ಅಯೋಧ್ಯೆಯ ಭೂಮಿಪೂಜೆಯನ್ನು ಗಮನದಲ್ಲಿಟ್ಟುಕೊಂಡು ಅದರ ಸುತ್ತಲಿನ ಹೊಸಭಾರತದ ರಾಜಕಾರಣವನ್ನು ಪರೀಕ್ಷಿಸಿ “ದ ಪ್ರಿಂಟ್” ಗೆ ಯೋಗೆಂದ್ರ ಯಾದವ್ ಬರೆದ ಲೇಖನದ ಕನ್ನಡ ಅನುವಾದ ಮತ್ತು ಯೋಗೇಂದ್ರ ಯಾದವ್ ಲೇಖನಕ್ಕೆ ಪ್ರತಾಪ್ ಭಾನು ಮೆಹ್ತಾ ತೆ ಇಂಡಿಯನ್ ಎಕ್ಸ್‌ಪ್ರೆಸ್ ನಲ್ಲಿ ನೀಡಿದ್ದ ಪ್ರತಿಕ್ರಿಯೆಯ ಅನುವಾದ ಋತುಮಾನದಲ್ಲಿ ಪ್ರಕಟವಾಗಿತ್ತು. ಈ ಚರ್ಚೆ-ಸರಣಿಯ ಭಾಗವಾಗಿ ಅಜಾಜ್ ಅಶ್ರಫ್ ಬರೆದ ಮೂರನೇ ಬರಹ ಇಲ್ಲಿದೆ.
ಆಗಸ್ಟ್ 5ರ ಅಯೋಧ್ಯೆಯ ರಾಮ ಮಂದಿರದ ಭೂಮಿಪೂಜೆಯು, ಸೆಕ್ಯುಲರಿಸಮ್ಮಿನ ಪತನ ಮತ್ತು ಅವಸಾನಗಳ ಬಗ್ಗೆ ಸಮೃದ್ಧ ವ್ಯಾಖ್ಯಾನಗಳ ಹರಿವನ್ನು ಹುಟ್ಟುಹಾಕಿದೆ. ಆದರೂ ಈ ಎಲ್ಲಾ ವಿವರಣೆಗಳಲ್ಲೂ ಜಾತಿ ಎಂಬ ಪದದ ಸೊಲ್ಲೇ ಇಲ್ಲದಿರಿವುದು ಆಶ್ಚರ್ಯಚಕಿತವಾಗಿದೆ. ಒಂದು ನಿರ್ದಿಷ್ಠ ಪೀಳಿಗೆಗೆ ಸೇರಿದ ಗಣ್ಯರಾದ ಉದಾರವಾದೀ ರಾಷ್ಟ್ರವಾದಿಗಳು ” ಜಾತಿ ಮತ್ತು ಕೋಮುವಾದದ ಕೆಡಕುಗಳು” ಎಂದು ಈ ಎರಡನ್ನೂ ಜೋಡಿಸಿದ್ದರಾದರೂ ಸಹ, ನಮ್ಮ ಸುತ್ತಲಿನ ಪ್ರಪಂಚವನ್ನು ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕಾದರೆ, ಇವೆರಡನ್ನೂ ಒಟ್ಟಿಗೆ ಸೇರಿಸಬೇಕು.
ಪರಂಪರೆಯಿಂದ ಇದು ” ಸಹಜವಾದ ಕ್ರಮ” ಎಂದು ಅನುಮೋದನೆ ಪಡೆದ ಇಂಥಾ ಕ್ರಮದ ವಿವಿಧ ಭಾಗಗಳು ಇವು , ಎಂದು ಸಮರ್ಥನೆ ಪಡೆದಿರುವ ಎಲ್ಲಾ ಅಸಮಾನತೆಗಳಿಂದ ರಚಿತವಾದ ಸಾಮಾಜಿಕ-ರಾಜಕೀಯ ಪರಿಸರದಲ್ಲಿ, ಹಿಂದು ಮತ್ತು ಮುಸಲ್ಮಾನರ ನಡುವಿನ ಸೌಹಾರ್ದದ ಬಾಂಧವ್ಯವನ್ನು ಎದುರುನೋಡುವುದು ಸಾಧ್ಯವಲ್ಲ. ಈ ‘ಸಹಜ ಕ್ರಮವನ್ನು’ ಹಿಂಸೆಯ ಉಪಯೋಗದ ಅಥವಾ ಹಿಂಸೆಯನ್ನು ಉಪಯೋಗಿಸುವ ಬೆದರಿಕೆಯ ಮೂಲಕ ಎತ್ತಿ ಹಿಡಿಯಬೇಕೆಂದು ಎಣಿಸಲಾಗುತ್ತದೆ.
ಅಸ್ಪೃಶ್ಯತೆಯನ್ನು ನಿಷೇಧಿಸಿರಬಹುದು, ಸಂವಿಧಾನದಲ್ಲಿ ಸಮಾನತೆಯ ಸಿದ್ಧಾಂತವನ್ನು ಸ್ಥಾಪಿಸಿರಬಹುದು, ಆದರೂ ಭಾರತದ ಕುಖ್ಯಾತ ಜಾತಿ ಪದ್ಧತಿ ಇನ್ನೂ ರಾಜಾರೋಷವಾಗಿ ಆಳುತ್ತಿದೆ.ಎಲ್ಲಿಯವರೆಗೆ ನಮ್ಮ ಸಮಾಜದ ಅತಿ ದೊಡ್ಡ ಭಾಗವೊಂದು ಒಂದು ಶ್ರೇಣಿಯಲ್ಲಿ ಸಾಮಾಜಿಕ ಗುಂಪುಗಳನ್ನು ಕ್ರಮವಾಗಿ ಮೇಲಿಂದ ಕೆಳಗೆ ಜೋಡಿಸಿಡುವುದನ್ನು ಒಪ್ಪಿಕೊಳ್ಳುವುದೇ ಅಲ್ಲದೆ ಅದನ್ನು ಸಂಭ್ರಮಿಸುತ್ತದೆಯೋ ಅಲ್ಲಿಯವರೆಗೆ ನಾವು ಹಿಂದು ಮತ್ತು ಮುಸಲ್ಮಾನರ ಬಾಂಧವ್ಯವನ್ನು ಸಮಾನತೆಯ ಆದರ್ಶವು ನಿರ್ಧರಿಸುತ್ತದೆ ಎಂದು ನಂಬಿಕೊಳ್ಳುವುದು ನಮ್ಮ ಕಾಲ್ಪನಿಕ ಭ್ರಮೆಯಾಗುತ್ತದೆ. ಹಿಂದು ಶ್ರೇಣಿಯಲ್ಲಿ ಒಂದು ಪಂಗಡ ಎಷ್ಟು ಕೆಳಗಿನ ಸ್ಥರದಲ್ಲಿರುತ್ತದೆಯೋ ಅಷ್ಟು ಆ ಗುಂಪಿನ ಸದಸ್ಯರುಗಳ ಹಕ್ಕುಗಳೂ ಸಹ ಕಡಿಮೆಯಾಗಿರುತ್ತದೆ. ಯಾವ ಸಮಾಜದಲ್ಲಿ ಅಸಮಾನತೆಯು ಸಾಮಾನ್ಯವೆಂದೂ ಅಷ್ಟೇಕೆ ಆದರ್ಶವೆಂದೂ ಪರಿಗಣಿಸಲಾಗುತ್ತದೆಯೋ ಅಂಥಹ ಸಾಮಾಜಿಕ ವ್ಯವಸ್ಥೆಯ ಒಂದು ಭಾಗದಲ್ಲಿ ಸಮಾನತೆಯನ್ನು ಪರಿಕಲ್ಪಿಸುವುದು ಸಾಧ್ಯವಿಲ್ಲ.
ಹೀಗಿದ್ದೂ ಒಂದು ಶತಮಾನದಿಂದ ಕೆಳಗಿನ ಜಾತಿಗಳು ಈ ಅಸಮಾನ ಸಾಮಾಜಿಕ ರಚನೆಯನ್ನು ಬದಲಾಯಿಸಲು ಹೋರಾಟ ಮಾಡಿವೆ. ಅವರ ಪ್ರಯತ್ನಗಳಿಗೆ ಸರಿಸಮವಾಗಿ ಹಿಂದು ‘ಬಲ’ ದ ಯೋಜನೆಯೂ ಒಂದು ಶತಮಾನದಿಂದ ನಡೆಯುತ್ತಿದೆ. ಅದರಲ್ಲಿ ಮುಖ್ಯವಾಗಿ ಹಿಂದೂಮಹಾಸಭಾ ಮತ್ತು ರಾಷ್ಟ್ರೀಯ ಸ್ವಯಮ್ ಸೇವಕ ಸಂಘಗಳಿದ್ದು ಅವರು ಮೇಲು ಜಾತಿಗಳ ನೇತೃತ್ವದಲ್ಲಿ ಹಿಂದುಗಳನ್ನು ಒಗ್ಗೂಡಿಸಲು ತಮ್ಮ ಯೋಜನೆಯನ್ನು ನಡೆಸುತ್ತಿದ್ದಾರೆ.ಈ ಯೋಜನೆಯ ಪ್ರಮುಖ ಉದ್ದೇಶ ಏನೆಂದರೆ ಈಗಿರುವ ಸಾಮಾಜಿಕ-ಸಾಂಸ್ಕೃತಿಕ ಸ್ಥಿತಿಯನ್ನು ಹೀಗೆಯೇ ಕಾಪಾಡಿಕೊಂಡು ಬರುವ ಸ್ಥಿಗೆ ಎದುರಾಗುವ ಸಬಾಲ್ಟರ್ನ್ ಸವಾಲನ್ನು ಹೊಸೆದುಹಾಕುವುದು. ಪ್ರಜಾಸತ್ತಾತ್ಮಕ ರಾಜಕೀಯ ಆಳವಾಗಿ ಮತ್ತು ಉನ್ನತವಾಗಿ ಬೆಳೆದಂತೆಲ್ಲಾ ಈ ಸವಾಲು ತೀವ್ರವಾಗುತ್ತಿದೆ. ಅದರಲ್ಲೂ ಕಳೆದ ನಾಲ್ಕು ದಶಕಗಳಲ್ಲಿ ಇದು ಅದ್ಭುತವಾಗಿ ಬೆಳೆದಿದೆ.
ಸಬಾಲ್ಟರ್ನ್ ಸವಾಲುಗಳು ಎದುರಾದಾಗಲೆಲ್ಲಾ ಮುಸಲ್ಮಾನರನ್ನು ಕ್ರೂರಿಗಳಂತೆ ಬಿಂಬಿಸುವುದು ಹಿಂದು ‘ಬಲ’ದ ಸದಾಕಾಲದ ಕಾರ್ಯನೀತಿಯಾಗಿದೆ. ಇದರಿಂದಾಗಿ ಸಾಮಾಜಿಕ ನ್ಯಾಯವನ್ನು ಬೇಡುವ ಕೆಳಜಾತಿಯ ಹೋರಾಟಗಳನ್ನೆಲ್ಲಾ ತಾತ್ಸಾರ ಮಾಡಲು, ಬಗ್ಗುಬಡೆಯಲು ಮತ್ತು ಅದನ್ನು ಆಮಿಶದಿಂದ ಬೇರೆಡೆಗೆ ತಿರುಗಿಸಲು ಹಿಂದುತ್ವಕ್ಕೆ ಸಾಧ್ಯವಾಗಿದೆ. ತನ್ನನ್ನು “ಚಾಯಿವಾಲಾ’ ಎಂದು ಕರೆದುಕೊಳ್ಳುವ ಮತ್ತು ತನ್ನನ್ನು (ಒಬಿಸಿ) ಎಂದು ಗುರುತಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರಿಂದ ಈ ಹಿಂದುತ್ವಕ್ಕೆ ಹೊಸ ಯಶಸ್ಸು ಸಿಕ್ಕಿದೆ.
ಈ ದೃಷ್ಟಿಕೋನದಿಂದ, ಭಾರತದ ಎರಡು ಧರ್ಮಗಳ ನಡುವಿನ ಏರುತ್ತಿರುವ ಸಂಘರ್ಷ, ಅಮೂರ್ತ ಸೆಕ್ಯುಲರಿಸಮ್ಮಿನ ಸೋಲಿಗೆ ಸಾಕ್ಷಿಯಲ್ಲ. ಅಥವಾ ಕೆಲವು ರಾಜಕೀಯ ಪಂಡಿತರ ಅಭಿಪ್ರಾಯದಂತೆ ಅದರ ಅನುರಣವು ಭಾರತೀಯರಲ್ಲಿ ಇಲ್ಲದಿರುವುದೂ ಅಲ್ಲ. ಈ ಸಂಘರ್ಷ ರಾಜಕೀಯದ ಪರಿಣಾಮ. ಆ ರಾಜಕೀಯ ಈ ಸಂಘರ್ಷವನ್ನು ಯಥಾಸ್ಥಿತಿಯಲ್ಲಿ ಇರಿಸಿ ಅದನ್ನು ಬಲಪಡಿಸುತ್ತಾ, ಸಬಾಲ್ಟರ್ನ್ ವ್ಯಗ್ರತೆಯನ್ನು ಸುಲಭವಾಗಿ ಗುರಿಯಾಗಿಸಬಲ್ಲ ಧಾರ್ಮಿಕ ಅಲ್ಪಸಂಖ್ಯಾತರೆಡೆಗೆ ತಿರಿಗಿಸಲು ನೋಡುತ್ತದೆ.
ಹೀಗಿದ್ದೂ ರಾಜಕೀಯ ವಿಜ್ಞಾನಿಯಾದ ಯೋಗೇಂದ್ರ ಯಾದವ್ ಅವರು ನಮ್ಮ ಪ್ರಜಾಸತ್ತೆಯ ಈ ವಿಚಾರಗಳನ್ನು ನಿಲ್ರ್ಯಕ್ಷಿಸುತ್ತಾರೆ. ಅವರು ತಮ್ಮ ಇತ್ತೀಚಿನ ಪ್ರಭಂದದಲ್ಲಿ “ಸೆಕ್ಯುಲರಿಸಮ್ ಸೋತಿದ್ದು ಏಕೆಂದರೆ ಅದು ನಮ್ಮ ಪರಂಪರೆಯ ಭಾಷೆಯೊಡನೆ ನಂಟು ಬೆಳೆಸುವಲ್ಲಿ ವಿಫಲವಾಯಿತು. ಏಕೆಂದರೆ ಅದು ನಮ್ಮ ಧರ್ಮಗಳ ಭಾಷೆಯನ್ನು ಕಲಿತು ಆಡಲು ನಿರಾಕರಿಸಿತು” ಎಂದು ಬರೆದಿದ್ದಾರೆ. ಆದರೆ ಅವೇ ನಮ್ಮ ಪರಂಪರೆಯ ಮತ್ತು ಧರ್ಮದ ಭಾಷೆಗಳು ಸಾಮಾಜಿಕ ಅಸಮಾನತೆಯನ್ನು ಅನುಮೋದನೆ ಮಾಡಿವೆ.
ಯಾದವ್ ಅವರು ಮತ್ತೂ ಹೀಗೆ ಹೇಳುತ್ತಾರೆ, ” ನಮ್ಮ ಕಾಲಕ್ಕೆ ತಕ್ಕಂತೆ ಹಿಂದು ಧರ್ಮದ ಒಂದು ಹೊಸ ನಿರೂಪಣೆಯನ್ನು ನೀಡುವುದರ ಬದಲು ಸೆಕ್ಯುಲರಿಸಮ್ ಹಿಂದು ಧರ್ಮವನ್ನು ಲೇವಡಿ ಮಾಡಿತು. ಆದ್ದರಿಂದ ಅದರ ಸೋಲಾಯಿತು. ” ಆ ರೀತಿಯ ಹಿಂದು ಧರ್ಮದ ಹೊಸ ನಿರೂಪಣೆ ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಗೌರವಿಸುವಂತೆ ಎಲ್ಲಾ ಜಾತಿಯವರನ್ನೂ ಅದೂ ಅತ್ಯಂತ ಕೆಳಗಿನ ಜಾತಿಯವರನ್ನೂ ಗೌರವಿಸುತ್ತಿತ್ತೇ? ನಾವು ನಿಜವಾಗಿಯೂ ಧರ್ಮ ಮತ್ತು ಸೆಕ್ಯುಲರಿಸಮ್ಮುಗಳ ಬಗೆಗೆ ಯೋಚಿಸುವಾಗ ಜಾತಿಯನ್ನು ಉಲ್ಲೇಖಿಸದಿರಲು ಸಾಧ್ಯವೇ?
ಯಾದವ್ ಅವರಿಗೆ ಪ್ರತಿವಾದ ಮಾಡುತ್ತಾ ಅಂಕಣಕಾರರೂ ಶಿಕ್ಷಣತಜ್ಞರೂ ಆದ ಪ್ರತಾಪ್ ಭಾನು ಮೆಹ್ತಾ ಹೀಗೆ ವಾದಿಸುತ್ತಾರೆ. “ಧರ್ಮವನ್ನು ಒಂದು ರಾಜಕೀಯ ವಿಷಯವಾಗಿ ಗಂಭೀರವಾಗಿ ಪರಿಗಣಿಸುವುದರಿಂದ ಕೋಮುವಾದದ ಸಮಸ್ಯೆಯನ್ನು ಬಗೆಹರಿಸಬಹುದು ಎನ್ನುವುದು ಐತಿಹಾಸಿಕವಾಗಿ ಸಂದೇಹಾಸ್ಪದವಾದ ಸಂಗತಿ.” ತಮ್ಮ ವಾದವನ್ನು ಧೃಡಪಡಿಸಲು ಮೆಹ್ತಾರವರು ಉದಾಹರಣೆಗಳನ್ನು ನೀಡುತ್ತಾರೆ. ಅವರು ಮತ್ತೆ ಹೀಗೆ ಬಿಚ್ಚುಮಾತಿನಿಂದ ಹೇಳುತ್ತಾರೆ, ” ನಾವು ಈ ದುಷ್ಟಮೃಗವನ್ನು ಅದರ ನೈಜತೆಯನ್ನು ಗುರುತಿಸಿ ಹೆಸರಿಸೋಣ. ಧರ್ಮದ ಮತ್ತು ಸೆಕ್ಯುಲರಿಸಮ್ಮುಗಳ ಧರ್ಮಶ್ರದ್ಧೆಯ ಹಿಂದೆ ನಾವು ಅವಿತುಕೊಳ್ಳುವುದು ಬೇಡ. ” ಮತ್ತೆ ಮೆಹ್ತಾ ಹೇಳಿದಂತೆ ಈ ಮೃಗವು ಪೂರ್ವಾಗ್ರಹವನ್ನು ಒಪ್ಪಿಕೊಂಡುಬಿಡುತ್ತಾ ಅದನ್ನು ಸಹಿಸಿಕೊಳ್ಳುತ್ತಿದೆ. ಅಂದರೆ ಅದು ಮುಸಲ್ಮಾನರನ್ನು ಭಾರತೀಯ ಕಥಾನಕದಿಂದ ಹೊರಗಿಟ್ಟು ಅಂಚಿಗೆ ತಳ್ಳಿಬಿಡುವುದು.
ಆದರೂ ಯಾದವ್ ಅವರು ಈ ಮೃಗವು ಮಾನವೀಯತೆಗೆ ಯಾಕೆ ಕಿಂಚಿತ್ತೂ ಕಾಳಜಿ ತೋರುತ್ತಿಲ್ಲ ಮತ್ತು ಅದು ಏಕೆ ಮಾನವೀಯತೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ ಎಂದನ್ನು ವಿವರಿಸುವುದಿಲ್ಲ. ನಿಜವಾಗಿ ಹೇಳಬೇಕೆಂದರೆ ಸೆಕ್ಯುಲರಿಸಮ್ಮಿನ ಅವನತಿಯ ಬಗೆಗಿನ ಯಾವುದೇ ಚರ್ಚೆಯಲ್ಲಿ ಯಾವುದು ಸಂಗತವೆಂದರೆ ಅದು ಯಾವ ನಿರ್ದಿಷ್ಠ ಘಟ್ಟದಲ್ಲಿ ಮೆಹ್ತಾ ಹೆಸರಿಸುವ ಈ ಮೃಗವು ಹೊರಹೊಮ್ಮಿತು ಎಂಬುದು. ಅಲ್ಲದೆ, ಏಕೆ ಅದರ ನಡವಳಿಕೆಯು ಕಾಲಸರಿದಂತೆ ಹೆಚ್ಚುಹೆಚ್ಚು ಪುಂಡಾಟಿಕೆಯದಾಗಿ ಮತ್ತು ಭಯಾನಕವಾಗಿ ಬದಲಾಗುತ್ತಿದೆ ಎಂಬುದು.
ಒಂದು ಸಾಲಿನ ಬರಹಗಾರರು ಈ ಮೃಗದ ಹೊರಹೊಮ್ಮುವಿಕೆಯನ್ನು, ಒಬ್ಬರಾದ ನಂತರ ಒಬ್ಬರು ಆಡಳಿತಮಾಡಿದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಆಡಳಿತದ ಸಮಯದವರೆಗೂ ಹಿಂಬಾಲಿಸಿದ್ದಾರೆ. 1980 ರಲ್ಲಿ ಜನತಾ ಸರಕಾರದ ಕುಸಿತದ ನಂತರ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ವಾಪಸ್ ಬಂದ ಮೇಲೆ, ಅವರು ಎಗ್ಗಿಲ್ಲದೆ ಹಿಂದು ಎಂಬ ಗುರುತನ್ನು ಉಪಯೋಗಿಸಿಕೊಂಡರು ಮತ್ತು ಅದರಿಂದ ಹಿಂದುತ್ವ ನಂಬಿಕೆಗಳಿಸಿತು ಎಂದು ಆ ಬರಹಗಾರರು ಸರಿಯಾಗಿಯೇ ತೋರಿಸಿಕೊಟ್ಟಿದ್ದಾರೆ.
ಅವರು ಪಂಜಾಬಿನ ಸಮಸ್ಯೆಯನ್ನು ಹಿಂದು ಮತ್ತು ಸಿಖ್ ಸಮಸ್ಯೆಯನ್ನಾಗಿ ಮಾಡಿದರು. 1983 ರ ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ಮುಚ್ಚುಮರೆಯಿಲ್ಲದೇ ಹಿಂದೂ ಮತಗಳಿಗಳನ್ನು ಸೆಳೆದುಕೊಳ್ಳಲು ನೋಡಿ ಅಲ್ಲಿನ ಬಹುಸಂಖ್ಯಾತರಲ್ಲಿ ಆತಂಕ ಮೂಡಿಸಿದರು. ಈ ಆತಂಕ 1984ರ ಸಿಖ್ಖರ ವಿರುದ್ಧದ ಕಾರ್ಯಾಚರಣೆ ಮತ್ತು ಸುವರ್ಣ ಮಂದಿರದ ಮೇಲಿನ ಆಕ್ರಮಣದಿಂದಾಗಿ ಉತ್ತುಂಗಕ್ಕೇರಿತು. ಅದು, ಅದೇ ವರ್ಷದ ಕೊನೆಯಲ್ಲಿ ಅವರದೇ ಹತ್ಯೆಯಲ್ಲಿ ಕೊನೆಗೊಂಡಿತು.ಜಿiಟಿಜ
ತನ್ನ ತಾಯಿಯ ನಂತರ ಆಡಳಿತ ನಡೆಸಿದ ರಾಜೀವ್ ಗಾಂಧಿಯವರು ಶಾಹ್ ಬಾನೂ ಕೇಸಿನಲ್ಲಿ ಸರ್ವೋಚ್ಚನ್ಯಾಯಾಲಯದ ತೀರ್ಪನ್ನು ಪಲ್ಲಟ ಮಾಡಿದರು. ಸಲ್ಮಾನ್ ರಶ್ದೀರವರ ಸಟಾನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಿದರು. ಆಮೇಲೆ ಸಂಪ್ರದಾಯವಾದೀ ಮುಸಲ್ಮಾನರನ್ನು ಅತಿಯಾಗಿ ಬೆಂಬಲಿಸಿದ್ದರಿಂದ ಅದನ್ನು ಸ್ವಲ್ಪ ಮಟ್ಟಿಗೆ ಸಮತೋಲನ ಮಾಡಲು ಬಾಬರಿ ಮಸೀದಿಗೆ ಲಗತ್ತಿಸಿದ್ದ ಬೀಗವನ್ನು ಮುರಿಸಿದರು.
ಈ ಕಥಾನಕ 1980 ರಿಂದ ಗಾಂಧಿಗಳು ಮತ್ತು ಕಾಂಗ್ರೆಸ್ಸಿನಲ್ಲಾದ ಬದಲಾವಣೆಯನ್ನು ವಿವರಿಸುವುದಿಲ್ಲ. ಅವರಲ್ಲಾದ ಬದಲಾವಣೆ ವಿವರಿಸಲು ಅಸಾಧ್ಯದಂತೆ ತೋರುತ್ತದೆ.
ಶ್ರೀಮತಿ ಗಾಂಧಿಯವರಿಗೆ ಸೆಕ್ಯುಲರ್ ತಲೆಪಟ್ಟಿಯಿಂದ ಹಿಂದು ತಲೆಪಟ್ಟಿಗೆ ಬದಲಾಗುವ ಕಾರ್ಯನೀತಿ ಅವರ ಕುಗ್ಗುತ್ತಿದ್ದ ತಳಮಟ್ಟದ ಬೆಂಬಲಿಗರ ಜನಸಮೂಹವನ್ನು ಉಳಿಸಿಕೊಳ್ಳುವುದಕ್ಕಾಗಿ ಆಗಿತ್ತು. ಕೆಳಗಿನ ಜಾತಿಯವರು ಅದರಲ್ಲೂ ಒಬಿಸಿಯವರು ಕಾಂಗ್ರೆಸ್ಸನ್ನು ತೊರೆಯುವುದರಿಂದ ಮತ್ತು ತಮ್ಮನ್ನು ತಾವು ಅವರು ಸ್ವಸಮರ್ಥನೆ ಮಾಡಿಕೊಳ್ಳತೊಡಗಿದ್ದರ ಪರಿಣಾಮವಾಗಿ ಆ ಜನಸಮೂಹದ ಸಂಖ್ಯೆ ಕ್ಷೀಣಿಸತೊಡಗಿತ್ತು. ಕಾಂಗ್ರೆಸ್ಸಿನ ನಾಯಕತ್ವದಲ್ಲಿ ಒಂದು ಲಂಬವಾದ ಶ್ರೇಣಿಯಲ್ಲಿ, ಮೇಲು ಜಾತಿಯವರಿಂದ ತಳದಲ್ಲಿ ಸೇರಿಸಿಕೊಳ್ಳಲ್ಪಟ್ಟಿದ್ದ ಮತ್ತು ಅಲ್ಲಿ ಅವರಿಗೆ ಸ್ಥಳ ಮಾದಿಕೊಡಲ್ಪಟ್ಟಿದ್ದ ಈ ಗುಂಪುಗಳು ತಮ್ಮದೇ ಪ್ರಾಬಲ್ಯವನ್ನು ತಾವೇ ಚಲಾಯಿಸಲು ಬಯಸಿದರು.
1967ರ ಚುನಾವಣೆಯಲ್ಲಿ ಮೊಳಕೆಯಾಗಿ ಅಂಕುರಿಸುತ್ತಿದ್ದ ಜಾತಿಯ ಹೋರಾಟದ ಚಿನ್ಹೆಗಳು ಕಾಣಿಸಿಕೊಂಡವು: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಸ್ ಚುನಾವಣೆಯಲ್ಲಿ ತನ್ನ ಅಧಿಕಾರ ಕಳೆದುಕೊಂಡಿತು. Christophe Jaffrelot ತನ್ನ ” ಹಿಂದಿ ಭಾಷೆಯ ಪ್ರದೇಶಗಳಲ್ಲಿ ಒಬಿಸಿಗಳ ಉದಯ” ಎಂಬ ಬರಹದಲ್ಲಿ 1967ರ ಚುನಾವಣೆಯಲ್ಲಿ ಹಲವಾರು ಹಿಂದುಳಿದ ಜಾತಿಯ ಎಮೆಲ್ಯೇಗಳು ಅದರಲ್ಲೂ ಯಾದವರು ಚುನಾಯಿತರಾದರೆಂಬುದನ್ನು ತೋರಿಸುತ್ತಾನೆ. ” ಅವರ ಸಂಖ್ಯೆ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದರೆ ಅದು ರಜಪೂತರಿಗಿಂತ ಒಂದು ಹೆಜ್ಜೆ ಮಾತ್ರಾ ಹಿಂದಿತ್ತು.( 24.1% ಗೆ ಎದುರಿನಲ್ಲಿ 14.8%)” ಎಂದು ಅವನು ಹೇಳುತ್ತಾನೆ. 1968ರ ಫೆಬ್ರವರಿಯಲ್ಲಿ ಬಿಪಿ ಮಂಡಲ್ ಅವರು ಬಿಹಾರದ ಮೊದಲ ಒಬಿಸಿ ಮುಖ್ಯಮಂತ್ರಿಯಾದರು. 1967 ರಿಂದ 1971 ರ ವರೆಗಿನ ಬಿಹಾರದ 9 ಮುಖ್ಯಮಂತ್ರಿಗಳಲ್ಲಿ ಇಬ್ಬರು ಮಾತ್ರಾ ಮೇಲ್ಜಾತಿಯವರು.
ಆದರೆ 1971 ರಲ್ಲಿ ಇಂದಿರಾ ಗಾಂಧಿಯವರು ಪಾಕೀಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ಗಳಿಸಿದ ವಿಜಯದ ರೂವಾರಿಯಾದರು.ಅದರ ಕಾರಣದಿಂದ ಆಗ ರಾಷ್ಟ್ರೀಯ ಮಟ್ಟದಲ್ಲಿ ಒಬಿಸಿಗಳ ಸ್ವಸಮರ್ಥನೆಗೆ ಕಡಿವಾಣ ಬಿತ್ತು. ಭಾರತದ ರಾಜನೀತಿಯ ಮೇಲೆ ಅವರು ರಾರಾಜಿಸಿದರು. ಅವರು ಕೈಗೊಂಡ ಇತರ ಕಾರ್ಯಾಚರಣೆಗಳಾದ ರಾಜಮನೆತನದವರಿಗೆ ಕೊಡುತ್ತಿದ್ದ ರಾಜಧನವಿತರಣೆಯನ್ನು ನಿಲ್ಲಿಸಿದ್ದು, ಬ್ಯಾಂಕ್ ಮತ್ತು ಗಣಿಗಳ ರಾಷ್ಟ್ರೀಕರಣ ಇವುಗಳಿಂದ ಅವರ ಸ್ಥಾನ ಉತ್ತುಂಗಕ್ಕೇರಿತ್ತು. ಹಾಗೂ ಇವೆಲ್ಲ ಕಾರ್ಯಾಚರಣೆಗಳನ್ನೂ ಅವರು ಸುಲಲಿತವಾಗಿ ತಮ್ಮ “ಗರೀಬಿ ಹಟಾವೋ’ ಪ್ರಚಾರದಲ್ಲಿ ಹೊಸೆದುಬಿಟ್ಟರು. ಈ ಕಾರ್ಯನೀತಿಗಳಿಂದ ಕಾಂಗ್ರೆಸ್ಸಿನ ಒಳೊಳೊಗಿನ ಕೊಳೆಯುವಿಕೆಯು ಆರಂಭವಾಗಿತ್ತು.
1977 ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ತಳಮಟ್ಟದ ಬೆಂಬಲದ ಕ್ಷೀಣಿಸುವಿಕೆ ತಾತ್ಕಾಲಿಕವಲ್ಲವೆಂದು ಸಂದೇಹವೇ ಇಲ್ಲದೆ ಸಾಬೀತಾಯಿತು. ತುರ್ತು ಪರಿಸ್ಥಿತಿಯಲ್ಲಿ ತಮ್ಮನ್ನು ನಡೆಸಿಕೊಂಡ ಮಿತಿಮೀರಿದ ದಂಡನೆಯ ರೀತಿಯಿಂದ ರೋಸಿಹೋದ ದಲಿತರು ಮತ್ತು ಮುಸಲ್ಮಾನರು, ಶ್ರೀಮತಿ ಗಾಂಧಿಯವರಿಂದ ಮತ್ತು ಕಾಂಗ್ರೆಸ್ಸಿನಿಂದ ದೂರ ಸರಿಯುವ ಚಿನ್ಹೆಗಳನ್ನು ತೋರ್ಪಡಿಸಲಾರಂಭಿಸಿದರು. ಮತ್ತೆ ತುರ್ತು ಪರಿಸ್ಥಿತಿಯ ಅನಂತರ, ಹಿಂದುಳಿದ ಜಾತಿಯ ನಾಯಕರುಗಳಾದ, ಬಿಹಾರದಲ್ಲಿ ಕರ್ಪೂರಿ ಥಾಕುರ್ ಮತ್ತು ಉತ್ತರ ಪ್ರದೇಶದಲ್ಲಿ ರಾಮ್ ನರೇಶ ಯಾದವ್ ಮುಖ್ಯಮಂತ್ರಿಗಳಾದರು. ಅವರು ಸರಕಾರದ ನೌಕರಿಗಳಲ್ಲಿ ಒಬಿಸಿಗಳಿಗೆ ಸ್ಥಳ ಕಾದಿರಿಸುವ ಕೋಟಾ ವ್ಯವಸ್ಥೆಯನ್ನು ಜಾರಿಗೆ ತಂದರು.
ಮೇಲ್ಜಾತಿಯ ಅಧಿಪತ್ಯಕ್ಕೆ ಸವಾಲೆದ್ದಿತು. ಅದನ್ನು ಶ್ರೀಮತಿ ಗಾಂಧಿಯವರು ಗಮನಿಸಿದರು. ಸಬಾಲ್ಟರ್ನ್ ಗುಂಪುಗಳ ಜಾತಿಯ ಗುರುತನ್ನು ಹಿರಿದಾದ ಹಿಂದು ಗುರುತಿನೊಡನೆ ಮಿಳಿತಗೊಳಿಸಲು ಅವರು ಹಿಂದು ತಲೆಪಟ್ಟಿಯನ್ನು ಉಪಯೋಗಿಸುವುದನ್ನು ಆರಿಸಿಕೊಂಡರು. ಅದರಿಂದ ಆ ಗುಂಪುಗಳ ಸ್ವಸಮರ್ಥನೆಯನ್ನು ಅವರು ಹೊಸಕಿಹಾಕಲು ಯೋಚಿಸಿದರು. ಸಿಖ್ಕರ ಉಗ್ರಗಾಮಿತ್ವಕ್ಕೆ ಎದುರಾಗಿ ರಾಷ್ಟ್ರೀಯತೆಗೆ ಮದವೇರಿಸುವ ಮದ್ದು ಉಣಿಸಲಾಯಿತು. ಅವರ ರಾಜಕೀಯದ ದೆಸೆಯಿಂದ 1980 ರ ದಶಕ ಗಲಭೆಗಳು ದಂಗೆಗಳ ದಶಕವಾಯಿತು. ಸಿಖ್ಕರ ವಿರುದ್ಧ ನಡೆದ ಕಾರ್ಯಾಚರಣೆಯೇ ಅಲ್ಲದೆ ಮೀರತ್, ಮುರಾದಾಬದ್, ಭಾಗಲ್ಪುರ ಮತ್ತು ನೆಲ್ಲೀಗಳಲ್ಲಿ ರಕ್ತಪಾತಗಳಾದವು.
ಆರೆಸ್ಸೆಸ್ಸಿನ ಮೂಲ ಯೋಜನೆಯಾದ ಹಿಂದೂಗಳನ್ನು ಒಗ್ಗೂಡಿಸಲು ಉಪಯೋಗಿಸುವ ಎಮ್-ಅಂಶ ಅಂದರೆ ಮುಸಲ್ಮಾನರು, ಈಗ ನ್ಯಾಯಸಮ್ಮತೆ ಪಡೆದುಕೊಂಡಿತ್ತು. ಎಂಭತ್ತರ ದಶಕದಲ್ಲೇ ಆರೆಸ್ಸೆಸ್ಸ್ ಮತ್ತು ಅದರ ರಾಜಕೀಯ ಸಹವರ್ಥಿಯಾದ ಭಾರತೀಯ ಜನತಾ ಪಕ್ಷಗಳು ರಾಮಜನ್ಮಭೂಮಿಯ ಹೋರಾಟವನ್ನು ಆರಂಭಿಸಲು ನಿರ್ಧರಿಸಿದ್ದು ಕಾಕತಾಳೀಯವೇನೂ ಅಲ್ಲ.
ಹಾಗಾಗಿ ವಿಪಿ ಸಿಂಗ್ ಆಡಳಿತ ಒಬಿಸಿಗಳಿಗಾಗಿ 27% ಮೀಸಲಾತಿಯನ್ನು ಜಾರಿಗೆ ತರಲು ನಿರ್ಧರಿಸಿದಾಗ, ಮೇಲ್ಜಾತಿಗಳು , ಸರಕಾರೀ ನೌಕರಿಗಳಲ್ಲಿ ತಮ್ಮ ಏಕಸ್ವಾಮ್ಯವನ್ನು ಒಡೆಯುವ ಅದರಿಂದಾಗಿ ರಾಷ್ಟ್ರದ ಪ್ರಾಬಲ್ಯದ ರಚನೆಯನ್ನು ಒಡೆಯುವ ಅವರ ಪ್ರಯತ್ನಕ್ಕೆ ಕಾಂಗ್ರೆಸ್ಸಿನಿಂದ ಹೆಚ್ಚು ಉತ್ಸಾಹದ ಧೃಢವಾದ ವಿರೋಧವನ್ನು ಬಯಸಿದ್ದರು. ಕಾಂಗ್ರೆಸ್ಸಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅದು ಪಾರಂಪರಿಕವಾಗಿ ಎಲ್ಲಾರನ್ನೂ ಹಿಡಿದುಕೊಳ್ಳುವ ಪಕ್ಷ ಮತ್ತು ಎಲ್ಲಾರಿಗೂ ಏನಾದರೂ ಆಗುವ ಪಕ್ಷ ಎಂದು ಕರೆಸಿಕೊಳ್ಳುತ್ತಿತ್ತು. ಅವರು ಹಾಗೇನಾದರೂ ಮೀಸಲಾತಿಯನ್ನು ವಿರೋಧಿಸಿದ್ದರೆ ತಮ್ಮ ಸಬಾಲ್ಟರ್ನ್ ಗುಂಪಿನ ಬೆಂಬಲಿಗರ ಅದರಲ್ಲೂ ದಲಿತರ ಬೆಂಬಲವನ್ನು ಕಳೆದುಕೊಳ್ಳಬೇಕಿತ್ತು.
ಹಿಂದಿ ಭಾಷೆ ಆಡುವ ಜನರ ಕೇಂದ್ರಪ್ರದೇಶಗಳಲ್ಲಿ ಮೇಲ್ಜಾತಿಯವರು ಆರೆಸ್ಸೆಸ್ ಮತ್ತು ಬಿಜಿಪಿ ಕಡೆಗೆ ತಿರುಗಿದರು. ಅಲ್ಲಿ ಹಿಂದೆ ಸೋತಿದ್ದ ಯೋಜನೆಯಾದ ಹಿಂದುಗಳನ್ನು ಒಗ್ಗೂಡಿಸುವ ಕಾರ್ಯ ಮತ್ತೆ ಆರಂಭವಾಯಿತು. ಮುಂದಿನ 1989ರ ಶಿಲಾನ್ಯಾಸ, 1990ಯ ಆದವಾನಿಯವರ ರಥಯಾತ್ರೆ, ಆಮೇಲೆ ಮುಂದಿನ ಎರಡು ವರ್ಷಗಳಲ್ಲಿ ಅಯೋಧ್ಯೆಯಲ್ಲಿ ನಡೆಸಿದ ಕರಸೇವಾ ಕಾರ್ಯಕ್ರಮಗಳು ಮತ್ತು ಅಂತ್ಯದಲ್ಲಿ 1992 ರಲ್ಲಿ ನಡೆದ ಬಾಬರಿ ಮಸೀದಿಯನ್ನು ಒಡೆದು ಉರುಳಿಸುವಿಕೆ, ಎಲ್ಲವೂ ನಡೆದವು. ಇದು ಎಲ್ಲಾ ಜಾತಿಯ ಹಿಂದೂಗಳಿಗೂ ಮುಸಲ್ಮಾನರ ವಿರುದ್ಧ ಒಂದುಗೂಡಲು ಹಿಂದುತ್ವ ನೀಡಿದ ಕರೆ. ಮುಸಲ್ಮಾನರು ಹಿಂದೂ ಮೇಲ್ಜಾತಿ ಮತ್ತು ಕೆಳಜಾತಿಯವರ ನಡುವಿನ, ನಾನು ಹೆಚ್ಚು ನಾನು ಹೆಚ್ಚು ಎಂಬ ಯುದ್ಧದಲ್ಲಿ ಮೂರನೆಯವಾಗಿ ಹಾನಿ ಅನುಭವಿಸಿದರು.
ಇದು ಪೂರ್ವಾಗ್ರಹದ ಮೃಗವನ್ನು ಹೊಂಚು ಹಾಕಿ ಬೇಟೆಯಾಡಲು ಛೂ ಬಿಡುವುದನ್ನು ಆರಂಭಿಸಿತು. ಏಕೆಂದರೆ ಅದೊಂದೇ ಸಬಾಲ್ಟರ್ನ್ ಸ್ವಸಮರ್ಥನೆಗಳನ್ನು ಹಿಂದಕ್ಕೆ ತಳ್ಳಿ ಜಾತಿಯ ಅಸಮಾನತೆಗಳು ಮುಂದುವರೆಯುವಂತೆ ಮಾಡಲು ಇದ್ದ ಖಂಡಿತವಾದ ಮಾರ್ಗ. ಆ ಮೃಗವನ್ನು ಕಟ್ಟಿನಿಂದ ಬಿಡಿಸಿದ್ದು ಮತ್ತು ಬೋನಿನಿಂದ ಬಿಟ್ಟುಬಿಟ್ಟಿದ್ದು ಸೆಕ್ಯುಲರಿಸಮ್ಮಿನ ಸೋಲಿನ ಕಾರಣದಿಂದಾಗಿ ಅಲ್ಲ. ಬದಲಾಗಿ ಜಾತಿ ಪದ್ಧತಿಯ ಬಗ್ಗೆ ಒಳಗೇ ಯಾವಾಗಲೂ ಇರುವ ಅನುದಾರವಾದಿತ್ವದ ದೆಸೆಯಿಂದ.
ಈಗಾಗಲೇ ರಕ್ತದ ರುಚಿ ನೋಡಿರುವ ಈ ಮೃಗವನ್ನು ಮತ್ತೆ ಬೋನಿನಲ್ಲಿ ಕಟ್ಟಲು ಅಸಾಧ್ಯ. ಅದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು ಏನೆಂದರೆ ಹಿಂದಿ ಕೇಂದ್ರಪ್ರದೇಶಗಳಲ್ಲಿ ಒಬಿಸಿ ನಾಯಕರುಗಳು ಜಾತೀಯ ರಾಜಕಾರಣವನ್ನು ಸಾಮಾಜಿಕ ನ್ಯಾಯಕ್ಕಾಗಿ, ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕ¿ಗಮ್ ದಶಕಗಳಿಂದ ಮಾಡಿರುವಂತೆ, ಒಂದು ವಿಶಾಲವಾದ ಚಳುವಳಿಯನ್ನಾಗಿ ಮಾಡಲಿಲ್ಲ. ಅಲ್ಲದೆ ಅವರು ದಲಿತರಿಗೂ ಮತ್ತು ಒಬಿಸಿಗಳಿಗೂ ನಡುವೆ ಇರುವ ಕಂದಕನ್ನು ಕಟ್ಟುವ ಸೇತುವೆಯಾಗಲಿಲ್ಲ. ಅಲ್ಲಿ ಒಬಿಸಿಗಳು ದಲಿತರ ಬಾಯಿ ಮುಚ್ಚಿಸಲು ಹಿಂಸಾಚಾರವನ್ನು ಉಪಯೋಗಿಸುತ್ತಾರೆ.
ಅದಕ್ಕಿಂತ ಕೆಟ್ಟದ್ದಾಗಿ ಒಬಿಸಿ ನಾಯಕರು ತಮ್ಮ ಸ್ಥಾನಕ್ಕೆ ಸವಾಲೆಸೆಯ ಬಹುದಾದ ಇತರ ನಾಯಕರುಗಳನ್ನು ತಮ್ಮ ಸ್ಥಳಗಳಿಂದ ಓಡಿಸಿ ಬಿಟ್ಟಿದ್ದಾರೆ. ಇದರ ಪರಿಣಾಮವಾಗಿ ಒಬಿಸಿ ಪಕ್ಷಗಳು ಕೆಲವು ಕುಟುಂಬಗಳು ನಾಯಕತ್ವ ವಹಿಸುವ ಗುಂಪುಗಳಾಗಿ ಹೋಗಿವೆ. ಪ್ರತಿ ಪಕ್ಷವೂ ಒಂದು ಒಬಿಸಿ ಜಾತಿಗೆ ಸೇರಿದ್ದು , ಅಂಥಹ ಪ್ರತಿ ಪಕ್ಷವೂ ಮುಸಲ್ಮಾನರ ವೋಟುಗಳಿಗಾಗಿ ಸ್ಪರ್ದಿಸುತ್ತವೆ. ಇದರಿಂದಾಗಿ ಅವೆಲ್ಲಾ ನಿಶ್ಶಃಕ್ತರಾಗಿವೆ.
ಹೀಗಿರುವಾಗ ಕಾಂಗ್ರೆಸ್ಸಿನ ಮೇಲ್ಜಾತಿಯ ನಾಯಕತ್ವವು ತಮ್ಮ ಸಹಜಾತಿಯ ಜನರು ಬಿಜೆಪಿಯ ಒಡನಾಟ ಸಾಕುಸಾಕಾಗಿ ಮತ್ತೆ ತಮ್ಮ ಬಳಿ ಮರಳುವರೆಂದು ಇನ್ನೂ ನಂಬಿಕೊಂಡು ಕಾಯುತ್ತಿದ್ದಾರೆ. ಅದರಿಂದಾಗಿಯೇ ಕಾಂಗ್ರೆಸ್ಸಿನ ಮುಖಂಡರುಗಳು ಆ ಪೂರ್ವಾಗ್ರಹದ ಮೃಗದ ಬಗ್ಗೆ ಬಿಚ್ಚುಮನಸ್ಸಿನಿಂದ ಮಾತನಾಡಲು ಇನ್ನೂ ಹಿಂಜರಿಯುತ್ತಿದ್ದಾರೆ. ಅದೇ ರೀತಿ ಒಬಿಸಿ ನಾಯಕರುಗಳೂ ಸಹ ಮುಸಲ್ಮಾನರು ಹೇಗಿದ್ದರೂ ಬಿಜೆಪಿಗೆ ಹೋಗಲಾರರು ಎಂದುಕೊಂಡಿದ್ದಾರೆ ಅದರಿಂದಾಗಿ ಅವರಿಗೆ ಆ ಪೂರ್ವಾಗ್ರಹದ ಮೃಗವನ್ನು ಮೋಹಿಸುವವರನ್ನು ದೂರ ಮಾಡಿಕೊಳ್ಳುವುದು ಚುನಾವಣೆಯ ಹಿತಾಸಕ್ತಿಯ ಕಾರಣಕ್ಕಾಗಿ ಸಾಧ್ಯವಿಲ್ಲ.
ಎರಡನೆಯದಾಗಿ ನರೆಂದ್ರ ಮೋದಿಯವರ ಸ್ವಂತ ಒಬಿಸಿ ವ್ಯಕ್ತಿರೂಪ. ಅವರು ಹಿಂದಿ ಕೇಂದ್ರಪ್ರದೇಶಗಳಲ್ಲಿ ತಮ್ಮನ್ನು ತಾವು ಒಬಿಸಿ ಎಂದು ಗುರುತಿಸಿಕೊಳ್ಳುವುದನ್ನೆಂದೂ ಮರೆಯುವುದಿಲ್ಲ. ಅದು, ಪಾರಂಪರಿಕವಾಗಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಶಕ್ತಿಗಳನ್ನು ಹಿಂದುತ್ವದೆಡೆಗೆ ಅಯಸ್ಕಾಂತದಂತೆ ಸೆಳೆದುಕೊಳ್ಳುತ್ತದೆ. ಅವರು ತಮ್ಮನ್ನು ತಾವು ‘ಚಾಯಿವಾಲಾ’ ಎಂದು ಕರೆದುಕೊಳ್ಳುವುದರಿಂದ ಕೆಳಜಾತಿಯ ಒಬಿಸಿ ಜನಗಳನ್ನು ಆಕರ್ಶಿಸುವ ಅವರ ಶಕ್ತಿಯನ್ನು ಅದು ಹೆಚ್ಚಿಸುತ್ತದೆ.
ಮೂರನೆಯದಾಗಿ ಭಾರತದ ಆರ್ಥಿಕತೆ ತಡವರಿಸುತ್ತಾ ಮುಗ್ಗರಿಸುತ್ತಾ ಹಿನ್ನಡೆದರೆ ಭಾರತೀಯರ ಕಷ್ಟಕಾರ್ಪಣ್ಯಗಳು ಹೆಚ್ಚಾಗುತ್ತವೆ. ಆಗ ಆ ಪೂರ್ವಾಗ್ರಹದ ಮೃಗವನ್ನು ಚಾವಟಿಯಿಂದ ಹೊಡೆದು ಅದು ಯಾವಾಗಲೂ ಘರ್ಜಿಸುತ್ತಿರುವಂತೆ ಇರಿಸಲಾಗುತ್ತದೆ. ಆ ಘರ್ಜನೆ ಮುಸಲ್ಮಾನರ ವಿರುದ್ಧವಿರುದೇನೋ ಸರಿಯೇ , ಅದರ ಜೊತೆ ಅದು ಉದಾರವಾದಿತ್ವವನ್ನೂ ‘ಎಡ’ ಆದರ್ಶಗಳನ್ನೂ ಬೆಂಬಲಿಸುವವರಿಗೂ ವಿರುದ್ಧವಾಗಿರುತ್ತದೆ. ಇದು ಹಿಂದೆಯೂ ಇದ್ದು ಮುಂದೆಯೂ ಇರುವ ಒಂದು ಮುಖ್ಯ ಅಂಶ. ಅರ್ಥಶಾಸ್ತ್ರಜ್ಞ ಜೀನ್ ಡ್ರೀಝ್ ಹೇಳುವಂತೆ ಇದು, “ಮೇಲ್ಜಾತಿಯ ಜನರ ಬಂಡಾಯ ‘. ಇದನ್ನು ಗುರುತಿಸಿ ವಿರೋಧಿಸಬೇಕು. ಮತ್ತು ಜಾತಿಯ ಸಮಾನತೆಯ ಹುಡುಕಾಟವನ್ನು ಕೇಂದ್ರವನ್ನಾಗಿ ಮಾಡಬೇಕು. ಹಾಗೆ ಮಾಡದಿದ್ದರೆ ಸೆಕ್ಯುಲರಿಸಮ್ ಒಂದು ಸೋತುಹೋದ ಆದರ್ಶವಾಗಿ ನಿಂತು ಬಿಡುತ್ತದೆ. ಮತ್ತು ಮುಸಲ್ಮಾನರು ಪೂರ್ವಾಗ್ರಹದ ಶಿಲುಬೆಯನ್ನು ಹೊರುತ್ತಾರೆ.
ಕೃಪೆ: newsclick.in
ಚರ್ಚೆಯ ಮೊದಲನೇ ಬರಹ ಇಲ್ಲಿದೆ: https://ruthumana.com/2020/09/15/yogendra-yadaav-ayodhye/
ಚರ್ಚೆಯ ಎರಡನೇ ಬರಹ ಇಲ್ಲಿದೆ: https://ruthumana.com/2020/11/06/pratap_bhanu_mehta_yogendra_yadav/
ಅನುವಾದ : ಜಯಶ್ರೀ ಜಗನ್ನಾಥ
ಫ಼್ರೆಂಚ್ ಭಾಷೆಯ ಉಪನ್ಯಾಸಕಿ . ಬರೆಯುವುದು, ಭಾಷಾಂತರ ಮಾಡುವುದು ಇವು ನನ್ನ ಕೆಲಸಗಳು. ಪ್ರವಾಸ ಮಾಡುವುದು, ಓದುವುದು, ಸಹೃದಯರೊಂದಿಗೆ ಸಂಭಾಷಣೆ ಹವ್ಯಾಸಗಳು. ತನ್ನ ಸುತ್ತಮುತ್ತಿನ ಪರಿಸರಕ್ಕೆ ಪ್ರತಿಕ್ರಿಯಿಸಿವುದು ಮತ್ತು ಅಭಿವ್ಯಕ್ತಿಸುವುದು ತನಗೆ ಅನಿವಾರ್ಯ, ಅಗತ್ಯ ಎಂದುಕೊಂಡು ಬರೆತ್ತಿರುವ ಜಯಶ್ರೀ ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ .
ಅಜಾಜ್ ಅಶ್ರಫ್ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸವನ್ನು ಅಧ್ಯಯನ ಮಾಡಿದರು ಮತ್ತು ಈಗ ನವದೆಹಲಿಯಲ್ಲಿ ವಾಸ . ಇಪ್ಪತ್ತಾರು ವರ್ಷಗಳ ವೃತ್ತಿಜೀವನದಲ್ಲಿ, ಅವರು ದಿ ಪಯೋನೀರ್, ಹಿಂದೂಸ್ತಾನ್ ಟೈಮ್ಸ್ ಮತ್ತು ಔಟ್ಲುಕ್ಗಾಗಿ ಕೆಲಸ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ, ಸ್ವತಂತ್ರ ಪತ್ರಕರ್ತರಾಗಿ ದಿ ಹಿಂದೂ, ಮಿಂಟ್, ತೆಹಲ್ಕಾ, ಡಿಎನ್ಎ, ಫಸ್ಟ್ಪೋಸ್ಟ್ ಮತ್ತು ದಿ ಹೂಟ್ಗಾಗಿ ಅಭಿಪ್ರಾಯವನ್ನು ಬರೆಯುತಿದ್ದಾರೆ. ರಾಂಡಮ್ ಹಾರ್ವೆಸ್ಟ್ ಅವರ ಮೊದಲ ಕಾದಂಬರಿ.