ಜಾಹೀರಾತಿನ ಆತಂಕ, ವಾರ್ತೆಯ ಮೌನ ತುಮುಲಗಳ ನಡುವೆ ನಿಯತಕಾಲಿಕೆಯೆಂಬ ನಿರೀಕ್ಷೆ

ಜಾಹೀರಾತು! ಎಷ್ಟೊಂದು ಆಕರ್ಷಕ ಪದ. ಪದವಷ್ಟೇ ಅಲ್ಲ, ಜಾಹೀರಾತುಗಳೂ ಆಕರ್ಷಕ. ಜಾಹೀರಾತುಗಳನ್ನು ಒಳಗೊಂಡೂ ಅವುಗಳೊಂದಿಗೆ ಅಂತರವನ್ನು ಉಳಿಸಿಕೊಳ್ಳಿಸಿಕೊಳ್ಳುವುದಾಗಿ ಮಾಧ್ಯಮಗಳು ಹೇಳಿಕೊಂಡರೂ, ಅವುಗಳ ಪಾಲಿಗೆ ಜಾಹೀರಾತು ಇಂಧನವಾಗಿರುವುದನ್ನು ಯಾರೂ ಅಲ್ಲಗಳೆಯಲಾರರು. ಸುದ್ದಿ ಮತ್ತು ಜಾಹೀರಾತುಗಳ ನಡುವಣ ಗೆರೆ ಅಳಿಸಿಹೋಗುತ್ತಿದೆ ಎನ್ನುವ ಆತಂಕ ಗಾಢವಾಗುತ್ತಿರುವ ಸಂದರ್ಭದಲ್ಲಿ, ಸೃಜನಶೀಲತೆಯ ಪ್ರಯೋಗಶಾಲೆಯಲ್ಲಿ ಜಾಹೀರಾತು ಮಾಧ್ಯಮ ಹೊಸ ಹುಟ್ಟುಗಳನ್ನು ಪಡೆಯುತ್ತಲೇ ಇದೆ. ಈ ಜಾಹೀರಾಗುವ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಜೊತೆಗೆ ನಾವೂ ನೀವೂ ಒಳಗೊಂಡು, ಇಡೀ ವಿಶ್ವವೇ ಒಂದು ವರ್ಣರಂಜಿತ ಜಾಹೀರಾತಿನಂತೆ ಕಾಣಿಸುತ್ತಿದೆ.

ಪ್ರಸಂಗ 1:

“1990ರ ದಶಕದಲ್ಲಿ ಇರಾನ್ ಮತ್ತು ಇರಾಕ್ ನಡುವೆ ಯುದ್ಧ ನಡೆಯಲೇ ಇಲ್ಲ” ಎಂದು ಜೀನ್ ಬೊದ್ರಿಲಾರ್ ಬರೆದುಕೊಂಡಿದ್ದಾನೆ. ಅಲ್ಲಿ ಆಕಾಶ ಇಲ್ಲ, ಇದು ಭೂಮಿ ಅಲ್ಲ ಎಂದಂತಾಯಿತು ಬೊದ್ರಿಲಾರ್‍ನ ಮಾತು. ಆತ ಹಾಗೆ ಹೇಳಲು ಕಾರಣ ‘ನಿರೂಪಿಸಲಾಗದದ್ದು ಇತಿಹಾಸವಾಗುವುದಿಲ್ಲ’ ಎನ್ನುವುದಷ್ಟೇ. ಐಷಾರಾಮಿ ಸ್ಟಾರ್ ಹೋಟೆಲ್‍ಗಳಲ್ಲಿ ಕುಳಿದು ಮಧ್ಯಪ್ರಾಚ್ಯದ ಶೇಖ್ ಸಾಹೇಬರುಗಳು ಆ ಯುದ್ಧವನ್ನು ನೇರಪ್ರಸಾರದಲ್ಲಿ ವೀಕ್ಷಿಸುತ್ತಿದ್ದರು. ಮಾನವ ಚರಿತ್ರೆಯಲ್ಲಿ ಯುದ್ಧವೊಂದು ನೇರಪ್ರಸಾರವಾದದ್ದೂ ಅದೇ ಮೊದಲು. ಬಾಂಬಿನ ರಾಕೆಟ್ಟಿಗೆ ಅಳವಡಿಸಿದ ಕ್ಯಾಮೆರಾ ಸಂಜಯನಾಗಿ, ಶೇಖರು ಧೃತರಾಷ್ಟ್ರರಾಗಿ, ಮಧ್ಯಪ್ರಾಚ್ಯದ ಕುರುಕ್ಷೇತ್ರವು ಕ್ಯಾಮೆರಾ ದೃಷ್ಟಿಕೋನವನ್ನು ಅನುಸರಿಸಿಯೇ ನಡೆದದ್ದಾಗಿತ್ತು. ಆದ್ದರಿಂದ ಅದು ನೇರಪ್ರಸಾರದ ಕ್ರೀಡೆಯಾಗಿತ್ತೇ ವಿನಾ ಅದು ಯುದ್ಧವಲ್ಲ ಎಂದು ಬೋದ್ರಿಲಾರನ ಹೇಳಿಕೆಯನ್ನು ಅರ್ಥೈಸಬೇಕಾಗಿದೆ. ಹಿಂದೆಲ್ಲ ಕಾರಿನ ಒಡೆಯನಾಗಿರುವುದು ಅಂತಸ್ತಿನ ಸಂಕೇತವಾಗಿತ್ತು, ಈಗ ಅದು ವೇಗವಾಗಿ ಹೋಗಲು ದೇಹದ ವಿಸ್ತೃತ ಅಂಗವಷ್ಟೇ; ಅಂದು ಚಂದ್ರಮನು ನಿಗೂಢ ಕಥೆಗಳ ತಾಣವಾಗಿದ್ದಲ್ಲಿ ಇಂದು ಅದು ನಾಸಾ ಉತ್ತರಿಸಲಾಗದೇ ಹೋಗಿರುವ ಅನೇಕ ವೈಜ್ಞಾನಿಕ ವೈಫಲ್ಯ/ಸಾಫಲ್ಯಗಳ ರಾಕ್-ಸಾಲಿಡ್ ಮೊತ್ತವಷ್ಟೇ ಆಗಿಬಿಟ್ಟಿದೆ. ನಮ್ಮ ಸಹಜ ಪ್ರಜ್ಞೆಯ ಮಿತಿಯನ್ನು ಮೀರಿ, ಸುದ್ದಿಯೊಂದು ಜಾಹೀರಾಗಿರುವ ರೀತಿಯಲ್ಲಿ ಮಾತ್ರವೇ ಕಾರು, ಚಂದ್ರ, ಕೊನೆಗೆ ಅಂತಹವುಗಳನ್ನು ಒಳಗೊಂಡ ಜಗತ್ತು ಹಾಗೂ ನಮ್ಮ ಬದುಕೂ ಸಹ ವಾರ್ತಾಪತ್ರಿಕೆ ಹಾಗೂ ಜಾಹೀರಾತುಗಳ ನಡುವಣ ವಿಕ್ಷಿಪ್ತ ಸಂಬಂಧಗಳನ್ನು ಆಧರಿಸುವಂತಾಗಿಬಿಟ್ಟಿದೆ.

ಪ್ರಸಂಗ 2:

ಒಂದೇ ಒಂದು ಜಾಹೀರಾತೂ ಇಲ್ಲದೆ ಚೇತೋಹಾರಿಯಾಗಿದ್ದ, ಕರ್ನಾಟಕ ಸರ್ಕಾರಗಳ ಕಾವಲು ನಾಯಿಯಂತಿದ್ದ ಕನ್ನಡದ ವಾರಪತ್ರಿಕೆಯೊಂದು ಆಗಾಗ ಅಣ್ಣಾವ್ರ ದೊಡ್ಡ ಭಾವಚಿತ್ರಗಳನ್ನು ಮುಖಪುಟದಲ್ಲಿ ಮುದ್ರಿಸಿ, ಒಳಪುಟಗಳಲ್ಲಿ ಅವರನ್ನು ಕುರಿತಾದ, ಆಯಾ ಭಾವಚಿತ್ರಗಳಿಗಿಂತಲೂ ಪುಟ್ಟದಾದ ಸುದ್ದಿ ಪ್ರಕಟಿಸುತ್ತಿತ್ತು. ಜಾಹೀರಾತನ್ನು ಒಲ್ಲದ ಪತ್ರಿಕೆಗೂ ಅನಿವಾರ್ಯ ಮಾರಾಟದ ಸರಕಾಗಿ ರಾಜ್‍ಕುಮಾರ್ ಎಂಬ ಐಕಾನ್ ಒದಗಿಬಂದದ್ದರ ಅರ್ಥವೇನೆಂದರೆ, ಜಾಹೀರಾತಿನ ಔಪಚಾರಿಕ ಅವತಾರವನ್ನು ಒಪ್ಪದ ಮೇಧಾವಿಗಳೂ ಸಹ ಪರೋಕ್ಷವಾಗಿ ಅದಕ್ಕೆ ಬಲಿಬೀಳುವುದು ಅನಿವಾರ್ಯ ಎನ್ನುವುದು. ಸಮಕಾಲೀನ ಕಟ್ಟಡಗಳ ಗಾಜಿನ ಮೇಲೆ ರಾಜ್‍ಕುಮಾರ್ ಚಿತ್ರವಿದ್ದರೆ, ಅದನ್ನು ಒಡೆಯಬಾರದು ಎಂಬ ಸುದ್ದಿಯ ಜಾಹೀರಾತದು. ಗೋಡೆಗಳ ಅಥವ ಟೈಲ್ಸ್‍ಗಳ ಮೇಲೆ ದೇವರುಗಳ ಚಿತ್ರವಿದ್ದಲ್ಲಿ ದಯವಿಟ್ಟು ಯಾರೂ ಇಲ್ಲಿ ಪ್ರಕೃತಿಯ ಕರೆಗೆ ಓಗೊಡಬಾರದು ಎಂಬ ಎಚ್ಚರಿಕೆಯ ವಾರ್ತೆಯ ಜಾಹೀರಾತದು.

ಪ್ರಸಂಗ 3:

ಅದಾವ ಬಟನ್ ಒತ್ತಿದ್ದರೋ ಏನೋ, ನನ್ನ ಪರಿಚಿತರೊಬ್ಬರ ಮೊಬೈಲಿನಲ್ಲಿ ಸುದ್ದಿ ನೋಡೋದಲು ತೊಡಗಿದಾಗಲೆಲ್ಲ ಪೇಟ ಸುತ್ತಿದ ಜಗ-ಜ್ಜಾಹೀರಾದ ಯೋಗ ಗುರುವೊಬ್ಬರು ತಮ್ಮ ಕಂಚಿನ ಕಂಠದಲ್ಲಿ ಉಪದೇಶ ನೀಡಲು ಆರಂಭಿಸಿಬಿಡುತ್ತಿದ್ದರು. ಈ ನನ್ನ ನಾಸ್ತಿಕ, ಪರಿಚಿತ ವ್ಯಕ್ತಿಯು ಆ ಸ್ವಾಮೀಜಿಯ ಪಕ್ಕಾ ಭಕ್ತನೆಂದು ಅವರನ್ನು ಸರಿಯಾಗಿ ತಿಳಿಯದವರು ಭಾವಿಸತೊಡಗಿರುವುದರಲ್ಲಿ ಇಂತಹ ಜಾಹಿರಾತೋಪಾಯದ ಜಾಣ್ಮೆಯೇ ಅಡಗಿರುವುದು.

2

ಮೇಲಿನ ಮೂರೂ ಪ್ರಸಂಗಗಳೂ ಸಹ ಜಾಹೀರಾತಿನ ಅಮೂರ್ತ, ಅಗೋಚರ ಹಾಗೂ ಅನಿವಾರ್ಯ ಶಕ್ತಿಯ ಪ್ರತೀಕ – ಬೆಂಗಳೂರಿನ ಕಸ ಹಾಗೂ ವಾಹನದಟ್ಟಣೆಯಂತೆ. ಕನ್ನಡ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ, ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ವುಡ್‍ವಡ್ರ್ಸ್ ಗ್ರೇಪ್ ವಾಟರ್ಸ್‍ನ ಜಾಹೀರಾತಿನ ರೇಖಾಚಿತ್ರವು ಇಂದಿನ ಅನೇಕ ನುರಿತ ಕಲಾವಿದರುಗಳಾಗಿರುವವರ ಕಲಾಶಿಕ್ಷಣದ ಮೊದಲ ಪಾಠದ ಪರಿಕರವೂ ಆಗಿ ಒದಗಿಬರುತ್ತಿತ್ತು. ಇಂದಿಗೂ ಸಮಕಾಲೀನ ರಾಜಕಾರಣವನ್ನು ಪರೋಕ್ಷವಾಗಿ ಲೇವಡಿ ಮಾಡುವ ಅಮುಲ್ ಬೆಣ್ಣೆಯ ಜಾಹೀರಾತಿನ ಶಕ್ತಿ ಇರುವುದೇ ಅದರ ಮೆಲುದನಿಯ ಪಿಸುಮಾತಿನಲ್ಲಿ. ಕರ್ನಾಟಕ ಸಂದರ್ಭದ ಪತ್ರಿಕೋದ್ಯಮದ ಇತಿಹಾಸದಲ್ಲಿ ಕಳೆದರ್ಧ ಶತಮಾನದ ಜಾಹೀರಾತುಗಳನ್ನು ಸ್ಮರಿಸಿಕೊಂಡರೆ ಮೊದಲಿಗೆ ನೆನಪಾಗುವುದು, ಪತ್ರಿಕೆಯಿಲ್ಲದೆ ಜಾಹೀರಾತು ಇಲ್ಲವೆಂಬ ಜನಪ್ರಿಯ ಸುಳ್ಳು: ಸುದ್ದಿಪತ್ರಿಕೆಯಲ್ಲಿ ಸಂಪಾದಕೀಯ ವಿಭಾಗದ ಕತ್ತರಿ ಬೀಳದ ಒಂದೇ ಒಂದು ಸುದ್ದಿ ಎಂದರೆ ಅದು ಇಂದಿಗೂ ಎಂದಿಗೂ ಜಾಹೀರಾತೇ. “ಎಲ್ಲೋ ಹೇಗೋ ನಿಜವಾದ ಸತ್ಯ ಅಡಕವಾಗಿದೆ. ಅದನ್ನು ಸೂಕ್ತವಾಗಿ ಅಭಿವ್ಯಕ್ತಿಸುವ ಬರವಣಿಗೆಯೇ ಸುದ್ದಿ, ಉಳಿದ ಬರಹಗಳೆಲ್ಲವೂ ಜಾಹೀರಾತೇ” ಎಂಬುದು ಪತ್ರಿಕೋದ್ಯಮದ ವಿದ್ಯಾರ್ಥಿಗಳ ಮೊದಲ ಪಾಠವಾಗಬೇಕಿದೆ. “ಜಾಹೀರಾತು ಮೊದಲಿಗೆ ಕೊಳ್ಳುಬಾಕನನ್ನು ನೀನೊಬ್ಬ ‘ಅಪೂರ್ಣ ವ್ಯಕ್ತಿ’ ಎಂದು ನಂಬಿಸಿಬಿಡುತ್ತದೆ. ನಂತರ, ಜಾಹೀರಾದ ವಸ್ತುವನ್ನು ತನ್ನದಾಗಿಸಿಕೊಂಡಾಗ ಮಾತ್ರ ಆತ ಪೂರ್ಣ ಪ್ರಮಾಣದ, ಸುಸಂಸ್ಕೃತ ಮಾನವನೆನಿಸಿಕೊಳ್ಳುತ್ತಾನೆ” ಎಂದು 70ರ ದಶಕದಲ್ಲಿಯೇ ಬರೆದಿದ್ದ ಜಾನ್ ಬರ್ಜರ್. ಇಂದು ಜಾಹೀರಾಗದಿರುವ ಗುಣಾತ್ಮಕ ವಸ್ತುಗಳ ಸಾಮರ್ಥ್ಯವನ್ನು ಸಹ ಜನ ಅನುಮಾನದಿಂದ ನೋಡುವಂತಾಗಿಬಿಟ್ಟಿದೆ. ಹಿಂದೊಮ್ಮೆ “ವರದಕ್ಷಿಣೆ ಬೇಡವೇ ಬೇಡ” ಎನ್ನುತ್ತಿದ್ದ ಗಂಡಿಗೆ ಏನೋ ಐಬಿರಬೇಕೆಂದು ಕನ್ಯೆಯ ಮಾತಾಪಿತೃಗಳೇ ಆತನನ್ನು ನಿರಾಕರಿಸಿಬಿಡುತ್ತಿದ್ದರಲ್ಲ, ಹಾಗಾಗಿದೆ ಇದು. ಜಾಹೀರಾತಿನ ಇಂದಿನ ‘ದೊಡ್ಡಣ್ಣ’ ಎಂದರೆ ಅದು ಬ್ರಾಂಡೆಡ್ ವಸ್ತುಗಳು. “ಎಲ್ಲರ ಬಳಿ ಇರುವುದನ್ನು ಕೊಂಡಲ್ಲಿ ಅದು ದಿನಚರಿಯ ಅಗತ್ಯಕ್ಕಾಗಿ, ಸಾಮಾನ್ಯರಲ್ಲಿರದ ವಸ್ತು ಕೊಂಡಲ್ಲಿ ಅದು ನನ್ನ ಅಂತಸ್ತಿನ ಸಂಕೇತಕ್ಕಾಗಿ” ಎಂಬುದು ಬ್ರಾಂಡೆಡ್ ವಸ್ತುಗಳ ಮಾರಾಟದ ಸಾರ. ಇಂತಹ ಬ್ರಾಂಡ್ ವಸ್ತುಗಳನ್ನು ಒಳಗೊಳ್ಳುವ ಪತ್ರಿಕೆಗಳು ಮಾತ್ರ ಬ್ರಾಂಡಾತೀತವಾಗಿ ಎಲ್ಲರನ್ನೂ ತಲುಪಬೇಕು ಎಂಬ ಉದ್ದೇಶವನ್ನು ಊರ್ಜಿತಗೊಳಿಸುತ್ತವೆಯೇ ಹೊರತು, ಎಲ್ಲ ಸುದ್ದಿಗಳನ್ನೂ ಅದರ ಸಮಗ್ರತೆಯಲ್ಲಿ ಪ್ರಕಟಪಡಿಸುವ ಜಾಯಮಾನವನ್ನು ಮಾತ್ರ ಬದಿಗಿರಿಸುತ್ತಿವೆ. “ಪ್ರಕಟಿಸಿದ ಸುದ್ದಿಯಾಚೆ ಜಗತ್ತು ಇಲ್ಲವೇ ಇಲ್ಲ” ಎಂಬುದು ಎಡ-ಬಲ ಪಕ್ಷಗಳೆಂಬ ಪಕ್ಷಪಾತಕ್ಕೆ ಅತೀತವಾದ ನಿಲುವುಗಳಲ್ಲೂ ನಂಬಿಕೆ ಇರಿಸಿಕೊಂಡ ಪತ್ರಿಕೆಗಳ ಅತ್ಯಂತಿಕ ಒಪ್ಪಿತ ನಿಲುವಾಗಿದೆ. ಅಂತಹ ‘ಪ್ರಕಟಿತ ಜಗತ್ತಿಗೆ’ ಸೇರಬೇಕಾದರೆ ಓದುಗರು ಏನೇನನ್ನೆಲ್ಲ ಕೊಂಡು ತಮ್ಮದಾಗಿಸಿಕೊಳ್ಳಬೇಕೆಂದು ತಿಳಿಸುವುದೇ ಜಾಹೀರಾತು.

ಇಂದಿನ ಜಾಹೀರಾತಿನ ಬಲೆಗೆ ಸಿಲುಕಿದ ವಸ್ತುವಿನ ಗುಣಮಟ್ಟದ ಬಗ್ಗೆ ಅನುಮಾನವಿದ್ದವರೇ ಜಾಹೀರಾತು ಮಾಡುವುದರಿಂದ, ತಾನು ಜಗಜ್ಜಾಹೀರಾಗದಿದ್ದಲ್ಲಿ ತನ್ನಲ್ಲೇನೋ ತೊಡಕಿದೆ ಎಂದು ಸ್ವತಃ ಜಾಹೀರಿನ ವಸ್ತುವೇ ಭಾವಿಸತೊಡಗಿಬಿಡುತ್ತದೆ. ಧಾರವಾಡದ ಪೇಡ, ಮೈಸೂರು ಪಾಕು, ತಿಪಟೂರಿನ ತೆಂಗು ಜಾಹೀರಾತುಗಳಲ್ಲಿ ಮೆರೆದಿರುವುದನ್ನು ಎಲ್ಲಾದರೂ ನೋಡಿದ್ದೀರ? ನಿರಂತರ ಜಾಹೀರಾತಿಗೊಳಗಾಗುವ ವಸ್ತುವಿಗೆ ತನ್ನನ್ನು ಪ್ರದರ್ಶಿಸಿಕೊಳ್ಳುವುದೇ ಕಾಲಾಂತರದಲ್ಲಿ ಒಂದು ವ್ಯಸನವಾಗಿಬಿಡುತ್ತದೆ. ಜನಸಾಮಾನ್ಯನ, ಜನಪ್ರಿಯತೆಯ ಎಟುಕಿಗೆ ಈಗಾಗಲೇ ಸಿಲುಕಿರುವ ವಸ್ತುವನ್ನು ಜಾಹೀರಾತಿನ ಜಾಲದಲ್ಲಿ ಸಿಕ್ಕಿಸುವುದು ಅಸಾಧ್ಯ. ಆದ್ದರಿಂದಲೇ ಸ್ಟಾರ್ ನಟರುಗಳು ಜನಸಾಮಾನ್ಯರೊಂದಿಗೆ ಸುಲಭಕ್ಕೆ ಬೆರೆಯದ ನಟನೆ ಮಾಡುತ್ತಾರೆ – ಎಲ್ಲೆಡೆ ಕಂಡವರು ಸ್ಟಾರ್ ಆದಾರು, ಆದರೆ ಯಾವಾಗಲೂ ಲಭ್ಯವಿರುವವರಿಗೆ ಆ ಭಾಗ್ಯವಿರುವುದಿಲ್ಲ. ‘ಥ್ಯಾಂಕ್ಸ್ ಗೀವಿಂಗ್’ ಎಂದು ಪ್ರಜಾವಾಣಿಯಲ್ಲಿ ಪ್ರಕಟವಾಗುತ್ತಿದ್ದ ಮಾತೆ ಮೇರಿಯ ಒಂದೇ ಚಿತ್ರವು, ಹತ್ತಾರು ಬಾರಿ ಪುನರಾವರ್ತನೆಗೊಂಡು ಅಕ್ಕಪಕ್ಕದಲ್ಲೇ ಪ್ರಕಟವಾಗುತ್ತಿದ್ದ ಜಾಹೀರಾತುಗಳ ನೆನಪಿರಬೇಕು. ಇದನ್ನು ಕಾಸುಕೊಟ್ಟು ಪ್ರಕಟಿಸುತ್ತಿರುವ ಭಕ್ತರ ‘ಹರಕೆಯ ಪೂರೈಕೆ’ಯೇ ಹೊರತು ಮಿಕ್ಕುಳಿದ ಓದುಗರಿಗೆ ಅಲ್ಲಿ ಕೊಳ್ಳುವಂತಹದ್ದು ಏನೇನೂ ಇರುತ್ತಿರಲಿಲ್ಲ. ಎಲ್ಲರನ್ನೂ ಮುಟ್ಟಲು ಬಳಕೆಗೊಳ್ಳುವ ಜಾಹೀರಾತು, ಕೆಲವರನ್ನು ಮಾತ್ರ ಸ್ವರ್ಗದವರೆಗೂ ಕೊಂಡೊಯ್ಯಬಹುದೆಂದು ಕೆಲವರು ಮಾತ್ರ ನಂಬುತ್ತಾರೆ.

ಮುದ್ರಣ ತಂತ್ರಜ್ಞಾನದ ಅವಿಷ್ಕಾರದ ಮುನ್ನ ಅನಕ್ಷರಸ್ಥರನ್ನು ಎಲ್ಲ ಧರ್ಮಗಳೂ ನಾಮುಂದು ತಾಮುಂದು ಎಂದು ತಮ್ಮೆಡೆಗೆ ಆಕರ್ಷಿಸಿಕೊಳ್ಳುವ ಉಮೇದಿನಲ್ಲಿ ಹುಟ್ಟಿಕೊಂಡ ಉಪಾಯವೇ ಜಾಹೀರಾತು. ಆಗೆಲ್ಲ ಜಾಹೀರಾತು ಭಿತ್ತಿಚಿತ್ರವಾಗಿ, ತಾಳೆಗರಿ ಚಿತ್ರ-ಬರಹವಾಗಿ, ಅಜಂತಾ-ವ್ಯಾಟಿಕನ್‍ಗಳಲ್ಲಿ ಜಾಹೀರಾತಿನ ಮಮ್ಮಿಗಳಾದ ಸಂಗ್ರಹಾಲಯಗಳಲ್ಲಿ ನೆಲೆಸಿರುತ್ತಿದ್ದವು, ಮುಂದೆ ಹುಟ್ಟಲಿರುವ ನಿಯತಕಾಲಿಕ ಪತ್ರಿಕೆ ಎಂಬ ಸೂಕ್ತ ವೇದಿಕೆಯ ನಿರೀಕ್ಷೆಯಲ್ಲಿ. ಪೂರ್ವದಲ್ಲಿ ದೇವಾಲಯ, ನಂತರ ಅರಮನೆ, ತದನಂತರ ಸಂಗ್ರಹಾಲಯವು ವಸ್ತು, ಹೊಳಹುಗಳ ಸೂಕ್ತ ಜಾಹೀರಾತಿನ ವೇದಿಕೆಯಾಗಿದ್ದರೂ, ಪ್ರಜಾಪ್ರಭುತ್ವ ಹಾಗೂ ನಿಯತಕಾಲಿಕೆಗಳ ಸಮ್ಮಿಶ್ರಣ ಬರುವವರೆಗೂ ಜಾಹೀರಾತನ್ನು “ಎಲ್ಲರೂ, ಎಲ್ಲರಿಗಾಗಿ ಎಲ್ಲವನ್ನೂ ಒಳಗೊಳ್ಳಲು” ಸಾಧ್ಯವಾಗಿರಲಿಲ್ಲ. ಡಿಜಿಟಲ್ ಪತ್ರಿಕೆಗಳ ಆಗಮನದ ನಂತರವಷ್ಟೇ ಕಾಗದ ಮುದ್ರಿತ ಪತ್ರಿಕೆಗಳು, ಜಾಹೀರಾತಿಲ್ಲದೆ ತಾವು ಕಾಗದದ ದೋಣಿಗಳಾಗಿಯಷ್ಟೇ ಅಂತ್ಯಗೊಳ್ಳಬೇಕಾಗಬಹುದೆನ್ನುವ ಆತಂಕಕ್ಕೀಡಾಗಿವೆ. ಜಾಹೀರಾತು ಎಲ್ಲ ಕಾಲಕ್ಕೂ ಒಂದೇ ರೀತಿ ಇರುವುದಿಲ್ಲವೆಂಬುದು ಜಾಹೀರಾತಿನ ಮೊದಲ ಪಾಠ. ಉದಾಹರಣೆಗೆ, ಶಾಲಾಪಠ್ಯಗಳಲ್ಲಿ ದೇವರಾಗಿ ಜಾಹೀರಾಗುತ್ತಿದ್ದ ಗಾಂಧಿ ತಾತ, ಆ ವಿದ್ಯಾರ್ಥಿಗಳು ಓದುಗ-ಗ್ರಾಹಕನಾಗಿ ಬೆಳೆಯುತ್ತಿದ್ದಂತೆಯೇ, ಗಾಂಧಿ ಮನುಕುಲದ ಸುಲಭ್ ಶೌಚಾಲಯದ ಕಾವಲುಗಾರನಾಗಿ ಮಾತ್ರ ಜಾಹೀರುಗೊಳ್ಳುತ್ತಿರುವುದನ್ನು ಕಾಣತೊಡಗಿದ್ದಾನೆ/ಳೆ. ‘ಅಳತೆ ಮಿತ, ಕಾಲ ಅಮಿತ’ ಎಂಬುದು ಡಿಜಿಟಲ್ ಜಾಹೀರಾತಿನ ಪಿತೃವೂ ಹೌದು, ತದ್ವಿರುದ್ಧವೂ ಹೌದು. ಡಿಜಿಟಲ್‍ನ ಜಾಹೀರಾತಿಗೆ ಅಳತೆ ಅಮಿತ ಹಾಗೂ ಅಪ್ರಸ್ತುತ, ಟಾಪಪ್‍ನ ಕಾಲ ಮಾತ್ರ ಮಿತ.

ಮುದ್ರಿತ ಪತ್ರಿಕೆಯು ಡ್ರಾಯಿಂಗ್ ರೂಮಿನಿಂದ ಖಾಲಿಸೀಸೆ ಪೇಪರ್‍ನವನ ಮೂಲಕ, ಕಾಲಾತೀತವಾಗಿ ಗ್ರಂಥಾಲಯಗಳಲ್ಲಿ, ವಸ್ತುಸಂಗ್ರಹಾಲಯಗಳಲ್ಲಿ ಬದುಕಿದ್ದಷ್ಟೂ ಕಾಲ ಜಾಹೀರಾತೂ ಅದಕ್ಕಂಟಿಕೊಂಡಿರುತ್ತಿತ್ತು/ತ್ತದೆ. ಭಾಷಾಶುದ್ಧಿ, ಜಾಣ್ಮೆಯ ಬರಹವೆಂಬ ಒಂದೆರೆಡು ಪಾಠಗಳನ್ನು ಮಾತ್ರ ಪತ್ರಿಕೆಯಿಂದ ಜಾಹೀರಾತು ಸ್ವೀಕರಿಸಿದರೆ, ಜಾಹೀರಾತಿನಿಂದ ಪತ್ರಿಕೆ ಕಲಿತದ್ದು ಮಾತ್ರ ಅಗಣಿತ ವಿಕ್ಷಿಪ್ತತೆಯ ಗುಣವನ್ನೇ: ಸುದ್ದಿ ಮಾಡದ, ಮುದ್ರಿಸದ, ಪ್ರಕಟಗೊಳ್ಳದೇ ಹೋಗುವ ಮೂಲಕ ಪತ್ರಿಕೆ ಮುಚ್ಚಿಡುವ ಸುದ್ದಿಯ ಗುಚ್ಛಕ್ಕಿಂತಲೂ ಜಾಹೀರಾತಾಗುವ ವಸ್ತು, ಹೊಳಹು, ಅವಕಾಶಗಳ ಸಂಖ್ಯೆಗಿಂತ ಹೆಚ್ಚಿನದ್ದು. ಪ್ರಿಯಕರನೊಂದಿಗೆ ಸೇರಿ ಅಪ್ಪನನ್ನು ಇತ್ತೀಚೆಗೆ ಕೊಂದ ಮಗಳ ಸುದ್ದಿ ಇದ್ದಕ್ಕಿದ್ದಂತೆ, ಇಂಗ್ಲೀಷ್-ಕನ್ನಡವೆಂಬ ಭಾಷೆಯ ಭೇದಭಾವವಿಲ್ಲದೆ ಮಾಯವಾದ ಸುದ್ದಿಯಂತಹವು ಪ್ರಖರವಾಗಿ ಎದ್ದು ಕಾಣುವಂತಹದ್ದು. ಪ್ರಾಯಶಃ ಪತ್ರಿಕೆಗೆ ಡೆಡ್‍ಲೈನ್ ಮುಗಿಯದೇ ಇರುವ ಸುದ್ದಿಯೆಂದರೆ ಅದು ಜಾಹೀರಾತು ಮಾತ್ರವೇ. ಜೊತೆಗೆ, ಮುಗಿಯದೇ ಇರುವ ಸುದ್ದಿಯೇ ಭವಿಷ್ಯದಲ್ಲಿ ಜಾಹೀರಾತಿನ ಚೌಕಟ್ಟಿಗೆ ಸಿಲುಕುವುದು ಎಂಬುದೇ ಐತಿಹಾಸಿಕ ಸತ್ಯವಾಗಿದೆ. ಸುಮಾರು ದಿನಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ವಿದೇಶಿ ಗೆಳೆಯನೊಬ್ಬನೊಂದಿಗೆ ಕಾಮತ್ ಹೋಟೆಲೊಂದರಲ್ಲಿ ನಾಷ್ಟಾ ಮಾಡಲು ಒಮ್ಮೆ ನಮ್ಮೊವನೊಬ್ಬ ಹೋಗಿದ್ದನಂತೆ. “ಇವರ್ಯಾರು ಗೊತ್ತೆ?” ಎಂದು ಗೋಡೆಯ ಮೇಲೆ ಅಲಂಕೃತವಾಗಿದ್ದ ವ್ಯಕ್ತಿಯ ಭಾವಚಿತ್ರವನ್ನು ಬೊಟ್ಟು ಮಾಡಿ ಕೇಳಿದನಂತೆ ನಮ್ಮವ. “ಗೊತ್ತು, ಎಲ್ಲಾ ಕಾಮತ್ ಹೋಟೆಲುಗಳಲ್ಲಿಯೂ ಇವರ ಭಾವಚಿತ್ರಗಳಿರುತ್ತವೆ. ಕಾಮತ್ ಸರಣಿ ಹೋಟೆಲುಗಳ ಮಾಲೀಕರಲ್ಲವೆ ಇವರು!” ಎಂದನಂತೆ ಆತ – ಸೀರಿಯಲ್ ಸೆಟ್ಟಿನ ಚಿತ್ರಚೌಕಟ್ಟಿನೊಳಗೆ ವಿರಾಜಮಾನರಾಗಿದ್ದ ಗುರು ರಾಘವೇಂದ್ರ ಸ್ವಾಮಿಯವರ ಚಿತ್ರ ನೋಡುತ್ತ! ತನ್ನ ಅನುಪಸ್ಥಿತಿಯಲ್ಲಿಯೂ, ದೈವಾಂಶ ಸಂಭೂತರಿಗೂ ಹೊಸತನದ ವ್ಯಕ್ತಿತ್ವಗಳನ್ನು ದೊರಕಿಸಿಕೊಟ್ಟುಬಿಡುವುದು ಜಾಹೀರಾತಿನ ಸರ್ವಾಂತರ್ಯಾಮಿ ಮನೋಭಾವಕ್ಕೆ ಕಾರಣ.

3

ಇತ್ತೀಚಿನ ದಶಕಗಳಲ್ಲಿ ಪತ್ರಿಕೆಯ ಜಾಹೀರಾತುಗಳು ಅಕ್ಷರಶಃ ಪತ್ರಿಕೆಯೊಳಗಿದ್ದುಕೊಂಡೇ ಅದರಿಂದ ಮುಕ್ತಿ ಪಡೆಯತೊಡಗಿವೆ. ಸ್ಥಳೀಯ ಹೋಟೆಲುಗಳ ಹಾಗೂ ತಿಂಡಿ ಅಂಗಡಿಮುಂಗಟ್ಟುಗಳ ಜಾಹೀರಾತನ್ನು ಪತ್ರಿಕೆಯ ಆಕಾರಕ್ಕೆ ಹೊಳೆವ ಹಾಳೆಗಳಲ್ಲಿ ಮುದ್ರಿಸಿ, ಪೇಪರ್ ಹುಡುಗನಿಗೆ ಕೈಬಿಸಿ ಮಾಡಿ ಸ್ಥಳೀಯವಾಗಿ ಹಂಚುವಂತೆ ಮಾಡುವುದೇನು, ಅವುಗಳನ್ನು ಪ್ರತಿ ಪತ್ರಿಕೆಯೊಳಕ್ಕೂ ತುರುಕಿ ತುರುಕಿ ಸಾಕಾಗಿ ಅಳಿದುಳಿದ ಅಷ್ಟೂ, ಸ್ಥಳೀಯ ಸೊಗಡಿನಿಂದ ಹೊಳೆವ ಜಾಹೀರಾತು ಹಾಳೆಗಳನ್ನು ಬೇಸರದಿಂದ ಕೆಲವೇ ದಿನಪತ್ರಿಕೆಗಳಲ್ಲಿ ಆ ಹುಡುಗರು ಅಡಗಿಸಿಬಿಡುವುದೇನು, ಅದ ಕಂಡು ಮನೆಯವರು, ಮನೆಯಾಚೆಯೇ ತಿಥಿ ಕಾರ್ಡುಗಳನ್ನು ಹೊರಗಿಡುವಂತೆ, ಮನೆಬಾಗಿಲಿನ ಹೊರಗೇ ಕೊಡವಿ ಹಾಕುವುದೇನು, ಗೊಣಗಿಕೊಂಡು ಅದಷ್ಟನ್ನೂ ಹೆಕ್ಕಿ ಡ್ರೈ ವೇಸ್ಟ್‍ಬಿನ್‍ಗಳಲ್ಲಿ ಅಪಾರ್ಟ್‍ಮೆಂಟ್‍ಗಳಲ್ಲಿ ಕಸಗುಡಿಸುವವರು ಜಾಹಿರಾತಿನ ಗುಚ್ಛವನ್ನು ಬಿಸಾಡುವುದೇನು!

ಪ್ರವಾಸ ಕಥನಕಾರ ಬಿಲ್ ಬ್ರೈಸನ್ ಆಸ್ಟ್ರೇಲಿಯದ ಸಂಗ್ರಹಾಲಯವೊಂದಕ್ಕೆ ಭೇಟಿ ನೀಡಿದ ಪ್ರಸಂಗವೊಂದಿದೆ. ಸಂಗ್ರಹಾಲಯದ ಪ್ರದರ್ಶನದ ಒಳ್ಳೆಯ ಗುಣಮಟ್ಟದ ಕೆಟಲಾಗುಗಳನ್ನು ಗುಪ್ಪೆ ಮಾಡಿ ಸಂಗ್ರಹಾಲಯದ ಕ್ಯುರೇಟರ್ ಬ್ರೈಸನ್ನನ ಎರಡೂ ಕೈಗಳಲ್ಲಿ ತುರುಕಿದ್ದಳಂತೆ. ದೂರದ ಇಂಗ್ಲೆಂಡಿಗೋ ಅಮೇರಿಕಕ್ಕೋ ಹಿಂದಿರುಗಬೇಕಿದ್ದ ಬ್ರೈಸನ್ ಈ ಭಾರವನ್ನು ವಿಮಾನದಲ್ಲಿ ಹೊತ್ತೊಯ್ಯಲೊಲ್ಲದೆ, ಸಂಗ್ರಹಾಲಯದ ಹಿಂದಕ್ಕೆ ನಡೆದುಬಂದನಂತೆ, ಅವುಗಳನ್ನು ಏನು ಮಾಡುವುದು ಎಂದು ತಿಳಿಯದೆ. ಅಲ್ಲಿ ಅದಾಗಲೇ ಹಳ್ಳವೊಂದರಲ್ಲಿ ಅದೇ ಸಂಗ್ರಹಾಲಯದ ಕೆಟಲಾಗುಗಳ ಗುಪ್ಪೆಯೊಂದು – ನಮಗೆ ಕೊಡಮಾಡುವ ಕೆಟಲಾಗುಗಳನ್ನು ಎಲ್ಲರೂ ಇಲ್ಲಿಯೇ ಎಸೆಯುವುದು, ನೀವೂ ಇಲ್ಲಿಯೇ ಎಸೆಯಿರಿ ಎನ್ನುವಂತೆ ಕಾಣಿಸಿತಂತೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ಕುರಿತಾದ ಜಾಹೀರಾತು ಎಂದೂ ಫಲಪ್ರದವಾಗದಿರುವುದಕ್ಕೆ ಕಾರಣವೊಂದಿದೆ: ತತ್‍ಕ್ಷಣದ ಆರ್ಥಿಕ ಲಾಭದ ಹೊರಗಿನ ಕಲ್ಪನೆಯು ಸಾಂಪ್ರದಾಯಿಕ ಜಾಹೀರಾತಿಗೆ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.

ಚುನಾವಣೆಯ ಕಾಲ ಬಂದರಂತೂ ಪತ್ರಿಕೆಗಳೆಲ್ಲವೂ ಹೆಡ್‍ಲೈನಿನ ಸೊಗಸು ಕಳೆದುಕೊಂಡು ಮುಖಭಂಗಗೊಳ್ಳುವ ಮುಖೇಡಿಗಳಾಗಿಬಿಡುತ್ತವೆ. ಎಲ್ಲಕ್ಕೂ ಮುನ್ನ ರಾಜಕಾರಣವನ್ನು ಅತ್ಯಂತ ಪ್ರಥಮ ಜಾಹೀರಾತು-ಯೋಗ್ಯ ವಿಷಯ ಎಂದು ನಂಬಿದ್ದು ಪತ್ರಿಕಾರಂಗದ ಐತಿಹಾಸಿಕ ದುರಂತ ಹಾಗೂ ಸತ್ಯ. ಪ್ರಜಾಪ್ರಭುತ್ವವಾದಿತ್ವವನ್ನು ನಿಲ್ಲಿಸುವ ಸಲುವಾಗಿ ಈ ಯೋಚನೆ. ಯುರೋಪು ಅಮೇರಿಕಗಳಲ್ಲಿ ಬೀದಿಬೀದಿಗಳಲ್ಲಿ ಬಿಟ್ಟಿಯಾಗಿ ದೊರೆವ ‘ಫ್ರೀ ಆಡ್ಸ್’ ಎಂಬ ಜಾಹಿರಾತೇ ತುಂಬಿರುವ ಬಿಟ್ಟಿ ದಿನಪತ್ರಿಕೆಗಳು ಏನನ್ನು ಜಾಹೀರಾತು ಮಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದೇ ಅಸಾಧ್ಯ. ‘ಫ್ರೀ ಆಡ್ಸ್’ ಸ್ವತಃ ತನ್ನನ್ನು ತಾನೇ ಜಾಹಿರಾತುಗೊಳಿಸುತ್ತಿರುತ್ತದೆ. ಸುದ್ದಿಯ ಸಾತತ್ಯವನ್ನೇ ಬದಿಗಿರಿಸಿ, ಆದ್ದರಿಂದಲೇ ವಾರ್ತಾಪತ್ರಿಕೆಯನ್ನು ಅಪೂರ್ಣಗೊಳಿಸಿ ತನ್ನ ಪ್ರಸ್ತುತತೆಯ ಅನನ್ಯತೆಯನ್ನು ಜಾಹೀರುಗೊಳಿಸುವ ಅಪರೂಪದ ಉದಾಹರಣೆ ಈ ಫ್ರೀ ಆಡ್‍ಗಳದ್ದು.

‘ನಾಳೆಯ ಸುದ್ದಿ ಇಂದೇ’ ಎಂದು ನಂಬಿದ್ದ ದಿನಪತ್ರಿಕೆಗಳು, ಡಿಜಿಟಲ್ ಜಗತ್ತಿನ ಹುಟ್ಟಿನ ನಂತರ ‘ನೆನ್ನೆಯ ಸುದ್ದಿಯನ್ನು ನಾಳೆ’ ಕೊಡುವ ಅನಿವಾರ್ಯತೆಯನ್ನು ಎದುರಿಸುತ್ತಿವೆ, ಅದರೊಳಗಣ ಸುದ್ದಿಯೂ ಅಂತೆಯೇ ಸಂಕ್ಷಿಪ್ತತೆಗೂ, ಸ್ವಯಂ ಕನಿಕರಕ್ಕೂ ಎಳೆಸುತ್ತಿದೆ. ಮುದ್ರಣಕ್ಕೆ ಹೋಗುವಾಗ ಕ್ರಿಕೆಟ್ಟಿನ ಅರ್ಧ ಅಂಕಿಸಂಖ್ಯೆಗಳು ಲಭ್ಯವಿದ್ದು, ಅವನ್ನು ಮುದ್ರಿಸಿ ನಾಳೆ ಬೆಳಿಗ್ಗೆ ಓದುಗರನ್ನು ತಲುಪಿಸಿದಲ್ಲಿ, ಅಷ್ಟರಲ್ಲಾಗಲೇ ಫಲಿತಾಂಶವು ಆನ್‍ಲೈನಿನಲ್ಲಿ ದೊರಕಿಯಾಗಿಬಿಟ್ಟಿರುತ್ತದೆ ಓದುಗರಿಗೆ. ಆದ್ದರಿಂದ ವಾರ್ತಾ ವರದಿಯ ಸ್ವರೂಪವೇ ನಭೂತೋ ಎಂಬಂತೆ ಅತೀವ ಆತಂಕಕ್ಕೊಳಗಾಗುತ್ತಿರುವ ದಿನಪತ್ರಿಕೆಯಲ್ಲಿ ಇವೆಲ್ಲ ಬಾಧೆಗಳಿಂದ ಸ್ವತಂತ್ರ ಅಸ್ತಿತ್ವವನ್ನು ಹೊಂದಿ, ಕಾಲಾತೀತವಾಗಿ ನಿರಾತಂಕವಾಗಿರುವುದನ್ನೇ ಜಾಹೀರಾತು ಎನ್ನಬಹುದು.

ಎಷ್ಟೇ ಮೊಬೈಲಿಯ ಸುದ್ದಿ ಓದಿದರೂ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಓದಿದಂತಾಗುವುದಿಲ್ಲ ಎಂಬ ನಂಬಿಕೆ ಇಂದು ಪ್ರಸ್ತುತ, ನಾಳೆ ಖಂಡಿತ ಇದು ಅಪ್ರಸ್ತುತ. ಕಂಪ್ಯೂಟರಿನಲ್ಲಿ ಚಿತ್ರ ಬರೆವ ಕಲಾವಿದರಿಗೂ ಹೀಗೆಯೇ ಅನ್ನಿಸುವುದಿದೆ – ನಿಜ ಕಾಗದದ ಮೇಲೆ ಬರೆದರೇ ಸಮಾಧಾನ ಹಾಗೂ ಕಲಾಕೃತಿ ಅನನ್ಯವಾಗಿ ಉಳಿಯುತ್ತದೆ. ‘ಆಪ್’ಗಳ ಸಹಾಯದಿಂದ ದಿನಪತ್ರಿಕೆಯ ಇಲ್ಲಸ್ಟ್ರೇಷನ್‍ಗಳನ್ನು ಮೂಡಿಸಿದರೂ ನೈಜ ಕಾಗದದ ಅನುಪಸ್ಥಿತಿಯ ಕೊರತೆ ಇಂದೂ ಇದೆ, ನಾಳೆಯೂ ಇರಲಿದೆ. ಕೈಯಿಂದ ಮುಟ್ಟಬಹುದಾದ ಪತ್ರಿಕೆಯ ಆನ್‍ಲೈನ್ ಆವೃತ್ತಿ ಈ ಕೊರತೆಯನ್ನು ನೀಗಿಸುತ್ತ, ಕ್ಷಣಕ್ಷಣಕ್ಕೂ ಇತ್ತೀಚಿನ ಸ್ಕೋರ್-ವರದಿ, ಎಲ್ಲವನ್ನೂ ನೀಡುತ್ತದೆ ಎಂದು ನಂಬಿ ಅನೇಕ ದಿನಪತ್ರಿಕೆಗಳ ಆನ್‍ಲೈನ್ ವರ್ಷನ್‍ಗಳು ಹುಟ್ಟಿಕೊಂಡಿವೆ. ಆದರೆ ಮೂಲದಲ್ಲಿ, ಮುಟ್ಟಬಹುದಾದ ಪತ್ರಿಕೆಗೆ ಸ್ವೈಪ್ ಮಾಡಬಹುದಾದ ಪತ್ರಿಕೆಯ ದೆಸೆಯಿಂದಾಗಿ ಆಯಸ್ಸು ಮುಗಿಯುತು ಎಂದು ಸ್ವತಃ ಅದರ ಅಧಿಕಾರದ ಸೃಷ್ಟಿಯೇ ಸೂಚಿಸುತ್ತಿರುವುದನ್ನೇ ಸ್ವಯಂ ಕನಿಕರ ಎನ್ನುವುದು.

4

ರಾಜಕೀಯ ಧುರೀಣರ, ತಮ್ಮ ಸರ್ಕಾರದ ಸಾಧನೆಯ ಲೆಕ್ಕಪತ್ರದ ಜಾಹೀರಾತುಗಳು ಬೆಳ್ಳಂಬೆಳಗ್ಗೆ ಅಪಶಕುನವಾಗಿ, ಪತ್ರಿಕೆಗಳಲ್ಲಿನ ಮೊದಲ ಪುಟದಲ್ಲಿ ಕಾಣಬರುವುದರಿಂದ, ಅಸಲಿ ಸುದ್ದಿ ಯಾವಾಗಲೂ ಎರಡನೇ ಪುಟದಿಂದಲೇ ಆರಂಭವಾಗುವುದು. ದಿನಪತ್ರಿಕೆಗಳು ಯಾಕೆ ಇಂತಹ ಜಾಹೀರಾತಿನ ಮುಖವಾಡ ತೊಡಬೇಕು ಹೇಳಿ? ಎಷ್ಟಿದ್ದರೂ ಜಾಹೀರಾತು-ದಿನಪತ್ರಿಕೆಗಳು ರಕ್ತ ಹಂಚಿಕೊಂಡು ಹುಟ್ಟಿದ ಸೋದರ ಸಂಬಂಧಿಗಳೇ. ಜಾಹೀರಾತು ಹಾಗೂ ಸುದ್ದಿ ಪರಸ್ಪರ ಸ್ಥಳಗಳನ್ನು ಹಂಚಿಕೊಳ್ಳುವ ದೃಶ್ಯವಿನ್ಯಾಸ ಕ್ರಮವಂತೂ ನೇರ ಸಂಪಾದಕ ವರ್ಗದ ವಿಕೃತಿಯ ಅಭಿವ್ಯಕ್ತಿಗೂ ಸಾಕ್ಷಿಯಾಗಿಬಿಡಬಹುದು. ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಹತ್ತಾರು ಮಂದಿ ಹತ್ಯೆಗೀಡಾದ ಫೆÇೀಟೋದ ಪಕ್ಕದಲ್ಲಿ ವ್ಯಕ್ತಿಯೊಬ್ಬರ ಭಾವಚಿತ್ರ, ಓದಲು ಬರದವರಿಗೂ ಸ್ಪಷ್ಟವಾಗಿ ಗ್ರಹಿಕೆಗೆ ಸಿಗುವಂತಾಗಿ, ಕ್ಷಣಮಾತ್ರದಲ್ಲಿ ಅವೆರಡೂ ಚಿತ್ರಗಳ ನಡುವೆ ಒಂದು ಸುಳ್ಳುಕಥನ ಸೃಷ್ಟಿಗೊಂಡುಬಿಡುವ ಮಾಯೆಯು ಸಂಪಾದಕೀಯ ಶ್ರಮದ ಲೇವಡಿಯ ಸಾಮಥ್ರ್ಯದ ಪ್ರದರ್ಶನವೂ ಆಗಿಬಿಡಬಹುದು. ಆ ವ್ಯಕ್ತಿ ಮಾತ್ರ ಯಾವುದೋ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದ ಕವಿ ಚಂದ್ರಶೇಖರ ಕಂಬಾರರದ್ದಾಗಿರುತ್ತದೆ!

ಪ್ರತಿಷ್ಠಿತ ರಾಜಕಾರಣಿಯೊಬ್ಬರ ತಿಂಗಳ ಭತ್ಯೆಯಿಂದಲೇ ಕುಟುಕು ಜೀವ ಹಿಡಿದು ಪ್ರಕಟವಾಗುತ್ತಿದ್ದ ಕನ್ನಡದ ವಾರಪತ್ರಿಕೆಯೊಂದರಲ್ಲಿ ಒಮ್ಮೆ ವಿಮರ್ಶಕ ಹಾಗೂ ಕಲಾವಿದನಾಗಿ ವಾರಾಂತ್ಯಗಳಲ್ಲಿ ಕೆಲಸ ಮಾಡುತ್ತಿದ್ದೆ. ಹಿಂಬದಿಯ ಒಳಪುಟದಲ್ಲಿ ಎಂದಿಗೂ ಜಾಹೀರಾತು ದೊರಕದ್ದರಿಂದಲೋ ಏನೋ ಅದರ ಸಂಪಾದಕರು ನನಗೆ ಆ ಪುಟದಲ್ಲಿ ಕನ್ನಡದಲ್ಲಿ ಕಾಮಿಕ್ ಒಂದನ್ನು ಬರೆಯಲು ಅವಕಾಶ ಮಾಡಿಕೊಟ್ಟಿದ್ದರು. ಸದಾ ಮುಖಪುಟದಲ್ಲಿ ಆಲ್ಲಿಂದಿಲ್ಲಿಂದೆಲ್ಲ ಆಯ್ದ ಬಾಲಿವುಡ್ ನಟಿಯರದ್ದೇ ಭಾವಚಿತ್ರಗಳಿರುತ್ತಿದ್ದವು. ಆ ರೂಪದರ್ಶಿಗಳಿಗೆ ಪತ್ರಿಕೆಯ ಒಳಗಿನ ಚೀಪ್ ಕಪ್ಪುಬಿಳುಪಿನ ಸುದ್ದಿಯಾಗಿ ಮತ್ತೊಂದಾಗಿ ಪ್ರವೇಶವಿರುತ್ತಿರಲಿಲ್ಲ. ಆದರ್ಶವಾದಿಯಾಗಿದ್ದ ನನ್ನ ಕಲಾವಿದ ಗೆಳೆಯನೊಬ್ಬ ಒಮ್ಮೆ ಆ ಪತ್ರಿಕೆಯ ಸಂಪಾದಕರನ್ನು – “ನಿಮ್ಮ ಪತ್ರಿಕೆಯ ಮುಖಪುಟಗಳಿಗೂ ಒಳಗಿನ ಕಂಟೆಂಟ್‍ಗಳಿಗೂ ಏನು ಸಂಬಂಧ?” ಎಂದು ಕೇಳಿಯೇಬಿಟ್ಟಿದ್ದ. ಅದಕ್ಕೆ ಸಂಪಾದಕರು, “ಮುಖಪುಟದಲ್ಲೇ ಎಲ್ಲಾ ಬಟಾಬಯಲಾಗಿ ಕಾಣುತ್ತಿದೆಯಲ್ಲ, ಇನ್ನು ವಿವರಣೆಯನ್ನೂ ಬೇರೆ ಬಿಚ್ಚಿ ತೋರಿಸಬೇಕೆ ಅದಕ್ಕೆ?” ಎಂದು ಆತನ ಪ್ರಶ್ನೆಯನ್ನು ಆತನಿಗೇ ತಿರುಗಿಸಿಬಿಟ್ಟಿದ್ದರು. ಪತ್ರಿಕೆಯಲ್ಲಿ ಜಾಹೀರಾತು ಇದ್ದಂತೆ ಪ್ರಕಟವಾಗುತ್ತದೆ, ಆದರೆ ಸುತ್ತಲಿನ ಸುದ್ದಿ-ಚಿತ್ರಗಳೊಂದಿಗೆ ಅದು ಹೊಂದುವ ಆಕಸ್ಮಿಕ ಸಂಬಂಧ ಹಾಗೂ ಅರ್ಥವ್ಯಾಪ್ತಿ ಮಾತ್ರ ಸಂಪಾದಕರ ನಿಯಂತ್ರಣವನ್ನು ದಾಟಲಾಗದು.

ಒಮ್ಮೊಮ್ಮೆ ಪತ್ರಿಕೆಯೊಳಗಣ ಜಾಹೀರಾತು ವಿದೇಶಿ ಎಂಬೆಸಿಗಳಿದ್ದಂತೆ, ಪತ್ರಿಕೆಗಳ ಯಾವ ಭಾಷಾ ನಿಯಮಗಳೂ ಅವುಗಳಿಗೆ ಅನ್ವಯವಾಗಲಾರದು. ನನ್ನ ಸಹವರ್ತಿಯೊಬ್ಬ ತನ್ನ ಪೂರ್ವಾಶ್ರಮದ ಜಾಹೀರಾತು ಕಂಪನಿಯಲ್ಲಿ ಹೈಪ್ಲ್ರೊಫೈಲ್ ಸಹವರ್ತಿಯಾಗಿದ್ದವನೊಬ್ಬನ ಕಥೆ ಹೇಳಿದ್ದು ಹೀಗೆ: ದೆಹಲಿಯ ಎಲ್ಲ ಇಂಗ್ಲಿಷ್ ಪತ್ರಿಕೆಗಳಿಗೂ ಫುಲ್ ಪೇಜ್ ಅಡ್ವರ್‍ಟೈಸ್‍ಮೆಂಟ್ ಒಂದನ್ನು ಬಿಡುಗಡೆ ಮಾಡಿ ಮನೆಗೆ ಹೋದಾತ ಮಾರನೇ ದಿನದಿಂದ ಮತ್ತೆ ಕೆಲಸಕ್ಕೆ ಹೋಗಲೇ ಇಲ್ಲವಂತೆ. ಆ ಜಾಹೀರಾತಿನಲ್ಲಿ ಗ್ರಾಹಕರನ್ನು ಅತ್ಯಾಕರ್ಷಕವಾಗಿ ಸೆಳೆವ ಎಲ್ಲ ತಂತ್ರಗಳೂ ಪರಿಣಾಮಕಾರಿಯಾಗಿದ್ದು, ಸಂಪರ್ಕಿಸಬೇಕಾಗಿದ್ದ ಫೋನ್ ನಂಬರ್‍ನಲ್ಲಿ ಮಾತ್ರ ಕೇವಲ ಒಂದು ಸಂಖ್ಯೆ ತಪ್ಪಾಗಿತ್ತಂತೆ. ಅಂದಹಾಗೆ ಆ ಗೆಳೆಯನ ಗೆಳೆಯ ಕೆಲಸಕ್ಕೆ ಹೋಗದಿದ್ದುದಕ್ಕೆ ಕಾರಣ ಆತನನ್ನು ಕೆಲಸದಿಂದ ತೆಗೆದುಹಾಕಿದ್ದರಿಂದಲ್ಲವಂತೆ. ಮೊಬೈಲ್ ನಂಬರಿನ ಒಂದೇ ಒಂದು ಸಂಖ್ಯೆ ತಪ್ಪಾಗಿದ್ದರಿಂದ, ಅನೇಕ ಪತ್ರಿಕೆಗಳಿಗೆ ಪ್ರತಿಯೊಂದರಲ್ಲೂ ಮುಖಪುಟವಾಗಿ ಪ್ರಕಟವಾದ ಖರ್ಚಿನ ವೆಚ್ಚವನ್ನು ಭರಿಸಿಕೊಡಬೇಕಾಗಿದ್ದರಿಂದ, ಆ ಜಾಹೀರಾತು ಕಂಪನಿಯೇ ಬಾಗಿಲು ಮುಚ್ಚಿಬಿಟ್ಟಿತಂತೆ! ಇಂತಹ ಜಾಹೀರಾತುಗಳ ಎಡವಟ್ಟುಗಳಾದಾಗ ಅವುಗಳನ್ನು ಪ್ರಕಟಿಸುವ ಪತ್ರಿಕೆಗಳು ಮಾತ್ರ ಊರ ಹೊರಗಿನ ಹನುಮಂತನಂತೆ ಇದ್ದುಬಿಡುವ ಸೌಕರ್ಯವನ್ನಂತೂ ಹೊಂದಿರುತ್ತವೆ.

5

ಎನ್. ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳ ಕಥನದೊಳಗಿನ ಜಾಹೀರಾತುಗಳ ವೇಗ ಮಾತ್ರ ನನಗೆ ಬಹಳ ಪ್ರಿಯವಾಗಿರುತ್ತಿದ್ದವು. ಮಧ್ಯಾಹ್ನ ತಂತಿ ಮೂಲಕ ಕಳಿಸಿದ ಗುಪ್ತ ಸಂದೇಶವಿರುವ ಜಾಹೀರಾತು ಮಾರನೇ ದಿನವೇ ಪ್ರಕಟವಾಗಿಬಿಡುವುದು ಬಹಳ ಅಚ್ಚರಿ ಉಂಟುಮಾಡುತ್ತಿತ್ತು. ಎಷ್ಟೋ ಬಾರಿ, ಬಾರಿ ಬಾರಿ ಸಾರಿ ಸಾರಿ ಉಪಸಂಪಾದಕರುಗಳನ್ನು ಭೇಟಿ ಮಾಡು, ಫೋನಾಯಿಸಿ, ಪತ್ರ ಬರೆದು ಕೇಳಿಕೊಂಡರೂ ಕಲಾಪ್ರದರ್ಶನದ ಸುದ್ದಿಯೂ ನಗರ ಸಂಚಾರಗಳ ಕಾಲಂಗಳಲ್ಲಿ ಬರುತ್ತಿರಲಿಲ್ಲ. ಒಮ್ಮೆ ಹಾಗೆ ಪ್ರಕಟವಾದಾಗ ಕಲಾವಿದ ಗೆಳೆಯನೊಬ್ಬ ಕುಣಿದು ಕುಪ್ಪಳಿಸಿದ್ದ – ತನ್ನ ಪ್ರದರ್ಶನದ ಶೀರ್ಷಿಕೆ ಹಾಗೂ ಸುದ್ದಿಯೊಂದಿಗೆ ತನ್ನ ಕಲಾಕೃತಿಯೊಂದರ ಫೋಟೋ ಸಹ ಪ್ರಕಟವಾಗಿದೆಯೆಂದು. ಆದರೆ ಆ ಪ್ರದರ್ಶನವನ್ನು ಉದ್ಘಾಟಿಸಲಿದ್ದ ‘ಹಿರಿಯ ಕಲಾವಿದರದ್ದೇ ಪ್ರದರ್ಶನ ಅದು’ ಎಂದು ಅವಸರದಲ್ಲಿ ಪ್ರಕಟವಾಗಿತ್ತಷ್ಟೇ. ಆ ಪತ್ರಿಕೆಯೇನು ಮಾರನೇ ದಿನ ಬಾಗಿಲು ಮುಚ್ಚಲೂ ಇಲ್ಲ, ಕಲಾವಿದ ಗೆಳೆಯ ತನ್ನ ಇಡಿಯ ಪ್ರದರ್ಶನವನ್ನು ಮಾರಾಟ ಮಾಡಲೂ ಇಲ್ಲ!

ಇಡಿಯ ಪತ್ರಿಕೆಯ ಎಲ್ಲ ಪುಟಗಳನ್ನೂ ಜಾಹೀರಾತನ್ನಾಗಿ ಮಾರ್ಪಡಿಸಿಬಿಟ್ಟ ಬೆಂಗಳೂರಿನ ಕಾಲಾತೀತವಾದ ಇಂಗ್ಲಿಷ್ ಪತ್ರಿಕೆಯೊಂದು ‘ಎಲ್ಲೋ ಪೇಪರ್’ ಎಂದೇ ಪ್ರಸಿದ್ಧವಾಗಿತ್ತು. ಎಲ್ಲೆಲ್ಲೂ, ಎಲ್ಲೆಲ್ಲೋ ಇರಬೇಕೆಂದು ಅದರ ಆಸೆ. ಪೇಜ್ ಥ್ರೀಗೆ ಪ್ರಸಿದ್ಧವಾಗಿದ್ದ ಅದರಲ್ಲಿ ಎಲ್ಲ ಪುಟಗಳ ಸಂಖ್ಯೆಯೂ ಪೇಜ್ ಥ್ರೀನೇ ಎಂದು ತಮಾಷೆ ಮಾಡುತ್ತಿದ್ದೆವು. ಅದರಲ್ಲಿ ವಾರದ ಕಲಾವಿಮರ್ಶೆ ಬರೆಯುತ್ತಿದ್ದೆ, ಒಂದಷ್ಟು ವರ್ಷಗಳ ಕಾಲ. ಅದು ಪ್ರಕಟವಾಗುತ್ತಿದ್ದ ಪ್ರತಿ ಭಾನುವಾರ ಬೆಳಿಗ್ಗೆ ಎದ್ದು ಆತಂಕದಿಂದಲೇ ಒಳಪುಟಗಳಲ್ಲಿ ನನ್ನ ವಿಮರ್ಶೆಯನ್ನು ಹುಡುಕುತ್ತ ತಿರುವಿಹಾಕುತ್ತಿದ್ದೆ. ಕಲಾ ಪ್ರದರ್ಶನಗಳನ್ನು ವೀಕ್ಷಿಸಿ, ಕಲಾವಿದರುಗಳನ್ನು ಸಂದರ್ಶಿಸಿ, ಕೋಶಿಸ್‍ನಲ್ಲಿ ಕಾಫಿಗಟ್ಟಲೆ ಕಾಲ ಕುಂತು ಬರೆದು ಪತ್ರಿಕಾ ಆಫೀಸಿನಲ್ಲೇ ಟೈಪಿಸಿ ಫೀಡ್ ಮಾಡಿ, ಪ್ರದರ್ಶಿತ ಕಲಾವಿದರುಗಳಲ್ಲಿ ಇಂತಹ ದಿನ ಪ್ರಕಟವಾಗುತ್ತದೆ ಎಂಬ ಆಶ್ವಾಸನೆಯನ್ನು ನೀಡಿ ಬಂದಿರುತ್ತಿದ್ದೆ. ಆದರೆ ಯಾವುದಾದರೂ ಜಾಹೀರಾತು ಬಂದಿತು ಎಂದರೆ ಆಯಿತು, ಮೊದಲ ಕತ್ತರಿ ಪ್ರಯೋಗವಾಗುತ್ತಿದ್ದುದೇ ಚಿತ್ರಕಲಾ ವಿಮರ್ಶೆಗೆ! ಅಷ್ಟೆಲ್ಲ ಶ್ರಮವಹಿಸಿ ಬರೆದ ವಿಮರ್ಶೆಯು ಮುಂದಿನ ವಾರಕ್ಕೆ ರದ್ದಿಯೇ ಆಗಿರುತ್ತಿತ್ತು, ಏಕೆಂದರೆ ಪ್ರದರ್ಶನ ಮುಗಿದಿರುತ್ತಿತ್ತು, ಕಲಾವಿದರು ಗಂಟುಮೂಟೆ ಕಟ್ಟಿ ತಮ್ಮ ತಮ್ಮ ಊರಿಗೆ ತೆರಳಿರುತ್ತಿದ್ದರು, ವಿಮರ್ಶೆ ಕಸದಬುಟ್ಟಿ ಸೇರಿರುತ್ತಿತ್ತು. ಸಿನಿಮಾ, ನಾಟಕ, ಸಂಗೀತ ವಿಮರ್ಶೆಗಳು ಮಾತ್ರ ಭಾನುವಾರದ ಬೆಳಗಿನ ಕಾಫಿ ಹೀರುತ್ತ ಓದುತ್ತಿರುವವರ ವೀಕ್ಷಣೆಗಾಗಿ ಅಲ್ಲಿಯೇ ಇರುತ್ತಿದ್ದವು. “ಸ್ವಾಭಿಮಾನ ಮುಖ್ಯ ಕಣ್ರೀ, ಜಾಹೀರಾತಿನ ಪಕ್ಕ ಇರೋಕೆ ನಾನೇನು ಸ್ಲಂ ಪಕ್ಕದ ಅಪಾರ್ಟ್‍ಮೆಂಟಾ” ಎಂದು ಅಂತಹ ದುಃಖಕರ ಸಂದರ್ಭಗಳಲ್ಲಿ ನನ್ನ ವಿಮರ್ಶೆ ಆ ಜಾಹೀರಾತನ್ನು ಕೆಕ್ಕರಿಸಿ ಕೇಳುತ್ತಿರುವಂತೆ ನನಗೆ ನಾನೇ ಕಲ್ಪಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದೆ.

“ಪತ್ರಿಕೆಗಳಲ್ಲಿ ‘ಪ್ರಕಟಗೊಳ್ಳುವ’ ಜಾಹೀರಾತು” ಎಂಬುದೇ ಒಂದು ಭಾಷಾ ಎಡವಟ್ಟು. ನೆಲದ ಮೇಲೆ ಕಟ್ಟಲಾಗಿರುವ ಇಂಂಡಿಪೆಂಡೆಂಟ್ ಮನೆ ಎಂದಂತಿದು, ನಿಂತ ನೆಲವು ಸೇರಿಯೇ ಕಟ್ಟಡವನ್ನು ಮನೆಯೆನ್ನುವುದಲ್ಲವೆ? ಪತ್ರಿಕಾತೀತವಾದ ಜಾಹೀರಾತು ಬಿಲ್ ಬೋರ್ಡ್, ಭಿತ್ತಿ, ಗೋಡೆ ಚಿತ್ರ, ಬಿಲ್ ಬೋರ್ಡ್ ಇತ್ಯಾದಿಯಾಗಿ ಕರೆಸಿಕೊಳ್ಳುತ್ತವೆ. ಅವು ನಮ್ಮೊಳಗಿನ ಅಸಲಿ ‘ಜಾಹೀರಾತು’ ಅಲ್ಲ. ಔಪಚಾರಿಕ ಜಾಹೀರಾತಿನ ಸುವರ್ಣ ಯುಗ ಇಂದು ಮುಗಿದ ಅಧ್ಯಾಯ. ಅನುಪಸ್ಥಿತ ಸುದ್ದಿ, ಪರೋಕ್ಷ ಎಚ್ಚರಿಕೆಯ ವಾರ್ತೆ ಇತ್ಯಾದಿಗಳ ಕಾಲವಾದ ಇಂದು ಫೈನ್ ಪ್ರಿಂಟ್‍ಗಳ ಎಚ್ಚರಿಕೆಗಳನ್ನೊಳಗೊಂಡ ‘ಸಣ್ಣತನ’ದ ಜಾಹೀರಾತುಗಳ ಕಾಲ.

ಪತ್ರಿಕೆಗಳಲ್ಲಿ ಸಣ್ಣ, ಅತಿಸಣ್ಣ, ಇನ್ನೂ ಅತಿಸಣ್ಣ ಅಕ್ಷರಗಳಲ್ಲಿ ಕಾಣುತ್ತಿದ್ದ, “ನಿಮಗೆ ಸ್ವರ್ಗವು ಬಿಟ್ಟಿಯಾಗಿ ದೊರಕುತ್ತದೆ, ಕೊಳ್ಳಿ” ಎಂಬ ಆಣೆಪ್ರಮಾಣ ಮಾಡಿಕೊಡುತ್ತಲೇ, ‘ಈ ವಸ್ತುವು ಮಾರುಕಟ್ಟೆಯ ರಿಸ್ಕ್‍ಗಳಿಗೆ ಬದ್ಧ, ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ’ ಎಂಬ ವಾಕ್ಯವು ಎಲ್ಲಾ ಜಾಹೀರಾತು ವೈವಿಧ್ಯತೆಗಳಲ್ಲೂ, ವಸ್ತು ಅತೀತವಾಗಿ ಅತ್ಯಂತ ಹೆಚ್ಚುಬಳಕೆಯಾಗಿರುವ ವಾಕ್ಯ. ರೇಡಿಯೋದಲ್ಲಿ ಇದೇ ಜಾಹೀರಾತನ್ನು ಹೇಗೆ ವಿಶದಪಡಿಸಬಹುದು ಎಂದೆಲ್ಲ ಒಂದೊಮ್ಮೆ ಯೋಚಿಸುತ್ತಿದ್ದೆವು. ಆದರೆ ನಿಮಗೆಲ್ಲ ಪರಿಚಿತವಿರುವ, ಈಗಾಗಲೇ ಚಾಲ್ತಿಯಲ್ಲಿರುವ ಧ್ವನಿಸುರುಳಿಯನ್ನು ಕೇಳಿಯೇ ಸವಿಯಬೇಕು. ಮೂವತ್ತು ಸೆಕೆಂಡುಗಳ ಜಾಹೀರಾತಿನಲ್ಲಿ, ಇಡಿಯ ಜಾಹೀರಾತಿನ ಅರ್ಧದಷ್ಟಿರುವ ಈ ವಾಕ್ಯದ ಪದಗಳ ಪ್ರಮಾಣವನ್ನು ಮೂರ್ನಾಲ್ಕೇ ಸೆಕೆಂಡುಗಳಲ್ಲಿ ಶ್ರವ್ಯವಾಗುವಂತಹ ಎಡಿಟನ್ನು ಕೇಳಿಯೇ ಸವಿಯಬೇಕು. ಆ ಪದಗಳನ್ನು ಅರ್ಥಮಾಡಿಕೊಳ್ಳುವ (ಸಾಧ್ಯವಾದಲ್ಲಿ) ಅಗತ್ಯವೇ ಇಲ್ಲ, ಅ ಮಾನವಾತೀತ ವೇಗದ ಧ್ವನಿ ಬಂತೆಂದರೆ ಸಾಕು, ಸ್ಪಷ್ಟವಾಗಿ ಕೇಳಿಸದೆಯೂ, ಆ ಭಾಷೆ ಬರದವರಿಗೂ ಅರ್ಥವಾಗಿಬಿಡುತ್ತದೆ. ‘ನಮೋ ವೆಂಕಟೇಶ’ ಹಾಡು ಬರುತ್ತಿದೆಯೆಂದರೆ, ಟೆಂಟ್ ಸಿನಿಮಾದಲ್ಲಿ ಪರದೆ ಮೇಲೇಳುತ್ತಿದೆ, ಸಿನಿಮಾ ಆರಂಭದ ಕ್ಷಣಗಣನೆಯಾಗುತ್ತಿದೆ ಎಂಬರ್ಥದಂತೆ ಇದು.

6

ಔಪಚಾರಿಕ ಜಾಹೀರಾತು, ಸಾಂಪ್ರದಾಯಿಕ ಪತ್ರಿಕೋದ್ಯಮ ಇವೆರಡೂ ಇಂದು ವಾಸ್ತವದಲ್ಲಿ ಇದ್ದಂತೆ ಭಾಸವಾಗುವ ತೀಕ್ಷ್ಣ ಭ್ರಮೆಗಳು. ಏಕಚಕ್ರಾಧಿಪತ್ಯದ ಪಾರುಪತ್ಯೆಯಿಲ್ಲದ ಆದರ್ಶಮಯ ಪ್ರಜಾಪ್ರಭುತ್ವವಾದದ ಕಾಲಘಟ್ಟವೊಂದಿದ್ದಲ್ಲಿ, ಆಗ ಇಂತಹ ಔಪಚಾರಿಕತೆ, ಸಾಂಪ್ರದಾಯಿಕತೆ ಸಾಧ್ಯ ಎಂಬ ಒಂದು ಬಲವಾದ ಮುಗ್ಧ ನಂಬಿಕೆಯೊಂದು ಮುಖ್ಯವಾಗಿ ಶೈಕ್ಷಣಿಕ ಸಾಂಸ್ಥೀಕರಣದೊಳಗೆ ನೆಲೆಸಿರುವ ಬರಹಗಾರರಿಗೆ ಇರುತ್ತದೆ, ಪತ್ರಕರ್ತರಿಗಲ್ಲ. ಮೊದಲ ಕಲ್ಲಚ್ಚು, ಲಿಥೋಗ್ರಫಿಯ ಬಲದಿಂದ ಪತ್ರಿಕೆಗೆ ಪೂರಕ ಎಂದುಕೊಳ್ಳಲಾದ ಚಿತ್ರಗಳು ಎಂದು ಪ್ರವೇಶ ಪಡೆದವೋ ಅಂದೇ ಈ ಪತ್ರಿಕಾಧರ್ಮದ ಭ್ರಮೆಯ ಸಂಚಲನ ಉಂಟಾಯಿತು. ಓದಿನ ಮೊದಲು ನೋಡಿಸಿಕೊಳ್ಳುವುದು ವಾರ್ತಾಪತ್ರಿಕೆಯ ಮೂಲಭೂತ ಸ್ವಭಾವ. ಫಾಂಟ್, ವಿನ್ಯಾಸ, ಬರವಣಿಗೆಯ ಅಳತೆ, ಲೇಔಟ್, ಪುಟಸಂಖ್ಯೆ, ಬ್ಲರ್ಬುಗಳ ನಿರೂಪಣೆ ಇವೆಲ್ಲವೂ ದೃಶ್ಯಮಯವಾದುದು, ಪತ್ರಿಕೆಯ ಅನನ್ಯತೆಯನ್ನೇ ಸಹಜವಾಗಿ ಜಾಹೀರಾತುಗೊಳಿಸುವ ಗುಣಗಳಿವು. ಮನುಷ್ಯ ದೇಹದಲ್ಲಿ ಅತ್ಯಂತ ಹೆಚ್ಚಿನ ಮೂಳೆಗಳ ಮತ್ತು ಕೀಲುಗಳ ಸಂಖ್ಯೆ ಅಂಗಾಲಿಗೆ ಮಾತ್ರ ಸೀಮಿತವಾಗಿಲ್ಲವೆ, ಹಾಗೆ ಈ ಗುಣ. ವಾರ್ತಾಪತ್ರಿಕೆಯ ಅತ್ಯಂತ ಕ್ಷೀಣಾಂಶ ಎಂದರೆ ಅದರ ಬರವಣಿಗೆ, ಹಾಗೂ ಅದರಲ್ಲಿ ಅಡಕವಾಗಿರಬಹುದಾದ ಸುದ್ದಿಯ ವ್ಯಾಪ್ತಿ. ಸ್ವತಃ ಪತ್ರಿಕೋದ್ಯಮದಲ್ಲಿ ಮುಳುಗೆದ್ದವರಿಗೂ ಇದು ಗೊತ್ತು, ಅದರೆ ಅವರ ನಂಬಿಕೆ ಮಾತ್ರ ಅದಕ್ಕೆ ವ್ಯತಿರಿಕ್ತ. ಆ ಪತ್ರಿಕೆಯ ಔಪಚಾರಿಕ ಜಾಹೀರಾತುಗಳಿಗೆ ಆದ್ದರಿಂದಲೇ ಸ್ಪಷ್ಟ ಚೌಕಟ್ಟುಗಳನ್ನು ತೊಡಿಸಿ, ಪತ್ರಿಕೆಯ ಮೂಲಸ್ವರೂಪ ಹಾಗೂ ಉದ್ದೇಶದ ಹೊರಗಿನದಿದು ಎಂದು ಭಾವಿಸಲಾಗುತ್ತದೆ. ಎಲ್ಲಿಯವರೆಗೂ ವಾರ್ತಾ ಪತ್ರಿಕೆಯಲ್ಲಿ ‘ಬರವಣಿಗೆ ಹಾಗೂ ದೃಶ್ಯ ಪರಸ್ಪರ ಪೂರಕ’ ಎಂಬ ವಾಸ್ತವವನ್ನು ‘ಬರವಣಿಗೆಯೇ ಮುಖ್ಯ’ ಎಂಬ ಭ್ರಮೆ ಸವಾರಿ ಮಾಡುತ್ತದೋ ಅಲ್ಲಿಯವರೆಗೂ ಪತ್ರಿಕೆಯೊಳಗಣ ಔಪಚಾರಿಕ ಜಾಹೀರಾತುಗಳನ್ನು ‘ಅನ್ಯ’ವೆಂದು ಕಲ್ಪಿಸಿಕೊಳ್ಳಲಾಗುತ್ತದೆ. ಅಸಲಿಯಾಗಿ ಸ್ಲಂಗಳು ಮೂಲ ನಗರ ಗ್ರಾಮಗಳಾಗಿದ್ದು ಅವುಗಳ ಸುತ್ತಲೇ ಆ ನಗರವು ಬೆಳೆದ ವಾಸ್ತವದಂತೆ ಪತ್ರಿಕೋದ್ಯಮದಲ್ಲಿ ಜಾಹೀರಾತು ಗುಣವನ್ನು ಗುರ್ತಿಸಬೇಕಿದೆ.

ಮಾರಾಟ ಮಾಡುವುದು ಜಾಹೀರಾತಿನ ಗುಣವಾದರೆ, ನಿರಂತರವಾಗಿ ಪ್ರಕಟಗೊಳ್ಳುತ್ತಲೇ ಹೋಗುವ ವ್ಯಸನ ಜಾಹೀರಾತಿನಲ್ಲಿ ಉಳಿದುಬಿಡುತ್ತದೆ. ಇದು ಮೊದಲನೇ ಹಂತ. ವಸ್ತುವಿನ ಅನುಪಸ್ಥಿತಿಯಲ್ಲೂ ಆ ಕುರಿತು ಜಾಹೀರಾತು ಪ್ರಸ್ತುತವಾಗುವುದು ಜಾಹೀರಾತಿನ ಎರಡನೇ ಹಂತ. ಯಾಂತ್ರಿಕ ಪ್ರತಿಕೃತಿ ತೆಗೆವ ಎಲ್ಲಾ ತಂತ್ರಗಾರಿಕೆಗೂ ಅದನ್ನು ಪೂರೈಸುವ ಯಂತ್ರದ ಸಂಸ್ಥೆಯೊಂದರ ಹೆಸರೇ ಅನ್ವರ್ಥವಾಗುವುದು (ಝೆರಾಕ್ಸ್) ಇಂತಹ ಪರಿಕಲ್ಪನೆಯಿಂದಲೇ. ಮುಂಬರಲಿರುವ ಚಿತ್ರ, ಅದು ರಿಲೀಸೇ ಆಗದೆಹೋಗುವ ಅನುಮಾನವಿದ್ದಾಗಲೂ ಜಾಹೀರಾತಿಗೊಳಗಾಗುತ್ತದೆ, ಅಗಲಿದ ಆತ್ಮೀಯರ ಇಪ್ಪತ್ತನೇ ಅಥವ ಮೂವತ್ತನೇ ವರ್ಷದ ಪುಣ್ಯಸ್ಮರಣೆ ಪ್ರಕಟವಾಗುವುದರಲ್ಲಿ ಇಂತಹ ಜಾಹೀರಾತಿನ ‘ಚಟದ, ವಸ್ತುರಹಿತತೆಯ’ ಗುಣ ಅಡಗಿರುತ್ತದೆ. ಪತ್ರಿಕೆಯೊಂದಿಗೆ ಜಾಹೀರಾತು ಭಿನ್ನಗೊಳ್ಳುವುದು ಇದರ ಮೂರನೇ ಹಂತ: ಪತ್ರಿಕೆಯ ಗೋಚರಿಕೆ, ಅಪಿಯರೆನ್ಸ್ ನಿರಂತರ ಬದಲಾಗಿಸುವುದು ಸಂಪಾದಕೀಯ ಆಶಯವಾದರೆ, ಹಳೆಯ ಸ್ಮರಣೆಯ ತಂತಿಯನ್ನು ಉಳಿಸಿಯೇ ಅದನ್ನು ಹೊಸತುಗೊಳಿಸುವುದು ಜಾಹೀರಾತಿಯ ಜಾಯಮಾನ. ಎರಡೂ ವ್ಯತಿರಿಕ್ತ-ಅವಳಿಗಳಾಗಿ ಪ್ರಕಟಗೊಳ್ಳುತ್ತವೆ, ದೈಹಿಕವಾಗಿ ಒಟ್ಟಿಗೆ ಅಂಟಿಕೊಂಡಿರುವ ಎರಡು ಆತ್ಮಗಳುಳ್ಳ ಸಿಯಾಮಿಸ್ ಅವಳಿಗಳಂತೆ. ಐವತ್ತು ವರ್ಷದ ಹಳೆಯ ಸುದ್ದಿ ಎಂಬ ಕಾಲಂ ಪ್ರಕಟಗೊಳ್ಳುವುದು, ಪತ್ರಿಕೋದ್ಯಮ ಅಲ್ಲಿಂದ ಎಷ್ಟು ದೂರ ಬಂದಿದೆ ಎಂದು ನಿರೂಪಿಸುವ ಆಶಯ ಹೊಂದಿರುತ್ತದೆ. ವಾಶಿಂಗ್ ಪೌಡರ್ ನಿರ್ಮಾ ಇಂದಿಗೂ – ಬದಲಾದ ರೂಪದರ್ಶಿ, ಆನಿಮೇಷನ್ ಹುಡುಗಿಯ ಗೋಚರಿಕೆಯಲ್ಲಿಯೂ ಸಂಗೀತ ಬಿಜಲಾನಿ ಮತ್ತು ಆಕೆಯ ಅಕ್ಕಂದಿರನ್ನು ಜೀವಂತವಿರಿಸುವ ಯತ್ನವಾಗಿರುತ್ತದೆ. ನಿರ್ಮಾ ಇಲ್ಲದೆ ಬಿಜಲಾನಿ ಇಲ್ಲ ಎಂದು ಜಾಹೀರಾತು ಹೇಳುತ್ತಿದ್ದರೆ, ‘ಮುಕ್ತಛಂದ’ದಿಂದಾಗಿ ‘ಸಾಪ್ತಾಹಿಕ ಪುರವಣಿ ಮರೆಯಿರಿ’ ಎಂದು ಜಾಹೀರಾತಿನ ಪತ್ರಿಕೆಯ ಭಾಗಗಳು ಒತ್ತಡ ಹೇರುತ್ತಿರುತ್ತವೆ. ಎರಡೂ ಒಂದೇ ಕಾಗದಗಳ ಮೇಲೆ ಮಾಡುವ ಜುಗಲ್‍ಬಂದಿ ಮಾತ್ರ ಸ್ವಾಯತ್ತತೆಯನ್ನು ಕುರಿತಾದದ್ದು. ಜಾಹೀರಾತು ಪತ್ರಿಕೆಯಲ್ಲಿ ಪ್ರಕಟಗೊಳ್ಳುತ್ತದೆ ಎಂದರೆ ಕಟ್ಟಿರುವ ಮನೆ ನೆಲದ ಮೇಲಿದೆ ಎಂದು ಹೇಳಿದಷ್ಟೇ ಅಭಾಸಕರವಾಗಿರುತ್ತದೆ, ನೆಲವೂ ಮನೆಯ ಭಾಗವೇ ಎಂದು ಪುನರುಚ್ಚರಿಸುತ್ತಲೇ ಇರಬೇಕಾಗುತ್ತದೆ.

7

ಜಂಗಮ ಪತ್ರಿಕೆಯ ಏಕೈಕ ಸ್ಥಾಯಿಭಾವ ಜಾಹೀರಾತು. ಔಪಚಾರಿಕ ಜಾಹೀರಾತನ್ನು ಪ್ರಕಟಿಸದ ನಿಯತಕಾಲಿಕೆಗಳಿಗೂ ಸಹ ಜಾಹೀರೆಂಬ ಸ್ಥಾಯಿಗುಣಗಳು ಸ್ಥಿರ ಕಾಲಂಗಳ ರೂಪಗಳಲ್ಲಿ ಪ್ರಕಟವಾಗುವುದು ಅನಿವಾರ್ಯ. ನೆನ್ನೆ-ನಾಳೆಗಳನ್ನು ಬೆಸೆವ ಸುದ್ದಿಯು ಓದುಗನನ್ನು ಆ ಘಟನೆಗಳಿಂದ ಹೊರಗಿಟ್ಟರೆ, ಅದೇ ಓದುಗ ಜಾಹೀರಾತುಗೊಳಿಸಲಾದ ವಸ್ತುವನ್ನು ತನ್ನದಾಗಿಸಿಕೊಳ್ಳದಿದ್ದರೆ ಅಪೂರ್ಣತೆಯ ಕಾಯಿಲೆಯಿಂದ ನರಳತೊಡಗುತ್ತಾನೆ/ಳೆ ಎಂದು ತಿಳಿಸಲಾಗುತ್ತದೆ. ವಾಸ್ತವವಾಗಿ ಅಥವ/ಮತ್ತು ರೂಪಕವಾಗಿ ಜಾಹೀರಾತು ಪತ್ರಿಕೆಯ ಅವಿಚ್ಛಿನ್ನ ಅಂಗ. ತನ್ನ ಪ್ರಸ್ತುತತೆಯನ್ನು ಜಾಹೀರುಗೊಳಿಸದ ಪತ್ರಿಕೆ, ತನ್ನೊಳಗಿನ ಸುದ್ದಿಯಿಂದ ತುಮುಲವನ್ನುಂಟು ಮಾಡದ ಜಾಹೀರಾತು, ಎರಡೂ ಅಪ್ರಸ್ತುತ. ಐತಿಹಾಸಿಕವಾಗಿ ತೈಲವರ್ಣದ ಸತ್ವದಿಂದ ಹಾಗೂ ಮುದ್ರಣ ತಂತ್ರಜ್ಞಾನದ ಪುನರಾವರ್ತನೆಯ ಸೌಲಭ್ಯದಿಂದ ಜಾಹೀರಾತು ಮತ್ತು ವಾತಾಪತ್ರಿಕೆಗಳು ಕ್ರಮಬದ್ಧವಾಗಿ ಮೂಡಿಬಂದಂತಹವು. ತೈಲವರ್ಣವು ಅನನ್ಯತೆಯನ್ನು, ಮುದ್ರಣವು ಅದಕ್ಕೆ ವ್ಯತಿರಿಕ್ತವಾದ ಪುನರಾವರ್ತನೆಯ ಗುಣವನ್ನು ಒಮ್ಮೆಲೆ ಒಂದೆಡೆ ಓದುಗರಿಗೆ ಸಹ್ಯ ಜಗತ್ತೊಂದನ್ನು ಪ್ರಸ್ತುತಪಡಿಸುವುದನ್ನು ‘ವಾರ್ತಾಪತ್ರಿಕೆ’ ಎನ್ನುತ್ತೇವೆ. ಪುನರಾವರ್ತಿಸಿ ಹೇಳಬಹುದಾದರೆ, ನಮ್ಮ ಪ್ರಜ್ಞೆಯ ಮಿತಿಯನ್ನು ಮೀರಿ ಸುದ್ದಿಯೊಂದು ಜಾಹೀರಾದ ರೀತಿಯಲ್ಲಿ ಮಾತ್ರವೇ ಕಾರು, ಚಂದ್ರ, ಕೊನೆಗೆ ಜಗತ್ತು ಹಾಗೂ ನಮ್ಮ ಬದುಕನ್ನು ನಾವು ಪರಿಭಾವಿಸುವುದು ಎಂದಿಗಿಂತಲೂ ಇಂದು ಅನಿವಾರ್ಯವಾಗಿದೆ. ಮಾನವನ ಆತ್ಯಂತಿಕೆ ಗಮ್ಯವಾದ ಮೋಕ್ಷವೂ ಸಹ ಮಾಧ್ಯಮದಾಚೆಗಿನ ಜಾಹೀರಾಗಿ ನಮಗೆ ಲಭ್ಯವಾಗುವುದು ಅಸಾಧ್ಯ. ಜಾಹೀರಾತು ಗುಣವು ದೈವವಾದಲ್ಲಿ ಸುದ್ದಿ, ವಾರ್ತೆ ಹಾಗೂ ವರದಿಗಳು ಆ ಗುಣದ ಮಾನವಾವತಾರವೇ. ಹುಲುಮಾನವರನ್ನು ದೈವತ್ವದ ನೈಜತೆಗೋ ಭ್ರಮೆಗೋ ದೂಡಿ ಪೂರ್ಣಪ್ರಮಾಣದ ಮೋಕ್ಷ ದೊರಕಿಸಿಕೊಡುವವರೆಗೂ ಜಾಹೀರು-ವಾರ್ತೆ ಎರಡನ್ನೂ ಒಳಗೊಂಡ ಸುದ್ದಿ ಪತ್ರಿಕೆಯ ದೈವಲೀಲೆ ಮಾತ್ರ ನಿತ್ಯ ನಿರಂತರ.

ಕೃಪೆ: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ೭೦ರ ಸಂಭ್ರಮದ ಸ್ಮರಣ ಸಂಚಿಕೆ


ಪ್ರತಿಕ್ರಿಯಿಸಿ