ಕೊರೊನಾ ಕಾಲದಲ್ಲಿನ ಗ್ರಾಮಿಣ ಬದುಕಿನ ಚಿತ್ರಗಳನ್ನ ಋತುಮಾನಕ್ಕಾಗಿ ಎ.ಆರ್.ವಾಸವಿ ಮತ್ತು ಕೆ.ಪಿ ಸುರೇಶ ಸಂಪಾದಿಸಿ ಕೊಟ್ಟಿದ್ದಾರೆ.ಇಂತಹ ನಾಡಿನ ಹತ್ತು ವಿವಿಧ ಹಳ್ಳಿಯ ಚಿತ್ರಗಳು ದಿನಕ್ಕೊಂದರಂತೆ ಕೊರೊನಾ ಕಾಲದಲ್ಲಿ ಗ್ರಾಮಿಣ ಬದುಕು ಅನ್ನುವ ಶೀರ್ಷಿಕೆಯಲ್ಲಿ ಋತುಮಾನದಲ್ಲಿ ಪ್ರಕಟವಾಗುತ್ತಿದೆ
ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‍ಕ್ರಾಸ್ ತುಮಕೂರು ಶಾಖೆಯು ಕೋವಿಡ್ 19 ವಿರುದ್ಧ ಹೋರಾಡಲು ತಳಮಟ್ಟದ ಹೋರಾಟವನ್ನು ಸಂಘಟಿಸಿದೆ.ಕಳೆದ ವಾರದ ಹಿಂದಷ್ಟೇ ಆಯಾ ತಾಲ್ಲೂಕುಗಳಲ್ಲಿ ಸ್ವಯಂಸೇವಕರಾಗ ಬಯಸುವವರಿಗೆ ಆನ್‍ಲೈನ್ ಕೋರ್ಸ್ ನೋಂದಣಿ ಮಾಡಿಸಿಕೊಂಡು, ಆನ್‍ಲೈನ್ ಪರೀಕ್ಷೆಯ ನಂತರ ಕೊರೋನಾ ಸೈನಿಕರನ್ನಾಗಿ ಆಯ್ಕೆ ಮಾಡಿಕೊಂಡಿತು.
ಇದೀಗ ಇಡೀ ಜಿಲ್ಲೆಯಲ್ಲಿ 202 ಜನ ಕೊರೋನಾ ಸೈನಿಕರಾಗಿ ಆಯಾ ತಾಲ್ಲೂಕುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ತುಮಕೂರು ಜಿಲ್ಲೆಯಲ್ಲಿ ಒಟ್ಟು 10 ತಾಲ್ಲೂಕುಗಳಿವೆ. ತಿಪಟೂರು ತಾಲ್ಲೂಕಿನಲ್ಲಿ 15ಜನ ಸೈನಿಕರಿದ್ದರೆ, ಉಳಿದ 8 ತಾಲ್ಲೂಕುಗಳಲ್ಲಿ ಹತ್ತತ್ತು ಜನ ಸೈನಿಕರನ್ನಾಗಿ ನೇಮಿಸಲಾಗಿದೆ. ಉಳಿದಂತೆ ತುಮಕೂರು ನಗರದಲ್ಲಿಯೇ ನೂರಕ್ಕೂ ಅಧಿಕ ಸಂಖ್ಯೆಯ ಕೊರೋನಾ ಸೈನಿಕರು ಸೇವೆ ಸಲ್ಲಿಸುತ್ತಿದ್ದಾರೆ ಎನ್ನುತ್ತದೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ತುಮಕೂರು ಶಾಖೆ.
ಈ ಸಂಸ್ಥೆಗಳು ಆರಂಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಮುದಾಯ ಮತ್ತು ಹಿರಿಯ ನಾಗರೀಕರಿಗೆ ಮುನ್ನಚ್ಛರಿಕೆಯ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಮಾಡಿತು. ಜಿಲ್ಲಾಡಳಿತ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ 10 ತಾಲ್ಲೂಕುಗಳಲ್ಲಿ ಉಚಿತ ಹಾಲು, ಆಹಾರ ಪೂರೈಕೆ ಮಾಡುತ್ತಿದೆ. ಕಾರ್ಮಿಕ ಇಲಾಖೆಯ ಸಹಕಾರದೊಂದಿಗೆ ಅಸಂಘಟಿತ ಕಾರ್ಮಿಕರಿಗೆ (ಮೇ ಇನ್ಟ್ರಕ್ಷನ್ ವರ್ಕರ್) ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಸಮುದಾಯಗಳಿಗೆ ಅಗತ್ಯವಿದ್ದ ಸೌಲಭ್ಯಗಳನ್ನು ಒದಗಿಸಲಾಯಿತು. ಕರಪತ್ರಗಳನ್ನು ವಿತರಿಸಲಾಯಿತು. ಆಹಾರ, ವಸತಿ ಸಮಸ್ಯೆಯಿದ್ದವರನ್ನು ಗುರುತಿಸಿ ಜಿಲ್ಲಾಡಳಿತದ ಗಮನಕ್ಕೆ ತರಲಾಯಿತು. ಸಾಮಾಜಿಕ ಸಾಂತ್ವನ ನೀಡಲು ಸಂಚಾರಿ ನಮ್‍ಹಳ್ಳಿ ರೇಡಿಯೋ ಮನೆಮನೆ ಬಾಗಿಲ ಮುಂದೆ ಹೋಗಿ ಸಂತೈಸುತ್ತಿದೆ. ಅಲ್ಲದೆ ಜಿಲ್ಲಾಧಿಕಾರಿಯ ಸಂದೇಶವನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುತ್ತಿದೆ. ಸಮಸ್ಯೆಗೆ ಶೀಘ್ರ ಪರಿಹಾರ ತಂದಿರಿಸುವ ಕೆಲಸವನ್ನು ರೇಡಿಯೋ ಮಾಧ್ಯಮ ಮಾಡುತ್ತಿದೆ. ಕೊರೋನಾ ಜಾಗೃತಿ ಗೀತೆಗಳು, ಲಾವಣಿಗಳನ್ನು ಪ್ರಸಾರ ಮಾಡುತ್ತಾ ರೇಡಿಯೋ ಜನಮಾನಸದಲ್ಲಿ ನೆಲೆಯೂರುವ ಕೆಲಸವನ್ನು ಮಾಡುತ್ತಿದೆ. ಹಳ್ಳಿಗಳಲ್ಲಿ ಸಾಮಾಜಿಕವಾಗಿ ಹಿಂದುಳಿದವರು, ನಿರ್ಗತಿಕರು, ಬುಡಕಟ್ಟು ಜನರು, ಅಲೆಮಾರಿಗಳು, ವಲಸೆ ಕಾರ್ಮಿಕರ ಸಮೀಕ್ಷೆಯನ್ನು ಮಾಡಲು ಯೋಜನೆ ಹಾಕಿಕೊಂಡಿದೆ. ಊರಿನ ಎಲ್ಲಾ ಸಮುದಾಯದ ಹಿರಿಯ ನಾಗರಿಕರ ಸಭೆ ಕರೆದು, ಸಮಸ್ಯೆಯ ಅವಲೋಕನ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವ ಕೆಲಸವನ್ನು ರೇಡಿಯೋ ಮಾಡುತ್ತಿದೆ. ಇದರ ಫಲವಾಗಿ ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಪಂಧಿಸಲು 10ಜನರ ಅಧಿಕಾರಿಗಳ ಕಾರ್ಯಪಡೆ ಸಕ್ರಿಯವಾಗಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ಕ್ಷೇತ್ರ ಕಾರ್ಯ ಮಾಡಲು ಕಷ್ಟವಾದÀ ಕಾರಣ, ಗ್ರಾಮೀಣ ಮಟ್ಟದಲ್ಲಿ ಕಂಡುಬರುವ ಸುಳ್ಳುಸುದ್ದಿಗಳನ್ನು ಎದುರಿಸುವುದು, ಆರೋಗ್ಯ ಜಾಗೃತಿ ಮೂಡಿಸುವ ಹಂತದಿಂದ ಹಿಡಿದು, ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆವರೆಗೂ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಟ್ಟಿನಲ್ಲಿ ಜೊತೆಗೆ ಕೈಜೋಡಿಸಿರುವ ನಮ್‍ಹಳ್ಳಿ ರೇಡಿಯೋ ಧ್ವನಿಮುದ್ರಿಕೆಯ ಮೂಲಕ ಗ್ರಾಮೀಣ ಭಾಗದ ಜನರ ಸಂಕಷ್ಟಗಳನ್ನು ಜಿಲ್ಲಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ ತಲುಪಿಸುವ ಕೆಲಸವನ್ನು ಮಾಡುತ್ತಿದೆ.
ಸಂಚಾರಿ ರೇಡಿಯೋ ಕೇಂದ್ರವು ಬಾಣಸಂದ್ರ, ಜಿ.ಮಲ್ಲೇನಹಳ್ಳೀ, ಕೊಂಡಜ್ಜಿ. ವಿಘ್ನಸಂತೆ, ನೊಣವಿನಕೆರೆ, ಅಕ್ಕಳಸಂದ್ರ, ಗೊಲ್ಲರಹಟ್ಟಿ ಅಲ್ಲದೆ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರ ಹಾಗೂ ತುಮಕೂರಿನ ಕೆ.ಎಂ.ದೊಡ್ಡಿ, ಗೂಳೂರು ಹೀಗೆ ಕಳೆದ 6 ದಿನಗಳಿಂದ 30ಕ್ಕೂ ಹೆಚ್ಚು ಹೆಚ್ಚು ಹಳ್ಳಿಗಳಲ್ಲಿ ಸಂಚರಿಸಿ ಗ್ರಾಮೀಣ ಜನತೆಯಲ್ಲಿ ಆಶಾಭಾವನೆಯನ್ನು ಬೆಳೆಸುತ್ತಿದೆ.
ಪ್ರದೇಶಾಧ್ಯಯನ:
ನಾನು ತುಮಕೂರು ತಾಲ್ಲೂಕು ಗೂಳೂರು ಪ್ರದೇಶದ ಕೊರೋನಾ ಸೈನಿಕಳಾಗಿರುವುದರಿಂದ ಇಲ್ಲಿನ ಪ್ರದೇಶಗಳನ್ನೇ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ.
ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ನಗರಕ್ಕೆ ಹೊಂದಿಕೊಂಡಿರುವ 3 ಗ್ರಾಮಗಳನ್ನು ಈ ಅಧ್ಯಯನದ ವ್ಯಾಪ್ತಿಗೆ ತೆಗೆದುಕೊಳ್ಳಲಾಗಿದೆ.2 ಅಭಿವೃದ್ಧಿಹೊಂದುತ್ತಿರುವ ಗ್ರಾಮ ಹಾಗೂ ಒಂದು ಅಭಿವೃದ್ಧಿಗೊಂಡ ಪ್ರದೇಶವನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.ಕೋವಿಡ್ 19ರ ಪರಿಣಾಮದಿಂದಾಗಿ ಗ್ರಾಮೀಣ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗುತ್ತದೆ.
ಇಲ್ಲಿ ಪ್ರಸ್ತಾಪಿಸಲಾಗುವ ಪ್ರತಿ ವಿಷಯದ ಧ್ವನಿಮುದ್ರಿಕೆಯು ನಮ್‍ಹಳ್ಳಿ ರೇಡಿಯೋದಲ್ಲಿ ಲಭ್ಯವಿದೆ.ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಪರಾಮರ್ಶನ ಸಹಕರಿಸುತ್ತದೆ.
ಗೂಳೂರು ಪ್ರದೇಶದ ಸುತ್ತಮುತ್ತಲ ಹಳ್ಳಿಗಳಾದ ಕೆ.ಲಕ್ಕಪ್ಪನಗರ, ಕೊಂಡಾಪುರ, ಕೈದಾಳ ಮತ್ತೂ ಗೂಳೂರಿನ ಕೆಲವು ಪ್ರದೇಶದ ವಾಸ್ತವ ಸ್ಥಿತಿಗತಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗುವುದು.
• ಕೊರೋನಾ ಸೈನಿಕಳೆಂಬ ಐಡಿ ಕಾರ್ಡಿನೊಂದಿಗೆ ಚಲಿಸುವ ರೇಡಿಯೋ ಮೂಲಕ ಗ್ರಾಮಗಳಿಗೆ ಪ್ರವೇಶಿಸಿದಾಗ ಸಂಜೆ 5ಗಂಟೆಯಾಗಿತ್ತು. ಜನ ಅಷ್ಟು ಹತ್ತಿರಕ್ಕೆ ಬರಲಿಲ್ಲ. ಮನೆಮನೆಗು ಹೋಗಿ ನಾವು ಬಂದಿರುವ ಉದ್ದೇಶವನ್ನು ತಿಳಿಸಲು ಕಷ್ಟವಾಯಿತು. ಕಾರಿನಲ್ಲಿದ್ದ ಸ್ಪೀಕರ್ ಆನ್ ಮಾಡಿ ಜಿಲ್ಲಾಧಿಕಾರಿಯವರು ಗ್ರಾಮೀಣ ಜನರನ್ನುದ್ದೇಶಿಸಿ ಮಾತನಾಡಿದ ಆಡಿಯೋ ಬುಲೆಟಿನ್‍ಗಳನ್ನು ಏರುಧ್ವನಿಯಲ್ಲಿÀ ಪ್ರಸಾರ ಮಾಡಿದ ಪರಿಣಾಮ ಹರಳಿಕಟ್ಟೆ ಮೇಲೆ ಕುಳಿತವರು, ಹಾಲುಕರೆಯುತ್ತಿದ್ದ ಮಹಿಳೆಯರು, ಟಮೋಟೋ, ಸೊಪ್ಪು ಮಾರಲು ಬಂದ ರೈತರು, ಹಳ್ಳಿಯ ಯುವಜನಾಂಗ ಆಕರ್ಷಿತರಾದರು.
• ಗ್ರಾಮೀಣ ಪ್ರದೇಶದ ಜನರ ಅಹವಾಲುಗಳನ್ನು, ಕುಂದುಕೊರತೆಗಳನ್ನು ಕೇಳುವ ಕಿವಿಯಾಗಿ ಬಂದಿರುವ ಈ ರೇಡಿಯೋ ವಾಹನದ ಮುಂದೆ ತಾವೆಲ್ಲ ಬಂದು ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ ಜಿಲ್ಲಾಧಿಕಾರಿಗಳು ಹೇಳಿದಂತೆ ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಹಾಯವಾಗುತ್ತದೆ ಎಂದು ಕೇಳಿಕೊಂಡಾಗ ಒಬ್ಬೊಬ್ಬರಾಗೆ ಸಮಸ್ಯೆಗಳನ್ನು ಮುಂದಿಟ್ಟರು.
• ಕೈದಾಳ ಗ್ರಾಮದ ಸ್ಥಿತಿಗತಿ:
1. ರೈತರ ಸ್ಥಿತಿಗತಿ: ಹೆತ್ತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೈದಾಳ ಗ್ರಾಮದಲ್ಲಿ 500 ಕುಟುಂಬ ವಾಸಿಸುತ್ತಿದೆ. ಶೇಕಡ 60ರಷ್ಟು ರೈತಾಪಿಗಳೇ ಇರುವ ಗ್ರಾಮದಲ್ಲಿ ಕೋವಿಡ್ 19 ಕೃಷಿ ಚಟುವಟಿಕೆಗಳಿಗೆ ಭಾರಿ ತೊಂದರೆ ಉಂಟುಮಾಡಿದೆ. ಇಲ್ಲಿನ ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆಯಿರಲಿಲ್ಲ. ಈಗ ನೀರಾವರಿ ಆಶ್ರಯದಲ್ಲಿ ಬೆಳೆದ ತರಕಾರಿಗಳನ್ನು ಮಾರಾಟಮಾಡಲು ಸರಿಯಾದ ವ್ಯವಸ್ಥೆ ಇಲ್ಲ. ಕಡಿಮೆ ಬೆಲೆಗೆ ತರಕಾರಿಯನ್ನು ಕೇಳುತ್ತಾರೆ. “ಈ ಬೇಸಿಗೆಗೆ 50 ಸಾವಿರ ರೂಪಾಯಿ ಖರ್ಚು ಮಾಡಿ ಟಮೋಟೋ ಬೆಳೆದಿದ್ದೆ, ನನಗೆ 10ಸಾವಿರವೂ ಸಿಕ್ಕಿಲ್ಲ, ಕೂಲಿಯೂ ದಕ್ಕಲಿಲ್ಲ ಅಂದ್ರೇ ಏನ್ ಮಾಡ್ಬೇಕ್ ಹೇಳಿ?” ಎನ್ನುತ್ತಾರೆ ಗ್ರಾಮದ ಕೃಷಿಕ ಹನುಮಂತಯ್ಯ. ಈ ಊರಿನ ಜಾನುವಾರುಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಸಂಚಾರ ವ್ಯವಸ್ಥೆಗೆ ತೊಂದರೆಯಾದ್ದರಿಂದ ಸೀಮೆಹಸುವಿನ ಹಿಂಡಿ, ಬೂಸಾ ಇತ್ಯಾದಿ ಪೋಷಕಾಂಶಗಳು ಲಭ್ಯವಿಲ್ಲ. ಈ ಬಿಸಿಲಿಗೆ ಪಶುಗಳ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಪಶುವೈದ್ಯರ ಅನುಕೂಲ ಸಹ ಇಲ್ಲದಂತಾಗಿದೆ. ಈ ಎಲ್ಲಾ ಕಾರಣಗಳಿಂದ ಹಾಲು ಉತ್ಪಾದನೆಯ ಪ್ರಮಾಣ ಕ್ಷೀಣಿಸುತ್ತಿದೆ. ಇದರಿಂದ ಹಣಕಾಸಿನ ಸಮಸ್ಯೆ ಎದುರಾಗಿದೆ ಎನ್ನುತ್ತಾರೆ ಇವರು.
2. ಇದೇ ಗ್ರಾಮದ ನಿವಾಸಿ ಚೆನ್ನಪ್ಪ ರೋದಿಸುತ್ತಲೇ ತನ್ನ ಮನದಾಳದ ನೋವನ್ನ ಹೊರಹಾಕುತ್ತಾರೆ. “ಕಳೆದ ಕೆಲ ತಿಂಗಳ ಹಿಂದೆಯಷ್ಟೇ ನಲವತ್ತು ಮೂಟೆಯಾಗಬೇಕಿದ್ದ ರಾಗಿ ಬಣವೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮವಾಗಿ ಇಂದು ತಿನ್ನುವುದಕ್ಕೂ ಅನ್ನವಿಲ್ಲ, ಜಾನುವಾರುಗಳನ್ನು ಮಾರಬೇಕೆಂದುಕೊಂಡಿದ್ದೇನೆ. ನಮಗೇ ತಿನ್ನಲು ಅನ್ನವಿಲ್ಲ ಅವು ಉಸೂರ್ ಅಂದ್ರೇ ನಮಿಗೆ ಒಳ್ಳೇದಾಗಲ್ಲ” ಎಂದು ಮುಗ್ಧ ಮಾತನಾಡುತ್ತಲ್ಲೇ ಕಣ್ಣೊರೆಸಿಕೊಳ್ಳುತ್ತಾರೆ. “25 ಕ್ಕೂ ಹೆಚ್ಚು ಅಧಿಕಾರಿಗಳಿಗೆ ಇದುವರೆಗೂ ಅರ್ಜಿಗಳನ್ನು ಕೊಟ್ಟಿದ್ದೇವೆ ಆದರೂ ಏನು ಪ್ರಯೋಜನವಾಗಿಲ್ಲ, ಪರಿಹಾರ ನಮಗೆಲ್ಲಿ ಸಿಗುತ್ತದವ್ವಾ? ನೀವೇ ಕೊಡಿಸಬೇಕು. ಊರಿನ ಮುಖಂಡರೂ ನಮ್ಮ ಕಷ್ಟ ಏನು ಅಂತ ಕೇಳುವುದಿಲ್ಲ” ಎಂದು ಬೇಸರಿಸಿಕೊಳ್ಳುತ್ತಾರೆ. ಇದುವರೆಗೆ ಅವರಿವರನ್ನು ಕಾಡಿಬೇಡಿ ಹಸುಗಳಿಗೆ ಹುಲ್ಲು ಗಿಟ್ಟಿಸಿಕೊಂಡೆವು ಇನ್ನು ಮುಂದಿನ ಕತೆ ಏನೋ ಎತ್ಲೋ? ಸರ್ಕಾರ ನಮಗೆ ತಿನ್ನುವ ಅನ್ನಕ್ಕಾದರೂ ವ್ಯವಸ್ಥೆ ಮಾಡಬೇಕೆಂದು ಬೇಡಿಕೊಳ್ಳುತ್ತಾರೆ.
3. ಹೆಸರು ಹೇಳಲು ಇಚ್ಛಿಸದ ರೈತಮಹಿಳೆಯೊಬ್ಬರು ತಿಳಿಸುತ್ತಾರೆ. ‘ನಮ್ಮೂರೆ ಅಲ್ಲಾ ಎಲ್ಲಾ ಊರ್ಗಳಲ್ಲೂ ತಕ್ಷಣನೇ ಪಂಚಾಯ್ತಿಯೋರು ಗೋವುಗಳಿಗೆ ಕುಡಿಯುವ ನೀರಿನ ತೊಟ್ಟಿಯನ್ನು ಕಟ್ಟಿಸಿ ಮೂರೊತ್ತು ನೀರು ಬಿಟ್ಟು ಪುಣ್ಯಕಟ್ಟುಕೊಳ್ಳಿ, ನಮಗೆ ಊರಿನ ಟ್ಯಾಂಕ್ ಬಿಟ್ರೆ ಗತಿಯಿಲ್ಲ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ತೋಟದೋರ್ ಒಂದಿನ್ ಬಿಡ್ತರೆ ಎರಡ್ದಿನ ಬಿಡ್ತರೆ ಆಮೇಲೆ ಅವರಿಗೂ ಕಷ್ಟ ಎನ್ನುತ್ತಾರೆ. ಇಡೀ ಸೀಮೇಲೀ ಎಷ್ಟ್ ಕಿಲೋಮೀಟರ್ ಹೋದ್ರು ಒಂದ್ ಗರಿಕೆ ಪಾಸೆ ಸಿಗಲ್ಲ ಆನಾಡಿ ಬಿಸ್ಲೂ ಪಶುಪಕ್ಷಿಗಳಿಗೆ ಆಹಾರ ಇಲ್ಲ ಸರ್ಕಾರ ಮೇವು ಪೂರೈಕೆ ಮಾಡಿಕೊಡ್ಬೇಕು ಅಂತ ಬೇಡಿಕೆಯಿಡುತ್ತಾರೆ.
4. ಕೈದಾಳದಲ್ಲಿ ಲಾಕ್‍ಡೌನ್ ಜಾರಿಯಾದ ಎರಡೇ ವಾರದಲ್ಲಿ ಹಾಲಿನ ಉತ್ಪಾದನೇ ಶೇ.20 ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ ಖಾಸಗಿ ಡೈರಿ ಮಾಲಿಕ ನಾರಾಯಣ್.
5. ಕೈದಾಳ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ಸಮುದಾಯದ ಬಹಳಷ್ಟು ಮಂದಿ ಬಡತನ ರೇಖೆಗಿಂತ ಒಳಗಿರುವವರಾದ್ದರಿಂದ ಅನ್ನಭಾಗ್ಯ ಯೋಜನೆ ಬಿಟ್ಟರೆ ಬೇರೆ ಆಧಾರವಿಲ್ಲ. ಕೂಲಿಯಿಲ್ಲ, ದಿನಬಳಕೆ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಕಷ್ಟವಾಗುತ್ತದೆ ಎನ್ನುತ್ತಾರೆಸಮುದಾಯದ ಮುಖಂಡರು.
6. ಕೈದಾಳದ ಬಹುಪಾಲು ವೃದ್ಧರಿಗೆ ಮೂರು ತಿಂಗಳಿಂದ ವೃದ್ದಾಪ್ಯ ಪಿಂಚಣಿ ಬಂದಿಲ್ಲ, ಎರಡು ತಿಂಗಳಿನಿಂದ ವಿಧವಾ ಪಿಂಚಣಿ ಬಂದಿಲ್ಲ, ಮಕ್ಕಳಿಲ್ಲದ ನಮ್ಮಂತ ಜೀವಗಳನ್ನ ಸರ್ಕಾರಗಳೇ ನೋಡಿಕೊಳ್ಳಬೇಕೆನ್ನುತ್ತಾರೆ.
7. ಇದುವರೆಗೆ ನಮ್ಮ ಗ್ರಾಮಕ್ಕೆ ಯಾರಾದ್ರೂ ಬಂದು ಬದ್ಕಿದಿರಾ ಸತ್ತಿದಿರಾ ಅಂತ ನೋಡಿಲ್ಲ, ಲಾಕ್‍ಡೌನ್ ಆಗೋಯ್ತು, ಅಂಗಡಿಗಳು ತೆರಿದಿರ್ತವೆ, ಬೇಕಾದ್ದನ್ನ ತಗಳಕೆ ದುಡ್‍ಬೇಕಲ್ಲ, ಮನೆಮಕ್ಳೆಲ್ಲ ದುಡಿಯದೆ ಮನೇಲ್ ಕೂತ್ರೆ ಎಷ್ಟು ಮೂಟೆ ಆದ್ರೂ ತಡ್ಯುತ್ತಾ ಎನ್ನುತ್ತಾರೆ ಕೃಷಿ ಕೂಲಿಕಾರ್ಮಿಕರೊಬ್ಬರು.
8. ಲಾಕ್‍ಡೌನ್ ಇಫೆಕ್ಟ್ ಈ ಊರಿನಲ್ಲಿ ಕೃಷಿ ಚಟುವಟಿಕೆ, ಪಶುಸಂಗೋಪನೆಯ ಮೇಲೆ ಬಾಹ್ಯ ಪರಿಣಾಮ ಉಂಟುಮಾಡಿಲ್ಲ, ಸಹಜವಾಗಿ ರೈತರು ತೋಟ, ಹೊಲಗಳಿಗೆ ಹೋಗುತ್ತಾರೆ.ಗ್ರಾಮಮಟ್ಟದಲ್ಲಿ ಸಾಮಾಜಿಕ ಅಂತರದ ಬಗ್ಗೆ ಜನರಲ್ಲಿ ಜಾಗೃತಿ ಅತೀ ಕಡಿಮೆ ಇದೆ. ಜೊತೆಜೊತೆಯಲ್ಲಿಯೇ ಕೂತು ದಿನಗಟ್ಟಲೆ ಹರಟೆ ಹೊಡೆಯುತ್ತಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅರಿವು ಬೇಕಿತ್ತು, ಅದನ್ನು ನಮ್‍ಹಳ್ಳಿ ರೇಡಿಯೋ ತಕ್ಕಮಟ್ಟಿಗೆ ಅರ್ಥೈಸಿದೆ.
ಕೆ,ಲಕ್ಕಪ್ಪನಗರ(ಕೊಂಡಾಪುರ ಗೋಮಾಳ) ಮತ್ತು ಕೊಂಡಾಪುರ:
• ಹೆತ್ತೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಅವಳಿ ಗ್ರಾಮಗಳಾದ ಈ ಎರಡು ಊರುಗಳಲ್ಲಿ ಸುಮಾರು 85 ಕುಟುಂಬಗಳು ವಾಸಿಸುತ್ತಿವೆ. ಅದರಲ್ಲಿ 17 ಕುಟುಂಬಗಳು ಕೊಂಡಾಪುರ ನಿವಾಸಿಗಳು. ಇಲ್ಲಿನ ಜನರು ತೋಟ, ಹೊಲ,ಗದ್ದೆ ಉಳ್ಳವರು, ಎಲ್ಲರೂ ನೀರಾವರಿ ಆಶ್ರಿತ ಕೃಷಿಕರೆ, ಅಲ್ಲದೆ ಸರ್ಕಾರಿ ಉದ್ಯೋಗಗಳಲ್ಲಿರುವವರು ಇದ್ದಾರೆ.
• ಕೆ. ಲಕ್ಕಪ್ಪನಗರದ ನಿವಾಸಿಗಳು ಬೇರೆ ಬೇರೆ ಊರುಗಳಿಂದ ಬಂದು ನೆಲೆಕಂಡುಕೊಂಡವರು, ಉಳ್ಳವರೂ ಬೆರಳೆಣಿಯಷ್ಟು ಮಂದಿ. ಶೇಕಡಾ 90% ಜನ ಬಡವರು, ಕೂಲಿಕಾರ್ಮಿಕರು, ಆಟೋಚಾಲಕರು, ಮನೆಗೆಲಸ ಮಾಡುವವರು, ಬೀಡಿ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುವವರೇ ಇದ್ದಾರೆ. ಶೇ.10% ರೈತಾಪಿಗಳು, ಅದರಲ್ಲಿ ಶೇ.6% ನಷ್ಟು ರೈತರು ಬೇರೆಯವರಿಂದ ಬೀಳುಬಿಟ್ಟ ಜಮೀನನ್ನು ಗುತ್ತಿಗೆ ಪಡೆದು ಮಳೆಯಾಶ್ರಿತ ವ್ಯವಸಾಯ ಮಾಡುತ್ತಿರುವವರು.
• ಲಾಕ್‍ಡೌನ್ ಪರಿಣಾಮದಿಂದ ಲಕ್ಕಪ್ಪನಗರದ ಬಹುಪಾಲು ಕೂಲಿಕಾರ್ಮಿಕರು ಖಾಲಿ ಕೈಯಲ್ಲಿ ಕೂತಿದ್ದಾರೆ. ಯಾರಾದರೂ ಸಹಾಯಮಾಡಲು ಬರುತ್ತಾರೆಂಬ ನಿರೀಕ್ಷೆಯಲ್ಲೇ ಇದ್ದಾರೆಂಬುದಕ್ಕೆ ಒಂದು ನಿದರ್ಶನ ಇಲ್ಲಿದೆ. ರೇಡಿಯೋ ಗಾಡಿ ಊರಿಗೆ ಪ್ರವೇಶಿಸಿದ ತಕ್ಷಣ, ಎಷ್ಟೋಂದು ಜನ ಮಹಿಳೆಯರು, ಮಕ್ಕಳು, ಗಂಡಸರು ಗಾಡಿ ಸುತ್ತ ಮುತ್ತಿಗೆ ಹಾಕಿದರು. ಏನಾದ್ರು ತಂದಿದ್ದೀರಾ? ಆಹಾರ ಕೊಡ್ತಿರಾ, ಹಾಲು ಕೊಡ್ತಿರಾ! ಅಂತ ಕೇಳಿದರು. ಇಲ್ಲಾ ಅದನ್ ವ್ಯವಸ್ಥೆ ಮಾಡುವ ಸಲುವಾಗೇ ಪರಿಸ್ಥಿತಿ ಅಧ್ಯಯನ ಮಾಡಲು ಬಂದಿದ್ದೇವೆ ಎಂಬುದನ್ನು ತಿಳಿದ ಕೂಡಲೇ ತಮ್ಮ ಸಂಕಟಗಳನ್ನು ಇಲ್ಲಿ ಕೆಲವರು ಹೇಳಿಕೊಂಡಿದ್ದಾರೆ.
ದೈನಂದಿನ ಸ್ಥಿತಿಗತಿ:
ನಮ್‍ಹಳ್ಳಿ ರೇಡಿಯೋ ಮತ್ತು ಭಾರತೀಯ ರೆಡ್‍ಕ್ರಾಸ್ ನ ಕೊರೋನಾ ಸೈನಿಕರ ನೇತೃತ್ವದಲ್ಲಿ ಅವಳಿ ಗ್ರಾಮಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿದ ಬಳಿಕ ಊರಿನ ಸಮಸ್ಯೆಗಳು ಮತ್ತು ಅಗತ್ಯತೆಗಳ ಬಗ್ಗೆ ಚರ್ಚಿಸಲಾಯಿತು.ಸಭೆಯ ಅಂಶಗಳನ್ನಲ್ಲದೇ ಗ್ರಾಮ ವೀಕ್ಷಣೆಯಲ್ಲಿ ಕಂಡ ಜನರ ಪರಿಸ್ಥಿತಿಯನ್ನು ಇಲ್ಲಿ ದಾಖಲಿಸಲಾಗಿದೆ.
1. ಕಳೆದ ಎರಡು ದಿನದ ಹಿಂದೆ ಸಾಲಕೊಟ್ಟವ ಸೋಮಣ್ಣನ(ಹೆಸರು ಬದಲಿಸಲಾಗಿದೆ) ಮನೆಯ ಮುಂದೆ ಬಂದು ಕುಟುಂಬದ ಸ್ವಾಭಿಮಾನಕ್ಕೆ ನೋವುಂಟಾಗುವಂತೆ ಮಾತನಾಡುತ್ತಿದ್ದರು. ಸೋಮಣ್ಣ ತನ್ನ ಇಬ್ಬರ ಹೆಣ್ಣುಮಕ್ಕಳ ಮದುವೆ ಮಾಡಲು ಬೇರೆ ಬೇರೆ ಜಮೀನ್ದಾರರಿಂದ ಸಾಲ ಪಡೆದು ಅದಕ್ಕೆ ಬಡ್ಡಿ ಕಟ್ಟುತ್ತಿದ್ದರು. ಇದೀಗ ಲಾಕ್‍ಡೌನ್ ಬಂದ ನಂತರ ಬಡ್ಡಿಕಟ್ಟಲು ಕೆಲಸವಿಲ್ಲ. ಅವರಿಗೆ ಇರುವುದು ಒಂದೇ ಮಾರ್ಗ ಬಡ್ಡಿಕಟ್ಟು ಇಲ್ಲಾ…ಸಾಲ ಕೊಟ್ಟವರ ತೋಟದಲ್ಲಿ ಕೆಲಸಮಾಡುವುದು ಬಿಟ್ಟರೆ ಅನ್ಯ ಮಾರ್ಗವಿಲ್ಲ. ಇತ್ತ ಕೂಲಿ ಮುರಿದುಕೊಳ್ಳುತ್ತಾರಾದರೂ, ದಿನಗೂಲಿ ಕೈಸೇರದೆ, ಹೊಟ್ಟೆಪಾಡಿನ ಸ್ಥಿತಿ ಸುಧಾರಿಸುವುದು ಕಷ್ಟವಾಗುವಷ್ಟು ಪರಿಸ್ಥಿತಿಯನ್ನು ಈ ಲಾಕ್‍ಡೌನ್ ತಂದೊಡ್ಡಿದೆ ಎನ್ನುತ್ತಾರೆ ನೆರೆಹೊರೆಯವರು. ಇಂತಹ ಸಿಕ್ಕಿನಲ್ಲಿ ಅದೆಷ್ಟೋ ಜನ ಸೋಮಣ್ಣಗಳು ಸಿಲುಕಿದ್ದಾರೆ.
2. ವಿಕಲಚೇತನರಾದ ಅಮ್ರೀನ್ ಮದುವೆಯಾಗಿ ಮೂರು ಮಕ್ಕಳಾದ ನಂತರ ಗಂಡ ಆಕೆಯನ್ನು ಬಿಟ್ಟು ಹೊರಟುಹೋಗಿದ್ದಾನೆ. ಇದೀಗ ಆಕೆ ತವರು ಮನೆಗೆ ಬಂದು ಕೂತಿದ್ದಾಳೆ. ತವರು ಮನೆಯಲ್ಲಿಯೂ ಉದ್ಯೋಗವಿಲ್ಲದೆ ಮನೆ ತುಂಬ ಮಕ್ಕಳನ್ನು ಇಟ್ಟುಕೊಂಡು ಹೊಟ್ಟೆ ತುಂಬಿಸುವುದು ಕಷ್ಟವಾಗುತ್ತಿದೆ. ಮಕ್ಕಳಿಗಾದರೂ ಹಾಲು ಮತ್ತು ಊಟದ ವ್ಯವಸ್ಥೆ ಕಲ್ಪಿಸಿ ಎನ್ನುತ್ತಾರೆ ಅಮ್ರೀನ್ ತಾಯಿ.
3. ಮೂರ್ಚೆರೋಗ ಮತ್ತು ಮಾನಸಿಕ ಸಮಸ್ಯೆಯುಳ್ಳ ಫರೀದಾ, ಮದುವೆ ಬೇಡ ನಾನು ಒಂಟಿಯಾಗಿಯೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ ಎಂದು ಕಳೆದ 10 ವರ್ಷಗಳಿಂದ ಬೇರೆಯಾಗಿಯೇ ಬದುಕುತ್ತಿರುವ ಇವರಿಗೆ ಕಳೆದ ಮೂರು ತಿಂಗಳಿನಿಂದಲೂ ಪಿಂಚಣಿ ಬಂದಿಲ್ಲ. ನಾನು ನಮ್ಮ ಅಪ್ಪಮ್ಮನಿಗೆ ಭಾರವಾಗಿ ಬದುಕುತ್ತಿದ್ದೇನೆ ದಯವಿಟ್ಟು ನನಗೆ ಪಿಂಚಣಿ ಬರುವಂತೆ ಮಾಡಿ ಎಂದು ಕೇಳಿಕೊಳ್ಳುತ್ತಲೇ, ಆಹಾರ ವ್ಯವಸ್ಥೆ ಕಲ್ಪಸಿ ಎಂದು ಬೇಡಿಕೊಳ್ಳುತ್ತಾರೆ.
4. ಊರಿನ ಮುಖಂಡರ ಅಹವಾಲುಗಳು ಹೀಗಿವೆ, ಅಪರಿಚಿತ ವ್ಯಕ್ತಿಗಳ ಓಡಾಟ ನಿಂತ್ರಣಕ್ಕೆ ಪೋಲೀಸ್ ಪೋಲಿಸ್ ಗಸ್ತು ಹಾಕುವುದು. ಮತ್ತೊಬ್ಬರು ಆಶಾಕಾರ್ಯಕರ್ತೆಯನ್ನು ಒದಗಿಸುವುದು, ಆರೋಗ್ಯ ಅಧಿಕಾರಿಯನ್ನು ನೇಮಿಸುವುದು, ಸಂಚಾರಿ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸುವುದು, ಕೊರೋನಾ ತಡೆಗೆ ಸ್ಯಾನಿಟೈಸರ್, ಮಾಸ್ಕ್ ವ್ಯವಸ್ಥೆ ಮಾಡುವ ಬೇಡಿಕೆಯಿಟ್ಟರು.
5. ಸ್ವಸಹಾಯ ಮಹಿಳಾ ಸಂಘಗಳು, ಧರ್ಮಸ್ಥಳ ಸಂಘಗಳ ಮೇಲೂ ಲಾಕ್‍ಡೌನ್ ಪರಿಣಾಮ ಬೀರಿದೆ. ದುಡ್ಡುಕಟ್ಟಲು ಬ್ಯಾಂಕ್ ಸೌಲಭ್ಯವಿಲ್ಲ. ಕಷ್ಟದಲ್ಲಿ ಸಾಲ ಮಾಡೋಣವೆಂದರೇ ಅವಕಾಶವೇ ಇಲ್ಲ ಎನ್ನುತ್ತಾರೆ ಗ್ರಾಮ ನಿವಾಸಿಸುಂದ್ರಮ್ಮ.
ಗೂಳೂರು ಜನಸಾಮಾನ್ಯರ ಸ್ಥಿತಿ:
• ಗೂಳೂರು ಸಾಂಸ್ಕøತಿವಾಗಿ, ಐತಿಹಾಸಿಕವಾಗಿಯೂ ಶ್ರೀಮಂತವಾದ ಪ್ರದೇಶ ಅಲ್ಲದೇ ಹೋಬಳಿ ಕೇಂದ್ರ ಕೂಡ, ಸರ್ಕಾರಿ ಆಸ್ಪತ್ರೆ ಸೇರಿದಂತೆ ಮೂಲಭೂತ ಅಗತ್ಯತೆಗಳನ್ನು ಪೂರೈಸುವ ಭಾಗವಾಗಿದೆ. ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಈ ಊರಿನ ಕೂಲಿ ಕಾರ್ಮಿಕರಿಗೆ ಉದ್ಯೋಗವಿಲ್ಲ, ಸುತ್ತಮುತ್ತಲಿನ ಕಾರ್ಖಾನೆಗಳು, ಗುಡಿಕೈಗಾರಿಕೆಗಳು ಲಾಕ್ ಆಗಿವೆ. ಇನ್ನೂ ಆಟೋ ಚಾಲಕರಿಗೂ ಉದ್ಯೋಗವಿಲ್ಲದೆ ಪರಿಸತಪಿಸುವಂತಾಗಿ. ಎಲ್ಲಾ ಹಳ್ಳಿಗಳ ಸಮಸ್ಯೆಯೇ ಈ ಹಳ್ಳಿಗಳ ಸಮಸ್ಯೆಯೂ ಆಗಿದೆ. ಆದರೇ ಆರೋಗ್ಯ ಕೇಂದ್ರವನ್ನು ಹೊಂದಿರುವ ಗೂಳೂರಿನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ, ನರ್ಸ್‍ಗಳು ಸರಿಯಾಗಿ ಸ್ಪಂಧಿಸುವುದಿಲ್ಲ. ಶುಗರ್ ಇದ್ದವರು, ಸಣ್ಣಪುಟ್ಟ ವ್ಯತ್ಯಾಸವಾದವರಿಗೆ ಕಷ್ಟವಾಗುತ್ತಿದೆ.
• ಮೊನ್ನೆ ನನ್ನ ಮಗುವೊಂದಕ್ಕೆ ಹುಚ್ಚುನಾಯಿಕಚ್ಚಿದ್ದಕ್ಕೆ ಸರಿಯಾದ ಚಿಕಿತ್ಸೆ ದೊರೆಯಲಿಲ್ಲ. ತುಮಕೂರಿಗೆ ಹೋಗಿ ಎಂದರು, ಅಲ್ಲಿಗೆ ಹೋದರೂ ಸಿಗಲಿಲ್ಲ ಎಂದು ಆರೋಪಿಸುತ್ತಾರೆ ಗೂಳೂರು ಸರ್ಕಲ್‍ನ ತರಕಾರಿ ವ್ಯಾಪಾರಿ ಪುಟ್ಟತಾಯಮ್ಮ. ಇದು ಅನೇಕರ ಅಭಿಪ್ರಾಯವೂ ಹೌದು.
ಪರಿಣಾಮ: ?????
ನಮ್‍ಹಳ್ಳಿ ರೇಡಿಯೋ ಮತ್ತು ಕೊರೋನಾ ಸೈನಿಕರು ಗ್ರಾಮೀಣ ಸಮಸ್ಯೆಗಳ ಧ್ವನಿಮುದ್ರಿಸಿ ಜಿಲ್ಲಾಧಿಕಾರಿಗಳಿಗೆ ತಲುಪಿಸಿದ ಪರಿಣಾಮ ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂಧಿಸಿ ಆಯಾ ಪಂಚಾಯಿತಿ ಮಟ್ಟದಲ್ಲಿ ಆಯಾ ಹಳ್ಳಿಗಳಿಗೆ 10 ಜನರಿರುವ ಗ್ರಾಮಮಟ್ಟದ ಕಾರ್ಯಪಡೆಯನ್ನು ನೇಮಿಸಿ, ಅದು ಸಕ್ರಿಯವಾಗುವಂತೆ ಸೂಚಿಸಲಾಗಿದೆ.ಕೂಡಲೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಆಯಾ ಊರಿನ ಬೇಡಿಕೆಗಳಿಗೆ ಸ್ಪಂಧಿಸಿದ್ದಾರೆ.ಇದೀಗ ಊರಿನ ಟೈಲರ್‍ಗಳನ್ನು ಸಂಪರ್ಕಿಸಿ ಮಾಸ್ಕ್ ತಯಾರಿಸುವಂತೆ ಸೂಚನೆ ನೀಡಿದ್ದಾರೆ.ಅಗತ್ಯ ಬಟ್ಟೆ ಮತ್ತು ಮಾಸ್ಕ್ ಹೊಲಿಗೆ ಮಾಡುವವರಿಗೆ ಸಂಭಾವನೆ ಕೊಡುವುದಾಗಿ ತಿಳಿಸಿದ್ದಾರೆ.ಇದೀಗ ಪೋಲೀಸ್, ಆರೋಗ್ಯ ವ್ಯವಸ್ಥೆ, ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮ ಪಂಚಾಯಿತಿ ಚುನಾಯಿತಿ ಸದಸ್ಯರು ಮತ್ತು ರೆಡ್‍ಕ್ರಾಸ್ ಸಂಸ್ಥೆಯ ತಂಡ ಸಜ್ಜಾಗಿದೆ.
– ಕವಿತಾ ಕಮ್ಮನಕೋಟೆ
ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಉಪನ್ಯಾಸಕಿ. ಪರಿಸರ ಚಿಂತಕ ಸಿ. ಯತಿರಾಜು ಅವರ ಮಾರ್ಗದರ್ಶನದಲ್ಲಿ ಇದೀಗ ತುಮಕೂರು ಜಿಲ್ಲೆಯಲ್ಲಿ ಜೀವನಾಡಿ ಎಂಬ ಯುವಜನರ ಪರಿಸರ ಸಂಘ ದಲ್ಲಿ ಸಕ್ರಿಯ.