ಲೂಯೀ ಬೋರ್ಹೆಸ್ ಉಪನ್ಯಾಸ ಸರಣಿ: ಕಾವ್ಯ ಕುಸುರಿ – 6: “ಕವಿಯ ನಂಬಿಕೆ”

೨೦ ಶತಮಾನದ ಮಹತ್ವದ ಸ್ಪಾನಿಷ್ ಕವಿ ಹೋರ್ಹೆ ಲುಯಿ ಬೋರ್ಹೆಸ್ ಜನ್ಮದಿನದಂದು ಆರಂಭವಾದ ಸರಣಿ ಇದು. ಮಾಂತ್ರಿಕ ವಾಸ್ತವವಾದದ ಮೊಳಕೆಗಳನ್ನು ಇವನ ಬರಹಗಳಲ್ಲಿ ಕಾಣಬಹುದು ಎಂದು ವಿಮರ್ಶಕರು ಗುರುತಿಸುತ್ತಾರೆ. ಸಾಹಿತ್ಯದ ಅಭಿಜಾತ ಪ್ರಕಾರವಾದ ಕಾವ್ಯಕ್ಕೆ ಆಳವಾಗಿ ತನ್ನನ್ನು ತೆತ್ತುಕೊಂಡ ಬೋರ್ಹೆಸ್- ಸಾಹಿತ್ಯದ ಇತಿಹಾಸ, ಅನುವಾದ ಸಿದ್ಧಾಂತಗಳ ಕುರಿತೂ ಕೆಲಸ ಮಾಡಿದ.   ೬೦ರ ದಶಕದ ತುದಿಗೆ ದೃಷ್ಟಿಹೀನನಾಗುತ್ತ ಹೋದ ಕವಿ, ೧೯೬೭-೬೮ ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ನೀಡಿದ ಉಪನ್ಯಾಸಗಳ ಸರಣಿಯೇ “The Craft of Verse”. ಕೇವಲ ನೆನಪಿನ ಶಕ್ತಿಯಿಂದಲೇ ಹೊಸ ಹಳೆಯ ಕಾವ್ಯದ ಸಾಲುಗಳನ್ನು ಉಪನ್ಯಾಸದ ಉದ್ದಕ್ಕೂ ಉದ್ಧರಿಸುತ್ತ ಹೋಗುವ ಈ ಮಹಾಕವಿ – ಕಾವ್ಯದ ಕುರಿತು ತಳಸ್ಪರ್ಶಿಯಾಗಿ ಆಡಿದ ಮಾತುಗಳು ಇವು. ತತ್ವಜ್ಞಾನ, ಇತಿಹಾಸ, ಅಸಮಾನ್ಯ ಕಲ್ಪನಾಶೀಲತೆಯ ಎರಕವಾದ ಈ ಬರಹಗಳನ್ನು ಕಮಲಾಕರ್ ಕಡವೆ ತನ್ಮಯ ಪ್ರತಿಭೆಯಿಂದ ಅನುವಾದಿಸಿದ್ದಾರೆ. ಈ ಅನುವಾದ ಸರಣಿಯ ಆರನೇಯ ಮತ್ತು ಕೊನೆಯ ಭಾಗ ಋತುಮಾನ ದ ಓದುಗರಿಗಾಗಿ.

ಕವಿಯ ನಂಬಿಕೆಗಳ ಕುರಿತಾಗಿ ನಾನು ಮಾತನಾಡಬೇಕೆಂದುಕೊಂಡಿದ್ದರೂ, ನನ್ನ ಕಾವ್ಯದ ಕುರಿತಾಗಿಯೇ ಯೋಚಿಸಿದಾಗ ನನ್ನದು ಅಷ್ಟೇನೂ ಖಚಿತವಲ್ಲದ ನಂಬಿಕೆಗಳೆಂದು ನನಗನಿಸಿದೆ. ಈ ನಂಬಿಕೆಗಳು ಪ್ರಾಯಶಃ ನನಗೆ ಉಪಯುಕ್ತವಾಗಿವೆ, ಆದರೂ ಇತರರಿಗೆ ಅವುಗಳ ಉಪಯುಕ್ತತೆಯ ಕುರಿತು ನನಗೆ ಸಂದೇಹಗಳಿವೆ. ಹಾಗೆ ನೋಡಿದರೆ, ಎಲ್ಲ ಕಾವ್ಯ ಸಿದ್ಧಾಂತಗಳೂ ಕೂಡ ಕಾವ್ಯ ರಚನೆಯಲ್ಲಿನ ಪರಿಕರಗಳು ಮಾತ್ರ ಎಂದೇ ನನ್ನ ಎಣಿಕೆ. ನನ್ನ ಪ್ರಕಾರ ಎಷ್ಟು ಕವಿಗಳೋ ಅಷ್ಟು ಕಾವ್ಯಸಿದ್ಧಾಂತಗಳೂ, ಧರ್ಮಗಳೂ ಇರಬೇಕು. ಕಾವ್ಯ ರಚನೆಯ ಕುರಿತಾಗಿ ಕೆಲವು ನನ್ನ ಇಷ್ಟದ ಮತ್ತು ನನಗಿಷ್ಟವಿಲ್ಲದ ವಿಚಾರಗಳ ಕುರಿತು ನಾನು ಕೊನೆಯಲ್ಲಿ ಸ್ವಲ್ಪ ಮಾತನಾಡುವವನಿದ್ದೇನೆ. ಆದರೀಗ, ಕೆಲವು ವೈಯುಕ್ತಿಕ ನೆನಪುಗಳನ್ನು ಹಂಚಿಕೊಳ್ಳಬಯಸುತ್ತೇನೆ. ಅವುಗಳಲ್ಲಿ ಕೆಲವು ಬರಹಗಾರನ ನೆನಪುಗಳಾದರೆ, ಕೆಲವು ಓದುಗನ ನೆನಪುಗಳು. ನಾನು ಮೂಲಭೂತವಾಗಿ ಒಬ್ಬ ಓದುಗನೆಂದೇ ನನ್ನನ್ನು ನಾನು ಪರಿಗಣಿಸುತ್ತೇನೆ. ನಿಮಗೆಲ್ಲ ತಿಳಿದಿರುವ ಹಾಗೆ, ನಾನು ಬರೆಯುವುದೂ ಉಂಟು; ಆದರೆ, ನಾನು ಓದಿರುವ ಸಂಗತಿಗಳು, ನಾನು ಬರೆದಿರುವುದಕ್ಕಿಂತ ಹೆಚ್ಚು ಪ್ರಾಮುಖ್ಯ ಉಳ್ಳವು ಎಂದೇ ನನ್ನ ಅನ್ನಿಸಿಕೆ. ಯಾಕೆಂದರೆ, ನಾವು ನಮಗೆ ಇಷ್ಟವಾದುದನ್ನೇ ಓದುತ್ತೇವೆ. ಆದರೆ, ನಾವು ಏನನ್ನು ಬರೆಯಲಿಚ್ಚಿಸುತ್ತೇವೆಯೋ ಅದರ ಬದಲು, ಏನನ್ನು ಬರೆಯಬಲ್ಲೆವೋ ಅದನ್ನಷ್ಟೇ ಬರೆದಿರುತ್ತೇವೆ.

ನನ್ನ ಸ್ಮೃತಿ ನನ್ನನ್ನು ಅರವತ್ತು ವರುಷಗಳ ಹಿಂದಿನ ಒಂದು ಸಂಜೆಗೆ ಕರೆದೊಯ್ಯುತ್ತದೆ: ಬುಎನೋಸ್ ಐರಿಸ್‌ನ ನನ್ನ ತಂದೆಯವರ ಗ್ರಂಥಾಲಯಕ್ಕೆ. ನನಗೆ ಅವರು ಕಾಣಿಸುತ್ತಿದ್ದಾರೆ. ನನಗೆ ಗ್ಯಾಸ್‌ಲೈಟ್‌ ಕಾಣಿಸುತ್ತಿದೆ. ಪುಸ್ತಕದ ಕಪಾಟುಗಳ ಮೇಲಿವೆ ನನ್ನ ಕೈಗಳು. ಈಗ ಆ ಗ್ರಂಥಾಲಯ ಇಲ್ಲವಾಗಿದ್ದರೂ ಸಹ, ನನಗೆ ಬರ್ಟನ್‌ರ ಅರೇಬಿಯನ್ ನೈಟ್ಸ್ ಕೃತಿ ಎಲ್ಲಿದೆ, ಪ್ರೆಸ್ಕಾಟ್‌ರ ಕಾಂಕ್ವೆಸ್ಟ್ ಆಫ್ ಪೆರು ಕೃತಿ ಎಲ್ಲಿದೆಯೆಂದು ಸುಸ್ಪಷ್ಟವಿದೆ. ಅದಾಗಲೇ ಪುರಾತನವಾಗಿರುವ ಆ ದಕ್ಷಿಣ ಅಮೇರಿಕೆಯ ಇಳಿಸಂಜೆಗೆ ನಾನು ಮರಳಿದ್ದೇನೆ. ನನ್ನ ತಂದೆಯವರು ನನಗೆ ಕಾಣುತ್ತಿದ್ದಾರೆ. ಈ ಕ್ಷಣದಲ್ಲಿ ಅವರು ನನ್ನ ಮುಂದಿದ್ದಾರೆ; ಅವರು ಹೇಳುತ್ತಿರುವ ಶಬ್ದಗಳು ನನಗೆ ಕೇಳುತ್ತಿವೆ, ಆಗ ಅವುಗಳ ಅರ್ಥ ತಿಳಿಯದೆಯೂ ನಾನು ಅವುಗಳನ್ನು ತೀವ್ರವಾಗಿ ಭಾವಿಸಿಕೊಳ್ಳುತ್ತಿದ್ದೆ. ಅವು ಕೀಟ್ಸ್‌ನ “ಓಡ್ ಟು ನೈಟಿಂಗೇಲ್” ಕವನದ ಸಾಲುಗಳು. ನಾನು ಹಲವಾರು ಸಲ ಆ ಸಾಲುಗಳನ್ನು ಓದಿದ್ದೇನೆ, ನೀವೂ ಓದಿರುತ್ತೀರಿ, ಆದರೂ ಮತ್ತೊಮ್ಮೆ ಆ ಸಾಲುಗಳನ್ನು ಉಲ್ಲೇಖಿಸ ಬಯಸುತ್ತೇನೆ. ಬಹುಶಃ ನನ್ನ ತಂದೆಯವರ ಆತ್ಮ, ಇಲ್ಲೆಲ್ಲಾದರೂ ಅದಿದೆಯಾದರೆ, ಇದರಿಂದ ಸಂಪ್ರೀತವಾಗಲಿ.

ನಾನು ನೆನಪಿಸಿಕೊಳ್ಳುತ್ತಿರುವ ಆ ಸಾಲುಗಳು, ನಿಮ್ಮ ಮನಸ್ಸಿನಲ್ಲಿಯೂ ಸುಳಿಯುತ್ತಿರಬಹುದು.

ಸಾವಿಗೆಂದು ಹುಟ್ಟಿದ್ದಲ್ಲ ನೀನು, ಓ ಅಜರಾಮರ ಪಕ್ಷಿಯೇ!

ಹಸಿವಿನಾತುರದ ಪೀಳಿಗೆಯ ಯಾರೂ ತುಳಿಯಲಾರರು ನಿನ್ನ;

ಸರಿದುಹೋಗುತ್ತಿರುವ ಈ ಸಂಜೆ ನಾನು ಕೇಳಿಸಿಕೊಂಡ ದನಿಯನ್ನೇ

ಕೇಳಿಸಿಕೊಂಡಿದ್ದರು ಪುರಾತನ ಸಾಮ್ರಾಟನೂ, ವಿದೂಷಕನೂ:

ಅದೇ ಹಾಡು ತವರಿನ ನೆನಪಿನಲ್ಲಿ ತೋಯ್ದು ಅಪರಿಚಿತ ಜೋಳಗಳ ನಡುವೆ

ಅಳುತ್ತ ನಿಂತಿದ್ದ ರುಥ್‌ಳ ಖಿನ್ನ ಹೃದಯದ ಒಳಹೊಕ್ಕಿರಬಹುದು.

ಶಬ್ದಗಳ ಬಗೆಗೆ ಸಕಲವೂ ನನಗೆ ಗೊತ್ತು, ಭಾಷೆಯ ಬಗೆಗೆ ನನಗೆ ಎಲ್ಲವೂ ಗೊತ್ತು ಎಂದು ನಾನೆಂದುಕೊಂಡಿದ್ದೆ. ಹುಡುಗರಿದ್ದಾಗ ನಮಗೆ ಹಲವಾರು ಸಂಗತಿಗಳು ಗೊತ್ತಿವೆಯೆಂದೇ ಅನ್ನಿಸುತ್ತಲಿರುತ್ತದೆ. ಆದರೆ, ಈ ಶಬ್ದಗಳು ಅಂದು ದಿವ್ಯದರುಶನದಂತೆ ಪ್ರಕಟವಾದವು ನನ್ನ ಮತಿಗೆ. ಸಹಜವಾಗಿ, ನನಗೆ ಅವುಗಳ ಅರ್ಥ ಗೊತ್ತಾಗುವಂತಿರಲಿಲ್ಲ. ನನ್ನೆದುರು ಆ ಸಮಯದಲ್ಲಿ ಇರುವ ಪಕ್ಷಿಗಳು, ಪ್ರಾಣಿಗಳು ಕಾಲಾತೀತ, ಅಜರಾಮರವೆನ್ನುವ ಆ ಮಾತುಗಳು ಅದು ಹೇಗೆ ನನಗೆ ಅರ್ಥವಾಗುವುದು ಸಾಧ್ಯ? ನಮ್ಮ ನಶ್ವರತೆಗೆ ಕಾರಣ ನಾವು ಭೂತ ಮತ್ತು ಭವಿಷ್ಯದಲ್ಲಿ ಜೀವಿಸುವುದೇ ಆಗಿದೆ – ಯಾಕೆಂದರೆ ನಾವು ಜೀವಂತವಿರದಿದ್ದ ಹಿಂದಿನ ಕಾಲವನ್ನೂ, ನಾವು ಇರದಿರುವ ಮುಂದಿನ ಕಾಲವನ್ನೂ ನಾವು ಧ್ಯಾನಿಸುತ್ತೇವೆ. ಪದ್ಯದ ಈ ಸಾಲುಗಳು ಅವುಗಳ ನಾದದಿಂದಾಗಿ ನನ್ನನ್ನು ತಟ್ಟಿದವು. ನಾನಾಗ ಭಾವಿಸಿದ್ದೆ, ಭಾಶೆಯೆಂದರೆ ಹೇಳುವ, ದೂರುವ, ಬಗೆಯೆಂದು, ನಮ್ಮ ಸುಖ-ದುಖಃಗಳನ್ನು ತಿಳಿಸುವ ರೀತಿಯೆಂದು. ಆದರೂ, ನಾನು ಈ ಸಾಲುಗಳನ್ನು ಕೇಳಿದಾಗ, (ತದನಂತರದಲ್ಲಿ ನಾನು ಈ ಸಾಲುಗಳನ್ನು ಸತತವಾಗಿ ಕೇಳುತ್ತಿದ್ದೇನೆ ಎನ್ನಬಹುದು), ನನಗನ್ನಿಸಿತು ಭಾಶೆ ಸಂಗೀತವೂ ಆಗಬಹುದು, ತೀವ್ರಭಾವವೂ ಆಗಬಹುದು ಎಂದು. ಕಾವ್ಯ ನನ್ನೆದುರು ತೆರೆದುಕೊಂಡಿದ್ದು ಹೀಗೆ.

ನನ್ನ ಮನಸ್ಸಿನಲ್ಲಿ ಒಂದು ವಿಚಾರವಿದೆ: ಒಬ್ಬ ಮನುಶ್ಯನ ಜೀವನವು ಸಾವಿರಾರು ಕ್ಷಣ-ದಿನಗಳಿಂದ ಕೂಡಿರುವ ಸಂಕೀರ್ಣವಾಗಿದ್ದರೂ ಕೂಡ, ಆ ಎಲ್ಲ ಕ್ಷಣಗಳನ್ನು, ಆ ಎಲ್ಲ ದಿನಗಳನ್ನು ಏಕಸ್ಥಿತಿಗೆ ಸಮೀಕರಿಸಿಕೊಳ್ಳಬಹುದು – ಅದೆಂದರೆ, ಒಬ್ಬ ಮನುಶ್ಯನಿಗೆ ತಾನು ಯಾರು, ತಾನು ಯಾರ ಎದುರಿನಲ್ಲಿದ್ದೇನೆ ಎನ್ನುವ ಸ್ಪಷ್ಟತೆ ದೊರಕಿದ ಕ್ಷಣ. ಜುಡಾಸ್ ಯಾವಾಗ ಜೀಸಸ್ ಅನ್ನು ಭೇಟಿಯಾಗುತ್ತಾನೋ, ಆಗಲೇ ಅವನಿಗೆ ತಾನೊಬ್ಬ ವಿಶ್ವಾಸದ್ರೋಹಿ, ವಿಶ್ವಾಸದ್ರೋಹ ಬಗೆಯುವುದೇ ತನ್ನ ವಿಧಿ ಎನ್ನುವ ಅರಿವು ಮೂಡಿತ್ತು. ಆ ವಿಧಿಗೆ ಆತ ವಿನೀತನಾಗುತ್ತಾನೆ ಅಷ್ಟೇ. ನಮಗೆಲ್ಲ ಸ್ಟೀಫನ್ ಕ್ರೇನ್‌ನ “ರೆಡ್ ಬ್ಯಾಜ್ ಆಫ್ ಕರೇಜ್” ಎಂಬ ಕತೆ ಗೊತ್ತಿರುತ್ತದೆ. ತಾನು ಹೇಡಿಯೋ, ಶೂರನೋ ಎನ್ನುವುದನ್ನು ಅರಿಯದ ಮನುಶ್ಯನ ಕುರಿತಾದ ಕತೆ. ಈ ಕತೆಯಲ್ಲಿ ತಾನು ಏನು ಎಂದು ಆತನಿಗೆ ಅರಿವಾಗುವ ಆ ಕ್ಷಣ ಬರುತ್ತದೆ. ಕೀಟ್ಸನ ಮೇಲಿನ ಸಾಲುಗಳನ್ನು ಓದಿದಾಗ ತಕ್ಷಣ ನನಗೆ ಇದೊಂದು ಅಪೂರ್ವ ಅನುಭವ ಎಂಬ ಅರಿವಾಯಿತು. ಅಂದಿನಿಂದ ನನಗೆ ಈ ಅರಿವು ಸತತವಾಗಿ ಆಗಿದೆ. ಈ ಉಪನ್ಯಾಸದ ಸಂಧರ್ಭದಲ್ಲಿ ನಾನು ಉತ್ಪ್ರೇಕ್ಷೆ ಮಾಡುತ್ತಿರಬಹುದು; ಆದರೂ, ಆ ಕ್ಷಣದಿಂದ ನಾನು ನನ್ನನ್ನು “ಸಾಹಿತ್ಯಿಕ” ದೃಷ್ಟಿಯಲ್ಲಿ ನೋಡಿಕೊಳ್ಳ ತೊಡಗಿದೆ.

ಅಂದರೆ, ಎಲ್ಲರಂತೆ ನನ್ನ ಬಾಳಿನಲ್ಲಿಯೂ ಏನೇನೆಲ್ಲ ಆಗಿಹೋಗಿದೆ. ವಿವಿಧ ಸಂಗತಿಗಳಿಂದ ನನಗೆ ಆನಂದ ದೊರಕುತ್ತದೆ – ಈಜುವುದು, ಬರವಣಿಗೆ, ಸೂರ್ಯಾಸ್ತ-ಸೂರ್ಯೋದಯಗಳ ವೀಕ್ಷಣೆ, ಪ್ರೇಮದಲ್ಲಿರುವುದು ಇತ್ಯಾದಿ. ಆದರೂ, ಅದುಹೇಗೋ ನನ್ನ ಬದುಕಿನ ಕೇಂದ್ರದಲ್ಲಿ ಇರುವ ಸಂಗತಿಯೆಂದರೆ ಶಬ್ದಗಳು ಮತ್ತು ಅವುಗಳನ್ನು ಕಾವ್ಯವಾಗಿ ಹೆಣೆಯುವುದು. ಮೊದ ಮೊದಲು ನಾನು ಕೇವಲ ಓದುಗ ಮಾತ್ರನಾಗಿದ್ದೆ. ಏನೇ ಅಂದರೂ, ಓದುಗನಿಗೆ ದಕ್ಕುವ ಆನಂದ ಬರಹಗಾರನನ್ನೂ ಮೀರಿದ್ದು, ಯಾಕೆಂದರೆ ಬರಹಗಾರನ ಆತಂಕ, ಕಷ್ಟಗಳು ಓದುಗನದಲ್ಲ. ಅವಳಿಗೋ ಓದುವ ಖುಶಿಯೇ ಗಮ್ಯ. ಅಲ್ಲದೇ, ಓದುಗನಾಗಿದ್ದರೆ ಖುಶಿ ಅನ್ನುವುದು ಮತ್ತೆ ಮತ್ತೆ ಒದಗುವ ಸೌಭಾಗ್ಯ. ಹಾಗಾಗಿ, ನನ್ನ ಸಾಹಿತ್ಯ ರಚನೆಗಳ ಕುರಿತು ಹೇಳುವ ಮುನ್ನ, ನನಗೆ ಮುಖ್ಯವೆನಿಸುವ ಕೆಲವು ಪುಸ್ತಕಗಳ ಕುರಿತು ಒಂದೆರಡು ಮಾತನ್ನು ದಾಖಲಿಸ ಬಯಸುತ್ತೇನೆ. ಹೀಗೆ ಪುಸ್ತಕದ ಯಾದಿ ಮಾಡಲು ತೊಡಗಿದಾಗ ಯಾವಾಗಲೂ ಆಗುವಂತೆ, ಈ ಯಾದಿಯಲ್ಲಿಯೂ ಹಲವು ಕೃತಿಗಳ ನಮೂದು ಉಳಿದು ಹೋಗುವುದೆಂದು ನನಗೆ ಗೊತ್ತು. ಜನರಿಗೆ ಈ ಲೋಪಗಳೇ ಕಣ್ಣಿಗೆ ಡಾಳಾಗಿ ಕಾಣಿಸಿ ನಮ್ಮ ಸಂವೇದನೆಯ ಕುರಿತು ಅಸಮಾಧಾನವಾಗುವ ಸಂಭವ ಇರುತ್ತದೆ. ಬರ್ಟನ್ನನ ಅರೇಬಿಯನ್ ನೈಟ್ಸ್ ಕೃತಿಯನ್ನು ಹಿಂದೆ ಉಲ್ಲೇಖಿಸಿದ್ದೇನೆ. ಈ ಕೃತಿಯ ಕುರಿತು ನಾನು ಯೋಚಿಸುವಾಗ, ಅದರ ಬೃಹತ್ ಗಾತ್ರದ ಸಂಪುಟಗಳ ಬದಲು, ಆಂಟ್ವಾನ್ ಗ್ಯಾಲಂಡ್ ಅಥವಾ ಎಡ್ವರ್ಡ್ ವಿಲಿಯಂ ಲೇನ್ ಅವರ ಅನುವಾದಗಳು ನನ್ನ ಮನಸ್ಸಿನಲ್ಲಿವೆ. ನನ್ನ ಬಹುತಾಂಶ ಓದು ಇಂಗ್ಲೀಶ ಭಾಶೆಯಲ್ಲಿ ಆಗುತ್ತಲಿರುತ್ತದೆ. ಬಹಳಷ್ಟು ಪುಸ್ತಕಗಳು ಇಂಗ್ಲೀಶ ಭಾಶೆಯ ಮುಖಾಂತರವೇ ನನಗೆ ದಕ್ಕುತ್ತದೆ; ಅದಕ್ಕಾಗಿ ನಾನು ಎಂದೆಂದಿಗೂ ಆ ಭಾಶೆಗೆ ಕೃತಜ್ನನು.

ಅರೇಬಿಯನ್ ನೈಟ್ಸ್ ಕುರಿತು ಯೋಚಿಸಿದಾಗಲೆಲ್ಲ ನನ್ನಲ್ಲಿ ಉದ್ಭವಿಸುವ ಮೊದಲ ಭಾವನೆಯೆಂದರೆ ವಿಶಾಲವಾದ ಸ್ವಾಂತಂತ್ರ್ಯ. ಬಹಳ ಬೃಹತ್ತಾದ, ಅತ್ಯಂತ ಸ್ವಾತಂತ್ರ್ಯದಿಂದ ಬರೆದಿರುವ ಕೃತಿ ಅದಾಗಿದ್ದರೂ ಸಹ, ಅರೇಬಿಯನ್ ನೈಟ್ಸ್ ಕೃತಿಯು ಕೆಲವೇ ಕೆಲವು ಸೀಮಿತ ಹಂದರಗಳನ್ನು ಹೊಂದಿರುವಂತದ್ದು. ಉದಾಹರಣೆಗೆ, ಈ ಕೃತಿಯಲ್ಲಿ ಮೂರರ ಅಂಕಿ ಪದೇ ಪದೇ ಬರುತ್ತದೆ. ಅಲ್ಲದೇ, ಇದರಲ್ಲಿ ಯಾವುದೇ ಸಿದ್ಧಮಾದರಿಯ ಪಾತ್ರಗಳಿಲ್ಲ (ಮೌನಿ ಕ್ಷೌರಿಕನೊಬ್ಬ ಇದಕ್ಕೆ ಅಪವಾದವಿರಬಹುದು). ಹಾಗೆಯೇ, ಇದರಲ್ಲಿ ನಾವು ಉತ್ತಮರು-ಅಧಮರು, ಶಿಕ್ಷೆ-ಪುರಸ್ಕಾರ, ಮಾಯಾ ಉಂಗುರ-ತಾಯಿತ ಇತ್ಯಾದಿಗಳನ್ನು ಕಾಣುತ್ತೇವೆ.

ಪುಸ್ತಕದ ಸಂಧರ್ಭದಲ್ಲಿ ಗಾತ್ರವೆನ್ನುವುದು ತೀರಾ ಕರ್ಕಶ ಕಲ್ಪನೆಯಾಗಿದ್ದರೂ ಕೂಡ, ಹಲವಾರು ಕೃತಿಗಳ ಮೂಲಸತ್ವವೇ ಅವುಗಳ ಬೃಹತ್ ಗಾತ್ರದಲ್ಲಿರುವುದನ್ನು ನಾವು ನೋಡಬಹುದು. ಉದಾಹರಣೆಗೆ, ಅರೇಬಿಯನ್ ನೈಟ್ಸ್ ಕೃತಿಯನ್ನು ನಾವು ಬೃಹತ್ ಪುಸ್ತಕವೆಂದು ಪರಿಗಣಿಸಬೇಕು, ಅದರ ಕತೆ ಸುದೀರ್ಘವಾಗಿದೆ, ಕೊನೆಯೇ ಇಲ್ಲವೆಂಬಂತೆ. ಸಾವಿರದೊಂದು ರಾತ್ರಿಗಳ ಕಥಾನಕವನ್ನು ನಾವು ಓದದೇ ಇರುವ ಸಾಧ್ಯತೆಯಿದೆಯಾದರೂ, ಅಂತಹ ದೀರ್ಘತ್ವವಿದೆಯೆಂಬ ಸಂಗತಿ ಒಟ್ಟಾರೆ ವಿಸ್ತಾರವನ್ನು ದಯಪಾಲಿಸುತ್ತದೆ. ನಮಗೆ ಗೊತ್ತಿರುತ್ತದೆ – ನಾವು ಕೃತಿಯ ಮತ್ತಷ್ಟು ಆಳಕ್ಕಿಳಿವುದು ಸಾಧ್ಯ, ನಾವು ಕತಾಹಂದರದಲ್ಲಿ ಸುತ್ತಾಡಬಹುದು, ನಮ್ಮನ್ನು ಬೆರಗಿಗೀಡುಮಾಡುವ ಸಂಗತಿಗಳು, ಮಾಯವಿಗಳು, ಮೂರು ಅಪ್ರತಿಮ ಸೌಂದರ್ಯವುಳ್ಳ ಸಹೋದರಿಯರು, ಇತ್ಯಾದಿಗಳು ಈ ಕೃತಿಯಲ್ಲಿ ನಮಗಾಗಿ ಕಾಯುತ್ತಲಿವೆ ಎಂದು.

ಇನ್ನೂ ಕೆಲವು ಪುಸ್ತಕಗಳನ್ನಿಲ್ಲಿ ನೆನಪಿಸಿಕೊಳ್ಳುತ್ತಿದ್ದೇನೆ – ಹಕಲ್‌ಬರಿ ಫಿನ್, ಉದಾಹರಣೆಗೆ, ನಾನು ಓದಿದ ಮೊದಲ ಕೃತಿಗಳಲ್ಲೊಂದು. ಇದನ್ನು ಮತ್ತೆ ಮತ್ತೆ ನಾನು ಓದಿದ್ದೇನೆ – ಅಂತೆಯೇ ರಫಿಂಗ್ ಇಟ್ ಕೃತಿಯನ್ನು, ಲೈಫ್ ಆನ್ ದ ಮಿಸಿಸಿಪ್ಪಿ ಕೃತಿಯನ್ನು, ಇತ್ಯಾದಿ. ನಾನು ಹಕಲ್‌ಬರಿ ಫಿನ್ ಕುರಿತು ವಿಶ್ಲೇಷಣೆಗೆ ತೊಡಗಿದರೆ ಅನಿಸುವ ಮಾತೆಂದರೆ: ಒಂದು ಉತ್ಕೃಷ್ಟ ಕೃತಿರಚನೆಗೆ ಅಗತ್ಯವಿರುವ ಸಂಗತಿಯೆಂದರೆ, ಕಲ್ಪನಾಶಕ್ತಿಗೆ ಮುದನೀಡುವಂತದ್ದು ಕೃತಿಯ ಆಕಾರದಲ್ಲಿಯೇ ಇರಬೇಕಾಗುತ್ತದೆ. ಹಕಲ್‌ಬರಿ ಫಿನ್ ಕೃತಿಯಲ್ಲಿ ಕಾಣುವ ಕಪ್ಪು ಗಂಡಸು, ಹುಡುಗ, ತೆಪ್ಪ, ಮಿಸಿಸಿಪ್ಪಿ ನದಿ, ಸುದೀರ್ಘ ರಾತ್ರಿಗಳು – ಇವೆಲ್ಲವೂ ನಮ್ಮ ಕಲ್ಪನಾವಿಲಾಸಕ್ಕೆ ಒಗ್ಗುವಂತವು, ನಮ್ಮ ಕಲ್ಪನಾಶಕ್ತಿ ಒಪ್ಪಿಕೊಳ್ಳುವಂತವು.

ಡಾನ್ ಕಿಯೋಟೆ ಕೃತಿ ಕುರಿತಾಗಿಯೂ ಒಂದು ಮಾತು. ನಾನು ಓದಿದ ಮೊಟ್ಟಮೊದಲ ಕೃತಿಗಳಲ್ಲೊಂದು ಅದು. ಅದರಲ್ಲಿ ಬಳಸಿದ ಚಿತ್ರಗಳು ಕೂಡ ನನಗೆ ನೆನಪಿನಲ್ಲಿವೆ. ನಮ್ಮ ಕುರಿತಾಗಿ ನಮಗೆ ಅದೆಷ್ಟು ಕಡಿಮೆ ತಿಳುವಿರುತ್ತದೆ ನೋಡಿ. ನಾನು ಡಾನ್ ಕಿಯೋಟೆ ಓದಿದಾಗ ಅದರ ಪುರಾತನ ಗದ್ಯಶೈಲಿ, ಅದರಲ್ಲಿ ಬರುವ ಸರದಾರ (ನೈಟ್) ಮತ್ತು ಯೋಧ (ಸ್ಕ್ವಾಯರ್)ರುಗಳ ಸಾಹಸಗಳು ಕೊಡುವ ಆನಂದಕ್ಕಾಗಿ ನನಗದು ಇಷ್ಟವಾಯಿತು ಎಂದುಕೊಂಡಿದ್ದೆ. ಈಗನಿಸುತ್ತದೆ, ನನಗೆ ಆನಂದ ತಂದ ಸಂಗತಿಯೇ ಬೇರೆ ಏನೊ ಆಗಿತ್ತು ಎಂದು: ಸರದಾರನ ಪಾತ್ರ. ಆ ಸಾಹಸಗಳಾಗಲೀ, ಸರದಾರ ಹಾಗೂ ಯೋಧನ ನಡುವಿನ ಸಂಭಾಷಣೆಗಳಾಗಲೀ ನನ್ನನ್ನು ಈಗ ತಟ್ಟುತ್ತವೆ ಎಂದು ನನಗನಿಸುತ್ತಿಲ್ಲ. ಆದರೆ, ನನಗೆ ಈಗಲೂ ಸರದಾರನ ಪಾತ್ರದ ಕುರಿತು ಆಸ್ಥೆ ಇದೆ. ನನ್ನ ಅನಿಸಿಕೆ ಎಂದರೆ, ಕೃತಿಕಾರ ಸರ್ವಾಂತಿಸ್ ಅವೆಲ್ಲ ಸಾಹಸಗಾಥೆಗಳನ್ನು ಸೃಷ್ಟಿಸಿದ್ದೇ ನಮ್ಮಲ್ಲಿ ನಾಯಕ ಪಾತ್ರದಲ್ಲಿರುವ ಸರದಾರನ ಕುರಿತಾಗಿ ಆಸ್ಥೆ ಹುಟ್ಟಿಸಲು.

ಇದೇ ಮಾತನ್ನು ನಾವು ಇನ್ನೊಂದು ಪುಟ್ಟ ಕ್ಲಾಸಿಕ್ ಕೃತಿಯ ಕುರಿತು ಕೂಡ ಹೇಳಬಹುದು: ಮಿ. ಶೆರ್ಲಾಕ್ ಹೋಮ್ಸ್ ಮತ್ತು ಡಾ. ವಾಟ್ಸನ್. ನಾನು ಬಾಸ್ಕರ್‌ವಿಲ್‌ನ ’ಬೇಟೆನಾಯಿ’ (ಹೌಂಡ್ ಆಫ್ ಬ್ಯಾಸ್ಕರ್‌ವಿಲ್)ಯಲ್ಲಿ ವಿಶ್ವಾಸ ಇಡದೇ ಇದ್ದರೂ ಕೂಡ, ಭೀಕರವೆಂದು ಚಿತ್ರಿಸಲಾದ ನಾಯಿ ನನ್ನನ್ನು ಹೆದರಿಸದಿದ್ದರೂ ಕೂಡ, ಶೆರ್ಲಾಕ್ ಹೋಮ್ಸ್‌ನನ್ನು ಮತ್ತು ಡಾ. ವಾಟ್ಸನ್ ಜೊತೆಗಿನ ಅವನ ಗೆಳೆತನದ ಕುರಿತು ನನಗೆ ವಿಶ್ವಾಸವಿದೆ.

ಭವಿತವ್ಯದಲ್ಲಿ ಏನಾಗುವುದೋ ಯಾರು ಬಲ್ಲರು. ಮುಂದೊಮ್ಮೆ, ಡಾನ್ ಕಿಯೋಟೆ ಮತ್ತು ಸ್ಯಾಂಚೋ, ಅಂತೆಯೇ ಶೆರ್ಲಾಕ್ ಹೋಮ್ಸ್ ಮತ್ತು ಡಾ. ವಾಟ್ಸನ್ ಅವರುಗಳ ಸಾಹಸಗಳೆಲ್ಲ ಮರೆತು ಹೋದರೂ ಸಹ ಪಾತ್ರಗಳು ಜೀವಂತ ಉಳಿಯಬಹುದು. ಇತರ ಭಾಶೆಗಳಲ್ಲಿ ಬರಹಗಾರರು ಈ ಪಾತ್ರಗಳನ್ನು ಎತ್ತಿಕೊಂಡು ಅವುಗಳನ್ನು ಹೋಲುವ ಕತೆಗಳನ್ನು ಬರೆಯಬಹುದು. ಇದು ಸಾಧ್ಯವೆಂದು ನನ್ನ ನಂಬಿಕೆ.

ನಾನೀಗ ಕೆಲ ವರುಷಗಳಷ್ಟು ಮುಂದಕ್ಕೆ ಹಾರಿ ಜಿನೀವಾಕ್ಕೆ ಬರುತ್ತೇನೆ. ಆಗ ನಾನೊಬ್ಬ ಅತ್ಯಂತ ಅಸಂತುಷ್ಟ ಯುವಕನಾಗಿದ್ದೆ. ಅದ್ಯಾಕೋ, ಯುವಕರಿಗೆ ಅಸಂತುಷ್ಟಿಯ ಮೋಹವಿರುತ್ತದೆ. ಅಸಂತುಷ್ಟರಾಗಿರಲು ಅವರು ಬಹಳ ಪ್ರಯತ್ನವನ್ನೂ ಮಾಡುತ್ತಾರೆ, ಹಲವು ಸಲ ಪಡೆಯಲು ಯಶಸ್ವಿಯೂ ಆಗುತ್ತಾರೆ. ಅಂತಹ ಸ್ಥಿತಿಯಲ್ಲಿ ನಾನೊಬ್ಬ ಬರಹಗಾರನನ್ನು ಕಂಡುಕೊಂಡೆ – ಆತ ಮಾತ್ರ ಸಂತುಷ್ಟ ವ್ಯಕ್ತಿಯಾಗಿದ್ದ. ನಾನು ವಾಲ್ಟ್ ವಿಟ್‌ಮನ್ ಅವರನ್ನು ಕಂಡುಕೊಂಡಿದ್ದು 1916ರಲ್ಲಿ ಇದ್ದೀತು. ಆಗ, ನನಗೆ ನನ್ನ ಅಸಂತುಷ್ಟ ಸ್ಥಿತಿಯ ಕುರಿತು ನಾಚಿಕೆಯಾಯಿತು. ನಾನು ದಾಸ್ತೋಯೆಸ್ಕಿ ಓದುತ್ತ ಮತ್ತಷ್ಟು ದುಖಿಃಯಾಗಲು ಪ್ರಯತ್ನಿಸಿದ್ದೆ. ವಾಲ್ಟ್ ವಿಟ್‌ಮನ್ ಅವರ ಕಾವ್ಯ, ಅವರ ಜೀವನಚರಿತ್ರೆಗಳನ್ನು ಓದಿ, ಮರುಓದು ಮಾಡಿದ ನಂತರ ನನಗನ್ನಿಸಿತು, ವಿಟ್‌ಮನ್ ತಮ್ಮ ಲೀವ್ಸ್ ಆಫ್ ಗ್ರಾಸ್ ಬರೆದಾಗ ಅದರೊಳಗೆ ಬರುವ ವಿಟ್‌ಮನ್ ಪಾತ್ರದಂತೆಯೇ ತಾನೂ ಇರುವುದು ಸಾಧ್ಯವಾಗಲಿ ಎಂದು ಆಶಿಸಿದ್ದಿರಬಹುದು ಎಂದು. ಯಾಕೆಂದರೆ, ಆತ ನಿಸ್ಸಂಶಯವಾಗಿ ಭಿನ್ನ ವ್ಯಕ್ತಿಯಾಗಿದ್ದ. ನಿಸ್ಸಂಶಯವಾಗಿ ಆತ ತನ್ನೊಳಗಿಂದ “ವಾಲ್ಟ್ ವಿಟ್‌ಮನ್”ನ್ನು ವಿಕಸಿತಗೊಳಿಸಿದ್ದ – ಒಂದು ರೀತಿಯ ಅದ್ಭುತ ಪ್ರಕ್ಷೇಪಣೆ.

ಅದೇ ಕಾಲದಲ್ಲಿ, ತೀರಾ ಭಿನ್ನ ಬರಹಗಾರರೊಬ್ಬರನ್ನು ಕಂಡುಕೊಂಡೆ ಹಾಗೂ ಪರವಶನಾದೆ: ಥಾಮಸ್ ಕಾರ್ಲೈಲ್. ಅವರ ಸಾರ್ಟರ್ ರಿಸಾರ್ಟಸ್  ಕೃತಿಯನ್ನು ನಾನು ಹೇಗೆ ಓದಿರುವೆನೆಂದರೆ, ನನಗೆ ಅದರ ಅನೇಕ ಪುಟಗಳು ಕಂಠಪಾಠವಾಗಿವೆ. ಕಾರ್ಲೈಲ್ ಮೂಲಕ ನಾನು ಜರ್ಮನ್ ಅಭ್ಯಾಸಕ್ಕೆ ತೆರೆದುಕೊಂಡೆ. ಹೀಯ್ನ್ ಅವರ ಲಿರಿಶಸ್ ಇಂಟರ್‌ಮೆಜೊ ಮತ್ತು ಒಂದು ಜರ್ಮನ್ ನಿಘಂಟುವನ್ನು ಕೊಂಡುಕೊಂಡಿದ್ದು ನನಗೆ ನೆನಪಿದೆ. ಕೆಲ ಕಾಲದ ನಂತರ ನಿಘಂಟಿನ ಸಹಾಯವಿಲ್ಲದೇ ಹೀಯ್ನ್ ಅವರ ಹಾಡುಹಕ್ಕಿ, ಚಂದಿರ, ಪೈನ್ ಮರಗಳು, ಪ್ರೇಮ ಮುಂತಾದವುಗಳನ್ನು ಓದುವುದೂ ಸಾಧ್ಯವಾಗಿತ್ತು.

ಆ ಕಾಲದಲ್ಲಿ ನಾನು ನಿಜವಾಗಿಯೂ ಹುಡುಕುತ್ತಿದ್ದುದು ಮತ್ತು ಕಾಣದೇ ಹೋದದ್ದು ಅಂದರೆ ’ಜರ್ಮನತ್ವ’ದ ಸಂಕಲ್ಪನೆ. ಆದರೆ ಅಂತಹ ಸಂಕಲ್ಪನೆಯನ್ನು ಮೊದಲು ಚಾಲ್ತಿಗೆ ತಂದದ್ದು ಜರ್ಮನ್ನರಲ್ಲ, ಬದಲಿಗೆ, ತಾಸಿಟಸ್ ಅನ್ನುವ ರೋಮನ್ ಗೃಹಸ್ಥ. ಜರ್ಮನ್ ಸಾಹಿತ್ಯದಲ್ಲಿ ಈ ಸಂಕಲ್ಪನೆ ಇದೆಯೆನ್ನುವ ನನ್ನ ತೀರ್ಮಾನಕ್ಕೆ ಕಾರ್ಲೈಲ್ ನನ್ನನ್ನು ತೊಡಗಿಸಿದ್ದ. ಇಂತಹ ಹಲವಾರು ಸಂಗತಿಗಳು ನನಗೆ ಕಾರ್ಲೈಲ್‌ನಲ್ಲಿ ಕಂಡುಬಂದವು: ನನ್ನನ್ನು ಶಾಪೇನ್‌ಹವರ್, ಹೋಲ್ಡರ್ಲಿನ್, ಲೆಸ್ಸಿಂಗ್ ಮುಂತಾದವರತ್ತ ಕಳಿಸಿದ್ದಕ್ಕಾಗಿ ಕಾರ್ಲೈಲ್‌ನಿಗೆ ನನ್ನ ಅನಂತ ಕೃತಜ್ನತೆಗಳು ಸಲ್ಲುತ್ತವೆ. ಆದರೂ, ನನಗೆ ತೋಚಿದ ಹಾಗೆ ಮಾನವರು ಬೌದ್ಧಿಕತೆಯ ಬದಲು ನಿಷ್ಠೆ, ಧೈರ್ಯ, ಹಾಗೂ ವಿಧಿಗೆ ಶರಣಾಗುವರು ಎಂಬ ವಿಚಾರ, ನನಗೆ ನಿಬೆಲಂಗನ್‌ನ್ಲೀಡ್ನಂತಹ ಕೃತಿಗಳಲ್ಲಿ ಕಾಣಬರಲಿಲ್ಲ. ಅವೆಲ್ಲ ತೀರಾ ರಮ್ಯ ಕಲ್ಪನೆಗಳು ಅಂತ ನನಗನಿಸಿದವು. ಅನೇಕ ವರುಷಗಳ ನಂತರ ಈ ವಿಚಾರ ನನಗೆ ಕಂಡು ಬಂದಿದ್ದೆಂದರೆ ನಾರ್ಸ್ ಗಾಥೆಗಳಲ್ಲಿ ಮತ್ತು ಪುರಾತನ ಇಂಗ್ಲೀಶ ಕಾವ್ಯದಲ್ಲಿ. ಯೌವನದಲ್ಲಿ ನಾನು ಏನನ್ನು ಹುಡುಕುತ್ತಿದ್ದೆನೋ ಅದು ನನಗಲ್ಲಿ ದೊರಕಿತು. ಪುರಾತನ ಇಂಗ್ಲೀಶ್‌ ತುಂಬಾ ಒರಟು ಭಾಶೆ. ಆದರೆ, ಆ ಒರಟುತನದಲ್ಲಿ ಒಂದು ಬಗೆಯ ಸೊಗಸು ಮತ್ತು ಆಳ ಭಾವನಾತ್ಮಕತೆ (ಅಥವಾ ಆಳ ವೈಚಾರಿಕತೆ) ಗೋಚರಿಸುತ್ತದೆ.

ಕಾವ್ಯದಲ್ಲಿ, ನನಗನಿಸುತ್ತದೆ, ಭಾವನೆಯೇ ಸಾಕು. ಭಾವನೆ ಅಭಿವ್ಯಕ್ತವಾಯಿತೆಂದರೆ, ಅದು ಸಾಕಾಗುತ್ತದೆ. ಪ್ರತೀಕಗಳ ಕುರಿತಾದ ಒಲವು ನನ್ನನ್ನು ಪುರಾತನ ಇಂಗ್ಲೀಶ್ ಕಾವ್ಯದತ್ತ ಒಯ್ದಿತ್ತು. ನಾನು ಲೂಗಾನ್ಸ್‌ನನ್ನು ಓದುತ್ತ ಪ್ರತೀಕವೇ ಸಾಹಿತ್ಯದ ಪ್ರಮುಖಾಂಶವೆಂದು ಕಂಡುಕೊಂಡಿದ್ದೆ. ಲೂಗಾನ್ಸ್‌ನ ಪ್ರಕಾರ ಎಲ್ಲ ಶಬ್ದಗಳೂ ಕೂಡ ಮೂಲತಃ ಪ್ರತೀಕಗಳೇ. ಉದಾಹರಣೆಗೆ, “ಶೈಲಿ ಸರಳವಿರಬೇಕು” ಎಂದಾಗ, ನಮಗೆ ನೆನಪಿನಲ್ಲಿರಬೇಕಾದ ಅಂಶವೆಂದರೆ ಶೈಲಿ (ಸ್ಟೈಲ್ ಎಂಬ ಶಬ್ದ ಸ್ಟೈಲಸ್ ಅಂದರೆ ಲೇಖನಿ ಎಂಬ ಶಬ್ದದಿಂದ ಬಂದದ್ದು) ಎಂದಾಗ ಲೇಖನಿಯನ್ನಾಗಲೀ, ಅಥವಾ ಸರಳ (ಪ್ಲೇನ್) ಎಂದಾಗ ಸಪಾಟಾದುದು ಎಂದಾಗಲೀ ಅರ್ಥವಲ್ಲ. ಹಾಗೆ ಮಾಡಲು ಹೋದವರಿಗೆ ಅರ್ಥ ದೊರಕುವುದೇ ಇಲ್ಲ.

ನನ್ನ ಯೌವನದತ್ತ ಮತ್ತೊಮ್ಮೆ ಕಣ್ಣುಹಾಯಿಸಬಯಸುತ್ತೇನೆ ಮತ್ತು ಆ ಕಾಲದಲ್ಲಿ ನನಗೆ ಮೆಚ್ಚುಗೆಯಾದ ಇನ್ನಿತರ ಬರಹಗಾರರನ್ನು ನೆನಪಿಸಿಕೊಳ್ಳುತ್ತೇನೆ. ಯಾರಾದರೂ ಈ ಮಾತನ್ನು ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ, ನನ್ನ ಪ್ರಕಾರ ಎಡ್ಗರ್ ಅಲನ್ ಪೋ ಮತ್ತು ಆಸ್ಕರ್ ವೈಲ್ಡ್ ಹುಡುಗರಿಗಾಗಿ ಇರುವ ಬರಹಗಾರರು. ಹುಡುಗನಾಗಿ ನನಗೆ ಪೋ ತುಂಬಾ ಇಷ್ಟವಾಗುತ್ತಿದ್ದನಾದರೂ, ನಾನು ಮತ್ತೆಮತ್ತೆ ಓದಬಯಸುವ ಬರಹಗಳಲ್ಲ ಅವನದ್ದು – ಅವನ ಶೈಲಿಯೇ ಈಗ ಇರುಸುಮುರುಸು ಹುಟ್ಟುಹಾಕುತ್ತೆ. ಅಮೇರಿಕಾದ ಮತ್ತೊಬ್ಬ ಮಾಹಾ ಬರಹಗಾರ ಎಮರ್ಸನ್ ಯಾಕೆ ಪೋನನ್ನು “ಮಕ್ಕಳಗೀತೆ”ಗಳ ಕೃತಿಕಾರನೆಂದಿದ್ದನೆಂದು ನನಗಂತೂ ಸ್ಪಷ್ಟವಾಗಿದೆ. ಹೀಗೆಯೇ ಬಹಳಷ್ಟು ಬರಹಗಾರರನ್ನು ನಾವು ಹುಡುಗರಿಗಾಗಿ ಬರೆವವರೆಂದು ಕರೆಯಬಹುದು. ಕೆಲವು ಸಂಧರ್ಭದಲ್ಲಿ ಈ ಹಣೆಪಟ್ಟಿ ನ್ಯಾಯಯುತವಲ್ಲದೆಯೂ ಇರಬಹುದು. ಉದಾಹರಣೆಗೆ ಸ್ಟೀವನ್ಸನ್ ಮತ್ತು ಕಿಪ್ಲಿಂಗ್ ಅವರ ಸಂಧರ್ಭದಲ್ಲಿ. ಯಾಕೆಂದರೆ, ಅವರು ಹುಡುಗರಿಗಾಗಿ ಬರೆದಿದ್ದರೂ ಕೂಡ ಅವರ ಬರಹಗಳು ವಯಸ್ಕರಿಗೂ ಇಷ್ಟವಾಗುತ್ತಾವೆ. ಕೆಲವು ಬರಹಗಾರರನ್ನು ಹುಡುಗರಾಗಿಯೇ ಓದುವುದು ಒಳಿತು. ವಯಸ್ಸಾದಮೇಲೆ, ಅನುಭವಸ್ಥರಾದ ಮೇಲೆ, ಮಾಗಿದ ನಂತರ ಓದಲು ಹೋದರೆ ಪೆಚ್ಚೆನಿಸಬಹುದು. ಬಾದಿಲೇರ್ ಮತ್ತು ಪೋ ಅವರುಗಳನ್ನು ಮೆಚ್ಚಲಿಕ್ಕೆ ಹುಡುಗರಾಗಿರಬೇಕಾಗಿರುತ್ತದೆ, ಆಮೇಲೆ ಅವರನ್ನು ಓದುವುದು ಸುಲಭವಲ್ಲ, ಎಂದರೆ ಕೆಲವರಿಗೆ ಅಪಥ್ಯವಾದೀತೇನೋ.

ಪ್ರತೀಕದ ಕುರಿತು ಒಂದು ಮಾತು: ನಾನು ಮೊದಲು ಅಂದುಕೊಂಡಿದ್ದಕ್ಕಿಂತ ಅದೆಷ್ಟೋ ಹೆಚ್ಚು ಸಂಕೀರ್ಣವಾಗಿದೆ ಪ್ರತೀಕದ ವಿಷಯ. ಇದು ಕೇವಲ ಹೊಲಿಕೆಯ ಪ್ರಶ್ನೆ ಅಲ್ಲ – ಚಂದಿರ … ರಂತಿರುವನು” ಎಂದ ಹಾಗಲ್ಲ. ಇಲ್ಲ, ಪ್ರತೀಕವನ್ನು ಇನ್ನೂ ಸೂಕ್ಷ್ಮ ರೀತಿಯಲ್ಲಿಯೂ ಬಳಸುವುದು ಸಾಧ್ಯ. ರಾಬರ್ಟ್ ಫಾಸ್ಟ್‌ನ ಸ್ಮರಣೀಯ ಸಾಲುಗಳನ್ನು ನೆನಪಿಸಿಕೊಳ್ಳಿ:

                        ಆದರೆ, ಕೊಟ್ಟ ವಚನಗಳು ಕರೆದಿವೆ ನನ್ನ

                        ಹೋಗಬೇಕಿದೆ ಮೈಲುದೂರ ನಿದ್ದೆಗೆ ಮುನ್ನ

                        ಹೋಗಬೇಕಿದೆ ಮೈಲುದೂರ ನಿದ್ದೆಗೆ ಮುನ್ನ

ಕೊನೆಯ ಎರಡು ಸಾಲುಗಳನ್ನು ತೆಗೆದುಕೊಳ್ಳೋಣ. ಮೊದಲನೆಯದು – ಆದರೆ, ಕೊಟ್ಟ ವಚನಗಳು ಕರೆದಿವೆ ನನ್ನ – ಒಂದು ಹೇಳಿಕೆ. ಕವಿ ದೂರ ಮತ್ತು ನಿದ್ದೆಯ ಕುರಿತಾಗಿ ಯೋಚಿಸುತ್ತಿದ್ದಾನೆ. ಆದರೆ, ಪುನರಾವರ್ತಿಸಿದಾಗ “ಮತ್ತು ಹೋಗಬೇಕು ಮೈಲುದೂರ ನಿದ್ದೆಗೆ ಮುನ್ನ” ಈ ಸಾಲು ಪ್ರತೀಕವಾಗುತ್ತದೆ. ಮೈಲು ಎನ್ನುವುದು ದಿನಗಳಿಗೆ, ವರುಷಗಳಿಗೆ, ಸುದೀರ್ಘ ಕಾಲಕ್ಕೆ ಸಂವಾದಿಯಾಗುತ್ತದೆ ಮತ್ತು ನಿದ್ದೆಯೆನ್ನುವುದು ಸಾವಿಗೆ. ಇದನ್ನು ನಾನು ಅಷ್ಟೇನೂ ಚೆನ್ನಾಗಿ ಹೇಳುತ್ತಿಲ್ಲವೆನಿಸುತ್ತದೆ. ಕವನವನ್ನು ಓದುವ ಮಜಾ ಮೈಲು ಪದವನ್ನು ಕಾಲವೆಂದೂ, ನಿದ್ದೆ ಪದವನ್ನು ಸಾವು ಎಂದು ಓದಿಕೊಳ್ಳುವುದರಲ್ಲಿಲ್ಲ. ಬದಲಿಗೆ, ಅದರ ಸೂಚ್ಯಾರ್ಥವನ್ನು ಮನಗಾಣುವುದರಲ್ಲಿದೆ.

“ಅಕ್ವೇಂಟೆಡ್ ವಿಥ್ ನೈಟ್” ಎಂಬ ಇನ್ನೊಂದು ಉತ್ಕೃಷ್ಟ ಕವನದಲ್ಲಿಯೂ ಫಾಸ್ಟ್ ಇದನ್ನೇ ಅಭಿವ್ಯಕ್ತಿಸಿರುವ ಹಾಗಿದೆ. ಶುರುವಿನಲ್ಲಿರುವ “ರಾತ್ರಿಯೊಂದಿಗೆ ಪರಿಚಯವಿಟ್ಟವನು ನಾನಾಗಿದ್ದೇನೆ” ಎಂಬ ಸಾಲು ಶಬ್ಧಶಃ ಅರ್ಥದ್ದು. ಕೊನೆಯಲ್ಲಿ ಇದೇ ಸಾಲು ಮತ್ತೆ ಬರುತ್ತದೆ:

ಬಾನ ಹಿನ್ನೆಲೆಯಲ್ಲಿ ದೇದೀಪ್ಯ ಗಡಿಯಾರವೊಂದು

ಘೋಷಿಸಿದೆ ಸಮಯ ಸರಿಯೂ ಅಲ್ಲ, ತಪ್ಪೂ ಅಲ್ಲವೆಂದು

ರಾತ್ರಿಯೊಂದಿಗೆ ಪರಿಚಯವಿಟ್ಟವನು ನಾನಾಗಿದ್ದೇನೆ 

ಇಲ್ಲಿ, ರಾತ್ರಿ ಕೆಡುಕಿನ (ಕಾಮುಕ ಕೆಡುಕಿನ) ಪ್ರತೀಕವಾಗಿದೆಯೆಂದು ಭಾವಿಸಲು ನಮ್ಮನ್ನು ಹಚ್ಚಲಾಗಿದೆ.

ಮುನ್ನ ಡಾನ್ ಕಿಯೋಟೆ ಹಾಗೂ ಶೆರ್ಲಾಕ್ ಹೋಮ್ಸ್‌ ಅವರುಗಳ ಪ್ರಸ್ತಾಪ ಮಾಡಿದ್ದೆ. ನಾನು ನಂಬಿಕೆ ಇಡುವುದು ಪಾತ್ರಗಳಲ್ಲಿ, ಅವರ ಸಾಹಸಗಳಲ್ಲಿ ಅಲ್ಲ, ಅಥವಾ ಪಾತ್ರಗಳ ಬಾಯಿಯಲ್ಲಿ ಲೇಖಕ ಆಡಿಸುವ ಮಾತಿನಲ್ಲಂತೂ ಸುತಾರಾಂ ಅಲ್ಲ. ಇದಕ್ಕೆ ವ್ಯತಿರಿಕ್ತವಾದದ್ದು ಘಟಿಸುವ ಪುಸ್ತಕವೊಂದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ಪಾತ್ರಗಳನ್ನು ನಂಬದೆಯೇ, ಹೇಳುತ್ತಿರುವ ಕತೆಯನ್ನು ನಂಬಬಹುದಾದ ಪುಸ್ತಕವನ್ನು ಕಲ್ಪಿಸಿಕೊಳ್ಳಬಹುದೆ? ನನ್ನನ್ನು ತೀವ್ರವಾಗಿ ತಟ್ಟಿದ ಇನ್ನೊಂದು ಪುಸ್ತಕವನ್ನು ಇಲ್ಲಿ ನಾನು ನಮೂದಿಸುತ್ತೇನೆ: ಅದೆಂದರೆ ಮೆಲ್‌ವಿಲ್ ಅವರ ಮೋಬಿ ಡಿಕ್. ಈ ಕಾದಂಬರಿಯ ನಾಯಕ ಕ್ಯಾಪ್ಟನ್ ಆಹಾಬ್‌ನನ್ನು ನಂಬಬಲ್ಲೆನೆಂದು ನನಗನಿಸುವುದಿಲ್ಲ, ಬಿಳಿತಿಮಿಂಗಲದೊಂದಿಗಿನ ಅವನ ಸೆಣಸಾಟದಲ್ಲಿಯೂ ನನಗೆ ನಂಬಿಕೆ ಇಲ್ಲ. ಪಾತ್ರಗಳನ್ನು ಒಬ್ಬರನ್ನು ಇನ್ನೊಬ್ಬರಿಂದ ಪ್ರತ್ಯೇಕಿಸಲೂ ಆಗದು. ಆದರೂ, ಒಂದು ನೀತಿಕತೆಯನ್ನು ಹೇಗೆ ನಂಬಬಹುದೋ ಹಾಗೆ ನಾನು ಈ ಕಾದಂಬರಿಯ ಕತೆಯನ್ನು ನಂಬುತ್ತೇನೆ. ಇಲ್ಲಿರುವ ನೀತಿ ಏನೆಂಬುದು ನನಗೆ ಅಷ್ಟಾಗಿ ಸ್ಪಷ್ಟವಿಲ್ಲ – ಕೆಡುಕಿನೊಂದಿಗಿನ ಸೆಣಸಾಟ, ಕೆಡುಕಿನೊಂದಿಗೆ ನಡೆಸುವ ತಪ್ಪು ಪ್ರಕಾರದ ಹೋರಾಟ ಆಗಿರಬಹುದು. ಹೀಗೆ ಹೇಳಬಹುದಾದಂತ ಪುಸ್ತಕಗಳಾವವು ಎಂದು ನನ್ನ ಕುತೂಹಲ. ಜಾನ್ ಬುನಿಯನ್ನನ ಪಿಲಿಗ್ರಿಮ್ಸ್ ಪ್ರೋಗ್ರೆಸ್ ಕೃತಿಯಲ್ಲಿ ನಾನು ಅನ್ಯೋಕ್ತಿಯನ್ನೂ, ಪಾತ್ರಗಳನ್ನೂ ನಂಬಬಲ್ಲೆ. ಇದನ್ನು ಸೂಕ್ಷ್ಮವಾಗಿ ಪರೀಕ್ಷಿಸಬೇಕಿದೆ. ನಾಸ್ತಿಕ ತತ್ವಜ್ನಾನಿಗಳ ಮಾತೊಂದಿದೆ: ಪಾಪಮುಕ್ತರಾಗುವ ದಾರಿಯೆಂದರೆ ಆ ಪಾಪವನ್ನು ಮಾಡುವುದು ಎಂದು. ಯಾಕೆಂದರೆ ಒಮ್ಮೆ ಪಾಪ ಮಾಡಿದ ಮೇಲೆ, ಆ ಕುರಿತು ಪಶ್ಚಾತ್ತಾಪ ಉಂಟಾಗುತ್ತದೆ. ಇದು ಸಾಹಿತ್ಯದ ಸಂಧರ್ಭದಲ್ಲಿಯಂತೂ ಸತ್ಯವೇ ಹೌದು. ಹತ್ತಾರು ಓದಲಾಗದ ಹೊತ್ತಿಗೆಗಳನ್ನು ಬರೆದ ನಂತರ ನಾಲ್ಕೈದು ಓದಬಹುದಾದ ಪುಟಗಳನ್ನು ನಾನು ಬರೆದಿದ್ದರೆ, ಅದು ನನ್ನ ಅನುಭವದಂತೆಯೇ ತಪ್ಪಾದರೂ ಸೈ ಎಂದು ಮಾಡಿ ನೋಡುವುದರ ಫಲವಾಗಿರುತ್ತದೆ. ನನಗನಿಸುವಂತೆ, ನಾನಿನ್ನೂ ಎಲ್ಲ ತಪ್ಪುಗಳನ್ನೂ ಮಾಡಿಲ್ಲ – ತಪ್ಪುಗಳು ಅಗಣಿತವೇ ಸರಿ; ಬಹಳಷ್ಟನ್ನು ಮಾಡಿದ್ದೇನೆ.

ಉದಾಹರಣೆಗೆ, ಹುಡುಗುತನದಲ್ಲಿ ಎಲ್ಲ ಲೇಖಕರು ಮಾಡುವಂತೆ, ನಾನು ಛಂದೋಬದ್ಧ ಕವಿತೆಗಿಂತ ಛಂದಸ್ಸಿಲ್ಲದ ಕವಿತೆಯೇ ಸುಲಭವೆಂದು ಬರಹವನ್ನು ಶುರುಮಾಡಿದ್ದೆ. ಈಗ ನನಗೆ ಮನವರಿಕೆಯಾಗಿದೆ, ಛಂದೋಬದ್ಧ ಕವಿತೆಗಳನ್ನು ಬರೆಯುವುದಕ್ಕಿಂತ ಛಂದಸ್ಸಿಲ್ಲದ ಕಾವ್ಯರಚನೆ ಕಷ್ಟವೆಂದು. ಇದಕ್ಕೆ ಪುರಾವೆ ಎಂದರೆ ಸಾಹಿತ್ಯ ಮೊದಲಾಗುವುದೇ ಪದ್ಯಪ್ರಕಾರದಲ್ಲಿ. ಒಮ್ಮೆ ಸಾಹಿತ್ಯದ ಪ್ರಕಾರಗಳು – ಪ್ರಾಸ, ಆದಿಪ್ರಾಸ, ಲಯ ಮುಂತಾದ ರಚನಾ ಪ್ರಕಾರಗಳು – ವಿಕಸಿತವಾದವೆಂದರೆ, ಆಯಾ ರಚನಾಶೈಲಿಯನ್ನು ಸುಲಭವಾಗಿ ಹಿಂಬಾಲಿಸಬಹುದು. ಗದ್ಯರಚನೆಗೆ ತೊಡಗಿದರೆ (ಐತಿಹಾಸಿಕವಾಗಿ ಗದ್ಯ ಸುರುವಾದದ್ದು ಬಹಳ ತಡವಾಗಿ), ಸ್ಟೀವನ್ಸನ್ ಹೇಳಿರುವಂತೆ ಹೆಚ್ಚು ಸೂಕ್ಷ್ಮ ಆಕಾರದ ಕಲ್ಪನೆ ಬೇಕಾಗುತ್ತದೆ. ಯಾಕೆಂದರೆ ಓದುಗರ ಕಿವಿ ಏನನ್ನೋ ಆಲಿಸುವ ನಿರೀಕ್ಷೆ ಇಟ್ಟುಕೊಂಡಿರುತ್ತದೆ, ಆದರೆ, ಆ ನೀರೀಕ್ಷೆ ಪ್ರಲಪ್ರದವಾಗುವುದಿಲ್ಲ. ಇನ್ನೇನೋ ಪ್ರಸ್ತುತವಾಗುತ್ತದೆ – ಅದು ಒಂದು ದೃಷ್ಟಿಯಲ್ಲಿ ಅಸಫಲತೆಯಾದರೂ, ತೃಪ್ತಿಕರವಾಗಿರುತ್ತದೆ. ನೀವೇನಾದರೂ ವಾಲ್ಟ್ ವಿಟ್‌ಮನ್ ಅಥವಾ ಕಾರ್ಲ್ ಸ್ಯಾಂಡ್‌ಬರ್ಗ್ ಅಲ್ಲವಾಗಿದ್ದರೆ ಛಂದಸ್ಸಿಲ್ಲದೇ ಬರೆಯುವುದು ಕಷ್ಟಕರ. ನನ್ನ ಬರಹದ ಪ್ರಯಾಣದ ಅಂತ್ಯ ಮುಟ್ಟಿರುವ ಈ ಹೊತ್ತಲ್ಲಿ ನನಗೆ ಅನಿಸುವುದೆಂದರೆ ಪರಿಚಿತ ಛಂದೋಬದ್ಧ ಕಾವ್ಯರಚನೆ ಸುಲಭ.

ಇನ್ನೊಂದು ಒತ್ತಾಸೆಯೆಂದರೆ ಒಂದು ಸಾಲನ್ನು ಬರೆದಾಯಿತೆಂದರೆ, ಒಂದು ಸಾಲಿಗೆ ಬದ್ದರಾದೆವೆಂದರೆ, ಒಂದು ಪ್ರಾಸಕ್ಕೆ ಬದ್ಧರಾದ ಹಾಗೆ. ಅಲ್ಲದೇ, ಪ್ರಾಸಗಳು ಅಪರಿಮಿತವಲ್ಲದ್ದರಿಂದ ಕವಿಯ ಕೆಲಸ ಹಗುರವಾಗುತ್ತದೆ. ಹೌದು, ಮುಖ್ಯವಾದುದೆಂದರೆ, ಛಂದೋಬದ್ದ ಪದ್ಯದ ಹಿಂದಿರುವ ವಿಷಯ. ಹುಡುಗುತನದಲ್ಲಿ ಕವಿಗಳು ಮಾಡುವ ಹಾಗೆ, ನಾನೂ ಕೂಡ ಸೋಗುಹಾಕಿಕೊಂಡು ಬರೆಯಲು ಶುರುಮಾಡಿದ್ದೆ. ನನ್ನಲ್ಲಿ ಅದೆಷ್ಟು ತಪ್ಪುತಿಳುವಳಿಕೆ ಇತ್ತೆಂದರೆ, ಗದ್ಯದಲ್ಲಿ ಕಾರ್ಲೈಲ್ ಮತ್ತು ಪದ್ಯದಲ್ಲಿ ವಿಟ್‌ಮನ್ ಅವರುಗಳ ಶೈಲಿಯ ಹೊರತಾಗಿ ಬೇರೆ ಇಲ್ಲವೇ ಇಲ್ಲವೆಂದುಕೊಂಡಿದ್ದೆ. ಒಬ್ಬರಿನ್ನೊಬ್ಬರಿಂದ ವಿರುದ್ಧ ದಿಕ್ಕಿನಲ್ಲಿರುವ ಇಬ್ಬರು ಬರಹಗಾರರು ಗದ್ಯ ಮತ್ತು ಪದ್ಯದಲ್ಲಿ ಪರಿಪೂರ್ಣತೆ ಸಾಧಿಸಿದ್ದು ಹೇಗೆ ಎಂಬ ಆಶ್ಚರ್ಯಕರ ಸಂಗತಿಯನ್ನೂ ನಾನು ಕಡೆಗಣಿಸಿಬಿಟ್ಟಿದ್ದೆ.

ಬರೆಯಲು ಮೊದಲುಮಾಡಿದ ಹೊಸತಲ್ಲಿ ಯಾವಾಗಲೂ ನನ್ನ ಬರವಣಿಗೆಯ ವಿಷಯಗಳು ಜೊಳ್ಳು, ಓದುಗರು ಇದನ್ನು ಪತ್ತೆಹಚ್ಚಿದರೆ ನನ್ನನ್ನು ಮೆಚ್ಚಲಾರರು ಎಂಬ ಭೀತಿ ನನಗಿರುತ್ತಿತ್ತು. ಹಾಗಾಗಿ ನಾನು ಸೋಗು ಹಾಕುತ್ತಿದ್ದೆ. ಮೊದಲಲ್ಲಿ, ಲ್ಯಾಟಿನ್ ಬಾಶೆಯನ್ನು ಬಲ್ಲ ಒಬ್ಬ ಹದಿನೇಳನೇ ಶತಮಾನದ ಸ್ಪ್ಯಾನಿಶ್ ಲೇಖಕನ ಸೋಗು. ಆಗ ನನ್ನ ಲ್ಯಾಟಿನ್ ಭಾಶೆಯ ಪರಿಚಯ ತೀರಾ ಕಮ್ಮಿಯಿತ್ತು. ಓರ್ವ ಹದಿನೇಳನೇ ಶತಮಾನದ ಲೇಖಕನಂತೆ ನಾನು ಯೋಚಿಸುತ್ತಿರಲಿಲ್ಲ, ಹಾಗಾಗಿ ಸರ್ ಥಾಮಸ್ ಬ್ರೌನ್ ಹೆಸರಿನ ಲೇಖಕನಾಗುವ ನನ್ನ ಪ್ರಯತ್ನ ನೆಲಕಚ್ಚಿತು. ಹತ್ತಿಪ್ಪತ್ತು ಸೊಗಸಾದ ಸಾಲುಗಳನ್ನು ನಾನು ಬರೆದಿದ್ದಿರಬಹುದು. ಪ್ರಾಯಶಃ ತೀರಾ ಉಜ್ವಲ ಶೈಲಿಯ ಬರವಣಿಗೆ ನನ್ನ ಉದ್ದೇಶವಾಗಿರುತ್ತಿತ್ತು. ಈಗ ನನಗೆ ಈ ಬಗೆಯ ಉಜ್ವಶೈಲಿಯ ಬರಹಗಳು ತಪ್ಪು ಎನಿಸುತ್ತವೆ. ಯಾಕೆಂದರೆ, ಅದು ಜಂಬದ ಕುರುಹು ಮಾತ್ರವಾಗುತ್ತದೆ ಮತ್ತು ಓದುಗರೂ ಇದನ್ನು ಜಂಬದ ಕುರುಹು ಎಂದು ಗುರುತಿಸುತ್ತಾರೆ. ಲೇಖಕನಲ್ಲಿ ನೈತಿಕ ಕಳಂಕವಿದೆಯೆಂದು ಓದುಗರು ಭಾವಿಸಿದಲ್ಲಿ, ಆ ಲೇಖಕನನ್ನು ಓದಲಿಕ್ಕೆ, ಸಹಿಸುವುದಕ್ಕೆ ಕಾರಣಗಳೇ ಇರದು. ಈ ಸಂಧರ್ಭವಿರುವಾಗ, ನಾನು ಮತ್ತೊಂದು ಸರ್ವೇಸಾಮಾನ್ಯ ಪ್ರಮಾದ ಎಸಗಿದೆ: ಆಧುನಿಕನೆಂದು ತೋರಿಕೊಳ್ಳುವ ಪ್ರಯತ್ನ. ಗಅಟನ ವಿಲ್‍ಹೆಲ್ಮ್ ಮಾಯ್ಸ್‌ಟರ್ ಲಯೆಯಾರ್ ಕೃತಿಯಲ್ಲಿ ಬರುವ ಒಂದು ಪಾತ್ರ ಹೇಳುವುದಿದೆ: “ನನ್ನ ಕುರಿತು ನೀವು ಏನೇ ಹೇಳಬಹುದು, ಆದರೂ ಯಾರೂ ಕೂಡ ನಾನು ಸಮಕಾಲೀನನೆನ್ನುವುದನ್ನು ಅಲ್ಲಗಳೆಯಲಾರರು.” ಗಅಟೆಯ ಕಾದಂಬರಿಯ ಈ ಅವಿವೇಕಿ ಪಾತ್ರ ಮತ್ತು ಆಧುನಿಕನಾಗಬೇಕೆನ್ನುವ ಆಶಯವುಳ್ಳವರ ನಡುವೆ ಏನೂ ವ್ಯತ್ಯಾಸವಿಲ್ಲ. ನಾವು ಆಧುನಿಕರೇ ಆಗಿರುವಾಗ, ಆಧುನಿಕನಾಗುವ ಪ್ರಯತ್ನಕ್ಕೆ ಅರ್ಥವಿಲ್ಲ. ಅದು ಶೈಲಿಯ ಅಥವಾ ವಿಶಯದ ಹಾಗೆ ಆಯ್ಕೆಯ ಪ್ರಶ್ನೆಯಲ್ಲ.

ಬೇರೆಯದೇ ಒಂದು ಉಲ್ಲೇಖವನ್ನು ಕೈಗೆತ್ತಿಕೊಂಡು, ಸರ್ ವಾಲ್ಟರ್ ಸ್ಕಾಟ್ ಅವರ ಇವಾನ್‌ಹೋ ಅಥವಾ ಫ್ಲಾಬೇರ್‌ ಅವರ ಸಲಾಂಬೋ  ಕೃತಿಗಳನ್ನು ಪರಿಗಣಿಸಿದರೆ ಯಾವಾಗ ಬರೆಯಲಾದ ಕೃತಿಯೆಂದು ನಾವು ನೋಡಿ ಹೇಳಬಹುದು. ಫ್ಲಾಬೇರ್ ತನ್ನ ಕತೆ ರೋಮ್ ದೇಶದ ಕಾರ್ಥೇಜ್ ಪ್ರದೇಶದ್ದು ಎಂದು ಹೇಳಿದ್ದರೂ ಕೂಡ, ಮೊದಲ ಪುಟ ಓದುವಷ್ಟರಲ್ಲಿ ಯಾರಿಗೇ ಆಗಲೀ ಸ್ಪಷ್ಟವಾಗುವ ಅಂಶವೆಂದರೆ ಇದು ಹತ್ತೊಂಬತ್ತನೇ ಶತಮಾನದ ಪ್ರಾಜ್ನ ಫ್ರೆಂಚ್ ನಾಗರಿಕ ಬರೆದದ್ದೆಂದು. ಇವಾನ್‌ಹೋ ಕೃತಿಯ ಕೋಟೆಕೊತ್ತಲಗಳು, ಸರದಾರರು, ಸ್ಯಾಕ್ಸನ್ ಹಂದಿಕುರುಬರು ಇವಾವವೂ ಕೂಡ ನಮ್ಮನ್ನು ಮೋಸಮಾಡಲಾರವು. ಹದೆನೆಂಟು ಅಥವಾ ಹತ್ತೊಂಬತ್ತನೇ ಶತಮಾನದ ಲೇಖಕನ ಬರಹವನ್ನು ನಾವು ಓದುತ್ತಿದ್ದೇವೆ ಎಂದೇ ನಮಗನಿಸುತ್ತದೆ. ಅಲ್ಲದೇ, ನಾವು ವರ್ತಮಾನದಲ್ಲಿ ಜೀವಿಸಿರುವುದೇ ನಾವು ಆಧುನಿಕರು ಎನ್ನುವುದನ್ನು ಸ್ಪಷ್ಟಸಾಬೀತು ಮಾಡುವ ಅಂಶ. ಯಾರೂ ಕೂಡ ಈವರೆಗೆ ಭೂತಕಾಲದಲ್ಲಿ ಜೀವಿಸುವ ಕಲೆಯನ್ನಾಗಲೀ, ಭವಿತವ್ಯದಲ್ಲಿ ಬದುಕುವ ರಹಸ್ಯವನ್ನಾಗಲೀ ಕಂಡುಹಿಡಿದಿಲ್ಲ. ಬೇಕಾಗಿಯೋ, ಬೇಡದೆಯೋ ನಾವು ಆಧುನಿಕರೇ. ಪ್ರಾಯಶಃ ನಾನೀಗ ಆಧುನಿಕತೆಯನ್ನು ಟೀಕೆ ಮಾಡುವುದೂ ಸಹ ಆಧುನಿಕನಾಗಿರುವ ಒಂದು ರೀತಿ.

ಕತೆಗಳನ್ನು ಬರೆಯಲಾರಂಭಿಸಿದ ಹೊಸದರಲ್ಲಿ ನಾನು ಚತುರನಾಗಿರಲು ಬಹಳ ಪ್ರಯತ್ನಪಟ್ಟೆ. ಶೈಲಿಯ ಕುರಿತಾಗಿ ತುಂಬಾ ಶ್ರಮ ವಹಿಸಿದೆ. ಕೆಲಸಲ, ನನ್ನ ಕತೆಗಳು ಹಲವು ಪದರಗಳಲ್ಲಿ ಹುದುಗಿರುತ್ತಿದ್ದವು. ಉದಾಹರಣೆಗೆ, ಕತೆಯ ಒಂದು ಒಳ್ಳೆಯ ಹಂದರವನ್ನು ಹೊಂಚಿಕೊಂಡೆ, ಹಾಗೂ “ಎಲ್ ಇನ್ಮಾರ್ಟಲ್” (ಅಮರ) ಎಂಬ ಕತೆಯನ್ನು ಬರೆದೆ. ಆ ಕತೆಯನ್ನು ಓದಿದ ಯಾರಿಗೇ ಆಗಲೀ ಇದು ಆಶ್ಚರ್ಯ ತರಬಹುದು: ಆ ಕತೆಯ ಹಿಂದಿನ ಕಲ್ಪನೆಯೆಂದರೆ ಮಾನವನೊಬ್ಬ ಅಮರನಾಗಿರುತ್ತಿದ್ದಲ್ಲಿ, ಅಂತಿಮವಾಗಿ ಆತ ಎಲ್ಲವನ್ನೂ ಹೇಳಿರುತ್ತಿದ್ದ, ಮಾಡಿರುತ್ತಿದ್ದ, ಬರೆದಿರುತ್ತಿದ್ದ. ಹೋಮರ್ ನನ್ನ ಮುಂದಿನ ಉದಾಹರಣೆಯಾಗಿದ್ದ: ಅವನು ನಿಜವಾಗಿಯೂ ಬದುಕಿದ್ದಿದ್ದರೆ, ಅವನು ಇಲಿಯಡ್ ಮಹಾಕಾವ್ಯವನ್ನು ಬರೆದಬಗೆಯನ್ನು ಕಲ್ಪಿಸಿಕೊಂಡೆ. ಅದರಂತೆ, ಹೋಮರ್ ಬದುಕಿಯೇ ಉಳಿದಿರುತ್ತಿದ್ದ, ಹಾಗೂ ತಲೆಗಳಿ ಬದಲಾದಂತೆ ಆತನೂ ಬದಲಾಗುತ್ತಿದ್ದ. ಕೊನೆಯಲ್ಲಿ, ತಾನು ಗ್ರೀಕ್‌ನವರವನು ಎನ್ನುವುದನ್ನೂ, ತಾನು ಹೋಮರ್ ಎನ್ನುವುದನ್ನೂ ಮರೆತುಬಿಡುತ್ತಿದ್ದ, ಒಂದು ಕಾಲ ಬಂದೀತು, ಯಾವಾಗ ನಾವು ಇಂಗ್ಲೀಷ್ ಕವಿ ಅಲೆಕ್ಸಾಂಡರ್ ಪೋಪ್‌ನ ಹೋಮರ್-ಅನುವಾದವನ್ನು ಒಂದು ಶ್ರೇಷ್ಠ ಕೃತಿಯೆಂದು ಪರಿಗಣಿಸಬಹುದು (ಅದು ನಿಜವೂ ಹೌದು), ಮತ್ತು ಅದು ಮೂಲಕ್ಕೆ ವಿಧೇಯವಾಗಿದೆಯೆಂದು ಕೂಡ. ಹೋಮರನು ತಾನು ಹೋಮರನೆನ್ನುವುದನ್ನು ಮರೆಯುವ ಕಲ್ಪನೆಯನ್ನು ನಾನು ಆ ಕೃತಿಯ ಹಲವು ಪದರಗಳಲ್ಲಿ ಮರೆಮಾಡಿದ್ದೆ. ಇತ್ತೀಚೆಗೆ ಆ ಕತೆಯನ್ನು ಓದಿದಾಗ ನನಗೆ ಅದು ವಿಪರೀತ ವಿಸ್ತಾರದಿಂದಾಗಿ ಕಳೆಗುಂದಿದೆಯೆನಿಸಿತು. ಅಲಂಕಾರಿಕ ನುಡಿಗಟ್ಟುಗಳನ್ನು, ವಿಚಿತ್ರ ವಿಶೇಷಣಗಳನ್ನು, ಆಡಂಬರದ ಪ್ರತಿಮೆಗಳನ್ನು ಬಳಸದೆಯೇ, ನೇರವಾಗಿ ಕತೆಯ ನಿರೂಪಣೆ ಮಾಡಿದ್ದಿದ್ದರೆ ಅದೊಂದು ಒಳ್ಳೆಯ ಕತೆಯೇ ಆಗುತ್ತಿತ್ತು ಎಂದೆನಿಸಿತು.

ಬಹುಶಃ ನಾನೀಗ ಹೆಚ್ಚು ತಿಳುವಳಿಕೆಯನ್ನು ಅಲ್ಲದಿದ್ದರೂ, ಕೊಂಚ ಪ್ರಜ್ನೆಯನ್ನು ಗಳಿಸಿದ್ದೇನೆ. ನನ್ನನ್ನು ನಾನು ಓರ್ವ ಬರಹಗಾರನೆಂದು ಗುರುತಿಸಿಕೊಳ್ಳುತ್ತೇನೆ. ಬರಹಗಾರನಾಗಿರುವುದೆಂದರೇನು? ನನ್ನ ಪ್ರಕಾರ ಈ ಪ್ರಶ್ನೆಗೆ ಉತ್ತರವೆಂದರೆ ನನ್ನ ಪ್ರತಿಭಾಸಾಮರ್ಥ್ಯಕ್ಕೆ ಬದ್ಧನಾಗಿರುವುದು. ನಾನು ಕೈಗೊಂಡ ಬರಹದಲ್ಲಿ ವಾಸ್ತವದ ಸತ್ಯವಿದೆಯೆಂದು ನಾನು ಕಲ್ಪಿಸಿಕೊಳ್ಳುವುದಿಲ್ಲ (ವಾಸ್ತವದ ಸತ್ಯವೆನ್ನುವುದು ಸಾಂಧರ್ಭಿಕ ಘಟನೆಗಳ ಜಾಲ ಮಾತ್ರ), ಬದಲಿಗೆ ಒಂದು ಆಳ ಸತ್ಯಕ್ಕೆ ನಿಷ್ಠವಾದುದು ಎಂದು ಭಾವಿಸುತ್ತೇನೆ. ನಾನು ಕತೆಯನ್ನು ಬರೆಯುವುದಕ್ಕೆ ತೊಡಗುವ ಕಾರಣವೇ, ಆ ಕತೆಯಲ್ಲಿ ನನಗೆ ನಂಬಿಕೆ ಇದೆ ಎನ್ನುವುದಕ್ಕಾಗಿ – ಆದರೆ ಈ ನಂಬಿಕೆಯೆನ್ನುವುದು ಇತಿಹಾಸವನ್ನು ನಂಬಿದಂತಲ್ಲ. ಸ್ವಪ್ನದಲ್ಲಿ, ಪರಿಕಲ್ಪನೆಯಲ್ಲಿ ಇಡುವ ನಂಬಿಗೆಯಂತೆ.

ಸಾಹಿತ್ಯದ ಇತಿಹಾಸದ ಅಭ್ಯಾಸದಲ್ಲಿ ನನಗೆ ತುಂಬಾ ಆಸ್ಥೆಯಿದೆ. ಆದರೆ, ನನ್ನ ಭೀತಿಯೆಂದರೆ, ನಾವು ಈ ಅಭ್ಯಾಸದ ಕಾರಣದಿಂದಾಗಿ ಹಾದಿತಪ್ಪುತ್ತೇವೆಯೆಂದು. ಕೆಲವೊಮ್ಮೆ ನನಗನ್ನಿಸುತ್ತೆ, ಇದೊಂದು ಒರಟುತನವೆನಿಸಬಹುದು, ಇತಿಹಾಸ ನಮ್ಮನ್ನು ತೀರಾ ಆವರಿಸಿಕೊಂಡಿದೆ. ಸಾಹಿತ್ಯದ ಅಥವಾ ಯಾವುದೇ ಕಲೆಯ ಇತಿಹಾಸದಲ್ಲಿ ನಂಬುಗೆಯಿಡುವುದು ಒಂದು ಬಗೆಯ ಸಂದೇಹವಾದದ, ವಿಶ್ವಾಸಹೀನತೆಯ ಕುರುಹು. ಉದಾಹರಣೆಗೆ, ವರ್ಡ್ಸ್‌ವರ್ಥ್ ಹಾಗೂ ವರ್ಲೇನ್ ಹತ್ತೊಂಬತ್ತನೇ ಶತಮಾನದ ಶ್ರೇಷ್ಠ ಕವಿಗಳು ಎಂದು ನಾನು ಹೇಳಿದರೆ, ಅದರ ಒಂದು ಅರ್ಥವೆಂದರೆ, ಅವರು ಈಗ ಶ್ರೇಷ್ಠ ಕವಿಗಳಲ್ಲ ಎಂದಾಗುತ್ತದೆ. ಹಿಂದಿನ ಕಾಲದಲ್ಲಿ ಕಾಲಕ್ಕೆ ವ್ಯತಿರಿಕ್ತವಾಗಿ ಕಲೆಯ ಗರಿಮೆಯ ಕುರಿತು ಯೋಚಿಸುತ್ತಿದ್ದ ಪರಿ ಚಾಲ್ತಿಯಲ್ಲಿತ್ತು, ಮತ್ತು ಅದೇ ಬಹುಶಃ ಸರಿಯಾದ ಮಾರ್ಗ.

ಭಾರತೀಯ ತತ್ವಶಾಸ್ತ್ರದ ಅನೇಕ ಚರಿತ್ರೆಗಳನ್ನು ನಾನು ಓದಿದ್ದೇನೆ. ಆ ಚರಿತ್ರಕಾರರು, ಇಂಗ್ಲೀಷ್, ಅಮೇರಿಕನ್, ಜರ್ಮನ್, ಫ್ರೆಂಚ್, ಇತ್ಯಾದಿ ಲೇಖಕರು, ಭಾರತೀಯ ಜನರಿಗೆ ಇತಿಹಾಸದ ಪ್ರಜ್ನೆ ಇಲ್ಲವೆನ್ನುವುದರ ಕುರಿತು ಬೆರಗಾಗುತ್ತಾರೆ. ಅವರು, ಎಲ್ಲ ಚಿಂತಕರೂ ಕೂಡ ಸಮಕಾಲೀನರು ಎಂಬಂತೆ ಯೋಚಿಸುತ್ತಾರೆ. ಪುರಾತನ ತತ್ವಶಾಸ್ತ್ರವನ್ನು ಅವರು ಆಧುನಿಕ ತತ್ವಶಾಸ್ತ್ರದ ನುಡಿಗಟ್ಟಿಗೆ ಅನುವಾದಿಸುತ್ತಾರೆ. ಇದನ್ನು ಸಾಹಸವೆನ್ನಲೇ? ಯಾಕೆಂದರೆ, ಇದರ ಅರ್ಥವೆಂದರೆ, ತತ್ವಶಾಸ್ತ್ರದ ಮೇಲಿನ, ಕಾವ್ಯದ ಮೇಲಿನ ನಂಬಿಕೆ – ಒಳ್ಳೆಯ ಕೃತಿ ಸರ್ವಕಾಲದಲ್ಲಿಯೂ ಒಳ್ಳೆಯದಾಗಿಯೇ ಇರುತ್ತದೆ. ಹೀಗೆ ಹೇಳುವಲ್ಲಿ ನಾನು ಐತಿಹಾಸಿಕತೆಯನ್ನು ನಿರ್ಲಕ್ಷಿಸುತ್ತಿದ್ದೇನೆ ಎಂಬ ಅರಿವು ನನಗಿದೆ (ಪದಗಳ ಅರ್ಥ, ಸೂಚ್ಯತೆಗಳು ಬದಲಾಗುತ್ತಲಿವೆಯಾದುದರಿಂದ), ಆದರೂ, ಕೆಲವು ಸಾಲುಗಳನ್ನು ಓದಿದಾಗ, ನಾವು ಕಾಲಾತೀತ ಅನುಭವ ಪಡೆಯುತ್ತೇವೆ – ಉದಾಹರಣೆಗೆ ವರ್ಜಿಲ್‌ನ ಈ ಸಾಲುಗಳು: “ತೆರಳಿದರು ಮಂಕು ನೆರಳಿನಡಿಯ ಅಜ್ನಾತತನಕ್ಕವರು”; ಅಥವಾ ಪುರಾತನ ಇಂಗ್ಲೀಷ್ ಕವಿಯ ಈ ಸಾಲುಗಳು: “ಹಿಮ ಸುರಿಯುತಿದೆ ಉತ್ತರದಿಂದ..”; ಅಥವಾ ಶೇಕ್ಸ್‌ಪಿಯರನ ಈ ಸಾಲುಗಳು: “ಹಾಡನ್ನು ಕೇಳಬೇಕು, ಯಾಕೆ ದುಖಃದ ಹಾಡುಗಳ ಕೇಳುವೆ?/ ಸಿಹಿಯೊಂದಿಗೆ ಸಿಹಿ ಕದನಕ್ಕಿಳಿಯದು, ಹರುಷ ಹರುಷವ ಹೆಚ್ಚಿಸುವುದು”. ಸೌಂದರ್ಯದಲ್ಲಿ ಕಾಲಾತೀತವಾದುದಿರುತ್ತದೆ ಎಂದು ನನ್ನ ನಂಬಿಕೆ. ಜಾನ್ ಕೀಟ್ಸ್ ತನ್ನ ಖ್ಯಾತ ಸಾಲುಗಳನ್ನು ಬರೆದಾಗ ಇದೇ ಮಾತನ್ನು ಪುಷ್ಟೀಕರಿಸುತ್ತಿದ್ದ: “ಸೌಂದರ್ಯದ ಸಂಗತಿಯು ಸದಾ ಹರುಷಮಯಿ”. ಈ ಸಾಲನ್ನು ನಾವು ಕೇವಲ ಒಂದು ಪ್ರಮೇಯವಾಗಿ ನೋಡುತ್ತೇವೆ. ಒಮ್ಮೊಮ್ಮೆ ನಾನು ಈ ಸಾಲುಗಳನ್ನು ಸತ್ಯವೆಂದು ಒಪ್ಪಿಕೊಳ್ಳುವ ಧೈರ್ಯ ತೋರಿಸುತ್ತೇನೆ: ಎಲ್ಲರೂ ಕಾಲದ ಮಿತಿಯೊಳಗೆಯೇ ಬರೆಯುತ್ತಾರಾದರೂ, ಸನ್ನಿವೇಶಗಳು-ಸಂಧರ್ಭಗಳು-ವೈಫಲ್ಯಗಳು ಎಲ್ಲರಿಗೂ ಅನ್ವಯಿಸುತ್ತದೆಯಾದರೂ, ನನಗನ್ನಿಸುತ್ತದೆ ಸಾರ್ವಕಾಲಿಕ ಸೌಂದರ್ಯವನ್ನು ಸಾಧಿಸುವುದು ಸಾಧ್ಯ.

ನಾನು ಬರೆಯುವಾಗ ಸನ್ನಿವೇಶಕ್ಕೆ ಬದಲಾಗಿ ನನ್ನ ಆಶಯಕ್ಕೆ ಬದ್ಧನಾಗಿರಲು ನಾನು ಪ್ರಯತ್ನಿಸುತ್ತೇನೆ. ನನ್ನ ಕತೆಗಳಲ್ಲಿ ವಾಸ್ತವದ ಸನ್ನಿವೇಶಗಳ ಉಲ್ಲೇಖವಿದೆಯೆನ್ನುವುದು ನಿಜ, (ಕೆಲವರು ಬಯಸುತ್ತಾರೆ ನಾನು ಆ ಕುರಿತು ಮಾತನಾಡಬೇಕೆಂದು)  ಆದರೆ, ಆ ವಾಸ್ತವದ ಸನ್ನಿವೇಶಗಳನ್ನು ಯಾವಾಗಲೂ ಸ್ವಲ್ಪ ಅಸತ್ಯದ ಜೊತೆ ಮೇಳೈಸಿ ಹೇಳಬೇಕಾಗುತ್ತದೆ ಎಂದು ನಾನು ಅಂದುಕೊಂಡಿದ್ದೇನೆ. ಘಟನೆಯೊಂದು ಹೇಗೆ ಸಂಭವಿಸಿತು ಎಂದು ನಿರೂಪಿಸುವುದರಲ್ಲಿ ಸಮಾಧಾನವಿರುವುದಿಲ್ಲ. ಮಾರ್ಪಾಡುಗಳನ್ನು ಮಾಡುವುದು ಅವಶ್ಯವಾಗುತ್ತದೆ, ಆ ಮಾರ್ಪಾಡುಗಳು ಮುಖ್ಯವೆಂದು ನಮಗನಿಸದೇ ಇದ್ದರೂ ಕೂಡ. ಹಾಗೆ ಮಾಡದೇ ಇದ್ದರೆ, ನಮ್ಮನ್ನು ನಾವು ಸಾಹಿತಿಗಳು ಎನ್ನುವ ಬದಲು ಪತ್ರಕರ್ತರು ಅಥವಾ ಇತಿಹಾಸಕಾರರು ಎನ್ನಬಹುದೇನೋ. ಎಲ್ಲ ಇತಿಹಾಸಕಾರರೂ ಕೂಡ ಕಾದಂಬರಿಕಾರರಷ್ಟೇ ಕಲ್ಪನಾಶೀಲರಾಗಿರುತ್ತಾರೆ. ಗಿಬನ್ ಎಂಬ ಚರಿತ್ರಕಾರನನ್ನೇ ತೆಗೆದುಕೊಂಡರೆ, ಯಾವುದೇ ಕಾದಂಬರಿಕಾರನನ್ನು ಓದುವುದಕ್ಕಿಂತ ಕಮ್ಮಿಯೇನಲ್ಲ ಅವನ ಕೃತಿಯನ್ನು ಓದುವ ತೃಪ್ತಿ. ಅವನಿಗೆ ಅವನ ಪಾತ್ರಗಳ ಕುರಿತು ಹೆಚ್ಚು ಗೊತ್ತಿರಲಿಲ್ಲ. ಅವನು ತನ್ನ ಕಲ್ಪನಾಶಕ್ತಿಯನ್ನು ಬಳಸಿಕೊಂಡು ಸನ್ನಿವೇಶಗಳನ್ನು ನಿರೂಪಿಸಿರಬಹುದು. ರೋಮನ್ ಸಾಮ್ರಾಜ್ಯದ ಉಗಮ ಹಾಗೂ ಅಂತ್ಯದ ಕುರಿತಾಗಿ ಗಿಬನ್ ತಾನೇ ಸೃಷ್ಟಿಕರ್ತನೆಂದುಕೊಂಡಿದ್ದಿರಬಹುದು. ಹಾಗಾಗಿಯೇ ಅವನು ಅಷ್ಟು ಅದ್ಭುತ ಚರಿತ್ರೆಯನ್ನು ಬರೆದಿದ್ದಾನೆ ಮತ್ತು ನನಗೆ ಇದರಲ್ಲಿ ಬೇರೆ ಯಾವ ವಿವರಣೆಯ ಅಗತ್ಯವೂ ಕಂಡುಬರುವುದಿಲ್ಲ.

ಬರಹಗಾರರಿಗೆ ನಾನು ಕೊಡಬಹುದಾದ ಸಲಹೆಯೆಂದರೆ (ಅದರ ಅಗತ್ಯ ಬರಹಗಾರರಿಗೆ ಇರುವುದಿಲ್ಲ, ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ದಾರಿ ತಾವೇ ಕಂಡುಕೊಳ್ಳಬೇಕಾಗುತ್ತದೆ) ಇಷ್ಟೇ: ಅವರು ತಮ್ಮ ಬರವಣಿಗೆಯಲ್ಲಿ ಹೆಚ್ಚು ಮಧ್ಯಪ್ರವೇಶಿಸಲು ಹೋಗದಿದ್ದರೆ ಒಳ್ಳೆಯದು. ಬರಹಗಾರನ ಬದುಕಿನಲ್ಲಿ ಒಂದು ಕ್ಷಣ ಬರುತ್ತದೆ ಯಾವಾಗ ಆತ ಏನು ಮಾಡಬೇಕೆನ್ನುವುದರ ಅರಿವು ಹೊಂದಿರುತ್ತಾನೆ. ತನ್ನ ಸಹಜ ಧ್ವನಿ, ತನ್ನ ಸಹಜ ಲಯ, ಕಂಡುಕೊಂಡಿರುತ್ತಾನೆ. ಅಲ್ಪಪ್ರಮಾಣದ ತಿದ್ದುಪಡಿ ಮಾತ್ರ ಬೇಕಾಗಬಹುದು.

ಬರೆಯುವಾಗ ನಾನು ಯಾಕೆ ಓದುಗನ ಕುರಿತಾಗಿ ಯೋಚಿಸುವುದೇ ಇಲ್ಲವೆಂದರೆ, ಓದುಗನೋರ್ವ ಕಲ್ಪಿತ ಆಸಾಮಿ. ಹಾಗೆಯೇ, ನಾನು ನನ್ನ ಕುರಿತೂ ಕೂಡ ಯೋಚಿಸುವುದಿಲ್ಲ (ನಾನೂ ಕಲ್ಪಿತ ಪಾತ್ರವಿರಬಹುದು). ನಾನು ಏನನ್ನು ಹೇಳಬಯಸಿದ್ದೋ ಆ ಕುರಿತು ಯೋಚಿಸುವೆ ಮತ್ತು ಅದನ್ನು ಕೆಡಿಸದೇ ಹೇಳಲು ನನಗಾದಷ್ಟು ಪ್ರಯತ್ನ ಮಾಡುತ್ತೇನೆ. ನಾನು ಯೌವನದಲ್ಲಿ “ಅಭಿವ್ಯಕ್ತಿ”ಯು ಕುರಿತು ಹಚ್ಚಿಕೊಂಡಿದ್ದೆ. ಇಟಲಿಯ ತತ್ವಜ್ನಾನಿ ಬೆನೆದಿತ್ತೋ ಕ್ರೋಚನನ್ನು ಓದಿದ್ದು ನನಗೆ ಒಳಿತಾಯಿತು. ಸರ್ವವನ್ನೂ ಅಭಿವ್ಯಕ್ತಿಸಬೇಕೆನ್ನುವುದು ನನ್ನ ಬಯಕೆಯಾಗಿತ್ತು. ಸೂರ್ಯಾಸ್ತದ ಕುರಿತು ಹೇಳುವಾಗ, ಸೂರ್ಯಾಸ್ತಕ್ಕೆ ತಕ್ಕದಾದ, ಒಂದು ಅನನ್ಯ ರೂಪಕವನ್ನು ಹುಡುಕುತ್ತಿದ್ದೆ. ಆದರೀಗ ನನ್ನ ದೃಷ್ಟಿಕೋನ ಬದಲಾಗಿದೆ, ಒಳ್ಳೆಯದೋ ಅಲ್ಲವೋ, ಅಂತೂ ನಾನೀಗ ಸರ್ವವನ್ನೂ ಅಭಿವ್ಯಕ್ತಿಸಬೇಕೆನ್ನುವ ಹಠ ತೊರೆದಿದ್ದೇನೆ. ಅಭಿವ್ಯಕ್ತಿಯ (expression) ಬದಲಿಗೆ ನಾನೀಗ ಪ್ರಸ್ತಾಪದ (allusion) ವಿಶಯದಲ್ಲಿ ಹೆಚ್ಚು ನಂಬಿಕೆ ಉಳ್ಳವನಾಗಿದ್ದೇನೆ. ಆತ್ಯಂತಿಕವಾಗಿ, ನುಡಿಗಳು ಎಂದರೇನು? ಸಾರ್ವತ್ರಿಕ ಸ್ಮೃತಿಯ ಪ್ರತಿಮೆಗಳು. ನಾನು ಬಳಸುವ ನುಡಿ ಅರ್ಥವಾಗಲು ಆ ನುಡಿಯ ಬಳಕೆಯ ಅನುಭವ ನಿಮಗೆ ಅಗತ್ಯ. ಅದಿಲ್ಲದೇ, ನುಡಿ ಅರ್ಥಹೀನ. ಹಾಗಾಗಿಯೇ ನನಗನ್ನಿಸುತ್ತದೆ, ಬರವಣಿಗೆಯಲ್ಲಿ ನಾವು ಮಾಡುವುದೆಲ್ಲವೂ ಪ್ರಸ್ತಾಪವೇ (ಇತರರು ಬಳಸಿದ ಅರ್ಥದ ಪರೋಕ್ಷ ಉಲ್ಲೇಖ); ನಾವು ಓದುಗನ ಕಲ್ಪನೆಯನ್ನು ಕೆರಳಿಸಬಹುದು ಮಾತ್ರ. ಚುರುಕು ಬುದ್ಧಿಯ ಓದುಗ ನಮ್ಮ ಸೂಚನೆಯನ್ನು ಗ್ರಹಿಸಿ ಸಮಾಧಾನ ಪಡೆದಿರುತ್ತಾನೆ/ಳೆ.

ಇದು ಕಾರ್ಯದಕ್ಷತೆಯತ್ತ ನಮ್ಮನ್ನು ಒಯ್ಯುತ್ತದೆ – ನನ್ನ ಸಂಧರ್ಭದಲ್ಲಿ ಆಲಸ್ಯದತ್ತ. ನಾನು ಯಾಕಿನ್ನೂ ಒಂದೇ ಒಂದು ಕಾದಂಬರಿಯನ್ನೂ ಬರೆದಿಲ್ಲ ಎಂದು ಜನರು ಕೇಳಿದ್ದಿದೆ. ಒಂದು ಕಾರಣವೆಂದರೆ, ಆಲಸ್ಯ. ಇನ್ನೊಂದು ಕಾರಣವಿದೆ. ಬಳಲಿಕೆಯಿಲ್ಲದೇ ನಾನೀವರೆಗೆ ಯಾವುದೇ ಕಾದಂಬರಿ ಓದಿಲ್ಲ. ಕಾದಂಬರಿಗಳಲ್ಲಿ ವಿಸ್ತರಿಸುವ ಅಗತ್ಯವಿರುತ್ತದೆ. ಕಾದಂಬರಿಗೆ ಅದು ಅತ್ಯಂತ ಅವಶ್ಯಕ ಗುಣ – ಉದ್ದುದ್ದವಾಗಿ ಹೇಳುವುದು. ಹಾಗೆ ನೋಡಿದರೆ, ಸಣ್ಣಕತೆರ್ಗಳನ್ನು ನಾನು ಮತ್ತೆ ಮತ್ತೆ ಓದಿದ್ದಿದೆ. ಹೆನ್ರಿ ಜೇಮ್ಸ್‌ನ ಅಥವಾ ರಡ್ಯಾರ್ಡ್ ಕಿಪ್ಲಿಂಗ್‌ನ ಕತೆಯೊಂದರಲ್ಲಿ ದೀರ್ಘ ಕಾದಂಬರಿಯಲ್ಲಿರುವಂತ ಸಂಕೀರ್ಣತೆ ಹಾಗೂ ಸಂತಸ ಸಹಜವಾಗಿಯೇ ದಕ್ಕಿಬಿಡುತ್ತದೆ.

“ಕವಿಯ ನಂಬಿಕೆ”ಯ ಕುರಿತು ನಾನು ಹೇಳಹೊರಟಿರುವುದು ನನ್ನ ಉಪನ್ಯಾಸಗಳ ಮೂಲಕವೇ ಹೊಮ್ಮುವುದೆಂಬ ಸರಳ ವಿಶ್ವಾಸ ನನಗಿತ್ತು. ಈವರೆಗೆ ನಾನು ಚಿತ್ರಿಸಿರುವ ಮುನ್ನೆಚ್ಚರಿಕೆಗಳ ಹೊರತಾಗಿ, ನಾನೀಗ ಹೇಳಲೇಬೇಕಾಗಿದೆ, ನನ್ನದೇ ಆದ “ಬರಹಗಾರನ ನಂಬಿಕೆ” ಎಂದೆನೂ ಇಲ್ಲವೆಂದು.

ಬರೆಯಲು ಹೊರಟಿರುವುದನ್ನು ಅರ್ಥಮಾಡಿಕೊಳ್ಳಲು ಹೆಣಗುವುದಿಲ್ಲ ನಾನು. ಬರಹಗಾರನ ಕೆಲಸದಲ್ಲಿ ಬುದ್ಧಿವಂತಿಕೆಗೆ ಹೆಚ್ಚಿನ ಸ್ಥಾನವಿಲ್ಲವೆಂದೇ ನನ್ನ ಅನಿಸಿಕೆ. ತೀರಾ ಸ್ವಯಂ-ಪ್ರಜ್ನೆಯೇ ಆಧುನಿಕ ಸಾಹಿತ್ಯದ ದೋಷಗಳಲ್ಲಿ ಒಂದು ಎಂದು ನನ್ನ ಭಾವನೆ. ಉದಾಹರಣೆಗೆ, ವಿಶ್ವದ ಶ್ರೇಷ್ಠ ಸಾಹಿತ್ಯಗಳಲ್ಲಿ ಫ್ರೆಂಚ್ ಸಾಹಿತ್ಯವೂ ಒಂದು. ಒಂದು ಜನಪ್ರಿಯ ಕಲ್ಪನೆಯೆಂದರೆ ಫ್ರೆಂಚ್ ಸಾಹಿತಿಗಳಲ್ಲಿ ಸ್ವಯಂ-ಪ್ರಜ್ನೆ ಅಧಿಕವೆಂದು. ಫ್ರೆಂಚ್ ಬರಹಗಾರರು ತಾವು ಹೇಳ ಹೊರಟಿರುವುದನ್ನು ಹೇಳುವ ಮೊದಲು ಅದರ ವ್ಯಾಖ್ಯೆಯನ್ನು ಒದಗಿಸುತ್ತಾರೆ ಎಂದು. ಇಂತಿಂತ ಪ್ರದೇಶದಲ್ಲಿ ಹುಟ್ಟಿದ (ಉದಾಹರಣೆಗೆ, ಫ್ರೆಂಚ ಬರಹಗಾರ ಹೇಳುತ್ತಾನೆ) ಕ್ಯಾಥೋಲಿಕ್‌ನಾದ, ಅಲ್ಪ ಸಮಾಜವಾದಿಯೂ ಆಗಿರುವವ, ಏನನ್ನು ಬರೆದಾನು? ಅಥವಾ, ದ್ವಿತೀಯ ವಿಶ್ವಯುದ್ಧದ ತರುವಾಯ ನಾವು ಬರೆಯಬೇಕಿರುವುದು ಹೇಗೆ? ವಿಶ್ವದಲ್ಲಿ ಹಲವು ಬರಹಗಾರರು ಇಂತಹ ಕಾಲ್ಪನಿಕ ಸಮಸ್ಯೆಗಳನ್ನಿಟ್ಟುಕೊಂಡು ಶ್ರಮ ವ್ಯಯಿಸುತ್ತಿರಬಹುದು.

ನನ್ನ ಉದಾಹರಣೆಯೇ ಸೂಕ್ತವೆಂದೇನಲ್ಲ, ಹೆಚ್ಚು ಅಂದರೆ ನನ್ನದು ಒಳ್ಳೆಯ ಎಚ್ಚರಿಕೆಯಂತೂ ಆದೀತು. ನಾನು ಬರೆಯಲು ತೋಡಗಿದಾಗ ನನ್ನ ಕುರಿತಾಗಿ ಸಂಪೂರ್ಣವಾಗಿ ಮರೆತುಬಿಡುತ್ತೇನೆ. ನನ್ನ ವೈಯುಕ್ತಿಕ ಸನ್ನಿವೇಶವನ್ನು ಕಡೆಗಣಿಸುತ್ತೇನೆ. ಮೊದಲು ನಾನು ಮಾಡುತ್ತಿದ್ದ ಹಾಗೆ, ಓರ್ವ ’ದಕ್ಷಿಣ ಅಮೇರಿಕಾದ” ಬರಹಗಾರನೆಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ನನ್ನ ಆಶಯವೇನು ಎನ್ನುವುದನ್ನು ತಿಳಿಯಗೊಡಿಸುವುದಷ್ಟೇ ನನ್ನ ಉದ್ದೇಶ. ಆ ಆಶಯವೇನಾದರೂ ಉಜ್ವಲವಾಗಿಲ್ಲದಿದ್ದರೆ, ನಾನು ಅದನ್ನು ಅಲಂಕರಿಸಲು ಅಥವಾ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಹೀಗೆ ಮಾಡುತ್ತಲೇ ನಾನು ಯಶಸ್ಸು ಕಂಡಿರಬಹುದು ಯಾಕೆಂದರೆ, ನನ್ನ ಕುರಿತಾಗಿ ಬರುತ್ತಿರುವ ಅನೇಕ ಬರವಣಿಗೆಗಳಲ್ಲಿ ನನ್ನ ಅಡ್ಡಾದಿಡ್ಡಿ ಕೃತಿಗಳಲ್ಲಿ ಗೋಚರಿಸುವ ಅನೇಕ ಅರ್ಥಪೂರ್ಣ ಸಂಗತಿಗಳ ಚರ್ಚೆ ಇರುತ್ತದೆ, ಅವುಗಳನ್ನು ಕಾಣಗೊಳಿಸಿದವರಿಗೆ ನಾನು ಕೃತಜ್ನನಾಗಿರಬೇಕು. ಯಾಕೆಂದರೆ, ಬರವಣಿಗೆಯೆನ್ನುವುದು ಸಹಯೋಗದಿಂದ ಆಗುವ ಸಂಗತಿ. ಬರಹಗಾರನಂತೆಯೇ ಓದುಗನೂ ತನ್ನ ಕಾರ್ಯವೆಸಗಿರುತ್ತಾನೆ, ಕೃತಿಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಾನೆ. ಅಧ್ಯಾಪನ ಮಾಡುವಾಗಲೂ ಇದೇ ಆಗುತ್ತದೆ.

ಒಳ್ಳೆಯ ಉಪನ್ಯಾಸವೊಂದನ್ನು ಕೇಳಿದೆವೆಂದು ನಿಮಗೆ ಅನಿಸಿರಬಹುದು. ಹಾಗಿದ್ದಲ್ಲಿ, ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಯಾಕೆಂದರೆ, ನನ್ನೊಂದಿಗೆ ನೀವೂ ಕೂಡ ಶ್ರಮವಹಿಸಿದ್ದೀರಿ. ಹಾಗೆ ನೀವೇನಾದರೂ ಸಹಕರಿಸದೇ ಹೋಗಿದ್ದರೆ, ನನ್ನ ಈ ಉಪನ್ಯಾಸಗಳು ಚೆನ್ನಾಗಿರುವುದು ದೂರಕ್ಕಿರಲಿ, ತಾಳಿಕೊಳ್ಳುವುದೂ ಕಷ್ಟವಾಗಿರುತ್ತಿತ್ತು. ಈ ಸಂಜೆಯೂ ನೀವು ನನ್ನೊಡನೆ ಸಹಕರಿಸುತ್ತೀದ್ದೀರಿ ಎಂದು ಕೊಂಡಿದ್ದೇನೆ. ಈ ಸಂಜೆ ಇತರ ಸಂಜೆಗಳಂತಲ್ಲ, ಎಂದೇ ನಾನೀಗ ನನ್ನ ಕುರಿತಾಗಿ ಒಂದು ಮಾತನ್ನು ಹೇಳಬಯಸುತ್ತೇನೆ.

ನಾನು ಆರು ತಿಂಗಳ ಹಿಂದೆ ಅಮೇರಿಕಾಗೆ ಬಂದೆ. ಎಚ್ ಜಿ ವೆಲ್ಸ್‌ನ ಪ್ರಸಿದ್ಧ ಪುಸ್ತಕದ ಹೆಸರನ್ನು ಬಳಸಿ ಹೇಳುವುದಾದರೆ ನನ್ನ ದೇಶದಲ್ಲಿ ನಾನು ವಾಸ್ತವದಲ್ಲಿ ಒಬ್ಬ “ಇನ್ವಿಸಿಬಲ್ ಮ್ಯಾನ್” (ಅಗೋಚರ ವ್ಯಕ್ತಿ). ಇಲ್ಲಿ ನನಗೆ ಹೆಚ್ಚಿನ ಪ್ರಸಿದ್ಧಿ ಇದೆ. ಇಲ್ಲಿಯ ಜನರು ನನ್ನ ಕೃತಿಗಳನ್ನು ಓದಿದ್ದಾರೆ, ಮತ್ತು ಅವರು ತಾವು ಓದಿದ ನನ್ನ ಕತೆಗಳ ಕುರಿತು ನನಗೆ ಪ್ರಶ್ನೆ ಕೇಳುತ್ತಾರೆ. ನನಗೋ, ಆ ಕತೆಗಳು ಮರೆತು ಹೋಗಿವೆ. ಅವರು ನನ್ನ ಕೇಳುತ್ತಾರೆ ಇಂತಿಂತ ಕತೆಯ ಇಂತಿಂತ ಪಾತ್ರ ಉತ್ತರಿಸುವ ಮುನ್ನ ಸುಮ್ಮನಿದ್ದದ್ದು ಯಾಕೆ? ನನಗೋ ಗಾಭರಿಯಾಗುತ್ತದೆ, ಇಂತಿಂತ ಕತೆಯ ಇಂತಿಂತ ಪಾತ್ರ ಸುಮ್ಮನೆ ಯಾಕಿದ್ದ ಅಂತ. ನಿಜ ಹೇಳಲು ನನಗೆ ಸ್ವಲ್ಪ ಹಿಂಜರಿಕೆಯಾಗುತ್ತದೆ. ಇಂತಿಂತ ಕತೆಯ ಇಂತಿಂತ ಪಾತ್ರ ಉತ್ತರಿಸುವ ಮುನ್ನ ಸುಮ್ಮನಿದ್ದುದಕ್ಕೆ ಕಾರಣವೆಂದರೆ ಏನಾದರೂ ಹೇಳುವ ಮುನ್ನ ಯಾರೇ ಆಗಲೀ ಸ್ವಲ್ಪ ಯೋಚನೆಗೆ ತೊಡಗುತ್ತಾರೆ. ಆದರೂ, ಇವೆಲ್ಲವೂ ನನಗೆ ಹರುಷ ತಂದಿವೆ. ನನ್ನ ಬರಹಗಳನ್ನು ನೀವು ಮೆಚ್ಚಿರುತ್ತೀರಾದರೆ ಬಹುಶಃ ನೀವು ತಪ್ಪುಮಾಡುತ್ತಿದ್ದೀರಿ ಅನಿಸುತ್ತದೆ ನನಗೆ. ಈ ತಪ್ಪು ತುಂಬಾ ಧಾರಾಳತನವುಳ್ಳ ತಪ್ಪು. ಹೀಗೆ, ಮುಂದೆ ನಮ್ಮ ಕೆಲಸಕ್ಕೆ ಬಾರದ ಸಂಗತಿಗಳನ್ನೂ ನಂಬುವ ರೀತಿ ಒಳ್ಳೆಯದು.

ಹೌದು, ನಾನೀಗ ತಮಾಶೆ ಮಾಡುತ್ತಿದ್ದೇನೆ. ಯಾಕೆಂದರೆ, ನನ್ನ ಅಂತರಂಗದಲ್ಲಿ ಈಗ ಮೂಡುತ್ತಿರುವ ಭಾವನೆಯೆಂದರೆ, ಮುಂದೊಂದು ದಿನ ನಾನು ಈ ವರ್ತಮಾನವದತ್ತ ತಿರುಗಿ ನೋಡಲಿದ್ದೇನೆ. ಹಾಗೆ ನೋಡಿ, ಯೋಚನೆಗೆ ತೊಡಗಿಕೊಳ್ಳಲಿದ್ದೇನೆ: ನಾನು ಯಾಕೆ ಹೇಳಬೇಕಾದದ್ದನ್ನು ಹೇಳದೇ ಹೋದದ್ದು ಎಂದು. ಅಮೇರಿಕಾದಲ್ಲಿ ಕಳೆದ ಈ ತಿಂಗಳುಗಳು ಬಗೆಗಿನ ನನ್ನ ಭಾವವನ್ನು ಯಾಕೆ ನಾನು ವಿವರಿಸಲಿಲ್ಲ? ಇಷ್ಟೆಲ್ಲ ಪರಿಚಿತ-ಅಪರಿಚಿತ ಸ್ನೇಹಿತರ ಕುರಿತು ನನಗೆ ಏನನ್ನಿಸುತ್ತಿದೆಯೆಂದು ನಾನೇಕೆ ಹೇಳಲಿಲ್ಲ? ಆದರೂ, ಅದು ಹೇಗೋ ನಿಮಗೆ ನನ್ನ ಭಾವನೆಗಳು ತಲುಪಿತ್ತಿವೆ ಎಂದು ನಾನು ನಂಬಿದ್ದೇನೆ.

ನನ್ನ ಕವನದ ಕೆಲವು ಸಾಲುಗಳನ್ನು ಪಠಿಸಲು ನನಗೆ ಕೇಳಲಾಗಿದೆ. ಹಾಗಾಗಿ, ಸ್ಪಿನೋಜಾ ಎಂಬ ತತ್ವಶಾಸ್ತ್ರಜ್ನನ ಮೇಲೆ ನಾನು ಬರೆದ ಸುನೀತ (ಸಾನೆಟ್) ಒಂದನ್ನು ನಾನು ಓದುತ್ತೇನೆ. ನಿಮ್ಮಲ್ಲಿ ಹಲವರಿಗೆ ಸ್ಪ್ಯಾನಿಶ್ ಭಾಷೆ ಬರದೇ ಇರುವುದು ಈ ಸಾನೆಟ್ಟಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ನಾನು ಮೊದಲು ಹೇಳಿದ ಹಾಗೆ, ಅರ್ಥವೇನೂ ಮುಖ್ಯವಲ್ಲ. ಮುಖ್ಯವೆಂದರೆ ಕವನಕ್ಕಿರುವ ಸಂಗೀತ, ಹೇಳಲಾಗುತ್ತಿರುವ ರೀತಿ. ಗೇಯತೆಯಿಲ್ಲದೆಯೂ ನೀವು ಅದನ್ನು ಭಾವಿಸಿಕೊಳ್ಳಬಹುದು. ಗೇಯತೆ ಇಲ್ಲದಿದ್ದರೆ, ಒಳ್ಳೆಯವರಾದ ನೀವುಗಳು ಅದನ್ನು ಸೃಜಿಸಿಕೊಂಡು ಈ ಸಾಲುಗಳನ್ನು ಕೇಳಿಸಿಕೊಳ್ಳುವಿರಿ ಎಂದು ನಾನು ನಂಬುವೆ. ಈಗ ಸ್ಪಿನೋಜಾನ ಕುರಿತಾದ ಸಾನೆಟ್:

The Jew’s hands, translucent in the dusk,

Polish the lenses time and again.

The dying afternoon is fear, is

Cold, and all afternoons are the same.

The hands and the hyacinth-blue air

That whitens at the ghetto edges

Do not quite exist for this silent

Man who conjures up a clear labyrinth,

Undisturbed by fame—that re_ection

Of dreams in the dream of another

Mirror—or by maidens’ timid love.

Free of metaphor and myth, he grinds

A stubborn crystal: the infnite

Map of the One who is all His stars.


  1. ಕಾವ್ಯ ಎಂಬ ಒಗಟು:

ಭಾಗ ೧: https://ruthumana.com/2020/08/24/borges-craft-of_verses-riddles-of-poetry-1/

ಭಾಗ ೨: https://ruthumana.com/2020/09/04/borges-craft-of_verses-riddles-of-poetry-2/

2. ರೂಪಕ:

ಭಾಗ ೧: https://ruthumana.com/2020/10/18/borges-craft-of_verses-the-metaphor-1/

ಭಾಗ ೨: https://ruthumana.com/2020/12/31/borges-craft-of_verses-the-metaphor-2/

3. ಕಥೆಯ ನಿರೂಪಣೆ:

ಪೂರ್ಣ ಭಾಗ: https://ruthumana.com/2021/05/11/borges-craft-of_verses-the-narrating_a_story/

4. ಪದ-ನಾದ ಮತ್ತು ಅನುವಾದ

ಪೂರ್ಣ ಭಾಗ: https://ruthumana.com/2021/06/06/word_rythm_translation/

5.  ವಿಚಾರ ಮತ್ತು ಕಾವ್ಯ

ಪೂರ್ಣ ಭಾಗ: https://ruthumana.com/2021/09/04/idea_and_poetry/

ಪ್ರತಿಕ್ರಿಯಿಸಿ