ಆಲೋಚನೆಗೆ, ಬರವಣಿಗೆಗೆ ನೈತಿಕವಾಗಿ ಸೂಕ್ತವಾದ ಭಾಷೆ ಯಾವುದು?

ಇದೊಂದು ದೀರ್ಘವಾದ, ಆದರೆ ಸಾಹಿತ್ಯದ, ಭಾಷೆಯ, ಕ್ರಿಯಾಶೀಲ ಬರವಣಿಗೆಯ ಅಭ್ಯಾಸಿಗರು ಓದಬೇಕಾದ ಪ್ರಬಂಧ. “ನನಗೆ ಸಾಹಿತ್ಯ ಓಕೆ, ಆದರೆ ರಾಜಕೀಯ ಇಷ್ಟವಾಗಲ್ಲ” ಎಂಬ ಕೆಟಗರಿಯ ಜನರೂ ಓದಬಹುದಾದ ಪ್ರಬಂಧ. ಭಾರತದಂಥ ದೇಶದಲ್ಲಿ ಅಭಿವ್ಯಕ್ತಿಗಿರುವ ಸಮಸ್ಯೆಗಳು, ಅದರ ಜೊತೆಗೆ ಬಹುಭಾಷೀಯಾದ ಸಂಸ್ಕೃತಿ, ಜನರು ಇರುವಲ್ಲಿ ಕ್ರಿಯಾಶೀಲ ಬರವಣಿಗೆ ಎದುರಿಸುವ ನಾಜೂಕಾದ ಸಮಸ್ಯೆಗಳನ್ನು ಲವಲವಿಕೆ ಮತ್ತು ಸ್ಪಷ್ಟ ಭಾಷೆಯಲ್ಲಿ ರಾಯ್ ಅವರ ಈ ಪ್ರಬಂಧ ಚರ್ಚಿಸುತ್ತದೆ. ಈ ಭಾನುವಾರದ ಓದಿಗೆ ಅತ್ಯಂತ ಸೂಕ್ತ ಆಯ್ಕೆ ಇದು.

ನನ್ನ ಮೊದಲ ಕಾದಂಬರಿ The God of Small Things ಪ್ರಕಟವಾಗಿ ವಾರವಾಗಿತ್ತು. ಕಲ್ಕತ್ತಾದಲ್ಲಿ ಪುಸ್ತಕದ ಓದುವಿಕೆಯ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕನೊಬ್ಬ ಎದ್ದುನಿಂತು ಹಗೆಬೆರೆತ ಧ್ವನಿಯಲ್ಲಿ “ಯಾರಾದರೂ ತಮ್ಮ ಮಾತೃಭಾಷೆ ಬಿಟ್ಟು ಬೇರೆ ಭಾಷೆಯಲ್ಲಿ ಅತ್ಯುತ್ತಮ ಕೃತಿಯನ್ನು ಬರೆದಿದ್ದಾರೆಯೇ?” ಎಂದು ಕೇಳಿದ. ನಾನೇನೂ ನನ್ನದು ಅದ್ಭುತ ಕೃತಿ ಎಂದು ಹೇಳಿರಲಿಲ್ಲ (ʼಅವನುʼ ಹಾಗನ್ನಲಿಲ್ಲ). ನನ್ನ ಬಗೆಗಿನ ಅವನ ಸಿಟ್ಟು ಅರ್ಥವಾಯಿತು. ಭಾರತದಲ್ಲಿರುವವಳು ಇಂಗ್ಲೀಷಿನಲ್ಲಿ ಬರೆದ್ದದ್ದು ಹಲವರ ಗಮನಸೆಳೆದಿತ್ತು.

“ನಬೋಕೋವ್”*ವಾಡ್ಲಿಮಿರ್ ನಬೋಕೋವ್‌ ರಷ್ಯನ್‌ ಕಾದಂಬರಿಕಾರ. ಎಂದೆ. ನನ್ನ ಉತ್ತರ ಅವನನ್ನು ಮತ್ತಷ್ಟು ಕೆರಳಿಸಿತು. ಸಭಾಂಗಣದಿಂದ ಸರ್ರೆಂದು ಎದ್ದುಹೋದ.

ಇಂದಾಗಿದ್ದರೆ “ಅಲ್ಗಾರಿದಂ” ಎಂದು ಉತ್ತರಿಸಬಹುದಿತ್ತು. ಕೃತಕ ಬುದ್ಧಿಮತ್ತೆಯು ಯಾವುದೇ ಭಾಷೆಯಲ್ಲಿ ಬೇಕಾದರೂ ಅತ್ಯುತ್ತಮವಾದದ್ದನ್ನು ಬರೆಯಬಲ್ಲದು ಹಾಗೂ ಅತ್ಯುತ್ತಮವಾಗಿ ಭಾಷಾಂತರಿಸಬಲ್ಲದು ಎಂದು ಹೇಳಲಾಗುತ್ತಿದೆ. ನಮಗೆ ತಿಳಿದಿರುವ, ನಾವು ಅರ್ಥಮಾಡಿಕೊಂಡಿದ್ದೇವೆ ಎಂದುಕೊಂಡಿರುವ ಯುಗವು ಅಂತ್ಯಗೊಳ್ಳುತ್ತಿದೆ. ಬಹುಶಃ ನಾವೆಲ್ಲರೂ ನಮ್ಮ ಜೊತೆಯಲ್ಲಿರುವವರು ಎಂತಹ ಭಾಷೆಯನ್ನು ಸೃಷ್ಟಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲದಿಂದಲೇ ಇಲ್ಲಿ ಸೇರಿದ್ದೇವೆ.

ಈ ಘಟನೆ ನಡೆದ ಕೆಲವು ವಾರಗಳ ನಂತರ ಲಂಡನ್ನಿನ ಲೈವ್ ರೇಡಿಯೊ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದೆ. ಅಲ್ಲಿಗೆ ಬಂದಿದ್ದ ಅತಿಥಿಗಳಲ್ಲಿ ಒಬ್ಬಾತ ಇಂಗ್ಲೀಷ್‌ ಇತಿಹಾಸಕಾರ. ಸಂದರ್ಶಕರ ಪ್ರಶ್ನೆಗೆ ಉತ್ತರಿಸುತ್ತ ಅವರು ಬ್ರಿಟೀಷ್‌ ಸಾಮ್ರಾಜ್ಯಶಾಹಿಯನ್ನು ಸ್ತುತಿಸುವಂತಹ ಗೀತೆಯನ್ನೇ ರಚಿಸಿಬಿಟ್ಟರು. ಆತ ನನ್ನತ್ತ ತಿರುಗಿ “ನೀವು ಇಂಗ್ಲೀಷಿನಲ್ಲಿ ಬರೆಯುತ್ತಿರುವುದು ಕೂಡ ಬ್ರಿಟೀಷ್‌ ಸಾಮ್ರಾಜ್ಯಕ್ಕೆ ಸಲ್ಲಿಸುತ್ತಿರುವ ಗೌರವವಾಗಿದೆ” ಎಂದ. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದರೆ ಅನಾಗರಿಕ ವರ್ತನೆಯಾಗುತ್ತದೆಯೇನೋ ಎಂದು ಸ್ವಲ್ಪಹೊತ್ತು ಸುಮ್ಮನಿದ್ದೆ. ಆಮೇಲೆ ತಡೆಯಲಾಗಲಿಲ್ಲ ಅವನನ್ನು ಚೆನ್ನಾಗಿ ಜಾಡಿಸಿಬಿಟ್ಟೆ. ಆ ಇತಿಹಾಸಕಾರ ನೊಂದುಕೊಂಡು ಕಾರ್ಯಕ್ರಮ ಮುಗಿದ ಮೇಲೆ ಅವನಿಗೆ ನನ್ನ ಪುಸ್ತಕಗಳು ಇಷ್ಟವೆಂದೂ, ಆ ಮಾತು ಹೇಳಿದ್ದು ಕೂಡ ಪ್ರಶಂಸೆಯ ಅರ್ಥದಲ್ಲಿ ಎಂದು ಹೇಳಿದ. ಹಾಗಾದರೆ  ಜಾಝ್‌, ಬ್ಲೂ ಸಂಗೀತ, ಆಫ್ರಿಕನ್‌ – ಅಮೆರಿಕನ್‌ ಬರವಣಿಗೆ, ಕಾವ್ಯ ಇವೆಲ್ಲವೂ ಗುಲಾಮಗಿರಿಗೆ ಸಂದ ಗೌರವವೇ? ಲ್ಯಾಟಿನ್‌ ಅಮೆರಿಕನ್‌ ಸಾಹಿತ್ಯ ಸ್ಪಾನಿಷ್‌, ಪೋರ್ಚುಗಿಸ್‌ ವಸಾಹತುಶಾಹಿಗೆ ಸಂದ ಗೌರವವೇ? ಎಂದು ಅವನನ್ನು ಕೇಳಿದೆ.

ಎರಡೂ ಸಂದರ್ಭಗಳಲ್ಲಿ ಸಿಟ್ಟನ್ನು ನಿಯಂತ್ರಿಸಿಕೊಳ್ಳಲಾಗದೆ ಆ ಕ್ಷಣಕ್ಕೆ ಕೊಟ್ಟ ರಕ್ಷಣಾತ್ಮಕ ಪ್ರತಿಕ್ರಿಯೆಗಳಾಗಿತ್ತೇ ಹೊರತು ಸಮರ್ಪಕ ಉತ್ತರಗಳಾಗಿರಲಿಲ್ಲ. ಆ ಘಟನೆಗಳು ವಸಾಹತುಶಾಹಿ, ರಾಷ್ಟ್ರೀಯತೆ, ಅಧಿಕೃತತೆ, ಗಣ್ಯಪ್ರಜ್ಞೆ, ದೇಸಿಯತೆ, ಜಾತಿ, ಸಾಂಸ್ಕೃತಿಕ ಗುರುತುಗಳಂತಹ ಕಿಡಿಹೊತ್ತಿಸುವ ಪ್ರಶ್ನೆಗಳಿಗೆ ಸಂಬಂಧಿಸಿದ್ದಾಗಿತ್ತು. ಇವು ಉಪ್ಪು-ಖಾರ ತಿನ್ನುವ ಲೇಖಕಿ/ಕರನ್ನು ಕೆರಳಿಸುವಂತಹ ವಿಷಯಗಳು. ಇಂತಹ ಚರ್ಚೆಗಳಲ್ಲಿ ಸಾಮಾನ್ಯವಾಗಿ ಆಗುವಂತೆ ಲೇಖಕಿ/ಕ ಬರೆದಿರುವುದೇನು ಎನ್ನುವುದು ಮರೆಗೆ ಸರಿದುಬಿಡುತ್ತದೆ. ನನಗೆ ಅದನ್ನು ಎದುರಿಸುವುದು ಕಷ್ಟವಾಯಿತು. ಭಾಷೆ ಅತ್ಯಂತ ಖಾಸಗಿ ಸಂಗತಿಯಾಗಿರುವಂತೆ ಸಾರ್ವಜನಿಕವಾದದ್ದೂ ಹೌದು ಎನ್ನುವುದು ಗೊತ್ತಿತ್ತು. ನನ್ನತ್ತ ತೂರಿಬಂದ ಸವಾಲುಗಳು ನ್ಯಾಯವಾದದ್ದಾಗಿತ್ತು. ಅವರ ಬಗ್ಗೆ ಈಗಲೂ ಮಾತಾಡುತ್ತಿದ್ದೇನೆ ಎಂದರೆ ಇನ್ನೂ ಅವರ ಬಗ್ಗೆ ಯೋಚಿಸುತ್ತಿದ್ದೇನೆ ಎಂದರ್ಥ.

ಕಲ್ಕತ್ತ ನಮ್ಮನ್ನು ಬಿಟ್ಟುಹೋದ ಅಪ್ಪನ ಊರು. ಕೆಂಪು ನಾಲಿಗೆ, ಹಲವು ಕೈಗಳ ಕಾಳಿ ಮಾತೆಯ ಊರು. ಕಲ್ಕತ್ತಾದಲ್ಲಿ ನಡೆದ ಆ ಓದುವಿಕೆಯ ಕಾರ್ಯಕ್ರಮದ ರಾತ್ರಿ ನಿಜವಾಗಿ ನನ್ನ ಮಾತೃಭಾಷೆ ಯಾವುದು ಎಂದು ಯೋಚಿಸಿ ಅಚ್ಚರಿಯಾಯಿತು. ರಾಜಕೀಯವಾಗಿ ಸರಿಯಾದ, ಸಾಂಸ್ಕೃತಿಕವಾಗಿ ಹಾಗೂ ನೈತಿಕವಾಗಿ ಸೂಕ್ತವಾದ ಭಾಷೆ ಯಾವುದು? ಯಾವುದರಲ್ಲಿ ಯೋಚಿಸಬೇಕು, ಯಾವುದರಲ್ಲಿ ಬರೆಯಬೇಕು? ಆಗ ನನಗನ್ನಿಸಿತು ನನ್ನ ತಾಯಿ ಅನ್ಯಳು. ಅವಳಿಗೆ ಕಾಳಿಗಿರುವಂತೆ ಹಲವು ತೋಳುಗಳಿಲ್ಲ ಬದಲಿಗೆ ಹಲವು ನಾಲಿಗೆಗಳಿವೆ. ಇಂಗ್ಲೀಷ್‌ ಅವುಗಳಲ್ಲೊಂದು. ನನ್ನ ಈ ಅನ್ಯಳಾದ ತಾಯಿಯ ಇತರ ಭಾಷೆಗಳ ಲಯ, ಧ್ವನಿಗಳಿಂದ ನನ್ನ ಇಂಗ್ಲೀಷ್‌ ಆಳವಾಗಿದೆ, ವಿಸ್ತಾರಗೊಂಡಿದೆ. (ಅವಳು ಅನ್ಯಳು ಏಕೆಂದರೆ ಮೊದಲು ಬ್ರಿಟೀಷರು ಅವಳನ್ನು ಛಿದ್ರ ಮಾಡಿದರು. ಆಮೇಲೆ ಅವಳೊಡನೆ ಬೆರೆಯಲು ಇಷ್ಟವಿಲ್ಲವೆಂದವರ ಮೇಲೆ (ಉದಾ: ಕಾಶ್ಮೀರಿಗಳು) ಅವಳಿಗೆ ಸೇರಿದವರ ಮೇಲೆ (ಭಾರತೀಯ ಮುಸಲ್ಮಾನರು, ದಲಿತರು) ಅವಳ ಹೆಸರಲ್ಲೇ ನಡೆಯುತ್ತಿರುವ ದೌರ್ಜನ್ಯಗಳು ಇವೆಲ್ಲವೂ ಅವಳು ತಾಯಿಯಾದರೂ ತಾಯಿಯಲ್ಲ ಎನ್ನುವಂತೆ ಮಾಡಿವೆ).

ಅವಳಿಗೆ ಎಷ್ಟು ನಾಲಿಗೆಗಳಿವೆ? ಅಧಿಕೃತವಾಗಿ ಸರಿಸುಮಾರು ೭೮೦. ಅವುಗಳಲ್ಲಿ ಕೇವಲ ೨೨ ಭಾಷೆಗಳನ್ನು ಸಂವಿಧಾನವು ಅಧಿಕೃತವಾಗಿ ಗುರುತಿಸಿದೆ. ಉಳಿದ ೩೮ ತಮ್ಮ ಸರದಿಗಾಗಿ ಕಾಯುತ್ತ ನಿಂತಿದೆ. ಪ್ರತಿಯೊಂದಕ್ಕೂ ತಮ್ಮದೇ ವಸಾಹತುಶಾಹಿ ಇತಿಹಾಸವಿದೆ. ರಾಷ್ಟ್ರೀಯ ಭಾಷೆ ಎನ್ನುವುದು ಯಾವುದೂ ಇಲ್ಲ. ಹಿಂದಿ ಮತ್ತು ಇಂಗ್ಲೀಷ್ “ಆಡಳಿತ ಭಾಷೆಗಳು”.‌ ಭಾರತದ ಸಂವಿಧಾನದ ಪ್ರಕಾರ (ಅದೂ ಇಂಗ್ಲೀಷಿನಲ್ಲಿ ಬರೆಯಲಾಗಿದೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು) ೨೬ ಜನವರಿ ೧೯೬೫ರ ನಂತರ ರಾಜ್ಯಗಳಲ್ಲಿ ಇಂಗ್ಲೀಷಿನ ಬಳಕೆ ನಿಲ್ಲಬೇಕಿತ್ತು. ದೇವನಾಗರಿ ಲಿಪಿಯಲ್ಲಿ ಬರೆಯುವ ಹಿಂದಿ ಅದರ ಸ್ಥಾನದಲ್ಲಿ ಬಳಕೆಯಾಗಬೇಕಿತ್ತು. ಹಿಂದಿಯನ್ನು ರಾಷ್ಟ್ರಭಾಷೆ ಮಾಡುವ ಪ್ರಯತ್ನಗಳು ದೇಶದ ಹಿಂದಿಯೇತರ ಪ್ರದೇಶಗಳಲ್ಲಿ ಗಲಭೆಗಳಿಗೆ ಕಾರಣವಾಯಿತು. ಹಾಗಾಗಿ ಅಪರಾಧಿಪ್ರಜ್ಞೆಯೊಂದಿಗೆ, ಅನಧಿಕೃತವಾಗಿ ಇಂಗ್ಲೀಷ್‌ ಬಳಕೆ ಮುಂದುವರೆಯಿತು.

ಈ ವಿಷಯದಲ್ಲಿ ಅಪರಾಧಿಪ್ರಜ್ಞೆಯಿಂದ ಉಪಯೋಗವಿಲ್ಲ. ಹಲವು ರಾಜ್ಯಗಳನ್ನೊಳಗೊಂಡ ಭಾರತ ಬ್ರಿಟೀಷರ ಕಲ್ಪನೆಯಾಗಿತ್ತು. ಹಾಗಾಗಿ ಇಂಗ್ಲೀಷ್‌ ಎನ್ನುವುದು ಭಾರತ ಎನ್ನುವಷ್ಟೇ ಒಳ್ಳೆಯ ಇಲ್ಲವೇ ಕೆಟ್ಟ ಐಡಿಯಾ. ಇಂಗ್ಲೀಷಿನಲ್ಲಿ ಬರೆಯುವುದು ಇಲ್ಲವೆ ಮಾತಾಡುವುದು ಆ ಬ್ರಿಟೀಷ್‌ ಇತಿಹಾಸಕಾರ ಹೇಳಿದಂತೆ ಬ್ರಿಟೀಷ್‌ ಸಾಮ್ರಾಜ್ಯಕ್ಕೆ ಸಲ್ಲಿಸಿದ ಗೌರವವಲ್ಲ. ಬದಲಿಗೆ ಸೃಷ್ಟಿಯಾಗಿರುವ ಸನ್ನಿವೇಶದಲ್ಲಿ ಅದೊಂದು ವಾಸ್ತವವಾದ ಪರಿಹಾರಮಾರ್ಗ. ಭಾರತ ಇಂದಿಗೂ ಹಲವು ರೀತಿಯಲ್ಲಿ ಸಾಮ್ರಾಜ್ಯದಂತೆಯೇ ಇದೆ. ಅದರ ಗಡಿಪ್ರದೇಶಗಳನ್ನು ಮಿಲಿಟಿಯವರು ಹಿಡಿದಿಟ್ಟುಕೊಂಡಿದ್ದಾರೆ. ಅದರ ಆಳ್ವಿಕೆಯ ನಿಯಂತ್ರಣ ದೆಹಲಿಯಲ್ಲಿದೆ. ಹೀಗಾಗಿ ಅಲ್ಲಿನ ಜನಕ್ಕೆ ಅದೊಂದು ರೀತಿಯ ಪರಕೀಯ ಆಡಳಿತದಂತೆಯೇ ತೋರುತ್ತಿದೆ. ಒಂದುವೇಳೆ ಭಾರತವನ್ನು ಭಾಷೆಗಳ ಆಧಾರದ ಮೇಲೆ ಗಣರಾಜ್ಯಗಳಾಗಿ ವಿಂಗಡಿಸಿದರೆ ಆಗ ಬಹುಶಃ ಇಂಗ್ಲೀಷ್‌ ಇಲ್ಲಿಂದ ಹೊರಟುಹೋಗುತ್ತದೆ. ಆದರದು ಸದ್ಯಕ್ಕಂತೂ ಸಾಧ್ಯವಿಲ್ಲ. ಇಂಗ್ಲೀಷ್‌ ಮಾತಾಡಬಲ್ಲವರ ಸಂಖ್ಯೆ ಇಂದಿಗೂ ಕಡಿಮೆಯಿದ್ದರೂ ಅದು ಚಲನಶೀಲತೆಯಿರುವ, ಅವಕಾಶಗಳನ್ನು ನೀಡುವ ಭಾಷೆಯಾಗಿ ಕೋರ್ಟುಗಳಲ್ಲಿ, ರಾಷ್ಟ್ರೀಯ ಮಾಧ್ಯಮದಲ್ಲಿ, ಕಾನೂನಿನಲ್ಲಿ, ವಿಜ್ಞಾನ, ತಂತ್ರಜ್ಞಾನ ಮತ್ತು ಅಂತರಾಷ್ಟ್ರೀಯ ಸಂವಹನದಲ್ಲಿ ಚಾಲ್ತಿಯಲ್ಲಿರುವ ಭಾಷೆಯಾಗಿದೆ. ಇದು ಸವಲತ್ತು ಮತ್ತು ಬಹಿಷ್ಕರಣದ ಭಾಷೆಯಾಗಿದೆ.

ಸವಲತ್ತುಗಳನ್ನು ಖಂಡಿಸಿದ ವಿಮೋಚನೆಯ ಭಾಷೆಯೂ ಆಗಿದೆ. ಬಿ.ಆರ್. ಅಂಬೇಡ್ಕರ್‌ ಅವರ Annihilation of Caste ಹಿಂದೂ ಜಾತಿಪದ್ಧತಿಯನ್ನು ವ್ಯಾಪಕವಾಗಿ ಖಂಡಿಸಿದ ಕೃತಿ. ಅತ್ಯಂತ ಹೆಚ್ಚು ಓದಲಾಗಿರುವ ಹಾಗೂ ವ್ಯಾಪಕವಾಗಿ ಅನುವಾದಿತಗೊಂಡಿರುವ ಈ ಕೃತಿಯನ್ನು ಇಂಗ್ಲೀಷಿನಲ್ಲಿ ಬರೆಯಲಾಗಿದೆ. ಯಾವುದೇ ಸಮಾಜವೂ ಕಂಡಿರದ ಕ್ರೂರವಾದ ಸಾಂಸ್ಥಿಕ ವ್ಯವಸ್ಥೆಯ ಅನ್ಯಾಯದ ಕುರಿತಾದ ಚರ್ಚೆಯನ್ನು ಹುಟ್ಟುಹಾಕಿತು. ಅಂಬೇಡ್ಕರರ ಬರಹಗಳನ್ನು ಅವರ ಸಮುದಾಯಕ್ಕೆ ಸೇರಿದವರು ಓದುವ ಭಾಷೆಯಲ್ಲಿ ಸವಲತ್ತು ಪಡೆದ ಜಾತಿಗೆ ಸೇರಿದವರು ಮಾಡಿದ್ದರೆ ಪರಿಸ್ಥಿತಿ ಬೇರೆಯಾಗುತ್ತಿತ್ತು. ಅವರಿಂದ ಸ್ಪೂರ್ತಿ ಪಡೆದ ದಲಿತ ಆಕ್ಟಿವಿಸ್ಟ್‌ಗಳಿಗೆ ಇಂದು ಹಿಂದುಳಿದ ಜಾತಿಗಳವರಿಗೆ ಉತ್ತಮ ಗುಣಮಟ್ಟದ ಇಂಗ್ಲೀಷ್‌ ಶಿಕ್ಷಣ ಕೊಡದೆ ಇರುವುದು(ರಾಷ್ಟ್ರೀಯತೆ ಅಥವ ವಸಾಹತುಶಾಹಿವಿರೋಧಿಯ ಹೆಸರಿನಲ್ಲಿ) ಒಂದಿಡೀ ಸಮುದಾಯ, ವರ್ಗದವರನ್ನು ಶಿಕ್ಷಣದಿಂದ ಅಥವ ಜ್ಞಾನದಿಂದ ಹಾಗೂ ಸಂಪತ್ತನ್ನು ಪಡೆಯುವುದರಿಂದ ವಂಚಿತರನ್ನಾಗಿಸುವ ಬ್ರಾಹ್ಮಣ ಸಂಪ್ರದಾಯದ ಮುಂದುವರಿಕೆಯಂತೆ ಕಾಣುತ್ತಿದೆ. ೨೦೧೧ರಲ್ಲಿ ದಲಿತ ವಿದ್ವಾಂಸ ಚಂದ್ರಭಾನು ಪ್ರಸಾದ್‌ ಅವರು ದಲಿತ ದೇವತೆಯೆಂದು ಇಂಗ್ಲೀಷ್‌ ದೇವತೆಯ ದೇವಾಲಯವನ್ನು ನಿರ್ಮಿಸಿ “ಇವಳು ದಲಿತರ ಪುನರುತ್ಥಾನದ ಸಂಕೇತ” ಎಂದರು. “ಏಣಿಯಲ್ಲಿ ಮೇಲೇರಿ ಎಂದೆಂದಿಗೂ ಸ್ವತಂತ್ರರಾಗಲು ಇಂಗ್ಲೀಷನ್ನು ಬಳಸೋಣ” ಎಂದು ಹೇಳಿದರು.

ಹೊಸ ಜಾಗತಿಕ ಆರ್ಥಿಕ ಕ್ರಮವು ಕೆಲವರನ್ನು ಬೆಳಕಿನೆಡೆಗೆ ತಳ್ಳಿದರೆ ಹಲವರನ್ನು ಕತ್ತಲಿಗೆ ತಳ್ಳುವಂತಹದ್ದಾಗಿದೆ. ಇಂಗ್ಲೀಷ್‌ “ಗೊತ್ತು” “ಗೊತ್ತಿಲ್ಲ” ಎನ್ನುವುದೇ ಈ ತಳ್ಳುವಿಕೆಯ ಹಿಂದೆ ಮಹತ್ತರ ಪಾತ್ರವನ್ನು ವಹಿಸುತ್ತದೆ.

ಇದನ್ನೇ ಆಧಾರವಾಗಿಸಿಕೊಂಡು ಹಿಂದೂ ರಾಷ್ಟ್ರೀಯತಾವಾದಿ ಆಡಳಿತ ವ್ಯವಸ್ಥೆಯು ತನ್ನ “ಒಂದು ದೇಶ, ಒಂದು ಧರ್ಮ, ಒಂದು ಭಾಷೆ” ಎನ್ನುವ ಮನಸ್ಥಿತಿಯನ್ನು ಕಸಿಮಾಡಲು ಯತ್ನಿಸುತ್ತಿದೆ. ೧೯೨೦ರಲ್ಲಿ ಭಾರತದಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಘೋಷಣೆ “ಹಿಂದಿ-ಹಿಂದೂ-ಹಿಂದೂಸ್ಥಾನ”. ವಿಪರ್ಯಾಸವೆಂದರೆ ಈ ಮೂರು ಪದಗಳು ಅರೆಬಿಕ್‌ ಮತ್ತು ಪರ್ಷಿಯನ್‌ ಭಾಷೆಯಿಂದ ಎರವಲು ಪಡೆದ ಪದಗಳು. “ಅಲ್‌-ಹಿಂದ್‌ – ಹಿಂದೂಸ್ಥಾನ. “ಸ್ಥಾನ” ಎನ್ನುವುದನ್ನು ಸಂಸ್ಕೃತದ “ಸ್ಥಾನ” ಎಂದರೆ “ಸ್ಥಳ” ಎಂದುಕೊಂಡು ಗೊಂದಲಕ್ಕೀಡಾಗಬೇಡಿ. ಇದು ಸಿಂಧೂ ನದಿಯ ಪೂರ್ವಕ್ಕಿರುವ ಒಂದು ಸ್ಥಳ. “ಹಿಂದೂಗಳು” ಎಂದರೆ ಅಲ್ಲಿದ್ದ ಜನರು (ಅದು ಧರ್ಮವಲ್ಲ). ಉಳಿದ ದೇಶಗಳ ಅನುಭವದಿಂದ ಆರ್‌ಎಸ್‌ಎಸ್‌ ಪಾಠ ಕಲಿಯಬಹುದೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಇಸ್ಲಾಮಿಕ್‌ ರಿಪಬ್ಲಿಕ್‌ ಪೂರ್ವ ಪಾಕಿಸ್ತಾನದಲ್ಲಿದ್ದ ಬಂಗಾಳಿ ಮಾತಾಡುತ್ತಿದ್ದ ಜನರ ಮೇಲೆ ಉರ್ದುವನ್ನು ಹೇರಲು ಪ್ರಯತ್ನಿಸಿದಾಗ ಅದು ಅರ್ಧದಷ್ಟು ಪ್ರದೇಶವನ್ನು ಕಳೆದುಕೊಳ್ಳಬೇಕಾಯಿತು. ಶ್ರೀಲಂಕಾದಲ್ಲಿ ಅಲ್ಲಿನ ತಮಿಳರ ಮೇಲೆ ಸಿಂಹಳವನ್ನು ಹೇರಲು ಯತ್ನಿಸಿದ್ದರ ಫಲವಾಗಿ ದಶಕಗಳ ಕಾಲ ಅಂತರ್ಯುದ್ಧ ನಡೆದು ರಕ್ತದಕೋಡಿ ಹರಿಯಿತು.

ಇಷ್ಟೆಲ್ಲ ಹೇಳಲು ಕಾರಣವೇನೆಂದರೆ ನಾವು ಬದುಕುತ್ತಿರುವ ಹಾಗೂ ಕೆಲಸ ಮಾಡುತ್ತಿರುವ (ಬರವಣಿಗೆಯಲ್ಲಿ ತೊಡಗಿರುವ) ಭೂಮಿ ಬಹಳ ಸಂಕೀರ್ಣವಾದದ್ದು. ಇಲ್ಲಿ ಯಾವುದು ಇದಮಿತ್ಥಂ ಎನ್ನುವಂತೆ ಎಂದೂ ನಿರ್ಧರಿತವಾಗಿಲ್ಲ. ಅದರಲ್ಲೂ ಇದು ಭಾಷೆಯ ಪ್ರಶ್ನೆಯಲ್ಲ ಭಾಷೆಗಳ ಪ್ರಶ್ನೆ.

ಸುಸಾನ್‌ ಸೊಂಟಾಗ್‌ ೨೦೦೨ರಲ್ಲಿ ಡಬ್ಲ್ಯೂ.ಜಿ. ಸೆಬಾಲ್ಡ್‌ ಉಪನ್ಯಾಸವನ್ನು ನೀಡಿದಾಗ ಅವರಿಗೆ ಈ ಸಂಕೀರ್ಣತೆಯ ಅರಿವಿತ್ತು. ಆದ್ದರಿಂದಲೇ ಆಕೆ ತನ್ನ ಭಾಷಣವನ್ನು “The World as India: Translation as a Passport within the Community of Literature” ಎಂದು ಕರೆದರು. ನಾನೀಗ “ಪಾಸ್‌ಪೋರ್ಟ್‌ಗಳಿಲ್ಲದ ಸಮುದಾಯದೊಳಗೆ ಬರವಣಿಗೆಯ ತಂತ್ರವಾಗಿ ಅನುವಾದ” ಎಂದು ಮಾತನಾಡಲು ಬಯಸುತ್ತೇನೆ.

The God of Small Things ಪ್ರಕಟಗೊಂಡ ಇಪ್ಪತ್ತು ವರ್ಷಗಳ ನಂತರ ಎರಡನೆಯ ಕಾದಂಬರಿ The Ministry of Utmost Happiness ಬರೆದು ಮುಗಿಸಿದೆ. ಈ ಕಾದಂಬರಿಗೆ ಯಾರಾದರೂ ಶತ್ರುಗಳಿದ್ದರೆ ಅದು ಕಾದಂಬರಿಯ ಐಡಿಯಾ “ಒಂದು ದೇಶ, ಒಂದು ಧರ್ಮ, ಒಂದು ಭಾಷೆ.” ಮುಖಪುಟದಲ್ಲಿ ಲೇಖಕಿಯ ಹೆಸರಿನ ಬದಲು “ಅನುವಾದ ಆರುಂಧತಿ ರಾಯ್”‌ ಎಂದು ಬರೆಯಬೇಕೆನಿಸಿತು. ಈ ಕಾದಂಬರಿಯನ್ನು ಇಂಗ್ಲೀಷಿನಲ್ಲಿ ಬರೆದನಾದರೂ ಅದನ್ನು ಹಲವು ಭಾಷೆಗಳಲ್ಲಿ ಕಲ್ಪಿಸಿಕೊಂಡಿದ್ದೆ. ಇಲ್ಲಿ ಅನುವಾದವೆನ್ನುವುದು ಬರವಣಿಗೆಯ ಕೇಂದ್ರವಾಗಿತ್ತು (ಅಸ್ಪಷ್ಟವಾದ ಇಲ್ಲವೇ ಪದಗಳ ಅನುವಾದದ ಕುರಿತು ಹೇಳುತ್ತಿಲ್ಲ).  ಈ ಕಾದಂಬರಿಯನ್ನು ಯಾವುದೇ ಭಾಷೆಯಲ್ಲಿ ಬರೆದಿದ್ದರೂ ಇದರಲ್ಲಿನ ನಿರ್ದಿಷ್ಟ ನಿರೂಪಣೆಯಲ್ಲಿನ ನಿರ್ದಿಷ್ಟ ಜನರ ನಿರ್ದಿಷ್ಟ ಜಗತ್ತನ್ನು ಹಲವು ಭಾಷೆಗಳಲ್ಲಿ ಕಲ್ಪಿಸಿಕೊಳ್ಳಬೇಕಿತ್ತು. ಈ ಕತೆಯು ಭಾಷೆಗಳ ಕಡಲ ನಡುವಿನಿಂದ ಹುಟ್ಟಿದೆ. ಇಲ್ಲಿನ ಜೀವಜಗತ್ತಿನಲ್ಲಿ – ಅಧಿಕೃತ ಭಾಷೆಗಳೆಂಬ ಮೀನುಗಳಿವೆ, ಅನಧಿಕೃತವೆನ್ನುವ ಆಡುಭಾಷೆಯ ಮೃದ್ವಂಗಿಗಳಿವೆ ಹಾಗೂ ಹೊಳೆಹೊಳೆಯುವ ಪದವೆನ್ನುವ ಮೀನುಗಳ ಸಮೂಹವಿದೆ. ಇವೆಲ್ಲವೂ ಒಟ್ಟಾಗಿ ಈಜಾಡುತ್ತವೆ. ಕೆಲವು ಪರಸ್ಪರ ಸ್ನೇಹಪರವಾಗಿದ್ದರೆ, ಕೆಲವು ಆಕ್ರಮಣಕಾರಿಯಾಗಿ ಪರಭಕ್ಷಕಗಳಾಗಿವೆ.  ಕಡಲು ಅವೆಲ್ಲವನ್ನೂ ಪೊರೆಯುತ್ತಿದೆ. The Ministry ಕಾದಂಬರಿಯಲ್ಲಿನ ಜನರಂತೆ ಅವೆಲ್ಲವೂ ಪರಸ್ಪರ ಅರಿಯಲು ಯತ್ನಿಸುತ್ತ ಒಟ್ಟಿಗೆ ಬಾಳಬೇಕು ಬೇರೆ ಆಯ್ಕೆಗಳಿಲ್ಲ.

ಅನುವಾದವೆನ್ನುವುದು ಬಹುಭಾಷಾವಾದಿಗಳ ಉನ್ನತಮಟ್ಟದ ಸಾಹಿತ್ಯಕಲೆ ಮಾತ್ರವಲ್ಲ. ಅನುವಾದವೆನ್ನುವುದು ಸಾಮಾನ್ಯ ಜನರಿಗೆ ದಿನನಿತ್ಯದ ಚಟುವಟಿಕೆಗಳಲ್ಲಿ ಬದುಕುಳಿಯುವ ಸಾಧನವಾಗಿದೆ. ಹಾಗಾಗಿ ಈ ಕಾದಂಬರಿಯಲ್ಲಿ ಹಲವು ಭಾಷೆಗಳಿವೆ. ಲೇಖಕಿ ಮಾತ್ರವಲ್ಲ ಪಾತ್ರಗಳು ಕೂಡ ಅಪೂರ್ಣತೆಯೆಂಬ ಕಡಲಿನಲ್ಲಿ ಈಜಾಡುತ್ತವೆ. ಅವು ತಮಗಾಗಿ, ಪರಸ್ಪರರಿಗಾಗಿ ನಿರಂತರವಾಗಿ ಅನುವಾದ ಮಾಡುತ್ತಿರುತ್ತಾರೆ. ಅವರು ಹಲವು ಭಾಷೆಗಳನ್ನು ಮಾತನಾಡುತ್ತಾರೆ. ಒಂದೇ ಭಾಷೆ ಮಾತನಾಡಿದ ಮಾತ್ರಕ್ಕೆ ಪರಸ್ಪರ ಅರ್ಥಮಾಡಿಕೊಂಡಿರುವುದಿಲ್ಲ ಎನ್ನುವುದನ್ನು ಅರಿತಿದ್ದಾರೆ.

The Ministry of Utmost Happiness  ೪೮ ಭಾಷೆಗಳಿಗೆ ಅನುವಾದಗೊಂಡಿದೆ. ಪ್ರತಿಯೊಬ್ಬ ಅನುವಾದಕರು ಈ ಕಾದಂಬರಿಯಲ್ಲಿನ ಭಾಷೆಯೊಂದಿಗೆ ಹೊಡೆದಾಡಬೇಕಾಯಿತು. ಹಲವು ಬಗೆಯ ಇಂಗ್ಲೀಷ್‌ಗಳನ್ನು (ಇಂಗ್ಲೀಷಿನ ಸಾಮಾಜಿಕ ಉಪಭಾಷೆಗಳು ಎನ್ನುವುದು ಸರಿಯಾದ ಪದವಾದರೂ ಇಂಗ್ಲೀಷ್‌ಗಳು ಎಂದೇ ಕೆಟ್ಟದಾಗಿ ಹೇಳುವೆ) ಬಳಸಿ ಒಂದು ಪದ ಸೃಷ್ಟಿಸಿದರೆ ಅದನ್ನು ಮತ್ತೊಂದು ಭಾಷೆಗೆ ಅನುವಾದ ಮಾಡುವಾಗ ಅದೇ ರೀತಿ ಮಾಡಬೇಕಾಗುತ್ತದೆ. ಇಂಗ್ಲೀಷನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ಯಾವುದೇ ಭಾಷೆಯ ಪದ ಇಲ್ಲವೇ ವಾಕ್ಯಗಳನ್ನು ಬಳಸುವುದಿಲ್ಲ. ಬದಲಿಗೆ ಇಂತಹವುಗಳನ್ನು ಉದ್ದೇಶಪೂರ್ವಕವಾಗಿಯೇ ಭಾಷೆಗಳ ನಡುವೆ ಸಾಂಗತ್ಯವನ್ನು ರೂಪಿಸಲೆಂದೇ ಬಳಸುತ್ತೇನೆ.

೪೮ ಅನುವಾದಗಳಲ್ಲಿ ಉರ್ದು ಮತ್ತು ಹಿಂದಿಯ ಅನುವಾದಗಳು ಸೇರಿವೆ. ಈ ಎರಡು ಭಾಷೆಗಳಲ್ಲಿ ಬೇರೆಬೇರೆಯಾಗಿ ಪುಸ್ತಕಗಳನ್ನು ಪ್ರಕಟಿಸಿದ ಪ್ರಕ್ರಿಯೆಯೇ The Ministry ಕತೆಯ ಭಾಗ. ಈ ಎರಡೂ ಭಾಷೆಗಳಿಗೆ ಅನುವಾದವಾಗಿದ್ದು ಒಂದು ರೀತಿಯಲ್ಲಿ ಮೂಲಭಾಷೆಯಲ್ಲಿ ಕೃತಿ ಪ್ರಕಟವಾದಂತಾಯಿತು. ಈ ಎರಡೂ ಭಾಷೆಯ ಅನುವಾದಕರಿಗೂ ಭಾಷೆಯ ತೊಡಕು ಉಂಟಾಯಿತು. ಉದಾಹರಣೆಗೆ : The Ministryಯಲ್ಲಿ ಮನುಷ್ಯನ ದೇಹ, ಅಂಗಗಳು ಬಹಳ ಮುಖ್ಯವಾದದ್ದು. ಪ್ರಪಂಚದ ಬಹಳ ಸುಮಧುರ ಭಾಷೆ, ಪ್ರೀತಿಯ ಕುರಿತು ಬೇರೆ ಯಾವುದೇ ಭಾಷೆಗಳಿಗಿಂತ ಹೆಚ್ಚು ಪದಗಳನ್ನು ಹೊಂದಿರುವ ಭಾಷೆಯಾದ ಉರ್ದುವಿನಲ್ಲಿ ಯೋನಿ ಎನ್ನುವುದಕ್ಕೆ ಪದವಿಲ್ಲ.  ಅರೆಬಿಕ್‌ನ ಫರ್ಜ್‌ ಎನ್ನುವಂತಹ ಪದವಿದೆ. ಆದರೆ ಅದು ಹೆಚ್ಚಾಗಿ ಬಳಕೆಯಲ್ಲಿಲ್ಲದ ಪದ. “ಗುಪ್ತ ಭಾಗ”, “ಉಸಿರಾಟದ ರಂಧ್ರ”, “ಕಿಂಡಿ”, “ಗರ್ಭಾಶಯದ ಹಾದಿ” ಎನ್ನುವಂತಹ ಬಳಕೆಗಳಿವೆ. ಹೆಚ್ಚಾಗಿ ಬಳಸುವುದು ಔರತ್‌ ಕಿ ಶರ್ಮಾಗಹ್‌ ಅಂದರೆ ಹೆಣ್ಣಿನ ಲಜ್ಜಾ ಸ್ಥಳ. ಲ್ಯಾಟಿನ್‌ ಭಾಷೆಯಲ್ಲಿ ಇದಕ್ಕೆ ಪುಡೆಂಡಾ ಎಂದರೆ “ಅವಮಾನವನ್ನು ಅನುಭವಿಸುವ ಜಾಗ” ಎಂಬ ಪದವಿದೆ. ನನ್ನ ಅನುವಾದಕರು ಡ್ಯಾನಿಷ್‌ ಭಾಷೆಯಲ್ಲಿ “lips of shame”  ಎನ್ನುವ ಪ್ರಯೋಗವಿದೆ ಎಂದು ತಿಳಿಸಿದರು.

The Ministry of Utmost Happiness ಕಾದಂಬರಿಯ “ಅನುವಾದ ಮಾಡಿದ ನಂತರ” ಏನಾಯಿತು ಎಂದು ಮಾತಾಡುವುದಕ್ಕಿಂತ “ಅನುವಾದಕ್ಕೆ ಮುನ್ನ” ಪಟ್ಟ ಕಷ್ಟಗಳ ಕುರಿತು ಹೇಳಬೇಕೆಂದಿದ್ದೇನೆ. ಇವು ಯಾವುದೂ ಯೋಜಿತವಾದದ್ದಲ್ಲ. ಅನ್ನಿಸಿದಾಗ ಬರೆದೆ ಅಷ್ಟೇ.  ರಕ್ತಸಿಕ್ತ ಇತಿಹಾಸ, ಭಾಷೆಯ ಜಗಳಗಳು ಈ ಎಲ್ಲ ಸುಳಿಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಮೊದಲು ಇಲ್ಲಿಯವರೆಗಿನ ನಾನು ಹಾದುಬಂದ ಆ ಭಾಷೆಗಳು, ಭೂಪ್ರದೇಶಗಳ ಕುರಿತು ಚಿಕ್ಕದಾಗಿ ಹೇಳಿಬಿಡುತ್ತೇನೆ.

ನನ್ನಮ್ಮ ‌ಮಲೆಯಾಳಂ ಮಾತಾಡುವ ಕೇರಳದ ಸಿರಿಯನ್‌ ಕ್ರಿಶ್ಚಿಯನ್. ನನ್ನಪ್ಪ ಬಂಗಾಳಿ. ಕಲ್ಕತ್ತಾದಲ್ಲಿ ಅವರಿಬ್ಬರೂ ಭೇಟಿಯಾದರು. ಆಗ ಅಪ್ಪ ಅಸ್ಸಾಂನ ಟೀ ತೋಟದಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರಿಗೂ ಗೊತ್ತಿದ್ದ ಭಾಷೆ ಇಂಗ್ಲೀಷ್.‌ ನಾನು ಮೇಘಾಲಯದ ಶಿಲ್ಲಾಂಗ್‌ನ ವೆಲ್ಶ್‌ ಮಿಷನ್‌ ಹಾಸ್ಪಿಟಲ್‌ನಲ್ಲಿ ಹುಟ್ಟಿದೆ. ಖಾಸಿಗಳು ಶಿಲ್ಲಾಂಗ್‌ನ ಪ್ರಮುಖ ಬುಡಕಟ್ಟು ಜನಾಂಗ. ಅವರ ಭಾಷೆ ಕಾಂಬೋಡಿಯ ಮತ್ತು ಮೊನ್‌ನೊಂದಿಗೆ ಸಂಬಂಧ ಹೊಂದಿದೆ. ಭಾರತದಲ್ಲಿನ ಉಳಿದೆಡೆಗಳಲ್ಲಿ ಮಾಡಿದಂತೆ ಮಿಷನರಿಗಳು ಬೈಬಲನ್ನು ಸ್ಥಳೀಯ ಭಾಷೆಗಳಲ್ಲಿ ಮುದ್ರಿಸಲು ಮೌಖಿಕ ಭಾಷೆಗಳಿಗೆ ಲಿಪಿಯನ್ನು ರೂಪಿಸಲು ಮುಂದಾದರು. ಖಾಸಿ ಭಾಷೆಯ ಕಾಗುಣಿತವು ವೆಲ್ಷ್‌ ಭಾಷೆಯಂತೆಯೇ ಇರುವುದರಿಂದ ತಮ್ಮ ಯೋಜನೆಯ ಭಾಗವಾಗಿ ಖಾಸಿ ಭಾಷೆಯನ್ನು ರೋಮನ್‌ ಲಿಪಿಯೊಂದಿಗೆ ಬಳಸಲು ಮುಂದಾದರು.

ಬಾಲ್ಯದ ಮೊದಲ ಎರಡು ವರ್ಷಗಳನ್ನು ಅಸ್ಸಾಂನಲ್ಲಿ ಕಳೆದೆ. ನಾನು ಹುಟ್ಟುವುದಕ್ಕೂ ಮೊದಲೇ ಅಪ್ಪ-ಅಮ್ಮನ ಸಂಬಂಧ ಹಾಳಾಗಿತ್ತು. ಅವರು ಜಗಳವಾಡುವಾಗೆಲ್ಲ ನನ್ನನ್ನು ಟೀ ಎಸ್ಟೇಟಿನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಕ್ವಾರ್ಟರ್ಸ್‌ಗೆ ಕಳುಹಿಸಿಬಿಡುತ್ತಿದ್ದರು. ಅಲ್ಲಿಯೇ ನಾನು ಮೊದಲು ಮಾತಾಡಲು ಕಲಿತದ್ದು ಅಂತ ಅಮ್ಮ ಹೇಳುತ್ತಾಳೆ. ಅದೊಂದು ರೀತಿಯ ಹಿಂದಿ. ಈ ಕೆಲಸಗಾರರು ಭಾರತದ ಪೂರ್ವ ಹಾಗೂ ಮಧ್ಯ ಭಾಗದ ಬುಡಕಟ್ಟಿಗೆ ಸೇರಿದವರು. ಹಿಂದಿ, ಅಸ್ಸಾಮಿ ಮತ್ತು ಅವರ ಭಾಷೆಗಳು ಒಂದರೊಳಗೊಂದು ಬೆರೆತು ʼಬಗನಿಯʼ ಅಂದರೆ “ತೋಟದ ಭಾಷೆ” ಎನ್ನುವ ಹೊಸ ಭಾಷೆಯೇ ಸೃಷ್ಟಿಯಾಗಿತ್ತು. ಬಗನಿಯ ನಾನು ಮಾತಾಡಲು ಕಲಿತ ಮೊದಲ ಭಾಷೆ.

ಅಪ್ಪ ಅಮ್ಮ ಬೇರೆಯಾದಾಗ ನನಗೆ ಮೂರು ವರ್ಷ ಕೂಡ ಆಗಿರಲಿಲ್ಲ. ಅಮ್ಮನೊಂದಿಗೆ ನಾನು ಮತ್ತು ನನ್ನಣ್ಣ ಮೊದಲು ತಮಿಳುನಾಡಿನ ಊಟಿಗೆ ಹೋದೆವು. ನಂತರ ಅಲ್ಲಿಂದ ಕೇರಳದ ಅಯ್ಮನಂನಲ್ಲಿದ್ದ ಅಜ್ಜಿಯ ಮನೆಗೆ ಹೋದೆವು. ಇಲ್ಲಿಯೇ The God of Small Things ನ ಕತೆ ನಡೆಯುವುದು. ಬಗಿನಿಯ ಭಾಷೆಯನ್ನು ಮರೆತುಬಿಟ್ಟೆ. ಹಲವು ವರ್ಷಗಳ ನಂತರ ಮೊದಲ ಸಲ ನನ್ನಪ್ಪನನ್ನು ಭೇಟಿಯಾದಾಗ ಅವರು ಕೇಳಿದ ಮೊದಲ ಪ್ರಶ್ನೆ “ಈಗಲೂ ಆ ಕೆಟ್ಟ ಭಾಷೆ ಬಳಸ್ತಿಯಾ?” ಅವರು ಯಾವುದರ ಬಗ್ಗೆ ಕೇಳುತ್ತಿದ್ದಾರೆ ನನಗರ್ಥವಾಗಲಿಲ್ಲ. “ಅದೆಷ್ಟು ಕೆಟ್ಟಭಾಷೆ ಮಾತಾಡುತ್ತಿದ್ದೆ. ಮಹಾಬಾಯಿಬಡುಕಿ ಆಗಿದ್ದೆ,” ಎಂದು ಹೇಳುತ್ತಾ ಒಮ್ಮೆ ಅವರು ನನ್ನ ಕೈಯನ್ನು ಸಿಗರೇಟಿನಿಂದ ಸುಟ್ಟಾಗ ಸಿಟ್ಟಿನಿಂದ ಅವರನ್ನು “ಚೂತಿಯಾ” ಎಂದು ಬೈದಿದ್ದೆನಂತೆ. ಈ ಪದದ ಮೂಲ ಲ್ಯಾಟಿನ್‌ ಭಾಷೆಯ ಪುಡೆಂಡ.

ಅಮ್ಮ ಕೊಟ್ಟಾಯಂನ ರೋಟರಿ ಕ್ಲಬ್‌ಗೆ ಸೇರಿದ ಸಣ್ಣ ಸಭಾಂಗಣವನ್ನು ಬಾಡಿಗೆಗೆ ತೆಗೆದುಕೊಂಡು ತನ್ನದೇ ಶಾಲೆಯನ್ನು ಆರಂಭಿಸಿದಳು. ನನಗಾಗ ಐದು ವರ್ಷ. ನಾವಿದ್ದಲ್ಲಿಂದ ಅಲ್ಲಿಗೆ ಬಸ್ಸಿನಲ್ಲಿ ಹೋಗಬೇಕಿತ್ತು. ಪ್ರತಿ ಸಂಜೆ ಬೆಳಿಗ್ಗೆ ಹಾಕಿದ ಕುರ್ಚಿ, ಮೇಜುಗಳನ್ನು ಎತ್ತಿಟ್ಟು ಬರುತ್ತಿದ್ದೆವು. ನಾನು ಬೆಳೆದ ಸಾಂಸ್ಕೃತಿಕ ಪರಿಸರದಲ್ಲಿ ಶೇಕ್ಸಪಿಯರ್‌, ಕಿಪ್ಲಿಂಗ್‌, ಕಥಕ್ಕಳಿ, ಸಂಗೀತ ಜೊತೆಗೆ ಮಲೆಯಾಳಂ, ತಮಿಳು ಸಿನಿಮಾಗಳಿದ್ದವು. ಹದಿಹರೆಯಕ್ಕೆ ಕಾಲಿಡುವುದಕ್ಕೂ ಮೊದಲೇ ಶೇಕ್ಸ್‌ಪಿಯರ್‌ನ ನಾಟಕದ ಉದ್ದುದ್ದ ಭಾಗಗಳನ್ನು, ಮಲೆಯಾಳಿಗಳ ರೀತಿಯಲ್ಲಿ ಕ್ರಿಶ್ಚಿಯನ್‌ ಪ್ರಾರ್ಥನೆಗಳನ್ನು ಹೇಳುತ್ತಿದ್ದೆ. ಜೊತೆಗೆ ತಮಿಳಿನ ಜೀಸಸ್‌ ಎನ್ನುವ ಚಿತ್ರದ ಪಾತ್ರವೊಂದರ ಮಿಮಿಕ್ರಿ ಮಾಡಬಲ್ಲವಳಾಗಿದ್ದೆ.

ಅಮ್ಮನ ಶಾಲೆ ಚೆನ್ನಾಗಿ ಅಭಿವೃದ್ಧಿ ಹೊಂದಿತು. ಅಮ್ಮ ನನ್ನ ಭವಿಷ್ಯದ ದೃಷ್ಟಿಯಿಂದ ನಾನು ಯಾವಾಗಲೂ ಇಂಗ್ಲೀಷಿನಲ್ಲಿ ಮಾತ್ರ ಮಾತಾಡಬೇಕೆಂದು ತಾಕೀತು ಮಾಡಿದಳು. ಅಕಸ್ಮಾತ್‌ ಮಲೆಯಾಳಂನಲ್ಲಿ ಮಾತಾಡುತ್ತಿರುವಾಗ ಅಮ್ಮನ ಕೈಗೆ ಸಿಕ್ಕಿಬಿದ್ದರೆ I will speak in English, I will speak in English ಅಂತ ಸಾವಿರ ಸಲ ಬರಿಯೋ ಹಾಗೆ ಮಾಡುತ್ತಿದ್ದಳು. ಹತ್ತನೇ ವಯಸ್ಸಿಗೆ ತಮಿಳುನಾಡಿನಲ್ಲಿದ್ದ ಸರ್‌ ಹೆನ್ರಿ ಲಾರೆನ್ಸ್‌ ಸ್ಥಾಪಿಸಿದ ಬೋರ್ಡಿಂಗ್‌ ಸ್ಕೂಲಿಗೆ ಸೇರಿದೆ. ಅವನು ೧೮೫೭ರಲ್ಲಿ ನಡೆದ “ಸಿಪಾಯಿ ದಂಗೆ”ಯಲ್ಲಿ ಮಹತ್ವದ ಪಾತ್ರ ವಹಿಸಿದ ಬ್ರಿಟೀಷ್‌ ಅಧಿಕಾರಿ. ಬೋರ್ಡಿಂಗ್‌ ಸ್ಕೂಲಿನಲ್ಲಿ ಮಲೆಯಾಳಂ, ಇಂಗ್ಲೀಷ್‌ ಜೊತೆಗೆ ಹಿಂದಿ ಸೇರಿಕೊಂಡಿತು. ನಮ್ಮ ಹಿಂದಿ ಟೀಚರ್‌ ಮಲೆಯಾಳಿ. ಅವರು ಹೇಳಿಕೊಟ್ಟ ಹಿಂದಿ ಒಂದು ತರಹ ಮಲೆಯಾಳಂ ರೀತಿ ಇತ್ತು. ನಮಗೇನೂ ಅರ್ಥವಾಗಲಿಲ್ಲ. ಹಾಗಾಗಿ ನಾವು ಕಲಿತದ್ದು ಕಡಿಮೆ.

ಶಾಲೆ ಮುಗಿಯೋ ಹೊತ್ತಿಗೆ ನನಗೆ ಹದಿನಾರು ವರ್ಷ. ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಸೇರಲು ಒಬ್ಬಳೇ ದೆಹಲಿಯ ರೈಲು ಹತ್ತಿದೆ. ಆಗ ನನಗೆ ಗೊತ್ತಿದ್ದದ್ದು ಒಂದೇ ಒಂದು ಹಿಂದಿ ವಾಕ್ಯ. ಸ್ವಾಮಿಭಕ್ತ ಕುತಿಯಾ ಎನ್ನುವ ಪಾಠದಲ್ಲಿದ್ದ “ಸುಬಹ್‌ ಉಟ್‌ ಕೆ ದೇಖಾ ತೋ ಕುತಿಯಾ ಮರಿ ಪಡಿ ತೀ” ಎನ್ನುವ ವಾಕ್ಯ ಅದೇಕೋ ನೆನಪಿನಲ್ಲಿ ಉಳಿದಿತ್ತು. ತನ್ನ ಯಜಮಾನನ ಮಗುವನ್ನು ಹಾವಿನಿಂದ ರಕ್ಷಿಸಲು ಹೋಗಿ ಸತ್ತ ನಾಯಿಯ ಕತೆಯದು. ದೆಹಲಿಯ ಆರಂಭದ ದಿನಗಳಲ್ಲಿ ಯಾವುದೇ ಮಾತುಕತೆಯಾಗಲಿ, ಪ್ರಶ್ನೆಯಾಗಲಿ ಆ ವಾಕ್ಯವೊಂದೇ ನನ್ನ ಪ್ರತಿಕ್ರಿಯೆಯಾಗಿತ್ತು. ಕಾಲಕಳೆದಂತೆ ಹಿಂದಿ ಕಲಿತೆ.

ಆ ಆರ್ಕಿಟೆಕ್ಚರ್‌ ಸ್ಕೂಲಿನ ಹಾಸ್ಟೆಲ್ಲಿನಲ್ಲಿ ಬಂಗಾಳಿ, ಅಸ್ಸಾಮಿ, ನಾಗಾ, ಮಣಿಪುರಿ, ನೇಪಾಳಿ, ಸಿಕ್ಕಿಂ, ತಮಿಳರು, ಮಲೆಯಾಳಿಗಳು, ಆಫ್ಘನ್ನರು ಹೀಗೆ ಬೇರೆ ಕಡೆಗಳಿಂದ ಬಂದಿದ್ದ ಹಿಂದಿಯೇತರ ಮಂದಿ ಹೆಚ್ಚಿದ್ದರು. ನನ್ನ ಮೊದಲ ರೂಂಮೇಟ್‌ ಕಾಶ್ಮೀರಿ, ಎರಡನೆಯವಳು ನೇಪಾಳಿ. ನನ್ನ ಕ್ಲೋಸ್‌ ಫ್ರೆಂಡ್‌ ಒರಿಸ್ಸಾದವನು. ಅವನು ಹಿಂದಿಯಲ್ಲಾಗಲಿ ಇಂಗ್ಲೀಷಿನಲ್ಲಾಗಲಿ ಮಾತಾಡುತ್ತಿರಲಿಲ್ಲ. ಮೊದಲ ವರ್ಷ ನಾವು ಪರಸ್ಪರ, ಸ್ಕೆಚ್‌ಗಳು, ಕಾರ್ಟೂನುಗಳು, ಮ್ಯಾಪುಗಳನ್ನು ಖಾಲಿಕವರಿನ ಹಿಂಬಂದಿಯಲ್ಲಿ ಬರೆದು ಅವುಗಳ ಮೂಲಕವೇ ಸಂವಹನ ಮಾಡುತ್ತಿದ್ದೆವು. ಇದರ ನಡುವೆಯೇ ನಾವೆಲ್ಲ ಪರಸ್ಪರ ದೆಹಲಿ ವಿಶ್ವವಿದ್ಯಾಲಯದ ಹಿಂದಿ, ಇಂಗ್ಲೀಷ್‌ ಮಿಶ್ರ ಭಾಷೆಯನ್ನು ಕಲಿತೆವು. ಅದನ್ನೇ ನನ್ನ ಮೊದಲ ಚಿತ್ರಕತೆ In Which Annie Gives It Those Onesನಲ್ಲಿ ಬಳಸಿದೆ. ಸಿಗರೇಟು ಸೇದುವ, ಬೆಲ್‌ ಬಾಟಂ ಪ್ಯಾಂಟ್‌ ಹಾಕಿಕೊಳ್ಳುವ ೧೯೭೦ರ ಕಾಲದ ಕಾಲ್ಪನಿಕ ಕತೆ ಆರ್ಕಿಟೆಕ್ಚರ್‌ ಸ್ಕೂಲಿನಲ್ಲಿ ನಡೆಯುತ್ತದೆ. ಆನಿ ಎನ್ನುವುದು ತನ್ನ ಅಂತಿಮ ವರ್ಷವನ್ನು ನಾಲ್ಕನೇ ಸಲ ಓದುತ್ತಿರುವ ಆನಂದ್‌ ಗ್ರೋವರ್‌ ಎನ್ನುವ ವಿದ್ಯಾರ್ಥಿಯೊಬ್ಬನ ಅಡ್ಡಹೆಸರು. “Giving it those ones” ಅಂದರೆ “ಅವನು ಅಥವ ಅವಳು ಮಾಡಿದ್ದನ್ನೇ ಮಾಡುವುದು” ಎಂದರ್ಥ. ಆನಿ ಆ ರೀತಿಯಲ್ಲಿ ಮಾಡುತ್ತಿದ್ದದ್ದು ಗ್ರಾಮೀಣ ಆರ್ಥಿಕತೆಯನ್ನು ಪುನರುತ್ಥಾನಗೊಳಿಸಲು ಹಳ್ಳಿಯಿಂದ ನಗರಗಳಿಗೆ ವಲಸೆ ತಪ್ಪಿಸಲು ಭಾರತದ ರೈಲ್ವೇ ಹಳಿಗಳ ಪಕ್ಕದಲ್ಲಿ ಹಣ್ಣಿನ ಮರಗಳನ್ನು ನೆಡುವುದು. ರೈಲ್ವೇ ಹಳಿಗಳ ಪಕ್ಕದಲ್ಲಿಯೇ ಏಕೆ ಎಂದರೆ “ಸಾಮಾನ್ಯ ಜನತೆ ರೈಲ್ವೇ ಹಳಿಗಳ ಪಕ್ಕ ಮಲವಿಸರ್ಜನೆ ಮಾಡುತ್ತಾರೆ ಅಲ್ಲವೇ? ಹಾಗಾಗಿ ಅಲ್ಲಿನ ಮಣ್ಣು ಫಲವಾಗಿರುತ್ತದೆ ಕಣ್ರೀ.” ಈ ಜೀರೋ ಬಜೆಟ್‌ ಚಿತ್ರವನ್ನು ಪ್ರದೀಪ್‌ ಕೃಷ್ಣನ್‌ ನಿರ್ದೇಶಿಸಿದ್ದರು.

ದೂರದರ್ಶನದಲ್ಲಿ ಒಮ್ಮೆ ಮಾತ್ರ ಆ ಚಿತ್ರ ಪ್ರದರ್ಶಿತವಾಯಿತು. ಆ ಚಿತ್ರಕ್ಕೆ ಉತ್ತಮ ಚಿತ್ರಕತೆ ಮತ್ತು ಭಾರತೀಯ ಸಂವಿಧಾನದ ಪರಿಚ್ಛೇದ VIIIರಲ್ಲಿ ನಮೂದಿಸಲಾದ ಭಾಷೆಗಳನ್ನು ಹೊರತುಪಡಿಸಿದ ಭಾಷೆಗಳಲ್ಲಿನ ಅತ್ಯುತ್ತಮ ಚಿತ್ರ  ಎನ್ನುವ ಎರಡು ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕವು. (೨೦೧೫ರಲ್ಲಿ ಮುಸ್ಲಿಂ ಮತ್ತು ದಲಿತರ ಮೇಲೆ ನಡೆಯುತ್ತಿರುವ ಹಲ್ಲೆಗಳನ್ನು ಖಂಡಿಸಿ ಬರಹಗಾರರು ಹಾಗೂ ಬುದ್ಧಿಜೀವಿಗಳು ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವ ಪ್ರತಿಭಟನೆ ನಡೆಸಿದಾಗ ಆ ಪ್ರಶಸ್ತಿಗಳನ್ನು ಹಿಂತಿರುಗಿಸಿದೆವು.)

ನಂತರ ನನ್ನ ಬಾಲ್ಯ, ಬೆಳೆದ ಪರಿಸರ, ಅಲ್ಲಿನ ಜನ, ನದಿ, ಮರಗಳು, ಚಂದ್ರ, ಆಕಾಶ, ಮೀನು, ಹಾಡುಗಳು, ಆ ಮನೆಯ ಇತಿಹಾಸ ಹಾಗೂ ಆವರಿಸಿದ್ದ ಹೇಳಲಾಗದ ಭಯಗಳ ಕುರಿತು ಬರೆಯಬಯಸಿದೆ. ಅದೇ The God of Small Things ರೂಪ ತಳೆಯಿತು.

ಅದನ್ನು ಬರೆದದ್ದು ಇಂಗ್ಲೀಷಿನಲ್ಲಾದರೂ ಕಲ್ಪಿಸಿಕೊಂಡಿದ್ದು ಇಂಗ್ಲೀಷ್‌ ಹಾಗೂ ಮಲೆಯಾಳಂನಲ್ಲಿ. ಏಳು ವರ್ಷದ ಅವಳಿ ಜವಳಿ ಈಸ್ತಪ್ಪನ್‌, ರಹೇಲರ ತಲೆಯೊಳಗೆ ಅಲ್ಲಿನ ಭೂಪ್ರದೇಶಗಳು, ಭಾಷೆಗಳು ಡಿಕ್ಕಿ ಹೊಡೆಯುತ್ತ ತಮ್ಮದೇ ಸ್ವರೂಪವನ್ನು ಪಡೆದುಕೊಳ್ಳುತ್ತವೆ.

ಉದಾಹರಣೆ ಅವರಮ್ಮ ಅಮ್ಮು, ಅವರನ್ನು ಬೈಯುತ್ತ ಎಲ್ಲರ ಮುಂದೆ ಸರಿಯಾಗಿ ನಡೆದುಕೊಳ್ಳದಿದ್ದರೆ ಮನೆಯಿಂದ ದೂರ ಅಟ್ಟುವುದಾಗಿ ಹೇಳುತ್ತಾಳೆ. ಅವಳು ಸಿಟ್ಟಿನಲ್ಲಿ ಬಳಸುವ “jolly well behave” ನಲ್ಲಿ well ಪದ ಅವರನ್ನು ಸೆಳೆಯುತ್ತದೆ. ಕೇರಳದ ಬಹುತೇಕರ ಮನೆಗಳಲ್ಲಿ ಪಾಚಿ ಕಟ್ಟಿದ ಆಳವಾದ ಬಾವಿ, ರಾಟೆ, ಹಗ್ಗಕ್ಕೆ ಬಿಗಿದ ಬಕೀಟು ಸಾಮಾನ್ಯವಾಗಿ ಕಂಡುಬರುತ್ತದೆ. ಮಕ್ಕಳಿಗೆ ದೊಡ್ಡವರಾಗುವ ತನಕ ನೀರು ಸೇದಲು ಹೋಗಬಾರದು ಎಂದು ಕಟ್ಟಪ್ಪಣೆ ಮಾಡಿರುತ್ತಾರೆ. ಹಾಗಾದರೆ jolly well ಅಂದರೇನು? ಖುಷಿಯಾದ ಜನರಿರುವ ಬಾವಿ. ಜನ ಬಾವಿಯಲ್ಲಿರಬೇಕು ಅಂದರೆ ಅವರು ಸತ್ತುಹೋಗಿರಬೇಕು. ಹಾಗಾಗಿ ಎಸ್ತಾ ಮತ್ತು ರಹೇಲರ ಕಲ್ಪನೆಯಲ್ಲಿ ಜಾಲಿ ವೆಲ್‌ ಅಂದರೆ ಖುಷಿಯಾಗಿ ನಗುತ್ತಿರುವ ಜನರಿರುವ ಬಾವಿ. ಮಕ್ಕಳನ್ನು ಅಲ್ಲಿಗೆ ಒಳ್ಳೆಯ ನಡತೆ ಕಲಿಯಲು ಕಳಿಸುತ್ತಾರೆ. ಕಾದಂಬರಿಯು ಚಿಕ್ಕವರು, ಮುದುಕರು, ಇಂಗ್ಲೀಷ್‌ ಗೊತ್ತಿರುವ ಮಲೆಯಾಳಂ ಗೊತ್ತಿರುವ ಜನರಿಂದ ತುಂಬಿದೆ. ಅವರೆಲ್ಲರ ಭಾಷೆ ಒಂದರೊಡನೊಂದು ಗುದ್ದಾಡುತ್ತ, ಕುಣಿಯುತ್ತ, ನಲಿಯುತ್ತ ಸಾಗುತ್ತದೆ. ನನಗೆ ಅಥವ ಸಮಕಾಲೀನ ಲೇಖಕರಿಗೆ ಭಾಷೆ ಎನ್ನುವುದು ಸಿದ್ಧಪಡಿಸಿ ಕೊಟ್ಟದ್ದಲ್ಲ. ಅದನ್ನು ನಿಧಾನವಾಗಿ ರೂಪಿಸಿಕೊಳ್ಳಬೇಕು.

The God of Small Things ಬರೆದು ಮುಗಿಸಿದ ಮೇಲೆ ಹಗುರವಾದೆ. ನನಗೆ ಬೇಕಾದಂತ ಭಾಷೆ ಕಡೆಗೂ ಸಿಕ್ಕಾಗ ಕಂಡುಕೊಂಡ ನಿರಾಳತೆಯನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಆ ಭಾಷೆ ಸ್ವಾತಂತ್ರ್ಯದ ಅನುಭವ ಕೊಟ್ಟಿತು. ಆ ಬಿಡುಗಡೆಯ ಭಾವ ಹೆಚ್ಚು ಕಾಲ ಉಳಿಯಲಿಲ್ಲ. ಒಂದೇ ದಿನದಲ್ಲಿ ಎಲ್ಲವೂ ಬದಲಾಗಬಹುದು ಎಂದು ಎಸ್ತಾನಿಗೆ ಗೊತ್ತಿತ್ತು.

The God of Small Things  ಪ್ರಕಟಗೊಂಡ ವರ್ಷದೊಳಗೆ ಮೇ ೧೯೯೮ರಲ್ಲಿ ಹಿಂದೂ ರಾಷ್ಟ್ರೀಯಪಕ್ಷ ಅಧಿಕಾರಕ್ಕೆ ಬಂದಿತು. ಅದು ಮಾಡಿದ ಮೊದಲ ಕೆಲಸ ಸರಣಿ ಪರಮಾಣು ಪರೀಕ್ಷೆಗಳು. ಏನೋ ಬದಲಾಯಿತು. ಮತ್ತೆ ಅದು ಭಾಷೆಯೇ ಆಗಿತ್ತು. ಅದು ಲೇಖಕರ ಭಾಷೆಯಲ್ಲ, ದೇಶದ ಸಾರ್ವಜನಿಕ ಭಾಷೆ, ಸಾರ್ವಜನಿಕ ಕಲ್ಪನಾ ಲಹರಿಯೇ ಬದಲಾಯಿತು. ಸಾರ್ವಜನಿಕವಾಗಿ ಒಪ್ಪಲು ಸಾಧ್ಯವೇ ಇಲ್ಲದಿರುವುದೆಲ್ಲ ಒಪ್ಪಿತವಾಗತೊಡಗಿತು. ಪೌರುಷವೇ ಮುಖ್ಯವಾದ ರಾಷ್ಟ್ರಾಭಿಮಾನಕ್ಕೆ ಪ್ರೇಮಕ್ಕಿಂತ ದ್ವೇಷವೇ ಮುಖ್ಯವಾಯಿತು. ಅದು ಲಾವಾರಸದಂತೆ ಬೀದಿಗಳಲ್ಲಿ ಹರಿಯತೊಡಗಿತು. ಅತ್ಯಂತ ಅನಿರೀಕ್ಷಿತವಾಗಿದ್ದ ಈ ಘಟನೆಗಳನ್ನು ನೋಡಿ ನನ್ನ ಮೊದಲ ರಾಜಕೀಯ ಪ್ರಬಂಧ, The End of Imagination  ಬರೆದೆ. ನನ್ನ ಭಾಷೆ ಕೂಡ ಬದಲಾಯಿತು. ಅದು ಕಾದಂಬರಿಯಲ್ಲಿ ಬಳಸುವಂತಹ ನಿಧಾನವಾಗಿ ರೂಪಿಸಿಕೊಂಡ ಭಾಷೆಯಲ್ಲ. ತುರ್ತಾಗಿ ಸಾರ್ವಜನಿಕವಾಗಿ ರೂಪುಗೊಂಡ ಭಾಷೆ. ಅದು ಇಂಗ್ಲೀಷ್.

ಆ ಪ್ರಬಂಧವನ್ನು ಓದಿದರೆ ಯಾರಿಗಾದರೂ ಮುನ್ನೆಚ್ಚರಿಕೆಯ ಮಾತುಗಳು ಸ್ಪಷ್ಟವಾಗಿ ಕಾಣುತ್ತವೆ: : “ಇವು ಪರಿಮಾಣು ಪರೀಕ್ಷೆಗಳಲ್ಲ, ಇವು ರಾಷ್ಟ್ರೀಯತೆಯ ಪರೀಕ್ಷೆಗಳು,” ಎಂದು ನಮಗೆ ಮತ್ತೆ ಮತ್ತೆ ಹೇಳಲಾಯಿತು.

ಮನೆ ಮನೆಗೂ ಇದು ತಟ್ಟಲಿದೆ. ಭಾರತವೇ ಸಿಡಿಯುವ ಬಾಂಬ್‌ ಆಗಲಿದೆ. ಕೇವಲ ಭಾರತವಲ್ಲ, ಹಿಂದೂ ಭಾರತ. ಯಾವುದೇ ಬಗೆಯ ಟೀಕೆ ಅದು ಕೇವಲ ರಾಷ್ಟ್ರವಿರೋಧಿ ಅಲ್ಲ, ಹಿಂದೂ ವಿರೋಧಿ ಕೂಡ ಎಚ್ಚರದಿಂದಿರಿ. ಪರಮಾಣು ಬಾಂಬನ್ನು ಸರ್ಕಾರವು ಕೇವಲ ಶತ್ರುವನ್ನು ಹೆದರಿಸಲು ಮಾತ್ರವಲ್ಲ, ತನ್ನ ಜನರ ಮೇಲೆ ಯುದ್ಧ ಸಾರಲು ಬಳಸಬಹುದು…

ಇವೆಲ್ಲ ಯಾಕಿಷ್ಟು ಪರಿಚಿತ ಅನಿಸುತ್ತದೆ? ಏಕೆಂದರೆ ನೀವು ನೋಡುತ್ತಿರುವಂತೆಯೇ ವಾಸ್ತವವು ಕರಗಿ ಹಳೆಯ ಸಿನೆಮಾಗಳ ರೀತಿ ಕಪ್ಪು- ಬಿಳುಪು ಚಿತ್ರಗಳಾಗಿ ಕಣ್ಮುಂದೆ ಓಡುತ್ತದೆ. ಜೀವ ಉಳಿಸಿಕೊಳ್ಳಲು ಓಡುತ್ತಿರುವ ಜನರು, ನಿರಾಶ್ರಿತರ ಶಿಬಿರಗಳ ದೃಶ್ಯಗಳು ಕಾಣುತ್ತಿವೆಯೇ? ಕೊನೆಯಿಲ್ಲದ ಹತ್ಯಾಕಾಂಡ, ದುಷ್ಕೃತ್ಯ, ಜನರ ಗೋಳಾಟಗಳು? ಯಾಕೆ ದನಿ ಕೇಳುತ್ತಿಲ್ಲ? ಇಡೀ ಸಭಾಂಗಣ ನಿಶ್ಯಬ್ಧವಾಗಿದೆಯಲ್ಲ ಏಕೆ? ಇದೇನು ಭ್ರಮೆಯೋ, ಹುಚ್ಚೋ?

ಸೆಪ್ಟಂಬರ್‌ ೧೧, ೨೦೦೧ರ ದಾಳಿ ನಡೆದ ಮೂರು ವಾರಗಳ ತರುವಾಯ ಅಕ್ಟೋಬರ್‌ ೭, ೨೦೦೧ರಂದು ಆ ಹತ್ಯಾಕಾಂಡ ನಡೆಯಿತು. ಗುಜರಾತಿನಲ್ಲಿ ಭಾರತೀಯ ಜನತಾ ಪಾರ್ಟಿಯು ತನ್ನ ಅಂದಿನ ಮುಖ್ಯಮಂತ್ರಿ ಕೇಶುಭಾಯ್‌ ಪಟೇಲರನ್ನು ಪದಚ್ಯುತಿಗೊಳಿಸಿ ಅವರ ಜಾಗದಲ್ಲಿ ಆ ಕಾಲದ ಆರ್‌ಎಸ್‌ಎಸ್‌ನ ನವತಾರೆ ನರೇಂದ್ರಮೋದಿಯನ್ನು ಕೂರಿಸಿತು. ಫೆಬ್ರವರಿ ೨೦೦೨ರಂದು ಗುಜರಾತಿನ ಗೋದ್ರಾದಲ್ಲಿ ೬೮ ಹಿಂದೂ ಯಾತ್ರಿಕರಿದ್ದ ರೈಲಿನ ಬೋಗಿಯನ್ನು ಸುಟ್ಟುಹಾಕಲಾಯಿತು. ಸ್ಥಳೀಯ ಮುಸಲ್ಮಾನರನ್ನು ಇದಕ್ಕೆ ಹೊಣೆಯಾಗಿಸಲಾಯಿತು. ಇದಕ್ಕೆ “ಪ್ರತಿಕಾರ” ತೀರಿಸಿಕೊಳ್ಳಲು ೧,೦೦೦ ಮುಸಲ್ಮಾನರನ್ನು ಹಿಂದೂ ಗುಂಪು ನಡುಹಗಲಲ್ಲೇ ಕೊಂದುಹಾಕಿತು. ೧೦೦,೦೦ಕ್ಕೂ ಹೆಚ್ಚು ಮಂದಿ ತಮ್ಮ ಮನೆ ಕಳೆದುಕೊಂಡು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಯಿತು. ಇದೇನು ಸ್ವಾತಂತ್ರ್ಯಾನಂತರ ಅಲ್ಪಸಂಖ್ಯಾತರ ಮೇಲೆ ನಡೆದ ಮೊದಲ ಹಲ್ಲೆಯಾಗಿರಲಿಲ್ಲ. ಆದರೆ ಈ ಹತ್ಯಾಕಾಂಡದ ದೃಶ್ಯಗಳನ್ನು ಮನೆಯಲ್ಲಿ ಕೂತು ನೋಡಲು ಪ್ರಸಾರಮಾಡಲಾಯಿತು.

೧೯೯೦ರಲ್ಲಿ ಆರಂಭವಾದ ಧಾರ್ಮಿಕ ಮೂಲಭೂತವಾದ ಹಾಗೂ ಮುಕ್ತ ಮಾರುಕಟ್ಟೆ ಮೂಲಭೂತವಾದವು ಪ್ರೇಮಿಗಳಂತೆ ಕೈ ಕೈ ಹಿಡಿದು ಸುತ್ತಲ ಪರಿಸರವನ್ನು ಬದಲಿಸುತ್ತಾ ಸಾಗಿರುವುದನ್ನು ನಾವೆಲ್ಲ ಮಂತ್ರಮುಗ್ಧರಾಗಿ ನೋಡುತ್ತಿದ್ದವು. ಇದು ಕೆಲವರಿಗೆ ಲಾಭಕರವಾಗಿದ್ದರೆ ಇನ್ನು ಕೆಲವರಿಗೆ ವಿನಾಶಕಾರಿಯಾಗಿತ್ತು. ಬೃಹತ್ತಾದ ಮೂಲಸೌಕರ್ಯಗಳ ಯೋಜನೆಗಳು ಸಾವಿರಾರು ಹಳ್ಳಿಗರ ಸ್ಥಳಾಂತರಕ್ಕೆ ಕಾರಣವಾದವು. ಹಳ್ಳಿ ನಗರಗಳ ನಡುವಿನ ಸಂವಹನದ ಸೇತುವೆ ಮುರಿದುಬಿದ್ದಂತಾಯಿತು. ಇದಕ್ಕೆ ಕಾರಣವಾದದ್ದು ಭಾಷೆಯಲ್ಲ ಬದಲಿಗೆ ಭಾಷಾಂತರ.

ಉದಾಹರಣೆಗೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ಸ್ಥಳೀಯ ಬುಡುಕಟ್ಟಿನವನಿಗೆ ಅವನ ಭೂಮಿಯೊಂದಿಗೆ ಇರುವ ಸಂಬಂಧವನ್ನು ಹಣದಲ್ಲಿ ವಿವರಿಸಲು ಆಗುವುದಿಲ್ಲ ಎಂದು ಅರ್ಥಮಾಡಿಕೊಳ್ಳುವಲ್ಲಿ ಸೋತರು. ವರ್ಷಗಳು ಉರುಳಿದಂತೆ ಸುತ್ತಾಟಗಳು ಹೊಸ ಭಾಷೆಗಳು, ಕತೆಗಳು, ಹೊಸ ಜನರನ್ನು ಪರಿಚಯಿಸಿತು. ಇವೆಲ್ಲವೂ ನನ್ನ ಆಲೋಚನೆಯನ್ನು ಊಹಿಸಿರದ ರೀತಿಯಲ್ಲಿ ವಿಸ್ತರಿಸಿತು.

ಇದರೊಂದಿಗೆ ಭಾಷೆ ಮತ್ತೆ ಹೊಸದಾಗಿ ರೂಪುಗೊಳ್ಳಲು ಶುರುವಾಯಿತು. ಒಂದೊಂದಾಗಿ ನನ್ನತ್ತ ಸುಳಿಯಲು ಆರಂಭಿಸಿದ ಪಾತ್ರಗಳು ನನ್ನೊಳಗೆ ಬೆರೆತವು : ಹಳೆ ದೆಹಲಿಯ ಉರ್ದು ಮಾತಾಡುವ ಅಂಜುಮ್‌, ಅವಳ ಸಾಕುಮಗಳು ಜೈನಾಬ್‌ ಮತ್ತು ಬೀರೂ ಎನ್ನುವ ನಾಯಿ. ಬಿಳಿ ಕುದುರೆಯ ಮೇಲೆ ಬಂದ ಯುವಕನೊಬ್ಬ ತನ್ನ ಹೆಸರು ಸದ್ದಾಂ ಹುಸೇನ್‌ ಮತ್ತು ಕುದುರೆಯ ಹೆಸರು ಪಾಯಲ್‌ ಎಂದು ಪರಿಚಯಿಸಿಕೊಂಡ. ಅವನ ನಿಜವಾದ ಹೆಸರು ದಯಾಚಂದ್‌ ಅಂತೆ. ಅವನು ಹರಿಯಾಣದ ಝಜ್ಜರ್‌ನಲ್ಲಿ ಚಮ್ಮಾರಿಕೆ ಮಾಡುತ್ತಿದ್ದವನಂತೆ. ಅವನಪ್ಪನಿಗೆ ಘಟಿಸಿದ ದುರಂತದ ಬಗ್ಗೆ ಭೀಕರ ಕತೆಯೊಂದನ್ನು ಹೇಳಿದ. ಅವನೊಂದು ರೀತಿಯ ಮೇವಾತಿ – ರಾಜಸ್ಥಾನಿಯಲ್ಲಿ ಮಾತಾಡುತ್ತಿದ್ದ. ಅದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತಿತ್ತು. ಅವನ ಫೋನಿನಲ್ಲಿ ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನನ್ನು ಗಲ್ಲಿಗೇರಿಸಿದ ವಿಡಿಯೋ ಇಟ್ಟುಕೊಂಡಿದ್ದ. ಅದನ್ನು ತೋರಿಸಿ ಹುಸೇನ್‌ ದುಷ್ಟನೇ ಹೌದಾದರೂ ಸಾಯುವ ಕ್ಷಣದಲ್ಲಿ ಅವನ ಧೈರ್ಯ ನೋಡಿ ಅಂದ. ಅದನ್ನು ನೋಡಿ ತಾನು ಇಸ್ಲಾಂಗೆ ಮತಾಂತರವಾಗಿ ಸದ್ದಾಂ ಹುಸೇನ್‌ ಎಂದು ಹೆಸರಿಟ್ಟುಕೊಂಡೆನೆಂದು ಹೇಳಿದ. ಆ ವಿಡಿಯೋಗೂ ಅವನಪ್ಪನಿಗೂ ಏನು ಸಂಬಂಧ ಅಂತ ಅರ್ಥವಾಗಲಿಲ್ಲ.

ಬಲಗೈಗೆ ಪ್ಲಾಸ್ಟರ್‌ ಹಾಕಿದ್ದ ಹಂಚಿಕಡ್ಡಿಯಂತಿದ್ದ ವ್ಯಕ್ತಿ ಶರ್ಟಿನ ತೋಳುಗಳನ್ನು ಬೀಸುತ್ತ ನೆರಳಿನಂತೆ ನುಸುಳಿ ನಿಂತ. ಏನೇ ತಿನ್ನಲು, ಕುಡಿಯಲು ಕೊಟ್ಟರೂ ತೆಗೆದುಕೊಳ್ಳಲಿಲ್ಲ. ಚೀಟಿಯೊಂದನ್ನು ಕೈಗಿಟ್ಟ. ಅದರಲ್ಲಿ ಹೀಗೆ ಬರೆದಿತ್ತು :

ಪೂರ್ಣ ಹೆಸರು : ಡಾ. ಆಜಾದ್‌ ಭಾರತೀಯ

ಮನೆ ವಿಳಾಸ : ಡಾ. ಆಜಾದ್‌ ಭಾರತೀಯ, ಲಕ್ಕಿ ಸರಾಯಿ ರೈಲ್ವೇ ಸ್ಟೇಷನ್‌, ಲಕ್ಕಿ ಸರಾಯಿ ಸರಾಯಿ ಬಸ್ತಿ, ಕೋಕರ್‌, ಬಿಹಾರ್‌

ಈಗಿನ ವಿಳಾಸ : ಡಾ. ಆಜಾದ್‌ ಭಾರತೀಯ, ಜಂತರ್‌ಮಂತರ್‌, ನವದೆಹಲಿ

ವಿದ್ಯಾರ್ಹತೆ : ಎಂಎ ಹಿಂದಿ, ಎಂಎ ಉರ್ದು (ಪ್ರಥಮ ದರ್ಜೆ), ಬಿಎ ಇತಿಹಾಸ, ಬಿಇಡ್‌, ಪಂಜಾಬಿಯಲ್ಲಿ ಎಲಿಮೆಂಟರಿ ಕೋರ್ಸ್‌, ಎಂಎ ಪಂಜಾಬಿ ABF (Appeared But Failed), ಪಿಎಚ್‌ಡಿ (ಬಾಕಿ), ದೆಹಲಿ ವಿವಿ (ತೌಲನಿಕ ಧರ್ಮಗಳು ಮತ್ತು ಬೌದ್ಧ ಅಧ್ಯಯನ), ಉಪನ್ಯಾಸಕ, ಇಂಟರ್‌ ಕಾಲೇಜು, ಗಾಜಿ಼ಯಾಬಾದ್‌, ರಿಸರ್ಚ್‌ ಅಸಿಸ್ಟೆಂಟ್‌, ಜವಹರಲಾಲ್‌ ನೆಹರು ವಿವಿ, ನವದೆಹಲಿ, ವಿಶ್ವ ಸಮಾಜವಾದಿ ಸ್ಥಾಪನ ವೇದಿಕೆ ಮತ್ತು ಭಾರತೀಯ ಸಮಾಜವಾದಿ ಪ್ರಜಾಪ್ರಭುತ್ವ ಪಾರ್ಟಿಯ ಸಂಸ್ಥಾಪಕ ಸದಸ್ಯ,

ಅವನಿಗೆ ಸಿಗರೇಟು ಕೊಟ್ಟೆ. ಸೇದಲು ಹೊರಗೆ ಹೋದವನು ಕೆಲವು ವಾರಗಳ ನಂತರ ಹಿಂತಿರುಗಿದ. ಹೀಗೆ ಡಾ. ಭಾರತೀಯ ನನ್ನ ಮನೆಗೆ ಬಂದು ಹೋಗುವುದು ಮೊದಲಾಯಿತು. ನಂತರ ಬಂದವನು ಅಲೆಮಾರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿದ್ದ ವಿಪ್ಲವ್‌ ದಾಸ್‌ಗುಪ್ತ. ಇಂಗ್ಲೀಷ್‌ ಸಂತಾನವಾದ ಇವನು ಗುಪ್ತಚರ ಸೇವೆಯಲ್ಲಿದ್ದವನು. ಹಾಲಿ ಕಾಬೂಲಿನಲ್ಲಿದ್ದಾನೆ. ಅವನ ಸ್ನೇಹಿತರು ಅವನನ್ನು ಗಾರ್ಸನ್‌ ಹೊಬಾರ್ಟ್‌ ಎಂದು ಕರೆಯುತ್ತಾರಂತೆ. ಕಾಲೇಜಿನ ನಾಟಕದಲ್ಲಿ ಅವನು ಆ ಹೆಸರಿನ ಪಾತ್ರ ವಹಿಸಿದ್ದನಂತೆ. ಅದೇ ಹೆಸರಿನಿಂದ ಕರೆಯುವಂತೆ ಹೇಳಿದ. ಅವನೊಂದು ದುಬಾರಿ ವಿಸ್ಕಿ ಬಾಟಲ್‌ ಹಿಡಿದು ಬಂದ. ನಿಧಾನಕ್ಕೆ ಕುಡಿಯುತ್ತ ಕೂತೆವು. ನನ್ನ ಮೇಜಿನಲ್ಲಿ ಕೂತು ತಲೆ ಕೂಡ ಎತ್ತದೆ ನನ್ನ ಪೆನ್ನಿನಲ್ಲಿ ಏನೋ ಬರೆಯುತ್ತ ಕೂತ. ಆಗಾಗ ಪಕ್ಷಿಯೊಂದರ ಲ್ಯಾಟಿನ್‌ ಹೆಸರನ್ನು ಜೋರಾಗಿ ಹೇಳಿಕೊಳ್ಳುತ್ತಿದ್ದ. ಅದರ ಸ್ಪೆಲ್ಲಿಂಗ್‌ ಸರಿಯಾಗಿದೆಯೇ ಎಂದು ಪರೀಕ್ಷಿಸಲು ಹಾಗೆ ಹೇಳುತ್ತಿದ್ದಿರಬೇಕು.

ಭವಿಷ್ಯದ ಅನುವಾದಕರಿಗೆ ಸಂಕಷ್ಟ ತಂದಿಡಲೆಂದೇ ಇವನು ಹೀಗೆ ಮಾಡುತ್ತಿರಬಹುದು ಅನ್ನಿಸಿತು. ಅವರ ಭಾಷೆಗಳಲ್ಲಿ ಈ ಹಕ್ಕಿ ಮತ್ತು ಮರಗಳ ಹೆಸರೇ ಇಲ್ಲದಿರಬಹುದು. ಮನೆಯ ಕಾಲಿಂಗ್‌ ಬೆಲ್‌ ಸದ್ದಾದಾಗ ಹೋಬರ್ಟನ ಭಾವ ಬದಲಾಯಿತು. ಬಾಗಿಲಲ್ಲಿ ಒಬ್ಬ ಗಂಡಸು, ಒಬ್ಬಳು ಹೆಂಗಸು ನಿಂತಿದ್ದರು. ಅವಳ ಹೆಸರು ತಿಲೋತ್ತಮ. ಅವಳೊಂದಿಗೆ ಇದ್ದವನು ಅವಳ ಕಾಶ್ಮೀರಿ ಪ್ರಿಯಕರ ಮೂಸ. ಆ ಹೆಂಗಸು ಹೋಬರ್ಟ್‌ನ ಮನೆಯಲ್ಲಿ ಬಾಡಿಗೆಗೆ ಇದ್ದವಳು. ಅವಳು ಎಲ್ಲೋ ಹೊರಟುಹೋಗಿದ್ದಳಂತೆ. ಈಗ ಅವರು ಕಾಗದಗಳು, ಫೈಲುಗಳಿದ್ದ ಪೆಟ್ಟಿಗೆಗಳು, ಧೂಳಿನ ಗೋಪುರದಂತಿದ್ದ ದಾಖಲೆಗಳನ್ನು ಎತ್ತಿಕೊಂಡು ಬಂದರು.  ಅವಳು ಕೆಲವು ಕಾಗದಗಳನ್ನು ತೆಗೆದುಕೊಂಡು ಫ್ರಿಡ್ಜ್‌ಗೆ ಮ್ಯಾಗ್ನೇಟ್‌ ಮೂಲಕ ಅಂಟಿಸಿದಳು. ಅದೊಂದು ವರ್ಣಮಾಲೆಯ ಪ್ರಕಾರವಿರುವ ಪದಗಳ ಪಟ್ಟಿ :

ಕಾಶ್ಮೀರಿ – ಇಂಗ್ಲೀಷ್‌ ವರ್ಣಮಾಲೆ

ಎ : ಆಜಾದಿ/ ಆರ್ಮಿ/ ಅಲ್ಲಾಹ್/ ಅಮೆರಿಕ/ ಅಟ್ಯಾಕ್‌/ ಎಕೆ೪೭/ ಅಮ್ಯುನಿಶನ್/ ಅಂಬ್ಯುಶ್‌/ ಆತಂಕವಾದಿ/ ಆರ್ಮ್ಡ್‌ ಫೋರ್ಸಸ್‌ ಸ್ಪೆಷಲ್‌ ಪವರ್ಸ್‌ ಆಕ್ಟ್‌/ ಏರಿಯಾ ಡಾಮಿನೇಶನ್‌/ ಅಲ್‌ ಬದ್ರ್‌/ ಅಲ್‌ ಮನ್ಸೂರಿಯನ್‌/ ಅಲ್‌ ಜಿಹಾದ್‌/ ಆಫ್ಘನ್‌ / ಅಮರನಾಥ ಯಾತ್ರಾ

ಬಿ : ಬಿಎಸ್‌ಎಫ್‌/ ಬಾಡಿ/ ಬ್ಲಾಸ್ಟ್‌/ ಬುಲೆಟ್‌/ ಬೆಟಾಲಿಯನ್‌/ ಬರ್ಬ್ಡ್‌ ವೈರ್‌/ ಬರ್ಸ್ಟ್‌/ ಬಾರ್ಡರ್‌ ಕ್ರಾಸ್‌/ ಬಂಕರ್‌/ ಬೆಗ್ಗರ್‌

ಸಿ : ಕ್ರಾಸ್‌ಬಾರ್ಡರ್‌/ ಕ್ರಾಸ್‌ ಫೈರ್‌/ ಕ್ಯಾಂಪ್‌/ ಸಿವಿಲಿಯನ್‌/ ಕರ್ಫ್ಯೂ/ ಕ್ರಾಕ್‌ಡೌನ್‌/ ಸಿಆರ್‌ಪಿಎಫ್‌/ ಚೆಕ್‌ಪೋಸ್ಟ್‌/ ಕೌಂಟರ್‌ ಇನ್ಸುರ್ಜೆನ್ಸಿ/ ಸೀಜ್‌ – ಫೈರ್‌/ ಕೌಂಟರ್‌ ಇಂಟೆಲಿಜೆನ್ಸ್‌/ ಕ್ಯಾಚ್‌ ಅಂಡ್‌ ಕಿಲ್‌/ ಕಸ್ಟೋಡಿಯಲ್‌ ಕಿಲ್ಲಿಂಗ್‌/ ಕಂಪನ್ಸೇಶನ್‌/ ಸಿಲಿಂಡರ್‌ (ಸರಂಡರ್‌)/ ಕಾನ್ಸರ್ಟಿನಾ ವೈರ್‌/ ಕೊಲಾಬೊರೇಟರ್‌

ಡಿ : ಡಿಸಪಿಯರ್ಡ್‌/ ಡಿಫೆನ್ಸ್‌ ಸ್ಪೋಕ್ಸ್‌ಮ್ಯಾನ್‌/ ಡಬಲ್‌ ಕ್ರಾಸ್‌/ ಡಬಲ್‌ ಏಜೆಂಟ್‌/ ಡಿಸ್ಟ್ರಬ್ಡ್‌ ಏರಿಯಾ ಆಕ್ಟ್‌/ ಡೆಡ್‌ ಬಾಡಿ

ಹೀಗೆ ಇಂಗ್ಲೀಷಿನ Z ಅಕ್ಷರದವರೆಗೂ ಪದಗಳಿದ್ದವು. ಇದೇನು ಅಂತ ಅವಳನ್ನು ಕೇಳಿದೆ. ಕಾಶ್ಮೀರದ ಸ್ಥಳೀಯರೊಂದಿಗೆ ಸಂವಹನ ನಡೆಸಲು ಮುಗ್ಧ ಭಾರತೀಯ ಪ್ರವಾಸಿಗಳಿಗೆ ಸಹಾಯವಾಗಲಿ ಎಂದು ಮಾಡಿರುವುದು ಎಂದಳು. ಅವಳ ಮಾತಿನಲ್ಲಿ ವ್ಯಂಗ್ಯವಿರಲಿಲ್ಲ. ಮೂಸ ಏನೂ ಹೇಳಲಿಲ್ಲ. ಅವನು ಎಲ್ಲೋ ಹೋದ. ಅವನು ಅಲ್ಲಿದ್ದ ಎನ್ನುವುದನ್ನು ಮರೆತುಬಿಟ್ಟೆ.

ಸ್ವಲ್ಪ ಹೊತ್ತಿನ ಬಳಿಕ ತಿಲೋತ್ತಮೆಯ ಮಾಜಿಗಂಡ ನಾಗರಾಜ ಹರಿಹರನ್‌ ಬಂದ. ಅವಳನ್ನು ಹುಡುಕುತ್ತ ಬಂದಿಲ್ಲ ಎನ್ನುವವನಂತೆ ನಟಿಸಿದ. ಅದೇಕೋ ಅವನ ಅತ್ತೆ ಮರಿಯಂ ಇಪೆಳ ದೊಡ್ಡ ವೈದ್ಯಕೀಯ ಫೈಲನ್ನು ಕೊಚಿನ್‌ ಆಸ್ಪತ್ರೆಯಿಂದ ತಂದಿದ್ದ. ಅದನ್ನು ನನಗೆ ತೋರಿಸಿದ. ನನಗೆ ರಕ್ತ, ಆಮ್ಲಜನಕದ ಮಟ್ಟ ಇವುಗಳಲೆಲ್ಲ ಆಸಕ್ತಿ ಇಲ್ಲವೆಂದೆ. ಆಮೇಲೆ ನೋಡಿದರೆ ಅದರಲ್ಲಿ ಮರಿಯಂ ಇಪೆ ಐಸಿಯುನಲ್ಲಿದ್ದಾಗ ಕಂಡ ಕಾಲ್ಪನಿಕ ಭ್ರಮೆಗಳ ಕುರಿತು ಮಾಡಿದ ನೋಟ್ಸ್‌ ಇತ್ತು. ಇಂಥದ್ದನ್ನು ಓದಿದರೆ ನೀವು ಊಹಿಸಿರದಷ್ಟು ಸಂವೇದನಾಶೀಲ ಸಂಭಾಷಣೆಗಳು ಕಾಣಿಸುತ್ತವೆ. ಎತ್ತರವಾಗಿದ್ದ ಭಾರತೀಯ ಸೇನೆಯ ಸಿಖ್‌ ಅಧಿಕಾರಿ ಮೇಜರ್‌ ಅಮ್ರಿಕ್‌ ಸಿಂಗ್‌ ಬಂದ. ನಾನು ಅವನನ್ನು ನಿಂದಿಸದೆ ಇದ್ದರೂ ಕೂಡ ತಾನು ಕಾನೂನುಬಾಹಿರ ಹತ್ಯೆಗಳನ್ನು ನಡೆಸಿಲ್ಲವೆಂದೂ ಅವನನ್ನು “ಹರಕೆಯ ಕುರಿ” ಮಾಡಿದರೆಂದು ಹೇಳಿದ. ತನ್ನ ರಹಸ್ಯಕಾರ್ಯಾಚರಣೆಯ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳಲಾರಂಭಿಸಿದ. ಹಿಂದೂವಾಗಿ, ಸಿಖ್ಖನಾಗಿ ಇಲ್ಲವೇ ಪಂಜಾಬಿ ಮಾತಾಡುವ ಪಾಕಿಸ್ತಾನಿ ಮುಸ್ಲಿಂನಾಗಿ ಹೇಗೆ ಸಮಯಕ್ಕೆ ತಕ್ಕಂತೆ ತನ್ನ ಪಾತ್ರಗಳನ್ನು ನಿಭಾಯಿಸಿದನೆಂದು ಹೇಳಿದ.

ಬಾಗಿಲಲ್ಲಿ ಸಣ್ಣ ಹುಡುಗಿಯೊಬ್ಬಳು ಬಂದು ನಿಂತಳು. ಅಂಜುಮ್‌ ತಟ್ಟಂತ ಅವಳ ಬಳಿಸಾರಿ ಅವಳನ್ನೆತ್ತಿಕೊಂಡಳು. ಸುಮಾರು ಎರಡುವಾರ ಯಾರನ್ನೂ ಅವಳ ಹತ್ತಿರ ಸುಳಿಯಗೊಡಲಿಲ್ಲ. ಬಸ್ತರ್‌ ಕಾಡುಗಳಿಂದ ಪತ್ರವೊಂದು ಬಂದಿತು. ಅದು ಡಾ. ಆಜಾದ್‌ ಭಾರತೀಯನಿಗೆ ಇಂಗ್ಲೀಷಿನಲ್ಲಿ ಬರೆದ ಪತ್ರವಾಗಿತ್ತು. ಆ ಪತ್ರವನ್ನು ಅಂಜುಮ್‌ಗೆ ಉರ್ದುವಿಗೆ ಭಾಷಾಂತರಿಸುತ್ತ ಓದಿದೆ:

ಪ್ರೀತಿಯ ಕಾಮ್ರೇಡ್‌ ಆಜಾದ್‌ ಭಾರತೀಯಗಾರು,

ನಿಮಗೆ ಈ ಪತ್ರ ಬರೆಯುತ್ತಿರುವ ಕಾರಣವೇನೆಂದರೆ ನಿಮ್ಮನ್ನು ಜಂತರ್‌ಮಂತರ್‌ನಲ್ಲಿ ಮೂರುದಿನ ಗಮನಿಸಿದ್ದೆ. ನನ್ನ ಮಗು ಎಲ್ಲಿದೆ ಎಂದು ಯಾರಿಗಾದರೂ ತಿಳಿದಿದ್ದರೆ ಅದು ನಿಮಗೆ ಮಾತ್ರ. ನಾನು ತೆಲುಗು ಮಾತಾಡುವವಳು, ಕ್ಷಮಿಸಿ ಹಿಂದಿ ಬರುವುದಿಲ್ಲ. ಇಂಗ್ಲೀಷ್‌ ಕೂಡ ಚೆನ್ನಾಗಿ ಬರುವುದಿಲ್ಲ. ನನ್ನ ಹೆಸರು ರೇವತಿ. ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾವೋ)ದಲ್ಲಿ ಕೆಲಸಮಾಡುತ್ತಿದ್ದೇನೆ. ನಿಮಗೆ ಈ ಪತ್ರ ತಲುಪುವಷ್ಟರಲ್ಲಿ ನನ್ನನ್ನು ಕೊಂದುಬಿಟ್ಟಿರುತ್ತಾರೆ…

ನನ್ನ ಮನೆಯೇ ಒಂದು ಸಮುದಾಯವಾಗಿ ಭಾಷೆಗಳ ಒಕ್ಕೂಟವಾಯಿತು. ಕಾಲಕಳೆದಂತೆ ನಾವೆಲ್ಲ ಪರಸ್ಪರ ಮಾತಾಡಲು, ಭಾಷಾಂತರ ಮಾಡಲು ಕಲಿತೆವು.

ಹೊಸ ಭಾಷೆಯನ್ನು ರೂಪಿಸಿಕೊಳ್ಳುವುದರಲ್ಲಿ ಒಂದಿಷ್ಟು ಅಪಾಯವಿತ್ತು. The God of Small Thingsನ ಭಾಷೆಯನ್ನು ಎತ್ತರದ ಮಹಡಿಯಿಂದ ಎಸೆದು ಚೂರಾದ ಭಾಷೆಯ ಚೂರುಗಳನ್ನು ಆಯ್ದುಕೊಳ್ಳಬೇಕಿತ್ತು. ಆಗ ಹುಟ್ಟಿದ್ದು The Ministry of Utmost Happiness. ಓದುಗರಿಗೆ ಪುಸ್ತಕವನ್ನು ಅರ್ಥಮಾಡಿಕೊಳ್ಳಲು ಅದರಲ್ಲಿ ಬಳಸಿರುವ ಭಾಷೆಗಳ ಪ್ರವರ ಬೇಕಿಲ್ಲ. ಆ ಪುಸ್ತಕದ ಕೆಲವು ಅಧ್ಯಾಯಗಳನ್ನು ಈಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಪುಸ್ತಕದ ಮೊದಲನೇ ವಾಕ್ಯದಿಂದ ಆರಂಭಿಸುತ್ತೇನೆ :

ಅವಳೊಂದು ಮರದಂತೆ ಸ್ಮಶಾನದಲ್ಲಿ ವಾಸಿಸುತ್ತಿದ್ದಳು.

“ಅವಳು” ಅಂದರೆ ಅಂಜುಮ್‌. ಅವಳೀಗ ನಡುವಯಸ್ಸಿನ ಹೆಂಗಸು. ತನ್ನಂತೆ ಇದ್ದವರೊಂದಿಗೆ ವಾಸಿಸುತ್ತಿದ್ದ ತನ್ನ ಮನೆ ಖ್ವಾಬ್ಗಾಗನ್ನು ಬಿಟ್ಟುಬಂದಿದ್ದಾಳೆ. ಅವಳೀಗ ವಾಸಿಸುತ್ತಿರುವ ಮುಸಲ್ಮಾನರ ಸ್ಮಶಾನ ದೆಹಲಿಗೆ ಹತ್ತಿರದಲ್ಲಿದೆ. ತನ್ನ ಮಾತಿನಲ್ಲಿ ಮೊದಲಿಗೆ ತಾನು ಯಾರೆಂಬ ಸುಳಿವು ನೀಡುತ್ತಾಳೆ.

ಬಹಳ ಹಿಂದೆ ಇಂಗ್ಲೀಷ್‌ ಗೊತ್ತಿದ್ದವನೊಬ್ಬ ಅವಳಿಗೆ ಅವಳ ಹೆಸರನ್ನು ಇಂಗ್ಲೀಷಿನಲ್ಲಿ ಹಿಂದುಮುಂದಾಗಿ ಹೇಳಿದರೆ ಮಜ್ನು ಎಂದಾಗುತ್ತದೆ ಎಂದು ಹೇಳಿದನಂತೆ. ಲೈಲಾ ಮತ್ತು ಮಜ್ನು ಕತೆಯ ಇಂಗ್ಲೀಷ್‌ ಅವತರಣಿಕೆಯಲ್ಲಿ ಮಜ್ನುವನ್ನು ರೋಮಿಯೊ ಎಂದು ಲೈಲಾಳನ್ನು ಜ್ಯೂಲಿಯೆಟ್‌ ಎಂದು ಕರೆಯುತ್ತಾರೆ ಎಂದು ಹೇಳಿದನಂತೆ. ಅವಳಿಗೆ ಅದು ತಮಾಷೆ ಅನ್ನಿಸಿ “ಅಂದರೆ ನಾನವರ ಕತೆಯನ್ನು ಕಿಚಡಿ ಮಾಡಿಬಿಟ್ಟೆನೆ? ಲೈಲಾ ನಿಜದಲ್ಲಿ ಮಜ್ನೂ ಎಂದು ರೊಮಿ ಜ್ಯೂಲಿ ಎಂದು ಅವರಿಗೆ ಗೊತ್ತಾದರೆ ಏನು ಮಾಡುತ್ತಾರೆ?” ಎಂದು ಕೇಳಿದಳಂತೆ. ಮತ್ತೊಮ್ಮೆ ಆ ಇಂಗ್ಲೀಷ್‌ ಗೊತ್ತಿದ್ದವನು ಸಿಕ್ಕಾಗ ತಾನು ತಪ್ಪಾಗಿ ಹೇಳಿದೆ ಎಂದನಂತೆ. ಅವಳ ಹೆಸರನ್ನು ಹಿಂದುಮುಂದಾಗಿ ಹೇಳಿದರೆ ಮುಜ್ನಾ ಆಗುತ್ತದೆಯೆಂದೂ ಅದು ಹೆಸರಲ್ಲವೆಂದೂ ಅದಕ್ಕೇನೂ ಅರ್ಥವಿಲ್ಲವೆಂದು ಹೇಳಿದನಂತೆ. ಅದಕ್ಕವಳು “ಅವೆಲ್ಲ ಮುಖ್ಯವಲ್ಲವೇ ಅಲ್ಲ. ಅವೆಲ್ಲವೂ ನಾನೇ. ನಾನೇ ರೋಮಿ, ಜ್ಯೂಲಿ, ನಾನೇ ಲೈಲಾ, ಮಜ್ನೂ. ಮುಜ್ನಾ ಕೂಡ ಆಗಬಹುದು ಏನೀಗ? ನನ್ನ ಹೆಸರು ಅಂಜುಮ್‌ ಅಂತ ಹೇಳಿದವರ್ಯಾರು? ನಾನು ಅಂಜುಮ್‌ ಅಲ್ಲ ಅಂಜುಮನ್.‌ ನಾನೇ ಮೆಹಫಿಲ್‌. ಎಲ್ಲವೂ ಹೌದು, ಯಾವುದೂ ಅಲ್ಲ. ಇನ್ನೂ ಯಾರನ್ನಾದರೂ ಕರೆದಿದ್ದೀಯಾ? ಎಲ್ಲರಿಗೂ ಸ್ವಾಗತ” ಎಂದಳಂತೆ. ಆ ಇಂಗ್ಲೀಷ್‌ ಗೊತ್ತಿದ್ದವನು ಅವಳ ಬುದ್ಧಿವಂತಿಕೆಯನ್ನು ಮೆಚ್ಚಿ ಈ ತರಹ ಯೋಚಿಸಿಯೇ ಇರಲಿಲ್ಲ ಅಂದನಂತೆ. “ನಿನಗೆ ಗೊತ್ತಿರುವಷ್ಟು ಉರ್ದುವಿನಲ್ಲಿ ಹೀಗೆ ಯೋಚಿಸಲು ಹೇಗೆ ಸಾಧ್ಯ? ಇಂಗ್ಲೀಷ್‌ ಗೊತ್ತು ಅಂದಮಾತ್ರಕ್ಕೆ ಬುದ್ಧಿವಂತನಾಗಿಬಿಟ್ಟೆ ಅಂದುಕೊಂಡೆಯಾ?” ಅಂದಳಂತೆ.

ಅಂಜುಮ್‌ ಸ್ವಾತಂತ್ರ್ಯಾನಂತರ ಹಳೆದೆಹಲಿಯಲ್ಲಿ ಶಿಯಾ ಮುಸ್ಲಿಂ ದಂಪತಿಗಳಿಗೆ ಜನಿಸಿದಳು. ಅವಳ ತಂದೆ ಮುಲಾಕತ್‌ ಆಲಿ. ತಮ್ಮ ಮನೆತನ ಮಂಗೋಲ್‌ ಚಕ್ರವರ್ತಿ ಚಂಗೇಜ್‌ ಖಾನ್‌ನೊಂದಿಗೆ ಸಂಬಂಧ ಹೊಂದಿದೆ ಎನ್ನುತ್ತಾನೆ. ಅವನೊಬ್ಬ ಹಕೀಮ. ಗಿಡಮೂಲಿಕೆಗಳಿಂದ ಔಷಧಿ ತಯಾರಿಸುತ್ತಾನೆ. ಶರಬತ್‌ ರೂಹ್‌ ಅಫ್ಜಾ ಅವರ ಪ್ರಸಿದ್ಧ ತಯಾರಿಕೆ. ಅದು ಪರ್ಷಿಯನ್‌ ಹೆಸರಾಗಿದ್ದು ಅದರರ್ಥ “ಆತ್ಮದ ಅಮೃತ.” ಅವಳಮ್ಮ ಜಹನಾರಾ ಬೇಗಂ ಬಿಳಿಯ ಗಾಂಧಿ ಟೋಪಿಗಳನ್ನು ಹೊಲೆದು ಚಾಂದಿನಿ ಚೌಕದ ಹಿಂದೂ ವ್ಯಾಪಾರಿಗಳಿಗೆ ಮಾರುತ್ತಾಳೆ. ಹೀಗೆ ಕುಟುಂಬದ ಆದಾಯಕ್ಕೆ ನೆರವಾಗುತ್ತಾಳೆ. ಅಂಜುಮ್‌ ಹುಟ್ಟುವ ಹೊತ್ತಿಗೆ ಅವಳಾಗಲೇ ಮೂರು ಹೆಣ್ಣುಮಕ್ಕಳ ತಾಯಿಯಾಗಿದ್ದಳು. ಎರಡನೆಯ ಅಧ್ಯಾಯ “ಖ್ವಾಬ್ಗಾ”ದಲ್ಲಿ ಅಂಜುಮ್‌ ಹುಟ್ಟುವುದು, ಅವಳ ತಾಯಿ, ಸೂಲಗಿತ್ತಿ, ಅವಳ ಮಾತೃಭಾಷೆ ಇದೆಲ್ಲವನ್ನೂ ನೋಡಬಹುದು.

ಅವಳ ಹೆರಿಗೆ ಮಾಡಿಸಿದ ಸೂಲಗಿತ್ತಿ ಅಹ್ಲಾಮ್‌ ಬಾಜಿ ಬಟ್ಟೆಯಲ್ಲಿ ಮಗುವನ್ನು ಸುತ್ತಿ ತಾಯಿಯ ಕೈಗಿಡುತ್ತ “ಗಂಡು ಮಗು” ಎಂದು ಹೇಳಿದಳು. ಸಂದರ್ಭಗಳನ್ನು ಗಮನಿಸಿದರೆ ಅವರ ತಪ್ಪು ಅರ್ಥವಾಗುತ್ತದೆ…

….. ಮಾರನೆಯ ದಿನ ಬೆಳಿಗ್ಗೆ ಅವಳು ಪುಟಾಣಿ ಅಫ್ತಾಬ್‌ನಿಗೆ ಸುತ್ತಿದ್ದ ಬಟ್ಟೆಯನ್ನು ತೆಗೆದು ಅವನ ಪುಟ್ಟ ದೇಹವನ್ನು…. ಕಣ್ಣುಗಳು, ಮೂಗು, ತಲೆ, ಕುತ್ತಿಗೆ, ತೋಳುಗಳು, ಬೆರಳುಗಳನ್ನು… ಒಂದೊಂದಾಗಿ ಪ್ರೀತಿಯಿಂದ ನೇವರಿಸುತ್ತಾ ನೋಡಿದಳು. ಆಗಲೇ ಅವಳ ಕಣ್ಣಿಗೆ ಗಂಡಿನ ಅಂಗವಿರಬೇಕಾದ ಕಡೆ ಸಣ್ಣದಾದ, ಇನ್ನೂ ಸರಿಯಾಗಿ ರೂಪುಗೊಂಡಿರದ ಹೆಣ್ಣಿನ ಅಂಗವಿರುವುದು ಕಂಡಿತು. ತನ್ನ ಮಗುವನ್ನು ನೋಡಿ ತಾಯಿ ಹೆದರುವ ಸಾಧ್ಯತೆಗಳಿವೆಯೇ? ಜಹನಾರಾ ಬೇಗಂ ಬೆಚ್ಚಿಬಿದ್ದಿದ್ದಳು.

…. ಅವಳಿಗೆ ಗೊತ್ತಿದ್ದ ಏಕೈಕ ಭಾಷೆ ಉರ್ದುವಿನಲ್ಲಿ ಎಲ್ಲ ವಸ್ತುಗಳಿಗೂ, ಸಜೀವ ಮಾತ್ರವಲ್ಲ ನಿರ್ಜೀವ ವಸ್ತುಗಳಾದ – ಕಾರ್ಪೆಟ್‌,ಬಟ್ಟೆಗಳು, ಪುಸ್ತಕಗಳು, ಪೆನ್ನುಗಳು, ಸಂಗೀತ ವಾದ್ಯಗಳು – ಎಲ್ಲಕ್ಕೂ ಲಿಂಗವಿತ್ತು. ಪ್ರತಿಯೊಂದು ಪುಲ್ಲಿಂಗ ಇಲ್ಲವೇ ಸ್ತ್ರೀ ಲಿಂಗವಾಗಿತ್ತು. ಗಂಡಸು ಇಲ್ಲವೇ ಹೆಂಗಸು. ಅವಳ ಮಗುವೊಂದನ್ನು ಬಿಟ್ಟು. ಹೌದು ಅವನಂತಹವರನ್ನು ಗುರುತಿಸಲೆಂದು ಹಿಜ್ರಾ ಎನ್ನುವ ಪದವಿದೆಯೆಂದು ಅವಳಿಗೆ ಗೊತ್ತಿತ್ತು. ಒಂದಲ್ಲ ಎರಡು ಪದಗಳಿದ್ದವು ಹಿಜ್ರಾ ಮತ್ತು ಕಿನ್ನಾರ್‌. ಆದರೆ ಆ ಎರಡು ಪದಗಳಿಂದ ಭಾಷೆಯಾಗುವುದಿಲ್ಲ. ಭಾಷೆಗೆ ಹೊರತಾಗಿ ಬದುಕಲು ಸಾಧ್ಯವೇ? ಈ ಪ್ರಶ್ನೆಯನ್ನು ಅವಳು ನೇರವಾಗಿ ವಾಕ್ಯದಲ್ಲಿ ವ್ಯಕ್ತಪಡಿಸಲಿಲ್ಲ. ಆದರದು ನಿಶ್ಯಬ್ಧ ಭ್ರೂಣ ರೂಪದಲ್ಲಿ ಅವಳಿಗೆ ಎದುರಾಯಿತು.

ಭಾಷೆಯ ಸುತ್ತಲೇ ಗಿರಕಿ ಹೊಡೆಯುವ ಕುಟುಂಬ ಭಾಷೆಯ ಹೊರತಾಗಿ ಬದುಕಲು ಸಾಧ್ಯವೇ ಎನ್ನುವ ಬಿಕ್ಕಟ್ಟನ್ನು ಅಂಜುಮ್‌ಳ ಜನನ ಹುಟ್ಟುಹಾಕಿತು. ಮೊದಲ ಕೆಲವು ವರ್ಷಗಳು ಜಹನಾರ ಬೇಗಂ ಈ ರಹಸ್ಯವನ್ನು ಮುಚ್ಚಿಡುವಲ್ಲಿ ಯಶಸ್ವಿಯಾದಳು. ಅವಳ ಗಂಡನಿಗೆ ನಿಜಹೇಳಬೇಕಾದ ಸಮಯ ಬಂತು. ಮುಲಾಕತ್‌ ಆಲಿ ಉರ್ದು ಮತ್ತು ಪರ್ಷಿಯನ್‌ ಕಾವ್ಯಪ್ರೇಮಿ. ಪ್ರತಿ ಸಂದರ್ಭ, ಪ್ರತಿ ಮೂಡ್‌, ಬದಲಾಗುವ ರಾಜಕೀಯ ಸನ್ನಿವೇಶ ಹೀಗೆ ಎಲ್ಲಕ್ಕೂ ಹೊಂದುವಂತೆ ಪದ್ಯಗಳನ್ನು ಹೇಳಬಲ್ಲವನಾಗಿದ್ದ. ಕಾವ್ಯವು ನೋವನ್ನು ವಾಸಿಮಾಡಬಲ್ಲದು ಎಂದು ನಂಬಿದ್ದ. ಅದಕ್ಕೆ ರೋಗಿಗಳಿಗೆ ಪದ್ಯಗಳನ್ನು ಬರೆದುಕೊಡುತ್ತಿದ್ದ. ಅಂತಹವನಿಗೆ ಅವನ ಹೆಂಡತಿ ಇಷ್ಟು ವರ್ಷ ಮುಚ್ಚಿಟ್ಟದ್ದ ಸತ್ಯವನ್ನು ಹೇಳಿದಾಗ ತನ್ನನ್ನು ಸಂಭಾಳಿಸಿಕೊಳ್ಳಲು, ಸಮಾಧಾನ ಮಾಡಿಕೊಳ್ಳಲು ಯಾವ ಪದ್ಯವೂ ಹೊಳೆಯಲಿಲ್ಲ. ತನ್ನನ್ನು ತಾನು ಸಂಭಾಳಿಸಿಕೊಳ್ಳಲು  ಪ್ರಯತ್ನಪಟ್ಟನಾದರೂ ಅದು ಸಾಧ್ಯವಾಗಲಿಲ್ಲ.

ಮುಲಾಕತ್‌ ಆಲಿಯನ್ನು ಭೇಟಿಯಾದಾಗಲೇ ಭಾರತೀಯ ಉಪಖಂಡದ ಇತಿಹಾಸವನ್ನು ಭಾಷೆಯ ಇತಿಹಾಸವು ಪ್ರತಿಬಿಂಬಿಸುತ್ತದೆ ಎನ್ನುವ ಮೊದಲ ಸುಳಿವು ಸಿಗುತ್ತದೆ. ರಕ್ತಪಾತದಲ್ಲಿ ಅದ್ದಿದ ವಿಭಜನೆಯು ಭೂಮಿ ಮತ್ತು ಜನರೊಂದಿಗೆ ಭಾಷೆಯನ್ನು ವಿಂಗಡಿಸಿತು. ಒಂದು ಭಾಗ “ಮುಸ್ಲಿಂ”, ಮತ್ತೊಂದು ಭಾಗ “ಹಿಂದೂ” ಎಂದಾಯಿತು. ಹಳೆ ದೆಹಲಿಯ ವಿಶಿಷ್ಟ ಸಂಸ್ಕೃತಿ ಮತ್ತು ಪಾಕಪದ್ಧತಿಗಳ ಕುರಿತು ವಾರಾಂತ್ಯದ ಪತ್ರಿಕೆಗಳಿಗಾಗಿ ಆಳವಾದ ಜ್ಞಾನವಿಲ್ಲದ ಯುವ ಪತ್ರಕರ್ತರು ಮುಲಾಕತ್ ಅಲಿಯನ್ನು ಸಂದರ್ಶಿಸಲು ಬಂದಾಗ ಅವನು ಪ್ರತಿಕ್ರಿಯಿಸುವುದು ಹೀಗೆ:

ಮುಲಾಕತ್‌ ಆಲಿ ತನ್ನ ಸಣ್ಣ ಕೊಠಡಿಯೊಳಗೆ ಸಂದರ್ಶಕರನ್ನು ಬಹಳ ಗಂಭೀರ ಮುಖಭಾವದೊಂದಿಗೆ ಸ್ವಾಗತಿಸುತ್ತಾನೆ. ಹಿಂದಿನ ದಿನಗಳ ಕುರಿತು ಬಹಳ ಗೌರವದಿಂದ ಮಾತಾಡುತ್ತಾನೆಯೇ ಹೊರತು ಹಳಹಳಿಕೆ ವ್ಯಕ್ತಪಡಿಸುವುದಿಲ್ಲ. ಹದಿಮೂರನೆಯ ಶತಮಾನದಲ್ಲಿ ತಮ್ಮ ಮನೆತನದವರು ಆಳ್ವಿಕೆ ನಡೆಸಿದ ವೈಖರಿಯನ್ನು ವರ್ಣಿಸುತ್ತಾನೆ. ಅವರ ಸಾಮ್ರಾಜ್ಯವು ಈಗ ವಿಯೆಟ್ನಾಂ, ಕೊರಿಯಾ ಎಂದು ಕರೆಯಲಾಗುವ ಪ್ರದೇಶಗಳಿಂದ ಹಿಡಿದು ಹಂಗೇರಿ, ಬಾಲ್ಕನ್‌ವರೆಗೆ ಉತ್ತರದ ಸೈಬೀರಿಯಾದಿಂದ ಹಿಡಿದು ಭಾರತದ ದಖ್ಖನ್‌ ಪ್ರಸ್ಥಭೂಮಿಯವರೆಗೆ ಹರಡಿತ್ತು ಎಂದೂ, ವಿಶ್ವದಲ್ಲೇ ಎಂದೂ ಕೇಳರಿಯದಷ್ಟು ದೊಡ್ಡ ಸಾಮ್ರಾಜ್ಯವಾಗಿತ್ತೆಂದು ಹೇಳುತ್ತಾನೆ. ಸಾಮಾನ್ಯವಾಗಿ ಅವನು ಸಂದರ್ಶನದ ಕೊನೆಗೆ ತನ್ನ ನೆಚ್ಚಿನ ಉರ್ದು ಕವಿ ಮಿರ್‌ ತಾಖಿ ಮಿರ್‌ನ ದ್ವಿಪದಿಯನ್ನು ಹೇಳುತ್ತಾನೆ:

ಜಿಸ್‌ ಸರ್‌ ಕೊ ಗುರೂರ್‌ ಆಜ್‌ ಹೈ ಯಾಂ ತಾಜ್‌-ವರಿ ಕ

ಕಲ್‌ ಉಸ್‌ ಪೆ ಯಹೀಂ ಶೋರ್‌ ಹೈ ಫಿರ್‌ ನೌಹಗಾರಿ ಕ

ಅವನಲ್ಲಿಗೆ ಬರುವ ಬಹುತೇಕ ಸಂದರ್ಶಕರು ಹೊಸ ಆಳುವ ವರ್ಗದ ರಾಯಭಾರಿಗಳು. ಯೌವನದ ಮತ್ತಿನಲ್ಲಿರುವ ಅವರಿಗೆ ಚಹಾದೊಂದಿಗೆ ಹೇಳಲಾದ ದ್ವಿಪದಿಯ ಅರ್ಥ ಹೊಳೆಯುವುದಿಲ್ಲ. ಅದು ಪತನಗೊಂಡ ಸಾಮ್ರಾಜ್ಯದ ಬಗ್ಗೆ ಎಂದು ಮಾತ್ರ ಅರ್ಥವಾಗುತ್ತಿತ್ತು. ಜೊತೆಗೆ ಮುಲಾಕತ್‌ ಆಲಿಯು ತನ್ನ ಪರಿಸ್ಥಿತಿಯ ಕುರಿತು ಹೇಳುತ್ತಿರುವ ಮಾತು ಎನ್ನುವುದು ತಿಳಿಯುತ್ತಿತ್ತು. ಅವರಿಗೆ ಅರ್ಥವಾಗದೇ ಹೋದದ್ದು ಏನೆಂದರೆ ಉರ್ದು ಭಾಷೆಯ ಬಗೆಗಿನ ಅವರ ಅಜ್ಞಾನದಲ್ಲಿ ಸಂಪೂರ್ಣ ನಂಬಿಕೆಯಿದ್ದ ವಿದ್ವಾಂಸನು ಅವರಿಗೆ ಪದ್ಯದ ನೆಪದಲ್ಲಿ ಎಚ್ಚರಿಕೆಯನ್ನು ಕೃತಕ ನಮ್ರತೆಯಿಂದ ನೀಡಿದ್ದಾನೆ ಎನ್ನುವುದು. ಆ ಭಾಷೆಯನ್ನು ಮಾತಾಡುತ್ತಿದ್ದವರನ್ನು ಕ್ರಮೇಣ ಮೂಲೆಗುಂಪು ಮಾಡಲಾಯಿತು.

ಈ ಭಾಷೆಯನ್ನು ಉರ್ದು/ಹಿಂದಿ/ಹಿಂದೂಸ್ಥಾನಿ ಎಂದು ಕರೆಯಲಾಗುತ್ತಿತ್ತು. ಕಳೆದ ಶತಮಾನದಲ್ಲಿ ಹಿಂದಾವಿಯು ಉತ್ತರ ಭಾರತದ ಬೀದಿಗಳಲ್ಲಿ, ಬಜಾರುಗಳಲ್ಲಿ ಜನ್ಮತಾಳಿತು. ದೆಹಲಿಯ ಸುತ್ತಮುತ್ತ, ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಮಾತಾಡುವ ಖಾರಿ ಬೋಲಿ ಭಾಷೆ ಇದಕ್ಕೆ ಮೂಲ. ಈ ಭಾಷೆಗೆ ಪರ್ಷಿಯನ್‌ ಪದಗಳು ಬಂದು ಸೇರಿಕೊಂಡವು. ಉರ್ದುವನ್ನು ಪರ್ಷಿಯನ್‌ – ಅರೆಬಿಕ್‌ ಲಿಪಿಯಲ್ಲಿ ಬರೆಯಲಾಗುತ್ತಿತ್ತು. ಇದನ್ನು ಉತ್ತರ ಭಾರತ ಹಾಗೂ ದಖ್ಖನ್‌ ಪ್ರಸ್ಥಭೂಮಿಯ ಹಿಂದೂಗಳು, ಮುಸ್ಲಿಮರು ಮಾತಾಡುತ್ತಿದ್ದರು. ಆ ದಿನಗಳಲ್ಲಿ ಪರ್ಷಿಯನ್‌ ರಾಜಭಾಷೆಯಾಗಿತ್ತು. ಉರ್ದು ಸಾಮಾನ್ಯ ಜನರ ಭಾಷೆಯಾಗಿತ್ತು. ಆದರೆ ಮನೆಗಳಲ್ಲಾಗಲಿ ಅದರಲ್ಲೂ ಮಹಿಳೆಯರು ಇದನ್ನು ಬಳಸುತ್ತಿರಲಿಲ್ಲ. ಹಿಂದೂಗಳು ಮತ್ತು ಮುಸ್ಲಿಮರು ಔಪಚಾರಿಕವಾಗಿ ಇದನ್ನು ಸಾಹಿತ್ಯದಲ್ಲಿ, ಕಾವ್ಯದಲ್ಲಿ ಬಳಸುತ್ತಿದ್ದರು. ಉರ್ದು ಪ್ರದೇಶದಿಂದ ಪ್ರದೇಶಕ್ಕೆ ಬೇರೆಯಾಗಿದೆ. ಮೊಗಲ್‌ ಸಾಮ್ರಾಜ್ಯಶಾಹಿಯ ಪತನದೊಂದಿಗೆ ಈ ಭಾಷೆಯ ಸುವರ್ಣಕಾಲವು ಕೊನೆಯಾಯಿತು.

೧೮೫೭ರ ಸಿಪಾಯಿ ದಂಗೆಯ ನಂತರ ಭಾರತವು ಈಸ್ಟ್‌ ಇಂಡಿಯಾ ಕಂಪನಿಯ ಸ್ವತ್ತು ಎನ್ನುವಂತಾಯಿತು. ಮೊಗಲ್‌ ದೊರೆ ಬಹದ್ದೂರ್‌ ಶಾಹ್‌ ಜಾಫರನನ್ನು ಪದಚ್ಯುತಗೊಳಿಸಲಾಯಿತು. ದಂಗೆಗೆ ಮುಸಲ್ಮಾನರನ್ನೇ ಹೊಣೆಮಾಡಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಯಿತು. ಅಧಿಕಾರ ಕೇಂದ್ರಗಳು, ಸ್ಥಾನಮಾನಗಳು ಬದಲಾದವು. ಹೊಸ ಶಕ್ತಿಗಳು ಹೊಗೆಯಂತೆ ಸಂದುಗೊಂದುಗಳಿಂದ ತೂರಿಬರಲಾರಂಭಿಸಿದವು. ಮಿಲಿಟರಿ ಶಕ್ತಿಯೊಂದಿಗೆ ಸಾರ್ವಭೌಮ ಆಳ್ವಿಕೆ ನಡೆಸುವಂತಹ ಹಳೆಯ ಐಡಿಯಾಗಳ ಸ್ಥಾನದಲ್ಲಿ ಪ್ರಾತಿನಿಧಿಕ ಸರ್ಕಾರದ ಕಲ್ಪನೆಯಾಗಿ ರೂಪಾಂತರಗೊಳ್ಳಲು ಆರಂಭಿಸಿದಾಗ ಹಳೆಯ ಊಳಿಗಮಾನ್ಯ ಸಮುದಾಯಗಳು ಅಧಿಕಾರ ಮತ್ತು ಉದ್ಯೋಗಾವಕಾಶಗಳನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳಲು ಆಧುನಿಕ “ಕ್ಷೇತ್ರ”ಗಳಲ್ಲಿ  ಒಗ್ಗೂಡಲಾರಂಭಿಸಿದವು. ಕ್ಷೇತ್ರ ದೊಡ್ಡದಾದಷ್ಟು ಹೆಚ್ಚಿನ ಹತೋಟಿ ಎನ್ನುವಂತಾಯಿತು.

ಜನಸಂಖ್ಯೆಯು ಬಹಳ ಮಹತ್ವದ್ದಾಯಿತು. ಬ್ರಿಟೀಷರು ಮಾಡಿದ ಮೊದಲ ಜನಗಣತಿಯು ಆತಂಕದ ಮೂಲವಾಯಿತು. “ಹಿಂದೂ” ನಾಯಕರು ಲಕ್ಷಗಟ್ಟಲೆಯಿದ್ದ “ಅಸ್ಪೃಶ್ಯ” ಜಾತಿಗೆ ಸೇರಿದವರ ಕಡೆ ಗಮನಹರಿಸಲಾರಂಭಿಸಿದರು. ಹಿಂದೆ ಜಾತಿಯ ಕಳಂಕದಿಂದ ಪಾರಾಗಲು ಮಿಲಿಯನ್‌ಗಟ್ಟಲೆ ಮಂದಿ ಇಸ್ಲಾಂ, ಸಿಖ್‌ ಹಾಗೂ ಕ್ರಿಶ್ಚಿಯನ್‌ ಧರ್ಮಗಳಿಗೆ ಮತಾಂತರಗೊಂಡಿದ್ದರು. ಈಗ ಮೇಲ್ಜಾತಿಗಳವರಿಗೆ ಈ ಮತಾಂತರವು ದುರಂತದಂತೆ ಕಂಡಿತು. ಹಿಂದೂ ಮೇಲ್ಜಾತಿಗಳವರು ತಾವು ಆರ್ಯ ಜನಾಂಗಕ್ಕೆ ಸೇರಿದವರು ಎಂದು ನಂಬಿದ್ದರು. ಅವರ ಸಂಸ್ಥೆಗಳು ಮತಾಂತರಗೊಂಡ ಅಸ್ಪೃಶ್ಯರನ್ನು, ಬುಡಕಟ್ಟು ಜನರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರುವಂತಹ ಘರ್‌ ವಾಪ್ಸಿ ತರಹದ ಕಾರ್ಯಕ್ರಮಗಳನ್ನು ಮಾಡತೊಡಗಿದರು. ಇದು ಸಾಂಕೇತಿಕವಾಗಿ “ಆತ್ಮದ ಶುದ್ಧಿಕರಣ” ಎನ್ನುವ ಅರ್ಥವನ್ನು ಹೊಂದಿದೆ.

ತನ್ನ ಪ್ರತಿಸ್ಪರ್ಧಿಗಳ ನಡುವೆ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಹೊಸದಾಗಿ ಹುಟ್ಟುತ್ತಿರುವ ಹಿಂದೂ ಸಮುದಾಯಕ್ಕೆ ಸಾಂಸ್ಕೃತಿಕ ಸಂಕೇತಗಳು ಅಗತ್ಯವೆನಿಸಿದವು. ಗೋ ಮಾತೆ ಹಾಗೂ ಭಾಷೆಯನ್ನು ಇದಕ್ಕಾಗಿ ಬಳಸಿದರು. ಗೋರಕ್ಷಕ ಸಮಾಜಗಳು ತಲೆಎತ್ತಿದವು. ಜೊತೆಗೆ ದೇವನಾಗರಿಯನ್ನು ಉರ್ದು ನಂತರದ ಎರಡನೇ ಲಿಪಿಯಾಗಿ ಒಪ್ಪಿಕೊಳ್ಳಬೇಕೆಂಬ ಬೇಡಿಕೆಯನ್ನು ಇಡಲಾಯಿತು. ದೇವನಾಗರಿ, ಮೂಲತಃ ಬಭನಿ ಎಂದು ಕರೆಯಲಾಗುವ  ಲಿಪಿ ಬ್ರಾಹ್ಮಣರಿಗೆ ಸೇರಿದ್ದು. ಸಂಸ್ಕೃತದಂತೆ ಇದನ್ನು ಕೂಡ ಪಾವಿತ್ರ್ಯ ಹಾಳಾಗಬಾರದೆಂದು ಕೆಳಜಾತಿಗಳಿಂದ ಶತಶತಮಾನಗಳಿಂದ ದೂರವಿಡಲಾಗಿತ್ತು. ಬದಲಾದ ಸಮಯದೊಂದಿಗೆ ಈಗ ಅದನ್ನು “ಜನರ” ಸ್ಥಳೀಯ ಲಿಪಿ ಎಂದು ಪ್ರಚುರಪಡಿಸುವ ಅಗತ್ಯತೆ ತಲೆದೋರಿತು. ವಾಸ್ತವವಾಗಿ ಆ ಸಮಯದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಲಿಪಿ ಕೈಥಿ. ಇದನ್ನು ಬ್ರಾಹ್ಮಣೇತರ ಜಾತಿಗಳಾದ ಕಾಯಸ್ಥರು ಬಳಸುತ್ತಿದ್ದರು. ಇವರು ಸ್ವಲ್ಪಮಟ್ಟಿಗೆ ಮುಸಲ್ಮಾನರು. ಕೆಲವೇ ದಶಕಗಳಲ್ಲಿ ಕ್ಯಾಥಿ ಲಿಪಿಯನ್ನು ಜನರ ನೆನಪಿನಿಂದಲೇ ಅಳಿಸಿಬಿಟ್ಟರು.

ಸಾಕ್ಷರತೆಯ ಮಟ್ಟ ಕಡಿಮೆಯಿದ್ದಾಗ ಹೊಸ ಲಿಪಿಗಾಗಿ ಸಾಮಾಜಿಕ ಚಳುವಳಿಯನ್ನು ಜನಪ್ರಿಯಗೊಳಿಸುವುದು ಸುಲಭವಲ್ಲ. ಜನರಿಗೆ ಅದರ ಬಗ್ಗೆ ಆಸಕ್ತಿಯೇ ಇಲ್ಲದಿರುವಾಗ ಏನು ಮಾಡಲು ಸಾಧ್ಯ? ಅದಕ್ಕೊಂದು ಚತುರೋಪಾಯವನ್ನು ಕಂಡುಹಿಡಿದರು. ಅಲೋಕ್‌ ರಾಯ್‌ ತಮ್ಮ Hindi Nationalism ಕೃತಿಯಲ್ಲಿ ದೇವನಾಗರಿಯನ್ನು ಹಿಂದೂ ಏಕತೆ, ಗೋ ಸಂರಕ್ಷಣೆ ಮತ್ತು ಘರ್‌ ವಾಪ್ಸಿಗಳೊಂದಿಗೆ ಹೇಗೆ ಹರಿಬಿಡಲಾಯಿತು ಎಂದು ವಿವರವಾಗಿ ದಾಖಲಿಸಿದ್ದಾರೆ. ನಗರಿ ಪರಿಚಾರಣಿ ಸಭೆಗಳು – ಸಮಿತಿಗಳು ನಗರಿಯನ್ನು ಜನಪ್ರಿಯಗೊಳಿಸಲು ಜನ್ಮತಾಳಿದವು. ಗೋರಕ್ಷಕ ಹಾಗೂ ಘರ್‌ ವಾಪ್ಸಿ ಸಮಿತಿಗಳು ಇವೆಲ್ಲದರಲ್ಲಿ ಒಂದೇ ಗುಂಪಿನ ಸದಸ್ಯರು ಸಿಬ್ಬಂದಿಗಳಾಗಿ ಕೆಲಸ ಮಾಡುತ್ತಿದ್ದರು. ದೇವನಾಗರಿಗಾಗಿ ತಕ್ಷಣವೇ ಪ್ರಚಾರ ಕೈಗೊಳ್ಳಲಾಯಿತು. ಸರ್ಕಾರಿ ಕಚೇರಿಗಳಲ್ಲಿನ ಕೆಲಸ ಪಡೆಯಲು ಈ ಭಾಷೆ ತಿಳಿದಿರಬೇಕು ಎಂದರು.  ಆ ಸಮಯದಲ್ಲಿ ಪರ್ಷಿಯನ್‌ ಭಾಷೆ ಓದಲು ತಿಳಿದಿರುವುದು ಕನಿಷ್ಠ ವಿದ್ಯಾರ್ಹತೆಯಾಗಿತ್ತು. ಗಣ್ಯ ಮುಸ್ಲಿಂ ವ್ಯಕ್ತಿಗಳ ಪ್ರತಿರೋಧದ ನಡುವೆಯೂ ಈ ಪ್ರಚಾರವು ಜನಪ್ರಿಯವಾಯಿತು. ಆ ಕಾಲದ ಅತ್ಯುತ್ತಮ ಸುಧಾರಣಾವಾದಿ, ಆಧುನಿಕತವಾದಿ ಎಂದು ಕರೆಯಲಾಗುತ್ತಿದ್ದ ಸರ್‌ ಸೈಯದ್‌ ಅಹ್ಮದ್‌ ಖಾನರನ್ನೂ ಒಳಗೊಂಡಂತೆ ಯಥಾಸ್ಥಿತಿಯನ್ನೇ ಇರಲಿ ಎಂದು ಬಯಸುತ್ತಿದ್ದ ಮುಸ್ಲಿಂ ನಾಯಕರು ಇದನ್ನು ವಿರೋಧಿಸಿದರು. ಸರ್‌ ಸೈಯದ್‌ ಅಹ್ಮದ್‌ ಖಾನರು ಪರ್ಷಿಯನ್‌ – ಅರೇಬಿಕ್‌ ಲಿಪಿಯನ್ನೇ ಏಕೈಕ ಲಿಪಿಯಾಗಿ ಉಳಿಸಿಕೊಳ್ಳಬೇಕು ಎನ್ನುವ ಅವರ ವಾದವನ್ನು ಹೀಗೆ ಸಮರ್ಥಿಸಿಕೊಳ್ಳುತ್ತಾರೆ : “ಕೆಳಜಾತಿಯ, ತಳಮೂಲದ ವ್ಯಕ್ತಿ ಬಿ.ಎ ಅಥವ ಎಂಎ ಪದವೀಧರನಾಗಿದ್ದರೂ, ಅರ್ಹನಾಗಿದ್ದರೂ, ನಮ್ಮ ಮೇಲ್ವರ್ಗದವರ ಬದುಕು, ಆಸ್ತಿಯ ಮೇಲೆ ಪರಿಣಾಮ ಬೀರುವ ಕಾನೂನನ್ನು ರೂಪಿಸುವ ಸ್ಥಾನದಲ್ಲಿರುವುದನ್ನು ಸಹಿಸಲು ಸಾಧ್ಯವೇ? ಎಂದಿಗೂ ಇಲ್ಲ!”

ದೇವನಾಗರಿ ಚಳುವಳಿಗೆ ಏಪ್ರಿಲ್‌ ೧೯೦೦ರಂದು ಮೊದಲ ಜಯ ಸಿಕ್ಕಿತು. ಲೆಫ್ಟಿನೆಂಟ್‌ ಗವರ್ನರ್‌ ಸರ್‌ ಆಂಥೋಣಿ ಮ್ಯಾಕ್‌ಡೊನೆಲ್‌ ಅವರು ಆಡಳಿತದಲ್ಲಿ ಪರ್ಷಿಯನ್‌ ಜೊತೆಗೆ ದೇವನಾಗರಿ ಲಿಪಿಯನ್ನು ಬಳಸಲು ಅನುಮತಿಸುವ ಆದೇಶವನ್ನು ಹೊರಡಿಸಿದರು. ಕೆಲವೇ ತಿಂಗಳುಗಳಲ್ಲಿ ಹಿಂದಿ ಮತ್ತು ಉರ್ದುವನ್ನು ಎರಡು ಪ್ರತ್ಯೇಕ ಭಾಷೆಗಳೆಂದು ಗುರುತಿಸುವ ಪರಿಪಾಠ ಬೆಳೆಯಿತು. ಎರಡೂ ಕಡೆಗಳ ಭಾಷಾಪಂಡಿತರು ಭಾಷಾ ಶುದ್ಧೀಕರಣಕ್ಕೆ ಟೊಂಕ ಕಟ್ಟಿ ನಿಂತರು. “ಹಿಂದಿ”ಯಲ್ಲಿನ ಪರ್ಷಿಯನ್‌ ಇಲ್ಲವೇ ಬೇರೆ ಭಾಷೆಗಳ ಪ್ರಭಾವದಿಂದ ನುಸುಳಿರುವ ಶಬ್ದಗಳನ್ನು ಕೀಳೆಂದು ಕ್ರಮೇಣ ಕಿತ್ತುಹಾಕಲಾಯಿತು. (ಅದುಹೇಗೋ ಹಿಂದಿ, ಹಿಂದೂ, ಹಿಂದೂಸ್ಥಾನ ಶಬ್ದಗಳು ಬಚಾವಾದವು,)

ಸಂಸ್ಕೃತವು ಪರ್ಷಿಯನ್‌ ಸ್ಥಾನದಲ್ಲಿ ಬಂದುಕೂತಿತು. ಆದರೆ ಸಂಸ್ಕೃತ ಭಾಷೆಯು ಧಾರ್ಮಿಕ ಆಚರಣೆಗಳ, ಧಾರ್ಮಿಕ ಗ್ರಂಥಗಳ, ಪುರೋಹಿತರ ಭಾಷೆಯಾಗಿತ್ತು. ಅದರ ಶಬ್ದಕೋಶದಲ್ಲಿ ದೈನಂದಿನ ಮನುಷ್ಯ ಅನುಭವಕ್ಕೆ ಪದಗಳಿರಲಿಲ್ಲ. ಅದು ಪ್ರೇಮ ಇಲ್ಲವೇ ಶ್ರಮ ಇಲ್ಲವೇ ದಣಿವು ಇಲ್ಲವೇ ಹಂಬಲಕ್ಕೆ ಹೊಂದುವ ಭಾಷೆಯಾಗಿರಲಿಲ್ಲ. ಅದು ಸಾಮಾನ್ಯರ ಹಾಡು ಇಲ್ಲವೇ ಕಾವ್ಯದ ಭಾಷೆಯಾಗಿರಲಿಲ್ಲ. ಈ ಗುಣ ಅವಧಿ, ಮೈಥಿಲಿ, ಬ್ರಜ್‌ ಭಾಷಾ, ಭೋಜಪುರಿಯಂತಹ ಉಪಭಾಷೆಗಳಲ್ಲಿತ್ತು. ಭಾಷೆಯನ್ನು ಶ್ರೀಮಂತಗೊಳಿಸುವ ಬದಲು ಬಡಗೊಳಿಸುವ ಅಪರೂಪದ ಪ್ರಯತ್ನಕ್ಕೆ ಉದಾಹರಣೆಯಾಗಿ ಇತಿಹಾಸದಲ್ಲಿದು ದಾಖಲಾಗಿದೆ. ಇದು ಸಾಗರಕ್ಕೆ ಬದಲಾಗಿ ಕುಡಿಕೆ ನೀರನ್ನು ಕೊಟ್ಟಂತಾಯಿತು.

ಎರಡೂ ಕಡೆಯವರು ಪಟ್ಟುಹಿಡಿದು ಕೂತದ್ದರಿಂದ ಸಾಹಿತ್ಯದಲ್ಲೂ ವಿಭಜನೆ ಶುರುವಾಯಿತು. “ಉರ್ದು” ಕಬೀರ, ಸೂರದಾಸ, ಮೀರ, ರಸ್ಖಾನ್‌ನಂತಹ ಕೃಷ್ಣನ ಭಕ್ತರಾಗಿದ್ದ ಮುಸ್ಲಿಂ ಭಕ್ತಕವಿಗಳನ್ನು ದೂರವಿಟ್ಟಿತು. “ಹಿಂದಿ” ಉರ್ದು ಮಹಾಕವಿಗಳಾದ ಮೀರ್‌ ಮತ್ತು ಗಾಲಿಬರನ್ನು ದೂರವಿಟ್ಟಿತು. ಅದೃಷ್ಟವಶಾತ್‌ ಪ್ರಗತಿಪರ ಲೇಖಕರು, ಕವಿಗಳು ಈ ಒತ್ತಡವನ್ನು ತಡೆದುಕೊಂಡು ತಮ್ಮ ಭಾಷೆಗೆ ಉಂಟಾದ ಸ್ಥಿತಿಯ ಅರಿವಿಟ್ಟುಕೊಂಡೇ ಬರವಣಿಗೆಯನ್ನು ಮುಂದುವರೆಸಿದರು. ಕ್ರಮೇಣ ಹಳೆಯ ತಲೆಮಾರು ಮರೆಯಾಗುತ್ತದೆ. ಹೊಸಪೀಳಿಗೆಯವರು ಸರ್ಕಾರದ ಸಮಿತಿಗಳಿಂದ ರೂಪಿತವಾದ “ಹೊಸ” ಹಿಂದಿ ಪುಸ್ತಕಗಳಿಂದ ಶಿಕ್ಷಣ ಪಡೆದು ಬಂದವರಾಗಿರುತ್ತಾರೆ. ಅವರು ತಮ್ಮ ಶ್ರೀಮಂತ ಪರಂಪರೆಯನ್ನು ಮರಳಿಪಡೆಯಲು ಕಷ್ಟಪಡಬೇಕಾಗುತ್ತದೆ.

ಈ ಕಾರಣದಿಂದಲೇ ಮುಲಾಕತ್‌ ಆಲಿ ತನ್ನನ್ನು ನೋಡಲು ಬಂದ ಯುವಸಂದರ್ಶಕರಿಗೆ ಮಿರ್‌ನ ದ್ವಿಪದಿಗಳನ್ನು ಹೇಳುತ್ತಾನೆ. ಅವನಿಗೆ ಈ “ಹೊಸ” ಹಿಂದಿ ಪೀಳಿಗೆಯವರಿಗೆ ಅದು ಅರ್ಥವಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಅವನ ಸಂದರ್ಶಕರ ಶಬ್ದಕೋಶದ ಮಿತಿ ಅವನಿಗೆ ತಿಳಿದಿದೆ.

ಇಂದು ಭಾರತದಲ್ಲಿರುವ ಯುವಪೀಳಿಗೆಯ ಉರ್ದು ಭಾಷಿಕರಿಗೆ ಪರ್ಷಿಯನ್‌ ಲಿಪಿಯನ್ನು ಓದಲು ಬರುವುದಿಲ್ಲ. ಅವರು ಉರ್ದುವನ್ನು ದೇವನಾಗರಿ ಲಿಪಿಯಲ್ಲಿ ಮಾತ್ರ ಓದಬಲ್ಲರು. ಉರ್ದುವನ್ನು ಕೇವಲ ಮುಸ್ಲಿಂ ಭಾಷೆಯಾಗಿ ಮಾತ್ರವಲ್ಲ ಪಾಕಿಸ್ತಾನಿ ಭಾಷೆಯಾಗಿಯೂ ನೋಡಲಾಗುತ್ತದೆ. ಕೆಲವರ ಕಣ್ಣಲ್ಲಿ ಅದನ್ನು ಮಾತಾಡುವುದು ಅಪರಾಧ ಎನ್ನುವಂತಾಗಿದೆ. ಮಾರ್ಚ್‌ ೨೦೧೭ರಂದು ಉತ್ತರ ಪ್ರದೇಶದ ಶಾಸಕಾಂಗ ಸಭೆಯ ಇಬ್ಬರು ಮುಸ್ಲಿಂ ಸದಸ್ಯರನ್ನು ಉರ್ದುವಿನಲ್ಲಿ ಪ್ರಮಾಣವಚನ ಸ್ವೀಕರಿಸದಂತೆ ತಡೆಯಲಾಯಿತು. ಅಲಿಘಡ್‌ ಮುನಿಸಿಪಲ್‌ ಕಾರ್ಪೋರೇಷನ್‌ ಸದಸ್ಯನ ಮೇಲೆ ಇದೇ ಕಾರಣಕ್ಕೆ “ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ” ಎಂಬ ಆರೋಪ ಹೊರಿಸಲಾಯಿತು.

ಹಿಂದಿ ಅದ್ಭುತವಾಗಿ ಗೆಲುವು ಸಾಧಿಸಿದರೂ ಅದರ ಕಾವಲಿಗೆ ಕೂತವರ ಆತಂಕ ತಪ್ಪಲಿಲ್ಲ. ಬಹುಶಃ ಇದಕ್ಕೆ ಕಾರಣ ಅವರ ಶತ್ರುಗಳು ಸತ್ತರೂ ಸಾಯದೇ ಜೀವಂತವಾಗಿ ಉಳಿದಿದ್ದ ಕವಿಗಳು. ಗುಜರಾತಿನಲ್ಲಿ ೨೦೦೨ರಲ್ಲಿ ನಡೆದ ಹಿಂಸಾಚಾರದ ಹಿನ್ನಲೆಯ ಕಾರಣಗಳಲ್ಲಿ ಕಾವ್ಯವೂ ಸೇರಿತ್ತು. ಅಂಜುಮ್‌ ತನ್ನ ತಂದೆಯ ಸ್ನೇಹಿತರಾದ ಝಾಕಿರ್‌ ಸಾಹೇಬರೊಂದಿಗೆ ಗುಜರಾತಿಗೆ ಹೋದಾಗ ಅವಳಿಗಿದರ ಅರಿವಾಯಿತು.

ಅವರು ಅಹಮದಾಬಾದಿಗೆ ಹೋದಾಗ ಝಾಕಿರ್‌ ಸಾಹೇಬರು ೧೭ನೆಯ ಶತಮಾನದ ಉರ್ದು ಪ್ರೇಮ ಕವಿ ವಲಿ ದಖನಿಯ ಸಮಾಧಿಯನ್ನು ನೋಡಿ ಹೋಗೋಣ ಎಂದರು. ಅವನು ಮುಲಾಕತ್‌ ಆಲಿಯ ನೆಚ್ಚಿನ ಕವಿ. ಅವನ ಆಶೀರ್ವಾದ ಪಡೆಯಲು ಅವರಿಬ್ಬರೂ ಅವನ ಪದ್ಯಗಳನ್ನು ಖುಷಿಯಿಂದ ನೆನೆಯುತ್ತಾ ಹೊರಟರು. ಮುಲಾಕತ್‌ ಆಲಿಯ ನೆಚ್ಚಿನ ಪದ್ಯಗಳಲ್ಲೊಂದು:

ಜಿಸೆ ಇಶ್ಕ್‌ ಕ ತೀರ್‌ ಕಾರಿ ಲಗೆ

ಉಸೆ ಜಿಂದಗಿ ಕ್ಯೂಂ ನ ಭಾರಿ ಲಗೆ

ಕೆಲವು ದಿನಗಳ ನಂತರ ಅವರು ರೈಲಿನಲ್ಲಿ ಮೊದಲು ಅಜ್ಮೇರಿಗೆ ನಂತರ ಅಲ್ಲಿಂದ ಅಹಮದಾಬಾದಿಗೆ ಹೋದರು. ಆಮೇಲೆ ಅವರಿಂದ ಯಾವುದೇ ಸುದ್ದಿ ಬರಲಿಲ್ಲ.

ಸಾಯಿದ (ಅಂಜುಮ್‌ಳನ್ನು ಪ್ರೀತಿಸುತ್ತಿದ್ದಳು. ಅಂಜುಮ್‌ಗೆ ತನ್ನ ಬಗ್ಗೆ ಅನುಮಾನವಿದೆ ಎಂದು ಅವಳಿಗೆ ಗೊತ್ತಿರಲಿಲ್ಲ) ಟಿವಿಯಲ್ಲಿ ನ್ಯೂಸ್‌ ಚಾನೆಲ್‌ ಹಾಕಿನೋಡೋಣ. ನ್ಯೂಸ್‌ನಲ್ಲಿ ಅಕಸ್ಮಾತ್‌ ಅಂಜುಮ್‌, ಝಾಕಿರ್‌ ಸಾಹೇಬರು ಕಂಡರೂ ಕಾಣಬಹುದು ಅಂದಾಗ ಅವಳ ಮಾತನ್ನು ಯಾರೂ ವಿರೋಧಿಸಲಿಲ್ಲ. ಗುಜರಾತಿನ ಖ್ವಾಬ್ಗಾದಲ್ಲಿನ ನಿರಾಶ್ರಿತ ಶಿಬಿರಗಳ ಮುಂದೆ ನಿಂತು ಅಲ್ಲಿನ ದೃಶ್ಯಗಳನ್ನು ತೋರಿಸುತ್ತಾ ವರದಿಗಾರರು ಗಂಟಲುಹರಿದುಕೊಳ್ಳುತ್ತಿದ್ದರು. ಅಲ್ಲಿಯೇ ಸಾವಿರಾರು ಮುಸ್ಲಿಂ ಕುಟುಂಬಗಳು ಆಶ್ರಯ ಪಡೆದಿತ್ತು. ಟಿವಿಯ ಸದ್ದನ್ನು ಆರಿಸಿ ಕಣ್ಣಲ್ಲಿ ಕಣ್ಣಿಟ್ಟು ಆಹಾರ ಇಲ್ಲವೇ ಕಂಬಳಿ ವಿತರಿಸುವ ಸಾಲಿನಲ್ಲೋ ಅಥವ ಟೆಂಟುಗಳ ದೃಶ್ಯಗಳಲ್ಲಿ ಎಲ್ಲಾದರೂ ಅಂಜುಮ್‌ ಮತ್ತು ಝಾಕಿರ್‌ ಸಾಹೇಬರು ಕಾಣಬಹುದೆಂದು ಹುಡುಕಲು ತೊಡಗಿದರು. ವಲಿ ದಖನಿಯ ಸಮಾಧಿಯನ್ನು ನೆಲಸಮಮಾಡಿ ಅದರ ಮೇಲೆ ರಸ್ತೆ ನಿರ್ಮಾಣ ಮಾಡಿದ ಸುದ್ದಿ ತಿಳಿಯಿತು. (ಸಮಾಧಿಯಿದ್ದ ಸ್ಥಳದಲ್ಲಿ ಜನ ರಾಶಿ ರಾಶಿ ಹೂಗಳನ್ನು ತಂದಿಡಲು ಶುರುಮಾಡಿದರು. ಪೋಲಿಸರಾಗಲಿ, ಗಲಾಟೆ ಮಾಡಿದ ಗುಂಪುಗಳಾಗಲಿ, ಮುಖ್ಯಮಂತ್ರಿಗಾಗಲಿ ಇದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಡಿಯಲ್ಲಿ ಹೂಗಳು ಸಿಕ್ಕು ನಲುಗಿಹೋದರೂ ಹೊಸ ಹೊಸ ಹೂಗಳನ್ನು ತಂದಿಟ್ಟರು. ಅಪ್ಪಚ್ಚಿಯಾದ ಹೂವು ಕಾವ್ಯದ ನಡುವಿನ ಸಂಬಂಧದ ಕುರಿತು ಯಾರು ಏನು ತಾನೇ ಮಾಡಲು ಸಾಧ್ಯ?)

೨೧ನೆಯ ಶತಮಾನದ ಗುಂಪಿಗೆ ೩೦೦ ವರ್ಷಗಳ ಹಿಂದೆ ಬದುಕಿದ್ದ ಕವಿಯ ಬಗ್ಗೆ ಯಾಕಿಷ್ಟು ಸಿಟ್ಟು? ವಲಿ ದಖಾನಿ ಎನ್ನುವ ೧೭ನೆಯ ಶತಮಾನದ ಕವಿ ವಲಿ ಔರಂಗಬಾದಿ, ವಲಿ ಗುಜರಾತಿ ಎಂದು ಕೂಡ ಹೆಸರಾಗಿದ್ದ. ಅವನು ದಖ್ಖನಿ ಉರ್ದುವಿನಲ್ಲಿ ಕಾವ್ಯರಚನೆ ಮಾಡಿದ. ಉತ್ತರದಲ್ಲಿನ ಆಸ್ಥಾನ ಕವಿಗಳಿಗೆ ಆ ಭಾಷೆಯ ವೈಶಿಷ್ಟಯ ಗೊತ್ತಿರಲಿಲ್ಲ. ಅವನು ಉರ್ದುವಿನಲ್ಲಿ ಬರೆದರೂ ಉಪಖಂಡದಲ್ಲಿ ತನ್ನ ಕಾವ್ಯಸಂಗ್ರಹವನ್ನು ದಿವಾನ್ನಲ್ಲಿ ಪ್ರಸ್ತುತಪಡಿಸಿದ ಮೊದಲ ಕವಿ. ದಿವಾನ್‌ ಎನ್ನುವುದು ಮೊದಲು  ಪರ್ಷಿಯನ್‌ ಸಂಪ್ರದಾಯದಲ್ಲಿ ಪದ್ಯಗಳನ್ನು ಮೂರು ವಿಭಾಗಗಳಡಿಯಲ್ಲಿ ವರ್ಣಮಾಲೆಯ ಪ್ರಕಾರ ಜೋಡಿಸುವ ಪದ್ಧತಿ. ಆ ಮೂರು ಭಾಗಗಳು : ಮಸ್ನಾವಿ (ವಿವರಣಾತ್ಮಕ ಪದ್ಯಗಳು), ಮರ್ಸಿಯ (ಹುತಾತ್ಮ ಹುಸೇನರನ್ನು ಸ್ಮರಿಸುವ ಕವನಗಳು), ಕಾಸಿದ (ಯೋಧರನ್ನು ಹಾಡಿಹೊಗಳುವ ಸಂಪ್ರದಾಯ). ವಲಿ ದಖಾನಿಯ ದಿವಾನ್‌ ಪುಸ್ತಕವು ಪರ್ಷಿಯನ್‌ ಕಾವ್ಯವಲಯದೊಳಗೊಂದು ಹೊಸ ಸಂಚಲವನ್ನು ಮೂಡಿಸಿತು. ಅವನು ಉತ್ತರ ದಕ್ಷಿಣದ ನಡುವೆ ಸಾಂಸ್ಕೃತಿಕ ಸೇತುವೆಯಾದ. ಉರ್ದು ಕಾವ್ಯದ ಪಿತಾಮಹ ಎನಿಸಿಕೊಂಡ.

ಅವನ ಸಮಾಧಿಯನ್ನು ನಾಶಮಾಡಿದ ಈ ಆಧುನಿಕ ಗುಂಪು ದೇಸಿಯತೆಯನ್ನು ತಲೆಮೇಲೆ ಹೊತ್ತಿದೆಯಷ್ಟೇ, ಅವರುಗಳು ಪರ್ಷಿಯನ್‌ ಭಾಷೆಯಲ್ಲಿ ಬರೆಯುತ್ತಿದ್ದ ಕವಿಗಳನ್ನು ಉರ್ದುವಿನಲ್ಲಿ ಬರೆಯುವಂತೆ ಪ್ರಭಾವಿಸಿದ ಕವಿ ಎಂದು, ಉರ್ದುವನ್ನು ಸಾಹಿತ್ಯಕ ಭಾಷೆಯಾಗಿ ಪರಿವರ್ತಿಸಿದ ಕವಿ ಎಂದು ವಲಿ ದಖನಿಯನ್ನು ಗುರುತಿಸಿ ಗೌರವಿಸಬಹುದಿತ್ತು. ಉರ್ದು ಹಿಂದೂಸ್ಥಾನದ ಬೀದಿಯಲ್ಲಿ ಹುಟ್ಟಿದ ಭಾಷೆ. ಆದರೆ ಕಟ್ಟಿರುವ ಕತೆ ಹಾಗಿಲ್ಲವಲ್ಲ.

೨೦೦೨ರ ಗುಜರಾತಿನ ಗಲಭೆಗಳಲ್ಲಿ ವಲಿ ದಖನಿಯ ಸಮಾಧಿಯನ್ನು ನಾಶಪಡಿಸಿದಂತಹ ಘಟನೆ ಇದೇ ಮೊದಲಲ್ಲ ನಡೆಯುತ್ತಿರುವುದು. ಅದೇ ಸಮಯದಲ್ಲೇ ಬರೋಡದಲ್ಲಿ ಗುಂಪೊಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅದ್ಭುತ ಗಾಯಕ ಉಸ್ತಾದ್‌ ಫಯಾಜ಼್ ಖಾನರ ಸಮಾಧಿಯನ್ನು ಹಾಳುಗೆಡವಿತು. ಅದಕ್ಕೂ ಮುನ್ನ ೧೯೭೦ರಲ್ಲಿ ನಡೆದ ಹಿಂಸಾಚಾರದಲ್ಲಿ ಗುಂಪು ಹಾಡುಗಾರ್ತಿ ರಸೂಲನ್‌ ಬಾಯಿಯ ಮನೆಯನ್ನು ಕೆಡವಿತು. ಇಂದಿನ ಈ ಗುಂಪುಗಲಭೆ ಸಂಪ್ರದಾಯದ ವಿಚಾರವಾಗಿ ಹೇಳಬಹುದಾದ ಏಕೈಕ ಒಳ್ಳೆಯ ಸಂಗತಿಯೆಂದರೆ ಇದಕ್ಕೆ ಕಲೆ ಅಪಾಯಕಾರಿ ಎನ್ನುವುದು ಅರ್ಥವಾಗಿದೆ.

ಅಂಜುಮ್‌ ಗುಜರಾತ್‌ ಹಿಂಸಾಚಾರದಲ್ಲಿ ಬದುಕುಳಿಯುತ್ತಾಳೆ. ಝಾಕಿರ್‌ ಸಾಹೇಬರ ಹೆಣದ ಮೇಲೆ ಪ್ರಾಣಭಯದಿಂದ ಬಿದ್ದಿದ್ದ ಅಂಜುಮ್‌ಳನ್ನು ಗುಂಪು ನೋಡುತ್ತದೆ. ಹಿಜ್ರಾಗಳನ್ನು ಕೊಂದರೆ ದುರಾದೃಷ್ಟ ಬೆನ್ನುಹತ್ತುತ್ತದೆ ಎಂಬ ನಂಬಿಕೆ ಇರುವುದರಿಂದ ಅವಳನ್ನು ಕೊಲ್ಲುವುದಿಲ್ಲ. ಬದಲಿಗೆ ಅವಳಿಗೆ ತಾವು ಕೂಗುತ್ತಿರುವ ಘೋಷಣೆ ಕೂಗುವಂತೆ ಹೇಳುತ್ತಾರೆ :

ಭಾರತ್‌ ಮಾತಾ ಕಿ ಜೈ! ವಂದೇ ಮಾತರಂ!

ಕೆಟ್ಟಕನಸಿಗಿಂತ ಕೆಟ್ಟದಾದ ಪರಿಸ್ಥಿತಿಯಲ್ಲಿ ಅಳುತ್ತಾ, ನಡುಗುತ್ತಾ, ಅವಮಾನದಿಂದ ನರಳುತ್ತಾ ಅವರು ಹೇಳಿದಂತೆ ಮಾಡುತ್ತಾಳೆ.

ಅವರು ಅವಳನ್ನು ಜೀವಂತವಾಗಿ ಬಿಡುತ್ತಾರೆ. ಕೊಲ್ಲಲಿಲ್ಲ. ಹಿಂಸಿಸಲಿಲ್ಲ. ಒಂಟಿಯಾಗಿ ಬಿಟ್ಟುಬಿಡುತ್ತಾರೆ. ಅದು ಅವರಿಗೆ ಅದೃಷ್ಟ ತರುವುದೆಂದುಕೊಳ್ಳುತ್ತಾರೆ.

ಭಾರತ, ಹಿಂದೂಸ್ಥಾನ, ಇಂಡಿಯಾ ಇವೆಲ್ಲ ನಾವು ಬದುಕುತ್ತಿರುವ ದೇಶದ ಹೆಸರುಗಳು. ಹಿಂದೂ ರಾಷ್ಟ್ರವಾದಿಗಳ ಆದರ್ಶಕಲ್ಪನೆ “ಅಖಂಡ ಭಾರತ” ಎನ್ನುವುದು ಪಾಕಿಸ್ತಾನ, ಬಾಂಗ್ಲಾದೇಶಗಳ ಗಡಿಗಳನ್ನೊಳಗೊಂಡ ಅವಿಭಜಿತ ಭಾರತ. ಭಾರತ್‌ ಮಾತಾ ಕಿ ಜೈ ಎನ್ನುವ ಘೋಷಣೆಯನ್ನು ಹಲವು ದೇಶಪ್ರೇಮಿಗಳ ಬಾಯಲ್ಲಿ ಕೇಳುತ್ತೇವೆ. ಅವರು ಹಿಂದೂ ರಾಷ್ಟ್ರವಾದಿಗಳೇ ಆಗಿರಬೇಕಿಲ್ಲ.

ಬೇರೆ ಸಮಯದಲ್ಲಾಗಿದ್ದರೆ ಅಂಜುಮ್‌ ಖಂಡಿತ ಇವರನ್ನು ಎದುರಿಸುತ್ತಿದ್ದಳು. ಭರತ ಚಕ್ರವರ್ತಿಯ ಸಾಮ್ರಾಜ್ಯವನ್ನು ಭಾರತ ಎನ್ನುವರು. ಅಂದಮೇಲೆ ಅದು ಪಿತೃಭೂಮಿಯಲ್ಲವೇ ಮಾತೃಭೂಮಿ ಯಾಕಾಗಬೇಕು ಎಂದು ಕೇಳುವವರನ್ನು ಎದುರಿಸಬಹುದಿತ್ತು.

ಅಂಜುಮ್‌ ಕೂಗಿದ ಎರಡನೆಯ ಘೋಷಣೆ ವಂದೇ ಮಾತರಂ, ಪ್ರಸಿದ್ಧ ಬಂಗಾಳಿ ಕಾದಂಬರಿಕಾರ ಬಂಕಿಂ ಚಂದ್ರ ಚಟ್ಟೋಪಾಧ್ಯಾಯ ಅವರ ಕಾದಂಬರಿ ಆನಂದಮಠದಲ್ಲಿ ಬರುವ ಪದ್ಯ. ೧೮೮೦ರಲ್ಲಿ ಪ್ರಕಟವಾದ ಆ ಕಾದಂಬರಿ ಕ್ರಾಂತಿಕಾರಿ ಸಂನ್ಯಾಸಿಯ ಕತೆಯನ್ನೊಳಗೊಂಡಿದೆ. ಇದು ಸಾರ್ವಕಾಲಿಕವಾಗಿ ಹಿಂದೂ ರಾಷ್ಟ್ರವಾದಿಗಳ ಅಚ್ಚುಮೆಚ್ಚಿನ ಕೃತಿಯಾಗಿದೆ. ಏಕೆಂದರೆ ಇದು ಮುಸ್ಲಿಂ ಆಳ್ವಿಕೆಯ ವಿರುದ್ಧ ದಂಗೆಯೇಳುವ ಆದರ್ಶ ಹಿಂದೂ ಯೋಧನ ಪಾತ್ರವನ್ನು ಕಟ್ಟಿಕೊಡುತ್ತದೆ. ಇತಿಹಾಸವನ್ನು ಹೇಳುತ್ತಲೇ ಭವಿಷ್ಯವನ್ನು ಹೇಗೆ ರೂಪಿಸಬಹುದು ಎನ್ನುವುದಕ್ಕೆ ಆನಂದಮಠ ಒಳ್ಳೆಯ ಉದಾಹರಣೆ. ಈ ಕಾದಂಬರಿಯ ಪದ್ಯದಲ್ಲಿ ಮಾತೃಭೂಮಿಯನ್ನು ಹಿಂದೂ ದೇವತೆ ದುರ್ಗೆಯೊಂದಿಗೆ ಸಮೀಕರಿಸಲಾಗಿದೆ.

ಆರಂಭದ ಎರಡು ಚರಣಗಳಲ್ಲಿ “ತಾಯಿ”ಯ ಉಲ್ಲೇಖವಿದ್ದದ್ದನ್ನು ಹಿಂದೂಗಳೂ, ಮುಸಲ್ಮಾನರು ಭಾರತ ಮಾತೆ ಎಂದೇ ವ್ಯಾಖ್ಯಾನಿಸಿಕೊಂಡುಬಿಟ್ಟಿದ್ದರು. ಅದೊಂದು ಕಾರಣದಿಂದ ಅದು ಅನಧಿಕೃತವಾಗಿ ರಾಷ್ಟ್ರೀಯ ಚಳುವಳಿಯ ರಾಷ್ಟ್ರಗೀತೆಯಾಗಿತ್ತು. ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಇದು ಎಲ್ಲರ ನೆಚ್ಚಿನ ಗೀತೆಯಾಗಿತ್ತು. ಆದರೆ ಇಂದಿನ ಬದಲಾದ ರಾಷ್ಟ್ರೀಯತೆಯ ಸನ್ನಿವೇಶದಲ್ಲಿ ಜನರನ್ನು ಅದರಲ್ಲೂ ಮುಖ್ಯವಾಗಿ ಮುಸಲ್ಮಾನರನ್ನು ಅವಮಾನ ಮಾಡಲೆಂದೇ “ವಂದೇ ಮಾತರಂ” ಘೋಷಣೆಯನ್ನು ಬಲವಂತದಿಂದ ಹೇಳಿಸಲಾಗುತ್ತದೆ. ವಿಪರ್ಯಾಸವೆಂದರೆ ಎ. ಆರ್‌. ರೆಹಮಾನ್‌ ಎನ್ನುವ ಸೂಫಿ ಗಾಯಕ ೧೯೯೦ರಲ್ಲಿ ಈ ಹಾಡಿನ ಆಧುನಿಕ ಆವೃತ್ತಿಯನ್ನು ಜನಪ್ರಿಯಗೊಳಿಸಿದರು. ದುರದೃಷ್ಟವಶಾತ್‌ ಒಂದು ಕಾಲದಲ್ಲಿ ಎಲ್ಲರಿಗೂ ಪ್ರಿಯವಾಗಿದ್ದ ಘೋಷಣೆ ಈಗ ವಿವಾದಾತ್ಮಕವಾಗಿದೆ.

ಬಂಗಾಳಿ ಘೋಷಣೆಯನ್ನು ಬಂಗಾಳಿ ಮಾತಾಡದ ರಾಜ್ಯಗಳವರು ಕೂಗುವುದು ಅಸಹಜವೇನಲ್ಲ. ಭಾರತದಲ್ಲಿನ ಘೋಷಣೆಗಳನ್ನು ಯಾರೇ ಕೂಗಲಿ- ಅವರು ದಂಗೆಕೋರ ಗುಂಪಾಗಿರಬಹುದು, ಪ್ರತಿಭಟನಾಕಾರರಿರಬಹುದು, ಬಲ ಇಲ್ಲವೆ ಎಡಪಂಥೀಯರಾಗಿರಬಹುದು, ಮಿಲಿಟರಿ ಆಳ್ವಿಕೆಯಡಿ ಇರುವ ಪ್ರದೇಶದವರು ಆಗಿರಬಹುದು, ದೊಡ್ಡ ಅಣೆಕಟ್ಟಿನ ವಿರುದ್ಧ ಧರಣಿನಡೆಸುತ್ತಿರುವವರು ಆಗಿರಬಹುದು – ಯಾರೇ ಆಗಿದ್ದರೂ ಅದರ ಉದ್ದೇಶ ಹೊರಜಗತ್ತಿಗೆ ತಮ್ಮ ದನಿಯನ್ನು ಕೇಳಿಸುವುದಾಗಿರುತ್ತದೆ. ಆದ್ದರಿಂದಲೇ ಅವು ಸ್ಥಳೀಯ ಭಾಷೆಯಲ್ಲಿರುವುದಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಘೋಷಣೆ ಕೇಳುವುದು ಅಪರೂಪ. ಉರ್ದು, ಇಂಗ್ಲೀಷ್‌ ಘೋಷಣೆಗಳು ಕೇಳುತ್ತವೆ. ಆಜಾದಿ! ಆಜಾದಿ! ಎನ್ನುವುದು ಮೂಲ ಉರ್ದು. ಬಹುಶಃ ಅದು ಪೂರ್ವದಲ್ಲಿ ನಡೆದ ಇರಾನಿ ಕ್ರಾಂತಿಯಿಂದ ಬಂದಿರಬಹುದು. ಅದೀಗ ಕಾಶ್ಮೀರಿ ಸ್ವಾತಂತ್ರ್ಯ ಹೋರಾಟದ ಮುಖ್ಯಘೋಷಣೆಯಾಗಿದೆ. ಅದಕ್ಕಿಂತ ತಮಾಷೆಯೆಂದರೆ ಭಾರತದಲ್ಲಿನ ಮಹಿಳಾ ಚಳುವಳಿಯ ಘೋಷವಾಕ್ಯವಾಗಿದೆ. ದೇಶದ ದಕ್ಷಿಣ ಭಾಗದ ಕೇರಳದಲ್ಲಿ ಇಂಕ್ವಿಲಾಬ್‌ ಜಿಂದಾಬಾದ್‌! ಎನ್ನುವ ಘೋಷಣೆಯನ್ನು ಬಾಲ್ಯದಲ್ಲಿ ಕೇಳುತ್ತಿದ್ದೆ. ಆ ಉರ್ದು ಭಾಷೆಯನ್ನು ಸ್ಥಳೀಯರು ಮಾತಾಡುವುದಿಲ್ಲ. ಅವರಿಗೆ ಅರ್ಥವೂ ಆಗುವುದಿಲ್ಲ. ಮತ್ತೊಂದು ಕಮ್ಯುನಿಸ್ಟ್‌ ಪಾರ್ಟಿಯ ಘೋಷಣೆ ಸ್ವಾತಂತ್ರ್ಯಂ, ಜನಾಧಿಪತ್ಯಂ, ಸೋಶಿಯಲಿಸಂ, ಜಿಂದಾಬಾದ್‌! ಇದರಲ್ಲಿ ಸಂಸ್ಕೃತ, ಮಲೆಯಾಳಂ, ಇಂಗ್ಲೀಷ್‌, ಉರ್ದು ಭಾಷೆಗಳಿವೆ.

ಅಂಜುಮ್‌ ಮತ್ತು ಝಾಕಿರ್‌ ಸಾಹೇಬರು ಕಾಣೆಯಾಗಿ ಎರಡು ತಿಂಗಳಾದ ನಂತರ ಝಾಕಿರ್‌ ಸಾಹೇಬರ ಮಗ ಮನ್ಸೂರ್‌ ತನ್ನ ತಂದೆಯನ್ನು ಹುಡುಕಲು ಅಹ್ಮದಾಬಾದಿಗೆ ಹೋಗುತ್ತಾನೆ. ಮುನ್ನಚ್ಚರಿಕೆಯಿಂದ ಹಿಂದೂವಿನಂತೆ ತೋರಿಸಿಕೊಳ್ಳಲು ತನ್ನ ಗಡ್ಡವನ್ನು ತೆಗೆದುಬಿಡುತ್ತಾನೆ. ಅವನಿಗೆ ಅವನ ತಂದೆ ಸಿಗುವುದಿಲ್ಲ. ಬದಲಿಗೆ ಗಂಡಸರ ನಿರಾಶ್ರಿತ ಶಿಬಿರದಲ್ಲಿ ಗಂಡಸರ ಬಟ್ಟೆಗಳಲ್ಲಿ, ಕೂದಲನ್ನು ಕತ್ತರಿಸಿಕೊಂಡಿದ್ದ, ಭಯಭೀತಳಾಗಿದ್ದ ಅಂಜುಮ್‌ ಕಾಣಿಸುತ್ತಾಳೆ. ಅವಳನ್ನು ಖ್ವಾಬ್ಗಾಗೆ ಮರಳಿ ಕರೆತರುತ್ತಾನೆ. ಅವಳು ತನಗೇನಾಯಿತು ಎಂದು ಯಾರಿಗೂ ಹೇಳಲು ಬಯಸಲಿಲ್ಲ. ಆದರೆ “ದಾಳಿಗೊಳಗಾದ ಗಂಡಸರು, ಹೆಂಗಸರ” ಹಳವಂಡದಂತಹ ನೆನಪುಗಳು ಕಾಡುತ್ತಲೇ ಇದ್ದವು. “ಒಂದು ವೇಳೆ ಗುಜರಾತಿನಲ್ಲಿ ಆದದ್ದು ದೆಹಲಿಯಲ್ಲಿ ಘಟಿಸಿದರೆ” ಎಂದು ತನ್ನ ದತ್ತುಪುತ್ರಿ ಜೈನಬಳನ್ನು ಹಜಾಮನಲ್ಲಿಗೆ ಕರೆದುಕೊಂಡು ಹೋಗಿ ಕೂದಲನ್ನು ಕತ್ತರಿಸಿ, ಹುಡುಗರ ಬಟ್ಟೆಗಳನ್ನು ತೊಡಿಸಿದಳು.  ಅವಳು ತೆಗೆದುಕೊಂಡ ಮತ್ತೊಂದು ಮುನ್ನೆಚ್ಚರಿಕೆ ಜೈನಬಳಿಗೆ ತಾನು ಗುಜರಾತಿನ ಕ್ಯಾಂಪಿನಲ್ಲಿ ಕಲಿತ ಗಾಯತ್ರಿ ಮಂತ್ರವನ್ನು ಕಲಿಸಿದ್ದು. ಗುಂಪುಗಲೆಭೆ ನಡೆದಾಗ ಇದನ್ನು ಹೇಳುವ ಮೂಲಕ ತಪ್ಪಿಸಿಕೊಳ್ಳಬಹುದೆಂದು ಹಲವಾರು ನಿರಾಶ್ರಿತರು ಇದನ್ನು ಕಲಿತರಂತೆ. ಅಂಜುಮಳಿಗಾಗಲಿ, ಜೈನಬಳಿಗಾಗಲಿ ಆ ಮಂತ್ರದ ಅರ್ಥ ಗೊತ್ತಿರಲಿಲ್ಲ. ಆದರೆ ಜೈನಬ್‌ ಅದನ್ನು ಶಾಲೆಗೆ ಹೋಗಲು ತಯಾರಾಗುವಾಗ, ತನ್ನ ಮುದ್ದಿನ ಮೇಕೆಗೆ ಮೇಯಿಸುವಾಗ ಖುಷಿಯಿಂದ ಹೇಳಿಕೊಳ್ಳುತ್ತಾಳೆ.

ಓಂ ಭೂರ್ಭುವಃ ಸ್ವಃ |

ತತ್ಸವಿತುರ್ವರೇಣ್ಯಂ |

ಭರ್ಗೋದೇವಸ್ಯ ಧೀಮಹಿ

ಧಿಯೋ ಯೋನಃ ಪ್ರಚೋದಯಾತ್ ||

ಗಾಯಿತ್ರಿ ಮಂತ್ರವು The Ministry of Utmost Happinessನಲ್ಲಿ ಮೂರು ಬಾರಿ ಬರುತ್ತದೆ. ಗುಂಪುಹಿಂಸಾಚಾರದಲ್ಲಿ ಮೊದಲ ಸಲ, ಎರಡನೆಯ ಸಲ ಬ್ರಿಟೀಷ್‌ ಏರ್‌ವೇನವರು ಭಾರತೀಯ ಗ್ರಾಹಕರನ್ನು ಸೆಳೆಯುವ ಪ್ರೊಮೆಷನಲ್‌ ತಂತ್ರವಾಗಿ, ಮೂರನೆಯ ಸಲ ಶಾಪಿಂಗ್‌ ಮಾಲ್‌ನ ರೆಸ್ಟೊರೆಂಟಿನಲ್ಲಿ. ಜೈನಬ್‌ ಈಗ ದೊಡ್ಡವಳಾಗಿದ್ದಾಳೆ. ಸದ್ದಾಂ ಹುಸೇನನೊಂದಿಗೆ ಅವಳ ನಿಶ್ಚಿತಾರ್ಥವಾಗಿದೆ. ಸದ್ದಾಂ ವರ್ಷಗಳ ಕೆಳಗೆ ತನ್ನಪ್ಪನನ್ನು ಗುಂಪೊಂದು ಪೊಲೀಸ್ ಸ್ಟೇಷನ್ನಿನ ಮುಂದೆ ಹೇಗೆ ಹೊಡೆದು ಸಾಯಿಸಿತು ಎನ್ನುವ ಕತೆ ಹೇಳುತ್ತಾನೆ. ಇಂದು ಮಾಲ್‌ ಇರುವ ಕಡೆಯೇ ಅಂದು ಆ ಪೊಲೀಸ್‌ ಸ್ಟೇಷನ್‌ ಇದ್ದದ್ದು ಎನ್ನುತ್ತಾನೆ. ಜೈನಬ್‌ ತನಗೆ ಹಿಂದೂ ಪ್ರಾರ್ಥನೆ ಗೊತ್ತು ಎಂದು ಹೇಳಿ ತಮ್ಮ ಭವಿಷ್ಯ ಹಾಗೂ ಸತ್ತುಹೋಗಿರುವ ಮಾವನಿಗಾಗಿ ಪ್ರಾರ್ಥಿಸುತ್ತ ಗಾಯಿತ್ರಿ ಮಂತ್ರವನ್ನು ಹೇಳುತ್ತಾಳೆ.

ಈ ರೀತಿಯಲ್ಲಿ ಸಂಸ್ಕೃತವನ್ನು ಅಂತಿಮವಾಗಿ ಸ್ವದೇಶಿಕರಣಗೊಳಿಸಲಾಯಿತು.

ಗುಜರಾತಿನಿಂದ ಹಿಂತಿರುಗಿ ಕೆಲವು ತಿಂಗಳುಗಳು ಕಳೆದ ನಂತರ ಒಳಗೆ ಕುಸಿದುಹೋದ ಅಂಜುಮ್‌ ತನ್ನ ಹಳೆಯ ಬದುಕನ್ನು ಬದಕಲಾಗದೆ ಹಳೆಯ ಸ್ಮಶಾನವೊಂದಕ್ಕೆ ಹೋಗಿ ಅಲ್ಲಿಯೇ ನೆಲಸುತ್ತಾಳೆ. ಹಲವು ವರ್ಷಗಳ ನಂತರ ನಿಧಾನವಾಗಿ ಚೇತರಿಸಿಕೊಂಡು ಜನ್ನತ್‌ ಗೆಸ್ಟ್‌ ಹೌಸ್‌ ಕಟ್ಟುತ್ತಾಳೆ. ಸದ್ದಾಂ ಹುಸೇನ್‌ ಅವಳೊಂದಿಗೆ ಕೈಜೋಡಿಸಿದ ಮೇಲೆ ಅವರು ಸಂಸ್ಕಾರಕ್ಕೆ ಸಂಬಂಧಿಸಿದ ಸೇವೆಗಳಿಗೂ ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಾರೆ. ಈ ಸ್ಮಶಾನದಲ್ಲಿ ಹೊರಜಗತ್ತಿನಲ್ಲಿ ಗೌರವಯುತ  ಅಂತ್ಯಕ್ರಿಯೆಯನ್ನು ನಿರಾಕರಿಸಲಾದ ಯಾವುದೇ ವ್ಯಕ್ತಿಗಾದರೂ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಸನ್ನಿವೇಶಕ್ಕೆ ತಕ್ಕಂತೆ ಜನ್ನತ್‌ ಗೆಸ್ಟ್‌ ಹೌಸ್‌ ಮತ್ತು ಅಂತ್ಯಕ್ರಿಯಾ ಸೇವೆಗಳಲ್ಲಿ ಮೃತರಿಗಾಗಿ ನಡೆಸುವ ಪ್ರಾರ್ಥನೆಗಳಾದ ಫತೇಹಾವನ್ನು ಹಿಂದಿಯಲ್ಲಿ ಹಾಡಲಾಗುತ್ತದೆ. ಹಾಗೂ ಶೇಕ್ಸ್‌ಪಿಯರ್‌ನ Henry the Fifth ಇಂಗ್ಲೀಷಿನಲ್ಲಿ ಓದಲಾಗುತ್ತದೆ.

ಅಂದಮೇಲೆ, ಪಾಬ್ಲೊ ನೆರೂಡನ ʼನೊಂದ ನಗರಗಳ ಮೇಲೆ ಮಳೆ ಯಾವ ಭಾಷೆಯಲ್ಲಿ ಸುರಿಯುತ್ತದೆ?ʼ ಎನ್ನುವ ಪ್ರಶ್ನೆಗೆ ಕೊಡುವ ಉತ್ತರವೇ ಈ ಭಾಷಣದ ಶೀರ್ಷಿಕೆ.

ಯಾವುದೇ ಹಿಂಜರಿಕೆಯಿಲ್ಲದೆ ʼಭಾಷೆಯ ಅನುವಾದʼ ಎಂದು ಹೇಳುತ್ತೇನೆ.


(ಇದು ಬ್ರಿಟೀಷ್‌ ಸೆಂಟರ್‌ ಫಾರ್‌ ಲಿಟರರಿ ಟ್ರಾನ್ಸಲೇಶನ್‌ ಮತ್ತು ದ ನ್ಯಾಷನಲ್‌ ಸೆಂಟರ್‌ ಫಾರ್‌ ರೈಟಿಂಗ್‌ನವರು ಬ್ರಿಟೀಷ್‌ ಲೈಬ್ರರಿಯಲ್ಲಿ ಆಯೋಜಿಸಿದ್ದ ಡಬ್ಲ್ಯೂ.ಜಿ. ಸೆಬಾಲ್ಡ್‌ ಲೆಕ್ಚರ್‌ ಆನ್‌ ಲಿಟರರಿ ಟ್ರಾನ್ಸಲೇಷನ್ ಭಾಷಣದ ಸಂಗ್ರಹಾನುವಾದ)

ಅನುವಾದ: ಹೇಮಾ ಎಸ್

One comment to “ಆಲೋಚನೆಗೆ, ಬರವಣಿಗೆಗೆ ನೈತಿಕವಾಗಿ ಸೂಕ್ತವಾದ ಭಾಷೆ ಯಾವುದು?”

ಪ್ರತಿಕ್ರಿಯಿಸಿ