ಅಸ್ತಮಾನದ ಬಳಿಕ…

    “ ನಿನ್ನನ್ನು ನೋಡಿ ಇತರ ಹೆಣ್ಣು ಮಕ್ಕಳು ಶಾಲೆಗೆ ಹೋಗಲಿ ಎಂದು ನಿನ್ನನ್ನು ಶಾಲೆಗೆ ಕಳುಹಿಸುತ್ತಿದ್ದೇನೆ.  ನೀನೇನಾದರೂ ಕೆಟ್ಟ ಹೆಸರು ತೆಗೆದುಕೊಂಡರೆ ಆಮೇಲೆ ನಮ್ಮ ಹೆಣ್ಣು ಮಕ್ಕಳು ಶಾಲೆಯ ಮುಖ ಕಾಣಲಾರರು.  ಆದುದರಿಂದ ನೀನು ಜಾಗ್ರತೆಯಿಂದಿರು “ ಇದು ಸಾರಾ ಅವರ ಅಪ್ಪ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಮಗಳಿಗೆ  ಹೇಳಿದ ಮಾತು.  1936ರ ಜೂನ್ ತಿಂಗಳ 30 ರಂದು ಕೇರಳದ ಕಾಸರಗೋಡಿನ ಪುದಿಯಪುರ (ಹೊಸ ಮನೆ )ದಲ್ಲಿ ಹುಟ್ಟಿದ ಸಾರಾ  ತನ್ನ ಹೆತ್ತವರಿಗೆ ಹರಕೆ ಹೇಳಿ ಹುಟ್ಟಿದ ಕೂಸು.  ಮೊದಲ ಮೂರೂ  ಮಕ್ಕಳು ಗಂಡಾದಾಗ ಹೆಣ್ಣು ಮಗುವಿಗಾಗಿ ಅವರು ಹಂಬಲಿಸಿದರು, ಹರಕೆ ಹೇಳಿದರು, ಹಾಗೆ ಹೆತ್ತವರು ಬಹಳ ಬಯಸಿ ಬಯಸಿ ಹುಟ್ಟಿದ ಮಗು.  ಇವರ ನಂತರವೂ ಎರಡು ಗಂಡು ಮಕ್ಕಳೇ  ಹುಟ್ಟಿದಾಗ ಸಾರಾ ಕುಟುಂಬದ ಎಲ್ಲರ ಕಣ್ಮಣಿಯಾದರು.  ತಂದೆ ಆ ಕಾಲದಲ್ಲಿ ವಕೀಲರಾಗಿ ಪ್ರಸಿದ್ಧರಾಗಿದ್ದರು.  ಅವರು ತಮ್ಮ ಗಂಡು ಮಕ್ಕಳನ್ನು ಶಾಲೆಗೆ ಕಳುಹಿಸಿದಷ್ಟು ಸುಲಭವಿರಲಿಲ್ಲ ಹೆಣ್ಣು ಮಗು ಸಾರಾಳನ್ನು ಶಾಲೆಗೆ  ಕಳುಹಿಸುವುದು, ಹೆಣ್ಣು ಮಗುವೊಂದನ್ನು ಶಾಲೆಗೆ ಕಳುಹಿಸುವುದು ಬಿಡಿ, ಮನೆಯಿಂದ ಹೊರಗೆ ಕಳಿಸುವುದೇ  ಮಹಾಪರಾಧವೆಂಬ ಭಾವನೆ ಮುಸ್ಲಿಂ ಸಮುದಾಯದಲ್ಲಿತ್ತು. ಆದರೂ  ಸಾರಾಳ ತಂದೆ ಅವಳನ್ನು ಎಸ್‌ಎಸ್‌ಎಲ್‌ಸಿ ವರೆಗೆ ಓದಲು ಪ್ರೋತ್ಸಾಹಿಸಿದ್ದು ವಿಶೇಷ.  ಅವರು ಶಾಲೆಗೆ ಹೋಗದಂತೆ ತಡೆಯುವ ಪ್ರಯತ್ನವನ್ನೂ  ಮಾಡಿದವರಿದ್ದವರಂತೆ . ಆದರೆ ಸಾರಾ ಅವರ ಹೆತ್ತವರು, ಸೋದರ ಮಾವಂದಿರು ಕಾಸರಗೋಡಿನಲ್ಲಿ ಅತ್ಯಂತ ಶ್ರೀಮಂತರು ಮತ್ತು ಸಮಾಜದ ಗೌರವಾನ್ವಿತರು ಆದುದರಿಂದ ಆ ಪ್ರಯತ್ನಗಳು ವಿಫಲವಾದುವಂತೆ.  ಆದುದರಿಂದಲೇ  ಸಾರಾಳ  ತಂದೆ, ಮಗಳಿಗೆ ಈ ಮೇಲಿನ ಕಿವಿ ಮಾತನ್ನು ಹೇಳಿರಬೇಕು. 

    ಕ್ರೀಡೆಯಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಯಾವಾಗಲೂ ಮುಂದಿದ್ದ ಸಾರಾಗೆ, ಎಲ್ಲರಂತೆ ಬೇರೆ ಶಾಲೆಗಳಿಗೆ ಹೋಗಿ ಸ್ಪರ್ಧಿಸುವ ಅವಕಾಶ ಸಿಗುತ್ತಿರಲಿಲ್ಲವೆಂದು ದುಃಖಿಸುತ್ತಿದ್ದ ಪ್ರಸಂಗಗಳೂ  ಇದ್ದವು.  ಆದರೆ ಆ ಊರಿನ ಇತರ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಾಲೆಯ ಕನಸೂ  ಕೂಡ ಬೀಳದ ಸಮಯದಲ್ಲಿ, ಸಾರಾ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದುದೇ  ಅವರಿಗೆ ದಕ್ಕಿದ ಭಾಗ್ಯವೆಂದು ಸಮಾಧಾನ ಪಟ್ಟುಕೊಳ್ಳಬೇಕಾಯಿತು.  ಮುಂದೆ  ಕೇರಳದ ಈ ಹೆಣ್ಣು ಮಗಳು ಕರ್ನಾಟಕಕ್ಕೆ ಸೊಸೆಯಾಗಿ ಬಂದು ಕನ್ನಡಿಗರ ಮನೆ-ಮನವನ್ನು ತುಂಬಿದ ರೀತಿಯೇ ಅಚ್ಚರಿಗೊಳಿಸುತ್ತದೆ. ಸುಶಿಕ್ಷಿತರೂ , ಸರಕಾರಿ ಉದ್ಯೋಗಿಯೂ  ಆದ ಶ್ರೀಯುತ ಅಬೂಬಕರ್ ಅವರೊಂದಿಗೆ ವಿವಾಹವಾದ ಮೇಲೆ ಅವರ ಬದುಕಿನ ಎರಡನೇ ಅಧ್ಯಾಯ  ಪ್ರಾರಂಭವಾಯಿತು . ತವರು ಮನೆಯಲ್ಲಿ ಇದ್ದ ದೊಡ್ಡ ಗ್ರಂಥ ಬಂಢಾರ , ಅಣ್ಣಂದಿರು ಗ್ರಂಥ ಬಂಢಾರದಿಂದ ತಂದು ಕೊಡುತ್ತಿದ್ದ ಕಾದಂಬರಿಗಳು, ಇಂತಹ ಓದಿನ ಪರಿಸರಕ್ಕಿಂತ ತೀರಾ ಭಿನ್ನವಾದ ಪರಿಸರವು ಗಂಡನ ಮನೆಯಲ್ಲಿತ್ತು . ಮೊದಮೊದಲಿಗೆ ಹೊಂದಿಕೊಳ್ಳುವುದು ಸಾರಾರಿಗೆ ಸ್ವಲ್ಪ ಕಷ್ಟವೇ ಆಯಿತು.  ಕೂಡು ಕುಟುಂಬದ ದೊಡ್ಡ ಮನೆಯಲ್ಲಿ ಹೊಂದಿಕೊಂಡು ಬಾಳುವುದರ ಜೊತೆಗೆ, ವಿರಾಮದ ಸಮಯವೂ ಸೋಮಾರಿಯಾಗಿ ಕಳೆದು ಹೋಗದಂತೆ ಲೈಬ್ರರಿಯಿಂದ  ಪುಸ್ತಕ ತಂದು ಕೊಡುವಂತೆ ತನ್ನ ಗಂಡನನ್ನು ಬೇಡಿಕೊಂಡರು.  ಈ ಓದಿಗೆ ಧಾರ್ಮಿಕ ಗ್ರಂಥಗಳು ದಕ್ಕಿದವು.  ವೈಚಾರಿಕ ಕೃತಿಗಳು, ಕಾದಂಬರಿ- ಕಥೆ ಮುಂತಾದ ಪ್ರಕಾರದವೂ   ಲಭಿಸಿದವು . ಹೀಗೆ ನಿರಂತರ ಓದಿನಿಂದಾಗಿ ಸಾರಗೆ ತಾನೂ  ಏಕೆ ಬರೆಯಬಾರದು ಎಂದು ಅನಿಸತೊಡಗಿತು.  ಬೆಟ್ಟದಷ್ಟು ಆಸೆಯನ್ನು ಹೊತ್ತುಕೊಂಡು ಮನೆ- ಮಕ್ಕಳು- ಸಂಸಾರವನ್ನು ನಿಭಾಯಿಸಬೇಕಾಗಿತ್ತು . ಪತಿಯ ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಿಗೆ ವರ್ಗವಾದಾಗ ಆ ಊರುಗಳಲ್ಲಿ ಅವರು  ಅನುಭವಿಸಿದ ಅಡ್ಡಿ- ಆತಂಕಗಳು, ಸುಖ-ದುಃಖಗಳು ಅಪಾರವಾದ ಜೀವನ ಅನುಭವಗಳನ್ನು ನೀಡಿದವು . ಇವರನ್ನು ಪರಕೀಯರಂತೆ  ನಡೆಸಿಕೊಂಡವರಿರುವಂತೆಯೇ, ಮನೆಮಗಳಂತೆ ಹೃದಯಕ್ಕೆ ಅಪ್ಪಿಕೊಂಡವರರೂ  ಇದ್ದರು. 

      ನಾಲ್ಕು ಗಂಡು ಮಕ್ಕಳ ತಾಯಿಯಾಗಿ ಅವರ ಆರೈಕೆ, ಶಿಕ್ಷಣ ಇತ್ಯಾದಿಗಳತ್ತ ಸಂಪೂರ್ಣವಾಗಿ ತಲ್ಲೀನ ರಾಗಿದ್ದ ಸಾರಾ  ಆಗಲೂ  ತನ್ನ ಸಾಧನೆಯ ಬಗ್ಗೆ ಆಶಾವಾದಿಯಾಗಿದ್ದರು.  ಅವರ ಸುಪ್ತ ಪ್ರತಿಭೆ ಅವಕಾಶಕ್ಕಾಗಿ ಕಾಯುತ್ತಿತ್ತು, ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಬಿಕ್ಕಟ್ಟುಗಳನ್ನು ವಿವೇಕದಿಂದ ಎದುರಿಸುವ ಜಾಣ್ಮೆ ಅವರಲ್ಲಿತ್ತು . ಆದುದರಿಂದ ಭವಿಷ್ಯವನ್ನು ಧೈರ್ಯವಾಗಿ ಸ್ವಾಗತಿಸಿದರು.  ಅವರ ಅಪ್ಪ ಹೇಳಿದ ಕಿವಿಮಾತು ಅವರನ್ನು ಸದಾ ಎಚ್ಚರಿಸುತ್ತಿತ್ತು “ಮಗಳೇ ಅನ್ಯಾಯವನ್ನು ಸಹಿಸಬೇಡ.  ಪ್ರಶ್ನಿಸು, ಪ್ರತಿಭಟಿಸು “.  ಈ ಪಾಠವು ಅವರ ಬದುಕಿನುದ್ದಕ್ಕೂ ಬೆಂಗಾವಲಾಗಿ  ಹರಸುತ್ತಿತ್ತು.  ‘ಭವಿಷ್ಯದ ಬಗ್ಗೆ ಯೋಚಿಸದವರಿಗೆ ಭವಿಷ್ಯವೇ ಇರುವುದಿಲ್ಲ’ವೆಂಬುದನ್ನು ಬಲವಾಗಿ ನಂಬಿದ್ದ ಸಾರಾ,  ತನ್ನ ಆಸೆ ಆಕಾಂಕ್ಷೆಯ  ಬೀಜಗಳಿಗೆ ಹನಿಹನಿ ನೀರಿನ ಬಿಂದುಗಳನ್ನು ಸುರಿಸುತ್ತಾ ಅದು ಸದಾ ಆರ್ದ್ರವಾಗಿರುವಂತೆ ನೋಡಿಕೊಂಡರು.  ಪ್ರತಿಭಾವಂತರಿಗೆ ಕಷ್ಟವನ್ನು ಎದುರಿಸುವ ಶಕ್ತಿ ಸಹಜವಾಗಿರುತ್ತದೆ, ಆದರೆ ಪ್ರತಿಭೆ  ಪ್ರಕಟಗೊಳ್ಳಲು ನೂರರಲ್ಲಿ  ಒಂದು ಅಂಶ ಸ್ಪೂರ್ತಿ ಕಾರಣವಾದರೆ, 99 ಅಂಶ ಅವರ ಪರಿಶ್ರಮವೇ ಕಾರಣ.  ಸಂಸಾರದ ತಾಪತ್ರಯಗಳು, ಸಮುದಾಯದಲ್ಲಿ ಮತ್ತು ಕುಟುಂಬದಲ್ಲಿ ಸಾಹಿತ್ಯದ ಬಗ್ಗೆ ತಿರಸ್ಕಾರವಿದ್ದರೂ ಅವರ ಅಂತರಂಗದ ತುಡಿತ-ಮಿಡಿತಗಳು ಅಕ್ಷರ ರೂಪ ತಾಳಲು ಹಾತೊರೆಯುತ್ತಿದ್ದವು.  ಅದೇ ಸಮಯದಲ್ಲಿ ಪುರೋಹಿತಶಾಹಿಗಳು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಶೋಷಣೆ ಮಾಡುವುದನ್ನು, ಧರ್ಮದ ಅಮಲನ್ನು ತಲೆಗೇರಿಸುವಂತೆ ಮಾಡುವುದನ್ನು, ಯಾರೂ  ಕಾಣದ ಸ್ವರ್ಗದ ಆಸೆ ತೋರಿಸಿ ಈ  ಪ್ರಪಂಚದ ಬದುಕುವ ಜನರ ಬಾಳು  ನರಕವಾಗುವಂತೆ ಮಾಡುತ್ತಿರುವುದನ್ನು ಕಂಡಾಗ ಅವರಿಗೆ ಸಹಿಸಲಾಗುತ್ತಿರಲಿಲ್ಲ.  ತಾನು ಪ್ರಶ್ನಿಸುವ ಕೆಲಸವನ್ನಾದರೂ ಮಾಡದಿದ್ದರೆ ಬದುಕಿದ್ದು ವ್ಯರ್ಥವೆಂಬ ಭಾವ ಬಲಿಯಿತು. 

     1981ರಲ್ಲಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ ‘ನನ್ನ ಈ ಜನ ಒಂದಾಗಬೇಕು’ ಎಂದು ಕರೆ ಕೊಟ್ಟರು.  ಇದಕ್ಕೆ ಸಾರಾ ಅವರು ಪ್ರತಿಕ್ರಿಯಿಸಿ ಬರೆದ ಲೇಖನವು  ಪ್ರಥಮವಾಗಿ ಪ್ರಕಟವಾಯಿತು.  ಇಲ್ಲಿಂದ ಮುಂದೆ ಲಂಕೇಶ್ ಅವರ ಪ್ರೋತ್ಸಾಹದಿಂದ ‘ಚಂದ್ರಗಿರಿಯ ತೀರದಲ್ಲಿ’ ಎಂಬ ಕಾದಂಬರಿಯು ಪತ್ರಿಕೆಯಲ್ಲಿ ಪ್ರಕಟವಾಯಿತು, ಇದು ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಸಂವೇದನೆಯನ್ನು ತಂದು ಕೊಟ್ಟಿತು. ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಪ್ರತಿಭಟಿಸುವ ಬಂಡಾಯ ಸಾಹಿತ್ಯ ಪ್ರಕಾರವು ಆಗ ಸಾಹಿತ್ಯ ಲೋಕದಲ್ಲಿ ಪ್ರಚಲಿತವಿತ್ತು. ವ್ಯಕ್ತಿ ಧರ್ಮದ ನಿಯಮಗಳ ವಿರುದ್ಧ ,ಪ್ರಭುತ್ವದ ವಿರುದ್ಧ ಈ ಕಾದಂಬರಿಯ ಮೂಲಕ ಸಾರಾ ಎತ್ತಿದ  ಬಂಡಾಯದ ಧ್ವನಿ ಧರ್ಮಾಂಧರನ್ನು  ಕೆರಳಿಸಿತು.  ಅದರೆ  ಸಾರಾ ಅವರ ಸಾಹಿತ್ಯ ಕೃಷಿಯ ಪಯಣವು ಮುಂದೆ ರಾಜಮಾರ್ಗದಲ್ಲೇ ಸಾಗುವಂತಾಯಿತು . 

    ಮೊದಲ ಕಾದಂಬರಿಯಿಂದಲೇ ಅವರಿಗೆ ಬಂದ ಪ್ರಶಸ್ತಿಗಳು ಮುಂದೆ ಸಹನಾ, ವಜ್ರಗಳು, ಕದನ ವಿರಾಮ, ಸುಳಿಯಲ್ಲಿ ಸಿಕ್ಕವರು ,ತಳ  ಒಡೆದ ದೋಣಿಯಲ್ಲಿ, ಪ್ರವಾಹ- ಸುಳಿ, ಪಂಜರ , ಇಳಿಜಾರು, ಕಾಣಿಕೆ ಮುಂತಾದ ಕಾದಂಬರಿಗಳು; ಚಪ್ಪಲಿಗಳು, ಪಯಣ ಅರ್ಧ ರಾತ್ರಿಯಲ್ಲಿ ಹುಟ್ಟಿದ ಕೂಸು, ಖೆಡ್ಡಾ , ಗಗನಸಖಿ, ಸಂದೇಹದ ಸುಳಿಯಲ್ಲಿ, ಸುಮಯ್ಯಾ ( ಜಾನಪದ ಕಥೆ) ಮುಂತಾದ ಕಥಾ ಸಂಕಲನಗಳು; ಲೇಖನ ಗುಚ್ಛ , ಅನಾವರಣ, ಸಾಹಿತ್ಯ – ಸಂಸ್ಕೃತಿ – ಮಹಿಳೆ, ಚಿಂತೆ-ಚಿಂತನೆ ಮುಂತಾದ ಲೇಖನ ಸಂಕಲನಗಳು; ತೇಲಾಡುವ ಮೋಡಗಳು – ಬಾನುಲಿ ನಾಟಕ ಸಂಕಲನ; ಹೊತ್ತು ಕಂತುವ ಮುನ್ನ- ಆತ್ಮಕಥಾನಕ ;  ಬಲೆ, ಮನೋಮಿ, ನಾನಿನ್ನು ನಿದ್ರಿಸುವೆ- ಅನುವಾದಿತ ಕಾದಂಬರಿಗಳು; ವೈಕಂ ಮಹಮ್ಮದ್ ಬಶೀರ್ ವ್ಯಕ್ತಿ ಪರಿಚಯದ ಕೃತಿ; ಐಷಾರಾಮದ ಆಳದಲ್ಲಿ – ಅಮೆರಿಕ ಪ್ರವಾಸ ಕಥನ; ತುರ್ತು ಪರಿಸ್ಥಿತಿಯ ಕರಾಳ ಮುಖಗಳು, ಧರ್ಮದ ಹೆಸರಿನಲ್ಲಿ, ಮುಸ್ಲಿಂ ಮಹಿಳೆಯರು ಮತ್ತು ತಲಾಖ್ – ಈ ಮೂರು ಕೃತಿಗಳು ಬೇರೆ ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಅವರ ಮಹತ್ವದ ಕೃತಿಗಳಾಗಿ  ಸಾಲು ಸಾಲಾಗಿ ಪ್ರಕಟಗೊಂಡವು.  ಸಮಾಜವನ್ನು ಎಚ್ಚರಿಸುವ, ಶೋಷಣೆ ವಿರುದ್ಧ ಪ್ರತಿಭಟಿಸುವ ಅವರ ಮನೋಭಾವಕ್ಕೆ ಪೂರಕವಾದ ಈ ಕೃತಿಗಳು ಅವರ ಸಾಮಾಜಿಕ ಬದ್ಧತೆಯನ್ನು ಮಾನವೀಯ ಕಾಳಜಿಯನ್ನು ವ್ಯಕ್ತಪಡಿಸುತ್ತವೆ .  ಮಲಯಾಳದಲ್ಲಿ ಈಚರ್ ವಾರಿಯರ್ ಎಂಬುವವರು ಬರೆದ ‘ತಂದೆಯ ನೆನಪುಗಳು’ ಕೃತಿಯನ್ನು ‘ತುರ್ತು ಪರಿಸ್ಥಿತಿಯ ಕರಾಳ ನೆನಪುಗಳು’ ಎಂದು ಅನುವಾದಿಸಿದರು . ರಾಜನ್ ಎಂಬ  ವಿದ್ಯಾರ್ಥಿಯನ್ನು ನಕ್ಸಲ್ ಎಂದು  ಶಂಕಿಸಿ ಪೊಲೀಸರು ಲಾಕಪ್ ನಲ್ಲಿ  ಹೊಡೆದು ಕೊಂದು , ಪೆಟ್ರೋಲ್ ಹಾಕಿ ದಹಿಸಿದ ಕ್ರೂರ ಘಟನೆಯ ವಿರುದ್ಧ ಆತನ ತಂದೆಯು ಹೋರಾಡಿದ ಕಥಾನಕವಿದು.  ಅವರ ಹೋರಾಟದ ಫಲವಾಗಿ ಅಂದಿನ ಕೇರಳದ ಗೃಹ ಮಂತ್ರಿ ರಾಜೀನಾಮೆ ನೀಡಬೇಕಾಯಿತು. “ ನಮ್ಮ ಈ ಯುವ  ಜನತೆಯನ್ನು ಪೊಲೀಸರು ದೌರ್ಜನ್ಯ ವೆಸಗಿ  ಕೊಲೆ ಮಾಡಲು ಬಿಡಬಾರದು ಎಂಬುದಕ್ಕಾಗಿ ನನ್ನ ಹೋರಾಟ”ವೆಂದು ಈ ಕೃತಿಯ ಮೂಲಕ ನಾಗರೀಕರನ್ನು ಕಳಕಳಿಯಿಂದ ವಿನಂತಿಸಿ ಕೊಂಡರು. 

    2002ರಲ್ಲಿ ನಡೆದ ಗುಜರಾತಿನ ಹತ್ಯಾಕಾಂಡದ ಬಗ್ಗೆ ಅಲ್ಲಿನ ಪೊಲೀಸ್ ಐಜಿಪಿ ಆಗಿದ್ದ ಆರ್ . ಬಿ.  ಶ್ರೀಕುಮಾರ್ ತಾನು ಪ್ರತ್ಯಕ್ಷ ಕಂಡ ಘಟನೆಗಳನ್ನು ಮಲಯಾಳಂನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದರು.  ಅದನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದರು ಸಾರಾ. ಕೃತಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ  ತೀಸ್ತಾ  ಸೈತಲ್ವಾಡ್, ಆರ್.  ಬಿ.  ಶ್ರೀಕುಮಾರ್ ,ನಿವೃತ್ತ ಐಜಿಪಿ ಮರಿಸ್ವಾಮಿಯವರು ಭಾಗವಹಿಸಿ ಗುಜರಾತಿನ ಗಲಭೆಯ ಕರಾಳ ಮತ್ತು ಅಮಾನವೀಯ ಕೃತ್ಯಗಳನ್ನು ಸಭೆಯ ಮುಂದಿಟ್ಟಿದ್ದರು.  ಪೊಲೀಸ್ ಕಾವಲಿನಲ್ಲೇ ಅಂದು ಈ ಕಾರ್ಯಕ್ರಮ ನಡೆದದ್ದು ವಿಶೇಷ. 

     ಇನ್ನೊಂದು ಕೃತಿ ಮರಾಠಿ ಮೂಲದ ‘ ದಾಗದಾ  ವಚಿನ  ಪೆರಾನು’ ಎಂಬ ಕೃತಿ, ಇದನ್ನು ಮಹಾರಾಷ್ಟ್ರದ ಸೈಯದ್ ಭಾಯಿಯವರು  ಬರೆದಿದ್ದು ಸಾರಾ ಇದನ್ನು ಕನ್ನಡಕ್ಕೆ ‘ಮುಸ್ಲಿಂ ಮಹಿಳೆಯರು ಮತ್ತು ತಲಾಖ್ ‘ ಎಂದು ಅನುವಾದಿಸಿದರು.  ಮಹಾರಾಷ್ಟ್ರದಲ್ಲಿ ತಲಾಖ್ ನಿಂದ ನೊಂದ ಮಹಿಳೆಯರನ್ನು ಸಂಘಟಿಸಿ ಮಾಡಿದ ಹೋರಾಟದ ನಿಜ ಕಥಾನಕವಿದು . ಹಮೀದ್  ದಳವಾಯಿಯವರು ಇವರ ಈ ಹೋರಾಟಕ್ಕೆ ಸಹಕರಿಸಿದ್ದರು . ಶಾಹ್ ಬಾನೋ  ಪ್ರಕರಣದ ಬಳಿಕ ಭಾರತದಲ್ಲಿ ಉಂಟಾದ ಬದಲಾವಣೆಗಳು, ವಿಚ್ಛೇದಿತ ಮಹಿಳೆಗೆ ಜೀವನಾಂಶ ಕೊಡಬೇಕು ಎಂದು ಜಾರಿಯಾದ ಕಾನೂನನ್ನು  ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ಬೆಳಗ್ಗೆ ಹಿಂದೆ ಪಡೆದದ್ದು, ಸಂಜೆಯೇ ಬಾಬರಿ ಮಸೀದಿಗೆ ಹಾಕಿದ್ದ ಬೀಗವನ್ನು ತೆಗೆದು ಹಿಂದುಗಳಿಗೆ ಪೂಜೆಗೆ ಅವಕಾಶ ಮಾಡಿಕೊಟ್ಟದ್ದು, ಮುಂದೆ ಕೋಮುವಾದಕ್ಕೆ ಹೊಸ ತಿರುವುಂಟಾಗಿ  ಪ್ರತಿ ವರ್ಷ ಸಾವಿರಾರು ಅಮಾಯಕರು  ಬಲಿಯಾಗುತ್ತಿರುವುದನ್ನು ಕಂಡು ನೊಂದ ಸಾರಾ , ಈ ಬಗ್ಗೆ ಸಾರ್ವಜನಿಕರಿಗೆ ನೈಜ ಸಂಗತಿಗಳನ್ನು ತಿಳಿಸುವ ಸಲುವಾಗಿ ಇಂತಹ ಕೃತಿಗಳನ್ನು ಅನುವಾದಿಸಿದರು.  ಹಿಂಸೆಯಿಂದ ಈ ಲೋಕದಲ್ಲಿ ಯಾರಿಗಾದರೂ ಒಳ್ಳೆಯದಾಗಿದೆಯೇ? ಯಾವ ಧರ್ಮವೂ  ಹಿಂಸೆಯನ್ನು ಬೋಧಿಸಿಲ್ಲ, ಆದರೂ ಶಾಸ್ತ್ರ ಗ್ರಂಥಗಳ ಹೆಸರಿನಲ್ಲಿ ಮಹಿಳೆಯರ ಮೇಲೆ ಯಾಕಿಂಥ  ದೌರ್ಜನ್ಯ ನಡೆಯುತ್ತಿದೆ? ಎಂದು ಸಾರಾ ಮೌನ ಮುರಿದರು.  ಮಾತನಾಡಬೇಕೆಂದು ಅನಿಸಿದಾಗಲೆಲ್ಲ ಹೃದಯದಿಂದಲೇ ಮಾತನಾಡಿದರು.  ಲೇಖನಗಳು, ಕಥೆಗಳು, ಕಾದಂಬರಿಗಳ ಮೂಲಕ ವ್ಯವಸ್ಥೆಯನ್ನು ಪ್ರತಿಭಟಿಸಿದರು. 

     ಯಾವ ಹಳ್ಳಿ ಮೂಲೆಯ ಮಹಿಳಾ ಸಂಘಟನೆಗಳಾಗಿರಲಿ, ಯಾವುದೇ ಸಾಹಿತ್ಯ ಸಮ್ಮೇಳನವಾಗಲಿ ತಾನು ಹೇಳಬೇಕಾದ ಮಾತುಗಳನ್ನು ವಾರದ ಮೊದಲೇ ಸಿದ್ಧಪಡಿಸಿ ಸಭೆಯಲ್ಲಿ ಓದುವುದು ಸಾರಾ ಅವರು ಅನುಸರಿಸಿಕೊಂಡು ಬಂದ ಕ್ರಮ.  ಯಾಕೆ ಹಾಗೆ ಮಾಡುತ್ತೀರಿ ಎಂದು ಕೇಳಿದರೆ ‘ನನ್ನ ಮಾತುಗಳನ್ನು ತಿರುಚಿ  ಪ್ರಸಾರ ಮಾಡುವವರು ಸುತ್ತಮುತ್ತ ಇರುವಾಗ ನಾನು ಎಚ್ಚರದಿಂದಲೇ  ಇರಬೇಕಲ್ಲ?’ ಎನ್ನುತ್ತಿದ್ದರು.  ಅವರದು ಹವಾನಿಯಂತ್ರಿತ ಕೊಠಡಿಯೊಳಗೆ ಕುಳಿತು ರೂಪಗೊಂಡ ಸಾಹಿತ್ಯವಲ್ಲ, ತಳವರ್ಗದ ಮಹಿಳೆಯನ್ನು ಸಂಪರ್ಕಿಸಿ ಅವರ ನೋವುಗಳಿಗೆ ಸ್ಪಂದಿಸಿದರು.  ಅವರನ್ನು ಮೆಚ್ಚುವ ಸಂಖ್ಯೆ ಹೆಚ್ಚಿದಂತೆಯೇ ದ್ವೇಷಿಸುವವರ ಸಂಖ್ಯೆಯೂ  ಹೆಚ್ಚಿತು .  ಪ್ರಶಸ್ತಿಗಳು, ಗೌರವಗಳು ಲಭಿಸುತ್ತ ಹೋದಂತೆಲ್ಲ ಕೋಮುವಾದಿಗಳಿಗೆ ಹೊಟ್ಟೆಯಲ್ಲಿ ಕಿಚ್ಚು ಹೆಚ್ಚಿ  ಪುತ್ತೂರಿನ ಸಮಾರಂಭ ಒಂದರಲ್ಲಿ ಅವರ ಮೇಲೆ ಹಲ್ಲೆಯೂ ನಡೆಯಿತು.  ಆ ಸಭೆಯ ಅಧ್ಯಕ್ಷರಾಗಿದ್ದ ಡಾಕ್ಟರ್ ಬಿ ಎ ವಿವೇಕ ರೈಗಳು “ಅಧ್ಯಕ್ಷನಾಗಿ ಒಂದೂ  ಪದವನ್ನು ಆಡಲಾರದೆ ಮರಳಿದ ಸಭೆ ಎಂದರೆ ಅದೊಂದೇ” ಎಂದು ಹೇಳಿದನ್ನು ಕೇಳಿದ್ದೇನೆ.  ಕನ್ನಡ ಸಾಹಿತ್ಯ ಲೋಕದಲ್ಲೂ ಸಾರಾ ಬರೆಯುವುದು ಸಾಹಿತ್ಯವೇ ಅಲ್ಲ ಎಂದು ಹೇಳುವವರು, ಯಾಕೆ ಸಾರಾರಿಗೇ ಇಷ್ಟೆಲ್ಲ ಪ್ರಶಸ್ತಿಗಳು ಸಂದಾಯವಾಗುತ್ತವೆ ಎಂದು ಕರುಬುವವರು  ತುಂಬಾ ಮಂದಿ ಇದ್ದರು.  ಆ ಟೀಕೆ -ನಿಂದೆಗೆ ಕ್ಯಾರೇ ಅನ್ನದೆ ಅವೆಲ್ಲವನ್ನು ತನ್ನ ತಲೆಯ ಮೇಲಿಂದ ಹಾರಿಸಿಬಿಟ್ಟ ಸಾರಾ,  ಕೋಟಿ ಕೋಟಿ ಕನ್ನಡಿಗರು ತನ್ನ ಮೇಲೆ ಹರಿಸಿದ ಪ್ರೀತಿಗೆ  ಶಿರ ಬಾಗಿದರು , ಈ ನಾಡಿಗೆ – ನುಡಿಗೆ  ತನ್ನಿಂದ ಆದಷ್ಟು ಸೇವೆಯನ್ನು ಸಲ್ಲಿಸಬೇಕೆಂದು ಧೃಡ ನಿರ್ಧಾರ ಮಾಡಿದರು. 

    ಮಂಗಳೂರಿನ ಪತ್ರಿಕೆಯೊಂದು ಅವರ ಬಗ್ಗೆ ಹೀನಾಯವಾಗಿ ಬರೆದಾಗ ಪತ್ರಿಕೆಯ ವಿರುದ್ಧ ಮಾನನಷ್ಟ  ಮೊಕದ್ದಮೆ  ಹಾಕಿದರು, ದೀರ್ಘಕಾಲ ಹೋರಾಡಿ ಗೆದ್ದರು .  “ನಾವು ನಮ್ಮ ಸುತ್ತ ಬೇಲಿಗಳನ್ನು ಹಾಕಿ ಕುಳಿತುಕೊಂಡರೆ ನಿಂದಿಸುವವರು ನಮ್ಮನ್ನು ಹೊಂಡ ತೆಗೆದು ಹೂತು ಬಿಡುತ್ತಾರೆ, ಆದುದರಿಂದ ನಾವು ಸದಾ ಜಾಗೃತರಾಗಿರಬೇಕು” ಎಂದು ಯಾವಾಗಲೂ ಸಾರಾ  ಹೇಳುತ್ತಿದ್ದರು.  ಅವರ ಅಪ್ಪಣೆ ಇಲ್ಲದೆ ಅವರ ಕಥೆ ಒಂದನ್ನು ದೂರದರ್ಶನದಲ್ಲಿ ಧಾರವಾಹಿ ಮಾಡಿದಾಗ, ಇವರ ಕಾದಂಬರಿಯನ್ನು ಅನುವಾದಿಸಿದವರು ಕೃತಿಸ್ವಾಮ್ಯವನ್ನು  ತಮ್ಮ ಹೆಸರಿಗೆ ಮಾಡಿಕೊಂಡಾಗ, ಇವರ ಕಾದಂಬರಿಯನ್ನು ಅಪ್ಪಣೆ ಇಲ್ಲದೆ ಚಲನಚಿತ್ರ ಮಾಡಿದಾಗ, ಚಂದ್ರಗಿರಿಯ ತೀರದಲ್ಲಿ ಕಾದಂಬರಿಯಲ್ಲಿನ  ಇವರ ಮಾತುಗಳನ್ನು ತನಗೆ ಇಷ್ಟ ಬಂದಂತೆ ಬದಲಾಯಿಸಿದಾಗ ಅವರು ಸುಮ್ಮನಿರಲಿಲ್ಲ; ಅವರ ವಿರುದ್ಧ ಪ್ರತಿಭಟಿಸಿದ್ದಾರೆ, ಕಾನೂನು ಹೋರಾಟ ಮಾಡಿದ್ದಾರೆ.  ಚಂದ್ರಗಿರಿ ತೀರದಲ್ಲಿ ಕಾದಂಬರಿಯ ನಾದಿರಾ  ಮಸೀದಿಯ ಕೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ಧಾರ್ಮಿಕ ಸಾಂಪ್ರದಾಯದ ವಿರುದ್ಧ ಅವಳ ಪ್ರತಿಭಟನೆಯಾಗಿತ್ತು. ಸಾರಾ ರ  ಈ ನಿಲುವನ್ನು ಬದಲಾಯಿಸಿ ಅನುವಾದಕರೊಬ್ಬರು  ಚಂದ್ರಗಿರಿಗೆ ಹಾರಿ  ಆತ್ಮಹತ್ಯೆ ಮಾಡಿಕೊಂಡಳು ಎಂದು ತಿರುಚಿ ಬರೆದಿದ್ದರು, ಇದರಿಂದ ಸಿಟ್ಟಿಗೆದ್ದ ಸಾರಾ  ಕೇಸು ದಾಖಲಿಸಿದ್ದರು.  ಒಬ್ಬ ಅಮಾಯಕ ಹೆಣ್ಣುಮಗಳು, ಅದರಲ್ಲೂ ಮುಸ್ಲಿಂ ಹೆಣ್ಣುಮಗಳನ್ನು (ಸಾರಾರನ್ನು )  ಹೇಗೂ ವಂಚಿಸಬಹುದು ಎಂದು ಭಾವಿಸಿದವರಿಗೆಲ್ಲ ಸಾರಾ ಸರಿಯಾಗಿ ಬುದ್ಧಿ ಕಲಿಸಿದ್ದರು. 

             ಇಷ್ಟೆಲ್ಲ ಸಾಹಿತ್ಯ ಕೃಷಿ ಮಾಡಿದ ಸಾರಾ ‘ಅಡುಗೆ ವೈವಿಧ್ಯ’ ವೆಂಬ ಅಡುಗೆ ಪುಸ್ತಕವನ್ನೂ ಪ್ರಕಟಿಸಿದ್ದು ವಿಶೇಷ. ಇದರಲ್ಲಿ ಷಡ್ರಸಭರಿತವಾದ ಸವಿಯೂಟದ ರುಚಿಯನ್ನು ಉಣಬಡಿಸಿದ್ದಾರೆ. ಕಥೆ ಕಾದಂಬರಿ, ಲೇಖನ, ಮುಂತಾದ ಪ್ರಕಾರಗಳಲ್ಲಿ, ಸಾಕಷ್ಟು ಕೃತಿ ರಚಿಸಿದ ಸಾರಾ ಕವನ ಪ್ರಕಾರದಲ್ಲೂ ಬರೆಯಲು ಪ್ರಯತ್ನಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ  ಕರಾವಳಿ ಲೇಖಕಿಯರು – ವಾಚಕಿಯರ ಸಂಘವು ಪ್ರಕಟಿಸಿದ “ಕರೆ” ಕವನ ಸಂಕಲನದಲ್ಲಿ ಅವರ ಕವನವಿದೆ.

    ಕರಾವಳಿ ಲೇಖಕಿಯರು-ವಾಚಕಿಯರ ಸಂಘದ ಪ್ರಾರಂಭ ಕಾಲದಿಂದಲೇ ಸದಸ್ಯೆಯಾಗಿ, ಮುಂದೆ ಎರಡು ಅವಧಿಗೆ ಅಧ್ಯಕ್ಷೆಯಾಗಿ ಅವರು ಮಾಡಿದ ಕೆಲಸಗಳು ಪ್ರಶಂಸನೀಯವಾಗಿವೆ. ಸಂಘಕ್ಕೆ ಒಂದು ವಿಳಾಸವಿಲ್ಲದೆ, ನೆಲೆಯಿಲ್ಲದೆ, ಅಧ್ಯಕ್ಷರ – ಕಾರ್ಯದರ್ಶಿಗಳ ಮನೆಯಲ್ಲಿ ಸಭೆ ನಡೆಸುವ ಸ್ಥಿತಿಯಲ್ಲಿ ಇದ್ದಾಗ ಸ್ಥಳಕಾಗಿ ಪ್ರಯತ್ನಿಸಿದ್ದು ಸಾರಾ ಅವರ ಹೆಗ್ಗಳಿಕೆ. ಸ್ಥಳ ಲಭಿಸಿದ ಮೇಲೆ ಕಟ್ಟಡಕ್ಕಾಗಿ ಶ್ರಮಿಸಿದ್ದು ಬೇರೆಯೇ ಕಥೆ. ಅಂತೂ ಸಾರಾ ಅವರು ಇದ್ದುದರಿಂದ, ಲೇಖಕಿಯರ ಸಂಘಕ್ಕೆ ಒಂದು ಘನತೆ ಲಭಿಸುತ್ತಿತ್ತು ಎಂಬುದು ಸುಳ್ಳಲ್ಲ. ಹೀಗೇಯೇ ಮಾತನಾಡುತ್ತ ನಾನೊಮ್ಮೆ “ನಿಮಗೆ ತುಳು ಮಂದಾರ ರಾಮಾಯಣವನ್ನು ಓದಿ ಹೇಳಲೇ” ಎಂದು ಕೇಳಿದ್ದೆ, ಆಗ “ನಾನು ಸಾಹಿತ್ಯದ ವಿದ್ಯಾರ್ಥಿಯಲ್ಲವೆಂಬ ಕೊರಗು ಕಾಡುತ್ತಿದೆ. ನಾನೂ ಹಳೆಗನ್ನಡ ಪಂಪ, ರನ್ನ, ನಾರಾಣಪ್ಪರನ್ನು ಓದಿಕೊಳ್ಳುವ ಅವಕಾಶ ಪಡೆದುಕೊಳ್ಳಬೇಕಿತ್ತು.  ಕನ್ನಡ ಕಾವ್ಯವನ್ನೇ ತಿಳಿಯದ ನಾನು ತುಳು ಕಾವ್ಯವನ್ನು ಅರ್ಥಿಸಿಕೊಳ್ಳಬಲ್ಲೆನೇ ? ಈ ಜನ್ಮದಲ್ಲಿ ಆ ಯಾವ ಆಸೆಗಳು ಈಡೇರಲಾರವು ಎಂದು ಕಾಣುತ್ತದೆ” ಎಂದು ಸಾರಾ ನಿಟ್ಟುಸಿರು  ಬಿಟ್ಟರು. ಲೇಖಕಿಯರ ಸಂಘದ ಗೆಳತಿಯರೊಂದಿಗೆ ಅವರ ಬಾಂಧವ್ಯ ಹೇಗಿತ್ತೆಂದರೆ, ಅವರ ಮಮತೆಯ ಆಸರೆಯಲ್ಲಿ ನಾವೆಲ್ಲರೂ ನಿರಾತಂಕವಾಗಿ ಸಂಘದ ಕೆಲಸದಲ್ಲಿ ಕೈ ಜೋಡಿಸಿದ್ದೆವು. ಮಂಗಳೂರಿನಲ್ಲಿ ನಡೆಯುವ ಯಾವುದೇ ಪ್ರತಿಭಟನೆಗಳಾಗಲಿ, ಚಳುವಳಿಗಳಾಗಲಿ, ಅಲ್ಲಿ ಸಾರಾ ಹಾಜರಿರುತ್ತಿದ್ದರು. ಪ್ರತಿಭಟನೆಗಳಲ್ಲಿ ಸಾರಾ ಇದ್ದರೆ ನಮಗೊಂದು ಭೀಮಬಲ ಬಂದಂತೆ.  ಆ ಸಭೆಗಳಲ್ಲಿ ಯಾವುದೇ ಆಕ್ರೋಶ, ಆಡಂಬರಗಳಿಲ್ಲದ ಅವರ ಮಾತುಗಳು ತ್ರಸ್ತ ಹೃದಯಕ್ಕೆ ತಂಪೆರೆಯುತ್ತಿದ್ದವು.. ಸರಳವಾದ ವಾಕ್ಯಗಳಲ್ಲಿ ಹೇಳುವ ಅವರ ಮಾತಿನ ಶೈಲಿಯೇ ವಿಶಿಷ್ಟವಾದದ್ದು. ಎಂದೂ ಅವರ ಮಾತುಗಳಲ್ಲಿ ಪಾಂಡಿತ್ಯದ ಪ್ರದರ್ಶನವಿರುತ್ತಿರಲಿಲ್ಲ. ನೈತಿಕ ಮೌಲ್ಯಗಳು ಕುಸಿದಾಗ ಸಮಾಜ ಅಧಃಪತನಗೊಳ್ಳುತ್ತದೆ. ಶಾಸನಗಳು ನಿಷ್ಪ್ರಯೋಜಕವಾಗುತ್ತವೆ ಎಂಬುದನ್ನು ಧೃಡವಾಗಿ ನಂಬಿದ ಸಾರಾ ಅವರ ನಿಲುವುಗಳು ಮಾತು ಮತ್ತು ಬರಹಗಳಲ್ಲಿ ಪ್ರಕಟವಾಗುತ್ತಲೇ ಇದ್ದವು.

     ಸುಮಾರು 80 ವರ್ಷ ದಾಟಿದ ಮೇಲೂ ಅವರ ಜೀವನೋತ್ಸಾಹ ಕುಂದಿರಲಿಲ್ಲ.ಜೀವನ ಪ್ರೀತಿ ಕಡಿಮೆಯಾಗಿರಲಿಲ್ಲ. ಊರಿನಲ್ಲಿ ಏನಾದರೂ ಅನ್ಯಾಯ ಸಂಭವಿಸಿದರೆ, ರಾಜಕೀಯ ನಾಯಕರಿಂದ ಎಡವಟ್ಟುಗಳು ಏನಾದರು ಸಂಭವಿಸಿದ್ದರೆ, ಕೂಡಲೇ ನನಗೆ ಫೋನ್ ಮಾಡಿ ಚರ್ಚಿಸುತ್ತಿದ್ದರು. ಮರುದಿನವೇ ಈ ಬಗ್ಗೆ ಲೇಖನವನ್ನು ಸಿದ್ಧಪಡಿಸಿ ಪತ್ರಿಕೆಗಳಿಗೆ ಕಳಿಸಿ ಬಿಡುತ್ತಿದ್ದರು. ನಮ್ಮ ನಾಡಿನ ಹೆಚ್ಚಿನ ಎಲ್ಲ ಪತ್ರಿಕೆಗಳು ಅವರ ಲೇಖನಗಳನ್ನು ಸ್ವಾಗತಿಸುತ್ತಿದ್ದವು. ಅವರಿಗೆ ಇದ್ದ ರಾಜಕೀಯ ಪ್ರಜ್ಞೆ ನನ್ನಲ್ಲಿ ಅಚ್ಚರಿ ಹುಟ್ಟಿಸುತ್ತಿತ್ತು. ಹಿಂದೊಮ್ಮೆ ಮಂಗಳೂರಿನ ಮಹಾನಗರ ಪಾಲಿಕೆಗೆ ಜನತಾದಳ ಪಕ್ಷದಿಂದ ಓಟಿಗೆ ನಿಂತು ಸೋತ ಸಾರಾಗೆ ರಾಜಕೀಯ ಸೆಳೆತ ಇತ್ತು. ಅವರ ಸೋಲು ಪೂರ್ವ ನಿಗದಿತವಾಗಿತ್ತು. ಅವರು ಓಟಿಗೆ ನಿಂತ ಬಳಿಕ ಹಲವು ಮುಸ್ಲಿಂ ಮಹಿಳೆಯರು ಸ್ಥಳೀಯ ಸಂಸ್ಥೆಗಳಲ್ಲಿ ಓಟಿಗೆ ನಿಂತು ಗೆದ್ದುದನ್ನು ಕಂಡು ಸಾರಾ ಸಂಭ್ರಮಿಸಿದ್ದರು. ರಾಜಕೀಯಕ್ಕೆ ಮಹಿಳೆಯರು ಪ್ರವೇಶಿಸಿದರೆ, ಆಡಳಿತದಲ್ಲಿ ಲಂಚಗುಳಿತನ ನಿಲ್ಲಿಸಬಹುದು, ಅವ್ಯವಸ್ಥೆ ಸರಿಪಡಿಸಬಹುದು, ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಸಾರಾ ಕನಸು ಕಂಡಿದ್ದರು. ಒಮ್ಮೆ ಅವರಿಗೆ ಯಾವುದಾದರೂ ವಿಷಯದ ಬಗ್ಗೆ ಅಥವಾ  ವ್ಯಕ್ತಿಯ ಬಗ್ಗೆ ಅಪನಂಬಿಕೆ ಉಂಟಾದರೆ ಅವರನ್ನು ಅದರಿಂದ ಹೊರಗೆಳೆಯುವುದು ತುಂಬಾ ಕಷ್ಟ. ತನ್ನ ನಿಲುವಿನಿಂದ ಕದಲದ ಹಠ ಅವರಲ್ಲಿ ಇತ್ತು.

    ಚಳ್ಳಕೆರೆಯ ಸಾಹಿತ್ಯ ಸಮಾರಂಭವೊಂದರಲ್ಲಿ ಒಬ್ಬ ಲೇಖಕರು ಸಾರಾ ಅವರನ್ನು ಖಂಡಿಸಿ ಮಾತನಾಡಿದರು. ‘ಸಾರಾ ಅವರು ಹೇಳುವ ಸಮಸ್ಯೆಗಳು ಮುಸ್ಲಿಂ ಸಮುದಾಯದ್ದಲ್ಲ, ಅವರು ಅವುಗಳನ್ನು ವೈಭವೀಕರಿಸಿದ್ದಾರೆ’ ಎಂದಾಗ ಆ ಸಭೆಯಲ್ಲಿದ್ದ ನಾನು ಎಲ್ಲಿ ವಾಗ್ವಾದವಾಗಿ ಬಿಡುತ್ತದೋ ಎಂದು ಹೆದರಿದ್ದೆ. ಆದರೆ ಸಾರಾ ಆ ಸಮಸ್ಯೆಗಳಿಗೆ ಉದಾಹರಣೆಗಳನ್ನು ಅವರದೇ ಊರಿನಿಂದ , ಸುತ್ತುಮುತ್ತಲ ಊರಿನಿಂದ ಸಾಕ್ಷಿ ಸಮೇತ ವಿವರಿಸಿದಾಗ ಅವರು ನಿರ್ವಾಹವಿಲ್ಲದೆ ಬಾಯಿ ಮುಚ್ಚಿದರು. ದೂರದೂರಿನ ಕೆಲವು ಕಾರ್ಯಕ್ರಮಗಳಿಗೆ ನಾವು ಜೊತೆಯಾಗಿ ಹೋಗುತ್ತಿದ್ದೆವು. ಇವರನ್ನು ಕಂಡ ಕೂಡಲೇ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ಕರ್ನಾಟಕದ ಉತ್ತರ ಭಾಗದಲ್ಲಿ ಅವರನ್ನು ಆರಾಧಿಸುವ ಸಾಹಿತ್ಯ ಪ್ರೇಮಿಗಳು ಇದ್ದರು. ಒಂದು ಸಲ ಕೆಲವು ಯುವಕರು ಅವರನ್ನು ಸುತ್ತುವರಿದು ಅವರಿಗೆ ಪ್ರಶ್ನೆಗಳ ಸುರಿಮಳೆಗೈದಾಗ ನಾನೂ ಅಲ್ಲಿದ್ದೆ. ಬುರ್ಖಾ ಯಾಕೆ ಹಾಕಿಕೊಳ್ಳುವದಿಲ್ಲ? ನಮಾಜು ಮಾಡುತ್ತೀರಾ? ನಿಮಗೆ ಕುರಾನ್ ಓದಿ ಗೊತ್ತುಂಟಾ? ಹೀಗೆ ಬಾಲಿಶವೂ, ಅಸಂಬದ್ಧವೂ  ಆದ ಪ್ರಶ್ನೆಗಳ ಪಟ್ಟಿಯನ್ನು ಅವರ ಮುಂದಿಟ್ಟಾಗ ಸಾರಾ ಸಿಟ್ಟುಗೊಳ್ಳದೆ ‘ನಿಮ್ಮ ವಿಳಾಸ ಕೊಡಿ ನಾನು ನನ್ನ ಲೇಖನ ಸಂಕಲನಗಳನ್ನು ನಿಮಗೆ ಕಳುಹಿಸಿ ಕೊಡುತ್ತೇನೆ ಓದಿ, ಅದರಲ್ಲೇ ಉತ್ತರವಿದೆ’ ಎಂದು ಎದ್ದು ನಿಂತರು. ನನಗೆ ಆಶ್ಚರ್ಯ , ಯಾಕೆ ಹಾಗೆ ಮಾಡಿದಿರಿ  ಎಂದು ನಾನು ಕೇಳಿದಾಗ “ಅವರೊಂದಿಗೆ ವಾದ ಮಾಡಿ ನನ್ನ ನಾಲಿಗೆಯನ್ನು ಮಲಿನಗೊಳಿಸುವದಿಲ್ಲ.  ನನ್ನನ್ನು  ಕಾಫಿರಳೆಂದೇ ಭಾವಿಸಿದ ಅವರಲ್ಲಿ ನನ್ನ ನಂಬಿಕೆಯನ್ನು ವಾದಿಸಿ ಸಾಬೀತು ಪಡಿಸುವ ಅಗತ್ಯವಿಲ್ಲ” ಎಂದರು. ಇದು ಸಾರಾನ ಸಾಮಾಜಿಕ ಪ್ರಜ್ಞೆ.

    ಉತ್ತರ ಕರ್ನಾಟಕದ ಹಿಂದೂ ವ್ಯಕ್ತಿಯೊಬ್ಬರು ಸಾರಾ ಅವರಲ್ಲಿ ತಮ್ಮ ಮಗಳ ದುರಂತ ಕಥೆಯನ್ನು ಹೇಳಿ ಈ ಬಗ್ಗೆ ಒಂದು ಕಾದಂಬರಿಯನ್ನು ಬರೆಯಿರಿ ಎಂದು ವಿನಂತಿಸಿದರು. ಅದನ್ನೊಂದು ಗಂಭೀರ ಸಮಸ್ಯೆಯೆಂದು ಗ್ರಹಿಸಿದ ಸಾರಾ ‘ಕದನ ಕುತೂಹಲ’ ಎಂಬ ಕಾದಂಬರಿಯನ್ನು ಬರೆದು ಅವರಿಗೆ ಅರ್ಪಿಸಿದರು. ಅವರಿಗೆ ಬರವಣಿಗೆಯ ಬಗ್ಗೆ ಇದ್ದ ಪ್ರೀತಿ, ಬರೆಯಲೇಬೇಕೆಂಬ ಹಠ ಅವರನ್ನು ಲೇಖಕಿಯಾಗಿ ಎತ್ತರಕ್ಕೆ ಏರಿಸಿತು. ಕರ್ನಾಟಕದಲ್ಲಿ ಓರ್ವ ಸಾಹಿತಿಗೆ ನೀಡಬಹುದಾದ ಹೆಚ್ಚಿನ ಎಲ್ಲ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಹಂಪಿ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿ  ನೀಡಿದರೆ, ಮಂಗಳೂರು ವಿ ವಿ.  ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡದ ಓರ್ವ ಲೇಖಕಿಗೆ ಇಂತಹ ದೊಡ್ಡ ಗೌರವಗಳು ಲಭಿಸಿದಾಗ ಅವರ ಅಭಿಮಾನಿಗಳು ಸಂಭ್ರಮಿಸಿದರು. ಧರ್ಮದ ಮುಖವಾಡದ ಮರೆಯಲ್ಲಿ ಇರುವ ಕರಾಳ ಮುಖವನ್ನು ಯಾವುದೇ  ಮುಲಾಜಿಲ್ಲದೆ ಕಿತ್ತೆಸೆಯಲು ಅವರು ಪ್ರಯತ್ನಿಸಿದರು.

    ತನ್ನ ಧರ್ಮದಲ್ಲಿ ಇರುವ  ಉತ್ತಮ ಆಚರಣೆಗಳು ಮತ್ತು ಧರ್ಮ ಗ್ರಂಥಗಳಲ್ಲಿ ಇರುವ ಅಮೂಲ್ಯ  ಮಾತುಗಳನ್ನು  ಗೌರವಿಸುತ್ತ, ಜೀವ ವಿರೋಧಿಯಾದ ವಿಧಿ-ನಿಯಮಗಳನ್ನು ಪ್ರಶ್ನಿಸುತ್ತ , ಪ್ರತಿಭಟಿಸುತ್ತ, ಧಿಕ್ಕರಿಸುತ್ತ, ಸಮಾಜಕ್ಕೆ ನಿಜವಾದ ಧರ್ಮ ಯಾವುದು ಎಂಬುದನ್ನು ಪ್ರಚುರಪಡಿಸಿದರು. “ಮನುಷ್ಯ ತನ್ನ ಧರ್ಮದ ಹೃದಯವನ್ನು ಅರಿತುಕೊಂಡರೆ ಇತರ ಧರ್ಮಗಳ ಹೃದಯವನ್ನು ಅರಿತುಕೊಳ್ಳುತ್ತಾನೆ”, ಇದು ಮಹಾತ್ಮಾ  ಗಾಂಧಿಯವರ  ಮಾತು. ಈ ಮಾತಿಗೆ ಬದ್ಧರಾಗಿ  ಬಾಳಿದವರು  ಸಾರಾ. 

  ನಿಜವಾದ ಧಾರ್ಮಿಕ ಪ್ರತಿಭಾವಂತರು ಮಾನವ ಹೃದಯದ ಶ್ರೀಮಂತಿಕೆಯನ್ನು ಪ್ರತಿನಿಧಿಸುತ್ತಾರೆ. ಸಾರಾ ಅವರ ಪ್ರತಿಭೆ ಸ್ವಯಂ ಪ್ರಭೆ ಉಳ್ಳದ್ದು. ನಿಷ್ಠಾವಂತ ಧಾರ್ಮಿಕ ಅನುಯಾಯಿಯಾಗಿದ್ದ, ಸಹೃದಯ ಸಂಪನ್ನರಾದ ಅವರ ಮಾತೃ ಹೃದಯದ ಆಸರೆಯಲ್ಲಿ ಎಲ್ಲ ಧರ್ಮದವರು  ನೆಮ್ಮದಿ ಕಾಣಲು ಸಾಧ್ಯವಾಗುತ್ತಿತ್ತು.

    ಅವರ ಅಭಿಮಾನಿಗಳು ‘ಚಂದ್ರಗಿರಿ’ ಎಂಬ ಅಭಿನಂದನಾ ಗ್ರಂಥವನ್ನು ಅರ್ಪಿಸಿ ಮಂಗಳೂರಿನಲ್ಲಿ ಸನ್ಮಾನಿಸಿದಾಗ ಅವರು ಸಂಭ್ರಮಿಸಿದ್ದರು. ಆದರೆ ಕನ್ನಡಿಗರ ಋಣಭಾರದಿಂದ ತಾನು ಮುಕ್ತಳಾಗಲಾರೆ ಎಂಬ ಭಾವದಿಂದ ಅಂದು ಅವರ ಹೃದಯ ತುಂಬಿ ಬಂದಿತ್ತು. ಡಾಕ್ಟರ್ ಸಬೀಹಾ ಅವರ ಸಂಪಾದಕತ್ವದಲ್ಲಿ ಹೊರಬಂದ ಈ ಕೃತಿಯು ಒಂದು ಸಂಗ್ರಹ ಯೋಗ್ಯವಾದ ಕೃತಿ ಆಗಿಯೂ ಮೆಚ್ಚುಗೆ ಗಳಿಸಿತು. ಆರೇಳು ವರ್ಷಗಳ ಹಿಂದೆ ಅಂದರೆ ಅವರು 80 ರ ಆಸುಪಾಸಿನಲ್ಲಿ ಇದ್ದಾಗ ಕೋಡಿಬೆಟ್ಟು ರಾಜಲಕ್ಷ್ಮಿಯವರು (ಆಗ ಅವರು ಪ್ರಜಾವಾಣಿಯಲ್ಲಿ ಉಪ ಸಂಪಾದಕಿಯಾಗಿದ್ದರು) ಸಾರಾ ಅವರ ಬಗ್ಗೆ ಒಂದು ಸಾಕ್ಷ್ಯಚಿತ್ರ ವನ್ನು ಮಾಡುವ ಕೆಲಸವನ್ನು ಹಮ್ಮಿಕೊಂಡರು. ಛಾಯಾಗ್ರಾಹಕರ ಜೊತೆಗೆ ಕಾಸರಗೋಡಿಗೆ ನಾವು ತಲುಪಿದಾಗ ಸಾರಾ 25 ರ ತರುಣಿಯಂತೆ ಉತ್ಸಾಹ ತುಂಬಿ ಸಂಭ್ರಮಿಸುವದನ್ನು ಕಂಡ ಆ ಗಳಿಗೆ ನೆನಪಾಗುತ್ತದೆ. ಅವರು ಓದಿದ ಶಾಲೆ, ಅವರು ಹುಟ್ಟಿದ ಮನೆ, ಹಿರಿಯರು-ಬಂಧುಗಳ ಮನೆ, ಇತ್ಯಾದಿಗಳನ್ನು ತೋರಿಸುತ್ತ ಓಡಾಡಿದ ಆ ಸಂಧರ್ಭವನ್ನು ಈಗ ನೆನಪಿಸಿಕೊಳ್ಳುತ್ತೇನೆ.

   ಚಂದ್ರಗಿರಿ  ಹೊಳೆಯಲ್ಲಿ ದೋಣಿ ವಿಹಾರ ಮಾಡಿದ  ಆ ಖುಷಿ ” ಇದು ನನ್ನ ಜೀವನಾಡಿ, ನನ್ನ ಸ್ಫೂರ್ತಿಯ ಸೆಲೆ ” ಎಂದು ಸಾರಾ  ಆಡಿದ ಮಾತು ಈಗಲೂ ಕೇಳುತ್ತಿದೆ  ಅನಿಸುತ್ತಿದೆ. “ನನ್ನ ಸ್ವಜಾತಿ ಬಾಂಧವರು ಯಾರೂ ನನ್ನ ಸಾಹಿತ್ಯ ಕೃಷಿಯನ್ನು ಮೆಚ್ಚುವವರಲ್ಲ, ಗೌರವಿಸುವವರೂ ಅಲ್ಲ , ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೇ  ಇತರ ಧರ್ಮದ ನನ್ನ ಬಂಧುಗಳು, ಅವರ ಋಣ ಭಾರ ನನ್ನ ಮೇಲಿದೆ. ಧಾರ್ಮಿಕ ನಾಯಕರು, ರಾಜಕೀಯ ನಾಯಕರು ಜನರ ಹಾದಿ ತಪ್ಪಿಸುತ್ತಿದ್ದಾರೆ, ಇವರನ್ನು ಸರಿಯಾದ ಹಾದಿಗೆ ಎಳೆದು ತರಲು ನಾನು ಶಕ್ತಳಲ್ಲ, ಎಂದು ನನಗೆ ಗೊತ್ತಿದೆ .ಆದರೆ ಈ ನಾಡಿನಲ್ಲಿ ನಮ್ಮನ್ನ ರಕ್ಷಿಸುವ  ಸಂವಿಧಾನವೊಂದಿದೆ. ಅದು ನಮ್ಮ ಬದುಕನ್ನು ನರಕವಾಗದಂತೆ ತಡೆಯುತ್ತದೆಯೆಂಬ ಅರಿವನ್ನಾದರೂ ತಿಳಿಸಬೇಡವೇ? ಈ ಕೆಲಸವಷ್ಟೇ ನನ್ನಿಂದ ಸಾಧ್ಯವಾಗಿದೆ. ಸಾಹಿತಿಗಳು ಅನಧಿಕೃತ ಶಾಸನಕರ್ತರು ಎಂಬ ಮಾತಿದೆಯಂತೆ. ಅದು ಈ ಕಾಲಕ್ಕೆ ಒಪ್ಪುವ ಮಾತಲ್ಲ, ಸಾಹಿತ್ಯದಿಂದ ಸಮಾಜದಲ್ಲಿ ಪರಿವರ್ತನೆ ಮಾಡುತ್ತೇನೆ ಎಂದು ನಾನು ಭಾವಿಸಿಲ್ಲ. ಅದು ಸಾಧ್ಯವೂ ಇಲ್ಲ . ಆದರೆ ಇತ್ತೀಚಿನ  ವರ್ಷಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಶಾಲೆ ಕಾಲೇಜು ಮಾತ್ರವಲ್ಲ, ಉನ್ನತ ಶಿಕ್ಷಣಕ್ಕೂ ಹೆಚ್ಚು ಮಂದಿ ಪ್ರವೇಶ ಪಡೆಯುತ್ತಿರುವುದು ಸಂತೋಷದ ವಿಚಾರ. ಆದರೆ ಹೆಚ್ಚು ಹೆಚ್ಚು ಸಂಪ್ರದಾಯಶೀಲರಾಗುವುದನ್ನು  ಆಧುನೀಕರಣ ಎಂದುಕೊಂಡಿದ್ದಾರೆಯೇ ? ಗೊತ್ತಿಲ್ಲ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ? ನನಗೆ ಪ್ರೊಫೆಸರ್ ಕಾರಕ್ಕೇರಿಯವರು ಬರೆದ ಮಲೆಯಾಳ ಕೃತಿಗಳನ್ನು ಅನುವಾದ ಮಾಡಬೇಕೆಂಬ ಆಸೆ ಇದೆ. ಅವರು ಧರ್ಮಗ್ರಂಥಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಹೆಂಗಸರ ಮೇಲೆ ಪುರುಷ ಸಮಾಜ ಹೇರಿದ ವಿಧಿ-ನಿಯಮಗಳನ್ನು ಬಹಳ ಮನಮುಟ್ಟುವಂತೆ ಖಂಡಿಸಿ ಬರೆದಿರುವರು. ನೋಡಬೇಕು ಯಾವಾಗ ಈ ಅನುವಾದದ  ಕೆಲಸ ಪೂರೈಸುತ್ತದೆ ಗೊತ್ತಿಲ್ಲ “. ಎಂದು ನಿಡಿದಾದ ಉಸಿರು ಬಿಟ್ಟು ಗಾಢ ಯೋಚನೆಯಲ್ಲೂ ಮುಳುಗಿದ ಅವರ ಮುಖ ನೆನಪಾಗುತ್ತದೆ. ಮಾತುಗಳು ನನ್ನ ಕಿವಿಯಲ್ಲಿ ಅನುರಣಿಸುತ್ತವೆ. ಕೇಂದ್ರ ಸರಕಾರ ತಲಾಖ್ ಬಗ್ಗೆ ಜಾರಿ ಮಾಡಿದ ಕಾಯಿದೆ ,ಕಾಲೇಜುಗಳ ಹೆಣ್ಣು ಮಕ್ಕಳ ಬುರ್ಖಾ ವಿವಾದ, ಹಿಂದೂಗಳ ದೇವಸ್ಥಾನಗಳಲ್ಲಿ ಮುಸ್ಲಿo ವ್ಯಾಪಾರಿಗಳಿಗೆ ನಿಷೇಧ  ಮುಂತಾದ ಘಟನೆಗಳು ಉಂಟುಮಾಡಿದ ಕೋಲಾಹಲ – ಹೊಲಸು ಮಾತುಗಳ ಭೋರ್ಗರೆತವೆಲ್ಲ ನಡೆಯುವಾಗ ಸಾರಾ ಅವರ ಆರೋಗ್ಯ ಹದಗೆಟ್ಟು ಅವರು ಈ ವಿಷಯಗಳ ಬಗ್ಗೆ ಅಜ್ಞರಾಗಿದ್ದರು. ಒಂದು ವೇಳೆ ಅವರು ಆರೋಗ್ಯದಿಂದ ಇದ್ದಿದ್ದರೆ ಅವರು ಸಿಟ್ಟಿಗೆದ್ದು ಖಂಡಿತ ಅವುಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಹೊತ್ತು ಕಂತಿದ ಈ ಕ್ಷಣದಲ್ಲಿ ಅವರ ಮಾತುಗಳು ಹೇಗೆ ಇರುತ್ತಿದ್ದವು ಎಂದು ನಾವು ಊಹಿಸಬಲ್ಲೆವು.

    ಅನ್ಯಾಯದ ಘಟನೆಗಳಿಗೆ ತಕ್ಷಣ ಪ್ರತಿಭಟಿಸುವ ಸಾರಾ ಅವರ ಧ್ವನಿ ಮೌನವಾಗಿದೆ. ಖಾಲಿಯಾದ ಅವರ ಸ್ಥಾನವನ್ನು ತುಂಬುವವರು ಇಲ್ಲವೆಂಬ ಶೂನ್ಯಭಾವ ನಮ್ಮನ್ನು ಆವರಿಸಿದೆ. ಅವರು ಕಟ್ಟಿದ ಕರಾವಳಿ ಲೇಖಕಿಯರ ಸಂಘವು ಅವರು ನಡೆದು ತೋರಿಸಿದ ದಾರಿಯಲ್ಲಿ ನಡೆಯುತ್ತದೆ ಎಂದು ನಂಬಿದ್ದೇನೆ. ಅವರ ಆದರ್ಶಕ್ಕೆ ಚ್ಯುತಿ ಬಾರದಂತೆ ನಡೆವುವುದೇ ನಾವು ಸಲ್ಲಿಸುವ ನುಡಿ ನಮನ.

ಪ್ರತಿಕ್ರಿಯಿಸಿ