ಬೇಗಂಪುರದ ಶೋಧದಲ್ಲಿ: ಸಮಾನತೆಯ ಆಶಯಕ್ಕೆ ಜೀವನ ಸಮರ್ಪಿಸಿದ ಗೇಲ್ ಓಮ್ವೆಡ್ತ್

ನಮ್ಮ ಕಾಲದ ಶ್ರೇಷ್ಠ ಸಮಾಜಶಾಸ್ತ್ರಜ್ಞೆ, ಸ್ತ್ರೀವಾದಿ ಚಿಂತಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ, ಬಹುಜನ ಚಳುವಳಿಯ ಮೇರು ಚಿಂತಕರಲ್ಲಿ ಒಬ್ಬರಾಗಿದ್ದ ಗೇಲ್ ಓಮ್ವೆಡ್ತ್ ನಮ್ಮನ್ನಗಲಿ ಇವತ್ತಿಗೆ ಒಂದು ವರ್ಷ.  ಅಮೇರಿಕಾದಲ್ಲಿ ಜನಿಸಿದ ಗೇಲ್ ತಮ್ಮ ಪಿಎಚ್ಡಿ ಅಧ್ಯಯನಕ್ಕೆಂದು ಭಾರತಕ್ಕೆ ಬಂದವರು. ‘ಅಂಬೇಡ್ಕರ್ ಚಿಂತನೆ ಮತ್ತು ಹೋರಾಟ’ದ ಬಗ್ಗೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದು ಭಾರತದಲ್ಲಿಯೇ ನೆಲೆಸಿದರು. ತಮ್ಮ ಸಂಗಾತಿ, ಹೋರಾಟಗಾರ ಭರತ್ ಪಟನ್‌ಕರ್ ಜೊತೆಗೂಡಿ ತಮ್ಮ ಇಡೀ ಬದುಕನ್ನು ದಮನಿತ ಸಮುದಾಯಗಳ ಪರ ಹೋರಾಟಗಳಿಗೆ, ದಮನಿತ ಸಮುದಾಯಗಳ ಅಧ್ಯಯನಕ್ಕೆ ತೆತ್ತುಕೊಂಡವರು. ತಮ್ಮ ಪ್ರಖರ ಬೌದ್ಧಿಕತೆಯ ಮೂಲಕ ಅಂಬೇಡ್ಕರ್ ಚಿಂತನೆ ಮತ್ತು ದಲಿತ ಅಧ್ಯಯನವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಈ ಧೀಮಂತ ಚಿಂತಕಿಯ ನೆನಪಿನಲ್ಲಿ ಈ ಬರಹ.

ನಮ್ಮದೇ ರೂಪವನ್ನು ಹೋಲುವ, ನಮ್ಮದೇ ಉಡುಗೆ-ತೊಡುಗೆ, ವೇಷಭೂಷಣಗಳುಳ್ಳ, ನಮ್ಮದೇ ಭಾಷೆಯನ್ನಾಡುವ, ನಮ್ಮ ಸುತ್ತಮುತ್ತಲಲ್ಲೇ ವಾಸಿಸುವವರನ್ನು ನಮ್ಮವರೆಂದು ಕಾಣದೇ ದೂರ ಇಡುವ, ಅವಮಾನಿಸುವ, ಶೋಷಿಸುವ, ಅನ್ಯಾಯವೆಸಗುವ ಸಾಮಾಜಿಕ ಸಂರಚನೆಯನ್ನು ಮುತುವರ್ಜಿಯಿಂದ ಕಾಯ್ದುಕೊಂಡು ಬಂದಿರುವ ನಮ್ಮ ಸಮಾಜದಲ್ಲಿ, ಶ್ರೀಮಂತ ರಾಷ್ಟ್ರವೊಂದರ ಬುದ್ಧಿವಂತ ಹೆಣ್ಣುಮಗಳು ತನ್ನ ದೇಶದ ಅನುಕೂಲಗಳನ್ನು ಬಿಟ್ಟುಬಂದು, ಒಂದು ಹಿಂದುಳಿದ ಬಡ ದೇಶದಲ್ಲಿ, ಅಲ್ಲಿನ ಅತ್ಯಂತ ಹೀನಾಯ ಸ್ಥಿತಿಗೆ ದೂಡಲ್ಪಟ್ಟ ಸಮುದಾಯಗಳ ಹಿತಾಸಕ್ತಿಗಾಗಿ   ತನ್ನ ಜೀವಮಾನವನ್ನು, ತನ್ನೆಲ್ಲ ಬೌದ್ಧಿಕ ಶ್ರಮವನ್ನು ಮುಡಿಪಾಗಿಡುವುದು ಯಾವ ದೃಷ್ಟಿಕೋನದಿಂದ ನೋಡಿದರೂ ಸಾಧಾರಣ ಸಂಗತಿಯಲ್ಲ. ಯಾವ ಕಾಲಮಾನದಲ್ಲಿ ನಮ್ಮ ದೇಶದ ಬುದ್ಧಿವಂತರು ಉಚ್ಛಶಿಕ್ಷಣಕ್ಕಾಗಿ ಅಮೇರಿಕಕ್ಕೆ ಓಡುತ್ತಿದ್ದರೋ, ಅಲ್ಲಿಯ ಆಡಂಬರದ ಬದುಕಿಗಾಗಿ ತಮ್ಮ ಮನೆಮಂದಿ-ಊರುಗಳನ್ನು ತೊರೆದು ಹೋಗುತ್ತಿದ್ದರೋ, ಅಮೇರಿಕದ ಪೌರತ್ವಕ್ಕಾಗಿ ಹಂಬಲಿಸುತ್ತಿದ್ದರೋ, ಆ ಕಾಲಮಾನದಲ್ಲಿ ಆ ಅಮೇರಿಕದ ಪ್ರತಿಷ್ಟಿತ ವಿಶ್ವವಿದ್ಯಾಲಯದಲ್ಲಿ ಉಚ್ಛಶಿಕ್ಷಣ ಪಡೆದು, ಆ ಅಮೇರಿಕವನ್ನು ಬಿಟ್ಟು, ತಾನು ಯಾವ ಕ್ಷೇತ್ರವನ್ನು ಅಧ್ಯಯನಕ್ಕಾಗಿ ಆಯ್ದುಕೊಂಡಿದ್ದೋ ಅದೇ ಕ್ಷೇತ್ರಕ್ಕೆ ಮರಳಿ, ಅಲ್ಲಿ, ಒಂದು ಹಳ್ಳಿಯಲ್ಲಿ, ಕೃಷಿಕ ಕುಟುಂಬದ ಸದಸ್ಯೆಯಾಗಿ, ಅಲ್ಲಿನ ಬಾಳು-ಚಟುವಟಿಕೆಗಳು-ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತನ್ನೆಲ್ಲ ಕ್ರಿಯಾಶೀಲತೆಯನ್ನು, ಚಿಂತನೆಯನ್ನು ಅಲ್ಲಿನ ದೀನದಲಿತರ ಹಿತಾಸಕ್ತಿಗಾಗಿ ಮೀಸಲಿಡುವಂತ ಧೃಢ ಬದ್ಧತೆಯನ್ನು ಹೊಂದಿರುವ ವ್ಯಕ್ತಿತ್ವವನ್ನು ಅಸಾಮಾನ್ಯವೆಂದಲ್ಲದೇ ಹೇಗೆ ತಾನೆ ಕರೆಯುವುದು? ಅಂತಹ ಒಂದು ಅಪರೂಪದ ಜೀವನ ಸಾಗಿಸಿದ ಗೇಲ್ ಓಮ್ವೆಡ್ತ್ (1941-2021) ಅವರು ಇದೇ ಅಗಸ್ಟ್ 25ರಂದು ನಿಧನರಾದರು.

Gail Omvedt: Courtesy: The Wire

Gail Omvedt: Courtesy: The Wire

ಜೀವನ-ಕಾರ್ಯಗಳು

ಅಗಸ್ಟ್ 2, 1941ರಲ್ಲಿ ಅಮೇರಿಕಾದ ಮಿನೆಸೋಟಾದಲ್ಲಿ ಜನಿಸಿದ ಗೇಲ್ ಓಮ್ವೆಡ್ತ್, ಮೊದಲ ಬಾರಿ ಭಾರತಕ್ಕೆ ಬಂದದ್ದು 1963ರಲ್ಲಿ. ಆಗ ಅವರಿಗೆ 22ರ ಪ್ರಾಯ. ಓಂವೆಡ್ಟ್ ಓದಿದ್ದು ವಿಯೆಟ್ನಾಮ್ ಯುದ್ಧ-ವಿರೋಧಿ ವಿಧ್ಯಾರ್ಥಿ ಚಳುವಳಿಗಳು ಅಮೇರಿಕಾದಲ್ಲಿ ವ್ಯಾಪಕವಾಗಿದ್ದ ಕಾಲದಲ್ಲಿ. ಈ ವಿಧ್ಯಾರ್ಥಿ ಚಳುವಳಿಗಳು ಯುದ್ಧದ ಹೊರತಾದ ಆರ್ಥಿಕ-ರಾಜಕೀಯ ಅರಿವಿನ ಸ್ವರೂಪವನ್ನೂ ಹೊಂದಿದ್ದವು. ಇದೇ ಕ್ರಾಂತಿಕಾರಿ ನಿಲುವು, ಗೇಲ್ ಅವರಿಗೆ ಭಾರತದ ನಿಮ್ನವರ್ಗಗಳ ಕುರಿತಾದ ಸಂಶೋಧನೆಗೆ ಪ್ರೇರಣೆ ನೀಡಿದ ಅಂಶಗಳಲ್ಲಿ ಒಂದಾಗಿರಬಹುದು. ಮುಂದೆ ಅವರು ತಮ್ಮ ಪಿಎಚ್ಡಿಗಾಗಿ ಭಾರತಕ್ಕೆ ಸಂಬಂಧಿಸಿದ ವಿಷಯವನ್ನೇ ಆಯ್ದುಕೊಂಡರು. ಆ ಕಾಲದಲ್ಲಿ ಅಂತರಾಷ್ಟ್ರೀಯ ಅಕಡೆಮಿಕ್ ವಲಯಗಳಲ್ಲಿ ಹೆಚ್ಚು ಆಕರ್ಷಣೆಯನ್ನಾಗಲೀ, ಹೆಚ್ಚು ಚಾಲ್ತಿಯನ್ನಾಗಲೀ ಹೊಂದಿರದ ಕ್ಷೇತ್ರವನ್ನು ಆಯ್ದುಕೊಂಡಿದ್ದಲ್ಲದೇ, ಜೀವನದುದ್ದಕ್ಕೂ ಅದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಅವರು ಅಧ್ಯಯನಕ್ಕೆ ಆಯ್ದುಕೊಂಡ ಕ್ಷೇತ್ರವೆಂದರೆ ಭಾರತದ ನಿಮ್ನಜಾತಿವರ್ಗಗಳ ಸಾಂಸ್ಕೃತಿಕ ಸಂಘರ್ಷಗಳ ಅಧ್ಯಯನ. ಅವರ್ ಪಿಎಚ್ಡಿ ಸಂಶೋಧನೆ ಬ್ರಾಹ್ಮಣೇತರ ಚಳುವಳಿಗಳ ಕುರಿತಾಗಿತ್ತು ಮತ್ತು ನಿಮ್ನಜಾತಿವರ್ಗಗಳ ಸಾಮಾಜಿಕ ಚಳುವಳಿಗಳ ಕುರಿತಾದ ಆರಂಭಿಕ ಸಂಶೋಧನೆಗಳಲ್ಲಿ ಒಂದಾಗಿತ್ತು. “ವಸಾಹತುಶಾಹಿ ಭಾರತದಲ್ಲಿ ಸಾಂಸ್ಕೃತಿಕ ಪ್ರತಿರೋಧ: ಪಶ್ಚಿಮ ಭಾರತದ ಬ್ರಾಹ್ಮಣೇತರ ಚಳುವಳಿಗಳು, 1873-1930” ಎಂಬ ಶೀರ್ಷಿಕೆಯಲ್ಲಿ ಅವರು ಈ ಅಧ್ಯಯನವನ್ನು ಅಮೇರಿಕದ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾಡಿದ್ದರು. ಕ್ಷೇತ್ರಕಾರ್ಯಕ್ಕಾಗಿ ಭಾರತಕ್ಕೆ ಬಂದವರು ಮುಂದೆ ಇಲ್ಲಿಯೇ ನೆಲೆಸಿದರು.

ಪಿಎಚ್ಡಿಗಾಗಿ ಆಯ್ದ ಕ್ಷೇತ್ರದಲ್ಲಿ ಕೆಲಸ ಮಾಡಿದರು ಎಂದು ಹೇಳಿದಾಗ, ಅದರರ್ಥ ಸಾಮಾನ್ಯವಾಗಿ, ಕ್ಷೇತ್ರದಲ್ಲಿಯೇ ಹೆಚ್ಚಿನ ಪಾಂಡಿತ್ಯ ಗಳಿಸಿದರು ಎಂದೋ, ಅಥವಾ ಹೆಚ್ಚಿನ ಬರವಣಿಗೆ ನಡೆಸಿದರು ಎಂದೋ ಆಗುತ್ತದೆ. ಗೇಲ್ ಓಮ್ವೆಡ್ತ್ ಅವರ ಅನನ್ಯತೆಗೆ ಕಾರಣವೆಂದರೆ, ತಮ್ಮ ಅಭ್ಯಾಸಕ್ಷೇತ್ರಕ್ಕೆ ಅವರು ತೋರಿದ ಸಮರ್ಪಣೆ. ಅಭ್ಯಾಸಕ್ಷೇತ್ರ ಮತ್ತು ತಮ್ಮ ಜೀವನವನ್ನು ಬೇರೆಬೇರೆ ಇಟ್ಟು ಪಾಂಡಿತ್ಯಪೂರ್ಣ ಕೆಲಸ ಮಾಡುವುದು ಸರ್ವೇಸಾಮಾನ್ಯ. ಗೇಲ್ ತಮ್ಮ ಅಭ್ಯಾಸಕ್ಷೇತ್ರವನ್ನೇ ತಮ್ಮ ಕರ್ಮಕ್ಷೇತ್ರವಾಗಿಸಿಕೊಂಡ ಅಪರೂಪದ ವ್ಯಕ್ತಿ. ಅವರ ಸಂಶೋಧನಾ ಗ್ರಂಥ  1976ರಲ್ಲಿ ಪುಸ್ತಕರೂಪದಲ್ಲಿ ಹೊರಬಂತು. ಅವರ ಅಧ್ಯಯನದ ಮೌಲ್ಯವೆಷ್ಟು ಅಂದರೆ ಈಗಲೂ ಈ ಕೃತಿಯ ಆವೃತ್ತಿಗಳು ಮುದ್ರಣ ಕಾಣುತ್ತಿವೆ. ಭಾರತೀಯ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿಯೂ ಅವರ ಬರಹಗಳನ್ನು ಸೇರಿಸಲಾಗಿದೆ. ಗೇಲ್ ಅವರ ಹಲವಾರು ಪುಸ್ತಕಗಳು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ ಮತ್ತು ಬಹಳ ವಿಶಾಲ ಓದುಗವರ್ಗವನ್ನು ಪಡೆದಿವೆ. ಇದಕ್ಕೆ ಒಂದು ಸಾಕ್ಷಿಯೆಂದರೆ, ಅವರ ಪುಸ್ತಕಗಳ ಅನುವಾದಿತ ಆವೃತ್ತಿಗಳು ಬೀದಿಬದಿಯ ಪುಸ್ತಕದಂಗಡಿಗಳಲ್ಲೂ ಮಾರಾಟವಾಗುವ ಪರಿ. ತಮ್ಮ ಮೊದಲನೇ ಕೃತಿಯ ತರುವಾಯ ಮುಂದಿನ ಐದು ದಶಕಗಳಲ್ಲಿ ಒಂವೆಡ್ಟ್ ದಲಿತರ ಚಳುವಳಿಗಳಿಗೆ, ಅಂಬೇಡ್ಕರವಾದಕ್ಕೆ, ದಮನಿತರ ದನಿಗಳಿಗೆ ಸಂಬಂಧಿಸಿದ ಅಧ್ಯಯನಗಳನ್ನು ಸತತವಾಗಿ ಹೊರತಂದರು. ಇದು ನಿಮ್ನಸಮುದಾಯಗಳ ಕುರಿತು ಅವರಿಗಿದ್ದ ಬದ್ಧತೆಗೆ ಸ್ಪಷ್ಟ ಸಾಕ್ಷಿ.

ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಕಸೆಗಾಂವ್ ಎಂಬ ಊರಿನ ಸ್ವಾತಂತ್ರ್ಯ ಹೋರಾಟಗಾರರಾದ ಬಾಬೂಜಿ ಪಾಟನ್ಕರ್ ಮತ್ತು ಇಂದುತಾಯಿ ಪಾಟನ್ಕರ್ ಅವರ ಮಗ ಭರತ್ ಪಟನ್‌ಕರ್. ದಲಿತ್ ಪ್ಯಾಂಥರ್ಸ್, ಬಟ್ಟೆಗಿರಣಿ ಕಾರ್ಮಿಕರ ಸಂಘಟನೆ ಸೇರಿದಂತೆ ಹಲವಾರು ರೈತ, ಕಾರ್ಮಿಕ, ದಲಿತಪರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಭರತ್ ಪಟನ್‌ಕರ್ ಮತ್ತು ಗೇಲ್ ಓಮ್ವೆಡ್ತ್ 1976ರಲ್ಲಿ ಮದುವೆಯಾದರು. ಮುಂದೆ 1983ರಲ್ಲಿ, ಗೇಲ್ ಅಮೇರಿಕಾದ ಪೌರತ್ವ ತೊರೆದು ಭಾರತೀಯ ಪೌರರಾದರು. ಪೂರ್ಣಕಾಲೀನ ಅಕಡೆಮಿಕ್ ವೃತ್ತಿ ಅವರದ್ದಾಗಿರಲಿಲ್ಲ; ಆದರೆ, ಗೇಲ್ ಪ್ರಾಸಂಗಿಕವಾಗಿ ಕೋಪನ್ಹೇಗನ್, ಸೂರತ್, ಪುಣೆ, ದೆಹಲಿಗಳಲ್ಲಿ ವಿಶ್ವವಿದ್ಯಾಲಯ, ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡಿದರು.  ಫುಲೆ, ಶಾಹು ಮಹಾರಾಜ್, ಮತ್ತು ಅಂಬೇಡ್ಕರ್ ಅವರುಗಳ ಜಾತಿವಿರೋಧೀ ಚಟುವಟಿಕೆಗಳ ದಾಖಲೀಕರಣದ ಕೆಲಸ ಮಾಡುತ್ತ, ಗೇಲ್, ಈ ಹಿನ್ನೆಲೆ ಹೇಗೆ ವರ್ತಮಾನದ ಹಲವಾರು ಬಹುಜನ ಮತ್ತು ರೈತರುಗಳ ಜನಪ್ರಿಯ ಹೋರಾಟಗಳಿಗೆ ಇಂಬಾದವು ಎನ್ನುವುದನ್ನು ದಾಖಲಿಸುವ ಕೆಲಸ ಮಾಡಿದ್ದಾರೆ.

ಒಂದು ಕಾಲದಲ್ಲಿ ಭಾರತದ ಸಮಾಜಶಾಸ್ತ್ರದ ಅಧ್ಯಾಪಕರು, ತಜ್ನರು, ವಿಧ್ಯಾರ್ಥಿಗಳು ಗೇಲ್ ಅವರ ಕೃತಿಗಳನ್ನು ಉಪೇಕ್ಷಿಸಿದ್ದರು. ಅವರ ಬರಹಗಳು ಪ್ರಸ್ಥಾಪಿತ ಅಕೆಡೆಮಿಕ್ ಅಭ್ಯಾಸಗಳ ಮಾದರಿಗಗಳ ಚೌಕಟ್ಟನ್ನು ಮೀರುತ್ತಿರುವುದು ಬಹುಶಃ ಇದಕ್ಕೆ ಕಾರಣವಾಗಿತ್ತು. ಜಾತಿ, ವರ್ಗ, ಲಿಂಗತ್ವ, ಕೃಷಿ ವಿಷಯಗಳು ಗೇಲ್ ಅವರ ಬರಹಗಳಲ್ಲಿ ಪಡೆದಿದ್ದ ಪ್ರಾಧಾನ್ಯ ಅಂದಿನ ಸಮಾಜಶಾಸ್ತ್ರ-ರಾಜಕೀಯಶಾಸ್ತ್ರಗಳ ದೃಷ್ಟಿಕೋನಗಳಿಂದ ಭಿನ್ನವಾಗಿತ್ತು, ಹಲವು ಪ್ರಸಿದ್ಧ ವಿದ್ವಾಂಸರುಗಳ ಅರಿವಿಗೆ ವ್ಯತಿರಿಕ್ತವಾಗಿತ್ತು. ಗೇಲ್ ಓಮ್ವೆಡ್ತ್ ಅವರ ತರಬೇತಿ ಇದ್ದುದು ಸಮಾಜಶಾಸ್ತ್ರಜ್ನೆಯಾಗಿ. ಆದರೆ, ತಮ್ಮ ಸಮಕಾಲೀನರ ಹಾಗೆ ಕೇವಲ ಕ್ಷೇತ್ರಕಾರ್ಯ, ಸಮೀಕ್ಷೆ, ವಿಶ್ಲೇಷಣೆಗಳ ಮೇರೆಯಲ್ಲಿ ಬಂಧಿಯಾಗದೇ ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವಿಶ್ಲೇಷಣೆಯನ್ನು ಸಹ ಒಳಗೊಂಡ ಸಂಶೋಧನಾ ಬರವಣಿಗೆ ಅವರ ಮಾದರಿಯಾಗಿತ್ತು. ಅವರ ಬರಹಗಳು ಓದುಗರನ್ನು ಸಂವಾದಕ್ಕೆ ತೊಡಗಿಸುತ್ತವೆ ಮತ್ತು ಹಾಗಾಗಿಯೇ ಅವರ ಅನೇಕ ಕೃತಿಗಳು ವಿಶಾಲ ಚರ್ಚೆಗೆ ಗ್ರಾಸವಾಗಿದ್ದಾವೆ. ಅವರ ಅಕಡೆಮಿಕ್ ಪುಸ್ತಕಗಳು, ಸಂಶೋಧನ ಪ್ರಭಂಧಗಳು, ಪತ್ರಿಕಾ ಲೇಖನಗಳು ಮುಂತಾದ ಬರವಣಿಗೆಗಳು ನಿಮ್ನವರ್ಗಗಳ ಹಾಗೂ ಮಹಿಳೆಯರ ಪ್ರಶ್ನೆಗಳಿಗೆ ಸಂಬಂಧಿಸಿದ ರಾಜಕೀಯ ಆರ್ಥಿಕ ವ್ಯವಸ್ಥೆ, ಪರಿಸರ, ರೈತಾಪಿ ರಾಜಕಾರಣ, ಸಂಪನ್ಮೂಲಗಳ ಹಂಚಿಕೆಗಳಂತಹ ವಿಷಯಗಳನ್ನು ಸಮಾಜಶಾಸ್ತ್ರದ ವಿಶ್ಲೇಷಣೆಯ ಪರಿಧಿಯೊಳಗೆ ತಂದಿದ್ದು ವಿಶೇಷವಾಗಿತ್ತು. ಗೇಲ್ ಸಂಶೋಧನೆ ನಡೆಸುತ್ತಿದ್ದ ಕಾಲಮಾನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂರಚನವಾದ, ಸಂರಚನೋತ್ತರವಾದ, ಮತ್ತು ಮುಂದೆ ಸಾಂಸ್ಕೃತಿಕ ಅಧ್ಯಯನಗಳು ಮುಂತಾದ “ಥಿಯರಿ” ಎಂದು ಕರಯಲ್ಪಟ್ಟ ವಿಶೇಷ ಪ್ರಮೇಯಗಳ ಮತ್ತು ಪದಪ್ರಯೋಗದ ಶೈಲಿ ಅಕಡಮಿಕ್ ಕ್ಷೇತ್ರದಲ್ಲಿ ಜನಪ್ರಿಯವಾಗಿತ್ತು. ಆದರೆ ಇವುಗಳನ್ನು ಬಳಸದೆಯೇ ಗೇಲ್ ತಮ್ಮ ವಿಷಯಗಳ ವಿವಿಧ ಆಯಾಮಗಳು ಮತ್ತವುಗಳ ಸಂಕೀರ್ಣತೆಯನ್ನು ಉಪೇಕ್ಷಿಸದಂತೆ ಬರೆಯಬಲ್ಲ ಪಾಂಡಿತ್ಯ ಬೆಳೆಸಿಕೊಂಡಿದ್ದರು.

ಗೇಲ್ ಅವರು ಬರವಣಿಗೆಗೆ ಪೂರ್ವದಲ್ಲಿ ಮತ್ತು ಅದಕ್ಕೆ ಪೂರಕವಾಗಿ ಕ್ಷೇತ್ರಕಾರ್ಯ ಮತ್ತು ಸಂಶೋಧನೆ ಮಾಡುವ ವಿಧಾನ ಕೂಡ ಅವರನ್ನು ಅದೆಷ್ಟೋ ಅಕಡೆಮಿಕ್ ಸಮಾಜಶಾಸ್ತ್ರಜ್ನರಿಂದ ಭಿನ್ನರನ್ನಾಗಿಸುತ್ತದೆ. ಉದಾಹರಣೆಗೆ ಅವರ “ವಿ ಶಲ್ ಸ್ಮ್ಯಾಶ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್” (ಈ ಸೆರೆಮನೆಯನ್ನು ಧ್ವಂಸಮಾಡುತ್ತೇವೆ: ಭಾರತೀಯ ಮಹಿಳೆಯರ ಹೋರಾಟಗಳು) ಎಂಬ ಕೃತಿಯನ್ನು ಗಮನಿಸಿದರೆ ನಮಗೆ ಗೇಲ್ ಅವರು ಹೇಗೆ ಮಹಿಳಾ ಸಂಘಟನೆ-ಚಳುವಳಿಗಳ ಜೊತೆಯಾಗಿದ್ದರು, ಮಹಿಳಾಸಿದ್ಧಾಂತಿಗಳು, ಮಹಿಳಾ ಕಾರ್ಮಿಕರು, ವಿಧ್ಯಾರ್ಥಿಗಳು, ಮನೆಗೆಲಸದವರು ಮುಂತಾದವರ ಜೊತೆ ಮಾತುಕತೆ ನಡೆಸಿದ್ದರು, ಸಹಚಿಂತನೆ ನಡೆಸಿದ್ದರು ಎಂಡು ತಿಳಿದು ಬರುತ್ತದೆ. ಅಲ್ಲದೇ, ಈ ಎಲ್ಲ ನಿರ್ಧಿಷ್ಟ ಮತ್ತು ಮೂಲಾಧಾರವುಳ್ಳ ಅಧ್ಯಯನಗಳ ಮುಖಾಂತರವೇ  ಅವರು ಬರವಣಿಗೆಯನ್ನು ರೂಪಿಸಿಕೊಂಡರು. ತನ್ಮೂಲಕ ಕುಟುಂಬ, ಕಾರ್ಯಕ್ಷೇತ್ರ, ಮತ್ತಿತರ ವಲಯಗಳಲ್ಲಿ ಮಹಿಳೆಯರ ಅಧೀನತೆಗೆ ಸಂಬಂಧಿಸಿದಂತೆ ಅವರು ಎತ್ತಿದ ಅನೇಕ ಮೂಲಭೂತ ಪ್ರಶ್ನೆಗಳು 1980ರ ದಶಕಗಳಲ್ಲಿ ರೂಪುಗೊಳ್ಳುತ್ತಿದ್ದ ಭಾರತೀಯ ಮಹಿಳಾವಾದವನ್ನು ಬಲಪಡಿಸಿದವು. ಗೇಲ್ ಅನಾವರಣಗೊಳಿಸಿದ ವಿಷಯವೆಂದರೆ ಲಿಂಗತ್ವವನ್ನಾಧರಿಸಿದ ಮಹಿಳೆಯರ ಶೋಷಣೆ ಮತ್ತು ಅವರ ಮೇಲಿನ ಸಾಂಸ್ಕೃತಿಕ ದಬ್ಬಾಳಿಕೆ ಇವೆರಡೂ ವಾಸ್ತವವೇ ಆಗಿದ್ದರೂ ಅವು ಏಕರೀತಿಯವಲ್ಲವೆಂದು. ಮೇಲ್ವರ್ಗ ಮತ್ತು ಸವರ್ಣೀಯ ಮಹಿಳೆಯರ ಮೇಲಿನ ಶೋಷಣೆ ಕೌಟುಂಬಿಕ ನೆಲೆ ಹೊಂದಿದ್ದರೆ, ನಿಮ್ನ ಜಾತಿ, ದಲಿತ ಮತ್ತು ಕಾರ್ಮಿಕ ಮಹಿಳೆಯರು ಅವರೆನ್ನುವಂತೆ “ಸಾಮಾಜಿಕ ಗಂಡಾಳಿಕೆ”ಗೆ ಒಳಗಾಗಿದ್ದಾರೆ. 1990ರಲ್ಲಿ ಪ್ರಕಟವಾದ ಅವರ “ವಯಲೆನ್ಸ್ ಅಗೇನ್ಸ್ಟ್ ವಿಮೆನ್: ನ್ಯೂ ಮೂವಮೆಂಟ್ಸ್ ಆಂಡ್ ನ್ಯೂ ಥಿಯರೀಸ್ ಇನ್ ಇಂಡಿಯಾ” ಎಂಬ ಕೃತಿಯಲ್ಲಿ ವಿಷದವಾಗಿ ಚರ್ಚಿಸಿರುವಂತೆ “ಸಾಮಾಜಿಕ ಗಂಡಾಳಿಕೆ” ಎಂಬ ಈ ಪದ ಸೂಚಿಸುವುದೇನೆಂದರೆ, ನಿಮ್ನಜಾತಿ-ದಲಿತ-ಕಾರ್ಮಿಕ ಮಹಿಳೆಯರ ಮೇಲೆ ಇಡೀ ಸಮಾಜವೇ ಗಂಡಾಳಿಕೆಯ ಮಾದರಿಯ ದಬ್ಬಾಳಿಕೆ ನಡೆಸುತ್ತಿರುತ್ತದೆಯೆಂದು. ಈ ಕೃತಿಯಲ್ಲಿ ಗೇಲ್, ಭಾರತೀಯ ಮಹಿಳಾಸಿದ್ಧಾಂತಿಗಳು ಮಹಿಳಾವಾದದ ಸಿದ್ಧ ಮಾದರಿಗಳ ಬದಲು ಭಾರತದ ಸಾಮಾಜಿಕ ವಾಸ್ತವ ತೋರಿಸುವ ಶೋಷಣಾ ಮಾದರಿಗಳನ್ನು ಚರ್ಚಿಸಬೇಕೆಂದು ವಾದಿಸುತ್ತಾರೆ. ಆ ನಂತರದಲ್ಲಿ, ಭಾಷೆ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರು ವ್ಯವಹರಿಸುವ ಬಗೆಯಲ್ಲಿರುವ ಭಿನ್ನತೆಗಳ ಕುರಿತಾಗಿ ಅನೇಕ ಸಂಶೋಧನೆಗಳಾಗಿವೆ.

Gail Omvedt: Courtesy: The Guardian

Gail Omvedt: Courtesy: The Guardian

ಚಳುವಳಿಯಲ್ಲಿ ಸಹಪಾಲು

ಅಧ್ಯಯನ, ಸಂಶೋಧನೆ, ಬರವಣಿಗೆಯ ಕೈಂಕರ್ಯಗಳಲ್ಲಿ ಮಾತ್ರ ತೊಡಗಿಕೊಳ್ಳದೇ, ಗೇಲ್ ಓಮ್ವೆಡ್ತ್ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ಅಂಚಿನಲ್ಲಿರುವವರ ಪರವಾಗಿ ಹಲಹತ್ತು ಚಟುವಟಿಕೆಗಳನ್ನು ಸ್ವತಃ ಎತ್ತಿಕೊಂಡಿದ್ದರಲ್ಲದೇ, ಬದಲಾವಣೆಗಾಗಿ ಸಂಘಟನಾ ಕಾರ್ಯದಲ್ಲಿ ನಿರತರಾದವರ ಜೊತೆನಿಲ್ಲುವ ಬದ್ಧತೆಯನ್ನು ಹೊಂದಿದ್ದರು. ಕಾಂಶಿರಾಮ್ ಅವರು ಬಾಮ್ಸೇಫ್ ಸಂಘಟನೆಯನ್ನು ಕಟ್ಟುತ್ತಿದ್ದ ಸಂಧರ್ಭದಲ್ಲಿ ನಾಗಪುರದಲ್ಲಿ 1971ರಲ್ಲಿ ನಡೆದ ಸಮ್ಮೇಳನದಲ್ಲಿಯೂ ಮುಖ್ಯ ಭಾಷಣಕಾರಳಾಗಿ ಗೇಲ್ ಹಾಜರಿದ್ದರು. ಡರ್ಬನ್ ಶಹರದಲ್ಲಿ 2001ರಲ್ಲಿ ನಡೆದ ರೇಸ್ (ವರ್ಣ) ಕುರಿತ ಸಂಯುಕ್ತ ರಾಷ್ಟ್ರಗಳ ಅಧಿವೇಶನದಲ್ಲಿ ಜಾತಿಯೂ ಸೇರಬೇಕೆಂಬ ದಲಿತ ಕಾರ್ಯಕರ್ತರ ಬೇಡಿಕೆಯ ಸಂಧರ್ಭದಲ್ಲಿ ಕಂಡಂತೆ, ಗೇಲ್ ಈ ಬೇಡಿಕೆಯನ್ನು ಬೆಂಬಲಿಸಿ ಜನಾಭಿಪ್ರಾಯ ಮೂಡಿಸುವುದಕ್ಕಾಗಿ ವಿಸ್ತಾರವಾಗಿ ವಿಷಯದ ಕುರಿತಾಗಿ ಬರೆದರು. 1980ರ ದಶಕಗಳಲ್ಲಿ ತಮ್ಮ ಅತ್ತೆ ಇಂದುತಾಯಿ ಪಾಟನ್ಕರ್ ಅವರನ್ನೂ ಒಳಗೊಂಡು ಅನೇಕ ಸಹಯೋಗಿಗಳ ಜೊತೆ ಸೇರಿ “ಶ್ರಮಿಕ್ ಮುಕ್ತಿ ದಲ್” ಸ್ಥಾಪಿಸುವಲ್ಲಿ ಅವರು ಪಾತ್ರ ವಹಿಸಿದರು. ಈ ಸಂಘಟನೆಯ ಮೂಲಕ ನಡೆಸಿದ ಹೋರಾಟ ಚಟುವಟಿಕೆಗಳ ಮೂಲಕ ಗೇಲ್ ಒಂವೆಡ್ಟ್ ಅವರು ಜಲಸಂಪನ್ಮೂಲಗಳು, ಬರಗಾಲ, ಇತ್ಯಾದಿ ಸಮಸ್ಯೆಗಳು ಎತ್ತಿದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಗಳ ಕುರಿತು ವಿಸ್ತೃತ ತತ್ವಮಂಡನೆ ಮಾಡಿದರು. ಈ ನಿಟ್ಟಿನಲ್ಲಿ ಅವರ ಒಲವು ಚಿಕ್ಕ ಉತ್ಪಾದಕ ವರ್ಗ, ಬಡ ಶ್ರಮಿಕರು, ಮಹಿಳೆಯರ ಕಡೆಗೇ ಇತ್ತು. ಅಲ್ಲದೇ, ಚಳುವಳಿಗಳಲ್ಲಿ ನಾಯಕತ್ವದ ಕುರಿತಾಗಿಯೂ ಸಹ ತುಂಬ ಮುಖ್ಯ ಅಂಶಗಳನ್ನು ಅವರು ಸೂಚಿಸಿದರು. ಮೇಲ್ಜಾತಿ/ವರ್ಗದ, ನಗರಗಳ ಹಿನ್ನೆಲೆಯ ಸಂಘಟಕರು ಜಾತಿ-ವಿರೋಧೀ, ಆದಿವಾಸಿಗಳ ಸಂಘಟನೆಗಳಲ್ಲಿ ಮುಂದಾಳತ್ವ ವಹಿಸುವ ಬಗೆಗೆ ಅವರ ನಿಲುವು ವಿವಾದವನ್ನು ಸೃಷ್ಟಿಸಿತ್ತು. ನರ್ಮದಾ ಬಚಾವೋ ಆಂದೋಲನ ಬಾಧಿತ ಆದಿವಾಸಿಗಳ ಮುಂದಾಳತ್ವವನ್ನು ಮರೆಮಾಚಿದ್ದನ್ನು ಅವರು ತೀವ್ರವಾಗಿ ಟೀಕಿಸಿದರು. ದಮನಿತರ ಏಜೆನ್ಸಿಯ ಕುರಿತು ಅವರು ತೋರುವ ಬದ್ಧತೆಯೆಂದರೆ, ಮುಂದಾಳತ್ವ, ಪ್ರಸಿದ್ಧಿಗಳನ್ನು ಕಿತ್ತುಕೊಳ್ಳದ ಹಾಗೆ ದಮನಿತರ ಚಳುವಳಿಗಳಲ್ಲಿ ಪಾತ್ರವಹಿಸಬೇಕಾದ ನೈತಿಕತೆ.

ವಿದ್ವತ್ ಜೀವನ

ಫುಲೆ, ಅಂಬೇಡ್ಕರ್ ಮತ್ತು ಜಾತಿವಿನಾಶದ ಕುರಿತಾಗಿ ಭಾರತದಲ್ಲಿ ದೀರ್ಘಕಾಲದಿಂದ ಚಾಲ್ತಿಯಲ್ಲಿರುವ ಸಂಕಥನಗಳನ್ನು ಜಾಗತಿಕ ವಿದ್ವಲಯಕ್ಕೆ ಪರಿಚಯಿಸಿದ ಮೂವರು ಬಹುಮುಖ್ಯ ಮಹಿಳಾ ಸಂಶೋಧಕರೆಂದರೆ ಎಲೀನರ್ ಜೆಲಿಯೆಟ್, ರೋಸಲಿಂಡ್ ಓಹ್ಯಾನ್ಲನ್ ಮತ್ತು ಗೇಲ್ ಓಮ್ವೆಡ್ತ್.  ಭೂಮಿ, ಜಾತಿ, ವರ್ಗ ಮತ್ತು ಲಿಂಗತ್ವದ ಪ್ರಶ್ನೆಗಳ ಸುತ್ತ ಗೇಲ್ ಓಮ್ವೆಡ್ತ್ ತಮ್ಮ ಸಂಶೋಧನಾ ಮತ್ತು ಜನಪ್ರಿಯ ಪತ್ರಿಕಾ ಲೇಖನಗಳನ್ನು ಬರೆದಿದ್ದಾರೆ.  ಗೇಲ್ ಓಮ್ವೆಡ್ತ್ ಅವರನ್ನು ಓರ್ವ ವಿದ್ವಾಂಸರನ್ನಾಗಿ ಬಹುಕಾಲ ಭಾರತ ನೆನಪಿನಲ್ಲಿಡಲಿದೆ. ಅವರು ಕೈಗೊಂಡ ಕೆಲಸವೇ ಅಂತಹುದಾಗಿತ್ತು. ಫುಲೆ, ಅಂಬೇಡ್ಖರ, ಪೆರಿಯಾರ್, ಅಯೋತ್ತಿ ದಾಸ್ ಅವರುಗಳ ಚಿಂತನೆಗಳಿಗೆ ಗೇಲ್ ತಮ್ಮ ಅಧ್ಯಯನಗಳನ್ನು ಮುಡಿಪಾಗಿಟ್ಟಿದ್ದರು. ಭರತ್ ಪಟನ್‌ಕರ್  ಜೊತೆ ಸೇರಿ ತುಕಾರಾಮ, ಚೋಖಾಮೇಳ ಅವರುಗಳ ಕಾವ್ಯದ ಮತ್ತು ಜಾತಿವಿರೋಧೀ ಸಾಹಿತ್ಯಗಳಲ್ಲಿ ಹೆಚ್ಚಿನವನ್ನು ಅವರು ಅನುವಾದಿಸಿದ್ದಾರೆ.

ಮೌಖಿಕ ಪರಂಪರೆಗಳ ಅಧ್ಯಯನದ ಮೂಲಕ ದಲಿತ-ಬಹುಜನ ಚಳುವಳಿಗಳ ದಾಖಲೀಕರಣದ ಬಹುಮೂಲ್ಯ ಕೆಲಸ ಗೇಲ್ ಅವರ ಕೊಡುಗೆ. ಮಹಾರಾಷ್ಟ್ರದಲ್ಲಿನ ಬ್ರಾಹ್ಮಣೇತರ ಚಳುವಳಿಗಳ ಇತಿಹಾಸವನ್ನು ಬರೆಯುವ ಗಟ್ಟಿ ನಿರ್ಧಾರ ಬದ್ಧತೆಯಿಲ್ಲದವರಿಗೆ ಸಾಧ್ಯದ ಮಾತಲ್ಲ – ಅದೂ ಕೂಡ ಅಕಡೆಮಿಕ್ ವಲಯಗಳಲ್ಲಿ ಆ ಕ್ಷೇತ್ರಕ್ಕೆ ವಿಶಾಲ ಮಾನ್ಯತೆ ಇಲ್ಲದಿದ್ದಾಗ. ಕ್ರಾಂತಿಕಾರಿ ಎನಿಸಿಕೊಂಡ ವಿದ್ವಾಂಸರು ಹೆಚ್ಚೆಂದರೆ ಬ್ರಾಹ್ಮಣವಾದವನ್ನು ತಿರಸ್ಕರಿಸುತ್ತಿದ್ದ ಕಾಲದಲ್ಲಿ, ಗೇಲ್ ಇನ್ನೂ ಮುಂದೆ ಹೋಗಿ ಬಹುಜನ ಸಮಾಜಗಳ ಪರಂಪರೆಗಳನ್ನು, ಸಾಂಸ್ಕೃತಿಕ ನೆಲೆಗಳನ್ನೂ, ರಾಜಕೀಯ ಆಕಾಂಕ್ಷೆಗಳನ್ನು ಅಧ್ಯಯನ ಮಾಡಿ, ಅವುಗಳ ಇತಿಹಾಸ ಬರೆದರು. ಫುಲೆ-ಅಂಬೇಡ್ಕರವಾದ, ಶೂದ್ರಸಂತರುಗಳ ಸಂಕಥನಗಳು, ದಲಿತಬಹುಜನ ದೃಷ್ಟಿಕೋನಗಳ ಕುರಿತಾಗಿ ಬಹುಮುಖ್ಯ ಪ್ರಮೇಯಗಳನ್ನು, ತಾತ್ವಿಕ ಚೌಕಟ್ಟುಗಳನ್ನು ಪ್ರತಿಪಾದಿಸಿದ ಶ್ರೇಯ ಗೇಲ್ ಅವರಿಗೆ ಸೇರುತ್ತದೆ.

ಗೇಲ್ ಅವರ ಚಿಂತನೆ ಮತ್ತು ಬರಹಗಳ ಮುಖ್ಯ ಲಕ್ಷಣವೆಂದರೆ ಅವುಗಳ ಸಂಧರ್ಭ ಸ್ಪಷ್ಟತೆ. ಸಮಾಜಶಾಸ್ತ್ರದ ತಾತ್ವಿಕ ಚೌಕಟ್ಟುಗಳು ಅಥವಾ ಥಿಯರಿಗಳ ಆಧಾರದ ಮೇಲೆ ಭಾರತೀಯ ಸಮಾಜದ ವಿಶ್ಲೇಷಣೆಗೆ ತೊಡಗುವ ಒಣಪಾಂಡಿತ್ಯ ಅವರದಾಗಿರಲಿಲ್ಲ. ಯಾವೊಂದು ವಿದ್ಯಮಾನವನ್ನೂ ಸಹ ಅದರ ಐತಿಹಾಸಿಕ ಮತ್ತು ಒಟ್ಟಾರೆ ವರ್ತಮಾನದ ಸನ್ನಿವೇಶದಲ್ಲಿಯೇ ಇಟ್ಟುಕೊಂಡು ವಾಸ್ತವದ ಅರಿವಿಗೆ ಪ್ರಯತ್ನಿಸುವುದು – ವಿಷಯವನ್ನು ತನ್ನಲ್ಲಿ ತಾನಾಗಿ ನೋಡುವ ಬದಲು ಅದರ ಹಿಂದು-ಮುಂದುಗಳ ವಿವೇಕದೊಡನೆ ಅರ್ಥೈಸುವುದು ಅವರ ಬರಹಗಳ ಜಾಯಮಾನ. ಈ ಹಿನ್ನೆಲೆಯಲ್ಲಿಯೇ ಗೇಲ್ ಎಡಚಿಂತಕರೊಂದಿಗೆ ಚರ್ಚೆಗಿಳಿದಿದ್ದಿದೆ – ಸಾಮಾಜಿಕ, ಐತಿಹಾಸಿಕ ಮತ್ತು ಭೌಗೋಳಿಕ ಹಿನ್ನೆಲೆಯ ಜೊತೆ ಸಂವಾದಿಸದೇ ವರ್ಗಪ್ರಜ್ನೆ, ಶೋಷಣೆ ಮುಂತಾದ ತಾತ್ವಿಕ ಚೌಕಟ್ಟುಗಳನ್ನು ಆರೋಪಿಸಿಕೊಂಡು ಚಿಂತಿಸುವ ಉಲ್ಟಾ ಮಾದರಿಯನ್ನು ಅವರು ಟೀಕಿಸುತ್ತಿದ್ದರು.

ಅವರ ವಿದ್ವತ್ತಿನ ಪ್ರಯಾಣ ಹಲವು ನೆಲೆ, ದಾರಿಗಳನ್ನು ಹೊಕ್ಕು ಮುನ್ನಡೆದರೂ ಕೂಡ, ಅವುಗಳ ಆಳದಲ್ಲಿದ್ದ ಮೂಲಧಾತು ಆದರ್ಶ ಸಮಾಜದ ಕನಸು – ಭವಿಷ್ಯದಲ್ಲಿ ಸಾಧಿಸಬಹುದಾದ ಆದರ್ಶ ಸಮಾಜಕ್ಕಾಗಿ ವರ್ತಮಾನದಲ್ಲಿ ಮಾಡಬೇಕಾದ ಪ್ರಯಾಸ. ವಿವೇಕ, ವಿಶ್ಲೇಷಣೆ, ಸಂಘಟನೆ, ಸಂಘರ್ಷ, ರಾಜಕೀಯ ಸಹಕಾರಗಳೆಲ್ಲವುಗಳೂ ಬರಲಿರುವ ಆದರ್ಶ ಸಮಾಜವನ್ನು ಸಾಕಾರ ಮಾಡಲು ಅವಶ್ಯವಿರುವ ಪರಿಕರಗಳೇ ಅವರಿಗೆ. ಅವರ ಚಿಂತನೆಯನ್ನು ರೂಪಿಸಿದ ಮಹಿಳಾವಾದ, ಮಾರ್ಕ್ಸವಾದ, ಫುಲೆ-ಅಂಬೇಡ್ಕರವಾದಗಳೆಲ್ಲ ಆದರ್ಶ ಸಮಾಜವನ್ನು ಸಾಕಾರಗೊಳಿಸುವ ಸ್ವಪ್ನದ, ತೀವ್ರ ಬಯಕೆಯ, ದಾರಿಗಳು. ಜಾತಿ, ಲಿಂಗತ್ವ, ವರ್ಗ ಮುಂತಾದ ಬೇಧಗಳನ್ನು ನಿವಾರಿಸಿಕೊಂಡು ಮುಂದೆ ಸಾಗಲು ಬೇಕಾದ ಬೌದ್ಧಿಕ ಮತ್ತು ಸಾಮುದಾಯಿಕ ಪ್ರಜ್ನೆಯ ಸಲಕರಣೆಗಳು. ಒಂದು ಸ್ತರದಲ್ಲಿ ಸಂಕೀರ್ಣತೆಗಳನ್ನು ಎದುರಿಸುವ ಗಟ್ಟಿತನ ಹೊಂದಿದ್ದರೂ, ಆಳದಲ್ಲಿ ಸರಳವೂ, ನೇರವೂ, ಪ್ರಾಮಾಣಿಕವೂ ಆದ ನಿಷ್ಕಪಟ ವಿದ್ವತ್-ಬರಹಗಳನ್ನು ಗೇಲ್ ಬರೆದರು ಮತ್ತು ಹಾಗೆಂದೇ ಅವು ಬಹುಜನರನ್ನು, ಅದರಲ್ಲೂ ಅವರು ಯಾರ ಏಳಿಗೆಗಾಗಿ ಐದು ದಶಕಗಳ ಕಾಲ ದುಡಿದರೋ, ಆ ಬಹುಜನ ಸಮುದಾಯಗಳನ್ನು ಆಕರ್ಷಿಸಿದವು, ಮನವೊಲಿಸಿದವು.

ಗೇಲ್ ಓಮ್ವೆಡ್ತ್ ಅವರ ಪ್ರಮುಖ ಪ್ರಕಟಣೆಗಳು: “ವಿ ಶಲ್ ಸ್ಮ್ಯಾಶ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್” (1979), “ರಿಇನ್ವೆಂಟಿಂಗ್ ರೆವೊಲ್ಯೂಶನ್: ನ್ಯೂ ಸೋಶಿಯಲ್ ಮೂವಮೆಂಟ್ಸ್ ಆಂಡ್ ದ ಸೋಶಿಯಲಿಷ್ಟ ಟ್ರಡಿಶನ್ ಇನ್ ಇಂಡಿಯಾ” (1982), “ದಲಿತ್ ವಿಶನ್ಸ್” (1995; ಕನ್ನಡ ಅನುವಾದ ಮೂಡ್ನಾಕೂಡು ಚಿನ್ನಸ್ವಾಮಿ),  “ಬುದ್ಧಿಸಂ ಇನ್ ಇಂಡಿಯಾ: ಚಾಲೆಂಜಿಂಗ್ ಬ್ರಾಹ್ಮಿನಿಸಂ ಆಂಡ್ ಕಾಸ್ಟ್” (2003), “ಸೀಕಿಂಗ್ ಬೇಗಂಪುರಾ: ದ ಸೋಶಿಯಲ್ ವಿಶನ್ ಆಫ್ ಆಂಟಿ-ಕಾಸ್ಟ್ ಇಂಟೆಲ್ಲೆಕ್ಚವಲ್ಸ್” (2008) ಮತ್ತು “ದಲಿತ್ಸ್ ಅಂಡ್ ಡೆಮಾಕ್ರಟಿಕ್ ರೆವೊಲ್ಯೂಶನ್” (2013) ಇತ್ಯಾದಿ.

ಒಂವೆಡ್ಟ್ ಅವರ ಜಾತಿ ಕುರಿತಾದ ತಿಳುವಳಿಕೆ ಐತಿಹಾಸಿಕ ನೆಲೆಯುಳ್ಳದ್ದಾಗಿತ್ತು. ಹಾಗಾಗಿ, ಅವರು ಜಾತಿಯನ್ನು ಹಿಂದು ಸಮಾಜದ ಆಚರಣಾ ಪದ್ಧತಿಗಳ ಚೌಕಟ್ಟಿನಲ್ಲಿ ನೋಡದೇ, ಪುರಾತನ ಶಾಸ್ತ್ರಗಳ ವಿವರಣೆಗಳ ಬೆಳಕಲ್ಲಿ ಅರ್ಥೈಸದೇ, ಮಾರ್ಕ್ಸಿಸ್ಟ್ ಮತ್ತು ಅನೇಕ ಐರೋಪ್ಯ ವಿದ್ವಾಂಸರುಗಳಂತೆ ಜಾತಿಯನ್ನು ಭೌತಿಕ ಚೌಕಟ್ಟುಗಳಿಂದ ಹೊರಗಿಡದೇ, ಜಾತಿ ಸಮಾಜವೆನ್ನುವ ಸಂರಚನೆಯನ್ನು ರಾಜಕೀಯ-ಆರ್ಥಿಕತೆಯ (ಪಾಲಿಟಿಕಲ್ ಇಕಾನಮಿ) ಬೆಳಕಿನಲ್ಲಿ ಅಧ್ಯಯನ ಮಾಡಿದರು. ಆದುದರಿಂದಲೇ ಅವರಿಗೆ ಫುಲೆಯಾಗಲೀ, ಅಂಬೇಡ್ಕರರಾಗಲೀ ಸಮಾಜ ಸುಧಾರಕರಾಗಿ ತೋರುವುದಿಲ್ಲ, ಬದಲಿಗೆ ಸಾಮಾಜಿಕ ಕ್ರಾಂತಿಕಾರಿಗಳಾಗಿ ತೋರುತ್ತಾರೆ. ಆದುದರಿಂದಲೇ ಅವರು ತಮ್ಮ ಬರಹಗಳಲ್ಲಿ ಜಾತಿ-ವರ್ಗ-ಲಿಂಗತ್ವಗಳನ್ನು ಕೂಡುಗೆರೆಗಳನ್ನಾಗಿ (intersections) ನೋಡುತ್ತಾರೆ.

ದಲಿತ-ಬಹುಜನರಿಗೆ ದಕ್ಕಬೇಕಿರುವ ಆರ್ಥಿಕ ವಿಕಾಸ, ತರತಮವಿರದ ಸಂಪನ್ಮೂಲ ಹಂಚಿಕೆ, ಗಂಡಾಳಿಕೆಯಿಂದ ಮುಕ್ತಿ, ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿ ಪಾಲು, ಹಾಗೆಯೇ ಇನ್ನೂ ವಿಸ್ತೃತ ನೆಲೆಯಲ್ಲಿ ಜನಪರ ಚಳುವಳಿಗಳು, ಮಹಿಳೆಯರ ಸಮಸ್ಯೆಗಳು, ಪರಿಸರದ ಪ್ರಶ್ನೆಗಳು, ಭದ್ರಗೊಳ್ಳುತ್ತಿರುವ ಜಾತಿಪ್ರಜ್ನೆಯ ಹಿಡಿತ, ಮುಂತಾದ ವಿಷಯಗಳನ್ನು ಜಾತಿಅಂತ್ಯ ಮತ್ತು ಸಮಾನತೆಯ ಆಶಯದ ತಳಹದಿಯುಳ್ಳ ದೃಷ್ಟಿಕೋನದ ಮೂಲಕ ತಾರ್ಕಿಕ ರೀತ್ಯಾ ವಿಶ್ಲೇಷಿಸುತ್ತ ಬಂದವರು ಗೇಲ್. ಸಾಮಾಜಿಕ ನ್ಯಾಯ ಅವರ ಬರಹಗಳಲ್ಲಿನ ಪ್ರಧಾನ ಆಶಯ. ಸಂಶೋಧನೆಯನ್ನಾಧರಿಸಿದ ವಿದ್ವತ್ತಿನ ಬರವಣಿಗೆಗಳ ಜೊತೆ ಗೇಲ್ ಜನಪ್ರಿಯ ಪತ್ರಿಕೆಗಳಲ್ಲಿ ಕೂಡ ಬರೆಯುತ್ತಿದ್ದರು. ತಮ್ಮ ಕಾಲಂಗಳು ಮತ್ತಿತರ ಬರವಣಿಗೆಗಳ ಮೂಲಕ ಸಮಕಾಲೀನ ಸಮಸ್ಯೆಗಳು ಮತ್ತು ಅವುಗಳಿಗಿರುವ ಸಾಮಾಜಿಕ-ಐತಿಹಾಸಿಕ ಆಯಾಮಗಳನ್ನು ಸ್ಪಷ್ಟರೀತಿಯಲ್ಲಿ ರೈತ-ಮಹಿಳೆ-ದಲಿತ-ಬಹುಜನರ ಒಳಿತನ್ನಾಧರಿಸಿದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಳ್ಳುವುದನ್ನು ಈ ಬರಹಗಳು ಉತ್ತೇಜಿಸಿದವು.

ಕೃತಿ ಪರಿಚಯ 

ಅವರ ಮೊದಲ ಮುಖ್ಯ ಪ್ರಕಟಣೆಯೆಂದರೆ 1976ರಲ್ಲಿ ಬಂದ “ಕಲ್ಚರಲ್ ರೆವೊಲ್ಯೂಶನ್ ಇನ್ ಕಲೋನಿಯಲ್ ಇಂಡಿಯಾ“. ಫುಲೆ ಅವರ ಬರಹಗಳನ್ನು ಆಧರಿಸಿ ಅವರು ಈ ಕೃತಿಯಲ್ಲಿ ಮುಂದಿಡುವ ಪ್ರಮೇಯವನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು: ಪ್ರಬಲ ಸಮುದಾಯಗಳ (ಬ್ರಾಹ್ಮಣ-ವರ್ತಕ) ಗಣ್ಯರು ತಾವೇ ಭಾರತೀಯ ರಾಷ್ಟ್ರವನ್ನು ಮತ್ತು ರಾಷ್ಟ್ರವಾದವನ್ನು ಪ್ರತಿನಿಧಿಸುತ್ತಿರುವವರು ಎನ್ನುವ ವಾದವನ್ನು ತಮ್ಮ ಬ್ರೀಟೀಷ-ವಿರೋಧೀ ಚಟುವಟಿಕೆಗಳ ಮೂಲಕ ಮಾತ್ರವಲ್ಲದೇ ಸಮಾಜ ಸುಧಾರಣೆ, ದೇಶೀಯ ಸಂಸ್ಕೃತಿಯ ನಿರೊಪಣೆ ಮುಂತಾದ ಸಂಕಥನಗಳ ನಿರ್ಮಿತಿಯ ಮೂಲಕವೂ ಪ್ರತಿಪಾದಿಸುತ್ತ, ವಸಾಹತುಶಾಹಿ ಶಿಕ್ಷಣನೀತಿ, ಅಧಿಕಾರವರ್ಗ, ಔದ್ಯೋಗಿಕ ಅವಕಾಶಗಳ ಲಾಭ ತಮ್ಮದಾಗಿಸಿಕೊಂಡು, ತಮ್ಮ ಪ್ರಭಾವ-ಪ್ರಾಬಲ್ಯವನ್ನು ಹೆಚ್ಚಿಸಿಕೊಂಡರು. ಈ ಹಿನ್ನೆಲೆಯಲ್ಲಿ ದಮನಿತ ಅಥವಾ ಪ್ರಭಾವಿಯಲ್ಲದ (’ಕೆಳಜಾತಿ’) ಸಮುದಾಯಗಳ ಗಣ್ಯರು ಕೂಡ ತಮ್ಮನ್ನು ಮೂಲೆಗೊತ್ತಿರುವ, ತಮ್ಮ ಏಳ್ಗೆಗೆ  ತೊಡಕಾಗಿರುವ ಸಮುದಾಯಗಳ – ಅಂದರೆ ’ಮೇಲ್ಜಾತಿ’ ಸಮುದಾಯಗಳ – ಜೊತೆ ಸಂಘರ್ಷಕ್ಕೆ ತೊಡಗಿದರು. ಇದು ಸ್ಥಳೀಯ, ಪ್ರಾದೇಶಿಕ ಅಸ್ಮಿತೆಯ, ಅಥವಾ ಧಾರ್ಮಿಕ ಅಸ್ಮಿತೆಯ ರೂಪವನ್ನು ಸಹ ಪಡೆಯಿತು. ಒಟ್ಟಾರೆ, ಗೇಲ್ ಅವರು ಈ ಅಧ್ಯಯನದಲ್ಲಿ ವಸಾಹತುಶಾಹಿ ಕಾಲದ ಭಾರತೀಯ ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಸಂಘರ್ಷವನ್ನು ವಸಾಹತುವಿರೋಧದ ಏಕಮುಖೀ ಸಂಘರ್ಷವಾಗಿ ನೋಡದೇ, ಅಂದಿನ ಅಧಿಕಾರ-ರಾಜಕಾರಣದ ಹಿನ್ನೆಲೆಯಲ್ಲಿ ಪ್ರಭಾವ-ಪ್ರಾಬಲ್ಯಕ್ಕಾಗಿ ನಡೆದ ಸೆಣಸಾಟವೆಂದು ಅರ್ಥೈಸಿ, ಅದೊಂದು ವಿಭಿನ್ನ ಜಾತಿ/ಮತ/ಸಮುದಾಯಗಳ ನಡುವಿನ ಸಾಂಸ್ಕೃತಿಕ ಸಂಘರ್ಷವೆಂದು ವಾದಿಸುತ್ತಾರೆ.

ವಸಾಹತುಶಾಹಿ ಭಾರತದ ಇತಿಹಾಸವನ್ನು ಗೇಲ್ ಓಮ್ವೆಡ್ತ್ ಅಧ್ಯಯನ ಮಾಡಿದ ರೀತಿಯು ಸ್ವಾತಂತ್ರ್ಯ ಮತ್ತು ಸಮಾನತೆಗಳನ್ನು ಸಹವರ್ತಿ ಪರಿಕಲ್ಪನೆಗಳನ್ನಾಗಿ ನೋಡುವ ಮಾದರಿಯನ್ನು ಮುನ್ನೆಲೆಗೆ ತಂದಿತು. ರಾಜಕೀಯ ಸ್ವಾತಂತ್ರ್ಯವೆನ್ನುವುದು ಒಂದು ಸ್ವತಂತ್ರ ಸೀಮಿತ ಪರಿಕಲ್ಪನೆಯಾಗಿರದೆ, ಸಾಮಾಜಿಕ ಸಮಾನತೆಯನ್ನು ಸಾಧ್ಯವಾಗಿಸುವ ದಾರಿಯಾಗಬೇಕೆನ್ನುವ ಅಂಬೇಡ್ಕರರ ತತ್ವವನ್ನು ಬಳಸಿ ಗೇಲ್, ರಾಷ್ಟ್ರವಾದ ಮತ್ತದರ ಇತಿಹಾಸವನ್ನು ನೋಡುತ್ತಾರೆ. ಈ ನಿಟ್ಟಿನಲ್ಲಿ ಅವರು ಕೈಗೊಂಡ ಬ್ರಾಹ್ಮಣೇತರ ಚಳುವಳಿಗಳ ಅಧ್ಯಯನ ರಾಷ್ಟ್ರವಾದ ಮತ್ತು ವರ್ಗವಾದಗಳು ದುರ್ಲಕ್ಷಿಸಿದ ಜನಪ್ರಿಯ ಆಶಯ ಮತ್ತು ಚಟುವಟಿಕೆಗಳನ್ನು ಅನಾವರಣಗೊಳಿಸುವುದಾಗಿತ್ತು. ತನ್ಮೂಲಕ ಗೇಲ್, ಜಾತಿವಿರೋಧೀ ನೆಲೆಗಳ ಸಾಂಸ್ಕೃತಿಕ ಪರಂಪರೆಗಳು ಪ್ರತಿಪಾದಿಸಿದ ರಾಷ್ಟ್ರದ ಕಲ್ಪನೆಗಳತ್ತ ಓದುಗರ ಗಮನ ಸೆಳೆದಿದ್ದಾರೆ. ಸಮಾನತೆಯೆನ್ನುವುದು ಆಳುವವರ ಮತ್ತು ಪ್ರಜೆಗಳ ನಡುವೆ ಮಾತ್ರವಲ್ಲದೇ ಎಲ್ಲ ಪ್ರಜೆಗಳ ನಡುವಿನ ಪರಸ್ಪರ ಸಂಬಂಧಗಳಲ್ಲಿಯೂ ಬೇಕು ಎನ್ನುವ ಖಂಡಿತವಾದಿ ನೋಟವನ್ನು ಅವರ ಬರಹಗಳು ಅಭಿವ್ಯಕ್ತಿಸಿದವು.

“ವಸಾಹತುಶಾಹಿ ಭಾರತದಲ್ಲಿ ಸಾಂಸ್ಕೃತಿಕ ಪ್ರತಿರೋಧ” ಕೃತಿಯಲ್ಲಿ ವಸಾಹತುಶಾಹಿಯ ಆಡಳಿತನೀತಿಗಳು ಜಾತಿಪದ್ಧತಿಯನ್ನು ಪುನರ್ವಿನ್ಯಾಸಕ್ಕೆ ಒಳಪಡಿಸಿದ್ದರೂ ಸಹ ಜಾತಿಯ ಅಂತ್ಯಕ್ಕೆ ಸಹಾಯಕವಾಗಿರಲಿಲ್ಲವೆನ್ನುವುದನ್ನು ಮಹಾರಾಷ್ಟ್ರದ ಸಂಧರ್ಭದ ಅಧ್ಯಯನದ ಮೂಲಕ ಅವರು ತೋರಿಸಿದ್ದಾರೆ. ವಸಾಹತುಶಾಹಿಯ ಶೈಕ್ಷಣಿಕ ಮತ್ತು ಉದ್ಯೋಗದ ನೀತಿಗಳಿಂದಾಗಿ ’ಉಚ್ಛ’ ಜಾತಿಯವರು ಅಧಿಕಾರ ಮತ್ತು ಪ್ರಭಾವೀ ಸ್ಥಾನಗಳನ್ನು ತಲುಪಲು ಸಾಧ್ಯವಾದರೆ, ಬಹುಜನ-ದಲಿತ ಸಮುದಾಯದಗಳು ಯಾವುದೇ ಸಾಮಾಜಿಕ ಸಂಚಲನಗಳನ್ನೂ ಕಾಣಲಾಗದಾದರು ಮತ್ತು ಸಾಮಾಜಿಕ ಅಂತಸ್ತುಗಳ, ಆರ್ಥಿಕ ವಿಕಾಸದ, ರಾಜಕೀಯ ಪ್ರಭಾವದ ಎಲ್ಲೆಯ ಅಂಚುಗಳಲ್ಲಿಯೇ ಉಳಿದುಹೋದರು ಎನ್ನುವುದನ್ನು ಈ ಕೃತಿ ಗುರುತಿಸುತ್ತದೆ. ಇದನ್ನು ಅರಿತಿದ್ದರಿಂದಲೇ ಫುಲೆ ಜಾತಿವಿರೋಧಿ ತಂತ್ರವಾಗಿ ಶಿಕ್ಷಣದತ್ತ ಮುಖಮಾಡುತ್ತಾರೆ ಮತ್ತು ಗ್ರಾಮ್ಶಿಯ ಹೆಜೆಮನಿ ಸಂಕಲ್ಪನೆಗೂ ಮುನ್ನವೇ ಬಹುಜನರು ಸಾಂಸ್ಕೃತಿಕ ಪ್ರಭಾವವನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುವಂತ “ಸಾಂಸ್ಕೃತಿಕ ಕ್ರಾಂತಿ”ಗೆ ಒತ್ತುನೀಡುತ್ತಾರೆ. ಭಾರತೀಯ ಆಧುನಿಕತೆ ಮತ್ತು ಸ್ವಾತಂತ್ರ್ಯ ಸಂಗ್ರಾಮಗಳ ರಾಜಕೀಯ ವಿಶ್ಲೇಷಣೆ ನಡೆಸಿರುವ ಬಹುತೇಕ ಭಾರತೀಯ ಮತ್ತು ವಿದೇಶೀ ವಿದ್ವಾಂಸರುಗಳ ಲಕ್ಷ್ಯ ಕೇಂದ್ರಿತವಾಗಿದ್ದುದು “ಉಚ್ಛ”ಜಾತಿಯ ಚಿಂತಕರು ಮತ್ತು ರಾಜಕೀಯ ನಾಯಕರುಗಳ ಮೇಲೆ. ಅವರೆಲ್ಲರ ಅವಲಕ್ಷ್ಯಕ್ಕೆ ಒಳಗಾದ ಜೋತಿಬಾ ಫುಲೆ ಹೇಗೆ ಭಾರತೀಯ ಪುನರುತ್ಥಾನವೂ ಸೇರಿದಂತೆ ಎಲ್ಲ ’ಮೇಲ್ಜಾತಿ’ ಚಿಂತಕರ ರಾಜಕೀಯ ಕ್ರಾಂತಿಕಾರಿಕತೆಗಿಂತ ಭಿನ್ನವಾದ ರೈತ-ಬಹುಜನ-ಜಾತಿವಿರೋಧಿ ಆಶಯದ ಸಾಮಾಜಿಕ ಕ್ರಾಂತಿಯ ವಿಚಾರಗಳನ್ನು ಪ್ರತಿಪಾದಿಸುತ್ತಾರೆ ಎನ್ನುವುದನ್ನು ಗೇಲ್ ತೋರಿಸಿಕೊಟ್ಟರು .

ಪ್ರತಿಷ್ಟಿತ ಇಪಿಡಬ್ಲ್ಯು ಪತ್ರಿಕೆಯ 1971ರ ಸಂಚಿಕೆಯೊಂದರಲ್ಲಿ ಬರೆದ “ಜೋತಿಬಾ ಫುಲೆ ಅಂಡ್ ದ ಐಡೀಯಾಲಜಿ ಆಫ್ ಸೋಶಿಯಲ್ ರೆವೊಲ್ಯೂಶನ್ ಇನ್ ಇಂಡಿಯಾ” ಎಂಬ ಲೇಖನದಲ್ಲಿ ಗೇಲ್ ಹೇಳುತ್ತಾರೆ: “ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ವರ್ಗಸಮಾಜವಿರುತ್ತದೆ ಮತ್ತು ಯಾವುದೋ ಒಂದು ವರ್ಗ ಪ್ರಾಬಲ್ಯ ಹೊಂದಿರುತ್ತದೆ. ಭಾರತದಲ್ಲಿ, ಹಿಂದು ಸಂಸ್ಕೃತಿ ಮತ್ತು ಜಾತಿಪದ್ಧತಿಯು ಬ್ರಾಹ್ಮಣವಾದದ ಮೇಲೆ ನೆಲೆಸಿದೆ. ಆದುದರಿಂದಲೇ ಫುಲೆ ತಮ್ಮ ಚಳುವಳಿಯನ್ನು ಬ್ರಾಹ್ಮಣವಾದದ ವಿರೋಧಕ್ಕೆ ಮುಡಿಪಾಗಿಸಿದ್ದರು. ಬ್ರಾಹ್ಮಣೇತರವಾದವೆನ್ನುವುದು ಹಾಗಾಗಿ ಕೊಮುವಾದವೂ ಅಲ್ಲ, ಬ್ರಿಟೀಷರ ಒಡೆದು ಆಳುವ ನೀತಿಯ ಫಲವೂ ಅಲ್ಲ. ಬದಲಿಗೆ, ಅದು ಫುಲೆ ಪ್ರತಿಪಾದಿಸಿದ ಸಾಮಾಜಿಕ ಕ್ರಾಂತಿಯ ಅಭಿವ್ಯಕ್ತಿಯಾಗಿತ್ತು.”  (Omvedt, Gail (1971): “Jotirao Phule and the Ideology of Social Revolution in India,” Economic & Political Weekly, Vol 6, No 37, pp 1969–80.)

Gail Omvedt: Courtesy: The Wire

Gail Omvedt: Courtesy: The Wire

ಮಹಾರಾಷ್ಟ್ರದಲ್ಲಿ ಎಪ್ಪತ್ತರ ದಶಕದಲ್ಲಿ ಲಾಲ್ ನಿಶಾನ್ ಪಕ್ಷದ ನಾಯಕತ್ವದಲ್ಲಿ ರೈತ-ಕಾರ್ಮಿಕ ಮಹಿಳೆಯರು ನಡೆಸಿದ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಗೇಲ್ ಓಮ್ವೆಡ್ತ್ ಮಹಿಳೆಯರ ಹೋರಾಟದ ಈ ಮಾದರಿಯನ್ನು ವರದಿ ಮಾಡುತ್ತ ತಾತ್ವಿಕ ಚೌಕಟ್ಟಿನಲ್ಲಿ ಅದನ್ನು ಅರ್ಥಮಾಡಿಕೊಳ್ಳುವ ಒಂದು ಅಧ್ಯಯನವನ್ನು 1980ರಲ್ಲಿ “ವಿ ವಿಲ್ ಸ್ಮ್ಯಾಷ್ ದಿಸ್ ಪ್ರಿಸನ್: ಇಂಡಿಯನ್ ವಿಮೆನ್ ಇನ್ ಸ್ಟ್ರಗಲ್” (ಈ ಸೆರೆಮನೆಯನ್ನು ಧ್ವಂಸ ಮಾಡುವೆವು ನಾವು) ಎಂಬ ಶೀರ್ಷಿಕೆಯಡಿ ಪ್ರಕಟಿಸಿದರು. ಇದು ಭಾರತೀಯ ಸಮಾಜದಲ್ಲಿ ಮಹಿಳೆಯರು ಸಾಂಸ್ಥಿಕ ರೂಪದಲ್ಲಿ ತಾವು ಎದುರಿಸುವ ಸಮಸ್ಯೆಗಳು, ಹಿಂಸೆ-ಶೋಷಣೆಗಳ ವಿರುದ್ಧ ನಡೆಸುವ ಸಂಘರ್ಷದ ಕುರಿತಾದ ಕೃತಿ. ಈ ಕೃತಿಯ ಮೂಲಕ ಒಂವೆಡ್ಟ್ ಅವರು ಗ್ರಾಮೀಣ ಭಾರತದ ಮಹಿಳೆಯರ ರಾಜಕೀಯ ಪಾತ್ರಗಳ ವ್ಯಾಪ್ತಿಯನ್ನು ಓದುಗರ ಗಮನಕ್ಕೆ ತರುತ್ತಾರೆ. ಗ್ರಾಮೀಣ ಮಹಾರಾಷ್ಟ್ರದ ಚಳುವಳಿಗಳಲ್ಲಿ ಸಕ್ರಿಯ ಪಾತ್ರವಹಿಸಿದ ಮಹಿಳೆಯರ ಜೊತೆ ಇದ್ದು, ಸಂಚರಿಸಿ, ಅವರ ನಡೆನುಡಿ, ಭಾಷೆ-ಅಭಿವ್ಯಕ್ತಿಗಳನ್ನು ಹತ್ತಿರದಿಂದ  ಗಮನಿಸಿ, ಅವರೊಂದಿಗೆ ವಿಸ್ತೃತ ಸಂಭಾಷಣೆ ನಡೆಸಿ ಒಂವೆಡ್ಟ್ ಈ ಅಧ್ಯಯನ ಕೈಗೊಂಡಿದ್ದಾರೆ. ಜನಸಾಮಾನ್ಯರ ಚಟುವಟಿಕೆಗಳನ್ನು ದೂರದಿಂದ ಮಾತ್ರ ನೋಡುವ ಭಾರತೀಯ/ವಿದೇಶೀ ವಿದ್ವಾಂಸರಾರೂ ಕಾಣಲಾರದ, ಅರಿಯಲಾರದ ವಿವರಗಳನ್ನು – ಅದು ಮಹಿಳೆಯರು ಬಳಸುವ ನುಡಿಗಟ್ಟುಗಳಿರಬಹುದು, ಚಳುವಳಿಯ ಸಂಧರ್ಭದಲ್ಲಿ ಹಾಡುಗಳನ್ನು ಹಾಡುವ ವರಸೆ ಇರಬಹುದು – ಒಂವೆಡ್ಟ್ ಅವರು ಓದುಗರ ಎದುರಿಡುತ್ತಾರೆ. ಚಳುವಳಿ ನಿರತ ಮಹಿಳಾ ಕೃಷಿಕಾರ್ಮಿಕರು, ಬೆಲೆಯೇರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ನಗರಗಳ ಮಹಿಳೆಯರು, ಸ್ವಚ್ಛತಾಕರ್ಮಿಗಳು, ಆದಿವಾಸಿ ಮಹಿಳೆಯರು ಹೀಗೆ ಅನೇಕ ವರ್ಗ-ಹಿನ್ನೆಲೆಗಳ ಮಹಿಳೆಯರ ಹೋರಾಟಗಳ ವಿನ್ಯಾಸ-ವಿಚಾರ-ವಿವರಗಳನ್ನು ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮಹಿಳೆಯರು ತಮ್ಮ ಹಿತವನ್ನು ಬಲ್ಲವರಲ್ಲ, ಪ್ರತಿಭಟನೆಗಳ ಮೂಲಕ ತಮ್ಮ ಹಿತಾಸಕ್ತಿಯ ಏಜೆನ್ಸಿಯನ್ನು ಪ್ರತಿಪಾದಿಸಲು ಹಿಂಜರಿಯುವವರು ಎಂಬ ಗಂಡಾಳಿಕೆಯ ಮಿಥಕವನ್ನು “ಧ್ವಂಸ” ಮಾಡುವ ಸಂಕಥನವನ್ನು ಈ ಕೃತಿ ನಿರೂಪಿಸುತ್ತದೆ.

1991ರಲ್ಲಿ ಪ್ರಕಟವಾದ “ವಯಲೆನ್ಸ್ ಅಗೆನ್ಸ್ಟ್ ವಿಮೆನ್: ನ್ಯೂ ಮೂವಮೆಂಟ್ಸ್ ಅಂಡ್ ನ್ಯೂ ಥಿಯರೀಸ್ ಇನ್ ಇಂಡಿಯಾ” (ಮಹಿಳೆಯರ ಮೇಲೆ ಹಿಂಸೆ: ಭಾರತದ ಹೊಸ ಚಳುವಳಿಗಳು ಮತ್ತು ಹೊಸ ಪ್ರಮೇಯಗಳು) ಎಂಬ ಕೃತಿಯಲ್ಲಿ ಒಂವೆಡ್ಟ್ ಅವರು ಭಾರತೀಯ ಮಹಿಳೆಯರು ದೀರ್ಘಕಾಲದಿಂದ ಎದುರಿಸುತ್ತಿರುವ ಗಂಡಾಳಿಕೆಯ ಒಂದು ವಿಪರೀತ ಸ್ವರೂಪವಾದ ಹಿಂಸೆಯ ಹಿಂದುಮುಂದುಗಳನ್ನು ಪರೀಕ್ಷಿಸಿದ್ದಾರೆ. ಭಾರತೀಯ ಮಹಿಳಾವಾದವು 70ರ ದಶಕಗಳಲ್ಲಿ ತುರ್ತು ವಿಷಯವೆಂದು ಪರಿಗಣಿಸಿದ್ದ ಅತ್ಯಾಚಾರ, ವರದಕ್ಷಿಣೆ, ಕೌಟುಂಬಿಕ ಹಿಂಸೆ ಮುಂತಾದವುಗಳನ್ನು ಆಳ ಅಧ್ಯಯನಕ್ಕೆ ಅಳವಡಿಸಿದ್ದಾರೆ ಮತ್ತು ಆ ಕುರಿತು ಪ್ರವರ್ಧಮಾನಕ್ಕೆ ಬರುತ್ತಿದ್ದ ಹೋರಾಟಗಳು ರೂಪಿಸಿದ್ದ ದೃಷ್ಟಿಕೋನಗಳು ಮತ್ತು ತಾತ್ವಿಕ ಪ್ರಮೇಯಗಳನ್ನು ಈ ಕೃತಿಯಲ್ಲಿ ಒಂವೆಡ್ಟ್ ಅವರು ಓದುಗರಿಗೆ ಪರಿಚಯಿಸಿದ್ದಾರೆ. ಆರ್ಥಿಕ ಶೋಷಣೆ, ಜಾತಿ, ಪರಿಸರನಾಶ, ಹಾಗೂ ಅಭಿವೃದ್ಧಿಯ ವಿಕಾರಗಳು ಗಂಡಾಳಿಕೆಯ ಸಂರಚನೆಗಳ ಮೂಲಕ ಪಡೆಯುವ ಹಿಂಸೆಯ ಕುರಿತಂತೆ, ಮಾರ್ಕ್ಸಿಸ್ಟ್, ರ್ಯಾಡಿಕಲ್ ಮಹಿಳಾವಾದಗಳ ವಿಶ್ಲೇಷಣೆಯ ಜೊತೆ ಮಾರ್ಕ್ಸಿಸ್ಟ್-ಫುಲೆ-ಅಂಬೇಡ್ಕರವಾದಿ ಶರದ್ ಪಾಟೀಲ, ಶೇತ್ಕರಿ ಸಂಘಟನೆಯ ಶರದ್ ಜೋಶಿ ಮತ್ತು ಪರಿಸರ-ಮಹಿಳಾವಾದಿ ವಂದನಾ ಶಿವ ಅವರುಗಳು ಪ್ರತಿಪಾದಿಸಿದ ಪ್ರಮೇಯಗಳನ್ನು ಒಂವೆಡ್ಟ್ ಪ್ರಸ್ತುತಪಡಿಸಿದ್ದಾರೆ. ಆರ್ಥಿಕ ಸಂಕಟ, ಪರಿಸಾರ ನಾಶ, ಮತೀಯ ಮೂಲಭೂತವಾದ, ಕೋಮುಗಲಭೆ, ಜಾತಿ-ವರ್ಗಪ್ರಜ್ನೆಗಳೆಲ್ಲದರ ಪರಸ್ಪರ ಸಂಬಂಧದ ಪರಿಣಾಮವಾಗಿ ಪ್ರಜಾಸತ್ತಾತ್ಮಕ ಸಮಾಜದ ಎಲ್ಲ ಸ್ತರಗಳಲ್ಲಿಯೂ ಹೇಗೆ ಲೈಂಗಿಕತೆ ಮತ್ತು ಹಿಂಸೆಯ ಸಂಯುಕ್ತ ಶೋಷಣೆ, ದಬ್ಬಾಳಿಕೆಗಳನ್ನು ಮಹಿಳೆಯರು ಎದುರಿಸಬೇಕಾಗಿ ಬರುತ್ತಿರುವುದನ್ನು ಅವರು ಈ ಕೃತಿಯಲ್ಲಿ ವಿಶದವಾಗಿ ವಿವರಿಸುತ್ತಾರೆ.

1993ರಲ್ಲಿ ಪ್ರಕಟವಾದ ಒಂದು ಪ್ರಮುಖ ಅಧ್ಯಯನವಾದ “ರಿಇನ್ವೆಂಟಿಂಗ್ ರೆವೊಲ್ಯೂಶನ್: ನ್ಯೂ ಸೋಶಿಯಲ್ ಮೂವ್ಮೆಂಟ್ಸ್ ಅಂಡ್ ದ ಸೋಶಿಯಲಿಸ್ಟ್ ಟ್ರಡಿಶನ್ ಆಫ್ ಇಂಡಿಯಾ” (ಕ್ರಾಂತಿಯ ಮರುಶೋಧನೆ: ಹೊಸ ಸಾಮಾಜಿಕ ಚಳುವಳಿಗಳು ಹಾಗೂ ಭಾರತದ ಸಮಾಜವಾದಿ ಪರಂಪರೆ) ಎಂಬ ಕೃತಿಯಲ್ಲಿ 1972 ರಿಂದ 1992ವರೆಗಿನ ಕಾಲಾವಧಿಯ ಸಾಮಾಜಿಕ ಚಳುವಳಿಗಳನ್ನು ಐತಿಹಾಸಿಕ ಚೌಕಟ್ಟಿನಲ್ಲಿಡುವ ನಿರೂಪಣೆ ಇದೆ. ವರ್ಗವನ್ನು (class) ಮೀರಿದ ಒಗ್ಗೂಡಿಕೆಗಳಾದ ಲಿಂಗತ್ವ, ಜಾತಿ, ಬುಡಕಟ್ಟು, ಪರಿಸರಚಿಂತನೆ ಮುಂತಾದವುಗಳನ್ನಾಧರಿಸಿದ ಸಾಮಾಜಿಕ ಗುಂಪುಗಳು ಕೈಗಾರಿಕಾ-ಸಮಾಜವನ್ನು ದಾಟಿದ ಕಾಲಮಾನದಲ್ಲಿ ಸ್ವ-ಏಳ್ಗೆಗಾಗಿ ಕೈಗೊಂಡ ಸಂಘಟನೆ, ಹೋರಾಟ ಮತ್ತು ಹಿತಾಸಕ್ತಿಗಳನ್ನಾಧರಿಸಿದ ಪ್ರತಿಭಟನೆಗಳನ್ನು ಸಮಾಜವಾದಿ ಆಶಯದ ಹಿನ್ನೆಲೆಯಲ್ಲಿ ಈ ಕೃತಿ ಅಧ್ಯಯನಕ್ಕೆ ಎತ್ತಿಕೊಳ್ಳುತ್ತದೆ. ಒಂದು ಬಗೆಯಲ್ಲಿ ಮುನ್ನಿನ ಕೃತಿಗಳಂತೆ ಇದೂ ಕೂಡ ವೈಧಾನಿಕ (methodology) ದೃಷ್ಟಿಯಿಂದ ಭಾರತೀಯ ಮಾರ್ಕ್ಸಿಸಂ ಇಲ್ಲಿನ ನಿರ್ಧಿಷ್ಟ ಜಾತಿಪರಿಸ್ಥಿತಿಯನ್ನು ತಾತ್ವಿಕ ನೆಲೆಯಲ್ಲಿ ಹೇಗೋ ಹಾಗೇಯೇ ಕಾರ್ಯವಿಧಾನಗಳಲ್ಲಿಯೂ ಕಡೆಗಣಿಸಿರುವುದನ್ನು ಟೀಕಿಸುತ್ತದೆ.  ಅದನ್ನು ಸರಿಪಡಿಸಲೆಂದು ಭಾರತೀಯ ಸಂಧರ್ಭದಲ್ಲಿ ಅವಶ್ಯವಿರುವ ಚೌಕಟ್ಟಾಗಿ ಈ ಹೊಸ ಸಾಮಾಜಿಕ ಒಗ್ಗೂಡಿಕೆಗಳತ್ತ ಮತ್ತು ಅವುಗಳು ಸೂಚಿಸುವ ತಾತ್ವಿಕತೆಗಳತ್ತ ನೋಡುತ್ತದೆ. ಒಂವೆಡ್ಟ್ ಪ್ರಕಾರ ಮಹಾರಾಷ್ಟ್ರದಲ್ಲಿ ಈ ಕಾಲಮಾನದಲ್ಲಿ ಕಂಡ ರೈತಚಳುವಳಿಗಳು, ಮಹಿಳಾ ಹೋರಾಟಗಳು, ಜಾತಿವಿರೋಧೀ ಪ್ರತಿಭಟನೆಗಳು ಸೂಚಿಸುವುದೇನೆಂದರೆ ವರ್ಗ-ಜಾತಿ-ಲಿಂಗತ್ವಗಳು ಪರಸ್ಪರ ಸಂಬಂಧಿತವಾಗಿವೆ. ಇವುಗಳು ಪಾರಂಪರಿಕ ರಾಜಕಾರಣ ಮತ್ತು ಸಾಮಾಜಿಕ ಪರಿಕಲ್ಪನೆಯೊಳಗಣ ಬಿಕ್ಕಟ್ಟನ್ನು ಅನಾವರಣಗೊಳಿಸುತ್ತವೆ. ಅಲ್ಲದೇ, ಪ್ರಭುತ್ವದ ಸ್ಥಾಪಿತ ರೂಪವನ್ನೇ ಬದಲಿಸುವ, ಸಮುದಾಯವನ್ನು ಪುನರ್-ಕಲ್ಪಿಸಿಕೊಳ್ಳುವ, ಮಾರ್ಕ್ಸಿಸಂನ್ನು ಮರುಚಿಂತಿಸಿಕೊಂಡು ಇತಿಹಾಸವನ್ನು ಹೊಸದಾಗಿ ಅರ್ಥೈಸುವಂತಹ ನವರಾಜಕೀಯ ದರ್ಶನಗಳನ್ನು ಪ್ರತಿಪಾದಿಸುತ್ತವೆಯೆಂದು ಒಂವೆಡ್ಟ್ ಅವರ ಅಭಿಪ್ರಾಯ.

ಹಿಂದೂ ಎಂಬ ಅಸ್ಮಿತೆಯು ’ಮೇಲ್ಜಾತಿ’ ಅಸ್ಮಿತೆಯೊಂದಿಗೆ ಸಮೀಕರಿಸಲ್ಪಟ್ಟಿರುವ ಸಂಧರ್ಭದಲ್ಲಿ ದಲಿತರು ಹೇಗೆ ಈ ಅಪಮಾನಕರ ಚೌಕಟ್ಟನ್ನು ಮೀರಿದ, ಪರ್ಯಾಯ ಪರಂಪರೆಗಳನ್ನು ಸೃಷ್ಟಿಸಿಕೊಂಡಿದ್ದಾರೆ ಎನ್ನುವುದನ್ನು ವಿಸ್ತಾರವಾಗಿ ವಿಶ್ಲೇಷಿಸಿರುವ “ದಲಿತ್ ವಿಶನ್ಸ್: ದ ಆಂಟಿ-ಕಾಸ್ಟ್ ಮೂವ್ಮೆಂಟ್ಸ್ ಅಂಡ್ ಇಂಡಿಯನ್ ಕಲ್ಚರಲ್ ಐಡೆಂಟಿಟಿ” (ದಲಿತ ದರ್ಶನಗಳು – ಮೂಡ್ನಾಕೂಡು ಚಿನ್ನಸ್ವಾಮಿ) ಕೃತಿ 1995ರಲ್ಲಿ ಪ್ರಕಟವಾಯಿತು. ದಲಿತ ಚಳುವಳಿ ಆಯ್ದುಕೊಂಡ ದಿಕ್ಕು, ಕ್ರಮಿಸಿದ ಮಾರ್ಗ, ಆವಿಷ್ಕರಿಸಿಕೊಂಡ ತಾತ್ವಿಕತೆ, ಹೆಣೆದುಕೊಂಡ ಸಮಚಿಂತನೆಯ ಜಾಲಗಳನ್ನು ಅಭ್ಯಸಿಸಿದ ಕೃತಿ ಇದು. ಫುಲೆ, ಅಂಬೇಡ್ಕರ್, ತಾರಾಬಾಯಿ ಶಿಂದೆ, ಮಂಗೂ ರಾಂ, ಪೆರಿಯಾರ್ ಮುಂತಾದ ಚಿಂತಕರು ಕಲ್ಪಿಸಿದ ತಾತ್ವಿಕ ಚೌಕಟ್ಟುಗಳ ಮೂಲಕ ದಲಿತ ಚಳುವಳಿ ಪ್ರಭಾವ-ಪ್ರಾಬಲ್ಯಗಳ ಸ್ಥಾಪಿತ ಪದ್ಧತಿಗೆ ಪರ್ಯಾಯವಾದ ಲೋಕನೋಟವನ್ನು ಪರಿಷ್ಕರಿಸಿಕೊಂಡಿತು ಎನ್ನುವುದನ್ನು ಈ ಕೃತಿ ವಿವರಿಸುತ್ತದೆ. ದಲಿತ ಚಳುವಳಿಯ ಸಾಮರ್ಥ್ಯ-ಮಿತಿಗಳೆರಡನ್ನೂ ಗುರುತಿಸುವ ವಿಮರ್ಶಾತ್ಮಕ ಅಧ್ಯಯನ.

ದಲಿತರ ಪ್ರಶ್ನೆಗಳನ್ನು ಎತ್ತಿಕೊಂಡು ನಡೆದಿರುವ ಪ್ರಜಾಸತ್ತಾತ್ಮಕ ಚಳುವಳಿಗಳ ನಡುವಿನ ಹೋಲಿಕೆ ಕುತೂಹಲಕಾರಿ ವಿಷಯ. ಒಂವೆಡ್ಟ್ ಅವರು 1994ರಲ್ಲಿ ಪ್ರಕಟಿಸಿದ “ದಲಿತ್ಸ್ ಅಂಡ ದ ಡೆಮಾಕ್ರಟಿಕ್ ರೆವೊಲ್ಯೂಶನ್ ಇನ್ ಇಂಡಿಯಾ” (ದಲಿತರು ಮತ್ತು ಭಾರತದಲ್ಲಿ ಲೋಕತಾಂತ್ರಿಕ ಕ್ರಾಂತಿಗಳು) ಎಂಬ ಕೃತಿ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಉದಾಹರಣೆಗಳನ್ನು ಅಧ್ಯಯನಕ್ಕೆ ಎತ್ತಿಕೊಂಡು ಮೂರು ವಿಭಿನ್ನ ಬಗೆಯ ಲೋಕತಾಂತ್ರಿಕ ಚಳುವಳಿಗಳು ದಲಿತ ಪ್ರಶ್ನೆಯನ್ನು ನಿರ್ವಹಿಸಿದ್ದನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡುತ್ತದೆ. ದಲಿತ ಚಳುವಳಿಗಳು ಮಹಾರಾಷ್ಟ್ರದಲ್ಲಿ ಅಂಬೇಡ್ಕರವಾದಿ, ಆಂಧ್ರದಲ್ಲಿ ಕಮ್ಯುನಿಸ್ಟ್ ಮತ್ತು ಕರ್ನಾಟಕದಲ್ಲಿ ಗಾಂಧೀವಾದದ ದಿಕ್ಕುಗಳಲ್ಲಿ ಸಾಗಿದ್ದನ್ನು ಐತಿಹಾಸಿಕ, ಭೌತಿಕ ಮತ್ತು ಆರ್ಥಿಕ ಅಂಶಗಳ ಹಿನ್ನೆಲೆಯಲ್ಲಿ ಹೋಲಿಸುವ ಈ ಕೃತಿ ಈ ಚಳುವಳಿಗಳ ಯಶಸ್ಸು ಮತ್ತು ವೈಫಲ್ಯಗಳನ್ನು ಓದುಗರ ಗಮನಕ್ಕೆ ತರುತ್ತದೆ. ಮಹಾರಾಷ್ಟ್ರದಲ್ಲಿ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ತೀವ್ರ ಬದಲಾವಣೆಗಳಾಗುವುದರ ಮೂಲಕ ಜನರ ಜೀವನೋಪಾಯಗಳಲ್ಲಾದ ಮಾರ್ಪಾಡುಗಳು ಆರ್ಥಿಕ ಸವಲತ್ತಿನ ಜೊತೆಗೆ ಸಾಮಾಜಿಕ ಘನತೆಗಾಗಿ ಒತ್ತಾಯ ತರುವಂತ ಹೊಸ ಸಮೀಕರಣಗಳನ್ನು ಪರಿಚಯಿಸಿತು. ಆಂಧ್ರಪ್ರದೇಶದಲ್ಲಿ ಕೃಷಿಯ ವಾಣಿಜ್ಯೀಕರಣವಾಯಿತಾದರೂ ಕೈಗಾರಿಕಾ ಅಭಿವೃದ್ಧಿ ಹೆಚ್ಚಾಗಿ ನಡೆದಿರಲಿಲ್ಲ. ಇದರಿಂದಾಗಿ, ಒಂವೆಡ್ಟ್ ಸೂಚಿಸುವಂತೆ, ಆರ್ಥಿಕ ಸವಲತ್ತುಗಳೇ ಸಾಕಷ್ಟು ದೊರೆತಿಲ್ಲವಾದ್ದರಿಂದ, ಅಲ್ಲಿ ಆರ್ಥಿಕ ಬೇಡಿಕೆಗಳಿಗೆ ಒತ್ತುಕೊಟ್ಟ ಕಮ್ಯುನಿಸ್ಟ್ ಚಳುವಳಿ ಪ್ರಚಲಿತವಾಯಿತು. ಕೃಷಿ ಮತ್ತು ಕೈಗಾರಿಕೆಗಳೆರಡೂ ಕ್ಷೇತ್ರಗಳಲ್ಲಿ ಅಷ್ಟಾಗಿ ಬದಲಾವಣೆ ಕಾಣದ ಕರ್ನಾಟಕದಲ್ಲಿ ’ಕೆಳಜಾತಿ’ ಅರಸರುಗಳ ಆಳ್ವಿಕೆಯಿದ್ದುದರಿಂದ, ಗಾಂಧಿ ಪ್ರತಿನಿಧಿಸಿದ ಸುಧಾರಣಾವಾದಿ ತರ್ಕ ಹೆಚ್ಚು ಪ್ರಚಲಿತವಾಯಿತು. ದಲಿತ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಈ ಮೂರೂ ಚಳುವಳಿಗಳು ಸ್ಪಂದಿಸಿದ ರೀತಿಯಲ್ಲಿ ಭಿನ್ನತೆಯೆಂದರೆ, ಅಂಬೇಡ್ಕರವಾದ ಆರ್ಥಿಕ ಸಮಸ್ಯೆಗಳನ್ನು ಪರಿಶೀಲಿಸಿದರೂ ಸಾಮಾಜಿಕ ಘನತೆಗೆ ಒತ್ತು ಕೊಟ್ಟಿತು; ಗಾಂಧೀವಾದ ಜಮೀನ್ದಾರೀ ವ್ಯವಸ್ಥೆಯನ್ನು ಪ್ರಶ್ನಿಸುವುದಕ್ಕೆ ಹೋಗದೇ ಮೂಲಭೂತ ಆರ್ಥಿಕ ಪ್ರಶ್ನೆಗಳನ್ನು ಬದಿಗಿರಿಸಿ ಸಾಮಾಜಿಕ ಸುಧಾರಣೆಗಳಿಗೆ ಒತ್ತು ನೀಡಿತು;  ಕಮ್ಯುನಿಸ್ಟ್ ಚಳುವಳಿ ವಸಾಹತುಶಾಹಿ ಪ್ರಶ್ನೆ, ಸಾಮಾಜಿಕ ಘನತೆಯ ಪ್ರಶ್ನೆಗಳನ್ನು ಕಡೆಗಣಿಸಿ ಆರ್ಥಿಕ ಪ್ರಶ್ನೆಗಳಿಗೆ ಒತ್ತು ನೀಡಿತು. ಮೂರೂ ಚಳುವಳಿಗಳು ಅರ್ಥವತ್ತಾಗಿದ್ದರೂ ಕೂಡ ದಲಿತ ಸಮುದಾಯಗಳು ಎದುರಿಸುತ್ತಿದ್ದ ಪ್ರಶ್ನೆಗಳಿಗೆ ಸಮಗ್ರವಾಗಿ ಪ್ರತಿಕ್ರಿಯಿಸುವುದರಲ್ಲಿ ವಿಫಲವಾದವು ಎನ್ನುವುದು ಗೇಲ್ ಓಮ್ವೆಡ್ತ್ ಅವರ ಅಭಿಪ್ರಾಯ. ಹಾಗೆಂದು ಅವರು ದಲಿತ ಪ್ರಶ್ನೆಗಳ ಸಂಧರ್ಭದಲ್ಲಿ ಈ ಚಳುವಳಿಗಳ ಜೊತೆಜೊತೆಗೆ ಪ್ರಭುತ್ವ ವಹಿಸುವ ಪಾತ್ರದ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಒಟ್ಟಾರೆ, ಈ ಕೃತಿಯ ಮೂಲಕ ಗಮನಕ್ಕೆ ಬರುವ ಅಂಶವೆಂದರೆ ಗಾಂಧಿ ಕೇಂದ್ರಿತ ರಾಷ್ಟ್ರವಾದದ ವೈಫಲ್ಯ, ಕಮ್ಯುನಿಸ್ಟ್ ವಿಧಾನದ ಬಿಕ್ಕಟ್ಟುಗಳಿಂದಾಗಿ ಸ್ವತಂತ್ರ ಮಾರ್ಗವನ್ನು ಅನುಸರಿಸುವ ಐತಿಹಾಸಿಕ ಅವಶ್ಯಕತೆ ದಲಿತ ಚಳುವಳಿಗಿದ್ದದ್ದು.

ದಲಿತ ಚಳುವಳಿಗಳು ಮತ್ತವುಗಳ ಹಿಂದಿನ ತಾತ್ವಿಕತೆಯನ್ನು, ದಲಿತರಿಗೆ ಸಂಬಂಧಿಸಿದ ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಶ್ನೆಗಳನ್ನು, ರೈತ-ಕಾರ್ಮಿಕ ಮಹಿಳೆಯರ ಪರಿಸ್ಥಿತಿಯನ್ನು ತಮ್ಮ ಅನೇಕ ಪುಸ್ತಕ-ಪ್ರಭಂಧಗಳಲ್ಲಿ ಅಧ್ಯಯನ ಮಾಡುತ್ತ ಬಂದ ಒಂವೆಡ್ಟ್ ದಲಿತರ ಶ್ರದ್ಧೆಗೆ, ಆಧ್ಯಾತ್ಮಿಕ ನಂಬಿಕೆಗೆ ಸಂಬಂಧಿಸಿದ ವಿಷಯಗಳನ್ನು ಸಹ ಸಂಶೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2003ರಲ್ಲಿ ಪ್ರಕಟವಾದ “ಬುದ್ದಿಸಂ ಇನ್ ಇಂಡಿಯಾ: ಚಾಲೆಂಜಿಂಗ್ ಬ್ರಾಹ್ಮನಿಸಂ ಅಂಡ್ ಕಾಸ್ಟ್” ಅಪರೂಪದ ಕೃತಿ. ಇದರಲ್ಲಿ ಬೌದ್ಧ ಧರ್ಮದ ಐತಿಹಾಸಿಕ ಹುಟ್ಟು ಮತ್ತು ಬೆಳವಣಿಗೆಗಳು, ಅವುಗಳಿಗಿದ್ದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ, ಅಂದಿನ ಪ್ರಭುತ್ವಗಳ ಪ್ರಭಾವ ಮತ್ತು ಬೌದ್ಧ ಧರ್ಮ ಸ್ಪರ್ಧಿಸಬೇಕಾಗಿದ್ದ ಧಾರ್ಮಿಕ-ಸೈದ್ಧಾಂತಿಕ ಪ್ರವೃತ್ತಿಗಳನ್ನು ಗುರುತಿಸಲಾಗಿದೆ. ಅಂತೆಯೇ, ಬೌದ್ಧ ಧರ್ಮದ ಪ್ರಮುಖ ಬೋಧನೆಗಳು, ಮೊದಲ ಸಹಸ್ರಮಾನದ ಕಾಲದಲ್ಲಿ ಅದು ವಹಿಸಿದ ರಚನಾತ್ಮಕ ಪಾತ್ರ, ಪುರಾತನ ಜಾಗತೀಕರಣದ ಯುಗದಲ್ಲಿ ವ್ಯಾಪಾರಸಂಬಂಧೀ ಅಂತರಾಷ್ಟ್ರೀಯ ವಿಷಯಗಳಿಗೆ ಸಂಬಂಧಿಸಿದ ಬೌದ್ಧ ಧರ್ಮದ ಕೊಡುಗೆ, ಸಮಾಜರಚನೆ ಮತ್ತು ಜಾತಿ ವಿಷಯದಲ್ಲಿ ಅದರ ಪ್ರಭಾವ, ಜ್ನಾನಕ್ಷೇತ್ರಗಳ ವಿಕಾಸದಲ್ಲಿ ಬೌದ್ಧ ಧರ್ಮದ ಪಾಲುದಾರಿಕೆ, ಮತ್ತು ಅದರ ಪರಿವರ್ತನಾಶೀಲ ಸ್ವರೂಪಗಳ ಚಿತ್ರಣವೂ ಇಲ್ಲಿದೆ. ಬ್ರಾಹ್ಮಣವಾದದ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಬದಲಾಗಿ ಬೌದ್ಧ ಧರ್ಮ ಕ್ರಿಯಾಶೀಲ, ಮುಕ್ತ ಸಮಾಜ ರಚನೆಗೆ ಒತ್ತು ನೀಡಿದ್ದನ್ನು ಒಂವೆಡ್ಟ್ ಎತ್ತಿತೋರಿಸುತ್ತಾರೆ. ತನ್ನ ಪ್ರಭಾವ ಕಳೆದುಕೊಂಡ ಶತಮಾನಗಳ ನಂತರವೂ ಭಕ್ತಿ ಪರಂಪರೆಯ ಮೇಲೆ ಅದು ಬೀರಿದ ಪ್ರಭಾವ, ಇಪ್ಪತ್ತನೆಯ ಶತಮಾನದಲ್ಲಿ ವಿಮೋಚನಾ ಚಳುವಳಿಗಳಿಗೆ ಅದು ನೀಡಿದ ಒತ್ತಾಸೆಗಳನ್ನು ಗುರುತಿಸುತ್ತಾ, ಒಂವೆಡ್ಟ್ ಅಂಬೇಡ್ಕರರು ಪ್ರತಿಪಾದಿಸಿದ ಬೌದ್ಧ ಧರ್ಮದ ಅರ್ಥವಿವರಣೆ ಮತ್ತು ದಲಿತರ ವಿಮೋಚನಾ ಚಳುವಳಿಯಲ್ಲಿ ಅದರ ಮಹತ್ವಗಳನ್ನು ಚರ್ಚಿಸುತ್ತಾರೆ. ಮುಖ್ಯವಾಗಿ, ಸಾಮಾಜಿಕ ಪುನರ್ನಿರ್ಮಾಣದ ಆಶಯಗಳಿಗೆ ಬೌದ್ಧಧರ್ಮ ಒದಗಿಸುವ ಸಾಧ್ಯತೆಗಳನ್ನು ಈ ಕೃತಿ ವಿವರಿಸುತ್ತದೆ.

ಭಾರತೀಯ ಪರಂಪರೆಯಲ್ಲಿ ಆದರ್ಶ ಸಮಾಜದ ಕಲ್ಪನೆಯ ಕುರಿತಾಗಿ ನನಗೆ ತಿಳಿದಿರುವಂತೆ ಅಕಡೆಮಿಕ್ ಅಧ್ಯಯನಗಳಾಗಲೀ, ಐತಿಹಾಸಿಕ ಪರಿಶೀಲನೆಗಳಾಗಲೀ ಆಗಿರುವುದು ತೀರಾ ಕಡಿಮೆ. ಅದರಲ್ಲೂ, ಸಾಮಾಜಿಕ ಶ್ರೇಣೀಕರಣದಂತ ತೀವ್ರತಮ ಅನ್ಯಾಯ, ಅಸಮಾನತೆಗಳ ನಮ್ಮ ಸಮಾಜದಲ್ಲಿ, ಯಾವ ಬಗೆಯ ಪರ್ಯಾಯ ಸಮಾಜವನ್ನು ಕಲ್ಪಿಸಿಕೊಳ್ಳಲಾಗಿದೆ ಎನ್ನುವ ಕುರಿತು ಪ್ರತ್ಯೇಕವಾದ ಅಧ್ಯಯನ ಖಂಡಿತವಾಗಿ ಸ್ವಾಗತಾರ್ಹ ಪ್ರಯತ್ನ. ಗಾಂಧಿಯವರ ರಾಮರಾಜ್ಯ ಕಲ್ಪನೆ ಬಹುಚರ್ಚೆಗೆ ಒಳಗಾಗಿದ್ದರೂ ಕೂಡ, ಈ ಪರಿಕಲ್ಪನೆಯ ಇತಿಹಾಸವನ್ನು ಬಿಚ್ಚಿಡುವ ಕಾರ್ಯ ಅವಶ್ಯವೇ ಆಗಿತ್ತು. ಈ ಕೊರತೆಯನ್ನು ನೀಗಿಸಿದ ಕೃತಿ ಒಂವೆಡ್ಟ್ ಅವರ “ಸೀಕಿಂಗ್ ಬೇಗಂಪುರ: ದ ಸೋಶಿಯಲ್ ವಿಶನ್ ಆಫ್ ಆಂಟಿ-ಕಾಸ್ಟ್ ಇಂಟಲೆಕ್ಚ್ಯುಯಲ್ಸ್” (ಬೇಗಂಪುರದ ಹುಡುಕಾಟದಲ್ಲಿ: ಜಾತಿವಿರೋಧೀ ಚಿಂತಕರ ಸಾಮಾಜಿಕ ದರ್ಶನಗಳು). ಸುಮಾರು ಐದು ಶತಮಾನಗಳ ಕಾಲಮಾನದಲ್ಲಿ ಕಂಡುಬರುವ ಜಾತಿ-ವರ್ಗ-ಸುಂಕ-ದುಃಖರಹಿತ ಸಮಾಜದ ಕಲ್ಪನೆಗಳ ಚಿತ್ರಣವನ್ನು ಈ ಕೃತಿ ಕಟ್ಟಿಕೊಡುತ್ತದೆ. ಆದರ್ಶಸಮಾಜದ ಕಲ್ಪನೆಗೆ ಸಂವಾದಿ ಆಂಗ್ಲ ಶಬ್ದವೆಂದರೆ ಉಟೋಪಿಯಾ – ಯುರೋಪಿನ ರೆನೆಸಾನ್ ಕಾಲದಲ್ಲಿ ಇಂತಹ ಕೃತಿಗಳು ಹಲವಿದ್ದವು. ಇಂಗ್ಲೀಷಿನಲ್ಲಿ ಥಾಮಸ್ ಮೋರ್ 1516ರಲ್ಲಿ ಪ್ರಕಟಿಸಿದ ಈ ಹೆಸರಿನ ಕೃತಿಯಿಂದ ಆದರ್ಶಸಮಾಜದ ಕಲ್ಪನೆಗೆ ಉಟೋಪಿಯಾ ಎಂಬ ಹೆಸರು ಬಂತು. ಅದಕ್ಕೂ ಮುನ್ನವೇ ಜೀವಿಸಿದ್ದ ಕ್ರಾಂತಿಕಾರಿ ಭಕ್ತಿ ಕವಿ ಸಂತ ರವಿದಾಸ (1450-1520) ತಮ್ಮ ಹಾಡುಗಳಲ್ಲಿ ಆದರ್ಶ ಸಮಾಜದ ಕಲ್ಪನೆಯನ್ನು “ಬೇಗಂಪುರ” (ಬೇ-ಗಂ = ದುಃಖರಹಿತ) ಎಂದು ಕರೆದಿದ್ದರು. ಈ ಕೃತಿ ಚೋಖಾಮೇಳ, ಜನಾಬಾಯಿ, ಕಬೀರ್, ರವಿದಾಸ, ತುಕಾರಾಮ, ಪಶ್ಚಿಮಬಂಗಾಲದ ಕರ್ತಾಭಜರು, ಫುಲೆ, ಅಯೋತ್ತಿ ದಾಸ್, ಪಂಡಿತಾ ರಮಾಬಾಯಿ, ಅಂಬೇಡ್ಕರ್ ಮತ್ತು ಪೆರಿಯಾರರ ಕೃತಿಗಳಲ್ಲಿ ಕಂಡುಬರುವ ಜಾತಿ-ವರ್ಗ-ಲಿಂಗತ್ವಗಳ ಶ್ರೇಣೀಕೃತ ವ್ಯವಸ್ಥೆಯಿಂದ ಮುಕ್ತವಾದ ಆದರ್ಶಸಮಾಜದ ಕಲ್ಪನೆಗಳನ್ನು ಅಂದಿನ ಸಮಾಜಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಒಂದು ರೀತಿಯಲ್ಲಿ, ಪಾಶ್ಚಾತ್ಯ, ಕಾಂಗ್ರೆಸ್ಸಿನ ರಾಷ್ಟ್ರವಾದೀ, ಹಿಂದುತ್ವವಾದಿ ಕಲ್ಪನೆಗಳು ಪ್ರತಿಪಾದಿಸಿದ “ಭಾರತ”ದ ಕಲ್ಪನೆಗೆ ಪರ್ಯಾಯವಾದ ಕಲ್ಪನೆಗಳೂ ಇರುವುದನ್ನು ಪ್ರಚಲಿತ ಪ್ರಭಾವೀ ಸಂಕಥನಗಳು ಮರೆಮಾಚಿರುವ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ಮತ್ತು ತಾತ್ವಿಕ ಸಂಪನ್ಮೂಲಗಳಿಂದ ಪರಿಷ್ಕರಿಸಿಕೊಂಡಿರುವ ಈ ಸಮಾನ ಸಮಾಜದ ಪರಿಕಲ್ಪನೆ ಪ್ರಸಕ್ತ ಸ್ಥಿತಿಯಲ್ಲಿ ಮುಖ್ಯ ಕೊಡುಗೆಯಾಗಿದೆ.

ಭಾರತೀಯ ಸಮಾಜದ ಕಲ್ಪನೆಯಲ್ಲಿ ಪ್ರಸ್ಥಾಪಿತ ಮಾದರಿಯ ಚರ್ಚೆಗಳು ಜಾತಿಪದ್ಧತಿಯನಾಧರಿಸಿದ ಹಿಂದು ಪರಂಪರೆಯನ್ನೇ ’ಭಾರತೀಯ’ವೆಂದು ಪ್ರತಿಪಾದಿಸುವ ಪ್ರವೃತ್ತಿ ಕಂಡುಬರುತ್ತದೆ. ಅರ್ಥಾತ್, ಇತಿಹಾಸದಲ್ಲಿ ನಮಗೆ ಬೌದ್ಧ, ಜೈನ ಧರ್ಮಗಳಿಂದ ಹಿಡಿದು ಜಾತಿವಿರೋಧೀ ಸಾಮಾಜಿಕ ಪರಿಕಲ್ಪನೆಗಳಿಗೆ ಸುಧೀರ್ಘ ಇತಿಹಾಸವಿದ್ದರೂ ಕೂಡ ಜಾತಿಪದ್ಧತಿಗೆ ಮಾನ್ಯತೆಕೊಡುವ ಸಂಕಥನಗಳನ್ನು ಚಾಲ್ತಿಯಲ್ಲಿರಿಸಲಾಗಿದೆ. 2011ರಲ್ಲಿ ಪ್ರಕಟವಾದ “ಅಂಡರ್ಸ್ಟಾಂಡಿಂಗ್ ಕಾಸ್ಟ್: ಫ್ರಮ್ ಬುದ್ಧಾ ಟು ಅಂಬೇಡ್ಕರ್ ಅಂಡ್ ಬಿಯಾಂಡ್” (ಜಾತಿಯ ತಿಳುವಳಿಕೆ: ಬುದ್ಧನಿಂದ ಅಂಬೇಡ್ಕರರವರೆಗೆ ಮತ್ತು ಮುಂದೆ) ಕೃತಿಯಲ್ಲಿ ಒಂವೆಡ್ಟ್ ಈ ಪ್ರಭಾವೀ ಸಂಕಥನವನ್ನು ಪ್ರಶ್ನಿಸುತ್ತಾರೆ. ಜಾತಿವಿರೋಧದ ಕುರಿತಾದ ಸಂಕಥನಗಳನ್ನು ಒಟ್ಟಾಗಿಸಿ, ವಸಾಹತುಶಾಹಿ ಕಾಲಮಾನದಲ್ಲಿ ’ಮೇಲ್ಜಾತಿ’ ಹಿಂದು ಧರ್ಮ ಹೊಂದಿದ್ದ ಯಜಮಾನಿಕೆಯ (ಹೆಜೆಮನಿ) ಸ್ಥಾನಕ್ಕೆ ಸವಾಲಾದ ಚಿಂತನೆಗಳನ್ನು ಕಲೆಹಾಕಿದ್ದಾರೆ. ವಸಾಹತುಶಾಹಿ-ವಿರೋಧೀ ಸಂಕಥನಗಳ ಎರಡು ಪ್ರಧಾನ ಧಾರೆಗಳಾದ ಆಧ್ಯಾತ್ಮಿಕ ನಿರೂಪಣೆ ಹೊಂದಿದ್ದ ಗಾಂದೀವಾದ ಮತ್ತು ಧರ್ಮನಿರಪೇಕ್ಷ ನಿರೂಪಣೆಗೆ ಒತ್ತುಕೊಟ್ಟ ನೆಹ್ರುರವರ ಆಧುನಿಕತೆಗಳೆರಡರ ಹಿಂದೆಯೂ ಕೂಡ ಈ ’ಮೇಲ್ಜಾತಿ’ ಹಿಂದೂ ಪರಂಪರೆಯ ಕುರುಹುಗಳೇ ಇದೆಯೆಂಬುದನ್ನು ಒಂವೆಡ್ಟ್ ತೋರಿಸುತ್ತಾರೆ. ಈ ಪರಂಪರೆಗಳಿಗೆ ಸವಾಲೆಸೆಯುತ್ತ ಬಂದಿರುವ ಸಂಕಥನಗಳು ಫುಲೆ, ಅಂಬೇಡ್ಕರರಲ್ಲಿ ಮಾತ್ರವಲ್ಲದೇ, ಭಕ್ತಿ ಪರಂಪರೆ, ಲಿಂಗಾಯತ, ತಮಿಳು ಸಿದ್ಧ, ಮಹಾರಾಷ್ಟ್ರದ ವಾರ್ಕರಿ, ಅಲ್ಲದೇ ಆದಿ-ದ್ರಾವಡ, ಆದಿ-ಆಂಧ್ರ, ಆದಿ-ಕರ್ನಾಟಕ ಮುಂತಾದ ಪರಂಪರೆಗಳಲ್ಲಿಯೂ ಕಂಡುಬರುವುದನ್ನು ಗುರುತಿಸಲಾಗಿದೆ.  ಇವುಗಳಲ್ಲಿನ ಪರಿಕಲ್ಪನೆಗಳನ್ನೆಲ್ಲ ಅನುರಣಿಸುವ ಸಂಕಥನವಾಗಿ ಅಂಬೇಡ್ಕರವಾದ ಬೆಳೆದುಬರುವುದನ್ನು ಮತ್ತು ಕಾಂಗ್ರೆಸ್ಸಿನ ರಾಷ್ಟ್ರೀಯವಾದ ಇದನ್ನು ಮರೆಮಾಚುವುದನ್ನು ಕೃತಿ ಚರ್ಚಿಸುತ್ತದೆ. ಹೀಗೆ, ಜಾತಿಶ್ರೇಣೀಕರಣಕ್ಕೆ ಮಾನ್ಯತೆಕೊಡುವ ಪ್ರಸ್ಥಾಪಿತ ಸಂಕಥನಗಳಿಗೆ ಸತತವಾಗಿ ಸವಾಲೆಸೆದಿರುವ ಪರ್ಯಾಯೀ ಸಂಕಥನಗಳು ಮತ್ತು ’ಭಾರತೀಯತೆ’ಯ ಪರಿಕಲ್ಪನೆಗಳನ್ನು ಗುರುತಿಸುವತ್ತ ಒಂವೆಡ್ಟ್ ಅವರು ಓದುಗರನ್ನು ಒಯ್ಯುತ್ತಾರೆ.

ಉಪಸಂಹಾರ

ಒಂವೆಡ್ಟ್ ಅವರ ಜಾತಿವಿರೋಧೀ ಬರಹಗಳು ದಲಿತ ಚಳುವಳಿಗಳಿಗೆ ಅಪಾರ ತಾತ್ವಿಕ, ಬೌದ್ಧಿಕ ಸಂಪನ್ಮೂಲಗಳನ್ನು ದೊರಕಿಸಿವೆಯಲ್ಲದೇ, ಹಲವಾರು ಸ್ತರಗಳ ಜಾತಿವಿರೋಧೀ ಚಳುವಳಿಗಳು, ರೈತ, ಮಹಿಳಾ ಮತ್ತು ಕಾರ್ಮಿಕ ಚಳುವಳಿಗಳ ದಾಖಲೀಕರಣದ ಜವಾಬ್ದಾರಿಯನ್ನು ಸಹ ನಿಭಾಯಿಸಿವೆ. ವಿಶಾಲಾರ್ಥದಲ್ಲಿ ಅಸಮಾನತೆಯ ಟೀಕೆಯೇ ಅವರ ಬರವಣಿಗೆಯ ಜೀವಾಳವೆನ್ನಬಹುದು.  ಅವರ ಅಕಡೆಮಿಕ್ ಅಧ್ಯಯನಗಳು, ಜನರೊಂದಿಗೆ ಬೆರೆತು ನಡೆಸಿರುವ ಹೋರಾಟಗಳು, ಹಲವು ಮಾಧ್ಯಮಗಳ ಮೂಲಕ ಅವರು ಪ್ರಸ್ತುತ ಪಡಿಸಿರುವ ಬೌದ್ಧಿಕ ಸಂಪನ್ಮೂಲಗಳೆಲ್ಲವುಗಳ ಹಿಂದಿರುವ ಆಶಯವೆಂದರೆ ಸಾಮಾಜಿಕ ನ್ಯಾಯ. ಅವರ ಹೋರಾಟ ಮತ್ತು ಚಿಂತನೆಗಳ ಹಿಂದಿನ ಪ್ರೇರಣೆ ಬಂದಿದ್ದು ಅವರ ತಾಯ್ನಾಡಾದ ಅಮೇರಿಕದ ಯಾವುದೇ ಚಿಂತಕರಿಂದಲ್ಲ, ಐರೋಪ್ಯ ತತ್ವಜ್ನಾನದ ಪರಂಪರೆಯಿಂದಲ್ಲ. ಅದೆಷ್ಟೋ ಭಾರತೀಯ-ಮೂಲದ ವಿದ್ವಾಂಸರನ್ನು ನಾಚಿಸುವ ಮಟ್ಟಿಗೆ, ಒಂವೆಡ್ಟ್ ಅವರು ಭಾರತೀಯ ಪರಂಪರೆಗಳಲ್ಲಿ ಹಾಸುಹೊಕ್ಕಾಗಿರುವ ಸಮಾನತೆಯ ಆಶಯಗಳನ್ನೇ ಹುಡುಕಿ ತಮ್ಮ ಬರಹಗಳ ಏಕಸೂತ್ರವಾಗಿಸಿದರು. ಜೀವನವಿಡೀ ತಮ್ಮೆಲ್ಲ ಚಟುವಟಿಕೆಗಳಿಗೆ ಬುದ್ಧ, ಕಬೀರ್, ಫುಲೆ, ಅಂಬೇಡ್ಕರರಿಂದ ಪ್ರೇರಣೆ ಪಡೆದರು.

ಐದು ದಶಕಗಳಿಗೂ ಮೀರಿದ ಒಂವೆಡ್ಟ್ ಅವರ ಭಾರತದೊಂದಿಗಿನ ಬಹುಸ್ತರದ ಪಾಲ್ಗೊಳ್ಳುವಿಕೆಯಲ್ಲಿ ಅವರು ಸತತವಾಗಿ ಪರಿಷ್ಕರಿಸಿದ್ದೆಂದರೆ ಜಾತಿ-ವರ್ಗ-ಲಿಂಗತ್ವಗಳ ಅಸಮಾನತೆಯಿಂದ ಮುಕ್ತವಾದ, ಲೋಕತಾಂತ್ರಿಕ ಹಾಗೂ ನ್ಯಾಯಯುಕ್ತ ಸಮಾಜದ ಪರಿಕಲ್ಪನೆಯನ್ನು. ಅವರ ಚಿಂತನೆಗಳು ನಿಮ್ನಜಾತಿವರ್ಗಗಳ ಹಾಗೂ ರೈತ-ಮಹಿಳಾ-ಕಾರ್ಮಿಕರ ಏಜೆನ್ಸಿಯನ್ನು ಪುರಸ್ಕರಿಸುವ ದಿಕ್ಕಿನಲ್ಲಿ ಮಾರ್ಕ್ಸವಾದ, ಸಮಾಜವಾದ, ಗಾಂಧೀವಾದ ಹಾಗೂ ಭಿನ್ನಬಣ್ಣಗಳ ಧರ್ಮನಿರಪೇಕ್ಷವಾದಗಳಿಗಿಂತಲೂ ಹೆಚ್ಚು ಸ್ಪಷ್ಟತೆಯ ನಿಲುವುಗಳುಳ್ಳವಾಗಿವೆ.   ಹಾಗಾಗಿಯೇ, ಒಂವೆಡ್ಟ್ ಅವರ ಒಟ್ಟಾರೆ ಬರವಣಿಗೆಗಳು ಮತ್ತು ಅವರ ಒಟ್ಟಾರೆ ಬದುಕು ನಮಗೆ ಸೂಕ್ತ ಮತ್ತು ವಿಹಿತ ಭಾರತೀಯ ಅಸ್ಮಿತೆಯ ಸಮರ್ಥ ಪ್ರತಿಪಾದನೆಯಾಗಿ ಗೋಚರಿಸುತ್ತದೆ. ಭಾರತದ ಭವಿಷ್ಯವನ್ನು, ಭಾರತದೊಳಗಿನ ದಲಿತರ, ರೈತರ, ಮಹಿಳೆಯರ, ಕಾರ್ಮಿಕರ ಹಿತವನ್ನು, ಚಿಂತಿಸುವವರಿಗೆ ಅತ್ಯಂತ ಮೌಲಿಕ ತಾತ್ವಿಕ ಸಂಪನ್ಮೂಲವಾಗಿ ಒಂವೆಡ್ಟ್ ಅವರ ಬದುಕು-ಬರಹ ಒದಗಿಬರುವುದು ನಿಶ್ಚಯ.


ಪ್ರತಿಕ್ರಿಯಿಸಿ