ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೪ : ಶಾಸ್ತ್ರೀಯತೆ, ಕನ್ನಡತನ ಮತ್ತು ಪೋಷಕರು

ಕನ್ನಡ ಕೃತಿಗಳನ್ನು ರಚಿಸಬೇಕೆಂಬ ಮಹಾರಾಜರ ಅಪ್ಪಣೆಯನ್ನು ವಾಸುದೇವಾಚಾರ್ಯರಂಥ ಸಂಗೀತಗಾರರು ಏಕೆ ಪರಿಗಣಿಸಲಿಲ್ಲ; ಈ ನಡತೆಗೋಸ್ಕರ ವಾಸುದೇವಾಚಾರ್ಯರನ್ನು ಯಾವ ರೀತಿ ನಡೆಸಿಕೊಳ್ಳಲಾಯಿತು; ಮೈಸೂರಿನ ಆಸ್ಥಾನ ಸಂಗೀತಗಾರರ ನಡುವೆ ಯಾವ ರೀತಿಯಲ್ಲಿ ತಾರತಮ್ಯದ ಧೋರಣೆಯನ್ನು ಅನುಸರಿಸಲಾಯಿತು ಎಂಬ ವಿಷಯಗಳನ್ನು ಈ ಸಂಚಿಕೆಯಲ್ಲಿ ಸ್ಥೂಲವಾಗಿ ನೋಡೋಣ …

ಭಾಗ ೧ : ೧೯ನೇ ಶತಮಾನದ ಬೆಳವಣಿಗೆಗಳು ಮತ್ತು ಕರ್ನಾಟಕದ ಅಸ್ಮಿತೆ – https://ruthumana.com/2020/05/02/carnatic-music-kannada-and-kannadigas-part-1

ಭಾಗ ೨ : ಪೋಷಕ ವರ್ಗ ಮತ್ತು ಕನ್ನಡದ ಪ್ರಶ್ನೆ –  https://ruthumana.com/2020/05/02/carnatic-music-kannada-and-kannadigas-part-2/

ಭಾಗ ೩ : ಮೈಸೂರಿನವರು, ಹೊರಗಿನವರು’ ಮತ್ತು ಕನ್ನಡ ಸಂಗೀತ – https://ruthumana.com/2020/05/03/carnatic-music-kannada-and-kannadigas-part-3/

ಕೃಷ್ಣರಾಜ ಒಡೆಯರ ಅಣತಿಯಂತೆ ಕನ್ನಡದಲ್ಲಿ ಕೀರ್ತನೆ ರಚಿಸುವುದಕ್ಕೆ ಹೊರತಾಗಿದ್ದವರು ಮತ್ತು ಇದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಒಲವಿಲ್ಲದವರಲ್ಲಿ ಪ್ರಮುಖವಾಗಿ ಕೆ. ವಾಸುದೇವಾಚಾರ್ಯರ ಹೆಸರು ಕೇಳಿ ಬರುತ್ತದೆ. ಇವರು ನಂತರ ಮೈಸೂರು ವಾಸುದೇವಾಚಾರ್ಯರೆಂತಲೇ ಪ್ರಸಿದ್ಧರಾದರು. ಅವರು ತೆಲುಗು ಮತ್ತು ಸಂಸ್ಕೃತಗಳೆರಡರಲ್ಲೂ ಕೃತಿ ರಚಿಸಿದರು. ಅರಮನೆಯ ಅಧಿಕಾರಿಗಳೇ ಅವರ ಕೃತಿಗಳ ಸಂಕಲನವನ್ನು ಅರಮನೆಯ ವೆಚ್ಚದಲ್ಲಿ ಪ್ರಕಟಿಸಿದ್ದರು. 1925ರಲ್ಲಿ, ಅಂದರೆ ಕನ್ನಡ ಕೃತಿಗಳ ರಚನೆ ಆಗಬೇಕೆಂಬ ಮಹಾರಾಜರ ಆದೇಶ ಬರುವುದಕ್ಕೆ ಒಂದು ವರ್ಷದ ಮುಂಚೆ ಅವರ ಪುಸ್ತಕವನ್ನು ಅರಮನೆಯ ವತಿಯಿಂದ ಮುದ್ರಿಸಿ 500 ಪ್ರತಿಗಳನ್ನು ಪಡೆದುಕೊಳ್ಳುವುದೆಂದು ಪ್ರಕಟವಾಗಿತ್ತು. ಕೃಷ್ಣರಾಜ ಒಡೆಯರು ವಾಸುದೇವಾಚಾರ್ಯರಿಗೆ ‘ಸಂಗೀತ ಶಾಸ್ತ್ರ ವಿಶಾರದ’ ಎಂಬ ಬಿರುದು ನೀಡಿದ್ದರೆಂದು ತಿಳಿಯುತ್ತದೆ.

ಆದರೆ ಒಡೆಯರ ಇಚ್ಛೆಯಂತೆ ಕನ್ನಡದಲ್ಲಿ ಕೃತಿಗಳನ್ನು ರಚಿಸದೇ ಹೋದ್ದರಿಂದ ಮಹಾರಾಜರು ಮತ್ತು ವಾಸುದೇವಾಚಾರ್ಯರ ನಡುವಿನ ಸಂಬಂಧ ಹಳಸುತ್ತಿತ್ತೆಂದು ತಿಳಿಯುತ್ತದೆ. ಆಗ ಮೈಸೂರು ರಾಜ್ಯದಲ್ಲಿ ಶಾಲಾ ಶಿಕ್ಷಕರಾಗಿದ್ದು ನಂತರ ಖ್ಯಾತ ಸಾಹಿತಿಯಾದ ಎ.ಎನ್.ಮೂರ್ತಿರಾಯರು ಜ್ಞಾಪಿಸಿಕೊಳ್ಳುವ ಪ್ರಕಾರ ಮೈಸೂರಿನ ಸಾರ್ವಜನಿಕರಲ್ಲಿ ವಾಸುದೇವಾಚಾರ್ಯರ ಬಗ್ಗೆ ಈ ವಿಷಯದಲ್ಲಿ ಸಹಾನುಭೂತಿ ಇತ್ತಂತೆ. ಅವರು ತಮ್ಮ ಅಭಿಲಾಷೆಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಮಹಾರಾಜರು ಅವರನ್ನು ನ್ಯಾಯವಾದ ರೀತಿಯಲ್ಲಿ ನಡೆಸಿಕೊಳ್ಳಲಿಲ್ಲವೆಂಬುದು ಅನೇಕರ ಅಭಿಪ್ರಾಯವಾಗಿತ್ತು (ಮೂರ್ತಿರಾಯರ ಗಾನವಿಹಾರ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ). ವಾಸುದೇವಾಚಾರ್ಯರ ಮೊಮ್ಮಗನಾದ ಎಸ್. ಕೃಷ್ಣಮೂರ್ತಿಯವರ ಉಲ್ಲೇಖದ ಪ್ರಕಾರ ವೀಣೆ ಶೇಷಣ್ಣನವರು ಆಚಾರ್ಯರನ್ನು ಒಂದು ಸಭೆಯಲ್ಲಿ ಅವರು ಸಂಗೀತ ಕಲಿಯೋದಕ್ಕೆ ಸಾಧ್ಯವಿಲ್ಲವೆಂದು ಬಹಿರಂಗವಾಗಿ ನಿಂದಿಸಿದರಂತೆ. ಆಚಾರ್ಯರು ಇದನ್ನು ಸವಾಲಾಗಿ ತೆಗೆದುಕೊಂದು ಸಂಗೀತಗಾರರಾದರಂತೆ (ಕೃಷ್ಣಮೂರ್ತಿಯವರ ಸಂಗೀತ ಕಲಾನಿಧಿ ಎಂಬ ಪುಸ್ತಕದಿಂದ). ನಂತರದ ದಿನಗಳಲ್ಲಿ ಇವರಿಬ್ಬರ ಮಧ್ಯೆ ಎದ್ದುಕಾಣುವ ವಿರೋಧವಿಲ್ಲದಿದ್ದರೂ ಒಂದು ರೀತಿಯ ಬಿಗಿ ಸಂಬಂಧವಿತ್ತು. ಮಹಾರಾಜರಿಗೆ ಶೇಷಣ್ಣನವರೂ, ಅವರ ಸಂಗೀತವೂ ಬಹಳ ಆತ್ಮೀಯ. ಸ್ವಾಭಾವಿಕವಾಗಿ ಇದರ ಪರಿಣಾಮವನ್ನು ಊಹಿಸಬಹುದು. ಒಳಕೂಟ, ಚಾಡಿಹೇಳುವುದು ಇತ್ಯಾದಿಗಳೆಲ್ಲ ಆಗಿಂದಾಗ್ಯೆ ಕಾಣಿಸಿಕೊಂಡು ನಿರ್ಮಲ ಸಂಗೀತದ ಬದಲಿಗೆ ವೈಯಕ್ತಿಕ ರಾಜಕೀಯ ಮುನ್ನೆಲೆಗೆ ಬರುತ್ತಿತ್ತು.

Mysore Vasudevacharya-Parathpara Raghuvara-Adi-Todi | Sangeetha Kalanidhi Series- 1935


ವಾಸುದೇವಾಚಾರ್ಯರು ಕನ್ನಡದಲ್ಲಿ ರಚನೆ ಮಾಡದಿರಲು ಕೊಡುತ್ತಿದ್ದ ಕಾರಣವೇನೆಂದರೆ ಈ ಬಗ್ಗೆ ಪ್ರಯತ್ನ ಮಾಡಿದಾಗಲೆಲ್ಲ ಏಕೋ ಭಾವನೆಗಳಾಗಲೀ, ಚಿಂತನೆಗಳಾಗಲೀ ಹೊರಬರುತ್ತಿರಲಿಲ್ಲವೆಂಬುದು. ಕೃಷ್ಣಮೂರ್ತಿಯವರು ಇದರ ಬಗ್ಗೆ ಸಹ ಬರೆದಿದ್ದಾರೆ. ಆಚಾರ್ಯರ ಪ್ರಕಾರ ಈಗಾಗಲೇ ಸಂಗೀತದಲ್ಲಿ ಭಾಷೆಯ ಉಪಯೋಗವೆಂಬುದು ಸ್ಥಿರ ರೂಪ ಪಡೆದಿತ್ತು. ಆದರೆ ಕನ್ನಡವು ಸಂಗೀತದಲ್ಲಿ ಉಪಯೋಗಿತವಾಗಿರಲಿಲ್ಲ. ಅದನ್ನು ಬಳಸುವವರು ಯಾರೂ ಇರಲಿಲ್ಲ. ಅವರ ಪ್ರಕಾರ ತೆಲುಗು ಮತ್ತು ಸಂಸ್ಕೃತದಲ್ಲಿ ಅತ್ಯುತ್ತಮವಾದ ಕೃತಿಗಳನ್ನು ರಚಿಸಬಹುದಾದ ಸಾಧ್ಯತೆಗಳು ಇನ್ನೂ ಬಹಳವಿತ್ತು. ಒಂದು ಮಾರ್ಗದಲ್ಲೇ ಸಾಧ್ಯತೆಗಳು ವಿಪುಲವಾಗಿರುವಾಗ ಇನ್ನೊಂದು ಮಾರ್ಗವನ್ನು ಹುಡುಕುವುದು ಅವರಿಗೆ ಅನವಶ್ಯಕವಾಗಿತ್ತು ಮತ್ತು ಈ ಬಗ್ಗೆ ಅವರು ನಿಷ್ಠುರ ನಿಲುವು ತಾಳಿದ್ದರು (ಕೃಷ್ಣಮೂರ್ತಿಯವರ ಸಂಗೀತ ಸರಿತಾದಲ್ಲಿ ಈ ಬಗ್ಗೆ ಇನ್ನೂ ವಿವರಗಳಿವೆ). ಹಾಗಂತ ಬರೇ ಆಚಾರ್ಯರು ಈ ಬಗೆಗಿನ ಧೋರಣೆ ತಾಳಿದ್ದರಂತ ಅಲ್ಲ. ಆಗಿನ ಕಾಲದಲ್ಲಿ ಕರ್ನಾಟಕ ಸಂಗೀತದ ಒಳಹೊಕ್ಕವರಲ್ಲಿ ಇದ್ದ ನಂಬಿಕೆಯೇನೆಂದರೆ ದ್ರಾವಿಡ ಭಾಷೆಗಳಲ್ಲಿ ತೆಲುಗು ಭಾಷೆ ಮಾತ್ರ ಸಂಗೀತಕ್ಕೆ ಸೂಕ್ತವಾದ ಭಾಷೆ ಎಂದು (ಮೂರ್ತಿರಾಯರ ಗಾನವಿಹಾರ ನೋಡಿ). ಈ ಅಭಿಪ್ರಾಯವನ್ನು ಇನ್ನೂ ಸ್ಪಷ್ಟವಾಗಿ ರಾಳ್ಳಪಲ್ಲಿ ಅನಂತಕೃಷ್ಣ ಶರ್ಮರಲ್ಲಿ ಕಾಣಬಹುದು. ಇವರು ಮೂಲತ: ಸಂಸ್ಕೃತ ಮತ್ತು ತೆಲುಗು ವಿದ್ವಾಂಸರು ಹಾಗೂ ಬಿಡಾರಂ ಕೃಷ್ಣಪ್ಪನವರ ಶಿಷ್ಯರಾಗಿ ಸಂಗೀತಗಾರರೂ ಕೂಡ. ಇವರು ಹೇಳುತ್ತಿದ್ದ ಪ್ರಕಾರ ಕರ್ನಾಟಕ ಸಂಗೀತದ ಜೀವವಿರುವುದೇ ತೆಲುಗು ಭಾಷೆಯಲ್ಲಿ. ತೆಲುಗು ಭಾಷೆಯು ದ್ರಾವಿಡ ಭಾಷಾ ಸಮೂಹದಿಂದ ಮೃದುವಾದ ವ್ಯಂಜನಗಳನ್ನೂ ಹಾಗೂ ಕಡಿಮೆ ಪ್ರಮಾಣದಲ್ಲಿ ಒರಟಾದ ಶಬ್ದಗಳನ್ನು ಪಡೆದುಕೊಂಡಿದೆ, ಇದರಿಂದಾಗಿ ತೆಲುಗು ಭಾಷೆಯ ಮಾಧುರ್ಯ ಸಂಗೀತಕ್ಕೆ ಸೂಕ್ತವಾದದ್ದೆಂದು ಅವರು ಹೇಳುತ್ತಾರೆ. 1908ನೇ ವರ್ಷದ ಸಂಬಳ ಪಟ್ಟಿಯನ್ನು ನೋಡಿದರೆ ಆಗ ಇದ್ದಂತಹ ತಾರತಮ್ಯಗಳ ಬಗ್ಗೆ ತಿಳಿಯುತ್ತದೆ. ಆ ವರ್ಷದಲ್ಲಿ ಅತಿ ಹೆಚ್ಚಿನ ವೇತನ ಪಡೆದವರು ವೀಣೆ ಶೇಷಣ್ಣನವರು. 25 ವರ್ಷಗಳ ಸೇವೆಯ ನಂತರ ಅವರ ವೇತನ ತಿಂಗಳಿಗೆ 50 ರೂಪಾಯಿಗಳಾಗಿತ್ತು. ಸುಬ್ಬಣ್ಣನವರಿಗೆ 19 ವರ್ಷದ ಸೇವೆಯ ನಂತರ 45 ರೂಪಾಯಿ ಸಂಬಳ ಕೊಡಲಾಗುತ್ತಿತ್ತು. ಅಬ್ದುಲ್ಲಾ ಖಾನ್ ಎಂಬ ಹಿಂದುಸ್ತಾನಿ ಸಂಗೀತ ಕಲಾವಿದ 11 ವರ್ಷಗಳ ಸೇವೆಯ ನಂತರ 25 ರೂಪಾಯಿಗಳ ಸಂಬಳ ಪಡೆಯುತ್ತಿದ್ದರು. 22 ವರ್ಷಗಳ ಸೇವೆಯ ನಂತರ ಮತ್ತೊಬ್ಬ ಸಂಗೀತಕಾರರಾದ ಬಿ. ಕೃಷ್ಣಪ್ಪರವರ ತಿಂಗಳ ವರಮಾನ 20 ರೂಪಾಯಿಗಳು. ಆದರೆ 36 ವರ್ಷಗಳ ನಂತರ (ಇವರಷ್ಟು ದೀರ್ಘ ಕಾಲ ಸೇವೆ ಬೇರೆ ಯಾರೂ ಸಲ್ಲಿಸಿರಲಿಲ್ಲ) ವಾಸುದೇವಾಚಾರ್ಯರ ವರಮಾನ ಕೇವಲ ರೂ. 10 ಆಗಿತ್ತು (ಗಾಯತ್ರಿ ಅವರ Selections from the Records of the Mysore Palace, ಸಂಪುಟ 1ರಿಂದ). ಅದೇ ವರ್ಷ ಶೇಷಣ್ಣ, ಸುಬ್ಬಣ್ಣ, ಅಬ್ದುಲ್ಲಾ ಖಾನ್ ಹಾಗೂ ಕೃಷ್ಣಪ್ಪನವರ ಸಂಬಳವನ್ನು ಕ್ರಮವಾಗಿ 60, 55, 28 ಮತ್ತು 25 ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು. ಈ ಅಧಿಕ ವೆಚ್ಚವನ್ನು ದಿವಂಗತ ವೀಣೆ ಶಾಮಣ್ಣನವರ ಸಂಬಳದಿಂದಾಗಿ ತೆಗೆದುಕೊಳ್ಳಲಾಗಿತ್ತು. ಆದರೆ ವಾಸುದೇವಾಚಾರ್ಯರ ವೇತನದಲ್ಲಿ ಯಾವ ಹೆಚ್ಚಳವೂ ಇರಲಿಲ್ಲ. ವಿಪರ್ಯಾಸವೆಂದರೆ ಕೇವಲ 2 ವರ್ಷ 9 ತಿಂಗಳ ಸೇವೆ ಸಲ್ಲಿಸಿದ್ದ ಮಹಾಲಿಂಗಯ್ಯ ಎಂಬ ಸಂಗೀತಗಾರರ ವೇತನ ವಾಸುದೇವಾಚಾರ್ಯರ ವೇತನದಷ್ಟೇ ಇತ್ತು. ಒಂದು ಸಾವಿರ ರೂಪಾಯಿಗಳ ಸಾಲಕ್ಕಾಗಿ ಅವರು 1925 ಮತ್ತು 1926ರಲ್ಲಿ ಹಲವಾರು ಬಾರಿ ಅರ್ಜಿ ಸಲ್ಲಿಸಬೇಕಾಗಿ ಬಂತು. ಕೊನೆಗೆ ಅವರು ಸಾಲಕೊಟ್ಟವನು ವಾರಂಟ್ ಸಮೇತ ಬರುವನೆಂದೂ ಮತ್ತು ಅವರ ಗೌರವಕ್ಕೆ ಚ್ಯುತಿಯುಂಟಾಗುವುದೆಂದೂ ಹೇಳಿದ ಮೇಲೆ ಹಣ ಮಂಜೂರು ಮಾಡಲಾಯಿತು. ಆದಾಗ್ಯೂ ಹಣ ಮಂಜೂರಾತಿ ಮಾಡಿದ ರೀತಿ ಭಿನ್ನವಾಗಿತ್ತು. ಮಂಜೂರಾತಿ ಪತ್ರದಲ್ಲಿ ಹೀಗೆ ಹೇಳಲಾಗಿತ್ತು: “ಮಹಾರಾಜರು ದರ್ಬಾರ್ ಭಕ್ಷಿಯವರಿಂದ ಅಪೇಕ್ಷಿಸುವುದೇನೆಂದರೆ ಸಾಲ ಕೊಟ್ಟವರನ್ನು ಪತ್ತೆ ಹಚ್ಚಿ ಸಾಲ ವಾಪಸ್ಸು ಮಾಡತಕ್ಕದ್ದು. 1000/- ರೂ.ಗಳು ಮೀರದಂತೆ ನೋಡಿಕೊಂಡು ಈ ಹಣವನ್ನು ಮುಂಗಡ ಹಣವಾಗಿ ಪರಿಗಣಿಸತಕ್ಕದ್ದು”. ಇದಕ್ಕೆ ಹೋಲಿಸಿದರೆ ವೀಣೆ ಶೇಷಣ್ಣನವರಿಗೆ 1906ರಲ್ಲಿ 3000 ರೂಪಾಯಿಗಳ ಸಾಲ ಕೊಟ್ಟದ್ದು ಮತ್ತು ಕೃಷ್ಣಪ್ಪನವರಿಗೆ ಆದೇ ವರ್ಷ 1000 ರೂಪಾಯಿಗಳ ಸಾಲ ಮಂಜೂರು ಮಾಡಿದ್ದು ಹಾಗೂ ವೀಣೆ ಸುಬ್ಬಣ್ಣನವರಿಗೆ ಕೊಟ್ಟ ಎಲ್ಲಾ ಸಾಲವನ್ನೂ ಮಾಫು ಮಾಡಿದ್ದು ಇವೆಲ್ಲವೂ ವಾಸುದೇವಾಚಾರ್ಯರನ್ನು ನಡೆಸಿಕೊಂಡದ್ದಕ್ಕಿಂತ ಬಹಳ ವ್ಯತಿರಿಕ್ತವಾಗಿ ಕಾಣುತ್ತದೆ (ಈ ವಿವರಗಳೆಲ್ಲ ಗಾಯತ್ರಿಯವರ ಮೇಲೆ ಉದ್ಧರಿಸಿದ ಪುಸ್ತಕದಿಂದ).

ಮುತ್ತಯ್ಯ ಭಾಗವತರು

ವಾಸುದೇವಾಚಾರ್ಯರಿಗೆ ದಕ್ಕಬೇಕಾದ್ದೆಲ್ಲ ಮುತ್ತಯ್ಯ ಭಾಗವತರಿಗೆ ದೊರಕಿತೆಂದು ಹೇಳಲಾಗುತ್ತದೆ. ಮುತ್ತಯ್ಯ ಭಾಗವತರು ತಮಿಳುನಾಡಿನ ಹರಿಕೇಶನಲ್ಲೂರ್ ಎಂಬ ಸ್ಥಳದಿಂದ ಬಂದವರು ಹಾಗೂ ತಿರುವೈಯಾರಿನಲ್ಲಿ ನೆಲೆಸಿ ಸಾಂಬಶಿವ ಐಯರ್ ರವರಿಂದ ಸಂಗೀತದಲ್ಲಿ ಪರಿಣತಿ ಪಡೆದಿದ್ದರು. ಅವರು ಹರಿಕಥಾ ಕಲಾಕ್ಷೇಪಗಳನ್ನೂ ಮಾಡುತ್ತಿದ್ದರು. ಸ್ವಲ್ಪ ಕಾಲ ತಮ್ಮ ನೆಂಟರಾದ ಮತ್ತು ಸಂಸ್ಕೃತ ಪ್ರಾಧ್ಯಾಪಕರಾದ ಲಕ್ಷ್ಮಣ ಸೂರಿಯವರ ಮನೆಯಲ್ಲಿದ್ದುಕೊಂಡು ಭಾಗವತರು ತಂಜಾವೂರಿನ ಸರಸ್ವತಿ ಮಹಲ್ ಗ್ರಂಥಾಲಯದಲ್ಲಿ ಸಂಶೋಧನೆಯನ್ನು ಮಾಡಿದ್ದರು. ಆ ಸಮಯದಲ್ಲಿ ಸಂಗೀತದ ಕೆಲವು ಅಪೂರ್ವ ಹೊತ್ತಗೆಗಳನ್ನು ಅಲ್ಲಿ ಪತ್ತೆ ಹಚ್ಚಿದ್ದರು. ಈ ಕಾರಣಗಳಿಂದ ಅವರನ್ನು ಪಾಂಡಿತ್ಯವುಳ್ಳ ಸಂಗೀತಗಾರರೆಂದು ಪರಿಗಣಿಸಲಾಗಿತ್ತು. 1927ರ ವರೆಗೆ ಅವರು ತಮಿಳುನಾಡಿನಲ್ಲೆ ಪ್ರವಾಸ ಮಾಡುತ್ತಾ ಅನೇಕ ಸಂಗೀತ ಕಛೇರಿಗಳನ್ನು ಮತ್ತು ಹರಿಕಥಾ ಕಲಾಕ್ಷೇಪಗಳನ್ನು ನೀಡಿದರು. ಆ ವರ್ಷ ಅವರು ಮೈಸೂರಿನ ದಸರಾ ಸಂಭ್ರಮಕ್ಕಾಗಿ ಬಂದಿದ್ದಾಗ, ಮಹಾರಾಜರು ಅವರನ್ನು ಆಸ್ಥಾನ ವಿದ್ವಾನರಾಗಿ ನೇಮಿಸಿಕೊಂಡು ತಿಂಗಳಿಗೆ 100 ರೂಪಾಯಿಗಳ ವೇತನದ ವ್ಯವಸ್ಥೆ ಮಾಡಿದರು. 1928ರಲ್ಲಿ ‘ಗಾಯಕ ಶಿಖಾಮಣಿ’ ಎಂಬ ಬಿರುದನ್ನು ಅವರಿಗೆ ಕೊಡಲಾಯಿತು. ಅದೇ ಸಮಯದಲ್ಲಿ ಭಾಗವತರು ಮಹಾರಾಜರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಕೆಲವು ಕೃತಿಗಳನ್ನು ರಚಿಸಿದರು. ದೇವೋತ್ತಮ ಜೋಯಿಸ್ ಎಂಬ ಕೃತಿ ರಚನಕಾರನ ಸಹಯೋಗದೊಂದಿಗೆ ಅವರು ಒಡೆಯರ ವಂಶದ ಮನೆ ದೇವರಾದ ಚಾಮುಂಡೇಶ್ವರಿಯ ಮೇಲೆ 108 ಕೃತಿಗಳನ್ನು ಕನ್ನಡದಲ್ಲಿ ರಚಿಸಿದರು. ವಾಸುದೇವಾಚಾರ್ಯರೇ ನೇರ ನುಡಿಗಳಿಂದ ಹೇಳುವ ಹಾಗೆ ‘ಅವರು ಒಂದೊಂದು ಕೃತಿಯೂ ಮುಗಿದ ಕೂಡಲೇ ಮಹಾರಾಜರ ಮುಂದೆ ಕೂತು ಹಾಡಿ ಅವರ ಒಪ್ಪಿಗೆಯನ್ನು ಪಡೆಯುತ್ತಿದ್ದರು”. ಅವರ ಕೆಲಸ ಮೆಚ್ಚಿದ ಮಹಾರಾಜರು ಚಾಮುಂಡೇಶ್ವರಿಯ ಮುತ್ತಿನ ಪದಕವೊಂದನ್ನು ಬಹುಮಾನವಾಗಿ ಕೊಟ್ಟರು (ವಾಸುದೇವಾಚಾರ್ಯರ ನಾ ಕಂಡ ಕಲಾವಿದರು ಎಂಬ ಪುಸ್ತಕ ನೋಡಬಹುದು). ಆಸ್ಥಾನ ವಿದ್ವಾನ್ ಆಗಿರುವಾಗಲೇ ಅವರನ್ನು ಮದರಾಸಿನ ‘ಟೀಚರ್ಸ್ ಕಾಲೇಜ್ ಆಫ್ ಮ್ಯೂಸಿಕ್’ ಸಂಸ್ಥೆಯ ಮುಖ್ಯಸ್ಥರನ್ನಾಗಿ ಕಳುಹಿಸಿಕೊಡಲಾಯಿತು. ನಂತರ ಅವರನ್ನು ತಿರುವನಂತಪುರದ ಸಂಗೀತ ವಿದ್ಯಾಲಯದ ಮುಖ್ಯಸ್ಥರನ್ನಾಗಿಯೂ ಕಳುಹಿಸಿಕೊಡಲಾಯಿತು. ಹಠಕ್ಕೆ ಬಿದ್ದ ವಾಸುದೇವಾಚಾರ್ಯರಿಗೆ ಮಾತ್ರ ರಾಜರ ಮನ್ನಣೆ ದೊರೆಯಲಿಲ್ಲ. ಹಾಗಂತ ವಾಸುದೇವಾಚಾರ್ಯರನ್ನು ನೇಮಕ ಮಾಡಿದ್ದ ಮುಂಚಿನ ದೊರೆಯಾದ ಚಾಮರಾಜ ಒಡೆಯರಿಗೆ ಆಚಾರ್ಯರ ಬಗ್ಗೆ ವಿಶೇಷ ಪ್ರೀತಿ ಇತ್ತು. ತಾವು ಹೋದ ಕಡೆಯೆಲ್ಲ ಆಚಾರ್ಯರನ್ನು ಮತ್ತು ವೀಣೆ ಸುಬ್ಬಣ್ಣರನ್ನೂ ಕರೆದುಕೊಂಡು ಹೋಗುತ್ತಿದ್ದರಂತೆ. ಹಾಗೂ ಕೃಷ್ಣರಾಜ ಒಡೆಯರ ನಂತರ ಪಟ್ಟಕ್ಕೆ ಬಂದ ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲೂ ಆಚಾರ್ಯರಿಗೆ ಉನ್ನತ ಗೌರವವಿತ್ತು. ಪ್ರಾಯಶಃ ಈ ಸ್ಥಾನಮಾನಗಳಿಗೆ ವಾಸುದೇವಾಚಾರ್ಯರು ಮಹಾರಾಜರ ಸಂಗೀತ ಗುರುಗಳಾಗಿದ್ದರೆಂಬ ಕಾರಣವಿರಬಹುದೆಂದು ಮೂರ್ತಿರಾಯರು ಅಭಿಪ್ರಾಯ ಪಡುತ್ತಾರೆ. 1951ರಲ್ಲಿ ಅಂದರೆ ಸಂಸ್ಥಾನದ ಕೊನೆಯ ದಿನಗಳಲ್ಲಿ ವಾಸುದೇವಾಚಾರ್ಯರು 350 ರೂಪಾಯಿಗಳನ್ನು ಸಂಬಳವಾಗಿ ಪಡೆಯುತ್ತಿದ್ದರು. ಸಂಗೀತಗಾರರೊಬ್ಬರಿಗೆ ಕೊಡುವ ಅತಿ ಹೆಚ್ಚಿನ ಸಂಬಳ ಇದಾಗಿತ್ತು. ಇವರ ಕೆಳಗಿದ್ದ ವೆಂಕಟಗಿರಿಯಪ್ಪನವರಿಗೆ 250 ರೂಪಾಯಿಗಳು. ಅ. ರಾಮಾನುಜ ಅಯ್ಯಂಗಾರ್ ರವರಿಗೆ ರೂ. 150, (ಪಿಟೀಲು) ಟಿ. ಚೌಡಯ್ಯನವರಿಗೆ ರೂ. 100 ಮತ್ತು ಸಿ. ವೆಂಕಟರಾಯರಿಗೆ ರೂ. 100 ರಂತೆ ವೇತನವನ್ನು ನೀಡಲಾಗುತ್ತಿತ್ತು. ಕೆಲವೇ ದಿನಗಳಲ್ಲಿ ಹಣಕಾಸಿನ ತೊಂದರೆ ಮತ್ತು ಇತರೆ ನಿರ್ಬಂಧಗಳಿಂದಾಗಿ ಎಲ್ಲರ ಸಂಬಳವನ್ನು ಅರ್ಧಕ್ಕೆ ಇಳಿಸಲಾಯಿತು ಎಂದು 17ನೆ ಏಪ್ರಿಲ್ 1951ರ ದಾಖಲೆಗಳಿಂದ ತಿಳಿದು ಬರುತ್ತದೆ (ಗಾಯತ್ರಿಯವರ ಮೇಲೆ ಉದ್ಧರಿಸಿದ ಪುಸ್ತಕದಿಂದ). ವೆಂಕಟಪ್ಪನಂತಹ ಚಿತ್ರಕಲಾಕಾರರನ್ನು 1940ರಲ್ಲೇ ಅರಮನೆಯ ಸೇವೆಯಿಂದ ನಿವೃತ್ತಿಗೊಳಿಸಲಾಗಿದ್ದರೂ ಸಂಗೀತಗಾರರನ್ನು ಮಾತ್ರ 1950ರ ನಂತರವೂ ಉಳಿಸಿಕೊಳ್ಳಲಾಗಿತ್ತು. ಇಲ್ಲೂ ಕೂಡಾ ಅವರು ಒಂದು ದೊಡ್ಡ ಸಾರ್ವಜನಿಕದ ಸಂಗೀತಾಭಿಲಾಷೆಗಳನ್ನು ಪೂರೈಸುತ್ತಿದ್ದುದರಿಂದ ಈ ಮುಂಚೆಯೇ ತಿಳಿಸಿದಂತೆ ಸಂಗೀತಗಾರರನ್ನು ಇತರ ಉದ್ಯೋಗಿಗಳಿಗಿಂತ ಬೇರೆ ರೀತಿಯಲ್ಲಿ ಕಾಣಲಾಯಿತೆಂದು ತೋರುತ್ತದೆ.

ಮೈಸೂರಿನ ಸಂಗೀತವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರಬೇಕು ಎನ್ನುವ ತಾಕೀತನ್ನು ಮುಂದಿಡಲು ಮುಖ್ಯ ಕಾರಣವೆಂದರೆ ಮೈಸೂರಿನ ಮೇಲೆ ತಮಿಳುನಾಡಿನ ಸಂಗೀತ ಸಂಸ್ಕೃತಿಯ ಅವಿಚ್ಛಿನ್ನ ಛಾಯೆ. ಸಂಗೀತದಲ್ಲಿ ತಮಿಳುನಾಡು ಮೈಸೂರಿನ ದೊಡ್ಡಣ್ಣನಂತೆ ಇತ್ತು. ತಮಿಳುನಾಡಿನ ಸಂಗೀತ ಪರಂಪರೆಯಿಂದ ಎರವಲು ಪಡೆಯುತ್ತಿದ್ದರೂ, ಮೈಸೂರು ತನ್ನದೇ ಆದ ವಿಶಿಷ್ಟ ಸ್ವರೂಪದ ಸಂಗೀತವನ್ನು ರೂಪಿಸಿಕೊಳ್ಳಬೇಕೆಂಬ ಆತಂಕ ಸಂಗೀತಗಾರರಿಗಿಂತ ಹೆಚ್ಚಾಗಿ ಮಹಾರಾಜರು ಮತ್ತು ಗಣ್ಯ ಶ್ರೋತೃಗಳಲ್ಲಿ ಕಾಣುತ್ತಿತ್ತು. ಹೀಗಾಗಿ ಮೈಸೂರಿನ ಸಂಗೀತಕ್ಕೆ ಸ್ವತಂತ್ರ ಸ್ಥಾನ-ಮಾನವಿದೆ, ಅದಕ್ಕೆ ತನ್ನದೇ ಆದ ಛಾಪು ಇದೆ ಎಂಬರ್ಥದಲ್ಲಿ ಹೇಳಿಕೆಗಳನ್ನು ಆಗಿಂದಾಗ್ಯೆ ಕಾಣಬಹುದಿತ್ತು. ಡಿ.ವಿ.ಜಿ.ಯವರೂ ಕೂಡಾ ಮೈಸೂರಿನ ಸಂಗೀತದ ಖ್ಯಾತಿ ತಮಿಳುನಾಡಿನ ತಂಜಾವೂರಿನ ಸಂಗೀತದಷ್ಟೇ ಇತ್ತು ಎಂದು ತಮ್ಮ ಕಲೋಪಾಸಕರು ಎನ್ನುವ ಪುಸ್ತಕದಲ್ಲಿ ಹೇಳುತ್ತಾರೆ. ಚಲಾವಣೆಯಲ್ಲಿ ಇಲ್ಲದ ರಾಗಗಳಲ್ಲಿ ಕೃತಿಗಳನ್ನು ರಚಿಸಲು ಸಾಧ್ಯವಾಗುವುದಿಲ್ಲ ಎಂದು ತಮಿಳುನಾಡಿನ ಸಂಗೀತಗಾರರೊಬ್ಬರು ಹೇಳಿದಾಗ ಮಹಾರಾಜರು ಅದನ್ನೊಂದು ಸವಾಲಾಗಿ ತೆಗೆದುಕೊಂಡು ಅರಮನೆಯ ಸಂಗೀತಗಾರರಿಗೆ ಎರಡು ಷರತ್ತುಗಳನ್ನಿಟ್ಟು ಆದೇಶ ಹೊರಡಿಸಿದರು. ಮೊದಲನೆಯದಾಗಿ ಕೃತಿಗಳನ್ನು ಮುಖ್ಯವಾಗಿ ನಿರ್ದಿಷ್ಟವಾದ ರಾಗಗಳಲ್ಲಿ ರಚಿಸಬೇಕು (ಯಾವ ರಾಗಗಳು ಚಲಾವಣೆಯಲ್ಲಿಲ್ಲವೆಂದು ಹೇಳಲಾಗಿದೆಯೋ ಅಂಥ ರಾಗಗಳಲ್ಲಿ) ಮತ್ತು ಎರಡನೆಯ ಷರತ್ತು, ಇಂತಹ ಕೃತಿಗಳು ಕನ್ನಡದಲ್ಲಿರಬೇಕು ಎಂದು. (ನಾರಾಯಣಮೂರ್ತಿ ಅವರ ಶಿವರಾಮ ಸಂಗೀತ ಸುಧಾ ಸಂ. 1ರಲ್ಲಿ ವಿವರಗಳನ್ನು ನೋಡಬಹುದು). ದಕ್ಷಿಣ ದೇಶದ (ಮದರಾಸು ಮತ್ತು ತಮಿಳುನಾಡಿನ ಬೇರೆ ಬೇರೆ ಊರುಗಳನ್ನು ಮೈಸೂರಿನ ಸಂಗೀತಕಾರರು ಗುರುಸಿಕೊಂಡ ರೀತಿ) ಮಾನ್ಯತೆ ಮತ್ತು ಗೌರವ ಪಡೆಯಬೇಕೆಂಬ ಬಯಕೆ 1930 ಮತ್ತು 1940ರ ದಶಕಗಳಲ್ಲಿಯೂ ಮುಂದುವರೆಯಿತು. ಮದರಾಸಿನಲ್ಲಿ 1927ರಲ್ಲಿ ‘ಮ್ಯೂಸಿಕ್ ಅಕಾಡೆಮಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಕರ್ನಾಟಕ ಸಂಗೀತಕ್ಕೆ ಒಂದು ಸಾಂಸ್ಥಿಕ ಸ್ವರೂಪ ಕೊಡುವ (institutionalization) ಪ್ರಯತ್ನಗಳು ಬಿರುಸಾಗಿ ನಡೆಯತೊಡಗಿದವು. ಇಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಸಂಗೀತ ಸಮ್ಮೇಳನಗಳಲ್ಲಿ ಕೆಲವೊಂದು ನಿರ್ದಿಷ್ಟ ರಾಗಗಳಿಗೆ, ಹಾಗೂ ಕೃತಿಗಳಿಗೆ ಮಾನದಂಡಗಳನ್ನು ನಿರ್ಣಯಿಸಲಾಗುತ್ತಿತ್ತು. ಮೈಸೂರು ಅರಮನೆಯಿಂದ ಮುತ್ತಯ್ಯ ಭಾಗವತರನ್ನೂ, ಮತ್ತಿತರರನ್ನೂ ಈ ಸಮ್ಮೇಳನಗಳಿಗೆ ಕಳುಹಿಸಿಕೊಡಲಾಗುತಿತ್ತು. ಅಲ್ಲಿ ಭಾಗವತರು ಪ್ರಭಾವಶಾಲಿಯಾಗಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಉದಾಹರಣೆಗೆ 1930ರ ದಶಕದ ಜರ್ನಲ್ ಆಫ್ ದ ಮ್ಯೂಸಿಕ್ ಅಕಾಡೆಮಿಯ ಹೆಚ್ಚಿನ ಪ್ರತಿಗಳು ಮತ್ತು ಅಕಾಡೆಮಿಯ ಸಮಾವೇಶಗಳಿಗೆ ಸಂಬಂಧಪಟ್ಟ ಅಧಿಕೃತ ದಾಖಲೆಗಳನ್ನು ನೋಡಿದಾಗ ಅನೇಕ ಬಾರಿ ಭಾಗವತರು ಮಧ್ಯ ಪ್ರವೇಶಿಸಿ ತಾವು ಹೇಳುವ ಪ್ರತಿಯೊಂದಕ್ಕೂ ಅಧಿಕೃತ ಉದಾಹರಣೆಗಳನ್ನು ತರ್ಕಬದ್ಧವಾಗಿ ಮುಂದಿಡುತ್ತಿದ್ದುದನ್ನು ಕಾಣಬಹುದು. ಏನಾದರೂ ಹೊಸ ಸಂಶೋಧನೆಯ ಪ್ರತಿಪಾದನೆಗಳು ಅಥವಾ ಸಂಗತಿಗಳು ಇದ್ದರೆ ಅವುಗಳನ್ನು ಮದರಾಸಿನ ಸಂಗೀತ ಸಮ್ಮೇಳನಕ್ಕೆ ಕಳುಹಿಸಿ, ಅಲ್ಲಿ ಅವುಗಳನ್ನು ಚರ್ಚಿಸುವಂತೆ ಪೆÇ್ರೀತ್ಸಾಹಿಸಲಾಗುತಿತ್ತು. ಉದಾಹರಣೆಗೆ 1934ರ ಸಭೆಯಲ್ಲಿ ಹುಲಗೂರು ಕೃಷ್ಣಾಚಾರ್‍ರವರು ತಾವು ನೂತನವಾಗಿ ಕಂಡುಹಿಡಿದ ಕಿನ್ನರಿ ಎಂಬ ವಾದ್ಯವನ್ನು ಸಭೆಯಲ್ಲಿ ಮಂಡಿಸಿ, ಪ್ರದರ್ಶಿಸಲು ಕಳುಹಿಸಿಕೊಡಲಾಯಿತು. ಇದೇ ರೀತಿ 1938ರಲ್ಲಿ ಅವರು ತಾವು ಕಂಡುಹಿಡಿದ ಮತ್ತೊಂದು ವಾದ್ಯ ವಿಶ್ವವೀಣೆಯನ್ನು ಪ್ರದರ್ಶನ ಮಾಡುವ ಅವಕಾಶ ಪಡೆದರು. ವಿದ್ವಾನ್ ಶಿವರಾಮಯ್ಯನವರು ‘ಸ್ವಯಂಭೂಸ್ವರ’ ಎಂಬ ರಾಗವನ್ನು ಕಂಡುಹಿಡಿದಾಗ ಅದನ್ನು ಈ ಸಭೆಯಲ್ಲಿ ಹಾಡಿ ಪ್ರದರ್ಶಿಸಿದರು (ಜರ್ನಲ್ ಆಫ್ ದ ಮ್ಯೂಸಿಕ್ ಅಕಾಡೆಮಿಯ ಪ್ರತಿಗಳಿಂದ). ಈ ರೀತಿ ಮೈಸೂರಿನ ಸಂಗೀತ ಚಟುವಟಿಕೆಗಳಿಗೆ ಅಂಗೀಕಾರದ ಮುದ್ರೆ ಮದರಾಸಿನಲ್ಲಿ ದೊರೆಯಬೇಕಾದ ಪರಿಸ್ಥಿತಿ ಇತ್ತು. ಮದರಾಸ್ ಪ್ರಾಂತ್ಯದಲ್ಲಿ ಪ್ರವಾಸಮಾಡಿ ಸಂಗೀತ ಕಛೇರಿಗಳನ್ನು ನಡೆಸುವುದು ಉನ್ನತವಾದುದೆಂದು ಪರಿಗಣಿಸಲಾಗಿತ್ತು. ಇದನ್ನು ವೀಣೆ ಶೇಷಣ್ಣ ಮತ್ತು ಬಿಡಾರಂ ಕೃಷ್ಣಪ್ಪನವರು ಆಗಾಗ್ಯೆ ನಡೆಸಿಕೊಡುತ್ತಿದ್ದರು.

ಮಹಾರಾಜರ ಆದೇಶದಂತೆ ರಚಿಸಲಾದ ಕನ್ನಡ ಕೃತಿಗಳು (ಮುತ್ತಯ್ಯ ಭಾಗವತರ ಕೆಲವು ಕೃತಿಗಳನ್ನು ಬಿಟ್ಟು) ಹೆಚ್ಚು ಜನಪ್ರಿಯವಾಗಲಿಲ್ಲ. ಸಂಗೀತಗಾರರು ಕನ್ನಡದಲ್ಲೇ ಕೃತಿ ರಚಿಸುವಂತೆ ಮಹಾರಾಜರು ಆದೇಶಿಸಬಹುದಿತ್ತೇ ವಿನಃ ಸಂಗೀತ ಕಛೇರಿಗಳಲ್ಲಿ ಅವುಗಳನ್ನು ಹಾಡಲೇಬೇಕೆಂದು ಒತ್ತಾಯ ಮಾಡಲಾಗುತ್ತಿರಲಿಲ್ಲ. ಮೈಸೂರಿನ ಸಂಗೀತಗಾರರೂ ಸಹ ತಮ್ಮ ಸಂಗೀತ ಕಛೇರಿಗಳಲ್ಲಿ ಕನ್ನಡದ ರಚನೆಗಳನ್ನು ಬಳಸಲು ಅಧಿಕ ಆಸಕ್ತಿ ತೋರಲಿಲ್ಲ. ಮೇಲೆ ಚರ್ಚಿಸಿದ ಹಾಗೆ ಕರ್ನಾಟಕ ಸಂಗೀತದ ತೆಲುಗು ಅಥವಾ ಸಂಸ್ಕೃತ ಕೃತಿಗಳ ವಿರುದ್ಧ ಸಂಪ್ರದಾಯದ ಶ್ರೋತೃಗಳಾರೂ ಧ್ವನಿ ಎತ್ತುತ್ತಿರಲಿಲ್ಲ. ಕೃತಿ ರೂಪದಲ್ಲಿ ಸಂಗೀತವನ್ನು ಕೇಳಲು ಬಯಸುವವರು ಯಾವುದೇ ಭಾಷೆಯಾಗಿದ್ದರೂ ಕೇಳುತ್ತಿದ್ದರು. ಅಂಥ ಶ್ರೋತೃಗಳು ರಾಗಾಲಾಪನೆ ಮತ್ತು ರಾಗದ ಮಾಧುರ್ಯಕ್ಕೆ ಪ್ರಾಧ್ಯಾನ್ಯತೆ ಕೊಡುತ್ತಿದ್ದರೇ ವಿನಃ ಹಾಡಿನ ಅರ್ಥ, ಇತ್ಯಾದಿಗಳ ಬಗ್ಗೆ ಅಷ್ಟೊಂದು ಗಮನ ಕೊಡುತ್ತಿರಲಿಲ್ಲ. ಕನ್ನಡ ಹಾಡುಗಳನ್ನು ಕೇಳುವ ಬಯಕೆ ಉಳ್ಳ ಸಾರ್ವಜನಿಕ ಶ್ರೋತೃಗಳು ಮೈಸೂರಿನ ಸಂಗೀತಗಾರರನ್ನು ವಿಶೇಷವಾಗಿ ವಿನಂತಿಸಿಕೊಳ್ಳುತ್ತಿದ್ದರು ಅಥವಾ ರಂಗಭೂಮಿಯಲ್ಲಿ ಅವುಗಳನ್ನು ಕೇಳಿ ಆನಂದಿಸುತ್ತಿದ್ದರು. ಹೀಗಾಗಿ ಹೊಸದಾಗಿ ರಚಿತವಾದ ಕನ್ನಡ ಕೃತಿಗಳು ಇಂತಹ ಸನ್ನಿವೇಶದಲ್ಲಿ ಅನಗತ್ಯವೆಂದೆನಿಸುತ್ತಿತ್ತು. ನಾವು ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಶಾಸ್ತ್ರೀಯ ಸಂಗೀತ ಪ್ರಕಾರವೊಂದು ಸಾರ್ವಜನಿಕಕ್ಕೆ ಹೆಚ್ಚೆಚ್ಚು ಪ್ರವೇಶಿಸಿದಂತೆ ಹೆಚ್ಚೆಚ್ಚು ತೋರಿಕೊಂಡ ಶ್ರೋತೃಗಳ ಭಿನ್ನತೆ: ಶುದ್ಧ ಸಾಂಪ್ರದಾಯಿಕ ಕರ್ನಾಟಕ ಸಂಗೀತ ಬಯಸುವ ಶ್ರೋತೃವರ್ಗ ಒಂದೆಡೆ; ರಂಗಸಂಗೀತ, ಜಾವಳಿ ಅಥವಾ ದಾಸಸಾಹಿತ್ಯದ ಮೂಲಕ ಸಂಗೀತದಲ್ಲಿ ಕನ್ನಡವನ್ನು ಬಯಸುವ ಶ್ರೋತೃವರ್ಗ ಇನ್ನೊಂದೆಡೆ. ಸಂಗೀತದಲ್ಲಿ ಕನ್ನಡವನ್ನು ಬಯಸುವ ಮೂಲಕ ಕೃಷ್ಣರಾಜ ಒಡೆಯರು ಎರಡನೇ ವರ್ಗದ ಕಡೆಗೆ ವಾಲಿದ್ದಂತೆ ಕಾಣುತ್ತದೆ.

ಮುಂದುವರೆಯುವುದು ..

ಅನುವಾದ: ಪ್ರೊ. ಎಸ್. ನಾರಾಯಣನ್

6 comments to “ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೪ : ಶಾಸ್ತ್ರೀಯತೆ, ಕನ್ನಡತನ ಮತ್ತು ಪೋಷಕರು”
  1. ಪೂರ್ತ ಓದಿದೆ………….ಗಹನವಾದ ಮತ್ತು ವಸ್ತುನಿಷ್ಟ ಸಂಶೋಧನಾ ನೆಲೆಯ ಬರೆಹ…….ಚರಿತ್ರೆ ಎಂದರೆ ಹೀಗಿರಬೇಕು ಅನ್ನುವಂತೆ, ಮೂರ್ತಿರಾಯರು ಮತ್ತೆ ನೆನಪಾದರು……ಅವರನ್ನು ಇನ್ನೊಮ್ಮೆ ಓದಬೇಕೆನಿಸಿತು. ಧನ್ಯವಾದಗಳು

  2. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೫ : ‘ಕರ್ನಾಟಿಕ್’ ಸಂಗೀತ ಪರಂಪರೆ ಮತ್ತು ಮೈಸೂರಿನ ಸಂಗೀತ – ಋತುಮಾನ

  3. Pingback: ಮೈಸೂರು ಸಂಸ್ಥಾನದಲ್ಲಿ ಸಂಗೀತ – ಭಾಗ ೭ : ದಾಸಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ರಾಜಕೀಯ – ಋತುಮಾನ

Leave a Reply to Shashikantha Koudur Cancel reply