕರ್ತಾರರೆಷ್ಟು ಎಂದು ಎಣಿಸಿ ಹೇಳುವಂತಿಲ್ಲ. ಸಾವಿರಾರು ಕೈಗಳು ತೇರನ್ನೆಳೆದಾಗ ತೇರಿನ ಚಲನೆಗೆ ಯಾವ ಕೈ ಹೊಣೆ ಎಂದು ಹೇಗೆ ಹೇಳಬೇಕು? ಒಂದು ಕೈ ಇದನ್ನು ಮಾಡಿಲ್ಲ. ಇದಕ್ಕೆ ಮೂಲ ಕಾರಣವೆಂದರೆ ನೂರಾರು ವರ್ಷಗಳವರೆಗೆ ಕಾದಿಟ್ಟುಕೊಂಡು ಬಂದಿರುವ ದ್ವೇಷ. ದ್ವೇಷದ ಅಭಿವ್ಯಕ್ತಿಗೆ ಯಾರಾರೋ ಅಡ್ಡ ಬಂದಿದ್ದರಿಂದ ಅದು ಮನಸ್ಸಿನಲ್ಲಿಯೇ ಬೆಳೆದು ಬಂದಿತು. ನಮ್ಮ ಅಂತರಂಗದಲ್ಲಿ ಇಂಥ ಅಸಂಖ್ಯಾತವಾದ ಬಾಬರಿ ಮಸೀದಿಗಳು ಉಧ್ವಸ್ತವಾಗಿವೆ. ಶತ್ರುಗಳು ಹೊರಗಿನಿಂದ ಬಂದಿದ್ದರೆ ಅವರ ಜೊತೆಗೆ ಯುದ್ಧಮಾಡಿ, ಸೋಲನ್ನೋ, ಗೆಲುವನ್ನೋ ಅನುಭವಿಸಿ, ಮನಸ್ಸನ್ನು ತೆರುವು ಮಾಡಿಕೊಳ್ಳಬಹುದಾಗಿತ್ತು. ಆಕ್ರಮಣ ಮತ್ತು ಸ್ವರಕ್ಷಣೆ ಇವು ಯುದ್ಧದ ಮುಖ್ಯವಾದ ಪರಿಭಾಷೆಯಾಗಿರುವುದರಿಂದ ಅಳುಕಿಲ್ಲದೆ ಒಂದು ಕಾರ್ಯವನನ್ನು ಮಾಡಿ ಮುಗಿಸಬಹುದಾಗಿತ್ತು. ನಾಡಿಗೆ ಸ್ವಾತಂತ್ರ್ಯ ಬಂದ ಮೇಲೆ ಕೂಡ ಮೂರು ನಾಲ್ಕು ಸಲ ಯುದ್ಧಮಾಡಿ ನಮ್ಮ ಆತ್ಮಸಾಕ್ಷಿಯನ್ನು ನಿರ್ಮಲವಾಗಿಟ್ಟುಕೊಂಡಿದ್ದೇವೆ. ರಾಜಕೀಯದ ಭಾಷೆಯಲ್ಲಿಯೇ ಸ್ವೋಪಜ್ಞತೆಗೆ ಅವಕಾಶವಿಲ್ಲ.

 

ಆದರೆ ಈ ಪ್ರಸಂಗ ಬೇರೆಯಾಗಿತ್ತು. ಶತ್ರುಗಳಿಲ್ಲದೆಯೇ ಯುದ್ಧ ಮಾಡಬೇಕಾಗಿತ್ತು. ಅದಕ್ಕಾಗಿ ಶತ್ರುಗಳನ್ನು ಹುಡುಕಿ ಗುರುತಿಸಬೇಕಾಗಿತ್ತು. ಗುರುತಿಸಿದ ಮೇಲೆ ಕೂಡ ಅವರೊಡನೆ ಯುದ್ಧ ಮಾಡುವಂತಿರಲಿಲ್ಲ. ಅದಕ್ಕಾಗಿ ನಲ್ವತ್ತು ವರ್ಷಗಳಿಂದ ಪ್ರಾರ್ಥನೆ ಕಾಣದ ಈ ಗಚ್ಚುಕಲ್ಲಿನ ಮಸೀದಿಯಲ್ಲಿ, ಅರಕ್ಷಿತವಾದ ಕಟ್ಟಡದಲ್ಲಿ, ಶತ್ರುಗಳನ್ನು ಆವಾಹನೆ ಮಾಡಬೇಕು. ಸೂರ್ಯನ ಮುಖಕ್ಕೆ ಚಕ್ರವನ್ನು ಹಿಡಿದು ನಡುಹಗಲಲ್ಲಿ ಇರುಳನ್ನು ಸೃಷ್ಟಿಸಿ ಅಂತರಂಗದಿಂದ ಬಹಿರಂಗವನ್ನು ಮುಚ್ಚಬೇಕಾಯಿತು. ಒಬ್ಬ ವ್ಯಕ್ತಿಯ ಡಾಂಭಿಕತೆ, ಎಷ್ಟು ಮುಚ್ಚಿಕೊಂಡರೂ ಜನಾಂಗದ ಬೆಳಕಿನಲ್ಲಿ ಬಯಲಾಗುತ್ತದೆ. ಆದರೆ ಜನಾಂಗದ ಡಾಂಭಿಕತೆ, ದೇವರ ಬೆಳಕಿನಲ್ಲಯೇ ಬಯಲಾಗಬೇಕು. ಬೈಬಲ್ಲಿನಲ್ಲಿ ಇಂಥ ಶಾಪಿತ ಜನಾಂಗಗಳ ಕಥೆಗಳಿವೆ.

 

ಅಣ್ಣತಮ್ಮಂದಿರಂಥ ಶತ್ರುಗಳು ಬೇರೆ ಇಲ್ಲ ಎಂದು ಮೊದಲು ತಿಳಿದುಕೊಂಡ ಜನಾಂಗ ನಮ್ಮದಾಗಿದೆ. ದೇವತೆಗಳು ದಾನವರು ಕೌರವರು ಪಾಂಡವರು ಇವರ ಯುದ್ಧಗಳು ನಮ್ಮ ನನೆನಪಿನಿಂದ ಮಾಸಿಹೋಗಿಲ್ಲ. ಜಗತ್ತಿನ ಉಳಿದ ಸಂಸ್ಕೃತಿಗಳಲ್ಲಿ ಪರಕೀಯನಾದವನು ಶತ್ರುವಾಗುತ್ತಿದ್ದ. ಆದರೆ ನಮ್ಮಲ್ಲಿ ಮಾತ್ರ ಸ್ವಜನರೂ ಶತ್ರುಗಳಾಗುತ್ತಾರೆ ಅಥವಾ ಸ್ವಜನರಾದ್ದರಿಂದಲೇ ಶತ್ರುಗಳಾಗುತ್ತಾರೆ. ಯಾರಿಗೆ ಯಾವ ಪಾತ್ರವನ್ನು ಕೊಡಬೇಕೆಂಬುದನ್ನು ನಮ್ಮ ಸ್ವಾರ್ಥ ನಿರ್ಣಯಿಸುವುದರಿಂದ ಈ ಆಟ ಸುಲಭವಾಗಿ ನಡೆದು ಹೋಗುತ್ತದೆ. ತಾರತಮ್ಯ ಜ್ಞಾನ, ಸರಿ ತಪ್ಪುಗಳ ವಿವೇಕ, ನಡೆವಳಿಕೆ, ಸಂಬಂಧಗಳು ಇವೆಲ್ಲ ನಿರ್ಣಯವಾಗುವುದು ಸ್ವಾರ್ಥದಿಂದಲೇ. ರಾಜಕೀಯದ ಆಟ ಈಗ ಜೀವನದ ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿಕೊಂಡುಬಿಟ್ಟಿದೆ. ಆದರೆ ಎಲ್ಲಕ್ಕಿಂತ ಹೆಚ್ಚು ಅಪಾಯಕಾರಿಯಾದದ್ದೆಂದರೆ ಆ ಆಟದಿಂದ ನಮ್ಮ ಧರ್ಮವೂ ದೂರ ಉಳಿದಿಲ್ಲ. ಸರಿ ತಪ್ಪುಗಳ, ನೀತಿ – ಅನೀತಿಗಳ, ಕಪ್ಪು ಬಿಳುಪುಗಳ ವಿವೇಕವನ್ನು ನಿಖರವಾಗಿ ಹೇಳಬಲ್ಲ ಅಧಿಕಾರವುಳ್ಳ ಧರ್ಮ ಇಂದು ಅದಕ್ಕಾಗಿ ರಾಜಕೀಯದ ನೆರವನ್ನು ಕೇಳತೊಡಗಿದೆ.

 

ಅಯೋಧ್ಯೆಗೆ ಸಾವಿರಾರು ಜನರು ಅಭಿಯಾನ ಮಾಡಿದ ಉದ್ದೇಶ ಅವರೇ ಹೇಳಿದಂತೆ ಸಾಂಕೇತಿಕ ಕರಸೇವೆಯಾಗಿತ್ತು. ‘ಕರಸೇವೆ’ ಅಥವಾ ‘ಕಾರಸೇವೆ’ ಈ ಶಬ್ದದ ಅರ್ಥವೇ ಸಂದಿಗ್ಧವಾಗಿದೆ. ಅದರ ಅರ್ಥ ಇದ್ದ ಮಂದಿರದ ಜೀರ್ಣೋದ್ಧಾರ ಅಥವಾ ಅದು ಹೊಲಸಾಗದಂತೆ ಸ್ವಚ್ಛ ಮಾಡುವುದು ಎಂದು ಸಿಖ್ ಜನಾಂಗದವರ ಅರ್ಥವಾಗಿದೆ. ಸಿಖ್ ಜನಾಂಗದಲ್ಲಿ ಗುರುದ್ವಾರಗಳು ಇಡಿಯ ಸಮಾಜಕ್ಕೇ ಸೇರಿಕೊಂಡಿರುವುದರಿಂದ ಅವರು ಮಾಡುವ ಕರಸೇವೆ ಒಂದು ಸಾಮಾಜಿಕ ಕ್ರಿಯೆಯಾಗುತ್ತದೆ. ನಮ್ಮ ದೇವಸ್ಥಾನಗಳು ನಮ್ಮ ಚರ್ಚುಗಳಲ್ಲ, ಗುರುದ್ವಾರಗಳಲ್ಲ. ಹಿಂದಿನ ಕಾಲದ ರಾಜ ಮಹಾರಾಜರ, ಧನಿಕ ವರ್ತಕರ ಪ್ರತಿಷ್ಠೆಗಾಗಿಯೇ ಅಥವಾ ಭಕ್ತಿಗಾಗಿಯೇ ಹುಟ್ಟಿ ಬಂದವುಗಳು. ಅವು ನಮ್ಮ ಸಾಮಾಜಿಕ ಸೊತ್ತುಗಳೆಂದು ತಿಳಿದರೂ ಕೂಡ ನಮ್ಮ ಯಾವ ಧಾರ್ಮಿಕ ಕ್ರಿಯೆಯೂ (ನಾಮಕರಣ, ಮದುವೆ, ಉಪನಯನ) ಅಲ್ಲಿಯೇ ನಡೆಯಬೇಕೆಂದ ಕಡ್ಡಾಯವೇನಿಲ್ಲ. ಆದರೂ ಮಂದಿರ ಹುಟ್ಟುವುದಕ್ಕಿಂತ ಮೊದಲೇ ಅದರ ಕರಸೇವೆಗೆ ಲಕ್ಷಗಟ್ಟಲೆ ಜನ ಹೋದರು. ಕರಸೇವೆಯೂ ಸಾಂಕೇತಿಕವಾದ ಕರಸೇವೆ. ವಾಸ್ತವವಾಗಿ ನಡೆದದ್ದೆಂದರೆ, ಸಂಕೇತ ಕೂಡ ನಿರೀಕ್ಷಿಸದಿದ್ದ ಘೋರವಾದ ವಾಸ್ತವ ಸಂಗತಿ. ಬಾಬರ ಮಸಿದಿ ನೆಲಸಮವಾದದ್ದು. ಇದು ನಿರೀಕ್ಷಿಸದಿದ್ದರೂ ಆಗಬೇಕಾದದ್ದೇ. ಸತ್ಯದ ಸಂಕೇತದಿಂದ ದ್ವೇಷವನ್ನು ಬಹಳ ಹೊತ್ತು ಮುಚ್ಚಿಡಲಾಗುವುದಿಲ್ಲ. ಯಾಕೆಂದರೆ ಸಂಕೇತದ ಕೆಲಸ ಮುಚ್ಚುವುದಲ್ಲ, ತೆರೆಯುವದು. ಜನ್ನನ ‘ಯಶೋಧರ ಚರಿತೆ’ಯಲ್ಲಿಯ ಹಿಟ್ಟಿನ ಕೋಳಿ ಕೋಳಿಯಲ್ಲ. ಒಂದು ಸಂಕೇತ; ಅದರೊಳಗಿಂದ ಕೂಗಿದ್ದೂ ಕೋಳಿಯಲ್ಲ ಬೆಂತರ. ಆದರೆ ಬೆಂತರದ ದನಿ ಮಾತ್ರ ಕೋಳಿಯದೇ.

A fowler kills a bird and the cry of its mate gives Valmiki the measures in which he composes the ‘Ramayana’ 1597-1605 Mohan , (Indian, Mughal dynasty Opaque watercolor, ink, and gold on paper)

ನಮ್ಮ ಸಂಸ್ಕೃತಿ ಸಂಕೇತಗಳ ಸಂಸ್ಕೃತಿಯಾಗಿದೆ. ನಮ್ಮ ದೇವರಿಗೆ ಅರ್ಪಿಸುವ ಷೋಡಶೋಪಚಾರ ಪೂಜೆಗೂ ರಾಜನಿಗೆ ಅರ್ಪಿಸುವ ಪೂಜೆಗೂ ಅಂತರವಿಲ್ಲ. ಆದ್ದರಿಂದ ಕೆಲವರಿಗೆ ದೇವರು ರಾಜನಾಗುತ್ತಾನೆ. ಇನ್ನು ಕೆಲವರಿಗೆ ರಾಜನೇ ದೇವರಾಗುತ್ತಾನೆ. ಉಜ್ಜಯಿನಿಗೆ ಮಹಾಕಾಲನೇ ರಾಜನೆಂದು ಹೇಳುತ್ತಾರೆ. ಕಾಶೀಯಂತೂ ವಿಶ್ವನಾಥನ ಅವಿಮುಕ್ತ ಕ್ಷೇತ್ರ ಅಂದ ಮೇಲೆ ಈ ಎರಡೂ ಪ್ರದೇಶಗಳಲ್ಲಿ ರಾಷ್ಟ್ರಪತಿಯ ಶಾಸನವೂ ನಡೆಯಲಾರದು. ಅದಕ್ಕಾಗಿಯೇ ಅಯೋಧ್ಯೆಯನ್ನು ವಿಶ್ವಾಮಿತ್ರನಿಗೆ ದಾನವಾಗಿ ಕೊಟ್ಟ ಹರಿಶ್ಚಂದ್ರ ಕಾಶಿಗೆ ಹೋಗಬೇಕಾಯಿತು. ಸಂಸ್ಕೃತಿಯಲ್ಲಿಯ ಸಾಂಕೇತಿಕತೆಯಿಂದಾಗಿ ಹುಟ್ಟುವ ಸಂದಿಗ್ಧತೆಗಳಿವು. ನಮ್ಮ ದೇಶ ರಾಮರಾಜ್ಯವಾಗಬೇಕು ಎನ್ನುವದು ಕೂಡ ಇಂಥ ಒಂದು ಸಂದಿಗ್ಧ ಆಶಯವಾಗಿದೆ. ರಾಮನ ಪಾದುಕೆಗಳಿಗೇ ರಾಜ್ಯಾಭಿಷೇಕ ಮಾಡಿ, ಪಾದುಕೆಗಳ ಪ್ರತಿನಿಧಿಯಾಗಿ ಭರತ ರಾಜ್ಯದಾಡಳಿತವನ್ನು ನಡೆಸಿದ ಎಂದು ರಾಮಾಯಣ ಹೇಳುತ್ತದೆ. ಹದಿನಾಲ್ಕು ವರ್ಷಗಳ ವನವಾಸವನ್ನು ಮುಗಿಸಿಕೊಂಡು ರಾಮ ಅಯೋಧ್ಯೆಗೆ ತಿರುಗಿ ಬಂದೇಬರುತ್ತಾನೆಂದು ಭರವಸೆಯಿಂದ ಅವನು ಸಮಾಧಾನದಿಂದ ನಂದಿಗ್ರಾಮದಲ್ಲಿ ಕಾದು ಕುಳಿತಿದ್ದ. ರಾಮನ ಪಾದುಕೆಗಳಿರುವ ತನಕ ರಾಜ್ಯಕ್ಕೆ ಕ್ಷೇಮವಿದೆ ಎಂದು ಅವನು ನಂಬಿದ್ದ. ಅವನಲ್ಲಿ ನಂಬಿಕೆಯಿಟ್ಟಿದ್ದ ಅಯೋಧ್ಯೆಯ ಪ್ರಜೆಗಳು ನಂಬಿದ್ದರು. ಈ ನಂಬಿಗೆಯ ಬಲದಿಂದ ರಾಮರಾಜ್ಯ ಸುರಕ್ಷಿತವಾಗಿ ಉಳಿಯಿತು. ಆದರೆ ಇದೇ ಬಗೆಯ ಸಾಂಕೇತಿಕ ಆಡಳಿತವನ್ನು ನಡೆಸಿದ್ದ ರಾಜ ಪ್ರತಿನಿಧಿಗಳು ರಾಜ್ಯವನನ್ನು ನುಂಗಿಹಾಕಿದ ಸಾವಿರ ಉದಾಹರಣೆಗಳು ನಮ್ಮ ಇತಿಹಾಸದಲ್ಲಿವೆ. ಕಾರಣವಿಷ್ಟೆ, ಸಂಕೇತ ಸತ್ಯವನ್ನು ತೆರೆದೇ ತೀರುತ್ತದೆ. ಮುಚ್ಚಿದಷ್ಟೂ ತೆರೆಯುತ್ತದೆ. ವ್ಯವಸ್ಥೆಯ ಹೆಸರಿನಲ್ಲಿ ಅನಾಯಕತ್ವವನ್ನೂ ಬಚ್ಚಿಡಲು ಸಾಧ್ಯವಿಲ್ಲ. ಸಾಂಕೇತಿಕ ಕರಸೇವೆಯ ಒಂದು ನಿರ್ವಿವಾದದ ಸತ್ಯ ಸಿಡಿಲಿನಂತೆ ಪ್ರಕಟವಾಯಿತು. ನೆಲಸಮವಾದ ಬಾಬರಿ ಮಸೀದಿಯ ಚಿತ್ರ ಇತಿಹಾಸದ ನೆಲದಲ್ಲಿ ಸ್ಥಿರವಾಗಿ ಬೇರೂರಿಬಿಟ್ಟಿತು. ಅದರ ಜೊತೆಗೆ ಪರಮ ಸಹಿಷ್ಣುತೆಯ ಸ್ಥಿರವಾದ ಲಾಂಛನ, ಕೊನೆಯವರೆಗೂ ನಮ್ಮ ಧರ್ಮವನ್ನು ಬಿಟ್ಟುಹೋಯಿತು.

 

ಕೃಪೆ: ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಅಂಕಣ “ಉರಿಯ ನಾಲಗೆ”

3 comments to “ಅಯೋಧ್ಯೆ: ಸಂಕೇತದ ಗೆಲುವು”
  1. ಭಾಷೆ, ಗ್ರಹಿಕೆ ಹಾಗೂ ಅವಲೋಕನ ಸಾಂಕೇತಿಕವಾಗಿವೆ. ಅತ್ಯದ್ಭುತ ಲೇಖನ

ಪ್ರತಿಕ್ರಿಯಿಸಿ