ಒಂದಾನೊಂದು ಕಾಲದಲ್ಲಿ ಒಬ್ಬ ವಿಧವೆ ತನ್ನ ಮಗನೊಂದಿಗೆ ಸಣ್ಣ ಊರೊಂದರಲ್ಲಿ ವಾಸಿಸುತ್ತಿದ್ದಳು.ಮುಗ್ಧ ಸ್ವಭಾವದ ಸಹೃದಯಿಯಾಗಿದ್ದ,ಸದಾಕಾಲ ಪರರ ಸಹಾಯಕ್ಕೆ ತಯಾರಿರುತ್ತಿದ್ದ ಆ ಬಾಲಕನೆಂದರೆ ಊರಿನಲ್ಲಿದ್ದ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು.ಜನರ ಅಚ್ಚುಮೆಚ್ಚಿನ ಪೋರನಾಗಿದ್ದರೂ ಅವನ ಮನಸ್ಸಿನಲೊಂದು ದುಃಖವಡಗಿತ್ತು.ದುಃಖಿತನಾಗಿಯೇ ಅದೊಮ್ಮೆ ತನ್ನ ಅಮ್ಮನತ್ತ ತೆರಳಿದ ಬಾಲಕ,’ಊರಿನ ಎಲ್ಲ ಮಕ್ಕಳಿಗೂ ಅಜ್ಜಿಯಂದಿರಿದ್ದಾರೆ ಅಮ್ಮ.ನನಗೆ ಮಾತ್ರ ಅಜ್ಜಿಯಿಲ್ಲ.ಅಜ್ಜಿಯಿಲ್ಲ ಎನ್ನುವ ವಿಷಯ ನನಗೆ ನಿಜಕ್ಕೂ ನೋವು ಕೊಡುತ್ತಿದೆ’ಎಂದು ನುಡಿದ
ಅವನ ಅಳಲನ್ನು ಕೇಳಿಸಿಕೊಂಡ ಅವನ ಅಮ್ಮ,’ಚಿಂತಿಸಬೇಡ ಮಗು.ನಿನಗೆ ಅಜ್ಜಿ ಇಲ್ಲದಿದ್ದರೇನಾಯಿತು..? ನಾವು ನಿನಗಾಗಿ ಒಬ್ಬ ಅಜ್ಜಿಯನ್ನು ಹುಡುಕೋಣ’ಎಂದು ಸಮಾಧಾನಪಡಿಸಿದಳು.ಅಮ್ಮನ ಮಾತು ಕೇಳಿ ಅಜ್ಜಿಯ ಹುಡುಕಾಟದಲ್ಲಿದ್ದ ಹುಡುಗನಿಗೆ ಮೊದಲು ಎದುರಾದವಳು ಒಬ್ಬ ನಡುಗುವ ಕೈಗಳ ನಿತ್ರಾಣದ ಮುದಿ ಭಿಕ್ಷುಕಿ.
ಅವಳನ್ನು ಕಂಡಕ್ಷಣವೇ ಅವಳ ಕೈಗಳನ್ನು ಹಿಡಿದುಕೊಂಡ ಬಾಲಕ,
’ ಇನ್ನು ಮೇಲೆ ನೀನೇ ನನ್ನ ಅಜ್ಜಿ’ಎನ್ನುತ್ತ ಸಂತೋಷದಿಂದ ತನ್ನ ಮನೆಗೆ ಕರೆದೊಯ್ದ.
ಮನೆಗೆ ಕರೆದೊಯ್ದವನೇ ಅಮ್ಮನೆದುರಿಗೆ ನಿಲ್ಲಿಸಿ,’ ಈ ಭಿಕ್ಷುಕಿಯನ್ನು ನೋಡಮ್ಮ.ನಾನು ಇವಳನ್ನೇ ನನ್ನ ಅಜ್ಜಿಯೆಂದುಕೊಳ್ಳಬೇಕೆಂದಿದ್ದೇನೆ’ಎಂದ.ಅವನ ತಾಯಿಯೂ ಅವನಂತೆಯೇ ಸಹೃದಯಿ.ಬಂದಿದ್ದ ಭಿಕ್ಷುಕಿ ಮಾಸಲು ಬಟ್ಟೆಗಳನ್ನು ತೊಟ್ಟ ಕೊಳಕು ಮುದುಕಿಯಾಗಿದ್ದರೂ ಸ್ವಲ್ಪವೂ ಬೇಸರಿಸಿಕೊಳ್ಳದೇ ಮಗನ ಮಾತಿಗೆ ಸಮ್ಮತಿಯಿತ್ತಳು ಅವಳು.
ಆಮ್ಮನ ಸಮ್ಮತಿಯಿಂದ ಸಂತುಷ್ಟನಾದ ಮಗ,’ಅಮ್ಮ,ನನ್ನ ಅಜ್ಜಿ ಬಹಳ ಕೊಳಕಾಗಿದ್ದಾಳೆ.ಬಾ ಆಕೆಯ ಮೈ ತೊಳೆಯೋಣ’ಎಂದು ಕರೆದ.ಕಾಡುಮೇಡುಗಳಲ್ಲಿ ಅಲೆದಾಡಿರಬಹುದಾದ ಅಜ್ಜಿಯ ತಲೆಯ ತುಂಬ ಸಣ್ಣಸಣ್ಣದ ಮುಳ್ಳುಬೀಜಗಳು ಅಂಟಿಕೊಂಡಿದ್ದವು.ಆಕೆಯ ಮೈಯನ್ನು ತೊಳೆದ ಅಮ್ಮ ಮತ್ತು ಮಗ ಒಂದೊಂದಾಗಿ ಆಕೆಯ ತಲೆಗೆ ಅಂಟಿಕೊಂಡಿದ್ದ ಬೀಜಗಳನ್ನೆತ್ತಿ ಒಂದು ಗಾಜಿನ ಭರಣಿಗೆ ತುಂಬಿಸಿದರು.ತುಂಬಿಹೋದ ಗಾಜಿನ ಭರಣಿಯಲ್ಲಿದ್ದ ಮುಳ್ಳುಬೀಜಗಳನ್ನೆತ್ತಿ ಇನ್ನೇನು ತಿಪ್ಪೆಗೆಸೆಯಬೇಕೆಂದುಕೊಂಡಿದ್ದ ಬಾಲಕನನ್ನು ತಡೆದ ಅಜ್ಜಿ,
’ಅವುಗಳನ್ನು ಎಸೆಯಬೇಡ ಮಗು.ಬದಲಾಗಿ ಈ ಬೀಜತುಂಬಿದ ಗಾಜಿನ ಭರಣಿಯನ್ನು ಉದ್ಯಾನದಲ್ಲಿ ಹೂತಿಡು.ಊರಿಗೆ ಮಹಾಪ್ರವಾಹ ಬರುವವರೆಗೂ ಪುನ: ಅದನ್ನು ನೆಲದಿಂದಾಚೆ ತೆಗೆಯಬೇಡ’ಎಂದು ನುಡಿದಳು.
ಅಜ್ಜಿಯ ಮಾತು ಕೇಳಿದ ಬಾಲಕನಿಗೆ ಮಹಾಪ್ರವಾಹದ ಬಗ್ಗೆ ಕುತೂಹಲವುಂಟಾಯಿತು.
’ಈ ಮಹಾಪ್ರವಾಹ ಯಾವಾಗ ಬರುತ್ತದೆ ಅಜ್ಜಿ..? ಪ್ರವಾಹ ಬರುವುದರ ಮುನ್ಸೂಚನೆ ನನಗೆ ಹೇಗೆ ಸಿಗುತ್ತದೆ..’?ಎನ್ನುತ್ತ ಮುದುಕಿಯನ್ನು ಕೇಳಿದ. ಅವನ ಪ್ರಶ್ನೆಗೆ ಉತ್ತರಿಸಿದ ಅಜ್ಜಿ,
’ಈ ಊರಿನ ಕಾರಾಗ್ರಹದ ಎದುರಿಗಿರುವ ಎರಡು ಸಿಂಹಗಳ ಕಣ್ಣುಗಳು ಯಾವತ್ತು ಕೆಂಪಗಾಗುತ್ತವೆಯೂ ಅದೇ ದಿನ ಪ್ರವಾಹ ಆರಂಭವಾಗುತ್ತದೆ.ಸಿಂಹಗಳ ಕೆಂಪಾದ ಕಣ್ಗಳೇ ಮಹಾಪ್ರವಾಹದ ಮುನ್ಸೂಚನೆ’ಎಂದಳು.
ಅಜ್ಜಿಯ ಮಾತು ಕೇಳಿ ತರಾತುರಿಯಲ್ಲಿ ಬಂಧಿಖಾನೆಯತ್ತ ಓಡಿದ ಬಾಲಕ ಅಲ್ಲಿನ ಕಲ್ಲುಸಿಂಹಗಳ ಕಣ್ಣುಗಳನ್ನು ಗಮನಿಸಿದ.ಅವುಗಳ ಬಣ್ಣ ಬದಲಾಗದಿರುವುದನ್ನು ಕಂಡು ಹಿಂತಿರುಗಿದ ಬಾಲಕನಿಗೆ,’ಒಂದು ಸಣ್ಣ ಹಲಗೆ ದೋಣಿಯನ್ನು ತಯಾರಿಸಿ ಪೆಟ್ಟಿಗೆಯೊಂದರಲ್ಲಿ ಅದನ್ನು ಮುಚ್ಚಿಡು’ಎಂದಳು ಅಜ್ಜಿ.
ಅಜ್ಜಿಯ ಮಾತಿನಂತೆ ಕಟ್ಟಿಗೆಯ ದೊಣಿಯನ್ನು ತಯಾರಿಸಿಟ್ಟ ಹುಡುಗ ದಿನವೂ ಕಾರಾಗ್ರಹದ ಬಳಿಯಿದ್ದ ಸಿಂಹಗಳ ಕಣ್ಣುಗಳನ್ನು ಗಮನಿಸುತ್ತಿದ್ದ.ಆತ ಓಡೋಡುತ್ತ ಕಾರಾಗ್ರಹದ ಬಳಿ ಸಾಗುತ್ತಿದ್ದರೇ ಊರ ಜನಕ್ಕೆಲ್ಲ ಇವನ ವಿಚಿತ್ರ ವರ್ತನೆಯ ಬಗ್ಗೆ ಆಶ್ಚರ್ಯವುಂಟಾಗುತ್ತಿತ್ತು.
ಹಾಗೊಮ್ಮೆ ಕಲ್ಲುಸಿಂಹಗಳ ಕಣ್ಣುಗಳನ್ನು ಗಮನಿಸಿ ಮನೆಗೆ ಹಿಂದಿರುಗುತ್ತಿದ್ದ ಹುಡುಗನನ್ನು ತಡೆದು ನಿಲ್ಲಿಸಿದ ಮಾಂಸದಂಗಡಿಯ ಮಾಲೀಕನೊಬ್ಬ,
’ದಿನವೂ ಹೀಗೆ ಕಾರಾಗ್ರಹದತ್ತ ದಿಕ್ಕೆಟ್ಟವರಂತೆ ಓಡುತ್ತಿಯಲ್ಲ,ಏನು ಕಾರಣ ..’?ಎಂದು ಕೇಳಿದ.ಕಟುಕನ ಪ್ರಶ್ನೆಗುತ್ತರಿಸುತ್ತ,’ಕಾರಾಗ್ರಹದ ಎದುರಿಗಿನ ಶಿಲೆಯ ಸಿಂಹಗಳ ಕಣ್ಣುಗಳು ಕೆಂಪಗಾದ ದಿನದಂದು ಮಹಾಪ್ರವಾಹ ಸಂಭವಿಸುತ್ತದೆ;ಎಂದು ನುಡಿದ.
ಬಾಲಕನ ಮಾತುಗಳನ್ನು ಕೇಳಿ ಜೋರಾಗಿ ನಕ್ಕುಬಿಟ್ಟ ಮಾಂಸದಂಗಡಿಯ ಮಾಲೀಕ.ಬಾಲಕನನ್ನು ಕಿಚಾಯಿಸಬೇಕೆಂದುಕೊಂಡ ಅವನು ಮಾರನೇಯ ದಿನ ನಸುಕಿಗೂ ಮುನ್ನವೇ ಬಂಧಿಖಾನೆಯತ್ತ ತೆರಳಿ ಕಲ್ಲಿನ ಸಿಂಹಗಳ ಕಣ್ಣುಗಳಿಗೆ ತನ್ನ ಬಳಿಯಿದ್ದ ಕೋಳಿಯ ರಕ್ತವನ್ನು ಸವರಿ ಬಂದುಬಿಟ್ಟ.ಎಂದಿನಂತೆ ಸಿಂಹದ ಕಣ್ಗಳನ್ನು ನೋಡಲು ಬಂದ ಹುಡುಗನಿಗೆ ಸಿಂಹದ ಕಣ್ಣುಗಳು ಕೆಂಪಗೆ ಗೋಚರಿಸಿದವು.ಗಾಬರಿಯಿಂದ ವೇಗವಾಗಿ ಮನೆಯತ್ತ ದೌಡಾಯಿಸಿದ ಹುಡುಗ ತನ್ನ ತಾಯಿ ಮತ್ತು ಅಜ್ಜಿಯಂದಿರಿಗೆ ವಿಷಯವನ್ನರುಹಿದ.
ಅವನ ಮಾತುಗಳನ್ನು ಕೇಳಿದ ಅಜ್ಜಿ,’ಉದ್ಯಾನದಲ್ಲಿ ಹುದುಗಿಸಿಟ್ಟ ಭರಣಿಯನ್ನು ಬೇಗನೇ ಹೊರಗೆ ತೆಗೆ.ಹಾಗೆಯೇ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಕಟ್ಟಿಗೆಯ ದೋಣಿಯನ್ನು ಹೊರಕ್ಕೆ ತಾ’ಎಂದು ಆದೇಶವಿತ್ತಳು.ಅಜ್ಜಿಯ ಮಾತಿನಂತೆ ಭರಣಿಯನ್ನು ನೆಲದಿಂದ ಅಗೆದು ಮೇಲಕ್ಕೆತ್ತಿದ ಬಾಲಕನಿಗೆ ಆಚ್ಚರಿಯೊಂದು ಕಾದಿತ್ತು.ಭರಣಿಯಲ್ಲಿದ್ದ ಅಷ್ಟೂ ಮುಳ್ಳುಬೀಜಗಳು ಅಮೂಲ್ಯವಾದ ರತ್ನಗಳಾಗಿ ಬದಲಾಗಿದ್ದವು.ಪೆಟ್ಟಿಗೆಯಿಂದ ಅವನು ಹೊರತೆಗೆದ ಸಣ್ಣ ದೋಣಿ ನೆಲವನ್ನು ಸ್ಪರ್ಷಿಸುತ್ತಲೇ ದೊಡ್ಡದಾಗಿ ಬೆಳೆಯಲಾರಂಭಿಸಿ ಅಸಲಿ ಹಡಗಿನ ಗಾತ್ರಕ್ಕೆ ಬೆಳೆದು ನಿಂತಿತು.ಅಚ್ಚರಿಯಿಂದ ಗಮನಿಸುತ್ತ ನಿಂತಿದ್ದ ಅಮ್ಮ ಮಗನನ್ನುದ್ದೇಶಿಸಿ ಮಾತನಾಡಿದ ಅಜ್ಜಿ,
’ಗಾಜಿನ ಭರಣಿಯೊಂದಿಗೆ ನೀವೀಗ ಹಡಗನ್ನೇರಿ ಕುಳಿತುಕೊಳ್ಳಿ.ಮಹಾಪ್ರವಾಹ ಬಂದಾಗ ನಿಮ್ಮ ಆಶ್ರಯವನ್ನರಸಿ ಬಂದ ಎಲ್ಲ ಪ್ರಾಣಿಗಳಿಗೂ ಹಡಗಿನಲ್ಲಿ ಆಶ್ರಯ ಕೊಡಿ.ಆದರೆ ಕಪ್ಪುತಲೆಯ ಮನುಷ್ಯರನ್ನು ಮಾತ್ರ ರಕ್ಷಿಸದಿರಿ ’ಎಂದು ನುಡಿದಳು.ಅಜ್ಜಿಯ ಮಾತಿನಂತೆಯೇ ಅಮ್ಮನೊಂದಿಗೆ ಹಡಗನ್ನೇರಿದ ಬಾಲಕ ಕೆಳಗೆ ನಿಂತಿದ್ದ ಅಜ್ಜಿಯತ್ತ ನೋಡಲಾಗಿ ಆಕೆ ಅಲ್ಲಿರದೇ ಏಕಾಏಕಿ ಮಾಯವಾಗಿ ಹೋಗಿದ್ದಳು.
ಆಕೆ ಹಾಗೆ ಮಾಯವಾಗುತ್ತಲೇ ನಿಧಾನವಾಗಿ ಆಕಾಶ ಹನಿಯಲಾರಂಭಿಸಿತ್ತು.ಸಣ್ಣಸಣ್ಣ ಹನಿಯಾಗಿ ಶುರುವಾಗಿದ್ದ ಮಳೆ ಕ್ಷಣಮಾತ್ರದಲ್ಲಿ ಕುಂಭದ್ರೋಣ ವರ್ಷಾಧಾರೆಯಾಗಿ ಬದಲಾಗಿತ್ತು.ಆಗಸವೇ ಕಳಚಿಬಿದ್ದಂತೆ ಸುರಿಯಲಾರಂಭಿಸಿದ್ದ ಮಳೆ ಕಟ್ಟಕಡೆಯ ಹನಿಯವರೆಗೂ ಸುರಿದು ಸುಮ್ಮನಾಗಿತ್ತು.ಅಗಾಧವಾಗಿ ಸುರಿದ ವರ್ಷಾಧಾರೆಯ ಪರಿಣಾಮವಾಗಿ ಸಂಪೂರ್ಣ ಪಟ್ಟಣವೇ ಪ್ರವಾಹದ ಅಲೆಯಲ್ಲಿ ಮುಳುಗಿಹೋಗಿತ್ತು. ಪ್ರವಾಹದ ಅಲೆಯ ಮೇಲೆ ಸಾಗುತ್ತಿದ್ದ ಹಡಗಿನಿಂದಲೇ ಎಲ್ಲವನ್ನೂ ಗಮನಿಸುತ್ತಿದ್ದ ಬಾಲಕನಿಗೆ ನಾಯಿಯೊಂದು ಕಷ್ಟಪಟ್ಟು ನೀರಿನಲ್ಲಿ ಈಜಾಡುತ್ತ ತನ್ನ ಹಡಗಿನತ್ತಲೇ ಬರುತ್ತಿರುವುದು ಗೋಚರಿಸಿತು.ಅದನ್ನು ರಕ್ಷಿಸಿ ಹಡಗಿನೊಳಕ್ಕೆ ಅದನ್ನೆಳೆದುಕೊಳ್ಳುವಷ್ಟರಲ್ಲಿ ಒಂದು ಜೋಡಿ ಇಲಿಗಳು ತಮ್ಮ ಮರಿಗಳೊಂದಿಗೆ ಅಸಹಾಯಕವಾಗಿ ಕಿಚಿಕಿಚಿ ಕಿರುಚಿಕೊಳ್ಳುತ್ತ ಹಡಗಿನತ್ತ ಬಂದು ನಿಂತವು.ಅವುಗಳನ್ನೆತ್ತಿ ಹಡಗಿನಲ್ಲಿಟ್ಟುಕೊಂಡ ಬಾಲಕನಿಗೆ ಪ್ರವಾಹದ ಅಲೆ ಹೆಚ್ಚಾಗಿ ನೀರಿನ ಮಟ್ಟ ಮನೆಗಳ ತಾರಸಿಯವರೆಗೂ ಬಂದುನಿಂತಿದ್ದು ಗಮನಕ್ಕೆ ಬಂದಿತ್ತು.ಅಂಥದ್ದೊಂದು ಮನೆಯ ಮೇಲ್ಚಾವಣಿಯ ಮೇಲೆ ನಡುಗುತ್ತ ಕುಳಿತು ತನ್ನ ಬೆನ್ನನ್ನು ಬಾಗಿಸುತ್ತ ಭಯದಿಂದ ಅಳುತ್ತಿದ್ದ ಬೆಕ್ಕೊಂದನ್ನು ಸಹ ಬಾಲಕ ರಕ್ಷಿಸಿದ.ಅಷ್ಟಾಗಿಯೂ ನೀರಿನ ಮಟ್ಟ ಏರುತ್ತಲೇ ಸಾಗಿತ್ತು.ಮನೆಯ ಮೇಲ್ಚಾವಣಿಯನ್ನು ದಾಟಿ ಬೆಳೆದುನಿಂತ ಎತ್ತರದ ಮರಗಳನ್ನು ಮುಳುಗಿಸಲಾರಂಭಿಸಿತ್ತು. ಹಾಗೆ ಮುಳುಗಲಾರಂಭಿಸಿದ್ದ ಮರದ ತುದಿಯಲ್ಲಿ ಕುಳಿತಿದ್ದ ಡೊಂಬಕಾಗೆಯೊಂದು ಗಾಬರಿಯಿಂದ ಪಟಪಟನೇ ತನ್ನ ರೆಕ್ಕೆಗಳನ್ನು ಬಡಿಯುತ್ತ ’ಕಾಂವ್,ಕಾಂವ್’ಎಂದರಚಲಾರಂಭಿಸಿತ್ತು.ಅದನ್ನೂ ಸಹ ರಕ್ಷಿಸಿದ ಬಾಲಕ ಹಡಗಿನೊಳಕ್ಕೆ ಸೇರಿಸಿಕೊಂಡ.ಕಾಗೆಯ ಹಿಂದೆಯೇ ಹಡಗಿನೊಳಕ್ಕೆ ನುಗ್ಗಿ ಸೇರಿಕೊಂಡ ಜೇನುನೋಣಗಳ ಗುಂಪೊಂದು ನೀರಿನಿಂದ ತೋಯ್ದು ಹೋಗಿ ಹಾರಲಾಗದಂತಾಗಿದ್ದವು.
ಕೊನೆಯದಾಗಿ ಎಂಬಂತೆ ಕಪ್ಪುಕೂದಲುಗಳುಳ್ಳ ಮನುಷ್ಯನೊಬ್ಬ ನೀರಿನಲೆಯ ಮೇಲೆ ತೇಲುತ್ತ ಹಡಗಿನತ್ತ ಸಾಗಿಬಂದ.ಅವನತ್ತ ನೋಡಿದ ಬಾಲಕ,’ಅಮ್ಮಾ, ನಾವು ಅವನನ್ನೂ ಸಹ ಕಾಪಾಡೋಣ’ಎಂದ.ಮಗನ ಮಾತಿಗೆ ಅಸಮ್ಮತಿಸಿದ ಅಮ್ಮ,
’ಬೇಡ ಮಗು.ಕಪ್ಪುತಲೆಯ ಮನುಷ್ಯನನ್ನು ರಕ್ಷಿಸಬಾರದೆಂದು ಅಜ್ಜಿ ಹೇಳಿದ ಮಾತುಗಳು ನಿನಗೆ ನೆನಪಿಲ್ಲವೇ’ಎಂದು ಅಜ್ಜಿಯ ಮಾತುಗಳನ್ನು ಜ್ನಾಪಿಸಿದಳು.ಅಮ್ಮನ ಮಾತುಗಳನ್ನು ಕೇಳಿಸಿಕೊಂಡ ಮಗ,
’ಆದರೂ ನಾವು ಅವನನ್ನು ರಕ್ಷಿಸೋಣ ಅಮ್ಮ.ಅವನು ನೀರಿನಲ್ಲಿಯೇ ತೇಲುತ್ತ ಸಾಯುವುದನ್ನು ನಾನು ನೋಡಲಾರೆ’ಎಂದು ನುಡಿದ.ಮಗನ ಮಾತುಗಳನ್ನು ಕೇಳಿದ ಅಮ್ಮ ಅರೆಮನಸ್ಸಿನಿಂದಲೇ ಕಪ್ಪುಕೂದಲಿನ ವ್ಯಕ್ತಿಯನ್ನು ದೋಣಿಯೊಳ್ಳಕ್ಕೆಳೆದುಕೊಳ್ಳಲು ಒಪ್ಪಿಕೊಂಡಳು.
ಕೆಲಕಾಲ ನೀರಿನಲೆಯ ಮೇಲೆ ಹಡಗು ತೇಲುತ್ತ ಸಾಗಿತ್ತು.ಕಾಲಕಳೆದಂತೆ ಪ್ರವಾಹದ ಮಟ್ಟ ಕಡಿಮೆಯಾಯಿತು.ನೀರು ತಳಮಟ್ಟ ತಲುಪಿ ಪಟ್ಟಣವೊಂದನ್ನು ಸೇರಿಕೊಳ್ಳುತ್ತಲೇ ಹಡಗಿನಿಂದಿಳಿದ ಬಾಲಕ ಮತ್ತು ಅವನ ಅಮ್ಮ ಹಡಗಿನ ಎಲ್ಲ ಪ್ರಾಣಿಪಕ್ಷಿಗಳು ಬೀಳ್ಕೊಟ್ಟರು.ಕರಿಯಕೂದಲಿನ ಮನುಷ್ಯ ಸಹ ತನ್ನ ಪಾಡಿಗೆ ತಾನೆಂಬತೆ ಹೊರಟುಹೋದ.ಪೂರ್ತಿಯಾಗಿ ಖಾಲಿಯಾಗುತ್ತಲೇ ಚಿಕ್ಕದಾಗುತ್ತ ಸಾಗಿದ ಹಡಗು ಮೊದಲಿನಂತೆಯೇ ಸಣ್ಣ ಕಟ್ಟಿಗೆಯ ಆಟಿಕೆಯ ದೋಣಿಯಾಗಿ ಮಾರ್ಪಾಡಾಯಿತು.ತನ್ನ ಪಾಡಿಗೆ ತಾನು ಹೊರಟುಹೋಗಿದ್ದರೂ ಕಪ್ಪುತಲೆಯ ಮನುಷ್ಯ ಮಹಾಲೋಭಿಯಾಗಿದ್ದ.ಬಾಲಕನ ಬಳಿಯಿದ್ದ ಅಮೂಲ್ಯ ರತ್ನಗಳನ್ನು ಕಂಡು ಪ್ರಲೋಭನೆಗೆ ಒಳಗಾಗಿದ್ದ ಅವನು ಊರ ನ್ಯಾಯಾಧೀಶರ ಬಳಿ ತೆರಳಿ ತಾಯಿ ಮತ್ತು ಮಕ್ಕಳ ಮೇಲೆ ದೂರನ್ನಿತ್ತ.ದೂರು ದಾಖಲಿಸಿಕೊಂಡ ನ್ಯಾಯಪಾಲಕರು ತಕ್ಷಣವೇ ಅವರೀರ್ವರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು.ಅವರು ಜೈಲು ಸೇರಿದ ವಿಷಯವನ್ನು ಮೊದಲು ತಿಳಿದುಕೊಂಡ ಇಲಿಗಳು ಗುಪ್ತವಾಗಿ ಜೈಲಿನ ಗೋಡೆಯೊಂದಕ್ಕೆ ಬಿಲವನ್ನು ಕೊರೆದವು.ಬಿಲದೊಳಕ್ಕೆ ತೂರಿಕೊಂಡ ನಾಯಿ ಅವರಿಗೆ ಮಾಂಸವನ್ನಿತ್ತರೇ , ಜೈಲಿನಲ್ಲಿ ಹಸಿವಿನಿಂದ ಅವರು ಬಳಲದಿರಲಿ ಎಂದು ಬೆಕ್ಕು ಬ್ರೆಡ್ಡಿನ ತುಣುಕುಗಳನ್ನಿಟ್ಟಿತು.ಆದರೆ ಕಷ್ಟಕಾಲದಲ್ಲಿ ತನಗಾಶ್ರಯವಿತ್ತವರ ಕಷ್ಟವನ್ನು ನೋಡಿದ ಕಾಗೆ ದೂರದಲ್ಲೆಲ್ಲೋ ಆಗಸದಲ್ಲಿ ಹಾರಿ ಒಂದು ಪತ್ರದೊಂದಿಗೆ ನ್ಯಾಯಪಾಲಕರನ್ನು ತಲುಪಿತು.ಸ್ವತ: ದೇವರು ಬರೆದ ಆ ಪತ್ರವನ್ನು ಕಂಡು ಆಶ್ಚರ್ಯಗೊಂಡ ನ್ಯಾಯಪಾಲಕರು ಅದನ್ನು ತೆರೆದು ಓದಲಾರಂಭಿಸಿದರು.’ಒಬ್ಬ ಮುದಿ ಭಿಕ್ಷುಕಿಯ ವೇಷ ಧರಿಸಿಕೊಂಡು ಕೆಲಕಾಲ ನಾನು ಭೂಮಿಯ ಮೇಲೆ ಓಡಾಡಿಕೊಂಡಿದ್ದೆ. ಈ ಪುಟ್ಟ ಬಾಲಕ ಮತ್ತು ಅವನ ತಾಯಿ ನನ್ನನ್ನು ತಮ್ಮ ಮನೆಯೊಳಕ್ಕೆ ಸೇರಿಸಿಕೊಂಡರು.ಕೊಳಕಾಗಿ ನಿಂತಿದ್ದ ನನ್ನನ್ನು ತೊಳೆಯಲು ಸ್ವಲ್ಪವೂ ಅವರು ಸಂಕೋಚಿಸದೇ ನನ್ನನ್ನು ಅವರ ಬಂಧುವಿನಂತೆ ಕಂಡರು.ಹಾಗಾಗಿ ಅವರನ್ನು ಕಾಪಾಡಿದ ನಾನು ಅವರು ವಾಸವಾಗಿದ್ದ ಪಾಪಿಗಳ ನಗರವನ್ನು ಮುಳುಗಿಸಿಬಿಟ್ಟೆ.ನೀನೀಗ ಅವರನ್ನು ಕೂಡಲೇ ಬಂಧಮುಕ್ತನಾಗಿಸದಿದ್ದರೇ ನಿನಗೆ ಘೋರ ಶಾಪವೊಂದನ್ನು ಕೊಟ್ಟು ಬಿಡುತ್ತೇನೆ.ಆ ಶಾಪದಿಂದ ನಿನಗೆ ಮುಕ್ತಿಯೂ ಸಿಗಲಾರದು’ಎಂಬ ಒಕ್ಕೂರಣೆಯಿದ್ದ ಪತ್ರವನ್ನೋದಿದ ನ್ಯಾಯಾಧೀಶ ಗಾಬರಿಯಾಗಿ ತಕ್ಷಣವೇ ಅವರಿಬ್ಬರನ್ನೂ ತನ್ನೆದುರು ಕರೆಯಿಸಿ ನಿಲ್ಲಿಸಿದ.ಮಹಾಪ್ರವಾಹದ ಪೂರ್ತಿ ಕತೆಯನ್ನು ಅವರಿಂದ ಕೇಳಿ ತಿಳಿದುಕೊಂಡ ನ್ಯಾಯಪಾಲಕನಿಗೆ ಅವರಿಬ್ಬರೂ ದೇವರ ಕೃಪೆ ಹೊಂದಿದವರು ಎನ್ನುವುದು ಖಾತ್ರಿಯಾಯಿತು.ಸುಳ್ಳು ದೂರು ದಾಖಲಿಸಿದ್ದಕಾಗಿ ಕಪ್ಪುಕೂದಲಿನ ವ್ಯಕ್ತಿಯನ್ನು ಶಿಕ್ಷಿಸಿದ ನ್ಯಾಯಪಾಲಕ ,ಅಮ್ಮ ಮತ್ತು ಮಗನನ್ನು ಬಂಧಮುಕ್ತನಾಗಿಸಿದ.
ದಿನಕಳೆದಂತೆ ಬೆಳೆದ ಪುಟ್ಟಬಾಲಕ ಹದಿಹರೆಯದ ಯುವಕನಾದ.ಊರಿನ ರಾಜಕುಮಾರಿ ತನಗೆ ತಕ್ಕನಾದ ವರನ ಅನ್ವೇಶಣೆಯಲ್ಲಿದ್ದಳೆನ್ನುವುದು ಅವನ ಗಮನಕ್ಕೆ ಬಂದಿತ್ತು.ಬುದ್ದಿವಂತ ವರನ ಹುಡುಕಾಟದಲ್ಲಿದ್ದ ರಾಜಕುಮಾರಿ ಪರೀಕ್ಷೆಯೊಂದನ್ನು ಇಟ್ಟಿದ್ದಳು.ತನ್ನ ಮುಖಕ್ಕೊಂದು ಪರದೆ ಕಟ್ಟಿಕೊಂಡು ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳುತ್ತಿದ್ದ ರಾಜಕುಮಾರಿ ಒಂದೇ ಬಗೆಯ ಹತ್ತಾರು ಪಲ್ಲಕ್ಕಿಗಳ ನಡುವೆ ಕುಳಿತು ಸಂತೆಯ ನಡುವೆ ಬರುತ್ತಿದ್ದಳು.ಪ್ರತಿ ಪಲ್ಲಕ್ಕಿಯಲ್ಲಿಯೂ ರಾಜಕುಮಾರಿಯಂತೆಯೇ ಮುಖಪರದೆ ಕಟ್ಟಿಕೊಂಡ ಮಹಿಳೆಯೊಬ್ಬಳು ಕುಳಿತಿರುವುದರಿಂದ ನಿಜವಾದ ರಾಜಕುಮಾರಿಯನ್ನು ಗುರುತಿಸುವುದು ಕಷ್ಟವಾಗುತ್ತಿತ್ತು.ಹಾಗೆ ಹತ್ತಾರು ಪಲ್ಲಕ್ಕಿಗಳ ನಡುವೆ ತನ್ನ ಪಲ್ಲಕ್ಕಿಯನ್ನು ಗುರುತಿಸಿದ ಚತುರನನ್ನೇ ವಿವಾಹವಾಗುವುದಾಗಿ ರಾಜಕುಮಾರಿ ನಿಶ್ಚಯಿಸಿದ್ದಳು.ಎಲ್ಲರಂತೆಯೇ ತನ್ನ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವ ಸಲುವಾಗಿ ಸಂತೆಗೆ ತೆರಳಿದ ಯುವಕ ಪಲ್ಲಕ್ಕಿಗಳ ಸಮೂಹವನ್ನು ನೋಡುತ್ತ ನಿಂತ.ಪ್ರವಾಹ ಕಾಲದಲ್ಲಿ ತಾನು ರಕ್ಷಿಸಿದ ಜೇನ್ನೊಣಗಳ ಗುಂಪು ಒಂದು ಪಲ್ಲಕ್ಕಿಯ ಮೇಲೆ ಸುತ್ತುತ್ತಿರುವುದನ್ನು ಗಮನಿಸಿದ ಅವನಿಗೆ ಅದು ರಾಜಕುಮಾರಿಯೇ ಕುಳಿತ ಪಲ್ಲಕ್ಕಿ ಎನ್ನುವುದು ಖಾತ್ರಿಯಾಗಿತ್ತು. ತಕ್ಷಣವೇ ಆ ಪಲ್ಲಕ್ಕಿಯತ್ತ ಸಾಗಿದ ಅವನು ಅಲ್ಲಿದ್ದ ಕನ್ಯೆಯ ಕೈ ಹಿಡಿದ.ತನ್ನ ಪರೀಕ್ಷೆಯಲ್ಲಿ ಗೆದ್ದ ಯುವಕನನ್ನು ಕಂಡು ಸಂತೋಷಪಟ್ಟ ರಾಜಕುಮಾರಿ ಅವನೊಂದಿಗೆ ವಿವಾಹಕ್ಕೆ ಸಮ್ಮತಿಸಿದಳು.ಅವರಿಬ್ಬರ ವಿವಾಹ ಗುರುಹಿರಿಯರ ಸಮ್ಮುಖದಲ್ಲಿ ವಿಜೃಂಭಣೆಯೊಂದಿಗೆ ಸಾಂಗೋಪಾಂಗವಾಗಿ ಜರುಗಿತು.ಸತಿಪತಿಯರಿಬ್ಬರೂ ನೂರುಕಾಲ ಸಂತಸದಿಂದ ಬಾಳಿದರು.
ಅನುವಾದ : ಗುರುರಾಜ್ ಕೊಡ್ಕಣಿ
ಹೆಸರು ಗುರುರಾಜ ಕೊಡ್ಕಣಿ,ಊರು ಯಲ್ಲಾಪುರ .ಬಾಗಲಕೋಟೆಯ ಬಸವೇಶ್ವರ ಇಂಜಿನೀಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ,ಸಧ್ಯಕ್ಕೆ ಭಾರತೀಯ ಜೀವ ನಿಗಮದ ಜಯನಗರ ಶಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಾಸಿ ಬರಹಗಾರ,ಅಂಕಣಕಾರ
ಚಿತ್ರಗಳು : ಮದನ್ ಸಿ.ಪಿ
ಸೊಗಸಾಗಿದೆ ಕಥೆ..ನನ್ನ ಮಗನಿಗೆ ಮಲಗುವಾಗ ಹೇಳಲೊಂದು ಚಂದದ ಕಥೆ ಸಿಕ್ಕಿತು ಇಂದು
ಚೀನಾದ ಜನಪದ ಕಥೆ ನಮ್ಮ ಜನಪದ ಕಥೆಯಂತಿದೆ…ತುಂಬಾ ಒಳ್ಳೆಯ ಕಥೆ…ಗುರುರಾಜ ಸರ್ ತಮಗೆ ಪ್ರೀತಿಯ ಅಭಿನಂದನೆಗಳು.
ಕತೆ ಚನ್‌ನಾಗಿದೆ ಕಷ್‌ಟದಲ್‌ಲಿರೊರಿಗೆ ಸಹಾಯ ಮಾಡಿದರೆ ನಮಗೂ ಒಳ್‌ಳೆಯದಾಗುತ್‌ತದೆ ಎಂಬ ನೀತಿ,