ಸಂಗೀತದಲ್ಲಿ ಕನ್ನಡ ಮತ್ತು ಕನ್ನಡಿಗರ ಬೇಡಿಕೆಯಿಂದಾಗಿ ಇಪ್ಪತ್ತನೇ ಶತಮಾನದ ಕೊನೆಗೆ ಸುಗಮ ಸಂಗೀತ ಎಂಬ ಒಂದು ಹೊಸ ಪ್ರಕಾರವು ಉಗಮವಾಯಿತು. ಕನ್ನಡದ ಹಾಡುಗಳು ಬೇಕೆಂಬ ಬೇಡಿಕೆಯೆಷ್ಟೋ ಅಷ್ಟೇ ಗಾಢವಾಗಿ ತಮಿಳೆಂಬ „ಅನ್ಯ‟ದ ಅಸ್ತಿತ್ವ, ಔದ್ಯೋಗಿಕ ಮತ್ತು ತಾಂತ್ರಿಕ ಅಭಿವೃದ್ಧಿಗಳು, ಸುಲಭ ಬೆಲೆಗೆ ಕನ್ನಡ ಸಾರ್ವಜನಿಕದ ಕೈಗೆಟಕುವ ಇಲೆಕ್ಟ್ರಾನಿಕ್ ಉಪಕರಣಗಳೂ ಈ ಉಗಮಕ್ಕೆ ಕಾರಣವಾದವು ಎನ್ನುವುದನ್ನು ಗಮನಿಸಬೇಕು.
ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ – https://ruthumana.com/2020/05/02/carnatic-music-kannada-and-kannadigas-part-1
ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ – https://ruthumana.com/2020/05/02/carnatic-music-kannada-and-kannadigas-part-2/
ಭಾಗ ೩ : ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ – https://ruthumana.com/2020/05/03/carnatic-music-kannada-and-kannadigas-part-3/
ಭಾಗ ೪ : ಶಾಸ್ತ್ರೀಯತೆ, ಕನ್ನಡತನ ಮತ್ತು ಪೋಷಕರು – https://ruthumana.com/2020/05/09/carnatic-music-kannada-and-kannadigas-part-4/
ಭಾಗ ೫: ‘ಕರ್ನಾಟಿಕ್’ ಸಂಗೀತ ಪರಂಪರೆ ಮತ್ತು ಮೈಸೂರಿನ ಸಂಗೀತ – https://ruthumana.com/2020/05/26/carnatic-music-kannada-and-kannadigas-part-5/
ಭಾಗ ೬: ಶಾಸ್ತ್ರೀಯತೆ, ಕನ್ನಡ ಮತ್ತು ದಾಸರ ಪದಗಳು: https://ruthumana.com/2020/06/12/carnatic-music-kannada-and-kannadigas-part-6/
ಭಾಗ ೭ : ದಾಸಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ : https://ruthumana.com/2020/06/24/carnatic-music-kannada-and-kannadigas-part-7/
ಸಂಗೀತ, ಸಾಹಿತ್ಯ, ಇತ್ಯಾದಿಗಳು ತಟಸ್ಥವಾದ ಮುಗ್ಧ ಕಲಾಪ್ರಕಾರಗಳಲ್ಲ. ಈವರೆಗಿನ ಸಂಚಿಕೆಗಳಲ್ಲಿ ಮೈಸೂರು ಮತ್ತು (ತಮಿಳುನಾಡಿನ) ಕರ್ನಾಟಿಕ್ ನಲ್ಲಿ ಸಂಗೀತವು ಹೇಗೆ ಭಾಷೆ, ವಸಾಹತುಶಾಹಿ, ಪರಂಪರೆ, ಇವುಗಳಿಂದೆಲ್ಲ ಪ್ರಭಾವಗೊಂಡು ರೂಪುಗೊಂಡಿತ್ತು ಎಂದು ನೋಡಿದೆವು. ಮೈಸೂರಿನ ಸಂಗೀತ ಸಂದರ್ಭದಲ್ಲಿ ಕನ್ನಡದ ಪ್ರಸ್ತಾಪ ಬಂದಾಗ ಮಧ್ಯಮ ಮಾರ್ಗವೆಂಬಂತೆ ದಾಸಸಾಹಿತ್ಯದಂಥ ಸಾಹಿತ್ಯ ಪ್ರಕಾರಗಳು ಶಾಸ್ತ್ರೀಯ ಚೌಕಟ್ಟಿಗೆ ಪ್ರವೇಶಿಸಿದ್ದನ್ನು ನೋಡಿದೆವು. ಹೀಗೇ ಮುಂದುವರೆದು ದಾಸಸಾಹಿತ್ಯ ಉದ್ಧೃತವಾದ ಸಂದರ್ಭ, ಅದು ಸಂಗೀತದ ಭಾಗವಾದ ರೀತಿ, ಇವೆಲ್ಲವುಗಳನ್ನು ಗಮನಿಸಿದಾಗ ಆ ಪ್ರಕಾರವು ಕೆಲವೊಂದು ಸಾಮುದಾಯಿಕ ಹಿತಾಸಕ್ತಿಗಳ ತಿಕ್ಕಾಟದ ಭೂಮಿಕೆಯಾಗಿ ಮೂಡಿಬರುವುದನ್ನು ಕಾಣಬಹುದು: ಮೊದಲನೆಯದಾಗಿ ಬ್ರಾಹ್ಮಣ ಮತ್ತು ಲಿಂಗಾಯತರ ನಡುವೆ ಮತ್ತು ಎರಡನೆಯದಾಗಿ, ಬೆಂಗಳೂರಿನ „ಕನ್ನಡಾಭಿಮಾನಿಗಳು‟ ಮತ್ತು ತಮಿಳರ ನಡುವೆ. ಇವನ್ನು ಚರ್ಚೆ ಮಾಡುತ್ತಾ ಈ ವಿಷಯಗಳಿಗೂ ಕರ್ನಾಟಕ ಸಂಗೀತದ ಸಂಕಥನಕ್ಕೂ ಹೇಗೆ ಸಂಬಂಧವಿದೆ ಎಂಬುದನ್ನು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಸಂಗೀತಕ್ಕೆ ಸಂಬಂಧಪಟ್ಟಂತೆ ಕೃಷ್ಣರಾಜ ಒಡೆಯರ ಮೂಲಕ ಕೇಳಿಬಂದ ಕನ್ನಡದ ಪ್ರಶ್ನೆಯನ್ನು ಆಗಿಹೋಗುವ ಒಂದು ವಿದ್ಯಮಾನವೆಂದು ಬದಿಗಿಡಲು ಸಾಧ್ಯವಿಲ್ಲ. ಅಥವಾ ಕನ್ನಡದ ಪ್ರಶ್ನೆಯು ಕರ್ನಾಟಕ ಸಂಗೀತ ಪರಂಪರೆಯನ್ನು ಎದುರಿಸಲಾಗದೆ ವಿಫಲಗೊಂಡಂಥ ಸಂಗತಿಯೂ ಅದಲ್ಲ. ಈ ವಿದ್ಯಮಾನವನ್ನು ಅದರ ಹಿಂದುಮುಂದುಗಳನ್ನು ತಿಳಿಯುವ ಮೂಲಕ ಕನ್ನಡದ ಅಸ್ಮಿತೆಯ ಅರಿವಿನ ಆರಂಭದ ದಿನಗಳೆಂದು ತಿಳಿಯಬೇಕಾಗುತ್ತದೆ. ಈ ಕನ್ನಡ ಅಸ್ಮಿತೆಯ ಹುಡುಕುವಿಕೆಯು ಪ್ರಾರಂಭದಲ್ಲಿ ಮೈಸೂರಿನ ವಿಶಿಷ್ಟತೆಯನ್ನು ಸಾರುವ ಪ್ರಭುತ್ವದ ಪ್ರಯತ್ನದ ಭಾಗವೇ ಆಗಿತ್ತು ಎನ್ನುವುದು ಮುಖ್ಯ. ಕೃಷ್ಣರಾಜ ಒಡೆಯರು ಎತ್ತಿದ ಕನ್ನಡದ ಪ್ರಶ್ನೆಯು ಶಾಸ್ತ್ರೀಯ ಸಂಗೀತ ಕ್ಷೇತ್ರವನ್ನು ಪ್ರವೇಶಿಸಲು ಒಪ್ಪದೇ ಇದ್ದಂತೆ ಕಂಡರೂ ಅಲ್ಲಿ ಅದು ಒಂದು ಬಿರುಕನ್ನುಂಟುಮಾಡಿತು. ತಕ್ಷಣಕ್ಕೆ ಆ ಬಿರುಕು ಕಾಣದೇ ಇದ್ದರೂ ಅದು ಮುಂದಿನ ಸಾರ್ವಜನಿಕ ಬದುಕಿನಲ್ಲಿ ಹೊಸ ಬಗೆಯ ಕನ್ನಡ ಸಂಗೀತವೊಂದರ ಉಗಮಕ್ಕೆ ಕಾರಣವಾಯಿತು. ದೇವದಾಸಿಯರ ಜಾವಳಿಗಳನ್ನು ಇಷ್ಟಪಡುವವರು, ದಾಸರ ಪದಗಳ ಬಗ್ಗೆ ಆಸಕ್ತಿ ಇಟ್ಟವರು, ನಾಟಕ ಸಂಗೀತ ಪ್ರಿಯರು, ಗಮಕಾಸಕ್ತರು, ಆಧುನಿಕ ನವೋದಯ ಸಾಹಿತ್ಯಕ್ಕೆ ಪ್ರವೇಶಿಸಿದವರು, ಕನ್ನಡದ ಬಗ್ಗೆ ಪ್ರತ್ಯೇಕ ಅಭಿಮಾನವಿಟ್ಟವರು, ಕನ್ನಡ ಚಳುವಳಿಗಾರರು, ತಮಿಳು ವಿರೋಧಿಗಳು, ಹೀಗೆ ಭಿನ್ನ ಹಿನ್ನೆಲೆಯುಳ್ಳ ಸಂಗೀತಾಸಕ್ತರು ಆಧುನಿಕ ಸಾರ್ವಜನಿಕದಲ್ಲಿ ಕ್ರೋಢೀಕರಣಗೊಂಡು„ಸುಗಮಸಂಗೀತ‟ ವೆನ್ನುವ ಒಂದು ಬೇರೆಯೇ ಪ್ರಕಾರಕ್ಕೆ ಶ್ರೋತೃಗಳಾಗಿ ಅನುವುಮಾಡಿದರು. ಇವರಲ್ಲಿ ಹಲವರು ಈ ಮುಂಚೆ „ಪಕ್ಕಾ‟ ಎನ್ನಬಹುದಾಗಿದ್ದ ಶಾಸ್ತ್ರೀಯ ಸಂಗೀತದ ಶ್ರೋತೃಗಳಾಗಬಹುದಾಗಿದ್ದವರು. ಬದಲಾಗುತ್ತಿದ್ದ ಸನ್ನಿವೇಶದಲ್ಲಿ, ಬದಲಾದ ಸಂವೇದನೆಗಳ ಮೂಲಕ ಶಾಸ್ತ್ರೀಯದಲ್ಲಿ ಸುಖ ಕಾಣದೇ ಹೊಸಬಗೆಯ ಸಂಗೀತಕ್ಕೆ ಶ್ರೋತೃಗಳಾಗಿ ಆ ಪ್ರಕಾರವನ್ನುಅಪ್ರತ್ಯಕ್ಷವಾಗಿ ಕಟ್ಟಿದವರು ಕೂಡಾ. ಆದ್ದರಿಂದ ಶಾಸ್ತ್ರೀಯ ಸಂಗೀತವು ಬರೇ „ಆಂತರಿಕ‟ ವೆನಿಸಬಹುದಾದ ರಾಗ, ಸ್ವರ, ತಾಳ,ಸ್ವರಗುಚ್ಛ, ಸಾಹಿತ್ಯವೆಂಬಿತ್ಯಾದಿ ಅಂಶಗಳಿಂದ ಮಾತ್ರ ಪೋಣಿಸಲ್ಪಟ್ಟು ಅಂತರ್ಮುಖಿಯಾಗಿ ಕಂಡರೂ, „ಬಾಹ್ಯ‟ ಸಂಗತಿಗಳಾದಭಾಷೆ, ಪೋಷಣಾ ವ್ಯವಸ್ಥೆ (Patronage), ವಸಾಹತುಶಾಹಿ, ಪರಂಪರೆಯ ಬಂಧ, ಸಾರ್ವಜನಿಕ (Public) ದ ಗುಣ-ಲಕ್ಷಣ, ಇತ್ಯಾದಿ ಸಮಾಜೋ-ಆರ್ಥಿಕ ಅಂಶಗಳು ಮತ್ತು ಅವುಗಳಲ್ಲಿ ಉಂಟಾಗುವ ಬದಲಾವಣೆಗಳಿಂದ ವಿಮುಖವಾಗಿತನಗೇ ತಾನಾಗಿ ಮುಂದುವರಿಯಲು ಸಾಧ್ಯವಿಲ್ಲ ಎಂಬುದನ್ನೂ ನಾವು ಇದರಿಂದ ಮನವರಿಕೆ ಮಾಡಿಕೊಳ್ಳಬೇಕು.
ಸ್ವಾತಂತ್ರ್ಯಾನಂತರದ ನೆಹರೂ ಮಾದರಿಯ ಆರ್ಥಿಕತೆಯಲ್ಲಿ ಹಲವು ದೊಡ್ಡ ದೊಡ್ಡ ಸಾರ್ವಜನಿಕ ಹಾಗೂ ಖಾಸಗಿ ವಲಯದಕಾರ್ಖಾನೆಗಳು ಹಾಗೂ ಸಂಸ್ಥೆಗಳು ಬೆಂಗಳೂರಿನಲ್ಲಿ ಹುಟ್ಟಿಕೊಂಡವು. ಬೆಂಗಳೂರು ಒಂದು ಆರ್ಥಿಕ ಕೇಂದ್ರವಾಗುವ ಸೂಚನೆಗಳು ಕಂಡು ಬಂದಾಗ ಹೆಚ್ಚು-ಕಡಿಮೆ ಕೂಗಳತೆಯ ದೂರದಲ್ಲಿರುವ ಪಕ್ಕದ ತಮಿಳು ಪ್ರದೇಶಗಳಿಂದ ಬಹಳಷ್ಟುಜನರು ಬೆಂಗಳೂರಿಗೆ ವಲಸೆ ಬಂದರು. ಈ ವಲಸೆ ಸುಮಾರು 1942ರಿಂದ 1955ರವರೆಗೆ ಗರಿಷ್ಟ ಪ್ರಮಾಣದಲ್ಲಿ ನಡೆಯಿತು. ಹೀಗೆ ವಲಸೆ ಬಂದ ತಮಿಳರು ಕೆಲಸ ಸಿಕ್ಕಲ್ಲಿ ಸೇರಿಕೊಂಡರು. 1960ರ ದಶಕಕ್ಕಾಗುವಾಗ ದೊಡ್ಡ ದೊಡ್ಡ ಸಂಸ್ಥೆಗಳಾದ ಬಿ.ಎಚ್.ಇ.ಎಲ್, ಎಚ್.ಎಮ್.ಟಿ, ಐ.ಟಿ.ಐ., ಎಚ್.ಎ.ಎಲ್., ಮೈಕೊ, ಇತ್ಯಾದಿಗಳಲ್ಲಿ ತಮಿಳುನಾಡಿನ ವಲಸೆಗಾರರು ಸುಮಾರಷ್ಟಿದ್ದರು. ಕರ್ನಾಟಕದ ಏಕೀಕರಣದ ನಂತರ ಕರ್ನಾಟಕದ ಸಾಂಸ್ಕೃತಿಕ ಹಾಗೂ ಕನ್ನಡ ಪ್ರಜ್ಞೆ ಬೆಂಗಳೂರನ್ನು ಕರ್ನಾಟಕದ ಸಾಂಸ್ಕೃತಿಕ ಕೇಂದ್ರವಾಗಿ ಕಟ್ಟುವ ಎಲ್ಲಾ ಪ್ರಯತ್ನಗಳನ್ನು ಮಾಡತೊಡಗಿತು. ಆಗ ಬೆಂಗಳೂರಿನಲ್ಲಿ ಬಹುದೊಡ್ಡಸಂಖ್ಯೆಯಲ್ಲಿ ನೆಲೆಸಿದ್ದ ತಮಿಳರ ಅಸ್ತಿತ್ವ ಸಮಸ್ಯೆಯಾಗಿ ಕಾಡತೊಡಗಿತು. ತಮಿಳರ ಅಸ್ತಿತ್ವ ಹೆಚ್ಚಾಗಿದ್ದಲ್ಲಿ ಪ್ರತಿರೋಧಕ್ಕೋಸ್ಕರಕನ್ನಡ ಸಂಘಗಳು ಹೆಚ್ಚಾಗಿ ಹುಟ್ಟಿಕೊಂಡವು, ಹಾಗೂ ಕನ್ನಡ-ಸಂಸ್ಕೃತಿಯ ಚಟುವಟಿಕೆಗಳು ಹೆಚ್ಚಿನಮಟ್ಟಿಗೆ ನಡೆಯತೊಡಗಿದವು (ಹೆಚ್ಚಿನ ಮಾಹಿತಿಗೆ ಜಾನಕಿ ನಾಯರ್ ಅವರ The promise of the Metropolis: Bangalore’s Twentieth Century ಎಂಬ ಪುಸ್ತಕ ನೋಡಬಹುದು). ಹೀಗಾಗಿ ಮೇಲೆ ಹೇಳಿದಂಥ ದೊಡ್ಡಸಂಸ್ಥೆಗಳಲ್ಲೆಲ್ಲ ಕನ್ನಡ ಸಂಘಗಳು ಹುಟ್ಟಿಕೊಂಡು ಕನ್ನಡ ಕಲೆ, ನಾಟಕ, ಸಂಗೀತ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವು.ಅದನ್ನು ನಾವು ಈಗಲೂ (ಸ್ವಲ್ಪ ಬೇರೆ ರೀತಿಯಲ್ಲಿ) ನೋಡಬಹುದಾಗಿದೆ. ತಮಿಳೆಂಬ „ಅನ್ಯ‟ ಈ ಚಟುವಟಿಕೆಗಳಹಿನ್ನೆಲೆಯಲ್ಲಿ ಇತ್ತು. ಇಂಥ ಕನ್ನಡ ಸಂಘಗಳು ಹಾಗೂ ಅವುಗಳಲ್ಲಿದ್ದ ಬೇರೆ ಬೇರೆ ಕಾರ್ಖಾನೆಗಳ ಸಾವಿರಾರು ಜನ ಕನ್ನಡಿಗ ನೌಕರರು 1960ರ ದಶಕದ ಕನ್ನಡ ಚಳುವಳಿಯಲ್ಲಿ ಹೆಚ್ಚಾಗಿ ಭಾಗವಹಿಸಿದರು ಮತ್ತು ಚಳುವಳಿಯ ವಕ್ತಾರರಾಗಿದ್ದಅ.ನ.ಕೃಷ್ಣರಾಯರ (ಅ.ನ.ಕೃ) ಮಾತುಗಳಿಗೆ ಸತತ ಶ್ರೋತೃಗಳಾಗಿದ್ದರು. ಆದ್ದರಿಂದ ಸ್ವಾಭಾವಿಕವಾಗಿಯೇ ಅ.ನ.ಕೃ. ಅವರು ಹೇಳುತ್ತಿದ್ದ ಹೊಸ ತರಹದ ಕನ್ನಡ ಹಾಡುಗಳಲ್ಲಿ ಮತ್ತು ಸಂಗೀತದಲ್ಲಿ ಅವರಿಗೆ ಆಸಕ್ತಿ ಹುಟ್ಟಿತು. (ಅ.ನ.ಕೃ. ಅವರ ಪ್ರಕಾರ ಕನ್ನಡ ಸಂಗೀತ ಕಛೇರಿ ಹೇಗಿರಬೇಕು ಎಂಬುದನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ). ಸ್ವಾತಂತ್ರ್ಯಾನಂತರ ಸುಮಾರುಮೂರು ದಶಕಗಳ ಕಾಲ ಬೇರೆ ಬೇರೆ ಪ್ರಮಾಣದಲ್ಲಿ, ರೂಪದಲ್ಲಿ ನಡೆದ ಕನ್ನಡ ಚಳುವಳಿ ಸೃಷ್ಟಿಸಿದ ಈ ಸಾರ್ವಜನಿಕದಪ್ರಭಾವ ಬೆಂಗಳೂರಿನಲ್ಲಿ ತುಂಬಾ ದಟ್ಟವಾಗಿ, ಮೈಸೂರು ಹಾಗೂ ದಕ್ಷಿಣ ಕರ್ನಾಟಕದ ಇತರ ಊರುಗಳಲ್ಲಿ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇತ್ತು.
ತಮಿಳು ಎಂಬ „ಅನ್ಯ‟ ಸತತವಾಗಿ ಇತ್ತೋ ಎಂಬಂತೆ ತಮಿಳುನಾಡಿನ ಸಂಗೀತಗಾರರ ಬಗ್ಗೆ ಕನ್ನಡ ಚಳುವಳಿಗಾರರು 60ರ ದಶಕದಲ್ಲಿ ಉದ್ರಿಕ್ತರಾಗಿದ್ದರು. ಉದಾಹರಣೆಗೆ 1964ರಲ್ಲಿ ಪ್ರಸಿದ್ಧ ಸಂಗೀತಗಾರ್ತಿ ಎಂ.ಎಸ್. ಸುಬ್ಬುಲಕ್ಷ್ಮಿಯವರ ಒಂದು ಕಛೇರಿ ರಾಮನವಮಿ ಪ್ರಯುಕ್ತ ಬೆಂಗಳೂರಿನಲ್ಲಿ ಆಯೋಜಿತವಾಗಿದ್ದಾಗ ಕನ್ನಡಪರ ಹೋರಾಟಗಾರರು ಈ ಕಛೇರಿ ಸಲ್ಲದು,ಕನ್ನಡಿಗರಿಗೇ ಆದ್ಯತೆ ನೀಡಬೇಕೆಂದು ಘೋಷಣೆ ಕೂಗಿ, ಮೆರವಣಿಗೆ ಬಂದು ಕಛೇರಿ ನಡೆಯಬೇಕಾಗಿದ್ದ ಪೆಂಡಾಲ್‍ಗೆ ಬೆಂಕಿ ಹಚ್ಚಿದ್ದು ಈಗ ಇತಿಹಾಸ. ಪೋಲೀಸರು ಲಾಠೀಚಾರ್ಜ್ ಮಾಡಿ ಕೆಲವರನ್ನು ಬಂಧಿಸಬೇಕಾಗಿ ಬಂದಿದ್ದ ಈ ಸಂದರ್ಭದಲ್ಲಿ ಅ.ನ.ಕೃ “ಇದು ರಾಮೋತ್ಸವ ಅಲ್ಲ, ತಮಿಳೋತ್ಸವ” ಎಂದು ವ್ಯಂಗ್ಯವಾಡಿದರು. (ಆದರೆ ಇನ್ನೊಂದು ವ್ಯಂಗ್ಯವೇನಿತ್ತೆಂದರೆ ಎಂ.ಎಸ್. ಸುಬ್ಬುಲಕ್ಷ್ಮಿಯವರನ್ನು ಕರೆಸಿದ ಆ ಮಂಡಳಿಯ ಆಡಳಿತದಲ್ಲಿ ಅ.ನ.ಕೃ ಅವರ ಸೋದರರೇ ಆದ ಅ.ನ.ರಾಮರಾಯರೇ ಇದ್ದರು. ಆದ್ದರಿಂದ ಕೆಲವರು ಇದನ್ನು ಅಣ್ಣ-ತಮ್ಮಂದಿರ ಜಗಳವೆಂದು ಕರೆದಿದ್ದೂ ಉಂಟು.) ಬೆಂಗಳೂರಿನ ಸುಮಾರು ಐವತ್ತು ಕನ್ನಡ ಸಂಸ್ಥೆಗಳು ಕಛೇರಿಯನ್ನು ಆಯೋಜಿಸಿದ್ದ ರಾಮಸೇವಾಮಂಡಳಿಯ ಎದುರುಪ್ರತಿಭಟನೆ ಹೂಡಿದವು (ದಿ ಹಿಂದೂ ಸ್ಪೀಕ್ಸ್ ಆನ್ ಮ್ಯೂಸಿಕ್‍ನಲ್ಲಿ ಈ ಬಗ್ಗೆ ವಿವರಗಳನ್ನು ನೋಡಬಹುದು). ಇನ್ನೊಂದೆಡೆ, ತಮಿಳು ಸಂಗೀತಗಾರ್ತಿಗಾದ ಅವಮಾನಕ್ಕೆ ಕನ್ನಡಿಗರು ಕ್ಷಮೆಯಾಚಿಸಬೇಕೆಂದೂ, ಇಲ್ಲವಾದಲ್ಲಿ ತಮಿಳುನಾಡಲ್ಲಿರುವ ಕನ್ನಡ ಚಿತ್ರನಟರ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದಾಗಿಯೂ ಪ್ರಖ್ಯಾತ ತಮಿಳುಕವಿ ಭಾರತೀದಾಸನ್ ಅವರು ಘೋಷಿಸಿದರು. ಕನ್ನಡ ಚಿತ್ರಗಳನ್ನು ಆಗ ಇನ್ನೂ ತಮಿಳುನಾಡಿನ ಸೆಟ್‍ಗಳಲ್ಲೇ ಹೆಚ್ಚಾಗಿ ಚಿತ್ರೀಕರಿಸುತ್ತಿದ್ದರು. ಹೀಗೆ ಸಂಗೀತ ಹಾಗೂ ಸಿನೆಕ್ಷೇತ್ರವನ್ನು ತಳುಕುಹಾಕಲಾಯಿತು (ಬಿ.ಕೆ. ಅನಂತಸ್ವಾಮಿಯವರ ಅನಕೃ ಮತ್ತು ಕನ್ನಡಚಳುವಳಿಯಲ್ಲಿ ನೋಡಬಹುದು). ಈ ಥರ ಎರಡೂ ಕಡೆಗಳಿಂದಲೂ ಆಪಾದನೆ-ಪ್ರತಿ ಆಪಾದನೆಗಳು ನಡೆದವು. ಆದರೆ ಸುಗಮ ಸಂಗೀತ ಎಂಬ ಪ್ರಕಾರ ಪ್ರತ್ಯೇಕವಾಗಿ ಗಟ್ಟಿಯಾದಂತೆಲ್ಲ ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ನಿರೀಕ್ಷೆ ಮತ್ತು ಬಯಕೆ ಕಡಿಮೆಯಾಯಿತು.
ಈ ಸಮಯಕ್ಕಾಗಲೇ ಸುಗಮ ಸಂಗೀತಕ್ಷೇತ್ರದಲ್ಲಿ ಪಾಂಡೇಶ್ವರ ಕಾಳಿಂಗರಾಯರು ಸುಮಾರಷ್ಟು ಹೆಸರು ಮಾಡಿದ್ದರು. 1940ರ ದಶಕದಲ್ಲೇ ಬೆಂಗಳೂರಿಗೆ ಬಂದಿದ್ದ ಪಿ. ಕಾಳಿಂಗರಾಯರಿಗೆ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಯಕ್ಷಗಾನ, ನಾಟಕ, ಸಿನೆಮಾ, ಪಾಶ್ಚಾತ್ಯ ಸಂಗೀತ ಹೀಗೆ ಬಹಳ ಕ್ಷೇತ್ರಗಳಲ್ಲಿ ಪರಿಶ್ರಮವಿತ್ತು. ಆದ್ದರಿಂದ ಈ ಬೇರೆ ಬೇರೆ ಸಂಗೀತಾನುಭವಗಳ ಮೊತ್ತವನ್ನು ಪಾಕವಾಗಿಸಿ ಅವರು ಕನ್ನಡದಲ್ಲಿ ಆಧುನಿಕ ಕವಿಗಳ ಹಾಡುಗಳನ್ನು ಹಾಗೂ ದಾಸರ ಹಾಡುಗಳನ್ನು ಆಧುನಿಕ ರೀತಿಯಲ್ಲಿ ಹಾಡುವುದಕ್ಕಾಗಿ ಉಪಯೋಗಿಸಿದರು. ಕಾಳಿಂಗರಾಯರ ಮೇಲೂ ಕೂಡಾ ಅ.ನ.ಕೃ ಅವರ ಸ್ಪಷ್ಟ ಪ್ರಭಾವ ಕಾಣುತ್ತದೆ. ರಾಯರ ಗೆಳೆಯ ಶ್ರೀ ಬಿ.ಎಸ್. ಕೇಶವರಾವ್ ಅವರು ಹೇಳುವಂತೆ “ಅ.ನ.ಕೃ. ಅವರ ಪ್ರೇರಣೆ, ಪ್ರಚೋದನೆಯಿಂದಾಗಿ ರಾಯರು ಯಾವುದೇ ಶಾಸ್ತ್ರೀಯ ಪದ್ಧತಿಯಲ್ಲಿ ಸಂಗೀತ ಹಾಡುವುದನ್ನು ನಿಲ್ಲಿಸಿ, ಜನಸಾಮಾನ್ಯರೆಲ್ಲರಿಗೂ ರಂಜನೆ ನೀಡುವ ಜಾನಪದ ಗೀತೆ, ಭಾವಗೀತೆ, ದೇವರನಾಮಗಳಿಗೆ ರಾಗ ಸಂಯೋಜಿಸಿ ಹಾಡುವ ಪ್ರವೃತ್ತಿ ಬೆಳೆಸಿಕೊಂಡರು” (ಕರ್ನಾಟಕ ಕೋಗಿಲೆ: ಕಾಳಿಂಗ ರಾಯರು ಎಂಬ ಪುಸ್ತಕ). ಹೀಗೆ ಶಾಸ್ತ್ರೀಯ ಪದ್ಧತಿಗೆ ತಿರುಗಬಹುದಾಗಿದ್ದ ಒಂದು ಪ್ರತಿಭೆ ಹೊಸ ಸಾರ್ವಜನಿಕದ ತುಡಿತಗಳಿಗೆ ಸಂವೇದಿಸಿ ಹೊಸ ರೀತಿಯ ಸಂಗೀತದ ಅನ್ವೇಷಣೆಗೆತೊಡಗಿತು. ಮ್ಯಾಂಡೊಲಿನ್ ಮತ್ತಿತರ ಪಾಶ್ಚಾತ್ಯ ವಾದನಗಳನ್ನು ಆರ್ಕೆಸ್ಟ್ರಾ ಮಾದರಿಯಲ್ಲಿ ಪ್ರಥಮವಾಗಿ ಉಪಯೋಗಿಸಿದವರು ಕಾಳಿಂಗರಾಯರು. ಶಾಸ್ತ್ರೀಯ ಸಂಗೀತವನ್ನು ಪೂರ್ತಾ ಬಿಟ್ಟುಕೊಡದೆ ಪಾಶ್ಚಾತ್ಯಸಂಗೀತದ ಸಣ್ಣ ಝಲಕ್ಕನ್ನೂ ತಂದು ಕೊಡುವ ಹೊಸ ಬಗೆಯ ಸಂಗೀತ ಬೆಂಗಳೂರಿನಲ್ಲಿ ಆಗಷ್ಟೇ ದೊಡ್ಡ ಪ್ರಮಾಣದಲ್ಲಿ ಮೇಲ್ಬರುತ್ತಿದ್ದ ಕನ್ನಡಿಗ ಮಧ್ಯಮವರ್ಗವನ್ನು ಬಹಳಷ್ಟು ಆಕರ್ಷಿಸಿತು. 1949-50ರ ಸಮಯದಲ್ಲಿ ಅವರು ಆಕಾಶವಾಣಿಯಲ್ಲಿ ಕನ್ನಡ ಹಾಡುಗಳ ಕಾರ್ಯಕ್ರಮ ಕೊಡಲಾರಂಭಿಸಿದರು ಮತ್ತು ಮುಂದಿನ ದಿನಗಳಲ್ಲಿ ಅವರ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿಆಕಾಶವಾಣಿಯಲ್ಲಿ ದಾಖಲಾದವು. ಕರ್ನಾಟಕ ಏಕೀಕರಣದ ನಂತರ ಬೆಂಗಳೂರಿನ ಕನ್ನಡ ರಾಜ್ಯೋತ್ಸವ ಆಚರಣೆಗಳಲ್ಲಿ ಕಾಳಿಂಗರಾಯರ ಕಾರ್ಯಕ್ರಮಗಳು ಅತ್ಯವಶ್ಯವಾಗಿದ್ದವು. ರಾಯರ ಕಾರ್ಯಕ್ರಮದ ಆಕರ್ಷಣೆ ಎಷ್ಟಿತ್ತೆಂದರೆ 1960ರ ದಶಕದಲ್ಲೇ ಅವರ ಕಾರ್ಯಕ್ರಮವೊಂದಕ್ಕೆ ಒಂದೂವರೆ ಸಾವಿರ ರೂಪಾಯಿಗಳ ಸಂಭಾವನೆ ಸಿಗುತ್ತಿತ್ತು ಮತ್ತು ಅವರಿಗೆ ಬೆಂಗಳೂರು, ಮೈಸೂರುಗಳಲ್ಲಿ ಬೇಕೆಂದಷ್ಟು ಕಾರ್ಯಕ್ರಮಗಳು ಸಿಗುತ್ತಿದ್ದವು. ಅತಿ ಆತ್ಮವಿಶ್ವಾಸದಿಂದ ಅವರು „ನಾನು ಒದ್ದಲ್ಲಿ ಕಾಸು ಹುಟ್ಟುತ್ತೆ‟ ಅನ್ನುತ್ತಿದ್ದರು; ಸಂಪಾದನೆಯನ್ನೂ ಹಾಗೇ ಧಾರಾಳವಾಗಿ ಖರ್ಚುಮಾಡುತ್ತಿದ್ದರು. ಹೀಗೆ ಕಾಳಿಂಗರಾಯರು ಭಾವಗೀತೆ, ಜನಪದ ಗೀತೆ, ದಾಸರಪದ, ಇತ್ಯಾದಿ ಹಾಡುಗಳನ್ನು ಒಂದು ಮಿಶ್ರ ಶೈಲಿಯಲ್ಲಿ ರೂಢಿಸಿಕೊಳ್ಳುತ್ತಾ ಬಂದರು. ಸುಗಮ ಸಂಗೀತಕ್ಕೆ ಕಾಳಿಂಗರಾಯರು ಈ ಪ್ರಕಾರ ಬುನಾದಿಯಾದರು. (ಉತ್ತರ ಕರ್ನಾಟಕದ ವಿಷಯ ಈ ಸರಣಿಯ ವ್ಯಾಪ್ತಿಯ ಹೊರಗಿದ್ದರೂ ಬಾಳಪ್ಪ ಹುಕ್ಕೇರಿ ಅವರನ್ನು ಕನ್ನಡ ಸುಗಮಸಂಗೀತದ ಹಾಡುಗಾರರೂ, ಕವಿಗಳೂ ಸ್ಮರಣೆ ಮಾಡುತ್ತಾರೆ. ನಲ್ವತ್ತರ ದಶಕದಲ್ಲಿ ಅವರು ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ ಮುಂತಾದವರ ಹಾಡುಗಳನ್ನು ಸಾರ್ವಜನಿಕವಾಗಿ ರಾಗ ಹಾಕಿ ಹಾಡತೊಡಗಿದ್ದರು. ದಕ್ಷಿಣದಲ್ಲಿ ಕಾಳಿಂಗರಾಯರ ಹೆಸರೂ ಉತ್ತರದಲ್ಲಿ ಬಾಳಪ್ಪ ಹುಕ್ಕೇರಿಯವರ ಹೆಸರನ್ನೂ ಜೊತೆಗೆ ಸ್ಮರಿಸುತ್ತಾರೆ.)
ಐವತ್ತರ ದಶಕ ಹಾಗೂ ಮುಂದುವರೆದಂತೆಲ್ಲ ಮೈಸೂರು ಅನಂತಸ್ವಾಮಿ, ಎಚ್.ಆರ್. ಲೀಲಾವತಿ ಸುಗಮ ಸಂಗೀತದ ಪ್ರಕಾರವನ್ನು ಮತ್ತಷ್ಟು ಗಟ್ಟಿಗೊಳಿಸಿದರು ಮತ್ತು ಅದು ಹೆಚ್ಚೆಚ್ಚು ಜನರಿಗೆ ತಲುಪುತ್ತಾ ಹೋಯಿತು. ಇನ್ನು ಆಕಾಶವಾಣಿಯಲ್ಲೇ ಕೆಲಸ ಮಾಡುತ್ತಿದ್ದ ಪದ್ಮಚರಣ್ ಹಾಗೂ ಎಚ್.ಕೆ. ನಾರಾಯಣ ಅವರು ಬಹಳಷ್ಟು ಕನ್ನಡ ಹಾಡುಗಳಿಗೆ, ಕವನಗಳಿಗೆ ರಾಗಸಂಯೋಜನೆ ಮಾಡಿದರು. ಎಪ್ಪತ್ತರ ದಶಕದಲ್ಲಿ ಸುಗಮ ಸಂಗೀತರಂಗಕ್ಕೆ ಸಿ. ಅಶ್ವತ್ಥ್ ಅವರ ಪ್ರವೇಶವಾಯಿತು. ಈ ದಶಕದಲ್ಲಿ ಎಂ.ಎಸ್.ಐ.ಎಲ್. ಸಂಸ್ಥೆ ರೇಡಿಯೋ ಮೂಲಕ ನಡೆಸುತ್ತಿದ್ದ ಸಂಗೀತಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಕಲಾವಿದರು ಮುಂದೆ ಸುಗಮಸಂಗೀತ ಗಾಯಕರಾಗಿ ಪ್ರಖ್ಯಾತರಾದರು: ಈ ಮೂಲಕ ಅಶ್ವತ್ಥ್ ಮಾತ್ರವಲ್ಲದೆ ರತ್ನಮಾಲಾ ಪ್ರಕಾಶ್, ಶಿವಮೊಗ್ಗ ಸುಬ್ಬಣ್ಣ ಮುಂತಾದವರೂ ಬೆಳಕಿಗೆ ಬಂದರು. (ಈ ಬಗ್ಗೆ ಹೆಚ್ಚಿನ ವಿವರಣೆಗಾಗಿ ಡಾ. ಸಫ್ರ್ರಾಜ್ ಚಂದ್ರಗುತ್ತಿಯವರ ಸುಗಮ ಸಂಗೀತ ಮತ್ತು ಆಧುನಿಕ ಕನ್ನಡ ಕವಿತೆ ಎಂಬ ಪುಸ್ತಕ ನೋಡಬಹುದು).
ಕಾಳಿಂಗರಾಯರ ಹಲವಾರು ಹಾಡುಗಳು 78 ಆರ್.ಪಿ.ಎಂ. ರೆಕಾರ್ಡ್‍ಗಳಲ್ಲಿ ಸಿಗುತ್ತಿತ್ತು. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಮದ್ರಾಸ್‍ನ ಸರಸ್ವತೀ ಸ್ಟೋರ್ಸ್ ಎಂಬ ಕಂಪೆನಿಯಲ್ಲಿ ಕೆಲಸಕ್ಕಿದ್ದ ಮಂಗಳೂರಿನ ತರುಣ ಎಚ್.ಎಂ. ಮಹೇಶ್ ಎನ್ನುವವರು ತನ್ನ ಕಂಪೆನಿಯನ್ನೊಪ್ಪಿಸಿ ಕನ್ನಡದಲ್ಲಿ ಸಿನೆಮಾದ್ದಲ್ಲದ ಹಾಡುಗಳ ರೆಕಾರ್ಡಿಂಗ್‍ಗೆ ಇಳಿದಿದ್ದರು. ವಿಜಯನಾರಸಿಂಹ ಅವರು ಗೀತರಚನೆ ಮಾಡಿದ, ಎಂ. ರಂಗರಾವ್ ಸಂಗೀತ ನೀಡಿದ ಹಾಗೂ ಎಸ್.ಜಾನಕಿ ಮತ್ತು ಪಿ.ಬಿ.ಶ್ರೀನಿವಾಸ್ ಹಾಡಿದ „ಗಣೇಶಭಕ್ತಿಗೀತೆಗಳು‟ ಈ ಮೂಲಕ ಮಾರುಕಟ್ಟೆಗೆ ಬಂತು. ಕ್ಯಾಸೆಟ್ ಬರಬೇಕಾದರೆ ಮುಂಚೆಯೇ ಇ.ಪಿ. ರೆಕಾರ್ಡ್ ಮೂಲಕ ಈ ಸಂಕಲನ ಹೊರಬಂತು.
ಕನಿಷ್ಠ ಪಕ್ಷ ಮುನ್ನೂರು ರೆಕಾರ್ಡ್‍ಗಳ ಮಾರಾಟವಾಗಬೇಕೆಂಬುದು ಕಂಪೆನಿಯ ಶರ್ತವಾಗಿದ್ದಾಗ ಇವು ಸಾವಿರ ಸಾವಿರ ಸಂಖ್ಯೆಯಲ್ಲಿ ಖರ್ಚಾಯಿತು. ಇದರಲ್ಲಿರುವ ಹಾಡುಗಳು ಸಾಮಾನ್ಯ ಪ್ರತೀ ಕನ್ನಡಿಗನೂ ಕೇಳಿರಬಹುದಾದ „ಗಜಮುಖನೆ ಗಣಪತಿಯೆ‟, „ಶರಣು ಶರಣಯ್ಯ‟, „ಭಾದ್ರಪದ ಶುಕ್ಲದ‟, ಇತ್ಯಾದಿ. ಇದರಿಂದ ಮತ್ತಷ್ಟು ಧೈರ್ಯಗೊಂಡಮಹೇಶ್ ಬಿ.ಕೆ. ಸುಮಿತ್ರ ಅವರ ಹಾಡುಗಳು, ಡಾ. ರಾಜ್‍ಕುಮಾರ್ ಹಾಡಿದ „ಹಾಡುಕೋಗಿಲೆ‟, „ಮಂತ್ರಾಲಯಕೆ ಹೋಗೋಣ‟, ಮುಂತಾದ ಹಾಡುಗಳನ್ನು ಮುದ್ರಿಸಿ ವಿತರಿಸಿದಾಗ ತುಂಬಾ ಬೇಗನೆ ಖರ್ಚಾಗತೊಡಗಿದವು ಮತ್ತು ಇನ್ನೂ ಹೆಚ್ಚಿನ ಬೇಡಿಕೆ ಬರತೊಡಗಿತು (ಡಾ. ಜಯಶ್ರೀ ಅರವಿಂದ್ ಅವರ ಸಂಗೀತಯಾನ: ಎಚ್.ಎಂ. ಮಹೇಶ್ ಜೀವನಗಾಥೆ ಇದನ್ನು ಓದಿಕೊಳ್ಳಬಹುದು). ಈ ಹೆಜ್ಜೆಗಳು ಸುಗಮ ಸಂಗೀತದ ವೈಶಾಲ್ಯ ಮತ್ತು ಜನಪ್ರಿಯತೆಯನ್ನು ನಿರ್ಧರಿಸಿತು. ಕ್ಯಾಸೆಟ್‍ನ ಆಗಮನ ಮತ್ತು ನಂತರದ ತಾಂತ್ರಿಕ ಬದಲಾವಣೆಗಳು ತುಂಬಾ ಬಿರುಸಾಗಿ ನಡೆದಂತೆ ಕಾಣುತ್ತದೆ. ಮಧ್ಯಮವರ್ಗಕ್ಕೆ ಕ್ಯಾಸೆಟ್ ಪ್ಲೇಯರ್ ಸುಲಭವಾಗಿ ದೊರೆಯುವಂತೆ ಆಗಿದ್ದು ದೊಡ್ಡ ಒಂದು ಬದಲಾವಣೆ. ಗಲ್ಫ್ ನಲ್ಲಾದ ಉದ್ಯೋಗಕ್ರಾಂತಿ ಕೂಡಾ ಇದಕ್ಕೆ ತುಸುಮಟ್ಟಿಗೆ ಕಾರಣವಾಯಿತು. ಗಲ್ಫಿನ ಕನ್ನಡಿಗರಿಗೆ ಅಲ್ಲಿ ಉದ್ಯೋಗಾವಕಾಶ ಒಂದಾದರೆ ಇನ್ನೊಂದೆಡೆ ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದ ಇಲೆಕ್ಟ್ರಾನಿಕ್ ಉಪಕರಣಗಳ ಪರಿಚಯವೂ, ಅವುಗಳ ಆಮದೂ ನಡೆಯಿತು. ಬೊಂಬಾಯಿಯಂತಹ ಮಹಾನಗರಗಳ ಸಂಪರ್ಕದಿಂದಲೂ ಇದು ನಡೆಯಿತು. ಹೆಚ್ಚು ಕಷ್ಟವಿಲ್ಲದೇ ನಡೆಸಬಹುದಾಗಿದ್ದ ಕ್ಯಾಸೆಟ್ ಪ್ಲೇಯರ್ ಎಂಬತ್ತರ ದಶಕದಲ್ಲಿ ಮನೆಮಾತಾಗಿದ್ದು ಆಗ ತಾನೇ ಅರಳುತ್ತಿದ್ದ ಸುಗಮಸಂಗೀತಕ್ಕೆ ಪುಷ್ಟಿ ಕೊಟ್ಟಿತು.ಇದರ ಅರ್ಥ ಶಾಸ್ತ್ರೀಯ ಸಂಗೀತಕ್ಕೆ ಅಥವಾ ಸಿನೆಸಂಗೀತಕ್ಕೆ ಕ್ಯಾಸೆಟ್ ಸಂಸ್ಕೃತಿಯಿಂದ ಸಹಾಯವಾಗಲಿಲ್ಲವೆಂದಲ್ಲ. ಅವೆಲ್ಲ ಆವಾಗಲೇ ಬೇರೂರಿದ್ದ ಪ್ರಕಾರಗಳು. ಆದರೆ ಸುಗಮ ಸಂಗೀತ ಹಾಗಲ್ಲ; ಜನರ ಸ್ವೀಕೃತಿಯ ಖಾತರಿಯಿರಲಿಲ್ಲ. ಒಂದೊಂದು ಹೆಜ್ಜೆಯನ್ನೂ ನಿರ್ಮಾಪಕರು ಅಳೆದಳೆದು ಇಡುತ್ತಿದ್ದರು. ಆದರೆ ಕನ್ನಡದ ಮೊದಲ ಕ್ಯಾಸೆಟ್ ಗಾಯನ ಸಂಕಲನ „ನಿತ್ಯೋತ್ಸವ‟ ಅದ್ಭುತ ಯಶಸ್ಸು ಕಂಡಿತು. ಇತ್ತೀಚೆಗೆ ನಿಧನರಾದ ಕವಿ ಕೆ.ಎಸ್. ನಿಸಾರ್ ಅಹಮದ್ ಅವರ ಹಾಡುಗಳಿಗೆ ಅನಂತಸ್ವಾಮಿಯವರ ಸಂಗೀತವಿದ್ದು ಇದು 1978ರಲ್ಲಿ ಹೊರಬಂತು. ಈ ಹೆಜ್ಜೆ ಇನ್ನೂ ಹತ್ತು ಹಲವಾರು ಕ್ಯಾಸೆಟ್ ಪ್ರಾಜೆಕ್ಟ್‍ಗಳಿಗೆ ಸ್ಫೂರ್ತಿ ನೀಡಿತು. ಇದರಲ್ಲಿ ಎಚ್.ಎಂ. ಮಹೇಶ್ ಅವರ ಪ್ರಯತ್ನ ಮುಖ್ಯ. ಕನ್ನಡದ ಹಾಡುಗಳಿಗೆ ದೊಡ್ಡ ಮಾರುಕಟ್ಟೆ ಇದೆ ಎಂದು ಇ.ಪಿ. ಹಾಗೂ ಎಲ್.ಪಿ. ರೆಕಾರ್ಡ್‍ಗಳ ಮೂಲಕ ಅದಾಗಲೇ ಕಂಡುಕೊಂಡಿದ್ದ ಅವರು ಸರಸ್ವತಿಸ್ಟೋರ್ಸ್‍ನ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಕ್ಯಾಸೆಟ್ ಉದ್ಯಮಕ್ಕೆ ಸ್ವತ: ಧುಮುಕಿದರು. ಹೀಗೆ „ಸಂಗೀತಾ ಕ್ಯಾಸೆಟ್ಸ್‟ನ್ನುಮದ್ರಾಸ್‍ನಲ್ಲಿ ಸ್ಥಾಪಿಸಿದ ಅವರು ಬಹಳ ಜನಪ್ರಿಯತೆ ಪಡೆದ ಹಲವಾರು ಕ್ಯಾಸೆಟ್ ಸಂಗ್ರಹಗಳನ್ನು ಮಾರುಕಟ್ಟೆಗೆ ತಂದರು. ಇವುಗಳಲ್ಲಿ ಮುಖ್ಯವಾದವು ಸಿ. ಅಶ್ವತ್ಥ್ ಅವರ „ಸಂತ ಶಿಶುನಾಳಾಧೀಶರ ತತ್ವಪದ‟, ಕೆ.ಎಸ್.ನ. ಸಂಕಲನ „ಮೈಸೂರು ಮಲ್ಲಿಗೆ‟, ಲಕ್ಷ್ಮೀನಾರಾಯಣ ಭಟ್ಟರ „ದೀಪಿಕಾ‟, ದೊಡ್ಡರಂಗೇಗೌಡರ „ಮಾವುಬೇವು‟, ಡಾ. ರಾಜ್‍ಕುಮಾರ್ ಮತ್ತು ರತ್ನಮಾಲಾ ಪ್ರಕಾಶ್ ಹಾಡಿದ „ಅನುರಾಗ‟, ಇವೆಲ್ಲ ಸಂಗೀತಾ ಕ್ಯಾಸೆಟ್ಸ್‍ನಿಂದ ಬಿಡುಗಡೆಯಾಗಿ ಅಭೂತಪೂರ್ವ ಜನಪ್ರಿಯತೆಪಡೆದವು. ಸುಗಮ ಸಂಗೀತವೆಂಬ ಪ್ರಕಾರ ಹೀಗೆ ಕ್ಯಾಸೆಟ್ ಪ್ಲೇಯರ್‍ನ ಜನಪ್ರಿಯತೆಯಿಂದಾಗಿ ಎಂಬತ್ತರ ದಶಕದಲ್ಲಿ ಗಟ್ಟಿಗೊಂಡಿತೆಂದು ಹೇಳಬಹುದು.
ಕೊನೆಯ ಝಲಕು: ಸುಮಾರು ಒಂದೂವರೆ ದಶಕದ ಹಿಂದೆ, 2005ರ ಸಾಲು (ಸಿ.ಡಿ. ಮಾತ್ರವಲ್ಲದೇ ಇಂಟರ್‍ನೆಟ್ ಕೂಡಾಈ ಸಮಯಕ್ಕೆ ಪ್ರಚಲಿತವಾಗಿತ್ತು – ಸೈಬರ್ ಕೆಫೆಗಳ ಸಮಯ; „ಯೂಟ್ಯೂಬ್‟ ಸ್ಥಾಪನೆಯಾದ ವರ್ಷ) ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‍ನಲ್ಲಿ ಅಶ್ವತ್ಥ್ ಅವರ „ಕನ್ನಡವೇ ಸತ್ಯ‟ ಎಂಬ ವಿಶಿಷ್ಟ ಕಾರ್ಯಕ್ರಮವೊಂದು ನಡೆಯಿತು. ಅಶ್ವತ್ಥ್ ಅಲ್ಲದೇ ಕನ್ನಡದಲ್ಲಿ ಪ್ರಸಿದ್ಧಿ ಪಡೆದಿದ್ದ ಇನ್ನೂ ಹಲವಾರು ಸಂಗೀತಗಾರರು ಅದರಲ್ಲಿ ಪಾಲ್ಗೊಂಡಿದ್ದರು. ಪಾಶ್ಚಾತ್ಯ ಸಂಗೀತದ ಕಾರ್ಯಕ್ರಮಗಳು ನಡೆಯುವಾಗ ಮುವತ್ತರಿಂದ ಐವತ್ತು ಸಾವಿರ ಜನ ಸೇರುತ್ತಿದ್ದ ಆ ಜಾಗದಲ್ಲಿ ಕನ್ನಡದ ಸುಗಮ ಸಂಗೀತದ ಕಾರ್ಯಕ್ರಮ ಯಾಕೆ ನಡೆಯಬಾರದು ಎಂಬ ಕನ್ನಡ ರಾಷ್ಟ್ರೀಯತೆಯ ಪ್ರೇರಣೆಯಿಂದ ನಡೆದ ಕಾರ್ಯಕ್ರಮ ಇದು. ಪಾಶ್ಚಾತ್ಯ ಸಂಗೀತಕ್ಕೆ ಸಡ್ಡುಹೊಡೆದು ಕನ್ನಡದ „ಶಕ್ತಿಪ್ರದರ್ಶನ‟ ಮಾಡುವ ಇರಾದೆಯೂ ಇಲ್ಲಿ ಇತ್ತು. ಹಲವಾರು ದಿನಗಳ ತಯಾರಿ, ಜಾಹೀರಾತು ಎಲ್ಲಾ ನಡೆದು ಕಾರ್ಯಕ್ರಮದ ದಿನ ಲಕ್ಷಕ್ಕೂ ಹೆಚ್ಚು ಜನ ಸೇರಿದ್ದು ಒಂದು ದಾಖಲೆಯಾಗಿತ್ತು. ಬೆಂಗಳೂರಿನ ಹಲವಾರು ರಸ್ತೆಗಳು ಆ ದಿನ ಹಿಂದೆಂದೂ ಕಂಡರಿಯದ ಟ್ರಾಫಿಕ್ ಜಾಮ್ ಕಂಡವು. ಸುಗಮ ಸಂಗೀತ ಜನಮಾನಸದಲ್ಲಿ ಸ್ಪಷ್ಟವಾಗಿ ನೆಲೆನಿಂತ ವಿದ್ಯಮಾನಕ್ಕೆ ಇದು ಸಾಕ್ಷಿಯಾಗಿತ್ತು. ಅಶ್ವತ್ಥ್ ಅವರೇ ಹೇಳುವಂತೆ ಪ್ರಾದೇಶಿಕ ಭಾಷೆಗಳ ಸಂಗೀತಕನ್ನಡದಲ್ಲಿ ಯಶಸ್ಸು ಕಂಡ ಮಟ್ಟಿಗೆ ಬೇರೆ ಯಾವ ಭಾರತೀಯ ಭಾಷೆಯಲ್ಲೂ ಕಾಣಲಿಲ್ಲ. ಹೀಗೆ ಕೃಷ್ಣರಾಜ ಒಡೆಯರು ವ್ಯಕ್ತಪಡಿಸಿದ ಕನ್ನಡ ಹಾಡುಗಳ ಬಯಕೆ ಒಂದು ಪ್ರತ್ಯೇಕ ಪ್ರಕಾರದ ಹುಟ್ಟಿನ ಮೂಲಕ ಜನಪ್ರಿಯವಾಗಿ ಸಾಕಾರವಾಯಿತು.
[ಈ ಲೇಖನ ಸರಣಿಯು ಇಲ್ಲಿಗೆ ಮುಗಿಯಿತು. ಈ ಸರಣಿಯು ಮೈಸೂರಿನ ಅಥವಾ ಕರ್ನಾಟಕದ ಶಾಸ್ತ್ರೀಯ/ಸುಗಮ ಸಂಗೀತದ ಸಮೀಕ್ಷೆ ಅಲ್ಲ. ದಕ್ಷಿಣ ಕರ್ನಾಟಕದ ಸಂಗೀತದಲ್ಲಿ ಕನ್ನಡ ಮತ್ತು ಕನ್ನಡಿಗರ ವಿದ್ಯಮಾನ ಹಾಗೂ ಅದರ ಸುತ್ತಮುತ್ತಲಿನ ಕೆಲವು ಸಮಾಜೋ-ಆರ್ಥಿಕ ವಿಷಯಗಳನ್ನು ಸ್ಥೂಲವಾಗಿ ಕೈಗೆತ್ತಿಕೊಂಡು ಅವು ಹೇಗೆ ಸಂಗೀತ ಪ್ರಕಾರಗಳ ಸ್ವರೂಪವನ್ನು ನಿರ್ಧರಿಸಬಲ್ಲವು ಎಂಬುದನ್ನು ಚರ್ಚೆಗೆ ತರುವ ಲೇಖನಗಳ ಗುಚ್ಛ ಇದಾಗಿತ್ತು. ಈ ಸಂಗತಿಗಳನ್ನು ಇನ್ನೂ ಸೂಕ್ಷ್ಮವಾಗಿ ವಿಸ್ತರಿಸಲು ಸಾಧ್ಯವಿದೆ. ಕ್ಯಾಸೆಟ್, ಸಿ.ಡಿ. ಹಾಗೂ ಇಂಟರ್ನೆಟ್ ಯುಗದ ಡಿಜಿಟಲ್ ಸಂಗೀತದ ಬಗ್ಗೆ ಇನ್ನೂ
ಸಂಶೋಧನೆ, ಬರಹಗಳ ಅಗತ್ಯವಿದೆ. ಆ ಪ್ರಯತ್ನವನ್ನು ಇಲ್ಲಿ ಮಾಡಿಲ್ಲ]
ಎಂಟೂ ಸಂಚಿಕೆಗಳ ಆಕರ ಕೃತಿಗಳು/ಲೇಖನಗಳು (ಎ-ಬಿ-ಸಿ-ಡಿ ಅನುಕ್ರಮದಲ್ಲಿದೆ):
ಅವಸರದ ಹೋಬ್ಳಿ ಇಲಾಖೆ, ಮೈಸೂರು ಪ್ರಾಚ್ಯಾಗಾರದ ದಾಖಲೆಗಳು: ಫೈಲ್ ಸಂಖ್ಯೆ 1/1883, 3/1933, 1/1879, 5/1915.
ಅನಂತಸ್ವಾಮಿ ಬಿ.ಕೆ. 2000. ಅ.ನ.ಕೃ. ಮತ್ತು ಕನ್ನಡ ಚಳುವಳಿ, ಹಂಪಿ: ಕನ್ನಡ ವಿ.ವಿ.
ಅರವಿಂದ್, ಜಯಶ್ರೀ. 2014. ಸಂಗೀತಯಾನ: ಎಚ್.ಎಂ. ಮಹೇಶ್ ಜೀವನಗಾಥೆ, ಬೆಂಗಳೂರು, ಅಂಕಿತ ಪುಸ್ತಕ
ಅಯ್ಯರ್ ಸಿ.ಎಸ್. 1944. “Raja Sefoji of Tanjore: The Journal of the Music academy”, ಸಂಪುಟ15, ಭಾಗ 1-4, ಪು. 35-36.
ಬಾಯರಿ, ರಮೇಶ್ ಟಿ.ಎಸ್. 2003. Caste, Community and Association: A study of the Dynamics of Brahmin Identity in Contemporary Karnataka, ಹೈದರಾಬಾದ್ ಕೇಂದ್ರೀಯ ವಿ.ವಿ.ಗೆ ಒಪ್ಪಿಸಿದ ಪಿ.ಎಚ್.ಡಿ. ಮಹಾಪ್ರಬಂಧ
ಚಂದ್ರಗುತ್ತಿ, ಸಫ್ರ್ರಾಜ್. 2007. ಸುಗಮ ಸಂಗೀತ ಮತ್ತು ಆಧುನಿಕ ಕನ್ನಡ ಕವಿತೆ, ಬೆಂಗಳೂರು: ಸಹನಾ ಪ್ರಕಾಶನ
ಚಂದ್ರಶೇಖರ್ ಎನ್.ಎಸ್. 1981. ಃBuilders of Modern India: Dewan Sheshadri Iyer ನ್ಯೂ ದೆಲ್ಲಿ: ಪ್ರಸಾರಾಂಗ ವಿಭಾಗ, ಭಾರತ ಸರ್ಕಾರ
ದೇವೇಂದ್ರಪ್ಪ, 1969 (?) ಶ್ರೀ ಬಸವೇಶ್ವರ ಅಷ್ಟೋತ್ತರ ಷಟ್‍ವಚನ ಕೀರ್ತನ ಸುಧಾ, ಬೆಂಗಳೂರು: ಪ್ರಕಾಶಕರ ಹೆಸರು ಇಲ್ಲ
ಡಿ.ವಿ.ಜಿ. 1990. ಕಲೋಪಾಸಕರು, ಮೈಸೂರು: ಕಾವ್ಯಾಲಯ
ಫ್ರೈಕನ್‍ಬರ್ಗ್, ರಾಬರ್ಟ್ ಎರಿಕ್ 1977. “Company Circari in the Carnatic, c 1799-1859: The inner logic of Political Systems in India”, ರಿಚರ್ಡ್ ಜಿ. ಫಾಕ್ಸ್ (ಸಂ.), Realm and Region in Traditional India ನ್ಯೂ ಡೆಲ್ಲಿ: ವಿಕಾಸ್ ಪಬ್ಲಿಷಿಂಗ್ ಹೌಸ್
ಗಾಯತ್ರಿ ಜೆ.ವಿ. ಸಂ. 1993. Selections from the records of Mysore Palace, Vol 1: Muscians, Acrors and Artists ಮೈಸೂರು: ವಿಭಾಗೀಯ ಪ್ರಾಚ್ಯಾಗಾರ ಕಛೇರಿ, ಕರ್ನಾಟಕ ಸರ್ಕಾರ.
ಗೋವಿಂದರಾಜು, ಸಿ.ಆರ್. 1999. ಕನ್ನಡ ಚಳುವಳಿಗಳು, ಹಂಪಿ: ಕನ್ನಡ ವಿ.ವಿ.
ಜ್ಯಾಕ್ಸನ್, ವಿಲಿಯಮ್. 1993 (1991). “Tyagaraja: Life and Lyrics: JMAM (Journal of the Madras Academy of Music, Mysore), ಸಂಪುಟಗಳು 3 (3 ಮತ್ತು 4), 6 (1-4), 10 (1-4)
ಕಶ್ಯಪ್. 1936 (1932) ಮರಿಗಳ ಕೂಗು, ಬೆಂಗಳೂರು: ಪ್ರಕಾಶಕರ ಹೆಸರು ಇಲ್ಲ
ಕೇಶವ್ ರಾವ್ ಬಿ.ಎಸ್. 2003 (1993). ಕರ್ನಾಟಕ ಕೋಗಿಲೆ: ಕಾಳಿಂಗ ರಾಯರು, ಬೆಂಗಳೂರು: ಸಾಗರ ಪ್ರಕಾಶನ.
ಕಿನಿಯರ್, ಮೈಕೆಲ್ ಎಸ್. 1994. The Gramaphone Company’s First Indian Recordings: 1899-1908: ಬಾಂಬೆ: ಪಾಪ್ಯುಲರ್ ಪ್ರಕಾಶನ.
ಕೃಷ್ಣಮೂರ್ತಿ, ಎಸ್. ಸಂಗೀತ ಕಲಾನಿಧಿ, ಮೈಸೂರು: ಕಾವ್ಯಾಲಯ —-2002. ಸಂಗೀತ ಸರಿತ, ಮೈಸೂರು: ಡಿ.ವಿ.ಕೆ. ಮೂರ್ತಿ.
ಲೀಲಾವತಿ ಎಚ್. ಆರ್. 1997. ಸುಗಮ ಸಂಗೀತ: ಒಂದು ಸಿಂಹಾವಲೋಕನ, ಬೆಂಗಳೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.—–2005. ಇವರ ಜೊತೆಗೆ ನಡೆಸಿದ ಟೆಲಿಫೆÇೀನ್ ಸಂದರ್ಶನ, 10 ಮಾರ್ಚ್ 2005.
ಮೂರ್ತಿರಾವ್, ಎ.ಎನ್. 1995. ಗಾನವಿಹಾರ, ಮೈಸೂರು: ಡಿ.ವಿ.ಕೆ. ಮೂರ್ತಿ._____1999. ಸಂಜೆಗಣ್ಣಿನ ಹಿನ್ನೋಟ, ಮೈಸೂರು: ಡಿ.ವಿ.ಕೆ. ಮೂರ್ತಿ
ನಾಗಣ್ಣ, ಸಿ. 2003. ಮೈಸೂರು ಸಾರ್ವಜನಿಕ ಜೀವನದಲ್ಲಿ ಕಾರಂತರು, ಜಯಪ್ರಕಾಶ ಮಾವಿನಕುಳಿ (ಸಂ.) ರಂಗಜಂಗಮ, ಮೂಡುಬಿದರೆ: ಸ್ಪಟಿಕ ಪ್ರಕಾಶನ.
ನಾಯರ್, ಜಾನಕಿ 1993. “Production Regimes, Cultural Processes: Industrial Labour in Mysore”: The Indian Economic and Social History Review, ಸಂಪುಟ 30 (3), ಪು. 261-281—– 1994. “The Devadasi, Dharma and the State”, Economic and Political Weekly ಸಂಪುಟ 29, (50), ಪು. 3157-3167—– 1998. “Drawing a Line: K Venkatappa and his Publics: The Indfian Economic and Social History Review, ಸಂಪುಟ 35 (2), ಪು. 179-210. —–2000. “Language and Right to the City ಸಂಪುಟ 35(47), ಪು. 4141-4150 —–2005. The Promise of Metropolis: Bangalore’s Twentieth Century ನ್ಯೂ ಡೆಲ್ಲಿ: ಆಕ್ಸ್‍ಫರ್ಡ್ ಯುನಿವರ್ಸಿಟಿ ಪ್ರೆಸ್
ನಾರಾಯಣಮೂರ್ತಿ ಎಮ್.ಎಸ್. 2001. “ಸಂಪಾದಕನ ಬಿನ್ನಹ”, ಎಮ್.ಎಸ್. ನಾರಾಯಣಮೂರ್ತಿ (ಸಂ.) ಶಿವರಾಮ ಸಂಗೀತ ಸುಧಾ ಸಂ. 1, ಬೆಂಗಳೂರು: ಅನನ್ಯ, ಪು. 5-9
—–2001 ಬಿ. “ವೀಣೆ ಶಿವರಾಮಯ್ಯನವರು: ಜೀವನ ಚಿತ್ರ”, ಎಮ್.ಎಸ್. ನಾರಾಯಣಮೂರ್ತಿ (ಸಂ.) ಶಿವರಾಮಸಂಗೀತ ಸುಧಾ ಸಂ. 1, ಬೆಂಗಳೂರು: ಅನನ್ಯ, ಪು. 40-69.
ಪ್ರಾಣೇಶ್, ಮೀರಾ ರಾಜರಾಮ್. 2003. Musical Composers During Wodeyar Dynasty: 1638-1947,ಬೆಂಗಳೂರು: ವಿ.ಎಮ್. ಪಬ್ಲಿಕೇಷನ್ಸ್.
ರಾಘವನ್ ವಿ. 1945. “Some Muscians and Their Patrons About 1800 A.D in Madras City: Journal of Madras Academy of Music , ಸಂಪುಟ 16, ಭಾಗ-1-4, ಪು. 127-136
ರಾಮಚಂದ್ರ ರಾವ್ ಎಸ್.ಕೆ. 2004. ಇವರ ಜೊತೆಗೆ ನಡೆಸಿದ ವೈಯಕ್ತಿಕ ಸಂದರ್ಶನ, 18ನೇ ಜೂನ್ 2004
ರಾಮರತ್ನಂ ವಿ. 2000. ಮೈಸೂರು ಒಡೆಯರು ಮತ್ತು ಕರ್ನಾಟಕ ಸಂಗೀತ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ
ಸತ್ಯನಾರಾಯಣ ರ. 2001ಎ (1980). ಕರ್ನಾಟಕ ಸಂಗೀತ ವಾಹಿನಿ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ —–2001ಬಿ.
“ಮುನ್ನುಡಿ”, ಎಮ್. ಎಸ್. ನಾರಾಯಣಮೂರ್ತಿ (ಸಂ.) ಶಿವರಾಮ ಸಂಗೀತ ಸುಧಾ ಸಂಪುಟ 1.ಬೆಂಗಳೂರು: ಅನನ್ಯ.—–2004. ಇವರ ಜೊತೆಗೆ ನಡೆಸಲಾದ ವೈಯಕ್ತಿಕ ಸಂದರ್ಶನ, 23 ಜೂನ್ 2004
ಸೀತಾ ಎಸ್. 2001, Tanjore As the Seat of Music During 17th 18th and 19th Centuries, ಮದ್ರಾಸ್: ಮದ್ರಾಸ್ ವಿ.ವಿ.
ಶಾಮ ರಾವ್, ಎಮ್. 1936. Modern Mysore: From the Beginning to 1868, ಬೆಂಗಳೂರು: ಹಿಗ್ಗಿನ್ ಬೋಥಂಸ್.
ಶರ್ಮ, ರಾಳ್ಳಪಲ್ಲಿ ಅನಂತ ಕೃಷ್ಣ. 1952. ಗಾನಕಲೆ, ಮೈಸೂರು: ಕಾವ್ಯಾಲಯ.
ಶಾಸ್ತ್ರಿ ಬಿ.ವಿ.ಕೆ. 1994. ಕಲೆಯ ಗೊಂಚಲು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಸೀತರಾಮಯ್ಯ ವಿ. 2002 (1970) ಮಹನೀಯರು: ಜೀವನ ಚಿತ್ರಗಳು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ
ಶ್ರೀನಿವಾಸನ್ ಎಮ್.ಎ. 1991. Of the Raj, Maharajas and Me, ದೆಲ್ಲಿ: ರವಿ ದಯಾಳ್ ಪಬ್ಲಿಷರ್ಸ್
ಸುಬ್ರಮಣಿಯಮ್, ಲಕ್ಷ್ಮಿ. 1999. ““The Reinvention of a Tradition: Nationalism, Carnatic Music and the Madras Music Academy 1900-1947”, The Indian Economic and Social Hisoty Review,, ಸಂಪುಟ 36 (2), ಪು. 131-163.
ಸುಂದರಮ್ ಬಿ.ಎಮ್. 1995. “ಕರ್ನಾಟಕ ಮತ್ತು ತಮಿಳುನಾಡಿನ ಸಂಗೀತ ಸಂಬಂಧ”, ಬಿ.ವಿ.ಕೆ. ಶಾಸ್ತ್ರಿ (ಸಂ.) ಗಾನಕಲಾ
ಮಂಜರಿ, ಸಂಪುಟ 1, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸರ್ಕಾರ.
The Hindu Speaks on Music.. 1999. ಚೆನ್ನೈ: ಕಸ್ತೂರಿ ಆಂಡ್ ಸನ್ಸ್ ಲಿ.
ವಾಸುದೇವಾಚಾರ್ಯ, ಮೈಸೂರು. 1994 (1955). ನಾ ಕಂಡ ಕಲಾವಿದರು, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕರ್ನಾಟಕ ಸರ್ಕಾರ
ಒಡೆಯರ್, ಕೃಷ್ಣರಾಜ. 1921. Speeches by His Highness Sri Krishnaraja Wadiyar Bahadur, GCSI, GBE, Maharaja of Mysore: 1902-1920, ಬೆಂಗಳೂರು: ಸರ್ಕಾರಿ ಮುದ್ರಣಾಲಯ.
ಡಾ. ಶಶಿಕಾಂತ ಕೌಡೂರು ಸುರತ್ಕಲ್ಲಿನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕ (NITK) ಇಲ್ಲಿನ ಮಾನವಿಕ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಹೈದರಾಬಾದ್ ನ ಕೇಂದ್ರೀಯ ವಿಶ್ವವಿದ್ಯಾಲಯ ದಲ್ಲಿ ತುಲನಾತ್ಮಕ ಸಾಹಿತ್ಯದಲ್ಲಿ ಪಿ.ಎಚ್.ಡಿ ಪಡೆದ ಇವರು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಹಾಗೂ ಸಂಶೋಧನಾ ನಿಯತಕಾಲಿಕೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಹಲವಾರು ಜನಪ್ರಿಯ ಲೇಖನ ಗಳನ್ನೂ ಬರೆದಿರುತ್ತಾರೆ. ಕರ್ನಾಟಕ ಹಾಗೂ ಹಿಂದುಸ್ತಾನೀ ಸಂಗೀತಗಳೆರಡರಲ್ಲೂ ತಕ್ಕಮಟ್ಟಿಗೆ ಪರಿಶ್ರಮ ಇರುವ ಇವರು ನಾಲ್ಕೈದು ನಾಟಕಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.