ಕೊರೋನಾದಿದಾಂಗಿ ಹೆಚ್ಚು ನ್ಯಾಯಯುತ ಸಮಾಜ ಸಾಧ್ಯವಾಗಬಹುದೇ ? : ಥಾಮಸ್ ಪಿಕೆಟ್ಟಿ ಜೊತೆ ಸಂವಾದ

ಥಾಮಸ್ ಪಿಕೆಟ್ಟಿ ಫ್ರಾನ್ಸಿನ ಅರ್ಥಶಾಸ್ತ್ರಜ್ಞ. ಅವರ ಮೊದಲದ ಪುಸ್ತಕ “Capital in the Twenty-First Century” (2013) ದೊಡ್ಡ ಸಂಚಲನವನ್ನು ಉಂಟುಮಾಡಿತ್ತು. ಜಗತ್ತಿನಾದ್ಯಂತ ಅವರ ವಾದದ ಸಮರ್ಥಕರ ದಂಡೇ ಇದೆ. ಈಗ ಅವರ ಸಾವಿರ ಪುಟಗಳ “Capital and Ideology”(2019) ಪುಸ್ತಕ ಬಿಡುಗಡೆಯಾಗಿದೆ. ಅಸಮಾನತೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿರುವ ಅವರು ಈ ಪುಸ್ತಕದಲ್ಲಿ ಒಂದು ಸಾವಿರ ವರ್ಷಗಳ ಅಸಮಾನತೆಯ ಇತಿಹಾಸವನ್ನು ದಾಖಲು ಮಾಡಲು ಪ್ರಯತ್ನಿಸಿದ್ದಾರೆ. ಗಾರ್ಡಿಯನ್ ಪತ್ರಿಕೆಗೆ ನೀಡಿರುವ ಈ ಸಂದರ್ಶನದಲ್ಲಿ ಕೊರೋನಾ ಪಿಡುಗು ನ್ಯಾಯಯುತವಾದ ಹೆಚ್ಚು ಸಮಾನವಾದ ಒಂದು ಸಮಾಜದ ನಿರ್ಮಾನಕ್ಕೆ ಅವಕಾಶ ಮಾಡಿಕೊಡಬಹುದೇ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಚಾರಿತ್ರಿಕವಾಗಿ ನೋಡಿದಾಗ ಈ ಪಿಡುಗು ಹೇಗೆ ಕಾಣುತ್ತದೆ?

ಏನೂ ಕ್ರಮ ತೆಗೆದುಕೊಳ್ಳದೇ ಹೋದರೆ ಈ ಪಿಡುಗಿನಿಂದ ಪ್ರಪಂಚದಲ್ಲಿ ಅತಿ ಅಂದರೆ 40 ಮಿಲಿಯನ್ ಜನ ಸಾಯಬಹುದು. 1918ರ ಫ್ಲೂ ಪಿಡುಗಿನಲ್ಲಿ ಇದರ ಮೂರುಪಟ್ಟು ಜನ ಸತ್ತಿದ್ದರು. ಅಂದಿನ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಈ ಲೆಕ್ಕಾಚಾರ ಮಾಡಲಾಗಿದೆ. ಆದರೆ ಪಿಡುಗಿನ ಲೆಕ್ಕಾಚಾರ ಮಾಡುವಾಗ ನಾವು ಅಸಮಾನತೆಯನ್ನು ಗಣನಗೆ ತೆಗೆದುಕೊಳ್ಳುತ್ತಿಲ್ಲ. ಪಿಡುಗಿನ ಪರಿಣಾಮ ಎಲ್ಲಾ ಸಾಮಾಜಿಕ ಗುಂಪುಗಳ ಮೇಲೆ ಒಂದೇ ರೀತಿಯಲ್ಲಿ ಆಗುವುದಿಲ್ಲ. ಹಾಗೆಯೇ ಎಲ್ಲಾ ರಾಷ್ಟ್ರಗಳ ಮೇಲೂ ಅದರ ಪರಿಣಾಮ ಭಿನ್ನವಾಗಿಯೇ ಇರುತ್ತದೆ. ಶ್ರೀಮಂತರ ರಾಷ್ಟ್ರಗಳ ಮೇಲೆ ಅದರ ಪರಿಣಾಮ ಬಡ ರಾಷ್ಟ್ರಗಳ ಮೇಲೆ ಆಗುವುದಕ್ಕಿಂತ ಭಿನ್ನವಾಗಿರುತ್ತದೆ. 1918ರ ಫ್ಲೂನಲ್ಲಿ ಇದನ್ನು ಗಮನಿಸಬಹುದು. ಅಮೇರಿಕೆ ಹಾಗೂ ಯೂರೋಪಿನಲ್ಲಿ ಈ ಪಿಡುಗಿನಿಂದ ಶೇಕಡ 0.5ರಿಂದ ಶೇಕಡ 1ರವರಗೆ ಜನ ಸತ್ತರು. ಆದರೆ ಭಾರತದಲ್ಲಿ ಹಾಗೆ ಸತ್ತವರ ಸಂಖ್ಯೆ ಶೇಕಡ 6ರಷ್ಟು ಇತ್ತು. ಈ ಪಿಡುಗಿನಲ್ಲೂ ಅದರ ಪರಿಣಾಮದಲ್ಲಿ ತೀವ್ರ ಅಸಮಾನತೆಯನ್ನು ನೋಡಬಹುದು. ಲಾಕ್‍ಡೌನ್ ಪರಿಣಾಮ ದೊಡ್ಡ ಅಪಾರ್ಟಮೆಂಟಿನಲ್ಲಿರುವವರಿಗೂ ಮನೆಯೇ ಇಲ್ಲದ ನಿರ್ಗತಿಕರಿಗೂ ಒಂದೇ ರೀತಿಯಲ್ಲಿ ಇರುವುದಕ್ಕೆ ಸಾಧ್ಯವಿಲ್ಲ.

1918ಕ್ಕೆ ಹೋಲಿಸಿದರೆ ಪಾಶ್ಚಾತ್ಯ ದೇಶಗಳಲ್ಲಿ ಈಗ ಹೆಚ್ಚು ಅಸಮಾನತೆ ಹೆಚ್ಚಿದೆ ಅನ್ನಿಸುತ್ತದೆಯೇ?

ಇಂದು ನಾವು ನೋಡುತ್ತಿರುವ ಅಸಮಾನತೆ ಒಂದು ಶತಮಾನದ ಹಿಂದಕ್ಕೆ ಹೋಲಿಸಿದರೆ ತುಂಬಾ ಕಡಿಮೆ. ಒಂದರ್ಥದಲ್ಲಿ ಇದು ನನ್ನ ಮೆಸೇಜ್. ನಾನು ತುಂಬಾ ಆಶಾವಾದಿ. ನಾನು ಹೇಳುತ್ತಿರುವ ಕಥೆ ಧೀರ್ಘಾವದಿಯಲ್ಲಿನ ಒಂದು ಕಲಿಕೆಯ ಕಥೆ, ಒಂದು ಪ್ರಗತಿಯ ಕಥೆ. ಈ ಪ್ರಗತಿ ಸಾಧ್ಯವಾಯಿತು ಯಾಕೆಂದರೆ, ರಾಜಕೀಯ ಹಾಗೂ ಬೌದ್ಧಿಕ ಸಾಮಾಜಿಕ ಭದ್ರತೆಯನ್ನು, ಪ್ರಗತಿಪರ ತೆರಿಗೆ ವ್ಯವಸ್ಥೆಯನ್ನು ಸ್ಥಾಪಿಸುವುದಕ್ಕೆ ಸಾಧ್ಯವಾಯಿತು. ನಮ್ಮ ಆಸ್ತಿಯ ವ್ಯವಸ್ಥೆಯನ್ನು ಮಾರ್ಪಡಿಸುವುದಕ್ಕೆ ಬೇಕಾದ ರಾಜಕೀಯ ಹಾಗೂ ಬೌದ್ಧಿಕ ಚಳುವಳಿ ನಡೆಯಿತು. ಹಾಗಾಗಿ ಪ್ರಗತಿ ಸಾಧ್ಯವಾಯಿತು.
ಆಸ್ತಿ ಅನ್ನೋದು 19ನೇ ಶತಮಾನದಲ್ಲಿ ಪರಮಪವಿತ್ರವಾದ ಕಲ್ಪನೆಯಾಗಿತ್ತ್ತು. ಆದರೆ ಅದು ಕ್ರಮೇಣ ತನ್ನ ಪಾವಿತ್ರತೆಯನ್ನು ಕಳೆದುಕೊಂಡಿತು. ಇಂದು ಮಾಲೀಕರ, ಕೆಲಸಗಾರರ, ಬಳಕೆದಾರರ ಹಾಗೂ ಸ್ಥಳೀಯ ಸರ್ಕಾರಗಳ ಹಕ್ಕುಗಳ ಬಗ್ಗೆ ಒಂದು ಉತ್ತಮ ಸಮತೋಲನ ಸಾಧ್ಯವಾಗಿದೆ. ಆಸ್ತಿಯನ್ನು ಕುರಿತ ನಮ್ಮ ಗ್ರಹಿಕೆ ಸಂಪೂರ್ಣ ಬದಲಾಗಿದೆ. ಜೊತೆಗೆ ನಮಗೆ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದೆ.

ಆದರೆ ಅಸಮಾನತೆ ಅನ್ನುವುದು 1980ಕ್ಕೆ ಹೋಲಿಸಿದರೆ ಈಗ ಹೆಚ್ಚಾಗಿದೆ. ಇದನ್ನು ಸರಿಪಡಿಸಬೇಕು ಅಲ್ಲವೇ?

ಹೌದು, ಈ ಬಿಕ್ಕಟ್ಟಿಗೆ ಪರಿಹಾರ ಅಂದರೆ, ಸಾಮಾಜಿಕ ಪ್ರಭುತ್ವವನ್ನು ಜಗತ್ತಿನ ಉತ್ತರದಲ್ಲಿ ಮರುಸ್ಥಾಪಸಿಸುವುದಕ್ಕೆ ಸಾಧ್ಯವಾಗಬೇಕು. ಮತ್ತು ಜಗತ್ತಿನ ದಕ್ಷಿಣದಲ್ಲಿ ಅದರ ಬೆಳವಣಿಗೆಯನ್ನು ತೀವ್ರಗೊಳಿಸಬೇಕು. ಈ ಹೊಸ ಸಾಮಾಜಿಕ ಪ್ರಭುತ್ವವು ಒಂದು ನ್ಯಾಯಯುತವಾದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಒಂದು ಅಂತರರಾಷ್ಟ್ರೀಯ ಹಣಕಾಸು ರಿಜಿಸ್ಟ್ರರನ್ನು ತಯಾರಿಸಬೇಕು. ದೊಡ್ಡ ಶ್ರೀಮಂತ ಉದ್ದಿಮೆಗಳು ಅದರಲ್ಲಿ ಸೇರಬೇಕು. ಈಗ ಚಾಲ್ತಿಯಲ್ಲಿರುವ ಬಂಡವಾಳದ ಮುಕ್ತ ಚಲಾವಣೆಯ ವ್ಯವಸ್ಥೆ 1980 ಮತ್ತು 90ರಲ್ಲಿ ಜಾರಿಗೆ ಬಂದಿದೆ. ಅದು ಶ್ರೀಮಂತ ರಾಷ್ಟ್ರಗಳ ಅದರಲ್ಲೂ ವಿಶೇಷವಾಗಿ ಯುರೋಪಿನ ಪ್ರಭಾವದಿಂದ ಜಾರಿಗೆ ಬಂದಿದೆ. ಅದರಲ್ಲಿ ಮಿಲಿಯನೇರುಗಳು ಮತ್ತು ಬಹುರಾಷ್ಟ್ರೀಯ ಉದ್ದಿಮೆಗಳು ತಪ್ಪಿಸಿಕೊಂಡು ಬಿಡಬಹುದು. ಜೊತೆಗೆ ಬಡದೇಶಗಳಿಗೆ ನ್ಯಾಯಯುತವಾದ ಒಂದು ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಒಂದು ಸಾಮಾಜಿಕ ಪ್ರಭುತ್ವವನ್ನು ಕಟ್ಟುವುದಕ್ಕೆ ಬೇಕಾದ ಸಾಮಥ್ರ್ಯವು ಅವುಗಳಿಗೆ ಇರುವುದಿಲ್ಲ.

ಕ್ಯಾಪಿಟಲ್ ಅಂಡ್ ಐಡಿಯಾಲಜಿ ಪುಸ್ತಕದಲ್ಲಿ ನೀವು ಯುದ್ಧಗಳು ಹಾಗೂ ಸಾಂಕ್ರಮಿಕಗಳಂತಹ ಹೊಡೆತಗಳು ಅಸಮಾನತೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಹೇಗೆ ಒತ್ತಡ ತರಬಲ್ಲವು ಅನ್ನುವುದನ್ನು ವಿವರಿಸಿದ್ದೀರಿ. ಹಾಗೆಯೇ ತೀವ್ರವಾದ ಅಸಮಾನತೆ ಅಂತಹ ಶಾಕ್‍ಗಳನ್ನೂ ಪ್ರೇರೇಪಿಸುವ ಸಾಧ್ಯತೆಯೂ ಇರಬಹುದೇ? ಅಂದರೆ ಅಸಮಾನತೆಗೆ ದೀರ್ಘಾವಧಿಯಲ್ಲಿ ತನ್ನಷ್ಟಕ್ಕೆ ಸರಿಪಡಿಸಿಕೊಳ್ಳುವ ಸಾಧ್ಯತೆ ಇದೆಯೇ?

ಹೌದು ಆ ಥರದ್ದು ಏನೋ ಇದೆ ಎಂದು ತೋರುತ್ತದೆ. ಯುದ್ಧಪೂರ್ವ ಐರೋಪ್ಯ ದೇಶಗಳಲ್ಲಿ ಇದ್ದಂತಹ ತೀವ್ರವಾದ ಅಸಮಾನತೆ ಎರಡು ಜಾಗತಿಕ ಯುದ್ಧಗಳಿಗೆ ಬಹುಪಾಲು ಕಾರಣ ಎಂದು ನಾನು ನಾನು ನನ್ನ ಪುಸ್ತಕದಲ್ಲಿ ಪ್ರತಿಪಾದಿಸಿದ್ದೇನೆ. ಆ ರಾಷ್ಟ್ರಗಳು ವಸಾಹತುಶಾಹಿ ಆಸ್ತಿಯನ್ನು ಕ್ರೋಢೀಕರಿಸಿಕೊಂಡಿದ್ದರ ಫಲವಾಗಿ ದೇಶದೊಳಗೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸಮಾನತೆ ತೀವ್ರಗೊಂಡಿತ್ತು. ಅಸಮಾನತೆ ಹಾಗೇ ಮುಂದುವರಿಯುವುದು ಸಾಧ್ಯವಿರಲಿಲ್ಲ. ಅದರಿಂದ ಸಮಾಜ ದಂಗೆ ಎದ್ದವು. ಈ ವಿರೋಧ ಮೊದಲ ಜಾಗತಿಕ ಯುದ್ಧ, ರಷ್ಯಾದ ಕ್ರಾಂತಿ, 1918ರ ಪಿಡುಗು ಹೀಗೆ ಹಲವು ರೀತಿಯಲ್ಲಿ ಕಾಣಿಸಿಕೊಂಡಿತು. ಆ ಪಿಡುಗು ಸಮಾಜದ ಬಡ ಸಮುದಾಯದವರನ್ನು ತೀವ್ರವಾಗಿ ಕಾಡಿಸಿತು. ಈ ಎಲ್ಲಾ ಕ್ರೋಢೀಕೃತ ಶಾಕ್‍ಗಳ ಪರಿಣಾಮ ಅಂದರೆ ಮುಂದಿನ ಅರ್ಧಶತಮಾನದಲ್ಲಿ ಅಸಮಾನತೆ ಕಡಿಮೆಯಾಯಿತು.

ಪಿಡುಗಿನಿಂದ ಅಸಮಾನತೆ ಕಡಿಮೆಯಾಗುವ ಪ್ರಕ್ರಿಯೆಗೆ ನೀವು 14ನೇ ಶತಮಾನದ ಪ್ಲೇಗ್ ಮಾರಿಯನ್ನು ಉದಾಹರಣೆಯನ್ನಾಗಿ ಕೊಡುತ್ತೀರಿ. ಪ್ಲೇಗ್ ಮಾರಿಯ ನಂತರ ಏನಾಯಿತು?

ಜಮೀನ್ದಾರೀ ಪದ್ಧತಿ ಹೆಚ್ಚು ಕಡಿಮೆ ಕೊನೆಗೊಂಡದ್ದು ಪ್ಲೇಗ್ ಪಿಡುಗಿನಿಂದಲೇ ಅಂತ ಒಂದು ದೊಡ್ಡ ಸಿದ್ದಾಂತವೇ ಇದೆ. ಆಗ ಶೇಕಡ 50ರಷ್ಟು ಜನ ಕೆಲವು ಪ್ರಾಂತ್ಯಗಳಲ್ಲಿ ನಿರ್ನಾಮವಾಗಿ ಹೋಗಿಬಿಟ್ಟರು. ಕೆಲಸಗಾರರ ಕೊರತೆ ತೀವ್ರವಾಯಿತು. ಹಾಗಾಗಿ ಉಳಿದಿದ್ದ ಕೆಲಸಗಾರರಿಗೆ ಉತ್ತಮ ಹಕ್ಕುಗಳು ಮತ್ತು ಸ್ಥಾನಮಾನಕ್ಕೆ ಒತ್ತಾಯಿಸುವುದಕ್ಕೆ, ಪಡೆದುಕೊಳ್ಳುವುದಕ್ಕೆ ಸಾಧ್ಯವಾಯಿತು ಅನ್ನುವುದು ಅವರ ವಾದ. ಆದರೆ ವಾಸ್ತವ ಅದಕ್ಕಿಂತ ಸಂಕೀರ್ಣವಾಗಿದೆ. ಕೂಲಿಯವರ ಕೊರತೆಯಿಂದಾಗಿ ಭೂಮಾಲಿಕರಿಗೆ ಅವರು ತುಂಬಾ ಅಮೂಲ್ಯವೆನಿಸಿಬಿಟ್ಟರು. ಹಾಗಾಗಿ ಉಳಿದಿದ್ದ ಕಾರ್ಮಿಕರನ್ನು ಬಲವಂತವಾಗಿ ನಿಯಂತ್ರಿಸುವುದಕ್ಕೆ ಭೂಮಾಲೀಕರನ್ನು ಅದು ಪ್ರೇರೇಪಿಸಿತು. ಪಿಡುಗು, ಯುದ್ಧಗಳು ಅಥವಾ ಆರ್ಥಿಕ ಬಿಕ್ಕಟ್ಟುಗಳು ಇವೆಲ್ಲಾ ಸಮಾಜದ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. ಆದರೆ ಅಂತಹ ಪರಿಣಾಮದ ಸ್ವಭಾವ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಅದು ಚರಿತ್ರೆಯನ್ನು, ಸಮಾಜವನ್ನು, ಅಧಿಕಾರವನ್ನು ಕುರಿತಂತೆ ಜನರ ನಂಬಿಕೆಗಳನ್ನು ಅವಲಂಬಿಸಿರುತ್ತದೆ. ಅಂದರೆ ಜನರ ಸಿದ್ಧಾಂತವನ್ನು ಅವಲಂಬಿಸಿರುತ್ತದೆ. ಸಮಾಜ ಸಮಾನತೆಯ ಹಾದಿಯಲ್ಲಿ ಸಾಗಬೇಕಾದರೆ ಅದಕ್ಕೆ ದೊಡ್ಡ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆ ಬೇಕಾಗುತ್ತದೆ.

ಈ ಪಿಡುಗು ನೀವು ಪ್ರತಿಪಾದಿಸುವ ಮಾದರಿಯ ಪಾಲ್ಗೊಳ್ಳುವಿಕೆಯ ಸಮಾಜವಾದದ ಕಡೆಗೆ ನಮ್ಮನ್ನು ಒಯ್ಯಬಹುದು ಅನ್ನಿಸುತ್ತದೆಯೇ?

ಅದನ್ನು ಹೇಳುವುದಕ್ಕೆ ಇದು ತುಂಬಾ ಬೇಗ ಆಗುತ್ತದೆ. ಪಿಡುಗುಗಳು ರಾಜಕೀಯ ಸಂಘಟನೆ ಮತ್ತು ಚಿಂತನೆಯ ಮೇಲೆ ತೀರಾ ವಿರೋಧಾತ್ಮಕವಾದ ಪರಿಣಾಮಗಳನ್ನು ಉಂಟುಮಾಡಬಹುದು. ಆದರೆ ಈ ಪಿಡುಗು ಕನಿಷ್ಠ ಆರೋಗ್ಯ ರಕ್ಷಣೆಯ ಮೇಲೆ ಸಾರ್ವಜನಿಕ ಹೂಡಿಕೆಗೆ ಒಂದು ಸಮರ್ಥನೆಯನ್ನು ಒದಗಿಸಬಹುದು. ಆದರೆ ಅದು ತೀರಾ ವ್ಯತಿರಿಕ್ತವಾದ ಪರಿಣಾಮವನ್ನೂ ಉಂಟುಮಾಡಬಹುದು. ಉದಾಹರಣೆಗೆ ಚಾರಿತ್ರಿಕವಾಗಿ ನೋಡಿದಾಗ ಪಿಡುಗು ಪರಕೀಯರನ್ನು ದ್ವೇಷಿಸುವಂತೆ ಮತ್ತು ದೇಶಗಳೊಳಗೇ ಪರಿಹಾರ ಹುಡುಕುವುದಕ್ಕೆ ಪ್ರೇರೇಪಿಸಿರುವುದು ಕಂಡುಬರುತ್ತದೆ. ಫ್ರಾನ್ಸಿನಲ್ಲಿ ಬಲಪಂಥೀಯ ರಾಜಕಾರಣಿಯಾದ ಮಾರಿನ್ ಲೆ ಪೆನ್ ಯುರೋಪಿಯನ್ ಯೂನಿಯನ್ ಒಳಗೆ ನಾವು ಮುಕ್ತವಾಗಿ ಚಲಿಸುವುದಕ್ಕೆ ಈಗಲೇ ಪ್ರಾರಂಭಿಸಿಬಿಡಬಾರದು ಅಂತ ಹೇಳಿದ್ದಾನೆ. ಬೇರೆ ಪ್ರಾಂತ್ಯಗಳಿಗಿಂತ ಯುರೋಪಿನಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿಬಿಟ್ಟರೆ ಟ್ರಂಪ್ ಹಾಗೂ ಲಿ ಪೆನ್ ಪ್ರಾತಿಪಾದಿಸುತ್ತಿರುವ ಐರೋಪ್ಯ ವಿರೋಧಿ ಕಥನದ ಸೆಳೆತ ಹೆಚ್ಚಾಗಬಹುದು.

ಸಾರ್ವಜನಿಕ ಸಾಲದ ಬಗ್ಗೆ ಏನನ್ನಿಸುತ್ತದೆ? ಈ ಪಿಡುಗಿನಿಂದಾಗಿ ಅದು ತುಂಬಾ ಜಾಸ್ತಿಯಾಗುತ್ತಿದೆ. ಅದನ್ನು ನಿಯಂತ್ರಿಸಲು ಸರ್ಕಾರಗಳು ಕ್ರಮತೆಗೆದುಕೊಳ್ಳುವ ಸಾಧ್ಯತೆ ಇದೆಯಲ್ಲವೇ?

ಹೌದು ಹಾಗೆ ಆಗುವ ಸಾಧ್ಯತೆ ಹೆಚ್ಚು. ನಮ್ಮ ಐರೋಪ್ಯ ದೇಶಗಳಲ್ಲಿ ಹಾಗೂ ಅಮೇರಿಕೆಯಲ್ಲಿ ಆದಂತೆ ಸಾರ್ವಜನಿಕ ಸಾಲ ತುಂಬಾ ಹೆಚ್ಚಾದಾಗ ಅಸಂಪ್ರದಾಯಿಕ ಪರಿಹಾರಗಳು ಅನಿವಾರ್ಯವಾಗುತ್ತವೆ. ಯಾಕೆಂದರೆ ಮರುಪಾವತಿ ಕಷ್ಟವಾಗುತ್ತದೆ ಮತ್ತು ನಿಧಾನವಾಗುತ್ತದೆ. ಅದಕ್ಕೂ ಚರಿತ್ರೆಯಲ್ಲಿ ನಿಮಗೆ ಹೇರಳವಾಗಿ ಉದಾಹರಣೆಗಳು ಸಿಗುತ್ತವೆ. 19ನೇ ಶತಮಾನದಲ್ಲಿ ಬ್ರಿಟನ್ ಸಾಲದ ಹೊರೆ ಜಾಸ್ತಿಯಾಗಿತ್ತು. ಮೇಲ್ವರ್ಗದ ಬಾಂಡ್‍ಹೋಲ್ಡರ್ಸ್‍ಗಳಿಗೆ ಮರುಪಾವತಿ ಮಾಡುವುದಕ್ಕೆ ಅದು ಕೆಳ ಮಧ್ಯಮವರ್ಗದ ಜನರ ಮೇಲೆ ತೆರಿಗೆ ವಿಧಿಸಿತು. 19ನೇ ಶತಮಾನದ ಮೊದಲಲ್ಲಿ ಅದು ಸಾಧ್ಯವಾಯಿತು. ಯಾಕೆಂದರೆ ಆಗ ಶ್ರೀಮಂತರಷ್ಟೇ ಮತ ಚಲಾಯಿಸುತ್ತಿದ್ದರು.

ಈಗ ಅದು ಸಾಧ್ಯವಿಲ್ಲ. ಎರಡನೆಯ ಜಾಗತಿಕ ಯುದ್ಧದ ನಂತರ ಜರ್ಮನಿ ಮತ್ತು ಜಪಾನ್ ಬೇರೆ ಪರಿಹಾರ ಕಂಡುಕೊಂಡಿತು. ನನಗೆ ಅದು ಉತ್ತಮ ಪರಿಹಾರ ಅನ್ನಿಸುತ್ತದೆ. ಅವರು ತಾತ್ಕಾಲಿಕವಾಗಿ ಶ್ರೀಮಂತರ ಮೇಲೆ ತೆರಿಗೆ ವಿಧಿಸಿದರು. ಅದು ಅನುಕೂಲವಾಯಿತು. 1950ರ ಮಧ್ಯ ಭಾಗದಿಂದ ಸಾರ್ವಜನಿಕ ಸಾಲವಿಲ್ಲದೆ ವ್ಯವಸ್ಥೆಯ ಮರು ನಿರ್ಮಾಣ ಸಾಧ್ಯವಾಯಿತು. ಅವಶ್ಯಕತೆ ನಿಮ್ಮನ್ನು ಅನ್ವೇಷಣೆಗೆ ದೂಡುತ್ತದೆ. ಉದಾಹರಣೆಗೆ ಯುರೋಜೋನ್ ಅನ್ನು ರಕ್ಷಿಸುವುದಕ್ಕೆ ಐರೋಪ್ಯ ಕೇಂದ್ರ ಬ್ಯಾಂಕ್ ತನ್ನ ಸದಸ್ಯ ರಾಷ್ಟ್ರಗಳ ಸಾಲದ ಹೆಚ್ಚಿನ ಹೊರೆಯನ್ನು ಹೊತ್ತುಕೊಳ್ಳಬಹುದು. ನೋಡೋಣ ಏನಾಗುತ್ತದೆ.

ಅದರಿಂದ ಯುರೋಪಿಯನ್ ಯುನಿಯನ್ ಮಾರ್ಪಾಡಾಗಬಹುದು?

ನಾವು ಪರಿಹರಿಸಲೇ ಬೇಕಾದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಬಿಕ್ಕಟ್ಟನ್ನು ಅವಲಂಬಿಸಬಾರದು. ಅದರೆ ಅದು ಬದಲಾವಣೆಯನ್ನು ಪ್ರೇರೇಪಿಸಬಹುದು. ಬ್ರೆಕ್ಸಿಟ್‍ನಿಂದಾಗಿ ಯುರೂಪಿಯನ್ ಯೂನಿಯನ್ ಒಡೆಯಲು ಪ್ರಾರಂಭವಾಯಿತು. ಬಡವರು ರಾಷ್ಟ್ರೀಯವಾದಿಗಳು ಅನ್ನುವ ಬ್ರೆಕ್ಸಿಟ್ ವಾದ ತುಂಬಾ ಪೇಲವವಾದದ್ದು. ಯಾವುದೇ ಸಾಮಾಜಿಕ ಉದ್ದೇಶಗಳಿಲ್ಲದೆ ಕೇವಲ ಮುಕ್ತ ವ್ಯಾಪಾರ ಹಾಗು ಒಂದು ಕರೆನ್ಸಿಯನ್ನಷ್ಟೇ ಇಟ್ಟುಕೊಂಡು ಹೊರಟರೆÉ ಕೊನೆಗೆ ಬಂಡವಾಳದ ಮುಕ್ತ ಚಲನೆಯಿಂದ ತೀರಾ ಚಲನಶೀಲ ಹಾಗೂ ಶ್ರೀಮಂತ ಜನರಿಗೆ ಅನುಕೂಲವಾಗುತ್ತದೆ. ಮಧ್ಯಮ ಹಾಗೂ ಕೆಳವರ್ಗದ ಜನ ಹೊರಗುಳಿಯುತ್ತಾರೆ. ಮುಕ್ತವಾದ ಚಲನೆಯನ್ನು ಉಳಿಸಿಕೊಳ್ಳಬೇಕಾದರೆ ಅದರ ಜೊತೆಗೆ ಒಂದು ಸಮಾನ ತೆರಿಗೆ ಹಾಗೂ ಸಮಾನ ಸಾಮಾಜಿಕ ನೀತಿಯೂ ಇರಬೇಕು. ಆರೋಗ್ಯ ಹಾಗೂ ಶಿಕ್ಷಣಕ್ಕೆ ಎಲ್ಲಾ ಸದಸ್ಯ ರಾಷ್ಟ್ರಗಳು ಬಂಡವಾಳ ಹೂಡುವುದು ಆ ನೀತಿಯ ಭಾಗವಾಗಬೇಕು. ಇದಕ್ಕೂ ಚರಿತ್ರೆಯಲ್ಲಿ ಉದಾಹರಣೆಗಳಿವೆ. ದೇಶದೊಳಗೆ ಒಂದು ಕಲ್ಯಾಣ ರಾಜ್ಯವನ್ನು ಕಟ್ಟುವುದು ಆ ಕಾಲದಲ್ಲಿ ಒಂದು ದೊಡ್ಡ ಸವಾಲಾಗಿತ್ತು. ಅದೊಂದು ದೊಡ್ಡ ರಾಜಕೀಯ ಸಮರವಾಗಿತ್ತು. ಶ್ರೀಮಂತರು ಹಾಗೂ ಬಡವರು ಒಂದು ಒಪ್ಪಂದಕ್ಕೆ ಬರಬೇಕಾಯಿತು. ಅದನ್ನು ದೇಶಗಳಾಚೆಗೆ ಮಾಡುವುದು ಸುಲಭವಾಗಬಹುದು. ಪ್ರಾರಂಭದಲ್ಲಿ ಕೆಲವು ರಾಷ್ಟ್ರಗಳಷ್ಟೇ ಸೇರಿಕೊಂಡು ಪ್ರಾರಂಭಿಸಬೇಕಾಗಬಹುದು. ಅನಂತರ ಒಪ್ಪಿಗೆಯಾದರೆ ಉಳಿದ ರಾಷ್ಟ್ರಗಳೂ ಸೇರಿಕೊಳ್ಳಬಹುದು. ಐರೋಪ್ಯ ಸಂಘಟನೆಯನ್ನು ಒಡೆಯದೆಯೇ ಇದನ್ನು ಸಾಧಿಸಬಹುದು. ಅಂತಿಮವಾಗಿ ಬ್ರಿಟನ್ ವಾಪಸ್ಸು ಬರುತ್ತದೆ ಅಂತ ನಿರೀಕ್ಷಿಸುತ್ತೇನೆ.

ಈ ಬಿಕ್ಕಟ್ಟಿನ ನಂತರ ಅ-ಜಾಗತೀಕರಣವಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿದೆ. ಎನಾಗಬಹುದು?

ಕೆಲವು ಕ್ಷೇತ್ರಗಳಲ್ಲಿ ಇದು ಆಗಬಹುದು ಅನ್ನಿಸುತ್ತದೆ. ಉದಾಹರಣೆಗೆ ಔಷಧಿಯ ಪೂರೈಕೆಗೆ ಸಂಬಂಧಿಸಿದಂತೆ. ಮುಂದಿನ ಪಿಡುಗಿಗೆ ನಾವು ಇನ್ನೂ ಹೆಚ್ಚು ಸಿದ್ದರಾಗಬೇಕೆಂಬ ಕಾರಣಕ್ಕೆ ಇದು ಆಗಬಹುದು. ಎಲ್ಲಾ ಕಡೆಯೂ ಇದು ಸಾಧ್ಯವಾಗಬೇಕಾದರೆ ಅದಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ. ಸಧ್ಯಕ್ಕೆ ನಮ್ಮ ಸೈದ್ಧಾಂತಿಕ ಆಯ್ಕೆ ಅಂದರೆ ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಯಾವುದೇ ತೆರಿಗೆಯೂ ಇರಬಾರದು (0%) ಅನ್ನುವುದು. ಯಾಕೆಂದರೆ ನಮಗೆ ಇರುವ ಗಾಬರಿ ಅಂದರೆ ಎಲ್ಲರೂ ತೆರಿಗೆ ಏರಿಸುತ್ತಾ ಹೋದರೆ ಅದಕ್ಕೆ ಕೊನೆ ಎಲ್ಲಿ? ಅದು 19ನೇ ಶತಮಾನದಲ್ಲಿ ನಡೆದ ಆಸ್ತಿಯ ಮರುಹಂಚಿಕೆಯನ್ನು ಕುರಿತ ಚರ್ಚೆಯ ಮಾದರಿಯಲ್ಲೇ ಇದೆ. ಆಸ್ತಿಯ ಮರುಹಂಚಿಕೆಯ ಬಗ್ಗೆ ಆಗ ಜನರಿಗೆ ಅಪಾರ ಆತಂಕವಿತ್ತು. ಒಮ್ಮೆ ಇದು ಪ್ರಾರಂಭವಾಗಿಬಿಟ್ಟರೆ ಕೊನಗೆ ಎಲ್ಲಾ ಆಸ್ತಿಯನ್ನು ವಶಪಡಿಸಿಕೊಂಡುಬಿಡಬಹುದು ಎಂಬ ಗಾಬರಿ ಅವರಿಗಿತ್ತು. ಹಾಗಾಗಿ ಜನ ಆಸ್ತಿಯ ಒಡೆತನದಲ್ಲಿ ತೀವ್ರ ಅಸಮಾನತೆಯನ್ನು ಸಮರ್ಥಿಸುವುದಕ್ಕೆ ಪ್ರಾರಂಭಿಸಿದರು. ಕೊನೆಗೆ ಗುಲಾಮರ ಒಡೆತನವನ್ನೂ ಸಮರ್ಥಿಸುವ ಮಟ್ಟಕ್ಕೆ ಹೋದರು. ಇಂತಹ ವಾದ ಸಮಸ್ಯೆಯನ್ನು ಹೆಚ್ಚು ಮಾಡುತ್ತದೆ. ಇದು ಚರಿತ್ರೆಯುದ್ದಕ್ಕೂ ಎಲ್ಲಾ ಸಂಪ್ರದಾಯಸ್ಥರು ಮಾಡಿಕೊಂಡು ಬಂದಿರುವ ವಾದ. ನಾವು ಶೂನ್ಯತೆರಿಗೆ ಮನಸ್ಥಿತಿಯಿಂದ ಹೊರಬರಬೇಕು. ಆಗಷ್ಟೇ ಹವಾಮಾನ ಬದಲಾವಣೆ ಹಾಗೂ ಪಿಡುಗುಗಳಂತಹ ಜಾಗತಿಕ ಅಪಾಯಗಳಿಗೆ ಹಣ ಹೂಡಲು ಸಾಧ್ಯವಾಗುತ್ತದೆ. ತೆರಿಗೆಗೆ ಸಂಬಂಧಿಸಿದಂತೆ ಎಲ್ಲಿಗೆ ನಿಲ್ಲಿಸಬೇಕು ಅನ್ನುವುದನ್ನು ಕುರಿತಂತೆಯೂ ಒಂದು ಹೊಸ ಕಥನವನ್ನು ಕಂಡುಕೊಳ್ಳಬೇಕಾಗಿದೆ. ಹಾಗಂತ ಒಂದೇ ಪರಿಹಾರ ಅಂತ ಇರಲ್ಲ. ಇದನ್ನೂ ಚರಿತ್ರೆಯಲ್ಲಿ ನೋಡಿದ್ದೇವೆ.

ಕೃಪೆ : theguardian

ಅನುವಾದ: ಟಿ. ಎಸ್. ವೇಣುಗೋಪಾಲ್

One comment to “ಕೊರೋನಾದಿದಾಂಗಿ ಹೆಚ್ಚು ನ್ಯಾಯಯುತ ಸಮಾಜ ಸಾಧ್ಯವಾಗಬಹುದೇ ? : ಥಾಮಸ್ ಪಿಕೆಟ್ಟಿ ಜೊತೆ ಸಂವಾದ”
  1. ಚೆನ್ನಾಗಿದೆ. ಮೂರನೇ ಜಗತ್ತಿನ ರಾಷ್ಟ್ರ ಗಳ ಸಂಕಟ ಗಳ ಕುರಿತು ಮತ್ತಷ್ಟು ಹೇಳಬಹುದಾಗಿತ್ತು. ಅನುವಾದ ಅಚ್ಚುಕಟ್ಟಾಗಿದೆ.

ಪ್ರತಿಕ್ರಿಯಿಸಿ