ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ

ಈ ಲೇಖನದ ಮೂಲ – “Carnatic Music, Kannada and Kannadigas: Certain Moments from Princely Mysore”, Journal of Karnataka Studies, ಸಂ. 2, ಸಂಖ್ಯೆ 1ರಲ್ಲಿ ಪ್ರಕಟವಾದದ್ದು (2004-05). ಇದು ಭಾಷಾಂತರಿಸಿ ಕೊಂಚ ಮಾರ್ಪಾಡುಗಳೊಂದಿಗೆ ಹಲವು ಭಾಗಗಳಲ್ಲಿ ಇಲ್ಲಿ ಮುಂದೆ ಪ್ರಕಟವಾಗುತ್ತಿದೆ.

1960ರ ದಶಕದ ದಕ್ಷಿಣ ಕರ್ನಾಟಕದಲ್ಲಿ, ಮುಖ್ಯವಾಗಿ ಬೆಂಗಳೂರಿನ ಸುತ್ತಮುತ್ತಲಲ್ಲಿ, ಕನ್ನಡ ರಾಷ್ಟ್ರೀಯತೆ (nationalism) ಯು ಒಂದು ಸ್ಪಷ್ಟರೂಪ ಪಡೆಯಿತು. ಕನ್ನಡದಲ್ಲಿ ಈ ಹೊತ್ತಿನ ಸುಮಾರಿಗೆ ‘ಸುಗಮ ಸಂಗೀತ’ವೆಂಬ ಒಂದು ಹೊಸ ಸಂಗೀತ ಪ್ರಕಾರವು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಂಕಥನ (discourse) ದಿಂದಾಗಿ ರೂಪುಗೊಳ್ಳುತ್ತಿತ್ತು. ಆದರೆ ಇದಕ್ಕೆ ಅರ್ಧ ಶತಮಾನದ ಮುಂಚೆಯೇ ಮೈಸೂರು ಸಂಸ್ಥಾನದಲ್ಲಿ ಕರ್ನಾಟಕ (ಶಾಸ್ತ್ರೀಯ) ಸಂಗೀತ ಹಾಗೂ ಕನ್ನಡ ಅಸ್ಮಿತೆ (identity) ಇವೆರಡನ್ನು ಒಗ್ಗೂಡಿಸಿ ಅವುಗಳ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿರುವುದನ್ನು ನಾವು ಗಮನಿಸಬಹುದು. ಈ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳೆಂದರೆ, ಮೈಸೂರು ಮಹಾರಾಜರು ಸಂಗೀತಗಾರರನ್ನು ಕನ್ನಡದಲ್ಲಿ ಕೀರ್ತನೆಗಳನ್ನು ಬರೆಯುವಂತೆ ಹೇಳಿದ್ದು: ವಾಸುದೇವಾಚಾರ್ಯರಂಥ ಹಿರಿಯ ಸಂಗೀತಗಾರರು ಈ ಕೋರಿಕೆಯನ್ನು ಕಡೆಗಣಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಹೆಚ್ಚಿನ ಸಂಗೀತಗಾರರು ಮಹಾರಾಜರ ಅಜ್ಞೆಯನ್ನು ಒಪ್ಪಿಕೊಂಡಿದ್ದು; ಮೈಸೂರಿನ ಪ್ರತಿಷ್ಠಿತ ‘ಗಾಯನ ಸಮಾಜ’ದ ಸದಸ್ಯರೊಬ್ಬರು ಮೈಸೂರಿನ (ಅಥವಾ ಕರ್ನಾಟಕದ) ಸಂಗೀತಗಾರರನ್ನು ತಮಿಳುನಾಡಿನ ಸಂಗೀತಗಾರರ ಸರೀಕರಾಗಿ ಪರಿಗಣಿಸಬೇಕೆಂದು ಮಹಾರಾಜರಲ್ಲಿ ವಿನಂತಿಸಿಕೊಂಡಿದ್ದು, ಇತ್ಯಾದಿ. ಕರ್ನಾಟಕ ಸಂಗೀತದಲ್ಲಿ ಒಂದು ವಿಶಿಷ್ಟವಾದ ಪರಂಪರೆ ಪ್ರಾರಂಭವಾಗುವ ಸಾಧ್ಯತೆ ಇದ್ದ ಕ್ಷಣವಿದು. ಮೊದಲ ನೋಟಕ್ಕೆ ಮೇಲಿನವು ಅಷ್ಟೇನೂ ಮುಖ್ಯವಲ್ಲದ ಘಟನೆಗಳಾಗಿ ಕಾಣುತ್ತವೆ. ಆದರೆ ಈ ಘಟನೆಗಳು ಸೃಷ್ಟಿಸಿದ ಪ್ರಶ್ನೆಗಳು ಮತ್ತು ಕಂಡುಕೊಂಡ ಉತ್ತರಗಳು ನಂತರದಲ್ಲಿ ಕನ್ನಡ ರಾಷ್ಟ್ರೀಯತೆಯ ಮುಖ್ಯವಾಣಿಯಾಗಿ ಮೂಡಿಬಂದವು.

ಒಟ್ಟಾರೆಯಾಗಿ ಕಳೆದ ಶತಮಾನದಲ್ಲಿ ಕರ್ನಾಟಕ ಸಂಗೀತವು ಕನ್ನಡ ಮತ್ತು ಕನ್ನಡಿಗರ ಜೊತೆಗೆ ಯಾವ ರೀತಿಯ ಅನುಸಂಧಾನವನ್ನು ಮಾಡಿಕೊಳ್ಳಬೇಕಾಗಿತ್ತೆಂದು ಈ ಲೇಖನ ಸರಣಿಯಲ್ಲಿ ನಾವು ಸ್ಥೂಲವಾಗಿ ನೋಡಲಿದ್ದೇವೆ.

ಕರ್ನಾಟಕ ಸಂಗೀತದ ಮೇಲೆ ಉಂಟಾದ ಭಾಷಿಕ ಬೇಡಿಕೆಗಳು ಮತ್ತು ಈ ವಲಯದಲ್ಲಿ ಇದ್ದ ಸಂಗೀತಗಾರರ ಭಾಷಿಕ ಒಲವುಗಳನ್ನು ಈ ಲೇಖನ ಸರಣಿಯಲ್ಲಿ ಚರ್ಚಿಸಲಾಗಿದೆ. ಶಾಸ್ತ್ರೀಯ ಸಂಗೀತದ ಅಲೌಕಿಕತೆಯನ್ನೇ ಒತ್ತಿ ಹೇಳುವ ಮಾಧ್ಯಮಗಳು, ವಿಮರ್ಶೆಗಳು ಮತ್ತು ಸಾಮಾನ್ಯ ಅಭಿಪ್ರಾಯಗಳ ನಡುವೆ ಕಳೆದು ಹೋಗುವ ನಾವು ಸಂಗೀತದ ಮತ್ತು ಸಂಗೀತಗಾರರ ಲೌಕಿಕ ವ್ಯವಹಾರಗಳ ಝಲಕುಗಳನ್ನೂ, ಅವರ ದರ್ಪ ದೌಲತ್ತುಗಳನ್ನೂ, ಸಣ್ಣ-ದೊಡ್ಡತನಗಳನ್ನೂ ನೋಡಬೇಕೆನ್ನುವ ಪ್ರಯತ್ನವನ್ನೂ ಸಹ ಈ ಬರಹಗಳಲ್ಲಿ ಮಾಡಲಾಗಿದೆ. ಪ್ರಸ್ತುತ ಲೇಖನದಲ್ಲಿ ಸ್ವಲ್ಪ ಹಿಂದಿನ ಸಮಯದಿಂದಲೇ ಈ ಅವಲೋಕನ ಮಾಡಲಾಗಿದೆ.

1799ರಲ್ಲಿ ಟಿಪ್ಪುವಿನ ಪತನದ ನಂತರ ಮೈಸೂರು ಪ್ರದೇಶ ಒಡೆಯರ ವಂಶದ ಕೈಗೆ ಹಿಂತಿರುಗಿದ ಮೇಲೆ ಮೈಸೂರಿನ ಅರಮನೆಯಲ್ಲಿ ಸಂಗೀತ ಮತ್ತಿತರ ಲಲಿತ ಕಲೆಗಳ ಚಟುವಟಿಕೆ ಹೆಚ್ಚಾಯಿತೆಂದು ಕೆಲವು ಚರಿತ್ರೆಕಾರರ ಅಂಬೋಣ. ಅಂದರೆ ಹೈದರ್ ಮತ್ತು ಟಿಪ್ಪು ಸಂಗೀತ ಮತ್ತು ಸಂಗೀತ ವಿದ್ವಾಂಸರನ್ನು ಪೋಷಿಸಲಿಲ್ಲ ಎಂದು ಅರ್ಥವಲ್ಲ. ಚರಿತ್ರೆಕಾರರು ಸುಲ್ತಾನರ ರಾಜಕೀಯ ಹಾಗು ಯುದ್ಧ ಸಂಬಂಧೀ ವಿಷಯಗಳಿಗೆ ಗಮನ ಹರಿಸಿದಷ್ಟು ಆಸ್ಥಾನದ ಸುತ್ತ ಇದ್ದ ಸಾಂಸ್ಕೃತಿಕ ಜೀವನದ ಬಗ್ಗೆ ಶೋಧನೆ ನಡೆಸಿಲ್ಲ ಎಂದು ಹೇಳಬಹುದು. ಇದರಿಂದಾಗಿ ಹೈದರ್ ಮತ್ತು ಟಿಪ್ಪು ಸಂಗೀತ ಮತ್ತು ಕಲೆಯನ್ನು ಪೋಷಿಸಲೇ ಇಲ್ಲ ಎಂಬ ಭಾವನೆ ಉಂಟಾಯಿತು. ಆದರೂ ಆದಿಪ್ಪಯ್ಯ ಎಂಬ ಸಂಗೀತಗಾರರೊಬ್ಬರು ಹೈದರನ ಆಸ್ಥಾನದಲ್ಲಿ ಇದ್ದರೆಂಬ ಸಂಗತಿ ಕಂಡುಬರುತ್ತದೆ. ಇವರ ಮಕ್ಕಳಾದ ಕುಪ್ಪಯ್ಯ ಮತ್ತು ಅಪ್ಪಯ್ಯ ಎಂಬಿಬ್ಬರು ಹೈದರ್ ಮತ್ತು ಟಿಪ್ಪುವಿನ ಜೆನಾನ (ಅಂತಃಪುರ) ಗಳಲ್ಲಿ ಸಂಗೀತ ಶಿಕ್ಷಕರಾಗಿದ್ದರೆಂಬ ವರದಿ ಇದೆ. ಪದೇಪದೇ ನಡೆದ ಯುದ್ಧದಿಂದ ಒದಗಿಬಂದ ಮೈಸೂರಿನ ಅಸ್ಥಿರ ರಾಜಕೀಯ ಸ್ಥಿತಿಯಿಂದಾಗಿ ಆದಿಪ್ಪಯ್ಯನವರು ತಂಜಾವೂರಿನ ಮರಾಠ ರಾಜರ ಬಳಿ ಆಶ್ರಯ ಕೋರಿ ಹೋದರೆಂದು ದಾಖಲಾಗಿದೆ.

ಟಿಪ್ಪು ಹೈದರ್

ಟಿಪ್ಪುವಿನ ಮರಣದೊಂದಿಗೆ ನಮ್ಮ ರಾಜ್ಯದಲ್ಲಿ ಯುದ್ಧಗಳೂ ಕೊನೆಗೊಂಡವು. ಆಡಳಿತದ ಗಂಭೀರ ವಿಷಯಗಳೆಲ್ಲ ಬ್ರಿಟಿಷರ ಕೈಯಲ್ಲಿದ್ದುದರಿಂದ ಮೈಸೂರಿನ ರಾಜರಿಗೆ ಹಲವಾರು ವಿಲಾಸೀ ಹವ್ಯಾಸಗಳ ಕಡೆ ಗಮನಕೊಡಲು ಸಾಧ್ಯವಾಯಿತೇನೊ! ಅಂಥ ಹವ್ಯಾಸಗಳಲ್ಲಿ ಸಂಗೀತ ಪ್ರಮುಖವಾದುದು. ಟಿಪ್ಪುವಿನ ನಂತರ ಬ್ರಿಟಿಷರು ಮೈಸೂರಲ್ಲಿ ಸ್ಥಾಪಿಸಿದ್ದು ಮೂರನೆ ಕೃಷ್ಣರಾಜ ಒಡೆಯರ (1799-1834) ಆಡಳಿತವನ್ನು. ದಿವಾನರಾದ ಪೂರ್ಣಯ್ಯನವರು ವೆಂಕಟಸುಬ್ಬಯ್ಯನವರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ ಗುರುವಾಗಿ ನೇಮಕ ಮಾಡಿದ್ದರು. ವಿದ್ವಾನ್ ವೆಂಕಟಸುಬ್ಬಯ್ಯನವರು ವೀಣಾ ಪಾರಂಗತರಾಗಿದ್ದು ರಾಜನಿಗೆ ಗುರುವಾಗಿಯೂ, ಆತ್ಮೀಯ ಗೆಳೆಯನಾಗಿಯೂ ಇದ್ದು ಮೈಸೂರಿನ ಒಬ್ಬ ಪ್ರಮುಖ ವ್ಯಕ್ತಿಯೂ ಆಗಿದ್ದರು. ಕೃಷ್ಣರಾಜ ಒಡೆಯರು ಪ್ರಬುದ್ಧರಾಗುತ್ತಿದ್ದಂತೆಯೇ  ವೆಂಕಟಸುಬ್ಬಯ್ಯ ಪ್ರಬಲ ಅಧಿಕಾರ ಚಲಾಯಿಸುವಂತಾದರು.

19 ಮತ್ತು 20ನೇ ಶತಮಾನದ ಮೈಸೂರಿನಲ್ಲಿ ವೆಂಕಟಸುಬ್ಬಯ್ಯನವರಷ್ಟು ಅಧಿಕಾರವನ್ನು ಅನುಭವಿಸಿದ ಬೇರೆ ಯಾವ ಸಂಗೀತಗಾರನೂ ಇರಲಿಲ್ಲವೆಂದು ಹೇಳಲಾಗುತ್ತದೆ.

ವೆಂಕಟಸುಬ್ಬಯ್ಯನವರ ನಿವಾಸವು ಎರಡನೆ ಅರಮನೆಯಂತೆ ಕಾಣುತ್ತಿತೆಂದು, ಅವರ ಯಾವ ಕೋರಿಕೆಯನ್ನೂ ಮಹಾರಾಜರು ನಿರಾಕರಿಸುತ್ತಿರಲಿಲ್ಲವೆಂದು ತಿಳಿದುಬರುತ್ತದೆ. ದಿವಾನರನ್ನು ನೇಮಕ ಮಾಡುವ ಅಧಿಕಾರ ಅರಮನೆಗೆ ಇಲ್ಲದಿದ್ದ ಕಾರಣ ಮತ್ತು ಈ ವಿಷಯದಲ್ಲಿ ಬ್ರಿಟಿಷರನ್ನು ಮೀರಿ ಏನನ್ನೂ ಮಾಡಲಾಗದ ಸ್ಥಿತಿಯಲ್ಲಿದ್ದ ಮಹಾರಾಜನಿಗೆ ತನ್ನ ಪ್ರಭಾವಲಯದಲ್ಲೇ ಅಪ್ತ ಅಧಿಕಾರಿಗಳು ಬೇಕಾಗುತ್ತಿದ್ದುದು ಸಹಜ. ಈ ಸಂದರ್ಭದಲ್ಲಿ ಮೇಲಿನ ಸಂಗತಿ ಮುಖ್ಯವಾಗುತ್ತದೆ.

1819ರಿಂದ ಮಹಾರಾಜರ ಮುಖ್ಯ ಸಲಹೆಗಾರರಾದಾಗ ವೆಂಕಟಸುಬ್ಬಯ್ಯನವರು ಒಂದು ಪರ್ಯಾಯ ಅಧಿಕಾರದ ಕೇಂದ್ರವಾಗಿ (ಮೂಸಾಹಿಬ್) ಪರಿಣಮಿಸಿದರು. ಆ ಸಮಯದಲ್ಲಿ ಅವರು ತಿಂಗಳಿಗೆ 120 ಪಗೋಡಾಗಳ (ಅಂದರೆ ಸುಮಾರು ರೂ. 360) ಸಂಬಳ ಪಡೆಯುತ್ತಿದ್ದರು. ಇಷ್ಟೇ ಅಲ್ಲದೆ ಹಲವು ಜಹಗೀರ್‍ಗಳನ್ನು ಅವರು ಮಹಾರಾಜರಿಂದ ಪಡಕೊಂಡಿದ್ದರು. ಮೈಸೂರಿನ ಪ್ರಾರಂಭದ ಇತಿಹಾಸಕಾರರಾದ ಎಮ್. ಶಾಮರಾಯರು ವೆಂಕಟಸುಬ್ಬಯ್ಯನವರ ಭ್ರಷ್ಟಾಚಾರ ಮತ್ತು ಅವರು ಕೊಡುತ್ತಿದ್ದ ಕೆಟ್ಟ ಸಲಹೆಗಳ ಬಗ್ಗೆ ಬರೆದಿದ್ದಾರೆ. ರೆಸಿಡೆಂಟರ ಕಛೇರಿಯಲ್ಲಿದ್ದ ಚೌಡಯ್ಯ ಎಂಬುವವರ ಸಹಾಯದಿಂದ ಮಹಾರಾಜರು ಹಾಗು ರೆಸಿಡೆಂಟರ ಮಧ್ಯೆ ಪತ್ರವ್ಯವಹಾರ ನಡೆದಂತೆ ನಕಲಿ ದಾಖಲೆ ಸೃಷ್ಟಿಸಿ ತಮ್ಮ ಸ್ವಾರ್ಥ ಹಿತಸಾಧನೆ ಮಾಡುತ್ತಿದ್ದರಂತೆ. 1830ರ ದಶಕದಲ್ಲಿ ಮೈಸೂರು ರಾಜ್ಯದ ನಗರ ಎಂಬಲ್ಲಿ ಉಂಟಾದ ದಂಗೆಗೆ ಮುಖ್ಯ ಕಾರಣ ವೆಂಕಟಸುಬ್ಬಯ್ಯನವರ ಭ್ರಷ್ಟತನ ಎಂದೂ ಹೇಳಲಾಗಿದೆ. ಇತಿಹಾಸಜ್ಞೆ ಜಾನಕಿ ನಾಯರ್ ಅವರ ಪ್ರಕಾರ ಬ್ರಿಟಿಷರು ಆಡಳಿತದ ಚುಕ್ಕಾಣಿಯನ್ನು ತಮ್ಮ ತೆಕ್ಕೆಗೆ ಮತ್ತೆ ತೆಗೆದುಕೊಳ್ಳಲು ಕಾರಣ ರಾಜನ ಭ್ರಷ್ಟಾಚಾರಕ್ಕೆ ಎಲ್ಲಿ ವಸಾಹತು ಪೂರ್ವದ ಅಧಿಕೃತತೆ ಬಂದು ಬಿಡುತ್ತೋ ಎಂಬ ಅತಂಕ. ವೆಂಕಟಸುಬ್ಬಯ್ಯನವರ ಜೊತೆಗೆ ಮೈಸೂರು ಸದಾಶಿವರಾಯರು, ಶುಂಠಿ ವೆಂಕಟರಮಣಯ್ಯನವರು, ಚಿನ್ನಯ್ಯನವರು, ವೀಣೆ ಚಿಕ್ಕಲಕ್ಷ್ಮೀನಾರಣಪ್ಪ ಹಾಗೂ ಪೆದ್ದಲಕ್ಷ್ಮೀನಾರಣಪ್ಪ ಇವರೆಲ್ಲ ಅರಮನೆಯ ಇತರೆ ಸಂಗೀತಗಾರರಾಗಿದ್ದರು. ಮೈಸೂರಿನ ಪ್ರಖ್ಯಾತ ವೈಣಿಕ ಶೇಷಣ್ಣನ ತಂದೆ ಚಿಕ್ಕರಾಮಪ್ಪನವರು ವೆಂಕಟಸುಬ್ಬಯ್ಯನವರ ಶಿಫಾರಸಿನ ಮೇಲೆ ಮುಮ್ಮಡಿಯವರಲ್ಲಿ ಆಸ್ಥಾನ ವಿದ್ವಾಂಸರಾಗಿ ಸೇರಿದ್ದರು. ಇದಲ್ಲದೆ ಹತ್ತಿರದ ಸ್ಥಳಗಳಿಂದ ಹಲವಾರು ಸಂಗೀತಗಾರರು ಅರಮನೆಗೆ ಬಂದು ಹೋಗುತ್ತಿದ್ದರು.

ಚಾಮರಾಜ ಒಡೆಯರ್‌ ೧೮೮೧-೯೪

ಮುಂದಿನ ರಾಜರಾದ ಚಾಮರಾಜ ಒಡೆಯರ ಕಾಲದಲ್ಲಿ (1881-1894) ಹಲವಾರು ಸಂಗೀತಗಾರರನ್ನು ನೇಮಕ ಮಾಡಲಾಯಿತು. ಇದರಲ್ಲಿ ಪ್ರಮುಖರೆಂದರೆ ವೀಣೆ ಶಾಮಣ್ಣ, ವೀಣೆ ಪದ್ಮನಾಭಯ್ಯ, ವೀಣೆ ಶೇಷಣ್ಣ, ಮೈಸೂರು ಕರಿಗಿರಿ ರಾವ್, ವೀಣೆ ಸುಬ್ಬಣ್ಣ, ಮೈಸೂರು ವಾಸುದೇವಾಚಾರ್ಯ ಮತ್ತು ಬಿಡಾರಂ ಕೃಷ್ಣಪ್ಪನವರು. ಮಹಾರಾಜರ ಅಕಾಲ ಮರಣದ ನಂತರ (1894) ಇವರಲ್ಲಿ ಹಲವರು ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲೂ (1901-1940) ಆಸ್ಥಾನ ವಿದ್ವಾಂಸರಾಗಿ ಮುಂದುವರೆದರು. ಸ್ವತಃ ಸಂಗೀತದಲ್ಲಿ ಪ್ರವೀಣರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ಹೊಸ ಮುಖಗಳಾದ ಮುತ್ತಯ್ಯ ಭಾಗವತರ್, ವೀಣೆ ಶಿವರಾಮಯ್ಯ, ವೀಣೆ ವೆಂಕಟಗಿರಿಯಪ್ಪ, ಚಿಕ್ಕರಾಮರಾಯರು, ಚೌಡಯ್ಯ, ದೇವೇಂದ್ರಪ್ಪ ಮುಂತಾದವರನ್ನು ಆಸ್ಥಾನ ಸಂಗೀತಕಾರರಾಗಿ ನೇಮಕ ಮಾಡಿದರು.‌

ತಮ್ಮ ಆಳ್ವಿಕೆಯ ಪ್ರಾರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಕನ್ನಡದಲ್ಲಿ ಸಂಗೀತದ ಕೃತಿಗಳು ಮೂಡಿಬರಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ನಂತರ 1926ರಲ್ಲಿ ಇದೇ ಇಂಗಿತದಲ್ಲಿ ಆಜ್ಞೆ ಹೊರಡಿಸಿದರು. ಮಹಾರಾಜರು ಸಂಗೀತಗಾರರಿಗೆ ಇಂತಿಂಥಾ ರಾಗಗಳಲ್ಲಿ ಕೃತಿಗಳನ್ನು ರಚಿಸುವಂತೆ ಆದೇಶ ಹೊರಡಿಸುತ್ತಿದ್ದರು. ದರ್ಬಾರ್ ಭಕ್ಷಿ (ಆಸ್ಥಾನ ನಿರ್ವಾಹಕರು) ಯವರು ಈ ಪತ್ರವನ್ನು ಸಂಗೀತಗಾರರಿಗೆ ತಲುಪಿಸುತ್ತಿದ್ದರು.ಈ ತರಹದ ಆಜ್ಞೆ ಹಿಂದೆಂದೂ ಯಾವ ರಾಜರೂ ಹೊರಡಿಸಿರಲಿಲ್ಲ.

ಮುಮ್ಮಡಿ ಕೃಷ್ಣರಾಜ ಒಡೆಯರು ಸ್ವತಃ ಕನ್ನಡದಲ್ಲಿ ಹರಿದಾಸರ ‘ಪದ’ ಮತ್ತು ‘ಜಾವಳಿ’ಗಳ (ಭಕ್ತಿ, ಶೃಂಗಾರ ಅಥವಾ ವೈರಾಗ್ಯ ಭಾವವನ್ನು ವ್ಯಕ್ತಪಡಿಸುವ ಕೃತಿಗಳು) ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದರು. ಆದರೆ ಅವುಗಳಲ್ಲಿ ಭಾಷೆಯ ದೃಷ್ಟಿಯಿಂದ ಯಾವ ರೀತಿಯ ವಿಶೇಷವೂ ಕಾಣುವುದಿಲ್ಲ. ಮಹಾರಾಜರಿಗೆ ಗೊತ್ತಿದ್ದ ಭಾಷೆಗಳಾದ ಸಂಸ್ಕೃತ, ಮರಾಠಿ ಮತ್ತು ತೆಲುಗು ಭಾಷೆಯನ್ನು ಇಲ್ಲಿ ಬಳಸಲಾಗಿತ್ತು. ನಂತರ ಬಂದ ಚಾಮರಾಜ ಒಡೆಯರು ಆಧುನಿಕ ಶಿಕ್ಷಣವನ್ನು ಪಡೆದಿದ್ದು ಪಾರ್ಸಿ ನಾಟಕಗಳಿಂದ ಪ್ರಭಾವಿತರಾಗಿದ್ದರು. ಕಾಳಿದಾಸ ಮತ್ತು ಶೇಕ್ಸ್‍ಪಿಯರಿನ ಕೆಲವು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿ ಆಡಬೇಕೆಂದು ಅವರು ಆಜ್ಞೆ ನೀಡಿದ್ದರು. ಆ ನಾಟಕಗಳಿಗೆ ಆಗಿನ ಕಾಲದ ನಾಟಕಗಳಲ್ಲಿನ ರೂಢಿಯಿದ್ದಂತೆ, ಕನ್ನಡ ಹಾಡುಗಳು ಹಾಗೂ ಗೀತೆಗಳನ್ನು ರಚಿಸಬೇಕಾಗಿತ್ತು. ಆದರೆ ಈ ಹಾಡುಗಳನ್ನು ನಾಟಕ ಪ್ರದರ್ಶನಗಳಲ್ಲಿ ಬಳಸಿಕೊಳ್ಳಬಹುದಾಗಿತ್ತೆ ಹೊರತು ಸಂಗೀತ ಕಛೇರಿಗಳಲ್ಲಿ ಹಾಡುತ್ತಿರಲಿಲ್ಲ. (ಬಿಡಾರು ಕೃಷ್ಣಪ್ಪ ಮತ್ತು ರತ್ನಾವಳಿ ನಾಟಕ ಕಂಪನಿಯ ಒಡೆಯ ಹಾಗು ಪ್ರಧಾನ ನಟರಾದ ವರದಾಚಾರ್‍ರವರ ಶೈಲಿಗೂ ಇದ್ದ ವ್ಯತ್ಯಾಸದ ಬಗ್ಗೆ ವಿ.ಸೀತಾರಾಮಯ್ಯನವರು ಒಂದು ಕಡೆ ಹೇಳುತ್ತಾರೆ.) ನಾಲ್ವಡಿಯವರ ಹೊಸ ಆಜ್ಞೆಯು ಸಂಗೀತ ಕಛೇರಿಗಳಿಗೆ ಯೋಗ್ಯವಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಬೇಕೆಂಬುದಾಗಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್‌

ನಾಲ್ವಡಿ ಕೃಷ್ಣರಾಜ ಒಡೆಯರ್‌

ಈ ವಿದ್ಯಮಾನವನ್ನು ಕನ್ನಡ ರಾಷ್ಟ್ರೀಯತೆಯ ಅಂಶವಾಗಿ ಕಾಣುವುದು ತೀರ ಸರಳೀಕರಿಸಿದಂತಾದರೂ ಮೈಸೂರು ಸಂಸ್ಕೃತಿಯ ಕೆಲವು ವಿಶಿಷ್ಟವಾದ, ಮೈಸೂರಿಗೆ ಸೀಮಿತವಾದ ವಿಷಯಗಳನ್ನು ಇಲ್ಲಿ ನಿರ್ಲಕ್ಷಿಸುವದಕ್ಕಾಗುವುದಿಲ್ಲ. ಮೈಸೂರು ರಾಜ್ಯವು ತನ್ನನ್ನು ಒಂದು ಮಾದರಿ ರಾಜ್ಯವಾಗಿ ಕರೆಸಿಕೊಳ್ಳುವ ಆತೀವ ಬಯಕೆ ಹೊಂದಿತ್ತು. ದೇಶದಲ್ಲಿ ಪ್ರಥಮ ಬಾರಿಗೆ ವಿಧಾನಸಭೆಯನ್ನು ಹೊಂದಿದ ರಾಜ್ಯವೆಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಬ್ರಿಟಿಷ್ ಸರ್ಕಾರದ ಗಮನ ಸೆಳೆಯಲು ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವ ಪ್ರಯತ್ನಗಳೂ ಕೂಡ ಆಗಿದ್ದವು. ಅರ್ಥ ವ್ಯವಸ್ಥೆ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿನ ಚಟುವಟಿಕೆಗಳು ಮೈಸೂರಿನ ಆಡಳಿತವನ್ನು ಅಧಿಕೃತಗೊಳಿಸಿಕೊಳ್ಳಲು (legitimize) ಮತ್ತು ಇನ್ನೂ ಹೆಚ್ಚು ಕೈಗಾರಿಕಾ ಚಟುವಟಿಕೆಗಳಿಗೆ ವಸಾಹತುಶಾಹಿಯಿಂದ ಪ್ರೋತ್ಸಾಹಗಳಿಸಲು ಅನುಕೂಲ ಮಾಡಿದವು. ಆದರೂ ಸಾಂಸ್ಕೃತಿಕ ವಲಯವನ್ನು ಅಲಕ್ಷಿಸದೆ ತನ್ನ ಕಲಾವಿದರನ್ನು ಮತ್ತು ಸಂಗೀತಗಾರರನ್ನು ಮೈಸೂರು ಮುನ್ನೆಲೆಗೆ ತಂದಿತು. ಕೈಗಾರಿಕೀಕರಣಕ್ಕೆ ವಸಾಹತುಶಾಹಿಯಿಂದ ಪಡೆಯಬಹುದಾದ ಉತ್ತೇಜನ ಒಂದೆಡೆಯಾದರೆ, ಸಾಂಸ್ಕೃತಿಕ ವಲಯದ ಸಾಧನೆಗಳಿಗೆ ದೇಶೀ ಗಣ್ಯರ (native elites) ಮೆಚ್ಚುಗೆಯಿಂದ ಅಧಿಕೃತತೆಯನ್ನು ಪಡೆಯುವ ಪ್ರಯತ್ನಗಳಾದವು. ವ್ಯವಸ್ಥಿತ ರೀತಿಯಲ್ಲಿ ಕಲಾವಿದರನ್ನು, ಅದರಲ್ಲೂ ಮುಖ್ಯವಾಗಿ ಸಂಗೀತಗಾರರನ್ನು ಪ್ರವಾಸಕ್ಕೆ ಕಳುಹಿಸುವುದರ ಉದ್ದೇಶ ಈ ಅಂಶವನ್ನು ಈಡೇರಿಸಿಕೊಳ್ಳುವಲ್ಲಿ ಅನುವು ಮಾಡಿಕೊಟ್ಟಿತು. ಮೈಸೂರು ರಾಜ್ಯ ತನ್ನ ಕಲಾವಿದರನ್ನು ನಾನಾ ಕಡೆ ತಮ್ಮ ಕಲಾಪ್ರದರ್ಶನ ಮಾಡಲು ಅವಕಾಶ ಕಲ್ಪಿಸಿತ್ತು. ಆಸ್ಥಾನದ ಸಂಗೀತಗಾರರು ರಜೆಗಾಗಿ ಸಲ್ಲಿಸುತ್ತಿದ್ದ ಮನವಿಗಳನ್ನು ನೋಡಿದರೆ ಇದು ಗೊತ್ತಾಗುತ್ತದೆ. ಉದಾಹರಣೆಗೆ ವೀಣೆ ಶೇಷಣ್ಣನವರು 18ನೇ ಜೂನ್ 1908ರಂದು ಸಲ್ಲಿಸಿದ ಮನವಿಯಲ್ಲಿ ಬೊಂಬಾಯಿ ಮತ್ತು ಬರೋಡಾಕ್ಕೆ (ಸಂಗೀತ ಕಛೇರಿಗೋಸ್ಕರ) ಹೋಗುವುದರ ಬಗ್ಗೆ ಅರ್ಜಿ ಸಲ್ಲಿಸಿರುವುದು ನೋಡಬಹುದು. ವೀಣೆ ಸುಬ್ಬಣ್ಣನವರು ನವೆಂಬರ್ 1904 ರಂದು ಎಂಟು ತಿಂಗಳ ರಜಾ ಹಾಗು ಒಂದು ವರ್ಷದ ಸಂಬಳ ಕೇಳಿ ಬರೆದಿದ್ದರು. ಮದರಾಸ್, ರಾಮನಾಡ್ ಹಾಗು ತಿರುನೆಲ್ವೇಲಿ ಪ್ರವಾಸಕ್ಕಾಗಿ ಅವರು ಈ ಅರ್ಜಿಯನ್ನು ಬರೆದಿದ್ದರು. ಬಿಡಾರಂ ಕೃಷ್ಣಪ್ಪನವರು ತಮ್ಮ 30ನೇ ಜುಲೈ 1906ರ ಪತ್ರದಲ್ಲಿ ಶೃಂಗೇರಿ, ಬರೋಡಾ, ಹೈದರಾಬಾದ್, ರಾಮೇಶ್ವರಂ ಹಾಗೂ ತಿರುವನಂತಪುರಂ ಪ್ರವಾಸಕ್ಕಾಗಿ ಒಂದು ಸಾವಿರ ರೂಪಾಯಿಗಳ ಮುಂಗಡ ಹಾಗೂ ಒಂದು ವರ್ಷದ ರಜೆಯನ್ನು ಮಂಜೂರು ಮಾಡಲು ಮನವಿ ಮಾಡಿಕೊಂಡಿದ್ದರು. ವೀಣೆ ಸೀತಾರಾಮಯ್ಯನವರು ದಕ್ಷಿಣ ಹಾಗು ಉತ್ತರ ಭಾರತ ಪ್ರವಾಸವನ್ನು ಆಗಾಗ ಮಾಡುತ್ತಿದ್ದರು. ಇವೆಲ್ಲ ಕೆಲವು ಉದಾಹರಣೆಗಳಷ್ಟೆ. ಸಂಗೀತಗಾರರ, ಅವರ ಸಂಬಂಧಿಕರ, ಸ್ನೇಹಿತರ ಹಾಗೂ ಸಾಹಿತಿಗಳ ನೆನಪಿನ ಬರಹಗಳಲ್ಲಿ ಕೂಡಾ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ.

ಅರಮನೆ ದಾಖಲೆ ಒಂದರಲ್ಲಿ ಸಂಗೀತಗಾರರು ಅರಮನೆಯ ನೌಕರರಾಗಿದ್ದರೂ, ಅವರನ್ನು ಬೇರೆ ನೌಕರರಿಗಿಂತ ಭಿನ್ನವಾಗಿ ನಡೆಸಿಕೊಳ್ಳಬೇಕೆಂದು ಆಜ್ಞಾಪಿಸುವ ಮಾಹಿತಿ ಇದೆ.

ಸಂಗೀತಗಾರರಿಗೆ ಉದ್ಯೋಗವೊದಗಿಸಿದ್ದ ಅವಸರದ ಹೋಬ್ಳಿ ಇಲಾಖೆಯಿಂದ 17 ಜುಲೈ 1912ರಂದು ಹೊರಬಂದ ಒಂದು ಆಜ್ಞಾಪನೆ ಸಂಗೀತಗಾರರ ಬಗ್ಗೆ ಮಹಾರಾಜರಿಗಿದ್ದ ಅಭಿಪ್ರಾಯವನ್ನು ತಿಳಿಸುತ್ತದೆ. ಇದರಲ್ಲಿ ‘ಸಂಗೀತ ವಿದ್ವಾಂಸರು ಸಾಮಾನ್ಯವಾಗಿ ಜಾರಿಯಲ್ಲಿರುವ ನಿಯಮಗಳಿಗೆ ಒಳಪಡದೆ ರಜಾದಿನಗಳನ್ನು ಅನುಭವಿಸಬಹುದು. ಅವರನ್ನು ಇತರೆ ನೌಕರರು ಹಾಗು ಇಲಾಖೆಯಲ್ಲಿ ಕೆಲಸ ಮಾಡುವ ಕಾರಕೂನರ ಸಮಾನಕ್ಕೆ ನೋಡಲಾಗುವುದಿಲ್ಲ. ಅವರ ಸ್ಥಾನಮಾನವು ಇವರೆಲ್ಲರಿಗಿಂತ ಭಿನ್ನ ಮತ್ತು ಶ್ರೇಷ್ಟ ಮಟ್ಟದಾಗಿರುತ್ತದೆ’ ಎಂದು ಅಭಿಪ್ರಾಯ ಪಡಲಾಗಿತ್ತು. ಈ ಧೋರಣೆ ಮತ್ತು ಅದರಿಂದ ದೊರೆತ ಸೌಲಭ್ಯದಿಂದ ಸಂಗೀತಗಾರರು ತಿಂಗಳುಗಟ್ಟಲೆ ಪ್ರವಾಸ ಮಾಡಿ ಬೇರೆ ಬೇರೆ ಊರುಗಳಲ್ಲಿ ಸಂಗೀತ ಕಛೇರಿ ಮಾಡಬಹುದಾಗಿತ್ತು. ಇಂತಹ ಪ್ರವಾಸಗಳಿಗೆ ಅನುಮತಿ ಪಡೆಯುವುದೆಂಬುದು ಸುಮ್ಮನೆ ಒಂದು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಿತ್ತು. ಒಂದು ಚಿಂತನೆಯ ಪ್ರಕಾರ ವಸಾಹತುಶಾಹಿಯ ಅಂತಿಮ ಘಟ್ಟದಲ್ಲಿ ಒಬ್ಬ ರಾಜನ ಖ್ಯಾತಿ ಅವನ ಆಸ್ಥಾನದಲ್ಲಿದ್ದ ವಿದ್ವಾಂಸರು ಮತ್ತು ಸಂಗೀತಗಾರರಂಥ ಕಲಾವಿದರ ಸಂಖ್ಯೆ ಮತ್ತು ಅವರ ಪ್ರತಿಷ್ಠೆಯನ್ನು ಅವಲಂಬಿಸಿರುತಿತ್ತು. ಈ ತರಹದ ಖ್ಯಾತಿಯನ್ನು ಪಡೆಯುವ ಹಂಬಲ ಹಲವು ರಾಜರಿಗೆ ಇದ್ದುದುಂಟು. ಇದರಿಂದಾಗಿ ಹಲವಾರು ಸಂಗೀತಗಾರರಿಗೆ ಮತ್ತು ಕಲಾವಿದರಿಗೆ ಈ ಘಟ್ಟದಲ್ಲಿ ರಾಜಾಶ್ರಯ ಲಭ್ಯವಾಯಿತು.

ಮುಂದುವರೆಯುವುದು ..

ಅನುವಾದ: ಪ್ರೊ. ಎಸ್. ನಾರಾಯಣನ್

5 comments to “ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ”
  1. Pingback: ಮೈಸೂರಿನಲ್ಲಿ ಸಂಗೀತ – ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ – ಋತುಮಾನ

  2. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೩ : ‘ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ – ಋತುಮಾನ

  3. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೬: ಶಾಸ್ತ್ರೀಯತೆ, ಕನ್ನಡ ಮತ್ತು ದಾಸರ ಪದಗಳು – ಋತುಮಾನ

  4. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೭ : ದಾಸಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ – ಋತುಮಾನ

  5. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೮: ಬೆಂಗಳೂರಿನ ಕನ್ನಡ ಸಾರ್ವಜನಿಕ ಮತ್ತು ಸುಗಮ ಸಂಗೀತದ ಉಗಮ – ಋತುಮಾನ

ಪ್ರತಿಕ್ರಿಯಿಸಿ