ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: “ಕಾವ್ಯ ಎಂಬ ಒಗಟು” ಭಾಗ ೨

೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ.   ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಮೊದಲ ಭಾಗದ ಎರಡನೇ ಕಂತು ಋತುಮಾನ ದ ಓದುಗರಿಗಾಗಿ.

ಈಗ ನಾವು ಉತ್ಕೃಷ್ಠ ಗ್ರಂಥ (Classic) ಎಂಬ ಕಲ್ಪನೆಯ ಕಡೆ ಬರೋಣ. ನಾನು ಸ್ಪಷ್ಟಪಡಿಸಿ ಬಿಡುವೆ, ಪುಸ್ತಕವೆನ್ನುವುದು ಪೂಜಿಸುವಂಥ ಕಾಲಾತೀತ ವಸ್ತುವೇನಲ್ಲ, ಸೌಂದರ್ಯಕ್ಕಾಗಿ ಅದೊಂದು ಅವಸರ ಅಷ್ಟೇ. ಅದು ಹಾಗೇ ಇರಬೇಕು, ಯಾಕೆಂದರೆ ಭಾಷೆ ಸದಾಕಾಲ ಬದಲುತ್ತಿರುತ್ತದೆ. ನನಗೆ ಶಬ್ದಗಳ ನಿಷ್ಪತ್ತಿಯ ಕುರಿತು ಬಹಳ ಆಸಕ್ತಿ ಇದೆ (ಈ ಕುರಿತು ನನಗಿಂತ ಹೆಚ್ಚು ನಿಮಗೆ ತಿಳಿದೇ ಇದೆಯೆಂದು ನಾನು ಬಲ್ಲೆ), ಹಾಗಾಗಿ, ಕೆಲ ಶಬ್ದಗಳ ಕುತೂಹಲಕಾರಿ ಹಿನ್ನೆಲೆಯ ಕಡೆಗೆ ನಿಮ್ಮ ಗಮನ ಸೆಳೆಯ ಬಯಸುತ್ತೇನೆ.

ಉದಾಹರಣೆಗೆ, ಇಂಗ್ಲೀಷಿನ “ಟೀಸ್” (To Tease) ಎಂಬ ಕ್ರಿಯಾಪದ – ಬಹಳ ತುಂಟ ಶಬ್ದ. ಅದಕ್ಕೆ ‘ಕುಚೋದ್ಯ’ ಎಂಬ ಅರ್ಥವಿದೆ. ಆದರೆ, ಪ್ರಾಚೀನ ಇಂಗ್ಲೀಷಿನಲ್ಲಿ ಇದೇ ಶಬ್ದದ ರೂಪವಾದ “tesan” ಅಂದರೆ “ಖಡ್ಗದಿಂದ ಗಾಯಗೊಳಿಸು” ಎಂದಾಗಿತ್ತು. ಫ್ರೆಂಚ್ ಭಾಷೆಯಲ್ಲಿ “ಖಡ್ಗವನ್ನು ದೇಹದೊಳಕ್ಕೆ ಹೊಕ್ಕಿಸುವುದು” ಎನ್ನಲು navrer ಎಂಬ ಶಬ್ದ ಬಳಕೆಯಲ್ಲಿತ್ತು. ಬಿಯೋವುಲ್ಫ್ ಮಹಾಕಾವ್ಯದ ಮೊದಲ ಸಾಲುಗಳಲ್ಲಿ ಬರುವ ಇನ್ನೊಂದು ಪ್ರಾಚೀನ ಇಂಗ್ಲೀಷ್ ಶಬ್ದವನ್ನು ನೋಡೋಣ, preat, ಅಂದರೆ “ಕೋಪಾಗ್ರಸ್ತ ಗುಂಪು”, ಅಥವಾ ಅಪಾಯದ ಸೂಚನೆ. ಹೀಗೆ, ನಾವು ಕೊನೆಯಿಲ್ಲದೆ ಮುಂದುವರಿಯಬಹುದು.

ಈಗ ಕೆಲವು ನಿರ್ದಿಷ್ಟ ಪದ್ಯಗಳನ್ನು ಗಮನಿಸೋಣ. ನಾನು ಇಂಗ್ಲೀಷ ಸಾಹಿತ್ಯವನ್ನು ಬಹುವಾಗಿ ಮೆಚ್ಚುತ್ತೇನಾದ್ದರಿಂದ, ಅದರ ಬಗೆಗೆ ನನಗಿರುವ ಜ್ಞಾನ ಸೀಮಿತವಾದದ್ದೇ ಆಗಿದ್ದರೂ ಕೂಡ, ನಾನೀಗ ಬಳಸಲಿರುವ ಉದಾಹರಣೆಗಳು ಇಂಗ್ಲೀಷಿನವು. ಇವುಗಳು ಕಾವ್ಯ ತನ್ನನ್ನು ತಾನು ಹೇಗೆ ಸೃಷ್ಟಿಸಿಕೊಳ್ಳುತ್ತದೆ ಎನ್ನುವುದಕ್ಕೆ ನಿದರ್ಶನಗಳು. ಉದಾಹರಣೆಗೆ, “quietus” (ಸ್ತಬ್ಧ) ಮತ್ತು “bodkin” (ದಬ್ಬಣ, ದೊಡ್ಡ ಸೂಜಿ) ಶಬ್ದಗಳಿಗೆ ವಿಶೇಷ ಸೌಂದರ್ಯವಿದೆ ಎಂದು ನನಗೆ ಅನಿಸುವುದಿಲ್ಲ. ನನಗಂತೂ ಅವು ಒರಟು ಪದಗಳು ಅನಿಸುತ್ತದೆ. ಆದರೆ, “When he himself might his quietus make / With a bare bodkin”, (ಯಾವಾಗ ಅವನು ತನ್ನನು ತಾನು ಸ್ತಬ್ದನಾಗಿಸುವನು / ಬರಿಯ ದಬ್ಬಣದ ಬಲದಿಂದ) ಎಂಬ ಸಾಲನ್ನು ಓದಿದಾಗ, ಹ್ಯಾಮ್ಲೆಟ್ಟನ ಸುಪ್ರಸಿದ್ಧ ಸ್ವಗತ ನೆನಪಾಗುತ್ತದೆ. ಹೀಗೆ, ಸಂಧರ್ಭವೇ ಈ ಶಬ್ದಗಳಲ್ಲಿಯೂ ಕಾವ್ಯಾತ್ಮಕತೆಯನ್ನು ತರುತ್ತದೆ. ಅದೂ ಸಹ, ಇಂದು ಉಲ್ಲೇಖವೆಂದು ಮಾತ್ರ ಎಣಿಸಬಹುದಾದ ಮತ್ತು ಯಾರೂ ವರ್ತಮಾನ ಕಾಲದಲ್ಲಿ ಬಳಸಲು ಧೈರ್ಯ ಮಾಡದಂತಹ ಶಬ್ದಗಳಲ್ಲಿಯೂ ಕೂಡ.

ಮತ್ತೂ ಸರಳ ಉದಾಹರಣೆಗಳು ದೊರೆಯುತ್ತವೆ. ಜಗತ್ತಿನ ಸುಪ್ರಸಿದ್ಧ ಪುಸ್ತಕದ ಶೀರ್ಷಿಕೆಯನ್ನೇ ತೆಗೆದುಕೊಳ್ಳೋಣ, “historia del ingenious hidalgo Don Quijote de la Mancha” (ಡಿ ಲಾ ಮಂಚಾ ಪ್ರದೇಶದ ಚತುರ ಗ್ರಹಸ್ಥ ಡಾನ್ ಕಿಯೊತೆ”) ಇಲ್ಲಿನ hidalgo ಎಂಬ ಶಬ್ದಕ್ಕೆ ಈಗ ತನ್ನದೇ ಆದ ಒಂದು ವಿಶಿಷ್ಟ ಘನತೆ ಇದೆಯಾದರೂ, ಸರ್ವಾಂಟೇಜ್ ಬಳಸಿದಾಗ ಈ ಪದದ ಅರ್ಥ “ಗ್ರಾಮೀಣ ಗ್ರಹಸ್ಥ” ಎಂದಾಗಿತ್ತು. ಚಾರ್ಲ್ಸ್ ಡಿಕನ್ಸನ ಪಾತ್ರಗಳಾದ ಪಿಕ್ವಿಕ್, ಸ್ವಿವೆಲ್ಲರ್, ಚಜಲವಿಟ್, ಟ್ವಿಸ್ಟ್, ಸ್ಕ್ವಿಯರ್ಸ್, ಕ್ವಿಲ್ಪ್, ಮುಂತಾದ ಹೆಸರುಗಳಂತೆ “ಕಿಯೋತೆ” ಕೂಡ ಅಪಹಾಸ್ಯವನ್ನು ಸೂಚಿಸಲಿಕ್ಕಾಗಿಯೇ ಬಳಸಿದ ಶಬ್ದವಾಗಿತ್ತು. “ಡಿ ಲಾ ಮಂಚಾ” ಎಂಬ ಶಬ್ದವನ್ನು ಗಮನಿಸಿ. ಅದೀಗ ಕ್ಯಾಸ್ತಿಲಿಯನ್ ಭಾಷೆಯಲ್ಲಿ ಸಭ್ಯವೆನಿಸುವ ಪದವೇ ಆಗಿದ್ದರೂ ಕೂಡ ಸರ್ವಾಂಟೇಜ್ ಅದನ್ನು ಉಪಯೋಗಿಸಿದ್ದು ಮಾತ್ರ “ಕಂಸಾಸ್ ಶಹರದ ಡಾನ್ ಕಿಯೋತೆ” ಎನ್ನುವುದು ಎಷ್ಟು ಹಾಸ್ಯಾಸ್ಪದವೆನಿಸುತ್ತದೆಯೋ ಅಂತಹ ಪರಿಣಾಮಕ್ಕಾಗಿ (ಕಂಸಾಸ್ ಶಹರದ ಯಾರಾದರೂ ಇಲ್ಲಿದ್ದರೆ ದಯವಿಟ್ಟು ನನ್ನ ಕ್ಷಮಿಸಿ). ನೀವು ನೋಡಬಹುದು, ಹೇಗೆ ಈ ಪದಗಳು ಬದಲಾಗಿ ಬಿಟ್ಟಿವೆ, ಹೇಗೆ ಅವು ಘನತೆಯನ್ನು ಗಳಿಸಿದ್ದಾವೆ. ನಿಮಗೆ ಒಂದು ವಿಚಿತ್ರವಿಲ್ಲಿ ಕಾಣುತ್ತದೆ: ಮಿಗೆಲ್ ಡಿ ಸರ್ವಾಂಟೇಜ್ ಆ ಕಾಲದಲ್ಲಿ ಈ ಪದಗಳನ್ನು ಅಪಹಾಸ್ಯ ಮಾಡಿದ್ದರಿಂದ, ಇಂದು ಅವು ಸಾಹಿತ್ಯದ ಕಾಲಾತೀತ ಶಬ್ದಗಳಾಗಿಬಿಟ್ಟಿವೆ.

ಹೀಗೆ ಮಾರ್ಪಾಟಾದ ಇನ್ನೊಂದು ಪದ್ಯದ ಉದಾಹರಣೆಯನ್ನು ತೆಗೆದುಕೊಳ್ಳೋಣ. ರೋಸೆಟ್ಟಿಯ ಅಷ್ಟೇನೂ ಸುಂದರವಲ್ಲದ “Inclusiveness” (ಒಳಗೊಳ್ಳುವಿಕೆ) ಎನ್ನುವ ಶೀರ್ಷಿಕೆಯ ಹೊರೆ ಹೊತ್ತ ಒಂದು ಸುನೀತ (sonnet) ಮನಸ್ಸಿಗೆ ಬರುತ್ತಿದೆ. ಅದು ಶುರುವಾಗುವುದು ಹೀಗೆ:

What man has bent o’er his son’s sleep to brood

How that face shall watch his when cold it lies?-

Or thought, as his own mother kissed his eyes,

Of what her kiss was, when his father wooed?

ಯಾರು ಮಲಗಿರುವ ಮಗನ ಬಗ್ಗಿ ನೋಡುತ್ತ ಚಿಂತಿಸಬಹುದು

ತಾನು ತಣ್ಣಗೆ ಮಲಗಿದಾಗ ಇದೇ ಮುಖ ಹೇಗೆ ತನ್ನ ನೋಡುವುದೆಂದು?

ಯಾರು ಯೋಚಿಸಬಹುದು, ತನ್ನದೇ ತಾಯಿ ಕಣ್ಣುಗಳಿಗೆ ಮುತ್ತನಿಡುವಾಗ,

ತಂದೆ ಅವಳ ಓಲೈಸುತ್ತಿದ್ದ ಕಾಲದಲ್ಲಿ ಅವಳ ಮುತ್ತು ಹೇಗಿತ್ತೆಂದು?

ದೃಶ್ಯಚಿತ್ರಗಳ ಕ್ಷಿಪ್ರ ಚಲನೆಯನ್ನು ಅನುಸರಿಸಲು ನಮಗೆ ಸಿನೆಮಾ ಕಲಿಸಿರುವುದರಿಂದ, ಸುಮಾರು ಎಂಬತ್ತು ವರ್ಷಗಳ ಹಿಂದೆ ಬರೆದ ಈ ಸಾಲುಗಳು ಅಂದಿಗಿಂತಲೂ ಇಂದು ಹೆಚ್ಚು ವಿಶದವೆಂದು (vivid) ತೋರಬಹುದು. ಮೊದಲನೆಯ ಸಾಲಿನಲ್ಲಿ ನಿದ್ದೆಯಲ್ಲಿರುವ ಮಗನ ಮುಖವನ್ನು ಅಪ್ಪ ನಿರುಕಿಸುತ್ತಿದ್ದಾನೆ. ಒಂದು ಒಳ್ಳೆಯ ಸಿನೆಮಾದಲ್ಲಿ ಆಗುವ ಹಾಗೆ, ಎರಡನೆಯ ಸಾಲಿನಲ್ಲಿ ಇದೇ ಚಿತ್ರ ಉಲ್ಟಾ (reverse) ಆಗಿದೆ: ಮಗ ನಿರುಕಿಸುತ್ತಿದ್ದಾನೆ ಸತ್ತ ತಂದೆಯ ಮುಖವನ್ನು. ನಮಗೆ ಇತ್ತೀಚೆ ದಕ್ಕಿರುವ ಮಾನಸಶಾಸ್ತ್ರದ ಜ್ಞಾನ ಮುಂದಿನ ಎರಡು ಸಾಲುಗಳ ಕುರಿತು ನಮ್ಮನ್ನು ಹೆಚ್ಚು ಸೂಕ್ಷ್ಮಗ್ರಾಹಿಯಾಗಿಸಿದೆ. ಇಲ್ಲಿ ಇಂಗ್ಲೀಷಿನ ‘brood’ ಮತ್ತು ‘wooed’ ಎನ್ನುವ ಹಗುರ ಸ್ವರಗಳ ಚೆಲುವು ಕಾಣಬರುತ್ತದೆ. ಶಬ್ದಗಳು ಅನುರಣಿಸುತ್ತಲೇ ಇರುತ್ತವೆ.

ಇನ್ನೊಂದು ಬಗೆಯ ಸೌಂದರ್ಯವೂ ಇದೆ. ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದ ಒಂದು ವಿಶೇಷಣ ಪದವನ್ನು ನೋಡೋಣ. ನನಗೆ ಗ್ರೀಕ್ ಭಾಷೆ ಗೊತ್ತಿಲ್ಲ, ಪ್ರಾಯಶಃ ಗ್ರೀಕ್ ಭಾಷೆಯಲ್ಲಿ oinopa pontos ಎನ್ನಲಾಗುವ ಶಬ್ದವನ್ನು ಇಂಗ್ಲೀಷಲ್ಲಿ ‘the wine-dark sea’ (‘ದ್ರಾಕ್ಷಾರಸದಷ್ಟು ಶ್ಯಾಮ ಸಮುದ್ರ’) ಎಂದು ಅನುವಾದಿಸಲಾಗಿದೆ. ಇಲ್ಲಿ dark ಎನ್ನುವ ಶಬ್ದವನ್ನು ಓದುಗನಿಗೆ ಸುಲಭವಾಗಲಿ ಎಂದು ಸೇರಿಸಲಾಗಿದೆ ಎನಿಸುತ್ತದೆ. ಮೂಲದಲ್ಲಿ ಬಹುಶಃ ‘winy sea’ (ದ್ರಾಕ್ಷಾರಸದಂತ ಸಮುದ್ರ) ಎಂದಿದ್ದೀತು. ಹೋಮರನಾಗಲೀ, ಅಥವಾ ಅವನ ಕಾವ್ಯವನ್ನು ದಾಖಲಿಸಿದ ಹಲವು ಗ್ರೀಕರಾಗಲೀ, ಈ ನುಡಿಗಟ್ಟನ್ನು ಬಳಸಿದಾಗ ಬಹುಶಃ ಅವರು ಸಮುದ್ರವೆಂದು ಮಾತ್ರ ಯೋಚಿಸಿದ್ದರು. ವಿಶೇಷಣ ಸೀದಾಸಾದಾ ಇತ್ತು. ಆದರೀಗ, ನಾನಾಗಲೀ, ನಿಮ್ಮಲ್ಲಿ ಯಾರಾದರಾಗಲೀ, ಪದ್ಯವೊಂದರಲ್ಲಿ ಹಲವು ವಿಶೇಷಣಗಳನ್ನು ಪರೀಕ್ಷಿಸಿ,  ‘the wine-dark sea’ ನುಡಿಗಟ್ಟನ್ನು ಬಳಸಿದರೆ, ಅದು ಗ್ರೀಕರ ಬಳಕೆಯ ಸರಳ ಪುನರುಕ್ತಿ ಮಾತ್ರವಾಗದು. ಬದಲಿಗೆ ಪರಂಪರೆಯತ್ತ ಹೊರಳುವ ಸಂಕೇತವಾಗುತ್ತದೆ. ಈ  ‘the wine-dark sea’ ಎಂಬ ನುಡಿಗಟ್ಟನ್ನು ನಮೂದಿಸಿದಾಗ ನಾವು ಹೋಮರನನ್ನು ಕುರಿತು ಮತ್ತು ನಮ್ಮಿಂದ ಅವನನ್ನು ಬೇರ್ಪಡಿಸುವ 30 ಶತಮಾನಗಳ ಕುರಿತು ಧೇನಿಸ ಬೇಕಾಗುತ್ತದೆ. ಹಾಗಾಗಿ ಬಳಸುತ್ತಿರುವ ಶಬ್ದ ಒಂದೇ ಆದರೂ, ಅದನ್ನು ನಾವು ಬಳಸಿದಾಗ ಅದು ಹೋಮರನ ಬಳಕೆಯಲ್ಲಿ ಹೊಂದಿದ ಅರ್ಥಕ್ಕಿಂತ ವಿಭಿನ್ನ ಅರ್ಥ ಹೊಂದಿರುತ್ತದೆ.

Courtesy : The Daily Beast

ಈ ರೀತಿಯಲ್ಲಿ ಭಾಷೆ ಬದಲುತ್ತಲಿರುತ್ತದೆ, ಇದನ್ನು ಲ್ಯಾಟಿನ್ನರು ಅರಿತಿದ್ದರು. ಅಲ್ಲದೇ, ಓದುಗರೂ ಸಹ ಬದಲುತ್ತಲಿದ್ದಾರೆ. ಇದು ನಮ್ಮನ್ನು ಒಂದು ಪುರಾತನ ಗ್ರೀಕ್ ರೂಪಕ ಅಥವಾ ಸತ್ಯದೆಡೆಗೆ ಕರೆ ತರುತ್ತದೆ – ಒಬ್ಬಾತ ಒಂದು ನದಿಯಲ್ಲಿ ಒಮ್ಮೆ ಮಾತ್ರ ಇಳಿಯಬಹುದು. ಇದರಲ್ಲಿ ನನಗೆ ಭೀತಿಯ ಅಂಶವೂ ಸಹ ಇದೆಯೆನಿಸುತ್ತದೆ. ಮೊದಲಲ್ಲಿ ನಾವು ಹರಿವ ನೀರಿನ ಕುರಿತು ಯೋಚಿಸುತ್ತೇವೆ. ನಮಗನಿಸುತ್ತದೆ, “ನದಿ ಅದೇ ಇದ್ದರೂ ಸಹ ನೀರು ಬದಲಾಗುತ್ತಾ ಇರುತ್ತದೆ”. ಆಮೇಲೆ, ನಿಧಾನವಾಗಿ ಬೆಳೆವ ಬೆರಗಿನಲ್ಲಿ, ನಾವೂ ಕೂಡ ಬದಲಾಗುತ್ತಲಿರುತ್ತೇವೆ, ನಾವೂ ಸಹ ನದಿಯಷ್ಟೇ ಚಲನಶೀಲರು, ಕ್ಷಣಿಕಮಾತ್ರರು ಎನ್ನುವುದು ನಮ್ಮ ಅರಿವಿಗೆ ಬರುತ್ತದೆ.

ಅದೇನೇ ಇದ್ದರೂ ನಾವೇನೂ ಕ್ಲಾಸಿಕ್ ಕೃತಿಗಳ ಕುರಿತು ಹೆಚ್ಚು ಚಿಂತಿಸಬೇಕಿಲ್ಲ, ಯಾಕೆಂದರೆ ಸೌಂದರ್ಯ ಇಂದಿಗೂ ನಮ್ಮ ಜೊತೆಯಲ್ಲಿ ಇರುತ್ತದೆ. ಇನ್ನೊಂದು ಪದ್ಯವನ್ನಿಲ್ಲಿ ಉಲ್ಲೇಖಿಸುತ್ತೇನೆ, ಇತ್ತೀಚೆ ನೆನಪಿನಲ್ಲಿಲ್ಲದ ಕವಿ, ಬ್ರೌನಿಂಗನದು. ಅವನು ಹೇಳುತ್ತಾನೆ:

Just when we are safest, there’s a sunset-touch,

A fancy from a flower-bell, some one’s death,

A chorus-ending from Euripides.

(ನಾವು ಅತ್ಯಂತ ಸುರಕ್ಷಿತರಾಗಿಹ ಕ್ಷಣದಲ್ಲೇ, ಸೂರ್ಯಾಸ್ತದ ಸ್ಪರ್ಶ

ಹೂಗಳು ಮೊಳಗಿದಂತ ಭ್ರಾಂತಿ, ಯಾರದೋ ಸಾವು

ಯುರಿಪಿಡೀಸನಿಂದ ಗುಂಪುಗಾನದ ಅಂತ್ಯ)

ಮೊದಲ ಸಾಲೇ ಸಾಕು: “ನಾವು ಸುರಕ್ಷಿತರಾಗಿಹ ಕ್ಷಣದಲ್ಲೇ…” ಅಂದರೆ, ಸೌಂದರ್ಯ ನಮ್ಮ ಸುತ್ತಲೂ ಹೊಂಚಿ ಕೂತಿದೆ. ಅದೊಂದು ಸಿನೆಮಾದ ಹೆಸರಾಗಿ ನಮ್ಮೆದುರು ಬರಬಹುದು, ಯಾವುದೋ ಜನಪ್ರಿಯ ಹಾಡಿನ ರೂಪದಲ್ಲಿ ನಮ್ಮ ಬಳಿ ಬಂದೀತು, ಶ್ರೇಷ್ಠ ಅಥವಾ ಪ್ರಸಿದ್ಧ ಲೇಖಕನ ಪುಟಗಳಲ್ಲಿ ನಾವದನ್ನು ಕಾಣಬಹುದು.

ನಾನೀಗಾಗಲೇ ನನ್ನ ಮೃತ ಗುರು ರಾಫೇಲ್ ಕ್ಯಾನ್ಸೀನೋಸ್-ಅಸ್ಸಾಂಸ್ ಅವರನ್ನು ಉಲ್ಲೇಖಿಸಿರಿವುದರಿಂದ, (ನೀವು ಅವರ ಹೆಸರನ್ನು ಈಗ ಕೇವಲ ಎರಡನೇ ಬಾರಿ ಕೇಳಿರಬಹುದು, ಅದು ಹೇಗೆ ಅವರನ್ನು ಜಗತ್ತು ಮರೆತಿದೆ ಎಂದೇ ನನಗೆ ಅರ್ಥವಾಗುತ್ತಿಲ್ಲ) ನನಗೆ ಅವರ ತುಂಬಾ ಒಳ್ಳೆಯ ಗದ್ಯಗೀತೆಯೊಂದು ನೆನಪಾಗುತ್ತಿದೆ. ಅದರಲ್ಲಿ ಕವಿ ಸೌಂದರ್ಯದಿಂದ ತನ್ನನ್ನು ರಕ್ಷಿಸೆಂದು ದೇವರಿಗೆ ಮೊರೆ ಹೋಗುತ್ತಾನೆ. ಯಾಕೆಂದರೆ: “ಜಗದಲ್ಲಿ ಅತೀವ ಸೌಂದರ್ಯವಿದೆ”. ಅವನ ಪ್ರಕಾರ ಈ ಅತಿ ಸೌಂದರ್ಯ ಜಗತ್ತನ್ನು ಪರವಶಗೊಳಿಸಿದೆ. ನಾನೊಬ್ಬ ಬಹಳ ಸಂತುಷ್ಟ ವ್ಯಕ್ತಿಯಾದುದರಿಂದ ಹೀಗೋ ಏನೋ ಗೊತ್ತಿಲ್ಲ (ನನಗೆ 67ರ ವಯಸ್ಸಾದ ಮೇಲೂ ನಾನು ಹೀಗೇ ಸಂತುಷ್ಟನಾಗಿರಲೆಂದು ಆಶಿಸುತ್ತೇನೆ), ಏನೇ ಇರಲಿ, ನನಗಂತೂ ಅನಿಸುವುದೆಂದರೆ ನಮ್ಮ ಸುತ್ತಮುತ್ತೆಲ್ಲ ಸೌಂದರ್ಯವೇ ತುಂಬಿದೆ.

ಕವಿತೆಯನ್ನು ಶ್ರೇಷ್ಠ ಲೇಖಕ ಬರೆದಿದ್ದಾನೋ ಇಲ್ಲವೋ ಎನ್ನುವ ಪ್ರಶ್ನೆ ಸಾಹಿತ್ಯದ ಇತಿಹಾಸಜ್ಞರಿಗೆ ಮಾತ್ರ ಮುಖ್ಯವಾದದ್ದು. ವಾದಕ್ಕೆಂದು ನಾನು ಒಂದು ಸುಂದರ ಸಾಲನ್ನು ಬರೆದಿರುವೆನೆಂದು ಊಹಿಸಿಕೊಳ್ಳಿ. ಇದನ್ನು ನಾವು ಪೂರ್ವಸಿದ್ಧಾಂತ (hypothesis) ಎಂದು ಕೊಳ್ಳೋಣ. ಒಮ್ಮೆ ನಾನದನ್ನು ಬರೆದ ಮೇಲೆ, ಆ ಸಾಲು ನನಗೆ ಪ್ರಯೋಜನಕ್ಕೆ ಬರದು, ಯಾಕೆಂದರೆ, ಆಗಲೇ ಹೇಳಿದಂತೆ, ಆ ಸಾಲು ನನಗೆ ಬಂದಿದ್ದು ಪವಿತ್ರಾತ್ಮನ ಮುಖಾಂತರ, ಪ್ರಜ್ಞಾಪೂರ್ವ ಸ್ಥಿತಿಯ ಮೂಲಕ, ಅಥವಾ ಇನ್ನಾವುದೋ ಲೇಖಕನಿಂದ. ಬಹಳ ಸಲ ನನಗೆ ನಾನು ಬರೆದಿರುವುದು ಎಲ್ಲೋ ನಾನು ಓದಿದ್ದರ ಒಂದು ಉಲ್ಲೇಖ ಮಾತ್ರ ಎಂದು ಅನಿಸುವುದುಂಟು. ಆಗ ಅದು ಒಂದು ರೀತಿಯ ಮರು-ಶೋಧನೆಯಾಗುತ್ತದೆ. ಬಹುಶಃ ಕವಿ ಅನಾಮಧೇಯನಾಗಿಯೇ ಇರುವುದು ಒಳ್ಳೆಯದು.

ನಾನು “ದ್ರಾಕ್ಷಾರಸದಂತ ಸಮುದ್ರ”ದ ಕುರಿತು ಮಾತಾಡಿದೆ, ಮತ್ತು ನನಗೆ ಪ್ರಾಚೀನ ಇಂಗ್ಲೀಷ್ ಅಂದರೆ ಮೋಹವಾದ್ದರಿಂದ (ನನ್ನ ಉಪನ್ಯಾಸ ನೀವು ಕೇಳುತ್ತಲಿದ್ದರೆ, ನೀವು ನನ್ನಿಂದ ಬಹಳಷ್ಟು ಪ್ರಾಚೀನ ಇಂಗ್ಲೀಷ ಕೇಳಲಿದ್ದೀರಿ) ನನಗೆ ಬಹಳ ಸುಂದರವೆನಿಸುವ ಕೆಲವು ಸಾಲುಗಳನ್ನು ನೆನಪಿಸಿಕೊಳ್ಳುತ್ತೇನೆ. ಮೊದಲು ಇಂಗ್ಲೀಷಿನಲ್ಲಿ, ಆಮೇಲೆ ಒಂಬತ್ತನೇ ಶತಮಾನದ ಸ್ವರಯುಕ್ತ ಪ್ರಾಚೀನ ಇಂಗ್ಲೀಷಲ್ಲಿ ಓದುತ್ತೇನೆ:

It snowed from the north;

rime bound the fields;

hail fell on earth,

the coldest of seeds.

Norpan sniwde

hrim hrusan bond

haegl from on eorpan

corna caldast.

 

(ಉತ್ತರದಿಂದ ಉದುರಿದವು ಮಂಜು 

ಹೊಲಗಳು ಹಿಮಾಚ್ಛಾದಿತವಾದವು 

ಆಲಿಕಲ್ಲು ಚೆಲ್ಲಿತು ಭೂಮಿ ಮೇಲೆಲ್ಲ 

ಅತೀವ ತಣ್ಣಗಿನ ಬೀಜಗಳು.)

 

ಹೋಮರನ ಕುರಿತು ನಾನು ಹೇಳಿದ ಮಾತಿಗೆ ಇದು ಒಯ್ಯುತ್ತದೆ ನಮ್ಮನ್ನು. ಕವಿ ಈ ಸಾಲುಗಳನ್ನು ಬರೆದಾಗ, ಅವನು ಆಗಿರುವುದನ್ನು ಸರಳವಾಗಿ ದಾಖಲಿಸುತ್ತಿದ್ದ ಮಾತ್ರ. ಪುರಾಣ, ಅನ್ಯೋಕ್ತಿಗಳ ಪರಿಕಲ್ಪನೆಗಳಲ್ಲಿ ಯೋಚಿಸುತ್ತಿದ್ದ ಒಂಬತ್ತನೇ ಶತಮಾನದಲ್ಲಿ ಇದು ಕೊಂಚ ಅಸಹಜವೇ ಸರಿ. ಕವಿ ಅತ್ಯಂತ ಸಾಧಾರಣ ಸಂಗತಿಗಳನ್ನು ಇಲ್ಲಿ ನಮೂದಿಸಿದ್ದಾನೆ. ಅದೇ ಸಾಲುಗಳನ್ನು ನಾವು ಈಗ ಓದಿದರೆ, ಅದರಲ್ಲಿ ಕಾವ್ಯಾತ್ಮಕತೆ ಸೇರಿಕೊಳ್ಳುತ್ತದೆ. ಅನಾಮಧೇಯ ಸ್ಯಾಕ್ಸನ್ ಒಬ್ಬ ’ನಾರ್ಥ ಸೀ’ ಪ್ರಾಂತದಲ್ಲಿ, ಬಹುಶಃ ನಾರ್ಥಂಬರಲ್ಯಾನ್ಡ್ ಇರಬಹುದು, ಈ ಪದ್ಯದ ಸಾಲುಗಳನ್ನು ಬರೆದಿದ್ದಾನೆ. ಶತಮಾನಗಳ ದಾಟಿ ಆ ಸಾಲುಗಳು ಅಷ್ಟು ನೇರವಾಗಿ, ಅಷ್ಟು ಸರಳವಾಗಿ,  ಮನ ಕರಗುವಂತೆ ನಮ್ಮನ್ನು ತಲುಪುತ್ತವೆ. ಆದ್ದರಿಂದ, ನಮ್ಮೆದುರು ಎರಡೂ ಸನ್ನಿವೇಶಗಳಿವೆ: ಶಬ್ದಗಳು ಸೌಂದರ್ಯವನ್ನು ಕಳಕೊಳ್ಳುವಂತ, ಕಾಲ ಕಾವ್ಯವನ್ನು ಹಾಳುಗೈಯುವ ಸನ್ನಿವೇಶ (ಇದನ್ನೇನು ಪ್ರತ್ಯೇಕವಾಗಿ ವಿವರಿಸ ಬೇಕಿಲ್ಲ); ಹಾಗೆಯೇ, ಕಾಲ ಕಾವ್ಯವನ್ನು ಹಾಳುಗೈಯುವ ಬದಲು ಸಮೃದ್ಧಗೊಳಿಸುವ ಸನ್ನಿವೇಶ.

ಪ್ರಾರಂಭದಲ್ಲಿ, ವ್ಯಾಖ್ಯಾನಗಳ ಕುರಿತು ಮಾತಾಡಿದ್ದೇನೆ. ಮುಕ್ತಾಯಕ್ಕೆ ಮೊದಲು, ವ್ಯಾಖ್ಯಾಯಿಸಲು ಆಗದಿದ್ದರೆ ನಾವು ನಮ್ಮನ್ನು ದಡ್ಡರೆಂದುಕೊಳ್ಳುವುದು ಬಹಳ ಜನರು ಮಾಡುವ ತಪ್ಪು ಎಂದು ನಾನು ವಾದಿಸಬಯಸುತ್ತೇನೆ. ನಾವೇನಾದರೂ ಚೆಸ್ಟರಟನ್ ಅವರ ಮನಸ್ಥಿತಿಯಲ್ಲಿದ್ದರೆ (ಎಂದಿಗೇ ಆಗಲಿ ಅದೊಂದು ಒಳ್ಳೆಯ ಮನಸ್ಥಿತಿ) ನಾವು ಹೇಳಬಹುದು : ಯಾವುದರ ಕುರಿತು ನಮಗೆ ಏನೇನೂ ಗೊತ್ತಿಲ್ಲವೋ, ಅದನ್ನು ಮಾತ್ರ ನಾವು ವ್ಯಾಖ್ಯಾಯಿಸ ಬಲ್ಲೆವು.

ಉದಾಹರಣೆಗೆ, ನಾನೇನಾದರೂ ಕಾವ್ಯದ ವ್ಯಾಖ್ಯಾನ ಕೊಡಬೇಕೆಂದರೆ, ಹಾಗೆ ಮಾಡಲು ನನಗೆ ಭೀತಿಯಾಗುತ್ತದೆಯಾದರೂ, ಆ ಕುರಿತು ನನಗೆ ಸ್ಪಷ್ಟತೆ ಇಲ್ಲವೆಂದಾದರೆ, ನಾನು ಹೀಗೆ ಏನೋ ಹೇಳಬಹುದು: “ಕಲಾತ್ಮಕವಾಗಿ ಹೆಣೆದ ಶಬ್ದಗಳ ಮಾಧ್ಯಮದ ಮೂಲಕ ಸುಂದರವಾದದ್ದನ್ನು ಅಭಿವ್ಯಕ್ತಿಸುವುದೇ ಕಾವ್ಯ”. ಇದು ನಿಘಂಟಿನಲ್ಲೋ, ಪಠ್ಯಪುಸ್ತಕದಲ್ಲಿಯೋ ಆದರೆ ಸಮಸ್ಯೆ ಇಲ್ಲ. ಆದರೂ, ನಮಗೆಲ್ಲ ತಿಳಿದಿದೆ, ಇದೊಂದು ಬಹಳ ನಿತ್ರಾಣವಾದ ವ್ಯಾಖ್ಯಾನ. ಇದಕ್ಕಿಂತ ಹೆಚ್ಚು ಮುಖ್ಯ ವಿಷಯವೊಂದಿದೆ – ನಮ್ಮನ್ನೆಲ್ಲ ಕಾವ್ಯ ರಚನೆಗೆ ಪ್ರಚೋದಿಸಬಲ್ಲ, ನಾವದನ್ನು ಆನಂದಿಸುವಂತೆ, ಅದರ ಬಗ್ಗೆ ಜ್ಞಾನವುಳ್ಳವರು ಎಂದುಕೊಳ್ಳುವಂತೆ ಮಾಡುವ ವಿಷಯವದು.

ಅದೆಂದರೆ, ಕಾವ್ಯ ಎಂದರೆ ಏನೆಂದು ನಮಗೆ ಯಾವತ್ತೇ ಆದರೂ ತಿಳಿದೇ ಇರುವುದು. ನಮಗೆ ಈ ಕುರಿತು ಅದೆಷ್ಟು ತಿಳುವಳಿಕೆ ಇರುತ್ತದೆಯೆಂದರೆ ನಾವದನ್ನು ಬೇರೆ ಶಬ್ದಗಳಲ್ಲಿ ಹೇಳಲಾಗುವುದಿಲ್ಲ.  ಕಾಫಿಯ ರುಚಿ ಹೇಗಿದೆ ಎನ್ನಲು, ಕೆಂಪು ಬಣ್ಣ ಅಂದರೇನೆಂದು ಹೇಳಲು, ಕೋಪದ, ಪ್ರೀತಿಯ, ದ್ವೇಷದ, ಸೂರ್ಯೋದಯದ, ಸೂರ್ಯಾಸ್ತದ ಅಥವಾ ನಮ್ಮ ದೇಶಪ್ರೇಮದ ಅರ್ಥವನ್ನು ಹೇಳಲು ಹೇಗೆ ನಮಗೆ ಅಸಾಧ್ಯವಾಗುತ್ತದೆಯೋ ಹಾಗೆಯೇ ಇದೂ ಸಹ. ಈ ವಿಷಯಗಳು ನಮ್ಮ ವ್ಯಕ್ತಿತ್ವದ ಆಳದಲ್ಲಿ ಹುದುಗಿದ್ದು, ಅವುಗಳನ್ನು ಇತರರಿಗೆ ಪರಿಚಿತ ಸಂಕೇತಗಳ ಮೂಲಕ ಮಾತ್ರ ನಾವು ಹೇಳಬಲ್ಲವರಿರುತ್ತೇವೆ. ಇತರ ಶಬ್ದಗಳ ಅಗತ್ಯವಾದರೂ ಏನು?

Courtesy: Literary Hub

ನಾನು ಉದ್ಧರಿಸಿದ ಉದಾಹರಣೆಗಳು ನಿಮಗೆ ಒಪ್ಪಿಗೆ ಆಗದಿರಬಹುದು. ನಾಳೆ ನಾನು ಬೇರೆ ಯಾವುದೋ ಇನ್ನೂ ಉತ್ತಮ ಉದಾಹರಣೆಗಳನ್ನು, ಸಾಲುಗಳನ್ನು, ಕೊಡಬಹುದು. ನೀವೂ ಕೂಡ ನಿಮಗೆ ಸೂಕ್ತವೆನಿಸುವ ಉದಾಹರಣೆಗಳನ್ನು ಆಯ್ದುಕೊಳ್ಳಬಹುದು, ಹಾಗಾಗಿ ಹೋಮರನಾಗಲೀ, ಪ್ರಾಚೀನ ಆಂಗ್ಲರಾಗಲೀ, ರೋಸೆಟ್ಟಿಯಾಗಲೀ ಮುಖ್ಯವೇನಲ್ಲ. ಯಾಕೆಂದರೆ ಕಾವ್ಯ ಎಲ್ಲಿ ಎಲ್ಲಿ ಇರುತ್ತದೆ ಎಂದು ಎಲ್ಲರೂ ಬಲ್ಲರು. ಅದು ನಮ್ಮತ್ತ ಬಂದಾಗ ನಮಗೆ ಕಾವ್ಯದ ಸ್ಪರ್ಶ, ಕಾವ್ಯದ ನಿರ್ದಿಷ್ಟ ಕಚಗುಳಿ, ಆಗಿಯೇ ಆಗುತ್ತದೆ.

ಮುಕ್ತಾಯಕ್ಕೆ ಸೂಕ್ತವೆನಿಸುವ ಸಂತ ಅಗಸ್ಟೀನನ ಸಾಲುಗಳು ನೆನಪಾಗುತ್ತಿದೆ. ಅವನೆನ್ನುತ್ತಾನೆ, “ಕಾಲವೆಂದರೇನು? ಯಾರೂ ನನ್ನನ್ನು ಕಾಲವೆಂದರೇನೆಂದು ಕೇಳದಿದ್ದರೆ, ಕಾಲವೇನೆಂದು ನಾನು ಹೇಳಬಲ್ಲೆ. ಯಾರಾದರೂ ಅದೇನು ಎಂದು ಕೇಳಿದರೆ, ನಾನು ಹೇಳಲಾರೆ”. ಕಾವ್ಯದ ಕುರಿತು ನನ್ನ ಸ್ಥಿತಿಯೂ ಸಹ ಅದೇ ಆಗಿದೆ.

ವ್ಯಾಖ್ಯಾನಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಸಧ್ಯ ನಾನು ಗೊಂದಲದಲ್ಲಿದ್ದೇನೆ ಯಾಕೆಂದರೆ ಅಮೂರ್ತ ಚಿಂತನೆ ನನಗೆ ಬಹಳ ಕಷ್ಟ. ಆದರೆ, ಮುಂಬರುವ ಉಪನ್ಯಾಸಗಳಲ್ಲಿ, ನೀವು ಸಹಕರಿಸುತ್ತೀರಾದರೆ, ಹೆಚ್ಚು ಹೆಚ್ಚು ನಿರ್ದಿಷ್ಟ ಉದಾಹರಣೆಗಳನ್ನು ನಾವು ಎತ್ತಿಕೊಳ್ಳಬಹುದು. ನಾನು ರೂಪಕ, ಶಬ್ದದಲ್ಲಿನ ಸಂಗೀತ, ಕಾವ್ಯದ ಅನುವಾದ (ಸಾಧ್ಯವೋ, ಅಸಾಧ್ಯವೊ), ಇವುಗಳ ಕುರಿತು ಮಾತನಾಡಲಿದ್ದೇನೆ. ಕಾವ್ಯದಲ್ಲಿ ಕತೆ, ಅಂದರೆ ಅತ್ಯಂತ ಪ್ರಾಚೀನವೂ, ಧೀರೋದಾತ್ತವೂ ಆದ ಮಹಾಕಾವ್ಯದ ಕುರಿತೂ ಸಹ ಮಾತನಾಡುವೆ. ತಕ್ಷಣಕ್ಕೆ ನನಗೂ ಆಸ್ಪಷ್ಟವಿರುವ “ಕವಿಯ ನಂಬಿಕೆ” ಎಂಬ ವಿಷಯದ ಕುರಿತು ನನ್ನ ಅಂತಿಮ ಉಪನ್ಯಾಸವಿರಲಿದೆ. ಈ ಉಪನ್ಯಾಸದಲ್ಲಿ ನಾನು ನನ್ನದೇ ಜೀವನವನ್ನು ಮತ್ತು ನನ್ನ ಈ ಭಾಷಣ ಕೇಳಿಯೂ, ನೀವು ನನ್ನಲ್ಲಿಟ್ಟಿರುವ ವಿಶ್ವಾಸವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಲಿದ್ದೇನೆ.

ಮುಂದುವರೆಯುವುದು…


ಮೂಲ: The Craft of Verse

5 comments to “ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: “ಕಾವ್ಯ ಎಂಬ ಒಗಟು” ಭಾಗ ೨”
  1. Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ ( ಕಾವ್ಯ ಕುಸುರಿ ) : “ರೂಪಕ ” ಭಾಗ ೧ – ಋತುಮಾನ

  2. Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ (ಕಾವ್ಯ ಕುಸುರಿ) : “ರೂಪಕ” – ಭಾಗ ೨ – ಋತುಮಾನ

  3. Pingback: ಲುಯಿ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – ೩ : ಕತೆಯ ನಿರೂಪಣೆ – ಋತುಮಾನ

  4. Pingback: ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – 5: ವಿಚಾರ ಮತ್ತು ಕಾವ್ಯ – ಋತುಮಾನ

Leave a Reply to chalapathy R Cancel reply